ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಸಾರಸ್ವತ ಪರ್ವ
ಅಧ್ಯಾಯ 49
ಸಾರ
ಅಸಿತದೇವಲ-ಜೈಗೀಷವ್ಯರ ಕಥೆ (1-65).
09049001 ವೈಶಂಪಾಯನ ಉವಾಚ 09049001a ತಸ್ಮಿನ್ನೇವ ತು ಧರ್ಮಾತ್ಮಾ ವಸತಿ ಸ್ಮ ತಪೋಧನಃ।
09049001c ಗಾರ್ಹಸ್ಥ್ಯಂ ಧರ್ಮಮಾಸ್ಥಾಯ ಅಸಿತೋ ದೇವಲಃ ಪುರಾ।।
ವೈಶಂಪಾಯನನು ಹೇಳಿದನು: “ಆ ಸ್ಥಳದಲ್ಲಿಯೇ ಹಿಂದೆ ಧರ್ಮಾತ್ಮ ತಪೋಧನ ಅಸಿತದೇವಲನು ಗೃಹಸ್ಥಾಶ್ರಮ ಧರ್ಮವನ್ನು ಆಶ್ರಯಿಸಿ ವಾಸಿಸುತ್ತಿದ್ದನು.
09049002a ಧರ್ಮನಿತ್ಯಃ ಶುಚಿರ್ದಾಂತೋ ನ್ಯಸ್ತದಂಡೋ ಮಹಾತಪಾಃ।
09049002c ಕರ್ಮಣಾ ಮನಸಾ ವಾಚಾ ಸಮಃ ಸರ್ವೇಷು ಜಂತುಷು।।
ಆ ಧರ್ಮನಿತ್ಯ-ಶುಚಿ-ದಾಂತ-ಮಹಾತಪಸ್ವಿಯು ಯಾರನ್ನೂ ಹಿಂಸಿಸದೇ ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವ ಜೀವಿಗಳೊಂದಿಗೆ ಸಮನಾಗಿ ನಡೆದುಕೊಂಡಿದ್ದನು.
09049003a ಅಕ್ರೋಧನೋ ಮಹಾರಾಜ ತುಲ್ಯನಿಂದಾಪ್ರಿಯಾಪ್ರಿಯಃ।
09049003c ಕಾಂಚನೇ ಲೋಷ್ಟಕೇ ಚೈವ ಸಮದರ್ಶೀ ಮಹಾತಪಾಃ।।
ಮಹಾರಾಜ! ಅಕ್ರೋಧನನಾದ ಆ ಮಹಾತಪಸ್ವಿಯು ಪ್ರಿಯ-ಅಪ್ರಿಯ ನಿಂದನೆಗಳನ್ನು ಮತ್ತು ಕಾಂಚನ-ಕಲ್ಲುಗಳನ್ನು ಒಂದೇ ಸಮನಾಗಿ ಕಾಣುತ್ತಿದ್ದನು.
09049004a ದೇವತಾಃ ಪೂಜಯನ್ನಿತ್ಯಮತಿಥೀಂಶ್ಚ ದ್ವಿಜೈಃ ಸಹ।
09049004c ಬ್ರಹ್ಮಚರ್ಯರತೋ ನಿತ್ಯಂ ಸದಾ ಧರ್ಮಪರಾಯಣಃ।।
ದ್ವಿಜರೊಂದಿಗೆ ನಿತ್ಯವೂ ದೇವತೆ-ಅತಿಥಿಗಳನ್ನು ಪೂಜಿಸುತ್ತಿದ್ದನು ಮತ್ತು ಆ ಧರ್ಮಪರಾಯಣನು ನಿತ್ಯವೂ ಬ್ರಹ್ಮಚರ್ಯದಲ್ಲಿ ನಿರತನಾಗಿದ್ದನು.
09049005a ತತೋಽಭ್ಯೇತ್ಯ ಮಹಾರಾಜ ಯೋಗಮಾಸ್ಥಾಯ ಭಿಕ್ಷುಕಃ।
09049005c ಜೈಗೀಷವ್ಯೋ ಮುನಿರ್ಧೀಮಾಂಸ್ತಸ್ಮಿಂಸ್ತೀರ್ಥೇ ಸಮಾಹಿತಃ।।
ಮಹಾರಾಜ! ಆಗ ಒಮ್ಮೆ ಧೀಮಾನ್ ಮುನಿ ಜೈಗೀಷವ್ಯನು ಯೋಗವನ್ನಾಶ್ರಯಿಸಿ ಭಿಕ್ಷುಕನಾಗಿ ಆ ತೀರ್ಥಕ್ಕೆ ಆಗಮಿಸಿದನು.
09049006a ದೇವಲಸ್ಯಾಶ್ರಮೇ ರಾಜನ್ನ್ಯವಸತ್ಸ ಮಹಾದ್ಯುತಿಃ।
09049006c ಯೋಗನಿತ್ಯೋ ಮಹಾರಾಜ ಸಿದ್ಧಿಂ ಪ್ರಾಪ್ತೋ ಮಹಾತಪಾಃ।।
ರಾಜನ್! ಮಹಾರಾಜ! ಆ ಮಹಾದ್ಯುತಿ ಮಹಾತಪಸ್ವಿಯು ದೇವಲನ ಆಶ್ರಮದಲ್ಲಿ ವಾಸಮಾಡಿದ್ದುಕೊಂಡು ಯೋಗನಿತ್ಯನಾಗಿ ಸಿದ್ಧಿಯನ್ನು ಪಡೆದನು.
09049007a ತಂ ತತ್ರ ವಸಮಾನಂ ತು ಜೈಗೀಷವ್ಯಂ ಮಹಾಮುನಿಂ।
09049007c ದೇವಲೋ ದರ್ಶಯನ್ನೇವ ನೈವಾಯುಂಜತ ಧರ್ಮತಃ।।
ಅವನು ಅಲ್ಲಿ ವಾಸಿಸುತ್ತಿರಲು ಮಹಾಮುನಿ ಜೈಗೀಷವ್ಯನನ್ನು ದೇವಲನು ನೋಡುತ್ತಲೇ ಇದ್ದನು. ಆದರೆ ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸುತ್ತಿದ್ದ ಅವನು ಯೋಗಸಾಧನೆಗೆ ತೊಡಗುತ್ತಿರಲಿಲ್ಲ.
09049008a ಏವಂ ತಯೋರ್ಮಹಾರಾಜ ದೀರ್ಘಕಾಲೋ ವ್ಯತಿಕ್ರಮತ್।
09049008c ಜೈಗೀಷವ್ಯಂ ಮುನಿಂ ಚೈವ ನ ದದರ್ಶಾಥ ದೇವಲಃ।।
ಮಹಾರಾಜ! ಹೀಗೆ ಅವರಿಬ್ಬರೂ ಇರುತ್ತಾ ಬಹಳಕಾಲ ಕಳೆಯಿತು. ಕೆಲವು ಸಮಯಗಳು ದೇವಲನು ಜೈಗೀಷವ್ಯ ಮುನಿಯನ್ನು ಕಾಣುತ್ತಲೇ ಇರಲಿಲ್ಲ.
09049009a ಆಹಾರಕಾಲೇ ಮತಿಮಾನ್ಪರಿವ್ರಾಡ್ಜನಮೇಜಯ।
09049009c ಉಪಾತಿಷ್ಠತ ಧರ್ಮಜ್ಞೋ ಭೈಕ್ಷಕಾಲೇ ಸ ದೇವಲಂ।।
ಜನಮೇಜಯ! ಆಹಾರಕಾಲದಲ್ಲಿ ಪರಿವ್ರಾಜಕ ಮತಿಮಾನ್ ಧರ್ಮಜ್ಞ ಜೈಗೀಷವ್ಯನು ಭಿಕ್ಷೆಬೇಡುತ್ತಾ ದೇವಲನ ಬಳಿ ಬರುತ್ತಿದ್ದನು.
09049010a ಸ ದೃಷ್ಟ್ವಾ ಭಿಕ್ಷುರೂಪೇಣ ಪ್ರಾಪ್ತಂ ತತ್ರ ಮಹಾಮುನಿಂ।
09049010c ಗೌರವಂ ಪರಮಂ ಚಕ್ರೇ ಪ್ರೀತಿಂ ಚ ವಿಪುಲಾಂ ತಥಾ।।
ಭಿಕ್ಷುರೂಪದಲ್ಲಿದ್ದ ಆ ಮಹಾಮುನಿಯು ಬಂದುದನ್ನು ನೋಡಿ ದೇವಲನು ಪರಮ ಗೌರವವನ್ನಿತ್ತು ಬಹಳ ಸಂತೋಷಗೊಳ್ಳುತ್ತಿದ್ದನು.
09049011a ದೇವಲಸ್ತು ಯಥಾಶಕ್ತಿ ಪೂಜಯಾಮಾಸ ಭಾರತ।
09049011c ಋಷಿದೃಷ್ಟೇನ ವಿಧಿನಾ ಸಮಾ ಬಹ್ವ್ಯಃ ಸಮಾಹಿತಃ।।
ಭಾರತ! ದೇವಲನಾದರೋ ಯಥಾಶಕ್ತಿಯಾಗಿ ಋಷಿಗಳಿಗೆ ಅನುಗುಣವಾದ ವಿಧಿಗಳಿಂದ ಸಮಾಹಿತನಾಗಿ ಅವನನ್ನು ಪೂಜಿಸುತ್ತಿದ್ದನು.
09049012a ಕದಾ ಚಿತ್ತಸ್ಯ ನೃಪತೇ ದೇವಲಸ್ಯ ಮಹಾತ್ಮನಃ।
09049012c ಚಿಂತಾ ಸುಮಹತೀ ಜಾತಾ ಮುನಿಂ ದೃಷ್ಟ್ವಾ ಮಹಾದ್ಯುತಿಂ।।
ನೃಪತೇ! ಒಮ್ಮೆ ಮಹಾದ್ಯುತಿ ಮುನಿ ಜೈಗೀಷವ್ಯನನ್ನು ನೋಡಿ ಮಹಾತ್ಮ ದೇವಲನಲ್ಲಿ ಮಹಾ ಚಿಂತೆಯು ಮೂಡಿತು.
09049013a ಸಮಾಸ್ತು ಸಮತಿಕ್ರಾಂತಾ ಬಹ್ವ್ಯಃ ಪೂಜಯತೋ ಮಮ।
09049013c ನ ಚಾಯಮಲಸೋ ಭಿಕ್ಷುರಭ್ಯಭಾಷತ ಕಿಂ ಚನ।।
“ಅನೇಕ ವರ್ಷಗಳು ನಾನು ವಿಧಿವತ್ತಾಗಿ ಇವನನ್ನು ಪೂಜಿಸುತ್ತಲೇ ಬಂದಿದ್ದೇನೆ. ಆದರೆ ಈ ಆಲಸಿ ಭಿಕ್ಷುವು ನನ್ನೊಡನೆ ಏನೊಂದು ಮಾತನ್ನೂ ಆಡಲೇ ಇಲ್ಲವಲ್ಲ!”
09049014a ಏವಂ ವಿಗಣಯನ್ನೇವ ಸ ಜಗಾಮ ಮಹೋದಧಿಂ।
09049014c ಅಂತರಿಕ್ಷಚರಃ ಶ್ರೀಮಾನ್ಕಲಶಂ ಗೃಹ್ಯ ದೇವಲಃ।।
ಹೀಗೆ ಆಲೋಚಿಸುತ್ತಾ ಶ್ರೀಮಾನ್ ದೇವಲನು ಕಲಶವನ್ನೆತ್ತಿಕೊಂಡು ಆಕಾಶಮಾರ್ಗವಾಗಿ ಸಮುದ್ರಕ್ಕೆ ಹೋದನು.
09049015a ಗಚ್ಚನ್ನೇವ ಸ ಧರ್ಮಾತ್ಮಾ ಸಮುದ್ರಂ ಸರಿತಾಂ ಪತಿಂ।
09049015c ಜೈಗೀಷವ್ಯಂ ತತೋಽಪಶ್ಯದ್ಗತಂ ಪ್ರಾಗೇವ ಭಾರತ।।
ಭಾರತ! ಸರಿತ್ತುಗಳ ಒಡೆಯ ಸಮುದ್ರವನ್ನು ತಲುಪುತ್ತಲೇ ಆ ಧರ್ಮಾತ್ಮನು ತನಗಿಂತ ಮೊದಲೇ ಅಲ್ಲಿಗೆ ಬಂದಿದ್ದ ಜೈಗೀಷವ್ಯನನ್ನು ಕಂಡನು.
09049016a ತತಃ ಸವಿಸ್ಮಯಶ್ಚಿಂತಾಂ ಜಗಾಮಾಥಾಸಿತಃ ಪ್ರಭುಃ।
09049016c ಕಥಂ ಭಿಕ್ಷುರಯಂ ಪ್ರಾಪ್ತಃ ಸಮುದ್ರೇ ಸ್ನಾತ ಏವ ಚ।।
ಆಗ ಪ್ರಭುವು ವಿಸ್ಮಿತನಾಗಿ ಈ ರೀತಿ ಚಿಂತಿಸತೊಡಗಿದನು: “ಈ ಭಿಕ್ಷುವು ಹೇಗೆ ತಾನೇ ಸಮುದ್ರವನ್ನು ತಲುಪಿ ಸ್ನಾನವನ್ನೂ ಮುಗಿಸಿದ್ದಾನೆ?”
09049017a ಇತ್ಯೇವಂ ಚಿಂತಯಾಮಾಸ ಮಹರ್ಷಿರಸಿತಸ್ತದಾ।
09049017c ಸ್ನಾತ್ವಾ ಸಮುದ್ರೇ ವಿಧಿವಚ್ಚುಚಿರ್ಜಪ್ಯಂ ಜಜಾಪ ಹ।।
ಮಹರ್ಷಿ ಅಸಿತನು ಹೀಗೆ ಚಿಂತಿಸುತ್ತಿದ್ದನು. ಸಮುದ್ರದಲ್ಲಿ ವಿಧಿವತ್ತಾಗಿ ಸ್ನಾನಮಾಡಿ ಜಪವನ್ನೂ ಜಪಿಸಿದನು.
09049018a ಕೃತವಂಪ್ಯಾಹ್ನಿಕಃ ಶ್ರೀಮಾನಾಶ್ರಮಂ ಚ ಜಗಾಮ ಹ।
09049018c ಕಲಶಂ ಜಲಪೂರ್ಣಂ ವೈ ಗೃಹೀತ್ವಾ ಜನಮೇಜಯ।।
ಜನಮೇಜಯ! ಆಹ್ನಿಕವನ್ನೂ ಪೂರೈಸಿ, ನೀರಿನಿಂದ ತುಂಬಿದ ಕಲಶವನ್ನು ಹಿಡಿದುಕೊಂಡು ಶ್ರೀಮಾನ್ ದೇವಲನು ಆಶ್ರಮಕ್ಕೆ ಹಿಂದಿರುಗಿದನು.
09049019a ತತಃ ಸ ಪ್ರವಿಶನ್ನೇವ ಸ್ವಮಾಶ್ರಮಪದಂ ಮುನಿಃ।
09049019c ಆಸೀನಮಾಶ್ರಮೇ ತತ್ರ ಜೈಗೀಷವ್ಯಮಪಶ್ಯತ।।
ತನ್ನ ಆಶ್ರಮವನ್ನು ಪ್ರವೇಶಿಸುತ್ತಲೇ ಆ ಮುನಿಯು ಆಶ್ರಮದಲ್ಲಿ ಕುಳಿತಿದ್ದ ಜೈಗೀಷವ್ಯನನ್ನು ನೋಡಿದನು.
09049020a ನ ವ್ಯಾಹರತಿ ಚೈವೈನಂ ಜೈಗೀಷವ್ಯಃ ಕಥಂ ಚನ।
09049020c ಕಾಷ್ಠಭೂತೋಽಶ್ರಮಪದೇ ವಸತಿ ಸ್ಮ ಮಹಾತಪಾಃ।।
ಆದರೆ ಜೈಗೀಷ್ಯವ್ಯನು ದೇವಲನೊಂದಿಗೆ ಯಾವುದೇ ರೀತಿಯಲ್ಲಿಯೂ ವ್ಯವಹರಿಸಲಿಲ್ಲ. ಆಶ್ರಮಪದದಲ್ಲಿ ಆ ಮಹಾತಪಸ್ವಿಯು ಕಟ್ಟಿಗೆಯಂತೆ ಮೌನಿಯಾಗಿದ್ದನು.
09049021a ತಂ ದೃಷ್ಟ್ವಾ ಚಾಪ್ಲುತಂ ತೋಯೇ ಸಾಗರೇ ಸಾಗರೋಪಮಂ।
09049021c ಪ್ರವಿಷ್ಟಮಾಶ್ರಮಂ ಚಾಪಿ ಪೂರ್ವಮೇವ ದದರ್ಶ ಸಃ।।
09049022a ಅಸಿತೋ ದೇವಲೋ ರಾಜಂಶ್ಚಿಂತಯಾಮಾಸ ಬುದ್ಧಿಮಾನ್।
ರಾಜನ್! ಸಾಗರದ ಗಾಂಭೀರ್ಯದಿಂದ ಅವನು ಸಾಗರದ ನೀರಿನಲ್ಲಿ ತನಗಿಂತಲೇ ಮೊದಲು ಸ್ನಾನಮಾಡಿದುದನ್ನೂ ಮತ್ತು ತನಗಿಂತ ಮೊದಲೇ ಆಶ್ರಮವನ್ನು ಪ್ರವೇಶಿಸಿದುದನ್ನು ನೋಡಿ ಬುದ್ಧಿಮಾನ್ ಅಸಿತ ದೇವಲನು ಚಿಂತಿಸತೊಡಗಿದನು.
09049022c ದೃಷ್ಟಃ ಪ್ರಭಾವಂ ತಪಸೋ ಜೈಗೀಷವ್ಯಸ್ಯ ಯೋಗಜಂ।।
09049023a ಚಿಂತಯಾಮಾಸ ರಾಜೇಂದ್ರ ತದಾ ಸ ಮುನಿಸತ್ತಮಃ।
09049023c ಮಯಾ ದೃಷ್ಟಃ ಸಮುದ್ರೇ ಚ ಆಶ್ರಮೇ ಚ ಕಥಂ ತ್ವಯಂ।।
ರಾಜೇಂದ್ರ! ತಪಸ್ಸು-ಯೋಗಗಳಿಂದುಂಟಾದ ಜೈಗೀಷವ್ಯನ ಪ್ರಭಾವವನ್ನು ನೋಡಿ ಮುನಿಸತ್ತಮನು “ಇವನನ್ನು ನಾನು ಸಮುದ್ರ ಮತ್ತು ಆಶ್ರಮಗಳಲ್ಲಿ ಹೇಗೆ ನೋಡುತ್ತಿರುವೆ?” ಎಂದು ಆಲೋಚಿಸತೊಡಗಿದನು.
09049024a ಏವಂ ವಿಗಣಯನ್ನೇವ ಸ ಮುನಿರ್ಮಂತ್ರಪಾರಗಃ।
09049024c ಉತ್ಪಪಾತಾಶ್ರಮಾತ್ತಸ್ಮಾದಂತರಿಕ್ಷಂ ವಿಶಾಂ ಪತೇ।।
09049024e ಜಿಜ್ಞಾಸಾರ್ಥಂ ತದಾ ಭಿಕ್ಷೋರ್ಜೈಗೀಷವ್ಯಸ್ಯ ದೇವಲಃ।।
ಹೀಗೆ ಲೆಖ್ಕ ಹಾಕುತ್ತಲೇ ಮಂತ್ರಪಾರಗ ಮುನಿ ದೇವಲನು ಭಿಕ್ಷು ಜೈಗೀಷವ್ಯನ ಕುರಿತು ಚರ್ಚಿಸಲು ಅಲ್ಲಿಂದ ಅಂತರಿಕ್ಷಕ್ಕೇರಿದನು.
09049025a ಸೋಽಮ್ತರಿಕ್ಷಚರಾನ್ಸಿದ್ಧಾನ್ಸಮಪಶ್ಯತ್ಸಮಾಹಿತಾನ್।
09049025c ಜೈಗೀಷವ್ಯಂ ಚ ತೈಃ ಸಿದ್ಧೈಃ ಪೂಜ್ಯಮಾನಮಪಶ್ಯತ।।
ಅಂತರಿಕ್ಷದಲ್ಲಿ ಹೋಗುತ್ತಿರುವಾಗ ಅವನು ಸಮಾಹಿತ ಸಿದ್ಧರನ್ನೂ, ಆ ಸಿದ್ಧರು ಜೈಗೀಷವ್ಯನನ್ನು ಪೂಜಿಸುತ್ತಿರುವುದನ್ನೂ ಕಂಡನು.
09049026a ತತೋಽಸಿತಃ ಸುಸಂರಬ್ಧೋ ವ್ಯವಸಾಯೀ ದೃಢವ್ರತಃ।
09049026c ಅಪಶ್ಯದ್ವೈ ದಿವಂ ಯಾಂತಂ ಜೈಗೀಷವ್ಯಂ ಸ ದೇವಲಃ।।
ಆಗ ವ್ಯವಸಾಯೀ ದೃಢವ್ರತ ಅಸಿತನು ತುಂಬಾ ಕುಪಿತನಾದನು. ದೇವಲನು ಜೈಗೀಷವ್ಯನು ದಿವಕ್ಕೆ ಹೋಗುತ್ತಿರುವುದನ್ನೂ ನೋಡಿದನು.
09049027a ತಸ್ಮಾಚ್ಚ ಪಿತೃಲೋಕಂ ತಂ ವ್ರಜಂತಂ ಸೋಽನ್ವಪಶ್ಯತ।
09049027c ಪಿತೃಲೋಕಾಚ್ಚ ತಂ ಯಾಂತಂ ಯಾಮ್ಯಂ ಲೋಕಮಪಶ್ಯತ।।
ಅವನು ಪಿತೃಲೋಕಕ್ಕೆ ಹೋಗುತ್ತಿರುವುದನ್ನೂ ನೋಡಿದನು. ಮತ್ತು ಪಿತೃಲೋಕದಿಂದ ಯಮಲೋಕಕ್ಕೆ ಹೋಗುತ್ತಿರುವುದನ್ನೂ ನೋಡಿದನು.
09049028a ತಸ್ಮಾದಪಿ ಸಮುತ್ಪತ್ಯ ಸೋಮಲೋಕಮಭಿಷ್ಟುತಂ।
09049028c ವ್ರಜಂತಮನ್ವಪಶ್ಯತ್ಸ ಜೈಗೀಷವ್ಯಂ ಮಹಾಮುನಿಂ।।
ಮಹಾಮುನಿ ಜೈಗೀಷವ್ಯನು ಅಲ್ಲಿಂದಲೂ ಮೇಲೆ ಹಾರಿ ಸೋಮಲೋಕಕ್ಕೆ ಹೋಗುತ್ತಿರುವುದನ್ನೂ ದೇವಲನು ನೋಡಿದನು.
09049029a ಲೋಕಾನ್ಸಮುತ್ಪತಂತಂ ಚ ಶುಭಾನೇಕಾಂತಯಾಜಿನಾಂ।
09049029c ತತೋಽಗ್ನಿಹೋತ್ರಿಣಾಂ ಲೋಕಾಂಸ್ತೇಭ್ಯಶ್ಚಾಪ್ಯುತ್ಪಪಾತ ಹ।।
ಅಲ್ಲಿಂದ ಅವನು ಏಕಾಂತಯಾಜಿಗಳ ಶುಭ ಲೋಕಗಳಿಗೆ ಹಾರಿದುದನ್ನೂ, ಅಲ್ಲಿಂದ ಅಗ್ನಿಹೋತ್ರಿಗಳ ಲೋಕಗಳಿಗೆ ಹಾರಿದುದನ್ನೂ ನೋಡಿದನು.
09049030a ದರ್ಶಂ ಚ ಪೌರ್ಣಮಾಸಂ ಚ ಯೇ ಯಜಂತಿ ತಪೋಧನಾಃ।
09049030c ತೇಭ್ಯಃ ಸ ದದೃಶೇ ಧೀಮಾಽಲ್ಲೋಕೇಭ್ಯಃ ಪಶುಯಾಜಿನಾಂ।।
09049030e ವ್ರಜಂತಂ ಲೋಕಮಮಲಮಪಶ್ಯದ್ದೇವಪೂಜಿತಂ।।
ಜೈಗೀಷವ್ಯನನ್ನು ದರ್ಶ-ಪೌರ್ಣಮಾಸ ಯಜ್ಞಗಳನ್ನು ಮಾಡಿದ ತಪೋಧನ ಧೀಮಂತರಿಗೆ ದೊರಕುವ ಲೋಕಗಳಲ್ಲಿಯೂ ನೋಡಿದನು. ಅಲ್ಲಿಂದ ಅವನು ಪಶುಯಾಜಿಗಳಿಗೆ ಲಭ್ಯವಾಗುವ ಅಮಲ ದೇವಪೂಜಿತ ಲೋಕಗಳಿಗೆ ಹೋಗುವುದನ್ನೂ ನೋಡಿದನು.
09049031a ಚಾತುರ್ಮಾಸ್ಯೈರ್ಬಹುವಿಧೈರ್ಯಜಂತೇ ಯೇ ತಪೋಧನಾಃ।
09049031c ತೇಷಾಂ ಸ್ಥಾನಂ ತಥಾ ಯಾಂತಂ ತಥಾಗ್ನಿಷ್ಟೋಮಯಾಜಿನಾಂ।।
09049032a ಅಗ್ನಿಷ್ಟುತೇನ ಚ ತಥಾ ಯೇ ಯಜಂತಿ ತಪೋಧನಾಃ।
09049032c ತತ್ ಸ್ಥಾನಮನುಸಂಪ್ರಾಪ್ತಮನ್ವಪಶ್ಯತ ದೇವಲಃ।।
ಅನಂತರ ಜೈಗೀಷವ್ಯನು ಬಹುವಿಧದ ಚಾತುರ್ಮಾಸ್ಯಗಳನ್ನು ಮಾಡುವ ತಪೋಧನರ ಸ್ಥಾನಗಳಿಗೆ ಹೋಗುತ್ತಿರುವುದನ್ನೂ, ಹಾಗೆಯೇ ಅಗ್ನಿಷ್ಟೋಮ ಮತ್ತು ಅಗ್ನಿಷ್ಟುತ ಯಾಗಗಳನ್ನು ಮಾಡುವ ತಪೋಧನರ ಸ್ಥಾನಗಳಿಗೆ ತಲುಪಿದುದನ್ನೂ ದೇವಲನು ನೋಡಿದನು.
09049033a ವಾಜಪೇಯಂ ಕ್ರತುವರಂ ತಥಾ ಬಹುಸುವರ್ಣಕಂ।
09049033c ಆಹರಂತಿ ಮಹಾಪ್ರಾಜ್ಞಾಸ್ತೇಷಾಂ ಲೋಕೇಷ್ವಪಶ್ಯತ।।
ಬಹುಸುವರ್ಣಗಳ ದಕ್ಷಿಣೆಗಳನ್ನಿತ್ತು ಕ್ರತುಶ್ರೇಷ್ಠ ವಾಜಪೇಯವನ್ನು ಮಾಡಿದ್ದ ಮಹಾಪ್ರಾಜ್ಞರ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ಕಂಡನು.
09049034a ಯಜಂತೇ ಪುಂಡರೀಕೇಣ ರಾಜಸೂಯೇನ ಚೈವ ಯೇ।
09049034c ತೇಷಾಂ ಲೋಕೇಷ್ವಪಶ್ಯಚ್ಚ ಜೈಗೀಷವ್ಯಂ ಸ ದೇವಲಃ।।
ಪುಂಡರೀಕ ಮತ್ತು ರಾಜಸೂಯಯಾಗಗಳನ್ನು ಮಾಡಿದವರ ಲೋಕಗಳಲ್ಲಿಯೂ ಜೈಗೀಷವ್ಯನನ್ನು ದೇವಲನು ನೋಡಿದನು.
09049035a ಅಶ್ವಮೇಧಂ ಕ್ರತುವರಂ ನರಮೇಧಂ ತಥೈವ ಚ।
09049035c ಆಹರಂತಿ ನರಶ್ರೇಷ್ಠಾಸ್ತೇಷಾಂ ಲೋಕೇಷ್ವಪಶ್ಯತ।।
ಕ್ರತುಶ್ರೇಷ್ಠ ಅಶ್ವಮೇಧ ಮತ್ತು ಹಾಗೆಯೇ ನರಮೇಧ ಯಜ್ಞಗಳನ್ನು ಪೂರೈಸಿದ ನರಶ್ರೇಷ್ಠರಿಗೆ ದೊರಕುವ ಲೋಕಗಳಲ್ಲಿಯೂ ಅವನನ್ನು ನೋಡಿದನು.
09049036a ಸರ್ವಮೇಧಂ ಚ ದುಷ್ಪ್ರಾಪಂ ತಥಾ ಸೌತ್ರಾಮಣಿಂ ಚ ಯೇ।
09049036c ತೇಷಾಂ ಲೋಕೇಷ್ವಪಶ್ಯಚ್ಚ ಜೈಗೀಷವ್ಯಂ ಸ ದೇವಲಃ।।
ಸರ್ವಮೇಧ ಮತ್ತು ಮಾಡಲು ಕಷ್ಟಕರವಾದ ಸೌತ್ರಾಮಣಿ ಯಜ್ಞಮಾಡಿದವರ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ನೋಡಿದನು.
09049037a ದ್ವಾದಶಾಹೈಶ್ಚ ಸತ್ರೈರ್ಯೇ ಯಜಂತೇ ವಿವಿಧೈರ್ನೃಪ।
09049037c ತೇಷಾಂ ಲೋಕೇಷ್ವಪಶ್ಯಚ್ಚ ಜೈಗೀಷವ್ಯಂ ಸ ದೇವಲಃ।।
ನೃಪ! ವಿವಿಧ ದ್ವಾದಶಾಹ ಸತ್ರಗಳಿಂದ ಯಜಿಸುವವರಿಗೆ ದೊರೆಯುವ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ನೋಡಿದನು.
09049038a ಮಿತ್ರಾವರುಣಯೋರ್ಲೋಕಾನಾದಿತ್ಯಾನಾಂ ತಥೈವ ಚ।
09049038c ಸಲೋಕತಾಮನುಪ್ರಾಪ್ತಮಪಶ್ಯತ ತತೋಽಸಿತಃ।।
ಹಾಗೆಯೇ ಅಸಿತನು ವಿತ್ರಾವರುಣರ ಲೋಕ, ಆದಿತ್ಯರ ಲೋಕಗಳಿಗೆ ಹೋದಾಗ ಅಲ್ಲಿಯೂ ಜೈಗೀಷವ್ಯನನ್ನು ನೋಡಿದನು.
09049039a ರುದ್ರಾಣಾಂ ಚ ವಸೂನಾಂ ಚ ಸ್ಥಾನಂ ಯಚ್ಚ ಬೃಹಸ್ಪತೇಃ।
09049039c ತಾನಿ ಸರ್ವಾಣ್ಯತೀತಂ ಚ ಸಮಪಶ್ಯತ್ತತೋಽಸಿತಃ।।
ರುದ್ರರ, ವಸುಗಳ ಮತ್ತು ಬೃಹಸ್ಪತಿಯ ಸ್ಥಾನಗಳಲ್ಲಿ ಎಲ್ಲ ಕಡೆ ಅಸಿತನು ಅವನನ್ನು ನೋಡಿದನು.
09049040a ಆರುಹ್ಯ ಚ ಗವಾಂ ಲೋಕಂ ಪ್ರಯಾಂತಂ ಬ್ರಹ್ಮಸತ್ರಿಣಾಂ।
09049040c ಲೋಕಾನಪಶ್ಯದ್ಗಚ್ಚಂತಂ ಜೈಗೀಷವ್ಯಂ ತತೋಽಸಿತಃ।।
ಜೈಗೀಷವ್ಯನು ಗೋಲೋಕಕ್ಕೆ ಹಾರಿ ಅಲ್ಲಿಂದ ಬ್ರಹ್ಮಸತ್ರಿಗಳಿಗೆ ದೊರಕುವ ಲೋಕಗಳಿಗೆ ಹೋಗುತ್ತಿರುವುದನ್ನೂ ಅಸಿತನು ನೋಡಿದನು.
09049041a ತ್ರೀಽಲ್ಲೋಕಾನಪರಾನ್ವಿಪ್ರಮುತ್ಪತಂತಂ ಸ್ವತೇಜಸಾ।
09049041c ಪತಿವ್ರತಾನಾಂ ಲೋಕಾಂಶ್ಚ ವ್ರಜಂತಂ ಸೋಽನ್ವಪಶ್ಯತ।।
ಆ ವಿಪ್ರನು ತನ್ನ ತೇಜಸ್ಸಿನಿಂದ ಮೂರು ಲೋಕಗಳನ್ನೂ ದಾಟಿ ಪತಿವ್ರತೆಯರ ಲೋಕಗಳಿಗೆ ಹೋಗುತ್ತಿರುವುದನ್ನೂ ನೋಡಿದನು.
09049042a ತತೋ ಮುನಿವರಂ ಭೂಯೋ ಜೈಗೀಷವ್ಯಮಥಾಸಿತಃ।
09049042c ನಾನ್ವಪಶ್ಯತ ಯೋಗಸ್ಥಮಂತರ್ಹಿತಮರಿಂದಮ।।
ಅರಿಂದಮ! ಅನಂತರ ಅಸಿತನು ಯೋಗಸ್ಥನಾಗಿ ಅಂತರ್ಧಾನನಾಗಿದ್ದ ಜೈಗೀಷ ಮುನಿವರನನ್ನು ಕಾಣಲಿಲ್ಲ.
09049043a ಸೋಽಚಿಂತಯನ್ಮಹಾಭಾಗೋ ಜೈಗೀಷವ್ಯಸ್ಯ ದೇವಲಃ।
09049043c ಪ್ರಭಾವಂ ಸುವ್ರತತ್ವಂ ಚ ಸಿದ್ಧಿಂ ಯೋಗಸ್ಯ ಚಾತುಲಾಂ।।
ಆಗ ಮಹಾಭಾಗ ದೇವಲನು ಜೈಗೀಷವ್ಯನ ವ್ರತತ್ವ, ಪ್ರಭಾವ, ಮತ್ತು ಯೋಗದ ಅತುಲ ಸಿದ್ಧಿಯ ಕುರಿತು ಚಿಂತಿಸಿದನು.
09049044a ಅಸಿತೋಽಪೃಚ್ಚತ ತದಾ ಸಿದ್ಧಾಽಲ್ಲೋಕೇಷು ಸತ್ತಮಾನ್।
09049044c ಪ್ರಯತಃ ಪ್ರಾಂಜಲಿರ್ಭೂತ್ವಾ ಧೀರಸ್ತಾನ್ಬ್ರಹ್ಮಸತ್ರಿಣಃ।।
ಆಗ ಧೀರ ಅಸಿತನು ಅಂಜಲೀಬದ್ಧನಾಗಿ ಪ್ರಯಾಣಿಸುತ್ತಿದ್ದ ಬ್ರಹ್ಮಸತ್ರಿ ಲೋಕಸತ್ತಮ ಸಿದ್ಧರನ್ನು ಪ್ರಶ್ನಿಸಿದನು:
09049045a ಜೈಗೀಷವ್ಯಂ ನ ಪಶ್ಯಾಮಿ ತಂ ಶಂಸತ ಮಹೌಜಸಂ।
09049045c ಏತದಿಚ್ಚಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ।।
“ಮಹೌಜಸ ಜೈಗೀಷವ್ಯನು ಕಾಣುತ್ತಿಲ್ಲವಲ್ಲ! ಇದರ ಕುರಿತು ಕೇಳಲು ಬಯಸುತ್ತೇನೆ. ನನಗೆ ಪರಮ ಕುತೂಹಲವಾಗಿದೆ!”
09049046 ಸಿದ್ಧಾ ಊಚುಃ 09049046a ಶೃಣು ದೇವಲ ಭೂತಾರ್ಥಂ ಶಂಸತಾಂ ನೋ ದೃಢವ್ರತ।
09049046c ಜೈಗೀಷವ್ಯೋ ಗತೋ ಲೋಕಂ ಶಾಶ್ವತಂ ಬ್ರಹ್ಮಣೋಽವ್ಯಯಂ।।
ಸಿದ್ಧರು ಹೇಳಿದರು: “ದೇವಲ! ದೃಢವ್ರತ! ನಾವು ಹೇಳುವುದರ ಅರ್ಥವನ್ನು ಕೇಳು! ಜೈಗೀಷವ್ಯನು ಅವ್ಯಯವೂ ಶಾಶ್ವತವೂ ಆದ ಬ್ರಹ್ಮಲೋಕಕ್ಕೆ ಹೋಗಿದ್ದಾನೆ.”
09049047a ಸ ಶ್ರುತ್ವಾ ವಚನಂ ತೇಷಾಂ ಸಿದ್ಧಾನಾಂ ಬ್ರಹ್ಮಸತ್ರಿಣಾಂ।
09049047c ಅಸಿತೋ ದೇವಲಸ್ತೂರ್ಣಮುತ್ಪಪಾತ ಪಪಾತ ಚ।।
ಬ್ರಹ್ಮಸತ್ರಿ ಸಿದ್ಧರ ಆ ಮಾತನ್ನು ಕೇಳಿ ತಕ್ಷಣವೇ ಅಸಿತ ದೇವಲನು ಮೇಲಕ್ಕೆ ಹಾರಿ, ಬಿದ್ದನು.
09049048a ತತಃ ಸಿದ್ಧಾಸ್ತ ಊಚುರ್ಹಿ ದೇವಲಂ ಪುನರೇವ ಹ।
09049048c ನ ದೇವಲ ಗತಿಸ್ತತ್ರ ತವ ಗಂತುಂ ತಪೋಧನ।।
09049048e ಬ್ರಹ್ಮಣಃ ಸದನಂ ವಿಪ್ರ ಜೈಗೀಷವ್ಯೋ ಯದಾಪ್ತವಾನ್।।
ಆಗ ಸಿದ್ಧರು ದೇವಲನಿಗೆ ಪುನಃ ಹೇಳಿದರು: “ದೇವಲ! ತಪೋಧನ! ವಿಪ್ರ! ಬ್ರಹ್ಮಸದನಕ್ಕೆ ಜೈಗೀಷವ್ಯನು ಪಡೆದುಕೊಂಡಿರುವ ಮಾರ್ಗದಲ್ಲಿ ನೀನು ಹೋಗಲಿಕ್ಕಾಗುವುದಿಲ್ಲ.”
09049049a ತೇಷಾಂ ತದ್ವಚನಂ ಶ್ರುತ್ವಾ ಸಿದ್ಧಾನಾಂ ದೇವಲಃ ಪುನಃ।
09049049c ಆನುಪೂರ್ವ್ಯೇಣ ಲೋಕಾಂಸ್ತಾನ್ಸರ್ವಾನವತತಾರ ಹ।।
ಸಿದ್ಧರ ಆ ಮಾತನ್ನು ಕೇಳಿ ದೇವಲನು ಪುನಃ ಅನುಕ್ರಮವಾಗಿ ಆ ಎಲ್ಲ ಲೋಕಗಳಿಂದಲೂ ಕೆಳಗಿಳಿದನು.
09049050a ಸ್ವಮಾಶ್ರಮಪದಂ ಪುಣ್ಯಮಾಜಗಾಮ ಪತಂಗವತ್।
09049050c ಪ್ರವಿಶನ್ನೇವ ಚಾಪಶ್ಯಜ್ಜೈಗೀಷವ್ಯಂ ಸ ದೇವಲಃ।।
ಪತಂಗದಂತೆ ತನ್ನ ಪುಣ್ಯ ಆಶ್ರಮಪದಕ್ಕೆ ತಲುಪಿದ ದೇವಲನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ಕೂಡ ಜೈಗೀಷವ್ಯನನ್ನು ನೋಡಿದನು.
09049051a ತತೋ ಬುದ್ಧ್ಯಾ ವ್ಯಗಣಯದ್ದೇವಲೋ ಧರ್ಮಯುಕ್ತಯಾ।
09049051c ದೃಷ್ಟ್ವಾ ಪ್ರಭಾವಂ ತಪಸೋ ಜೈಗೀಷವ್ಯಸ್ಯ ಯೋಗಜಂ।।
ಆಗ ದೇವಲನು ಧರ್ಮಯುಕ್ತ ಬುದ್ಧಿಯಿಂದ ಆಲೋಚಿಸಿ ತಪಸ್ವಿ ಜೈಗೀಷವ್ಯನ ಯೋಗದಿಂದುಂಟಾದ ಪ್ರಭಾವವನ್ನು ಕಂಡನು.
09049052a ತತೋಽಬ್ರವೀನ್ಮಹಾತ್ಮಾನಂ ಜೈಗೀಷವ್ಯಂ ಸ ದೇವಲಃ।
09049052c ವಿನಯಾವನತೋ ರಾಜನ್ನುಪಸರ್ಪ್ಯ ಮಹಾಮುನಿಂ।
09049052e ಮೋಕ್ಷಧರ್ಮಂ ಸಮಾಸ್ಥಾತುಮಿಚ್ಚೇಯಂ ಭಗವನ್ನಹಂ।।
ರಾಜನ್! ಆಗ ದೇವಲನು ವಿನಯಾವನತನಾಗಿ ಮಹಾಮುನಿ ಜೈಗೀಷವ್ಯನ ಬಳಿಸಾರಿ ಆ ಮಹಾತ್ಮನಿಗೆ “ಭಗವನ್! ಮೋಕ್ಷಧರ್ಮವನ್ನು ಆಶ್ರಯಿಸುವ ಇಚ್ಛೆಯುಂಟಾಗಿದೆ” ಎಂದು ಹೇಳಿದನು.
09049053a ತಸ್ಯ ತದ್ವಚನಂ ಶ್ರುತ್ವಾ ಉಪದೇಶಂ ಚಕಾರ ಸಃ।
09049053c ವಿಧಿಂ ಚ ಯೋಗಸ್ಯ ಪರಂ ಕಾರ್ಯಾಕಾರ್ಯಂ ಚ ಶಾಸ್ತ್ರತಃ।।
ಅವನ ಆ ಮಾತನ್ನು ಕೇಳಿ ಜೈಗೀಷವ್ಯನು ಅವನಿಗೆ ಯೋಗದ ಪರಮ ವಿಧಿಯನ್ನೂ, ಕಾರ್ಯಾಕಾರ್ಯಗಳನ್ನೂ ಶಾಸ್ತ್ರತಃ ಉಪದೇಶಿಸಿದನು.
09049054a ಸಂನ್ಯಾಸಕೃತಬುದ್ಧಿಂ ತಂ ತತೋ ದೃಷ್ಟ್ವಾ ಮಹಾತಪಾಃ।
09049054c ಸರ್ವಾಶ್ಚಾಸ್ಯ ಕ್ರಿಯಾಶ್ಚಕ್ರೇ ವಿಧಿದೃಷ್ಟೇನ ಕರ್ಮಣಾ।।
ಸಂನ್ಯಾಸವನ್ನು ತೆಗೆದುಕೊಳ್ಳಲು ನಿಶ್ಚಯಿಸಿದ್ದ ಅವನನ್ನು ನೋಡಿ ಮಹಾತಪಸ್ವಿ ಜೈಗೀಷವ್ಯನು ಅವನಿಗೆ ವಿಧಿದೃಷ್ಟ ಕರ್ಮಗಳಿಂದ ಎಲ್ಲ ಕ್ರಿಯೆಗಳನ್ನೂ ನಡೆಸಿದನು.
09049055a ಸಂನ್ಯಾಸಕೃತಬುದ್ಧಿಂ ತಂ ಭೂತಾನಿ ಪಿತೃಭಿಃ ಸಹ।
09049055c ತತೋ ದೃಷ್ಟ್ವಾ ಪ್ರರುರುದುಃ ಕೋಽಸ್ಮಾನ್ಸಂವಿಭಜಿಷ್ಯತಿ।।
ಅವನ ಸನ್ಯಾಸ ನಿಶ್ಚಯವನ್ನು ನೋಡಿ ಪಿತೃಗಳೊಂದಿಗೆ ಎಲ್ಲ ಪ್ರಾಣಿಗಳೂ “ಇನ್ನು ನಮಗೆ ಯಾರು ಅನ್ನವನ್ನು ವಿಭಜಿಸಿ ಕೊಡುತ್ತಾರೆ?” ಎಂದು ರೋದಿಸಿದರು.
09049056a ದೇವಲಸ್ತು ವಚಃ ಶ್ರುತ್ವಾ ಭೂತಾನಾಂ ಕರುಣಂ ತಥಾ।
09049056c ದಿಶೋ ದಶ ವ್ಯಾಹರತಾಂ ಮೋಕ್ಷಂ ತ್ಯಕ್ತುಂ ಮನೋ ದಧೇ।।
ಹತ್ತು ದಿಕ್ಕುಗಳಿಂದಲೂ ಕೇಳಿಬರುತ್ತಿರುವ ಭೂತಗಳ ಕರುಣ ಮಾತುಗಳನ್ನು ಕೇಳಿ ದೇವಲನು ಸನ್ಯಾಸವನ್ನು ತ್ಯಜಿಸುವ ಮನಸ್ಸು ಮಾಡಿದನು.
09049057a ತತಸ್ತು ಫಲಮೂಲಾನಿ ಪವಿತ್ರಾಣಿ ಚ ಭಾರತ।
09049057c ಪುಷ್ಪಾಣ್ಯೋಷಧಯಶ್ಚೈವ ರೋರೂಯಂತೇ ಸಹಸ್ರಶಃ।।
ಭಾರತ! ಆಗ ಸಹಸ್ರಾರು ಪುಣ್ಯ ಫಲಮೂಲಗಳು ಪುಷ್ಪ-ಔಷಧಿಗಳು ರೋದಿಸತೊಡಗಿದವು.
09049058a ಪುನರ್ನೋ ದೇವಲಃ ಕ್ಷುದ್ರೋ ನೂನಂ ಚೇತ್ಸ್ಯತಿ ದುರ್ಮತಿಃ।
09049058c ಅಭಯಂ ಸರ್ವಭೂತೇಭ್ಯೋ ಯೋ ದತ್ತ್ವಾ ನಾವಬುಧ್ಯತೇ।।
“ಕ್ಷುದ್ರ ದುರ್ಮತಿ ದೇವಲನು ಪುನಃ ಗೃಹಸ್ಥಾಶ್ರಮದಲ್ಲಿದ್ದುಕೊಂಡು ನಮ್ಮನ್ನು ಕತ್ತರಿಸುತ್ತಾನೆ. ಸನ್ಯಾಸಾಶ್ರಮದ ಪೂರ್ವಾಂಗ ಕರ್ಮದಲ್ಲಿ ಎಲ್ಲ ಭೂತಗಳಿಗೂ ಅಭಯವನ್ನಿತ್ತುದನ್ನು ಇವನು ಗಮನಕ್ಕೆ ತೆಗೆದುಕೊಂಡಿಲ್ಲ!”
09049059a ತತೋ ಭೂಯೋ ವ್ಯಗಣಯತ್ಸ್ವಬುದ್ಧ್ಯಾ ಮುನಿಸತ್ತಮಃ।
09049059c ಮೋಕ್ಷೇ ಗಾರ್ಹಸ್ಥ್ಯಧರ್ಮೇ ವಾ ಕಿಂ ನು ಶ್ರೇಯಸ್ಕರಂ ಭವೇತ್।।
ನಂತರ ಇನ್ನೊಮ್ಮೆ ಸ್ವಬುದ್ಧಿಯಿಂದ ಮೋಕ್ಷ ಮತ್ತು ಗೃಹಸ್ಥಧರ್ಮಗಳಲ್ಲಿ ಯಾವುದು ಶ್ರೇಯಸ್ಕರವೆನ್ನುವುದನ್ನು ಅಲೋಚಿಸಿದನು.
09049060a ಇತಿ ನಿಶ್ಚಿತ್ಯ ಮನಸಾ ದೇವಲೋ ರಾಜಸತ್ತಮ।
09049060c ತ್ಯಕ್ತ್ವಾ ಗಾರ್ಹಸ್ಥ್ಯಧರ್ಮಂ ಸ ಮೋಕ್ಷಧರ್ಮಮರೋಚಯತ್।।
ರಾಜಸತ್ತಮ! ಹೀಗೆ ಮನಸಾರೆ ನಿಶ್ಚಯಿಸಿ ದೇವಲನು ಗ್ರಹಸ್ಥಧರ್ಮವನ್ನು ತೊರೆದು ಮೋಕ್ಷಧರ್ಮವನ್ನು ಆರಿಸಿಕೊಂಡನು.
09049061a ಏವಮಾದೀನಿ ಸಂಚಿಂತ್ಯ ದೇವಲೋ ನಿಶ್ಚಯಾತ್ತತಃ।
09049061c ಪ್ರಾಪ್ತವಾನ್ಪರಮಾಂ ಸಿದ್ಧಿಂ ಪರಂ ಯೋಗಂ ಚ ಭಾರತ।।
ಭಾರತ! ಇದನ್ನು ಮೊದಲೇ ಯೋಚಿಸಿ ನಿಶ್ಚಯಿಸಿ ದೇವಲನು ಪರಮ ಸಿದ್ಧಿಯನ್ನೂ ಪರಮ ಯೋಗವನ್ನೂ ಪಡೆದನು.
09049062a ತತೋ ದೇವಾಃ ಸಮಾಗಮ್ಯ ಬೃಹಸ್ಪತಿಪುರೋಗಮಾಃ।
09049062c ಜೈಗೀಷವ್ಯಂ ತಪಶ್ಚಾಸ್ಯ ಪ್ರಶಂಸಂತಿ ತಪಸ್ವಿನಃ।।
ಆಗ ಬೃಹಸ್ಪತಿಯನ್ನು ಮುಂದಿಟ್ಟುಕೊಂಡು ದೇವತೆ-ತಪಸ್ವಿಗಳು ಒಂದುಗೂಡಿ ಜೈಗೀಷವ್ಯನ ತಪಸ್ಸನ್ನು ಪ್ರಶಂಸಿಸಿದರು.
09049063a ಅಥಾಬ್ರವೀದೃಷಿವರೋ ದೇವಾನ್ವೈ ನಾರದಸ್ತದಾ।
09049063c ಜೈಗೀಷವ್ಯೇ ತಪೋ ನಾಸ್ತಿ ವಿಸ್ಮಾಪಯತಿ ಯೋಽಸಿತಂ।।
ಆಗ ಋಷಿವರ ನಾರದನು ದೇವತೆಗಳಿಗೆ “ಜೈಗೀಷವ್ಯನಲ್ಲಿ ತಪಸ್ಸಿಲ್ಲ; ಅಸಿತನನ್ನು ವಿಸ್ಮಯಗೊಳಿಸಿದ್ದಾನೆ ಅಷ್ಟೆ!” ಎಂದನು.
09049064a ತಮೇವಂವಾದಿನಂ ಧೀರಂ ಪ್ರತ್ಯೂಚುಸ್ತೇ ದಿವೌಕಸಃ।
09049064c ಮೈವಮಿತ್ಯೇವ ಶಂಸಂತೋ ಜೈಗೀಷವ್ಯಂ ಮಹಾಮುನಿಂ।।
ಅವರೊಂದಿಗೆ ವಾದಿಸುತ್ತಿದ್ದ ಆ ಧೀರ ನಾರದನಿಗೆ ಹಾಗೆ ಹೇಳಬೇಡವೆಂದು ಹೇಳಿ ದಿವೌಕಸರು ಮಹಾಮುನಿ ಜೈಗೀಷವ್ಯನನ್ನು ಪ್ರಶಂಸಿಸಿದರು.
09049065a ತತ್ರಾಪ್ಯುಪಸ್ಪೃಶ್ಯ ತತೋ ಮಹಾತ್ಮಾ ದತ್ತ್ವಾ ಚ ವಿತ್ತಂ ಹಲಭೃದ್ದ್ವಿಜೇಭ್ಯಃ।
09049065c ಅವಾಪ್ಯ ಧರ್ಮಂ ಪರಮಾರ್ಯಕರ್ಮಾ ಜಗಾಮ ಸೋಮಸ್ಯ ಮಹತ್ಸ ತೀರ್ಥಂ।।
ಮಹಾತ್ಮ ಪರಮ ಆರ್ಯಕರ್ಮಿ ಹಲನು ಅಲ್ಲಿ ಕೂಡ ಸ್ನಾನಮಾಡಿ ದ್ವಿಜರಿಗೆ ವಿತ್ತವನ್ನು ದಾನವನ್ನಾಗಿತ್ತು ಧರ್ಮವನ್ನು ಗಳಿಸಿ, ಮಹಾ ಸೋಮತೀರ್ಥಕ್ಕೆ ಹೋದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಏಕೋನಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.