ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಸೌಪ್ತಿಕ ಪರ್ವ
ಅಧ್ಯಾಯ 7
ಸಾರ
ಅಶ್ವತ್ಥಾಮನ ಶಿವ ಸ್ತುತಿ (1-12). ಅಗ್ನಿಕುಂಡದಿಂದ ಮೇಲೆದ್ದ ಸಹಸ್ರಾರು ಶಿವಗಣಗಳು ಅಶ್ವತ್ಥಾಮನನ್ನು ಸುತ್ತುವರೆದುದು (13-48). ಅಶ್ವತ್ಥಾಮನು ತನ್ನ ಶರೀರವನ್ನೇ ಶಿವನಿಗೆ ಆಹುತಿಯನ್ನಾಗಿತ್ತುದುದು (49-57). ಮಹಾದೇವನು ಅಶ್ವತ್ಥಾಮನಿಗೆ ಖಡ್ಗವನ್ನಿತ್ತು ಅವನ ಶರೀರವನ್ನು ಪ್ರವೇಶಿಸಿದುದು (58-66).
10007001 ಸಂಜಯ ಉವಾಚ।
10007001a ಸ ಏವಂ ಚಿಂತಯಿತ್ವಾ ತು ದ್ರೋಣಪುತ್ರೋ ವಿಶಾಂ ಪತೇ।
10007001c ಅವತೀರ್ಯ ರಥೋಪಸ್ಥಾದ್ದಧ್ಯೌ ಸಂಪ್ರಯತಃ ಸ್ಥಿತಃ।।
ಸಂಜಯನು ಹೇಳಿದನು: “ವಿಶಾಂಪತೇ! ಹೀಗೆ ಯೋಚಿಸಿ ದ್ರೋಣಪುತ್ರನು ರಥದಿಂದ ಕೆಳಗಿಳಿದು ಕೈಜೋಡಿಸಿ ನಿಂತು ಸ್ತುತಿಸಲು ಉಪಕ್ರಮಿಸಿದನು.
10007002 ದ್ರೌಣಿರುವಾಚ।
10007002a ಉಗ್ರಂ ಸ್ಥಾಣುಂ ಶಿವಂ ರುದ್ರಂ ಶರ್ವಮೀಶಾನಮೀಶ್ವರಂ।
10007002c ಗಿರಿಶಂ ವರದಂ ದೇವಂ ಭವಂ ಭಾವನಮವ್ಯಯಂ।।
10007003a ಶಿತಿಕಂಠಮಜಂ ಶಕ್ರಂ ಕ್ರಥಂ ಕ್ರತುಹರಂ ಹರಂ।
10007003c ವಿಶ್ವರೂಪಂ ವಿರೂಪಾಕ್ಷಂ ಬಹುರೂಪಮುಮಾಪತಿಂ।।
10007004a ಶ್ಮಶಾನವಾಸಿನಂ ದೃಪ್ತಂ ಮಹಾಗಣಪತಿಂ ಪ್ರಭುಂ।
10007004c ಖಟ್ವಾಂಗಧಾರಿಣಂ ಮುಂಡಂ ಜಟಿಲಂ ಬ್ರಹ್ಮಚಾರಿಣಂ।।
10007005a ಮನಸಾಪ್ಯಸುಚಿಂತ್ಯೇನ ದುಷ್ಕರೇಣಾಲ್ಪಚೇತಸಾ।
10007005c ಸೋಽಹಮಾತ್ಮೋಪಹಾರೇಣ ಯಕ್ಷ್ಯೇ ತ್ರಿಪುರಘಾತಿನಂ।।
ದ್ರೌಣಿಯು ಹೇಳಿದನು: “ಉಗ್ರ, ಸ್ಥಾಣು, ಶಿವ, ರುದ್ರ, ಶರ್ವ, ಈಶಾನ, ಈಶ್ವರ, ಗಿರಿಶ, ವರದ, ದೇವ, ಭವ, ಭಾವನ, ಅವ್ಯಯ, ಶಿತಿಕಂಠ, ಅಜ, ಶಕ್ರ, ಕ್ರಥ, ಕ್ರತುಹರ, ಹರ, ವಿಶ್ವರೂಪ, ವಿರೂಪಾಕ್ಷ, ಬಹುರೂಪ, ಉಮಾಪತಿ, ಶ್ಮಶಾನವಾಸಿ, ದೃಪ್ತ, ಮಹಾಗಣಪತಿ, ಪ್ರಭು, ಖಟ್ವಾಂಗಧಾರಿ, ಮುಂಡ, ಜಟಿಲ, ಬಹ್ಮಚಾರಿಣಿ, ಮತ್ತು ತ್ರಿಪುರಘಾತಿನಿಯನ್ನು ಪರಿಶುದ್ಧ ಮನಸ್ಸಿನಿಂದ ಕೂಡಿದವನಾಗಿ ದುರ್ಬಲರಿಗೆ ದುಷ್ಕರವಾದ ಆತ್ಮೋಪಹಾರ ವಿಧಾನದಿಂದ ಪೂಜಿಸುತ್ತೇನೆ.
10007006a ಸ್ತುತಂ ಸ್ತುತ್ಯಂ ಸ್ತೂಯಮಾನಮಮೋಘಂ ಚರ್ಮವಾಸಸಂ।
10007006c ವಿಲೋಹಿತಂ ನೀಲಕಂಠಮಪೃಕ್ತಂ ದುರ್ನಿವಾರಣಂ।।
10007007a ಶುಕ್ರಂ ವಿಶ್ವಸೃಜಂ ಬ್ರಹ್ಮ ಬ್ರಹ್ಮಚಾರಿಣಮೇವ ಚ।
10007007c ವ್ರತವಂತಂ ತಪೋನಿತ್ಯಮನಂತಂ ತಪತಾಂ ಗತಿಂ।।
10007008a ಬಹುರೂಪಂ ಗಣಾಧ್ಯಕ್ಷಂ ತ್ರ್ಯಕ್ಷಂ ಪಾರಿಷದಪ್ರಿಯಂ।
10007008c ಗಣಾಧ್ಯಕ್ಷೇಕ್ಷಿತಮುಖಂ ಗೌರೀಹೃದಯವಲ್ಲಭಂ।।
10007009a ಕುಮಾರಪಿತರಂ ಪಿಂಗಂ ಗೋವೃಷೋತ್ತಮವಾಹನಂ।
10007009c ತನುವಾಸಸಮತ್ಯುಗ್ರಮುಮಾಭೂಷಣತತ್ಪರಂ।।
10007010a ಪರಂ ಪರೇಭ್ಯಃ ಪರಮಂ ಪರಂ ಯಸ್ಮಾನ್ನ ವಿದ್ಯತೇ।
10007010c ಇಷ್ವಸ್ತ್ರೋತ್ತಮಭರ್ತಾರಂ ದಿಗಂತಂ ಚೈವ ದಕ್ಷಿಣಂ।।
10007011a ಹಿರಣ್ಯಕವಚಂ ದೇವಂ ಚಂದ್ರಮೌಲಿವಿಭೂಷಿತಂ।
10007011c ಪ್ರಪದ್ಯೇ ಶರಣಂ ದೇವಂ ಪರಮೇಣ ಸಮಾಧಿನಾ।।
ಸ್ತುತ, ಸ್ತುತ್ಯ, ಸ್ತೂಯಮಾನ, ಅಮೋಘ, ಚರ್ಮವಾಸಸ, ವಿಲೋಹಿತ, ನೀಲಕಂಠ, ಅಪೃಕ್ತ, ದುರ್ನಿವಾರಣ, ಶುಕ್ರ, ವಿಶ್ವಸೃಜ, ಬ್ರಹ್ಮ, ಬ್ರಹ್ಮಚಾರಿಣಿ, ವ್ರತವಂತ, ತಪೋನಿತ್ಯ, ಅನಂತ, ತಪಸ್ವಿಗಳ ಗತಿ, ಬಹುರೂಪ, ಗಣಾಧ್ಯಕ್ಷ, ತ್ರ್ಯಕ್ಷ, ಪಾರಿಷದಪ್ರಿಯ, ಗಣಾಧ್ಯಕ್ಷ, ಇಕ್ಷಿತಮುಖ, ಗೌರೀಹೃದಯವಲ್ಲಭ, ಕುಮಾರನ ತಂದೆ, ಪಿಂಗ, ಗೋವೃಷನನ್ನೇ ಉತ್ತಮ ವಾಹನವಾಗುಳ್ಳ ತನುವಾಸಸ, ಉಗ್ರ, ಆಭೂಷಣತತ್ಪರ, ಪರ, ತಿಳಿಯಲು ಅಸಾಧ್ಯ ಪರೇಭ್ಯ, ಇಷ್ವಸ್ತ್ರೋತ, ಭರ್ತಾರ, ದಕ್ಷಿಣ ದಿಗಂತ, ಹಿರಣ್ಯಕವಚ, ದೇವ ಚಂದ್ರಮೌಲಿವಿಭೂಷಿತ ದೇವನನ್ನು ಪರಮ ಸಮಾಧಿಯಲ್ಲಿದ್ದುಕೊಂಡು ಶರಣುಹೊಗುತ್ತೇನೆ.
10007012a ಇಮಾಂ ಚಾಪ್ಯಾಪದಂ ಘೋರಾಂ ತರಾಮ್ಯದ್ಯ ಸುದುಸ್ತರಾಂ।
10007012c ಸರ್ವಭೂತೋಪಹಾರೇಣ ಯಕ್ಷ್ಯೇಽಹಂ ಶುಚಿನಾ ಶುಚಿಂ।।
ಈ ಸುದುಸ್ತರ ಘೋರ ಆಪತ್ತನ್ನು ಪಾರುಮಾಡಲು ನಾನು ಇಂದು ಶುಚಿ ಸರ್ವಭೂತೋಪಹಾರದಿಂದ ಆ ಶುಚಿ ಶಿವನನ್ನು ಅರ್ಚಿಸುತ್ತೇನೆ.”
10007013a ಇತಿ ತಸ್ಯ ವ್ಯವಸಿತಂ ಜ್ಞಾತ್ವಾ ತ್ಯಾಗಾತ್ಮಕಂ ಮನಃ।
10007013c ಪುರಸ್ತಾತ್ಕಾಂಚನೀ ವೇದಿಃ ಪ್ರಾದುರಾಸೀನ್ಮಹಾತ್ಮನಃ।।
ತ್ಯಾಗಾತ್ಮಕ ಮನಸ್ಸಿನಿಂದ ಅಶ್ವತ್ಥಾಮನು ದೃಢನಿಶ್ಚಿತನಾಗಿರುವವನೆಂದು ತಿಳಿದು ಆ ಮಹಾತ್ಮನ ಎದಿರು ಸುವರ್ಣಮಯ ವೇದಿಯೊಂದು ಕಾಣಿಸಿಕೊಂಡಿತು.
10007014a ತಸ್ಯಾಂ ವೇದ್ಯಾಂ ತದಾ ರಾಜಂಶ್ಚಿತ್ರಭಾನುರಜಾಯತ।
10007014c ದ್ಯಾಂ ದಿಶೋ ವಿದಿಶಃ ಖಂ ಚ ಜ್ವಾಲಾಭಿರಭಿಪೂರಯನ್।।
ರಾಜನ್! ಆಗ ಆ ವೇದಿಯಲ್ಲಿ ಆಕಾಶ, ದಿಕ್ಕುಗಳು ಮತ್ತು ಉಪದಿಕ್ಕುಗಳನ್ನೂ ಜ್ವಾಲೆಗಳಿಂದ ತುಂಬಿಸುತ್ತಿರುವ ಯಜ್ಞೇಶ್ವರನು ಉದಯಿಸಿದನು.
10007015a ದೀಪ್ತಾಸ್ಯನಯನಾಶ್ಚಾತ್ರ ನೈಕಪಾದಶಿರೋಭುಜಾಃ।
10007015c ದ್ವಿಪಶೈಲಪ್ರತೀಕಾಶಾಃ ಪ್ರಾದುರಾಸನ್ಮಹಾನನಾಃ।।
ಆಗ ಅಲ್ಲಿಂದ ಉರಿಯುತ್ತಿರುವ ಮುಖ-ಕಣ್ಣುಗಳುಳ್ಳ, ಅನೇಕ ಪಾದ-ಶಿರ-ಭುಜಗಳುಳ್ಳ ಆನೆ ಮತ್ತು ಪರ್ವತಗಳಂತಿರುವ ಮಹಾಕಾಯಗಳು ಉದ್ಭವಿಸಿದವು.
10007016a ಶ್ವವರಾಹೋಷ್ಟ್ರರೂಪಾಶ್ಚ ಹಯಗೋಮಾಯುಗೋಮುಖಾಃ।
10007016c ಋಕ್ಷಮಾರ್ಜಾರವದನಾ ವ್ಯಾಘ್ರದ್ವೀಪಿಮುಖಾಸ್ತಥಾ।।
ಅವುಗಳು ನಾಯಿ, ಹಂದಿ ಮತ್ತು ಒಂಟೆಗಳ, ಕುದುರೆ, ನರಿ ಮತ್ತು ಹಸುಗಳ ರೂಪವನ್ನು ಹೊಂದಿದ್ದವು. ಕೆಲವು ಕರಡಿ ಮತ್ತು ಬೆಕ್ಕುಗಳ ಮುಖವನ್ನು ಹೊಂದಿದ್ದವು. ಇನ್ನು ಕೆಲವಕ್ಕೆ ಹುಲಿ ಮತ್ತು ಚಿರತೆಯ ಮುಖಗಳಿದ್ದವು.
10007017a ಕಾಕವಕ್ತ್ರಾಃ ಪ್ಲವಮುಖಾಃ ಶುಕವಕ್ತ್ರಾಸ್ತಥೈವ ಚ।
10007017c ಮಹಾಜಗರವಕ್ತ್ರಾಶ್ಚ ಹಂಸವಕ್ತ್ರಾಃ ಸಿತಪ್ರಭಾಃ।।
ಅವು ಕಾಗೆಗಳ, ಕಪಿಗಳ, ಗಿಳಿಗಳ, ಹೆಬ್ಬಾವಿನ ಮತ್ತು ಬಿಳಿಯ ಹಂಸಗಳ ಮುಖಗಳನ್ನು ಹೊಂದಿದ್ದವು.
10007018a ದಾರ್ವಾಘಾಟಮುಖಾಶ್ಚೈವ ಚಾಷವಕ್ತ್ರಾಶ್ಚ ಭಾರತ।
10007018c ಕೂರ್ಮನಕ್ರಮುಖಾಶ್ಚೈವ ಶಿಶುಮಾರಮುಖಾಸ್ತಥಾ।।
ಭಾರತ! ಅವು ಮರಕುಟುಕಹಕ್ಕಿಗಳ, ನವಿಲಿನ, ಆಮೆ, ಮೊಸಳೆ, ಮತ್ತು ಮೊಲಗಳ ಮುಖಗಳನ್ನು ಹೊಂದಿದ್ದವು.
10007019a ಮಹಾಮಕರವಕ್ತ್ರಾಶ್ಚ ತಿಮಿವಕ್ತ್ರಾಸ್ತಥೈವ ಚ।
10007019c ಹರಿವಕ್ತ್ರಾಃ ಕ್ರೌಂಚಮುಖಾಃ ಕಪೋತೇಭಮುಖಾಸ್ತಥಾ।।
ಅವು ಮಹಾಮಕರಗಳ, ತಿಮಿಂಗಿಲುಗಳ ಮತ್ತು ಹಾಗೆಯೇ ಸಿಂಹ, ಕ್ರೌಂಚ, ಕಾಡುಪಾರಿವಾಳಗಳ ಮುಖಗಳನ್ನು ಹೊಂದಿದ್ದವು.
10007020a ಪಾರಾವತಮುಖಾಶ್ಚೈವ ಮದ್ಗುವಕ್ತ್ರಾಸ್ತಥೈವ ಚ।
10007020c ಪಾಣಿಕರ್ಣಾಃ ಸಹಸ್ರಾಕ್ಷಾಸ್ತಥೈವ ಚ ಶತೋದರಾಃ।।
ಅವು ಪಾರಿವಾಳಗಳ ಮತ್ತು ನೀರುಕಾಗೆಗಳ ಮುಖಗಳನ್ನು ಹೊಂದಿದ್ದವು. ಕೆಲವರ ಕೈಗಳಲ್ಲಿ ಕಿವಿಗಳಿದ್ದವು. ಕೆಲವರಿಗೆ ಸಹಸ್ರಾರು ಕಣ್ಣುಗಳಿದ್ದವು. ನೂರಾರು ಹೊಟ್ಟೆಗಳಿದ್ದವು.
10007021a ನಿರ್ಮಾಂಸಾಃ ಕೋಕವಕ್ತ್ರಾಶ್ಚ ಶ್ಯೇನವಕ್ತ್ರಾಶ್ಚ ಭಾರತ।
10007021c ತಥೈವಾಶಿರಸೋ ರಾಜನ್ನೃಕ್ಷವಕ್ತ್ರಾಶ್ಚ ಭೀಷಣಾಃ।।
ಭಾರತ! ಕೆಲವರಲ್ಲಿ ಮಾಂಸಗಳೇ ಇರಲಿಲ್ಲ. ಕೆಲವರಿಗೆ ಕಾಗೆ ಮತ್ತು ಗಿಡುಗದ ಮುಖಗಳಿದ್ದವು. ರಾಜನ್! ಕೆಲವಕ್ಕೆ ಶಿರಗಳೇ ಇರಲಿಲ್ಲ. ಕೆಲವಕ್ಕೆ ಕರಡಿಯ ಮುಖಗಳಿದ್ದು ಭೀಷಣವಾಗಿ ತೋರುತ್ತಿದ್ದವು.
10007022a ಪ್ರದೀಪ್ತನೇತ್ರಜಿಹ್ವಾಶ್ಚ ಜ್ವಾಲಾವಕ್ತ್ರಾಸ್ತಥೈವ ಚ।
10007022c ಮೇಷವಕ್ತ್ರಾಸ್ತಥೈವಾನ್ಯೇ ತಥಾ ಚಾಗಮುಖಾ ನೃಪ।।
ಉರಿಯುತ್ತಿರುವ ಕಣ್ಣು ನಾಲಿಗೆಗಳಿದ್ದವು. ಪ್ರಜ್ವಲಿಸುತ್ತಿರುವ ಮುಖಗಳಿದ್ದವು. ಕೆಲವಕ್ಕೆ ಟಗರಿನ ಮುಖಗಳಿದ್ದವು. ನೃಪ! ಇನ್ನು ಕೆಲವಕ್ಕೆ ಮೇಕೆಯ ಮುಖಗಳಿದ್ದವು.
10007023a ಶಂಖಾಭಾಃ ಶಂಖವಕ್ತ್ರಾಶ್ಚ ಶಂಖಕರ್ಣಾಸ್ತಥೈವ ಚ।
10007023c ಶಂಖಮಾಲಾಪರಿಕರಾಃ ಶಂಖಧ್ವನಿಸಮಸ್ವನಾಃ।।
ಕೆಲವಕ್ಕೆ ಶಂಖದ ಕಾಂತಿಯಿದ್ದಿತು. ಕೆಲವು ಶಂಖದಂತ ಮುಖಗಳನ್ನು, ಶಂಖದಂತ ಕಿವಿಗಳನ್ನು ಹೊಂದಿದ್ದವು. ಕೆಲವು ಶಂಖಗಳ ಮಾಲೆಗಳನ್ನು ಧರಿಸಿದ್ದವು. ಕೆಲವರ ಧ್ವನಿಯು ಶಂಖಧ್ವನಿಗೆ ಸಮನಾಗಿತ್ತು.
10007024a ಜಟಾಧರಾಃ ಪಂಚಶಿಖಾಸ್ತಥಾ ಮುಂಡಾಃ ಕೃಶೋದರಾಃ।
10007024c ಚತುರ್ದಂಷ್ಟ್ರಾಶ್ಚತುರ್ಜಿಹ್ವಾಃ ಶಂಕುಕರ್ಣಾಃ ಕಿರೀಟಿನಃ।।
ಕೆಲವು ಜಟೆಗಳನ್ನು ಧರಿಸಿದ್ದವು. ಐದು ಜುಟ್ಟುಗಳಿದ್ದವು. ಬೋಳಾಗಿದ್ದವು. ತೆಳು ಹೊಟ್ಟೆಗಳಿದ್ದವು. ಕೆಲವಕ್ಕೆ ನಾಲ್ಕು ಹಲ್ಲುಗಳಿದ್ದವು. ನಾಲ್ಕು ನಾಲಿಗೆಗಳಿದ್ದವು. ಕೆಲವಕ್ಕೆ ಶಂಖದಂತಹ ಕಿವಿಗಳಿದ್ದವು. ಕಿರೀಟಗಳನ್ನು ಧರಿಸಿದ್ದವು.
10007025a ಮೌಲೀಧರಾಶ್ಚ ರಾಜೇಂದ್ರ ತಥಾಕುಂಚಿತಮೂರ್ಧಜಾಃ।
10007025c ಉಷ್ಣೀಷಿಣೋ ಮುಕುಟಿನಶ್ಚಾರುವಕ್ತ್ರಾಃ ಸ್ವಲಂಕೃತಾಃ।।
ರಾಜೇಂದ್ರ! ಕೆಲವು ಸೊಂಟಕ್ಕೆ ಸುತ್ತಿಕೊಂಡಿದ್ದವು. ಗುಂಗುರು ಕೂದಲುಗಳನ್ನು ಹೊಂದಿದ್ದವು. ಕೆಲವಕ್ಕೆ ಮುಂಡಾಸಗಳಿದ್ದವು. ಕೆಲವು ಮುಕುಟಗಳನ್ನು ಧರಿಸಿದ್ದವು. ಸುಂದರಮುಖವುಳ್ಳ ಕೆಲವು ಅಲಂಕೃತಗೊಂಡಿದ್ದವು.
10007026a ಪದ್ಮೋತ್ಪಲಾಪೀಡಧರಾಸ್ತಥಾ ಕುಮುದಧಾರಿಣಃ।
10007026c ಮಾಹಾತ್ಮ್ಯೇನ ಚ ಸಂಯುಕ್ತಾಃ ಶತಶೋಽಥ ಸಹಸ್ರಶಃ।।
ಕೆಲವು ಕಮಲಗಳಿಂದ ಮಾಡಿದ ಕಿರೀಟಗಳನ್ನು ಧರಿಸಿದ್ದವು. ಕೆಲವು ನೈದಿಲೆಗಳ ಕಿರೀಟಗಳನ್ನು ಧರಿಸಿದ್ದವು. ಆ ನೂರಾರು ಸಹಸ್ರಾರು ಭೂತಗಳು ಮಹಾತ್ಮೆಗಳಿಂದ ಕೂಡಿದ್ದವು.
10007027a ಶತಘ್ನೀಚಕ್ರಹಸ್ತಾಶ್ಚ ತಥಾ ಮುಸಲಪಾಣಯಃ।
10007027c ಭುಶುಂಡೀಪಾಶಹಸ್ತಾಶ್ಚ ಗದಾಹಸ್ತಾಶ್ಚ ಭಾರತ।।
ಭಾರತ! ಶತಘ್ನಿಗಳನ್ನೂ ಚಕ್ರಗಳನ್ನೂ ಹಿಡಿದಿದ್ದವು. ಮುಸಲಗಳನ್ನು ಹಿಡಿದಿದ್ದವು. ಕೆಲವು ಭುಶುಂಡೀ ಮತ್ತು ಪಾಶಗಳನ್ನು ಹಿಡಿದಿದ್ದರೆ ಕೆಲವು ಗದೆಗಳನ್ನು ಹಿಡಿದಿದ್ದವು.
10007028a ಪೃಷ್ಠೇಷು ಬದ್ಧೇಷುಧಯಶ್ಚಿತ್ರಬಾಣಾ ರಣೋತ್ಕಟಾಃ।
10007028c ಸಧ್ವಜಾಃ ಸಪತಾಕಾಶ್ಚ ಸಘಂಟಾಃ ಸಪರಶ್ವಧಾಃ।।
ರಣೋತ್ಕಟರಾದ ಕೆಲವು ಬೆನ್ನಿಗೆ ವಿಚಿತ್ರಬಾಣಗಳುಳ್ಳ ಭತ್ತಳಿಕೆಗಳನ್ನು ಕಟ್ಟಿಕೊಂಡಿದ್ದವು. ಅವು ಧ್ವಜ, ಪತಾಕೆ, ಘಂಟೆ ಮತ್ತು ಪರಶು ಮೊದಲಾದ ಆಯುಧಗಳನ್ನೂ ಹೊಂದಿದ್ದವು.
10007029a ಮಹಾಪಾಶೋದ್ಯತಕರಾಸ್ತಥಾ ಲಗುಡಪಾಣಯಃ।
10007029c ಸ್ಥೂಣಾಹಸ್ತಾಃ ಖಡ್ಗಹಸ್ತಾಃ ಸರ್ಪೋಚ್ಚ್ರಿತಕಿರೀಟಿನಃ।
10007029e ಮಹಾಸರ್ಪಾಂಗದಧರಾಶ್ಚಿತ್ರಾಭರಣಧಾರಿಣಃ।।
ಮಹಾಪಾಶಗಳನ್ನು ಮೇಲಿತ್ತಿ ಹಿಡಿದಿದ್ದವು. ಹಾಗೆಯೇ ದೊಣ್ಣೆಗಳನ್ನು ಹಿಡಿದಿದ್ದವು. ಕೆಲವು ಕಂಬಗಳನ್ನೂ ಕೆಲವು ಖಡ್ಗಗಳನ್ನೂ ಹಿಡಿದಿದ್ದವು. ಕೆಲವು ಸರ್ಪಗಳಿಂದ ಮಾಡಿದ್ದ ಎತ್ತರ ಕಿರೀಟಗಳನ್ನು ಧರಿಸಿದ್ದವು. ಕೆಲವು ಮಹಾಸರ್ಪಗಳನ್ನೇ ತೋಳ್ಬಂದಿಯನ್ನಾಗಿ ಧರಿಸಿದ್ದವು. ವಿಚಿತ್ರ ಆಭರಣಗಳನ್ನು ಧರಿಸಿದ್ದವು.
10007030a ರಜೋಧ್ವಸ್ತಾಃ ಪಂಕದಿಗ್ಧಾಃ ಸರ್ವೇ ಶುಕ್ಲಾಂಬರಸ್ರಜಃ।
10007030c ನೀಲಾಂಗಾಃ ಕಮಲಾಂಗಾಶ್ಚ ಮುಂಡವಕ್ತ್ರಾಸ್ತಥೈವ ಚ।।
ಕೆಲವು ಧೂಳಿನಿಂದ ಮುಚ್ಚಿಕೊಂಡಿದ್ದರೆ ಕೆಲವು ಕೆಸರನ್ನು ಲೇಪಿಸಿಕೊಂಡಿದ್ದವು. ಎಲ್ಲವೂ ಬಿಳಿಯ ವಸ್ತ್ರ ಮತ್ತು ಬಿಳೀ ಮಾಲೆಗಳನ್ನು ಧರಿಸಿದ್ದವು. ಕೆಲವರ ದೇಹಗಳು ನೀಲಿ ವರ್ಣದ್ದಾಗಿದ್ದರೆ ಕೆಲವರ ದೇಹಗಳು ಪಿಂಗಲವರ್ಣದ್ದಾಗಿದ್ದವು. ಕೆಲವು ತಮ್ಮ ತಲೆಗಳನ್ನು ಬೋಳಿಸಿಕೊಂಡಿದ್ದವು.
10007031a ಭೇರೀಶಂಖಮೃದಂಗಾಂಸ್ತೇ ಝರ್ಝರಾನಕಗೋಮುಖಾನ್।
10007031c ಅವಾದಯನ್ಪಾರಿಷದಾಃ ಪ್ರಹೃಷ್ಟಾಃ ಕನಕಪ್ರಭಾಃ।।
ಅ ಕನಕಪ್ರಭೆಯುಳ್ಳ ಪಾರಿಷದರು ಪ್ರಹೃಷ್ಟರಾಗಿ ಭೇರೀ, ಶಂಖ, ಮೃದಂಗ, ಝರ್ಝರ, ಆನಕ ಮತ್ತು ಗೋಮುಖಗಳನ್ನು ಬಾರಿಸುತ್ತಿದ್ದರು.
10007032a ಗಾಯಮಾನಾಸ್ತಥೈವಾನ್ಯೇ ನೃತ್ಯಮಾನಾಸ್ತಥಾಪರೇ।
10007032c ಲಂಘಯಂತಃ ಪ್ಲವಂತಶ್ಚ ವಲ್ಗಂತಶ್ಚ ಮಹಾಬಲಾಃ।।
ಆ ಮಹಾಬಲರಲ್ಲಿ ಕೆಲವರು ಹಾಡುತ್ತಿದ್ದರೆ ಇನ್ನು ಇತರರು ನರ್ತಿಸುತ್ತಿದ್ದರು. ಇನ್ನೂ ಕೆಲವರು ಹಾರುತ್ತಿದ್ದರು, ನೆಗೆಯುತ್ತಿದ್ದರು ಮತ್ತು ಕುಪ್ಪಳಿಸುತ್ತಿದ್ದರು.
10007033a ಧಾವಂತೋ ಜವನಾಶ್ಚಂಡಾಃ ಪವನೋದ್ಧೂತಮೂರ್ಧಜಾಃ।
10007033c ಮತ್ತಾ ಇವ ಮಹಾನಾಗಾ ವಿನದಂತೋ ಮುಹುರ್ಮುಹುಃ।।
ಅವರು ವೇಗವಾಗಿ ಓಡುತ್ತಿದ್ದರು. ಹಾಗೆ ಓಡುವಾಗ ಕೆಲವರ ಉದ್ದ ಕೂದಲುಗಳು ಗಾಳಿಯಿಂದಾಗಿ ಹಾರುತ್ತಿದ್ದವು. ಮದಿಸಿದ ಆನೆಗಳಂತೆ ಪುನಃ ಪುನಃ ಘೀಳಿಡುತ್ತಿದ್ದರು.
10007034a ಸುಭೀಮಾ ಘೋರರೂಪಾಶ್ಚ ಶೂಲಪಟ್ಟಿಶಪಾಣಯಃ।
10007034c ನಾನಾವಿರಾಗವಸನಾಶ್ಚಿತ್ರಮಾಲ್ಯಾನುಲೇಪನಾಃ।।
ಅತ್ಯಂತ ಭಯಂಕರರಾಗಿದ್ದ, ಘೋರರೂಪದ ಗಣಗಳು ಶೂಲ-ಪಟ್ಟಿಶಗಳನ್ನು ಹಿಡಿದಿದ್ದವು. ನಾನಾ ಬಣ್ಣದ ವಸ್ತ್ರಗಳನ್ನೂ, ಮಾಲೆಗಳನ್ನೂ, ಲೇಪನಗಳನ್ನೂ ಧರಿಸಿದ್ದವು.
10007035a ರತ್ನಚಿತ್ರಾಂಗದಧರಾಃ ಸಮುದ್ಯತಕರಾಸ್ತಥಾ।
10007035c ಹಂತಾರೋ ದ್ವಿಷತಾಂ ಶೂರಾಃ ಪ್ರಸಹ್ಯಾಸಹ್ಯವಿಕ್ರಮಾಃ।।
ಕೆಲವು ಶೂರರು ಮತ್ತು ಸಹಿಸಲು ಅಸಾಧ್ಯ ವಿಕ್ರಮವುಳ್ಳವರು ಶತ್ರುಗಳ ಹಂತಾರರಂತೆ ತಮ್ಮ ಬಣ್ಣಬಣ್ಣದ ರತ್ನಗಳ ತೋಳ್ಬಂದಿಗಳನ್ನು ಧರಿಸಿದ್ದ ಕೈಗಳನ್ನು ಮೇಲೆತ್ತಿದ್ದವು.
10007036a ಪಾತಾರೋಽಸೃಗ್ವಸಾದ್ಯಾನಾಂ ಮಾಂಸಾಂತ್ರಕೃತಭೋಜನಾಃ।
10007036c ಚೂಡಾಲಾಃ ಕರ್ಣಿಕಾಲಾಶ್ಚ ಪ್ರಕೃಶಾಃ ಪಿಠರೋದರಾಃ।।
ರಕ್ತ-ವಸೆಗಳನ್ನು ಕುಡಿಯುತ್ತಿದ್ದವು. ಮಾಂಸ-ಕರುಳುಗಳನ್ನು ತಿನ್ನುತ್ತಿದ್ದವು. ಕೆಲವಕ್ಕೆ ಶಿಖೆಗಳಿದ್ದವು. ಕೆಲವು ಬೆಟ್ಟ ಕಣಗಿಲೇ ಹೂಗಳನ್ನು ಮುಡಿದಿದ್ದವು. ಕೆಲವು ಬಡಕಲಾಗಿದ್ದರೆ ಕೆಲವರಿಗೆ ಗಡಿಗೆಯಂತಹ ಹೊಟ್ಟಿಯಿದ್ದಿತು.
10007037a ಅತಿಹ್ರಸ್ವಾತಿದೀರ್ಘಾಶ್ಚ ಪ್ರಬಲಾಶ್ಚಾತಿಭೈರವಾಃ।
10007037c ವಿಕಟಾಃ ಕಾಲಲಂಬೋಷ್ಠಾ ಬೃಹಚ್ಚೇಫಾಸ್ಥಿಪಿಂಡಿಕಾಃ।।
ಅತಿ ಕುಳ್ಳರಿದ್ದರು. ಅತಿ ಎತ್ತರದವರೂ ಇದ್ದರು. ಬಲಶಾಲಿಗಳೂ ಭೈರವರೂ ಇದ್ದರು. ಕೆಲವರು ವಿಕಾರರೂಪವುಳ್ಳವರಾಗಿದ್ದರು. ಕೆಲವರಿಗೆ ಉದ್ದವಾದ ಕಪ್ಪು ತುಟಿಗಳಿದ್ದವು. ಕೆಲವಕ್ಕೆ ಅತಿ ದೊಡ್ಡ ಲಿಂಗಗಳಿದ್ದವು.
10007038a ಮಹಾರ್ಹನಾನಾಮುಕುಟಾ ಮುಂಡಾಶ್ಚ ಜಟಿಲಾಃ ಪರೇ।
10007038c ಸಾರ್ಕೇಂದುಗ್ರಹನಕ್ಷತ್ರಾಂ ದ್ಯಾಂ ಕುರ್ಯುರ್ಯೇ ಮಹೀತಲೇ।।
ಬೆಲೆಬಾಳುವ ಅನೇಕ ಮುಕುಟಗಳನ್ನು ಧರಿಸಿದ್ದವು, ಕೆಲವು ಬೋಳುತಲೆಗಳುಳ್ಳವದಾಗಿದ್ದರೆ ಕೆಲವುಗಳಿಗೆ ಜುಟ್ಟುಗಳಿದ್ದವು. ಅವು ಸೂರ್ಯ-ಚಂದ್ರ-ಗ್ರಹ-ನಕ್ಷತ್ರಗಳೊಂದಿಗೆ ಆಕಾಶವನ್ನೇ ಭೂಮಿಯಮೇಲೆ ಬೀಳುವಂತೆ ಮಾಡಬಲ್ಲವರಾಗಿದ್ದವು.
10007039a ಉತ್ಸಹೇರಂಶ್ಚ ಯೇ ಹಂತುಂ ಭೂತಗ್ರಾಮಂ ಚತುರ್ವಿಧಂ।
10007039c ಯೇ ಚ ವೀತಭಯಾ ನಿತ್ಯಂ ಹರಸ್ಯ ಭ್ರುಕುಟೀಭಟಾಃ।।
ಚತುರ್ವಿಧ ಭೂತಗಣಗಳನ್ನೂ ಸಂಹರಿಸಲು ಉತ್ಸುಕವಾಗಿದ್ದವು. ಹರನ ಹುಬ್ಬುಗಂಟನ್ನೂ ಸಹಿಸಿಕೊಳ್ಳಬಲ್ಲ ಅವು ಸದಾ ನಿರ್ಭಯವಾಗಿದ್ದವು.
10007040a ಕಾಮಕಾರಕರಾಃ ಸಿದ್ಧಾಸ್ತ್ರೈಲೋಕ್ಯಸ್ಯೇಶ್ವರೇಶ್ವರಾಃ।
10007040c ನಿತ್ಯಾನಂದಪ್ರಮುದಿತಾ ವಾಗೀಶಾ ವೀತಮತ್ಸರಾಃ।।
ಬಯಸಿದಂತೆ ಮಾಡುವ ಆ ಸಿದ್ಧರು ತ್ರೈಲೋಕ್ಯಗಳ ಈಶ್ವರರಿಗೂ ಈಶ್ವರರಂತಿದ್ದರು. ನಿತ್ಯವೂ ಆನಂದದಿಂದ ಮುದಿತರಾಗಿದ್ದ ಆ ವಾಗೀಶ್ವರರು ಮತ್ಸರಗಳಿಂದ ವಿಹೀನರಾಗಿದ್ದರು.
10007041a ಪ್ರಾಪ್ಯಾಷ್ಟಗುಣಮೈಶ್ವರ್ಯಂ ಯೇ ನ ಯಾಂತಿ ಚ ವಿಸ್ಮಯಂ।
10007041c ಯೇಷಾಂ ವಿಸ್ಮಯತೇ ನಿತ್ಯಂ ಭಗವಾನ್ ಕರ್ಮಭಿರ್ಹರಃ।।
ಅಷ್ಟಗುಣ ಐಶ್ವರ್ಯಗಳನ್ನು ಪಡೆದಿದ್ದ ಅವರು ನಿರಭಿಮಾನಿಗಳಾಗಿದ್ದರು. ಅವರ ಕರ್ಮಗಳಿಂದ ಭಗವಾನ್ ಹರನು ನಿತ್ಯವೂ ವಿಸ್ಮಿತಗೊಳ್ಳುತ್ತಿದ್ದನು.
10007042a ಮನೋವಾಕ್ಕರ್ಮಭಿರ್ಭಕ್ತೈರ್ನಿತ್ಯಮಾರಾಧಿತಶ್ಚ ಯೈಃ।
10007042c ಮನೋವಾಕ್ಕರ್ಮಭಿರ್ಭಕ್ತಾನ್ಪಾತಿ ಪುತ್ರಾನಿವೌರಸಾನ್।।
ಮನಸ್ಸು, ಮಾತು, ಮತ್ತು ಕರ್ಮಗಳ ಮೂಲಕವಾಗಿ ಭಕ್ತಿಯಿಂದ ನಿತ್ಯವೂ ಆರಾಧಿಸುವ ಆ ಭಕ್ತರನ್ನು ಭಗವಾನನು ಮನಸ್ಸು, ಮಾತು ಮತ್ತು ಕರ್ಮಗಳ ಮೂಲಕವಾಗಿ, ತನ್ನ ಔರಸಪುತ್ರರ ಹಾಗೆ, ರಕ್ಷಿಸುತ್ತಾನೆ.
10007043a ಪಿಬಂತೋಽಸೃಗ್ವಸಾಸ್ತ್ವನ್ಯೇ ಕ್ರುದ್ಧಾ ಬ್ರಹ್ಮದ್ವಿಷಾಂ ಸದಾ।
10007043c ಚತುರ್ವಿಂಶಾತ್ಮಕಂ ಸೋಮಂ ಯೇ ಪಿಬಂತಿ ಚ ನಿತ್ಯದಾ।।
ಅನ್ಯ ಬ್ರಹ್ಮದ್ವೇಷಿಗಳ ರಕ್ತ-ವಸೆಗಳನ್ನು ಅವರು ಕ್ರುದ್ಧರಾಗಿ ಸದಾ ಕುಡಿಯುತ್ತಿರುತ್ತಾರೆ. ಅವರು ನಿತ್ಯವೂ ಇಪ್ಪತ್ನಾಲ್ಕು ಅಂಶಗಳುಳ್ಳ ಸೋಮವನ್ನು ಕುಡಿಯುತ್ತಾರೆ.
10007044a ಶ್ರುತೇನ ಬ್ರಹ್ಮಚರ್ಯೇಣ ತಪಸಾ ಚ ದಮೇನ ಚ।
10007044c ಯೇ ಸಮಾರಾಧ್ಯ ಶೂಲಾಂಕಂ ಭವಸಾಯುಜ್ಯಮಾಗತಾಃ।।
ಶ್ರುತಿ, ಬ್ರಹ್ಮಚರ್ಯ, ತಪಸ್ಸು ಮತ್ತು ಸಮಗಳಿಂದ ಶೂಲಾಂಕನನ್ನು ಆರಾಧಿಸಿ ಭವನ ಸಾಯುಜ್ಯವನ್ನೇ ಪಡೆದಿದ್ದಾರೆ.
10007045a ಯೈರಾತ್ಮಭೂತೈರ್ಭಗವಾನ್ಪಾರ್ವತ್ಯಾ ಚ ಮಹೇಶ್ವರಃ।
10007045c ಸಹ ಭೂತಗಣಾನ್ಭುಂಕ್ತೇ ಭೂತಭವ್ಯಭವತ್ಪ್ರಭುಃ।।
ತನ್ನಂತೆಯೇ ಇರುವ ಈ ಭೂತಗಣಗಳೊಂದಿಗೆ ಮತ್ತು ಪಾರ್ವತಿಯೊಂದಿಗೆ ಭೂತ ಭವ್ಯ ಭವಿಷ್ಯತ್ತುಗಳ ಪ್ರಭುವಾದ ಭಗವಾನ್ ಮಹೇಶ್ವರನು ಹವಿಸ್ಸನ್ನು ಸ್ವೀಕರಿಸುತ್ತಾನೆ.
10007046a ನಾನಾವಿಚಿತ್ರಹಸಿತಕ್ಷ್ವೇಡಿತೋತ್ಕ್ರುಷ್ಟಗರ್ಜಿತೈಃ।
10007046c ಸಂನಾದಯಂತಸ್ತೇ ವಿಶ್ವಮಶ್ವತ್ಥಾಮಾನಮಭ್ಯಯುಃ।।
ನಾನಾವಿಧದ ವಿಚಿತ್ರ ಅಟ್ಟಹಾಸಗಳಿಂದ, ಸಿಂಹನಾದಗಳಿಂದ, ಗರ್ಜನೆಯಿಂದ ಮತ್ತು ವಾದ್ಯಘೋಷಗಳಿಂದ ಪ್ರಪಂಚವನ್ನೇ ಭಯಪಡಿಸುತ್ತಾ ಅವು ಅಶ್ವತ್ಥಾಮನ ಬಳಿ ಬಂದವು.
10007047a ಸಂಸ್ತುವಂತೋ ಮಹಾದೇವಂ ಭಾಃ ಕುರ್ವಾಣಾಃ ಸುವರ್ಚಸಃ।
10007047c ವಿವರ್ಧಯಿಷವೋ ದ್ರೌಣೇರ್ಮಹಿಮಾನಂ ಮಹಾತ್ಮನಃ।।
ಮಹಾದೇವನನ್ನು ಸಂಸ್ತುತಿಸುತ್ತಿದ್ದ ಆ ಸುವರ್ಚಸರು ತಮ್ಮ ಪ್ರಭೆಯನ್ನು ಸುತ್ತಲೂ ಹರಡಿದ್ದರು. ಮಹಾತ್ಮ ದ್ರೌಣಿಯ ಮಹಿಮೆಯನ್ನು ವರ್ಧಿಸಲು ಬಯಸುತ್ತಿದ್ದರು.
10007048a ಜಿಜ್ಞಾಸಮಾನಾಸ್ತತ್ತೇಜಃ ಸೌಪ್ತಿಕಂ ಚ ದಿದೃಕ್ಷವಃ।
10007048c ಭೀಮೋಗ್ರಪರಿಘಾಲಾತಶೂಲಪಟ್ಟಿಶಪಾಣಯಃ।
10007048e ಘೋರರೂಪಾಃ ಸಮಾಜಗ್ಮುರ್ಭೂತಸಂಘಾಃ ಸಮಂತತಃ।।
ಅವನ ತೇಜಸ್ಸು ಎಷ್ಟೆಂದು ಮತ್ತು ಮಲಗಿದ್ದವರ ನಾಶವು ಹೇಗೆ ನಡೆಯುವುದೆಂದು ಪರೀಕ್ಷಿಸಲು ಅವರು ಬಂದಿದ್ದರು. ಹಾಗೆ ಭಯಂಕರರಾದ, ಉಗ್ರರೂಪಗಳ, ಪರಿಘಾಯುಧಗಳನ್ನೂ, ಕೊಳ್ಳಿಗಳನ್ನೂ, ತ್ರಿಶೂಲಗಳನ್ನೂ, ಪಟ್ಟಿಶಗಳನ್ನು ಹಿಡಿದಿದ್ದ ಆ ಘೋರರೂಪದ ಭೂತಗಣಗಳು ಅವನನ್ನು ಸುತ್ತುವರೆದು ನಿಂತವು.
10007049a ಜನಯೇಯುರ್ಭಯಂ ಯೇ ಸ್ಮ ತ್ರೈಲೋಕ್ಯಸ್ಯಾಪಿ ದರ್ಶನಾತ್।
10007049c ತಾನ್ಪ್ರೇಕ್ಷಮಾಣೋಽಪಿ ವ್ಯಥಾಂ ನ ಚಕಾರ ಮಹಾಬಲಃ।।
ದರ್ಶನಮಾತ್ರದಿಂದಲೇ ಮೂರುಲೋಕಗಳಿಗೂ ಭಯವನ್ನುಂಟುಮಾಡುವ ಅವರನ್ನು ನೋಡಿಯೂ ಮಹಾಬಲ ಅಶ್ವತ್ಥಾಮನು ಸ್ವಲ್ಪವೂ ವ್ಯಥೆಗೊಳ್ಳಲಿಲ್ಲ.
10007050a ಅಥ ದ್ರೌಣಿರ್ಧನುಷ್ಪಾಣಿರ್ಬದ್ಧಗೋಧಾಂಗುಲಿತ್ರವಾನ್।
10007050c ಸ್ವಯಮೇವಾತ್ಮನಾತ್ಮಾನಮುಪಹಾರಮುಪಾಹರತ್।।
ಆಗ ಧನುಷ್ಪಾಣಿಯಾಗಿದ್ದ, ಗೋಧಾಂಗುಲಿತ್ರಗಳನ್ನು ಧರಿಸಿದ್ದ ದ್ರೌಣಿಯು ಸ್ವಯಂ ತನ್ನನ್ನೇ ತಾನು ಶಿವನಿಗೆ ಉಪಹಾರವನ್ನಾಗಿ ಅರ್ಪಿಸಿದನು.
10007051a ಧನೂಂಷಿ ಸಮಿಧಸ್ತತ್ರ ಪವಿತ್ರಾಣಿ ಶಿತಾಃ ಶರಾಃ।
10007051c ಹವಿರಾತ್ಮವತಶ್ಚಾತ್ಮಾ ತಸ್ಮಿನ್ಭಾರತ ಕರ್ಮಣಿ।।
ಭಾರತ! ಆ ಆತ್ಮಸಪರ್ಪಣಕರ್ಮದಲ್ಲಿ ಧನುಸ್ಸೇ ಸಮಿತ್ತಾಗಿತ್ತು. ನಿಶಿತ ಶರಗಳೇ ಪವಿತ್ರಗಳಾಗಿದ್ದವು. ಅಶ್ವತ್ಥಾಮನ ಶರೀರವೇ ಹವಿಸ್ಸಾಗಿತ್ತು.
10007052a ತತಃ ಸೌಮ್ಯೇನ ಮಂತ್ರೇಣ ದ್ರೋಣಪುತ್ರಃ ಪ್ರತಾಪವಾನ್।
10007052c ಉಪಹಾರಂ ಮಹಾಮನ್ಯುರಥಾತ್ಮಾನಮುಪಾಹರತ್।।
ಆಗ ಮಹಾಮನ್ಯು ಪ್ರತಾಪವಾನ್ ದ್ರೋಣಪುತ್ರನು ಸೋಮ ಮಂತ್ರಪೂರ್ವಕವಾಗಿ ತನ್ನ ಶರೀರವನ್ನೇ ಹವಿಸ್ಸನ್ನಾಗಿ ಅಗ್ನಿಯಲ್ಲಿ ಸಮರ್ಪಿಸಿಕೊಂಡನು.
10007053a ತಂ ರುದ್ರಂ ರೌದ್ರಕರ್ಮಾಣಂ ರೌದ್ರೈಃ ಕರ್ಮಭಿರಚ್ಯುತಂ।
10007053c ಅಭಿಷ್ಟುತ್ಯ ಮಹಾತ್ಮಾನಮಿತ್ಯುವಾಚ ಕೃತಾಂಜಲಿಃ।।
ಆ ರೌದ್ರಕರ್ಮಿ ಅಚ್ಯುತ ರುದ್ರನನ್ನು ತನ್ನ ರೌದ್ರ ಕರ್ಮಗಳಿಂದಲೇ ತಣಿಸುತ್ತಾ ಕೈಮುಗಿದು ಆ ಮಹಾತ್ಮನನ್ನು ಸ್ತುತಿಸಿದನು:
10007054a ಇಮಮಾತ್ಮಾನಮದ್ಯಾಹಂ ಜಾತಮಾಂಗಿರಸೇ ಕುಲೇ।
10007054c ಅಗ್ನೌ ಜುಹೋಮಿ ಭಗವನ್ ಪ್ರತಿಗೃಹ್ಣೀಷ್ವ ಮಾಂ ಬಲಿಂ।।
“ಭಗವನ್! ಆಂಗಿರಸ ಕುಲದಲ್ಲಿ ಹುಟ್ಟಿದ ನಾನು ಈ ನನ್ನ ದೇಹವನ್ನು ಅಗ್ನಿಯಲ್ಲಿ ಆಹುತಿಯನ್ನಾಗಿ ಅರ್ಪಿಸುತ್ತಿದ್ದೇನೆ. ಬಲಿರೂಪವಾಗಿ ನನ್ನನ್ನು ಸ್ವೀಕರಿಸು!
10007055a ಭವದ್ಭಕ್ತ್ಯಾ ಮಹಾದೇವ ಪರಮೇಣ ಸಮಾಧಿನಾ।
10007055c ಅಸ್ಯಾಮಾಪದಿ ವಿಶ್ವಾತ್ಮನ್ನುಪಾಕುರ್ಮಿ ತವಾಗ್ರತಃ।।
ಮಹಾದೇವ! ವಿಶ್ವಾತ್ಮಾ! ಈ ಆಪತ್ತಿನಲ್ಲಿ ಭಕ್ತಿಯಿಂದ ಪರಮ ಸಮಾಧಿಯಿಂದ ನಿನ್ನ ಎದಿರು ನನ್ನನ್ನು ಸಮರ್ಪಿಸುತ್ತಿದ್ದೇನೆ.
10007056a ತ್ವಯಿ ಸರ್ವಾಣಿ ಭೂತಾನಿ ಸರ್ವಭೂತೇಷು ಚಾಸಿ ವೈ।
10007056c ಗುಣಾನಾಂ ಹಿ ಪ್ರಧಾನಾನಾಮೇಕತ್ವಂ ತ್ವಯಿ ತಿಷ್ಠತಿ।।
ಸರ್ವಭೂತಗಳೂ ನಿನ್ನಲ್ಲಿವೆ. ಸರ್ವಭೂತಗಳಲ್ಲಿಯೂ ನೀನಿರುವೆ. ಎಲ್ಲ ಪ್ರಧಾನಗುಣಗಳೂ ನಿನ್ನಲ್ಲಿ ಏಕತ್ರವಾಗಿ ನೆಲೆಸಿವೆ.
10007057a ಸರ್ವಭೂತಾಶಯ ವಿಭೋ ಹವಿರ್ಭೂತಮುಪಸ್ಥಿತಂ।
10007057c ಪ್ರತಿಗೃಹಾಣ ಮಾಂ ದೇವ ಯದ್ಯಶಕ್ಯಾಃ ಪರೇ ಮಯಾ।।
ಸರ್ವಭೂತಾಶ್ರಯನೇ! ವಿಭೋ! ಶತ್ರುಗಳನ್ನು ಪರಾಭವಗೊಳಿಸಲು ನನಗೆ ಅಶಕ್ಯವೆಂದಾದರೆ ನನ್ನನ್ನೇ ಬಲಿಗೊಡಲು ಸಿದ್ಧನಾಗಿರುವ ನನ್ನನ್ನು ಸ್ವೀಕರಿಸು!”
10007058a ಇತ್ಯುಕ್ತ್ವಾ ದ್ರೌಣಿರಾಸ್ಥಾಯ ತಾಂ ವೇದೀಂ ದೀಪ್ತಪಾವಕಾಂ।
10007058c ಸಂತ್ಯಕ್ತಾತ್ಮಾ ಸಮಾರುಹ್ಯ ಕೃಷ್ಣವರ್ತ್ಮನ್ಯುಪಾವಿಶತ್।।
ಹೀಗೆ ಹೇಳಿ ದ್ರೌಣಿಯು ಪ್ರಜ್ವಲಿಸುತ್ತಿರುವ ಅಗ್ನಿಯಿಂದ ದೇದೀಪ್ಯಮಾನವಾಗಿರುವ ವೇದಿಯನ್ನು ಹತ್ತಿ ದೇಹದ ಮೇಲಿನ ಮೋಹವನ್ನು ಸಂಪೂರ್ಣವಾಗಿ ತೊರೆದು ಧಗಧಗನೆ ಉರಿಯುತ್ತಿರುವ ಅಗ್ನಿಯನ್ನು ಪ್ರವೇಶಿಸಿದನು.
10007059a ತಮೂರ್ಧ್ವಬಾಹುಂ ನಿಶ್ಚೇಷ್ಟಂ ದೃಷ್ಟ್ವಾ ಹವಿರುಪಸ್ಥಿತಂ।
10007059c ಅಬ್ರವೀದ್ಭಗವಾನ್ಸಾಕ್ಷಾನ್ಮಹಾದೇವೋ ಹಸನ್ನಿವ।।
ಕೈಗಳೆರಡನ್ನೂ ಮೇಲೆತ್ತಿ ಹಂದಾಡದೇ ಹವಿಸ್ಸಾಗಿ ಕುಳಿತಿದ್ದ ಅವನನ್ನು ನೋಡಿ ಸಾಕ್ಷಾತ್ ಭಗವಾನ್ ಮಹಾದೇವನು ನಸುನಗುತ್ತಾ ಹೇಳಿದನು:
10007060a ಸತ್ಯಶೌಚಾರ್ಜವತ್ಯಾಗೈಸ್ತಪಸಾ ನಿಯಮೇನ ಚ।
10007060c ಕ್ಷಾಂತ್ಯಾ ಭಕ್ತ್ಯಾ ಚ ಧೃತ್ಯಾ ಚ ಬುದ್ಧ್ಯಾ ಚ ವಚಸಾ ತಥಾ।।
10007061a ಯಥಾವದಹಮಾರಾದ್ಧಃ ಕೃಷ್ಣೇನಾಕ್ಲಿಷ್ಟಕರ್ಮಣಾ।
10007061c ತಸ್ಮಾದಿಷ್ಟತಮಃ ಕೃಷ್ಣಾದನ್ಯೋ ಮಮ ನ ವಿದ್ಯತೇ।।
“ಅಕ್ಲಿಷ್ಟಕರ್ಮಿ ಕೃಷ್ಣನು ಸತ್ಯ, ಶೌಚ, ಸರಳತೆ, ತ್ಯಾಗ, ತಪಸ್ಸು, ನಿಯಮ, ಕ್ಷಮೆ, ಭಕ್ತಿ, ಧೈರ್ಯ, ಬುದ್ಧಿ ಮತ್ತು ಮಾತುಗಳಿಂದ ಯಥೋಚಿತವಾಗಿ ನನ್ನನ್ನು ಆರಾಧಿಸಿದ್ದಾನೆ. ಆದುದರಿಂದ ಕೃಷ್ಣನಿಗಿಂತಲೂ ಪ್ರಿಯನಾದವನು ಬೇರೆ ಯಾರೂ ನನಗಿಲ್ಲ.
10007062a ಕುರ್ವತಾ ತಸ್ಯ ಸಂಮಾನಂ ತ್ವಾಂ ಚ ಜಿಜ್ಞಾಸತಾ ಮಯಾ।
10007062c ಪಾಂಚಾಲಾಃ ಸಹಸಾ ಗುಪ್ತಾ ಮಾಯಾಶ್ಚ ಬಹುಶಃ ಕೃತಾಃ।।
ಅವನನ್ನು ಸಮ್ಮಾನಿಸಲೋಸುಗ ಮತ್ತು ನಿನ್ನನ್ನು ಪರೀಕ್ಷಿಸಲೋಸುಗ ನಾನು ಪಾಂಚಾಲರನ್ನು ಎಲ್ಲರೀತಿಗಳಿಂದ ರಕ್ಷಿಸುತ್ತಿದ್ದೆನು. ನಿನ್ನ ಮೇಲೆ ಅನೇಕ ಮಾಯೆಗಳನ್ನೂ ಪ್ರಯೋಗಿಸಿದೆನು.
10007063a ಕೃತಸ್ತಸ್ಯೈಷ ಸಂಮಾನಃ ಪಾಂಚಾಲಾನ್ರಕ್ಷತಾ ಮಯಾ।
10007063c ಅಭಿಭೂತಾಸ್ತು ಕಾಲೇನ ನೈಷಾಮದ್ಯಾಸ್ತಿ ಜೀವಿತಂ।।
ಇದೂವರೆಗೆ ಪಾಂಚಾಲರನ್ನು ರಕ್ಷಿಸಿ ಅವನಿಗೆ ಸಮ್ಮಾನಮಾಡಿಯಾಯಿತು. ಕಾಲನ ವಶರಾಗಿರುವ ಇವರು ಇನ್ನು ಜೀವಿತವಾಗಿರಲಾರರು!”
10007064a ಏವಮುಕ್ತ್ವಾ ಮಹೇಷ್ವಾಸಂ ಭಗವಾನಾತ್ಮನಸ್ತನುಂ।
10007064c ಆವಿವೇಶ ದದೌ ಚಾಸ್ಮೈ ವಿಮಲಂ ಖಡ್ಗಮುತ್ತಮಂ।।
ಹೀಗೆ ಹೇಳಿ ಭಗವಾನನು ತನ್ನ ಶರೀರದಿಂದ ಅವನ ಶರೀರದೊಳಗೆ ಪ್ರವೇಶಿಸಿದನು ಮತ್ತು ಅವನಿಗೆ ಉತ್ತಮ ವಿಮಲಖಡ್ಗವನ್ನು ಪ್ರದಾನಿಸಿದನು.
10007065a ಅಥಾವಿಷ್ಟೋ ಭಗವತಾ ಭೂಯೋ ಜಜ್ವಾಲ ತೇಜಸಾ।
10007065c ವರ್ಷ್ಮವಾಂಶ್ಚಾಭವದ್ಯುದ್ಧೇ ದೇವಸೃಷ್ಟೇನ ತೇಜಸಾ।।
ಭಗವಂತನ ಆವೇಶವಾದೊಡನೆಯೇ ಅಶ್ವತ್ಥಾಮನು ಇನ್ನೂ ಹೆಚ್ಚು ತೇಜಸ್ಸಿನಿಂದ ಬೆಳಗಿದನು. ದೇವಸೃಷ್ಟಿಯ ತೇಜಸ್ಸಿನಿಂದ ಅವನು ಯುದ್ಧದಲ್ಲಿ ಕಲ್ಲಿನ ಅಂಶವೇ ಆದನು.
10007066a ತಮದೃಶ್ಯಾನಿ ಭೂತಾನಿ ರಕ್ಷಾಂಸಿ ಚ ಸಮಾದ್ರವನ್।
10007066c ಅಭಿತಃ ಶತ್ರುಶಿಬಿರಂ ಯಾಂತಂ ಸಾಕ್ಷಾದಿವೇಶ್ವರಂ।।
ಸಾಕ್ಷಾದ್ ಈಶ್ವರನಂತೆ ಶತ್ರುಶಿಬಿರದೊಳಗೆ ಪ್ರವೇಶಿಸುತ್ತಿದ್ದ ಅವನನ್ನು ಅದೃಶ್ಯರೂಪದಲ್ಲಿ ಭೂತಗಣಗಳೂ ರಾಕ್ಷಸಗಣಗಳೂ ಅನುಸರಿಸಿ ಹೋದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಕೃತಶಿವಾರ್ಚನೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಕೃತಶಿವಾರ್ಚನ ಎನ್ನುವ ಏಳನೇ ಅಧ್ಯಾಯವು.