056 ಗದಾಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಗದಾಯುದ್ಧ ಪರ್ವ

ಅಧ್ಯಾಯ 56

ಸಾರ

ಭೀಮಸೇನ-ದುರ್ಯೋಧನರ ಗದಾಯುದ್ಧ (1-67).

09056001 ಸಂಜಯ ಉವಾಚ 09056001a ತತೋ ದುರ್ಯೋಧನೋ ದೃಷ್ಟ್ವಾ ಭೀಮಸೇನಂ ತಥಾಗತಂ।
09056001c ಪ್ರತ್ಯುದ್ಯಯಾವದೀನಾತ್ಮಾ ವೇಗೇನ ಮಹತಾ ನದನ್।।

ಸಂಜಯನು ಹೇಳಿದನು: “ಅದೀನಾತ್ಮ ದುರ್ಯೋಧನನು ಹಾಗೆ ಬರುತ್ತಿದ್ದ ಭೀಮಸೇನನನ್ನು ನೋಡಿ ಜೋರಾಗಿ ಕೂಗುತ್ತಾ ವೇಗದಿಂದ ಅವನನ್ನು ಆಕ್ರಮಣಿಸಿದನು.

09056002a ಸಮಾಪೇತತುರಾನದ್ಯ ಶೃಂಗಿಣೌ ವೃಷಭಾವಿವ।
09056002c ಮಹಾನಿರ್ಘಾತಘೋಷಶ್ಚ ಸಂಪ್ರಹಾರಸ್ತಯೋರಭೂತ್।।

ಕೊಂಬುಗಳಿದ್ದ ಎರಡು ಎತ್ತುಗಳಂತೆ ಅವರು ಪರಸ್ಪರರ ಮೇಲೆ ಎರಗಿದರು. ಅವರ ಪ್ರಹಾರಗಳಿಂದ ಮಹಾ ನಿರ್ಘಾತ ಘೋಷಗಳುಂಟಾದವು.

09056003a ಅಭವಚ್ಚ ತಯೋರ್ಯುದ್ಧಂ ತುಮುಲಂ ರೋಮಹರ್ಷಣಂ।
09056003c ಜಿಗೀಷತೋರ್ಯುಧಾನ್ಯೋನ್ಯಮಿಂದ್ರಪ್ರಹ್ರಾದಯೋರಿವ।।

ಅವರಿಬ್ಬರ ಆ ತುಮುಲ ಯುದ್ಧವು ಜಯಿಸಲು ಹೋರಾಡುತ್ತಿದ್ದ ಇಂದ್ರ-ಪ್ರಹ್ರಾದರ ಯುದ್ಧದಂತೆ ನಡೆಯಿತು.

09056004a ರುಧಿರೋಕ್ಷಿತಸರ್ವಾಂಗೌ ಗದಾಹಸ್ತೌ ಮನಸ್ವಿನೌ।
09056004c ದದೃಶಾತೇ ಮಹಾತ್ಮಾನೌ ಪುಷ್ಪಿತಾವಿವ ಕಿಂಶುಕೌ।।

ಗದೆಗಳನ್ನು ಹಿಡಿದಿದ್ದ ಆ ಮನಸ್ವಿ ಮಹಾತ್ಮರಿಬ್ಬರೂ ರಕ್ತದಿಂದ ತೋಯ್ದು ಹೋದ ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಾಣುತ್ತಿದ್ದರು.

09056005a ತಥಾ ತಸ್ಮಿನ್ಮಹಾಯುದ್ಧೇ ವರ್ತಮಾನೇ ಸುದಾರುಣೇ।
09056005c ಖದ್ಯೋತಸಂಘೈರಿವ ಖಂ ದರ್ಶನೀಯಂ ವ್ಯರೋಚತ।।

ಸುದಾರುಣವಾದ ಆ ಮಹಾಯುದ್ಧವು ನಡೆಯುತ್ತಿರಲು ಆಕಾಶವು ಮಿಣುಕು ಹುಳುಗಳಿಂದ ತುಂಬಿಕೊಂಡಂತೆ ತೋರುತ್ತಿತ್ತು.

09056006a ತಥಾ ತಸ್ಮಿನ್ವರ್ತಮಾನೇ ಸಂಕುಲೇ ತುಮುಲೇ ಭೃಶಂ।
09056006c ಉಭಾವಪಿ ಪರಿಶ್ರಾಂತೌ ಯುಧ್ಯಮಾನಾವರಿಂದಮೌ।।

ಹಾಗೆ ಆ ಅತಿ ತುಮುಲ ಸಂಕುಲ ಯುದ್ಧವು ನಡೆಯುತ್ತಿರಲು ಯುದ್ಧದಲ್ಲಿ ತೊಡಗಿದ್ದ ಇಬ್ಬರು ಅರಿಂದಮರೂ ಬಳಲಿದರು.

09056007a ತೌ ಮುಹೂರ್ತಂ ಸಮಾಶ್ವಸ್ಯ ಪುನರೇವ ಪರಂತಪೌ।
09056007c ಅಭ್ಯಹಾರಯತಾಂ ತತ್ರ ಸಂಪ್ರಗೃಹ್ಯ ಗದೇ ಶುಭೇ।।

ಸ್ವಲ್ಪಹೊತ್ತು ವಿಶ್ರಮಿಸಿ ಪುನಃ ಆ ಪರಂತಪರಿಬ್ಬರೂ ಗದೆಗಳನ್ನೆತ್ತಿಕೊಂಡು ಪರಸ್ಪರರನ್ನು ಹೊಡೆಯತೊಡಗಿದರು.

09056008a ತೌ ತು ದೃಷ್ಟ್ವಾ ಮಹಾವೀರ್ಯೌ ಸಮಾಶ್ವಸ್ತೌ ನರರ್ಷಭೌ।
09056008c ಬಲಿನೌ ವಾರಣೌ ಯದ್ವದ್ವಾಶಿತಾರ್ಥೇ ಮದೋತ್ಕಟೌ।।
09056009a ಅಪಾರವೀರ್ಯೌ ಸಂಪ್ರೇಕ್ಷ್ಯ ಪ್ರಗೃಹೀತಗದಾವುಭೌ।
09056009c ವಿಸ್ಮಯಂ ಪರಮಂ ಜಗ್ಮುರ್ದೇವಗಂಧರ್ವದಾನವಾಃ।।

ಸಮಾನಬಲರಾದ, ಮಹಾವೀರ್ಯ ನರರ್ಷಭರು ದಣಿವಾರಿಸಿಕೊಂಡು ಹೆಣ್ಣಾನೆಯ ಸಲುವಾಗಿ ಎರಡು ಮದಗಜಗಳು ಸೆಣೆಸಾಡುವಂತೆ ಪುನಃ ಗದೆಗಳನ್ನು ಹಿಡಿದು ಯುದ್ದದಲ್ಲಿ ತೊಡಗಿದುದನ್ನು ನೋಡಿ ದೇವ-ಗಂಧರ್ವ-ದಾನವರೆಲ್ಲರೂ ಪರಮ ವಿಸ್ಮಿತರಾದರು.

09056010a ಪ್ರಗೃಹೀತಗದೌ ದೃಷ್ಟ್ವಾ ದುರ್ಯೋಧನವೃಕೋದರೌ।
09056010c ಸಂಶಯಃ ಸರ್ವಭೂತಾನಾಂ ವಿಜಯೇ ಸಮಪದ್ಯತ।।

ದುರ್ಯೋಧನ-ವೃಕೋದರರಿಬ್ಬರೂ ಗದೆಗಳನ್ನು ಹಿಡಿದುದನ್ನು ನೋಡಿ ಯಾರಿಗೆ ವಿಜಯವಾಗುವುದೆಂದು ಸರ್ವಭೂತಗಳಲ್ಲಿ ಸಂಶಯವುಂಟಾಯಿತು.

09056011a ಸಮಾಗಮ್ಯ ತತೋ ಭೂಯೋ ಭ್ರಾತರೌ ಬಲಿನಾಂ ವರೌ।
09056011c ಅನ್ಯೋನ್ಯಸ್ಯಾಂತರಪ್ರೇಪ್ಸೂ ಪ್ರಚಕ್ರಾತೇಽಂಬರಂ ಪ್ರತಿ।।

ಬಲಿಗಳಲ್ಲಿ ಶ್ರೇಷ್ಠರಾದ ಅವರಿಬ್ಬರು ಸಹೋದರರೂ ಅನ್ಯೋನ್ಯರ ನ್ಯೂನತೆಗಳನ್ನು ಹುಡುಕುತ್ತಾ ಆಕಾಶದತ್ತ ಹಾರತೊಡಗಿದರು.

09056012a ಯಮದಂಡೋಪಮಾಂ ಗುರ್ವೀಮಿಂದ್ರಾಶನಿಮಿವೋದ್ಯತಾಂ।
09056012c ದದೃಶುಃ ಪ್ರೇಕ್ಷಕಾ ರಾಜನ್ರೌದ್ರೀಂ ವಿಶಸನೀಂ ಗದಾಂ।।

ರಾಜನ್! ಯಮದಂಡದಂತಿದ್ದ, ಮೇಲೆತ್ತಿದ್ದ ಇಂದ್ರನ ವಜ್ರಾಯುಧದಂತೆ ರೌದ್ರ ಕಿಡಿಗಳನ್ನು ಕಾರುತ್ತಿದ್ದ ಆ ಭಾರ ಗದೆಯನ್ನು ಪ್ರೇಕ್ಷಕರು ನೋಡಿದರು.

09056013a ಆವಿಧ್ಯತೋ ಗದಾಂ ತಸ್ಯ ಭೀಮಸೇನಸ್ಯ ಸಂಯುಗೇ।
09056013c ಶಬ್ದಃ ಸುತುಮುಲೋ ಘೋರೋ ಮುಹೂರ್ತಂ ಸಮಪದ್ಯತ।।

ಭೀಮನು ರಣದಲ್ಲಿ ಗದೆಯನ್ನು ತಿರುಗಿಸುತ್ತಿದ್ದಾಗ ಮುಹೂರ್ತಕಾಲ ಘೋರ ತುಮುಲ ಶಬ್ಧವು ಕೇಳಿಬಂದಿತು.

09056014a ಆವಿಧ್ಯಂತಮಭಿಪ್ರೇಕ್ಷ್ಯ ಧಾರ್ತರಾಷ್ಟ್ರೋಽಥ ಪಾಂಡವಂ।
09056014c ಗದಾಮಲಘುವೇಗಾಂ ತಾಂ ವಿಸ್ಮಿತಃ ಸಂಬಭೂವ ಹ।।

ಪಾಂಡವನು ಹಾಗೆ ವೇಗದಿಂದ ಅನೇಕರೀತಿಗಳಲ್ಲಿ ಗದೆಯನ್ನು ತಿರುಗಿಸುತ್ತಿರುವುದನ್ನು ನೋಡಿ ಧಾರ್ತರಾಷ್ಟ್ರನೂ ವಿಸ್ಮಿತನಾದನು.

09056015a ಚರಂಶ್ಚ ವಿವಿಧಾನ್ಮಾರ್ಗಾನ್ಮಂಡಲಾನಿ ಚ ಭಾರತ।
09056015c ಅಶೋಭತ ತದಾ ವೀರೋ ಭೂಯ ಏವ ವೃಕೋದರಃ।।

ಭಾರತ! ವಿವಿಧ ಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವೀರ ವೃಕೋದರನು ಇನ್ನೂ ಹೆಚ್ಚಾಗಿ ಶೋಭಿಸಿದನು.

09056016a ತೌ ಪರಸ್ಪರಮಾಸಾದ್ಯ ಯತ್ತಾವನ್ಯೋನ್ಯರಕ್ಷಣೇ।
09056016c ಮಾರ್ಜಾರಾವಿವ ಭಕ್ಷಾರ್ಥೇ ತತಕ್ಷಾತೇ ಮುಹುರ್ಮುಹುಃ।।

ಪರಸ್ಪರರನ್ನು ಅರಕ್ಷಣಗೊಳಿಸಲು ಪ್ರಯತ್ನಿಸುತ್ತಿದ್ದ ಅವರಿಬ್ಬರೂ ತಿನಿಸಿಗಾಗಿ ಕಚ್ಚಾಡುವ ಬೆಕ್ಕುಗಳಂತೆ ಪುನಃ ಪುನಃ ಅನ್ಯೋನ್ಯರನ್ನು ಗಾಯಗೊಳಿಸುತ್ತಿದ್ದರು.

09056017a ಅಚರದ್ಭೀಮಸೇನಸ್ತು ಮಾರ್ಗಾನ್ಬಹುವಿಧಾಂಸ್ತಥಾ।
09056017c ಮಂಡಲಾನಿ ವಿಚಿತ್ರಾಣಿ ಸ್ಥಾನಾನಿ ವಿವಿಧಾನಿ ಚ।।
09056018a ಗೋಮೂತ್ರಿಕಾಣಿ ಚಿತ್ರಾಣಿ ಗತಪ್ರತ್ಯಾಗತಾನಿ ಚ।

ಭೀಮಸೇನನು ಬಹುವಿಧದ ಮಾರ್ಗಗಳನ್ನು, ವಿಚಿತ್ರ ಮಂಡಲಗಳನ್ನು ಮತ್ತು ವಿವಿಧ ಸ್ಥಾನಗಳನ್ನು, ಗೋಮೂತ್ರ್ಕವೇ ಮೊದಲಾದ ವಿಚಿತ್ರ ಗತ-ಪ್ರತ್ಯಾಗತಗಳನ್ನು ಬಳಸುತ್ತಿದ್ದನು.

09056018c ಪರಿಮೋಕ್ಷಂ ಪ್ರಹಾರಾಣಾಂ ವರ್ಜನಂ ಪರಿಧಾವನಂ।।
09056019a ಅಭಿದ್ರವಣಮಾಕ್ಷೇಪಮವಸ್ಥಾನಂ ಸವಿಗ್ರಹಂ।
09056019c ಪರಾವರ್ತನಸಂವರ್ತಮವಪ್ಲುತಮಥಾಪ್ಲುತಂ।।
09056019e ಉಪನ್ಯಸ್ತಮಪನ್ಯಸ್ತಂ ಗದಾಯುದ್ಧವಿಶಾರದೌ।।

ಗದಾಯುದ್ಧವಿಶಾರದರಾದ ಅವರಿಬ್ಬರೂ ಶತ್ರುವಿನ ಎಡ ಮತ್ತು ಬಲಪಕ್ಕಗಳಿಗೆ ಧಾವಿಸುತ್ತಾ ಪ್ರಹಾರಗಳಿಂದ ತಪ್ಪಿಸಿಕೊಂಡು ವ್ಯರ್ಥಗೊಳಿಸುತ್ತಿದ್ದರು. ಅಭಿದ್ರವಣ (ವೇಗದಿಂದ ಎದುರಾಳಿಗೆ ಅಭಿಮುಖನಾಗಿ ಹೋಗುವುದು), ಆಕ್ಷೇಪ (ಎದುರಾಳಿಯನ್ನು ಬೀಳಿಸುವುದು), ಅವಸ್ಥಾನ (ಹಂದಾಡದೇ ಸ್ಥಿರವಾಗಿರುವುದು), ಸವಿಗ್ರಹ (ಶತ್ರುವು ಮೇಲೆದ್ದನಂತರ ಅವನೊಂದಿಗೆ ಪುನಃ ಯುದ್ಧಮಾಡುವುದು), ಪರಾವರ್ತನ (ಶತ್ರುವಿನ ಸುತ್ತಲೂ ಸಂಚರಿಸುವುದು), ಸಂವರ್ತ (ತನ್ನ ಸುತ್ತಲೂ ಸಂಚರಿಸುತ್ತಿರುವ ಶತ್ರುವನ್ನು ತಡೆಯುವುದು), ಅವಪ್ಲುತ (ದೇಹವನ್ನು ಬಗ್ಗಿಸಿಕೊಂಡು ನಡೆದು ಪ್ರಹಾರದಿಂದ ತಪ್ಪಿಸಿಕೊಳ್ಳುವುದು), ಉಪಪ್ಲುತ (ಹಿಂದಕ್ಕೆ ಸರಿದು ಪ್ರಹಾರದಿಂದ ತಪ್ಪಿಸಿಕೊಳ್ಳುವುದು), ಉಪನ್ಯಸ್ತ (ಪ್ರಹರಿಸುವುದು), ಅಪನ್ಯಸ್ತ (ಹಿಂದೆ ತಿರುಗಿ ಆಯುಧವಿರುವ ಕೈಯನ್ನು ಹಿಂದೆಮಾಡಿ ಹಿಮ್ಮುಖನಾಗಿಯೇ ಪ್ರಹರಿಸುವುದು) – ಇವೇ ಕ್ರಮಗಳನ್ನು ಬಳಸಿ ಹೋರಾಡುತ್ತಿದ್ದರು.

09056020a ಏವಂ ತೌ ವಿಚರಂತೌ ತು ನ್ಯಘ್ನತಾಂ ವೈ ಪರಸ್ಪರಂ।
09056020c ವಂಚಯಂತೌ ಪುನಶ್ಚೈವ ಚೇರತುಃ ಕುರುಸತ್ತಮೌ।।

ಹೀಗೆ ಆ ಇಬ್ಬರು ಕುರುಸತ್ತಮರೂ ಪರಸ್ಪರರನ್ನು ವಂಚಿಸುತ್ತಾ ಪುನಃ ಪುನಃ ಸಂಚರಿಸುತ್ತಿದ್ದರು.

09056021a ವಿಕ್ರೀಡಂತೌ ಸುಬಲಿನೌ ಮಂಡಲಾನಿ ಪ್ರಚೇರತುಃ।
09056021c ಗದಾಹಸ್ತೌ ತತಸ್ತೌ ತು ಮಂಡಲಾವಸ್ಥಿತೌ ಬಲೀ।।

ಗದೆಗಳನ್ನು ಹಿಡಿದು ಮಂಡಲಾಕಾರಗಳಲ್ಲಿದ್ದು ಮಂಡಲಾಕಾರಗಳಲ್ಲಿ ತಿರುಗುತ್ತಾ ಆ ಮಹಾಬಲಶಾಲಿಗಳು ಆಟವಾಡುತ್ತಿರುವರೋ ಎಂಬಂತೆ ತೋರುತ್ತಿತ್ತು.

09056022a ದಕ್ಷಿಣಂ ಮಂಡಲಂ ರಾಜನ್ಧಾರ್ತರಾಷ್ಟ್ರೋಽಭ್ಯವರ್ತತ।
09056022c ಸವ್ಯಂ ತು ಮಂಡಲಂ ತತ್ರ ಭೀಮಸೇನೋಽಭ್ಯವರ್ತತ।।

ರಾಜನ್! ಧಾರ್ತರಾಷ್ಟ್ರನು ಮಂಡಲದ ಬಲಭಾಗದ ಸಂಚರಿಸುತ್ತಿದ್ದರೆ ಭೀಮಸೇನನು ಎಡಭಾಗದಲ್ಲಿದ್ದನು.

09056023a ತಥಾ ತು ಚರತಸ್ತಸ್ಯ ಭೀಮಸ್ಯ ರಣಮೂರ್ಧನಿ।
09056023c ದುರ್ಯೋಧನೋ ಮಹಾರಾಜ ಪಾರ್ಶ್ವದೇಶೇಽಭ್ಯತಾಡಯತ್।।

ಮಹಾರಾಜ! ಹೀಗೆ ರಣಮೂರ್ಧನಿಯಲ್ಲಿ ಸಂಚರಿಸುತ್ತಿರುವಾಗ ದುರ್ಯೋಧನನು ಭೀಮನ ಪಕ್ಕೆಯನ್ನು ಗದೆಯಿಂದ ಪ್ರಹರಿಸಿದನು.

09056024a ಆಹತಸ್ತು ತದಾ ಭೀಮಸ್ತವ ಪುತ್ರೇಣ ಭಾರತ।
09056024c ಆವಿಧ್ಯತ ಗದಾಂ ಗುರ್ವೀಂ ಪ್ರಹಾರಂ ತಮಚಿಂತಯನ್।।

ಭಾರತ! ನಿನ್ನ ಮಗನ ಹೊಡೆತವನ್ನು ಗಣನೆಗೆ ತೆಗೆದುಕೊಳ್ಳದೇ ಭೀಮನು ಆ ಭಾರವಾದ ಗದೆಯನ್ನು ಜೋರಾಗಿ ತಿರುಗಿಸತೊಡಗಿದನು.

09056025a ಇಂದ್ರಾಶನಿಸಮಾಂ ಘೋರಾಂ ಯಮದಂಡಮಿವೋದ್ಯತಾಂ।
09056025c ದದೃಶುಸ್ತೇ ಮಹಾರಾಜ ಭೀಮಸೇನಸ್ಯ ತಾಂ ಗದಾಂ।।

ಮಹಾರಾಜ! ಮೇಲೆ ಎತ್ತಿಹಿಡಿದಿರುವ ಭೀಮಸೇನನ ಆ ಗದೆಯು ಇಂದ್ರನ ವಜ್ರಾಯುಧದಂತೆ ಮತ್ತು ಯಮದಂಡದಂತೆ ಕಂಡಿತು.

09056026a ಆವಿಧ್ಯಂತಂ ಗದಾಂ ದೃಷ್ಟ್ವಾ ಭೀಮಸೇನಂ ತವಾತ್ಮಜಃ।
09056026c ಸಮುದ್ಯಮ್ಯ ಗದಾಂ ಘೋರಾಂ ಪ್ರತ್ಯವಿಧ್ಯದರಿಂದಮಃ।।

ಭೀಮಸೇನನು ಗದೆಯನ್ನು ತಿರುಗಿಸುತ್ತಿರುವುದನ್ನು ನೋಡಿದ ನಿನ್ನ ಮಗ ಅರಿಂದಮನು ತನ್ನ ಘೋರಗದೆಯನ್ನು ಮೇಲೆತ್ತಿ ಅವನ ಮೇಲೆ ಪ್ರಹರಿಸಿದನು.

09056027a ಗದಾಮಾರುತವೇಗೇನ ತವ ಪುತ್ರಸ್ಯ ಭಾರತ।
09056027c ಶಬ್ದ ಆಸೀತ್ಸುತುಮುಲಸ್ತೇಜಶ್ಚ ಸಮಜಾಯತ।।

ಭಾರತ! ನಿನ್ನ ಮಗನ ಗದೆಯು ಮಾರುತನ ವೇಗದಿಂದ ಹೋಗುತ್ತಿರುವಾಗ ತುಮುಲ ಶಬ್ಧವೂ ಬೆಂಕಿಯ ಕಿಡಿಗಳೂ ಹುಟ್ಟಿಕೊಂಡವು.

09056028a ಸ ಚರನ್ವಿವಿಧಾನ್ಮಾರ್ಗಾನ್ಮಂಡಲಾನಿ ಚ ಭಾಗಶಃ।
09056028c ಸಮಶೋಭತ ತೇಜಸ್ವೀ ಭೂಯೋ ಭೀಮಾತ್ಸುಯೋಧನಃ।।

ವಿವಿಧ ಮಾರ್ಗಗಳಲ್ಲಿ ಮತ್ತು ಮಂಡಲಗಳಲ್ಲಿ ಸಂಚರಿಸುತ್ತಿದ್ದ ತೇಜಸ್ವೀ ಸುಯೋಧನನು ಭೀಮನಿಗಿಂತಲೂ ಹೆಚ್ಚಾಗಿ ಶೋಭಿಸಿದನು.

09056029a ಆವಿದ್ಧಾ ಸರ್ವವೇಗೇನ ಭೀಮೇನ ಮಹತೀ ಗದಾ।
09056029c ಸಧೂಮಂ ಸಾರ್ಚಿಷಂ ಚಾಗ್ನಿಂ ಮುಮೋಚೋಗ್ರಾ ಮಹಾಸ್ವನಾ।।

ಭೀಮನು ಅತ್ಯಂತ ರಭಸದಿಂದ ತಿರುಗಿಸುತ್ತಿದ್ದ ಆ ಮಾಹಾ ಗದೆಯು ಮಹಾಧ್ವನಿಗೈಯುತ್ತಾ ಧೂಮಸಹಿತ ಜ್ವಾಲೆಗಳನ್ನು ಉಗುಳುತ್ತಿತ್ತು.

09056030a ಆಧೂತಾಂ ಭೀಮಸೇನೇನ ಗದಾಂ ದೃಷ್ಟ್ವಾ ಸುಯೋಧನಃ।
09056030c ಅದ್ರಿಸಾರಮಯೀಂ ಗುರ್ವೀಮಾವಿಧ್ಯನ್ಬಹ್ವಶೋಭತ।।

ಭೀಮಸೇನನಿಂದ ತಿರುಗಿಸಲ್ಪಡುತ್ತಿದ್ದ ಆ ಗದೆಯನ್ನು ನೋಡಿ ಸುಯೋಧನನು ಲೋಹಮಯವಾದ ತನ್ನ ಭಾರ ಗದೆಯನ್ನೂ ತಿರುಗಿಸಿ ಬಹಳವಾಗಿ ಶೋಭಿಸಿದನು.

09056031a ಗದಾಮಾರುತವೇಗಂ ಹಿ ದೃಷ್ಟ್ವಾ ತಸ್ಯ ಮಹಾತ್ಮನಃ।
09056031c ಭಯಂ ವಿವೇಶ ಪಾಂಡೂನ್ವೈ ಸರ್ವಾನೇವ ಸಸೋಮಕಾನ್।।

ಮಾರುತವೇಗದಲ್ಲಿ ಬರುತ್ತಿದ್ದ ಆ ಮಹಾತ್ಮನ ಗದೆಯನ್ನು ನೋಡಿ ಸರ್ವ ಪಾಂಡವ-ಸೋಮಕರಲ್ಲಿ ಭಯವು ಆವರಿಸಿತು.

09056032a ತೌ ದರ್ಶಯಂತೌ ಸಮರೇ ಯುದ್ಧಕ್ರೀಡಾಂ ಸಮಂತತಃ।
09056032c ಗದಾಭ್ಯಾಂ ಸಹಸಾನ್ಯೋನ್ಯಮಾಜಘ್ನತುರರಿಂದಮೌ।।

ಆ ಅರಿಂದಮರಿಬ್ಬರೂ ಸಮರದಲ್ಲಿ ಸುತ್ತಲೂ ಕುಳಿತವರಿಗೆ ಯುದ್ಧಕ್ರೀಡೆಯನ್ನು ಪ್ರದರ್ಶಿಸುತ್ತಿದ್ದರು. ಮರುಕ್ಷಣಗಳಲ್ಲಿಯೇ ಗದೆಗಳಿಂದ ಪರಸ್ಪರರನ್ನು ಅಪ್ಪಳಿಸುತ್ತಿದ್ದರು.

09056033a ತೌ ಪರಸ್ಪರಮಾಸಾದ್ಯ ದಂಷ್ಟ್ರಾಭ್ಯಾಂ ದ್ವಿರದೌ ಯಥಾ।
09056033c ಅಶೋಭೇತಾಂ ಮಹಾರಾಜ ಶೋಣಿತೇನ ಪರಿಪ್ಲುತೌ।।

ಮಹಾರಾಜ! ಎರಡು ಮದಿಸಿದ ಆನೆಗಳು ಕೊಂಬುಗಳಿಂದ ಸೆಣಸಾಡಿ ರಕ್ತಸಿಕ್ತವಾಗುವಂತೆ ಅವರಿಬ್ಬರೂ ರಕ್ತದಿಂದ ತೋಯ್ದುಹೋಗಿದ್ದರು.

09056034a ಏವಂ ತದಭವದ್ಯುದ್ಧಂ ಘೋರರೂಪಮಸಂವೃತಂ।
09056034c ಪರಿವೃತ್ತೇಽಹನಿ ಕ್ರೂರಂ ವೃತ್ರವಾಸವಯೋರಿವ।।

ದಿನವು ಕಳೆಯುತ್ತಾ ಬಂದಾಗ ಹೀಗೆ ವೃತ್ರ-ವಾಸವರ ನಡುವೆ ಹೇಗೋ ಹಾಗೆ ಅವರಿಬ್ಬರ ನಡುವೆ ಘೋರ ಕ್ರೂರ ಯುದ್ಧವು ನಡೆಯಿತು.

09056035a ದೃಷ್ಟ್ವಾ ವ್ಯವಸ್ಥಿತಂ ಭೀಮಂ ತವ ಪುತ್ರೋ ಮಹಾಬಲಃ।
09056035c ಚರಂಶ್ಚಿತ್ರತರಾನ್ಮಾರ್ಗಾನ್ಕೌಂತೇಯಮಭಿದುದ್ರುವೇ।।

ಭೀಮನು ನಿಂತಿರುವುದನ್ನು ನೋಡಿ ನಿನ್ನ ಮಹಾಬಲ ಮಗನು ವಿಚಿತ್ರ ಮಾರ್ಗಗಳಲ್ಲಿ ಸಂಚರಿಸುತ್ತಾ ಕೌಂತೇಯನನ್ನು ಆಕ್ರಮಣಿಸಿದನು.

09056036a ತಸ್ಯ ಭೀಮೋ ಮಹಾವೇಗಾಂ ಜಾಂಬೂನದಪರಿಷ್ಕೃತಾಂ।
09056036c ಅಭಿಕ್ರುದ್ಧಸ್ಯ ಕ್ರುದ್ಧಸ್ತು ತಾಡಯಾಮಾಸ ತಾಂ ಗದಾಂ।।

ಮಹಾವೇಗದಿಂದ ಬರುತ್ತಿದ್ದ ಕ್ರುದ್ಧನ ಆ ಬಂಗಾರ-ಪರಿಷ್ಕೃತ ಗದೆಯನ್ನು ಕ್ರುದ್ಧನಾದ ಭೀಮನು ಪ್ರಹರಿಸಿದನು.

09056037a ಸವಿಸ್ಫುಲಿಂಗೋ ನಿರ್ಹ್ರಾದಸ್ತಯೋಸ್ತತ್ರಾಭಿಘಾತಜಃ।
09056037c ಪ್ರಾದುರಾಸೀನ್ಮಹಾರಾಜ ಸೃಷ್ಟಯೋರ್ವಜ್ರಯೋರಿವ।।

ಮಹಾರಾಜ! ವಜ್ರಾಯುಧಗಳಂತೆ ಸಂಘರ್ಷಿಸಿದ ಆ ಎರಡು ಗದೆಗಳಿಂದ ಅಗ್ನಿಯ ಕಿಡಿಗಳಿಂದ ಕೂಡಿದ ಮಹಾ ಶಬ್ಧವು ಕೇಳಿಬಂದಿತು.

09056038a ವೇಗವತ್ಯಾ ತಯಾ ತತ್ರ ಭೀಮಸೇನಪ್ರಮುಕ್ತಯಾ।
09056038c ನಿಪತಂತ್ಯಾ ಮಹಾರಾಜ ಪೃಥಿವೀ ಸಮಕಂಪತ।।

ಮಹಾರಾಜ! ಭೀಮಸೇನನಿಂದ ಪ್ರಹರಿಸಲ್ಪಟ್ಟ ಆ ಗದೆಯು ವೇಗದಿಂದ ಬೀಳಲು ಭೂಮಿಯೇ ಕಂಪಿಸಿತು.

09056039a ತಾಂ ನಾಮೃಷ್ಯತ ಕೌರವ್ಯೋ ಗದಾಂ ಪ್ರತಿಹತಾಂ ರಣೇ।
09056039c ಮತ್ತೋ ದ್ವಿಪ ಇವ ಕ್ರುದ್ಧಃ ಪ್ರತಿಕುಂಜರದರ್ಶನಾತ್।।

ಮದಿಸಿದ ಆನೆಯೊಂದು ಇನ್ನೊಂದು ಮದಿಸಿದ ಆನೆಯನ್ನು ನೋಡಿ ಕ್ರುದ್ಧಗೊಳ್ಳುವಂತೆ ರಣದಲ್ಲಿ ಭೀಮನ ಗದೆಯು ತನ್ನ ಗದೆಗೆ ಹೊಡೆದುದನ್ನು ನೋಡಿ ಕೌರವ್ಯನು ಸಹಿಸಿಕೊಳ್ಳಲಿಲ್ಲ.

09056040a ಸ ಸವ್ಯಂ ಮಂಡಲಂ ರಾಜನ್ನುದ್ಭ್ರಾಮ್ಯ ಕೃತನಿಶ್ಚಯಃ।
09056040c ಆಜಘ್ನೇ ಮೂರ್ಧ್ನಿ ಕೌಂತೇಯಂ ಗದಯಾ ಭೀಮವೇಗಯಾ।।

ರಾಜನ್! ಅವನನ್ನು ಕೊಲ್ಲಲು ನಿಶ್ಚಯಿಸಿ ದುರ್ಯೋಧನನು ಮಂಡಲದ ಎಡಭಾಗದಲ್ಲಿ ಸಂಚರಿಸಿ ಗದೆಯಿಂದ ಭೀಮವೇಗದಲ್ಲಿ ಕೌಂತೇಯನ ನೆತ್ತಿಯಮೇಲೆ ಹೊಡೆದನು.

09056041a ತಯಾ ತ್ವಭಿಹತೋ ಭೀಮಃ ಪುತ್ರೇಣ ತವ ಪಾಂಡವಃ।
09056041c ನಾಕಂಪತ ಮಹಾರಾಜ ತದದ್ಭುತಮಿವಾಭವತ್।।

ಮಹಾರಾಜ! ನಿನ್ನ ಮಗನಿಂದ ಹಾಗೆ ಹೊಡೆಯಲ್ಪಟ್ಟ ಪಾಂಡವ ಭೀಮನು ಸ್ವಲ್ಪವೂ ತತ್ತರಿಸಲಿಲ್ಲ. ಅದೊಂದು ಅದ್ಭುತವಾಗಿತ್ತು.

09056042a ಆಶ್ಚರ್ಯಂ ಚಾಪಿ ತದ್ರಾಜನ್ಸರ್ವಸೈನ್ಯಾನ್ಯಪೂಜಯನ್।
09056042c ಯದ್ಗದಾಭಿಹತೋ ಭೀಮೋ ನಾಕಂಪತ ಪದಾತ್ಪದಂ।।

ಗದೆಯಿಂದ ಹೊಡೆಯಲ್ಪಟ್ಟರೂ ಹೆಜ್ಜೆಯನ್ನು ಕಿತ್ತಿಡದೇ ಅಕಂಪನನಾಗಿದ್ದ ಭೀಮನನ್ನು ನೋಡಿ ಜನರಲ್ಲಿ ಆಶ್ಚರ್ಯವುಂಟಾಯಿತು ಮತ್ತು ಸರ್ವಸೇನೆಗಳೂ ಅವನನ್ನು ಗೌರವಿಸಿದವು.

09056043a ತತೋ ಗುರುತರಾಂ ದೀಪ್ತಾಂ ಗದಾಂ ಹೇಮಪರಿಷ್ಕೃತಾಂ।
09056043c ದುರ್ಯೋಧನಾಯ ವ್ಯಸೃಜದ್ಭೀಮೋ ಭೀಮಪರಾಕ್ರಮಃ।।

ಆಗ ಭೀಮಪರಾಕ್ರಮಿ ಭೀಮನು ಉರಿಯುತ್ತಿರುವ ಹೇಮಪರಿಷ್ಕೃತ ಭಾರ ಗದೆಯನ್ನು ದುರ್ಯೋಧನನ ಮೇಲೆ ಎಸೆದನು.

09056044a ತಂ ಪ್ರಹಾರಮಸಂಭ್ರಾಂತೋ ಲಾಘವೇನ ಮಹಾಬಲಃ।
09056044c ಮೋಘಂ ದುರ್ಯೋಧನಶ್ಚಕ್ರೇ ತತ್ರಾಭೂದ್ವಿಸ್ಮಯೋ ಮಹಾನ್।।

ಸ್ವಲ್ಪವೂ ಗಾಬರಿಗೊಳ್ಳದೇ ಮಹಾಬಲ ದುರ್ಯೋಧನನು ತನ್ನ ಚಲನ ಲಾಘವದಿಂದ ಆ ಪ್ರಹಾರದಿಂದ ತಪ್ಪಿಸಿಕೊಂಡನು. ಅದು ಮಹಾ ವಿಸ್ಮಯವಾಗಿತ್ತು.

09056045a ಸಾ ತು ಮೋಘಾ ಗದಾ ರಾಜನ್ಪತಂತೀ ಭೀಮಚೋದಿತಾ।
09056045c ಚಾಲಯಾಮಾಸ ಪೃಥಿವೀಂ ಮಹಾನಿರ್ಘಾತನಿಸ್ವನಾ।।

ರಾಜನ್! ಭೀಮನಿಂದ ಎಸೆಯಲ್ಪಟ್ಟ ಗದೆಯು ವ್ಯರ್ಥವಾಗಿ ಮಹಾನಿರ್ಘಾತಧ್ವನಿಯೊಂದಿಗೆ ಬಿದ್ದು ಭೂಮಿಯನ್ನು ನಡುಗಿಸಿತು.

09056046a ಆಸ್ಥಾಯ ಕೌಶಿಕಾನ್ಮಾರ್ಗಾನುತ್ಪತನ್ಸ ಪುನಃ ಪುನಃ।
09056046c ಗದಾನಿಪಾತಂ ಪ್ರಜ್ಞಾಯ ಭೀಮಸೇನಮವಂಚಯತ್।।

ಗದೆಯು ಕೆಳಗೆ ಬಿದ್ದುದನ್ನು ತಿಳಿದು ಕೌಶಿಕ ಮಾರ್ಗಗಳನ್ನು ಬಳಸಿ ಪುನಃ ಪುನಃ ಕುಪ್ಪಳಿಸುತ್ತಾ ದುರ್ಯೋಧನನು ಭೀಮಸೇನನನ್ನು ಮೋಸಗೊಳಿಸಿದನು.

09056047a ವಂಚಯಿತ್ವಾ ತಥಾ ಭೀಮಂ ಗದಯಾ ಕುರುಸತ್ತಮಃ।
09056047c ತಾಡಯಾಮಾಸ ಸಂಕ್ರುದ್ಧೋ ವಕ್ಷೋದೇಶೇ ಮಹಾಬಲಃ।।

ಹಾಗೆ ಭೀಮಸೇನನನ್ನು ವಂಚಿಸುತ್ತಾ ಮಹಾಬಲ ಕುರುಸತ್ತಮನು ಕ್ರುದ್ಧನಾಗಿ ಗದೆಯಿಂದ ಭೀಮನ ವಕ್ಷಸ್ಥಳಕ್ಕೆ ಹೊಡೆದನು.

09056048a ಗದಯಾಭಿಹತೋ ಭೀಮೋ ಮುಹ್ಯಮಾನೋ ಮಹಾರಣೇ।
09056048c ನಾಭ್ಯಮನ್ಯತ ಕರ್ತವ್ಯಂ ಪುತ್ರೇಣಾಭ್ಯಾಹತಸ್ತವ।।

ನಿನ್ನ ಮಗನ ಗದೆಯಿಂದ ಹೊಡೆಯಲ್ಪಟ್ಟ ಭೀಮನು ಮಹಾರಣದಲ್ಲಿ ಮೂರ್ಛೆಹೊಂದಿದಂತವನಾಗಿ ಏನು ಮಾಡಬೇಕೆಂದು ತಿಳಿಯದೇ ಹೋದನು.

09056049a ತಸ್ಮಿಂಸ್ತಥಾ ವರ್ತಮಾನೇ ರಾಜನ್ಸೋಮಕಪಾಂಡವಾಃ।
09056049c ಭೃಶೋಪಹತಸಂಕಲ್ಪಾ ನಹೃಷ್ಟಮನಸೋಽಭವನ್।।

ರಾಜನ್! ಅದು ಹಾಗೆ ನಡೆಯುತ್ತಿರಲು ಸೋಮಕ-ಪಾಂಡವರು ಬಹಳ ಹತಸಂಕಲ್ಪರಾಗಿ ದುಃಖಿತರಾದರು.

09056050a ಸ ತು ತೇನ ಪ್ರಹಾರೇಣ ಮಾತಂಗ ಇವ ರೋಷಿತಃ।
09056050c ಹಸ್ತಿವದ್ಧಸ್ತಿಸಂಕಾಶಮಭಿದುದ್ರಾವ ತೇ ಸುತಂ।।

ಆ ಹೊಡೆತದಿಂದ ಆನೆಯಂತೆ ರೋಷಗೊಂಡ ಭೀಮನು ಒಂದು ಆನೆಯು ಇನ್ನೊಂದು ಆನೆಯನ್ನು ಆಕ್ರಮಣಿಸುವಂತೆ ನಿನ್ನ ಮಗನ ಮೇಲೆ ಎರಗಿದನು.

09056051a ತತಸ್ತು ರಭಸೋ ಭೀಮೋ ಗದಯಾ ತನಯಂ ತವ।
09056051c ಅಭಿದುದ್ರಾವ ವೇಗೇನ ಸಿಂಹೋ ವನಗಜಂ ಯಥಾ।।

ಸಿಂಹವು ಕಾಡಾನೆಯನ್ನು ಹೇಗೋ ಹಾಗೆ ಭೀಮನು ರಭಸದಿಂದ ನಿನ್ನ ಮಗನ ಮೇಲೆ ಆಕ್ರಮಣಿಸಿದನು.

09056052a ಉಪಸೃತ್ಯ ತು ರಾಜಾನಂ ಗದಾಮೋಕ್ಷವಿಶಾರದಃ।
09056052c ಆವಿಧ್ಯತ ಗದಾಂ ರಾಜನ್ಸಮುದ್ದಿಶ್ಯ ಸುತಂ ತವ।।

ರಾಜನ್! ಗದೆಯನ್ನು ಪ್ರಹರಿಸುವುದರಲ್ಲಿ ವಿಶಾರದನಾದ ಅವನು ನಿನ್ನ ಮಗನನ್ನು ಸಮೀಪಿಸಿ ಗದೆಯನ್ನೊಮ್ಮೆ ತಿರುಗಿಸಿ ಅವನ ಮೇಲೆ ಬಿಸುಟನು.

09056053a ಅತಾಡಯದ್ಭೀಮಸೇನಃ ಪಾರ್ಶ್ವೇ ದುರ್ಯೋಧನಂ ತದಾ।
09056053c ಸ ವಿಹ್ವಲಃ ಪ್ರಹಾರೇಣ ಜಾನುಭ್ಯಾಮಗಮನ್ಮಹೀಂ।।

ಹಾಗೆ ಭೀಮಸೇನನು ದುರ್ಯೋಧನನ ಪಕ್ಕೆಯನ್ನು ಹೊಡೆಯಲು ಆ ಪ್ರಹಾರದಿಂದ ವಿಹ್ವಲನಾಗಿ ದುರ್ಯೋಧನು ಮಂಡಿಯೂರಿ ನೆಲದ ಮೇಲೆ ಕುಸಿದನು.

09056054a ತಸ್ಮಿಂಸ್ತು ಭರತಶ್ರೇಷ್ಠೇ ಜಾನುಭ್ಯಾಮವನೀಂ ಗತೇ।
09056054c ಉದತಿಷ್ಠತ್ತತೋ ನಾದಃ ಸೃಂಜಯಾನಾಂ ಜಗತ್ಪತೇ।।

ಜಗತ್ಪತೇ! ಆ ಭರತಶ್ರೇಷ್ಠನು ಮಂಡಿಯೂರಿ ನೆಲದಲ್ಲಿ ಕುಸಿಯಲು ಸೃಂಜಯರ ಹರ್ಷೋದ್ಗಾರವು ಗಗನಕ್ಕೇರಿತು.

09056055a ತೇಷಾಂ ತು ನಿನದಂ ಶ್ರುತ್ವಾ ಸೃಂಜಯಾನಾಂ ನರರ್ಷಭಃ।
09056055c ಅಮರ್ಷಾದ್ಭರತಶ್ರೇಷ್ಠ ಪುತ್ರಸ್ತೇ ಸಮಕುಪ್ಯತ।।

ಭರತಶ್ರೇಷ್ಠ! ಸೃಂಜಯರ ಆ ನಿನಾದವನ್ನು ಕೇಳಿ ನಿನ್ನ ಪುತ್ರ ನರರ್ಷಭನು ಅಸಹನೆಯಿಂದ ಕುಪಿತನಾದನು.

09056056a ಉತ್ಥಾಯ ತು ಮಹಾಬಾಹುಃ ಕ್ರುದ್ಧೋ ನಾಗ ಇವ ಶ್ವಸನ್।
09056056c ದಿಧಕ್ಷನ್ನಿವ ನೇತ್ರಾಭ್ಯಾಂ ಭೀಮಸೇನಮವೈಕ್ಷತ।।

ಕ್ರುದ್ಧನಾಗದಂತೆ ಭುಸುಗುಟ್ಟುತ್ತಾ ಆ ಮಹಾಬಾಹುವು ಕಣ್ಣುಗಳಿಂದ ಸುಟ್ಟುಬಿಡುವನೋ ಎಂಬಂತೆ ಭೀಮಸೇನನನ್ನು ದಿಟ್ಟಿಸಿ ನೋಡಿದನು.

09056057a ತತಃ ಸ ಭರತಶ್ರೇಷ್ಠೋ ಗದಾಪಾಣಿರಭಿದ್ರವತ್।
09056057c ಪ್ರಮಥಿಷ್ಯನ್ನಿವ ಶಿರೋ ಭೀಮಸೇನಸ್ಯ ಸಂಯುಗೇ।।

ಆಗ ಆ ಭರತಶ್ರೇಷ್ಠನು ರಣದಲ್ಲಿ ಭೀಮಸೇನನ ಶಿರವನ್ನು ಜಜ್ಜಿಬಿಡುವನೋ ಎಂಬಂತೆ ಗದೆಯನ್ನು ಹಿಡಿದು ಆಕ್ರಮಣಿಸಿದನು.

09056058a ಸ ಮಹಾತ್ಮಾ ಮಹಾತ್ಮಾನಂ ಭೀಮಂ ಭೀಮಪರಾಕ್ರಮಃ।
09056058c ಅತಾಡಯಚ್ಛಂಗದೇಶೇ ಸ ಚಚಾಲಾಚಲೋಪಮಃ।।

ಆ ಮಹಾತ್ಮ ಭೀಮಪರಾಕ್ರಮಿಯು ಮಹಾತ್ಮನ ಹಣೆಯ ಮೂಳೆಯ ಮೇಲೆ ಹೊಡೆಯಲು ಪರ್ವತದಂತಿದ್ದ ಭೀಮನು ಸ್ವಲ್ಪವೂ ವಿಚಲಿತನಾಗಲಿಲ್ಲ.

09056059a ಸ ಭೂಯಃ ಶುಶುಭೇ ಪಾರ್ಥಸ್ತಾಡಿತೋ ಗದಯಾ ರಣೇ।
09056059c ಉದ್ಭಿನ್ನರುಧಿರೋ ರಾಜನ್ಪ್ರಭಿನ್ನ ಇವ ಕುಂಜರಃ।।

ರಾಜನ್! ರಣದಲ್ಲಿ ಗದೆಯಿಂದ ಹೊಡೆಯಲ್ಪಟ್ಟ ಪಾರ್ಥನು ಹಣೆಯಿಂದ ರಕ್ತವನ್ನು ಸುರಿಸುತ್ತಾ ಕಪೋಲಗಳಿಂದ ಮದೋದಕವನ್ನು ಸುರಿಸುವ ಆನೆಯಂತೆ ಶೋಭಿಸಿದನು.

09056060a ತತೋ ಗದಾಂ ವೀರಹಣೀಮಯಸ್ಮಯೀಂ ಪ್ರಗೃಹ್ಯ ವಜ್ರಾಶನಿತುಲ್ಯನಿಸ್ವನಾಂ।
09056060c ಅತಾಡಯಚ್ಚತ್ರುಮಮಿತ್ರಕರ್ಶನೋ ಬಲೇನ ವಿಕ್ರಮ್ಯ ಧನಂಜಯಾಗ್ರಜಃ।।

ಆಗ ಧನಂಜಯನ ಅಣ್ಣ, ಅಮಿತ್ರಕರ್ಶನನು ವೀರವಿನಾಶಿಯಾದ, ಲೋಹಮಯವಾದ, ವಜ್ರಯುಧ ಮತ್ತು ಸಿಡಿಲಿನ ಶಬ್ಧದಿಂದ ಕೂಡಿದ್ದ ಗದೆಯನ್ನು ಹಿಡಿದು ಬಲ ಮತ್ತು ವಿಕ್ರಮಗಳಿಂದ ಶತ್ರುವನ್ನು ಹೊಡೆದನು.

09056061a ಸ ಭೀಮಸೇನಾಭಿಹತಸ್ತವಾತ್ಮಜಃ ಪಪಾತ ಸಂಕಂಪಿತದೇಹಬಂಧನಃ।
09056061c ಸುಪುಷ್ಪಿತೋ ಮಾರುತವೇಗತಾಡಿತೋ ಮಹಾವನೇ ಸಾಲ ಇವಾವಘೂರ್ಣಿತಃ।।

ಭೀಮಸೇನನಿಂದ ಹೊಡೆಯಲ್ಪಟ್ಟ ನಿನ್ನ ಮಗನ ದೇಹದ ಕೀಲುಗಳೆಲ್ಲವೂ ಸಡಿಲವಾಗಿ, ಮಹಾವನದಲ್ಲಿ ಭಿರುಗಾಳಿಯ ಆಘಾತಕ್ಕೆ ಸಿಲುಕಿದ ಪುಷ್ಪಭರಿತ ಸಾಲವೃಕ್ಷದಂತೆ ತತ್ತರಿಸಿ ನೆಲದಮೇಲೆ ಬಿದ್ದನು.

09056062a ತತಃ ಪ್ರಣೇದುರ್ಜಹೃಷುಶ್ಚ ಪಾಂಡವಾಃ ಸಮೀಕ್ಷ್ಯ ಪುತ್ರಂ ಪತಿತಂ ಕ್ಷಿತೌ ತವ।
09056062c ತತಃ ಸುತಸ್ತೇ ಪ್ರತಿಲಭ್ಯ ಚೇತನಾಂ ಸಮುತ್ಪಪಾತ ದ್ವಿರದೋ ಯಥಾ ಹ್ರದಾತ್।।

ನಿನ್ನ ಮಗನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಪಾಂಡವರು ಹರ್ಷದಿಂದ ಜಯೋದ್ಗಾರಗೈದರು. ಆಗ ನಿನ್ನ ಮಗನು ಪುನಃ ಚೇತರಿಸಿಕೊಂಡು ಸರೋವರದಿಂದ ಹೊರಬರುವ ಆನೆಯಂತೆ ನೆಗೆದು ನಿಂತನು.

09056063a ಸ ಪಾರ್ಥಿವೋ ನಿತ್ಯಮಮರ್ಷಿತಸ್ತದಾ ಮಹಾರಥಃ ಶಿಕ್ಷಿತವತ್ಪರಿಭ್ರಮನ್।
09056063c ಅತಾಡಯತ್ಪಾಂಡವಮಗ್ರತಃ ಸ್ಥಿತಂ ಸ ವಿಹ್ವಲಾಂಗೋ ಜಗತೀಮುಪಾಸ್ಪೃಶತ್।।

ನಿತ್ಯವೂ ಸಿಟ್ಟಿನಲ್ಲಿರುತ್ತಿದ್ದ ಆ ಮಹಾರಥ ಪಾರ್ಥಿವನು ಪಳಗಿದ ಯೋಧನಂತೆ ಸುತ್ತುತ್ತಾ ಮುಂದೆ ನಿಂತಿದ್ದ ಪಾಂಡವನನ್ನು ಹೊಡೆದನು. ವಿಹ್ವಲಾಂಗನಾದ ಅವನು ನೆಲದ ಮೇಲೆ ಬಿದ್ದನು.

09056064a ಸ ಸಿಂಹನಾದಾನ್ವಿನನಾದ ಕೌರವೋ ನಿಪಾತ್ಯ ಭೂಮೌ ಯುಧಿ ಭೀಮಂ ಓಜಸಾ।
09056064c ಬಿಭೇದ ಚೈವಾಶನಿತುಲ್ಯತೇಜಸಾ ಗದಾನಿಪಾತೇನ ಶರೀರರಕ್ಷಣಂ।।

ಯುದ್ಧದಲ್ಲಿ ಭೀಮನನ್ನು ನೆಲಕ್ಕೆ ಕೆಡವಿದ ಕೌರವನು ಓಜಸ್ಸಿನಿಂದ ಸಿಂಹನಾದಗೈದನು. ಸಿಡಿಲಿನ ತೇಜಸ್ಸಿನಿಂದ ಬಿದ್ದ ಆ ಗದೆಯು ಭೀಮನ ಶರೀರವನ್ನು ರಕ್ಷಿಸುತ್ತಿದ್ದ ಕವಚವನ್ನು ಭೇದಿಸಿತು.

09056065a ತತೋಽಮ್ತರಿಕ್ಷೇ ನಿನದೋ ಮಹಾನಭೂದ್ ದಿವೌಕಸಾಮಪ್ಸರಸಾಂ ಚ ನೇದುಷಾಂ।
09056065c ಪಪಾತ ಚೋಚ್ಚೈರಮರಪ್ರವೇರಿತಂ ವಿಚಿತ್ರಪುಷ್ಪೋತ್ಕರವರ್ಷಮುತ್ತಮಂ।।

ಆಗ ಅಂತರಿಕ್ಷದಲ್ಲಿ ಹರ್ಷಧ್ವನಿಗಳನ್ನು ಮಾಡುತ್ತಿದ್ದ ದೇವತೆಗಳ ಮತ್ತು ಅಪ್ಸರೆಯರ ದೊಡ್ಡ ಕೋಲಾಹಲವುಂಟಾಯಿತು. ಮೇಲಿನಿಂದ ಅಮರರು ಸುರಿಸಿದ ವಿಚಿತ್ರ ಪುಷ್ಪಗಳ ಅನುತ್ತಮ ಮಳೆಯು ಬಿದ್ದಿತು.

09056066a ತತಃ ಪರಾನಾವಿಶದುತ್ತಮಂ ಭಯಂ ಸಮೀಕ್ಷ್ಯ ಭೂಮೌ ಪತಿತಂ ನರೋತ್ತಮಂ।
09056066c ಅಹೀಯಮಾನಂ ಚ ಬಲೇನ ಕೌರವಂ ನಿಶಮ್ಯ ಭೇದಂ ಚ ದೃಢಸ್ಯ ವರ್ಮಣಃ।।

ಭೂಮಿಯಮೇಲೆ ಆ ನರೋತ್ತಮನು ಬಿದ್ದುದನ್ನು, ಬಲದಿಂದ ಕುಗ್ಗದೇ ಇದ್ದ ಕೌರವನನ್ನು, ಮತ್ತು ದೃಢಕವಚವು ಒಡೆದುಹೋದುದನ್ನೂ ನೋಡಿ ಶತ್ರುಗಳಲ್ಲಿ ಮಹಾಭಯವು ಆವರಿಸಿತು.

09056067a ತತೋ ಮುಹೂರ್ತಾದುಪಲಭ್ಯ ಚೇತನಾಂ ಪ್ರಮೃಜ್ಯ ವಕ್ತ್ರಂ ರುಧಿರಾರ್ದ್ರಮಾತ್ಮನಃ।
09056067c ಧೃತಿಂ ಸಮಾಲಂಬ್ಯ ವಿವೃತ್ತಲೋಚನೋ ಬಲೇನ ಸಂಸ್ತಭ್ಯ ವೃಕೋದರಃ ಸ್ಥಿತಃ।।

ಕ್ಷಣದಲ್ಲಿಯೇ ಪುನಃ ಚೇತರಿಸಿಕೊಂಡ ವೃಕೋದರನು ರಕ್ತಸಿಕ್ತವಾದ ಮುಖವನ್ನು ಒರೆಸಿಕೊಳ್ಳುತ್ತಾ ಧೈರ್ಯತಾಳಿ ಕಣ್ಣುಗಳನ್ನು ಹೊರಳಿಸಿ ಬಲಪೂರ್ವಕವಾಗಿ ಜರ್ಝಿರಿತ ಶರೀರವನ್ನು ಸ್ವಾಧೀನಕ್ಕೆ ತಂದುಕೊಂಡು ಪುನಃ ಯುದ್ಧಸನ್ನದ್ಧನಾಗಿ ನಿಂತನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಗದಾಯುದ್ಧೇ ಷಟ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಗದಾಯುದ್ಧ ಎನ್ನುವ ಐವತ್ತಾರನೇ ಅಧ್ಯಾಯವು.