ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸೌಪ್ತಿಕ ಪರ್ವ
ಸೌಪ್ತಿಕ ಪರ್ವ
ಅಧ್ಯಾಯ 1
ಸಾರ
ಸಂಜಯನಲ್ಲಿ ಧೃತರಾಷ್ಟ್ರನ ಪ್ರಶ್ನೆ (1-17). ಗಹನ ವನಕ್ಕೆ ಪಲಾಯನ ಮಾಡಿ ರಾತ್ರಿ ವಿಶ್ರಮಿಸಿಕೊಳ್ಳುತ್ತಿದ್ದಾಗ ಅಶ್ವತ್ಥಾಮನು ಹತ್ತಿರದಲ್ಲಿಯೇ ಆಲದ ಮರದ ಮೇಲೆ ಮಲಗಿದ್ದ ಸಹಸ್ರಾರು ಕಾಗೆಗಳನ್ನು ಗೂಬೆಯೊಂದು ಆಕ್ರಮಣಿಸಿ ಕೊಂದುದನ್ನು ನೋಡಿದುದು (18-43). ಆ ಗೂಬೆಯಂತೆ ತಾನೂ ಪ್ರತೀಕಾರವನ್ನೆಸಗಬೇಕು ಎಂದು ಅಶ್ವತ್ಥಾಮನು ತನ್ನಲ್ಲಿಯೇ ಯೋಚಿಸಿದುದು (44-53). ಅಶ್ವತ್ಥಾಮನು ತಾನು ಮಾಡಿದ ನಿಶ್ಚಯವನ್ನು ಮಲಗಿದ್ದ ಕೃಪ-ಕೃತವರ್ಮರನ್ನು ಎಬ್ಬಿಸಿ ತಿಳಿಸಿ, ಮುಂದೇನು ಮಾಡಬೇಕೆಂದು ಅವರ ಸಲಹೆಯನ್ನು ಕೇಳಿದುದು (54-66).
10001001 ಸಂಜಯ ಉವಾಚ।
10001001a ತತಸ್ತೇ ಸಹಿತಾ ವೀರಾಃ ಪ್ರಯಾತಾ ದಕ್ಷಿಣಾಮುಖಾಃ।
10001001c ಉಪಾಸ್ತಮಯವೇಲಾಯಾಂ ಶಿಬಿರಾಭ್ಯಾಶಮಾಗತಾಃ।।
ಸಂಜಯನು ಹೇಳಿದನು: “ಅನಂತರ ಆ ವೀರರು ಒಟ್ಟಾಗಿ ದಕ್ಷಿಣಾಭಿಮುಖವಾಗಿ ಪ್ರಯಾಣಿಸುತ್ತಾ ಸೂರ್ಯಾಸ್ತದ ವೇಳೆಯಲ್ಲಿ ಶಿಬಿರಗಳ ಬಳಿ ಆಗಮಿಸಿದರು.
10001002a ವಿಮುಚ್ಯ ವಾಹಾಂಸ್ತ್ವರಿತಾ ಭೀತಾಃ ಸಮಭವಂಸ್ತದಾ।
10001002c ಗಹನಂ ದೇಶಮಾಸಾದ್ಯ ಪ್ರಚ್ಚನ್ನಾ ನ್ಯವಿಶಂತ ತೇ।।
ಭೀತರಾದ ಅವರು ಗಹನವನಪ್ರದೇಶವನ್ನು ಸೇರಿ ತ್ವರೆಮಾಡಿ ಕುದುರೆಗಳನ್ನು ಬಿಚ್ಚಿ ಯಾರಿಗೂ ಕಾಣದಂತೆ ಒಂದೆಡೆ ಕುಳಿತುಕೊಂಡರು.
10001003a ಸೇನಾನಿವೇಶಮಭಿತೋ ನಾತಿದೂರಮವಸ್ಥಿತಾಃ।
10001003c ನಿಕೃತ್ತಾ ನಿಶಿತೈಃ ಶಸ್ತ್ರೈಃ ಸಮಂತಾತ್ ಕ್ಷತವಿಕ್ಷತಾಃ।।
ಸೇನಾಡೇರೆಗಳ ಅನತಿದೂರದಲ್ಲಿಯೇ ಕುಳಿತುಕೊಂಡಿದ್ದ ಅವರು ನಿಶಿತ ಶಸ್ತ್ರಗಳಿಂದ ಪ್ರಹೃತರಾಗಿ ಶರೀರಾದ್ಯಂತ ಕ್ಷತವಿಕ್ಷತರಾಗಿದ್ದರು.
10001004a ದೀರ್ಘಮುಷ್ಣಂ ಚ ನಿಃಶ್ವಸ್ಯ ಪಾಂಡವಾನನ್ವಚಿಂತಯನ್।
10001004c ಶ್ರುತ್ವಾ ಚ ನಿನದಂ ಘೋರಂ ಪಾಂಡವಾನಾಂ ಜಯೈಷಿಣಾಂ।।
ಜಯೋಲ್ಲಾಸಿತ ಪಾಂಡವರ ಘೋರ ನಿನಾದವನ್ನು ಕೇಳಿ ಪಾಂಡವರನ್ನೇ ಬಾರಿ ಬಾರಿಗೂ ಚಿಂತಿಸುತ್ತಾ ಸುದೀರ್ಘ ಬಿಸಿಬಿಸಿ ನಿಟ್ಟುಸಿರನ್ನು ಬಿಡುತ್ತಿದ್ದರು.
10001005a ಅನುಸಾರಭಯಾದ್ಭೀತಾಃ ಪ್ರಾಙ್ಮುಖಾಃ ಪ್ರಾದ್ರವನ್ಪುನಃ।
10001005c ತೇ ಮುಹೂರ್ತಂ ತತೋ ಗತ್ವಾ ಶ್ರಾಂತವಾಹಾಃ ಪಿಪಾಸಿತಾಃ।।
ಅವರೇನಾದರೂ ತಮ್ಮನ್ನು ಹಿಂಬಾಲಿಸಿ ಬರಬಹುದೆಂಬ ಭಯದಿಂದ ಪುನಃ ಪೂರ್ವಾಭಿಮುಖವಾಗಿ ಓಡಿದರು. ಮುಹೂರ್ತಕಾಲ ಹೋಗಲು ಕುದುರೆಗಳು ಬಳಲಿದವು ಮತ್ತು ಬಾಯಾರಿದವು.
10001006a ನಾಮೃಷ್ಯಂತ ಮಹೇಷ್ವಾಸಾಃ ಕ್ರೋಧಾಮರ್ಷವಶಂ ಗತಾಃ।
10001006c ರಾಜ್ಞೋ ವಧೇನ ಸಂತಪ್ತಾ ಮುಹೂರ್ತಂ ಸಮವಸ್ಥಿತಾಃ।।
ರಾಜನ ವಧೆಯಿಂದುಂಟಾದ ಕೋಪವನ್ನು ಸಹಿಸಿಕೊಳ್ಳಲಾಗದೇ ಆ ಮಹೇಷ್ವಾಸರು ಸಂತಪ್ತರಾಗಿ ಮುಹೂರ್ತಕಾಲ ಸುಮ್ಮನೇ ಕುಳಿತುಕೊಂಡರು.”
10001007 ಧೃತರಾಷ್ಟ್ರ ಉವಾಚ।
10001007a ಅಶ್ರದ್ಧೇಯಮಿದಂ ಕರ್ಮ ಕೃತಂ ಭೀಮೇನ ಸಂಜಯ।
10001007c ಯತ್ಸ ನಾಗಾಯುತಪ್ರಾಣಃ ಪುತ್ರೋ ಮಮ ನಿಪಾತಿತಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಭೀಮನು ಹತ್ತು ಸಾವಿರ ಆನೆಗಳ ಬಲವನ್ನು ಹೊಂದಿದ್ದ ನನ್ನ ಮಗನನನ್ನು ಸಂಹರಿಸುವ ಕಾರ್ಯವನ್ನು ಮಾಡಿದನು ಎನ್ನುವುದನ್ನು ನಂಬಲಿಕ್ಕೇ ಆಗುತ್ತಿಲ್ಲ!
10001008a ಅವಧ್ಯಃ ಸರ್ವಭೂತಾನಾಂ ವಜ್ರಸಂಹನನೋ ಯುವಾ।
10001008c ಪಾಂಡವೈಃ ಸಮರೇ ಪುತ್ರೋ ನಿಹತೋ ಮಮ ಸಂಜಯ।।
ಸರ್ವಭೂತಗಳಿಗೂ ಅವಧ್ಯನೆನಿಸಿಕೊಂಡಿದ್ದ, ವಜ್ರಸಂಹನನಾದ ನನ್ನ ಯುವ ಮಗನು ಸಮರದಲ್ಲಿ ಪಾಂಡವರಿಂದ ಹತನಾದನು ಸಂಜಯ!
10001009a ನ ದಿಷ್ಟಮಭ್ಯತಿಕ್ರಾಂತುಂ ಶಕ್ಯಂ ಗಾವಲ್ಗಣೇ ನರೈಃ।
10001009c ಯತ್ಸಮೇತ್ಯ ರಣೇ ಪಾರ್ಥೈಃ ಪುತ್ರೋ ಮಮ ನಿಪಾತಿತಃ।।
ಗಾವಲ್ಗಣೇ! ರಣದಲ್ಲಿ ಪಾರ್ಥರನ್ನು ಎದುರಿಸಿ ನನ್ನ ಮಗನು ಕೆಳಗುರುಳಿದನೆಂದರೆ ನರರಿಗೆ ದೈವವನ್ನು ಮೀರಿ ನಡೆಯಲು ಶಕ್ಯವಿಲ್ಲವೆಂದಾಯಿತು.
10001010a ಅದ್ರಿಸಾರಮಯಂ ನೂನಂ ಹೃದಯಂ ಮಮ ಸಂಜಯ।
10001010c ಹತಂ ಪುತ್ರಶತಂ ಶ್ರುತ್ವಾ ಯನ್ನ ದೀರ್ಣಂ ಸಹಸ್ರಧಾ।।
ಸಂಜಯ! ನೂರು ಪುತ್ರರೂ ಹತರಾದರೆನ್ನುವುದನ್ನು ಕೇಳಿಯೂ ನನ್ನ ಹೃದಯವು ಸಹಸ್ರ ಚೂರುಗಳಾಗಿ ಒಡೆದು ಹೋಗಿಲ್ಲವೆಂದರೆ ನನ್ನ ಈ ಹೃದಯವು ನಿಜವಾಗಿಯೂ ಉಕ್ಕಿನಿಂದ ಮಾಡಿದ್ದಿರಬಹುದು!
10001011a ಕಥಂ ಹಿ ವೃದ್ಧಮಿಥುನಂ ಹತಪುತ್ರಂ ಭವಿಷ್ಯತಿ।
10001011c ನ ಹ್ಯಹಂ ಪಾಂಡವೇಯಸ್ಯ ವಿಷಯೇ ವಸ್ತುಮುತ್ಸಹೇ।।
ಪುತ್ರರು ಹತರಾದ ಈ ವೃದ್ಧದಂಪತಿಗಳು ಹೇಗೆ ಜೀವಿಸಿರುವರು? ಪಾಂಡವೇಯನ ದೇಶದಲ್ಲಿ ಇರಲು ನನಗೆ ಸ್ವಲ್ಪವೂ ಇಷ್ಟವಿಲ್ಲ!
10001012a ಕಥಂ ರಾಜ್ಞಃ ಪಿತಾ ಭೂತ್ವಾ ಸ್ವಯಂ ರಾಜಾ ಚ ಸಂಜಯ।
10001012c ಪ್ರೇಷ್ಯಭೂತಃ ಪ್ರವರ್ತೇಯಂ ಪಾಂಡವೇಯಸ್ಯ ಶಾಸನಾತ್।।
ಸಂಜಯ! ರಾಜನ ಪಿತನಾಗಿದ್ದವನು ಮತ್ತು ಸ್ವಯಂ ರಾಜನಾಗಿದ್ದವನು ಈಗ ಪಾಂಡವೇಯನ ಶಾಸನಕ್ಕೊಳಪಟ್ಟು ಹೇಗೆ ತಾನೇ ಸೇವಕನಂತೆ ಇರಬಹುದು?
10001013a ಆಜ್ಞಾಪ್ಯ ಪೃಥಿವೀಂ ಸರ್ವಾಂ ಸ್ಥಿತ್ವಾ ಮೂರ್ಧ್ನಿ ಚ ಸಂಜಯ।
10001013c ಕಥಮದ್ಯ ಭವಿಷ್ಯಾಮಿ ಪ್ರೇಷ್ಯಭೂತೋ ದುರಂತಕೃತ್।।
ಸಂಜಯ! ಪೃಥ್ವಿಯೆಲ್ಲಕ್ಕೂ ಆಜ್ಞಾದಾಯಕನಾಗಿದ್ದೆನು ಮತ್ತು ಎಲ್ಲ ರಾಜರ ತಲೆಗಳನ್ನೂ ಮೆಟ್ಟಿನಿಂತಿದ್ದೆನು. ಇಂದು ಈ ದುರಂತಕ್ಕೆ ಕಾರಣನಾದ ನಾನು ಹೇಗೆ ಸೇವಕನಾಗಿರಬಲ್ಲೆ?
10001014a ಕಥಂ ಭೀಮಸ್ಯ ವಾಕ್ಯಾನಿ ಶ್ರೋತುಂ ಶಕ್ಷ್ಯಾಮಿ ಸಂಜಯ।
10001014c ಯೇನ ಪುತ್ರಶತಂ ಪೂರ್ಣಮೇಕೇನ ನಿಹತಂ ಮಮ।।
ಸಂಜಯ! ನನ್ನ ನೂರು ಮಕ್ಕಳನ್ನೂ ಒಬ್ಬನೇ ಸಂಪೂರ್ಣವಾಗಿ ಸಂಹರಿಸಿರುವ ಆ ಭೀಮನ ವಾಕ್ಯಗಳನ್ನು ಕೇಳಲು ನಾನು ಹೇಗೆ ತಾನೇ ಶಕ್ಯ?
10001015a ಕೃತಂ ಸತ್ಯಂ ವಚಸ್ತಸ್ಯ ವಿದುರಸ್ಯ ಮಹಾತ್ಮನಃ।
10001015c ಅಕುರ್ವತಾ ವಚಸ್ತೇನ ಮಮ ಪುತ್ರೇಣ ಸಂಜಯ।।
ಸಂಜಯ! ನನ್ನ ಮಗನು ನಾನು ಹೇಳಿದ ಮಾತನ್ನು ಕೇಳದೇ ಮಹಾತ್ಮ ವಿದುರನು ಹೇಳಿದ ಮಾತನ್ನು ಸತ್ಯವನ್ನಾಗಿಸಿದನು!
10001016a ಅಧರ್ಮೇಣ ಹತೇ ತಾತ ಪುತ್ರೇ ದುರ್ಯೋಧನೇ ಮಮ।
10001016c ಕೃತವರ್ಮಾ ಕೃಪೋ ದ್ರೌಣಿಃ ಕಿಮಕುರ್ವತ ಸಂಜಯ।।
ಸಂಜಯ! ಅಧರ್ಮದಿಂದ ನನ್ನ ಮಗ ದುರ್ಯೋಧನನು ಹತನಾಗಲು ಕೃತವರ್ಮ, ಕೃಪ ಮತ್ತು ದ್ರೌಣಿಯರು ಏನು ಮಾಡಿದರು?”
10001017 ಸಂಜಯ ಉವಾಚ।
10001017a ಗತ್ವಾ ತು ತಾವಕಾ ರಾಜನ್ನಾತಿದೂರಮವಸ್ಥಿತಾಃ।
10001017c ಅಪಶ್ಯಂತ ವನಂ ಘೋರಂ ನಾನಾದ್ರುಮಲತಾಕುಲಂ।।
ಸಂಜಯನು ಹೇಳಿದನು: “ರಾಜನ್! ನಿನ್ನವರು ಕುಳಿತಿದ್ದ ಅನತಿ ದೂರದಲ್ಲಿ ನಾನಾ ವೃಕ್ಷ-ಲತೆಗಳಿಂದ ಕೂಡಿದ್ದ ಘೋರವನವೊಂದನ್ನು ನೋಡಿದರು.
10001018a ತೇ ಮುಹೂರ್ತಂ ತು ವಿಶ್ರಮ್ಯ ಲಬ್ಧತೋಯೈರ್ಹಯೋತ್ತಮೈಃ।
10001018c ಸೂರ್ಯಾಸ್ತಮಯವೇಲಾಯಾಮಾಸೇದುಃ ಸುಮಹದ್ವನಂ।।
ಮುಹೂರ್ತಕಾಲ ವಿಶ್ರಮಿಸಿದ ಅವರು ಉತ್ತಮ ಕುದುರೆಗಳಿಗೆ ನೀರುಕುಡಿಸಿ ಸೂರ್ಯಾಸ್ತದ ಸಮಯದಲ್ಲಿ ಆ ಮಹಾವನವನ್ನು ಪ್ರವೇಶಿಸಿದರು.
10001019a ನಾನಾಮೃಗಗಣೈರ್ಜುಷ್ಟಂ ನಾನಾಪಕ್ಷಿಸಮಾಕುಲಂ।
10001019c ನಾನಾದ್ರುಮಲತಾಚ್ಚನ್ನಂ ನಾನಾವ್ಯಾಲನಿಷೇವಿತಂ।।
10001020a ನಾನಾತೋಯಸಮಾಕೀರ್ಣಂ ತಡಾಗೈರುಪಶೋಭಿತಂ।
10001020c ಪದ್ಮಿನೀಶತಸಂಚನ್ನಂ ನೀಲೋತ್ಪಲಸಮಾಯುತಂ।।
ಆ ಅರಣ್ಯದಲ್ಲಿ ನಾನಾ ಮೃಗಗಣಗಳು ವಾಸಿಸುತ್ತಿದ್ದವು. ನಾನಾ ಪಕ್ಷಿಸಮಾಕುಲಗಳಿದ್ದವು. ನಾನಾ ದ್ರುಮಲತೆಗಳಿಂದ ಮುಚ್ಚಿಕೊಂಡಿತ್ತು. ನಾನಾ ವಿಷಜಂತುಗಳಿಂದ ತುಂಬಿತ್ತು. ನೂರಾರು ಕಮಲಪುಷ್ಪಗಳಿಂದ ಮತ್ತು ನೀಲೋತ್ಪಲಗಳಿಂದ ಮುಚ್ಚಿಹೋಗಿದ್ದ ನಾನಾವಿಧದ ಸರೋವರ-ಕೊಳಗಳಿಂದ ಶೋಭಿಸುತ್ತಿತ್ತು.
10001021a ಪ್ರವಿಶ್ಯ ತದ್ವನಂ ಘೋರಂ ವೀಕ್ಷಮಾಣಾಃ ಸಮಂತತಃ।
10001021c ಶಾಖಾಸಹಸ್ರಸಂಚನ್ನಂ ನ್ಯಗ್ರೋಧಂ ದದೃಶುಸ್ತತಃ।।
ಆ ಘೋರ ವನವನ್ನು ಪ್ರವೇಶಿಸಿ ಸುತ್ತಲೂ ನೋಡುತ್ತಿದ್ದ ಅವರು ಸಹಸ್ರ ರೆಂಬೆಗಳಿಂದ ವಿಶಾಲವಾಗಿ ಹರಡಿದ್ದ ಆಲದ ಮರವನ್ನು ಕಂಡರು.
10001022a ಉಪೇತ್ಯ ತು ತದಾ ರಾಜನ್ನ್ಯಗ್ರೋಧಂ ತೇ ಮಹಾರಥಾಃ।
10001022c ದದೃಶುರ್ದ್ವಿಪದಾಂ ಶ್ರೇಷ್ಠಾಃ ಶ್ರೇಷ್ಠಂ ತಂ ವೈ ವನಸ್ಪತಿಂ।।
ರಾಜನ್! ಮನುಜರಲ್ಲಿ ಶ್ರೇಷ್ಠ ಆ ಮಹಾರಥರು ಆಲದಮರದ ಬಳಿಹೋಗಿ ಆ ಶ್ರೇಷ್ಠ ವನಸ್ಪತಿಯನ್ನು ನೋಡಿದರು.
10001023a ತೇಽವತೀರ್ಯ ರಥೇಭ್ಯಸ್ತು ವಿಪ್ರಮುಚ್ಯ ಚ ವಾಜಿನಃ।
10001023c ಉಪಸ್ಪೃಶ್ಯ ಯಥಾನ್ಯಾಯಂ ಸಂಧ್ಯಾಮನ್ವಾಸತ ಪ್ರಭೋ।।
ಅವರು ರಥಗಳಿಂದ ಕೆಳಗಿಳಿದು ಕುದುರೆಗಳನ್ನು ಬಿಚ್ಚಿದರು. ಪ್ರಭೋ! ಯಥಾನ್ಯಾಯವಾಗಿ ಅವರು ಸ್ನಾನಾಚಮನಾದಿಗಳನ್ನು ಮಾಡಿ ಸಂಧ್ಯಾವಂದನೆಯನ್ನೂ ಪೂರೈಸಿದರು.
10001024a ತತೋಽಸ್ತಂ ಪರ್ವತಶ್ರೇಷ್ಠಮನುಪ್ರಾಪ್ತೇ ದಿವಾಕರೇ।
10001024c ಸರ್ವಸ್ಯ ಜಗತೋ ಧಾತ್ರೀ ಶರ್ವರೀ ಸಮಪದ್ಯತ।।
ಆಗ ದಿವಾಕರನು ಪರ್ವತಶ್ರೇಷ್ಠನನ್ನು ಸೇರಿ ಅಸ್ತನಾಗಲು ಸರ್ವ ಜಗತ್ತಿನ ಧಾತ್ರೀ ಶರ್ವರಿಯು ಆವರಿಸಿದಳು.
10001025a ಗ್ರಹನಕ್ಷತ್ರತಾರಾಭಿಃ ಪ್ರಕೀರ್ಣಾಭಿರಲಂಕೃತಂ।
10001025c ನಭೋಽಂಶುಕಮಿವಾಭಾತಿ ಪ್ರೇಕ್ಷಣೀಯಂ ಸಮಂತತಃ।।
ಗ್ರಹನಕ್ಷತ್ರತಾರೆಗಳಿಂದ ಅಲಂಕೃತವಾಗಿ ಹರಡಿದ್ದ ನಭೆಯು ಅಂಶುಕ1ದಂತೆ ಎಲ್ಲೆಡೆ ಪ್ರೇಕ್ಷಣೀಯವಾಗಿ ಹೊಳೆಯುತ್ತಿತ್ತು.
10001026a ಈಷಚ್ಚಾಪಿ ಪ್ರವಲ್ಗಂತಿ ಯೇ ಸತ್ತ್ವಾ ರಾತ್ರಿಚಾರಿಣಃ।
10001026c ದಿವಾಚರಾಶ್ಚ ಯೇ ಸತ್ತ್ವಾಸ್ತೇ ನಿದ್ರಾವಶಮಾಗತಾಃ।।
ರಾತ್ರಿಯಲ್ಲಿ ಸಂಚರಿಸುವ ಪ್ರಾಣಿಗಳು ಇಚ್ಛಾನುಸಾರವಾಗಿ ಸಂಚರಿಸಿ ಕೂಗತೊಡಗಿದವು. ಹಗಲಲ್ಲಿ ಸಂಚರಿಸುವ ಪ್ರಾಣಿಗಳು ನಿದ್ರಾವಶವಾದವು.
10001027a ರಾತ್ರಿಂಚರಾಣಾಂ ಸತ್ತ್ವಾನಾಂ ನಿನಾದೋಽಭೂತ್ಸುದಾರುಣಃ।
10001027c ಕ್ರವ್ಯಾದಾಶ್ಚ ಪ್ರಮುದಿತಾ ಘೋರಾ ಪ್ರಾಪ್ತಾ ಚ ಶರ್ವರೀ।।
ಕತ್ತಲೆಯು ಕವಿಯುತ್ತಲೇ ರಾತ್ರಿ ಸಂಚರಿಸುವ ಮಾಂಸಾಹಾರಿ ಪ್ರಾಣಿಗಳು ಸಂತೋಷದಿಂದ ಘೋರ ಸುದಾರುಣ ಕೂಗುಗಳನ್ನು ಕೂಗತೊಡಗಿದವು.
10001028a ತಸ್ಮಿನ್ರಾತ್ರಿಮುಖೇ ಘೋರೇ ದುಃಖಶೋಕಸಮನ್ವಿತಾಃ।
10001028c ಕೃತವರ್ಮಾ ಕೃಪೋ ದ್ರೌಣಿರುಪೋಪವಿವಿಶುಃ ಸಮಂ।।
ಆ ಘೋರ ರಾತ್ರಿಯ ಪ್ರಾರಂಭದಲ್ಲಿ ದುಃಖಶೋಕಸಮನ್ವಿತರಾದ ಕೃತವರ್ಮ, ಕೃಪ, ಮತ್ತು ದ್ರೌಣಿಯರು ಒಂದೇ ಸಾಲಿನಲ್ಲಿ ಕುಳಿತುಕೊಂಡರು.
10001029a ತತ್ರೋಪವಿಷ್ಟಾಃ ಶೋಚಂತೋ ನ್ಯಗ್ರೋಧಸ್ಯ ಸಮಂತತಃ।
10001029c ತಮೇವಾರ್ಥಮತಿಕ್ರಾಂತಂ ಕುರುಪಾಂಡವಯೋಃ ಕ್ಷಯಂ।।
ಆಲದ ಮರದ ಸಮೀಪದಲ್ಲಿ ಕುಳಿತಿದ್ದ ಅವರು ಅತಿಕ್ರಮಿಸಲು ಸಾಧ್ಯವಾಗದ ಕುರುಪಾಂಡವರ ಕ್ಷಯದ ಕುರಿತೇ ಮಾತನಾಡಿಕೊಳ್ಳುತ್ತಾ ಶೋಕಿಸುತ್ತಿದ್ದರು.
10001030a ನಿದ್ರಯಾ ಚ ಪರೀತಾಂಗಾ ನಿಷೇದುರ್ಧರಣೀತಲೇ।
10001030c ಶ್ರಮೇಣ ಸುದೃಢಂ ಯುಕ್ತಾ ವಿಕ್ಷತಾ ವಿವಿಧೈಃ ಶರೈಃ।।
ವಿವಿಧ ಶರಗಳಿಂದ ಗಾಢವಾಗಿ ಕ್ಷತವಿಕ್ಷತರಾಗಿದ್ದ ಅವರು ಬಳಲಿದ್ದು ನಿದ್ದೆಯಿಂದ ತೂಕಡಿಸುತ್ತಾ ನೆಲದ ಮೇಲೆಯೇ ಕುಳಿತಿದ್ದರು.
10001031a ತತೋ ನಿದ್ರಾವಶಂ ಪ್ರಾಪ್ತೌ ಕೃಪಭೋಜೌ ಮಹಾರಥೌ।
10001031c ಸುಖೋಚಿತಾವದುಃಖಾರ್ಹೌ ನಿಷಣ್ಣೌ ಧರಣೀತಲೇ।
10001031e ತೌ ತು ಸುಪ್ತೌ ಮಹಾರಾಜ ಶ್ರಮಶೋಕಸಮನ್ವಿತೌ।।
ಮಹಾರಾಜ! ಆಗ ಸುಖೋಚಿತರಾಗಿದ್ದ ಮತ್ತು ದುಃಖಕ್ಕೆ ಅನರ್ಹರಾಗಿದ್ದ ಮಹಾರಥ ಕೃಪ-ಕೃತವರ್ಮರು ನಿದ್ರಾವಶರಾಗಿ ಆಯಾಸ-ಶೋಕಸಮನ್ವಿತರಾಗಿ ನೆಲದ ಮೇಲೆಯೇ ಮಲಗಿಕೊಂಡರು.
10001032a ಕ್ರೋಧಾಮರ್ಷವಶಂ ಪ್ರಾಪ್ತೋ ದ್ರೋಣಪುತ್ರಸ್ತು ಭಾರತ।
10001032c ನೈವ ಸ್ಮ ಸ ಜಗಾಮಾಥ ನಿದ್ರಾಂ ಸರ್ಪ ಇವ ಶ್ವಸನ್।।
ಭಾರತ! ಆದರೆ ಕ್ರೋಧ-ಅಸಹನೆಗಳ ವಶನಾಗಿದ್ದ ದ್ರೋಣಪುತ್ರನಿಗೆ ಮಾತ್ರ ನಿದ್ದೆಯು ಬರಲಿಲ್ಲ. ಅವನು ಸರ್ಪದಂತೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಎಚ್ಚೆತ್ತೇ ಇದ್ದನು.
10001033a ನ ಲೇಭೇ ಸ ತು ನಿದ್ರಾಂ ವೈ ದಹ್ಯಮಾನೋಽತಿಮನ್ಯುನಾ।
10001033c ವೀಕ್ಷಾಂ ಚಕ್ರೇ ಮಹಾಬಾಹುಸ್ತದ್ವನಂ ಘೋರದರ್ಶನಂ।।
ಅತಿಕೋಪದಿಂದ ಸುಡುತ್ತಾ ನಿದ್ರೆಯೇ ಬರದಿದ್ದ ಆ ಮಹಾಬಾಹುವು ಘೋರವಾಗಿ ಕಾಣುತ್ತಿದ್ದ ಆ ವನವನ್ನೇ ವೀಕ್ಷಿಸುತ್ತಿದ್ದನು.
10001034a ವೀಕ್ಷಮಾಣೋ ವನೋದ್ದೇಶಂ ನಾನಾಸತ್ತ್ವೈರ್ನಿಷೇವಿತಂ।
10001034c ಅಪಶ್ಯತ ಮಹಾಬಾಹುರ್ನ್ಯಗ್ರೋಧಂ ವಾಯಸಾಯುತಂ।।
ನಾನಾ ಪ್ರಾಣಿಗಳಿಂದ ಕೂಡಿದ್ದ ಆ ವನಪ್ರದೇಶವನ್ನು ನೋಡುತ್ತಿದ್ದ ಆ ಮಹಾಬಾಹುವು ಆಲದ ಮರದಲ್ಲಿ ವಾಸಿಸುತ್ತಿದ್ದ ಕಾಗೆಗಳ ಗುಂಪನ್ನು ಕಂಡನು.
10001035a ತತ್ರ ಕಾಕಸಹಸ್ರಾಣಿ ತಾಂ ನಿಶಾಂ ಪರ್ಯಣಾಮಯನ್।
10001035c ಸುಖಂ ಸ್ವಪಂತಃ ಕೌರವ್ಯ ಪೃಥಕ್ಪೃಥಗಪಾಶ್ರಯಾಃ।।
ಕೌರವ್ಯ! ಸಹಸ್ರಾರು ಕಾಗೆಗಳು ಆ ಮರದ ಪ್ರತ್ಯೇಕ ಪ್ರತ್ಯೇಕ ರೆಂಬೆಗಳನ್ನು ಆಶ್ರಯಿಸಿ ಸುಖವಾಗಿ ನಿದ್ರೆಮಾಡುತ್ತಾ ರಾತ್ರಿಯನ್ನು ಕಳೆಯುತ್ತಿದ್ದವು.
10001036a ಸುಪ್ತೇಷು ತೇಷು ಕಾಕೇಷು ವಿಸ್ರಬ್ಧೇಷು ಸಮಂತತಃ।
10001036c ಸೋಽಪಶ್ಯತ್ಸಹಸಾಯಾಂತಮುಲೂಕಂ ಘೋರದರ್ಶನಂ।।
10001037a ಮಹಾಸ್ವನಂ ಮಹಾಕಾಯಂ ಹರ್ಯಕ್ಷಂ ಬಭ್ರುಪಿಂಗಲಂ।
10001037c ಸುದೀರ್ಘಘೋಣಾನಖರಂ ಸುಪರ್ಣಮಿವ ವೇಗಿನಂ।।
ಸುತ್ತಲೂ ನಿಃಶಬ್ಧವಾಗಿದ್ದು ಆ ಕಾಗೆಗಳು ಮಲಗಿರಲು ಒಮ್ಮೆಲೇ ಅಲ್ಲಿ ಮಹಾಸ್ವರದ, ಮಹಾಕಾಯದ, ಹಳದೀ ಬಣ್ಣದ ಕಣ್ಣುಳ್ಳ, ಪಿಂಗಲ ಹುಬ್ಬುಗಳುಳ್ಳ, ಸುದೀರ್ಘ ಕೊಕ್ಕು-ಉಗುರುಗಳುಳ್ಳ, ಗರುಡನಂತಹ ವೇಗವುಳ್ಳ ಘೋರ ಗೂಬೆಯೊಂದು ಕಂಡುಬಂದಿತು.
10001038a ಸೋಽಥ ಶಬ್ದಂ ಮೃದುಂ ಕೃತ್ವಾ ಲೀಯಮಾನ ಇವಾಂಡಜಃ।
10001038c ನ್ಯಗ್ರೋಧಸ್ಯ ತತಃ ಶಾಖಾಂ ಪ್ರಾರ್ಥಯಾಮಾಸ ಭಾರತ।।
ಆಗ ಶಬ್ಧವನ್ನು ಮೃದುವಾಗಿಸಿ, ಅಡಗಿಕೊಂಡೇ ಆ ಪಕ್ಷಿಯು ಆಲದಮರದ ರೆಂಬೆಗಳ ಮೇಲೆ ಹಾರಿ ಹುಡುಕತೊಡಗಿತು.
10001039a ಸಂನಿಪತ್ಯ ತು ಶಾಖಾಯಾಂ ನ್ಯಗ್ರೋಧಸ್ಯ ವಿಹಂಗಮಃ।
10001039c ಸುಪ್ತಾಂಜಘಾನ ಸುಬಹೂನ್ವಾಯಸಾನ್ವಾಯಸಾಂತಕಃ।।
ಆಲದಮರದ ರೆಂಬೆಯಿಂದ ರೆಂಬೆಗೆ ಹಾರುತ್ತಾ ಆ ಕಾಗೆಗಳ ಅಂತಕ ಪಕ್ಷಿಯು ಮಲಗಿದ್ದ ಅನೇಕ ಕಾಗೆಗಳನ್ನು ಸಂಹರಿಸಿತು.
10001040a ಕೇಷಾಂ ಚಿದಚ್ಚಿನತ್ಪಕ್ಷಾನ್ ಶಿರಾಂಸಿ ಚ ಚಕರ್ತ ಹ।
10001040c ಚರಣಾಂಶ್ಚೈವ ಕೇಷಾಂ ಚಿದ್ಬಭಂಜು ಚರಣಾಯುಧಃ।।
ಕಾಲುಗಳೇ ಆಯುಧವಾಗಿದ್ದ ಆ ಗೂಬೆಯು ಕೆಲವು ಕಾಗೆಗಳ ರೆಕ್ಕೆಗಳನ್ನು ಕತ್ತರಿಸಿತು. ಕೆಲವು ಕಾಗೆಗಳ ತಲೆಗಳನ್ನು ಕತ್ತರಿಸಿತು. ಕೆಲವು ಕಾಗೆಗಳ ಕಾಲುಗಳನ್ನು ಮುರಿಯಿತು.
10001041a ಕ್ಷಣೇನಾಹನ್ಸ ಬಲವಾನ್ಯೇಽಸ್ಯ ದೃಷ್ಟಿಪಥೇ ಸ್ಥಿತಾಃ।
10001041c ತೇಷಾಂ ಶರೀರಾವಯವೈಃ ಶರೀರೈಶ್ಚ ವಿಶಾಂ ಪತೇ।
10001041e ನ್ಯಗ್ರೋಧಮಂಡಲಂ ಸರ್ವಂ ಸಂಚನ್ನಂ ಸರ್ವತೋಽಭವತ್।।
ವಿಶಾಂಪತೇ! ಕ್ಷಣದಲ್ಲಿಯೇ ಆ ಬಲವಾನ್ ಪಕ್ಷಿಯು ತನ್ನ ದೃಷ್ಟಿ ಪಥದಲ್ಲಿ ಬಂದ ಕಾಗೆಗಳೆಲ್ಲವನ್ನೂ ಕೊಂದುಹಾಕಿತು. ಆ ವಟವೃಕ್ಷದ ಮಡಲವು ಸತ್ತುಹೋದ ಕಾಗೆಗಳಿಂದಲೂ ಮತ್ತು ಅವುಗಳ ಛಿನ್ನ-ಛಿನ್ನ ಅವಯವಗಳಿಂದಲೂ ತುಂಬಿಹೋಯಿತು.
10001042a ತಾಂಸ್ತು ಹತ್ವಾ ತತಃ ಕಾಕಾನ್ಕೌಶಿಕೋ ಮುದಿತೋಽಭವತ್।
10001042c ಪ್ರತಿಕೃತ್ಯ ಯಥಾಕಾಮಂ ಶತ್ರೂಣಾಂ ಶತ್ರುಸೂದನಃ।।
ಶತ್ರುಸೂದನ ಆ ಗೂಬೆಯು ಬೇಕಾದಂತೆ ಶತ್ರುಗಳನ್ನು ಸಂಹರಿಸಿ ಪ್ರತೀಕಾರಮಾಡಿ ಆನಂದಿಸಿತು.
10001043a ತದ್ದೃಷ್ಟ್ವಾ ಸೋಪಧಂ ಕರ್ಮ ಕೌಶಿಕೇನ ಕೃತಂ ನಿಶಿ।
10001043c ತದ್ಭಾವಕೃತಸಂಕಲ್ಪೋ ದ್ರೌಣಿರೇಕೋ ವ್ಯಚಿಂತಯತ್।।
ಗೂಬೆಯು ರಾತ್ರಿಯಲ್ಲಿ ವಂಚನೆಯಿಂದ ಮಾಡಿದ ಆ ಕ್ರೂರ ಕರ್ಮವನ್ನು ನೋಡಿದ ದ್ರೌಣಿಯು ತಾನೂ ಕೂಡ ಹಾಗೆ ಮಾಡಬೇಕೆಂಬ ಸಂಕಲ್ಪದಿಂದ ಒಬ್ಬನೇ ಯೋಚಿಸತೊಡಗಿದನು.
10001044a ಉಪದೇಶಃ ಕೃತೋಽನೇನ ಪಕ್ಷಿಣಾ ಮಮ ಸಂಯುಗೇ।
10001044c ಶತ್ರೂಣಾಂ ಕ್ಷಪಣೇ ಯುಕ್ತಃ ಪ್ರಾಪ್ತಕಾಲಶ್ಚ ಮೇ ಮತಃ।।
“ಯುದ್ಧದಲ್ಲಿ ನಾನು ಏನು ಮಾಡಬೇಕೆನ್ನುವುದನ್ನು ಈ ಪಕ್ಷಿಯೇ ನನಗೆ ಉಪದೇಶಿಸಿದಂತಿದೆ! ಶತ್ರುಗಳ ವಿನಾಶಕಾರ್ಯಕ್ಕೆ ಸಮಯವು ಬಂದೊದಗಿದೆಯೆಂದು ನನಗನ್ನಿಸುತ್ತದೆ.
10001045a ನಾದ್ಯ ಶಕ್ಯಾ ಮಯಾ ಹಂತುಂ ಪಾಂಡವಾ ಜಿತಕಾಶಿನಃ।
10001045c ಬಲವಂತಃ ಕೃತೋತ್ಸಾಹಾ ಲಬ್ಧಲಕ್ಷಾಃ ಪ್ರಹಾರಿಣಃ।
10001045e ರಾಜ್ಞಃ ಸಕಾಶೇ ತೇಷಾಂ ಚ ಪ್ರತಿಜ್ಞಾತೋ ವಧೋ ಮಯಾ।।
ವಿಜಯದ ಉತ್ಸಾಹದಿಂದ ಬಲವಂತರಾಗಿರುವ ಗುರಿಯಿಟ್ಟು ಪ್ರಹರಿಸಬಲ್ಲ ವಿಜಯಶಾಲಿ ಪಾಂಡವರನ್ನು ಸಂಹರಿಸಲು ಇಂದು ನನಗೆ ಶಕ್ಯವಿಲ್ಲ. ಆದರೆ ರಾಜ ದುರ್ಯೋಧನ ಸಮಕ್ಷಮದಲ್ಲಿ ಅವರನ್ನು ವಧಿಸುತ್ತೇನೆಂದು ನಾನು ಪ್ರತಿಜ್ಞೆಗೈದಿದ್ದೇನೆ.
10001046a ಪತಂಗಾಗ್ನಿಸಮಾಂ ವೃತ್ತಿಮಾಸ್ಥಾಯಾತ್ಮವಿನಾಶಿನೀಂ।
10001046c ನ್ಯಾಯತೋ ಯುಧ್ಯಮಾನಸ್ಯ ಪ್ರಾಣತ್ಯಾಗೋ ನ ಸಂಶಯಃ।
10001046e ಚದ್ಮನಾ ತು ಭವೇತ್ಸಿದ್ಧಿಃ ಶತ್ರೂಣಾಂ ಚ ಕ್ಷಯೋ ಮಹಾನ್।।
ಆತ್ಮವಿನಾಶಕಾರಿ ಪತಂಗಾಗ್ನಿಸಮ ವೃತ್ತಿ2ಯನ್ನನುಸರಿಸಿ ಅವರೊಡನೆ ನ್ಯಾಯರೀತಿಯಲ್ಲಿ ಯುದ್ಧಮಾಡಿದರೆ ಪ್ರಾಣತ್ಯಾಗವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವಂಚನೆಯಿಂದಲೂ ಶತ್ರುಗಳ ಮಹಾಕ್ಷಯವು ಸಾಧ್ಯವಾಗುತ್ತದೆ.
10001047a ತತ್ರ ಸಂಶಯಿತಾದರ್ಥಾದ್ಯೋಽರ್ಥೋ ನಿಃಸಂಶಯೋ ಭವೇತ್।
10001047c ತಂ ಜನಾ ಬಹು ಮನ್ಯಂತೇ ಯೇಽರ್ಥಶಾಸ್ತ್ರವಿಶಾರದಾಃ।।
ಅರ್ಥಸಿದ್ಧಿಯ ಸಂಶಯವಿದ್ದಾಗ ನಿಃಸಂಶಯವಾಗಿ ಅರ್ಥಸಿದ್ಧಿಯನ್ನುಂಟು ಮಾಡಬಲ್ಲ ಮಾರ್ಗವನ್ನು ಅನುಸರಿಸಬೇಕೆಂದು ಅರ್ಥಶಾಸ್ತ್ರವಿಶಾರದ ಅನೇಕ ಜನರು ಅಭಿಪ್ರಾಯಪಡುತ್ತಾರೆ.
10001048a ಯಚ್ಚಾಪ್ಯತ್ರ ಭವೇದ್ವಾಚ್ಯಂ ಗರ್ಹಿತಂ ಲೋಕನಿಂದಿತಂ।
10001048c ಕರ್ತವ್ಯಂ ತನ್ಮನುಷ್ಯೇಣ ಕ್ಷತ್ರಧರ್ಮೇಣ ವರ್ತತಾ।।
ಕ್ಷತ್ರಧರ್ಮವನ್ನು ಅನುಸರಿಸಿ ನಡೆದುಕೊಳ್ಳುವ ಮನುಷ್ಯನು ಲೋಕನಿಂದಿತವಾದುದನ್ನು ಅಥವಾ ಲೋಕವು ದೂಷಿತವೆಂದು ಹೇಳುವುದನ್ನು ಕರ್ತವ್ಯವೆಂದು ಪಾಲಿಸಬಹುದು.
10001049a ನಿಂದಿತಾನಿ ಚ ಸರ್ವಾಣಿ ಕುತ್ಸಿತಾನಿ ಪದೇ ಪದೇ।
10001049c ಸೋಪಧಾನಿ ಕೃತಾನ್ಯೇವ ಪಾಂಡವೈರಕೃತಾತ್ಮಭಿಃ।।
ಅಕೃತಾತ್ಮ ಪಾಂಡವರೆಲ್ಲರೂ ಕೂಡ ಪದೇ ಪದೇ ನಿಂದನೀಯ ಕುತ್ಸಿತ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ.
10001050a ಅಸ್ಮಿನ್ನರ್ಥೇ ಪುರಾ ಗೀತೌ ಶ್ರೂಯೇತೇ ಧರ್ಮಚಿಂತಕೈಃ।
10001050c ಶ್ಲೋಕೌ ನ್ಯಾಯಮವೇಕ್ಷದ್ಭಿಸ್ತತ್ತ್ವಾರ್ಥಂ ತತ್ತ್ವದರ್ಶಿಭಿಃ।।
ಇದೇ ವಿಷಯದ ಮೇಲೆ ಹಿಂದೆ ಧರ್ಮಚಿಂತಕ ತತ್ತ್ವದರ್ಶಿಗಳು ನ್ಯಾಯದೃಷ್ಟಿಯ ತತ್ತ್ವಾರ್ಥಗಳನ್ನು ಈ ಎರಡು ಶ್ಲೋಕಗಳ ಗೀತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
10001051a ಪರಿಶ್ರಾಂತೇ ವಿದೀರ್ಣೇ ಚ ಭುಂಜಾನೇ ಚಾಪಿ ಶತ್ರುಭಿಃ।
10001051c ಪ್ರಸ್ಥಾನೇ ಚ ಪ್ರವೇಶೇ ಚ ಪ್ರಹರ್ತವ್ಯಂ ರಿಪೋರ್ಬಲಂ।।
ಶತ್ರುಗಳು ಬಳಲಿರುವಾಗ, ಚದುರಿಹೋಗಿರುವಾಗ, ಊಟಮಾಡುತ್ತಿರುವಾಗ, ಪ್ರಯಾಣಮಾಡುತ್ತಿರುವಾಗ, ಎಲ್ಲಿಯಾದರೂ ಪ್ರವೇಶಿಸುತ್ತಿರುವಾಗ ಶತ್ರುಸೇನೆಯನ್ನು ಸಂಹರಿಸಬಹುದು.
10001052a ನಿದ್ರಾರ್ತಮರ್ಧರಾತ್ರೇ ಚ ತಥಾ ನಷ್ಟಪ್ರಣಾಯಕಂ।
10001052c ಭಿನ್ನಯೋಧಂ ಬಲಂ ಯಚ್ಚ ದ್ವಿಧಾ ಯುಕ್ತಂ ಚ ಯದ್ಭವೇತ್।।
ಅರ್ಥಸಿದ್ಧಿಯನ್ನು ಬಯಸುವ ಕ್ಷತ್ರಿಯನು ಅರ್ಧರಾತ್ರಿಯಲ್ಲಿ ನಿದ್ರಾವಶರಾಗಿರುವ, ಸೇನಾನಾಯಕನನ್ನು ಹೊಂದಿರದ, ಮತ್ತು ಯೋಧರು ಒಟ್ಟಾಗಿರದ ಸೇನೆಯನ್ನು ಸಂಹರಿಸಬೇಕು.”
10001053a ಇತ್ಯೇವಂ ನಿಶ್ಚಯಂ ಚಕ್ರೇ ಸುಪ್ತಾನಾಂ ಯುಧಿ ಮಾರಣೇ।
10001053c ಪಾಂಡೂನಾಂ ಸಹ ಪಾಂಚಾಲೈರ್ದ್ರೋಣಪುತ್ರಃ ಪ್ರತಾಪವಾನ್।।
ಹೀಗೆ ಪ್ರತಾಪವಾನ್ ದ್ರೋಣಪುತ್ರನು ರಣದಲ್ಲಿ ಮಲಗಿರುವ ಪಾಂಡವರನ್ನು ಪಾಂಚಾಲರೊಂದಿಗೆ ಸಂಹರಿಸಲು ನಿಶ್ಚಯಿಸಿದನು.
10001054a ಸ ಕ್ರೂರಾಂ ಮತಿಮಾಸ್ಥಾಯ ವಿನಿಶ್ಚಿತ್ಯ ಮುಹುರ್ಮುಹುಃ।
10001054c ಸುಪ್ತೌ ಪ್ರಾಬೋಧಯತ್ತೌ ತು ಮಾತುಲಂ ಭೋಜಮೇವ ಚ।।
ಆ ಕ್ರೂರ ಬುದ್ಧಿಯನ್ನನುಸರಿಸಿ ಪುನಃ ಪುನಃ ನಿರ್ಧಾರಕ್ಕೆ ಬಂದು ಅವನು ಮಲಗಿದ್ದ ಸೋದರಮಾವನನ್ನೂ ಬೋಜ ಕೃತವರ್ಮನನ್ನೂ ಎಚ್ಚರಿಸಿದನು.
10001055a ನೋತ್ತರಂ ಪ್ರತಿಪೇದೇ ಚ ತತ್ರ ಯುಕ್ತಂ ಹ್ರಿಯಾ ವೃತಃ।
10001055c ಸ ಮುಹೂರ್ತಮಿವ ಧ್ಯಾತ್ವಾ ಬಾಷ್ಪವಿಹ್ವಲಮಬ್ರವೀತ್।।
ನಾಚಿಕೆಗೊಂಡ ಅವರು ಅವನಿಗೆ ಆಗ ಯುಕ್ತವಾದ ಯಾವ ಉತ್ತರವನ್ನೂ ಕೊಡದೇ ಹೋದರು. ಆಗ ಅಶ್ವತ್ಥಾಮನು ಮುಹೂರ್ತಕಾಲ ಯೋಚಿಸಿ ಕಣ್ಣೀರುತುಂಬಿ ವಿಹ್ವಲನಾಗಿ ಹೇಳಿದನು:
10001056a ಹತೋ ದುರ್ಯೋಧನೋ ರಾಜಾ ಏಕವೀರೋ ಮಹಾಬಲಃ।
10001056c ಯಸ್ಯಾರ್ಥೇ ವೈರಮಸ್ಮಾಭಿರಾಸಕ್ತಂ ಪಾಂಡವೈಃ ಸಹ।।
“ಯಾರಿಗಾಗಿ ನಾವು ಪಾಂಡವರೊಂದಿಗೆ ವೈರವನ್ನು ಕಟ್ಟಿಕೊಂಡೆವೋ ಆ ಏಕವೀರ ಮಹಾಬಲ ರಾಜಾ ದುರ್ಯೋಧನನು ಹತನಾದನು.
10001057a ಏಕಾಕೀ ಬಹುಭಿಃ ಕ್ಷುದ್ರೈರಾಹವೇ ಶುದ್ಧವಿಕ್ರಮಃ।
10001057c ಪಾತಿತೋ ಭೀಮಸೇನೇನ ಏಕಾದಶಚಮೂಪತಿಃ।।
ಹನ್ನೊಂದು ಅಕ್ಷೌಹಿಣೀ ಸೇನೆಗೆ ಒಡೆಯನಾಗಿದ್ದ ಆ ಶುದ್ಧವಿಕ್ರಮನು ಯುದ್ಧದಲ್ಲಿ ಅನೇಕ ಕ್ಷುದ್ರರಿಂದ ಸುತ್ತುವರೆಯಲ್ಪಟ್ಟು ಏಕಾಂಗಿಯಾಗಿ ಭೀಮಸೇನನಿಂದ ಕೆಳಗುರುಳಿಸಲ್ಪಟ್ಟನು.
10001058a ವೃಕೋದರೇಣ ಕ್ಷುದ್ರೇಣ ಸುನೃಶಂಸಮಿದಂ ಕೃತಂ।
10001058c ಮೂರ್ಧಾಭಿಷಿಕ್ತಸ್ಯ ಶಿರಃ ಪಾದೇನ ಪರಿಮೃದ್ನತಾ।।
ಮೂರ್ಧಾಭಿಷಿಕ್ತನಾಗಿದ್ದವನ ಶಿರವನ್ನು ಪಾದದಿಂದ ಒದೆದು ವೃಕೋದರನು ಅತಿ ಹೀನ ಮತ್ತು ಕ್ರೂರ ಕಾರ್ಯವನ್ನೆಸಗಿದನು.
10001059a ವಿನರ್ದಂತಿ ಸ್ಮ ಪಾಂಚಾಲಾಃ ಕ್ಷ್ವೇಡಂತಿ ಚ ಹಸಂತಿ ಚ।
10001059c ಧಮಂತಿ ಶಂಖಾಂಶತಶೋ ಹೃಷ್ಟಾ ಘ್ನಂತಿ ಚ ದುಂದುಭೀನ್।।
ಪಾಂಚಾಲರು ಸಂತೋಷದಿಂದ ಸಿಂಹನಾದಮಾಡುತ್ತಿದ್ದಾರೆ. ಅಟ್ಟಹಾಸದಿಂದ ನಗುತ್ತಿದ್ದಾರೆ. ಪ್ರಹೃಷ್ಟರಾಗಿ ನೂರಾರು ಶಂಖಗಳನ್ನು ಊದುತ್ತಿದ್ದಾರೆ. ದುಂದುಭಿಗಳನ್ನು ಬಾರಿಸುತ್ತಿದ್ದಾರೆ.
10001060a ವಾದಿತ್ರಘೋಷಸ್ತುಮುಲೋ ವಿಮಿಶ್ರಃ ಶಂಖನಿಸ್ವನೈಃ।
10001060c ಅನಿಲೇನೇರಿತೋ ಘೋರೋ ದಿಶಃ ಪೂರಯತೀವ ಹಿ।।
ವಾದ್ಯಘೋಷಗಳ ತುಮುಲ ಶಬ್ಧವು ಶಂಖನಿನಾದಗಳಿಂದ ಕೂಡಿ ಗಾಳಿಯಲ್ಲಿ ತೇಲಿ ಘೋರವಾಗಿ ದಿಕ್ಕುಗಳಲ್ಲಿ ಮೊಳಗುತ್ತಿವೆ.
10001061a ಅಶ್ವಾನಾಂ ಹೇಷಮಾಣಾನಾಂ ಗಜಾನಾಂ ಚೈವ ಬೃಂಹತಾಂ।
10001061c ಸಿಂಹನಾದಶ್ಚ ಶೂರಾಣಾಂ ಶ್ರೂಯತೇ ಸುಮಹಾನಯಂ।।
ಕುದುರೆಗಳ ಹೇಂಕಾರವೂ, ಆನೆಗಳ ಘೀಂಕಾರವೂ, ಶೂರರ ಸಿಂಹನಾದಗಳೂ ಜೋರಾಗಿ ಕೇಳಿಬರುತ್ತಿವೆ.
10001062a ದಿಶಂ ಪ್ರಾಚೀಂ ಸಮಾಶ್ರಿತ್ಯ ಹೃಷ್ಟಾನಾಂ ಗರ್ಜತಾಂ ಭೃಶಂ।
10001062c ರಥನೇಮಿಸ್ವನಾಶ್ಚೈವ ಶ್ರೂಯಂತೇ ಲೋಮಹರ್ಷಣಾಃ।।
ಆನಂದತುಂದಿಲರಾಗಿ ಪೂರ್ವದಿಕ್ಕಿನಕಡೆ ಜೋರಾಗಿ ಗರ್ಜಿಸುತ್ತಾ ಹೋಗುತ್ತಿರುವವರ ರಥಚಕ್ರಗಳ ರೋಮಾಂಚಕಾರೀ ಶಬ್ಧಗಳೂ ಪೂರ್ವದಿಕ್ಕಿನಿಂದ ಕೇಳಿಬರುತ್ತಿವೆ.
10001063a ಪಾಂಡವೈರ್ಧಾರ್ತರಾಷ್ಟ್ರಾಣಾಂ ಯದಿದಂ ಕದನಂ ಕೃತಂ।
10001063c ವಯಮೇವ ತ್ರಯಃ ಶಿಷ್ಟಾಸ್ತಸ್ಮಿನ್ಮಹತಿ ವೈಶಸೇ।।
ಧಾರ್ತರಾಷ್ಟ್ರರೊಂದಿಗೆ ಪಾಂಡವರು ನಡೆಸಿದ ಈ ಕದನದ ಮಹಾ ಸಂಹಾರಕಾರ್ಯದಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡಿದ್ದೇವೆ.
10001064a ಕೇ ಚಿನ್ನಾಗಶತಪ್ರಾಣಾಃ ಕೇ ಚಿತ್ಸರ್ವಾಸ್ತ್ರಕೋವಿದಾಃ।
10001064c ನಿಹತಾಃ ಪಾಂಡವೇಯೈಃ ಸ್ಮ ಮನ್ಯೇ ಕಾಲಸ್ಯ ಪರ್ಯಯಂ।।
ನಮ್ಮಲ್ಲಿ ಕೆಲವರಿಗೆ ನೂರು ಆನೆಗಳ ಬಲವಿದ್ದಿತು. ಕೆಲವರು ಸರ್ವಾಸ್ತ್ರಕೋವಿದರಾಗಿದ್ದರು. ಅವರು ಪಾಂಡವರಿಂದ ಹತರಾದರೆಂದರೆ ಇದು ಕಾಲದ ವೈಪರಿತ್ಯವೆಂದೇ ನಾವು ಭಾವಿಸಬೇಕಾಗುತ್ತದೆ.
10001065a ಏವಮೇತೇನ ಭಾವ್ಯಂ ಹಿ ನೂನಂ ಕಾರ್ಯೇಣ ತತ್ತ್ವತಃ।
10001065c ಯಥಾ ಹ್ಯಸ್ಯೇದೃಶೀ ನಿಷ್ಠಾ ಕೃತೇ ಕಾರ್ಯೇಽಪಿ ದುಷ್ಕರೇ।।
ನಿಶ್ಚಯವಾಗಿಯೂ ಈ ಕಾರ್ಯದ ಪರಿಣಾಮವು ಹೀಗೆಯೇ ಆಗಬೇಕೆಂದಿತ್ತೇನೋ! ಈ ದುಷ್ಕರ ಕಾರ್ಯವನ್ನು ನಿಷ್ಠೆಯಿಂದ ಮಾಡಿದ್ದರೂ ಪರಿಣಾಮವು ಹೀಗಾಯಿತಲ್ಲ!
10001066a ಭವತೋಸ್ತು ಯದಿ ಪ್ರಜ್ಞಾ ನ ಮೋಹಾದಪಚೀಯತೇ।
10001066c ವ್ಯಾಪನ್ನೇಽಸ್ಮಿನ್ಮಹತ್ಯರ್ಥೇ ಯನ್ನಃ ಶ್ರೇಯಸ್ತದುಚ್ಯತಾಂ।।
ಮೋಹದಿಂದ ನಿಮ್ಮ ಪ್ರಜ್ಞೆಯು ನಷ್ಟವಾಗಿ ಹೋಗದೇ ಇದ್ದರೆ ನಮ್ಮ ಕಡೆಯ ಎಲ್ಲವೂ ನಾಶವಾಗಿರುವಾಗ ನಮಗೆ ಶ್ರೇಯಸ್ಕರವಾದ ಏನನ್ನು ಮಾಡಬೇಕು ಎನ್ನುವುದನ್ನು ನೀವು ಹೇಳಬೇಕು!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಮಂತ್ರಣಾಯಾಂ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಮಂತ್ರಣ ಎನ್ನುವ ಮೊದಲನೇ ಅಧ್ಯಾಯವು.