060 ಕೃಷ್ಣಪಾಂಡವದುರ್ಯೋಧನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಗದಾಯುದ್ಧ ಪರ್ವ

ಅಧ್ಯಾಯ 60

ಸಾರ

ಪಾಂಡವ ಯೋಧರು ಸಂತೋಷಗೊಂಡು ಭೀಮಸೇನನನ್ನು ಪ್ರಶಂಸಿದುದು (1-17). ಕೃಷ್ಣವಾಕ್ಯ (18-22). ದುರ್ಯೋಧನನು ವಾಸುದೇವನನ್ನು ನಿಂದಿಸಿದುದು (23-38). ವಾಸುದೇವ-ದುರ್ಯೋಧನರ ಸಂವಾದ (39-50).ದುರ್ಯೋಧನನನ್ನು ಗೌರವಿಸುವಂತಹ ಅದ್ಭುತ ನಿಮಿತ್ತಗಳನ್ನು ನೋಡಿ ಪಾಂಡವರ ಕಡೆಯವರೆಲ್ಲರೂ ಲಜ್ಜಿತರಾಗಲು, ಕೃಷ್ಣನು ಅವರನ್ನು ಸಮಾಧಾನಗೊಳಿಸಿದುದು (51-65).

09060001 ಧೃತರಾಷ್ಟ್ರ ಉವಾಚ 09060001a ಹತಂ ದುರ್ಯೋಧನಂ ದೃಷ್ಟ್ವಾ ಭೀಮಸೇನೇನ ಸಂಯುಗೇ।
09060001c ಪಾಂಡವಾಃ ಸೃಂಜಯಾಶ್ಚೈವ ಕಿಮಕುರ್ವತ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಭೀಮಸೇನನಿಂದ ಯುದ್ಧದಲ್ಲಿ ದುರ್ಯೋಧನನು ಹತನಾದುದನ್ನು ನೋಡಿ ಪಾಂಡವರು ಮತ್ತು ಸೃಂಜಯರು ಏನು ಮಾಡಿದರು?”

09060002 ಸಂಜಯ ಉವಾಚ 09060002a ಹತಂ ದುರ್ಯೋಧನಂ ದೃಷ್ಟ್ವಾ ಭೀಮಸೇನೇನ ಸಂಯುಗೇ।
09060002c ಸಿಂಹೇನೇವ ಮಹಾರಾಜ ಮತ್ತಂ ವನಗಜಂ ವನೇ।।
09060003a ಪ್ರಹೃಷ್ಟಮನಸಸ್ತತ್ರ ಕೃಷ್ಣೇನ ಸಹ ಪಾಂಡವಾಃ।

ಸಂಜಯನು ಹೇಳಿದನು: “ಮಹಾರಾಜ! ವನದಲ್ಲಿ ಮದಿಸಿದ ಕಾಡಾನೆಯನ್ನು ಸಿಂಹವು ಹೇಗೋ ಹಾಗೆ ಯುದ್ಧದಲ್ಲಿ ದುರ್ಯೋಧನನನ್ನು ಭೀಮಸೇನನು ಹೊಡೆದುರುಳಿಸಲು ಕೃಷ್ಣನೊಂದಿಗೆ ಪಾಂಡವರು ಹರ್ಷಿತರಾದರು.

09060003c ಪಾಂಚಾಲಾಃ ಸೃಂಜಯಾಶ್ಚೈವ ನಿಹತೇ ಕುರುನಂದನೇ।।
09060004a ಆವಿಧ್ಯನ್ನುತ್ತರೀಯಾಣಿ ಸಿಂಹನಾದಾಂಶ್ಚ ನೇದಿರೇ।
09060004c ನೈತಾನ್ ಹರ್ಷಸಮಾವಿಷ್ಟಾನಿಯಂ ಸೇಹೇ ವಸುಂಧರಾ।।

ಕುರುನಂದನನು ಹತನಾಗಲು ಪಾಂಚಾಲರು ಮತ್ತು ಸೃಂಜಯರು ಉತ್ತರೀಯಗಳನ್ನು ಮೇಲೆ ಹಾರಿಸಿದರು ಮತ್ತು ಸಿಂಹನಾದಗೈದರು. ಹರ್ಷಿತರಾಗಿ ಕುಣಿದಾಡುತ್ತಿದ್ದ ಅವರ ಭಾರವನ್ನು ಹೊರಲು ವಸುಂಧರೆಗೂ ಸಾಧ್ಯವಾಗಲಿಲ್ಲ.

09060005a ಧನೂಂಷ್ಯನ್ಯೇ ವ್ಯಾಕ್ಷಿಪಂತ ಜ್ಯಾಶ್ಚಾಪ್ಯನ್ಯೇ ತಥಾಕ್ಷಿಪನ್।
09060005c ದಧ್ಮುರನ್ಯೇ ಮಹಾಶಂಖಾನನ್ಯೇ ಜಘ್ನುಶ್ಚ ದುಂದುಭೀಃ।।

ಕೆಲವರು ಧನುಸ್ಸುಗಳನ್ನು ಟೇಂಕರಿಸಿದರು. ಇನ್ನು ಕೆಲವರು ಶಿಂಜನಿಗಳನ್ನು ಮೀಟುತ್ತಿದ್ದರು. ಕೆಲವರು ಮಹಾಶಂಖಗಳನ್ನು ಊದಿದರೆ ಇನ್ನು ಕೆಲವರು ದುಂದುಭಿಗಳನ್ನು ಮೊಳಗಿಸಿದರು.

09060006a ಚಿಕ್ರೀಡುಶ್ಚ ತಥೈವಾನ್ಯೇ ಜಹಸುಶ್ಚ ತವಾಹಿತಾಃ।
09060006c ಅಬ್ರುವಂಶ್ಚಾಸಕೃದ್ವೀರಾ ಭೀಮಸೇನಮಿದಂ ವಚಃ।।

ನಿನಗೆ ಅಹಿತರಾಗಿದ್ದ ಕೆಲವರು ಕುಣಿದಾಡಿದರು. ಕೆಲವರು ಪರಿಹಾಸಮಾಡಿ ನಗುತ್ತಿದ್ದರು. ಆ ವೀರರು ಭೀಮಸೇನನ ಕುರಿತಾಗಿ ಈ ಮಾತುಗಳನ್ನಾಡುತ್ತಿದ್ದರು:

09060007a ದುಷ್ಕರಂ ಭವತಾ ಕರ್ಮ ರಣೇಽದ್ಯ ಸುಮಹತ್ಕೃತಂ।
09060007c ಕೌರವೇಂದ್ರಂ ರಣೇ ಹತ್ವಾ ಗದಯಾತಿಕೃತಶ್ರಮಂ।।

“ಗದೆಯಲ್ಲಿ ಅತಿ ಪರಿಶ್ರಮಮಾಡಿರುವ ಕೌರವೇಂದ್ರನನ್ನು ಇಂದು ರಣದಲ್ಲಿ ಕೊಂದು ಮಹಾ ದುಷ್ಕರ ಕಾರ್ಯವನ್ನು ಎಸಗಿರುವೆ!

09060008a ಇಂದ್ರೇಣೇವ ಹಿ ವೃತ್ರಸ್ಯ ವಧಂ ಪರಮಸಂಯುಗೇ।
09060008c ತ್ವಯಾ ಕೃತಮಮನ್ಯಂತ ಶತ್ರೋರ್ವಧಮಿಮಂ ಜನಾಃ।।

ಮಹಾಸಮರದಲ್ಲಿ ಇಂದ್ರನು ವೃತ್ರನ ವಧೆಗೈದಂತೆ ನೀನು ಶತ್ರುವಿನ ವಧೆಗೈದೆಯೆಂದು ಜನರು ಭಾವಿಸಿದ್ದಾರೆ.

09060009a ಚರಂತಂ ವಿವಿಧಾನ್ಮಾರ್ಗಾನ್ಮಂಡಲಾನಿ ಚ ಸರ್ವಶಃ।
09060009c ದುರ್ಯೋಧನಮಿಮಂ ಶೂರಂ ಕೋಽನ್ಯೋ ಹನ್ಯಾದ್ವೃಕೋದರಾತ್।।

ವಿವಿಧ ಮಾರ್ಗಗಳಲ್ಲಿ ಮತ್ತು ಮಂಡಲಾಕಾರಗಳಲ್ಲಿ ಎಲ್ಲಕಡೆ ತಿರುಗುತ್ತಿದ್ದ ಈ ಶೂರ ದುರ್ಯೋಧನನನ್ನು ವೃಕೋದರನಲ್ಲದೆ ಬೇರೆ ಯಾರು ಸಂಹರಿಸಬಲ್ಲವರಾಗಿದ್ದರು?

09060010a ವೈರಸ್ಯ ಚ ಗತಃ ಪಾರಂ ತ್ವಮಿಹಾನ್ಯೈಃ ಸುದುರ್ಗಮಂ।
09060010c ಅಶಕ್ಯಮೇತದನ್ಯೇನ ಸಂಪಾದಯಿತುಮೀದೃಶಂ।।

ಇತರರಿಗೆ ಸುದುರ್ಗಮವಾಗಿದ್ದ ಈ ವೈರವೆಂಬ ಸಮುದ್ರವನ್ನು ನೀನು ದಾಟಿರುವೆ! ಈ ರೀತಿಯ ವಿಜಯವನ್ನು ಸಂಪಾದಿಸಲು ಬೇರೆ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.

09060011a ಕುಂಜರೇಣೇವ ಮತ್ತೇನ ವೀರ ಸಂಗ್ರಾಮಮೂರ್ಧನಿ।
09060011c ದುರ್ಯೋಧನಶಿರೋ ದಿಷ್ಟ್ಯಾ ಪಾದೇನ ಮೃದಿತಂ ತ್ವಯಾ।।

ವೀರ! ಒಳ್ಳೆಯದಾಯಿತು! ಮದಿಸಿದ ಆನೆಯಂತೆ ನೀನು ಸಂಗ್ರಾಮದಲ್ಲಿ ದುರ್ಯೋಧನನ ತಲೆಯನ್ನು ನಿನ್ನ ಕಾಲಿನಿಂದ ಒದೆದು ತುಳಿದೆ!

09060012a ಸಿಂಹೇನ ಮಹಿಷಸ್ಯೇವ ಕೃತ್ವಾ ಸಂಗರಮದ್ಭುತಂ।
09060012c ದುಃಶಾಸನಸ್ಯ ರುಧಿರಂ ದಿಷ್ಟ್ಯಾ ಪೀತಂ ತ್ವಯಾನಘ।।

ಅನಘ! ಒಳ್ಳೆಯದಾಯಿತು ನೀನು ಸಿಂಹವು ಎಮ್ಮೆಯ ರಕ್ತವನ್ನು ಹೀರಿ ಕುಡಿಯುವಂತೆ ಅದ್ಭುತವಾಗಿ ಯುದ್ಧಮಾಡಿ ದುಃಶಾಸನನ ರಕ್ತವನ್ನು ಕುಡಿದೆ!

09060013a ಯೇ ವಿಪ್ರಕುರ್ವನ್ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ।
09060013c ಮೂರ್ಧ್ನಿ ತೇಷಾಂ ಕೃತಃ ಪಾದೋ ದಿಷ್ಟ್ಯಾ ತೇ ಸ್ವೇನ ಕರ್ಮಣಾ।।

ಒಳ್ಳೆಯದಾಯಿತು! ಧರ್ಮಾತ್ಮ ರಾಜಾ ಯುಧಿಷ್ಠಿರನ ಕುರಿತು ಅಪರಾಧವೆಸಗಿದವರ ತಲೆಯ ಮೇಲೆ ಸಾಹಸದಿಂದ ನಿನ್ನ ಕಾಲನ್ನು ಮೆಟ್ಟಿದೆ.

09060014a ಅಮಿತ್ರಾಣಾಮಧಿಷ್ಠಾನಾದ್ವಧಾದ್ದುರ್ಯೋಧನಸ್ಯ ಚ।
09060014c ಭೀಮ ದಿಷ್ಟ್ಯಾ ಪೃಥಿವ್ಯಾಂ ತೇ ಪ್ರಥಿತಂ ಸುಮಹದ್ಯಶಃ।।

ಭೀಮ! ಒಳ್ಳೆಯದಾಯಿತು! ದುರ್ಯೋಧನನನ್ನು ವಧಿಸಿ ಶತ್ರುಗಳ ಮೇಲೆ ಅಧಿಕಾರವನ್ನು ಸ್ಥಾಪಿಸಿದ ನಿನ್ನ ಈ ಮಹಾ ಯಶಸ್ಸು ಭೂಮಿಯಲ್ಲಿಯೇ ಪ್ರಥಿತವಾಗಿರುತ್ತದೆ!

09060015a ಏವಂ ನೂನಂ ಹತೇ ವೃತ್ರೇ ಶಕ್ರಂ ನಂದಂತಿ ಬಂದಿನಃ।
09060015c ತಥಾ ತ್ವಾಂ ನಿಹತಾಮಿತ್ರಂ ವಯಂ ನಂದಾಮ ಭಾರತ।।

ಭಾರತ! ವೃತ್ರನು ಹತನಾಗಲು ಶಕ್ರನನ್ನು ವಂದಿಮಾಗಧರು ಹೇಗೆ ಗೌರವಿಸಿ ಆನಂದಿಸಿದರೋ ಹಾಗೆ ಅಮಿತ್ರನನ್ನು ಸಂಹರಿಸಿದ ನಿನ್ನನ್ನು ನಾವು ಗೌರವಿಸಿ ಆನಂದಿಸುತ್ತಿದ್ದೇವೆ.

09060016a ದುರ್ಯೋಧನವಧೇ ಯಾನಿ ರೋಮಾಣಿ ಹೃಷಿತಾನಿ ನಃ।
09060016c ಅದ್ಯಾಪಿ ನ ವಿಹೃಷ್ಯಂತಿ ತಾನಿ ತದ್ವಿದ್ಧಿ ಭಾರತ।।
09060016e ಇತ್ಯಬ್ರುವನ್ಭೀಮಸೇನಂ ವಾತಿಕಾಸ್ತತ್ರ ಸಂಗತಾಃ।।

ಭಾರತ! ದುರ್ಯೋಧನನ ವಧೆಯ ಸಮಯದಲ್ಲಿ ಹರ್ಷಗೊಂಡು ನಿಮಿರಿ ನಿಂತಿದ್ದ ನಮ್ಮ ರೋಮಕೋಟಿಗಳು ಈಗಲೂ ಕೂಡ ಹರ್ಷಗೊಂಡು ಹಾಗೆಯೇ ನಿಂತಿವೆ ಎನ್ನುವುದನ್ನು ತಿಳಿ!” ಅಲ್ಲಿ ನೆರೆದಿದ್ದ ವೀರಯೋಧರು ಭೀಮಸೇನನನ್ನು ಈ ರೀತಿ ಹೇಳಿ ಪ್ರಶಂಸಿಸಿದರು.

09060017a ತಾನ್ ಹೃಷ್ಟಾನ್ಪುರುಷವ್ಯಾಘ್ರಾನ್ಪಾಂಚಾಲಾನ್ಪಾಂಡವೈಃ ಸಹ।
09060017c ಬ್ರುವತಃ ಸದೃಶಂ ತತ್ರ ಪ್ರೋವಾಚ ಮಧುಸೂದನಃ।।

ಹಾಗೆ ಒಟ್ಟಾಗಿ ಹರ್ಷದಿಂದ ಹೇಳುತ್ತಿದ್ದ ಪಾಂಚಾಲ-ಪಾಂಡವ ಪುರುಷವ್ಯಾಘ್ರರಿಗೆ ಮಧುಸೂದನನು ಹೇಳಿದನು:

09060018a ನ ನ್ಯಾಯ್ಯಂ ನಿಹತಃ ಶತ್ರುರ್ಭೂಯೋ ಹಂತುಂ ಜನಾಧಿಪಾಃ।
09060018c ಅಸಕೃದ್ವಾಗ್ಭಿರುಗ್ರಾಭಿರ್ನಿಹತೋ ಹ್ಯೇಷ ಮಂದಧೀಃ।।

“ಜನಾಧಿಪರೇ! ಹತನಾಗಿರುವ ಶತ್ರುವನ್ನು ಪುನಃ ಪುನಃ ಕಠೋರ ಮಾತುಗಳಿಂದ ಪೀಡಿಸುವುದು ಸರಿಯಲ್ಲ. ಈ ಮಂದಬುದ್ಧಿಯು ಈಗಾಗಲೇ ಹತನಾಗಿಹೋಗಿದ್ದಾನೆ!

09060019a ತದೈವೈಷ ಹತಃ ಪಾಪೋ ಯದೈವ ನಿರಪತ್ರಪಃ।
09060019c ಲುಬ್ಧಃ ಪಾಪಸಹಾಯಶ್ಚ ಸುಹೃದಾಂ ಶಾಸನಾತಿಗಃ।।

ಎಂದು ಪಾಪಿಗಳ ಸಹಾಯದಿಂದ ಸುಹೃದಯರ ಆದೇಶಗಳನ್ನು ಮೀರಿದನೋ ಅಂದೇ ಈ ಪಾಪಿ ಲುಬ್ಧನು ಹತನಾದನು.

09060020a ಬಹುಶೋ ವಿದುರದ್ರೋಣಕೃಪಗಾಂಗೇಯಸೃಂಜಯೈಃ।
09060020c ಪಾಂಡುಭ್ಯಃ ಪ್ರೋಚ್ಯಮಾನೋಽಪಿ ಪಿತ್ರ್ಯಮಂಶಂ ನ ದತ್ತವಾನ್।।

ವಿದುರ, ದ್ರೋಣ, ಕೃಪ, ಗಾಂಗೇಯ, ಮತ್ತು ಸೃಂಜಯರು ಎಷ್ಟೇ ಹೇಳಿದರೂ ಇವನು ಪಾಂಡವರಿಗೆ ಅವರ ಪಿತ್ರಾಂಶವನ್ನು ನೀಡಲಿಲ್ಲ!

09060021a ನೈಷ ಯೋಗ್ಯೋಽದ್ಯ ಮಿತ್ರಂ ವಾ ಶತ್ರುರ್ವಾ ಪುರುಷಾಧಮಃ।
09060021c ಕಿಮನೇನಾತಿನುನ್ನೇನ ವಾಗ್ಭಿಃ ಕಾಷ್ಠಸಧರ್ಮಣಾ।।

ಈ ಪುರುಷಾಧಮನು ಈಗ ಯಾರ ಮಿತ್ರನಾಗಿರಲೂ ಶತ್ರುವಾಗಿರಲೂ ಯೋಗ್ಯನಾಗಿಲ್ಲ. ಕಟ್ಟಿಗೆಯಂತೆ ಬಿದ್ದಿರುವ ಇವನನ್ನು ಕಠೋರ ಮಾತುಗಳಿಂದ ಬಗ್ಗಿಸಲು ಪ್ರಯತ್ನಿಸಿದರೆ ಏನು ಪ್ರಯೋಜನ?

09060022a ರಥೇಷ್ವಾರೋಹತ ಕ್ಷಿಪ್ರಂ ಗಚ್ಚಾಮೋ ವಸುಧಾಧಿಪಾಃ।
09060022c ದಿಷ್ಟ್ಯಾ ಹತೋಽಯಂ ಪಾಪಾತ್ಮಾ ಸಾಮಾತ್ಯಜ್ಞಾತಿಬಾಂಧವಃ।।

ವಸುಧಾಧಿಪರೇ! ಬೇಗ ರಥಗಳನ್ನೇರಿ! ಹೋಗೋಣ! ಒಳ್ಳೆಯದಾಯಿತು ಈ ಪಾಪಾತ್ಮನು ತನ್ನ ಅಮಾತ್ಯರು ಮತ್ತು ಬಂಧು-ಬಾಂಧವರೊಡನೆ ಹತನಾಗಿದ್ದಾನೆ!”

09060023a ಇತಿ ಶ್ರುತ್ವಾ ತ್ವಧಿಕ್ಷೇಪಂ ಕೃಷ್ಣಾದ್ದುರ್ಯೋಧನೋ ನೃಪಃ।
09060023c ಅಮರ್ಷವಶಮಾಪನ್ನ ಉದತಿಷ್ಠದ್ವಿಶಾಂ ಪತೇ।।

ವಿಶಾಂಪತೇ! ಕೃಷ್ಣನ ಈ ನಿಂದನೆಯನ್ನು ಕೇಳಿ ನೃಪ ದುರ್ಯೋಧನನು ಕೋಪವನ್ನು ತಡೆದುಕೊಳ್ಳಲಾರದೇ ಎದ್ದು ಕುಳಿತನು.

09060024a ಸ್ಫಿಗ್ದೇಶೇನೋಪವಿಷ್ಟಃ ಸ ದೋರ್ಭ್ಯಾಂ ವಿಷ್ಟಭ್ಯ ಮೇದಿನೀಂ।
09060024c ದೃಷ್ಟಿಂ ಭ್ರೂಸಂಕಟಾಂ ಕೃತ್ವಾ ವಾಸುದೇವೇ ನ್ಯಪಾತಯತ್।।

ಅವನು ಎರಡು ಕೈಗಳನ್ನೂ ನೆಲಕ್ಕೆ ಊರಿಕೊಂಡು ಮೇಲೆದ್ದು ಪೃಷ್ಠವನ್ನು ಊರಿ ಕುಳಿತು, ಹುಬ್ಬನ್ನು ಗಂಟಿಕ್ಕಿ ಕೃಷ್ಣನನ್ನು ದುರುಗುಟ್ಟಿ ನೋಡಿದನು.

09060025a ಅರ್ಧೋನ್ನತಶರೀರಸ್ಯ ರೂಪಮಾಸೀನ್ನೃಪಸ್ಯ ತತ್।
09060025c ಕ್ರುದ್ಧಸ್ಯಾಶೀವಿಷಸ್ಯೇವ ಚ್ಚಿನ್ನಪುಚ್ಚಸ್ಯ ಭಾರತ।।

ಭಾರತ! ಶರೀರದ ಅರ್ಧಭಾಗವು ಮಾತ್ರ ಮೇಲೆ ಎದ್ದಿದ್ದ ಅವನ ರೂಪವು ಬಾಲವನ್ನು ಕತ್ತರಿಸಿಕೊಂಡು ಕೃದ್ಧನಾಗಿ ಹೆಡೆಯಿತ್ತಿದ ವಿಷಸರ್ಪದಂತೆ ಕಾಣುತ್ತಿತ್ತು.

09060026a ಪ್ರಾಣಾಂತಕರಣೀಂ ಘೋರಾಂ ವೇದನಾಮವಿಚಿಂತಯನ್।
09060026c ದುರ್ಯೋಧನೋ ವಾಸುದೇವಂ ವಾಗ್ಭಿರುಗ್ರಾಭಿರಾರ್ದಯತ್।।

ಆಗ ತನಗಾಗುತ್ತಿದ್ದ ಪ್ರಾಣಾಂತಕ ಘೋರ ವೇದನೆಯನ್ನೂ ಲೆಕ್ಕಿಸದೇ ದುರ್ಯೋಧನನು ವಾಸುದೇವನನ್ನು ಕಠೋರ ಮಾತುಗಳಿಂದ ನಿಂದಿಸಿದನು:

09060027a ಕಂಸದಾಸಸ್ಯ ದಾಯಾದ ನ ತೇ ಲಜ್ಜಾಸ್ತ್ಯನೇನ ವೈ।
09060027c ಅಧರ್ಮೇಣ ಗದಾಯುದ್ಧೇ ಯದಹಂ ವಿನಿಪಾತಿತಃ।।

“ಕಂಸನ ದಾಸನ ಮಗನೇ! ಗದಾಯುದ್ಧದಲ್ಲಿ ಅಧರ್ಮಪೂರ್ವಕವಾಗಿ ನನ್ನನ್ನು ಕೆಳಗುರುಳಿಸಿದುದರಿಂದ ನಿನಗೆ ಸ್ವಲ್ಪವೂ ನಾಚಿಕೆಯಾಗುತ್ತಿಲ್ಲವೇ?

09060028a ಊರೂ ಭಿಂಧೀತಿ ಭೀಮಸ್ಯ ಸ್ಮೃತಿಂ ಮಿಥ್ಯಾ ಪ್ರಯಚ್ಚತಾ।
09060028c ಕಿಂ ನ ವಿಜ್ಞಾತಮೇತನ್ಮೇ ಯದರ್ಜುನಮವೋಚಥಾಃ।।

ತೊಡೆಯನ್ನು ಮುರಿಯುವಂತೆ ಮೋಸದಿಂದ ಭೀಮನಿಗೆ ನೆನಪು ಮಾಡುವಾಗ ನೀನು ಅರ್ಜುನನೊಡನೆ ಏನು ಹೇಳಿದೆಯೆಂಬುದು ನನಗೆ ತಿಳಿದಿದೆ.

09060029a ಘಾತಯಿತ್ವಾ ಮಹೀಪಾಲಾನೃಜುಯುದ್ಧಾನ್ಸಹಸ್ರಶಃ।
09060029c ಜಿಹ್ಮೈರುಪಾಯೈರ್ಬಹುಭಿರ್ನ ತೇ ಲಜ್ಜಾ ನ ತೇ ಘೃಣಾ।।

ಸತ್ಯದಿಂದ ಯುದ್ಧಮಾಡುತ್ತಿದ್ದ ಸಹಸ್ರಾರು ಮಹೀಪಾಲರನ್ನು ಅನೇಕ ಕುಟಿಲೋಪಾಯಗಳ ಮೂಲಕ ಸಂಹಾರ ಮಾಡಿಸಿರುವ ನಿನಗೆ ಲಜ್ಜೆಯೂ ಇಲ್ಲ, ಕರುಣೆಯೂ ಇಲ್ಲ.

09060030a ಅಹನ್ಯಹನಿ ಶೂರಾಣಾಂ ಕುರ್ವಾಣಃ ಕದನಂ ಮಹತ್।
09060030c ಶಿಖಂಡಿನಂ ಪುರಸ್ಕೃತ್ಯ ಘಾತಿತಸ್ತೇ ಪಿತಾಮಹಃ।।

ಶಿಂಖಂಡಿಯನ್ನು ಎದುರಿಗೆ ತಂದು, ಅನುದಿನವೂ ಮಹಾ ಶೂರರೊಡನೆ ಮಹಾ ಯುದ್ಧವನ್ನು ಮಾಡುತ್ತಿದ್ದ ಪಿತಾಮಹನನ್ನು ಸಂಹರಿಸಿದೆ!

09060031a ಅಶ್ವತ್ಥಾಮ್ನಃ ಸನಾಮಾನಂ ಹತ್ವಾ ನಾಗಂ ಸುದುರ್ಮತೇ।
09060031c ಆಚಾರ್ಯೋ ನ್ಯಾಸಿತಃ ಶಸ್ತ್ರಂ ಕಿಂ ತನ್ನ ವಿದಿತಂ ಮಮ।।

ದುರ್ಬುದ್ಧಿಯೇ! ಅಶ್ವತ್ಥಾಮವೆಂಬ ಆನೆಯನ್ನು ಕೊಂದು ಅಶ್ವತ್ಥಾಮನೇ ಸತ್ತನೆಂದು ಹೇಳಿ ಆಚಾರ್ಯನಿಂದ ಶಸ್ತ್ರತ್ಯಾಗಮಾಡಿಸಿದುದು ನನಗೆ ತಿಳಿದಿಲ್ಲವೇ?

09060032a ಸ ಚಾನೇನ ನೃಶಂಸೇನ ಧೃಷ್ಟದ್ಯುಮ್ನೇನ ವೀರ್ಯವಾನ್।
09060032c ಪಾತ್ಯಮಾನಸ್ತ್ವಯಾ ದೃಷ್ಟೋ ನ ಚೈನಂ ತ್ವಮವಾರಯಃ।।

ಅಂತಹ ವೀರ್ಯವಾನನನ್ನು ಕ್ರೂರಿ ಧೃಷ್ಟದ್ಯುಮ್ನನು ಕೊಂದುದನ್ನು ನೀನು ನೋಡಿದರೂ ಅದನ್ನು ನೀನು ತಡೆಯಲಿಲ್ಲ!

09060033a ವಧಾರ್ಥಂ ಪಾಂಡುಪುತ್ರಸ್ಯ ಯಾಚಿತಾಂ ಶಕ್ತಿಮೇವ ಚ।
09060033c ಘಟೋತ್ಕಚೇ ವ್ಯಂಸಯಥಾಃ ಕಸ್ತ್ವತ್ತಃ ಪಾಪಕೃತ್ತಮಃ।।

ಪಾಂಡುಪುತ್ರ ಅರ್ಜುನನ ವಧೆಗೆಂದು ಪಡೆದಿದ್ದ ಶಕ್ತಿಯನ್ನು ಘಟೋತ್ಕಚನ ವಧೆಗೆ ಬಳಸುವಂತೆ ನೀನು ಕುತ್ರಂತ್ರವನ್ನು ಮಾಡಿದೆ. ನಿನಗಿಂತ ಪಾಪಿಗಳು ಇನ್ನ್ಯಾರಿದ್ದಾರೆ?

09060034a ಚಿನ್ನಬಾಹುಃ ಪ್ರಾಯಗತಸ್ತಥಾ ಭೂರಿಶ್ರವಾ ಬಲೀ।
09060034c ತ್ವಯಾ ನಿಸೃಷ್ಟೇನ ಹತಃ ಶೈನೇಯೇನ ದುರಾತ್ಮನಾ।।

ಬಾಹುವು ತುಂಡಾಗಿ ಪ್ರಾಯೋಪವೇಶಮಾಡಿದ್ದ ಬಲಶಾಲೀ ಭೂರಿಶ್ರವನನ್ನು ನಿನ್ನದೇ ಸೂಚನೆಯಂತೆ ದುರಾತ್ಮ ಶೈನೇಯನು ಸಂಹರಿಸಿದನು!

09060035a ಕುರ್ವಾಣಶ್ಚೋತ್ತಮಂ ಕರ್ಮ ಕರ್ಣಃ ಪಾರ್ಥಜಿಗೀಷಯಾ।
09060035c ವ್ಯಂಸನೇನಾಶ್ವಸೇನಸ್ಯ ಪನ್ನಗೇಂದ್ರಸುತಸ್ಯ ವೈ।।

ಕರ್ಣನು ಪಾರ್ಥನ ಸಂಹಾರವೆಂಬ ಉತ್ತಮ ಕರ್ಮವನ್ನು ಮಾಡಹೊರಟಿದ್ದಾಗ ನೀನು ಪನ್ನಗೇಂದ್ರನ ಮಗ ಅಶ್ವಸೇನನನ್ನು ಮೋಸದಿಂದ ತಡೆದೆ!

09060036a ಪುನಶ್ಚ ಪತಿತೇ ಚಕ್ರೇ ವ್ಯಸನಾರ್ತಃ ಪರಾಜಿತಃ।
09060036c ಪಾತಿತಃ ಸಮರೇ ಕರ್ಣಶ್ಚಕ್ರವ್ಯಗ್ರೋಽಗ್ರಣೀರ್ನೃಣಾಂ।।

ಮತ್ತೆ ನರಾಗ್ರ ಕರ್ಣನು ಸಮರದಲ್ಲಿ ಹುಗಿದುಹೋಗಿದ್ದ ರಥಚಕ್ರವನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಸಂದಿಗ್ಧ ಸಮಯದಲ್ಲಿದ್ದಾಗ ನೀನು ಅವನನ್ನು ಕೊಲ್ಲಿಸಿದೆ!

09060037a ಯದಿ ಮಾಂ ಚಾಪಿ ಕರ್ಣಂ ಚ ಭೀಷ್ಮದ್ರೋಣೌ ಚ ಸಂಯುಗೇ।
09060037c ಋಜುನಾ ಪ್ರತಿಯುಧ್ಯೇಥಾ ನ ತೇ ಸ್ಯಾದ್ವಿಜಯೋ ಧ್ರುವಂ।।

ಒಂದು ವೇಳೆ ನೀನು ನನ್ನೊಡನೆ, ಕರ್ಣನೊಡನೆ ಅಥವಾ ಭೀಷ್ಮ-ದ್ರೋಣರೊಡನೆ ಸಮರದಲ್ಲಿ ನಿಜವಾದ ಯುದ್ಧವನ್ನೇ ಮಾಡಿದ್ದಿದ್ದರೆ ವಿಜಯವು ಖಂಡಿತವಾಗಿಯೂ ನಿನ್ನದಾಗುತ್ತಿರಲಿಲ್ಲ!

09060038a ತ್ವಯಾ ಪುನರನಾರ್ಯೇಣ ಜಿಹ್ಮಮಾರ್ಗೇಣ ಪಾರ್ಥಿವಾಃ।
09060038c ಸ್ವಧರ್ಮಮನುತಿಷ್ಠಂತೋ ವಯಂ ಚಾನ್ಯೇ ಚ ಘಾತಿತಾಃ।।

ಪುನಃ ಸ್ವಧರ್ಮದಲ್ಲಿ ನಿರತರಾಗಿದ್ದ ನಮ್ಮವರಾದ ಇತರ ಪಾರ್ಥಿವರನ್ನೂ ನೀನು ಅನಾರ್ಯ ಕುಟಿಲಮಾರ್ಗಗಳನ್ನು ಬಳಸಿ ಸಂಹರಿಸಿದೆ!”

09060039 ವಾಸುದೇವ ಉವಾಚ 09060039a ಹತಸ್ತ್ವಮಸಿ ಗಾಂಧಾರೇ ಸಭ್ರಾತೃಸುತಬಾಂಧವಃ।
09060039c ಸಗಣಃ ಸಸುಹೃಚ್ಚೈವ ಪಾಪಮಾರ್ಗಮನುಷ್ಠಿತಃ।।

ವಾಸುದೇವನು ಹೇಳಿದನು: “ಗಾಂಧಾರೇ! ಪಾಪಮಾರ್ಗಗಳಲ್ಲಿ ನಡೆಯುತ್ತಿದ್ದ ನೀನು ಸಹೋದರರು, ಮಕ್ಕಳು, ಬಾಂಧವರು ಮತ್ತು ಸ್ನೇಹಿತ ಗಣಗಳೊಂದಿಗೆ ಹತನಾಗಿದ್ದೀಯೆ!

09060040a ತವೈವ ದುಷ್ಕೃತೈರ್ವೀರೌ ಭೀಷ್ಮದ್ರೋಣೌ ನಿಪಾತಿತೌ।
09060040c ಕರ್ಣಶ್ಚ ನಿಹತಃ ಸಂಖ್ಯೇ ತವ ಶೀಲಾನುವರ್ತಕಃ।।

ನಿನ್ನ ದುಷ್ಕೃತಗಳಿಂದಾಗಿಯೇ ಭೀಷ್ಮ-ದ್ರೋಣರೂ ಹತರಾದರು. ನಿನ್ನ ನಡತೆಯನ್ನೇ ಅನುಸರಿಸಿದ ಕರ್ಣನೂ ಕೂಡ ಯುದ್ಧದಲ್ಲಿ ಹತನಾದನು.

09060041a ಯಾಚ್ಯಮಾನೋ ಮಯಾ ಮೂಢ ಪಿತ್ರ್ಯಮಂಶಂ ನ ದಿತ್ಸಸಿ।
09060041c ಪಾಂಡವೇಭ್ಯಃ ಸ್ವರಾಜ್ಯಾರ್ಧಂ ಲೋಭಾಚ್ಚಕುನಿನಿಶ್ಚಯಾತ್।।

ಮೂಢ! ಲೋಭದಿಂದ ಮತ್ತು ಶಕುನಿಯ ನಿಶ್ಚಯದಂತೆ ನೀನು ಪಾಂಡವರ ಪಿತ್ರಾರ್ಜಿತ ಅರ್ಧರಾಜ್ಯವನ್ನು ಅವರಿಗೆ ಕೊಡು ಎಂದು ಬೇಡಿಕೊಂಡರೂ ಕೊಡಲಿಲ್ಲ.

09060042a ವಿಷಂ ತೇ ಭೀಮಸೇನಾಯ ದತ್ತಂ ಸರ್ವೇ ಚ ಪಾಂಡವಾಃ।
09060042c ಪ್ರದೀಪಿತಾ ಜತುಗೃಹೇ ಮಾತ್ರಾ ಸಹ ಸುದುರ್ಮತೇ।।

ದುರ್ಬುದ್ಧೇ! ನೀನು ಭೀಮಸೇನನಿಗೆ ವಿಷವನ್ನುಣಿಸಿದೆ. ಪಾಂಡವರೆಲ್ಲರನ್ನೂ ಅವರ ತಾಯಿಯೊಂದಿಗೆ ಜತುಗೃಹದಲ್ಲಿ ಸುಡಲು ಪ್ರಯತ್ನಿಸಿದೆ.

09060043a ಸಭಾಯಾಂ ಯಾಜ್ಞಸೇನೀ ಚ ಕೃಷ್ಟಾ ದ್ಯೂತೇ ರಜಸ್ವಲಾ।
09060043c ತದೈವ ತಾವದ್ದುಷ್ಟಾತ್ಮನ್ ವಧ್ಯಸ್ತ್ವಂ ನಿರಪತ್ರಪಃ।।

ದುಷ್ಟಾತ್ಮ! ರಜಸ್ವಲೆ ಯಾಜ್ಞಸೇನಿಯನ್ನು ದ್ಯೂತದ ಸಭೆಗೆ ಎಳೆದುತಂದ ಅಪರಾಧಕ್ಕಾಗಿ ನಿನ್ನನ್ನು ಅಂದೇ ಸಂಹರಿಸಬೇಕಿತ್ತು!

09060044a ಅನಕ್ಷಜ್ಞಂ ಚ ಧರ್ಮಜ್ಞಂ ಸೌಬಲೇನಾಕ್ಷವೇದಿನಾ।
09060044c ನಿಕೃತ್ಯಾ ಯತ್ಪರಾಜೈಷೀಸ್ತಸ್ಮಾದಸಿ ಹತೋ ರಣೇ।।

ಜೂಜನ್ನು ಅರಿತಿರದ ಧರ್ಮಜ್ಞನನ್ನು ಅಕ್ಷವಿದ್ಯೆಯನ್ನು ಚೆನ್ನಾಗಿ ತಿಳಿದಿದ್ದ ಸೌಬಲನ ಮೂಲಕ ಮೋಸದಿಂದ ಜಯಿಸಿದ ಕಾರಣ ನೀನಿಂದು ರಣದಲ್ಲಿ ಹತನಾಗಿದ್ದೀಯೆ!

09060045a ಜಯದ್ರಥೇನ ಪಾಪೇನ ಯತ್ ಕೃಷ್ಣಾ ಕ್ಲೇಶಿತಾ ವನೇ।
09060045c ಯಾತೇಷು ಮೃಗಯಾಂ ತೇಷು ತೃಣಬಿಂದೋರಥಾಶ್ರಮೇ।।
09060046a ಅಭಿಮನ್ಯುಶ್ಚ ಯದ್ಬಾಲ ಏಕೋ ಬಹುಭಿರಾಹವೇ।
09060046c ತ್ವದ್ದೋಷೈರ್ನಿಹತಃ ಪಾಪ ತಸ್ಮಾದಸಿ ಹತೋ ರಣೇ।।

ವನದಲ್ಲಿ ಪಾಂಡವರು ಬೇಟೆಗೆಂದು ಹೋಗಿದ್ದಾಗ ತೃಣಬಿಂದುವಿನ ಆಶ್ರಮದಲ್ಲಿ ಪಾಪಿ ಜಯದ್ರಥನ ಮೂಲಕ ಕೃಷ್ಣೆಯನ್ನು ಪೀಡಿಸಿದುದು ಮತ್ತು ಬಾಲಕ ಅಭಿಮನ್ಯು ಒಬ್ಬನನ್ನೇ ಅನೇಕರು ಯುದ್ಧದಲ್ಲಿ ಸಂಹರಿಸಿದುದು – ಈ ದೋಷ ಪಾಪಗಳಿಂದಾಗಿ ನೀನು ಇಂದು ರಣದಲ್ಲಿ ಹತನಾಗಿದ್ದೀಯೆ!”

09060047 ದುರ್ಯೋಧನ ಉವಾಚ 09060047a ಅಧೀತಂ ವಿಧಿವದ್ದತ್ತಂ ಭೂಃ ಪ್ರಶಾಸ್ತಾ ಸಸಾಗರಾ।
09060047c ಮೂರ್ಧ್ನಿ ಸ್ಥಿತಮಮಿತ್ರಾಣಾಂ ಕೋ ನು ಸ್ವಂತತರೋ ಮಯಾ।।

ದುರ್ಯೋಧನನು ಹೇಳಿದನು: “ಕಲಿತಿದ್ದೇನೆ! ವಿಧಿವತ್ತಾಗಿ ದಾನಗಳನ್ನಿತ್ತಿದ್ದೇನೆ! ಶತ್ರುಗಳ ತಲೆಯನ್ನು ಮೆಟ್ಟಿ ಸಾಗರಪರ್ಯಂತವಾದ ಭೂಮಿಯನ್ನು ಆಳಿದ್ದೇನೆ! ಇವೆಲ್ಲವನ್ನೂ ನನಗಿಂತಲೂ ಹೆಚ್ಚು ಮಾಡಿದವರು ಯಾರಿದ್ದಾರೆ?

09060048a ಯದಿಷ್ಟಂ ಕ್ಷತ್ರಬಂಧೂನಾಂ ಸ್ವಧರ್ಮಮನುಪಶ್ಯತಾಂ।
09060048c ತದಿದಂ ನಿಧನಂ ಪ್ರಾಪ್ತಂ ಕೋ ನು ಸ್ವಂತತರೋ ಮಯಾ।।

ಸ್ವಧರ್ಮದಲ್ಲಿಯೇ ದೃಷ್ಟಿಯಿಟ್ಟುಕೊಂಡಿರುವ ಕ್ಷತ್ರಬಂಧುಗಳಿಗೆ ಇಷ್ಟವಾದ ನಿಧನವು ನನಗೆ ಪ್ರಾಪ್ತವಾಗಿದೆ. ಇದಕ್ಕಿಂತಲೂ ಹೆಚ್ಚಿನದು ಯಾರಿಗೆ ದೊರಕಿದೆ?

09060049a ದೇವಾರ್ಹಾ ಮಾನುಷಾ ಭೋಗಾಃ ಪ್ರಾಪ್ತಾ ಅಸುಲಭಾ ನೃಪೈಃ।
09060049c ಐಶ್ವರ್ಯಂ ಚೋತ್ತಮಂ ಪ್ರಾಪ್ತಂ ಕೋ ನು ಸ್ವಂತತರೋ ಮಯಾ।।

ನೃಪರಿಗೆ ಸುಲಭವಲ್ಲದ ದೇವತೆಗಳಿಗೆ ತಕ್ಕುದಾದ ಮನುಷ್ಯ ಭೋಗಗಳನ್ನು ನಾನು ಅನುಭವಿಸಿದ್ದೇನೆ. ಉತ್ತಮ ಐಶ್ವರ್ಯವನ್ನು ಪಡೆದುಕೊಂಡೆ. ಇವುಗಳನ್ನು ನನಗಿಂತಲೂ ಹೆಚ್ಚು ಪಡೆದಿರುವವರು ಯಾರಿದ್ದಾರೆ?

09060050a ಸಸುಹೃತ್ಸಾನುಬಂಧಶ್ಚ ಸ್ವರ್ಗಂ ಗಂತಾಹಮಚ್ಯುತ।
09060050c ಯೂಯಂ ವಿಹತಸಂಕಲ್ಪಾಃ ಶೋಚಂತೋ ವರ್ತಯಿಷ್ಯಥ।।

ಅಚ್ಯುತ! ಸುಹೃದಯರೊಡನೆ ಮತ್ತು ಅನುಯಾಯಿಗಳೊಡನೆ ನಾನು ಸ್ವರ್ಗಕ್ಕೆ ಹೋಗುತ್ತಿದ್ದೇನೆ. ನೀವುಗಳು ಸಂಕಲ್ಪಗಳಿಲ್ಲದೇ ಶೋಕಿಸುತ್ತಾ ಜೀವಿಸುವಿರಿ!””

09060051 ಸಂಜಯ ಉವಾಚ 09060051a ಅಸ್ಯ ವಾಕ್ಯಸ್ಯ ನಿಧನೇ ಕುರುರಾಜಸ್ಯ ಭಾರತ।
09060051c ಅಪತತ್ಸುಮಹದ್ವರ್ಷಂ ಪುಷ್ಪಾಣಾಂ ಪುಣ್ಯಗಂಧಿನಾಂ।।

ಸಂಜಯನು ಹೇಳಿದನು: “ಭಾರತ! ಕುರುರಾಜನ ಈ ಮಾತುಗಳನ್ನು ಮುಗಿಸುತ್ತಿದ್ದಂತೆಯೇ ಪುಣ್ಯ ಸುಗಂಧಯುಕ್ತ ಪುಷ್ಪಗಳ ಮಹಾವೃಷ್ಟಿಯಾಯಿತು.

09060052a ಅವಾದಯಂತ ಗಂಧರ್ವಾ ಜಗುಶ್ಚಾಪ್ಸರಸಾಂ ಗಣಾಃ।
09060052c ಸಿದ್ಧಾಶ್ಚ ಮುಮುಚುರ್ವಾಚಃ ಸಾಧು ಸಾಧ್ವಿತಿ ಭಾರತ।।

ಭಾರತ! ಗಂಧರ್ವರು ವಾದ್ಯಗಳನ್ನು ನುಡಿಸಿದರು ಮತ್ತು ಅಪ್ಸರಗಣಗಳು ಹಾಡಿದರು. ಸಿದ್ಧರು ಪುನಃ ಪುನಃ “ಸಾಧು! ಸಾಧು!” ಎಂದು ಉದ್ಗರಿಸಿದರು.

09060053a ವವೌ ಚ ಸುರಭಿರ್ವಾಯುಃ ಪುಣ್ಯಗಂಧೋ ಮೃದುಃ ಸುಖಃ।
09060053c ವ್ಯರಾಜತಾಮಲಂ ಚೈವ ನಭೋ ವೈಡೂರ್ಯಸಂನಿಭಂ।।

ಪುಣ್ಯಗಂಧಯುಕ್ತವಾದ, ಮೃದುವಾದ, ಸುಖಕರವಾದ ಮಂದವಾಯುವು ಬೀಸಿತು. ದಿಕ್ಕುಗಳು ಪ್ರಕಾಶಗೊಂಡವು. ಆಕಾಶವು ವೈಡೂರ್ಯದಂತೆ ಹೊಳೆಯಿತು.

09060054a ಅತ್ಯದ್ಭುತಾನಿ ತೇ ದೃಷ್ಟ್ವಾ ವಾಸುದೇವಪುರೋಗಮಾಃ।
09060054c ದುರ್ಯೋಧನಸ್ಯ ಪೂಜಾಂ ಚ ದೃಷ್ಟ್ವಾ ವ್ರೀಡಾಮುಪಾಗಮನ್।।

ದುರ್ಯೋಧನನನ್ನು ಗೌರವಿಸುವಂತಹ ಈ ಅದ್ಭುತಗಳನ್ನು ನೋಡಿ ವಾಸುದೇವ ಪುರಃಸರರಾದ ಅವರು ಅತ್ಯಂತ ಲಜ್ಜಿತರಾದಿರು.

09060055a ಹತಾಂಶ್ಚಾಧರ್ಮತಃ ಶ್ರುತ್ವಾ ಶೋಕಾರ್ತಾಃ ಶುಶುಚುರ್ಹಿ ತೇ।
09060055c ಭೀಷ್ಮಂ ದ್ರೋಣಂ ತಥಾ ಕರ್ಣಂ ಭೂರಿಶ್ರವಸಮೇವ ಚ।।

ಭೀಷ್ಮ, ದ್ರೋಣ, ಕರ್ಣ ಮತ್ತು ಭೂರಿಶ್ರವಸರು ಅಧರ್ಮದಿಂದ ಹತರಾದುದನ್ನು ಕೇಳಿ ಶೋಕಾರ್ತರಾಗಿ ದುಃಖಿಸಿದರು.

09060056a ತಾಂಸ್ತು ಚಿಂತಾಪರಾನ್ದೃಷ್ಟ್ವಾ ಪಾಂಡವಾನ್ದೀನಚೇತಸಃ।
09060056c ಪ್ರೋವಾಚೇದಂ ವಚಃ ಕೃಷ್ಣೋ ಮೇಘದುಂದುಭಿನಿಸ್ವನಃ।।

ದೀನಚೇತಸ ಪಾಂಡವರು ಅಪಾರ ಚಿಂತೆಯಲ್ಲಿರುವುದನ್ನು ಕಂಡ ಕೃಷ್ಣನು ಮೋಡಗಳ ಗುಡುಗಿನಂತಹ ಧ್ವನಿಯಲ್ಲಿ ಈ ಮಾತುಗಳನ್ನಾಡಿದನು:

09060057a ನೈಷ ಶಕ್ಯೋಽತಿಶೀಘ್ರಾಸ್ತ್ರಸ್ತೇ ಚ ಸರ್ವೇ ಮಹಾರಥಾಃ।
09060057c ಋಜುಯುದ್ಧೇನ ವಿಕ್ರಾಂತಾ ಹಂತುಂ ಯುಷ್ಮಾಭಿರಾಹವೇ।।

“ಅತಿ ಶೀಘ್ರವಾಗಿ ಅಸ್ತ್ರಗಳನ್ನು ಪ್ರಯೋಗಿಸಬಲ್ಲ ಈ ಎಲ್ಲ ಮಹಾರಥ ವಿಕ್ರಾಂತರನ್ನೂ ನ್ಯಾಯಯುದ್ಧದಲ್ಲಿ ನೀವು ಸಂಹರಿಸಲು ಶಕ್ಯರಾಗಿರಲಿಲ್ಲ.

09060058a ಉಪಾಯಾ ವಿಹಿತಾ ಹ್ಯೇತೇ ಮಯಾ ತಸ್ಮಾನ್ನರಾಧಿಪಾಃ।
09060058c ಅನ್ಯಥಾ ಪಾಂಡವೇಯಾನಾಂ ನಾಭವಿಷ್ಯಜ್ಜಯಃ ಕ್ವ ಚಿತ್।।

ಆದುದರಿಂದ ನರಾಧಿಪರೇ! ನಾನು ಉಪಾಯಗಳನ್ನು ಬಳಸಿದುದರಿಂದ ಅವರು ಹತರಾದರು. ಅನ್ಯಥಾ ಪಾಂಡವರಿಗೆ ಜಯವು ಎಂದೂ ದೊರೆಯುತ್ತಿರಲಿಲ್ಲ!

09060059a ತೇ ಹಿ ಸರ್ವೇ ಮಹಾತ್ಮಾನಶ್ಚತ್ವಾರೋಽತಿರಥಾ ಭುವಿ।
09060059c ನ ಶಕ್ಯಾ ಧರ್ಮತೋ ಹಂತುಂ ಲೋಕಪಾಲೈರಪಿ ಸ್ವಯಂ।।

ಆ ಎಲ್ಲ ನಾಲ್ವರು ಮಹಾತ್ಮರೂ ಭೂಮಿಯಲ್ಲಿ ಅತಿರಥರಾಗಿದ್ದರು. ಧರ್ಮಪೂರ್ವಕವಾಗಿ ಅವರನ್ನು ಸಂಹರಿಸಿಸಲು ಸ್ವಯಂ ಲೋಕಪಾಲರಿಗೂ ಶಕ್ಯವಿರಲಿಲ್ಲ.

09060060a ತಥೈವಾಯಂ ಗದಾಪಾಣಿರ್ಧಾರ್ತರಾಷ್ಟ್ರೋ ಗತಕ್ಲಮಃ।
09060060c ನ ಶಕ್ಯೋ ಧರ್ಮತೋ ಹಂತುಂ ಕಾಲೇನಾಪೀಹ ದಂಡಿನಾ।।

ಹಾಗೆಯೇ ಯುದ್ಧದಲ್ಲಿ ಶ್ರಮವನ್ನೇ ಕಾಣದ ಗದಾಪಾಣಿ ಧಾರ್ತರಾಷ್ಟ್ರನನ್ನು ಧರ್ಮಪೂರ್ವಕ ಸಂಹರಿಸಲು ದಂಡಾಪಾಣಿ ಕಾಲನಿಗೂ ಶಕ್ಯವಿಲ್ಲವಾಗಿತ್ತು.

09060061a ನ ಚ ವೋ ಹೃದಿ ಕರ್ತವ್ಯಂ ಯದಯಂ ಘಾತಿತೋ ನೃಪಃ।
09060061c ಮಿಥ್ಯಾವಧ್ಯಾಸ್ತಥೋಪಾಯೈರ್ಬಹವಃ ಶತ್ರವೋಽಧಿಕಾಃ।।

ನೃಪ! ಈ ರೀತಿಯಾಗಿ ಸಂಹರಿಸಿದೆವೆಂದು ನೀನು ನೊಂದುಕೊಳ್ಳಬಾರದು. ಅಧಿಕ ಬಲಶಾಲೀ ಶತ್ರುಗಳನ್ನು ಅನೇಕ ಮಿಥ್ಯೋಪಾಯಗಳಿಂದ ವಧಿಸಬೇಕಾಗುತ್ತದೆ.

09060062a ಪೂರ್ವೈರನುಗತೋ ಮಾರ್ಗೋ ದೇವೈರಸುರಘಾತಿಭಿಃ।
09060062c ಸದ್ಭಿಶ್ಚಾನುಗತಃ ಪಂಥಾಃ ಸ ಸರ್ವೈರನುಗಮ್ಯತೇ।।

ಹಿಂದೆ ಅಸುರಘಾತಿ ದೇವತೆಗಳೂ ಕೂಡ ಇದೇ ಮಾರ್ಗವನ್ನು ಅನುಸರಿಸಿದ್ದರು. ಸಾಧುಗಳೆಲ್ಲರೂ ಇದೇ ಮಾರ್ಗವನ್ನು ಅನುಸರಿಸುತ್ತಾರೆ.

09060063a ಕೃತಕೃತ್ಯಾಃ ಸ್ಮ ಸಾಯಾಹ್ನೇ ನಿವಾಸಂ ರೋಚಯಾಮಹೇ।
09060063c ಸಾಶ್ವನಾಗರಥಾಃ ಸರ್ವೇ ವಿಶ್ರಮಾಮೋ ನರಾಧಿಪಾಃ।।

ಕೃತಕೃತ್ಯರಾಗಿದ್ದೇವೆ. ಸಾಯಂಕಾಲವೂ ಆಗಿದೆ. ನಾವೆಲ್ಲರೂ ನಮ್ಮ ನಮ್ಮ ನಿವಾಸಗಳಿಗೆ ತೆರಳಲು ಬಯಸುತ್ತಿದ್ದೇವೆ. ನರಾಧಿಪರೇ! ಕುದುರೆ-ಆನೆ-ರಥಗಳೊಂದಿಗೆ ಎಲ್ಲರೂ ವಿಶ್ರಮಿಸೋಣ!”

09060064a ವಾಸುದೇವವಚಃ ಶ್ರುತ್ವಾ ತದಾನೀಂ ಪಾಂಡವೈಃ ಸಹ।
09060064c ಪಾಂಚಾಲಾ ಭೃಶಸಂಹೃಷ್ಟಾ ವಿನೇದುಃ ಸಿಂಹಸಂಘವತ್।।

ವಾಸುದೇವನ ಮಾತನ್ನು ಕೇಳಿ ತುಂಬಾ ಹರ್ಷಿತರಾಗಿ ಪಾಂಡವರೊಂದಿಗೆ ಪಾಂಚಾಲರು ಸಿಂಹಗಳ ಹಿಂದಿನಂತೆ ಗರ್ಜಿಸಿದರು.

09060065a ತತಃ ಪ್ರಾಧ್ಮಾಪಯನ್ ಶಂಖಾನ್ಪಾಂಚಜನ್ಯಂ ಚ ಮಾಧವಃ।
09060065c ಹೃಷ್ಟಾ ದುರ್ಯೋಧನಂ ದೃಷ್ಟ್ವಾ ನಿಹತಂ ಪುರುಷರ್ಷಭಾಃ।।

ದುರ್ಯೋಧನನು ಹತನಾದುದನ್ನು ನೋಡಿ ಹರ್ಷಗೊಂಡ ಆ ಪುರುಷರ್ಷಭರು ಶಂಖಗಳನ್ನೂ ಮಾಧವನು ಪಾಂಚಜನ್ಯವನ್ನೂ ಜೋರಾಗಿ ಊದಿ ಮೊಳಗಿಸಿದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಕೃಷ್ಣಪಾಂಡವದುರ್ಯೋಧನಸಂವಾದೇ ಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಕೃಷ್ಣಪಾಂಡವದುರ್ಯೋಧನಸಂವಾದ ಎನ್ನುವ ಅರವತ್ತನೇ ಅಧ್ಯಾಯವು.