054 ಯುದ್ಧಾರಂಭಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಗದಾಯುದ್ಧ ಪರ್ವ

ಅಧ್ಯಾಯ 54

ಸಾರ

ಬಲರಾಮನ ಸೂಚನೆಯಂತೆ ಸಮಂತಪಂಚಕಕ್ಕೆ ಕಾಲ್ನಡುಗೆಯಲ್ಲಿಯೇ ಎಲ್ಲರೂ ಹೋದುದು (1-13). ಭೀಮ-ದುರ್ಯೋಧನರ ಯುದ್ಧಾರಂಭ (14-44).

09054001 ವೈಶಂಪಾಯನ ಉವಾಚ
09054001a ಏವಂ ತದಭವದ್ಯುದ್ಧಂ ತುಮುಲಂ ಜನಮೇಜಯ।
09054001c ಯತ್ರ ದುಃಖಾನ್ವಿತೋ ರಾಜಾ ಧೃತರಾಷ್ಟ್ರೋಽಬ್ರವೀದಿದಂ।।

ವೈಶಂಪಾಯನನು ಹೇಳಿದನು: “ಜನಮೇಜಯ! ಹೀಗೆ ತುಮುಲ ಯುದ್ಧವು ಪ್ರಾರಂಭವಾಯಿತೆಂದು ಕೇಳುತ್ತಿದ್ದ ರಾಜಾ ಧೃತರಾಷ್ಟ್ರನು ದುಃಖಾನ್ವಿತನಾಗಿ ಹೇಳಿದನು:

09054002a ರಾಮಂ ಸಂನಿಹಿತಂ ದೃಷ್ಟ್ವಾ ಗದಾಯುದ್ಧ ಉಪಸ್ಥಿತೇ।
09054002c ಮಮ ಪುತ್ರಃ ಕಥಂ ಭೀಮಂ ಪ್ರತ್ಯಯುಧ್ಯತ ಸಂಜಯ।।

“ಗದಾಯುದ್ಧವು ಸನ್ನಿಹಿತವಾಗಿರುವಾಗ ರಾಮನನ್ನು ಕಂಡು ನನ್ನ ಪುತ್ರನು ಭೀಮನೊಂದಿಗೆ ಹೇಗೆ ಪ್ರತಿಯುದ್ಧಮಾಡಿದನು?”

09054003 ಸಂಜಯ ಉವಾಚ
09054003a ರಾಮಸಾಂನಿಧ್ಯಮಾಸಾದ್ಯ ಪುತ್ರೋ ದುರ್ಯೋಧನಸ್ತವ।
09054003c ಯುದ್ಧಕಾಮೋ ಮಹಾಬಾಹುಃ ಸಮಹೃಷ್ಯತ ವೀರ್ಯವಾನ್।।

ಸಂಜಯನು ಹೇಳಿದನು: “ಯುದ್ಧಕಾಮಿಯಾಗಿದ್ದ ನಿನ್ನ ಪುತ್ರ ಮಹಾಬಾಹು ವೀರ್ಯವಾನ್ ದುರ್ಯೋಧನನು ರಾಮನ ಸಾನ್ನಿದ್ಧ್ಯವನ್ನು ನೋಡಿ ಅತ್ಯಂತ ಹರ್ಷಿತನಾದನು.

09054004a ದೃಷ್ಟ್ವಾ ಲಾಂಗಲಿನಂ ರಾಜಾ ಪ್ರತ್ಯುತ್ಥಾಯ ಚ ಭಾರತ।
09054004c ಪ್ರೀತ್ಯಾ ಪರಮಯಾ ಯುಕ್ತೋ ಯುಧಿಷ್ಠಿರಮಥಾಬ್ರವೀತ್।।

ಭಾರತ! ಲಾಂಗಲಿ ಬಲರಾಮನನ್ನು ನೋಡಿ ರಾಜ ಯುಧಿಷ್ಠಿರನು ಎದ್ದು ಪರಮ ಪ್ರೀತಿಯಿಂದ ಬರಮಾಡಿಕೊಳ್ಳಲು ರಾಮನು ಅವನಿಗೆ ಹೇಳಿದನು:

09054005a ಸಮಂತಪಂಚಕಂ ಕ್ಷಿಪ್ರಮಿತೋ ಯಾಮ ವಿಶಾಂ ಪತೇ।
09054005c ಪ್ರಥಿತೋತ್ತರವೇದೀ ಸಾ ದೇವಲೋಕೇ ಪ್ರಜಾಪತೇಃ।।

“ವಿಶಾಂಪತೇ! ಭೂಮಿಯಲ್ಲಿ ಪ್ರಜಾಪತಿಯ ಉತ್ತರವೇದಿಯೆಂದು ದೇವಲೋಕದಲ್ಲೂ ಪ್ರಸಿದ್ಧವಾದ ಸಮಂತಪಂಚಕಕ್ಕೆ ನಾವು ಶೀಘ್ರವಾಗಿ ಹೋಗೋಣ!

09054006a ತಸ್ಮಿನ್ಮಹಾಪುಣ್ಯತಮೇ ತ್ರೈಲೋಕ್ಯಸ್ಯ ಸನಾತನೇ।
09054006c ಸಂಗ್ರಾಮೇ ನಿಧನಂ ಪ್ರಾಪ್ಯ ಧ್ರುವಂ ಸ್ವರ್ಗೋ ಭವಿಷ್ಯತಿ।।

ತ್ರೈಲೋಕ್ಯಗಳಲ್ಲಿಯೂ ಮಹಾಪುಣ್ಯತಮವಾಗಿರುವ ಆ ಸನಾತನ ಕ್ಷೇತ್ರದಲ್ಲಿ ಯುದ್ಧಮಾಡಿ ನಿಧನಹೊಂದಿದವರು ಸ್ವರ್ಗಕ್ಕೆ ಸೇರುತ್ತಾರೆ ಎನ್ನುವುದು ನಿಶ್ಚಯ!”

09054007a ತಥೇತ್ಯುಕ್ತ್ವಾ ಮಹಾರಾಜ ಕುಂತೀಪುತ್ರೋ ಯುಧಿಷ್ಠಿರಃ।
09054007c ಸಮಂತಪಂಚಕಂ ವೀರಃ ಪ್ರಾಯಾದಭಿಮುಖಃ ಪ್ರಭುಃ।।

ಹಾಗೆಯೇ ಆಗಲೆಂದು ಹೇಳಿ ಮಹಾರಾಜ ಕುಂತೀಪುತ್ರ ವೀರ ಪ್ರಭು ಯುಧಿಷ್ಠಿರನು ಸಮಂತಪಂಚಕಾಭಿಮುಖವಾಗಿ ಹೊರಟನು.

09054008a ತತೋ ದುರ್ಯೋಧನೋ ರಾಜಾ ಪ್ರಗೃಹ್ಯ ಮಹತೀಂ ಗದಾಂ।
09054008c ಪದ್ಭ್ಯಾಮಮರ್ಷಾದ್ದ್ಯುತಿಮಾನಗಚ್ಚತ್ಪಾಂಡವೈಃ ಸಹ।।

ಆಗ ಅಮರ್ಷಣ ದ್ಯುತಿಮಾನ್ ರಾಜಾ ದುರ್ಯೋಧನನು ಮಹಾಗದೆಯನ್ನೆತ್ತಿಕೊಂಡು ಕಾಲ್ನಡುಗೆಯಲ್ಲಿಯೇ ಪಾಂಡವರೊಂದಿಗೆ ಅಲ್ಲಿಗೆ ಹೊರಟನು.

09054009a ತಥಾ ಯಾಂತಂ ಗದಾಹಸ್ತಂ ವರ್ಮಣಾ ಚಾಪಿ ದಂಶಿತಂ।
09054009c ಅಂತರಿಕ್ಷಗತಾ ದೇವಾಃ ಸಾಧು ಸಾಧ್ವಿತ್ಯಪೂಜಯನ್।
09054009e ವಾತಿಕಾಶ್ಚ ನರಾ ಯೇಽತ್ರ ದೃಷ್ಟ್ವಾ ತೇ ಹರ್ಷಮಾಗತಾಃ।।

ಹಾಗೆ ಕವಚಧಾರಿಯಾಗಿ ಗದೆಯನ್ನು ಹಿಡಿದು ಹೋಗುತ್ತಿದ್ದ ದುರ್ಯೋಧನನನ್ನು ನೋಡಿ ಅಂತರಿಕ್ಷದಲ್ಲಿದ್ದ ದೇವತೆಗಳು “ಸಾಧು! ಸಾಧು!” ಎಂದು ಹೇಳಿ ಗೌರವಿಸಿದರು. ವಾತಿಕ ಚಾರಣರೂ ಅವನನ್ನು ನೋಡಿ ಹರ್ಷಿತರಾದರು.

09054010a ಸ ಪಾಂಡವೈಃ ಪರಿವೃತಃ ಕುರುರಾಜಸ್ತವಾತ್ಮಜಃ।
09054010c ಮತ್ತಸ್ಯೇವ ಗಜೇಂದ್ರಸ್ಯ ಗತಿಮಾಸ್ಥಾಯ ಸೋಽವ್ರಜತ್।।

ಪಾಂಡವರಿಂದ ಸುತ್ತುವರೆದಿದ್ದ ನಿನ್ನ ಮಗ ಕುರುರಾಜನು ಮದಿಸಿದ ಆನೆಯ ನಡುಗೆಯಲ್ಲಿ ಅವರೊಡನೆ ಹೋಗುತ್ತಿದ್ದನು.

09054011a ತತಃ ಶಂಖನಿನಾದೇನ ಭೇರೀಣಾಂ ಚ ಮಹಾಸ್ವನೈಃ।
09054011c ಸಿಂಹನಾದೈಶ್ಚ ಶೂರಾಣಾಂ ದಿಶಃ ಸರ್ವಾಃ ಪ್ರಪೂರಿತಾಃ।।

ಆಗ ಸರ್ವದಿಕ್ಕುಗಳೂ ಶಂಖ-ಭೇರಿಗಳ ನಿನಾದಗಳಿಂದಲೂ ಶೂರರ ಮಹಾಸ್ವನ ಸಿಂಹನಾದಗಳಿಂದಲೂ ಮೊಳಗಿದವು.

09054012a ಪ್ರತೀಚ್ಯಭಿಮುಖಂ ದೇಶಂ ಯಥೋದ್ದಿಷ್ಟಂ ಸುತೇನ ತೇ।
09054012c ಗತ್ವಾ ಚ ತೈಃ ಪರಿಕ್ಷಿಪ್ತಂ ಸಮಂತಾತ್ಸರ್ವತೋದಿಶಂ।।

ಪಶ್ಚಿಮಾಭಿಮುಖವಾಗಿ ಹೋಗಿ ಸಮಂತಪಂಚಕವನ್ನು ನಿನ್ನ ಮಗನು ತಲುಪಲು ಎಲ್ಲ ಕಡೆಗಳಿಂದ ಎಲ್ಲರೂ ಸುತ್ತುವರೆದರು.

09054013a ದಕ್ಷಿಣೇನ ಸರಸ್ವತ್ಯಾಃ ಸ್ವಯನಂ ತೀರ್ಥಮುತ್ತಮಂ।
09054013c ತಸ್ಮಿನ್ದೇಶೇ ತ್ವನಿರಿಣೇ ತತ್ರ ಯುದ್ಧಮರೋಚಯನ್।।

ಸರಸ್ವತಿಯ ದಕ್ಷಿಣದಲ್ಲಿದ್ದ ಆ ಉತ್ತಮ ತೀರ್ಥದಲ್ಲಿ ಮರಳಿಲ್ಲದಿದ್ದ ಪ್ರದೇಶವನ್ನು ಯುದ್ಧಕ್ಕೆ ಆರಿಸಿಕೊಂಡರು.

09054014a ತತೋ ಭೀಮೋ ಮಹಾಕೋಟಿಂ ಗದಾಂ ಗೃಹ್ಯಾಥ ವರ್ಮಭೃತ್।
09054014c ಬಿಭ್ರದ್ರೂಪಂ ಮಹಾರಾಜ ಸದೃಶಂ ಹಿ ಗರುತ್ಮತಃ।।

ಮಹಾರಾಜ! ಆಗ ಮಹಾಕೋಟಿ ಗದೆಯನ್ನು ಹಿಡಿದಿದ್ದ ಕವಚಧ್ರೀ ಭೀಮನು ಗರುಡನ ರೂಪದಲ್ಲಿ ಹೊಳೆಯುತ್ತಿದ್ದನು.

09054015a ಅವಬದ್ಧಶಿರಸ್ತ್ರಾಣಃ ಸಂಖ್ಯೇ ಕಾಂಚನವರ್ಮಭೃತ್।
09054015c ರರಾಜ ರಾಜನ್ಪುತ್ರಸ್ತೇ ಕಾಂಚನಃ ಶೈಲರಾಡಿವ।।

ರಾಜನ್! ರಣದಲ್ಲಿ ಕಿರೀಟವನ್ನು ಕಟ್ಟಿಕೊಂಡು ಕಾಂಚನ ಕವಚವನ್ನು ಧರಿಸಿದ್ದ ನಿನ್ನ ಪುತ್ರನು ಕಾಂಚನ ಗಿರಿಯಂತೆ ಶೋಭಿಸಿದನು.

09054016a ವರ್ಮಭ್ಯಾಂ ಸಂವೃತೌ ವೀರೌ ಭೀಮದುರ್ಯೋಧನಾವುಭೌ।
09054016c ಸಂಯುಗೇ ಚ ಪ್ರಕಾಶೇತೇ ಸಂರಬ್ಧಾವಿವ ಕುಂಜರೌ।।

ಆ ಯುದ್ಧದಲ್ಲಿ ಕವಚಧಾರಿಗಳಾದ ವೀರ ಭೀಮ-ದುರ್ಯೋಧನರಿಬ್ಬರೂ ಕ್ರೋಧಿತ ಆನೆಗಳಂತೆಯೇ ಪ್ರಕಾಶಿಸಿದರು.

09054017a ರಣಮಂಡಲಮಧ್ಯಸ್ಥೌ ಭ್ರಾತರೌ ತೌ ನರರ್ಷಭೌ।
09054017c ಅಶೋಭೇತಾಂ ಮಹಾರಾಜ ಚಂದ್ರಸೂರ್ಯಾವಿವೋದಿತೌ।।

ಮಹಾರಾಜ! ರಣಮಂಡಲದ ಮಧ್ಯದಲ್ಲಿ ನಿಂತಿದ್ದ ಆ ಇಬ್ಬರು ಸಹೋದರ ನರರ್ಷಭರು ಉದಯಿಸುತ್ತಿರುವ ಚಂದ್ರ-ಸೂರ್ಯರಂತೆ ಶೋಭಿಸಿದರು.

09054018a ತಾವನ್ಯೋನ್ಯಂ ನಿರೀಕ್ಷೇತಾಂ ಕ್ರುದ್ಧಾವಿವ ಮಹಾದ್ವಿಪೌ।
09054018c ದಹಂತೌ ಲೋಚನೈ ರಾಜನ್ಪರಸ್ಪರವಧೈಷಿಣೌ।।

ರಾಜನ್! ಪರಸ್ಪರರನ್ನು ವಧಿಸಲು ಇಚ್ಚಿಸುತ್ತಿದ್ದ ಆ ಇಬ್ಬರೂ ಕ್ರುದ್ಧ ಮಹಾಗಜಗಳಂತೆ ಉರಿಯುತ್ತಿರುವ ಕಣ್ಣುಗಳಿಂದ ಅನ್ಯೋನ್ಯರನ್ನು ದುರುಗುಟ್ಟಿ ನೋಡುತ್ತಿದ್ದರು.

09054019a ಸಂಪ್ರಹೃಷ್ಟಮನಾ ರಾಜನ್ಗದಾಮಾದಾಯ ಕೌರವಃ।
09054019c ಸೃಕ್ಕಿಣೀ ಸಂಲಿಹನ್ರಾಜನ್ಕ್ರೋಧರಕ್ತೇಕ್ಷಣಃ ಶ್ವಸನ್।।

ರಾಜನ್! ಸಂಪ್ರಹೃಷ್ಟಮನಸ್ಕನಾದ ಕೌರವನು ಗದೆಯನ್ನು ಎತ್ತಿಕೊಂಡು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ದೀರ್ಘನಿಟ್ಟುಸಿರು ಬಿಡುತ್ತಾ ಕಟವಾಯಿಯನ್ನು ನೆಕ್ಕಿದನು.

09054020a ತತೋ ದುರ್ಯೋಧನೋ ರಾಜಾ ಗದಾಮಾದಾಯ ವೀರ್ಯವಾನ್।
09054020c ಭೀಮಸೇನಮಭಿಪ್ರೇಕ್ಷ್ಯ ಗಜೋ ಗಜಮಿವಾಹ್ವಯತ್।।

ಆಗ ವೀರ್ಯವಾನ್ ರಾಜಾ ದುರ್ಯೋಧನನು ಗದೆಯನ್ನೆತ್ತಿಕೊಂಡು ಭೀಮಸೇನನ್ನು ನೋಡಿ ಒಂದು ಆನೆಯು ಇನ್ನೊಂದು ಆನೆಯನ್ನು ಸೆಣೆಸಾಡಲು ಕರೆಯುವಂತೆ ಕರೆದನು.

09054021a ಅದ್ರಿಸಾರಮಯೀಂ ಭೀಮಸ್ತಥೈವಾದಾಯ ವೀರ್ಯವಾನ್।
09054021c ಆಹ್ವಯಾಮಾಸ ನೃಪತಿಂ ಸಿಂಹಃ ಸಿಂಹಂ ಯಥಾ ವನೇ।।

ಹಾಗೆಯೇ ವೀರ್ಯವಾನ ಭೀಮನು ಲೋಹಮಯ ಗದೆಯನ್ನು ಎತ್ತಿಕೊಂಡು ವನದಲ್ಲಿ ಒಂದು ಸಿಂಹವು ಇನ್ನೊಂದು ಸಿಂಹವನ್ನು ಆಹ್ವಾನಿಸುವಂತೆ ನೃಪತಿ ದುರ್ಯೋಧನನ್ನು ಹೋರಾಟಕ್ಕೆ ಆಹ್ವಾನಿಸಿದನು.

09054022a ತಾವುದ್ಯತಗದಾಪಾಣೀ ದುರ್ಯೋಧನವೃಕೋದರೌ।
09054022c ಸಂಯುಗೇ ಸ್ಮ ಪ್ರಕಾಶೇತೇ ಗಿರೀ ಸಶಿಖರಾವಿವ।।

ಗದೆಗಳನ್ನು ಹಿಡಿದು ಕೈಗಳನ್ನು ಮೇಲೆತ್ತಿದ್ದ ದುರ್ಯೋಧನ-ವೃಕೋದರರು ರಣದಲ್ಲಿ ಶಿಖರಗಳಿಂದೊಡಗೂಡಿದ ಪರ್ವತಗಳಂತೆ ಪ್ರಕಾಶಿಸಿದರು.

09054023a ತಾವುಭಾವಭಿಸಂಕ್ರುದ್ಧಾವುಭೌ ಭೀಮಪರಾಕ್ರಮೌ।
09054023c ಉಭೌ ಶಿಷ್ಯೌ ಗದಾಯುದ್ಧೇ ರೌಹಿಣೇಯಸ್ಯ ಧೀಮತಃ।।

ಇಬ್ಬರೂ ಸಂಕ್ರುದ್ಧರಾಗಿದ್ದರು. ಇಬ್ಬರೂ ಭಯಂಕರ ಪರಾಕ್ರಮಿಗಳಾಗಿದ್ದರು. ಇಬ್ಬರೂ ಗದಾಯುದ್ಧದಲ್ಲಿ ಧೀಮತ ರೌಹಿಣೇಯ ಬಲರಾಮನ ಶಿಷ್ಯರಾಗಿದ್ದರು.

09054024a ಉಭೌ ಸದೃಶಕರ್ಮಾಣೌ ಯಮವಾಸವಯೋರಿವ।
09054024c ತಥಾ ಸದೃಶಕರ್ಮಾಣೌ ವರುಣಸ್ಯ ಮಹಾಬಲೌ।।

ಕರ್ಮಗಳಲ್ಲಿ ಇಬ್ಬರೂ ಯಮ-ವಾಸವರಂತಿದ್ದರು. ಇಬ್ಬರೂ ವರುಣನ ಮಹಾಬಲವನ್ನು ಪಡೆದಿದ್ದರು.

09054025a ವಾಸುದೇವಸ್ಯ ರಾಮಸ್ಯ ತಥಾ ವೈಶ್ರವಣಸ್ಯ ಚ।
09054025c ಸದೃಶೌ ತೌ ಮಹಾರಾಜ ಮಧುಕೈಟಭಯೋರ್ಯುಧಿ।।

ಮಹಾರಾಜ! ಯುದ್ಧದಲ್ಲಿ ಇಬ್ಬರೂ ವಾಸುದೇವ, ಬಲರಾಮ ಮತ್ತು ವೈಶ್ರವಣನಂತಿದ್ದರು. ಇಬ್ಬರೂ ಮಧು-ಕೈಟಬರಂತಿದ್ದರು.

09054026a ಉಭೌ ಸದೃಶಕರ್ಮಾಣೌ ರಣೇ ಸುಂದೋಪಸುಂದಯೋಃ।
09054026c ತಥೈವ ಕಾಲಸ್ಯ ಸಮೌ ಮೃತ್ಯೋಶ್ಚೈವ ಪರಂತಪೌ।।

ಇಬ್ಬರು ಪರಂತಪರೂ ಯುದ್ಧದಲ್ಲಿ ಸುಂದೋಪಸುಂದರಂತಿದ್ದರು. ಹಾಗೆಯೇ ಕಾಲ ಮತ್ತು ಮೃತ್ಯುವಿನ ಸಮನಾಗಿದ್ದರು.

09054027a ಅನ್ಯೋನ್ಯಮಭಿಧಾವಂತೌ ಮತ್ತಾವಿವ ಮಹಾದ್ವಿಪೌ।
09054027c ವಾಶಿತಾಸಂಗಮೇ ದೃಪ್ತೌ ಶರದೀವ ಮದೋತ್ಕಟೌ।।

ಶರತ್ಕಾಲದಲ್ಲಿ ಮೈಥುನೇಚ್ಛೆಯಿಂದ ಹೆಣ್ಣಾನೆಯ ಸಮಾಗಮಕ್ಕೆ ಮದದಿಂದ ಕೊಬ್ಬಿದ ಎರಡು ಗಂಡಾನೆಗಳು ಪರಸ್ಪರ ಸಂಘರ್ಷಿಸುವಂತೆ ಆ ಬಲೋನ್ಮತ್ತರು ಹೊಡೆದಾಡಿಕೊಳ್ಳಲು ಅನುವುಮಾಡಿಕೊಳ್ಳುತ್ತಿದ್ದರು.

09054028a ಮತ್ತಾವಿವ ಜಿಗೀಷಂತೌ ಮಾತಂಗೌ ಭರತರ್ಷಭೌ।
09054028c ಉಭೌ ಕ್ರೋಧವಿಷಂ ದೀಪ್ತಂ ವಮಂತಾವುರಗಾವಿವ।।

ಆ ಇಬ್ಬರು ಭರತರ್ಷಭರೂ ಮದಿಸಿದ ಆನೆಗಳಂತೆ ಸೆಣೆಸಾಡಲು ನೋಡುತ್ತಿದ್ದರು. ವಿಷಸರ್ಪಗಳಂತೆ ಇಬ್ಬರೂ ಉರಿಯುತ್ತಿರುವ ಕ್ರೋಧವಿಷವನ್ನು ಕಾರುತ್ತಿದ್ದರು.

09054029a ಅನ್ಯೋನ್ಯಮಭಿಸಂರಬ್ಧೌ ಪ್ರೇಕ್ಷಮಾಣಾವರಿಂದಮೌ।
09054029c ಉಭೌ ಭರತಶಾರ್ದೂಲೌ ವಿಕ್ರಮೇಣ ಸಮನ್ವಿತೌ।।

ವಿಕ್ರಮದಿಂದ ಸಮನ್ವಿತರಾದ ಆ ಇಬ್ಬರು ಭರತಶಾರ್ದೂಲ ಅರಿಂದಮರೂ ಕ್ರುದ್ಧರಾಗಿ ಪರಸ್ಪರರನ್ನು ದುರುಗುಟ್ಟಿ ನೋಡುತ್ತಿದ್ದರು.

09054030a ಸಿಂಹಾವಿವ ದುರಾಧರ್ಷೌ ಗದಾಯುದ್ಧೇ ಪರಂತಪೌ।
09054030c ನಖದಂಷ್ಟ್ರಾಯುಧೌ ವೀರೌ ವ್ಯಾಘ್ರಾವಿವ ದುರುತ್ಸಹೌ।।

ಇಬ್ಬರು ಪರಂತಪರೂ ಗದಾಯುದ್ಧದಲ್ಲಿ ಸಿಂಹಗಳಂತೆ ದುರಾಧರ್ಷರಾಗಿದ್ದರು. ಉಗುರು ಮತ್ತು ಕೋರೆದಾಡೆಗಳೇ ಆಯುಧವಾಗಿದ್ದ ವ್ಯಾಘ್ರದಂತೆ ಆ ಇಬ್ಬರು ವೀರರೂ ದುಃಸಾದ್ಯರಾಗಿದ್ದರು.

09054031a ಪ್ರಜಾಸಂಹರಣೇ ಕ್ಷುಬ್ಧೌ ಸಮುದ್ರಾವಿವ ದುಸ್ತರೌ।
09054031c ಲೋಹಿತಾಂಗಾವಿವ ಕ್ರುದ್ಧೌ ಪ್ರತಪಂತೌ ಮಹಾರಥೌ।।

ಪ್ರಜಾಸಂಹಾರದ ಪ್ರಳಯಕಾಲದಲ್ಲಿ ಕ್ಷೋಭೆಗೊಂಡ ಎರಡು ಸಮುದ್ರಗಳೋಪಾದಿಯಲ್ಲಿ ಅವರನ್ನು ಮೀರಲು ಅಸಾಧ್ಯವಾಗಿತ್ತು. ಕ್ರುದ್ಧರಾದ ಆ ಮಹಾರಥರು ಎರಡು ಅಂಗಾರಕಗ್ರಹಗಳಂತೆ ಪರಸ್ಪರರನ್ನು ಸುಡುತ್ತಿದ್ದರು.

09054032a ರಶ್ಮಿಮಂತೌ ಮಹಾತ್ಮಾನೌ ದೀಪ್ತಿಮಂತೌ ಮಹಾಬಲೌ।
09054032c ದದೃಶಾತೇ ಕುರುಶ್ರೇಷ್ಠೌ ಕಾಲಸೂರ್ಯಾವಿವೋದಿತೌ।।

ಆ ಇಬ್ಬರು ಮಹಾಬಲ ಮಹಾತ್ಮ ಕುರುಶ್ರೇಷ್ಠರೂ ಪ್ರಳಯಕಾಲದಲ್ಲಿ ಉದಯಿಸುವ ಪ್ರಖರ ಕಿರಣಗಳ ಇಬ್ಬರು ಸೂರ್ಯರಂತೆ ಕಾಣುತ್ತಿದ್ದರು.

09054033a ವ್ಯಾಘ್ರಾವಿವ ಸುಸಂರಬ್ಧೌ ಗರ್ಜಂತಾವಿವ ತೋಯದೌ।
09054033c ಜಹೃಷಾತೇ ಮಹಾಬಾಹೂ ಸಿಂಹೌ ಕೇಸರಿಣಾವಿವ।।

ಆ ಇಬ್ಬರು ಮಹಾಬಾಹುಗಳು ಕೋಪಗೊಂಡ ಹುಲಿಗಳಂತೆ, ಗುಡುಗುವ ಮೋಡಗಳಂತೆ ಮತ್ತು ಸಿಂಹ-ಕೇಸರಿಗಳಂತೆ ತೋರುತ್ತಿದ್ದರು.

09054034a ಗಜಾವಿವ ಸುಸಂರಬ್ಧೌ ಜ್ವಲಿತಾವಿವ ಪಾವಕೌ।
09054034c ದದೃಶುಸ್ತೌ ಮಹಾತ್ಮಾನೌ ಸಶೃಂಗಾವಿವ ಪರ್ವತೌ।।

ಕುಪಿತ ಗಜಗಳಂತೆ ಮತ್ತು ಪ್ರಜ್ವಲಿಸುವ ಅಗ್ನಿಗಳಂತಿದ್ದ ಆ ಮಹಾತ್ಮರು ಶಿಖರಗಳುಳ್ಳ ಪರ್ವತಗಳಂತೆ ತೋರುತ್ತಿದ್ದರು.

09054035a ರೋಷಾತ್ಪ್ರಸ್ಫುರಮಾಣೋಷ್ಠೌ ನಿರೀಕ್ಷಂತೌ ಪರಸ್ಪರಂ।
09054035c ತೌ ಸಮೇತೌ ಮಹಾತ್ಮಾನೌ ಗದಾಹಸ್ತೌ ನರೋತ್ತಮೌ।।

ರೋಷಾವೇಶದಿಂದ ಇಬ್ಬರ ತುಟಿಗಳೂ ಅದುರುತ್ತಿದ್ದವು. ಒಬ್ಬರನ್ನೊಬ್ಬರು ತೀಕ್ಷ್ಣದೃಷ್ಟಿಯಿಂದ ನೋಡುತ್ತಿದ್ದರು. ಆ ಇಬ್ಬರು ಮಹಾತ್ಮ ನರೋತ್ತಮರೂ ಗದೆಗಳನ್ನು ಹಿಡಿದು ಹೊಡೆದಾಡಿದರು.

09054036a ಉಭೌ ಪರಮಸಂಹೃಷ್ಟಾವುಭೌ ಪರಮಸಮ್ಮತೌ।
09054036c ಸದಶ್ವಾವಿವ ಹೇಷಂತೌ ಬೃಂಹಂತಾವಿವ ಕುಂಜರೌ।।

ಇಬ್ಬರೂ ಪರಮಸಂಹೃಷ್ಟರಾಗಿದ್ದರು. ಪರಮ ಸಮ್ಮತಿಯನ್ನು ಹೊಂದಿದ್ದರು. ಉತ್ತಮ ಕುದುರೆಗಳಂತೆ ಕೆನೆಯುತ್ತಿದ್ದರು. ಆನೆಗಳಂತೆ ಘೂಳಿಡುತ್ತಿದ್ದರು.

09054037a ವೃಷಭಾವಿವ ಗರ್ಜಂತೌ ದುರ್ಯೋಧನವೃಕೋದರೌ।
09054037c ದೈತ್ಯಾವಿವ ಬಲೋನ್ಮತ್ತೌ ರೇಜತುಸ್ತೌ ನರೋತ್ತಮೌ।।

ಗೂಳಿಗಳಂತೆ ಗುಟುಕುಹಾಕುತ್ತಿದ್ದರು. ನರೋತ್ತಮರಾದ ದುರ್ಯೋಧನ-ವೃಕೋದರರು ಬಲೋನ್ಮತ್ತ ದೈತ್ಯರಂತೆಯೇ ಪ್ರಕಾಶಿಸುತ್ತಿದ್ದರು.

09054038a ತತೋ ದುರ್ಯೋಧನೋ ರಾಜನ್ನಿದಮಾಹ ಯುಧಿಷ್ಠಿರಂ।
09054038c ಸೃಂಜಯೈಃ ಸಹ ತಿಷ್ಠಂತಂ ತಪಂತಮಿವ ಭಾಸ್ಕರಂ।।

ರಾಜನ್! ಆಗ ದುರ್ಯೋಧನನು ಉರಿಯುತ್ತಿರುವ ಭಾಸ್ಕರನಂತೆ ಸೃಂಜಯರೊಂದಿಗೆ ನಿಂತಿದ್ದ ಯುಧಿಷ್ಠಿರನಿಗೆ ಇದನ್ನು ಹೇಳಿದನು:

09054039a ಇದಂ ವ್ಯವಸಿತಂ ಯುದ್ಧಂ ಮಮ ಭೀಮಸ್ಯ ಚೋಭಯೋಃ।
09054039c ಉಪೋಪವಿಷ್ಟಾಃ ಪಶ್ಯಧ್ವಂ ವಿಮರ್ದಂ ನೃಪಸತ್ತಮಾಃ।।

“ನೃಪಸತ್ತಮರೇ! ನಿಶ್ಚಯವಾಗಿರುವ ನನ್ನ ಮತ್ತು ಭೀಮ ಇಬ್ಬರ ಮಹಾಯುದ್ಧವನ್ನು ಹತ್ತಿರದಲ್ಲಿಯೇ ಕುಳಿತು ನೋಡಿರಿ!”

09054040a ತತಃ ಸಮುಪವಿಷ್ಟಂ ತತ್ಸುಮಹದ್ರಾಜಮಂಡಲಂ।
09054040c ವಿರಾಜಮಾನಂ ದದೃಶೇ ದಿವೀವಾದಿತ್ಯಮಂಡಲಂ।।

ಆಗ ಆ ಮಹಾರಾಜಮಂಡಲವು ಕುಳಿತುಕೊಳ್ಳಲು ಅದು ದಿವಿಯಲ್ಲಿಯ ಆದಿತ್ಯಮಂಡಲದಂತೆ ಕಂಡಿತು.

09054041a ತೇಷಾಂ ಮಧ್ಯೇ ಮಹಾಬಾಹುಃ ಶ್ರೀಮಾನ್ಕೇಶವಪೂರ್ವಜಃ।
09054041c ಉಪವಿಷ್ಟೋ ಮಹಾರಾಜ ಪೂಜ್ಯಮಾನಃ ಸಮಂತತಃ।।

ಮಹಾರಾಜ! ಅವರ ಮಧ್ಯೆ ಮಹಾಬಾಹು ಶ್ರೀಮಾನ್ ಕೇಶವಪೂರ್ವಜನು ಎಲ್ಲಕಡೆಗಳಿಂದ ಗೌರವಿಸಿಕೊಳ್ಳುತ್ತಾ ಕುಳಿತಿದ್ದನು.

09054042a ಶುಶುಭೇ ರಾಜಮಧ್ಯಸ್ಥೋ ನೀಲವಾಸಾಃ ಸಿತಪ್ರಭಃ।
09054042c ನಕ್ಷತ್ರೈರಿವ ಸಂಪೂರ್ಣೋ ವೃತೋ ನಿಶಿ ನಿಶಾಕರಃ।।

ರಾಜರ ಮಧ್ಯದಲ್ಲಿದ್ದ ಆ ನೀಲವಸ್ತ್ರಧಾರಿ ಶ್ವೇತಪ್ರಭೆಯುಳ್ಳ ರಾಮನು ರಾತ್ರಿಯಲ್ಲಿ ನಕ್ಷತ್ರಗಳಿಂದ ಆವೃತನಾದ ಸಂಪೂರ್ಣ ಚಂದ್ರನಂತೆ ಕಂಡನು.

09054043a ತೌ ತಥಾ ತು ಮಹಾರಾಜ ಗದಾಹಸ್ತೌ ದುರಾಸದೌ।
09054043c ಅನ್ಯೋನ್ಯಂ ವಾಗ್ಭಿರುಗ್ರಾಭಿಸ್ತಕ್ಷಮಾಣೌ ವ್ಯವಸ್ಥಿತೌ।।

ಮಹಾರಾಜ! ಆಗ ಗದೆಗಳನ್ನು ಹಿಡಿದಿದ್ದ ದುರಾಸದರಾದ ಅವರಿಬ್ಬರೂ ಅನ್ಯೋನ್ಯರನ್ನು ವಾಗ್ಯುದ್ಧದಿಂದ ನೋಯಿಸತೊಡಗಿದರು.

09054044a ಅಪ್ರಿಯಾಣಿ ತತೋಽನ್ಯೋನ್ಯಮುಕ್ತ್ವಾ ತೌ ಕುರುಪುಂಗವೌ।
09054044c ಉದೀಕ್ಷಂತೌ ಸ್ಥಿತೌ ವೀರೌ ವೃತ್ರಶಕ್ರಾವಿವಾಹವೇ।।

ಅನ್ಯೋನ್ಯರಿಗೆ ಅಪ್ರಿಯವಾದವುಗಳನ್ನು ಹೇಳಿ ಆ ಕುರುಪುಂಗವ ವೀರರಿಬ್ಬರೂ ವೃತ್ರ-ಶಕ್ರರ ಯುದ್ಧವೋ ಎಂಬಂತೆ ಪರಸ್ಪರರನ್ನು ದುರುಗುಟ್ಟಿ ನೋಡುತ್ತಾ ನಿಂತರು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಯುದ್ಧಾರಂಭೇ ಚತುಷ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಯುದ್ಧಾರಂಭ ಎನ್ನುವ ಐವತ್ನಾಲ್ಕನೇ ಅಧ್ಯಾಯವು.