ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಸಾರಸ್ವತ ಪರ್ವ
ಅಧ್ಯಾಯ 36
ಸಾರ
ಬಲರಾಮನ ತೀರ್ಥಾಯತ್ರಾ ವರ್ಣನೆ (1-36). ಸರಸ್ವತೀ ನದಿಯು ಪಶ್ಚಿಮ ದಿಕ್ಕಿಗೆ ತಿರುಗಿದುದರ ಕುರಿತಾದ ಕಥೆ (37-63).
09036001 ವೈಶಂಪಾಯನ ಉವಾಚ 09036001a ತತೋ ವಿನಶನಂ ರಾಜನ್ನಾಜಗಾಮ ಹಲಾಯುಧಃ।
09036001c ಶೂದ್ರಾಭೀರಾನ್ಪ್ರತಿ ದ್ವೇಷಾದ್ಯತ್ರ ನಷ್ಟಾ ಸರಸ್ವತೀ।।
ವೈಶಂಪಾಯನನು ಹೇಳಿದನು: “ರಾಜನ್! ಅನಂತರ ಹಲಾಯುಧನು ಶೂದ್ರರು ಮತ್ತು ಅಭೀರರ ದ್ವೇಷದಿಂದಾಗಿ ಎಲ್ಲಿ ಸರಸ್ವತಿಯು ನಷ್ಟಳಾಗಿ ಹೋಗಿದ್ದಳೋ ಆ ವಿನಶನಕ್ಕೆ ಬಂದನು.
09036002a ಯಸ್ಮಾತ್ಸಾ ಭರತಶ್ರೇಷ್ಠ ದ್ವೇಷಾನ್ನಷ್ಟಾ ಸರಸ್ವತೀ।
09036002c ತಸ್ಮಾತ್ತದೃಷಯೋ ನಿತ್ಯಂ ಪ್ರಾಹುರ್ವಿನಶನೇತಿ ಹ।।
ಭರತಶ್ರೇಷ್ಠ! ದ್ವೇಷದಿಂದ ಸರಸ್ವತಿಯು ನಷ್ಟಳಾಗಿ ಹೋಗಿದ್ದ ಆ ಸ್ಥಳವನ್ನು ಋಷಿಗಳು ನಿತ್ಯವೂ ವಿನಶನವೆಂದು ಕರೆಯುತ್ತಾರೆ.
09036003a ತಚ್ಚಾಪ್ಯುಪಸ್ಪೃಶ್ಯ ಬಲಃ ಸರಸ್ವತ್ಯಾಂ ಮಹಾಬಲಃ।
09036003c ಸುಭೂಮಿಕಂ ತತೋಽಗಚ್ಚತ್ಸರಸ್ವತ್ಯಾಸ್ತಟೇ ವರೇ।।
ಮಹಾಬಲ ಬಲರಾಮನು ಆ ಸರಸ್ವತಿಯಲ್ಲಿ ನೀರನ್ನು ಮುಟ್ಟಿ ಸರಸ್ವತೀ ತಟದಲ್ಲಿದ್ದ ಶ್ರೇಷ್ಠ ಸುಭೂಮಿಕಕ್ಕೆ ಹೋದನು.
09036004a ತತ್ರ ಚಾಪ್ಸರಸಃ ಶುಭ್ರಾ ನಿತ್ಯಕಾಲಮತಂದ್ರಿತಾಃ।
09036004c ಕ್ರೀಡಾಭಿರ್ವಿಮಲಾಭಿಶ್ಚ ಕ್ರೀಡಂತಿ ವಿಮಲಾನನಾಃ।।
ಅಲ್ಲಿ ವಿಮಲ-ಶುಭ್ರ-ದೋಷರಹಿತ-ವಿಮಲಾನನೆ ಅಪ್ಸರೆಯರೂ ಕೂಡ ಕ್ರೀಡೆಗಳನ್ನು ಆಡುತ್ತಾರೆ.
09036005a ತತ್ರ ದೇವಾಃ ಸಗಂಧರ್ವಾ ಮಾಸಿ ಮಾಸಿ ಜನೇಶ್ವರ।
09036005c ಅಭಿಗಚ್ಚಂತಿ ತತ್ತೀರ್ಥಂ ಪುಣ್ಯಂ ಬ್ರಾಹ್ಮಣಸೇವಿತಂ।।
ಜನೇಶ್ವರ! ಗಂಧರ್ವರೊಡನೆ ದೇವತೆಗಳು ಪ್ರತಿಮಾಸವೂ ಬ್ರಾಹ್ಮಣಸೇವಿತ ಆ ಪುಣ್ಯತೀರ್ಥಕ್ಕೆ ಬರುತ್ತಾರೆ.
09036006a ತತ್ರಾದೃಶ್ಯಂತ ಗಂಧರ್ವಾಸ್ತಥೈವಾಪ್ಸರಸಾಂ ಗಣಾಃ।
09036006c ಸಮೇತ್ಯ ಸಹಿತಾ ರಾಜನ್ಯಥಾಪ್ರಾಪ್ತಂ ಯಥಾಸುಖಂ।।
ರಾಜನ್! ಅಲ್ಲಿ ಗಂಧರ್ವ ಮತ್ತು ಅಪ್ಸರ ಗಣಗಳು ಒಟ್ಟಾಗಿ ಬಂದು ಸಂತೋಷಪಡುತ್ತಿರುವುದು ಕಂಡುಬರುತ್ತದೆ.
09036007a ತತ್ರ ಮೋದಂತಿ ದೇವಾಶ್ಚ ಪಿತರಶ್ಚ ಸವೀರುಧಃ।
09036007c ಪುಣ್ಯೈಃ ಪುಷ್ಪೈಃ ಸದಾ ದಿವ್ಯೈಃ ಕೀರ್ಯಮಾಣಾಃ ಪುನಃ ಪುನಃ।।
ಅಲ್ಲಿ ದೇವತೆಗಳು ಮತ್ತು ಬಳ್ಳಿಗಳನ್ನಾಶ್ರಯಿಸಿರುವ ಪಿತೃಗಳು ತಮ್ಮ ಮೇಲೆ ಪುನಃ ಪುನಃ ದಿವ್ಯ ಪುಣ್ಯ ಪುಷ್ಪಗಳ ಮಳೆಯಾಗುತ್ತಿರುವುದರಿಂದ ಆನಂದಪಡುತ್ತಾರೆ.
09036008a ಆಕ್ರೀಡಭೂಮಿಃ ಸಾ ರಾಜಂಸ್ತಾಸಾಮಪ್ಸರಸಾಂ ಶುಭಾ।
09036008c ಸುಭೂಮಿಕೇತಿ ವಿಖ್ಯಾತಾ ಸರಸ್ವತ್ಯಾಸ್ತಟೇ ವರೇ।।
ರಾಜನ್! ಆ ಶ್ರೇಷ್ಠ ಸರಸ್ವತೀ ತಟವು ಅಪ್ಸರೆಯರ ಶುಭ ಕ್ರೀಡಾಭೂಮಿಯಾಗಿದ್ದು ಸುಭೂಮಿಕಾ ಎಂದು ವಿಖ್ಯಾತವಾಗಿದೆ.
09036009a ತತ್ರ ಸ್ನಾತ್ವಾ ಚ ದತ್ತ್ವಾ ಚ ವಸು ವಿಪ್ರೇಷು ಮಾಧವಃ।
09036009c ಶ್ರುತ್ವಾ ಗೀತಂ ಚ ತದ್ದಿವ್ಯಂ ವಾದಿತ್ರಾಣಾಂ ಚ ನಿಃಸ್ವನಂ।।
ಮಾಧವನು ಅಲ್ಲಿ ಸ್ನಾನಮಾಡಿ ವಿಪ್ರರಿಗೆ ಧನವನ್ನು ದಾನಮಾಡಿ, ದಿವ್ಯ ಗೀತವನ್ನೂ ವಾದ್ಯಗಳ ನಿಃಸ್ವನವನ್ನೂ ಕೇಳಿದನು.
09036010a ಚಾಯಾಶ್ಚ ವಿಪುಲಾ ದೃಷ್ಟ್ವಾ ದೇವಗಂಧರ್ವರಕ್ಷಸಾಂ।
09036010c ಗಂಧರ್ವಾಣಾಂ ತತಸ್ತೀರ್ಥಮಾಗಚ್ಚದ್ರೋಹಿಣೀಸುತಃ।।
ದೇವ-ಗಂಧರ್ವ-ರಾಕ್ಷಸರ ವಿಪುಲ ಛಾಯೆಗಳನ್ನು ನೋಡಿ ರೋಹಿಣೀಸುತನು ಗಂಧರ್ವರ ತೀರ್ಥಕ್ಕೆ ಬಂದನು.
09036011a ವಿಶ್ವಾವಸುಮುಖಾಸ್ತತ್ರ ಗಂಧರ್ವಾಸ್ತಪಸಾನ್ವಿತಾಃ।
09036011c ನೃತ್ತವಾದಿತ್ರಗೀತಂ ಚ ಕುರ್ವಂತಿ ಸುಮನೋರಮಂ।।
ಅಲ್ಲಿ ವಿಶ್ವಾವಸುವೇ ಮೊದಲಾದ ತಪಸಾನ್ವಿತರು ಸುಮನೋರಮ ನೃತ್ಯ-ವಾದ್ಯ-ಗೀತೆಗಳನ್ನು ಮಾಡುತ್ತಿರುತ್ತಾರೆ.
09036012a ತತ್ರ ದತ್ತ್ವಾ ಹಲಧರೋ ವಿಪ್ರೇಭ್ಯೋ ವಿವಿಧಂ ವಸು।
09036012c ಅಜಾವಿಕಂ ಗೋಖರೋಷ್ಟ್ರಂ ಸುವರ್ಣಂ ರಜತಂ ತಥಾ।।
ಹಲಧರನು ಅಲ್ಲಿ ವಿಪ್ರರಿಗೆ ವಿವಿಧ ಸಂಪತ್ತುಗಳನ್ನು – ಆಡು, ಕುರಿ, ಹಸು, ಕತ್ತೆ ಮತ್ತು ಒಂಟೆಗಳನ್ನೂ, ಸುವರ್ಣ-ರಜತಗಳನ್ನೂ ದಾನವನ್ನಾಗಿತ್ತನು.
09036013a ಭೋಜಯಿತ್ವಾ ದ್ವಿಜಾನ್ಕಾಮೈಃ ಸಂತರ್ಪ್ಯ ಚ ಮಹಾಧನೈಃ।
09036013c ಪ್ರಯಯೌ ಸಹಿತೋ ವಿಪ್ರೈಃ ಸ್ತೂಯಮಾನಶ್ಚ ಮಾಧವಃ।।
ದ್ವಿಜರಿಗೆ ಬೇಕಾದ ಭೋಜನಗಳನ್ನಿತ್ತು ಮಹಾಧನಗಳಿಂದ ತೃಪ್ತಿಗೊಳಿಸಿ ಮಾಧವನು ಸ್ತುತಿಸುತ್ತಿರುವ ವಿಪ್ರರೊಂದಿಗೆ ಮುಂದುವರೆದನು.
09036014a ತಸ್ಮಾದ್ಗಂಧರ್ವತೀರ್ಥಾಚ್ಚ ಮಹಾಬಾಹುರರಿಂದಮಃ।
09036014c ಗರ್ಗಸ್ರೋತೋ ಮಹಾತೀರ್ಥಮಾಜಗಾಮೈಕಕುಂಡಲೀ।।
ಆ ಗಂಧರ್ವತೀರ್ಥದಿಂದ ಒಂದೇ ಕಿವಿಯಲ್ಲಿ ಕುಂಡಲವನ್ನು ಧರಿಸಿದ್ದ ಮಹಾಬಾಹು ಅರಿಂದಮನು ಗರ್ಗಸ್ರೋತ ಮಹಾತೀರ್ಥಕ್ಕೆ ಆಗಮಿಸಿದನು.
09036015a ಯತ್ರ ಗರ್ಗೇಣ ವೃದ್ಧೇನ ತಪಸಾ ಭಾವಿತಾತ್ಮನಾ।
09036015c ಕಾಲಜ್ಞಾನಗತಿಶ್ಚೈವ ಜ್ಯೋತಿಷಾಂ ಚ ವ್ಯತಿಕ್ರಮಃ।।
09036016a ಉತ್ಪಾತಾ ದಾರುಣಾಶ್ಚೈವ ಶುಭಾಶ್ಚ ಜನಮೇಜಯ।
09036016c ಸರಸ್ವತ್ಯಾಃ ಶುಭೇ ತೀರ್ಥೇ ವಿಹಿತಾ ವೈ ಮಹಾತ್ಮನಾ।।
09036016e ತಸ್ಯ ನಾಮ್ನಾ ಚ ತತ್ತೀರ್ಥಂ ಗರ್ಗಸ್ರೋತ ಇತಿ ಸ್ಮೃತಂ।।
ಜನಮೇಜಯ! ಅಲ್ಲಿ ಭಾವಿತಾತ್ಮ ವೃದ್ಧ ಗರ್ಗನು ತಪಸ್ಸಿನಿಂದ ಕಾಲಜ್ಞಾನವನ್ನೂ, ನಕ್ಷತ್ರಗಳ ಗತಿಯನ್ನೂ, ದಾರುಣ ಮತ್ತು ಶುಭ ಉತ್ಪಾತಗಳನ್ನೂ ತಿಳಿದುಕೊಂಡಿದ್ದನು. ಸರಸ್ವತಿಯ ಶುಭ ತೀರ್ಥದಲ್ಲಿ ಆ ಮಹಾತ್ಮನಿದ್ದುದರಿಂದ ಆ ತೀರ್ಥವು ಗರ್ಗಸ್ರೋತವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
09036017a ತತ್ರ ಗರ್ಗಂ ಮಹಾಭಾಗಂ ಋಷಯಃ ಸುವ್ರತಾ ನೃಪ।
09036017c ಉಪಾಸಾಂ ಚಕ್ರಿರೇ ನಿತ್ಯಂ ಕಾಲಜ್ಞಾನಂ ಪ್ರತಿ ಪ್ರಭೋ।।
ನೃಪ! ಪ್ರಭೋ! ಅಲ್ಲಿ ಸುವ್ರತ ಋಷಿಗಳು ಕಾಲಜ್ಞಾನಕ್ಕಾಗಿ ಮಹಾಭಾಗ ಗರ್ಗನನ್ನು ನಿತ್ಯವೂ ಉಪಾಸಿಸುತ್ತಿರುತ್ತಾರೆ.
09036018a ತತ್ರ ಗತ್ವಾ ಮಹಾರಾಜ ಬಲಃ ಶ್ವೇತಾನುಲೇಪನಃ।
09036018c ವಿಧಿವದ್ಧಿ ಧನಂ ದತ್ತ್ವಾ ಮುನೀನಾಂ ಭಾವಿತಾತ್ಮನಾಂ।।
09036019a ಉಚ್ಚಾವಚಾಂಸ್ತಥಾ ಭಕ್ಷ್ಯಾನ್ದ್ವಿಜೇಭ್ಯೋ ವಿಪ್ರದಾಯ ಸಃ।
09036019c ನೀಲವಾಸಾಸ್ತತೋಽಗಚ್ಚಚ್ಚಂಖತೀರ್ಥಂ ಮಹಾಯಶಾಃ।।
ಮಹಾರಾಜ! ಶ್ವೇತಾನುಲೇಪನ ನೀಲಾವಾಸ ಬಲರಾಮನು ಅಲ್ಲಿ ಹೋಗಿ ಭಾವಿತಾತ್ಮ ಮುನಿಗಳಿಗೆ ವಿಧಿವತ್ತಾಗಿ ಧನವನ್ನು ದಾನವನ್ನಾಗಿತ್ತು, ದ್ವಿಜರಿಗೆ ಉತ್ತಮ ಭಕ್ಷಗಳ ಬೋಜನಗಳನ್ನಿತ್ತು ಅಲ್ಲಿಂದ ಮಹಾಯಶಸ್ವಿ ಶಂಖತೀರ್ಥಕ್ಕೆ ಹೋದನು.
09036020a ತತ್ರಾಪಶ್ಯನ್ಮಹಾಶಂಖಂ ಮಹಾಮೇರುಮಿವೋಚ್ಚ್ರಿತಂ।
09036020c ಶ್ವೇತಪರ್ವತಸಂಕಾಶಂ ಋಷಿಸಂಘೈರ್ನಿಷೇವಿತಂ।।
09036020e ಸರಸ್ವತ್ಯಾಸ್ತಟೇ ಜಾತಂ ನಗಂ ತಾಲಧ್ವಜೋ ಬಲೀ।।
ಬಲಶಾಲೀ ತಾಲಧ್ವಜನು ಶ್ವೇತಪರ್ವತದ ಬಳಿ ಋಷಿಗಣಗಳಿಂದ ಸೇವಿಸಲ್ಪಟ್ಟಿದ್ದ ಮಹಾಮೇರುವಿನಂತೆ ಎತ್ತರವಾಗಿದ್ದ, ಸರಸ್ವತೀ ತಟದಲ್ಲಿ ಹುಟ್ಟಿದ್ದ, ಮಹಾಶಂಖವೆಂಬ ವೃಕ್ಷವನ್ನು ನೋಡಿದನು.
09036021a ಯಕ್ಷಾ ವಿದ್ಯಾಧರಾಶ್ಚೈವ ರಾಕ್ಷಸಾಶ್ಚಾಮಿತೌಜಸಃ।
09036021c ಪಿಶಾಚಾಶ್ಚಾಮಿತಬಲಾ ಯತ್ರ ಸಿದ್ಧಾಃ ಸಹಸ್ರಶಃ।।
ಅಲ್ಲಿ ಯಕ್ಷರೂ, ವಿದ್ಯಾಧರರೂ, ಅಮಿತೌಜಸ ರಾಕ್ಷಸರೂ, ಅಮಿತ ಬಲಶಾಲೀ ಪಿಶಾಚರೂ ಮತ್ತು ಸಹಸ್ರಾರು ಸಿದ್ಧರೂ ಇದ್ದರು.
09036022a ತೇ ಸರ್ವೇ ಹ್ಯಶನಂ ತ್ಯಕ್ತ್ವಾ ಫಲಂ ತಸ್ಯ ವನಸ್ಪತೇಃ।
09036022c ವ್ರತೈಶ್ಚ ನಿಯಮೈಶ್ಚೈವ ಕಾಲೇ ಕಾಲೇ ಸ್ಮ ಭುಂಜತೇ।।
ಅವರೆಲ್ಲರೂ ವ್ರತ-ನಿಯಮಗಳೊಂದಿಗೆ ಆಹಾರವನ್ನು ತೊರೆದು ಆ ವನಸ್ಪತಿಯ ಫಲವನ್ನು ಕಾಲ ಕಾಲದಲ್ಲಿ ಭುಂಜಿಸುತ್ತಿದ್ದರು.
09036023a ಪ್ರಾಪ್ತೈಶ್ಚ ನಿಯಮೈಸ್ತೈಸ್ತೈರ್ವಿಚರಂತಃ ಪೃಥಕ್ಪೃಥಕ್।
09036023c ಅದೃಶ್ಯಮಾನಾ ಮನುಜೈರ್ವ್ಯಚರನ್ಪುರುಷರ್ಷಭ।।
ಪುರುಷರ್ಷಭ! ಅವರವರ ನಿಯಮಗಳನ್ನು ಪಾಲಿಸುತ್ತಾ ಪ್ರತ್ಯೇಕ ಪ್ರತ್ಯೇಕವಾಗಿ ಅವರುಗಳು ಮನುಷ್ಯರಿಗೆ ಅದೃಶ್ಯರಾಗಿ ಅಲ್ಲಿ ಸಂಚರಿಸುತ್ತಿದ್ದರು.
09036024a ಏವಂ ಖ್ಯಾತೋ ನರಪತೇ ಲೋಕೇಽಸ್ಮಿನ್ಸ ವನಸ್ಪತಿಃ।
09036024c ತತ್ರ ತೀರ್ಥಂ ಸರಸ್ವತ್ಯಾಃ ಪಾವನಂ ಲೋಕವಿಶ್ರುತಂ।।
ನರಪತೇ! ಈ ರೀತಿ ಸರಸ್ವತೀ ತೀರದಲ್ಲಿರುವ ಆ ವನಸ್ಪತಿಯು ಈ ಲೋಕದಲ್ಲಿ ಪಾವನ ತೀರ್ಥವೆಂದು ಲೋಕವಿಶ್ರುತವಾಗಿದೆ.
09036025a ತಸ್ಮಿಂಶ್ಚ ಯದುಶಾರ್ದೂಲೋ ದತ್ತ್ವಾ ತೀರ್ಥೇ ಯಶಸ್ವಿನಾಂ।
09036025c ತಾಮ್ರಾಯಸಾನಿ ಭಾಂಡಾನಿ ವಸ್ತ್ರಾಣಿ ವಿವಿಧಾನಿ ಚ।।
ಆ ಯಶಸ್ವೀ ತೀರ್ಥದಲ್ಲಿ ಯದುಶಾರ್ದೂಲನು ತಾಮ್ರದ ಪಾತ್ರೆಗಳನ್ನೂ ವಿವಿಧ ವಸ್ತ್ರಗಳನ್ನೂ ದಾನವನ್ನಾಗಿತ್ತನು.
09036026a ಪೂಜಯಿತ್ವಾ ದ್ವಿಜಾಂಶ್ಚೈವ ಪೂಜಿತಶ್ಚ ತಪೋಧನೈಃ।
09036026c ಪುಣ್ಯಂ ದ್ವೈತವನಂ ರಾಜನ್ನಾಜಗಾಮ ಹಲಾಯುಧಃ।।
ರಾಜನ್! ಅಲ್ಲಿ ದ್ವಿಜರನ್ನು ಪೂಜಿಸಿ ಮತ್ತು ತಪೋಧನರಿಂದ ಪೂಜಿಸಲ್ಪಟ್ಟು ಹಲಾಯುಧನು ಪುಣ್ಯ ದ್ವೈತವನಕ್ಕೆ ಬಂದನು.
09036027a ತತ್ರ ಗತ್ವಾ ಮುನೀನ್ದೃಷ್ಟ್ವಾ ನಾನಾವೇಷಧರಾನ್ಬಲಃ।
09036027c ಆಪ್ಲುತ್ಯ ಸಲಿಲೇ ಚಾಪಿ ಪೂಜಯಾಮಾಸ ವೈ ದ್ವಿಜಾನ್।।
ಅಲ್ಲಿ ಬಲರಾಮನು ನಾನಾವೇಷಗಳನ್ನು ಧರಿಸಿದ್ದ ಮುನಿಗಳನ್ನು ನೋಡಿ, ನೀರಿನಲ್ಲಿ ಸ್ನಾನಮಾಡಿ, ದ್ವಿಜರನ್ನು ಪೂಜಿಸಿದನು.
09036028a ತಥೈವ ದತ್ತ್ವಾ ವಿಪ್ರೇಭ್ಯಃ ಪರಿಭೋಗಾನ್ಸುಪುಷ್ಕಲಾನ್।
09036028c ತತಃ ಪ್ರಾಯಾದ್ಬಲೋ ರಾಜನ್ದಕ್ಷಿಣೇನ ಸರಸ್ವತೀಂ।।
ರಾಜನ್! ಅಲ್ಲಿ ಕೂಡ ವಿಪ್ರರಿಗೆ ಪುಷ್ಕಳ ಭೋಗವಸ್ತುಗಳನ್ನು ದಾನವನ್ನಾಗಿತ್ತು ಬಲರಾಮನು ಸರಸ್ವತಿಯ ದಕ್ಷಿಣ ತೀರದ ಕಡೆ ಪ್ರಯಾಣಿಸಿದನು.
09036029a ಗತ್ವಾ ಚೈವ ಮಹಾಬಾಹುರ್ನಾತಿದೂರಂ ಮಹಾಯಶಾಃ।
09036029c ಧರ್ಮಾತ್ಮಾ ನಾಗಧನ್ವಾನಂ ತೀರ್ಥಮಾಗಮದಚ್ಯುತಃ।।
ಅನತಿದೂರದಲ್ಲಿಯೇ ಮಹಾಬಾಹು ಆಚ್ಯುತ ಧರ್ಮಾತ್ಮ ಮಹಾಯಶಸ್ವಿಯು ನಾಗಧನ್ವ ಎಂಬ ತೀರ್ಥಕ್ಕೆ ಆಗಮಿಸಿದನು.
09036030a ಯತ್ರ ಪನ್ನಗರಾಜಸ್ಯ ವಾಸುಕೇಃ ಸಂನಿವೇಶನಂ।
09036030c ಮಹಾದ್ಯುತೇರ್ಮಹಾರಾಜ ಬಹುಭಿಃ ಪನ್ನಗೈರ್ವೃತಂ।।
09036030e ಯತ್ರಾಸನ್ನೃಷಯಃ ಸಿದ್ಧಾಃ ಸಹಸ್ರಾಣಿ ಚತುರ್ದಶ।।
ಮಹಾರಾಜ! ಅಲ್ಲಿ ಅನೇಕ ಪನ್ನಗಗಳಿಂದ ಆವೃತನಾದ ಮಹಾದ್ಯುತಿ ಪನ್ನಗರಾಜ ವಾಸುಕಿಯ ನಿವೇಶನವಿದೆ. ಅಲ್ಲಿ ಹದಿನಾಲ್ಕು ಸಹಸ್ರ ಸಿದ್ಧ-ಋಷಿಗಳು ವಾಸಿಸುತ್ತಾರೆ.
09036031a ಯತ್ರ ದೇವಾಃ ಸಮಾಗಮ್ಯ ವಾಸುಕಿಂ ಪನ್ನಗೋತ್ತಮಂ।
09036031c ಸರ್ವಪನ್ನಗರಾಜಾನಮಭ್ಯಷಿಂಚನ್ಯಥಾವಿಧಿ।।
09036031e ಪನ್ನಗೇಭ್ಯೋ ಭಯಂ ತತ್ರ ವಿದ್ಯತೇ ನ ಸ್ಮ ಕೌರವ।।
ಅಲ್ಲಿ ದೇವತೆಗಳು ಒಟ್ಟಾಗಿ ಪನ್ನಗೋತ್ತಮ ವಾಸುಕಿಯನ್ನು ಸರ್ವಪನ್ನಗಗಳ ರಾಜನಾಗಿ ಯಥಾವಿಧಿಯಾಗಿ ಅಭಿಷೇಕಿಸಿದರು. ಕೌರವ! ಅಲ್ಲಿದ್ದ ಸರ್ಪಗಳಿಂದ ನಮಗೆ ಯಾವ ಭಯವೂ ಇಲ್ಲ.
09036032a ತತ್ರಾಪಿ ವಿಧಿವದ್ದತ್ತ್ವಾ ವಿಪ್ರೇಭ್ಯೋ ರತ್ನಸಂಚಯಾನ್।
09036032c ಪ್ರಾಯಾತ್ಪ್ರಾಚೀಂ ದಿಶಂ ರಾಜನ್ದೀಪ್ಯಮಾನಃ ಸ್ವತೇಜಸಾ।।
ರಾಜನ್! ತನ್ನದೇ ತೇಜಸ್ಸಿನಿಂದ ಬೆಳಗುತ್ತಿದ್ದ ಬಲರಾಮನು ಅಲ್ಲಿ ಕೂಡ ವಿಧಿವತ್ತಾಗಿ ವಿಪ್ರರಿಗೆ ರತ್ನಸಂಚಯಗಳನ್ನು ದಾನವನ್ನಾಗಿತ್ತು ಪೂರ್ವ ದಿಕ್ಕಿಗೆ ಪ್ರಯಾಣಿಸಿದನು.
09036033a ಆಪ್ಲುತ್ಯ ಬಹುಶೋ ಹೃಷ್ಟಸ್ತೇಷು ತೀರ್ಥೇಷು ಲಾಂಗಲೀ।
09036033c ದತ್ತ್ವಾ ವಸು ದ್ವಿಜಾತಿಭ್ಯೋ ಜಗಾಮಾತಿ ತಪಸ್ವಿನಃ।।
ಅನೇಕ ತೀರ್ಥಗಳಲ್ಲಿ ಮಿಂದು ಹೃಷ್ಟನಾಗಿ ಲಾಂಗಲಿಯು ದ್ವಿಜರಿಗೆ ಧನವನ್ನು ದಾನವನ್ನಾಗಿತ್ತು ತಪಸ್ವಿಗಳೊಡನೆ ಮುಂದುವರೆದನು.
09036034a ತತ್ರಸ್ಥಾನೃಷಿಸಂಘಾಂಸ್ತಾನಭಿವಾದ್ಯ ಹಲಾಯುಧಃ।
09036034c ತತೋ ರಾಮೋಽಗಮತ್ತೀರ್ಥಂ ಋಷಿಭಿಃ ಸೇವಿತಂ ಮಹತ್।।
ಅಲ್ಲಿದ್ದ ಋಷಿಸಂಘಗಳಿಗೆ ಅಭಿವಂದಿಸಿ ಹಲಾಯುಧ ರಾಮನು ಋಷಿಗಳಿಂದ ಸೇವಿತ ಮಹಾ ತೀರ್ಥಕ್ಕೆ ಆಗಮಿಸಿದನು.
09036035a ಯತ್ರ ಭೂಯೋ ನಿವವೃತೇ ಪ್ರಾಙ್ಮುಖಾ ವೈ ಸರಸ್ವತೀ।
09036035c ಋಷೀಣಾಂ ನೈಮಿಷೇಯಾಣಾಮವೇಕ್ಷಾರ್ಥಂ ಮಹಾತ್ಮನಾಂ।।
ಅಲ್ಲಿ ನೈಮಿಷಾರಣ್ಯವಾಸಿಗಳಾಗಿದ್ದ ಮಹಾತ್ಮ ಋಷಿಗಳಿಗೋಸ್ಕರವಾಗಿ ಸರಸ್ವತಿಯು ಪೂರ್ವಕ್ಕೆ ತಿರುಗಿ ಹರಿಯುತ್ತಿದ್ದಳು.
09036036a ನಿವೃತ್ತಾಂ ತಾಂ ಸರಿಚ್ಚ್ರೇಷ್ಠಾಂ ತತ್ರ ದೃಷ್ಟ್ವಾ ತು ಲಾಂಗಲೀ।
09036036c ಬಭೂವ ವಿಸ್ಮಿತೋ ರಾಜನ್ಬಲಃ ಶ್ವೇತಾನುಲೇಪನಃ।।
ರಾಜನ್! ಶ್ವೇತಾನುಲೇಪನ ಲಾಂಗುಲೀ ಬಲರಾಮನು ತಿರುಗಿದ್ದ ಆ ಶ್ರೇಷ್ಠ ನದಿಯನ್ನು ನೋಡಿ ವಿಸ್ಮಿತನಾದನು.”
09036037 ಜನಮೇಜಯ ಉವಾಚ 09036037a ಕಸ್ಮಾತ್ಸರಸ್ವತೀ ಬ್ರಹ್ಮನ್ನಿವೃತ್ತಾ ಪ್ರಾಘ್ಮುಖೀ ತತಃ।
09036037c ವ್ಯಾಖ್ಯಾತುಮೇತದಿಚ್ಚಾಮಿ ಸರ್ವಮಧ್ವರ್ಯುಸತ್ತಮ।।
ಜನಮೇಜಯನು ಹೇಳಿದನು: “ಸತ್ತಮ! ಬ್ರಹ್ಮನ್! ಸರಸ್ವತಿಯು ಏಕೆ ಪಶ್ಚಿಮದಿಕ್ಕಿಗೆ ತಿರುಗಿದಳು? ಇದನ್ನು ಕೇಳಲು ಬಯಸುತ್ತೇನೆ. ಸರ್ವವನ್ನೂ ಹೇಳಬೇಕು.
09036038a ಕಸ್ಮಿಂಶ್ಚ ಕಾರಣೇ ತತ್ರ ವಿಸ್ಮಿತೋ ಯದುನಂದನಃ।
09036038c ವಿನಿವೃತ್ತಾ ಸರಿಚ್ಚ್ರೇಷ್ಠಾ ಕಥಮೇತದ್ದ್ವಿಜೋತ್ತಮ।।
ಯಾವ ಕಾರಣದಿಂದಾಗಿ ಯದುನಂದನನು ಅಲ್ಲಿ ವಿಸ್ಮಿತನಾದನು? ದ್ವಿಜೋತ್ತಮ! ಆ ಶ್ರೇಷ್ಠ ನದಿಯು ಹಿಂದಕ್ಕೆ ಏಕೆ ತಿರುಗಿತು?”
09036039 ವೈಶಂಪಾಯನ ಉವಾಚ 09036039a ಪೂರ್ವಂ ಕೃತಯುಗೇ ರಾಜನ್ನೈಮಿಷೇಯಾಸ್ತಪಸ್ವಿನಃ।
09036039c ವರ್ತಮಾನೇ ಸುಬಹುಲೇ ಸತ್ರೇ ದ್ವಾದಶವಾರ್ಷಿಕೇ।।
09036039e ಋಷಯೋ ಬಹವೋ ರಾಜಂಸ್ತತ್ರ ಸಂಪ್ರತಿಪೇದಿರೇ।।
ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ಕೃತಯುಗದಲ್ಲಿ ನೈಮಿಷಾರಣ್ಯದ ತಪಸ್ವಿಗಳು ದ್ವಾದಶವಾರ್ಷಿಕದ ಅತಿ ದೊಡ್ಡ ಸತ್ರದಲ್ಲಿ ತೊಡಗಿರಲು ಅಲ್ಲಿ ಅನೇಕ ಋಷಿಗಳು ಭಾಗವಹಿಸಿದ್ದರು.
09036040a ಉಷಿತ್ವಾ ಚ ಮಹಾಭಾಗಾಸ್ತಸ್ಮಿನ್ಸತ್ರೇ ಯಥಾವಿಧಿ।
09036040c ನಿವೃತ್ತೇ ನೈಮಿಷೇಯೇ ವೈ ಸತ್ರೇ ದ್ವಾದಶವಾರ್ಷಿಕೇ।।
09036040e ಆಜಗ್ಮುಋಷಯಸ್ತತ್ರ ಬಹವಸ್ತೀರ್ಥಕಾರಣಾತ್।।
ಆ ಸತ್ರದಲ್ಲಿ ಯಥಾವಿಧಿಯಾಗಿ ಉಳಿದುಕೊಂಡ ಆ ಮಹಾಭಾಗರು ನೈಮಿಷಾರಣ್ಯದಲ್ಲಿ ಸತ್ರದ ಹನ್ನೆರಡು ವರ್ಷಗಳೂ ಉಳಿದುಕೊಂಡಿದ್ದರು. ಅನೇಕ ಋಷಿಗಳು ತೀರ್ಥಕಾರಣದಿಂದ ಅಲ್ಲಿ ಆಗಮಿಸಿದ್ದರು.
09036041a ಋಷೀಣಾಂ ಬಹುಲತ್ವಾತ್ತು ಸರಸ್ವತ್ಯಾ ವಿಶಾಂ ಪತೇ।
09036041c ತೀರ್ಥಾನಿ ನಗರಾಯಂತೇ ಕೂಲೇ ವೈ ದಕ್ಷಿಣೇ ತದಾ।।
ವಿಶಾಂಪತೇ! ಅನೇಕ ಋಷಿಗಳಿಂದ ಕೂಡಿದ್ದ ಸರಸ್ವತಿಯ ಆ ದಕ್ಷಿಣ ತೀರ್ಥಸಮೂಹಗಳು ನಗರಗಳಂತೆ ತೋರುತ್ತಿದ್ದವು.
09036042a ಸಮಂತಪಂಚಕಂ ಯಾವತ್ತಾವತ್ತೇ ದ್ವಿಜಸತ್ತಮಾಃ।
09036042c ತೀರ್ಥಲೋಭಾನ್ನರವ್ಯಾಘ್ರ ನದ್ಯಾಸ್ತೀರಂ ಸಮಾಶ್ರಿತಾಃ।।
ನರವ್ಯಾಘ್ರ! ತೀರ್ಥಲೋಭರಾದ ಆ ದ್ವಿಜಸತ್ತಮರು ಸರಸ್ವತೀ ತೀರದಲ್ಲಿ ಸಮಂತಪಂಚಕದ ವರೆಗೆ ವಾಸಮಾಡಿಕೊಂಡಿದ್ದರು.
09036043a ಜುಹ್ವತಾಂ ತತ್ರ ತೇಷಾಂ ತು ಮುನೀನಾಂ ಭಾವಿತಾತ್ಮನಾಂ।
09036043c ಸ್ವಾಧ್ಯಾಯೇನಾಪಿ ಮಹತಾ ಬಭೂವುಃ ಪೂರಿತಾ ದಿಶಃ।।
ಹವನಗೈಯುತ್ತಿದ್ದ ಆ ಭಾವಿತಾತ್ಮ ಮುನಿಗಳ ಸ್ವಾಧ್ಯಾಯಗಳು ಜೋರಾಗಿ ದಿಕ್ಕುಗಳನ್ನೇ ತುಂಬಿಕೊಂಡವು.
09036044a ಅಗ್ನಿಹೋತ್ರೈಸ್ತತಸ್ತೇಷಾಂ ಹೂಯಮಾನೈರ್ಮಹಾತ್ಮನಾಂ।
09036044c ಅಶೋಭತ ಸರಿಚ್ಚ್ರೇಷ್ಠಾ ದೀಪ್ಯಮಾನೈಃ ಸಮಂತತಃ।।
ಆಗ್ನಿಹೋತ್ರಗಳಲ್ಲಿ ಹೋಮಮಾಡುತ್ತಿದ್ದ ಆ ಮಹಾತ್ಮರಿಂದ ಶ್ರೇಷ್ಠ ನದಿಯು ಎಲ್ಲ ಕಡೆಗಳಿಂದ ಬೆಳಗಿ ಶೋಭಿಸಿದಳು.
09036045a ವಾಲಖಿಲ್ಯಾ ಮಹಾರಾಜ ಅಶ್ಮಕುಟ್ಟಾಶ್ಚ ತಾಪಸಾಃ।
09036045c ದಂತೋಲೂಖಲಿನಶ್ಚಾನ್ಯೇ ಸಂಪ್ರಕ್ಷಾಲಾಸ್ತಥಾಪರೇ।।
09036046a ವಾಯುಭಕ್ಷಾ ಜಲಾಹಾರಾಃ ಪರ್ಣಭಕ್ಷಾಶ್ಚ ತಾಪಸಾಃ।
09036046c ನಾನಾನಿಯಮಯುಕ್ತಾಶ್ಚ ತಥಾ ಸ್ಥಂಡಿಲಶಾಯಿನಃ।।
ಮಹಾರಾಜ! ವಾಲ್ಯಖಿಲ್ಯರು, ಅಶ್ಮಕುಟ್ಟ ತಾಪಸರು, ದಂತೋಲೂಖಲಿಗಳು, ಸಂಪ್ರಕ್ಷಾಲರು, ವಾಯುಭಕ್ಷಕರು, ಜಲಾಹಾರಿಗಳು, ಪರ್ಣಭಕ್ಷಕ ತಾಪಸರು, ಸ್ಥಂಡಿಲಶಾಯಿಗಳು ಮತ್ತು ಹಾಗೆಯೇ ನಾನಾ ನಿಯಮಯುಕ್ತ ತಾಪಸರು ಅಲ್ಲಿದ್ದರು.
09036047a ಆಸನ್ವೈ ಮುನಯಸ್ತತ್ರ ಸರಸ್ವತ್ಯಾಃ ಸಮೀಪತಃ।
09036047c ಶೋಭಯಂತಃ ಸರಿಚ್ಚ್ರೇಷ್ಠಾಂ ಗಂಗಾಮಿವ ದಿವೌಕಸಃ।।
ಸರಸ್ವತಿಯ ಸಮೀಪದಲ್ಲಿಯೇ ವಾಸಿಸುತ್ತಿದ್ದ ಆ ಮುನಿಗಳು ನದಿಶ್ರೇಷ್ಠೆ ಗಂಗೆಯ ಬಳಿಯಿದ್ದ ದಿವೌಕಸರಂತೆಯೇ ಶೋಭಿಸಿದರು.
09036048a ತತಃ ಪಶ್ಚಾತ್ಸಮಾಪೇತುರೃಷಯಃ ಸತ್ರಯಾಜಿನಃ।
09036048c ತೇಽವಕಾಶಂ ನ ದದೃಶುಃ ಕುರುಕ್ಷೇತ್ರೇ ಮಹಾವ್ರತಾಃ।।
ಸತ್ರದಲ್ಲಿ ಯಾಜಿಗಳಾಗಿ ಅಲ್ಲಿಗೆ ಬಂದು ಸೇರಿದ್ದ ಮಹಾವ್ರತ ಋಷಿಗಳಿಗೆ ಕುರುಕ್ಷೇತ್ರದಲ್ಲಿ ಸ್ನಾನಮಾಡಲು ಅವಕಾಶವೇ ದೊರಕಲಿಲ್ಲ.
09036049a ತತೋ ಯಜ್ಞೋಪವೀತೈಸ್ತೇ ತತ್ತೀರ್ಥಂ ನಿರ್ಮಿಮಾಯ ವೈ।
09036049c ಜುಹುವುಶ್ಚಾಗ್ನಿಹೋತ್ರಾಣಿ ಚಕ್ರುಶ್ಚ ವಿವಿಧಾಃ ಕ್ರಿಯಾಃ।।
ಆಗ ಅವರು ಯಜ್ಞೋಪವೀತಗಳಲ್ಲಿಯೇ ತೀರ್ಥಗಳನ್ನು ಸಂಕಲ್ಪಿಸಿ ಅಗ್ನಿಹೋತ್ರದಲ್ಲಿ ಆಹುತಿಗಳನ್ನು ವಿಧಿವತ್ತಾಗಿ ನೀಡಿದರು.
09036050a ತತಸ್ತಂ ಋಷಿಸಂಘಾತಂ ನಿರಾಶಂ ಚಿಂತಯಾನ್ವಿತಂ।
09036050c ದರ್ಶಯಾಮಾಸ ರಾಜೇಂದ್ರ ತೇಷಾಮರ್ಥೇ ಸರಸ್ವತೀ।।
ರಾಜೇಂದ್ರ! ಋಷಿಗಳಿಗಾದ ನಿರಾಶೆಯಿಂದ ಚಿಂತಾನ್ವಿತಳಾದ ಸರಸ್ವತಿಯು ಅವರಿಗೋಸ್ಕರವಾಗಿ ಅಲ್ಲಿ ಕಾಣಿಸಿಕೊಂಡಳು.
09036051a ತತಃ ಕುಂಜಾನ್ಬಹೂನ್ಕೃತ್ವಾ ಸಂನಿವೃತ್ತಾ ಸರಿದ್ವರಾ।
09036051c ಋಷೀಣಾಂ ಪುಣ್ಯತಪಸಾಂ ಕಾರುಣ್ಯಾಜ್ಜನಮೇಜಯ।।
ಜನಮೇಜಯ! ಪುಣ್ಯತಪಸ್ವಿ ಋಷಿಗಳ ಮೇಲಿನ ಕಾರುಣ್ಯದಿಂದ ಆ ಸರಿದ್ವರೆಯು ಅವರಿಗೆ ಅನೇಕ ವಿಶ್ರಾಮ ಕುಂಜರಗಳನ್ನು ಕಲ್ಪಿಸಿಕೊಟ್ಟು ಹಿಂದಿರುಗಿದಳು.
09036052a ತತೋ ನಿವೃತ್ಯ ರಾಜೇಂದ್ರ ತೇಷಾಮರ್ಥೇ ಸರಸ್ವತೀ।
09036052c ಭೂಯಃ ಪ್ರತೀಚ್ಯಭಿಮುಖೀ ಸುಸ್ರಾವ ಸರಿತಾಂ ವರಾ।।
ರಾಜೇಂದ್ರ! ಅವರಿಗೋಸ್ಕರವಾಗಿ ಅಲ್ಲಿಗೆ ಬಂದ ನದಿಶ್ರೇಷ್ಠೆ ಸರಸ್ವತಿಯು ಪುನಃ ಪಶ್ಚಿಮಾಭಿಮುಖಳಾಗಿ ಪ್ರವಹಿಸತೊಡಗಿದಳು.
09036053a ಅಮೋಘಾ ಗಮನಂ ಕೃತ್ವಾ ತೇಷಾಂ ಭೂಯೋ ವ್ರಜಾಮ್ಯಹಂ।
09036053c ಇತ್ಯದ್ಭುತಂ ಮಹಚ್ಚಕ್ರೇ ತತೋ ರಾಜನ್ಮಹಾನದೀ।।
ರಾಜನ್! ಆವರ ಆಗಮನವನ್ನು ಸಫಲಗೊಳಿಸಿ ಪುನಃ ಹಿಂದಿನಂತೆಯೇ ಹರಿಯುತ್ತೇನೆ ಎಂದು ಸಂಕಲ್ಪಿಸಿದ್ದ ಆ ಮಹಾನದಿಯು ಆ ಅದ್ಭುತ ಕ್ರಿಯೆಯನ್ನು ಮಾಡಿದಳು.
09036054a ಏವಂ ಸ ಕುಂಜೋ ರಾಜೇಂದ್ರ ನೈಮಿಷೇಯ ಇತಿ ಸ್ಮೃತಃ।
09036054c ಕುರುಕ್ಷೇತ್ರೇ ಕುರುಶ್ರೇಷ್ಠ ಕುರುಷ್ವ ಮಹತೀಃ ಕ್ರಿಯಾಃ।।
ರಾಜೇಂದ್ರ! ಆ ಕುಂಜವು ನೈಮಿಷೇಯ ಎಂದು ಕರೆಯಲ್ಪಟ್ಟಿತು. ಕುರುಶ್ರೇಷ್ಠ! ಕುರುಕ್ಷೇತ್ರದಲ್ಲಿ ನೀನು ಕೂಡ ಮಹಾಕ್ರಿಯೆಗಳನ್ನು ನಡೆಸು!
09036055a ತತ್ರ ಕುಂಜಾನ್ಬಹೂನ್ದೃಷ್ಟ್ವಾ ಸಂನಿವೃತ್ತಾಂ ಚ ತಾಂ ನದೀಂ।
09036055c ಬಭೂವ ವಿಸ್ಮಯಸ್ತತ್ರ ರಾಮಸ್ಯಾಥ ಮಹಾತ್ಮನಃ।।
ಅಲ್ಲಿದ್ದ ಅನೇಕ ಲತಾಕುಂಜಗಳನ್ನೂ ಮತ್ತು ಆ ನದಿಯು ತಿರುಗಿಕೊಂಡಿರುವುದನ್ನೂ ನೋಡಿ ಮಹಾತ್ಮ ರಾಮನಿಗೆ ಅಚ್ಚರಿಯುಂಟಾಯಿತು.
09036056a ಉಪಸ್ಪೃಶ್ಯ ತು ತತ್ರಾಪಿ ವಿಧಿವದ್ಯದುನಂದನಃ।
09036056c ದತ್ತ್ವಾ ದಾಯಾನ್ದ್ವಿಜಾತಿಭ್ಯೋ ಭಾಂಡಾನಿ ವಿವಿಧಾನಿ ಚ।।
09036056e ಭಕ್ಷ್ಯಂ ಪೇಯಂ ಚ ವಿವಿಧಂ ಬ್ರಾಹ್ಮಣಾನ್ಪ್ರತ್ಯಪಾದಯತ್।।
ಯದುನಂದನನು ಅಲ್ಲಿ ಕೂಡ ವಿಧಿವತ್ತಾಗಿ ಸ್ನಾನಾಚಮನೀಯಗಳನ್ನು ಮಾಡಿ ದ್ವಿಜಾತಿಯವರಿಗೆ ವಿವಿಧ ಭಾಂಡಗಳನ್ನು ದಾನಮಾಡಿದನು. ಬ್ರಾಹ್ಮಣರಿಗೆ ವಿವಿಧ ಭಕ್ಷ್ಯ-ಪಾನೀಯಗಳನ್ನು ಒದಗಿಸಿಕೊಟ್ಟನು.
09036057a ತತಃ ಪ್ರಾಯಾದ್ಬಲೋ ರಾಜನ್ಪೂಜ್ಯಮಾನೋ ದ್ವಿಜಾತಿಭಿಃ।
09036057c ಸರಸ್ವತೀತೀರ್ಥವರಂ ನಾನಾದ್ವಿಜಗಣಾಯುತಂ।।
09036058a ಬದರೇಂಗುದಕಾಶ್ಮರ್ಯಪ್ಲಕ್ಷಾಶ್ವತ್ಥವಿಭೀತಕೈಃ।
09036058c ಪನಸೈಶ್ಚ ಪಲಾಶೈಶ್ಚ ಕರೀರೈಃ ಪೀಲುಭಿಸ್ತಥಾ।।
09036059a ಸರಸ್ವತೀತೀರರುಹೈರ್ಬಂಧನೈಃ ಸ್ಯಂದನೈಸ್ತಥಾ।
09036059c ಪರೂಷಕವನೈಶ್ಚೈವ ಬಿಲ್ವೈರಾಮ್ರಾತಕೈಸ್ತಥಾ।।
09036060a ಅತಿಮುಕ್ತಕಷಂಡೈಶ್ಚ ಪಾರಿಜಾತೈಶ್ಚ ಶೋಭಿತಂ।
09036060c ಕದಲೀವನಭೂಯಿಷ್ಠಮಿಷ್ಟಂ ಕಾಂತಂ ಮನೋರಮಂ।।
09036061a ವಾಯ್ವಂಬುಫಲಪರ್ಣಾದೈರ್ದಂತೋಲೂಖಲಿಕೈರಪಿ।
09036061c ತಥಾಶ್ಮಕುಟ್ಟೈರ್ವಾನೇಯೈರ್ಮುನಿಭಿರ್ಬಹುಭಿರ್ವೃತಂ।।
09036062a ಸ್ವಾಧ್ಯಾಯಘೋಷಸಂಘುಷ್ಟಂ ಮೃಗಯೂಥಶತಾಕುಲಂ।
09036062c ಅಹಿಂಸ್ರೈರ್ಧರ್ಮಪರಮೈರ್ನೃಭಿರತ್ಯಂತಸೇವಿತಂ।।
09036063a ಸಪ್ತಸಾರಸ್ವತಂ ತೀರ್ಥಮಾಜಗಾಮ ಹಲಾಯುಧಃ।
09036063c ಯತ್ರ ಮಂಕಣಕಃ ಸಿದ್ಧಸ್ತಪಸ್ತೇಪೇ ಮಹಾಮುನಿಃ।।
ರಾಜನ್! ದ್ವಿಜಾತಿಯವರಿಂದ ಗೌರವಿಸಲ್ಪಟ್ಟ ಹಲಾಯುಧ ಬಲರಾಮನು ಮುಂದೆ ಪ್ರಯಾಣ ಬೆಳೆಸಿ ನಾನಾ ದ್ವಿಜಗಣ ಸಹಸ್ರರಿಂದ ಕೂಡಿದ್ದ ಸರಸ್ವತಿಯ ತೀರ್ಥಗಳಲ್ಲಿಯೇ ಅತಿ ಶ್ರೇಷ್ಠವಾದ ಸಪ್ತಸಾರಸ್ವತೀ ತೀರ್ಥಕ್ಕೆ ಬಂದನು. ಆ ಕ್ಷೇತ್ರವು ಬದರ, ಇಂಗುದ, ಕಾಶ್ಮರ್ಯ, ಪ್ಲಕ್ಷ, ಅಶ್ವತ್ಥ, ವಿಭೀತಕ, ಪನಸ, ಪಲಾಶ, ಕರೀರ, ಪೀಲು, ಮೊದಲಾದ ಸರಸ್ವತೀ ತೀರದಲ್ಲಿ ಬೆಳೆಯುವ ಇನ್ನೂ ಅನೇಕ ವೃಕ್ಷಗಳಿಂದ, ಪರೂಷಕವನಗಳು, ಬಿಲ್ವ, ಆಮ್ರ, ಅತಿಮುಕ್ತ, ಪಾರಿಜಾತ ಮೊದಲಾದ ವೃಕ್ಷವನಗಳಿಂದ ಶೋಭಿತವಾಗಿದ್ದು. ಅಲ್ಲಿ ಸಾಕಷ್ಟು ಬಾಳೆಯ ವನಗಳಿದ್ದು ಸುಂದರವಾಗಿ ಮನೋರಮವಾಗಿದ್ದವು. ಅಲ್ಲಿ ಕೇವಲ ವಾಯು-ನೀರು-ಫಲ-ಪರ್ಣಗಳನ್ನು ತಿನ್ನುವ ದಂತಲೂಖಲಿಕರೂ, ಆಶ್ಮಕುಟ್ಟರೂ ಮತ್ತು ಅನೇಕ ವಾನಪ್ರಸ್ಥರೂ ಸೇರಿಕೊಂಡಿದ್ದರು. ಸ್ವಾಧ್ಯಾಯಿಗಳ ಮಂತ್ರಘೋಷಗಳಿಂದ ಮೊಳಗುತ್ತಿತ್ತು. ಜಿಂಕೆಗಳ ನೂರಾರು ಗುಂಪುಗಳು ಸುತ್ತಲೂ ಸಂಚರಿಸುತ್ತಿದ್ದವು. ಅಹಿಂಸಾವ್ರತನಿಷ್ಠ ಧರ್ಮನಿಷ್ಠ ಅನೇಕ ಜನರಿದ್ದ ಅಲ್ಲಿಯೇ ಮಹಾಮುನಿ ಸಿದ್ಧ ಮಂಕಣನು ತಪಸ್ಸು ಮಾಡುತ್ತಿದ್ದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಷಟ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ಮೂವತ್ತಾರನೇ ಅಧ್ಯಾಯವು.