ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಸೌಪ್ತಿಕ ಪರ್ವ
ಅಧ್ಯಾಯ 6
ಸಾರ
ಪಾಂಡವರ ಶಿಬಿರದ ದ್ವಾರದಲ್ಲಿ ಮಹಾಪುರುಷನೋರ್ವನನ್ನು ಕಂಡ ಅಶ್ವತ್ಥಾಮನು ಅವನ ಮೇಲೆ ತನ್ನ ಎಲ್ಲ ಆಯುಧಗಳನ್ನೂ ಪ್ರಹರಿಸಲು ಅವೆಲ್ಲವೂ ನಿಷ್ಪ್ರಯೋಜಕವಾದ ಅದ್ಭುತವನ್ನು ಎದುರಿಸಿದುದು (1-17). ಅಶ್ವತ್ಥಾಮನು ಮಹಾದೇವನನ್ನು ಶರಣುಹೋಗಲು ಯೋಚಿಸಿದುದು (18-34).
10006001 ಧೃತರಾಷ್ಟ್ರ ಉವಾಚ।
10006001a ದ್ವಾರದೇಶೇ ತತೋ ದ್ರೌಣಿಮವಸ್ಥಿತಮವೇಕ್ಷ್ಯ ತೌ।
10006001c ಅಕುರ್ವತಾಂ ಭೋಜಕೃಪೌ ಕಿಂ ಸಂಜಯ ವದಸ್ವ ಮೇ।।
ಧೃತರಾಷ್ಟ್ರನು ಹೇಳಿದನು: “ಆಗ ದ್ವಾರಪ್ರದೇಶದಲ್ಲಿ ನಿಂತಿರುವ ದ್ರೌಣಿಯನ್ನು ನೋಡಿ ಭೋಜ ಮತ್ತು ಕೃಪರು ಏನು ಮಾಡಿದರು ಎನ್ನುವುದನ್ನು ನನಗೆ ಹೇಳು!”
10006002 ಸಂಜಯ ಉವಾಚ।
10006002a ಕೃತವರ್ಮಾಣಮಾಮಂತ್ರ್ಯ ಕೃಪಂ ಚ ಸ ಮಹಾರಥಂ।
10006002c ದ್ರೌಣಿರ್ಮನ್ಯುಪರೀತಾತ್ಮಾ ಶಿಬಿರದ್ವಾರಮಾಸದತ್।।
ಸಂಜಯನು ಹೇಳಿದನು: “ಕೃತವರ್ಮನನ್ನೂ ಮತ್ತು ಮಹಾರಥ ಕೃಪನನ್ನೂ ಬರಹೇಳಿ ಕೋಪದಿಂದ ಪರೀತಾತ್ಮ ದ್ರೌಣಿಯು ಶಿಬಿರದ ದ್ವಾರವನ್ನು ತಲುಪಿದನು.
10006003a ತತ್ರ ಭೂತಂ ಮಹಾಕಾಯಂ ಚಂದ್ರಾರ್ಕಸದೃಶದ್ಯುತಿಂ।
10006003c ಸೋಽಪಶ್ಯದ್ದ್ವಾರಮಾವೃತ್ಯ ತಿಷ್ಠಂತಂ ಲೋಮಹರ್ಷಣಂ।।
ಅಲ್ಲಿ ಅವನು ದ್ವಾರವನ್ನು ಆವರಿಸಿ ನಿಂತಿರುವ ಚಂದ್ರ-ಸೂರ್ಯರ ಸಮಾನ ಬೆಳಗುತ್ತಿರುವ ಮೈನವಿರೇಳಿಸುವ ಮಹಾಕಾಯದ ಭೂತವೊಂದನ್ನು ನೋಡಿದನು.
10006004a ವಸಾನಂ ಚರ್ಮ ವೈಯಾಘ್ರಂ ಮಹಾರುಧಿರವಿಸ್ರವಂ।
10006004c ಕೃಷ್ಣಾಜಿನೋತ್ತರಾಸಂಗಂ ನಾಗಯಜ್ಞೋಪವೀತಿನಂ।।
ಅವನು ಮಹಾರಕ್ತವನ್ನು ಸುರಿಸುತ್ತಿರುವ ವ್ಯಾಘ್ರಚರ್ಮವನ್ನು ಉಟ್ಟಿದ್ದನು. ಕೃಷ್ಣಾಜಿನವನ್ನೇ ಉತ್ತರೀಯವನ್ನಾಗಿ ಹೊದ್ದಿದ್ದನು. ಸರ್ಪವೇ ಅವನ ಯಜ್ಞೋಪವೀತವಾಗಿತ್ತು.
10006005a ಬಾಹುಭಿಃ ಸ್ವಾಯತೈಃ ಪೀನೈರ್ನಾನಾಪ್ರಹರಣೋದ್ಯತೈಃ।
10006005c ಬದ್ಧಾಂಗದಮಹಾಸರ್ಪಂ ಜ್ವಾಲಾಮಾಲಾಕುಲಾನನಂ।।
ಅವನ ನೀಳ ದಪ್ಪ ಬಾಹುಗಳು ನಾನಾಪ್ರಕಾರದ ಆಯುಧಗಳನ್ನು ಎತ್ತಿ ಹಿಡಿದಿದ್ದವು. ಮಹಾಸರ್ಪಗಳೇ ಅವನ ತೋಳ್ಬಂದಿಗಳಾಗಿದ್ದವು. ಮುಖದ ಸುತ್ತಲೂ ಜ್ವಾಲೆಗಳ ಮಾಲೆಯಿದ್ದಿತು.
10006006a ದಂಷ್ಟ್ರಾಕರಾಲವದನಂ ವ್ಯಾದಿತಾಸ್ಯಂ ಭಯಾವಹಂ।
10006006c ನಯನಾನಾಂ ಸಹಸ್ರೈಶ್ಚ ವಿಚಿತ್ರೈರಭಿಭೂಷಿತಂ।।
ಕೋರೆದಾಡೆಗಳಿಂದ ಕೂಡಿದ್ದ ಅವನ ಕರಾಳ ವದನದಲ್ಲಿನ ತೆರೆದ ಬಾಯಿಯು ಭಯವನ್ನುಂಟುಮಾಡುತ್ತಿತ್ತು. ಸಹಸ್ರಾರು ವಿಚಿತ್ರ ಕಣ್ಣುಗಳಿಂದ ವಿಭೂಷಿತನಾಗಿದ್ದನು.
10006007a ನೈವ ತಸ್ಯ ವಪುಃ ಶಕ್ಯಂ ಪ್ರವಕ್ತುಂ ವೇಷ ಏವ ವಾ।
10006007c ಸರ್ವಥಾ ತು ತದಾಲಕ್ಷ್ಯ ಸ್ಫುಟೇಯುರಪಿ ಪರ್ವತಾಃ।।
ಅವನ ಶರೀರವನ್ನೂ ವೇಷವನ್ನೂ ವರ್ಣಿಸಲು ಯಾರಿಗೂ ಶಕ್ಯವಾಗದಂತಿತ್ತು. ಅವನನ್ನು ನೋಡಿ ಪರ್ವತಗಳು ಕೂಡ ಭಯದಿಂದ ಸ್ಪೋಟಗೊಳ್ಳುತ್ತಿದ್ದವು!
10006008a ತಸ್ಯಾಸ್ಯಾನ್ನಾಸಿಕಾಭ್ಯಾಂ ಚ ಶ್ರವಣಾಭ್ಯಾಂ ಚ ಸರ್ವಶಃ।
10006008c ತೇಭ್ಯಶ್ಚಾಕ್ಷಿಸಹಸ್ರೇಭ್ಯಃ ಪ್ರಾದುರಾಸನ್ಮಹಾರ್ಚಿಷಃ।।
ಅವನ ಮೂಗಿನ ಹೊಳ್ಳೆಗಳಿಂದಲೂ, ಕಿವಿಗಳಿಂದಲೂ, ಸಹಸ್ರ ಕಣ್ಣುಗಳಿಂದಲೂ ಮತ್ತು ಎಲ್ಲೆಡೆಗಳಿಂದಲೂ ಮಹಾಜ್ವಾಲೆಗಳು ಹೊರಹೊಮ್ಮುತ್ತಿದ್ದವು.
10006009a ತಥಾ ತೇಜೋಮರೀಚಿಭ್ಯಃ ಶಂಖಚಕ್ರಗದಾಧರಾಃ।
10006009c ಪ್ರಾದುರಾಸನ್ ಹೃಷೀಕೇಶಾಃ ಶತಶೋಽಥ ಸಹಸ್ರಶಃ।।
ಅವನ ತೇಜಸ್ಸಿನ ಕಿರಣಗಳಿಂದ ನೂರಾರು ಸಹಸ್ರಾರು ಶಂಖ-ಚಕ್ರ-ಗದೆಗಳನ್ನು ಧರಿಸಿದ್ದ ಹೃಷೀಕೇಶರು ಪ್ರಕಟವಾಗುತ್ತಿದ್ದರು.
10006010a ತದತ್ಯದ್ಭುತಮಾಲೋಕ್ಯ ಭೂತಂ ಲೋಕಭಯಂಕರಂ।
10006010c ದ್ರೌಣಿರವ್ಯಥಿತೋ ದಿವ್ಯೈರಸ್ತ್ರವರ್ಷೈರವಾಕಿರತ್।।
ಲೋಕಭಯಂಕರನಾದ ಆ ಅದ್ಭುತ ಭೂತನನ್ನು ನೋಡಿದ ದ್ರೌಣಿಯು ಸ್ವಲ್ಪವೂ ವ್ಯಥಿತನಾಗದೇ ದಿವ್ಯಾಸ್ತ್ರಗಳಿಂದ ಅವನನ್ನು ಮುಸುಕಿದನು.
10006011a ದ್ರೌಣಿಮುಕ್ತಾಂಶರಾಂಸ್ತಾಂಸ್ತು ತದ್ಭೂತಂ ಮಹದಗ್ರಸತ್।
10006011c ಉದಧೇರಿವ ವಾರ್ಯೋಘಾನ್ಪಾವಕೋ ವಡವಾಮುಖಃ।।
ಸಮುದ್ರದಲ್ಲಿರುವ ವಡವಾಗ್ನಿಯು ಜಲರಾಶಿಗಳನ್ನೇ ಕುಡಿದುಬಿಡುವಂತೆ ದ್ರೌಣಿಯು ಪ್ರಯೋಗಿಸಿದ ಶರಗಳೆಲ್ಲವನ್ನೂ ಆ ಮಹಾಭೂತನು ನುಂಗಿಬಿಟ್ಟನು.
10006012a ಅಶ್ವತ್ಥಾಮಾ ತು ಸಂಪ್ರೇಕ್ಷ್ಯ ತಾನ್ ಶರೌಘಾನ್ನಿರರ್ಥಕಾನ್।
10006012c ರಥಶಕ್ತಿಂ ಮುಮೋಚಾಸ್ಮೈ ದೀಪ್ತಾಮಗ್ನಿಶಿಖಾಮಿವ।।
ಆ ಶರಸಮೂಹಗಳು ನಿರರ್ಥಕವಾದುದನ್ನು ನೋಡಿದ ಅಶ್ವತ್ಥಾಮನು ಉರಿಯುತ್ತಿದ್ದ ಅಗ್ನಿಯ ಶಿಖೆಯಂತಿರುವ ರಥಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಿದನು.
10006013a ಸಾ ತದಾಹತ್ಯ ದೀಪ್ತಾಗ್ರಾ ರಥಶಕ್ತಿರಶೀರ್ಯತ।
10006013c ಯುಗಾಂತೇ ಸೂರ್ಯಮಾಹತ್ಯ ಮಹೋಲ್ಕೇವ ದಿವಶ್ಚ್ಯುತಾ।।
ಯುಗಾಂತದಲ್ಲಿ ಸೂರ್ಯನನ್ನು ಅಪ್ಪಳಿಸಿ ನುಚ್ಚುನೂರಾಗಿ ಆಕಾಶದಿಂದ ಕೆಳಕ್ಕೆ ಬೀಳುವ ಮಹಾ ಉಲ್ಕೆಯಂತೆ ದೀಪ್ತಾಗ್ರದ ಆ ರಥಶಕ್ತಿಯು ಆ ಮಹಾಪುರುಷನಿಗೆ ಬಡಿದು ಸೀಳಿ ಕೆಳಗೆ ಬಿದ್ದಿತು.
10006014a ಅಥ ಹೇಮತ್ಸರುಂ ದಿವ್ಯಂ ಖಡ್ಗಮಾಕಾಶವರ್ಚಸಂ।
10006014c ಕೋಶಾತ್ಸಮುದ್ಬಬರ್ಹಾಶು ಬಿಲಾದ್ದೀಪ್ತಮಿವೋರಗಂ।।
ಆಗ ಅಶ್ವತ್ಥಾಮನು ಬಂಗಾರದ ಹಿಡಿಯಿದ್ದ ಆಕಾಶದಂತೆ ಹೊಳೆಯುತ್ತಿದ್ದ ದಿವ್ಯ ಖಡ್ಗವನ್ನು ಬಿಲದಲ್ಲಿದ್ದ ಬೆಳಗುವ ಸರ್ಪವನ್ನು ಹೊರಕ್ಕೆಳೆಯುವಂತೆ ಒರೆಯಿಂದ ಹೊರತೆಗೆದನು.
10006015a ತತಃ ಖಡ್ಗವರಂ ಧೀಮಾನ್ಭೂತಾಯ ಪ್ರಾಹಿಣೋತ್ತದಾ।
10006015c ಸ ತದಾಸಾದ್ಯ ಭೂತಂ ವೈ ವಿಲಯಂ ತೂಲವದ್ಯಯೌ।।
ಆ ಧೀಮಂತನು ಶ್ರೇಷ್ಠ ಖಡ್ಗವನ್ನು ಮಹಾಪುರುಷನ ಮೇಲೆ ರಭಸದಿಂದ ಎಸೆಯಲು ಅದು ಮುಂಗುಸಿಯು ಬಿಲವನ್ನು ಸೇರುವಂತೆ ಆ ಮಹಾಪುರುಷನಲ್ಲಿ ಲೀನವಾಯಿತು.
10006016a ತತಃ ಸ ಕುಪಿತೋ ದ್ರೌಣಿರಿಂದ್ರಕೇತುನಿಭಾಂ ಗದಾಂ।
10006016c ಜ್ವಲಂತೀಂ ಪ್ರಾಹಿಣೋತ್ತಸ್ಮೈ ಭೂತಂ ತಾಮಪಿ ಚಾಗ್ರಸತ್।।
ಆಗ ಕುಪಿತ ದ್ರೌಣಿಯು ಇಂದ್ರನ ಧ್ವಜದಂತೆ ಪ್ರಜ್ವಲಿಸುತ್ತಿದ್ದ ಗದೆಯನ್ನು ಅವನ ಮೇಲೆ ಎಸೆಯಲು, ಅದನ್ನೂ ಕೂಡ ಆ ಮಹಾಭೂತನು ನುಂಗಿಬಿಟ್ಟನು.
10006017a ತತಃ ಸರ್ವಾಯುಧಾಭಾವೇ ವೀಕ್ಷಮಾಣಸ್ತತಸ್ತತಃ।
10006017c ಅಪಶ್ಯತ್ಕೃತಮಾಕಾಶಮನಾಕಾಶಂ ಜನಾರ್ದನೈಃ।।
ಆಯುಧಗಳೆಲ್ಲವೂ ಮುಗಿದು ಹೋಗಿ ದಿಕ್ಕುಕಾಣದೇ ಅತ್ತಿತ್ತ ಹುಡುಕುತ್ತಿರುವಾಗ ಅಶ್ವತ್ಥಾಮನು ಅಸಂಖ್ಯಾತ ಜನಾರ್ದನರಿಂದ ಆಕಾಶವು ತುಂಬಿಹೋಗಿರುವುದನ್ನು ನೋಡಿದನು.
10006018a ತದದ್ಭುತತಮಂ ದೃಷ್ಟ್ವಾ ದ್ರೋಣಪುತ್ರೋ ನಿರಾಯುಧಃ।
10006018c ಅಬ್ರವೀದಭಿಸಂತಪ್ತಃ ಕೃಪವಾಕ್ಯಮನುಸ್ಮರನ್।।
ಆ ಮಹಾ ಅದ್ಭುತವನ್ನು ನೋಡಿ, ನಿರಾಯುಧನಾಗಿದ್ದ ದ್ರೋಣಪುತ್ರನು ಪರಿತಪಿಸುತ್ತಾ ಕೃಪನು ಹೇಳಿದ್ದ ಮಾತನ್ನು ನೆನಪಿಸಿಕೊಂಡು ತನ್ನಲ್ಲಿಯೇ ಹೀಗೆ ಹೇಳಿಕೊಂಡನು:
10006019a ಬ್ರುವತಾಮಪ್ರಿಯಂ ಪಥ್ಯಂ ಸುಹೃದಾಂ ನ ಶೃಣೋತಿ ಯಃ।
10006019c ಸ ಶೋಚತ್ಯಾಪದಂ ಪ್ರಾಪ್ಯ ಯಥಾಹಮತಿವರ್ತ್ಯ ತೌ।।
“ಅಪ್ರಿಯವಾದರೂ ಹಿತವಾದುದನ್ನು ಹೇಳುವ ಸುಹೃದಯರನ್ನು ಕೇಳದವನು ಕೃಪ-ಕೃತವರ್ಮರನ್ನು ಮೀರಿ ನಡೆದ ನನ್ನಂತೆ ಕಷ್ಟವನ್ನು ಹೊಂದಿ ಪಶ್ಚಾತ್ತಾಪ ಪಡುತ್ತಾನೆ!
10006020a ಶಾಸ್ತ್ರದೃಷ್ಟಾನವಧ್ಯಾನ್ಯಃ ಸಮತೀತ್ಯ ಜಿಘಾಂಸತಿ।
10006020c ಸ ಪಥಃ ಪ್ರಚ್ಯುತೋ ಧರ್ಮ್ಯಾತ್ಕುಪಥಂ ಪ್ರತಿಪದ್ಯತೇ।।
ಶಾಸ್ತ್ರಗಳು ಕಂಡು ಹೇಳಿರುವುದನ್ನು ಮೀರಿ ಅವಧ್ಯರನ್ನು ಸಂಹರಿಸಲು ಹೊರಟವನು ಧರ್ಮಮಾರ್ಗದಿಂದ ಭ್ರಷ್ಟನಾಗಿ ಕೆಟ್ಟಮಾರ್ಗದಲ್ಲಿಯೇ ಹೋಗಿ ನಾಶಹೊಂದುತ್ತಾನೆ!
10006021a ಗೋಬ್ರಾಹ್ಮಣನೃಪಸ್ತ್ರೀಷು ಸಖ್ಯುರ್ಮಾತುರ್ಗುರೋಸ್ತಥಾ।
10006021c ವೃದ್ಧಬಾಲಜಡಾಂಧೇಷು ಸುಪ್ತಭೀತೋತ್ಥಿತೇಷು ಚ।।
10006022a ಮತ್ತೋನ್ಮತ್ತಪ್ರಮತ್ತೇಷು ನ ಶಸ್ತ್ರಾಣ್ಯುಪಧಾರಯೇತ್।
10006022c ಇತ್ಯೇವಂ ಗುರುಭಿಃ ಪೂರ್ವಮುಪದಿಷ್ಟಂ ನೃಣಾಂ ಸದಾ।।
ಗೋವು, ಬ್ರಾಹ್ಮಣ, ನೃಪ, ಸ್ತ್ರೀ, ಸಖ, ತಾಯಿ, ಗುರು, ವೃದ್ಧ, ಬಾಲಕ, ಜಡ, ಅಂಧ, ಮಲಗಿರುವವನು, ಹೆದರಿದವನು, ಹಾಸಿಗೆಯಿಂದ ಮೇಲೆದ್ದವನು, ಉನ್ಮತ್ತನಾದವನು, ಮತ್ತು ಹುಚ್ಚ – ಇವರ ಮೇಲೆ ಎಂದೂ ಶಸ್ತ್ರಗಳನ್ನು ಎತ್ತಿ ಪ್ರಹರಿಸಕೂಡದೆಂದು ಗುರುಗಳು ಈ ಮೊದಲೇ ಮನುಷ್ಯರಿಗೆ ಉಪದೇಶಿಸಿದ್ದಾರೆ.
10006023a ಸೋಽಹಮುತ್ಕ್ರಮ್ಯ ಪಂಥಾನಂ ಶಾಸ್ತ್ರದೃಷ್ಟಂ ಸನಾತನಂ।
10006023c ಅಮಾರ್ಗೇಣೈವಮಾರಭ್ಯ ಘೋರಾಮಾಪದಮಾಗತಃ।।
ಶಾಸ್ತ್ರವು ತೋರಿಸಿಕೊಟ್ಟ ಸನಾತನ ಮಾರ್ಗವನ್ನು ಉಲ್ಲಂಘಿಸಿ ಕೆಟ್ಟ ಮಾರ್ಗವನ್ನು ಹಿಡಿದು ಮಾಡಬಾರದುದನ್ನು ಮಾಡಲು ಪ್ರಾರಂಭಿಸಿ ನಾನು ಇಂತಹ ಘೋರ ಆಪತ್ತಿಗೆ ಒಳಗಾಗಿದ್ದೇನೆ.
10006024a ತಾಂ ಚಾಪದಂ ಘೋರತರಾಂ ಪ್ರವದಂತಿ ಮನೀಷಿಣಃ।
10006024c ಯದುದ್ಯಮ್ಯ ಮಹತಕೃತ್ಯಂ ಭಯಾದಪಿ ನಿವರ್ತತೇ।।
10006025a ಅಶಕ್ಯಂ ಚೈವ ಕಃ ಕರ್ತುಂ ಶಕ್ತಃ ಶಕ್ತಿಬಲಾದಿಹ।
ಮಹಾಕಾರ್ಯವನ್ನು ಮಾಡಲು ಹೋಗಿ ಭಯದಿಂದ ಅಥವಾ ಶಕ್ತಿ-ಬಲಗಳಿಲ್ಲದೇ ಅಶಕ್ಯನಾಗಿ ಹಿಂದಿರುಗುವುದು ಘೋರತರ ಆಪತ್ತೆಂದು ತಿಳಿದವರು ಹೇಳುತ್ತಾರೆ.
10006025c ನ ಹಿ ದೈವಾದ್ಗರೀಯೋ ವೈ ಮಾನುಷಂ ಕರ್ಮ ಕಥ್ಯತೇ।।
10006026a ಮಾನುಷಂ ಕುರ್ವತಃ ಕರ್ಮ ಯದಿ ದೈವಾನ್ನ ಸಿಧ್ಯತಿ।
10006026c ಸ ಪಥಃ ಪ್ರಚ್ಯುತೋ ಧರ್ಮ್ಯಾದ್ ವಿಪದಂ ಪ್ರತಿಪದ್ಯತೇ।।
ಮನುಷ್ಯಪ್ರಯತ್ನವು ದೈವಸಂಕಲ್ಪಕ್ಕಿಂತಲೂ ಹೆಚ್ಚಿನದಲ್ಲವೆಂದೂ ಹೇಳುತ್ತಾರೆ. ಮನುಷ್ಯನು ಮಾಡುವ ಕರ್ಮವು ಒಂದು ವೇಳೆ ದೈವಬಲದಿಂದ ಸಿದ್ಧಿಸದಿದ್ದರೆ ಅವನು ಧರ್ಮಮಾರ್ಗವನ್ನು ಬಿಟ್ಟು ಹೋದುದಕ್ಕಾಗಿ ವಿಪತ್ತನ್ನು ಎದುರಿಸಬೇಕಾಗುತ್ತದೆ.
10006027a ಪ್ರತಿಘಾತಂ ಹ್ಯವಿಜ್ಞಾತಂ ಪ್ರವದಂತಿ ಮನೀಷಿಣಃ।
10006027c ಯದಾರಭ್ಯ ಕ್ರಿಯಾಂ ಕಾಂ ಚಿದ್ಭಯಾದಿಹ ನಿವರ್ತತೇ।।
ಭಯದ ಕಾರಣದಿಂದಾಗಿ ಆರಂಭಿಸಿದ ಕಾರ್ಯದಿಂದ ಹಿಂದೆ ಸರಿದರೆ ಆ ಪ್ರತಿಜ್ಞೆಯು ಅಜ್ಞಾನದಿಂದ ಮಾಡಿದುದು ಎಂದು ತಿಳಿದವರು ಹೇಳುತ್ತಾರೆ.
10006028a ತದಿದಂ ದುಷ್ಪ್ರಣೀತೇನ ಭಯಂ ಮಾಂ ಸಮುಪಸ್ಥಿತಂ।
10006028c ನ ಹಿ ದ್ರೋಣಸುತಃ ಸಂಖ್ಯೇ ನಿವರ್ತೇತ ಕಥಂ ಚನ।।
ಕೆಟ್ಟ ಕಾರ್ಯವನ್ನು ಮಾಡಲು ಹೊರಟಿರುವುದರಿಂದಲೇ ನನಗೆ ಈ ಭಯವು ಆವರಿಸಿದೆ. ಆದರೆ ಈ ದ್ರೋಣ ಸುತನು ಎಂದೂ ಯುದ್ಧದಿಂದ ಹಿಂದಿರುಗುವವನಲ್ಲ!
10006029a ಇದಂ ಚ ಸುಮಹದ್ಭೂತಂ ದೈವದಂಡಮಿವೋದ್ಯತಂ।
10006029c ನ ಚೈತದಭಿಜಾನಾಮಿ ಚಿಂತಯನ್ನಪಿ ಸರ್ವಥಾ।।
ಈ ಮಹಾಭೂತನಾದರೋ ದೈವದಂಡದಂತೆ ಎದ್ದು ನಿಂತಿದ್ದಾನೆ! ನಾನು ಎಷ್ಟೇ ಯೋಚಿಸಿದರೂ ಇವನು ಯಾರೆಂದು ನನಗೆ ತಿಳಿಯುತ್ತಿಲ್ಲ!
10006030a ಧ್ರುವಂ ಯೇಯಮಧರ್ಮೇ ಮೇ ಪ್ರವೃತ್ತಾ ಕಲುಷಾ ಮತಿಃ।
10006030c ತಸ್ಯಾಃ ಫಲಮಿದಂ ಘೋರಂ ಪ್ರತಿಘಾತಾಯ ದೃಶ್ಯತೇ।।
ಕಲ್ಮಷ ಬುದ್ಧಿಯಿಂದ ನಾನು ಅಧರ್ಮಮಾರ್ಗದಲ್ಲಿ ಹೊರಟಿರುವುದರಿಂದಲೇ ಇದು ಆಗಿದೆಯೆನ್ನುವುದು ಖಂಡಿತ! ಅದನ್ನು ವಿರೋಧಿಸಿಯೇ ನನಗೆ ಈ ಘೋರ ಫಲವು ದೊರಕಿದೆಯೆಂದು ಕಾಣುತ್ತದೆ.
10006031a ತದಿದಂ ದೈವವಿಹಿತಂ ಮಮ ಸಂಖ್ಯೇ ನಿವರ್ತನಂ।
10006031c ನಾನ್ಯತ್ರ ದೈವಾದುದ್ಯಂತುಮಿಹ ಶಕ್ಯಂ ಕಥಂ ಚನ।।
ನಾನು ಯುದ್ಧದಿಂದ ಹಿಂದೆಸರಿಯಬೇಕೆಂಬುದೇ ದೈವವಿಹಿತವಾಗಿರಬಹುದು. ದೈವಾನುಕೂಲವಿಲ್ಲದೇ ಎಂದೂ ನಾನು ಯುದ್ಧವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ!
10006032a ಸೋಽಹಮದ್ಯ ಮಹಾದೇವಂ ಪ್ರಪದ್ಯೇ ಶರಣಂ ಪ್ರಭುಂ।
10006032c ದೈವದಂಡಮಿಮಂ ಘೋರಂ ಸ ಹಿ ಮೇ ನಾಶಯಿಷ್ಯತಿ।।
ಆದುದರಿಂದ ಇಂದು ನಾನು ಪ್ರಭು ಮಹಾದೇವನ ಶರಣು ಹೋಗುತ್ತೇನೆ. ಅವನೇ ಈ ಘೋರ ದೈವದಂಡವನ್ನು ನಾಶಗೊಳಿಸುತ್ತಾನೆ.
10006033a ಕಪರ್ದಿನಂ ಪ್ರಪದ್ಯಾಥ ದೇವದೇವಮುಮಾಪತಿಂ।
10006033c ಕಪಾಲಮಾಲಿನಂ ರುದ್ರಂ ಭಗನೇತ್ರಹರಂ ಹರಂ।।
10006034a ಸ ಹಿ ದೇವೋಽತ್ಯಗಾದ್ದೇವಾಂಸ್ತಪಸಾ ವಿಕ್ರಮೇಣ ಚ।
10006034c ತಸ್ಮಾಚ್ಚರಣಮಭ್ಯೇಷ್ಯೇ ಗಿರಿಶಂ ಶೂಲಪಾಣಿನಂ।।
ಈಗ ಕಪರ್ದಿ, ದೇವದೇವ, ಉಮಾಪತಿ, ಕಪಾಲಮಾಲಿ, ರುದ್ರ, ಭಗನೇತ್ರಹರ, ಹರನನ್ನು ಶರಣುಹೊಗುತ್ತೇನೆ. ಅವನೇ ತಪಸ್ಸು ಮತ್ತು ವಿಕ್ರಮಗಳಿಂದ ದೇವತೆಗಳನ್ನು ಅತಿಶಯಿಸಿದ್ದಾನೆ. ಆದುದರಿಂದ ಆ ಗಿರಿಶ, ಶೂಲಪಾಣಿಯ ಚರಣಗಳಿಗೆ ಬೀಳುತ್ತೇನೆ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಚಿಂತಾಯಾಂ ಷಷ್ಟೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಚಿಂತಾ ಎನ್ನುವ ಆರನೇ ಅಧ್ಯಾಯವು.