ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಸಾರಸ್ವತ ಪರ್ವ
ಅಧ್ಯಾಯ 37
ಸಾರ
ಸಪ್ತಸಾರಸ್ವತ ವರ್ಣನೆ (1-28). ಮಂಕಣಕನ ಕಥೆ (29-50).
09037001 ಜನಮೇಜಯ ಉವಾಚ 09037001a ಸಪ್ತಸಾರಸ್ವತಂ ಕಸ್ಮಾತ್ಕಶ್ಚ ಮಂಕಣಕೋ ಮುನಿಃ।
09037001c ಕಥಂ ಸಿದ್ಧಶ್ಚ ಭಗವಾನ್ಕಶ್ಚಾಸ್ಯ ನಿಯಮೋಽಭವತ್।।
ಜನಮೇಜಯನು ಹೇಳಿದನು: “ಭಗವಾನ್! ಸಪ್ತಸಾರಸ್ವತವು ಯಾವ ಕಾರಣದಿಂದಾಯಿತು? ಮಂಕಣಕ ಮುನಿಯು ಯಾರು? ಅವನು ಹೇಗೆ ಸಿದ್ಧನಾದನು? ಅವನು ಯಾವ ನಿಯಮಗಳನ್ನು ಅನುಸರಿಸುತ್ತಿದ್ದನು?
09037002a ಕಸ್ಯ ವಂಶೇ ಸಮುತ್ಪನ್ನಃ ಕಿಂ ಚಾಧೀತಂ ದ್ವಿಜೋತ್ತಮ।
09037002c ಏತದಿಚ್ಚಾಮ್ಯಹಂ ಶ್ರೋತುಂ ವಿಧಿವದ್ದ್ವಿಜಸತ್ತಮ।।
ದ್ವಿಜೋತ್ತಮ! ಅವನು ಯಾವ ವಂಶದಲ್ಲಿ ಹುಟ್ಟಿದ್ದನು? ಅವನು ಏನನ್ನು ತಿಳಿದುಕೊಂಡಿದ್ದನು? ದ್ವಿಜಸತ್ತಮ! ಇದರ ಕುರಿತು ವಿಧಿವತ್ತಾಗಿ ಕೇಳಲು ಬಯಸುತ್ತೇನೆ.”
09037003 ವೈಶಂಪಾಯನ ಉವಾಚ 09037003a ರಾಜನ್ಸಪ್ತ ಸರಸ್ವತ್ಯೋ ಯಾಭಿರ್ವ್ಯಾಪ್ತಮಿದಂ ಜಗತ್।
09037003c ಆಹೂತಾ ಬಲವದ್ಭಿರ್ಹಿ ತತ್ರ ತತ್ರ ಸರಸ್ವತೀ।।
ವೈಶಂಪಾಯನನು ಹೇಳಿದನು: “ರಾಜನ್! ಇಡೀ ಜಗತ್ತೇ ಸಪ್ತ ಸರಸ್ವತಿಯರಿಂದ ವ್ಯಾಪ್ತವಾಗಿದೆ. ಏಕೆಂದರೆ ತಪೋಬಲರು ಕರೆದಲ್ಲಿಯೆಲ್ಲ ಸರಸ್ವತಿಯು ಹೋಗುತ್ತಿದ್ದಳು.
09037004a ಸುಪ್ರಭಾ ಕಾಂಚನಾಕ್ಷೀ ಚ ವಿಶಾಲಾ ಮಾನಸಹ್ರದಾ।
09037004c ಸರಸ್ವತೀ ಓಘವತೀ ಸುವೇಣುರ್ವಿಮಲೋದಕಾ।।
ಹಾಗೆ ಹೋಗುವಾಗ ಸರಸ್ವತಿಯು ಈ ಏಳು ನಾಮಧೇಯಗಳನ್ನು ಪಡೆದಳು: ಸುಪ್ರಭಾ, ಕಾಂಚನಾಕ್ಷೀ, ವಿಶಾಲಾ, ಮನೋಹ್ರದ, ಓಘವತೀ, ಸುವೇಣು ಮತ್ತು ವಿಮಲೋದಕ.
09037005a ಪಿತಾಮಹಸ್ಯ ಮಹತೋ ವರ್ತಮಾನೇ ಮಹೀತಲೇ।
09037005c ವಿತತೇ ಯಜ್ಞವಾಟೇ ವೈ ಸಮೇತೇಷು ದ್ವಿಜಾತಿಷು।।
ಮಹೀತಲದಲ್ಲಿ ಪಿತಾಮಹ ಬ್ರಹ್ಮನ ಮಹಾ ಯಜ್ಞವು ನಡೆಯುತ್ತಿತ್ತು. ಆ ವಿಶಾಲ ಯಜ್ಞವಾಟಿಯಲ್ಲಿ ದ್ವಿಜಾತಿಯವರು ಸೇರಿಕೊಂಡಿದ್ದರು.
09037006a ಪುಣ್ಯಾಹಘೋಷೈರ್ವಿಮಲೈರ್ವೇದಾನಾಂ ನಿನದೈಸ್ತಥಾ।
09037006c ದೇವೇಷು ಚೈವ ವ್ಯಗ್ರೇಷು ತಸ್ಮಿನ್ಯಜ್ಞವಿಧೌ ತದಾ।।
ಪುಣ್ಯಾಹ ಘೋಷಗಳಿಂದ, ವಿಮಲ ವೇದ ನಿನಾದಗಳಿಂದ ಮತ್ತು ದೇವತೆಗಳು ಯಜ್ಞವಿಧಿಗಳಲ್ಲಿ ತೋರಿಸಿದ ಉತ್ಸಾಹಗಳಿಂದ ಆ ಯಜ್ಞವಾಟಿಯು ತುಂಬಿಹೋಗಿತ್ತು.
09037007a ತತ್ರ ಚೈವ ಮಹಾರಾಜ ದೀಕ್ಷಿತೇ ಪ್ರಪಿತಾಮಹೇ।
09037007c ಯಜತಸ್ತತ್ರ ಸತ್ರೇಣ ಸರ್ವಕಾಮಸಮೃದ್ಧಿನಾ।।
ಮಹಾರಾಜ! ಪ್ರಪಿತಾಮಹನು ಯಜಮಾನನಾಗಿ ದೀಕ್ಷಿತನಾಗಿದ್ದ ಆ ಸತ್ರದಲ್ಲಿ ಸರ್ವಕಾಮನೆಗಳೂ ಪೂರ್ಣಗೊಳ್ಳುತ್ತಿದ್ದವು.
09037008a ಮನಸಾ ಚಿಂತಿತಾ ಹ್ಯರ್ಥಾ ಧರ್ಮಾರ್ಥಕುಶಲೈಸ್ತದಾ।
09037008c ಉಪತಿಷ್ಠಂತಿ ರಾಜೇಂದ್ರ ದ್ವಿಜಾತೀಂಸ್ತತ್ರ ತತ್ರ ಹ।।
ರಾಜೇಂದ್ರ! ಮನಸ್ಸಿನಲ್ಲಿ ಚಿಂತಿಸಿದ ಧರ್ಮಾರ್ಥ ಕುಶಲಗಳೆಲ್ಲವೂ ದ್ವಿಜಾತಿಯವರ ಬಳಿ ಬಂದು ಎದ್ದು ನಿಲ್ಲುತ್ತಿದ್ದವು.
09037009a ಜಗುಶ್ಚ ತತ್ರ ಗಂಧರ್ವಾ ನನೃತುಶ್ಚಾಪ್ಸರೋಗಣಾಃ।
09037009c ವಾದಿತ್ರಾಣಿ ಚ ದಿವ್ಯಾನಿ ವಾದಯಾಮಾಸುರಂಜಸಾ।।
ಅಲ್ಲಿ ಗಂಧರ್ವರು ಹಾಡುತ್ತಿದ್ದರು. ಅಪ್ಸರಗಣಗಳು ನರ್ತಿಸುತ್ತಿದ್ದವು. ದಿವ್ಯ ವಾದ್ಯಗಳನ್ನು ಹಿತಕರವಾಗಿ ಬಾರಿಸುತ್ತಿದ್ದರು.
09037010a ತಸ್ಯ ಯಜ್ಞಸ್ಯ ಸಂಪತ್ತ್ಯಾ ತುತುಷುರ್ದೇವತಾ ಅಪಿ।
09037010c ವಿಸ್ಮಯಂ ಪರಮಂ ಜಗ್ಮುಃ ಕಿಮು ಮಾನುಷಯೋನಯಃ।।
ಆ ಯಜ್ಞದ ವೈಭವದಿಂದ ತೃಪ್ತರಾಗಿ ದೇವತೆಗಳೂ ಕೂಡ ಪರಮ ವಿಸ್ಮಿತರಾದರು. ಇನ್ನು ಮನುಷ್ಯ ಯೋನಿಯಲ್ಲಿ ಹುಟ್ಟಿದವರ ವಿಷಯದಲ್ಲಿ ಏನು?
09037011a ವರ್ತಮಾನೇ ತಥಾ ಯಜ್ಞೇ ಪುಷ್ಕರಸ್ಥೇ ಪಿತಾಮಹೇ।
09037011c ಅಬ್ರುವನ್ನೃಷಯೋ ರಾಜನ್ನಾಯಂ ಯಜ್ಞೋ ಮಹಾಫಲಃ।।
09037011e ನ ದೃಶ್ಯತೇ ಸರಿಚ್ಚ್ರೇಷ್ಠಾ ಯಸ್ಮಾದಿಹ ಸರಸ್ವತೀ।।
ರಾಜನ್! ಪುಷ್ಕರದಲ್ಲಿ ಪಿತಾಮಹನ ಆ ಮಹಾಯಜ್ಞವು ನಡೆಯುತ್ತಿರುವಾಗ ಋಷಿಗಳು “ನದಿಶ್ರೇಷ್ಠೇ ಸರಸ್ವತಿಯು ಇಲ್ಲ ಕಾಣಿಸುವುದಿಲ್ಲವಾದುದರಿಂದ ಈ ಯಜ್ಞದ ಮಹಾಫಲವು ಉಂಟಾಗಿಲ್ಲ!” ಎಂದರು.
09037012a ತಚ್ಛೃತ್ವಾ ಭಗವಾನ್ಪ್ರೀತಃ ಸಸ್ಮಾರಾಥ ಸರಸ್ವತೀಂ।
09037012c ಪಿತಾಮಹೇನ ಯಜತಾ ಆಹೂತಾ ಪುಷ್ಕರೇಷು ವೈ।।
09037012e ಸುಪ್ರಭಾ ನಾಮ ರಾಜೇಂದ್ರ ನಾಮ್ನಾ ತತ್ರ ಸರಸ್ವತೀ।।
ಅದನ್ನು ಕೇಳಿ ಪ್ರೀತನಾದ ಭಗವಾನನು ಸರಸ್ವತಿಯನ್ನು ಸ್ಮರಿಸಿದನು. ರಾಜೇಂದ್ರ! ಪುಷ್ಕರದಲ್ಲಿ ಪಿತಾಮಹನ ಯಾಗದಲ್ಲಿ ಕರೆಯಲ್ಪಟ್ಟ ಸರಸ್ವತಿಯು ಸುಪ್ರಭಾ ಎಂಬ ಹೆಸರಿನವಳಾದಳು.
09037013a ತಾಂ ದೃಷ್ಟ್ವಾ ಮುನಯಸ್ತುಷ್ಟಾ ವೇಗಯುಕ್ತಾಂ ಸರಸ್ವತೀಂ।
09037013c ಪಿತಾಮಹಂ ಮಾನಯಂತೀಂ ಕ್ರತುಂ ತೇ ಬಹು ಮೇನಿರೇ।।
ವೇಗಯುಕ್ತಳಾದ ಸರಸ್ವತಿಯನ್ನು ನೋಡಿ ಮುನಿಗಳು ತುಷ್ಟರಾಗಿ ಪಿತಾಮಹನ ಆ ಕ್ರತುವು ಬಹಳ ಮಾನ್ಯತೆಯುಳ್ಳದ್ದು ಎಂದು ಗೌರವಿಸಿದರು.
09037014a ಏವಮೇಷಾ ಸರಿಚ್ಚ್ರೇಷ್ಠಾ ಪುಷ್ಕರೇಷು ಸರಸ್ವತೀ।
09037014c ಪಿತಾಮಹಾರ್ಥಂ ಸಂಭೂತಾ ತುಷ್ಟ್ಯರ್ಥಂ ಚ ಮನೀಷಿಣಾಂ।।
ಹೀಗೆ ಸರಿತಶ್ರೇಷ್ಠೆ ಸರಸ್ವತಿಯು ಪಿತಾಮಹನಿಗಾಗಿ ಮತ್ತು ಋಷಿಗಳ ಸಂತೃಪ್ತಿಗಾಗಿ ಪುಷ್ಕರದಲ್ಲಿ ಕಾಣಿಸಿಕೊಂಡಳು.
09037015a ನೈಮಿಷೇ ಮುನಯೋ ರಾಜನ್ಸಮಾಗಮ್ಯ ಸಮಾಸತೇ।
09037015c ತತ್ರ ಚಿತ್ರಾಃ ಕಥಾ ಹ್ಯಾಸನ್ವೇದಂ ಪ್ರತಿ ಜನೇಶ್ವರ।।
ರಾಜನ್! ಜನೇಶ್ವರ! ನೈಮಿಷದಲ್ಲಿ ಸಮಾಗಮಿಸಿದ್ದ ಮುನಿಗಳ ಮಧ್ಯೆ ವೇದದ ಕುರಿತು ವಿಚಿತ್ರ ಚರ್ಚೆಗಳು ನಡೆದವು.
09037016a ತತ್ರ ತೇ ಮುನಯೋ ಹ್ಯಾಸನ್ನಾನಾಸ್ವಾಧ್ಯಾಯವೇದಿನಃ।
09037016c ತೇ ಸಮಾಗಮ್ಯ ಮುನಯಃ ಸಸ್ಮರುರ್ವೈ ಸರಸ್ವತೀಂ।।
ಅಲ್ಲಿದ್ದ ನಾನಾ ಸ್ವಾಧ್ಯಾಯಗಳನ್ನು ತಿಳಿದುಕೊಂಡಿದ್ದ ಮುನಿಗಳು ಒಂದಾಗಿ ಸರಸ್ವತಿಯನ್ನು ಸ್ಮರಿಸಿದರು.
09037017a ಸಾ ತು ಧ್ಯಾತಾ ಮಹಾರಾಜ ಋಷಿಭಿಃ ಸತ್ರಯಾಜಿಭಿಃ।
09037017c ಸಮಾಗತಾನಾಂ ರಾಜೇಂದ್ರ ಸಹಾಯಾರ್ಥಂ ಮಹಾತ್ಮನಾಂ।।
09037017e ಆಜಗಾಮ ಮಹಾಭಾಗಾ ತತ್ರ ಪುಣ್ಯಾ ಸರಸ್ವತೀ।।
ಮಹಾರಾಜ! ರಾಜೇಂದ್ರ! ಸೇರಿ ಸತ್ರದಲ್ಲಿ ತೊಡಗಿದ್ದ ಮಹಾತ್ಮರು ಧ್ಯಾನಿಸಲು ಅವರ ಸಹಾಯಾರ್ಥವಾಗಿ ಪುಣ್ಯೆ ಮಹಾಭಾಗೆ ಸರಸ್ವತಿಯು ಅಲ್ಲಿಗೆ ಬಂದಳು.
09037018a ನೈಮಿಷೇ ಕಾಂಚನಾಕ್ಷೀ ತು ಮುನೀನಾಂ ಸತ್ರಯಾಜಿನಾಂ।
09037018c ಆಗತಾ ಸರಿತಾಂ ಶ್ರೇಷ್ಠಾ ತತ್ರ ಭಾರತ ಪೂಜಿತಾ।।
ಭಾರತ! ನೈಮಿಷದಲ್ಲಿ ಸತ್ರಯಾಜಿ ಮುನಿಗಳ ಬಳಿ ಆಗಮಿಸಿದ ಸರಿತಶ್ರೇಷ್ಠೆಯು ಕಾಂಚನಾಕ್ಷೀ ಎಂದು ಪೂಜಿತಳಾದಳು.
09037019a ಗಯಸ್ಯ ಯಜಮಾನಸ್ಯ ಗಯೇಷ್ವೇವ ಮಹಾಕ್ರತುಂ।
09037019c ಆಹೂತಾ ಸರಿತಾಂ ಶ್ರೇಷ್ಠಾ ಗಯಯಜ್ಞೇ ಸರಸ್ವತೀ।।
ಗಯದ ರಾಜ ಗಯನೂ ಕೂಡ ಮಹಾಕ್ರತು ಗಯಯಜ್ಞದಲ್ಲಿ ಸರಿತಶ್ರೇಷ್ಠೆ ಸರಸ್ವತಿಯನ್ನು ಆಹ್ವಾನಿಸಿದನು.
09037020a ವಿಶಾಲಾಂ ತು ಗಯೇಷ್ವಾಹುರೃಷಯಃ ಸಂಶಿತವ್ರತಾಃ।
09037020c ಸರಿತ್ಸಾ ಹಿಮವತ್ಪಾರ್ಶ್ವಾತ್ಪ್ರಸೂತಾ ಶೀಘ್ರಗಾಮಿನೀ।।
ಹಿಮವತ್ಪರ್ವತದ ತಪ್ಪಲಿನಲ್ಲಿ ಹುಟ್ಟಿದ ಆ ಶೀಘ್ರಗಾಮಿನೀ ನದಿಗೆ ಗಯೆಯಲ್ಲಿ ಸಂಶಿತವ್ರತ ಋಷಿಗಳು ವಿಶಾಲಾ ಎಂದು ಕರೆದರು.
09037021a ಔದ್ದಾಲಕೇಸ್ತಥಾ ಯಜ್ಞೇ ಯಜತಸ್ತತ್ರ ಭಾರತ।
09037021c ಸಮೇತೇ ಸರ್ವತಃ ಸ್ಫೀತೇ ಮುನೀನಾಂ ಮಂಡಲೇ ತದಾ।।
ಭಾರತ! ಔದ್ಧಾಲಕನು ಯಜ್ಞವನ್ನು ಯಾಜಿಸುತ್ತಿದ್ದಾಗ ಅಲ್ಲಿಗೆ ಎಲ್ಲಕಡೆಗಳಿಂದ ಆಗಮಿಸಿದ ಮುನಿಗಳ ಮಂಡಲವು ಸೇರಿತ್ತು.
09037022a ಉತ್ತರೇ ಕೋಸಲಾಭಾಗೇ ಪುಣ್ಯೇ ರಾಜನ್ಮಹಾತ್ಮನಃ।
09037022c ಔದ್ದಾಲಕೇನ ಯಜತಾ ಪೂರ್ವಂ ಧ್ಯಾತಾ ಸರಸ್ವತೀ।।
ರಾಜನ್! ಕೋಸಲದ ಪುಣ್ಯ ಉತ್ತರ ಭಾಗದಲ್ಲಿ ಮಹಾತ್ಮ ಔದ್ದಾಲಕನು ಯಜ್ಞದ ಮೊದಲು ಸರಸ್ವತಿಯನ್ನು ಧ್ಯಾನಿಸಿದನು.
09037023a ಆಜಗಾಮ ಸರಿಚ್ಚ್ರೇಷ್ಠಾ ತಂ ದೇಶಂ ಋಷಿಕಾರಣಾತ್।
09037023c ಪೂಜ್ಯಮಾನಾ ಮುನಿಗಣೈರ್ವಲ್ಕಲಾಜಿನಸಂವೃತೈಃ।।
09037023e ಮನೋಹ್ರದೇತಿ ವಿಖ್ಯಾತಾ ಸಾ ಹಿ ತೈರ್ಮನಸಾ ಹೃತಾ।।
ಋಷಿಗಳ ಕಾರಣದಿಂದ ಅಲ್ಲಿಗೈತಂದ ಸರಿಶ್ರೇಷ್ಠೆಯು ವಲ್ಕಲ-ಜಿನಧಾರೀ ಮುನಿಗಣಗಳಿಂದ ಪೂಜಿಸಲ್ಪಟ್ಟು ಅವರ ಮನಸ್ಸನ್ನು ಅಪಹರಿಸಿದುದಕ್ಕಾಗಿ ಮನೋಹ್ರದಾ ಎಂದು ವಿಖ್ಯಾತಳಾದಳು.
09037024a ಸುವೇಣುರೃಷಭದ್ವೀಪೇ ಪುಣ್ಯೇ ರಾಜರ್ಷಿಸೇವಿತೇ।
09037024c ಕುರೋಶ್ಚ ಯಜಮಾನಸ್ಯ ಕುರುಕ್ಷೇತ್ರೇ ಮಹಾತ್ಮನಃ।।
09037024e ಆಜಗಾಮ ಮಹಾಭಾಗಾ ಸರಿಚ್ಛ್ರೇಷ್ಠಾ ಸರಸ್ವತೀ।।
ರಾಜರ್ಷಿಸೇವಿತ ಪುಣ್ಯ ಋಷಭದ್ವೀಪದಲ್ಲಿ ಅವಳು ಸುವೇಣುವೆನಿಸಿದಳು. ಮಹಾತ್ಮ ಕುರುವು ಯಜಮಾನನಾಗಿದ್ದ ಕುರುಕ್ಷೇತ್ರಕ್ಕೆ ಸರಿತಶ್ರೇಷ್ಠೆ ಮಹಾಭಾಗೆ ಸರಸ್ವತಿಯು ಹರಿದುಬಂದಳು.
09037025a ಓಘವತ್ಯಪಿ ರಾಜೇಂದ್ರ ವಸಿಷ್ಠೇನ ಮಹಾತ್ಮನಾ।
09037025c ಸಮಾಹೂತಾ ಕುರುಕ್ಷೇತ್ರೇ ದಿವ್ಯತೋಯಾ ಸರಸ್ವತೀ।।
ರಾಜೇಂದ್ರ! ಕುರುಕ್ಷೇತ್ರದಲ್ಲಿ ಆ ದಿವ್ಯನದೀ ಸರಸ್ವತಿಯನ್ನು ಮಹಾತ್ಮ ವಸಿಷ್ಠನು ಓಘವತಿ ಎಂದು ಕರೆದನು.
09037026a ದಕ್ಷೇಣ ಯಜತಾ ಚಾಪಿ ಗಂಗಾದ್ವಾರೇ ಸರಸ್ವತೀ।
09037026c ವಿಮಲೋದಾ ಭಗವತೀ ಬ್ರಹ್ಮಣಾ ಯಜತಾ ಪುನಃ।।
09037026e ಸಮಾಹೂತಾ ಯಯೌ ತತ್ರ ಪುಣ್ಯೇ ಹೈಮವತೇ ಗಿರೌ।।
ಗಂಗಾದ್ವಾರದಲ್ಲಿ ದಕ್ಷನು ಯಜ್ಞಮಾಡುತ್ತಿರುವಾಗ ಯಜಮಾನನಾಗಿದ್ದ ದಕ್ಷಬ್ರಹ್ಮನು ಕರೆಯಲು ಭಗವತಿಯು ಪುಣ್ಯ ಹೈಮವತ ಗಿರಿಗಳಿಂದ ವಿಮಲೋದೆಯಾಗಿ ಅಲ್ಲಿಗೆ ಹರಿದುಬಂದಳು.
09037027a ಏಕೀಭೂತಾಸ್ತತಸ್ತಾಸ್ತು ತಸ್ಮಿಂಸ್ತೀರ್ಥೇ ಸಮಾಗತಾಃ।
09037027c ಸಪ್ತಸಾರಸ್ವತಂ ತೀರ್ಥಂ ತತಸ್ತತ್ಪ್ರಥಿತಂ ಭುವಿ।।
ಆ ತೀರ್ಥದಲ್ಲಿ ಒಂದಾಗಿ ಸೇರಿ, ಅಲ್ಲಿಂದ ಮುಂದೆ ಅದು ಸಪ್ತಸಾರಸ್ವತ ತೀರ್ಥವೆಂದು ಭುವಿಯಲ್ಲಿ ಪ್ರಸಿದ್ಧವಾಯಿತು.
09037028a ಇತಿ ಸಪ್ತ ಸರಸ್ವತ್ಯೋ ನಾಮತಃ ಪರಿಕೀರ್ತಿತಾಃ।
09037028c ಸಪ್ತಸಾರಸ್ವತಂ ಚೈವ ತೀರ್ಥಂ ಪುಣ್ಯಂ ತಥಾ ಸ್ಮೃತಂ।।
ಸರಸ್ವತಿಯ ಏಳು ನಾಮಗಳನ್ನೂ ಸಪ್ತಸಾರಸ್ವತವೆಂದು ಪ್ರಖ್ಯಾತವಾದ ಪುಣ್ಯ ತೀರ್ಥದ ಕುರಿತೂ ಹೇಳಿದ್ದಾಯಿತು.
09037029a ಶೃಣು ಮಂಕಣಕಸ್ಯಾಪಿ ಕೌಮಾರಬ್ರಹ್ಮಚಾರಿಣಃ।
09037029c ಆಪಗಾಮವಗಾಢಸ್ಯ ರಾಜನ್ಪ್ರಕ್ರೀಡಿತಂ ಮಹತ್।।
ರಾಜನ್! ಈಗ ಕೌಮಾರ ಬ್ರಹ್ಮಚಾರಿ ಮಂಕಣನ ಮಹಾ ಕ್ರೀಡೆಯ ಕುರಿತು ಕೇಳು.
09037030a ದೃಷ್ಟ್ವಾ ಯದೃಚ್ಚಯಾ ತತ್ರ ಸ್ತ್ರಿಯಮಂಭಸಿ ಭಾರತ।
09037030c ಸ್ನಾಯಂತೀಂ ರುಚಿರಾಪಾಂಗೀಂ ದಿಗ್ವಾಸಸಮನಿಂದಿತಾಂ।।
09037030e ಸರಸ್ವತ್ಯಾಂ ಮಹಾರಾಜ ಚಸ್ಕಂದೇ ವೀರ್ಯಮಂಭಸಿ।।
ಭಾರತ! ಮಹಾರಾಜ! ಒಮ್ಮೆ ಸುಂದರ ಕಡೆಗಣ್ಣಿನ ದಿಕ್ಕುಗಳನ್ನೇ ಬಟ್ಟೆಗಳಾಗಿ ಧರಿಸಿದ್ದ ಅನಿಂದಿತೆ ಸ್ತ್ರೀಯೊಬ್ಬಳು ಸರಸ್ವತೀ ನದಿಯ ನೀರಿನಲ್ಲಿ ಸ್ವೇಚ್ಛೆಯಿಂದ ಸ್ನಾನಮಾಡುತ್ತಿರುವುದನ್ನು ನೋಡಿ ಮಂಕಣಕನ ವೀರ್ಯಸ್ಖಲನವಾಗಿ ನೀರಿನಲ್ಲಿ ಬಿದ್ದಿತು.
09037031a ತದ್ರೇತಃ ಸ ತು ಜಗ್ರಾಹ ಕಲಶೇ ವೈ ಮಹಾತಪಾಃ।
09037031c ಸಪ್ತಧಾ ಪ್ರವಿಭಾಗಂ ತು ಕಲಶಸ್ಥಂ ಜಗಾಮ ಹ।।
09037031e ತತ್ರರ್ಷಯಃ ಸಪ್ತ ಜಾತಾ ಜಜ್ಞಿರೇ ಮರುತಾಂ ಗಣಾಃ।।
ಆ ಮಹಾತಪಸ್ವಿಯು ಆ ರೇತಸ್ಸನ್ನು ಕಲಶದಲ್ಲಿ ಸಂಗ್ರಹಿಸಿ, ಕಲಶದಲ್ಲಿದ್ದುದನ್ನು ಏಳು ಭಾಗಗಳನ್ನಾಗಿಸಿ ಹೋದನು. ಅಲ್ಲಿಂದ ಸಪ್ತ ಋಷಿ ಮರುದ್ಗಣಗಳು ಹುಟ್ಟಿದವು.
09037032a ವಾಯುವೇಗೋ ವಾಯುಬಲೋ ವಾಯುಹಾ ವಾಯುಮಂಡಲಃ।
09037032c ವಾಯುಜ್ವಾಲೋ ವಾಯುರೇತಾ ವಾಯುಚಕ್ರಶ್ಚ ವೀರ್ಯವಾನ್।।
09037032e ಏವಮೇತೇ ಸಮುತ್ಪನ್ನಾ ಮರುತಾಂ ಜನಯಿಷ್ಣವಃ।।
ಅಲ್ಲಿಂದ ವಾಯುವೇಗ, ವಾಯುಬಲ, ವಾಯುಹಾ, ವಾಯುಮಂಡಲ, ವಾಯುಜ್ವಾಲ, ವಾಯುರೇತ ಮತ್ತು ವಾಯುಚಕ್ರರೆಂಬ ವೀರ್ಯವಾನ್ ಮರುತ್ತರು ಜನಿಸಿದರು.
09037033a ಇದಮನ್ಯಚ್ಚ ರಾಜೇಂದ್ರ ಶೃಣ್ವಾಶ್ಚರ್ಯತರಂ ಭುವಿ।
09037033c ಮಹರ್ಷೇಶ್ಚರಿತಂ ಯಾದೃಕ್ತ್ರಿಷು ಲೋಕೇಷು ವಿಶ್ರುತಂ।।
ರಾಜೇಂದ್ರ! ಮೂರು ಲೋಕಗಳಲ್ಲಿಯೂ ವಿಶ್ರುತವಾದ ಭುವಿಯಲ್ಲೇ ಅತಿ ಆಶ್ಚರ್ಯಕರವಾದ ಮಹರ್ಷಿಯ ಚರಿತ್ರೆಯನ್ನು ಹೇಳುತ್ತೇನೆ. ಕೇಳು.
09037034a ಪುರಾ ಮಂಕಣಕಃ ಸಿದ್ಧಃ ಕುಶಾಗ್ರೇಣೇತಿ ನಃ ಶ್ರುತಂ।
09037034c ಕ್ಷತಃ ಕಿಲ ಕರೇ ರಾಜಂಸ್ತಸ್ಯ ಶಾಕರಸೋಽಸ್ರವತ್।।
09037034e ಸ ವಿ ಶಾಕರಸಂ ದೃಷ್ಟ್ವಾ ಹರ್ಷಾವಿಷ್ಟಃ ಪ್ರನೃತ್ತವಾನ್।।
ರಾಜನ್! ಹಿಂದೆ ಸಿದ್ಧ ಮಂಕಣಕನು ದರ್ಭೆಯ ಅಗ್ರಭಾಗವು ಕೈಗೆ ಚುಚ್ಚಿ ಗಾಯಗೊಂಡಾಗ ಅಲ್ಲಿಂದ ಶಾಕರಸವು ಸುರಿಯಿತು ಎಂದು ಕೇಳಿದ್ದೇವೆ. ಆ ಶಾಕರಸವನ್ನು ನೋಡಿದ ಮಂಕಣಕನು ಹರ್ಷಾವಿಷ್ಟನಾಗಿ ಕುಣಿದಾಡತೊಡಗಿದನು.
09037035a ತತಸ್ತಸ್ಮಿನ್ಪ್ರನೃತ್ತೇ ವೈ ಸ್ಥಾವರಂ ಜಂಗಮಂ ಚ ಯತ್।
09037035c ಪ್ರನೃತ್ತಮುಭಯಂ ವೀರ ತೇಜಸಾ ತಸ್ಯ ಮೋಹಿತಂ।।
ವೀರ! ಅವನು ಕುಣಿಯುತ್ತಿದ್ದಾಗ ಅವನ ತೇಜಸ್ಸಿನಿಂದ ಮೋಹಗೊಂಡ ಸ್ಥಾವರ-ಜಂಗಮಗಳೆರಡೂ ಕುಣಿಯತೊಡಗಿದವು.
09037036a ಬ್ರಹ್ಮಾದಿಭಿಃ ಸುರೈ ರಾಜನ್ನೃಷಿಭಿಶ್ಚ ತಪೋಧನೈಃ।
09037036c ವಿಜ್ಞಪ್ತೋ ವೈ ಮಹಾದೇವ ಋಷೇರರ್ಥೇ ನರಾಧಿಪ।।
09037036e ನಾಯಂ ನೃತ್ಯೇದ್ಯಥಾ ದೇವ ತಥಾ ತ್ವಂ ಕರ್ತುಮರ್ಹಸಿ।।
ರಾಜನ್! ನರಾಧಿಪ! ಬ್ರಹ್ಮನೇ ಮೊದಲ್ಗೊಂಡು ಸುರರು, ಋಷಿಗಳು ಮತ್ತು ತಪೋಧನರು ಆ ಋಷಿಯ ಕುರಿತು ಮಹಾದೇವನಲ್ಲಿ “ದೇವ! ಇವನು ಕುಣಿಯದಂತೆ ಏನಾದರೂ ಮಾಡಬೇಕು!” ಎಂದು ವಿಜ್ಞಾಪಿಸಿಕೊಂಡರು.
09037037a ತತೋ ದೇವೋ ಮುನಿಂ ದೃಷ್ಟ್ವಾ ಹರ್ಷಾವಿಷ್ಟಮತೀವ ಹ।
09037037c ಸುರಾಣಾಂ ಹಿತಕಾಮಾರ್ಥಂ ಮಹಾದೇವೋಽಭ್ಯಭಾಷತ।।
ಸುರರ ಹಿತವನ್ನು ಬಯಸಿದ ದೇವ ಮಹಾದೇವನು ಅತೀವ ಹರ್ಷಾವಿಷ್ಟನಾಗಿದ್ದ ಮುನಿಯನ್ನು ನೋಡಿ ಕೇಳಿದನು:
09037038a ಭೋ ಭೋ ಬ್ರಾಹ್ಮಣ ಧರ್ಮಜ್ಞ ಕಿಮರ್ಥಂ ನರಿನರ್ತ್ಸಿ ವೈ।
09037038c ಹರ್ಷಸ್ಥಾನಂ ಕಿಮರ್ಥಂ ವೈ ತವೇದಂ ಮುನಿಸತ್ತಮ।।
09037038e ತಪಸ್ವಿನೋ ಧರ್ಮಪಥೇ ಸ್ಥಿತಸ್ಯ ದ್ವಿಜಸತ್ತಮ।।
“ಭೋ! ಭೋ! ಬ್ರಾಹ್ಮಣ! ಧರ್ಮಜ್ಞ! ನೀನೇಕೆ ಹೀಗೆ ಕುಣಿಯುತ್ತಿರುವೆ? ಮುನಿಸತ್ತಮ! ಇಷ್ಟೊಂದು ಹರ್ಷಿತನಾಗಲು ಕಾರಣವೇನೆಂದು ಹೇಳು! ದ್ವಿಜಸತ್ತಮ! ತಪಸ್ವಿಯಾದ ನೀನು ಧರ್ಮಪಥದಲ್ಲಿಯೇ ಇದ್ದೀಯೆ!”
09037039 ಋಷಿರುವಾಚ 09037039a ಕಿಂ ನ ಪಶ್ಯಸಿ ಮೇ ಬ್ರಹ್ಮನ್ಕರಾಚ್ಚಾಕರಸಂ ಸ್ರುತಂ।
09037039c ಯಂ ದೃಷ್ಟ್ವಾ ವೈ ಪ್ರನೃತ್ತೋಽಹಂ ಹರ್ಷೇಣ ಮಹತಾ ವಿಭೋ।।
ಋಷಿಯು ಹೇಳಿದನು: “ಬ್ರಹ್ಮನ್! ಕೈಯಿಂದ ಶಾಕರಸವು ಸುರಿಯುತ್ತಿರುವುದು ನಿನಗೆ ಕಾಣುತ್ತಿಲ್ಲವೇ? ವಿಭೋ! ಇದನ್ನು ನೋಡಿ ನಾನು ಮಹಾ ಹರ್ಷದಿಂದ ಕುಣಿಯುತ್ತಿದ್ದೇನೆ.”
09037040a ತಂ ಪ್ರಹಸ್ಯಾಬ್ರವೀದ್ದೇವೋ ಮುನಿಂ ರಾಗೇಣ ಮೋಹಿತಂ।
09037040c ಅಹಂ ನ ವಿಸ್ಮಯಂ ವಿಪ್ರ ಗಚ್ಚಾಮೀತಿ ಪ್ರಪಶ್ಯ ಮಾಂ।।
ರಾಗದಿಂದ ಮೋಹಿತನಾಗಿದ್ದ ಆ ಮುನಿಗೆ ದೇವನು ನಗುತ್ತಾ “ವಿಪ್ರ! ನಾನು ಸ್ವಲ್ಪವೂ ವಿಸ್ಮಿತನಾಗಿಲ್ಲ. ನನ್ನನ್ನು ನೋಡು!” ಎಂದು ಹೇಳಿದನು.
09037041a ಏವಮುಕ್ತ್ವಾ ಮುನಿಶ್ರೇಷ್ಠಂ ಮಹಾದೇವೇನ ಧೀಮತಾ।
09037041c ಅಂಗುಲ್ಯಗ್ರೇಣ ರಾಜೇಂದ್ರ ಸ್ವಾಂಗುಷ್ಠಸ್ತಾಡಿತೋಽಭವತ್।।
ರಾಜೇಂದ್ರ! ಮುನಿಶ್ರೇಷ್ಠನಿಗೆ ಹೀಗೆ ಹೇಳಿ ಧೀಮಂತ ಮಹಾದೇವನು ಬೆರಳಿನ ತುದಿಯಿಂದ ತನ್ನ ಎಡಗೈ ಹೆಬ್ಬೆರಳನ್ನು ಒತ್ತಿದನು.
09037042a ತತೋ ಭಸ್ಮ ಕ್ಷತಾದ್ರಾಜನ್ನಿರ್ಗತಂ ಹಿಮಸನ್ನಿಭಂ।
09037042c ತದ್ದೃಷ್ಟ್ವಾ ವ್ರೀಡಿತೋ ರಾಜನ್ಸ ಮುನಿಃ ಪಾದಯೋರ್ಗತಃ।।
ರಾಜನ್! ಗಾಯಗೊಂಡ ಆ ಹೆಬ್ಬೆರಳಿನಿಂದ ಹಿಮಸದೃಶ ಭಸ್ಮವು ಹೊರಹೊಮ್ಮಿತು. ಅದನ್ನು ನೋಡಿ ಮುನಿಯು ನಾಚಿ ಮಹಾದೇವನ ಪಾದಗಳಿಗೆರಗಿದನು.
09037043 ಋಷಿರುವಾಚ 09037043a ನಾನ್ಯಂ ದೇವಾದಹಂ ಮನ್ಯೇ ರುದ್ರಾತ್ಪರತರಂ ಮಹತ್।
09037043c ಸುರಾಸುರಸ್ಯ ಜಗತೋ ಗತಿಸ್ತ್ವಮಸಿ ಶೂಲಧೃಕ್।।
ಋಷಿಯು ಹೇಳಿದನು: “ರುದ್ರನಿಗಿಂತಲೂ ಅಧಿಕನಾದ ಬೇರೆ ಯಾವ ದೇವನನ್ನೂ ನಾನು ಮನ್ನಿಸುವುದಿಲ್ಲ. ಶೂಲಪಾಣೇ! ನೀನೇ ಸುರಾಸುರ ಜಗತ್ತಿನ ಗತಿ!
09037044a ತ್ವಯಾ ಸೃಷ್ಟಮಿದಂ ವಿಶ್ವಂ ವದಂತೀಹ ಮನೀಷಿಣಃ।
09037044c ತ್ವಾಮೇವ ಸರ್ವಂ ವಿಶತಿ ಪುನರೇವ ಯುಗಕ್ಷಯೇ।।
ನಿನ್ನಿಂದಲೇ ಈ ವಿಶ್ವವು ಸೃಷ್ಟಿಸಲ್ಪಟ್ಟಿದೆಯೆಂದು ಮನೀಷಿಗಳು ಹೇಳುತ್ತಾರೆ. ಪುನಃ ಯುಗಕ್ಷಯದಲ್ಲಿ ನೀನೇ ಎಲ್ಲವನ್ನೂ ನಿನ್ನೊಳಗೆ ಸೇರಿಸಿಕೊಳ್ಳುತ್ತೀಯೆ!
09037045a ದೇವೈರಪಿ ನ ಶಕ್ಯಸ್ತ್ವಂ ಪರಿಜ್ಞಾತುಂ ಕುತೋ ಮಯಾ।
09037045c ತ್ವಯಿ ಸರ್ವೇ ಸ್ಮ ದೃಶ್ಯಂತೇ ಸುರಾ ಬ್ರಹ್ಮಾದಯೋಽನಘ।।
ಅನಘ! ದೇವತೆಗಳಿಗೂ ನಿನ್ನನ್ನು ಅರಿತುಕೊಳ್ಳಲು ಸಾಧ್ಯವಾಗದಿರುವಾಗ ನಾನು ಹೇಗೆ ನಿನ್ನನ್ನು ಅರಿಯಬಲ್ಲೆ? ಬ್ರಹ್ಮಾದಿ ಸುರರೆಲ್ಲರೂ ನಿನ್ನಲ್ಲಿಯೇ ಕಾಣುತ್ತಾರೆ.
09037046a ಸರ್ವಸ್ತ್ವಮಸಿ ದೇವಾನಾಂ ಕರ್ತಾ ಕಾರಯಿತಾ ಚ ಹ।
09037046c ತ್ವತ್ಪ್ರಸಾದಾತ್ಸುರಾಃ ಸರ್ವೇ ಮೋದಂತೀಹಾಕುತೋಭಯಾಃ।।
ದೇವತೆಗಳ ಕರ್ತ ಮತ್ತು ಎಲ್ಲವನ್ನೂ ಮಾಡಿಸುವವನು ನೀನೇ ಆಗಿರುವೆ. ನಿನ್ನ ಪ್ರಸಾದದಿಂದಲೇ ಸುರರೆಲ್ಲರೂ ಭಯವೇ ಇಲ್ಲದವರಾಗಿ ಆನಂದಿಸುತ್ತಾರೆ.”
09037047a ಏವಂ ಸ್ತುತ್ವಾ ಮಹಾದೇವಂ ಸ ಋಷಿಃ ಪ್ರಣತೋಽಬ್ರವೀತ್।
09037047c ಭಗವಂಸ್ತ್ವತ್ಪ್ರಸಾದಾದ್ವೈ ತಪೋ ಮೇ ನ ಕ್ಷರೇದಿತಿ।।
ಮಹಾದೇವನನ್ನು ಹೀಗೆ ಸ್ತುತಿಸಿ ನಮಸ್ಕರಿಸಿ ಆ ಋಷಿಯು “ಭಗವನ್! ನಿನ್ನ ಪ್ರಸಾದದಿಂದ ನನ್ನ ತಪಸ್ಸು ಕ್ಷಯವಾಗದಿರಲಿ!” ಎಂದು ಕೇಳಿಕೊಂಡನು.
09037048a ತತೋ ದೇವಃ ಪ್ರೀತಮನಾಸ್ತಂ ಋಷಿಂ ಪುನರಬ್ರವೀತ್।
09037048c ತಪಸ್ತೇ ವರ್ಧತಾಂ ವಿಪ್ರ ಮತ್ಪ್ರಸಾದಾತ್ಸಹಸ್ರಧಾ।।
09037048e ಆಶ್ರಮೇ ಚೇಹ ವತ್ಸ್ಯಾಮಿ ತ್ವಯಾ ಸಾರ್ಧಮಹಂ ಸದಾ।।
ಆಗ ಪ್ರೀತಮನಸ್ಕನಾದ ದೇವನು ಪುನಃ ಋಷಿಗೆ ಹೇಳಿದನು: “ವಿಪ್ರ! ನನ್ನ ಪ್ರಸಾದದಿಂದ ನಿನ್ನ ತಪಸ್ಸು ಸಾವಿರಪಟ್ಟು ವರ್ಧಿಸಲಿ. ಮತ್ತು ನಿನ್ನೊಡನೆ ನಾನೂ ಕೂಡ ಈ ಆಶ್ರಮದಲ್ಲಿ ಇದ್ದುಬಿಡುತ್ತೇನೆ!
09037049a ಸಪ್ತಸಾರಸ್ವತೇ ಚಾಸ್ಮಿನ್ಯೋ ಮಾಮರ್ಚಿಷ್ಯತೇ ನರಃ।
09037049c ನ ತಸ್ಯ ದುರ್ಲಭಂ ಕಿಂ ಚಿದ್ಭವಿತೇಹ ಪರತ್ರ ಚ।।
09037049e ಸಾರಸ್ವತಂ ಚ ಲೋಕಂ ತೇ ಗಮಿಷ್ಯಂತಿ ನ ಸಂಶಯಃ।।
ಈ ಸಪ್ತಸಾರಸ್ವತದಲ್ಲಿ ನನ್ನನ್ನು ಅರ್ಚಿಸುವ ನರನಿಗೆ ಇಲ್ಲಿ ಅಥವಾ ನಂತರದಲ್ಲಿ ಯಾವುದೂ ದುರ್ಲಭವಾಗಲಾರದು. ಅವನು ಸಾರಸ್ವತ ಲೋಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ!”
09037050a ಏತನ್ಮಂಕಣಕಸ್ಯಾಪಿ ಚರಿತಂ ಭೂರಿತೇಜಸಃ।
09037050c ಸ ಹಿ ಪುತ್ರಃ ಸಜನ್ಯಾಯಾಮುತ್ಪನ್ನೋ ಮಾತರಿಶ್ವನಾ।।
ಇದು ಭೂರಿತೇಜಸ ಮಂಕಣಕನ ಚರಿತ್ರೆ. ಅವನೇ ವಾಯುವಿಗೆ ಸುಜನ್ಯೆಯಲ್ಲಿ ಹುಟ್ಟಿದ ಮಗ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಸಪ್ತಾತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ಮೂವತ್ತೇಳನೇ ಅಧ್ಯಾಯವು.