ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಗದಾಯುದ್ಧ ಪರ್ವ
ಅಧ್ಯಾಯ 58
ಸಾರ
ಭೀಮಸೇನನು ಕೆಳಗೆ ಬಿದ್ದಿದ್ದ ದುರ್ಯೋಧನನನ್ನು ಒದೆದು ಕುಣಿದಾಡುತ್ತಾ ಆಡಿದ ಮಾತುಗಳು (1-12). ಯುಧಿಷ್ಠಿರನು ಕೆಳಗೆ ಬಿದ್ದಿದ್ದ ದುರ್ಯೋಧನನ ಬಳಿಸಾರಿ ವಿಲಪಿಸಿದುದು (13-24).
09058001 ಸಂಜಯ ಉವಾಚ 09058001a ತಂ ಪಾತಿತಂ ತತೋ ದೃಷ್ಟ್ವಾ ಮಹಾಶಾಲಮಿವೋದ್ಗತಂ।
09058001c ಪ್ರಹೃಷ್ಟಮನಸಃ ಸರ್ವೇ ಬಭೂವುಸ್ತತ್ರ ಪಾಂಡವಾಃ।।
ಸಂಜಯನು ಹೇಳಿದನು: “ಮಹಾಶಾಲವೃಕ್ಷದಂತಿದ್ದ ಅವನು ಬಿದ್ದುದನ್ನು ನೋಡಿ ಪಾಂಡವರೆಲ್ಲರೂ ಹರ್ಷಿತರಾದರು.
09058002a ಉನ್ಮತ್ತಮಿವ ಮಾತಂಗಂ ಸಿಂಹೇನ ವಿನಿಪಾತಿತಂ।
09058002c ದದೃಶುರ್ಹೃಷ್ಟರೋಮಾಣಃ ಸರ್ವೇ ತೇ ಚಾಪಿ ಸೋಮಕಾಃ।।
ಸಿಂಹದಿಂದ ಕೆಳಗುರುಳಿಸಲ್ಪಟ್ಟ ಮದಿಸಿದ ಆನೆಯಂತಿದ್ದ ಅವನನ್ನು ನೋಡಿ ಅಲ್ಲಿದ್ದ ಸೋಮಕರೆಲ್ಲರೂ ರೋಮಾಂಚಿತರಾದರು.
09058003a ತತೋ ದುರ್ಯೋಧನಂ ಹತ್ವಾ ಭೀಮಸೇನಃ ಪ್ರತಾಪವಾನ್।
09058003c ಪತಿತಂ ಕೌರವೇಂದ್ರಂ ತಮುಪಗಮ್ಯೇದಮಬ್ರವೀತ್।।
ದುರ್ಯೋಧನನನ್ನು ಹೊಡೆದ ಪ್ರತಾಪವಾನ್ ಭೀಮಸೇನನು ಕೆಳಗೆ ಬಿದ್ದಿದ್ದ ಕೌರವೇಂದ್ರನ ಬಳಿ ಹೋಗಿ ಹೀಗೆ ಹೇಳಿದನು:
09058004a ಗೌರ್ಗೌರಿತಿ ಪುರಾ ಮಂದ ದ್ರೌಪದೀಮೇಕವಾಸಸಂ।
09058004c ಯತ್ಸಭಾಯಾಂ ಹಸನ್ನಸ್ಮಾಂಸ್ತದಾ ವದಸಿ ದುರ್ಮತೇ।।
09058004e ತಸ್ಯಾವಹಾಸಸ್ಯ ಫಲಮದ್ಯ ತ್ವಂ ಸಮವಾಪ್ನುಹಿ।।
“ಮೂಢ! ದುರ್ಮತೇ! ಹಿಂದೆ ಸಭೆಯಲ್ಲಿ ಏಕವಸ್ತ್ರಳಾಗಿದ್ದ ದ್ರೌಪದಿಯನ್ನು “ಹಸು! ಹಸು!” ಎಂದು ಹೇಳಿಕೊಂಡು ಹಾಸ್ಯಮಾಡಿದೆಯಲ್ಲವೇ? ಆ ಅಪಮಾನದ ಫಲವನ್ನು ಇಂದು ನೀನು ಪಡೆದಿದ್ದೀಯೆ!”
09058005a ಏವಮುಕ್ತ್ವಾ ಸ ವಾಮೇನ ಪದಾ ಮೌಲಿಮುಪಾಸ್ಪೃಶತ್।
09058005c ಶಿರಶ್ಚ ರಾಜಸಿಂಹಸ್ಯ ಪಾದೇನ ಸಮಲೋಡಯತ್।।
ಹೀಗೆ ಹೇಳಿ ಅವನು ಎಡಗಾಲಿನಿಂದ ಅವನ ಕಿರೀಟವನ್ನು ಒದೆದನು. ರಾಜಸಿಂಹನ ಶಿರವನ್ನೂ ಕಾಲಿನಿಂದ ತುಳಿದನು.
09058006a ತಥೈವ ಕ್ರೋಧಸಂರಕ್ತೋ ಭೀಮಃ ಪರಬಲಾರ್ದನಃ।
09058006c ಪುನರೇವಾಬ್ರವೀದ್ವಾಕ್ಯಂ ಯತ್ತಚ್ಚೃಣು ನರಾಧಿಪ।।
ಹಾಗೆಯೇ ಕ್ರೋಧಸಂರಕ್ತನಾದ ಪರಬಲಾರ್ದನ ಭೀಮನು ಪುನಃ ಈ ಮಾತುಗಳನ್ನಾಡಿದನು. ಅದನ್ನು ಕೇಳು ನರಾಧಿಪ!
09058007a ಯೇಽಸ್ಮಾನ್ಪುರೋಽಪನೃತ್ಯಂತ ಪುನರ್ಗೌರಿತಿ ಗೌರಿತಿ।
09058007c ತಾನ್ವಯಂ ಪ್ರತಿನೃತ್ಯಾಮಃ ಪುನರ್ಗೌರಿತಿ ಗೌರಿತಿ।।
“ಯಾರು ನಮ್ಮ ಮುಂದೆ “ಹಸು! ಹಸು!” ಎಂದು ಹೇಳಿಕೊಂಡು ಕುಣಿದಾಟುತಿದ್ದನೋ ಅವನ ಎದಿರು ನಾವು ಪ್ರತಿಯಾಗಿ ಪುನಃ “ಹಸು! ಹಸು!” ಎಂದು ಹೇಳಿಕೊಳ್ಳುತ್ತಾ ನರ್ತಿಸುತ್ತೇವೆ!
09058008a ನಾಸ್ಮಾಕಂ ನಿಕೃತಿರ್ವಹ್ನಿರ್ನಾಕ್ಷದ್ಯೂತಂ ನ ವಂಚನಾ।
09058008c ಸ್ವಬಾಹುಬಲಮಾಶ್ರಿತ್ಯ ಪ್ರಬಾಧಾಮೋ ವಯಂ ರಿಪೂನ್।।
ಮೋಸ, ಬೆಂಕಿ, ಅಕ್ಷದ್ಯೂತ, ಮತ್ತು ವಂಚನೆಗಳು ನಮ್ಮಲ್ಲಿಲ್ಲ. ನಮ್ಮದೇ ಬಾಹುಬಲವನ್ನು ಆಶ್ರಯಿಸಿ ನಾವು ಶತ್ರುಗಳನ್ನು ಸದೆಬಡಿದಿದ್ದೇವೆ.”
09058009a ಸೋಽವಾಪ್ಯ ವೈರಸ್ಯ ಪರಸ್ಯ ಪಾರಂ ವೃಕೋದರಃ ಪ್ರಾಹ ಶನೈಃ ಪ್ರಹಸ್ಯ।
09058009c ಯುಧಿಷ್ಠಿರಂ ಕೇಶವಸೃಂಜಯಾಂಶ್ಚ ಧನಂಜಯಂ ಮಾದ್ರವತೀಸುತೌ ಚ।।
ವೈರದ ಅಂತಿಮ ಚರಣವನ್ನು ದಾಟಿದ್ದ ವೃಕೋದರನು ನಸುನಗುತ್ತಾ ಯುಧಿಷ್ಠಿರ, ಕೇಶವ, ಸೃಂಜಯರು, ಧನಂಜಯ ಮತ್ತು ಮಾದ್ರವತೀಸುತರಿಗೆ ಹೇಳಿದನು:
09058010a ರಜಸ್ವಲಾಂ ದ್ರೌಪದೀಮಾನಯನ್ಯೇ ಯೇ ಚಾಪ್ಯಕುರ್ವಂತ ಸದಸ್ಯವಸ್ತ್ರಾಂ।
09058010c ತಾನ್ಪಶ್ಯಧ್ವಂ ಪಾಂಡವೈರ್ಧಾರ್ತರಾಷ್ಟ್ರಾನ್ ರಣೇ ಹತಾಂಸ್ತಪಸಾ ಯಾಜ್ಞಸೇನ್ಯಾಃ।।
“ರಜಸ್ವಲೆ ದ್ರೌಪದಿಯನ್ನು ಎಳೆದುತಂದು ಯಾರು ಅವಳನ್ನು ಅವಸ್ತ್ರಳನ್ನಾಗಿ ಮಾಡಲು ಪ್ರಯತ್ನಿಸಿದ್ದರೋ ಆ ಧಾರ್ತರಾಷ್ಟ್ರರು ಇಂದು ಯಾಜ್ಞಸೇನಿಯ ತಪಃಫಲದಿಂದ ರಣದಲ್ಲಿ ಹತರಾಗಿರುವುದನ್ನು ನೋಡಿ!
09058011a ಯೇ ನಃ ಪುರಾ ಷಂಡತಿಲಾನವೋಚನ್ ಕ್ರೂರಾ ರಾಜ್ಞೋ ಧೃತರಾಷ್ಟ್ರಸ್ಯ ಪುತ್ರಾಃ।
09058011c ತೇ ನೋ ಹತಾಃ ಸಗಣಾಃ ಸಾನುಬಂಧಾಃ ಕಾಮಂ ಸ್ವರ್ಗಂ ನರಕಂ ವಾ ವ್ರಜಾಮಃ।।
ಹಿಂದೆ ನಮ್ಮನ್ನು ಯಾರು ಎಣ್ಣೆಯಿಲ್ಲದ ಎಳ್ಳಿಗೆ ಸಮಾನ ನಪುಂಸಕರೆಂದು ಕರೆದಿದ್ದರೋ ಆ ಕ್ರೂರ ರಾಜ ಧೃತರಾಷ್ಟ್ರನ ಪುತ್ರರು ತಮ್ಮ ಪಂಗಡದವರೊಂದಿಗೆ ಮತ್ತು ಅನುಯಾಯಿಗಳೊಂದಿಗೆ ಹತರಾಗಿದ್ದಾರೆ. ಇನ್ನು ಬೇಕಾದರೆ ಸ್ವರ್ಗ ಅಥವಾ ನರಕಕ್ಕೆ ಹೋದರೂ ವ್ಯತ್ಯಾಸವಿಲ್ಲ!”
09058012a ಪುನಶ್ಚ ರಾಜ್ಞಃ ಪತಿತಸ್ಯ ಭೂಮೌ ಸ ತಾಂ ಗದಾಂ ಸ್ಕಂಧಗತಾಂ ನಿರೀಕ್ಷ್ಯ।
09058012c ವಾಮೇನ ಪಾದೇನ ಶಿರಃ ಪ್ರಮೃದ್ಯ ದುರ್ಯೋಧನಂ ನೈಕೃತಿಕೇತ್ಯವೋಚತ್।।
ಪುನಃ ಅವನು ಗದೆಯನ್ನು ಹೆಗಲ ಮೇಲಿರಿಸಿಕೊಂಡು ಭೂಮಿಯ ಮೇಲೆ ಬಿದ್ದಿದ್ದ ರಾಜನನ್ನು ನೋಡಿ ಎಡಗಾಲಿನಿಂದ ದುರ್ಯೋಧನನ ಶಿರವನ್ನು ಮೆಟ್ಟಿ “ಮೋಸಗಾರ!” ಎಂದು ಹೇಳಿದನು.
09058013a ಹೃಷ್ಟೇನ ರಾಜನ್ಕುರುಪಾರ್ಥಿವಸ್ಯ ಕ್ಷುದ್ರಾತ್ಮನಾ ಭೀಮಸೇನೇನ ಪಾದಂ।
09058013c ದೃಷ್ಟ್ವಾ ಕೃತಂ ಮೂರ್ಧನಿ ನಾಭ್ಯನಂದನ್ ಧರ್ಮಾತ್ಮಾನಃ ಸೋಮಕಾನಾಂ ಪ್ರಬರ್ಹಾಃ।।
ರಾಜನ್! ಕುರುಪಾರ್ಥಿವನ ತಲೆಯನ್ನು ಹರ್ಷಿತನಾದ ಕ್ಷುದ್ರಾತ್ಮ ಭೀಮಸೇನನು ಕಾಲಿನಿಂದ ತುಳಿದುದನ್ನು ನೋಡಿದ ಧರ್ಮಾತ್ಮ ಸೋಮಕರಿಗೆ ಸಂತಸವಾಗಲಿಲ್ಲ. ಅವರು ಅವನನ್ನು ಅಭಿನಂದಿಸಲೂ ಇಲ್ಲ.
09058014a ತವ ಪುತ್ರಂ ತಥಾ ಹತ್ವಾ ಕತ್ಥಮಾನಂ ವೃಕೋದರಂ।
09058014c ನೃತ್ಯಮಾನಂ ಚ ಬಹುಶೋ ಧರ್ಮರಾಜೋಽಬ್ರವೀದಿದಂ।।
ನಿನ್ನ ಮಗನನ್ನು ಹಾಗೆ ಹೊಡೆದು ಬಹಳವಾಗಿ ಕೊಚ್ಚಿಕೊಳ್ಳುತ್ತಾ ಕುಣಿಯುತ್ತಿದ್ದ ವೃಕೋದರನಿಗೆ ಧರ್ಮರಾಜನು ಹೇಳಿದನು:
09058015a ಮಾ ಶಿರೋಽಸ್ಯ ಪದಾ ಮರ್ದೀರ್ಮಾ ಧರ್ಮಸ್ತೇಽತ್ಯಗಾನ್ಮಹಾನ್।
09058015c ರಾಜಾ ಜ್ಞಾತಿರ್ಹತಶ್ಚಾಯಂ ನೈತನ್ನ್ಯಾಯ್ಯಂ ತವಾನಘ।।
“ಅನಘ! ಕಾಲಿನಿಂದ ಇವನ ತಲೆಯನ್ನು ಮೆಟ್ಟಬೇಡ! ನಿನ್ನಿಂದ ಧರ್ಮದ ಉಲ್ಲಂಘನೆಯಾಗದಿರಲಿ! ರಾಜನಾಗಿರುವ, ನಮ್ಮ ದಾಯಾದಿಯಾಗಿರುವ ಮತ್ತು ಕೆಳಗೆ ಬಿದ್ದಿರುವ ಅವನೊಡನೆ ಈ ರೀತಿ ವರ್ತಿಸುವುದು ಸರಿಯಲ್ಲ!
09058016a ವಿಧ್ವಸ್ತೋಽಯಂ ಹತಾಮಾತ್ಯೋ ಹತಭ್ರಾತಾ ಹತಪ್ರಜಃ।
09058016c ಉತ್ಸನ್ನಪಿಂಡೋ ಭ್ರಾತಾ ಚ ನೈತನ್ನ್ಯಾಯ್ಯಂ ಕೃತಂ ತ್ವಯಾ।।
ಅಮಾತ್ಯರನ್ನು, ಸಹೋದರರನ್ನು ಮತ್ತು ಪ್ರಜೆಗಳನ್ನು ಕಳೆದುಕೊಂಡ ಇವನು ಪಿಂಡಪ್ರದಾನಮಾಡುವವರೂ ಇಲ್ಲದಂತವನಾಗಿ ಸಂಪೂರ್ಣವಾಗಿ ನಾಶಹೊಂದಿದ್ದಾನೆ. ನಮ್ಮ ಸಹೋದರನಾಗಿರುವನಿಗೆ ಹೀಗೆ ಮಾಡುವುದು ಸರಿಯಲ್ಲ.
09058017a ಧಾರ್ಮಿಕೋ ಭೀಮಸೇನೋಽಸಾವಿತ್ಯಾಹುಸ್ತ್ವಾಂ ಪುರಾ ಜನಾಃ।
09058017c ಸ ಕಸ್ಮಾದ್ಭೀಮಸೇನ ತ್ವಂ ರಾಜಾನಮಧಿತಿಷ್ಠಸಿ।।
ಈ ಮೊದಲು ಜನರು “ಭೀಮಸೇನನು ಧಾರ್ಮಿಕ!” ಎಂದು ಹೇಳುತ್ತಿದ್ದರು. ಹಾಗಿದ್ದಾಗ ಭೀಮಸೇನ! ನೀನು ಏಕೆ ರಾಜನನ್ನು ಮೆಟ್ಟಿ ತುಳಿಯುತ್ತಿರುವೆ?”
09058018a ದೃಷ್ಟ್ವಾ ದುರ್ಯೋಧನಂ ರಾಜಾ ಕುಂತೀಪುತ್ರಸ್ತಥಾಗತಂ।
09058018c ನೇತ್ರಾಭ್ಯಾಮಶ್ರುಪೂರ್ಣಾಭ್ಯಾಮಿದಂ ವಚನಮಬ್ರವೀತ್।।
ರಾಜಾ ದುರ್ಯೋಧನನನ್ನು ನೋಡಿ ಕುಂತೀಪುತ್ರನು ಅವನ ಬಳಿಹೋಗಿ ಕಣ್ಣುಗಳಲ್ಲಿ ಕಣ್ಣೀರುತುಂಬಿದವನಾಗಿ ಈ ಮಾತನ್ನಾಡಿದನು:
09058019a ನೂನಮೇತದ್ಬಲವತಾ ಧಾತ್ರಾದಿಷ್ಟಂ ಮಹಾತ್ಮನಾ।
09058019c ಯದ್ವಯಂ ತ್ವಾಂ ಜಿಘಾಂಸಾಮಸ್ತ್ವಂ ಚಾಸ್ಮಾನ್ಕುರುಸತ್ತಮ।।
“ಕುರುಸತ್ತಮ! ಹೀಗೆ ನಾವು ನಿನ್ನನ್ನು ಮತ್ತು ನೀನು ನಮ್ಮನ್ನು ಕೊಲ್ಲಲು ಮುಂದಾದುದು ಬಲಶಾಲಿ ಮಹಾತ್ಮ ಧಾತ್ರನು ನಮಗೆ ವಿಧಿಸಿದುದಲ್ಲದೇ ಇನ್ನೇನು?
09058020a ಆತ್ಮನೋ ಹ್ಯಪರಾಧೇನ ಮಹದ್ವ್ಯಸನಮೀದೃಶಂ।
09058020c ಪ್ರಾಪ್ತವಾನಸಿ ಯಲ್ಲೋಭಾನ್ಮದಾದ್ಬಾಲ್ಯಾಚ್ಚ ಭಾರತ।।
ಭಾರತ! ನಿನ್ನದೇ ಅಪರಾಧಗಳಿಂದ – ಲೋಭ, ಮದ ಮತ್ತು ಬಾಲಬುದ್ಧಿ – ಇವುಗಳಿಂದ ನೀನು ಈ ರೀತಿಯ ಮಹಾ ವ್ಯಸನವನ್ನು ಪಡೆದಿರುವೆ!
09058021a ಘಾತಯಿತ್ವಾ ವಯಸ್ಯಾಂಶ್ಚ ಭ್ರಾತೄನಥ ಪಿತೄಂತಥಾ।
09058021c ಪುತ್ರಾನ್ಪೌತ್ರಾಂಸ್ತಥಾಚಾರ್ಯಾಂಸ್ತತೋಽಸಿ ನಿಧನಂ ಗತಃ।।
ಮಿತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ, ಪುತ್ರರನ್ನೂ, ಪೌತ್ರರನ್ನೂ ಮತ್ತು ಆಚಾರ್ಯರನ್ನೂ ಸಾವಿಗೀಡುಮಾಡಿ ಕೊನೆಯಲ್ಲಿ ನೀನೂ ನಿಧನಹೊಂದಿದೆ.
09058022a ತವಾಪರಾಧಾದಸ್ಮಾಭಿರ್ಭ್ರಾತರಸ್ತೇ ಮಹಾರಥಾಃ।
09058022c ನಿಹತಾ ಜ್ಞಾತಯಶ್ಚಾನ್ಯೇ ದಿಷ್ಟಂ ಮನ್ಯೇ ದುರತ್ಯಯಂ।।
ನಿನ್ನ ಅಪರಾಧದಿಂದ ನಿನ್ನ ಮಹಾರಥ ಸಹೋದರರು ಮತ್ತು ಅನ್ಯ ದಾಯಾದಿಗಳು ನಮ್ಮಿಂದ ಹತರಾದರು. ದೈವವನ್ನು ಮೀರುವುದು ಸಾಧ್ಯವಿಲ್ಲ!
09058023a ಸ್ನುಷಾಶ್ಚ ಪ್ರಸ್ನುಷಾಶ್ಚೈವ ಧೃತರಾಷ್ಟ್ರಸ್ಯ ವಿಹ್ವಲಾಃ।
09058023c ಗರ್ಹಯಿಷ್ಯಂತಿ ನೋ ನೂನಂ ವಿಧವಾಃ ಶೋಕಕರ್ಶಿತಾಃ।।
ವಿಧವೆಯರಾಗಿ ಶೋಕದಿಂದ ವಿಹ್ವಲರಾಗಿರುವ ಧೃತರಾಷ್ಟ್ರನ ಸೊಸೆಯಂದಿರೂ ಮತ್ತು ಮೊಮ್ಮಕ್ಕಳ ಪತ್ನಿಯರೂ ನಿಂದಿಸದಿರಲಿ!”
09058024a ಏವಮುಕ್ತ್ವಾ ಸುದುಃಖಾರ್ತೋ ನಿಶಶ್ವಾಸ ಸ ಪಾರ್ಥಿವಃ।
09058024c ವಿಲಲಾಪ ಚಿರಂ ಚಾಪಿ ಧರ್ಮಪುತ್ರೋ ಯುಧಿಷ್ಠಿರಃ।।
ಹೀಗೆ ಹೇಳಿ ಅತ್ಯಂತ ದುಃಖಿತನಾದ ಪಾರ್ಥಿವ ಧರ್ಮಪುತ್ರ ಯುಧಿಷ್ಠಿರನು ನಿಟ್ಟುಸಿರು ಬಿಡುತ್ತಾ ಬಹಳ ಹೊತ್ತಿನವರೆಗೆ ವಿಲಪಿಸಿದನು.”