061 ವಾಸುದೇವಪ್ರೇಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಗದಾಯುದ್ಧ ಪರ್ವ

ಅಧ್ಯಾಯ 61

ಸಾರ

ಪಾಂಡವರೈವರು, ಸಾತ್ಯಕಿ, ಕೃಷ್ಣ ಮತ್ತು ಯುಯುತ್ಸು ಇವರು ಕೌರವ ಶಿಬಿರವನನ್ನು ತಲುಪಲು ಅರ್ಜುನ-ಕೃಷ್ಣರು ಕೆಳಗಿಳಿಯುತ್ತಲೇ ಅರ್ಜುನನ ರಥವು ಸುಟ್ಟು ಭಸ್ಮವಾದುದು; ಕೃಷ್ಣನು ಅದಕ್ಕೆ ಕಾರಣವನ್ನು ತಿಳಿಸುವುದು (1-19). ವಾಸುದೇವ-ಯುಧಿಷ್ಠಿರ ಸಂವಾದ (20-30). ಶಿಬಿರದಲ್ಲಿದ್ದ ಕೌರವರ ಸಂಪತ್ತೆಲ್ಲವನ್ನೂ ತಮ್ಮದಾಗಿಸಿಕೊಂಡು ಯುಧಿಷ್ಠಿರಾದಿಗಳು ಕೃಷ್ಣನ ಸೂಚನೆಯಂತೆ ಶಿಬಿರದ ಹೊರಗೆ ಓಘವತೀ ತೀರದಲ್ಲಿ ರಾತ್ರಿ ತಂಗಿದುದು (31-37). ಕೃಷ್ಣನು ಗಾಂಧಾರಿಯನ್ನು ಸಂತವಿಸಲು ಅವಳಲ್ಲಿಗೆ ಹೋದುದು (38-40).

09061001 ಸಂಜಯ ಉವಾಚ 09061001a ತತಸ್ತೇ ಪ್ರಯಯುಃ ಸರ್ವೇ ನಿವಾಸಾಯ ಮಹೀಕ್ಷಿತಃ।
09061001c ಶಂಖಾನ್ಪ್ರಧ್ಮಾಪಯಂತೋ ವೈ ಹೃಷ್ಟಾಃ ಪರಿಘಬಾಹವಃ।।

ಸಂಜಯನು ಹೇಳಿದನು: “ಅನಂತರ ಪರಿಘಾಯುಧಗಳಂತಹ ತೋಳುಗಳುಳ್ಳ ಮಹೀಕ್ಷಿತರು ಎಲ್ಲರೂ ಪ್ರಹೃಷ್ಟರಾಗಿ ಶಂಖಗಳನ್ನು ಊದುತ್ತಾ ನಿವಾಸಗಳಿಗೆ ತೆರಳಿದರು.

09061002a ಪಾಂಡವಾನ್ಗಚ್ಚತಶ್ಚಾಪಿ ಶಿಬಿರಂ ನೋ ವಿಶಾಂ ಪತೇ।
09061002c ಮಹೇಷ್ವಾಸೋಽನ್ವಗಾತ್ಪಶ್ಚಾದ್ಯುಯುತ್ಸುಃ ಸಾತ್ಯಕಿಸ್ತಥಾ।।

ವಿಶಾಂಪತೇ! ನಮ್ಮ ಶಿಬಿರದ ಕಡೆ ಬರುತ್ತಿದ್ದ ಪಾಂಡವರನ್ನು ಮಹೇಷ್ವಾಸ ಯುಯುತ್ಸು ಮತ್ತು ಸಾತ್ಯಕಿಯರು ಹಿಂಬಾಲಿಸಿ ಬಂದರು.

09061003a ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದೇಯಾಶ್ಚ ಸರ್ವಶಃ।
09061003c ಸರ್ವೇ ಚಾನ್ಯೇ ಮಹೇಷ್ವಾಸಾ ಯಯುಃ ಸ್ವಶಿಬಿರಾಣ್ಯುತ।।

ಧೃಷ್ಟದ್ಯುಮ್ನ, ಶಿಖಂಡೀ, ಸರ್ವ ದ್ರೌಪದೇಯರು ಮತ್ತು ಅನ್ಯ ಮಹೇಷ್ವಾಸರೆಲ್ಲರೂ ತಮ್ಮ ಶಿಬಿರಗಳಿಗೆ ತೆರಳಿದರು.

09061004a ತತಸ್ತೇ ಪ್ರಾವಿಶನ್ಪಾರ್ಥಾ ಹತತ್ವಿಟ್ಕಂ ಹತೇಶ್ವರಂ।
09061004c ದುರ್ಯೋಧನಸ್ಯ ಶಿಬಿರಂ ರಂಗವದ್ವಿಸೃತೇ ಜನೇ।।

ನಾಟಕವು ಮುಗಿದನಂತರ ಜನರೆಲ್ಲರೂ ಹೊರಟುಹೋಗಿರುವ ರಂಗಮಂಟಪದಂತಿದ್ದ, ಸ್ವಾಮಿಯನ್ನು ಕಳೆದುಕೊಂಡ ದುರ್ಯೋಧನನ ಶಿಬಿರವನ್ನು ಪಾರ್ಥರು ಪ್ರವೇಶಿಸಿದರು.

09061005a ಗತೋತ್ಸವಂ ಪುರಮಿವ ಹೃತನಾಗಮಿವ ಹ್ರದಂ।
09061005c ಸ್ತ್ರೀವರ್ಷವರಭೂಯಿಷ್ಠಂ ವೃದ್ಧಾಮಾತ್ಯೈರಧಿಷ್ಠಿತಂ।।

ಉತ್ಸವವು ಮುಗಿದ ಪಟ್ಟಣದಂತೆಯೂ, ಸಲಗವಿಲ್ಲದ ಸರೋವರದಂತೆಯೂ ಆ ಶಿಬಿರವು ಸ್ತ್ರೀಯರು, ನಪುಂಸಕರು ಮತ್ತು ವೃದ್ಧ‌ ಅಮಾತ್ಯರಿಂದ ಕೂಡಿತ್ತು.

09061006a ತತ್ರೈತಾನ್ಪರ್ಯುಪಾತಿಷ್ಠನ್ದುರ್ಯೋಧನಪುರಃಸರಾಃ।
09061006c ಕೃತಾಂಜಲಿಪುಟಾ ರಾಜನ್ಕಾಷಾಯಮಲಿನಾಂಬರಾಃ।।

ರಾಜನ್! ಮೊದಲು ದುರ್ಯೋಧನನ ಎದಿರು ಹೋಗುತ್ತಿದ್ದ ಸೇವಕರು ಈಗ ಮಲಿನ ಕಾಷಾಯವಸ್ತ್ರಗಳನ್ನುಟ್ಟು ಕೈಮುಗಿದು ಅಲ್ಲಿಗೆ ಬರುತ್ತಿದ್ದ ಪಾಂಡವರನ್ನು ಎದುರಿಸಿದರು.

09061007a ಶಿಬಿರಂ ಸಮನುಪ್ರಾಪ್ಯ ಕುರುರಾಜಸ್ಯ ಪಾಂಡವಾಃ।
09061007c ಅವತೇರುರ್ಮಹಾರಾಜ ರಥೇಭ್ಯೋ ರಥಸತ್ತಮಾಃ।।

ಮಹಾರಾಜ! ಕುರುರಾಜನ ಶಿಬಿರವನ್ನು ತಲುಪಿ ರಥಸತ್ತಮ ಪಾಂಡವರು ರಥಗಳಿಂದ ಕೆಳಗಿಳಿದರು.

09061008a ತತೋ ಗಾಂಡೀವಧನ್ವಾನಮಭ್ಯಭಾಷತ ಕೇಶವಃ।
09061008c ಸ್ಥಿತಃ ಪ್ರಿಯಹಿತೇ ನಿತ್ಯಮತೀವ ಭರತರ್ಷಭ।।

ಭರತರ್ಷಭ! ಆಗ ಕೇಶವನು ನಿತ್ಯವೂ ಯಾರ ಪ್ರಿಯ ಮತ್ತು ಹಿತಗಳಲ್ಲಿ ನಿರತನಾಗಿದ್ದನೋ ಆ ಗಾಂಡೀವಧನ್ವಿಗೆ ನುಡಿದನು:

09061009a ಅವರೋಪಯ ಗಾಂಡೀವಮಕ್ಷಯ್ಯೌ ಚ ಮಹೇಷುಧೀ।
09061009c ಅಥಾಹಮವರೋಕ್ಷ್ಯಾಮಿ ಪಶ್ಚಾದ್ಭರತಸತ್ತಮ।।
09061010a ಸ್ವಯಂ ಚೈವಾವರೋಹ ತ್ವಮೇತಚ್ಚ್ರೇಯಸ್ತವಾನಘ।

“ಭರತಸತ್ತಮ! ನೀನು ಮೊದಲು ಗಾಂಡೀವವನ್ನೂ ಅಕ್ಷಯ ತೂಣೀರಗಳನ್ನೂ ಕೆಳಗಿಳಿಸು. ನಂತರ ನೀನೂ ಇಳಿ. ನಿನ್ನ ನಂತರ ನಾನು ಕೆಳಗಿಳಿಯುತ್ತೇನೆ. ಅನಘ! ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ.”

09061010c ತಚ್ಚಾಕರೋತ್ತಥಾ ವೀರಃ ಪಾಂಡುಪುತ್ರೋ ಧನಂಜಯಃ।।
09061011a ಅಥ ಪಶ್ಚಾತ್ತತಃ ಕೃಷ್ಣೋ ರಶ್ಮೀನುತ್ಸೃಜ್ಯ ವಾಜಿನಾಂ।
09061011c ಅವಾರೋಹತ ಮೇಧಾವೀ ರಥಾದ್ಗಾಂಡೀವಧನ್ವನಃ।।

ವೀರ ಪಾಂಡುಪುತ್ರ ಧನಂಜಯನು ಅದರಂತೆಯೇ ಮಾಡಿದನು. ಅನಂತರ ಮೇಧಾವೀ ಕೃಷ್ಣನು ಕುದುರೆಗಳ ಕಡಿವಾಣಗಳನ್ನು ಬಿಸುಟು ಗಾಂಡೀವಧನ್ವಿಯ ರಥದಿಂದ ಕೆಳಗಿಳಿದನು.

09061012a ಅಥಾವತೀರ್ಣೇ ಭೂತಾನಾಮೀಶ್ವರೇ ಸುಮಹಾತ್ಮನಿ।
09061012c ಕಪಿರಂತರ್ದಧೇ ದಿವ್ಯೋ ಧ್ವಜೋ ಗಾಂಡೀವಧನ್ವನಃ।।

ಆ ಸುಮಹಾತ್ಮ ಭೂತಗಳ ಈಶ್ವರನು ಕೆಳಗಿಳಿಯುತ್ತಲೇ ಗಾಂಡೀವಧನ್ವಿಯ ದಿವ್ಯ ಧ್ವಜದಿಂದ ಕಪಿಯು ಅಂತರ್ಧಾನನಾದನು.

09061013a ಸ ದಗ್ಧೋ ದ್ರೋಣಕರ್ಣಾಭ್ಯಾಂ ದಿವ್ಯೈರಸ್ತ್ರೈರ್ಮಹಾರಥಃ।
09061013c ಅಥ ದೀಪ್ತೋಽಗ್ನಿನಾ ಹ್ಯಾಶು ಪ್ರಜಜ್ವಾಲ ಮಹೀಪತೇ।।

ಮಹೀಪತೇ! ದ್ರೋಣ-ಕರ್ಣಾದಿಗಳ ದಿವ್ಯಾಸ್ತ್ರಗಳಿಂದ ದಹಿಸಲ್ಪಟ್ಟಿದ್ದ ಆ ಮಹಾರಥವು ಈಗ ಅಗ್ನಿಯಿಂದ ಪ್ರತೀಪ್ತವಾಗಿ ಪ್ರಜ್ವಲಿಸಿ ಉರಿಯತೊಡಗಿತು.

09061014a ಸೋಪಾಸಂಘಃ ಸರಶ್ಮಿಶ್ಚ ಸಾಶ್ವಃ ಸಯುಗಬಂಧುರಃ।
09061014c ಭಸ್ಮೀಭೂತೋಽಪತದ್ಭೂಮೌ ರಥೋ ಗಾಂಡೀವಧನ್ವನಃ।।

ಗಾಂಡೀವಧನ್ವಿಯ ಆ ರಥವು ಬತ್ತಳಿಕೆ, ಕಡಿವಾಣ, ಕುದುರೆಗಳು, ನೊಗ, ಮೂಕಿಗಳ ಸಮೇತವಾಗಿ ಭಸ್ಮೀಭೂತವಾಗಿ ಭೂಮಿಯ ಮೇಲೆ ಬಿದ್ದಿತು.

09061015a ತಂ ತಥಾ ಭಸ್ಮಭೂತಂ ತು ದೃಷ್ಟ್ವಾ ಪಾಂಡುಸುತಾಃ ಪ್ರಭೋ।
09061015c ಅಭವನ್ವಿಸ್ಮಿತಾ ರಾಜನ್ನರ್ಜುನಶ್ಚೇದಮಬ್ರವೀತ್।।
09061016a ಕೃತಾಂಜಲಿಃ ಸಪ್ರಣಯಂ ಪ್ರಣಿಪತ್ಯಾಭಿವಾದ್ಯ ಚ।

ರಾಜನ್! ಪ್ರಭೋ! ಹೀಗೆ ಅದು ಭಸ್ಮೀಭೂತವಾದುದನ್ನು ನೋಡಿ ಪಾಂಡುಸುತರು ವಿಸ್ಮಿತರಾದರು. ಅರ್ಜುನನು ಕೈಮುಗಿದು ಪ್ರಣಯಪೂರ್ವಕವಾಗಿ ಕೃಷ್ಣನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಹೇಳಿದನು:

09061016c ಗೋವಿಂದ ಕಸ್ಮಾದ್ಭಗವನ್ರಥೋ ದಗ್ಧೋಽಯಮಗ್ನಿನಾ।।
09061017a ಕಿಮೇತನ್ಮಹದಾಶ್ಚರ್ಯಮಭವದ್ಯದುನಂದನ।
09061017c ತನ್ಮೇ ಬ್ರೂಹಿ ಮಹಾಬಾಹೋ ಶ್ರೋತವ್ಯಂ ಯದಿ ಮನ್ಯಸೇ।।

“ಗೋವಿಂದ! ಭಗವನ್! ಈ ರಥವು ಹೇಗೆ ಬೆಂಕಿಹತ್ತಿ ಭಸ್ಮವಾಗಿಹೋಯಿತು? ಯದುನಂದನ! ಈ ಮಹದಾಶ್ಚರ್ಯವು ಹೇಗೆ ನಡೆಯಿತು? ಮಹಾಬಾಹೋ! ಇದನ್ನು ನಾನು ಕೇಳಬಹುದೆಂದು ನಿನಗನ್ನಿಸಿದರೆ ನನಗೆ ಹೇಳು!”

09061018 ವಾಸುದೇವ ಉವಾಚ 09061018a ಅಸ್ತ್ರೈರ್ಬಹುವಿಧೈರ್ದಗ್ಧಃ ಪೂರ್ವಮೇವಾಯಮರ್ಜುನ।
09061018c ಮದಧಿಷ್ಠಿತತ್ವಾತ್ಸಮರೇ ನ ವಿಶೀರ್ಣಃ ಪರಂತಪ।।

ವಾಸುದೇವನು ಹೇಳಿದನು: “ಅರ್ಜುನ! ಪರಂತಪ! ಇದರ ಮೊದಲೇ ಇದು ಅನೇಕ ವಿಧದ ಅಸ್ತ್ರಗಳಿಂದ ಸುಡಲ್ಪಟ್ಟಿತ್ತು. ಆದರೆ ಸಮರದಲ್ಲಿ ನಾನು ಕುಳಿತುಕೊಂಡಿದ್ದುದರಿಂದ ಅದು ಭಸ್ಮವಾಗಿರಲಿಲ್ಲ.

09061019a ಇದಾನೀಂ ತು ವಿಶೀರ್ಣೋಽಯಂ ದಗ್ಧೋ ಬ್ರಹ್ಮಾಸ್ತ್ರತೇಜಸಾ।
09061019c ಮಯಾ ವಿಮುಕ್ತಃ ಕೌಂತೇಯ ತ್ವಯ್ಯದ್ಯ ಕೃತಕರ್ಮಣಿ।।

ಕೌಂತೇಯ! ನೀನು ಕೃತಕೃತ್ಯನಾದುದರಿಂದ ಇಂದು ಇದನ್ನು ನಾನು ವಿಮುಕ್ತಗೊಳಿಸಿದ್ದೇನೆ. ಬ್ರಹ್ಮಾಸ್ತ್ರದಿಂದ ಮೊದಲೇ ಸುಟ್ಟುಹೋಗಿದ್ದ ಇದು ಈಗ ಭಸ್ಮೀಭೂತವಾಯಿತು!””

09061020 ಸಂಜಯ ಉವಾಚ 09061020a ಈಷದುತ್ಸ್ಮಯಮಾನಶ್ಚ ಭಗವಾನ್ಕೇಶವೋಽರಿಹಾ।
09061020c ಪರಿಷ್ವಜ್ಯ ಚ ರಾಜಾನಂ ಯುಧಿಷ್ಠಿರಮಭಾಷತ।।

ಸಂಜಯನು ಹೇಳಿದನು: “ಬಳಿಕ ಭಗವಾನ್ ಅರಿಹಂತಕ ಕೇಶವನು ಮುಗುಳ್ನಗುತ್ತಾ ರಾಜ ಯುಧಿಷ್ಠಿರನನ್ನು ಆಲಂಗಿಸಿ ಹೇಳಿದನು:

09061021a ದಿಷ್ಟ್ಯಾ ಜಯಸಿ ಕೌಂತೇಯ ದಿಷ್ಟ್ಯಾ ತೇ ಶತ್ರವೋ ಜಿತಾಃ।
09061021c ದಿಷ್ಟ್ಯಾ ಗಾಂಡೀವಧನ್ವಾ ಚ ಭೀಮಸೇನಶ್ಚ ಪಾಂಡವಃ।।
09061022a ತ್ವಂ ಚಾಪಿ ಕುಶಲೀ ರಾಜನ್ಮಾದ್ರೀಪುತ್ರೌ ಚ ಪಾಂಡವೌ।
09061022c ಮುಕ್ತಾ ವೀರಕ್ಷಯಾದಸ್ಮಾತ್ಸಂಗ್ರಾಮಾನ್ನಿಹತದ್ವಿಷಃ।।

“ಕೌಂತೇಯ! ದೈವವಶಾತ್ ನೀನು ವಿಜಯಿಯಾಗಿರುವೆ! ದೈವವಶದಿಂದ ನಿನ್ನ ಶತ್ರುಗಳು ಸೋತಿದ್ದಾರೆ! ರಾಜನ್! ದೈವವಶದಿಂದ ಗಾಂಡೀವಧನ್ವಿ, ಪಾಂಡವ ಭೀಮಸೇನ, ನೀನು ಮತ್ತು ಪಾಂಡವ ಮಾದ್ರೀಪುತ್ರರೀರ್ವರೂ ಕುಶಲಿಗಳಾಗಿರುವಿರಿ! ವೀರರಿಗೆ ಕ್ಷಯಕಾರಕವಾಗಿದ್ದ ಈ ಸಂಗ್ರಾಮದಲ್ಲಿ ದ್ವೇಷಿಗಳನ್ನು ಸಂಹರಿಸಿ ಮುಕ್ತರಾಗಿರುವಿರಿ!

09061022e ಕ್ಷಿಪ್ರಮುತ್ತರಕಾಲಾನಿ ಕುರು ಕಾರ್ಯಾಣಿ ಭಾರತ।।
09061023a ಉಪಯಾತಮುಪಪ್ಲವ್ಯಂ ಸಹ ಗಾಂಡೀವಧನ್ವನಾ।
09061023c ಆನೀಯ ಮಧುಪರ್ಕಂ ಮಾಂ ಯತ್ಪುರಾ ತ್ವಮವೋಚಥಾಃ।।

ಭಾರತ! ಮುಂದೆಮಾಡಬೇಕಾದ ಕಾರ್ಯಗಳನ್ನು ಶೀಘ್ರವಾಗಿ ಮಾಡು! ಹಿಂದೆ ಗಾಂಡೀವಧನ್ವಿಯೊಂದಿಗೆ ನಾನು ಉಪಪ್ಲವ್ಯಕ್ಕೆ ಬಂದಿದ್ದಾಗ ಮಧುಪರ್ಕವನ್ನಿತ್ತು ನೀನು ನನಗೆ ಹೀಗೆ ಹೇಳಿದ್ದೆಯಲ್ಲವೇ?

09061024a ಏಷ ಭ್ರಾತಾ ಸಖಾ ಚೈವ ತವ ಕೃಷ್ಣ ಧನಂಜಯಃ।
09061024c ರಕ್ಷಿತವ್ಯೋ ಮಹಾಬಾಹೋ ಸರ್ವಾಸ್ವಾಪತ್ಸ್ವಿತಿ ಪ್ರಭೋ।।

“ಕೃಷ್ಣ! ಮಹಾಬಾಹೋ! ಪ್ರಭೋ! ಈ ಭ್ರಾತಾ ಧನಂಜಯನು ನಿನ್ನ ಸಖನೂ ಹೌದು. ಸರ್ವ ಆಪತ್ತುಗಳಿಂದ ಇವನನ್ನು ರಕ್ಷಿಸಬೇಕು!” ಎಂದು.

09061024e ತವ ಚೈವಂ ಬ್ರುವಾಣಸ್ಯ ತಥೇತ್ಯೇವಾಹಮಬ್ರುವಂ।।
09061025a ಸ ಸವ್ಯಸಾಚೀ ಗುಪ್ತಸ್ತೇ ವಿಜಯೀ ಚ ನರೇಶ್ವರ।
09061025c ಭ್ರಾತೃಭಿಃ ಸಹ ರಾಜೇಂದ್ರ ಶೂರಃ ಸತ್ಯಪರಾಕ್ರಮಃ।।
09061025e ಮುಕ್ತೋ ವೀರಕ್ಷಯಾದಸ್ಮಾತ್ಸಂಗ್ರಾಮಾದ್ರೋಮಹರ್ಷಣಾತ್।

ನಿನ್ನ ಮಾತಿಗೆ ಹಾಗೆಯೇ ಆಗಲೆಂದೂ ನಾನು ನಿನಗೆ ಹೇಳಿದ್ದೆ. ನರೇಶ್ವರ! ರಾಜೇಂದ್ರ! ಈ ಶೂರ ಸತ್ಯಪರಾಕ್ರಮಿ ಸವ್ಯಸಾಚಿಯು ಸಹೋದರರೊಂದಿಗೆ ವಿಜಯಿಯೂ ಸುರಕ್ಷಿತನೂ ಆಗಿದ್ದಾನೆ ಮತ್ತು ಈ ರೋಮಾಂಚಕಾರೀ ವೀರಕ್ಷಯ ಸಂಗ್ರಾಮದಿಂದ ಮುಕ್ತನಾಗಿದ್ದಾನೆ.”

09061026a ಏವಮುಕ್ತಸ್ತು ಕೃಷ್ಣೇನ ಧರ್ಮರಾಜೋ ಯುಧಿಷ್ಠಿರಃ।
09061026c ಹೃಷ್ಟರೋಮಾ ಮಹಾರಾಜ ಪ್ರತ್ಯುವಾಚ ಜನಾರ್ದನಂ।।

ಮಹಾರಾಜ! ಕೃಷ್ಣನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ರೋಮರೋಮಗಳಲ್ಲಿಯೂ ಹರ್ಷತುಂದಿಲನಾಗಿ ಜನಾರ್ದನನಿಗೆ ಉತ್ತರಿಸಿದನು:

09061027a ಪ್ರಮುಕ್ತಂ ದ್ರೋಣಕರ್ಣಾಭ್ಯಾಂ ಬ್ರಹ್ಮಾಸ್ತ್ರಮರಿಮರ್ದನ।
09061027c ಕಸ್ತ್ವದನ್ಯಃ ಸಹೇತ್ಸಾಕ್ಷಾದಪಿ ವಜ್ರೀ ಪುರಂದರಃ।।

“ಅರಿಮರ್ದನ! ದ್ರೋಣ-ಕರ್ಣರ ಬ್ರಹ್ಮಾಸ್ತ್ರಗಳನ್ನು ನೀನಲ್ಲದೇ ಬೇರೆ ಯಾರೂ – ಸಾಕ್ಷಾತ್ ವಜ್ರೀ ಪುರಂದರನೂ – ಸಹಿಸಿಕೊಳ್ಳಲಾಗುತ್ತಿರಲಿಲ್ಲ!

09061028a ಭವತಸ್ತು ಪ್ರಸಾದೇನ ಸಂಗ್ರಾಮೇ ಬಹವೋ ಜಿತಾಃ।
09061028c ಮಹಾರಣಗತಃ ಪಾರ್ಥೋ ಯಚ್ಚ ನಾಸೀತ್ಪರಾಙ್ಮುಖಃ।।

ನಿನ್ನ ಪ್ರಸಾದದಿಂದ ಸಂಗ್ರಾಮದಲ್ಲಿ ಅನೇಕರನ್ನು ನಾವು ಜಯಿಸಿದೆವು ಮತ್ತು ಮಹಾರಣವನ್ನು ಹೊಕ್ಕಿದ ಪಾರ್ಥನು ಎಂದೂ ಪಾರಾಙ್ಮುಖನಾಗಲಿಲ್ಲ!

09061029a ತಥೈವ ಚ ಮಹಾಬಾಹೋ ಪರ್ಯಾಯೈರ್ಬಹುಭಿರ್ಮಯಾ।
09061029c ಕರ್ಮಣಾಮನುಸಂತಾನಂ ತೇಜಸಶ್ಚ ಗತಿಃ ಶುಭಾ।।

ಮಹಾಬಾಹೋ! ಹಾಗೆಯೇ ನಿನ್ನ ಶುಭ ತೇಜಸ್ಸಿನ ಗತಿಯಿಂದಾಗಿ ನಾನು ಅನೇಕ ಕರ್ಮಗಳ ಶುಭಫಲಗಳನ್ನು ಮತ್ತೆ ಮತ್ತೆ ಪಡೆಯುತ್ತಿದ್ದೇನೆ.

09061030a ಉಪಪ್ಲವ್ಯೇ ಮಹರ್ಷಿರ್ಮೇ ಕೃಷ್ಣದ್ವೈಪಾಯನೋಽಬ್ರವೀತ್।
09061030c ಯತೋ ಧರ್ಮಸ್ತತಃ ಕೃಷ್ಣೋ ಯತಃ ಕೃಷ್ಣಸ್ತತೋ ಜಯಃ।।

ಉಪಪ್ಲವ್ಯದಲ್ಲಿ ನನಗೆ ಮಹರ್ಷಿ ಕೃಷ್ಣದ್ವೈಪಾಯನನು “ಧರ್ಮವೆಲ್ಲಿರುವುದೋ ಅಲ್ಲಿ ಕೃಷ್ಣನಿರುವನು ಮತ್ತು ಎಲ್ಲಿ ಕೃಷ್ಣನಿರುವನೋ ಅಲ್ಲಿ ಜಯವಿದೆ!” ಎಂದು ಹೇಳಿದ್ದನು.”

09061031a ಇತ್ಯೇವಮುಕ್ತೇ ತೇ ವೀರಾಃ ಶಿಬಿರಂ ತವ ಭಾರತ।
09061031c ಪ್ರವಿಶ್ಯ ಪ್ರತ್ಯಪದ್ಯಂತ ಕೋಶರತ್ನರ್ದ್ಧಿಸಂಚಯಾನ್।।

ಭಾರತ! ಹೀಗೆ ಮಾತನಾಡಿಕೊಳ್ಳುತ್ತಾ ಆ ವೀರರು ನಿನ್ನ ಶಿಬಿರವನ್ನು ಪ್ರವೇಶಿಸಿದರು. ಪ್ರವೇಶಿಸಿ ಕೋಶಗಳನ್ನೂ ರತ್ನಸಂಚಯಗಳನ್ನೂ ತಮ್ಮದಾಗಿಸಿಕೊಂಡರು.

09061032a ರಜತಂ ಜಾತರೂಪಂ ಚ ಮಣೀನಥ ಚ ಮೌಕ್ತಿಕಾನ್।
09061032c ಭೂಷಣಾನ್ಯಥ ಮುಖ್ಯಾನಿ ಕಂಬಲಾನ್ಯಜಿನಾನಿ ಚ।।
09061032e ದಾಸೀದಾಸಮಸಂಖ್ಯೇಯಂ ರಾಜ್ಯೋಪಕರಣಾನಿ ಚ 09061033a ತೇ ಪ್ರಾಪ್ಯ ಧನಮಕ್ಷಯ್ಯಂ ತ್ವದೀಯಂ ಭರತರ್ಷಭ।
09061033c ಉದಕ್ರೋಶನ್ಮಹೇಷ್ವಾಸಾ ನರೇಂದ್ರ ವಿಜಿತಾರಯಃ।।

ಭರತರ್ಷಭ! ನರೇಂದ್ರ! ಅಲ್ಲಿದ್ದ ನಿನ್ನ ಬೆಳ್ಳಿ, ಬಂಗಾರ, ಮಣಿ-ಮೌಕ್ತಿಕಗಳು, ಆಭೂಷಣಗಳು, ಮುಖ್ಯ ಕಂಬಳಿ ಮತ್ತು ಜಿನಗಳು, ಅಸಂಖ್ಯ ದಾಸೀ-ದಾಸರು, ರಾಜ್ಯೋಪಕರಣಗಳು, ಮತ್ತು ಅಕ್ಷಯ ಧನವನ್ನು ಪಡೆದು ಆ ಮಹೇಷ್ವಾಸರು ಹರ್ಷೋದ್ಗಾರಗೈದರು.

09061034a ತೇ ತು ವೀರಾಃ ಸಮಾಶ್ವಸ್ಯ ವಾಹನಾನ್ಯವಮುಚ್ಯ ಚ।
09061034c ಅತಿಷ್ಠಂತ ಮುಹುಃ ಸರ್ವೇ ಪಾಂಡವಾಃ ಸಾತ್ಯಕಿಸ್ತಥಾ।।

ಆ ವೀರ ಪಾಂಡವರೆಲ್ಲರೂ ಸಾತ್ಯಕಿಯೊಂದಿಗೆ ರಥಗಳಿಂದ ಕುದುರೆಗಳನ್ನು ಬಿಚ್ಚಿ ಅವುಗಳನ್ನು ಸಂತೈಸಿ ಒಂದೆಡೆ ಕುಳಿತುಕೊಂಡರು.

09061035a ಅಥಾಬ್ರವೀನ್ಮಹಾರಾಜ ವಾಸುದೇವೋ ಮಹಾಯಶಾಃ।
09061035c ಅಸ್ಮಾಭಿರ್ಮಂಗಲಾರ್ಥಾಯ ವಸ್ತವ್ಯಂ ಶಿಬಿರಾದ್ಬಹಿಃ।।

ಮಹಾರಾಜ! ಆಗ ಮಹಾಯಶಸ್ವಿ ವಾಸುದೇವನು “ನಮ್ಮ ಮಂಗಲಾರ್ಥವಾಗಿ ನಾವು ಶಿಬಿರದ ಹೊರಗೆ ರಾತ್ರಿಯನ್ನು ಕಳೆಯಬೇಕು!” ಎಂದನು.

09061036a ತಥೇತ್ಯುಕ್ತ್ವಾ ಚ ತೇ ಸರ್ವೇ ಪಾಂಡವಾಃ ಸಾತ್ಯಕಿಸ್ತಥಾ।
09061036c ವಾಸುದೇವೇನ ಸಹಿತಾ ಮಂಗಲಾರ್ಥಂ ಯಯುರ್ಬಹಿಃ।।

ಹಾಗೆಯೇ ಆಗಲೆಂದು ಹೇಳಿ ಸಾತ್ಯಕಿಯೊಡನೆ ಸರ್ವ ಪಾಂಡವರೂ ವಾಸುದೇವನ ಸಹಿತ ಮಂಗಲಾರ್ಥವಾಗಿ ಶಿಬಿರದಿಂದ ಹೊರ ಬಂದರು.

09061037a ತೇ ಸಮಾಸಾದ್ಯ ಸರಿತಂ ಪುಣ್ಯಾಮೋಘವತೀಂ ನೃಪ।
09061037c ನ್ಯವಸನ್ನಥ ತಾಂ ರಾತ್ರಿಂ ಪಾಂಡವಾ ಹತಶತ್ರವಃ।।

ನೃಪ! ಶತ್ರುಗಳನ್ನು ಸಂಹರಿಸಿದ್ದ ಪಾಂಡವರು ಪುಣ್ಯ ಓಘವತೀ ನದಿಯನ್ನು ತಲುಪಿ ಅದರ ದಡದಲ್ಲಿ ಆ ರಾತ್ರಿಯನ್ನು ಕಳೆಯಲು ತಂಗಿದರು.

09061038a ತತಃ ಸಂಪ್ರೇಷಯಾಮಾಸುರ್ಯಾದವಂ ನಾಗಸಾಹ್ವಯಂ।
09061038c ಸ ಚ ಪ್ರಾಯಾಜ್ಜವೇನಾಶು ವಾಸುದೇವಃ ಪ್ರತಾಪವಾನ್।।
09061038e ದಾರುಕಂ ರಥಮಾರೋಪ್ಯ ಯೇನ ರಾಜಾಂಬಿಕಾಸುತಃ।।

ಆಗ ಯಾದವನನ್ನು ಹಸ್ತಿನಾಪುರಕ್ಕೆ ಕಳುಹಿಸಲಾಯಿತು. ಪ್ರತಾಪವಾನ್ ವಾಸುದೇವನು ಶೀಘ್ರವಾಗಿ ದಾರುಕನೊಡನೆ ರಥವನ್ನೇರಿ ರಾಜಾ ಅಂಬಿಕಾಸುತನಿದ್ದಲ್ಲಿಗೆ ಹೊರಟನು.

09061039a ತಮೂಚುಃ ಸಂಪ್ರಯಾಸ್ಯಂತಂ ಸೈನ್ಯಸುಗ್ರೀವವಾಹನಂ।
09061039c ಪ್ರತ್ಯಾಶ್ವಾಸಯ ಗಾಂಧಾರೀಂ ಹತಪುತ್ರಾಂ ಯಶಸ್ವಿನೀಂ।।

ಸೈನ್ಯಸುಗ್ರೀವರನ್ನು ಕಟ್ಟಿದ್ದ ರಥದಲ್ಲಿ ಹೊರಟಿದ್ದ ಅವನಿಗೆ “ಪುತ್ರರನ್ನು ಕಳೆದುಕೊಂಡ ಯಶಸ್ವಿನೀ ಗಾಂಧಾರಿಯನ್ನು ಸಮಾಧಾನಗೊಳಿಸು! ಎಂದು ಪಾಂಡವರು ಕೇಳಿಕೊಂಡರು.

09061040a ಸ ಪ್ರಾಯಾತ್ಪಾಂಡವೈರುಕ್ತಸ್ತತ್ಪುರಂ ಸಾತ್ವತಾಂ ವರಃ।
09061040c ಆಸಸಾದಯಿಷುಃ ಕ್ಷಿಪ್ರಂ ಗಾಂಧಾರೀಂ ನಿಹತಾತ್ಮಜಾಂ।।

ಪಾಂಡವರಿಂದ ಆ ಸಲಹೆಯನ್ನು ಪಡೆದು ಸಾತ್ವತ ಶ್ರೇಷ್ಠ ಕೃಷ್ಣನು ಬಹಳಬೇಗ ಹತಪುತ್ರಳಾಗಿದ್ದ ಗಾಂಧಾರಿಯ ಬಳಿ ಬಂದನು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ವಾಸುದೇವಪ್ರೇಷಣೇ ಏಕಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ವಾಸುದೇವಪ್ರೇಷಣ ಎನ್ನುವ ಅರವತ್ತೊಂದನೇ ಅಧ್ಯಾಯವು.