005 ದ್ರೌಣಿಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸೌಪ್ತಿಕ ಪರ್ವ

ಸೌಪ್ತಿಕ ಪರ್ವ

ಅಧ್ಯಾಯ 5

ಸಾರ

ಕೃಪ-ಅಶ್ವತ್ಥಾಮರ ಸಂವಾದ (1-27). ಅಶ್ವತ್ಥಾಮನ ಪಾಂಡವ ಶಿಬಿರ ಗಮನ (28-38).

10005001 ಕೃಪ ಉವಾಚ।
10005001a ಶುಶ್ರೂಷುರಪಿ ದುರ್ಮೇಧಾಃ ಪುರುಷೋಽನಿಯತೇಂದ್ರಿಯಃ।
10005001c ನಾಲಂ ವೇದಯಿತುಂ ಕೃತ್ಸ್ನೌ ಧರ್ಮಾರ್ಥಾವಿತಿ ಮೇ ಮತಿಃ।।

ಕೃಪನು ಹೇಳಿದನು: “ಬುದ್ಧಿಯಿಲ್ಲದ ಪುರುಷನು ತನ್ನ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡಿರದಿದ್ದರೆ ಗುರುವಿನ ಶುಶ್ರೂಷೆಯನ್ನು ಮಾಡಿದ್ದರೂ ಧರ್ಮಾರ್ಥಗಳನ್ನು ತಿಳಿದುಕೊಳ್ಳುವುದಿಲ್ಲ ಎಂದು ನನ್ನ ದೃಢ ವಿಚಾರ.

10005002a ತಥೈವ ತಾವನ್ಮೇಧಾವೀ ವಿನಯಂ ಯೋ ನ ಶಿಕ್ಷತಿ।
10005002c ನ ಚ ಕಿಂ ಚನ ಜಾನಾತಿ ಸೋಽಪಿ ಧರ್ಮಾರ್ಥನಿಶ್ಚಯಂ।।

ಹಾಗೆಯೇ ಮೇಧಾವಿಯು ವಿನಯದಿಂದ ಕಲಿಯದಿದ್ದರೆ ಅವನೂ ಕೂಡ ಧರ್ಮಾರ್ಥನಿಶ್ಚಯವೇನನ್ನೂ ತಿಳಿದುಕೊಳ್ಳಲಾರ.

10005003a ಶುಶ್ರೂಷುಸ್ತ್ವೇವ ಮೇಧಾವೀ ಪುರುಷೋ ನಿಯತೇಂದ್ರಿಯಃ।
10005003c ಜಾನೀಯಾದಾಗಮಾನ್ಸರ್ವಾನ್ ಗ್ರಾಹ್ಯಂ ಚ ನ ವಿರೋಧಯೇತ್।।

ಶುಶ್ರೂಷೆಮಾಡಿರುವ ನಿಯತೇಂದ್ರಿಯ ಮೇಧಾವೀ ಪುರುಷನು ಸರ್ವ ಆಗಮಗಳನ್ನೂ ತಿಳಿದುಕೊಂಡಿರುತ್ತಾನೆ ಮತ್ತು ಸ್ವೀಕರಿಸಬೇಕಾದುದನ್ನು ವಿರೋಧಿಸುವುದಿಲ್ಲ.

10005004a ಅನೇಯಸ್ತ್ವವಮಾನೀ ಯೋ ದುರಾತ್ಮಾ ಪಾಪಪೂರುಷಃ।
10005004c ದಿಷ್ಟಮುತ್ಸೃಜ್ಯ ಕಲ್ಯಾಣಂ ಕರೋತಿ ಬಹುಪಾಪಕಂ।।

ಆದರೆ ನೀತಿಮಾರ್ಗದಲ್ಲಿ ಕರೆದೊಯ್ಯಲು ಅಸಾಧ್ಯನಾದ ಮತ್ತು ಇತರರನ್ನು ಅಪಮಾನಗೊಳಿಸುವ ದುರಾತ್ಮ ಪಾಪಪುರುಷನು ತೋರಿಸಲ್ಪಟ್ಟ ಕಲ್ಯಾಣಮಾರ್ಗವನ್ನು ತ್ಯಜಿಸಿ ಬಹುಪಾಪಕಾರೀ ಕರ್ಮಗಳನ್ನೇ ಮಾಡುತ್ತಾನೆ.

10005005a ನಾಥವಂತಂ ತು ಸುಹೃದಃ ಪ್ರತಿಷೇಧಂತಿ ಪಾತಕಾತ್।
10005005c ನಿವರ್ತತೇ ತು ಲಕ್ಷ್ಮೀವಾನ್ನಾಲಕ್ಷ್ಮೀವಾನ್ನಿವರ್ತತೇ।।

ಹೇಳಿ-ಕೇಳುವವರು ಇರುವವನನ್ನು ಸುಹೃದಯರು ಪಾತಕಕರ್ಮಗಳನ್ನು ಮಾಡದಂತೆ ತಡೆಯುತ್ತಾರೆ. ಭಾಗ್ಯಶಾಲಿಯು ಪಾಪಕರ್ಮಗಳಿಂದ ಹಿಂದೆಸರಿಯುತ್ತಾನೆ. ದುರ್ಭಾಗ್ಯಶಾಲಿಯು ಹಿಂದೆಸರಿಯುವುದಿಲ್ಲ.

10005006a ಯಥಾ ಹ್ಯುಚ್ಚಾವಚೈರ್ವಾಕ್ಯೈಃ ಕ್ಷಿಪ್ತಚಿತ್ತೋ ನಿಯಮ್ಯತೇ।
10005006c ತಥೈವ ಸುಹೃದಾ ಶಕ್ಯೋ ನಶಕ್ಯಸ್ತ್ವವಸೀದತಿ।।

ಮನಸ್ಸು ಕದಡಿದವನು ನಯವಾದ ಮಾತುಗಳಿಂದ ಹೇಗೋ ಹಾಗೆ ಸುಹೃದಯರ ಮಾತನ್ನು ಕೇಳಿದವನು ಸುಪ್ರಸನ್ನನಾಗುತ್ತಾನೆ. ಕೇಳದವನು ನಾಶಗೊಳ್ಳುತ್ತಾನೆ.

10005007a ತಥೈವ ಸುಹೃದಂ ಪ್ರಾಜ್ಞಂ ಕುರ್ವಾಣಂ ಕರ್ಮ ಪಾಪಕಂ।
10005007c ಪ್ರಾಜ್ಞಾಃ ಸಂಪ್ರತಿಷೇಧಂತೇ ಯಥಾಶಕ್ತಿ ಪುನಃ ಪುನಃ।।

ಹಾಗೆಯೇ ಪ್ರಾಜ್ಞನಾದ ಸುಹೃದಯನು ಪಾಪ ಕರ್ಮವನ್ನು ಮಾಡಲು ಹೊರಡುವಾಗ ಪ್ರಾಜ್ಞರು ಅವನನ್ನು ಯಥಾಶಕ್ತಿ ತಡೆಯಲು ಪುನಃ ಪುನಃ ಪ್ರಯತ್ನಿಸುತ್ತಿರುತ್ತಾರೆ.

10005008a ಸ ಕಲ್ಯಾಣೇ ಮತಿಂ ಕೃತ್ವಾ ನಿಯಮ್ಯಾತ್ಮಾನಮಾತ್ಮನಾ।
10005008c ಕುರು ಮೇ ವಚನಂ ತಾತ ಯೇನ ಪಶ್ಚಾನ್ನ ತಪ್ಯಸೇ।।

ಮಗೂ! ಕಲ್ಯಾಣಕರವಾದುದರ ಕುರಿತು ಬುದ್ಧಿಮಾಡಿ ನಿನ್ನನ್ನು ನೀನೇ ನಿಯಂತ್ರಿಸಿಕೋ! ಯಾವುದರಿಂದ ನೀನು ಪಶ್ಚಾತ್ತಾಪ ಪಡಬೇಕಾಗುವುದಿಲ್ಲವೋ ಆ ನನ್ನ ಮಾತನ್ನು ಕೇಳು!

10005009a ನ ವಧಃ ಪೂಜ್ಯತೇ ಲೋಕೇ ಸುಪ್ತಾನಾಮಿಹ ಧರ್ಮತಃ।
10005009c ತಥೈವ ನ್ಯಸ್ತಶಸ್ತ್ರಾಣಾಂ ವಿಮುಕ್ತರಥವಾಜಿನಾಂ।।
10005010a ಯೇ ಚ ಬ್ರೂಯುಸ್ತವಾಸ್ಮೀತಿ ಯೇ ಚ ಸ್ಯುಃ ಶರಣಾಗತಾಃ।
10005010c ವಿಮುಕ್ತಮೂರ್ಧಜಾ ಯೇ ಚ ಯೇ ಚಾಪಿ ಹತವಾಹನಾಃ।।

ಮಲಗಿರುವವರನ್ನು, ಶಸ್ತ್ರಗಳನ್ನು ಕೆಳಗಿಟ್ಟವರನ್ನು, ರಥಗಳಿಂದ ಕುದುರೆಗಳನ್ನು ಬಿಚ್ಚಿರುವವರನ್ನು, ನಾನು ನಿನ್ನವನೆಂದು ಹೇಳುವವರನ್ನು, ಶರಣಾಗತರಾದವರನ್ನು, ಕೂದಲು ಬಿಚ್ಚಿರುವವರನ್ನು, ಮತ್ತು ವಾಹನಗಳನ್ನು ಕಳೆದುಕೊಂಡಿರುವವರನ್ನು ವಧಿಸುವುದು ಧರ್ಮದ ದೃಷ್ಟಿಯಲ್ಲಿ ಪ್ರಶಂಸನೀಯವಲ್ಲ.

10005011a ಅದ್ಯ ಸ್ವಪ್ಸ್ಯಂತಿ ಪಾಂಚಾಲಾ ವಿಮುಕ್ತಕವಚಾ ವಿಭೋ।
10005011c ವಿಶ್ವಸ್ತಾ ರಜನೀಂ ಸರ್ವೇ ಪ್ರೇತಾ ಇವ ವಿಚೇತಸಃ।।

ವಿಭೋ! ಇಂದು ಪಾಂಚಾಲರು ಕವಚಗಳನ್ನು ಕಳಚಿ ಮಲಗಿದ್ದಾರೆ. ಎಲ್ಲರೂ ಪ್ರೇತಗಳಂತೆ ಎಚ್ಚರವಿಲ್ಲದೇ ರಾತ್ರಿಯಲ್ಲಿ ವಿಶ್ರಮಿಸುತ್ತಿದ್ದಾರೆ.

10005012a ಯಸ್ತೇಷಾಂ ತದವಸ್ಥಾನಾಂ ದ್ರುಹ್ಯೇತ ಪುರುಷೋಽನೃಜುಃ।
10005012c ವ್ಯಕ್ತಂ ಸ ನರಕೇ ಮಜ್ಜೇದಗಾಧೇ ವಿಪುಲೇಽಪ್ಲವೇ।।

ಆ ಅವಸ್ಥೆಯಲ್ಲಿರುವ ಅವರ ಮೇಲೆ ಯಾವ ಕ್ರೂರ ಮನುಷ್ಯನು ದ್ರೋಹವೆಸಗುತ್ತಾನೋ ಅವನು ಅಗಾಧ, ವಿಶಾಲ, ದಾಟಲು ಅಸಾಧ್ಯ ಮಹಾನರಕದಲ್ಲಿ ಬೀಳುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

10005013a ಸರ್ವಾಸ್ತ್ರವಿದುಷಾಂ ಲೋಕೇ ಶ್ರೇಷ್ಠಸ್ತ್ವಮಸಿ ವಿಶ್ರುತಃ।
10005013c ನ ಚ ತೇ ಜಾತು ಲೋಕೇಽಸ್ಮಿನ್ಸುಸೂಕ್ಷ್ಮಮಪಿ ಕಿಲ್ಬಿಷಂ।।

ಲೋಕದಲ್ಲಿ ನೀನು ಸರ್ವಾಸ್ತ್ರಗಳನ್ನು ತಿಳಿದಿರುವವರಲ್ಲಿ ಶ್ರೇಷ್ಠನೆಂದು ವಿಶ್ರುತನಾಗಿರುವೆ. ನಿನ್ನಲ್ಲಿ ಸೂಕ್ಷ್ಮವಾದ ಕಿಲ್ಬಿಷವೂ ಇದೂವರೆಗೆ ಲೋಕದಲ್ಲಿ ತಿಳಿದಿಲ್ಲ.

10005014a ತ್ವಂ ಪುನಃ ಸೂರ್ಯಸಂಕಾಶಃ ಶ್ವೋಭೂತ ಉದಿತೇ ರವೌ।
10005014c ಪ್ರಕಾಶೇ ಸರ್ವಭೂತಾನಾಂ ವಿಜೇತಾ ಯುಧಿ ಶಾತ್ರವಾನ್।।

ಪುನಃ ನಾಳೆ ರವಿಯು ಉದಿಸಿ ಸರ್ವಭೂತಗಳನ್ನು ಪ್ರಕಾಶಗೊಳಿಸಲು ಸೂರ್ಯಸಂಕಾಶನಾದ ನೀನು ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವಿಯಂತೆ.

10005015a ಅಸಂಭಾವಿತರೂಪಂ ಹಿ ತ್ವಯಿ ಕರ್ಮ ವಿಗರ್ಹಿತಂ।
10005015c ಶುಕ್ಲೇ ರಕ್ತಮಿವ ನ್ಯಸ್ತಂ ಭವೇದಿತಿ ಮತಿರ್ಮಮ।।

ಬಿಳಿಯ ಬಟ್ಟೆಯ ಮೇಲೆ ರಕ್ತದ ಕಲೆಯಿರುವುದು ಎಷ್ಟು ಅಸಂಭವವೋ ಹಾಗೆ ನಿನ್ನಿಂದ ನಿಂದನೀಯ ಕರ್ಮವು ಮಾಡಲ್ಪಡುತ್ತದೆ ಎನ್ನುವುದೂ ಕೂಡ ಅಸಂಭವವೆಂದು ನನಗನ್ನಿಸುತ್ತದೆ!”

10005016 ಅಶ್ವತ್ಥಾಮೋವಾಚ।
10005016a ಏವಮೇತದ್ಯಥಾತ್ಥ ತ್ವಮನುಶಾಸ್ಮೀಹ ಮಾತುಲ।
10005016c ತೈಸ್ತು ಪೂರ್ವಮಯಂ ಸೇತುಃ ಶತಧಾ ವಿದಲೀಕೃತಃ।।

ಅಶ್ವತ್ಥಾಮನು ಹೇಳಿದನು: “ಮಾವ! ನೀನು ಏನು ಹೇಳಿರುವೆಯೋ ಅದು ಯಥಾರ್ಥವಾಗಿಯೇ ಇದೆ. ಆದರೆ ಪಾಂಡವರು ಈ ಮೊದಲೇ ಧರ್ಮದ ಗಡಿಯನ್ನು ನೂರಾರು ಚೂರುಗಳನ್ನಾಗಿ ಒಡೆದುಬಿಟ್ಟಿದ್ದಾರೆ!

10005017a ಪ್ರತ್ಯಕ್ಷಂ ಭೂಮಿಪಾಲಾನಾಂ ಭವತಾಂ ಚಾಪಿ ಸಂನಿಧೌ।
10005017c ನ್ಯಸ್ತಶಸ್ತ್ರೋ ಮಮ ಪಿತಾ ಧೃಷ್ಟದ್ಯುಮ್ನೇನ ಪಾತಿತಃ।।

ಭೂಮಿಪಾಲರ ಪ್ರತ್ಯಕ್ಷದಲ್ಲಿ ಮತ್ತು ನಿನ್ನ ಸನ್ನಿಧಿಯಲ್ಲಿ ಕೂಡ ಶಸ್ತ್ರಗಳನ್ನು ತ್ಯಜಿಸಿದ್ದ ನನ್ನ ತಂದೆಯನ್ನು ಧೃಷ್ಟದ್ಯುಮ್ನನು ಕೆಳಗುರುಳಿಸಿದನು!

10005018a ಕರ್ಣಶ್ಚ ಪತಿತೇ ಚಕ್ರೇ ರಥಸ್ಯ ರಥಿನಾಂ ವರಃ।
10005018c ಉತ್ತಮೇ ವ್ಯಸನೇ ಸನ್ನೋ ಹತೋ ಗಾಂಡೀವಧನ್ವನಾ।।

ರಥಿಗಳಲ್ಲಿ ಶ್ರೇಷ್ಠ ಕರ್ಣನೂ ಕೂಡ ಅವನ ರಥವು ಹುದುಗಿ ಮಹಾವ್ಯಸನದಲ್ಲಿದ್ದಾಗ ಗಾಂಡೀವಧನ್ವಿಯಿಂದ ಹತನಾದನು.

10005019a ತಥಾ ಶಾಂತನವೋ ಭೀಷ್ಮೋ ನ್ಯಸ್ತಶಸ್ತ್ರೋ ನಿರಾಯುಧಃ।
10005019c ಶಿಖಂಡಿನಂ ಪುರಸ್ಕೃತ್ಯ ಹತೋ ಗಾಂಡೀವಧನ್ವನಾ।।

ಹಾಗೆಯೇ ಶಾಂತನವ ಭೀಷ್ಮನೂ ಕೂಡ ಶಸ್ತ್ರಗಳನ್ನು ಬಿಸುಟು ನಿರಾಯುಧನಾಗಿದ್ದಾಗ ಶಿಖಂಡಿಯನ್ನು ಮುಂದಿಟ್ಟುಕೊಂಡಿದ್ದ ಗಾಂಡೀವಧನ್ವಿಯಿಂದ ಹತನಾದನು.

10005020a ಭೂರಿಶ್ರವಾ ಮಹೇಷ್ವಾಸಸ್ತಥಾ ಪ್ರಾಯಗತೋ ರಣೇ।
10005020c ಕ್ರೋಶತಾಂ ಭೂಮಿಪಾಲಾನಾಂ ಯುಯುಧಾನೇನ ಪಾತಿತಃ।।

ಮಹೇಷ್ವಾಸ ಭೂರಿಶ್ರವನೂ ಕೂಡ ರಣದಲ್ಲಿ ಪ್ರಾಯೋಪವೇಶದಲ್ಲಿದ್ದಾಗ ಭೂಮಿಪಾಲರು ಬೇಡಬೇಡವೆಂದು ಕೂಗಿ ಹೇಳುತ್ತಿದ್ದರೂ, ಯುಯುಧಾನನಿಂದ ಬೀಳಿಸಲ್ಪಟ್ಟನು.

10005021a ದುರ್ಯೋಧನಶ್ಚ ಭೀಮೇನ ಸಮೇತ್ಯ ಗದಯಾ ಮೃಧೇ।
10005021c ಪಶ್ಯತಾಂ ಭೂಮಿಪಾಲಾನಾಮಧರ್ಮೇಣ ನಿಪಾತಿತಃ।।

ದುರ್ಯೋಧನನೂ ಕೂಡ ಭೀಮನೊಡನೆಯ ಗದಾಯುದ್ಧದಲ್ಲಿ ಭೂಮಿಪಾಲರು ನೋಡುತ್ತಿದ್ದಂತೆಯೇ ಅಧರ್ಮದಿಂದ ಕೆಳಗುರುಳಿಸಲ್ಪಟ್ಟನು.

10005022a ಏಕಾಕೀ ಬಹುಭಿಸ್ತತ್ರ ಪರಿವಾರ್ಯ ಮಹಾರಥೈಃ।
10005022c ಅಧರ್ಮೇಣ ನರವ್ಯಾಘ್ರೋ ಭೀಮಸೇನೇನ ಪಾತಿತಃ।।

ಅನೇಕ ಮಹಾರಥರಿಂದ ಸುತ್ತುವರೆಯಲ್ಪಟ್ಟಿದ್ದ ಏಕಾಕೀ ನರವ್ಯಾಘ್ರನನ್ನು ಭೀಮಸೇನನು ಅಧರ್ಮದಿಂದಲೇ ಉರುಳಿಸಿದನು!

10005023a ವಿಲಾಪೋ ಭಗ್ನಸಕ್ಥಸ್ಯ ಯೋ ಮೇ ರಾಜ್ಞಃ ಪರಿಶ್ರುತಃ।
10005023c ವಾರ್ತ್ತಿಕಾನಾಂ ಕಥಯತಾಂ ಸ ಮೇ ಮರ್ಮಾಣಿ ಕೃಂತತಿ।।

ನನ್ನ ರಾಜನು ಹೀಗೆ ತೊಡೆಯೊಡೆದು ವಿಲಪಿಸುತ್ತಿದ್ದಾನೆ ಎಂದು ದೂತರು ಹೇಳಿದುದನ್ನು ಕೇಳಿದ ನನ್ನ ಮರ್ಮಗಳು ಕತ್ತರಿಸಿದಂತಾಗಿವೆ.

10005024a ಏವಮಧಾರ್ಮಿಕಾಃ ಪಾಪಾಃ ಪಾಂಚಾಲಾ ಭಿನ್ನಸೇತವಃ।
10005024c ತಾನೇವಂ ಭಿನ್ನಮರ್ಯಾದಾನ್ಕಿಂ ಭವಾನ್ನ ವಿಗರ್ಹತಿ।।

ಹೀಗೆ ಪಾಪಿ ಪಾಂಚಾಲರೇ ಅಧರ್ಮಿಗಳಾಗಿದ್ದುಕೊಂಡು ಧರ್ಮದ ಸೇತುವೆಯನ್ನು ಒಡೆದಿರುವರು. ಮರ್ಯಾದೆಗಳನ್ನು ಒಡೆದಿರುವ ಅವರನ್ನೇಕೆ ನೀನು ನಿಂದಿಸುತ್ತಿಲ್ಲ?

10005025a ಪಿತೃಹಂತೄನಹಂ ಹತ್ವಾ ಪಾಂಚಾಲಾನ್ನಿಶಿ ಸೌಪ್ತಿಕೇ।
10005025c ಕಾಮಂ ಕೀಟಃ ಪತಂಗೋ ವಾ ಜನ್ಮ ಪ್ರಾಪ್ಯ ಭವಾಮಿ ವೈ।।

ಪಿತೃಹಂತಕರಾದ ಪಾಂಚಾಲರನ್ನು ರಾತ್ರಿವೇಳೆ ಮಲಗಿರುವಾಗಲೇ ಕೊಂದು ಕೀಟ ಅಥವಾ ಪತಂಗದ ಜನ್ಮವು ದೊರಕಿದರೂ ನನಗೆ ಇಷ್ಟವಾದುದೇ!

10005026a ತ್ವರೇ ಚಾಹಮನೇನಾದ್ಯ ಯದಿದಂ ಮೇ ಚಿಕೀರ್ಷಿತಂ।
10005026c ತಸ್ಯ ಮೇ ತ್ವರಮಾಣಸ್ಯ ಕುತೋ ನಿದ್ರಾ ಕುತಃ ಸುಖಂ।।

ನಾನು ಬಯಸಿದ ಈ ಕಾರ್ಯವನ್ನು ಇಂದೇ ಮಾಡಿ ಮುಗಿಸಲು ಅವಸರಪಡುತ್ತಿದ್ದೇನೆ. ಹಾಗೆ ತ್ವರೆಯಲ್ಲಿರುವ ನನಗೆ ನಿದ್ರೆಯೆಲ್ಲಿಂದ ಮತ್ತು ಸುಖವೆಲ್ಲಿಂದ?

10005027a ನ ಸ ಜಾತಃ ಪುಮಾಽಲ್ಲೋಕೇ ಕಶ್ಚಿನ್ನ ಚ ಭವಿಷ್ಯತಿ।
10005027c ಯೋ ಮೇ ವ್ಯಾವರ್ತಯೇದೇತಾಂ ವಧೇ ತೇಷಾಂ ಕೃತಾಂ ಮತಿಂ।।

ಅವರ ವಧೆಯ ಕುರಿತು ಮನಸ್ಸುಮಾಡಿರುವ ನನ್ನನ್ನು ತಡೆಯುವ ಪುರುಷನು ಈ ಲೋಕದಲ್ಲಿ ಇದೂವರೆಗೆ ಹುಟ್ಟಿಲ್ಲ ಮತ್ತು ಮುಂದೆ ಹುಟ್ಟುವುದೂ ಇಲ್ಲ!””

10005028 ಸಂಜಯ ಉವಾಚ।
10005028a ಏವಮುಕ್ತ್ವಾ ಮಹಾರಾಜ ದ್ರೋಣಪುತ್ರಃ ಪ್ರತಾಪವಾನ್।
10005028c ಏಕಾಂತೇ ಯೋಜಯಿತ್ವಾಶ್ವಾನ್ಪ್ರಾಯಾದಭಿಮುಖಃ ಪರಾನ್।।

ಸಂಜಯನು ಹೇಳಿದನು: “ಮಹಾರಾಜ! ಹೀಗೆ ಹೇಳಿ ಪ್ರತಾಪವಾನ್ ದ್ರೋಣಪುತ್ರನು ಏಕಾಂತದಲ್ಲಿ ಕುದುರೆಗಳನ್ನು ಹೂಡಿ ಶತ್ರುಗಳಿಗೆ ಅಭಿಮುಖನಾಗಿ ಹೊರಟನು.

10005029a ತಮಬ್ರೂತಾಂ ಮಹಾತ್ಮಾನೌ ಭೋಜಶಾರದ್ವತಾವುಭೌ।
10005029c ಕಿಮಯಂ ಸ್ಯಂದನೋ ಯುಕ್ತಃ ಕಿಂ ಚ ಕಾರ್ಯಂ ಚಿಕೀರ್ಷಿತಂ।।

ಆಗ ಅವನನ್ನುದ್ದೇಶಿಸಿ ಭೋಜ ಮತ್ತು ಶಾರದ್ವತ ಇಬ್ಬರು ಮಹಾತ್ಮರೂ “ರಥವನ್ನೇಕೆ ಸಜ್ಜುಗೊಳಿಸುತ್ತಿರುವೆ? ಏನನ್ನು ಮಾಡಲು ಬಯಸುತ್ತಿರುವೆ?” ಎಂದು ಕೇಳಿದರು.

10005030a ಏಕಸಾರ್ಥಂ ಪ್ರಯಾತೌ ಸ್ವಸ್ತ್ವಯಾ ಸಹ ನರರ್ಷಭ।
10005030c ಸಮದುಃಖಸುಖೌ ಚೈವ ನಾವಾಂ ಶಂಕಿತುಮರ್ಹಸಿ।।

“ನರರ್ಷಭ! ನಾವಿಬ್ಬರೂ ನಿನ್ನ ಸಹಾಯಕ್ಕಾಗಿಯೇ ಜೊತೆಗೂಡಿ ಬಂದಿದ್ದೇವೆ. ನಿನ್ನ ಸುಖ-ದುಃಖಗಳೆರಡರಲ್ಲೂ ನಾವು ಸಮಭಾಗಿಗಳು. ನಮ್ಮನ್ನು ನೀನು ಶಂಕಿಸಬಾರದು!”

10005031a ಅಶ್ವತ್ಥಾಮಾ ತು ಸಂಕ್ರುದ್ಧಃ ಪಿತುರ್ವಧಮನುಸ್ಮರನ್।
10005031c ತಾಭ್ಯಾಂ ತಥ್ಯಂ ತದಾಚಖ್ಯೌ ಯದಸ್ಯಾತ್ಮಚಿಕೀರ್ಷಿತಂ।।

ಅಶ್ವತ್ಥಾಮನಾದರೋ ತಂದೆಯ ವಧೆಯನ್ನು ಸ್ಮರಿಸಿಕೊಂಡು ಸಂಕ್ರುದ್ಧನಾಗಿ ತಾನು ಏನು ಮಾಡಲು ಹೊರಟಿರುವನೆಂದು ಅವರಿಬ್ಬರಿಗೆ ಸ್ಪಷ್ಟವಾಗಿಯೇ ಹೇಳಿದನು:

10005032a ಹತ್ವಾ ಶತಸಹಸ್ರಾಣಿ ಯೋಧಾನಾಂ ನಿಶಿತೈಃ ಶರೈಃ।
10005032c ನ್ಯಸ್ತಶಸ್ತ್ರೋ ಮಮ ಪಿತಾ ಧೃಷ್ಟದ್ಯುಮ್ನೇನ ಪಾತಿತಃ।।

“ನೂರುಸಾವಿರ ಯೋಧರನ್ನು ನಿಶಿತ ಶರಗಳಿಂದ ಸಂಹರಿಸಿ ಶಸ್ತ್ರವನ್ನು ತ್ಯಜಿಸಿದ ನನ್ನ ತಂದೆಯನ್ನು ಧೃಷ್ಟಧ್ಯುಮ್ನನು ಸಂಹರಿಸಿದನು.

10005033a ತಂ ತಥೈವ ಹನಿಷ್ಯಾಮಿ ನ್ಯಸ್ತವರ್ಮಾಣಮದ್ಯ ವೈ।
10005033c ಪುತ್ರಂ ಪಾಂಚಾಲರಾಜಸ್ಯ ಪಾಪಂ ಪಾಪೇನ ಕರ್ಮಣಾ।।

ಅದೇರೀತಿಯಲ್ಲಿ ಇಂದು ಕವಚಗಳನ್ನು ಕಳಚಿಟ್ಟಿರುವ ಪಾಪಿ ಪಾಂಚಾಲರಾಜನ ಪುತ್ರನನ್ನು ಪಾಪ ಕರ್ಮದಿಂದಲೇ ನಾನು ಸಂಹರಿಸುತ್ತೇನೆ.

10005034a ಕಥಂ ಚ ನಿಹತಃ ಪಾಪಃ ಪಾಂಚಾಲಃ ಪಶುವನ್ಮಯಾ।
10005034c ಶಸ್ತ್ರಾಹವಜಿತಾಂ ಲೋಕಾನ್ಪ್ರಾಪ್ನುಯಾದಿತಿ ಮೇ ಮತಿಃ।।

ಪಶುವಿನಂತೆ ನನ್ನಿಂದ ಹತನಾಗುವ ಪಾಪಿ ಪಾಂಚಾಲನು ಶಸ್ತ್ರಗಳಿಂದ ಹೋರಾಡಿ ಸೋತವನಿಗೆ ದೊರೆಯುವ ಲೋಕಗಳನ್ನು ಯಾವ ರೀತಿಯಲ್ಲಿಯೂ ಪಡೆಯಕೂಡದೆಂದೇ ನನ್ನ ನಿಶ್ಚಯವಾಗಿದೆ.

10005035a ಕ್ಷಿಪ್ರಂ ಸಂನದ್ಧಕವಚೌ ಸಖಡ್ಗಾವಾತ್ತಕಾರ್ಮುಕೌ।
10005035c ಸಮಾಸ್ಥಾಯ ಪ್ರತೀಕ್ಷೇತಾಂ ರಥವರ್ಯೌ ಪರಂತಪೌ।।

ರಥವರ್ಯ ಪರಂತಪ ನೀವಿಬ್ಬರೂ ಬೇಗನೇ ಕವಚಗಳನ್ನು ಧರಿಸಿ, ಖಡ್ಗ ಮತ್ತು ಕಾರ್ಮುಕಗಳನ್ನು ಹಿಡಿದು ಸನ್ನದ್ಧರಾಗಿ ರಥವನ್ನೇರಿ ನನ್ನ ಪ್ರತೀಕ್ಷೆಯಲ್ಲಿರಿ!”

10005036a ಇತ್ಯುಕ್ತ್ವಾ ರಥಮಾಸ್ಥಾಯ ಪ್ರಾಯಾದಭಿಮುಖಃ ಪರಾನ್।
10005036c ತಮನ್ವಗಾತ್ಕೃಪೋ ರಾಜನ್ಕೃತವರ್ಮಾ ಚ ಸಾತ್ವತಃ।।

ಹೀಗೆ ಹೇಳಿ ರಥವನ್ನೇರಿ ಅವನು ಶತ್ರುಗಳಿದ್ದ ಕಡೆ ಹೊರಟುಹೋದನು. ರಾಜನ್! ಅವನನ್ನು ಕೃಪ ಮತ್ತು ಸಾತ್ವತ ಕೃತವರ್ಮರು ಅನುಸರಿಸಿ ಹೋದರು.

10005037a ತೇ ಪ್ರಯಾತಾ ವ್ಯರೋಚಂತ ಪರಾನಭಿಮುಖಾಸ್ತ್ರಯಃ।
10005037c ಹೂಯಮಾನಾ ಯಥಾ ಯಜ್ಞೇ ಸಮಿದ್ಧಾ ಹವ್ಯವಾಹನಾಃ।।

ಶತ್ರುಗಳ ಅಭಿಮುಖವಾಗಿ ಪ್ರಯಾಣಿಸುತ್ತಿದ್ದ ಅವರು ಸಮಿದ್ಧೆಗಳ ಆಹುತಿಯನ್ನು ಪಡೆದು ಪ್ರಜ್ವಲಿಸುವ ತ್ರೇತಾಗ್ನಿಗಳಂತೆಯೇ ಪ್ರಕಾಶಿಸುತ್ತಿದ್ದರು.

10005038a ಯಯುಶ್ಚ ಶಿಬಿರಂ ತೇಷಾಂ ಸಂಪ್ರಸುಪ್ತಜನಂ ವಿಭೋ।
10005038c ದ್ವಾರದೇಶಂ ತು ಸಂಪ್ರಾಪ್ಯ ದ್ರೌಣಿಸ್ತಸ್ಥೌ ರಥೋತ್ತಮೇ।।

ವಿಭೋ! ನಿರಾತಂಕರಾಗಿ ಜನರು ಮಲಗಿದ್ದ ಆ ಶಿಬಿರದ ಸಮೀಪಕ್ಕೆ ಉತ್ತಮ ರಥದಲ್ಲಿ ಹೋಗಿ ದ್ರೌಣಿಯು ಅದರ ದ್ವಾರಪ್ರದೇಶದಲ್ಲಿ ನಿಂತುಕೊಂಡನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಗಮನೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಗಮನ ಎನ್ನುವ ಐದನೇ ಅಧ್ಯಾಯವು.