064 ಅಶ್ವತ್ಥಾಮಸೈನಾಪತ್ಯಾಭಿಷೇಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಗದಾಯುದ್ಧ ಪರ್ವ

ಅಧ್ಯಾಯ 64

ಸಾರ

ಕೃಪ-ಅಶ್ವತ್ಥಾಮ-ಕೃತವರ್ಮರು ದುರ್ಯೋಧನನು ಹತನಾದುದನ್ನು ಕೇಳಿ ರಣರಂಗಕ್ಕೆ ಬಂದು ಅವನನ್ನು ನೋಡಿದುದು (1-10). ಅಶ್ವತ್ಥಾಮನ ವಾಕ್ಯ (11-19). ದುರ್ಯೋಧನ ವಾಕ್ಯ (20-30). ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ (31-43).

09064001 ಸಂಜಯ ಉವಾಚ 09064001a ವಾತಿಕಾನಾಂ ಸಕಾಶಾತ್ತು ಶ್ರುತ್ವಾ ದುರ್ಯೋಧನಂ ಹತಂ।
09064001c ಹತಶಿಷ್ಟಾಸ್ತತೋ ರಾಜನ್ಕೌರವಾಣಾಂ ಮಹಾರಥಾಃ।।
09064002a ವಿನಿರ್ಭಿನ್ನಾಃ ಶಿತೈರ್ಬಾಣೈರ್ಗದಾತೋಮರಶಕ್ತಿಭಿಃ।
09064002c ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ।।
09064002e ತ್ವರಿತಾ ಜವನೈರಶ್ವೈರಾಯೋಧನಮುಪಾಗಮನ್।।

ಸಂಜಯನು ಹೇಳಿದನು: “ರಾಜನ್! ವಾರ್ತಾವಾಹಿಗಳಿಂದ ದುರ್ಯೋಧನನು ಹತನಾದನೆಂದು ಕೇಳಿ ಹತರಾಗದೇ ಉಳಿದಿದ್ದ ಆದರೆ ನಿಶಿತ ಬಾಣಗಳಿಂದ, ಗದೆ-ತೋಮರ-ಶಕ್ತಿಗಳ ಹೊಡೆತದಿಂದ ಗಾಯಗೊಂಡಿದ್ದ ಕೌರವರ ಮಹಾರಥರು – ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು – ತ್ವರೆಮಾಡಿ ವೇಗಶಾಲೀ ಕುದುರೆಗಳೊಂದಿಗೆ ರಣರಂಗವನ್ನು ತಲುಪಿದರು.

09064003a ತತ್ರಾಪಶ್ಯನ್ಮಹಾತ್ಮಾನಂ ಧಾರ್ತರಾಷ್ಟ್ರಂ ನಿಪಾತಿತಂ।
09064003c ಪ್ರಭಗ್ನಂ ವಾಯುವೇಗೇನ ಮಹಾಶಾಲಂ ಯಥಾ ವನೇ।।

ಅಲ್ಲಿ ಅವರು ಚಂಡಮಾರುತದಿಂದ ವನದಲ್ಲಿ ಮುರಿದುಬಿದ್ದ ಮಹಾಶಾಲ ವೃಕ್ಷದಂತೆ ಕೆಳಗೆ ಬಿದ್ದಿದ್ದ ಮಹಾತ್ಮ ಧಾರ್ತರಾಷ್ಟ್ರನನ್ನು ನೋಡಿದರು.

09064004a ಭೂಮೌ ವಿವೇಷ್ಟಮಾನಂ ತಂ ರುಧಿರೇಣ ಸಮುಕ್ಷಿತಂ।
09064004c ಮಹಾಗಜಮಿವಾರಣ್ಯೇ ವ್ಯಾಧೇನ ವಿನಿಪಾತಿತಂ।।

ಅರಣ್ಯದಲ್ಲಿ ವ್ಯಾಧನಿಂದ ಕೆಳಗುರುಳಿಸಲ್ಪಟ್ಟ ಮಹಾಗಜದಂತೆ ಅವನು ರಕ್ತದಲ್ಲಿ ತೋಯ್ದುಹೋಗಿ ನೆಲದಮೇಲೆ ಚಡಪಡಿಸುತ್ತಿದ್ದನು.

09064005a ವಿವರ್ತಮಾನಂ ಬಹುಶೋ ರುಧಿರೌಘಪರಿಪ್ಲುತಂ।
09064005c ಯದೃಚ್ಚಯಾ ನಿಪತಿತಂ ಚಕ್ರಮಾದಿತ್ಯಗೋಚರಂ।।

ರಕ್ತದ ಕೋಡಿಯಲ್ಲಿಯೇ ಮುಳುಗಿ ಹೋಗಿ ಪ್ರಾಣಸಂಕಟದಿಂದ ಹೊರಳಾಡುತ್ತಿದ್ದ ಅವನು ತನ್ನ ಇಚ್ಛೆಯಿಂದಲೇ ಕೆಳಗೆ ಬಿದ್ದಿದ್ದ ಸೂರ್ಯನ ಚಕ್ರದಂತೆ ಕಾಣುತ್ತಿದ್ದನು.

09064006a ಮಹಾವಾತಸಮುತ್ಥೇನ ಸಂಶುಷ್ಕಮಿವ ಸಾಗರಂ।
09064006c ಪೂರ್ಣಚಂದ್ರಮಿವ ವ್ಯೋಮ್ನಿ ತುಷಾರಾವೃತಮಂಡಲಂ।।

ಮೇಲೆದ್ದ ಭಿರುಗಾಳಿಯಿಂದ ಒಣಗಿದ ಸಾಗರದಂತೆ ಮತ್ತು ಹಿಮದಿಂದ ಆವೃತವಾದ ಆಕಾಶಮಂಡಲದಿಂದ ಕೂಡಿದ ಪೂರ್ಣಚಂದ್ರನಂತೆ ದುರ್ಯೋಧನನು ಕಾಣುತ್ತಿದ್ದನು.

09064007a ರೇಣುಧ್ವಸ್ತಂ ದೀರ್ಘಭುಜಂ ಮಾತಂಗಸಮವಿಕ್ರಮಂ।
09064007c ವೃತಂ ಭೂತಗಣೈರ್ಘೋರೈಃ ಕ್ರವ್ಯಾದೈಶ್ಚ ಸಮಂತತಃ।।
09064007e ಯಥಾ ಧನಂ ಲಿಪ್ಸಮಾನೈರ್ಭೃತ್ಯೈರ್ನೃಪತಿಸತ್ತಮಂ।।

ಮಾತಂಗಸಮ ವಿಕ್ರಮಿಯಾಗಿದ್ದ ಆ ದೀರ್ಘಭುಜ ನೃಪತಿಸತ್ತಮನು ಧೂಳಿನಿಂದ ತುಂಬಿಹೋಗಿದ್ದು, ಧನವನ್ನು ಕಸಿದುಕೊಳ್ಳುವ ಇಚ್ಛೆಯಿಂದ ಸೇವಕರು ಮುತ್ತುವಂತೆ ಸುತ್ತಲೂ ಘೋರ ಭೂತಗಣಗಳಿಂದಲೂ ಮಾಂಸಾಶಿ ಮೃಗ-ಪಕ್ಷಿಗಳಿಂದಲೂ ಆವೃತನಾಗಿದ್ದನು.

09064008a ಭ್ರುಕುಟೀಕೃತವಕ್ತ್ರಾಂತಂ ಕ್ರೋಧಾದುದ್ವೃತ್ತಚಕ್ಷುಷಂ।
09064008c ಸಾಮರ್ಷಂ ತಂ ನರವ್ಯಾಘ್ರಂ ವ್ಯಾಘ್ರಂ ನಿಪತಿತಂ ಯಥಾ।।

ಕೆಳಗುರುಳಿ ಸಿಟ್ಟಾದ ವ್ಯಾಘ್ರನಂತಿದ್ದ ಆ ನರವ್ಯಾಘ್ರನ ಕ್ರೋಧದಿಂದ ಗಂಟುಕಟ್ಟಿದ್ದ ಹುಬ್ಬುಗಳು ಬಾಯಿಯವರೆಗೂ ಪ್ರಸರಿಸಿದ್ದವು. ಕಣ್ಣುಗಳು ಹೊರಚಾಚಿದಂತಿದ್ದವು.

09064009a ತೇ ತು ದೃಷ್ಟ್ವಾ ಮಹೇಷ್ವಾಸಾ ಭೂತಲೇ ಪತಿತಂ ನೃಪಂ।
09064009c ಮೋಹಮಭ್ಯಾಗಮನ್ಸರ್ವೇ ಕೃಪಪ್ರಭೃತಯೋ ರಥಾಃ।।

ಭೂತಲದಲ್ಲಿ ಬಿದ್ದಿರುವ ಆ ನೃಪನನ್ನು ಕಂಡು ಕೃಪನೇ ಮೊದಲಾದ ಆ ಮಹೇಷ್ವಾಸ ಮಹಾರಥರಿಗೆ ಮೋಹವು ಆವೇಶಗೊಂಡಿತು.

09064010a ಅವತೀರ್ಯ ರಥೇಭ್ಯಸ್ತು ಪ್ರಾದ್ರವನ್ರಾಜಸಂನಿಧೌ।
09064010c ದುರ್ಯೋಧನಂ ಚ ಸಂಪ್ರೇಕ್ಷ್ಯ ಸರ್ವೇ ಭೂಮಾವುಪಾವಿಶನ್।।

ರಥದಿಂದ ಕೆಳಗಿಳಿದು ರಾಜಸನ್ನಿಧಿಗೆ ಓಡಿಬಂದು ದುರ್ಯೋಧನನನ್ನು ನೋಡಿ ಎಲ್ಲರೂ ನೆಲದ ಮೇಲೆ ಕುಳಿತುಕೊಂಡರು.

09064011a ತತೋ ದ್ರೌಣಿರ್ಮಹಾರಾಜ ಬಾಷ್ಪಪೂರ್ಣೇಕ್ಷಣಃ ಶ್ವಸನ್।
09064011c ಉವಾಚ ಭರತಶ್ರೇಷ್ಠಂ ಸರ್ವಲೋಕೇಶ್ವರೇಶ್ವರಂ।।

ಮಹಾರಾಜ! ಆಗ ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ದ್ರೌಣಿಯು ನಿಟ್ಟುಸಿರು ಬಿಡುತ್ತಾ ಸರ್ವ ಲೋಕೇಶ್ವರೇಶ್ವರ ಭರತಶ್ರೇಷ್ಠನಿಗೆ ಹೀಗೆಂದನು:

09064012a ನ ನೂನಂ ವಿದ್ಯತೇಽಸಹ್ಯಂ ಮಾನುಷ್ಯೇ ಕಿಂ ಚಿದೇವ ಹಿ।
09064012c ಯತ್ರ ತ್ವಂ ಪುರುಷವ್ಯಾಘ್ರ ಶೇಷೇ ಪಾಂಸುಷು ರೂಷಿತಃ।।

“ಪುರುಷವ್ಯಾಘ್ರ! ನಿನ್ನಂತವನೇ ಕೆಸರಿನಲ್ಲಿ ಹೊರಳಾಡುತ್ತಿರುವಂತಾಯಿತೆಂದರೆ ಮನುಷ್ಯನಿಗೆ ಸಹಿಸಲಾಗದಂತಹದು ಕಿಂಚಿತ್ತೂ ಇಲ್ಲವೆಂದಾಯಿತಲ್ಲವೇ?

09064013a ಭೂತ್ವಾ ಹಿ ನೃಪತಿಃ ಪೂರ್ವಂ ಸಮಾಜ್ಞಾಪ್ಯ ಚ ಮೇದಿನೀಂ।
09064013c ಕಥಮೇಕೋಽದ್ಯ ರಾಜೇಂದ್ರ ತಿಷ್ಠಸೇ ನಿರ್ಜನೇ ವನೇ।।

ರಾಜೇಂದ್ರ! ಹಿಂದೆ ನೃಪತಿಯಾಗಿ ಇಡೀ ಮೇದಿನಿಗೇ ಆಜ್ಞೆನೀಡುತ್ತಿದ್ದ ನೀನು ಇಂದು ಏಕಾಂಗಿಯಾಗಿ ನಿರ್ಜನ ವನದಲ್ಲಿ ಹೇಗಿರುವೆ?

09064014a ದುಃಶಾಸನಂ ನ ಪಶ್ಯಾಮಿ ನಾಪಿ ಕರ್ಣಂ ಮಹಾರಥಂ।
09064014c ನಾಪಿ ತಾನ್ಸುಹೃದಃ ಸರ್ವಾನ್ಕಿಮಿದಂ ಭರತರ್ಷಭ।।

ಭರತರ್ಷಭ! ದುಃಶಾಸನನನ್ನು ಕಾಣುತ್ತಿಲ್ಲ. ಮಹಾರಥ ಕರ್ಣನೂ ಕಾಣುತ್ತಿಲ್ಲ. ಸರ್ವ ಸುಹೃದ್ಗಣಗಳನ್ನೂ ಕಾಣುತ್ತಿಲ್ಲ! ಇದೇನಾಗಿಹೋಯಿತು?

09064015a ದುಃಖಂ ನೂನಂ ಕೃತಾಂತಸ್ಯ ಗತಿಂ ಜ್ಞಾತುಂ ಕಥಂ ಚನ।
09064015c ಲೋಕಾನಾಂ ಚ ಭವಾನ್ಯತ್ರ ಶೇತೇ ಪಾಂಸುಷು ರೂಷಿತಃ।।

ಕೆಸರಿನಲ್ಲಿ ಹೊರಳಾಡುತ್ತಾ ನೀನು ಮಲಗಿರುವುದನ್ನು ನೋಡಿದರೆ ಕೃತಾಂತನು ಲೋಕಗಳನ್ನು ನಡೆಸುವ ಮತ್ತು ದುಃಖವನ್ನು ತಂದೊಡ್ಡುವ ಬಗೆಯನ್ನು ಅರಿತುಕೊಳ್ಳುವುದು ಕಷ್ಟಸಾಧ್ಯ ಎಂದೆನಿಸುತ್ತದೆ.

09064016a ಏಷ ಮೂರ್ಧಾವಸಿಕ್ತಾನಾಮಗ್ರೇ ಗತ್ವಾ ಪರಂತಪಃ।
09064016c ಸತೃಣಂ ಗ್ರಸತೇ ಪಾಂಸುಂ ಪಶ್ಯ ಕಾಲಸ್ಯ ಪರ್ಯಯಂ।।

ಮೂರ್ಧಾಭಿಷಿಕ್ತರಾದ ರಾಜರ ಮುಂದಾಳುವಾಗಿದ್ದ ಈ ಪರಂತಪನು ಹುಲ್ಲಿನೊಂದಿಗೆ ಮಿಶ್ರಣವಾಗಿರುವ ಧೂಳನ್ನು ತಿನ್ನುತ್ತಿದ್ದಾನೆ! ಕಾಲದ ವೈಪರೀತ್ಯವನ್ನಾದರೂ ನೋಡಿ!

09064017a ಕ್ವ ತೇ ತದಮಲಂ ಚತ್ರಂ ವ್ಯಜನಂ ಕ್ವ ಚ ಪಾರ್ಥಿವ।
09064017c ಸಾ ಚ ತೇ ಮಹತೀ ಸೇನಾ ಕ್ವ ಗತಾ ಪಾರ್ಥಿವೋತ್ತಮ।।

ಪಾರ್ಥಿವ! ನಿನ್ನ ಆ ಅಮಲ ಚತ್ರವೆಲ್ಲಿ? ನಿನ್ನ ಆ ಚಾಮರವೆಲ್ಲಿ? ಪಾರ್ಥಿವೋತ್ತಮ! ನಿನ್ನ ಆ ಮಹಾಸೇನೆಯು ಎಲ್ಲಿ ಹೋಯಿತು?

09064018a ದುರ್ವಿಜ್ಞೇಯಾ ಗತಿರ್ನೂನಂ ಕಾರ್ಯಾಣಾಂ ಕಾರಣಾಂತರೇ।
09064018c ಯದ್ವೈ ಲೋಕಗುರುರ್ಭೂತ್ವಾ ಭವಾನೇತಾಂ ದಶಾಂ ಗತಃ।।

ಲೋಕಗುರುವಾಗಿದ್ದ ನಿನಗೆ ಈ ದಶೆಯುಂಟಾಯಿತೆಂದರೆ ಆಗು ಹೋಗುಗಳ ಕಾರಣಗಳನ್ನು ತಿಳಿದುಕೊಳ್ಳುವುದು ಕಷ್ಟವೆಂದಾಯಿತಲ್ಲವೇ?

09064019a ಅಧ್ರುವಾ ಸರ್ವಮರ್ತ್ಯೇಷು ಧ್ರುವಂ ಶ್ರೀರುಪಲಕ್ಷ್ಯತೇ।
09064019c ಭವತೋ ವ್ಯಸನಂ ದೃಷ್ಟ್ವಾ ಶಕ್ರವಿಸ್ಪರ್ಧಿನೋ ಭೃಶಂ।।

ಸಂಪತ್ತಿನಲ್ಲಿ ಶಕ್ರನೊಡನೆ ಕೂಡ ಸ್ಪರ್ಧಿಸುವಂತಿದ್ದ ನಿನಗೇ ಈ ವ್ಯಸನವುಂಟಾಯಿತೆಂದರೆ ಸರ್ವ ಮನುಷ್ಯರಲ್ಲಿ ಸಂಪತ್ತು ಅನಿಶ್ಚಿತವಾದುದು ಎನ್ನುವುದು ನಿಶ್ಚಯ!”

09064020a ತಸ್ಯ ತದ್ವಚನಂ ಶ್ರುತ್ವಾ ದುಃಖಿತಸ್ಯ ವಿಶೇಷತಃ।
09064020c ಉವಾಚ ರಾಜನ್ಪುತ್ರಸ್ತೇ ಪ್ರಾಪ್ತಕಾಲಮಿದಂ ವಚಃ।।
09064021a ವಿಮೃಜ್ಯ ನೇತ್ರೇ ಪಾಣಿಭ್ಯಾಂ ಶೋಕಜಂ ಬಾಷ್ಪಮುತ್ಸೃಜನ್।
09064021c ಕೃಪಾದೀನ್ಸ ತದಾ ವೀರಾನ್ಸರ್ವಾನೇವ ನರಾಧಿಪಃ।।

ರಾಜನ್! ವಿಶೇಷವಾಗಿ ದುಃಖಿತನಾಗಿದ್ದ ಅವನ ಆ ಮಾತನ್ನು ಕೇಳಿ ನಿನ್ನ ಮಗ ನರಾಧಿಪನು ಶೋಕದಿಂದ ಉಕ್ಕಿಬರುತ್ತಿದ್ದ ಕಣ್ಣೀರನ್ನು ಎರಡೂ ಕೈಗಳಿಂದ ಒರೆಸಿಕೊಳ್ಳುತ್ತಾ ಕೃಪನೇ ಮೊದಲಾದ ಆ ಸರ್ವ ವೀರರಿಗೆ ಸಮಯಕ್ಕೆ ತಕ್ಕುದಾದ ಈ ಮಾತನ್ನಾಡಿದನು:

09064022a ಈದೃಶೋ ಮರ್ತ್ಯಧರ್ಮೋಽಯಂ ಧಾತ್ರಾ ನಿರ್ದಿಷ್ಟ ಉಚ್ಯತೇ।
09064022c ವಿನಾಶಃ ಸರ್ವಭೂತಾನಾಂ ಕಾಲಪರ್ಯಾಯಕಾರಿತಃ।।

“ಕಾಲದ ಉರುಳುವಿಕೆಯಿಂದ ಸರ್ವಭೂತಗಳ ವಿನಾಶವಾಗುತ್ತದೆ. ಇದೇ ಮನುಷ್ಯಧರ್ಮವೆಂದೂ ಇದನ್ನು ಧಾತಾರನೇ ನಿರ್ಧರಿಸಿದ್ದಾನೆಂದೂ ಹೇಳುತ್ತಾರೆ.

09064023a ಸೋಽಯಂ ಮಾಂ ಸಮನುಪ್ರಾಪ್ತಃ ಪ್ರತ್ಯಕ್ಷಂ ಭವತಾಂ ಹಿ ಯಃ।
09064023c ಪೃಥಿವೀಂ ಪಾಲಯಿತ್ವಾಹಮೇತಾಂ ನಿಷ್ಠಾಮುಪಾಗತಃ।।

ಅದೇ ವಿನಾಶವನ್ನು ನಾನು ನಿಮ್ಮ ಸಮಕ್ಷಮದಲ್ಲಿ ಹೊಂದಿದ್ದೇನೆ. ಪೃಥ್ವಿಯನ್ನು ಪಾಲಿಸುತ್ತಿದ್ದ ನಾನು ಈ ಪರಿಸ್ಥಿತಿಯನ್ನು ಹೊಂದಿದ್ದೇನೆ.

09064024a ದಿಷ್ಟ್ಯಾ ನಾಹಂ ಪರಾವೃತ್ತೋ ಯುದ್ಧೇ ಕಸ್ಯಾಂ ಚಿದಾಪದಿ।
09064024c ದಿಷ್ಟ್ಯಾಹಂ ನಿಹತಃ ಪಾಪೈಶ್ಚಲೇನೈವ ವಿಶೇಷತಃ।।

ಒಳ್ಳೆಯದಾಯಿತು! ನಾನು ಯುದ್ಧದಿಂದ ಎಂದೂ ಹಿಂದೆಸರಿಯಲಿಲ್ಲ! ಒಳ್ಳೆಯದಾಯಿತು! ಪಾಪಿಷ್ಟರು ನನ್ನನ್ನು ಮೋಸದಿಂದಲೇ ಕೊಂದರು!

09064025a ಉತ್ಸಾಹಶ್ಚ ಕೃತೋ ನಿತ್ಯಂ ಮಯಾ ದಿಷ್ಟ್ಯಾ ಯುಯುತ್ಸತಾ।
09064025c ದಿಷ್ಟ್ಯಾ ಚಾಸ್ಮಿ ಹತೋ ಯುದ್ಧೇ ನಿಹತಜ್ಞಾತಿಬಾಂಧವಃ।।

ಒಳ್ಳೆಯದಾಯಿತು! ನಾನು ನಿತ್ಯವೂ ಉತ್ಸಾಹದಿಂದಲೇ ಯುದ್ಧಮಾಡಿದೆ! ಒಳ್ಳೆಯದಾಯಿತು! ನನ್ನ ಜ್ಞಾತಿಬಾಂಧವರೆಲ್ಲರೂ ಯುದ್ಧದಲ್ಲಿ ಹತನಾದ ನಂತರವೇ ನಾನು ಹತನಾದೆನು!

09064026a ದಿಷ್ಟ್ಯಾ ಚ ವೋಽಹಂ ಪಶ್ಯಾಮಿ ಮುಕ್ತಾನಸ್ಮಾಜ್ಜನಕ್ಷಯಾತ್।
09064026c ಸ್ವಸ್ತಿಯುಕ್ತಾಂಶ್ಚ ಕಲ್ಯಾಂಶ್ಚ ತನ್ಮೇ ಪ್ರಿಯಮನುತ್ತಮಂ।।

ಒಳ್ಳೆಯದಾಯಿತು! ಈ ಜನಕ್ಷಯಯುದ್ಧದಿಂದ ಮುಕ್ತರಾಗಿರುವ ನಿಮ್ಮನ್ನು ನಾನು ನೋಡುತ್ತಿದ್ದೇನೆ! ಕುಶಲರಾಗಿರುವಿರಿ ಮತ್ತು ಕಾರ್ಯಸಮರ್ಥರಾಗಿದ್ದೀರಿ ಎಂದು ನೋಡಿ ಅತ್ಯಂತ ಸಂತೋಷವೂ ಆಗಿದೆ.

09064027a ಮಾ ಭವಂತೋಽನುತಪ್ಯಂತಾಂ ಸೌಹೃದಾನ್ನಿಧನೇನ ಮೇ।
09064027c ಯದಿ ವೇದಾಃ ಪ್ರಮಾಣಂ ವೋ ಜಿತಾ ಲೋಕಾ ಮಯಾಕ್ಷಯಾಃ।।

ನನ್ನ ನಿಧನದ ಕುರಿತು ಸ್ನೇಹಭಾವದಿಂದ ನೀವು ಪರಿತಪಿಸಬೇಕಾಗಿಲ್ಲ! ವೇದಗಳಿಗೆ ಪ್ರಮಾಣವಿದೆಯೆಂದಾದರೆ ನಾನು ಅಕ್ಷಯ ಲೋಕಗಳನ್ನು ಗೆದ್ದುಕೊಂಡಿದ್ದೇನೆ!

09064028a ಮನ್ಯಮಾನಃ ಪ್ರಭಾವಂ ಚ ಕೃಷ್ಣಸ್ಯಾಮಿತತೇಜಸಃ।
09064028c ತೇನ ನ ಚ್ಯಾವಿತಶ್ಚಾಹಂ ಕ್ಷತ್ರಧರ್ಮಾತ್ಸ್ವನುಷ್ಠಿತಾತ್।।

ಅಮಿತತೇಜಸ್ವಿ ಕೃಷ್ಣನ ಪ್ರಭಾವವನ್ನು ತಿಳಿದುಕೊಂಡಿದ್ದರೂ ಅವನ ಪ್ರೇರಣೆಗೆ ಬಾರದೇ ನಾನು ಕ್ಷತ್ರಧರ್ಮದಲ್ಲಿಯೇ ನಿರತನಾಗಿದ್ದೆ!

09064029a ಸ ಮಯಾ ಸಮನುಪ್ರಾಪ್ತೋ ನಾಸ್ಮಿ ಶೋಚ್ಯಃ ಕಥಂ ಚನ।
09064029c ಕೃತಂ ಭವದ್ಭಿಃ ಸದೃಶಮನುರೂಪಮಿವಾತ್ಮನಃ।
09064029e ಯತಿತಂ ವಿಜಯೇ ನಿತ್ಯಂ ದೈವಂ ತು ದುರತಿಕ್ರಮಂ।।

ಆ ಕ್ಷತ್ರಧರ್ಮದ ಫಲವನ್ನು ನಾನು ಪಡೆದುಕೊಂಡಿದ್ದೇನೆ. ಅದರಲ್ಲಿ ಶೋಕಿಸುವಂತಾದ್ದು ಏನೂ ಇಲ್ಲ. ನೀವು ನಿಮಗೆ ಅನುರೂಪವಾದ ರೀತಿಗಳಲ್ಲಿ ಯುದ್ಧಮಾಡಿರುವಿರಿ! ನಿತ್ಯವೂ ನನ್ನ ವಿಜಯಕ್ಕೆ ಪ್ರಯತ್ನಿಸಿದರೂ ದೈವವನ್ನು ಅತಿಕ್ರಮಿಸಲು ಯಾರಿಗೂ ಸಾಧ್ಯವಿಲ್ಲ!”

09064030a ಏತಾವದುಕ್ತ್ವಾ ವಚನಂ ಬಾಷ್ಪವ್ಯಾಕುಲಲೋಚನಃ।
09064030c ತೂಷ್ಣೀಂ ಬಭೂವ ರಾಜೇಂದ್ರ ರುಜಾಸೌ ವಿಹ್ವಲೋ ಭೃಶಂ।।

ಹೀಗೆ ಹೇಳಿ ಪ್ರಾಣಪ್ರಯಾಣದಿಂದ ತುಂಬಾ ವಿಹ್ವಲನಾಗಿದ್ದ ರಾಜೇಂದ್ರನು, ಕಣ್ಣೀರು ಮತ್ತು ವ್ಯಾಕುಲಗಳು ಅವನ ಕಣ್ಣುಗಳನ್ನು ತುಂಬಿರಲು, ಸುಮ್ಮನಾದನು.

09064031a ತಥಾ ತು ದೃಷ್ಟ್ವಾ ರಾಜಾನಂ ಬಾಷ್ಪಶೋಕಸಮನ್ವಿತಂ।
09064031c ದ್ರೌಣಿಃ ಕ್ರೋಧೇನ ಜಜ್ವಾಲ ಯಥಾ ವಹ್ನಿರ್ಜಗ®ತ್ ಕ್ಷಯೇ।।

ಹಾಗೆ ಬಾಷ್ಪಶೋಕಸಮನ್ವಿತನಾದ ರಾಜನನ್ನು ನೋಡಿ ದ್ರೌಣಿಯು ಜಗತ್ ಕ್ಷಯದಲ್ಲಿ ವಹ್ನಿಯು ಹೇಗೋ ಹಾಗೆ ಕ್ರೋಧದಿಂದ ಪ್ರಜ್ವಲಿಸಿದನು.

09064032a ಸ ತು ಕ್ರೋಧಸಮಾವಿಷ್ಟಃ ಪಾಣೌ ಪಾಣಿಂ ನಿಪೀಡ್ಯ ಚ।
09064032c ಬಾಷ್ಪವಿಹ್ವಲಯಾ ವಾಚಾ ರಾಜಾನಮಿದಮಬ್ರವೀತ್।।

ಅವನಾದರೋ ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ರಾಜನಿಗೆ ಈ ಬಾಷ್ಪವಿಹ್ವಲ ಮಾತುಗಳನ್ನಾಡಿದನು:

09064033a ಪಿತಾ ಮೇ ನಿಹತಃ ಕ್ಷುದ್ರೈಃ ಸುನೃಶಂಸೇನ ಕರ್ಮಣಾ।
09064033c ನ ತಥಾ ತೇನ ತಪ್ಯಾಮಿ ಯಥಾ ರಾಜಂಸ್ತ್ವಯಾದ್ಯ ವೈ।।

“ಆ ಕ್ಷುದ್ರರು ಅತ್ಯಂತ ಕ್ರೂರಕರ್ಮದಿಂದ ನನ್ನ ತಂದೆಯನ್ನು ಸಂಹರಿಸಿದಾಗಲೂ ಇಂದು ನಿನ್ನ ಈ ಪರಿಸ್ಥಿತಿಯನ್ನು ನೋಡಿ ಪರಿತಾಪಪಡುವಷ್ಟು ಪರಿತಪಿಸಿರಲಿಲ್ಲ.

09064034a ಶೃಣು ಚೇದಂ ವಚೋ ಮಹ್ಯಂ ಸತ್ಯೇನ ವದತಃ ಪ್ರಭೋ।
09064034c ಇಷ್ಟಾಪೂರ್ತೇನ ದಾನೇನ ಧರ್ಮೇಣ ಸುಕೃತೇನ ಚ।।

ಪ್ರಭೋ! ನಾನು ಪೂರೈಸಿದ ಇಷ್ಟಿಗಳ, ದಾನ-ಧರ್ಮ ಮತ್ತು ಸುಕೃತಗಳ ಮೇಲೆ ಆಣೆಯನ್ನಿಟ್ಟು ಹೇಳುವ ಈ ನನ್ನ ಸತ್ಯವಚನವನ್ನು ಕೇಳು!

09064035a ಅದ್ಯಾಹಂ ಸರ್ವಪಾಂಚಾಲಾನ್ವಾಸುದೇವಸ್ಯ ಪಶ್ಯತಃ।
09064035c ಸರ್ವೋಪಾಯೈರ್ಹಿ ನೇಷ್ಯಾಮಿ ಪ್ರೇತರಾಜನಿವೇಶನಂ।।
09064035e ಅನುಜ್ಞಾಂ ತು ಮಹಾರಾಜ ಭವಾನ್ಮೇ ದಾತುಮರ್ಹತಿ।।

ಇಂದು ನಾನು ವಾಸುದೇವನು ನೋಡುತ್ತಿದ್ದಂತೆಯೇ ಸರ್ವಪಾಂಚಾಲರನ್ನು ಸರ್ವೋಪಾಯಗಳನ್ನು ಬಳಸಿ ಪ್ರೇತರಾಜನ ನಿವೇಶನಕ್ಕೆ ಕಳುಹಿಸುತ್ತೇನೆ. ಮಹಾರಾಜ! ನೀನು ನನಗೆ ಅನುಜ್ಞೆಯನ್ನು ನೀಡಬೇಕು!”

09064036a ಇತಿ ಶ್ರುತ್ವಾ ತು ವಚನಂ ದ್ರೋಣಪುತ್ರಸ್ಯ ಕೌರವಃ।
09064036c ಮನಸಃ ಪ್ರೀತಿಜನನಂ ಕೃಪಂ ವಚನಮಬ್ರವೀತ್।।
09064036e ಆಚಾರ್ಯ ಶೀಘ್ರಂ ಕಲಶಂ ಜಲಪೂರ್ಣಂ ಸಮಾನಯ।।

ಮನಸ್ಸಿಗೆ ಸಂತೋಷವನ್ನುಂಟುಮಾಡಿದ ದ್ರೋಣಪುತ್ರನ ಆ ಮಾತನ್ನು ಕೇಳಿ ಕೌರವನು ಕೃಪನಿಗೆ “ಆಚಾರ್ಯ! ಶೀಘ್ರವಾಗಿ ಜಲಪೂರ್ಣ ಕಲಶವನ್ನು ತರಿಸಿ!” ಎಂದು ಹೇಳಿದನು.

09064037a ಸ ತದ್ವಚನಮಾಜ್ಞಾಯ ರಾಜ್ಞೋ ಬ್ರಾಹ್ಮಣಸತ್ತಮಃ।
09064037c ಕಲಶಂ ಪೂರ್ಣಮಾದಾಯ ರಾಜ್ಞೋಂಽತಿಕಮುಪಾಗಮತ್।।

ರಾಜನ ಆ ಮಾತನ್ನು ಕೇಳಿ ಬ್ರಾಹ್ಮಣಸತ್ತಮನು ಪೂರ್ಣಕಲಶವನ್ನು ಹಿಡಿದು ರಾಜನ ಬಳಿಬಂದನು.

09064038a ತಮಬ್ರವೀನ್ಮಹಾರಾಜ ಪುತ್ರಸ್ತವ ವಿಶಾಂ ಪತೇ।
09064038c ಮಮಾಜ್ಞಯಾ ದ್ವಿಜಶ್ರೇಷ್ಠ ದ್ರೋಣಪುತ್ರೋಽಭಿಷಿಚ್ಯತಾಂ।
09064038e ಸೇನಾಪತ್ಯೇನ ಭದ್ರಂ ತೇ ಮಮ ಚೇದಿಚ್ಚಸಿ ಪ್ರಿಯಂ।।

ಮಹಾರಾಜ! ವಿಶಾಂಪತೇ! ಅವನಿಗೆ ನಿನ್ನ ಮಗನು ಹೇಳಿದನು: “ದ್ವಿಜಶ್ರೇಷ್ಠ! ನಿಮಗೆ ಮಂಗಳವಾಗಲಿ! ನನಗೆ ಪ್ರಿಯವಾದುದನ್ನು ಬಯಸುವಿರಾದರೆ ನನ್ನ ಆಜ್ಞೆಯಂತೆ ದ್ರೋಣಪುತ್ರನನ್ನು ಸೇನಾಪತ್ಯದಿಂದ ಅಭಿಷೇಕಿಸಿರಿ!

09064039a ರಾಜ್ಞೋ ನಿಯೋಗಾದ್ಯೋದ್ಧವ್ಯಂ ಬ್ರಾಹ್ಮಣೇನ ವಿಶೇಷತಃ।
09064039c ವರ್ತತಾ ಕ್ಷತ್ರಧರ್ಮೇಣ ಹ್ಯೇವಂ ಧರ್ಮವಿದೋ ವಿದುಃ।।

ರಾಜನ ನಿಯೋಗದಂತೆ ಯುದ್ಧಮಾಡಬೇಕು! ಅದರಲ್ಲೂ ವಿಶೇಷವಾಗಿ ಕ್ಷತ್ರಧರ್ಮದಿಂದ ವರ್ತಿಸುವ ಬ್ರಾಹ್ಮಣನು ಹೀಗೇ ಮಾಡಬೇಕೆಂದು ಧರ್ಮವಿದರು ತಿಳಿಸುತ್ತಾರೆ.”

09064040a ರಾಜ್ಞಸ್ತು ವಚನಂ ಶ್ರುತ್ವಾ ಕೃಪಃ ಶಾರದ್ವತಸ್ತತಃ।
09064040c ದ್ರೌಣಿಂ ರಾಜ್ಞೋ ನಿಯೋಗೇನ ಸೇನಾಪತ್ಯೇಽಭ್ಯಷೇಚಯತ್।।

ರಾಜನ ಮಾತನ್ನು ಕೇಳಿ ಶಾರದ್ವತ ಕೃಪನು ರಾಜನ ನಿಯೋಗದಂತೆ ದ್ರೌಣಿಯನ್ನು ಸೇನಾಪತಿಯಾಗಿ ಅಭಿಷೇಕಿಸಿದನು.

09064041a ಸೋಽಭಿಷಿಕ್ತೋ ಮಹಾರಾಜ ಪರಿಷ್ವಜ್ಯ ನೃಪೋತ್ತಮಂ।
09064041c ಪ್ರಯಯೌ ಸಿಂಹನಾದೇನ ದಿಶಃ ಸರ್ವಾ ವಿನಾದಯನ್।।

ಮಹಾರಾಜ! ಹಾಗೆ ಅಭಿಷಿಕ್ತನಾದ ಅಶ್ವತ್ಥಾಮನು ನೃಪೋತ್ತಮನನ್ನು ಆಲಂಗಿಸಿ ಸರ್ವ ದಿಶಗಳಲ್ಲಿಯೂ ಪ್ರತಿಧ್ವನಿಯಾಗುವಂತೆ ಸಿಂಹನಾದ ಮಾಡುತ್ತಾ ಹೊರಟುಹೋದನು.

09064042a ದುರ್ಯೋಧನೋಽಪಿ ರಾಜೇಂದ್ರ ಶೋಣಿತೌಘಪರಿಪ್ಲುತಃ।
09064042c ತಾಂ ನಿಶಾಂ ಪ್ರತಿಪೇದೇಽಥ ಸರ್ವಭೂತಭಯಾವಹಾಂ।।

ರಾಜೇಂದ್ರ! ರಕ್ತದಿಂದ ತೋಯ್ದುಹೋಗಿದ್ದ ದುರ್ಯೋಧನನಾದರೋ ಸರ್ವಭೂತಗಳಿಗೂ ಭಯಂಕರವಾಗಿದ್ದ ಆ ರಾತ್ರಿಯನ್ನು ಅಲ್ಲಿಯೇ ಕಳೆದನು.

09064043a ಅಪಕ್ರಮ್ಯ ತು ತೇ ತೂರ್ಣಂ ತಸ್ಮಾದಾಯೋಧನಾನ್ನೃಪ।
09064043c ಶೋಕಸಂವಿಗ್ನಮನಸಶ್ಚಿಂತಾಧ್ಯಾನಪರಾಭವನ್।।

ನೃಪ! ಅಲ್ಲಿಂದ ಶೀಘ್ರವಾಗಿ ಹೊರಟುಹೋದ ಅವರು ಶೋಕಸಂವಿಗ್ನಮನಸ್ಕರಾಗಿ ಚಿಂತಾಧ್ಯಾನಪರರಾದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯ ಪರ್ವಣಿ ಗದಾಯುದ್ಧ ಪರ್ವಣಿ ಅಶ್ವತ್ಥಾಮಸೈನಾಪತ್ಯಾಭಿಷೇಕೇ ಚತುಃಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯ ಪರ್ವದಲ್ಲಿ ಗದಾಯುದ್ಧ ಪರ್ವದಲ್ಲಿ ಅಶ್ವತ್ಥಾಮಸೈನಾಪತ್ಯಾಭಿಷೇಕ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶಲ್ಯ ಪರ್ವಣಿ ಗದಾಯುದ್ಧ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಶಲ್ಯ ಪರ್ವದಲ್ಲಿ ಗದಾಯುದ್ಧ ಪರ್ವವು.
ಇತಿ ಶ್ರೀ ಮಹಾಭಾರತೇ ಶಲ್ಯಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಶಲ್ಯಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-9/18, ಉಪಪರ್ವಗಳು-77/100, ಅಧ್ಯಾಯಗಳು-1283/1995, ಶ್ಲೋಕಗಳು-48508/73784.