ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಸೌಪ್ತಿಕ ಪರ್ವ
ಅಧ್ಯಾಯ 3
ಸಾರ
ಅಶ್ವತ್ಥಾಮನು ಆ ರಾತ್ರಿ ಮಲಗಿರುವ ಪಾಂಚಾಲರನ್ನು ತಾನು ಸಂಹರಿಸುವೆನೆಂದು ಪುನಃ ಹೇಳಿಕೊಂಡಿದುದು (1-35).
10003001 ಸಂಜಯ ಉವಾಚ।
10003001a ಕೃಪಸ್ಯ ವಚನಂ ಶ್ರುತ್ವಾ ಧರ್ಮಾರ್ಥಸಹಿತಂ ಶುಭಂ।
10003001c ಅಶ್ವತ್ಥಾಮಾ ಮಹಾರಾಜ ದುಃಖಶೋಕಸಮನ್ವಿತಃ।।
10003002a ದಹ್ಯಮಾನಸ್ತು ಶೋಕೇನ ಪ್ರದೀಪ್ತೇನಾಗ್ನಿನಾ ಯಥಾ।
10003002c ಕ್ರೂರಂ ಮನಸ್ತತಃ ಕೃತ್ವಾ ತಾವುಭೌ ಪ್ರತ್ಯಭಾಷತ।।
ಸಂಜಯನು ಹೇಳಿದನು: “ಮಹಾರಾಜ! ಕೃಪನ ಆ ಧರ್ಮಾರ್ಥಸಂಹಿತ ಶುಭ ಮಾತುಗಳನ್ನು ಕೇಳಿ ದುಃಖಶೋಕಸಮನ್ವಿತನಾದ ಅಶ್ವತ್ಥಾಮನು ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಶೋಕದಿಂದ ದಹಿಸುತ್ತಾ ಮನಸ್ಸನ್ನು ಕ್ರೂರವನ್ನಾಗಿಸಿಕೊಂಡು ಅವರಿಬ್ಬರಿಗೂ ಉತ್ತರಿಸಿದನು:
10003003a ಪುರುಷೇ ಪುರುಷೇ ಬುದ್ಧಿಃ ಸಾ ಸಾ ಭವತಿ ಶೋಭನಾ।
10003003c ತುಷ್ಯಂತಿ ಚ ಪೃಥಕ್ ಸರ್ವೇ ಪ್ರಜ್ಞಯಾ ತೇ ಸ್ವಯಾ ಸ್ವಯಾ।।
“ಪ್ರತಿಯೊಬ್ಬ ಪುರುಷನಿಗೂ ಅವನಿಗಿರುವ ಬುದ್ಧಿಯು ಉತ್ತಮವಾದುದೆಂದು ಅನ್ನಿಸುತ್ತದೆ. ಎಲ್ಲರೂ ತಮ್ಮ ತಮ್ಮ ಪ್ರತ್ಯೇಕ ಬುದ್ಧಿಗಳಿಂದ ತೃಪ್ತರಾಗಿರುತ್ತಾರೆ.
10003004a ಸರ್ವೋ ಹಿ ಮನ್ಯತೇ ಲೋಕ ಆತ್ಮಾನಂ ಬುದ್ಧಿಮತ್ತರಂ।
10003004c ಸರ್ವಸ್ಯಾತ್ಮಾ ಬಹುಮತಃ ಸರ್ವಾತ್ಮಾನಂ ಪ್ರಶಂಸತಿ।।
ಲೋಕದಲ್ಲಿ ಎಲ್ಲರೂ ತಮ್ಮನ್ನು ತಾವೇ ಅತಿ ಬುದ್ಧಿವಂತರೆಂದು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಮ್ಮ ಮತವೇ ಬಹುಮತವೆಂದು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಮ್ಮ ಬುದ್ಧಿಯನ್ನೇ ಪ್ರಶಂಸೆಮಾಡಿಕೊಳ್ಳುತ್ತಾರೆ.
10003005a ಸರ್ವಸ್ಯ ಹಿ ಸ್ವಕಾ ಪ್ರಜ್ಞಾ ಸಾಧುವಾದೇ ಪ್ರತಿಷ್ಠಿತಾ।
10003005c ಪರಬುದ್ಧಿಂ ಚ ನಿಂದಂತಿ ಸ್ವಾಂ ಪ್ರಶಂಸಂತಿ ಚಾಸಕೃತ್।।
ಎಲ್ಲರೂ ತಮ್ಮ ಪ್ರಜ್ಞೆಯೇ ಸಾಧುವಾದುದೆಂದೂ ಪ್ರತಿಷ್ಠಿತವಾದುದೆಂದೂ ಹೇಳಿಕೊಳ್ಳುತ್ತಿರುತ್ತಾರೆ. ಇತರರ ಬುದ್ಧಿಯನ್ನು ನಿಂದಿಸುತ್ತಾರೆ. ಮತ್ತು ತಮ್ಮದನ್ನು ಪ್ರಶಂಸಿಸಿಕೊಳ್ಳುತ್ತಿರುತ್ತಾರೆ.
10003006a ಕಾರಣಾಂತರಯೋಗೇನ ಯೋಗೇ ಯೇಷಾಂ ಸಮಾ ಮತಿಃ।
10003006c ತೇಽನ್ಯೋನ್ಯೇನ ಚ ತುಷ್ಯಂತಿ ಬಹು ಮನ್ಯಂತಿ ಚಾಸಕೃತ್।।
ಕಾರಣಾಂತರದಿಂದ ಯೋಗವಶಾತ್ ಇಬ್ಬರ ಬುದ್ಧಿಯೂ ಹೊಂದಿಕೊಂಡರೆ ಆಗ ಅವರು ಅನ್ಯೋನ್ಯರಿಂದ ಸಂತುಷ್ಟರಾಗುತ್ತಾರೆ. ಒಬ್ಬರು ಮತ್ತೊಬ್ಬರನ್ನು ಗೌರವಿಸುತ್ತಾರೆ.
10003007a ತಸ್ಯೈವ ತು ಮನುಷ್ಯಸ್ಯ ಸಾ ಸಾ ಬುದ್ಧಿಸ್ತದಾ ತದಾ।
10003007c ಕಾಲಯೋಗವಿಪರ್ಯಾಸಂ ಪ್ರಾಪ್ಯಾನ್ಯೋನ್ಯಂ ವಿಪದ್ಯತೇ।।
ಆದರೆ ಕಾಲಯೋಗದಿಂದ ಅದೇ ಮನುಷ್ಯರ ವಿಚಾರಗಳಲ್ಲಿ ವಿಪರ್ಯಾಸಗಳುಂಟಾದರೆ ಅನ್ಯೋನ್ಯರಲ್ಲಿ ಒಡಕು ಉಂಟಾಗುತ್ತದೆ.
10003008a ಅಚಿಂತ್ಯತ್ವಾದ್ಧಿ ಚಿತ್ತಾನಾಂ ಮನುಷ್ಯಾಣಾಂ ವಿಶೇಷತಃ।
10003008c ಚಿತ್ತವೈಕಲ್ಯಮಾಸಾದ್ಯ ಸಾ ಸಾ ಬುದ್ಧಿಃ ಪ್ರಜಾಯತೇ।।
ವಿಶೇಷವಾಗಿ ಮನುಷ್ಯರ ಚಿತ್ತಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಚಿತ್ತಗಳ ವ್ಯತ್ಯಾಸಗಳಿಂದಾಗಿ ಒಬ್ಬೊಬ್ಬರಿಗೆ ಒಂದೊಂದುರೀತಿಯ ಯೋಚನೆಗಳುಂಟಾಗುತ್ತವೆ.
10003009a ಯಥಾ ಹಿ ವೈದ್ಯಃ ಕುಶಲೋ ಜ್ಞಾತ್ವಾ ವ್ಯಾಧಿಂ ಯಥಾವಿಧಿ।
10003009c ಭೇಷಜಂ ಕುರುತೇ ಯೋಗಾತ್ಪ್ರಶಮಾರ್ಥಮಿಹಾಭಿಭೋ।।
10003010a ಏವಂ ಕಾರ್ಯಸ್ಯ ಯೋಗಾರ್ಥಂ ಬುದ್ಧಿಂ ಕುರ್ವಂತಿ ಮಾನವಾಃ।
10003010c ಪ್ರಜ್ಞಯಾ ಹಿ ಸ್ವಯಾ ಯುಕ್ತಾಸ್ತಾಂ ಚ ನಿಂದಂತಿ ಮಾನವಾಃ।।
ಕುಶಲ ವೈದ್ಯನು ಯಥಾವಿಧಿಯಾಗಿ ವ್ಯಾಧಿಯನ್ನು ತಿಳಿದುಕೊಂಡು ಆ ರೋಗಕ್ಕೆ ತಕ್ಕುದಾದ ಚಿಕಿತ್ಸೆಯನ್ನು ಮಾಡುವ ಹಾಗೆ ಮನುಷ್ಯರು ಪ್ರತಿಯೊಂದು ಉದ್ದೇಶಕ್ಕೂ ಯೋಚನೆಮಾಡಿ ಕಾರ್ಯಗತರಾಗುತ್ತಾರೆ. ಆದರೆ ಸ್ವಯಂ ಬುದ್ಧಿಯನ್ನುಪಯೋಗಿಸುವವನನ್ನು ಇತರ ಮನುಷ್ಯರು ನಿಂದಿಸುತ್ತಾರೆ!
10003011a ಅನ್ಯಯಾ ಯೌವನೇ ಮರ್ತ್ಯೋ ಬುದ್ಧ್ಯಾ ಭವತಿ ಮೋಹಿತಃ।
10003011c ಮಧ್ಯೇಽನ್ಯಯಾ ಜರಾಯಾಂ ತು ಸೋಽನ್ಯಾಂ ರೋಚಯತೇ ಮತಿಂ।।
ಮನುಷ್ಯನು ಯೌವನದಲ್ಲಿ ಬೇರೊಂದು ರೀತಿಯ ಬುದ್ಧಿಯಿಂದ ಮೋಹಿತನಾಗುತ್ತಾನೆ. ಮಧ್ಯವಯಸ್ಸಿನಲ್ಲಿ ಬೇರೊಂದರಿಂದ ಮತ್ತು ವೃದ್ಧಾಪ್ಯದಲ್ಲಿ ಇನ್ನೊಂದರಿಂದ ಅವನ ಬುದ್ಧಿಯು ಪ್ರಭಾವಿತಗೊಳ್ಳುತ್ತದೆ.
10003012a ವ್ಯಸನಂ ವಾ ಪುನರ್ಘೋರಂ ಸಮೃದ್ಧಿಂ ವಾಪಿ ತಾದೃಶೀಂ।
10003012c ಅವಾಪ್ಯ ಪುರುಷೋ ಭೋಜ ಕುರುತೇ ಬುದ್ಧಿವೈಕೃತಂ।।
ಭೋಜ! ಮನುಷ್ಯನು ಘೋರ ವ್ಯಸನವನ್ನು ಅಥವಾ ಅಷ್ಟೇ ಮಹತ್ತರ ಸಮೃದ್ಧಿಯನ್ನು ಹೊಂದಿದಾಗ ಅವನ ಬುದ್ಧಿಯು ವಿಕೃತವಾಗುತ್ತದೆ.
10003013a ಏಕಸ್ಮಿನ್ನೇವ ಪುರುಷೇ ಸಾ ಸಾ ಬುದ್ಧಿಸ್ತದಾ ತದಾ।
10003013c ಭವತ್ಯನಿತ್ಯಪ್ರಜ್ಞತ್ವಾತ್ಸಾ ತಸ್ಯೈವ ನ ರೋಚತೇ।।
ಹೀಗೆ ಒಬ್ಬನೇ ಮನುಷ್ಯನಲ್ಲಿ ವಯಸ್ಸಿಗೆ ತಕ್ಕಂತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬುದ್ಧಿಯು ಬದಲಾಗುತ್ತಾ ಇರುತ್ತದೆಯಾದುದರಿಂದ ಎಷ್ಟೋ ವೇಳೆ ಅವನ ನಿರ್ಧಾರಗಳು ಅವನಿಗೇ ಇಷ್ಟವಾಗುವುದಿಲ್ಲ.
10003014a ನಿಶ್ಚಿತ್ಯ ತು ಯಥಾಪ್ರಜ್ಞಂ ಯಾಂ ಮತಿಂ ಸಾಧು ಪಶ್ಯತಿ।
10003014c ತಸ್ಯಾಂ ಪ್ರಕುರುತೇ ಭಾವಂ ಸಾ ತಸ್ಯೋದ್ಯೋಗಕಾರಿಕಾ।।
ತನಗೆ ತಿಳಿದಂತೆ ಯಾವುದು ಒಳ್ಳೆಯದೆಂದು ಕಾಣುತ್ತಾನೋ ಅದನ್ನೇ ನಿಶ್ಚಯಿಸುತ್ತಾನೆ. ಆ ಬುದ್ಧಿಯೇ ಅವನನ್ನು ಕಾರ್ಯಪ್ರವೃತ್ತನನ್ನಾಗಿ ಮಾಡುತ್ತದೆ.
10003015a ಸರ್ವೋ ಹಿ ಪುರುಷೋ ಭೋಜ ಸಾಧ್ವೇತದಿತಿ ನಿಶ್ಚಿತಃ।
10003015c ಕರ್ತುಮಾರಭತೇ ಪ್ರೀತೋ ಮರಣಾದಿಷು ಕರ್ಮಸು।।
ಭೋಜ! ಆದುದರಿಂದ ಎಲ್ಲ ಮನುಷ್ಯರು ತಮಗೆ ಒಳ್ಳೆಯದೆಂದು ನಿಶ್ಚಯಿಸಿದುದನ್ನು – ಅದು ಮರಣವನ್ನೇ ತರುವಂತಹುದಾದರೂ, ಸಂತೋಷದಿಂದ ಕೈಗೊಳ್ಳುತ್ತಾರೆ.
10003016a ಸರ್ವೇ ಹಿ ಯುಕ್ತಿಂ ವಿಜ್ಞಾಯ ಪ್ರಜ್ಞಾಂ ಚಾಪಿ ಸ್ವಕಾಂ ನರಾಃ।
10003016c ಚೇಷ್ಟಂತೇ ವಿವಿಧಾಶ್ಚೇಷ್ಟಾ ಹಿತಮಿತ್ಯೇವ ಜಾನತೇ।।
ಹಾಗೆ ಎಲ್ಲರೂ ತಮ್ಮ ತಮ್ಮ ಯುಕ್ತಿ ಮತ್ತು ಪ್ರಜ್ಞೆಗೆ ತಕ್ಕಂತೆ ವಿವಿಧ ಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಅವು ತಮ್ಮ ಹಿತದಲ್ಲಿಯೇ ಇದೆ ಎಂದು ತಿಳಿಯುತ್ತಾರೆ.
10003017a ಉಪಜಾತಾ ವ್ಯಸನಜಾ ಯೇಯಮದ್ಯ ಮತಿರ್ಮಮ।
10003017c ಯುವಯೋಸ್ತಾಂ ಪ್ರವಕ್ಷ್ಯಾಮಿ ಮಮ ಶೋಕವಿನಾಶಿನೀಂ।।
ಇಂದು ವ್ಯಸನದಿಂದ ನನ್ನ ಮತಿಯಲ್ಲಿ ಹುಟ್ಟಿದ, ಶೋಕವಿನಾಶಿನೀ ವಿಚಾರವನ್ನು ನಿಮಗೆ ಹೇಳುತ್ತೇನೆ.
10003018a ಪ್ರಜಾಪತಿಃ ಪ್ರಜಾಃ ಸೃಷ್ಟ್ವಾ ಕರ್ಮ ತಾಸು ವಿಧಾಯ ಚ।
10003018c ವರ್ಣೇ ವರ್ಣೇ ಸಮಾಧತ್ತ ಏಕೈಕಂ ಗುಣವತ್ತರಂ।।
ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿ ಅವುಗಳಿಗೆ ಕರ್ಮಗಳನ್ನು ವಿಭಜಿಸಿ ಕೊಟ್ಟನು. ಒಂದೊಂದು ವರ್ಣಕ್ಕೂ ವಿಶೇಷ ಗುಣಗಳನ್ನೂ ಕಲ್ಪಿಸಿದನು.
10003019a ಬ್ರಾಹ್ಮಣೇ ದಮಮವ್ಯಗ್ರಂ ಕ್ಷತ್ರಿಯೇ ತೇಜ ಉತ್ತಮಂ।
10003019c ದಾಕ್ಷ್ಯಂ ವೈಶ್ಯೇ ಚ ಶೂದ್ರೇ ಚ ಸರ್ವವರ್ಣಾನುಕೂಲತಾಂ।।
ಬ್ರಾಹ್ಮಣನಿಗೆ ಅವ್ಯಗ್ರ ದಮವನ್ನೂ, ಕ್ಷತ್ರಿಯನಿಗೆ ಉತ್ತಮ ತೇಜಸ್ಸನ್ನೂ, ವೈಶ್ಯನಿಗೆ ದಕ್ಷತೆಯನ್ನೂ ಮತ್ತು ಶೂದ್ರನಿಗೆ ಸರ್ವವರ್ಣದವರಿಗೆ ಅನುಕೂಲವಾಗಿರುವಂಥಹ ಗುಣಗಳನ್ನಿತ್ತನು.
10003020a ಅದಾಂತೋ ಬ್ರಾಹ್ಮಣೋಽಸಾಧುರ್ನಿಸ್ತೇಜಾಃ ಕ್ಷತ್ರಿಯೋಽಧಮಃ।
10003020c ಅದಕ್ಷೋ ನಿಂದ್ಯತೇ ವೈಶ್ಯಃ ಶೂದ್ರಶ್ಚ ಪ್ರತಿಕೂಲವಾನ್।।
ನಿಯಂತ್ರಣದಲ್ಲಿರದ ಬ್ರಾಹ್ಮಣನು ಒಳ್ಳೆಯವನಲ್ಲ. ತೇಜಸ್ಸಿಲ್ಲದ ಕ್ಷತ್ರಿಯನು ಅಧಮನು. ದಕ್ಷನಲ್ಲದ ವೈಶ್ಯ ಮತ್ತು ಪ್ರತಿಕೂಲನಾದ ಶೂದ್ರ ಇವರು ನಿಂದನೀಯರು.
10003021a ಸೋಽಸ್ಮಿ ಜಾತಃ ಕುಲೇ ಶ್ರೇಷ್ಠೇ ಬ್ರಾಹ್ಮಣಾನಾಂ ಸುಪೂಜಿತೇ।
10003021c ಮಂದಭಾಗ್ಯತಯಾಸ್ಮ್ಯೇತಂ ಕ್ಷತ್ರಧರ್ಮಮನು ಷ್ಠಿತಃ।।
ನಾನು ಸುಪೂಜಿತ ಶೇಷ್ಠ ಬ್ರಾಹ್ಮಣರ ಕುಲದಲ್ಲಿ ಹುಟ್ಟಿದೆನು. ಆದರೆ ಮಂದಭಾಗ್ಯವು ನನ್ನನ್ನು ಕ್ಷತ್ರಧರ್ಮವನ್ನು ಅನುಸರಿಸುವಂತೆ ಮಾಡಿತು.
10003022a ಕ್ಷತ್ರಧರ್ಮಂ ವಿದಿತ್ವಾಹಂ ಯದಿ ಬ್ರಾಹ್ಮಣ್ಯಸಂಶ್ರಿತಂ।
10003022c ಪ್ರಕುರ್ಯಾಂ ಸುಮಹತ್ಕರ್ಮ ನ ಮೇ ತತ್ಸಾಧು ಸಂಮತಂ।।
ಕ್ಷತ್ರಧರ್ಮವನ್ನು ಚೆನ್ನಾಗಿ ತಿಳಿದುಕೊಂಡಿರುವ ನಾನು ಒಂದು ವೇಳೆ ಬ್ರಾಹ್ಮಣ್ಯಧರ್ಮವನ್ನು ಅನುಸರಿಸಿ ಅತ್ಯಂತ ಮಹತ್ತರ ಕಾರ್ಯವನ್ನು ಮಾಡಿದರೂ ಅದು ಸತ್ಪುರುಷರ ಮಾನ್ಯತೆಯನ್ನು ಪಡೆಯುವುದಿಲ್ಲ.
10003023a ಧಾರಯಿತ್ವಾ ಧನುರ್ದಿವ್ಯಂ ದಿವ್ಯಾನ್ಯಸ್ತ್ರಾಣಿ ಚಾಹವೇ।
10003023c ಪಿತರಂ ನಿಹತಂ ದೃಷ್ಟ್ವಾ ಕಿಂ ನು ವಕ್ಷ್ಯಾಮಿ ಸಂಸದಿ।।
ಯುದ್ಧದಲ್ಲಿ ದಿವ್ಯ ಧನುಸ್ಸನ್ನೂ ದಿವ್ಯ ಅಸ್ತ್ರಗಳನ್ನೂ ಧರಿಸಿದ ಮತ್ತು ತಂದೆಯ ಕೊಲೆಯನ್ನು ಪ್ರತ್ಯಕ್ಷ ಕಂಡ ನಾನು, ಈಗ ಹೇಗೆ ತಾನೇ ಯಾಗಗಳಲ್ಲಿ ಮಂತ್ರಗಳನ್ನು ಹೇಳಿಕೊಂಡಿರಲಿ?4
10003024a ಸೋಽಹಮದ್ಯ ಯಥಾಕಾಮಂ ಕ್ಷತ್ರಧರ್ಮಮುಪಾಸ್ಯ ತಂ।
10003024c ಗಂತಾಸ್ಮಿ ಪದವೀಂ ರಾಜ್ಞಃ ಪಿತುಶ್ಚಾಪಿ ಮಹಾದ್ಯುತೇಃ।।
ಆದುದರಿಂದ ಇಂದು ನನಗಿಷ್ಟವಾದ ಕ್ಷತ್ರಧರ್ಮವನ್ನು ಗೌರವಿಸಿ ರಾಜ ದುರ್ಯೋಧನನ ಮತ್ತು ಮಹಾದ್ಯುತಿ ತಂದೆಯ ಹೆಜ್ಜೆಗಳಲ್ಲಿ ನಡೆಯುತ್ತೇನೆ.
10003025a ಅದ್ಯ ಸ್ವಪ್ಸ್ಯಂತಿ ಪಾಂಚಾಲಾ ವಿಶ್ವಸ್ತಾ ಜಿತಕಾಶಿನಃ।
10003025c ವಿಮುಕ್ತಯುಗ್ಯಕವಚಾ ಹರ್ಷೇಣ ಚ ಸಮನ್ವಿತಾಃ।
10003025e ವಯಂ ಜಿತಾ ಮತಾಶ್ಚೈಷಾಂ ಶ್ರಾಂತಾ ವ್ಯಾಯಮನೇನ ಚ।।
ವಿಜಯದಿಂದ ಉಬ್ಬಿರುವ ಪಾಂಚಾಲರು ಇಂದು ನಮ್ಮನ್ನು ಗೆದ್ದೆವೆಂದು ತಿಳಿದು ಹರ್ಷಸಮನ್ವಿತರಾಗಿ ಮತ್ತು ಹೋರಾಟದಿಂದ ಬಳಲಿ ಕುದುರೆಗಳನ್ನೂ ಕವಚಗಳನ್ನೂ ಕಳಚಿ ಆತಂಕದ ಭಯವೇನೂ ಇಲ್ಲದೇ ನಿದ್ರಿಸುತ್ತಿದ್ದಾರೆ.
10003026a ತೇಷಾಂ ನಿಶಿ ಪ್ರಸುಪ್ತಾನಾಂ ಸ್ವಸ್ಥಾನಾಂ ಶಿಬಿರೇ ಸ್ವಕೇ।
10003026c ಅವಸ್ಕಂದಂ ಕರಿಷ್ಯಾಮಿ ಶಿಬಿರಸ್ಯಾದ್ಯ ದುಷ್ಕರಂ।।
ರಾತ್ರಿಯಲ್ಲಿ ತಮ್ಮ ಶಿಬಿರಗಳಲ್ಲಿ ತಮ್ಮವರೊಂದಿಗೆ ಮಲಗಿರುವ ಅವರ ಶಿಬಿರಗಳ ಮೇಲೆ ಇಂದು ದುಷ್ಕರ ಮುತ್ತಿಗೆಯನ್ನು ಹಾಕಿ ಅವರನ್ನು ಸಂಹರಿಸುತ್ತೇನೆ.
10003027a ತಾನವಸ್ಕಂದ್ಯ ಶಿಬಿರೇ ಪ್ರೇತಭೂತಾನ್ವಿಚೇತಸಃ।
10003027c ಸೂದಯಿಷ್ಯಾಮಿ ವಿಕ್ರಮ್ಯ ಮಘವಾನಿವ ದಾನವಾನ್।।
ಎಚ್ಚರವಿಲ್ಲದೆ ಪ್ರೇತಗಳಂತೆ ಮಲಗಿರುವ ಅವರನ್ನು ವಿಕ್ರಮದಿಂದ ಮಘವಾನ್ ಇಂದ್ರನು ದಾನವರನ್ನು ಹೇಗೋ ಹಾಗೆ ಸಂಹರಿಸುತ್ತೇನೆ.
10003028a ಅದ್ಯ ತಾನ್ಸಹಿತಾನ್ಸರ್ವಾನ್ಧೃಷ್ಟದ್ಯುಮ್ನಪುರೋಗಮಾನ್।
10003028c ಸೂದಯಿಷ್ಯಾಮಿ ವಿಕ್ರಮ್ಯ ಕಕ್ಷಂ ದೀಪ್ತ ಇವಾನಲಃ।
10003028e ನಿಹತ್ಯ ಚೈವ ಪಾಂಚಾಲಾನ್ ಶಾಂತಿಂ ಲಬ್ಧಾಸ್ಮಿ ಸತ್ತಮ।।
ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ ಅವರೆಲ್ಲರನ್ನೂ ಒಟ್ಟಿಗೇ ಇಂದು ವಿಕ್ರಮದಿಂದ ಒಣಹುಲ್ಲಿನ ಮೆದೆಗಳನ್ನು ಬೆಂಕಿಯು ಭಸ್ಮಮಾಡುವಂತೆ ಸಂಹರಿಸುತ್ತೇನೆ. ಸತ್ತಮ! ಪಾಂಚಾಲರನ್ನು ಸಂಹರಿಸಿದ ನಂತರವೇ ನಾನು ಮನಃಶಾಂತಿಯನ್ನು ಪಡೆಯುತ್ತೇನೆ.
10003029a ಪಾಂಚಾಲೇಷು ಚರಿಷ್ಯಾಮಿ ಸೂದಯನ್ನದ್ಯ ಸಂಯುಗೇ।
10003029c ಪಿನಾಕಪಾಣಿಃ ಸಂಕ್ರುದ್ಧಃ ಸ್ವಯಂ ರುದ್ರಃ ಪಶುಷ್ವಿವ।।
ಸಂಕ್ರುದ್ಧ ಸ್ವಯಂ ಪಿನಾಕಪಾಣಿ ರುದ್ರನು ಪ್ರಾಣಿಗಳ ಮಧ್ಯೆ ಸಂಚರಿಸುವಂತೆ ಇಂದು ನಾನು ರಣದಲ್ಲಿ ಪಾಂಚಾಲರನ್ನು ಸಂಹರಿಸುತ್ತಾ ಸಂಚರಿಸುತ್ತೇನೆ.
10003030a ಅದ್ಯಾಹಂ ಸರ್ವಪಾಂಚಾಲಾನ್ನಿಹತ್ಯ ಚ ನಿಕೃತ್ಯ ಚ।
10003030c ಅರ್ದಯಿಷ್ಯಾಮಿ ಸಂಕ್ರುದ್ಧೋ ರಣೇ ಪಾಂಡುಸುತಾಂಸ್ತಥಾ।।
ಇಂದು ಸಂಕ್ರುದ್ಧನಾಗಿ ಪಾಂಚಾಲರೆಲ್ಲರನ್ನು ಕತ್ತರಿಸಿ ಕೊಂದು ರಣದಲ್ಲಿ ಪಾಂಡುಸುತರನ್ನು ಕಾಡುತ್ತೇನೆ.
10003031a ಅದ್ಯಾಹಂ ಸರ್ವಪಾಂಚಾಲೈಃ ಕೃತ್ವಾ ಭೂಮಿಂ ಶರೀರಿಣೀಂ।
10003031c ಪ್ರಹೃತ್ಯೈಕೈಕಶಸ್ತೇಭ್ಯೋ ಭವಿಷ್ಯಾಮ್ಯನೃಣಃ ಪಿತುಃ।।
ಇಂದು ಅವರಲ್ಲಿ ಒಬ್ಬೊಬ್ಬರನ್ನೂ ಸಂಹರಿಸಿ, ಭೂಮಿಯು ಪಾಂಚಾಲರೆಲ್ಲರ ಮೃತಶರೀರಗಳನ್ನು ಹೊರುವಂತೆ ಮಾಡಿ ನನ್ನ ತಂದೆಯ ಋಣವನ್ನು ತೀರಿಸಿಕೊಳ್ಳುತ್ತೇನೆ.
10003032a ದುರ್ಯೋಧನಸ್ಯ ಕರ್ಣಸ್ಯ ಭೀಷ್ಮಸೈಂಧವಯೋರಪಿ।
10003032c ಗಮಯಿಷ್ಯಾಮಿ ಪಾಂಚಾಲಾನ್ಪದವೀಮದ್ಯ ದುರ್ಗಮಾಂ।।
ದುರ್ಯೋಧನ, ಕರ್ಣ, ಭೀಷ್ಮ ಮತ್ತು ಸೈಂಧವರು ಹೋದ ದುರ್ಗಮ ಮಾರ್ಗದಲ್ಲಿ ಇಂದು ಪಾಂಚಾಲರನ್ನು ಕೂಡ ಕಳುಹಿಸುತ್ತೇನೆ.
10003033a ಅದ್ಯ ಪಾಂಚಾಲರಾಜಸ್ಯ ಧೃಷ್ಟದ್ಯುಮ್ನಸ್ಯ ವೈ ನಿಶಿ।
10003033c ವಿರಾತ್ರೇ ಪ್ರಮಥಿಷ್ಯಾಮಿ ಪಶೋರಿವ ಶಿರೋ ಬಲಾತ್।।
ಇಂದಿನ ರಾತ್ರಿಯು ಕಳೆಯುವುದರಲ್ಲಿ ಕತ್ತಲೆಯಲ್ಲಿ ನಾನು ಪಾಂಚಾಲರಾಜ ಧೃಷ್ಟದ್ಯುಮ್ನನ ಶಿರವನ್ನು ಬಲವನ್ನುಪಯೋಗಿಸಿ ಪಶುವೊಂದರ ಶಿರದಂತೆ ಅರೆಯುತ್ತೇನೆ.
10003034a ಅದ್ಯ ಪಾಂಚಾಲಪಾಂಡೂನಾಂ ಶಯಿತಾನಾತ್ಮಜಾನ್ನಿಶಿ।
10003034c ಖಡ್ಗೇನ ನಿಶಿತೇನಾಜೌ ಪ್ರಮಥಿಷ್ಯಾಮಿ ಗೌತಮ।।
ಗೌತಮ! ಇಂದಿನ ರಾತ್ರಿ ಮಲಗಿರುವ ಪಾಂಚಾಲ-ಪಾಂಡವರನ್ನು ನಾನು ಎಳೆದ ನಿಶಿತ ಖಡ್ಗದಿಂದ ತುಂಡರಿಸುತ್ತೇನೆ.
10003035a ಅದ್ಯ ಪಾಂಚಾಲಸೇನಾಂ ತಾಂ ನಿಹತ್ಯ ನಿಶಿ ಸೌಪ್ತಿಕೇ।
10003035c ಕೃತಕೃತ್ಯಃ ಸುಖೀ ಚೈವ ಭವಿಷ್ಯಾಮಿ ಮಹಾಮತೇ।।
ಮಹಾಮತೇ! ಇಂದಿನ ರಾತ್ರಿ ಮಲಗಿರುವ ಆ ಪಾಂಚಾಲಸೇನೆಯನ್ನು ಸಂಹರಿಸಿ ನಾನು ಕೃತಕೃತ್ಯನೂ ಸುಖಿಯೂ ಆಗುತ್ತೇನೆ!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಮಂತ್ರಣಾಯಾಂ ತೃತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಮಂತ್ರಣ ಎನ್ನುವ ಮೂರನೇ ಅಧ್ಯಾಯವು.