ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಸೌಪ್ತಿಕ ಪರ್ವ
ಅಧ್ಯಾಯ 4
ಸಾರ
ಕೃಪ-ಅಶ್ವತ್ಥಾಮರ ಸಂವಾದ (1-33).
10004001 ಕೃಪ ಉವಾಚ।
10004001a ದಿಷ್ಟ್ಯಾ ತೇ ಪ್ರತಿಕರ್ತವ್ಯೇ ಮತಿರ್ಜಾತೇಯಮಚ್ಯುತ।
10004001c ನ ತ್ವಾ ವಾರಯಿತುಂ ಶಕ್ತೋ ವಜ್ರಪಾಣಿರಪಿ ಸ್ವಯಂ।।
ಕೃಪನು ಹೇಳಿದನು: “ಅಚ್ಯುತ! ಒಳ್ಳೆಯದಾಯಿತು! ನಿನ್ನಲ್ಲಿ ಪ್ರತೀಕಾರವನ್ನು ಮಾಡುವ ಯೋಚನೆಯುಂಟಾಗಿದೆ! ಸ್ವಯಂ ವಜ್ರಪಾಣಿಯೂ ನಿನ್ನನ್ನು ತಡೆಯಲು ಶಕ್ತನಿಲ್ಲ!
10004002a ಅನುಯಾಸ್ಯಾವಹೇ ತ್ವಾಂ ತು ಪ್ರಭಾತೇ ಸಹಿತಾವುಭೌ।
10004002c ಅದ್ಯ ರಾತ್ರೌ ವಿಶ್ರಮಸ್ವ ವಿಮುಕ್ತಕವಚಧ್ವಜಃ।।
ಆದರೆ ಇಂದಿನ ರಾತ್ರಿ ಕವಚ-ಧ್ವಜಗಳನ್ನು ಕಳಚಿ ವಿಶ್ರಮಿಸು. ಬೆಳಗಾಗುತ್ತಲೇ ನಾವಿಬ್ಬರೂ ನಿನ್ನನ್ನು ಅನುಸರಿಸಿ ಯುದ್ಧಮಾಡುತ್ತೇವೆ.
10004003a ಅಹಂ ತ್ವಾಮನುಯಾಸ್ಯಾಮಿ ಕೃತವರ್ಮಾ ಚ ಸಾತ್ವತಃ।
10004003c ಪರಾನಭಿಮುಖಂ ಯಾಂತಂ ರಥಾವಾಸ್ಥಾಯ ದಂಶಿತೌ।।
ಸಾತ್ವತ ಕೃತವರ್ಮ ಮತ್ತು ನಾನು ಕವಚಗಳನ್ನು ಧರಿಸಿ ರಥಗಳನ್ನೇರಿ ಶತ್ರುಗಳನ್ನು ಎದುರಿಸುವ ನಿನ್ನನ್ನು ಅನುಸರಿಸುತ್ತೇವೆ.
10004004a ಆವಾಭ್ಯಾಂ ಸಹಿತಃ ಶತ್ರೂನ್ ಶ್ವೋಽಸಿ ಹಂತಾ ಸಮಾಗಮೇ।
10004004c ವಿಕ್ರಮ್ಯ ರಥಿನಾಂ ಶ್ರೇಷ್ಠ ಪಾಂಚಾಲಾನ್ಸಪದಾನುಗಾನ್।।
ರಥಿಗಳಲ್ಲಿ ಶ್ರೇಷ್ಠನೇ! ನಮ್ಮಿಬ್ಬರ ಜೊತೆಗೆ ನೀನು ವಿಕ್ರಮದಿಂದ ರಣದಲ್ಲಿ ಪಾಂಚಾಲರನ್ನು ಎದುರಿಸಿ ಅವರ ಅನುಯಾಯಿಗಳೊಂದಿಗೆ ಶತ್ರುಗಳನ್ನು ಜಯಿಸಬಲ್ಲೆ!
10004005a ಶಕ್ತಸ್ತ್ವಮಸಿ ವಿಕ್ರಾಂತುಂ ವಿಶ್ರಮಸ್ವ ನಿಶಾಮಿಮಾಂ।
10004005c ಚಿರಂ ತೇ ಜಾಗ್ರತಸ್ತಾತ ಸ್ವಪ ತಾವನ್ನಿಶಾಮಿಮಾಂ।।
ಮಗೂ! ಈ ರಾತ್ರಿ ವಿಶ್ರಮಿಸು! ಈ ವಿಕ್ರಾಂತಕ್ಕೆ ನೀನು ಶಕ್ತನಾಗಿದ್ದೀಯೆ! ಬೇಗನೆ ಏಳುವಿಯಂತೆ. ಇಂದು ರಾತ್ರಿ ಮಲಗಿಕೋ!
10004006a ವಿಶ್ರಾಂತಶ್ಚ ವಿನಿದ್ರಶ್ಚ ಸ್ವಸ್ಥಚಿತ್ತಶ್ಚ ಮಾನದ।
10004006c ಸಮೇತ್ಯ ಸಮರೇ ಶತ್ರೂನ್ವಧಿಷ್ಯಸಿ ನ ಸಂಶಯಃ।।
ಮಾನದ! ವಿಶ್ರಮಿಸು. ಸ್ವಸ್ಥಚಿತ್ತನಾಗಿ ನಿದ್ರಿಸು! ಒಟ್ಟಿಗೇ ಸಮರದಲ್ಲಿ ಶತ್ರುಗಳನ್ನು ವಧಿಸುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
10004007a ನ ಹಿ ತ್ವಾ ರಥಿನಾಂ ಶ್ರೇಷ್ಠ ಪ್ರಗೃಹೀತವರಾಯುಧಂ।
10004007c ಜೇತುಮುತ್ಸಹತೇ ಕಶ್ಚಿದಪಿ ದೇವೇಷು ಪಾವಕಿಃ।।
ರಥಿಗಳಲ್ಲಿ ಶ್ರೇಷ್ಠನೇ! ವರಾಯುಧವನ್ನು ಹಿಡಿದಿರುವ ನಿನ್ನನ್ನು ದೇವತೆಗಳ ಪಾವಕಿಯು ಕೂಡ ಗೆಲ್ಲಲು ಇಚ್ಛಿಸುವುದಿಲ್ಲ!
10004008a ಕೃಪೇಣ ಸಹಿತಂ ಯಾಂತಂ ಯುಕ್ತಂ ಚ ಕೃತವರ್ಮಣಾ।
10004008c ಕೋ ದ್ರೌಣಿಂ ಯುಧಿ ಸಂರಬ್ಧಂ ಯೋಧಯೇದಪಿ ದೇವರಾಟ್।।
ಕೃಪನೊಂದಿಗೆ ಮತ್ತು ಕೃತವರ್ಮನನ್ನು ಕೂಡಿಕೊಂಡು ಯುದ್ಧದಲ್ಲಿ ಸಂರಬ್ಧನಾಗಿ ಬರುತ್ತಿರುವ ದ್ರೌಣಿಯನ್ನು ಯಾರುತಾನೇ ಎದುರಿಸಿಯಾರು? ಯೋಧನು ದೇವರಾಜನೇ ಆದರೂ ಎದುರಿಸಲಾರನು.
10004009a ತೇ ವಯಂ ಪರಿವಿಶ್ರಾಂತಾ ವಿನಿದ್ರಾ ವಿಗತಜ್ವರಾಃ।
10004009c ಪ್ರಭಾತಾಯಾಂ ರಜನ್ಯಾಂ ವೈ ನಿಹನಿಷ್ಯಾಮ ಶಾತ್ರವಾನ್।।
ವ್ಯಾಕುಲವಿಲ್ಲದೇ ಈ ರಾತ್ರಿ ನಿದ್ದೆಮಾಡಿ ವಿಶ್ರಾಂತಿಪಡೆಯೋಣ! ಬೆಳಗಾಗುತ್ತಲೇ ನಾವು ಶತ್ರುಗಳನ್ನು ಸಂಹರಿಸೋಣ!
10004010a ತವ ಹ್ಯಸ್ತ್ರಾಣಿ ದಿವ್ಯಾನಿ ಮಮ ಚೈವ ನ ಸಂಶಯಃ।
10004010c ಸಾತ್ವತೋಽಪಿ ಮಹೇಷ್ವಾಸೋ ನಿತ್ಯಂ ಯುದ್ಧೇಷು ಕೋವಿದಃ।।
ನಿನ್ನಲ್ಲಿ ದಿವ್ಯಾಸ್ತ್ರಗಳಿವೆ ಮತ್ತು ನನ್ನಲ್ಲಿಯೂ ಇವೆ ಎನ್ನುವುದರಲ್ಲಿ ಸಂಶಯವಿಲ್ಲ. ಮಹೇಷ್ವಾಸ ಸಾತ್ವತನು ಕೂಡ ನಿತ್ಯವೂ ಯುದ್ಧದಲ್ಲಿ ಕೋವಿದನಾಗಿದ್ದಾನೆ.
10004011a ತೇ ವಯಂ ಸಹಿತಾಸ್ತಾತ ಸರ್ವಾನ್ ಶತ್ರೂನ್ಸಮಾಗತಾನ್।
10004011c ಪ್ರಸಹ್ಯ ಸಮರೇ ಹತ್ವಾ ಪ್ರೀತಿಂ ಪ್ರಾಪ್ಸ್ಯಾಮ ಪುಷ್ಕಲಾಂ।
10004011e ವಿಶ್ರಮಸ್ವ ತ್ವಮವ್ಯಗ್ರಃ ಸ್ವಪ ಚೇಮಾಂ ನಿಶಾಂ ಸುಖಂ।।
ಮಗೂ! ಸೇರಿರುವ ಸರ್ವ ಶತ್ರುಗಳನ್ನೂ ನಾವು ಒಟ್ಟಿಗೇ ಸಮರದಲ್ಲಿ ಹೊಡೆದು ಸಂಹರಿಸಿ ಪುಷ್ಕಲ ಸಂತೋಷವನ್ನು ಹೊಂದೋಣ! ಅವ್ಯಗ್ರನಾಗಿ ನೀನು ವಿಶ್ರಮಿಸು. ಈ ರಾತ್ರಿ ಸುಖವಾಗಿ ನಿದ್ರಿಸು!
10004012a ಅಹಂ ಚ ಕೃತವರ್ಮಾ ಚ ಪ್ರಯಾಂತಂ ತ್ವಾಂ ನರೋತ್ತಮ।
10004012c ಅನುಯಾಸ್ಯಾವ ಸಹಿತೌ ಧನ್ವಿನೌ ಪರತಾಪಿನೌ।
10004012e ರಥಿನಂ ತ್ವರಯಾ ಯಾಂತಂ ರಥಾವಾಸ್ಥಾಯ ದಂಶಿತೌ।।
ತ್ವರೆಮಾಡಿ ರಥವನ್ನೇರಿ ಹೋಗುವ ನಿನ್ನನ್ನು ಧನ್ವಿಗಳೂ ಪರತಾಪಿಗಳೂ ಆದ ನಾನು ಮತ್ತು ಕೃತವರ್ಮ ಇಬ್ಬರೂ ಕವಚಗಳನ್ನು ಧರಿಸಿ ರಥವನ್ನೇರಿ ನಿನ್ನನ್ನು ಅನುಸರಿಸಿ ಬರುತ್ತೇವೆ.
10004013a ಸ ಗತ್ವಾ ಶಿಬಿರಂ ತೇಷಾಂ ನಾಮ ವಿಶ್ರಾವ್ಯ ಚಾಹವೇ।
10004013c ತತಃ ಕರ್ತಾಸಿ ಶತ್ರೂಣಾಂ ಯುಧ್ಯತಾಂ ಕದನಂ ಮಹತ್।।
ಅವರ ಶಿಬಿರಕ್ಕೆ ಹೋಗಿ ನೀನು ನಿನ್ನ ಹೆಸರನ್ನು ಕೂಗಿ ಯುದ್ಧಕ್ಕೆ ಅವರನ್ನು ಕರೆಯಬೇಕು. ಆಗ ನೀನು ಶತ್ರುಗಳೊಂದಿಗೆ ಮಹಾ ಕದನವನ್ನು ಹೋರಾಡುವೆಯಂತೆ!
10004014a ಕೃತ್ವಾ ಚ ಕದನಂ ತೇಷಾಂ ಪ್ರಭಾತೇ ವಿಮಲೇಽಹನಿ।
10004014c ವಿಹರಸ್ವ ಯಥಾ ಶಕ್ರಃ ಸೂದಯಿತ್ವಾ ಮಹಾಸುರಾನ್।।
ಪ್ರಭಾತವಾಗುತ್ತಲೇ ಶುಭ್ರದಿನದಲ್ಲಿ ನೀನು ಅವರೊಂದಿಗೆ ಕದನವಾಡಿ ಮಹಾಸುರರನ್ನು ಸಂಹರಿಸುತ್ತಾ ವಿಹರಿಸಿದ ಇಂದ್ರನಂತೆ ರಣರಂಗದಲ್ಲಿ ವಿಹರಿಸುವಿಯಂತೆ!
10004015a ತ್ವಂ ಹಿ ಶಕ್ತೋ ರಣೇ ಜೇತುಂ ಪಾಂಚಾಲಾನಾಂ ವರೂಥಿನೀಂ।
10004015c ದೈತ್ಯಸೇನಾಮಿವ ಕ್ರುದ್ಧಃ ಸರ್ವದಾನವಸೂದನಃ।।
ಕ್ರುದ್ಧ ಸರ್ವದಾನವಸೂದನ ಇಂದ್ರನು ದೈತ್ಯಸೇನೆಯನ್ನು ಹೇಗೋ ಹಾಗೆ ಪಾಂಚಾಲರ ಸೇನೆಗಳನ್ನು ರಣದಲ್ಲಿ ಗೆಲ್ಲಲು ನೀನೊಬ್ಬನೇ ಶಕ್ತ!
10004016a ಮಯಾ ತ್ವಾಂ ಸಹಿತಂ ಸಂಖ್ಯೇ ಗುಪ್ತಂ ಚ ಕೃತವರ್ಮಣಾ।
10004016c ನ ಸಹೇತ ವಿಭುಃ ಸಾಕ್ಷಾದ್ವಜ್ರಪಾಣಿರಪಿ ಸ್ವಯಂ।।
ಕೃತವರ್ಮ ಮತ್ತು ನನ್ನಿಂದ ರಕ್ಷಿತನಾದ ನಿನ್ನನ್ನು ಯುದ್ಧದಲ್ಲಿ ಸಾಕ್ಷಾತ್ ಸ್ವಯಂ ವಿಭು ವಜ್ರಪಾಣಿಯೂ ಸಹಿಸಿಕೊಳ್ಳಲಾರನು.
10004017a ನ ಚಾಹಂ ಸಮರೇ ತಾತ ಕೃತವರ್ಮಾ ತಥೈವ ಚ।
10004017c ಅನಿರ್ಜಿತ್ಯ ರಣೇ ಪಾಂಡೂನ್ವ್ಯಪಯಾಸ್ಯಾವ ಕರ್ಹಿ ಚಿತ್।।
ಮಗೂ! ನಾನಾಗಲೀ ಕೃತವರ್ಮನಾಗಲೀ ಸಮರದಲ್ಲಿ ಪಾಂಡವರನ್ನು ಸೋಲಿಸದೇ ರಣದಿಂದ ಎಂದೂ ಹಿಂದಿರುಗುವುದಿಲ್ಲ,
10004018a ಹತ್ವಾ ಚ ಸಮರೇ ಕ್ಷುದ್ರಾನ್ಪಾಂಚಾಲಾನ್ಪಾಂಡುಭಿಃ ಸಹ।
10004018c ನಿವರ್ತಿಷ್ಯಾಮಹೇ ಸರ್ವೇ ಹತಾ ವಾ ಸ್ವರ್ಗಗಾ ವಯಂ।।
ಸಮರದಲ್ಲಿ ಪಾಂಡವರೊಂದಿಗೆ ಕ್ಷುದ್ರ ಪಾಂಚಾಲರನ್ನು ಎಲ್ಲರನ್ನೂ ಸಂಹರಿಸಿ ಹಿಂದಿರುಗುತ್ತೇವೆ ಅಥವಾ ನಾವೇ ಹತರಾಗಿ ಸ್ವರ್ಗಕ್ಕೆ ಹೋಗುತ್ತೇವೆ!
10004019a ಸರ್ವೋಪಾಯೈಃ ಸಹಾಯಾಸ್ತೇ ಪ್ರಭಾತೇ ವಯಮೇವ ಹಿ।
10004019c ಸತ್ಯಮೇತನ್ಮಹಾಬಾಹೋ ಪ್ರಬ್ರವೀಮಿ ತವಾನಘ।।
ಮಹಾಬಾಹೋ! ಅನಘ! ಬೆಳಗಾಗುತ್ತಲೇ ನಿನ್ನ ಸರ್ವ ಉಪಾಯಗಳಲ್ಲಿ ನಾವು ಸಹಾಯಮಾಡುತ್ತೇವೆ. ಸತ್ಯವನ್ನೇ ಹೇಳುತ್ತಿದ್ದೇನೆ!”
10004020a ಏವಮುಕ್ತಸ್ತತೋ ದ್ರೌಣಿರ್ಮಾತುಲೇನ ಹಿತಂ ವಚಃ।
10004020c ಅಬ್ರವೀನ್ಮಾತುಲಂ ರಾಜನ್ಕ್ರೋಧಾದುದ್ವೃತ್ಯ ಲೋಚನೇ।।
ರಾಜನ್! ಸೋದರಮಾವನ ಈ ಹಿತಮಾತನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಉಬ್ಬಿದ ದ್ರೌಣಿಯು ಈ ಮಾತುಗಳನ್ನಾಡಿದನು:
10004021a ಆತುರಸ್ಯ ಕುತೋ ನಿದ್ರಾ ನರಸ್ಯಾಮರ್ಷಿತಸ್ಯ ಚ।
10004021c ಅರ್ಥಾಂಶ್ಚಿಂತಯತಶ್ಚಾಪಿ ಕಾಮಯಾನಸ್ಯ ವಾ ಪುನಃ।।
“ಆತುರನಾದವನಿಗೆ, ಕುಪಿತನಾದ ಮನುಷ್ಯನಿಗೆ, ಉದ್ದೇಶಗಳ ಕುರಿತು ಚಿಂತಿಸುವವನಿಗೆ ಮತ್ತು ಆಸೆಗಳಿರುವವನಿಗೆ ಎಲ್ಲಿಂದ ನಿದ್ರೆಬರಬೇಕು?
10004022a ತದಿದಂ ಸಮನುಪ್ರಾಪ್ತಂ ಪಶ್ಯ ಮೇಽದ್ಯ ಚತುಷ್ಟಯಂ।
10004022c ಯಸ್ಯ ಭಾಗಶ್ಚತುರ್ಥೋ ಮೇ ಸ್ವಪ್ನಮಹ್ನಾಯ ನಾಶಯೇತ್।।
ಈ ನಾಲ್ಕರಲ್ಲಿ ಒಂದನ್ನು ಪಡೆದಿದ್ದರೂ ಅದು ನಿದ್ರೆಯನ್ನು ನಾಶಗೊಳಿಸುವಾಗ ಇಂದು ಈ ನಾಲ್ಕನ್ನೂ ಹೊಂದಿ ನಾನು ಪೀಡೆಗೊಳಗಾಗಿರುವುದು ನಿನಗೆ ಕಾಣುತ್ತಿಲ್ಲವೇ?
10004023a ಕಿಂ ನಾಮ ದುಃಖಂ ಲೋಕೇಽಸ್ಮಿನ್ಪಿತುರ್ವಧಮನುಸ್ಮರನ್।
10004023c ಹೃದಯಂ ನಿರ್ದಹನ್ಮೇಽದ್ಯ ರಾತ್ರ್ಯಹಾನಿ ನ ಶಾಮ್ಯತಿ।।
ತಂದೆಯ ವಧೆಯನ್ನು ಸ್ಮರಿಸಿಕೊಂಡು ಆಗುವ ಈ ದುಃಖಕ್ಕೆ ಲೋಕದಲ್ಲಿ ಯಾವ ಹೆಸರಿದೆ? ಇಂದು ನನ್ನ ಹೃದಯವನ್ನು ಸುಡುತ್ತಿರುವ ಈ ದುಃಖವು ರಾತ್ರಿಯಾಗಲೀ ಹಗಲಾಗಲೀ ಶಾಂತವಾಗುವುದಿಲ್ಲ.
10004024a ಯಥಾ ಚ ನಿಹತಃ ಪಾಪೈಃ ಪಿತಾ ಮಮ ವಿಶೇಷತಃ।
10004024c ಪ್ರತ್ಯಕ್ಷಮಪಿ ತೇ ಸರ್ವಂ ತನ್ಮೇ ಮರ್ಮಾಣಿ ಕೃಂತತಿ।।
ಪಾಪಿಗಳಿಂದ ನನ್ನ ತಂದೆಯು ಹತನಾದುದನ್ನು ವಿಶೇಷತಃ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ಅದು ನನ್ನ ಮರ್ಮಗಳನ್ನು ಕತ್ತರಿಸುತ್ತಿದೆ.
10004025a ಕಥಂ ಹಿ ಮಾದೃಶೋ ಲೋಕೇ ಮುಹೂರ್ತಮಪಿ ಜೀವತಿ।
10004025c ದ್ರೋಣೋ ಹತೇತಿ ಯದ್ವಾಚಃ ಪಾಂಚಾಲಾನಾಂ ಶೃಣೋಮ್ಯಹಂ।।
“ದ್ರೋಣನು ಹತನಾದನು!” ಎಂದು ಪಾಂಚಾಲರು ಹೇಳಿದುದನ್ನು ಕೇಳಿಯೂ ನನ್ನಂಥವನು ಮುಹೂರ್ತಕಾಲವಾದರೂ ಲೋಕದಲ್ಲಿ ಹೇಗೆ ಜೀವವನ್ನಿಟ್ಟುಕೊಂಡಿರಬಲ್ಲನು?
10004026a ದೃಷ್ಟದ್ಯುಮ್ನಮಹತ್ವಾಜೌ ನಾಹಂ ಜೀವಿತುಮುತ್ಸಹೇ।
10004026c ಸ ಮೇ ಪಿತೃವಧಾದ್ವಧ್ಯಃ ಪಾಂಚಾಲಾ ಯೇ ಚ ಸಂಗತಾಃ।।
ಧೃಷ್ಟದ್ಯುಮ್ನನನ್ನು ಕೊಲ್ಲುವವರೆಗೆ ನನಗೆ ಜೀವನದಲ್ಲಿ ಉತ್ಸಾಹವಿಲ್ಲ! ನನ್ನ ತಂದೆಯನ್ನು ಕೊಂದಿರುವುದರಿಂದ ಆ ಪಾಂಚಾಲನು ತನ್ನ ಅನುಯಾಯಿಗಳೊಂದಿಗೆ ವಧಿಸಲ್ಪಡಬೇಕು!
10004027a ವಿಲಾಪೋ ಭಗ್ನಸಕ್ಥಸ್ಯ ಯಸ್ತು ರಾಜ್ಞೋ ಮಯಾ ಶ್ರುತಃ।
10004027c ಸ ಪುನರ್ಹೃದಯಂ ಕಸ್ಯ ಕ್ರೂರಸ್ಯಾಪಿ ನ ನಿರ್ದಹೇತ್।।
ನಾನು ಕೇಳಿದಂತೆ ತೊಡೆಮುರಿದು ಬಿದ್ದಿರುವ ರಾಜನ ವಿಲಾಪವನ್ನು ಕೇಳಿದ ಬೇರೆ ಯಾವ ಹೃದಯವು, ಅವನು ಎಷ್ಟೇ ಕ್ರೂರನಾಗಿದ್ದರೂ, ಸುಡುವುದಿಲ್ಲ?
10004028a ಕಸ್ಯ ಹ್ಯಕರುಣಸ್ಯಾಪಿ ನೇತ್ರಾಭ್ಯಾಮಶ್ರು ನಾವ್ರಜೇತ್।
10004028c ನೃಪತೇರ್ಭಗ್ನಸಕ್ಥಸ್ಯ ಶ್ರುತ್ವಾ ತಾದೃಗ್ವಚಃ ಪುನಃ।।
ತೊಡೆಮುರಿದಿರುವ ನೃಪತಿಯ ಆ ಮಾತುಗಳನ್ನು ಕೇಳಿದ ಯಾರ ಕಣ್ಣುಗಳು, ಅವನು ಎಷ್ಟೇ ನಿಷ್ಕರುಣಿಯಾಗಿದ್ದರೂ, ಕಂಬನಿಯನ್ನು ಸುರಿಸುವುದಿಲ್ಲ?
10004029a ಯಶ್ಚಾಯಂ ಮಿತ್ರಪಕ್ಷೋ ಮೇ ಮಯಿ ಜೀವತಿ ನಿರ್ಜಿತಃ।
10004029c ಶೋಕಂ ಮೇ ವರ್ಧಯತ್ಯೇಷ ವಾರಿವೇಗ ಇವಾರ್ಣವಂ।
10004029e ಏಕಾಗ್ರಮನಸೋ ಮೇಽದ್ಯ ಕುತೋ ನಿದ್ರಾ ಕುತಃ ಸುಖಂ।।
ನನ್ನ ಮಿತ್ರಪಕ್ಷನಾಗಿರುವವನು ನಾನು ಜೀವಿತವಾಗಿರುವಾಗಲೇ ಸೋತುಹೋದನೆಂದರೆ ಭರತದಲ್ಲಿರುವ ಸಮುದ್ರದಂತೆ ನನ್ನ ಶೋಕವು ಉಕ್ಕಿಬರುತ್ತದೆ! ಏಕಾಗ್ರಮನಸ್ಕನಾಗಿರುವ ನನಗೆ ಇಂದು ನಿದ್ರೆಯೆಲ್ಲಿಂದ? ಸುಖವೆಲ್ಲಿಂದ?
10004030a ವಾಸುದೇವಾರ್ಜುನಾಭ್ಯಾಂ ಹಿ ತಾನಹಂ ಪರಿರಕ್ಷಿತಾನ್।।
10004030c ಅವಿಷಹ್ಯತಮಾನ್ಮನ್ಯೇ ಮಹೇಂದ್ರೇಣಾಪಿ ಮಾತುಲ।
ಮಾವ! ವಾಸುದೇವ-ಅರ್ಜುನರು ರಕ್ಷಿಸುತ್ತಿರುವವರೆಗೆ ಮಹೇಂದ್ರನು ಕೂಡ ಅವರನ್ನು ಸೋಲಿಸಲಾರನೆಂದು ನನಗೆ ಗೊತ್ತು.
10004031a ನ ಚಾಸ್ಮಿ ಶಕ್ಯಃ ಸಂಯಂತುಮಸ್ಮಾತ್ಕಾರ್ಯಾತ್ಕಥಂ ಚನ।।
10004031c ನ ತಂ ಪಶ್ಯಾಮಿ ಲೋಕೇಽಸ್ಮಿನ್ಯೋ ಮಾಂ ಕಾರ್ಯಾನ್ನಿವರ್ತಯೇತ್।
10004031e ಇತಿ ಮೇ ನಿಶ್ಚಿತಾ ಬುದ್ಧಿರೇಷಾ ಸಾಧುಮತಾ ಚ ಮೇ।।
ಆದುದರಿಂದ ನನ್ನ ಈ ಕಾರ್ಯದಿಂದ ಹಿಂದೆಸರಿಯುವುದು ಎಂದಿಗೂ ಸಾಧ್ಯವಿಲ್ಲ. ಈ ಲೋಕದಲ್ಲಿ ನನ್ನ ಈ ಕಾರ್ಯದಿಂದ ತಡೆಯುವವನನ್ನು ಯಾರನ್ನೂ ಕಾಣೆ! ಇದು ನನ್ನ ನಿಶ್ಚಯ! ಈ ಯೋಚನೆಯು ಒಳ್ಳೆಯದು ಎಂದು ನನಗನ್ನಿಸುತ್ತಿದೆ.
10004032a ವಾರ್ತ್ತಿಕೈಃ ಕಥ್ಯಮಾನಸ್ತು ಮಿತ್ರಾಣಾಂ ಮೇ ಪರಾಭವಃ।
10004032c ಪಾಂಡವಾನಾಂ ಚ ವಿಜಯೋ ಹೃದಯಂ ದಹತೀವ ಮೇ।।
ವಾರ್ತಾಕಾರರು ಹೇಳಿದ ನನ್ನ ಮಿತ್ರರ ಪರಾಭವ ಮತ್ತು ಪಾಂಡವರ ವಿಜಯವು ನನ್ನ ಹೃದಯವನ್ನು ಸುಡುತ್ತಿದೆ.
10004033a ಅಹಂ ತು ಕದನಂ ಕೃತ್ವಾ ಶತ್ರೂಣಾಮದ್ಯ ಸೌಪ್ತಿಕೇ।
10004033c ತತೋ ವಿಶ್ರಮಿತಾ ಚೈವ ಸ್ವಪ್ತಾ ಚ ವಿಗತಜ್ವರಃ।।
ನಾನಾದರೋ ಇಂದು ಕದನಗೈದು ಮಲಗಿರುವ ಶತ್ರುಗಳನ್ನು ಸಂಹರಿಸುತ್ತೇನೆ. ನಂತರವೇ ನಾನು ಉದ್ವೇಗಗಳಿಲ್ಲದೇ ನಿದ್ರಿಸುತ್ತೇನೆ ಮತ್ತು ವಿಶ್ರಮಿಸುತ್ತೇನೆ!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಮಂತ್ರಣಾಯಾಂ ಚತುರ್ಥೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಮಂತ್ರಣ ಎನ್ನುವ ನಾಲ್ಕನೇ ಅಧ್ಯಾಯವು.