ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಗದಾಯುದ್ಧ ಪರ್ವ
ಅಧ್ಯಾಯ 55
ಸಾರ
ಗದಾಯುದ್ಧದ ಪ್ರಾರಂಭದಲ್ಲಾದ ಘೋರ ನಿಮಿತ್ತಗಳು (1-14). ಭೀಮಸೇನನು ಯುಧಿಷ್ಠಿರನಿಗೆ ಹೇಳಿದ ಮಾತು (15-24). ಭೀಮಸೇನ-ದುರ್ಯೋಧನರ ಸಂವಾದ (25-44).
09055001 ವೈಶಂಪಾಯನ ಉವಾಚ 09055001a ತತೋ ವಾಗ್ಯುದ್ಧಮಭವತ್ತುಮುಲಂ ಜನಮೇಜಯ।
09055001c ಯತ್ರ ದುಃಖಾನ್ವಿತೋ ರಾಜಾ ಧೃತರಾಷ್ಟ್ರೋಽಬ್ರವೀದಿದಂ।।
ವೈಶಂಪಾಯನನು ಹೇಳಿದನು: “ಜನಮೇಜಯ! ತುಮುಲ ವಾಗ್ಯುದ್ಧವು ನಡೆಯಿತೆಂದು ದುಃಖಾನ್ವಿತನಾದ ರಾಜಾ ಧೃತರಾಷ್ಟ್ರನು ಹೀಗೆ ಹೇಳಿದನು:
09055002a ಧಿಗಸ್ತು ಖಲು ಮಾನುಷ್ಯಂ ಯಸ್ಯ ನಿಷ್ಠೇಯಮೀದೃಶೀ।
09055002c ಏಕಾದಶಚಮೂಭರ್ತಾ ಯತ್ರ ಪುತ್ರೋ ಮಮಾಭಿಭೂಃ।।
09055003a ಆಜ್ಞಾಪ್ಯ ಸರ್ವಾನ್ನೃಪತೀನ್ಭುಕ್ತ್ವಾ ಚೇಮಾಂ ವಸುಂಧರಾಂ।
09055003c ಗದಾಮಾದಾಯ ವೇಗೇನ ಪದಾತಿಃ ಪ್ರಸ್ಥಿತೋ ರಣಂ।।
“ಇಂಥಹ ಪರಿಸ್ಥಿತಿಯನ್ನು ಹೊಂದಿರುವ ಮನುಷ್ವತ್ತಕ್ಕೇ ಧಿಕ್ಕಾರ! ನನ್ನ ಪುತ್ರನು ಹನ್ನೊಂದು ಸೇನೆಗಳ ಪಾಲಕನೂ ನಾಯಕನೂ ಆಗಿದ್ದನು. ಸರ್ವ ನೃಪತಿಗಳನ್ನೂ ಆಳಿಕೊಂಡು ಈ ವಸುಂಧರೆಯನ್ನು ಭೋಗಿಸಿದ ಅವನು ಗದೆಯನ್ನೆತ್ತಿಕೊಂಡು ಪದಾತಿಯಾಗಿ ರಣದಲ್ಲಿ ಓಡಾಡುತ್ತಿದ್ದನಲ್ಲಾ!
09055004a ಭೂತ್ವಾ ಹಿ ಜಗತೋ ನಾಥೋ ಹ್ಯನಾಥ ಇವ ಮೇ ಸುತಃ।
09055004c ಗದಾಮುದ್ಯಮ್ಯ ಯೋ ಯಾತಿ ಕಿಮನ್ಯದ್ಭಾಗಧೇಯತಃ।।
ಜಗತ್ತಿಗೇ ನಾಥನಾಗಿದ್ದುಕೊಂಡು ಈಗ ಅನಾಥನಂತೆ ಗದೆಯನ್ನೆತ್ತಿಕೊಂಡು ಹೋಗುತ್ತಿದ್ದವನು ನನ್ನ ಮಗ ಎಂದರೆ ಅದಕ್ಕಿಂತಲೂ ದುರ್ಭಾಗ್ಯವು ಏನಿದ್ದೀತು?
09055005a ಅಹೋ ದುಃಖಂ ಮಹತ್ಪ್ರಾಪ್ತಂ ಪುತ್ರೇಣ ಮಮ ಸಂಜಯ।
09055005c ಏವಮುಕ್ತ್ವಾ ಸ ದುಃಖಾರ್ತೋ ವಿರರಾಮ ಜನಾಧಿಪಃ।।
ಅಯ್ಯೋ ಸಂಜಯ! ನನ್ನ ಮಗನು ಮಹಾ ದುಃಖವನ್ನೇ ಅನುಭವಿಸಿದನು!” ಹೀಗೆ ಹೇಳಿ ದುಃಖಾರ್ತ ಜನಾಧಿಪನು ಸುಮ್ಮನಾದನು.
09055006 ಸಂಜಯ ಉವಾಚ 09055006a ಸ ಮೇಘನಿನದೋ ಹರ್ಷಾದ್ವಿನದನ್ನಿವ ಗೋವೃಷಃ।
09055006c ಆಜುಹಾವ ತತಃ ಪಾರ್ಥಂ ಯುದ್ಧಾಯ ಯುಧಿ ವೀರ್ಯವಾನ್।।
09055007a ಭೀಮಮಾಹ್ವಯಮಾನೇ ತು ಕುರುರಾಜೇ ಮಹಾತ್ಮನಿ।
09055007c ಪ್ರಾದುರಾಸನ್ಸುಘೋರಾಣಿ ರೂಪಾಣಿ ವಿವಿಧಾನ್ನ್ಯುತ।।
ಸಂಜಯನು ಹೇಳಿದನು: “ಹರ್ಷದಿಂದ ಮೇಘದಂತೆ ಗರ್ಜಿಸುತ್ತಾ ಮತ್ತು ಹೋರಿಯಂತೆ ಗುರುಟು ಹಾಕುತ್ತಾ ರಣದಲ್ಲಿ ಯುದ್ಧಕ್ಕೆ ಮಹಾತ್ಮ ಕುರುರಾಜನು ಭೀಮನನ್ನು ಯುದ್ಧಕ್ಕೆ ಕರೆಯುತ್ತಿರಲು ಅಲ್ಲಿ ಘೋರರೂಪದ ವಿವಿಧ ನಿಮಿತ್ತಗಳು ಕಾಣಿಸಿಕೊಂಡವು.
09055008a ವವುರ್ವಾತಾಃ ಸನಿರ್ಘಾತಾಃ ಪಾಂಸುವರ್ಷಂ ಪಪಾತ ಚ।
09055008c ಬಭೂವುಶ್ಚ ದಿಶಃ ಸರ್ವಾಸ್ತಿಮಿರೇಣ ಸಮಾವೃತಾಃ।।
ಸುನಿರ್ಘಾತ28ಗಳೊಂದಿಗೆ ಚಂಡಮಾರುತಗಳು ಬೀಸಿದವು. ಧೂಳಿನ ಮಳೆಯೇ ಸುರಿಯಿತು. ದಿಕ್ಕುಗಳೆಲ್ಲವನ್ನೂ ಕತ್ತಲೆಯು ಕವಿಯಿತು.
09055009a ಮಹಾಸ್ವನಾಃ ಸನಿರ್ಘಾತಾಸ್ತುಮುಲಾ ರೋಮಹರ್ಷಣಾಃ।
09055009c ಪೇತುಸ್ತಥೋಲ್ಕಾಃ ಶತಶಃ ಸ್ಫೋಟಯಂತ್ಯೋ ನಭಸ್ತಲಂ।।
ನಭಸ್ಥಲವನ್ನು ಸೀಳುವಂತೆ ನೂರಾರು ರೋಮಹರ್ಷಣ ಉಲ್ಕೆಗಳು ಮಹಾಧ್ವನಿಯೊಂದಿಗೆ ನಿರ್ಘಾತಗಳೊಂದಿಗೆ ಬಿದ್ದವು.
09055010a ರಾಹುಶ್ಚಾಗ್ರಸದಾದಿತ್ಯಮಪರ್ವಣಿ ವಿಶಾಂ ಪತೇ।
09055010c ಚಕಂಪೇ ಚ ಮಹಾಕಂಪಂ ಪೃಥಿವೀ ಸವನದ್ರುಮಾ।।
ವಿಶಾಂಪತೇ! ಪರ್ವತಿಥಿಯಲ್ಲದಿದ್ದರೂ ರಾಹುವು ಸೂರ್ಯನನ್ನು ನುಂಗಿದನು. ವನ-ವೃಕ್ಷಗಳೊಡನೆ ಭೂಮಿಯು ಮಹಾಕಂಪನದೊಂದಿಗೆ ನಡುಗಿತು.
09055011a ರೂಕ್ಷಾಶ್ಚ ವಾತಾಃ ಪ್ರವವುರ್ನೀಚೈಃ ಶರ್ಕರವರ್ಷಿಣಃ।
09055011c ಗಿರೀಣಾಂ ಶಿಖರಾಣ್ಯೇವ ನ್ಯಪತಂತ ಮಹೀತಲೇ।।
ಕಲ್ಲುಗಳನ್ನು ಸುರಿಸುವ ಬಿರುಸಾದ ಸುಂಟರಗಾಳಿಗಳು ಕೆಳಗೆ ಬೀಸತೊಡಗಿದವು. ಪರ್ವತಗಳ ಶಿಖರಗಳೇ ಕಳಚಿ ಭೂಮಿಯ ಮೇಲೆ ಬಿದ್ದವು.
09055012a ಮೃಗಾ ಬಹುವಿಧಾಕಾರಾಃ ಸಂಪತಂತಿ ದಿಶೋ ದಶ।
09055012c ದೀಪ್ತಾಃ ಶಿವಾಶ್ಚಾಪ್ಯನದನ್ಘೋರರೂಪಾಃ ಸುದಾರುಣಾಃ।।
ಬಹುವಿಧ ಆಕಾರಗಳ ಮೃಗಗಳು ಹತ್ತು ದಿಕ್ಕುಗಳಲ್ಲಿಯೂ ಓಡ ತೊಡಗಿದವು. ಘೋರರೂಪೀ ಗುಳ್ಳೇನರಿಗಳು ಪ್ರದೀಪ್ತ ಮುಖಗಳಿಂದ ಸುದಾರುಣವಾಗಿ ಕೂಗತೊಡಗಿದವು.
09055013a ನಿರ್ಘಾತಾಶ್ಚ ಮಹಾಘೋರಾ ಬಭೂವೂ ರೋಮಹರ್ಷಣಾಃ।
09055013c ದೀಪ್ತಾಯಾಂ ದಿಶಿ ರಾಜೇಂದ್ರ ಮೃಗಾಶ್ಚಾಶುಭವಾದಿನಃ।।
ಮಹಾಘೋರ ರೋಮಾಂಚಕಾರೀ ನಿರ್ಘಾತಗಳುಂಟಾದವು. ರಾಜೇಂದ್ರ! ಉರಿಯುತ್ತಿದ್ದ ಆಗ್ನೇಯ ದಿಕ್ಕಿನಲ್ಲಿ ಮೃಗಗಳು ಅಶುಭವಾಗಿ ಕೂಗತೊಡಗಿದವು.
09055014a ಉದಪಾನಗತಾಶ್ಚಾಪೋ ವ್ಯವರ್ಧಂತ ಸಮಂತತಃ।
09055014c ಅಶರೀರಾ ಮಹಾನಾದಾಃ ಶ್ರೂಯಂತೇ ಸ್ಮ ತದಾ ನೃಪ।।
ನೃಪ! ಎಲ್ಲ ಬಾವಿಗಳಲ್ಲಿದ್ದ ನೀರು ಉಕ್ಕಿಬಂದಿತು. ಆಗ ನಮಗೆ ಅಶರೀರ ಮಹಾನಾದಗಳು ಕೇಳಿಬಂದವು.
09055015a ಏವಮಾದೀನಿ ದೃಷ್ಟ್ವಾಥ ನಿಮಿತ್ತಾನಿ ವೃಕೋದರಃ।
09055015c ಉವಾಚ ಭ್ರಾತರಂ ಜ್ಯೇಷ್ಠಂ ಧರ್ಮರಾಜಂ ಯುಧಿಷ್ಠಿರಂ।।
ಇವೇ ಮೊದಲಾದ ನಿಮಿತ್ತಗಳು ಕಾಣಿಸಿಕೊಳ್ಳಲು ವೃಕೋದರನು ಜ್ಯೇಷ್ಠ ಭ್ರಾತಾ ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:
09055016a ನೈಷ ಶಕ್ತೋ ರಣೇ ಜೇತುಂ ಮಂದಾತ್ಮಾ ಮಾಂ ಸುಯೋಧನಃ।
09055016c ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ನಿಗೂಢಂ ಹೃದಯೇ ಚಿರಂ।।
09055016e ಸುಯೋಧನೇ ಕೌರವೇಂದ್ರೇ ಖಾಂಡವೇ ಪಾವಕೋ ಯಥಾ।।
“ಈ ಮಂದಾತ್ಮ ಸುಯೋಧನನು ರಣದಲ್ಲಿ ನನ್ನನ್ನು ಗೆಲ್ಲಲು ಶಕ್ತನಿಲ್ಲ. ಖಾಂಡವದ ಮೇಲೆ ಅಗ್ನಿಯು ಹೇಗಿ ಸುರಿಯಲ್ಪಟ್ಟಿತೋ ಹಾಗೆ ಇಂದು ನಾನು ಹೃದಯದಲ್ಲಿ ಬಹುಕಾಲ ನಿಗೂಢವಾಗಿದ್ದ ಕ್ರೋಧವನ್ನು ಕೌರವೇಂದ್ರ ಸುಯೋಧನನ ಮೇಲೆ ಸುರಿಯುತ್ತೇನೆ.
09055017a ಶಲ್ಯಮದ್ಯೋದ್ಧರಿಷ್ಯಾಮಿ ತವ ಪಾಂಡವ ಹೃಚ್ಚಯಂ।
09055017c ನಿಹತ್ಯ ಗದಯಾ ಪಾಪಮಿಮಂ ಕುರುಕುಲಾಧಮಂ।।
ಪಾಂಡವ! ಈ ಪಾಪಿ ಕುರುಕುಲಾಧಮನನ್ನು ಗದೆಯಿಂದ ಸಂಹರಿಸಿ ನಿನ್ನ ಹೃದಯದಲ್ಲಿ ಹುದುಗಿರುವ ಮುಳ್ಳನ್ನು ಇಂದು ಕಿತ್ತುಹಾಕುತ್ತೇನೆ.
09055018a ಅದ್ಯ ಕೀರ್ತಿಮಯೀಂ ಮಾಲಾಂ ಪ್ರತಿಮೋಕ್ಷ್ಯಾಮ್ಯಹಂ ತ್ವಯಿ।
09055018c ಹತ್ವೇಮಂ ಪಾಪಕರ್ಮಾಣಂ ಗದಯಾ ರಣಮೂರ್ಧನಿ।।
ರಣರಂಗದಲ್ಲಿ ಈ ಪಾಪಕರ್ಮಿಯನ್ನು ಕೊಂದು ನಾನು ಇಂದು ನಿನಗೆ ಕೀರ್ತಿಮಯೀ ಮಾಲೆಯನ್ನು ಹಾಕುತ್ತೇನೆ.
09055019a ಅದ್ಯಾಸ್ಯ ಶತಧಾ ದೇಹಂ ಭಿನದ್ಮಿ ಗದಯಾನಯಾ।
09055019c ನಾಯಂ ಪ್ರವೇಷ್ಟಾ ನಗರಂ ಪುನರ್ವಾರಣಸಾಹ್ವಯಂ।।
ಇಂದು ಗದೆಯಿಂದ ಇವನ ದೇಹವನ್ನು ನೂರಾರು ಚೂರುಗಳನ್ನಾಗಿ ಒಡೆಯದೇ ನಾನು ಪುನಃ ವಾರಣಸಾಹ್ವಯ ನಗರವನ್ನು ಪ್ರವೇಶಿಸುವುದಿಲ್ಲ.
09055020a ಸರ್ಪೋತ್ಸರ್ಗಸ್ಯ ಶಯನೇ ವಿಷದಾನಸ್ಯ ಭೋಜನೇ।
09055020c ಪ್ರಮಾಣಕೋಟ್ಯಾಂ ಪಾತಸ್ಯ ದಾಹಸ್ಯ ಜತುವೇಶ್ಮನಿ।।
09055021a ಸಭಾಯಾಮವಹಾಸಸ್ಯ ಸರ್ವಸ್ವಹರಣಸ್ಯ ಚ।
09055021c ವರ್ಷಮಜ್ಞಾತವಾಸಸ್ಯ ವನವಾಸಸ್ಯ ಚಾನಘ।।
09055022a ಅದ್ಯಾಂತಮೇಷಾಂ ದುಃಖಾನಾಂ ಗಂತಾ ಭರತಸತ್ತಮ।
09055022c ಏಕಾಹ್ನಾ ವಿನಿಹತ್ಯೇಮಂ ಭವಿಷ್ಯಾಮ್ಯಾತ್ಮನೋಽನೃಣಃ।।
ಅನಘ! ಭರತಸತ್ತಮ! ಮಲಗಿರುವಾಗ ಸರ್ಪಗಳನ್ನು ಬಿಟ್ಟು ಕಚ್ಚಿಸಿದುದು, ಭೋಜನದಲ್ಲಿ ವಿಷವನ್ನಿತ್ತಿದುದು, ಪ್ರಮಾಣಕೋಟಿಯಲ್ಲಿ ಮುಳುಗಿಸಿದುದು, ಜತುಗೃಹದಲ್ಲಿ ಸುಟ್ಟಿದುದು, ಸಭೆಯಲ್ಲಿ ಅಪಮಾನಸಿದುದು, ಸರ್ವವನ್ನೂ ಅಪಹರಿಸಿದುದು, ಒಂದು ವರ್ಷದ ಅಜ್ಞಾತವಾಸ ಮತ್ತು ವನವಾಸಗಳ – ಈ ಇಲ್ಲ ದುಃಖಗಳ ಕೊನೆಗಾಣಿಸುತ್ತೇನೆ. ಈ ಒಂದು ಹಗಲಿನಲ್ಲಿಯೇ ನಾನಿವನನ್ನು ಸಂಹರಿಸಿ ನನ್ನ ಋಣದಿಂದ ಮುಕ್ತನಾಗುತ್ತೇನೆ.
09055023a ಅದ್ಯಾಯುರ್ಧಾರ್ತರಾಷ್ಟ್ರಸ್ಯ ದುರ್ಮತೇರಕೃತಾತ್ಮನಃ।
09055023c ಸಮಾಪ್ತಂ ಭರತಶ್ರೇಷ್ಠ ಮಾತಾಪಿತ್ರೋಶ್ಚ ದರ್ಶನಂ।।
ಭರತಶ್ರೇಷ್ಠ! ಇಂದು ಈ ದುರ್ಮತಿ, ಜಿತೇಂದ್ರಿಯನಲ್ಲದ ಧಾರ್ತರಾಷ್ಟ್ರನ ಆಯುಷ್ಯ ಮತ್ತು ಮಾತಪಿತೃಗಳ ದರ್ಶನವು ಸಮಾಪ್ತವಾಗುವುದು.
09055024a ಅದ್ಯಾಯಂ ಕುರುರಾಜಸ್ಯ ಶಂತನೋಃ ಕುಲಪಾಂಸನಃ।
09055024c ಪ್ರಾಣಾನ್ ಶ್ರಿಯಂ ಚ ರಾಜ್ಯಂ ಚ ತ್ಯಕ್ತ್ವಾ ಶೇಷ್ಯತಿ ಭೂತಲೇ।।
ಇಂದು ಶಂತನುವಿನ ಕುಲಕ್ಕೆ ಕಳಂಕಪ್ರಾಯನಾದ ಈ ಕುರುರಾಜನು ಪ್ರಾಣಗಳನ್ನೂ, ಸಂಪತ್ತನ್ನೂ, ರಾಜ್ಯವನ್ನೂ ತೊರೆದು ನೆಲದ ಮೇಲೆ ಮಲಗುತ್ತಾನೆ.
09055025a ರಾಜಾ ಚ ಧೃತರಾಷ್ಟ್ರೋಽದ್ಯ ಶ್ರುತ್ವಾ ಪುತ್ರಂ ಮಯಾ ಹತಂ।
09055025c ಸ್ಮರಿಷ್ಯತ್ಯಶುಭಂ ಕರ್ಮ ಯತ್ತಚ್ಚಕುನಿಬುದ್ಧಿಜಂ।।
ನನ್ನಿಂದ ತನ್ನ ಮಗನು ಹತನಾದನೆಂದು ಕೇಳಿ ಇಂದು ರಾಜಾ ಧೃತರಾಷ್ಟ್ರನೂ ಕೂಡ ಶಕುನಿಯ ಬುದ್ಧಿಯಿಂದ ಹುಟ್ಟಿದ್ದ ಅಶುಭಕರ್ಮಗಳನ್ನು ಸ್ಮರಿಸಿಕೊಳ್ಳುತ್ತಾನೆ!”
09055026a ಇತ್ಯುಕ್ತ್ವಾ ರಾಜಶಾರ್ದೂಲ ಗದಾಮಾದಾಯ ವೀರ್ಯವಾನ್।
09055026c ಅವಾತಿಷ್ಠತ ಯುದ್ಧಾಯ ಶಕ್ರೋ ವೃತ್ರಮಿವಾಹ್ವಯನ್।।
ರಾಜಶಾರ್ದೂಲ! ಹೀಗೆ ಹೇಳಿ ಆ ವೀರ್ಯವಾನನು ಗದೆಯನ್ನು ಎತ್ತಿ ಶಕ್ರನು ವೃತ್ರನನ್ನು ಆಹ್ವಾನಿಸಿದಂತೆ ಯುದ್ಧಕ್ಕೆ ನಿಂತನು.
09055027a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ।
09055027c ಭೀಮಸೇನಃ ಪುನಃ ಕ್ರುದ್ಧೋ ದುರ್ಯೋಧನಮುವಾಚ ಹ।।
ಶಿಖರವನ್ನು ಹೊತ್ತಿದ್ದ ಕೈಲಾಸದಂತೆ ನಿಂತಿದ್ದ ದುರ್ಯೋಧನನನ್ನು ನೋಡಿ ಭೀಮಸೇನನು ಪುನಃ ಕ್ರುದ್ಧನಾಗಿ ಅವನಿಗೆ ಹೀಗೆ ಹೇಳಿದನು:
09055028a ರಾಜ್ಞಶ್ಚ ಧೃತರಾಷ್ಟ್ರಸ್ಯ ತಥಾ ತ್ವಮಪಿ ಚಾತ್ಮನಃ।
09055028c ಸ್ಮರ ತದ್ದುಷ್ಕೃತಂ ಕರ್ಮ ಯದ್ವೃತ್ತಂ ವಾರಣಾವತೇ।।
“ವಾರಣಾವತದಲ್ಲಿ ರಾಜ ಧೃತರಾಷ್ಟ್ರ ಮತ್ತು ನೀನು ನಮ್ಮ ಮೇಲೆಸಗಿದ ದುಷ್ಕೃತಗಳನ್ನು ಸ್ಮರಿಸಿಕೋ!
09055029a ದ್ರೌಪದೀ ಚ ಪರಿಕ್ಲಿಷ್ಟಾ ಸಭಾಯಾಂ ಯದ್ರಜಸ್ವಲಾ।
09055029c ದ್ಯೂತೇ ಚ ವಂಚಿತೋ ರಾಜಾ ಯತ್ತ್ವಯಾ ಸೌಬಲೇನ ಚ।।
09055030a ವನೇ ದುಃಖಂ ಚ ಯತ್ಪ್ರಾಪ್ತಮಸ್ಮಾಭಿಸ್ತ್ವತ್ಕೃತಂ ಮಹತ್।
09055030c ವಿರಾಟನಗರೇ ಚೈವ ಯೋನ್ಯಂತರಗತೈರಿವ।।
09055030e ತತ್ಸರ್ವಂ ಯಾತಯಾಮ್ಯದ್ಯ ದಿಷ್ಟ್ಯಾ ದೃಷ್ಟೋಽಸಿ ದುರ್ಮತೇ।।
ರಜಸ್ವಲೆಯಾಗಿದ್ದಾಗ ಸಭೆಯಲ್ಲಿ ದ್ರೌಪದಿಯು ಕಷ್ಟಗಳನ್ನನುಭವಿಸಿದಳು. ಸೌಬಲನ ಮೂಲಕ ನೀನು ದ್ಯೂತದಲ್ಲಿ ರಾಜಾ ಯುಧಿಷ್ಠಿರನನ್ನು ವಂಚಿಸಿದೆ. ನಿನ್ನಿಂದಾಗಿ ನಾವು ವನದಲ್ಲಿ ಮಹಾ ದುಃಖಗಳನ್ನನುಭವಿಸಿದೆವು. ವಿರಾಟನಗರದಲ್ಲಿ ನಾವು ಭೂಗತರಾದವರಂತೆ ವಾಸಿಸಿದೆವು. ದುರ್ಮತೇ! ಅದೃಷ್ಟವಶಾತ್ ಈ ಎಲ್ಲ ಯಾತನೆಗಳಿಂದ ನಾನು ನಿನ್ನನ್ನು ಸರಿಯಾಗಿ ನೋಡುತ್ತಿದ್ದೇನೆ.
09055031a ತ್ವತ್ಕೃತೇಽಸೌ ಹತಃ ಶೇತೇ ಶರತಲ್ಪೇ ಪ್ರತಾಪವಾನ್।
09055031c ಗಾಂಗೇಯೋ ರಥಿನಾಂ ಶ್ರೇಷ್ಠೋ ನಿಹತೋ ಯಾಜ್ಞಸೇನಿನಾ।।
ನೀನು ಮಾಡಿದ ಕರ್ಮಗಳಿಂದಾಗಿ ಪ್ರತಾಪವಾನ್ ರಥಿಗಳಲ್ಲಿ ಶ್ರೇಷ್ಠ ಗಾಂಗೇಯನು ಯಾಜ್ಞಸೇನಿಯಿಂದ ಹತನಾಗಿ ಶರತಲ್ಪದಲ್ಲಿ ಮಲಗಿದ್ದಾನೆ.
09055032a ಹತೋ ದ್ರೋಣಶ್ಚ ಕರ್ಣಶ್ಚ ತಥಾ ಶಲ್ಯಃ ಪ್ರತಾಪವಾನ್।
09055032c ವೈರಾಗ್ನೇರಾದಿಕರ್ತಾ ಚ ಶಕುನಿಃ ಸೌಬಲೋ ಹತಃ।।
ದ್ರೋಣ, ಹಾಗೆಯೇ ಕರ್ಣ ಮತ್ತು ಪ್ರತಾಪವಾನ್ ಶಲ್ಯರು ಹತರಾದರು. ಈ ವೈರಾಗ್ನಿಗೆ ಮೂಲಕಾರಣನಾದ ಸೌಬಲ ಶಕುನಿಯೂ ಹತನಾದನು.
09055033a ಪ್ರಾತಿಕಾಮೀ ತಥಾ ಪಾಪೋ ದ್ರೌಪದ್ಯಾಃ ಕ್ಲೇಶಕೃದ್ಧತಃ।
09055033c ಭ್ರಾತರಸ್ತೇ ಹತಾಃ ಸರ್ವೇ ಶೂರಾ ವಿಕ್ರಾಂತಯೋಧಿನಃ।।
ದ್ರೌಪದಿಗೆ ಕ್ಲೇಶವನ್ನುಂಟುಮಾಡಿದ್ದ ಪಾಪಿ ಪ್ರಾತಿಕಾಮಿಯೂ, ವಿಕ್ರಾಂತ ಯೋಧರಾದ ನಿನ್ನ ಸಹೋದರ ಶೂರರೆಲ್ಲರೂ ಹತರಾದರು.
09055034a ಏತೇ ಚಾನ್ಯೇ ಚ ಬಹವೋ ನಿಹತಾಸ್ತ್ವತ್ಕೃತೇ ನೃಪಾಃ।
09055034c ತ್ವಾಮದ್ಯ ನಿಹನಿಷ್ಯಾಮಿ ಗದಯಾ ನಾತ್ರ ಸಂಶಯಃ।।
ನಿನ್ನ ಕಾರಣದಿಂದಾಗಿ ಇವರು ಮತ್ತು ಇನ್ನೂ ಅನೇಕ ನೃಪರು ಹತರಾದರು. ಇಂದು ನಾನು ನಿನ್ನನ್ನು ಗದೆಯಿಂದ ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ!”
09055035a ಇತ್ಯೇವಮುಚ್ಚೈ ರಾಜೇಂದ್ರ ಭಾಷಮಾಣಂ ವೃಕೋದರಂ।
09055035c ಉವಾಚ ವೀತಭೀ ರಾಜನ್ಪುತ್ರಸ್ತೇ ಸತ್ಯವಿಕ್ರಮಃ।।
ರಾಜನ್! ರಾಜೇಂದ್ರ! ಹೀಗೆ ಮಾತನಾಡುತ್ತಿದ್ದ ವೃಕೋದರನಿಗೆ ನಿನ್ನ ಮಗ ಸತ್ಯವಿಕ್ರಮನು ಸ್ವಲ್ಪವೂ ಭಯವಿಲ್ಲದೆ ಹೇಳಿದನು:
09055036a ಕಿಂ ಕತ್ಥಿತೇನ ಬಹುಧಾ ಯುಧ್ಯಸ್ವ ತ್ವಂ ವೃಕೋದರ।
09055036c ಅದ್ಯ ತೇಽಹಂ ವಿನೇಷ್ಯಾಮಿ ಯುದ್ಧಶ್ರದ್ಧಾಂ ಕುಲಾಧಮ।।
“ಕುಲಾಧಮ ವೃಕೋದರ! ಹೀಗೇಕೆ ಬಹಳವಾಗಿ ಕೊಚ್ಚಿಕೊಳ್ಳುತ್ತಿರುವೆ? ಯುದ್ಧಮಾಡು! ಇಂದು ನಿನ್ನಲ್ಲಿರುವ ಯುದ್ಧಶ್ರದ್ಧೆಯನ್ನು ಇಲ್ಲವಾಗಿಸುತ್ತೇನೆ!
09055037a ನೈವ ದುರ್ಯೋಧನಃ ಕ್ಷುದ್ರ ಕೇನ ಚಿತ್ತ್ವದ್ವಿಧೇನ ವೈ।
09055037c ಶಕ್ಯಸ್ತ್ರಾಸಯಿತುಂ ವಾಚಾ ಯಥಾನ್ಯಃ ಪ್ರಾಕೃತೋ ನರಃ।।
ಕ್ಷುದ್ರ! ಸಾಮಾನ್ಯ ಮನುಷ್ಯರನ್ನು ಮಾತಿನಿಂದ ಹೆದರಿಸುವಂತೆ ದುರ್ಯೋಧನನನ್ನು ನೀನು ಹೆದರಿಸಲಾರೆಯೆನ್ನುವುದನ್ನು ತಿಳಿದುಕೋ!
09055038a ಚಿರಕಾಲೇಪ್ಸಿತಂ ದಿಷ್ಟ್ಯಾ ಹೃದಯಸ್ಥಮಿದಂ ಮಮ।
09055038c ತ್ವಯಾ ಸಹ ಗದಾಯುದ್ಧಂ ತ್ರಿದಶೈರುಪಪಾದಿತಂ।।
ನಿನ್ನೊಡನೆ ಗದಾಯುದ್ಧಮಾಡಬೇಕೆಂಬ ಆಸೆಯು ಬಹುಕಾಲದಿಂದ ನನ್ನ ಹೃದಯದಲ್ಲಿತ್ತು. ಅದೃಷ್ಟವಿಶೇಷದಿಂದ ಇಂದು ನನಗೆ ಆ ಅವಕಾಶವನ್ನು ದೇವತೆಗಳೇ ಒದಗಿಸಿಕೊಟ್ಟಿದ್ದಾರೆ.
09055039a ಕಿಂ ವಾಚಾ ಬಹುನೋಕ್ತೇನ ಕತ್ಥಿತೇನ ಚ ದುರ್ಮತೇ।
09055039c ವಾಣೀ ಸಂಪದ್ಯತಾಮೇಷಾ ಕರ್ಮಣಾ ಮಾ ಚಿರಂ ಕೃಥಾಃ।।
ದುರ್ಮತೇ! ಅಧಿಕ ಮಾತುಗಳಿಂದ ಕೊಚ್ಚಿಕೊಳ್ಳುವುದರಿಂದ ಏನಾಗುತ್ತದೆ? ನಿನ್ನ ಮಾತನ್ನು ಕೃತಿಯಲ್ಲಿ ತೋರಿಸು! ತಡಮಾಡಬೇಡ!”
09055040a ತಸ್ಯ ತದ್ವಚನಂ ಶ್ರುತ್ವಾ ಸರ್ವ ಏವಾಭ್ಯಪೂಜಯನ್।
09055040c ರಾಜಾನಃ ಸೋಮಕಾಶ್ಚೈವ ಯೇ ತತ್ರಾಸನ್ಸಮಾಗತಾಃ।।
ಅವನ ಆ ಮಾತನ್ನು ಕೇಳಿ ಅಲ್ಲಿ ಸೇರಿ ಕುಳಿತಿದ್ದ ಸೋಮಕರೂ ಇತರ ರಾಜರೂ ಅವನನ್ನು ಪ್ರಶಂಸಿಸಿದರು.
09055041a ತತಃ ಸಂಪೂಜಿತಃ ಸರ್ವೈಃ ಸಂಪ್ರಹೃಷ್ಟತನೂರುಹಃ।
09055041c ಭೂಯೋ ಧೀರಂ ಮನಶ್ಚಕ್ರೇ ಯುದ್ಧಾಯ ಕುರುನಂದನಃ।।
ಸರ್ವರ ಪ್ರಶಂಸೆಗೊಳಗಾದ ದುರ್ಯೋಧನನ ರೋಮಗಳು ನಿಮಿರಿನಿಂತವು. ಕುರುನಂದನನು ಪುನಃ ಯುದ್ಧಕ್ಕೆ ತನ್ನ ಧೀರಮನಸ್ಸನ್ನು ತೊಡಗಿಸಿದನು.
09055042a ತಂ ಮತ್ತಮಿವ ಮಾತಂಗಂ ತಲತಾಲೈರ್ನರಾಧಿಪಾಃ।
09055042c ಭೂಯಃ ಸಂಹರ್ಷಯಾಂ ಚಕ್ರುರ್ದುರ್ಯೋಧನಮಮರ್ಷಣಂ।।
ಆನೆಯನ್ನು ಉನ್ಮತ್ತವಾಗಿಸುವಂತೆ ನರಾಧಿಪರು ಚಪ್ಪಾಳೆಗಳನ್ನು ಹೊಡೆದು ಅಮರ್ಷಣ ದುರ್ಯೋಧನನ್ನು ಇನ್ನೂ ಹರ್ಷಗೊಳಿಸಿದರು.
09055043a ತಂ ಮಹಾತ್ಮಾ ಮಹಾತ್ಮಾನಂ ಗದಾಮುದ್ಯಮ್ಯ ಪಾಂಡವಃ।
09055043c ಅಭಿದುದ್ರಾವ ವೇಗೇನ ಧಾರ್ತರಾಷ್ಟ್ರಂ ವೃಕೋದರಃ।।
ಆಗ ಮಹಾತ್ಮ ಪಾಂಡವ ವೃಕೋದರನು ಗದೆಯನ್ನು ಮೇಲೆತ್ತಿ ವೇಗದಿಂದ ಮಹಾತ್ಮ ಧಾರ್ತರಾಷ್ಟ್ರನನ್ನು ಆಕ್ರಮಣಿಸಿದನು.
09055044a ಬೃಂಹಂತಿ ಕುಂಜರಾಸ್ತತ್ರ ಹಯಾ ಹೇಷಂತಿ ಚಾಸಕೃತ್।
09055044c ಶಸ್ತ್ರಾಣಿ ಚಾಪ್ಯದೀಪ್ಯಂತ ಪಾಂಡವಾನಾಂ ಜಯೈಷಿಣಾಂ।।
ಆಗ ಆನೆಗಳು ಘೀಳಿಟ್ಟವು. ಕುದುರೆಗಳೂ ಕೆನೆದವು. ಜಯೈಷಿಗಳಾದ ಪಾಂಡವರ ಶಸ್ತ್ರಗಳು ದೇದೀಪ್ಯಮಾನವಾಗಿ ಬೆಳಗುತ್ತಿದ್ದವು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಗದಾಯುದ್ಧಾರಂಭೇ ಪಂಚಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಗದಾಯುದ್ಧಾರಂಭ ಎನ್ನುವ ಐವತ್ತೈದನೇ ಅಧ್ಯಾಯವು.