ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಗದಾಯುದ್ಧ ಪರ್ವ
ಅಧ್ಯಾಯ 62
ಸಾರ
ಯುಧಿಷ್ಠಿರನು ಕೃಷ್ಣನನ್ನು ಗಾಂಧಾರಿಯ ಬಳಿ ಕಳುಹಿಸಿದುದರ ಕಾರಣ (1-28). ಹಸ್ತಿನಾಪುರವನ್ನು ತಲುಪಿ ಕೃಷ್ಣನು ಧೃತರಾಷ್ಟ್ರನಿಗಾಡಿದ ಮಾತು (29-54). ಕೃಷ್ಣ-ಗಾಂಧಾರಿಯರ ಸಂವಾದ (55-65). ರಾತ್ರಿ ಪಾಂಡವರನ್ನು ಸಂಹರಿಸುವ ಅಶ್ವತ್ಥಾಮನ ಸಂಕಲ್ಪವನ್ನು ತಿಳಿದ ಕೃಷ್ಣನು ಬೇಗನೇ ಹಸ್ತಿನಾಪುರದಿಂದ ಹೊರಟು ಪಾಂಡವರಿದ್ದಲ್ಲಿಗೆ ಹಿಂದಿರುಗಿದುದು (66-73).
09062001 ಜನಮೇಜಯ ಉವಾಚ 09062001a ಕಿಮರ್ಥಂ ರಾಜಶಾರ್ದೂಲೋ ಧರ್ಮರಾಜೋ ಯುಧಿಷ್ಠಿರಃ।
09062001c ಗಾಂಧಾರ್ಯಾಃ ಪ್ರೇಷಯಾಮಾಸ ವಾಸುದೇವಂ ಪರಂತಪಂ।।
ಜನಮೇಜಯನು ಹೇಳಿದನು: “ರಾಜಶಾರ್ದೂಲ ಧರ್ಮರಾಜ ಯುಧಿಷ್ಠಿರನು ಯಾವಕಾರಣಕ್ಕಾಗಿ ಪರಂತಪ ವಾಸುದೇವನನ್ನು ಗಾಂಧಾರಿಯ ಬಳಿ ಕಳುಹಿಸಿದನು?
09062002a ಯದಾ ಪೂರ್ವಂ ಗತಃ ಕೃಷ್ಣಃ ಶಮಾರ್ಥಂ ಕೌರವಾನ್ಪ್ರತಿ।
09062002c ನ ಚ ತಂ ಲಬ್ಧವಾನ್ಕಾಮಂ ತತೋ ಯುದ್ಧಮಭೂದಿದಂ।।
ಹಿಂದೆ ಕೃಷ್ಣನು ಸಂಧಿಗಾಗಿ ಕೌರವರ ಬಳಿ ಹೋಗಿದ್ದಾಗ ಬಯಸಿದುದನ್ನು ಪಡೆಯಲಿಲ್ಲ ಮತ್ತು ಆ ಯುದ್ಧವು ನಡೆಯಿತು.
09062003a ನಿಹತೇಷು ತು ಯೋಧೇಷು ಹತೇ ದುರ್ಯೋಧನೇ ತಥಾ।
09062003c ಪೃಥಿವ್ಯಾಂ ಪಾಂಡವೇಯಸ್ಯ ನಿಃಸಪತ್ನೇ ಕೃತೇ ಯುಧಿ।।
ಆ ಯುದ್ಧದಲ್ಲಿ ಯೋಧರು ಹತರಾದರು ಮತ್ತು ಹಾಗೆಯೇ ದುರ್ಯೋಧನನೂ ಹತನಾಗಿ ಭುವಿಯಲ್ಲಿ ಪಾಂಡವೇಯನ ವೈರಿಗಳೇ ಇಲ್ಲದಂತಾಯಿತು.
09062004a ವಿದ್ರುತೇ ಶಿಬಿರೇ ಶೂನ್ಯೇ ಪ್ರಾಪ್ತೇ ಯಶಸಿ ಚೋತ್ತಮೇ।
09062004c ಕಿಂ ನು ತತ್ಕಾರಣಂ ಬ್ರಹ್ಮನ್ಯೇನ ಕೃಷ್ಣೋ ಗತಃ ಪುನಃ।।
ಉಳಿದವರೂ ಪಲಾಯನಮಾಡಲಾಗಿ ಶೂನ್ಯವಾದ ಆ ಉತ್ತಮ ಶಿಬಿರವೂ ಅವನ ವಶವಾಯಿತು. ಬ್ರಹ್ಮನ್! ಇದರ ನಂತರವೂ ಯಾವ ಕಾರಣಕ್ಕಾಗಿ ಕೃಷ್ಣನು ಪುನಃ ಹಸ್ತಿನಾಪುರಕ್ಕೆ ಹೋದನು?
09062005a ನ ಚೈತತ್ಕಾರಣಂ ಬ್ರಹ್ಮನ್ನಲ್ಪಂ ವೈ ಪ್ರತಿಭಾತಿ ಮೇ।
09062005c ಯತ್ರಾಗಮದಮೇಯಾತ್ಮಾ ಸ್ವಯಮೇವ ಜನಾರ್ದನಃ।।
ಬ್ರಹ್ಮನ್! ಸ್ವಯಂ ಅಮೇಯಾತ್ಮ ಜನಾರ್ದನನೇ ಅಲ್ಲಿಗೆ ಹೋದನೆಂದರೆ ಅದರ ಕಾರಣವು ಅಲ್ಪವಾದುದಲ್ಲ ಎಂದು ನನಗನ್ನಿಸುತ್ತದೆ.
09062006a ತತ್ತ್ವತೋ ವೈ ಸಮಾಚಕ್ಷ್ವ ಸರ್ವಮಧ್ವರ್ಯುಸತ್ತಮ।
09062006c ಯಚ್ಚಾತ್ರ ಕಾರಣಂ ಬ್ರಹ್ಮನ್ಕಾರ್ಯಸ್ಯಾಸ್ಯ ವಿನಿಶ್ಚಯೇ।।
ಅಧ್ವರ್ಯಸತ್ತಮ! ಬ್ರಹ್ಮನ್! ಯಾವ ಕಾರಣದಿಂದಾಗಿ ಆ ಕಾರ್ಯದ ಕುರಿತು ನಿಶ್ಚಯಿಸಲಾಯಿತು ಎನ್ನುವುದನ್ನುಇದ್ದಂತೆ ನನಗೆ ತಿಳಿಸು!”
09062007 ವೈಶಂಪಾಯನ ಉವಾಚ 09062007a ತ್ವದ್ಯುಕ್ತೋಽಯಮನುಪ್ರಶ್ನೋ ಯನ್ಮಾಂ ಪೃಚ್ಚಸಿ ಪಾರ್ಥಿವ।
09062007c ತತ್ತೇಽಹಂ ಸಂಪ್ರವಕ್ಷ್ಯಾಮಿ ಯಥಾವದ್ಭರತರ್ಷಭ।।
ವೈಶಂಪಾಯನನು ಹೇಳಿದನು: “ಪಾರ್ಥಿವ! ಭರತರ್ಷಭ! ನೀನು ಕೇಳಿದ ಪ್ರಶ್ನೆಯು ಸಮುಚಿತವಾಗಿಯೇ ಇದೆ. ಅದರ ಕುರಿತು ನಾನು ಯಥಾವತ್ತಾಗಿ ವಿವರಿಸಿ ಹೇಳುತ್ತೇನೆ.
09062008a ಹತಂ ದುರ್ಯೋಧನಂ ದೃಷ್ಟ್ವಾ ಭೀಮಸೇನೇನ ಸಂಯುಗೇ।
09062008c ವ್ಯುತ್ಕ್ರಮ್ಯ ಸಮಯಂ ರಾಜನ್ಧಾರ್ತರಾಷ್ಟ್ರಂ ಮಹಾಬಲಂ।।
09062009a ಅನ್ಯಾಯೇನ ಹತಂ ದೃಷ್ಟ್ವಾ ಗದಾಯುದ್ಧೇನ ಭಾರತ।
09062009c ಯುಧಿಷ್ಠಿರಂ ಮಹಾರಾಜ ಮಹದ್ಭಯಮಥಾವಿಶತ್।।
ಭಾರತ! ಮಹಾರಾಜ! ಸಂಯುಗದ ಗದಾಯುದ್ಧದಲ್ಲಿ ಭೀಮಸೇನನು ಒಪ್ಪಂದವನ್ನು ಮುರಿದು ಧಾರ್ತರಾಷ್ಟ್ರ ಮಹಾಬಲ ದುರ್ಯೋಧನನನ್ನು ಅನ್ಯಾಯವಾತಿ ಸಂಹರಿಸಿದುದನ್ನು ನೋಡಿ ಯುಧಿಷ್ಠಿರನಿಗೆ ಮಹಾ ಭಯವು ಆವರಿಸಿತು.
09062010a ಚಿಂತಯಾನೋ ಮಹಾಭಾಗಾಂ ಗಾಂಧಾರೀಂ ತಪಸಾನ್ವಿತಾಂ।
09062010c ಘೋರೇಣ ತಪಸಾ ಯುಕ್ತಾಂ ತ್ರೈಲೋಕ್ಯಮಪಿ ಸಾ ದಹೇತ್।।
ಘೋರ ತಪಸ್ಸಿನಿಂದ ಯುಕ್ತಳಾಗಿ ಮೂರು ಲೋಕಗಳನ್ನೂ ದಹಿಸಬಲ್ಲವಳಾಗಿದ್ದ ತಪಸಾನ್ವಿತೆ ಮಹಾಭಾಗೆ ಗಾಂಧಾರಿಯ ಕುರಿತು ಅವನು ಚಿಂತಿಸಿದನು.
09062011a ತಸ್ಯ ಚಿಂತಯಮಾನಸ್ಯ ಬುದ್ಧಿಃ ಸಮಭವತ್ತದಾ।
09062011c ಗಾಂಧಾರ್ಯಾಃ ಕ್ರೋಧದೀಪ್ತಾಯಾಃ ಪೂರ್ವಂ ಪ್ರಶಮನಂ ಭವೇತ್।।
ಹೀಗೆ ಚಿಂತಿಸುತ್ತಿರುವಾಗ ಗಾಂಧಾರಿಯ ಭುಗಿಲೇಳುವ ಕೋಪವನ್ನು ಮೊದಲೇ ಪ್ರಶಮನಗೊಳಿಸಬೇಕು ಎಂದು ಅವನ ಬುದ್ಧಿಗೆ ಹೊಳೆಯಿತು.
09062012a ಸಾ ಹಿ ಪುತ್ರವಧಂ ಶ್ರುತ್ವಾ ಕೃತಮಸ್ಮಾಭಿರೀದೃಶಂ।
09062012c ಮಾನಸೇನಾಗ್ನಿನಾ ಕ್ರುದ್ಧಾ ಭಸ್ಮಸಾನ್ನಃ ಕರಿಷ್ಯತಿ।।
“ಈ ರೀತಿಯಲ್ಲಿ ನಾವು ಅವಳ ಪುತ್ರನನ್ನು ವಧಿಸಿದೆವೆನ್ನುವುದನ್ನು ಕೇಳಿ ಕ್ರುದ್ಧಮನಸ್ಸಿನಿಂದಲೇ ಉದ್ಭವಿಸಿದ ಅಗ್ನಿಯಿಂದ ಅವಳು ನಮ್ಮನ್ನು ಭಸ್ಮಮಾಡಿಬಿಡುತ್ತಾಳೆ!
09062013a ಕಥಂ ದುಃಖಮಿದಂ ತೀವ್ರಂ ಗಾಂಧಾರೀ ಪ್ರಸಹಿಷ್ಯತಿ।
09062013c ಶ್ರುತ್ವಾ ವಿನಿಹತಂ ಪುತ್ರಂ ಚಲೇನಾಜಿಹ್ಮಯೋಧಿನಂ।।
ನ್ಯಾಯಮಾರ್ಗದಲ್ಲಿ ಯುದ್ಧಮಾಡುತ್ತಿದ್ದ ತನ್ನ ಮಗನನ್ನು ಅನ್ಯಾಯಮಾರ್ಗದಿಂದ ಕೊಲ್ಲಲಾಯಿತೆನ್ನುವುದನ್ನು ಕೇಳಿ ಆ ತೀವ್ರ ದುಃಖವನ್ನು ಗಾಂಧಾರಿಯು ಹೇಗೆ ಸಹಿಸಿಕೊಳ್ಳುವಳು?”
09062014a ಏವಂ ವಿಚಿಂತ್ಯ ಬಹುಧಾ ಭಯಶೋಕಸಮನ್ವಿತಃ।
09062014c ವಾಸುದೇವಮಿದಂ ವಾಕ್ಯಂ ಧರ್ಮರಾಜೋಽಭ್ಯಭಾಷತ।।
ಹೇಗೆ ಬಹಳವಾಗಿ ಚಿಂತಿಸಿ ಭಯಶೋಕಸಮನ್ವಿತನಾದ ಧರ್ಮರಾಜನು ವಾಸುದೇವನಿಗೆ ಈ ಮಾತನ್ನಾಡಿದನು:
09062015a ತವ ಪ್ರಸಾದಾದ್ಗೋವಿಂದ ರಾಜ್ಯಂ ನಿಹತಕಂಟಕಂ।
09062015c ಅಪ್ರಾಪ್ಯಂ ಮನಸಾಪೀಹ ಪ್ರಾಪ್ತಮಸ್ಮಾಭಿರಚ್ಯುತ।।
“ಗೋವಿಂದ! ಮನಸ್ಸಿನಿಂದಲೂ ಪಡೆದುಕೊಳ್ಳಲು ಅಸಾಧ್ಯವಾಗಿದ್ದ ಈ ನಿಷ್ಕಂಟಕ ರಾಜ್ಯವನ್ನು ನಾವು ನಿನ್ನ ಅನುಗ್ರಹದಿಂದಲೇ ಪಡೆದುಕೊಂಡಿದ್ದೇವೆ.
09062016a ಪ್ರತ್ಯಕ್ಷಂ ಮೇ ಮಹಾಬಾಹೋ ಸಂಗ್ರಾಮೇ ರೋಮಹರ್ಷಣೇ।
09062016c ವಿಮರ್ದಃ ಸುಮಹಾನ್ಪ್ರಾಪ್ತಸ್ತ್ವಯಾ ಯಾದವನಂದನ।।
ಮಹಾಬಾಹೋ! ಯಾದವನಂದನ! ರೋಮಹರ್ಷಣ ಸಂಗ್ರಾಮದಲ್ಲಿ ಪ್ರತ್ಯಕ್ಷ ನೀನೇ ಮಹಾ ಪ್ರಹಾರಗಳಿಗೆ ಈಡಾದೆ!
09062017a ತ್ವಯಾ ದೇವಾಸುರೇ ಯುದ್ಧೇ ವಧಾರ್ಥಮಮರದ್ವಿಷಾಂ।
09062017c ಯಥಾ ಸಾಹ್ಯಂ ಪುರಾ ದತ್ತಂ ಹತಾಶ್ಚ ವಿಬುಧದ್ವಿಷಃ।।
09062018a ಸಾಹ್ಯಂ ತಥಾ ಮಹಾಬಾಹೋ ದತ್ತಮಸ್ಮಾಕಮಚ್ಯುತ।
09062018c ಸಾರಥ್ಯೇನ ಚ ವಾರ್ಷ್ಣೇಯ ಭವತಾ ಯದ್ಧೃತಾ ವಯಂ।।
ಮಹಾಬಾಹೋ! ಅಚ್ಯುತ! ವಾರ್ಷ್ಣೇಯ! ಹಿಂದೆ ದೇವಾಸುರ ಯುದ್ಧದಲ್ಲಿ ಅಮರದ್ವೇಷಿಗಳ ವಧೆಗಾಗಿ ಹೇಗೆ ಸಹಾಯವನ್ನಿತ್ತು ಅಮರದ್ವೇಷಿಗಳನ್ನು ಸಂಹರಿಸಿದೆಯೋ ಹಾಗೆ ನಮಗೂ ಸಾರಥ್ಯದ ಸಹಾಯವನ್ನಿತ್ತು ನಮ್ಮನ್ನು ರಕ್ಷಿಸಿದೆ.
09062019a ಯದಿ ನ ತ್ವಂ ಭವೇನ್ನಾಥಃ ಫಲ್ಗುನಸ್ಯ ಮಹಾರಣೇ।
09062019c ಕಥಂ ಶಕ್ಯೋ ರಣೇ ಜೇತುಂ ಭವೇದೇಷ ಬಲಾರ್ಣವಃ।।
ಒಂದುವೇಳೆ ನೀನು ಮಹಾರಣದಲ್ಲಿ ಫಲ್ಗುನನ ನಾಥನಾಗಿರದಿದ್ದರೆ ಈ ಸೇನಾಸಮುದ್ರವನ್ನು ನಾವು ರಣದಲ್ಲಿ ಗೆಲ್ಲಲು ಹೇಗೆ ಶಕ್ಯರಾಗುತ್ತಿದ್ದೆವು?
09062020a ಗದಾಪ್ರಹಾರಾ ವಿಪುಲಾಃ ಪರಿಘೈಶ್ಚಾಪಿ ತಾಡನಂ।
09062020c ಶಕ್ತಿಭಿರ್ಭಿಂಡಿಪಾಲೈಶ್ಚ ತೋಮರೈಃ ಸಪರಶ್ವಧೈಃ।।
09062021a ವಾಚಶ್ಚ ಪರುಷಾಃ ಪ್ರಾಪ್ತಾಸ್ತ್ವಯಾ ಹ್ಯಸ್ಮದ್ಧಿತೈಷಿಣಾ।
09062021c ತಾಶ್ಚ ತೇ ಸಫಲಾಃ ಸರ್ವಾ ಹತೇ ದುರ್ಯೋಧನೇಽಚ್ಯುತ।।
ಅಚ್ಯುತ! ನಮ್ಮ ಹಿತೈಷಿಯಾಗಿದ್ದುಕೊಂಡು ನೀನು ವಿಪುಲ ಗದಾಪ್ರಹಾರಗಳನ್ನೂ, ಪರಿಘ-ಶಕ್ತಿ-ಭಿಂಡಿಪಾಲ-ತೋಮರ-ಪರಶುಗಳ ಪೆಟ್ಟುಗಳನ್ನೂ ಸಹಿಸಿಕೊಂಡಿರುವೆ ಮತ್ತು ಕಠೋರ ಮಾತುಗಳ ನಿಂದನೆಗಳನ್ನೂ ಪಡೆದಿರುವೆ. ದುರ್ಯೋಧನನು ಹತನಾಗಿ ಅವೆಲ್ಲವುಗಳೂ ಸಫಲವಾದಂತಾದವು,
09062022a ಗಾಂಧಾರ್ಯಾ ಹಿ ಮಹಾಬಾಹೋ ಕ್ರೋಧಂ ಬುಧ್ಯಸ್ವ ಮಾಧವ।
09062022c ಸಾ ಹಿ ನಿತ್ಯಂ ಮಹಾಭಾಗಾ ತಪಸೋಗ್ರೇಣ ಕರ್ಶಿತಾ।।
ಮಹಾಬಾಹೋ! ಮಾಧವ! ನಿತ್ಯವೂ ಉಗ್ರತಪಸ್ಸಿನಿಂದ ಕೃಶಳಾಗಿರುವ ಆ ಮಹಾಭಾಗೆ ಗಾಂಧಾರಿಯ ಕ್ರೋಧವನ್ನು ನೀನು ತಿಳಿದಿರುವೆ!
09062023a ಪುತ್ರಪೌತ್ರವಧಂ ಶ್ರುತ್ವಾ ಧ್ರುವಂ ನಃ ಸಂಪ್ರಧಕ್ಷ್ಯತಿ।
09062023c ತಸ್ಯಾಃ ಪ್ರಸಾದನಂ ವೀರ ಪ್ರಾಪ್ತಕಾಲಂ ಮತಂ ಮಮ।।
ಮಕ್ಕಳು ಮೊಮ್ಮಕ್ಕಳ ವಧೆಯನ್ನು ಕೇಳಿ ನಿಶ್ಚಯವಾಗಿಯೂ ಅವಳು ನಮ್ಮನ್ನು ಸುಟ್ಟುಬಿಡುತ್ತಾಳೆ! ವೀರ! ಅವಳನ್ನು ಪ್ರಸನ್ನಗೊಳಿಸುವ ಕಾಲವು ಬಂದೊದಗಿದೆಯೆಂದು ನನಗನ್ನಿಸುತ್ತದೆ.
09062024a ಕಶ್ಚ ತಾಂ ಕ್ರೋಧದೀಪ್ತಾಕ್ಷೀಂ ಪುತ್ರವ್ಯಸನಕರ್ಶಿತಾಂ।
09062024c ವೀಕ್ಷಿತುಂ ಪುರುಷಃ ಶಕ್ತಸ್ತ್ವಾಂ ಋತೇ ಪುರುಷೋತ್ತಮ।।
ಪುರುಷೋತ್ತಮ! ಪುತ್ರವ್ಯಸನದಿಂದ ಬೆಂದು ಕ್ರೋಧದಿಂದ ಉರಿಯುವ ದೃಷ್ಟಿಯುಳ್ಳ ಅವಳನ್ನು ನೋಡಲು ನೀನಲ್ಲದೇ ಬೇರೆ ಯಾವ ಪುರುಷನಿಗೆ ಶಕ್ಯ?
09062025a ತತ್ರ ಮೇ ಗಮನಂ ಪ್ರಾಪ್ತಂ ರೋಚತೇ ತವ ಮಾಧವ।
09062025c ಗಾಂಧಾರ್ಯಾಃ ಕ್ರೋಧದೀಪ್ತಾಯಾಃ ಪ್ರಶಮಾರ್ಥಮರಿಂದಮ।।
ಮಾಧವ! ಅರಿಂದಮ! ಕ್ರೋಧದಿಂದ ಉರಿಯುತ್ತಿರುವ ಗಾಂಧಾರಿಯನ್ನು ಪ್ರಶಮನಗೊಳಿಸಲು ನೀನು ಅಲ್ಲಿಗೆ ಹೋಗಬೇಕೆಂದು ನನಗನ್ನಿಸುತ್ತದೆ.
09062026a ತ್ವಂ ಹಿ ಕರ್ತಾ ವಿಕರ್ತಾ ಚ ಲೋಕಾನಾಂ ಪ್ರಭವಾಪ್ಯಯಃ।
09062026c ಹೇತುಕಾರಣಸಮ್ಯುಕ್ತೈರ್ವಾಕ್ಯೈಃ ಕಾಲಸಮೀರಿತೈಃ।।
ನೀನೇ ಲೋಕಗಳ ಹುಟ್ಟು ಮತ್ತು ಅಂತ್ಯ, ಕರ್ತ ಮತ್ತು ವಿಕರ್ತ. ಯುಕ್ತಿ ಮತ್ತು ಕಾರಣಗಳ ಸಂಯುಕ್ತವಾದ ಮತ್ತು ಸಮಯೋಚಿತ ಮಾತುಗಳನ್ನು ಬಲ್ಲೆ!
09062027a ಕ್ಷಿಪ್ರಮೇವ ಮಹಾಪ್ರಾಜ್ಞ ಗಾಂಧಾರೀಂ ಶಮಯಿಷ್ಯಸಿ।
09062027c ಪಿತಾಮಹಶ್ಚ ಭಗವಾನ್ ಕೃಷ್ಣಸ್ತತ್ರ ಭವಿಷ್ಯತಿ।।
ಮಹಾಪ್ರಾಜ್ಞ! ಬೇಗನೇ ನೀನು ಗಾಂಧಾರಿಯನ್ನು ಶಾಂತಗೊಳಿಸಬಲ್ಲೆ! ಅಲ್ಲಿ ಪಿತಾಮಹ ಭಗವಾನ್ ಕೃಷ್ಣ ವ್ಯಾಸನೂ ಇದ್ದಾನೆ.
09062028a ಸರ್ವಥಾ ತೇ ಮಹಾಬಾಹೋ ಗಾಂಧಾರ್ಯಾಃ ಕ್ರೋಧನಾಶನಂ।
09062028c ಕರ್ತವ್ಯಂ ಸಾತ್ವತಶ್ರೇಷ್ಠ ಪಾಂಡವಾನಾಂ ಹಿತೈಷಿಣಾ।।
ಮಹಾಬಾಹೋ! ಸಾತ್ವತಶ್ರೇಷ್ಠ! ಗಾಂಧಾರಿಯ ಕ್ರೋಧವನ್ನು ಕಡೆಗಾಣಿಸುವುದು ಪಾಂಡವರ ಹಿತೈಷಿಯಾದ ನಿನ್ನ ಸರ್ವಥಾ ಕರ್ತವ್ಯವೂ ಆಗಿರುತ್ತದೆ!”
09062029a ಧರ್ಮರಾಜಸ್ಯ ವಚನಂ ಶ್ರುತ್ವಾ ಯದುಕುಲೋದ್ವಹಃ।
09062029c ಆಮಂತ್ರ್ಯ ದಾರುಕಂ ಪ್ರಾಹ ರಥಃ ಸಜ್ಜೋ ವಿಧೀಯತಾಂ।।
ಧರ್ಮರಾಜನ ಮಾತನ್ನು ಕೇಳಿ ಯದುಕುಲೋದ್ವಹನು ದಾರುಕನನ್ನು ಕರೆದು ರಥವನ್ನು ಸಜ್ಜುಗೊಳಿಸಿ ತರುವಂತೆ ಹೇಳಿದನು.
09062030a ಕೇಶವಸ್ಯ ವಚಃ ಶ್ರುತ್ವಾ ತ್ವರಮಾಣೋಽಥ ದಾರುಕಃ।
09062030c ನ್ಯವೇದಯದ್ರಥಂ ಸಜ್ಜಂ ಕೇಶವಾಯ ಮಹಾತ್ಮನೇ।।
ಕೇಶವನ ಮಾತನ್ನು ಕೇಳಿ ದಾರುಕನು ತ್ವರೆಮಾಡಿ ರಥವನ್ನು ಸಜ್ಜುಗೊಳಿಸಿ ಮಹಾತ್ಮ ಕೇಶವನಿಗೆ ರಥವನ್ನು ತಂದು ನಿವೇದಿಸಿದನು.
09062031a ತಂ ರಥಂ ಯಾದವಶ್ರೇಷ್ಠಃ ಸಮಾರುಹ್ಯ ಪರಂತಪಃ।
09062031c ಜಗಾಮ ಹಾಸ್ತಿನಪುರಂ ತ್ವರಿತಃ ಕೇಶವೋ ವಿಭುಃ।।
ಆ ರಥವನ್ನು ಏರಿ ಯಾದವಶ್ರೇಷ್ಠ ಪರಂತಪ ವಿಭು ಕೇಶವನು ತ್ವರೆಮಾಡಿ ಹಸ್ತಿನಾಪುರಕ್ಕೆ ತೆರಳಿದನು.
09062032a ತತಃ ಪ್ರಾಯಾನ್ಮಹಾರಾಜ ಮಾಧವೋ ಭಗವಾನ್ರಥೀ।
09062032c ನಾಗಸಾಹ್ವಯಮಾಸಾದ್ಯ ಪ್ರವಿವೇಶ ಚ ವೀರ್ಯವಾನ್।।
ಮಹಾರಾಜ! ಪ್ರಯಾಣದ ನಂತರ ಭಗವಾನ್ ರಥೀ ವೀರ್ಯವಾನ್ ಮಾಧವನು ನಾಗಸಾಹ್ವಯವನ್ನು ತಲುಪಿ ಪ್ರವೇಶಿಸಿದನು.
09062033a ಪ್ರವಿಶ್ಯ ನಗರಂ ವೀರೋ ರಥಘೋಷೇಣ ನಾದಯನ್।
09062033c ವಿದಿತೋ ಧೃತರಾಷ್ಟ್ರಸ್ಯ ಸೋಽವತೀರ್ಯ ರಥೋತ್ತಮಾತ್।।
ರಥಘೋಷದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಆ ವೀರನು ನಗರವನ್ನು ಪ್ರವೇಶಿಸಿ ಧೃತರಾಷ್ಟ್ರನಿಗೆ ತಿಳಿಸಿ ಉತ್ತಮ ರಥದಿಂದ ಕೆಳಗಿಳಿದನು.
09062034a ಅಭ್ಯಗಚ್ಚದದೀನಾತ್ಮಾ ಧೃತರಾಷ್ಟ್ರನಿವೇಶನಂ।
09062034c ಪೂರ್ವಂ ಚಾಭಿಗತಂ ತತ್ರ ಸೋಽಪಶ್ಯದೃಷಿಸತ್ತಮಂ।।
ಆ ಅಧೀನಾತ್ಮನು ಧೃತರಾಷ್ಟ್ರನ ಅರಮನೆಯನ್ನು ಪ್ರವೇಶಿಸಿ ಮೊದಲೇ ಅಲ್ಲಿಗೆ ಆಗಮಿಸಿದ್ದ ಋಷಿಸತ್ತಮ ವ್ಯಾಸನನ್ನು ನೋಡಿದನು.
09062035a ಪಾದೌ ಪ್ರಪೀಡ್ಯ ಕೃಷ್ಣಸ್ಯ ರಾಜ್ಞಶ್ಚಾಪಿ ಜನಾರ್ದನಃ।
09062035c ಅಭ್ಯವಾದಯದವ್ಯಗ್ರೋ ಗಾಂಧಾರೀಂ ಚಾಪಿ ಕೇಶವಃ।।
ಅವ್ಯಗ್ರ ಕೇಶವ ಜನಾರ್ದನನು ಕೃಷ್ಣ ದ್ವೈಪಾಯನನ ಮತ್ತು ರಾಜನ ಪಾದಗಳಿಗೆ ನಮಸ್ಕರಿಸಿ ಗಾಂಧಾರಿಯನ್ನೂ ಅಭಿವಂದಿಸಿದನು.
09062036a ತತಸ್ತು ಯಾದವಶ್ರೇಷ್ಠೋ ಧೃತರಾಷ್ಟ್ರಮಧೋಕ್ಷಜಃ।
09062036c ಪಾಣಿಮಾಲಂಬ್ಯ ರಾಜ್ಞಃ ಸ ಸಸ್ವರಂ ಪ್ರರುರೋದ ಹ।।
ಬಳಿಕ ಯಾದವಶ್ರೇಷ್ಠ ಅಧೋಕ್ಷಜನು ರಾಜ ಧೃತರಾಷ್ಟ್ರನ ಕೈಗಳನ್ನು ಹಿಡಿದು ಜೋರಾಗಿ ಅಳತೊಡಗಿದನು.
09062037a ಸ ಮುಹೂರ್ತಮಿವೋತ್ಸೃಜ್ಯ ಬಾಷ್ಪಂ ಶೋಕಸಮುದ್ಭವಂ।
09062037c ಪ್ರಕ್ಷಾಲ್ಯ ವಾರಿಣಾ ನೇತ್ರೇ ಆಚಮ್ಯ ಚ ಯಥಾವಿಧಿ।।
09062037e ಉವಾಚ ಪ್ರಶ್ರಿತಂ ವಾಕ್ಯಂ ಧೃತರಾಷ್ಟ್ರಮರಿಂದಮಃ।।
ಮುಹೂರ್ತಕಾಲ ಶೋಕದಿಂದ ಕಂಬನಿಯನ್ನು ಸುರಿಸಿ ನೀರಿನಿಂದ ಕಣ್ಣುಗಳನ್ನು ಒರೆಸಿಕೊಂಡು ಯಥಾವಿಧಿಯಾಗಿ ಆಚಮನವನ್ನು ಮಾಡಿ ಅರಿಂದಮನು ಧೃತರಾಷ್ಟ್ರನಿಗೆ ಸಮಯೋಚಿತವಾದ ಈ ಮಾತನ್ನಾಡಿದನು:
09062038a ನ ತೇಽಸ್ತ್ಯವಿದಿತಂ ಕಿಂ ಚಿದ್ಭೂತಭವ್ಯಸ್ಯ ಭಾರತ।
09062038c ಕಾಲಸ್ಯ ಚ ಯಥಾ ವೃತ್ತಂ ತತ್ತೇ ಸುವಿದಿತಂ ಪ್ರಭೋ।।
“ಪ್ರಭೋ! ಭಾರತ! ನಿನಗೆ ತಿಳಿಯದೇ ಇರುವ ನಡೆದುಹೋದ ಮತ್ತು ನಡೆಯಲಿರುವ ವಿಷಯಗಳೇ ಇಲ್ಲ! ಕಾಲವು ಹೇಗೆ ನಡೆದುಕೊಳ್ಳುತ್ತದೆ ಎನ್ನುವುದೂ ನಿನಗೆ ಚೆನ್ನಾಗಿ ತಿಳಿದಿದೆ.
09062039a ಯದಿದಂ ಪಾಂಡವೈಃ ಸರ್ವೈಸ್ತವ ಚಿತ್ತಾನುರೋಧಿಭಿಃ।
09062039c ಕಥಂ ಕುಲಕ್ಷಯೋ ನ ಸ್ಯಾತ್ತಥಾ ಕ್ಷತ್ರಸ್ಯ ಭಾರತ।।
ನಿನ್ನ ಚಿತ್ತಾನುವರ್ತಿಗಳಾದ ಸರ್ವ ಪಾಂಡವರೂ ಈ ಕುಲಕ್ಷಯ ಮತ್ತು ಕ್ಷತ್ರಿಯರ ನಾಶವಾಗಬಾರದೆಂದು ಪ್ರಯತ್ನಿಸಿದರು.
09062040a ಭ್ರಾತೃಭಿಃ ಸಮಯಂ ಕೃತ್ವಾ ಕ್ಷಾಂತವಾನ್ಧರ್ಮವತ್ಸಲಃ।
09062040c ದ್ಯೂತಚ್ಚಲಜಿತೈಃ ಶಕ್ತೈರ್ವನವಾಸೋಽಭ್ಯುಪಾಗತಃ।।
ತಾಳ್ಮೆಯಿಂದ ಧರ್ಮವತ್ಸಲ ಯುಧಿಷ್ಠಿರನು ಸಹೋದರರೊಂದಿಗೆ ನಿಬಂಧನೆಯನ್ನು ಮಾಡಿಕೊಂಡು ವಂಚನೆಯ ದ್ಯೂತದಲ್ಲಿ ಸೋತು ವನವಾಸವನ್ನು ಅನುಭವಿಸಿದನು.
09062041a ಅಜ್ಞಾತವಾಸಚರ್ಯಾ ಚ ನಾನಾವೇಶಸಮಾವೃತೈಃ।
09062041c ಅನ್ಯೇ ಚ ಬಹವಃ ಕ್ಲೇಶಾಸ್ತ್ವಶಕ್ತೈರಿವ ನಿತ್ಯದಾ।।
ನಾನಾವೇಷಗಳಿಂದ ತಮ್ಮನ್ನು ಅಡಗಿಸಿಕೊಂಡು ಅಜ್ಞಾತವಾಸವನ್ನೂ ನಡೆಸಿದರು. ದುರ್ಬಲರಂತೆ ಅವರು ನಿತ್ಯವೂ ಇನ್ನೂ ಅನ್ಯ ಅನೇಕ ಕ್ಲೇಶಗಳನ್ನು ಅನುಭವಿಸಿದರು.
09062042a ಮಯಾ ಚ ಸ್ವಯಮಾಗಮ್ಯ ಯುದ್ಧಕಾಲ ಉಪಸ್ಥಿತೇ।
09062042c ಸರ್ವಲೋಕಸ್ಯ ಸಾಂನಿಧ್ಯೇ ಗ್ರಾಮಾಂಸ್ತ್ವಂ ಪಂಚ ಯಾಚಿತಃ।।
ಯುದ್ಧಕಾಲವು ಬಂದಾಗ ಸ್ವತಃ ನಾನೇ ಬಂದು ಸರ್ವಲೋಕಗಳ ಸಾನ್ನಿಧ್ಯದಲ್ಲಿ ಐದು ಗ್ರಾಮಗಳನ್ನು ನಿನ್ನಿಂದ ಯಾಚಿಸಿದೆ.
09062043a ತ್ವಯಾ ಕಾಲೋಪಸೃಷ್ಟೇನ ಲೋಭತೋ ನಾಪವರ್ಜಿತಾಃ।
09062043c ತವಾಪರಾಧಾನ್ನೃಪತೇ ಸರ್ವಂ ಕ್ಷತ್ರಂ ಕ್ಷಯಂ ಗತಂ।।
ಕಾಲಪ್ರೇರಿತನಾದ ನೀನು ಲೋಭದಿಂದ ಅವುಗಳನ್ನು ಬಿಟ್ಟುಕೊಡಲಿಲ್ಲ. ನೃಪತೇ! ನಿನ್ನ ಅಪರಾಧದಿಂದಾಗಿ ಸರ್ವ ಕ್ಷತ್ರಿಯರೂ ನಾಶಹೊಂದಿದ್ದಾರೆ.
09062044a ಭೀಷ್ಮೇಣ ಸೋಮದತ್ತೇನ ಬಾಹ್ಲೀಕೇನ ಕೃಪೇಣ ಚ।
09062044c ದ್ರೋಣೇನ ಚ ಸಪುತ್ರೇಣ ವಿದುರೇಣ ಚ ಧೀಮತಾ।।
09062044e ಯಾಚಿತಸ್ತ್ವಂ ಶಮಂ ನಿತ್ಯಂ ನ ಚ ತತ್ಕೃತವಾನಸಿ।।
ಭೀಷ್ಮ, ಸೋಮದತ್ತ, ಬಾಹ್ಲೀಕ, ಕೃಪ, ಮಗನೊಂದಿಗೆ ದ್ರೋಣ, ಮತ್ತು ಧೀಮತ ವಿದುರ ಇವರು ನಿತ್ಯವೂ ನಿನ್ನಿಂದ ಶಾಂತಿಯನ್ನು ಯಾಚಿಸುತ್ತಿದ್ದರು. ಅದನ್ನೂ ನೀನು ಮಾಡಲಿಲ್ಲ.
09062045a ಕಾಲೋಪಹತಚಿತ್ತೋ ಹಿ ಸರ್ವೋ ಮುಹ್ಯತಿ ಭಾರತ।
09062045c ಯಥಾ ಮೂಢೋ ಭವಾನ್ಪೂರ್ವಮಸ್ಮಿನ್ನರ್ಥೇ ಸಮುದ್ಯತೇ।।
ಭಾರತ! ಕಾಲದ ಪ್ರಭಾವದಿಂದ ಬುದ್ಧಿಯನ್ನು ಕಳೆದುಕೊಂಡಿರುವವರೆಲ್ಲರೂ ಮೋಹಪರವಶರಾಗುತ್ತಾರೆ. ಹಾಗೆಯೇ ಹಿಂದೆ ಇದರ ಕುರಿತು ನಿರ್ಧರಿಸಬೇಕಾಗಿರುವಾಗ ನೀನು ಮೂಢನಾಗಿದ್ದೆ.
09062046a ಕಿಮನ್ಯತ್ಕಾಲಯೋಗಾದ್ಧಿ ದಿಷ್ಟಮೇವ ಪರಾಯಣಂ।
09062046c ಮಾ ಚ ದೋಷಂ ಮಹಾರಾಜ ಪಾಂಡವೇಷು ನಿವೇಶಯ।।
ಇದು ಕಾಲದ ಪ್ರಭಾವವಲ್ಲದೇ ಮತ್ತೇನು? ಎಲ್ಲವೂ ದೈವದ ಅಧೀನವಾಗಿದೆ. ಮಹಾರಾಜ! ಈ ದೋಷವನ್ನು ಪಾಂಡವರ ಮೇಲೆ ಹೊರಿಸಬೇಡ!
09062047a ಅಲ್ಪೋಽಪ್ಯತಿಕ್ರಮೋ ನಾಸ್ತಿ ಪಾಂಡವಾನಾಂ ಮಹಾತ್ಮನಾಂ।
09062047c ಧರ್ಮತೋ ನ್ಯಾಯತಶ್ಚೈವ ಸ್ನೇಹತಶ್ಚ ಪರಂತಪ।।
ಪರಂತಪ! ಧರ್ಮದಲ್ಲಿಯಾಗಲೀ, ನ್ಯಾಯದಲ್ಲಿಯಾಗಲೀ ಮತ್ತು ಸ್ನೇಹದಲ್ಲಿಯಾಗಲೀ ಮಹಾತ್ಮ ಪಾಂಡವರು ಸ್ವಲ್ಪವೂ ಗಡಿಯನ್ನು ದಾಟಿಲ್ಲ.
09062048a ಏತತ್ಸರ್ವಂ ತು ವಿಜ್ಞಾಯ ಆತ್ಮದೋಷಕೃತಂ ಫಲಂ।
09062048c ಅಸೂಯಾಂ ಪಾಂಡುಪುತ್ರೇಷು ನ ಭವಾನ್ಕರ್ತುಮರ್ಹತಿ।।
ಇವೆಲ್ಲವೂ ನಿನ್ನದೇ ದೋಷಗಳ ಫಲವೆಂದು ತಿಳಿದುಕೊಂಡು ನೀನು ಪಾಂಡುಪುತ್ರರ ಮೇಲೆ ಅಸೂಯೆಪಡಬಾರದು!
09062049a ಕುಲಂ ವಂಶಶ್ಚ ಪಿಂಡಶ್ಚ ಯಚ್ಚ ಪುತ್ರಕೃತಂ ಫಲಂ।
09062049c ಗಾಂಧಾರ್ಯಾಸ್ತವ ಚೈವಾದ್ಯ ಪಾಂಡವೇಷು ಪ್ರತಿಷ್ಠಿತಂ।।
ನಿನಗೆ ಮತ್ತು ಗಾಂಧಾರಿಗೆ ಇಂದು ಪುತ್ರಕೃತ ಫಲಗಳಾದ ಕುಲ, ವಂಶ ಮತ್ತು ಪಿಂಡಗಳು ಪಾಂಡವರಿಂದಲೇ ನಡೆಯಬೇಕಾಗಿದೆ.
09062050a ಏತತ್ಸರ್ವಮನುಧ್ಯಾತ್ವಾ ಆತ್ಮನಶ್ಚ ವ್ಯತಿಕ್ರಮಂ।
09062050c ಶಿವೇನ ಪಾಂಡವಾನ್ಧ್ಯಾಹಿ ನಮಸ್ತೇ ಭರತರ್ಷಭ।।
ಭರತರ್ಷಭ! ಈ ಎಲ್ಲ ವಿಷಯಗಳನ್ನೂ ಸಮಾಲೋಚಿಸಿ, ನಿನ್ನ ತಪ್ಪುಗಳನ್ನು ಮನಗಂಡು ಶುಭಭಾವನೆಗಳಿಂದ ಪಾಂಡವರ ಕುರಿತು ಯೋಚಿಸು. ನಿನಗೆ ನಮಸ್ಕರಿಸುತ್ತೇನೆ.
09062051a ಜಾನಾಸಿ ಚ ಮಹಾಬಾಹೋ ಧರ್ಮರಾಜಸ್ಯ ಯಾ ತ್ವಯಿ।
09062051c ಭಕ್ತಿರ್ಭರತಶಾರ್ದೂಲ ಸ್ನೇಹಶ್ಚಾಪಿ ಸ್ವಭಾವತಃ।।
ಮಹಾಬಾಹೋ! ಭರತಶಾರ್ದೂಲ! ಧರ್ಮರಾಜನಲ್ಲಿ ನಿನ್ನ ಮೇಲೆ ಸ್ವಭಾವತಃ ಭಕ್ತಿ ಮತ್ತು ಸ್ನೇಹಭಾವಗಳೇ ಇವೆ ಎನ್ನುವುದು ನಿನಗೆ ತಿಳಿದೇ ಇದೆ.
09062052a ಏತಚ್ಚ ಕದನಂ ಕೃತ್ವಾ ಶತ್ರೂಣಾಮಪಕಾರಿಣಾಂ।
09062052c ದಹ್ಯತೇ ಸ್ಮ ದಿವಾರಾತ್ರಂ ನ ಚ ಶರ್ಮಾಧಿಗಚ್ಚತಿ।।
ತನಗೆ ಅಪಕಾರಗಳನ್ನೆಸಗಿದ ಶತ್ರುಗಳೊಂದಿಗೆ ಕದನವನ್ನಾಡಿ ಹಗಲೂ ರಾತ್ರಿ ಅವನು ಸುಡುತ್ತಿದ್ದಾನೆ. ಅವನಿಗೆ ಸುಖವೆಂಬುದೇ ಇಲ್ಲವಾಗಿದೆ.
09062053a ತ್ವಾಂ ಚೈವ ನರಶಾರ್ದೂಲ ಗಾಂಧಾರೀಂ ಚ ಯಶಸ್ವಿನೀಂ।
09062053c ಸ ಶೋಚನ್ಭರತಶ್ರೇಷ್ಠ ನ ಶಾಂತಿಮಧಿಗಚ್ಚತಿ।।
ಭರತಶ್ರೇಷ್ಠ! ನರಶಾರ್ದೂಲ! ನಿನ್ನ ಮತ್ತು ಯಶಸ್ವಿನೀ ಗಾಂಧಾರಿಯ ಕುರಿತೂ ಚಿಂತಿಸುತ್ತಿರುವ ಅವನಿಗೆ ಶಾಂತಿಯೆಂಬುದೇ ಇಲ್ಲವಾಗಿದೆ.
09062054a ಹ್ರಿಯಾ ಚ ಪರಯಾವಿಷ್ಟೋ ಭವಂತಂ ನಾಧಿಗಚ್ಚತಿ।
09062054c ಪುತ್ರಶೋಕಾಭಿಸಂತಪ್ತಂ ಬುದ್ಧಿವ್ಯಾಕುಲಿತೇಂದ್ರಿಯಂ।।
ಪುತ್ರಶೋಕದಿಂದ ಸಂತಪ್ತರಾಗಿರುವ, ಮತ್ತು ಬುದ್ಧಿ-ಇಂದ್ರಿಯಗಳು ವ್ಯಾಕುಲಗೊಂಡಿರುವ ನಿಮ್ಮನ್ನು ಸಂದರ್ಶಿಸಲು ಅತ್ಯಂತ ನಾಚಿಕೊಂಡ ಅವನು ಇಲ್ಲಿಗೆ ಈಗ ಬಂದಿರುವುದಿಲ್ಲ.”
09062055a ಏವಮುಕ್ತ್ವಾ ಮಹಾರಾಜ ಧೃತರಾಷ್ಟ್ರಂ ಯದೂತ್ತಮಃ।
09062055c ಉವಾಚ ಪರಮಂ ವಾಕ್ಯಂ ಗಾಂಧಾರೀಂ ಶೋಕಕರ್ಶಿತಾಂ।।
ಮಹಾರಾಜ! ಧೃತರಾಷ್ಟ್ರನಿಗೆ ಹೀಗೆ ಹೇಳಿ ಯದೂತ್ತಮನು ಶೋಕಕರ್ಶಿತ ಗಾಂಧಾರಿಗೆ ಈ ಪರಮ ವಾಕ್ಯಗಳನ್ನಾಡಿದನು:
09062056a ಸೌಬಲೇಯಿ ನಿಬೋಧ ತ್ವಂ ಯತ್ತ್ವಾಂ ವಕ್ಷ್ಯಾಮಿ ಸುವ್ರತೇ।
09062056c ತ್ವತ್ಸಮಾ ನಾಸ್ತಿ ಲೋಕೇಽಸ್ಮಿನ್ನದ್ಯ ಸೀಮಂತಿನೀ ಶುಭೇ।।
“ಸೌಬಲೇಯಿ! ಸುವ್ರತೇ! ಸೀಮಂತಿನೀ! ಶುಭೇ! ನಾನು ಏನನ್ನು ಹೇಳಲಿರುವೆನೋ ಅದನ್ನು ಮನಸ್ಸಿಟ್ಟು ಕೇಳು! ಇಂದು ಈ ಲೋಕದಲ್ಲಿ ನಿನ್ನ ಸಮನಾಗಿರುವವರು ಯಾರೂ ಇಲ್ಲ.
09062057a ಜಾನಾಮಿ ಚ ಯಥಾ ರಾಜ್ಞಿ ಸಭಾಯಾಂ ಮಮ ಸಂನಿಧೌ।
09062057c ಧರ್ಮಾರ್ಥಸಹಿತಂ ವಾಕ್ಯಮುಭಯೋಃ ಪಕ್ಷಯೋರ್ಹಿತಂ।।
09062057e ಉಕ್ತವತ್ಯಸಿ ಕಲ್ಯಾಣಿ ನ ಚ ತೇ ತನಯೈಃ ಶ್ರುತಂ।।
ರಾಣಿ! ಕಲ್ಯಾಣೀ! ನನ್ನ ಸನ್ನಿಧಿಯಲ್ಲಿ ಸಭೆಯಲ್ಲಿ ಎರಡೂ ಪಕ್ಷಗಳಿಗೆ ಹಿತಕರವಾದ ಧರ್ಮಾರ್ಥಸಹಿತ ಮಾತುಗಳನ್ನು ನೀನು ಆಡಿದ್ದುದು ಮತ್ತು ಅದನ್ನು ನಿನ್ನ ಮಕ್ಕಳು ಕೇಳದೇ ಇದ್ದುದು ನನಗೆ ತಿಳಿದಿದೆ.
09062058a ದುರ್ಯೋಧನಸ್ತ್ವಯಾ ಚೋಕ್ತೋ ಜಯಾರ್ಥೀ ಪರುಷಂ ವಚಃ।
09062058c ಶೃಣು ಮೂಢ ವಚೋ ಮಹ್ಯಂ ಯತೋ ಧರ್ಮಸ್ತತೋ ಜಯಃ।।
ಆಗ ಜಯಾರ್ಥಿಯಾದ ದುರ್ಯೋಧನನಿಗೆ ನೀನು ಕಠಿಣವಾದ ಈ ಮಾತನ್ನಾಡಿದ್ದೆ: “ಮೂಢ! ನನ್ನ ಮಾತನ್ನು ಕೇಳು! ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ!”
09062059a ತದಿದಂ ಸಮನುಪ್ರಾಪ್ತಂ ತವ ವಾಕ್ಯಂ ನೃಪಾತ್ಮಜೇ।
09062059c ಏವಂ ವಿದಿತ್ವಾ ಕಲ್ಯಾಣಿ ಮಾ ಸ್ಮ ಶೋಕೇ ಮನಃ ಕೃಥಾಃ।।
09062059e ಪಾಂಡವಾನಾಂ ವಿನಾಶಾಯ ಮಾ ತೇ ಬುದ್ಧಿಃ ಕದಾ ಚನ।।
ನೃಪಾತ್ಮಜೇ! ಕಲ್ಯಾಣೀ! ಇಗೋ! ನೀನು ಹೇಳಿದಂತೆಯೇ ನಡೆದುಹೋಯಿತು! ಇದನ್ನು ತಿಳಿದು ನೀನು ಮನಸ್ಸಿಗೆ ಶೋಕವನ್ನು ಹಚ್ಚಿಸಿಕೊಳ್ಳಬೇಡ! ಪಾಂಡವರ ವಿನಾಶಕ್ಕಾಗಿ ಎಂದೂ ನಿನ್ನ ಬುದ್ಧಿಯನ್ನು ತೊಡಗಿಸಬೇಡ!
09062060a ಶಕ್ತಾ ಚಾಸಿ ಮಹಾಭಾಗೇ ಪೃಥಿವೀಂ ಸಚರಾಚರಾಂ।
09062060c ಚಕ್ಷುಷಾ ಕ್ರೋಧದೀಪ್ತೇನ ನಿರ್ದಗ್ಧುಂ ತಪಸೋ ಬಲಾತ್।।
ಮಹಾಭಾಗೇ! ತಪಸ್ಸಿನ ಬಲದಿಂದ ನೀನು ಕ್ರೋಧದಿಂದ ಉರಿಯುವ ದೃಷ್ಟಿಯಿಂದ ಸಚರಾಚರ ಭೂಮಿಯನ್ನೇ ಭಸ್ಮಮಾಡಲು ಶಕ್ತಳಾಗಿರುವೆ!”
09062061a ವಾಸುದೇವವಚಃ ಶ್ರುತ್ವಾ ಗಾಂಧಾರೀ ವಾಕ್ಯಮಬ್ರವೀತ್।
09062061c ಏವಮೇತನ್ಮಹಾಬಾಹೋ ಯಥಾ ವದಸಿ ಕೇಶವ।।
ವಾಸುದೇವನ ಮಾತನ್ನು ಕೇಳಿ ಗಾಂಧಾರಿಯು ಹೀಗೆ ಹೇಳಿದಳು: “ಮಹಾಬಾಹೋ! ಕೇಶವ! ನೀನು ಹೇಳಿದುದು ಸರಿ!
09062062a ಆಧಿಭಿರ್ದಹ್ಯಮಾನಾಯಾ ಮತಿಃ ಸಂಚಲಿತಾ ಮಮ।
09062062c ಸಾ ಮೇ ವ್ಯವಸ್ಥಿತಾ ಶ್ರುತ್ವಾ ತವ ವಾಕ್ಯಂ ಜನಾರ್ದನ।।
ಜನಾರ್ದನ! ಸುಟ್ಟುಬಿಡುವ ಕಡೆಗೇ ನನ್ನ ಬುದ್ಧಿಯು ಹರಿಯುತ್ತಿತ್ತು. ನಿನ್ನ ಮಾತನ್ನು ಕೇಳಿ ಅದು ಸ್ಥಿರಗೊಂಡಿತು.
09062063a ರಾಜ್ಞಸ್ತ್ವಂಧಸ್ಯ ವೃದ್ಧಸ್ಯ ಹತಪುತ್ರಸ್ಯ ಕೇಶವ।
09062063c ತ್ವಂ ಗತಿಃ ಸಹ ತೈರ್ವೀರೈಃ ಪಾಂಡವೈರ್ದ್ವಿಪದಾಂ ವರ।।
ಕೇಶವ! ಮನುಷ್ಯ ಶ್ರೇಷ್ಠ! ಪುತ್ರರನ್ನು ಕಳೆದುಕೊಂಡ ಈ ಅಂಧವೃದ್ಧ ರಾಜನಿಗೆ ಆ ವೀರಪಾಂಡವರೊಂದಿಗೆ ನೀನೇ ಗತಿಯಾಗು!”
09062064a ಏತಾವದುಕ್ತ್ವಾ ವಚನಂ ಮುಖಂ ಪ್ರಚ್ಚಾದ್ಯ ವಾಸಸಾ।
09062064c ಪುತ್ರಶೋಕಾಭಿಸಂತಪ್ತಾ ಗಾಂಧಾರೀ ಪ್ರರುರೋದ ಹ।।
ಹೀಗೆ ಹೇಳಿ ಸೀರೆಯ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡು ಪುತ್ರಶೋಕದಿಂದ ಸಂತಪ್ತಳಾಗಿದ್ದ ಗಾಂಧಾರಿಯು ಜೋರಾಗಿ ರೋದಿಸಿದಳು.
09062065a ತತ ಏನಾಂ ಮಹಾಬಾಹುಃ ಕೇಶವಃ ಶೋಕಕರ್ಶಿತಾಂ।
09062065c ಹೇತುಕಾರಣಸಮ್ಯುಕ್ತೈರ್ವಾಕ್ಯೈರಾಶ್ವಾಸಯತ್ಪ್ರಭುಃ।।
ಹೀಗೆ ಶೋಕಕರ್ಶಿತಳಾದ ಅವಳನ್ನು ಪ್ರಭು ಮಹಾಬಾಹು ಕೇಶವನು ಯುಕ್ತಿಯುಕ್ತ ಮಾತುಗಳಿಂದ ಸಮಾಧಾನಪಡಿಸಿದನು.
09062066a ಸಮಾಶ್ವಾಸ್ಯ ಚ ಗಾಂಧಾರೀಂ ಧೃತರಾಷ್ಟ್ರಂ ಚ ಮಾಧವಃ।
09062066c ದ್ರೌಣೇಃ ಸಂಕಲ್ಪಿತಂ ಭಾವಮನ್ವಬುಧ್ಯತ ಕೇಶವಃ।।
ಗಾಂಧಾರೀ ಮತ್ತು ಧೃತರಾಷ್ಟ್ರರನ್ನು ಸಮಾಧಾನಗೊಳಿಸುತ್ತಿದ್ದ ಮಾಧವ ಕೇಶವನು ದ್ರೌಣಿ ಅಶ್ವತ್ಥಾಮನ ಸಂಕಲ್ಪಭಾವವನ್ನು ಅರಿತುಕೊಂಡನು.
09062067a ತತಸ್ತ್ವರಿತ ಉತ್ಥಾಯ ಪಾದೌ ಮೂರ್ಧ್ನಾ ಪ್ರಣಮ್ಯ ಚ।
09062067c ದ್ವೈಪಾಯನಸ್ಯ ರಾಜೇಂದ್ರ ತತಃ ಕೌರವಮಬ್ರವೀತ್।।
ರಾಜೇಂದ್ರ! ಅವನು ಕೂಡಲೇ ಮೇಲೆದ್ದು ದ್ವೈಪಾಯನನ ಪಾದಗಳಿಗೆ ತಲೆಬಾಗಿ ನಮಸ್ಕರಿಸಿ ರಾಜೇಂದ್ರ ಕೌರವನಿಗೆ ಹೀಗೆಂದನು:
09062068a ಆಪೃಚ್ಚೇ ತ್ವಾಂ ಕುರುಶ್ರೇಷ್ಠ ಮಾ ಚ ಶೋಕೇ ಮನಃ ಕೃಥಾಃ।
09062068c ದ್ರೌಣೇಃ ಪಾಪೋಽಸ್ತ್ಯಭಿಪ್ರಾಯಸ್ತೇನಾಸ್ಮಿ ಸಹಸೋತ್ಥಿತಃ।।
09062068e ಪಾಂಡವಾನಾಂ ವಧೇ ರಾತ್ರೌ ಬುದ್ಧಿಸ್ತೇನ ಪ್ರದರ್ಶಿತಾ।।
“ಕುರುಶ್ರೇಷ್ಠ! ನಿನ್ನ ಅನುಮತಿಯನ್ನು ಕೇಳುತ್ತೇನೆ. ಮನಸ್ಸನ್ನು ಶೋಕದಲ್ಲಿ ತೊಡಗಿಸಿಕೊಳ್ಳಬೇಡ. ದ್ರೌಣಿಯಲ್ಲಿ ಪಾಪಕಾರೀ ಅಭಿಪ್ರಾಯವು ಹುಟ್ಟಿಕೊಂಡಿರುವುದರಿಂದ ನಾನು ಬೇಗನೆ ಮೇಲೆದ್ದು ಹೊರಟಿದ್ದೇನೆ. ರಾತ್ರಿಯಲ್ಲಿ ಪಾಂಡವರನ್ನು ವಧಿಸುವ ಬುದ್ಧಿಯು ಅವನಲ್ಲಿದೆ ಎಂದು ನನಗೆ ಕಾಣುತ್ತಿದೆ.”
09062069a ಏತಚ್ಚ್ರುತ್ವಾ ತು ವಚನಂ ಗಾಂಧಾರ್ಯಾ ಸಹಿತೋಽಬ್ರವೀತ್।
09062069c ಧೃತರಾಷ್ಟ್ರೋ ಮಹಾಬಾಹುಃ ಕೇಶವಂ ಕೇಶಿಸೂದನಂ।।
ಆ ಮಾತನ್ನು ಕೇಳಿದ ಗಾಂಧಾರೀ ಸಹಿತನಾದ ಮಹಾಬಾಹು ಧೃತರಾಷ್ಟ್ರನು ಕೇಶಿಸೂದನ ಕೇಶವನಿಗೆ ಹೇಳಿದನು:
09062070a ಶೀಘ್ರಂ ಗಚ್ಚ ಮಹಾಬಾಹೋ ಪಾಂಡವಾನ್ಪರಿಪಾಲಯ।
09062070c ಭೂಯಸ್ತ್ವಯಾ ಸಮೇಷ್ಯಾಮಿ ಕ್ಷಿಪ್ರಮೇವ ಜನಾರ್ದನ।।
09062070e ಪ್ರಾಯಾತ್ತತಸ್ತು ತ್ವರಿತೋ ದಾರುಕೇಣ ಸಹಾಚ್ಯುತಃ।।
“ಶೀಘ್ರವಾಗಿ ಹೋಗು! ಪಾಂಡವರನ್ನು ಪರಿಪಾಲಿಸು! ಜನಾರ್ದನ! ಬೇಗನೆ ನಾನು ನಿನ್ನೊಂದಿಗೆ ಮತ್ತೆ ಭೇಟಿಯಾಗುತ್ತೇನೆ. ಅಚ್ಯುತ! ದಾರುಕನೊಡನೆ ತ್ವರೆಮಾಡಿ ಅಲ್ಲಿಗೆ ಪ್ರಯಾಣಮಾಡು!”
09062071a ವಾಸುದೇವೇ ಗತೇ ರಾಜನ್ಧೃತರಾಷ್ಟ್ರಂ ಜನೇಶ್ವರಂ।
09062071c ಆಶ್ವಾಸಯದಮೇಯಾತ್ಮಾ ವ್ಯಾಸೋ ಲೋಕನಮಸ್ಕೃತಃ।।
ರಾಜನ್! ವಾಸುದೇವನು ಹೊರಟುಹೋದ ನಂತರ ಅಮೇಯಾತ್ಮ ಲೋಕನಮಸ್ಕೃತ ವ್ಯಾಸನು ಜನೇಶ್ವರ ಧೃತರಾಷ್ಟ್ರನನ್ನು ಸಮಾಧಾನಗೊಳಿಸತೊಡಗಿದನು.
09062072a ವಾಸುದೇವೋಽಪಿ ಧರ್ಮಾತ್ಮಾ ಕೃತಕೃತ್ಯೋ ಜಗಾಮ ಹ।
09062072c ಶಿಬಿರಂ ಹಾಸ್ತಿನಪುರಾದ್ದಿದೃಕ್ಷುಃ ಪಾಂಡವಾನ್ನೃಪ।।
ನೃಪ! ಕೃತಕೃತ್ಯನಾದ ಧರ್ಮಾತ್ಮ ವಾಸುದೇವನೂ ಕೂಡ ಪಾಂಡವರನ್ನು ರಕ್ಷಿಸಲೋಸುಗ ಹಸ್ತಿನಾಪುರದಿಂದ ಶಿಬಿರದ ಕಡೆ ಪ್ರಯಾಣಿಸಿದನು.
09062073a ಆಗಮ್ಯ ಶಿಬಿರಂ ರಾತ್ರೌ ಸೋಽಭ್ಯಗಚ್ಚತ ಪಾಂಡವಾನ್।
09062073c ತಚ್ಚ ತೇಭ್ಯಃ ಸಮಾಖ್ಯಾಯ ಸಹಿತಸ್ತೈಃ ಸಮಾವಿಶತ್।।
ರಾತ್ರಿಯಲ್ಲಿ ಶಿಬಿರವನ್ನು ತಲುಪಿ ಪಾಂಡವರನ್ನು ಕಂಡು ಅವರಿಗೆ ನಡೆದುದೆಲ್ಲವನ್ನೂ ಹೇಳಿ ಅವರೊಂದಿಗೆ ಸಾವಧಾನದಿಂದಿದ್ದನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಧೃತರಾಷ್ಟ್ರಗಾಂಧಾರೀಸಮಾಶ್ವಾಸನೇ ದ್ವಿಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಧೃತರಾಷ್ಟ್ರಗಾಂಧಾರೀಸಮಾಶ್ವಾಸನ ಎನ್ನುವ ಅರವತ್ತೆರಡನೇ ಅಧ್ಯಾಯವು.