034 ಬಲದೇವತಿರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಸಾರಸ್ವತ ಪರ್ವ

ಅಧ್ಯಾಯ 34

ಸಾರ

ಬಲದೇವನ ತೀರ್ಥಯಾತ್ರೆಯ ಕುರಿತು ಜನಮೇಜಯನು ವೈಶಂಪಾಯನನಲ್ಲಿ ಪ್ರಶ್ನಿಸಿದುದು (1-4). ವೈಶಂಪಾಯನನು ಬಲರಾಮನ ತೀರ್ಥಯಾತ್ರೆಯನ್ನು ವರ್ಣಿಸಿದುದು (5-32). ಬಲರಾಮನು ಭೇಟಿನೀಡಿದ ಸರಸ್ವತೀ ತೀರದ ತೀರ್ಥಗಳ ಕುರಿತು ಹೇಳಬೇಕೆಂದು ಜನಮೇಜಯನು ವೈಶಂಪಾಯನನಲ್ಲಿ ಕೇಳಿಕೊಂಡಿದುದು (33-34). ಪ್ರಭಾಸಕ್ಷೇತ್ರ ಮಹಾತ್ಮೆ (35-81).

09034001 ಜನಮೇಜಯ ಉವಾಚ 09034001a ಪೂರ್ವಮೇವ ಯದಾ ರಾಮಸ್ತಸ್ಮಿನ್ಯುದ್ಧ ಉಪಸ್ಥಿತೇ।
09034001c ಆಮಂತ್ರ್ಯ ಕೇಶವಂ ಯಾತೋ ವೃಷ್ಣಿಭಿಃ ಸಹಿತಃ ಪ್ರಭುಃ।।

ಜನಮೇಜಯನು ಹೇಳಿದನು: “ಆ ಯುದ್ಧವು ಪ್ರಾರಂಭವಾಗುವ ಮೊದಲೇ ಪ್ರಭು ರಾಮನು ಕೇಶವನೊಂದಿಗೆ ಸಮಾಲೋಚನೆಗೈದು ವೃಷ್ಣಿಗಳೊಡನೆ ಹೊರಟುಹೋಗಿದ್ದನು.

09034002a ಸಾಹಾಯ್ಯಂ ಧಾರ್ತರಾಷ್ಟ್ರಸ್ಯ ನ ಚ ಕರ್ತಾಸ್ಮಿ ಕೇಶವ।
09034002c ನ ಚೈವ ಪಾಂಡುಪುತ್ರಾಣಾಂ ಗಮಿಷ್ಯಾಮಿ ಯಥಾಗತಂ।।
09034003a ಏವಮುಕ್ತ್ವಾ ತದಾ ರಾಮೋ ಯಾತಃ ಶತ್ರುನಿಬರ್ಹಣಃ।
09034003c ತಸ್ಯ ಚಾಗಮನಂ ಭೂಯೋ ಬ್ರಹ್ಮನ್ ಶಂಸಿತುಮರ್ಹಸಿ।।

ಬ್ರಹ್ಮನ್! ಆ ಶತ್ರುನಿಬರ್ಹಣ ರಾಮನು “ಕೇಶವ! ನಾನು ಧಾರ್ತರಾಷ್ಟ್ರನಿಗೆ ಮತ್ತು ಹಾಗೆಯೇ ಪಾಂಡುಪುತ್ರರಿಗೆ ಸಹಾಯ ಮಾಡುವುದಿಲ್ಲ. ಎಲ್ಲಿಗಾದರೂ ಹೊರಟುಹೋಗುತ್ತೇನೆ!” ಎಂದು ಹೇಳಿ ಹೋಗಿದ್ದ. ಪುನಃ ಅವನ ಆಗಮನವಾಯಿತೆಂದರೆ ಅದರ ಕುರಿತು ವಿವರಿಸಿ ಹೇಳಬೇಕು.

09034004a ಆಖ್ಯಾಹಿ ಮೇ ವಿಸ್ತರತಃ ಕಥಂ ರಾಮ ಉಪಸ್ಥಿತಃ।
09034004c ಕಥಂ ಚ ದೃಷ್ಟವಾನ್ಯುದ್ಧಂ ಕುಶಲೋ ಹ್ಯಸಿ ಸತ್ತಮ।।

ಸತ್ತಮ! ನೀನು ಕುಶಲನಾಗಿರುವೆ! ನನಗೆ ವಿಸ್ತಾರವಾಗಿ ರಾಮನು ಎಲ್ಲಿಗೆ ಹೋಗಿದ್ದ ಮತ್ತು ಎಲ್ಲಿಗೆ ಬಂದ ಎನ್ನುವುದನ್ನು ಹೇಳು!”

09034005 ವೈಶಂಪಾಯನ ಉವಾಚ 09034005a ಉಪಪ್ಲವ್ಯೇ ನಿವಿಷ್ಟೇಷು ಪಾಂಡವೇಷು ಮಹಾತ್ಮಸು।
09034005c ಪ್ರೇಷಿತೋ ಧೃತರಾಷ್ಟ್ರಸ್ಯ ಸಮೀಪಂ ಮಧುಸೂದನಃ।।
09034005e ಶಮಂ ಪ್ರತಿ ಮಹಾಬಾಹೋ ಹಿತಾರ್ಥಂ ಸರ್ವದೇಹಿನಾಂ।।

ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ಉಪಪ್ಲವ್ಯದಲ್ಲಿ ವಾಸಿಸಿರುವಾಗ ಸರ್ವದೇಹಿಗಳ ಹಿತಾರ್ಥ ಶಾಂತಿಗಾಗಿ ಮಹಾಬಾಹು ಮಧುಸೂದನನನ್ನು ಧೃತರಾಷ್ಟ್ರನ ಬಳಿ ಕಳುಹಿಸಲಾಗಿತ್ತು.

09034006a ಸ ಗತ್ವಾ ಹಾಸ್ತಿನಪುರಂ ಧೃತರಾಷ್ಟ್ರಂ ಸಮೇತ್ಯ ಚ।
09034006c ಉಕ್ತವಾನ್ವಚನಂ ತಥ್ಯಂ ಹಿತಂ ಚೈವ ವಿಶೇಷತಃ।।
09034006e ನ ಚ ತತ್ಕೃತವಾನ್ರಾಜಾ ಯಥಾಖ್ಯಾತಂ ಹಿ ತೇ ಪುರಾ।।

ಅವನು ಹಸ್ತಿನಾಪುರಕ್ಕೆ ಹೋಗಿ ಧೃತರಾಷ್ಟ್ರನನ್ನು ಸಂಧಿಸಿ ತಥ್ಯವೂ ವಿಶೇಷವಾಗಿ ಹಿತವೂ ಆದ ಮಾತುಗಳನ್ನಾಡಿದನು. ನಿನಗೆ ಮೊದಲೇ ಹೇಳಿದಂತೆ ರಾಜನು ಅದರಂತೆ ಮಾಡಲಿಲ್ಲ.

09034007a ಅನವಾಪ್ಯ ಶಮಂ ತತ್ರ ಕೃಷ್ಣಃ ಪುರುಷಸತ್ತಮಃ।
09034007c ಆಗಚ್ಚತ ಮಹಾಬಾಹುರುಪಪ್ಲವ್ಯಂ ಜನಾಧಿಪ।।

ಜನಾಧಿಪ! ಅಲ್ಲಿ ಶಾಂತಿಯನ್ನು ಪಡೆಯದೇ ಮಹಾಬಾಹು ಪುರುಷಸತ್ತಮ ಕೃಷ್ಣನು ಉಪಪ್ಲವ್ಯಕ್ಕೆ ಹಿಂದಿರುಗಿದನು.

09034008a ತತಃ ಪ್ರತ್ಯಾಗತಃ ಕೃಷ್ಣೋ ಧಾರ್ತರಾಷ್ಟ್ರವಿಸರ್ಜಿತಃ।
09034008c ಅಕ್ರಿಯಾಯಾಂ ನರವ್ಯಾಘ್ರ ಪಾಂಡವಾನಿದಮಬ್ರವೀತ್।।

ನರವ್ಯಾಘ್ರ! ಧಾರ್ತರಾಷ್ಟ್ರನಿಂದ ಕಳುಹಿಸಲ್ಪಟ್ಟ ಕೃಷ್ಣನು ಹಿಂದಿರುಗಿ ಪಾಂಡವರಿಗೆ ಇದನ್ನು ಹೇಳಿದನು:

09034009a ನ ಕುರ್ವಂತಿ ವಚೋ ಮಹ್ಯಂ ಕುರವಃ ಕಾಲಚೋದಿತಾಃ।
09034009c ನಿರ್ಗಚ್ಚಧ್ವಂ ಪಾಂಡವೇಯಾಃ ಪುಷ್ಯೇಣ ಸಹಿತಾ ಮಯಾ।।

“ಕಾಲಚೋದಿತ ಕುರುಗಳು ನನ್ನ ಮಾತಿನಂತೆ ಮಾಡುವುದಿಲ್ಲ. ಪಾಂಡವೇಯರೇ! ಪುಷ್ಯನಕ್ಷತ್ರದಲ್ಲಿ ನನ್ನೊಡನೆ ಹೊರಡಿ!”

09034010a ತತೋ ವಿಭಜ್ಯಮಾನೇಷು ಬಲೇಷು ಬಲಿನಾಂ ವರಃ।
09034010c ಪ್ರೋವಾಚ ಭ್ರಾತರಂ ಕೃಷ್ಣಂ ರೌಹಿಣೇಯೋ ಮಹಾಮನಾಃ।।

ಆಗ ಸೇನಗಳ ವಿಭಜನೆಯು ನಡೆಯುತ್ತಿರಲು ಬಲಿಗಳಲ್ಲಿ ಶ್ರೇಷ್ಠ ಮಹಾಮನಸ್ವಿ ರೌಹಿಣೇಯನು ತಮ್ಮ ಕೃಷ್ಣನಿಗೆ ಹೇಳಿದನು:

09034011a ತೇಷಾಮಪಿ ಮಹಾಬಾಹೋ ಸಾಹಾಯ್ಯಂ ಮಧುಸೂದನ।
09034011c ಕ್ರಿಯತಾಮಿತಿ ತತ್ಕೃಷ್ಣೋ ನಾಸ್ಯ ಚಕ್ರೇ ವಚಸ್ತದಾ।।

“ಮಹಾಬಾಹೋ! ಮಧುಸೂದನ! ಅವರಿಗೂ ಸಹಾಯಮಾಡು!” ಕೃಷ್ಣನು ಆ ಮಾತಿನಂತೆ ಮಾಡಲಿಲ್ಲ.

09034012a ತತೋ ಮನ್ಯುಪರೀತಾತ್ಮಾ ಜಗಾಮ ಯದುನಂದನಃ।
09034012c ತೀರ್ಥಯಾತ್ರಾಂ ಹಲಧರಃ ಸರಸ್ವತ್ಯಾಂ ಮಹಾಯಶಾಃ।।
09034012e ಮೈತ್ರೇ ನಕ್ಷತ್ರಯೋಗೇ ಸ್ಮ ಸಹಿತಃ ಸರ್ವಯಾದವೈಃ।।

ಆಗ ಕೋಪಗೊಂಡ ಯದುನಂದನ ಮಹಾಯಶಸ್ವಿ ಹಲಧರನು ಅನುರಾಧಾ ನಕ್ಷತ್ರಯೋಗದಂದು ಸರ್ವ ಯಾದವರೊಡಗೂಡಿ ಸರಸ್ವತೀ ನದಿಗೆ ತೀರ್ಥಯಾತ್ರೆಗೆ ಹೊರಟನು.

09034013a ಆಶ್ರಯಾಮಾಸ ಭೋಜಸ್ತು ದುರ್ಯೋಧನಮರಿಂದಮಃ।
09034013c ಯುಯುಧಾನೇನ ಸಹಿತೋ ವಾಸುದೇವಸ್ತು ಪಾಂಡವಾನ್।।

ಅರಿಂದಮ ಭೋಜನಾದರೋ ದುರ್ಯೋಧನನನ್ನು ಆಶ್ರಯಿಸಿದನು. ಯುಯುಧಾನನ ಸಹಿತ ವಾಸುದೇವನು ಪಾಂಡವರನ್ನು ಸೇರಿದನು.

09034014a ರೌಹಿಣೇಯೇ ಗತೇ ಶೂರೇ ಪುಷ್ಯೇಣ ಮಧುಸೂದನಃ।
09034014c ಪಾಂಡವೇಯಾನ್ಪುರಸ್ಕೃತ್ಯ ಯಯಾವಭಿಮುಖಃ ಕುರೂನ್।।

ಶೂರ ರೌಹಿಣೇಯನು ಹೊರಟುಹೋದ ನಂತರ ಪುಷ್ಯಾ ನಕ್ಷತ್ರದಲ್ಲಿ ಮಧುಸೂದನನು ಪಾಂಡವೇಯರನ್ನು ಮುಂದೆಮಾಡಿಕೊಂಡು ಕುರುಗಳನ್ನು ಎದುರಿಸಿ ಹೊರಟನು.

09034015a ಗಚ್ಚನ್ನೇವ ಪಥಿಸ್ಥಸ್ತು ರಾಮಃ ಪ್ರೇಷ್ಯಾನುವಾಚ ಹ।
09034015c ಸಂಭಾರಾಂಸ್ತೀರ್ಥಯಾತ್ರಾಯಾಂ ಸರ್ವೋಪಕರಣಾನಿ ಚ।।
09034015e ಆನಯಧ್ವಂ ದ್ವಾರಕಾಯಾ ಅಗ್ನೀನ್ವೈ ಯಾಜಕಾಂಸ್ತಥಾ।।

ಹೊರಟ ರಾಮನು ದಾರಿಯಲ್ಲಿಯೇ ನಿಂತು ತೀರ್ಥಯಾತ್ರೆಗೆ ಬೇಕಾಗುವ ಸಕಲ ಸಾಮಗ್ರಿಗಳನ್ನೂ, ಉಪಕರಣಗಳನ್ನೂ, ಅಗ್ನಿಗಳನ್ನೂ, ಯಾಜಕರನ್ನೂ ದ್ವಾರಕೆಯಿಂದ ತರಿಸಿಕೊಂಡನು.

09034016a ಸುವರ್ಣಂ ರಜತಂ ಚೈವ ಧೇನೂರ್ವಾಸಾಂಸಿ ವಾಜಿನಃ।
09034016c ಕುಂಜರಾಂಶ್ಚ ರಥಾಂಶ್ಚೈವ ಖರೋಷ್ಟ್ರಂ ವಾಹನಾನಿ ಚ।।
09034016e ಕ್ಷಿಪ್ರಮಾನೀಯತಾಂ ಸರ್ವಂ ತೀರ್ಥಹೇತೋಃ ಪರಿಚ್ಚದಂ।।

ಚಿನ್ನ, ಬೆಳ್ಳಿ, ಗೋವುಗಳು, ವಸ್ತ್ರಗಳು, ಕುದುರೆಗಳು, ಅನೆಗಳು, ರಥಗಳು, ಒಂಟೆಗಳು ಮತ್ತು ವಾಹನಗಳು – ತೀರ್ಥಯಾತ್ರೆಗೆಂದು ಎಲ್ಲವನ್ನೂ ಬೇಗ ಸೇವಕರಿಂದ ತರಿಸಿಕೊಂಡನು.

09034017a ಪ್ರತಿಸ್ರೋತಃ ಸರಸ್ವತ್ಯಾ ಗಚ್ಚಧ್ವಂ ಶೀಘ್ರಗಾಮಿನಃ।
09034017c ಋತ್ವಿಜಶ್ಚಾನಯಧ್ವಂ ವೈ ಶತಶಶ್ಚ ದ್ವಿಜರ್ಷಭಾನ್।।

ಸರಸ್ವತೀ ನದಿಯ ತೀರಕ್ಕೆ ಶೀಘ್ರವಾಗಿ ಪ್ರಯಾಣಿಸಬೇಕೆಂದೂ ಅದಕ್ಕೆ ನೂರಾರು ದ್ವಿಜರ್ಷಭರನ್ನೂ ಋತ್ವಿಜರನ್ನೂ ಕರೆತರಬೇಕೆಂದು ಆಜ್ಞೆಯಿತ್ತನು.

09034018a ಏವಂ ಸಂದಿಶ್ಯ ತು ಪ್ರೇಷ್ಯಾನ್ಬಲದೇವೋ ಮಹಾಬಲಃ।
09034018c ತೀರ್ಥಯಾತ್ರಾಂ ಯಯೌ ರಾಜನ್ಕುರೂಣಾಂ ವೈಶಸೇ ತದಾ।।

ರಾಜನ್! ಹೀಗೆ ಕುರುಗಳ ಯುದ್ಧವು ನಡೆಯುವಾಗ ಮಹಾಬಲ ಬಲದೇವನು ಸೇವಕರಿಗೆ ಆಜ್ಞೆಯನ್ನಿತ್ತು ತೀರ್ಥಯಾತ್ರೆಗೆ ಹೊರಟನು.

09034018e ಸರಸ್ವತೀಂ ಪ್ರತಿಸ್ರೋತಃ ಸಮುದ್ರಾದಭಿಜಗ್ಮಿವಾನ್।।
09034019a ಋತ್ವಿಗ್ಭಿಶ್ಚ ಸುಹೃದ್ಭಿಶ್ಚ ತಥಾನ್ಯೈರ್ದ್ವಿಜಸತ್ತಮೈಃ।
09034019c ರಥೈರ್ಗಜೈಸ್ತಥಾಶ್ವೈಶ್ಚ ಪ್ರೇಷ್ಯೈಶ್ಚ ಭರತರ್ಷಭ।।
09034019e ಗೋಖರೋಷ್ಟ್ರಪ್ರಯುಕ್ತೈಶ್ಚ ಯಾನೈಶ್ಚ ಬಹುಭಿರ್ವೃತಃ।।

ಭರತರ್ಷಭ! ಅವನು ಋತ್ವಿಜರು, ಸುಹೃದಯರು ಮತ್ತು ಅನ್ಯ ದ್ವಿಜಸತ್ತಮರೊಡನೆ ರಥ-ಆನೆ-ಕುದುರೆ-ಸೇವಕರೊಡನೆ, ಮತ್ತು ಅನೇಕ ಎತ್ತು, ಕತ್ತೆ ಮತ್ತು ಒಂಟೆಗಳನ್ನು ಕಟ್ಟಿದ್ದ ಯಾನಗಳಿಂದ ಪರಿವೃತನಾಗಿ ಸರಸ್ವತಿಯ ಪ್ರತಿಸ್ರೋತ ಸಮುದ್ರದ ಕಡೆ ಪ್ರಯಾಣಿಸಿದನು.

09034020a ಶ್ರಾಂತಾನಾಂ ಕ್ಲಾಂತವಪುಷಾಂ ಶಿಶೂನಾಂ ವಿಪುಲಾಯುಷಾಂ।
09034020c ತಾನಿ ಯಾನಾನಿ ದೇಶೇಷು ಪ್ರತೀಕ್ಷ್ಯಂತೇ ಸ್ಮ ಭಾರತ।।
09034020e ಬುಭುಕ್ಷಿತಾನಾಮರ್ಥಾಯ ಕ್ಷಮನ್ನಂ ಸಮಂತತಃ।।

ಭಾರತ! ಯಾವ ದೇಶಗಳಲ್ಲಿ ಅವನು ಹೋದನೋ ಅಲ್ಲಿ ರೋಗಿಗಳಿಗೂ, ವೃದ್ಧರಿಗೂ, ಶಿಶುಗಳಿಗೂ, ಅಂಗವಿಕಲರಿಗೂ, ಬಳಲಿದವರಿಗೂ ಕೊಡಲು ಬೇಕಾದ ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದನು.

09034021a ಯೋ ಯೋ ಯತ್ರ ದ್ವಿಜೋ ಭೋಕ್ತುಂ ಕಾಮಂ ಕಾಮಯತೇ ತದಾ।
09034021c ತಸ್ಯ ತಸ್ಯ ತು ತತ್ರೈವಮುಪಜಹ್ರುಸ್ತದಾ ನೃಪ।।

ನೃಪ! ಎಲ್ಲೆಲ್ಲಿ ದ್ವಿಜರು ಯಾವುದನ್ನು ಬಯಸುತ್ತಿದ್ದರೋ ಅದನ್ನೇ ಅವರಿಗೆ ಅವನು ಕೊಡುತ್ತಿದ್ದನು.

09034022a ತತ್ರ ಸ್ಥಿತಾ ನರಾ ರಾಜನ್ರೌಹಿಣೇಯಸ್ಯ ಶಾಸನಾತ್।
09034022c ಭಕ್ಷ್ಯಪೇಯಸ್ಯ ಕುರ್ವಂತಿ ರಾಶೀಂಸ್ತತ್ರ ಸಮಂತತಃ।।

ರಾಜನ್! ಅವನು ತಂಗಿದಲ್ಲೆಲ್ಲಾ ರೌಹಿಣೇಯನ ಶಾಸನದಂತೆ ಎಲ್ಲರಿಗೂ ಭೋಜನ-ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು.

09034023a ವಾಸಾಂಸಿ ಚ ಮಹಾರ್ಹಾಣಿ ಪರ್ಯಂಕಾಸ್ತರಣಾನಿ ಚ।
09034023c ಪೂಜಾರ್ಥಂ ತತ್ರ ಕ್ಷ್ಲಾನಿ ವಿಪ್ರಾಣಾಂ ಸುಖಮಿಚ್ಚತಾಂ।।

ಸುಖಾಪೇಕ್ಷೀ ವಿಪ್ರರ ಸತ್ಕಾರಾರ್ಥವಾಗಿ ಅಲ್ಲಿ ಮಹಾಬೆಲೆಯ ವಸ್ತ್ರಗಳ ಮತ್ತು ಮಂಚ ಮೊದಲಾದವುಗಳ ವ್ಯವಸ್ಥೆಗಳನ್ನೂ ಮಾಡಲಾಗಿತ್ತು.

09034024a ಯತ್ರ ಯಃ ಸ್ವಪತೇ ವಿಪ್ರಃ ಕ್ಷತ್ರಿಯೋ ವಾಪಿ ಭಾರತ।
09034024c ತತ್ರ ತತ್ರ ತು ತಸ್ಯೈವ ಸರ್ವಂ ಕ್ಷ್ಲಮದೃಶ್ಯತ।।

ಭಾರತ! ಎಲ್ಲೆಲ್ಲಿ ವಿಪ್ರ-ಕ್ಷತ್ರಿಯರು ಮಲಗುತ್ತಿದ್ದರೋ ಅಲ್ಲಲ್ಲಿ ಅವನು ಸರ್ವ ವ್ಯವಸ್ಥೆಗಳನ್ನೂ ಮಾಡಿಸಿದ್ದುದು ಕಾಣುತ್ತಿತ್ತು.

09034025a ಯಥಾಸುಖಂ ಜನಃ ಸರ್ವಸ್ತಿಷ್ಠತೇ ಯಾತಿ ವಾ ತದಾ।
09034025c ಯಾತುಕಾಮಸ್ಯ ಯಾನಾನಿ ಪಾನಾನಿ ತೃಷಿತಸ್ಯ ಚ।।

ಜನರಿಗೆ ಯಥಾಸುಖವಾಗಿ ಎಲ್ಲವೂ ಅಲ್ಲಿ ಸಿದ್ಧವಾಗಿದ್ದವು. ಪ್ರಯಾಣಿಕರಿಗೆ ವಾಹನಗಳೂ ಬಾಯಾರಿದವರಿಗೆ ಪಾನೀಯಗಳೂ ದೊರಕುತ್ತಿದ್ದವು.

09034026a ಬುಭುಕ್ಷಿತಸ್ಯ ಚಾನ್ನಾನಿ ಸ್ವಾದೂನಿ ಭರತರ್ಷಭ।
09034026c ಉಪಜಹ್ರುರ್ನರಾಸ್ತತ್ರ ವಸ್ತ್ರಾಣ್ಯಾಭರಣಾನಿ ಚ।।

ಭರತರ್ಷಭ! ಹಸಿದು ಬಂದವರಿಗೆ ಸ್ವಾದಿಷ್ಟ ಭೋಜನ ಮತ್ತು ಅತಿಥಿಗಳಿಗೆ ವಸ್ತ್ರಾಭರಣ ಉಡುಗರೆಗಳೂ ದೊರೆಯುತ್ತಿದ್ದವು.

09034027a ಸ ಪಂಥಾಃ ಪ್ರಬಭೌ ರಾಜನ್ಸರ್ವಸ್ಯೈವ ಸುಖಾವಹಃ।
09034027c ಸ್ವರ್ಗೋಪಮಸ್ತದಾ ವೀರ ನರಾಣಾಂ ತತ್ರ ಗಚ್ಚತಾಂ।।

ರಾಜನ್! ವೀರ! ಅವನೊಂದಿಗೆ ಹೋಗಿದ್ದ ಎಲ್ಲರಿಗೂ ಯಾತ್ರೆಯು ಸ್ವರ್ಗದಂತೆ ಸುಖಮಯವಾಗಿಯೇ ಇದ್ದಿತು.

09034028a ನಿತ್ಯಪ್ರಮುದಿತೋಪೇತಃ ಸ್ವಾದುಭಕ್ಷಃ ಶುಭಾನ್ವಿತಃ।
09034028c ವಿಪಣ್ಯಾಪಣಪಣ್ಯಾನಾಂ ನಾನಾಜನಶತೈರ್ವೃತಃ।।
09034028e ನಾನಾದ್ರುಮಲತೋಪೇತೋ ನಾನಾರತ್ನವಿಭೂಷಿತಃ।।

ನಿತ್ಯವೂ ಪ್ರಮೋದವಾಗಿತ್ತು. ಶುಭ-ಸ್ವಾದ ಭಕ್ಷಗಳಿದ್ದವು. ನೂರಾರು ಜನರಿಂದ ಮುತ್ತಲ್ಪಟ್ಟ ನಾನಾತರಹದ ಅಂಗಡಿಗಳೂ ಇದ್ದವು. ಆ ಮಾರ್ಗವು ನಾನಾ ವೃಕ್ಷ-ಲತೆಗಳಿಂದಲೂ ನಾನಾ ರತ್ನಗಳಿಂದಲೂ ವಿಭೂಷಿತವಾಗಿತ್ತು.

09034029a ತತೋ ಮಹಾತ್ಮಾ ನಿಯಮೇ ಸ್ಥಿತಾತ್ಮಾ ಪುಣ್ಯೇಷು ತೀರ್ಥೇಷು ವಸೂನಿ ರಾಜನ್।
09034029c ದದೌ ದ್ವಿಜೇಭ್ಯಃ ಕ್ರತುದಕ್ಷಿಣಾಶ್ಚ ಯದುಪ್ರವೀರೋ ಹಲಭೃತ್ಪ್ರತೀತಃ।।

ರಾಜನ್! ಯದುಪ್ರವೀರ ಮಹಾತ್ಮ ಹಲಭೃತನೆಂದು ಪ್ರತೀತನಾಗಿದ್ದ ರಾಮನು ಪುಣ್ಯತೀರ್ಥಗಳಲ್ಲಿ ನಿಯಮಸ್ಥನಾಗಿ ಉಳಿಯುತ್ತಾ ದ್ವಿಜರಿಗೆ ಯಜ್ಞದಕ್ಷಿಣೆಗಳನ್ನೂ ದಾನಮಾಡಿದನು.

09034030a ದೋಗ್ಧ್ರೀಶ್ಚ ಧೇನೂಶ್ಚ ಸಹಸ್ರಶೋ ವೈ ಸುವಾಸಸಃ ಕಾಂಚನಬದ್ಧಶೃಂಗೀಃ।
09034030c ಹಯಾಂಶ್ಚ ನಾನಾವಿಧದೇಶಜಾತಾನ್ ಯಾನಾನಿ ದಾಸೀಶ್ಚ ತಥಾ ದ್ವಿಜೇಭ್ಯಃ।।
09034031a ರತ್ನಾನಿ ಮುಕ್ತಾಮಣಿವಿದ್ರುಮಂ ಚ ಶೃಂಗೀಸುವರ್ಣಂ ರಜತಂ ಚ ಶುಭ್ರಂ।
09034031c ಅಯಸ್ಮಯಂ ತಾಮ್ರಮಯಂ ಚ ಭಾಂಡಂ ದದೌ ದ್ವಿಜಾತಿಪ್ರವರೇಷು ರಾಮಃ।।

ರಾಮನು ದ್ವಿಜಾತಿಪ್ರವರರಿಗೆ ವಸ್ತ್ರಗಳನ್ನು ಹೊದಿಸಿದ್ದ, ಕೊಂಬುಗಳಿಗೆ ಸುವರ್ಣವನ್ನು ಕಟ್ಟಿದ್ದ ಸಾವಿರಾರು ಹಾಲುಕರೆಯುವ ಹಸುಗಳನ್ನೂ, ನಾನಾ ದೇಶಗಳಲ್ಲಿ ಹುಟ್ಟಿದ್ದ ಕುದುರೆಗಳನ್ನೂ, ರಥಗಳನ್ನೂ, ದಾಸಿಯರನ್ನೂ, ರತ್ನ-ಮಣಿ-ಹವಳಗಳನ್ನೂ, ಶ್ರೇಷ್ಠ ಸುವರ್ಣವನ್ನೂ, ಪರಿಶುದ್ಧ ಬೆಳ್ಳಿಯನ್ನೂ, ಉಕ್ಕಿನ ಮತ್ತು ತಾಮ್ರದ ಪಾತ್ರೆಗಳನ್ನೂ ನೀಡಿದನು.

09034032a ಏವಂ ಸ ವಿತ್ತಂ ಪ್ರದದೌ ಮಹಾತ್ಮಾ ಸರಸ್ವತೀತೀರ್ಥವರೇಷು ಭೂರಿ।
09034032c ಯಯೌ ಕ್ರಮೇಣಾಪ್ರತಿಮಪ್ರಭಾವಸ್ ತತಃ ಕುರುಕ್ಷೇತ್ರಮುದಾರವೃತ್ತಃ।।

ಹೀಗೆ ಆ ಮಹಾತ್ಮನು ಸರಸ್ವತೀ ನದಿಯ ಶ್ರೇಷ್ಠ ತೀರ್ಥಗಳಲ್ಲಿ ಅಪಾರ ಧನವನ್ನು ದಕ್ಷಿಣೆಗಳನ್ನಾಗಿತ್ತನು. ಆ ಅಪ್ರತಿಮ ಪ್ರಭಾವಿಯು ಕ್ರಮೇಣವಾಗಿ ಕುರುಕ್ಷೇತ್ರಕ್ಕೂ ಆಗಮಿಸಿದನು.”

09034033 ಜನಮೇಜಯ ಉವಾಚ 09034033a ಸಾರಸ್ವತಾನಾಂ ತೀರ್ಥಾನಾಂ ಗುಣೋತ್ಪತ್ತಿಂ ವದಸ್ವ ಮೇ।
09034033c ಫಲಂ ಚ ದ್ವಿಪದಾಂ ಶ್ರೇಷ್ಠ ಕರ್ಮನಿರ್ವೃತ್ತಿಮೇವ ಚ।।

ಜನಮೇಜಯನು ಹೇಳಿದನು: “ದ್ವಿಪದರಲ್ಲಿ ಶ್ರೇಷ್ಠ! ಸರಸ್ವತೀ ತೀರದಲ್ಲಿರುವ ತೀರ್ಥಗಳ ಗುಣ, ಉತ್ಪತ್ತಿ ಮತ್ತು ಅಲ್ಲಿ ಕರ್ಮನಿವೃತ್ತಿಗಳಿಂದುಂಟಾಗುವ ಫಲಗಳ ಕುರಿತು ನನಗೆ ಹೇಳು.

09034034a ಯಥಾಕ್ರಮಂ ಚ ಭಗವಂಸ್ತೀರ್ಥಾನಾಮನುಪೂರ್ವಶಃ।
09034034c ಬ್ರಹ್ಮನ್ಬ್ರಹ್ಮವಿದಾಂ ಶ್ರೇಷ್ಠ ಪರಂ ಕೌತೂಹಲಂ ಹಿ ಮೇ।।

ಬ್ರಹ್ಮನ್! ಬ್ರಹ್ಮವಿದರಲ್ಲಿ ಶ್ರೇಷ್ಠ! ಭಗವನ್! ತೀರ್ಥಗಳ ಕುತಿತು ಯಥಾಕ್ರಮವಾಗಿ ಮೊದಲಿನಿಂದ ಹೇಳು. ಅದರಲ್ಲಿ ನನಗೆ ಅತ್ಯಂತ ಕುತೂಹಲವಿದೆ.”

09034035 ವೈಶಂಪಾಯನ ಉವಾಚ 09034035a ತೀರ್ಥಾನಾಂ ವಿಸ್ತರಂ ರಾಜನ್ಗುಣೋತ್ಪತ್ತಿಂ ಚ ಸರ್ವಶಃ।
09034035c ಮಯೋಚ್ಯಮಾನಾಂ ಶೃಣು ವೈ ಪುಣ್ಯಾಂ ರಾಜೇಂದ್ರ ಕೃತ್ಸ್ನಶಃ।।

ವೈಶಂಪಾಯನನು ಹೇಳಿದನು: “ರಾಜನ್! ತೀರ್ಥಗಳ ಗುಣೋತ್ಪತ್ತಿ ಎಲ್ಲವನ್ನೂ ವಿಸ್ತಾರವಾಗಿ ನಾನು ಹೇಳುವುದನ್ನು ಕೇಳು. ರಾಜೇಂದ್ರ! ಇವುಗಳೆಲ್ಲವು ಪುಣ್ಯಕರವಾದವು!

09034036a ಪೂರ್ವಂ ಮಹಾರಾಜ ಯದುಪ್ರವೀರ ಋತ್ವಿಕ್ಸುಹೃದ್ವಿಪ್ರಗಣೈಶ್ಚ ಸಾರ್ಧಂ।
09034036c ಪುಣ್ಯಂ ಪ್ರಭಾಸಂ ಸಮುಪಾಜಗಾಮ ಯತ್ರೋಡುರಾಡ್ಯಕ್ಷ್ಮಣಾ ಕ್ಲಿಶ್ಯಮಾನಃ।।
09034037a ವಿಮುಕ್ತಶಾಪಃ ಪುನರಾಪ್ಯ ತೇಜಃ ಸರ್ವಂ ಜಗದ್ಭಾಸಯತೇ ನರೇಂದ್ರ।
09034037c ಏವಂ ತು ತೀರ್ಥಪ್ರವರಂ ಪೃಥಿವ್ಯಾಂ ಪ್ರಭಾಸನಾತ್ತಸ್ಯ ತತಃ ಪ್ರಭಾಸಃ।।

ಮೊದಲು ಯದುಪ್ರವೀರನು ಋತ್ವಿಜ-ಸುಹೃದ್ಗಣಗಳೊಂದಿಗೆ ಪುಣ್ಯ ಪ್ರಭಾಸಕ್ಷೇತ್ರಕ್ಕೆ ಹೋದನು. ನರೇಂದ್ರ! ಅಲ್ಲಿ ಯಕ್ಷ್ಮ(ಕ್ಷಯರೋಗ) ದಿಂದ ಪೀಡಿತ ಉಡುರಾಜನು ಶಾಪದಿಂದ ವಿಮುಕ್ತನಾಗಿ ಪುನಃ ತೇಜಸ್ಸನ್ನು ಪಡೆದು ಜಗತ್ತೆಲ್ಲವನ್ನೂ ಬೆಳಗಿಸಿದನು. ಅವನಿಗೆ ಪ್ರಭೆಯನ್ನು ನೀಡಿದ ಇದು ಭೂಮಿಯಲ್ಲಿ ಪ್ರಭಾಸವೆಂಬ ಶ್ರೇಷ್ಠತೀರ್ಥವೆನಿಸಿಕೊಂಡಿತು.”

09034038 ಜನಮೇಜಯ ಉವಾಚ 09034038a ಕಿಮರ್ಥಂ ಭಗವಾನ್ಸೋಮೋ ಯಕ್ಷ್ಮಣಾ ಸಮಗೃಹ್ಯತ।
09034038c ಕಥಂ ಚ ತೀರ್ಥಪ್ರವರೇ ತಸ್ಮಿಂಶ್ಚಂದ್ರೋ ನ್ಯಮಜ್ಜತ।।

ಜನಮೇಜಯನು ಹೇಳಿದನು: “ಭಗವಾನ್ ಸೋಮನಿಗೆ ಯಕ್ಷ್ಮರೋಗವು ಹೇಗೆ ಬಂದಿತು? ಆ ತೀರ್ಥಪ್ರವರದಲ್ಲಿ ಚಂದ್ರನು ಹೇಗೆ ಮುಳುಗಿ ಸ್ನಾನಮಾಡಿದನು?

09034039a ಕಥಮಾಪ್ಲುತ್ಯ ತಸ್ಮಿಂಸ್ತು ಪುನರಾಪ್ಯಾಯಿತಃ ಶಶೀ।
09034039c ಏತನ್ಮೇ ಸರ್ವಮಾಚಕ್ಷ್ವ ವಿಸ್ತರೇಣ ಮಹಾಮುನೇ।।

ಮಹಾಮುನೇ! ಅದರಲ್ಲಿ ಮುಳುಗಿದ ಶಶಿಯು ಪುನಃ ಹೇಗೆ ಬೆಳೆದನು? ಇದನ್ನು ವಿಸ್ತಾರವಾಗಿ ನನಗೆ ಹೇಳು.”

09034040 ವೈಶಂಪಾಯನ ಉವಾಚ 09034040a ದಕ್ಷಸ್ಯ ತನಯಾ ಯಾಸ್ತಾಃ ಪ್ರಾದುರಾಸನ್ವಿಶಾಂ ಪತೇ।
09034040c ಸ ಸಪ್ತವಿಂಶತಿಂ ಕನ್ಯಾ ದಕ್ಷಃ ಸೋಮಾಯ ವೈ ದದೌ।।

ವೈಶಂಪಾಯನನು ಹೇಳಿದನು: “ವಿಶಾಂಪತೇ! ದಕ್ಷನಿಗೆ ಅನೇಕ ಕನ್ಯೆಯರಿದ್ದರು. ಅವರಲ್ಲಿ ಇಪ್ಪತ್ತೇಳು ಕನ್ಯೆಯರನ್ನು ದಕ್ಷನು ಸೋಮನಿಗೆ ಕೊಟ್ಟನು.

09034041a ನಕ್ಷತ್ರಯೋಗನಿರತಾಃ ಸಂಖ್ಯಾನಾರ್ಥಂ ಚ ಭಾರತ।
09034041c ಪತ್ನ್ಯೋ ವೈ ತಸ್ಯ ರಾಜೇಂದ್ರ ಸೋಮಸ್ಯ ಶುಭಲಕ್ಷಣಾಃ।।

ಭಾರತ! ರಾಜೇಂದ್ರ! ಗಣನೆಯ ಸಲುವಾಗಿ ಸೋಮನ ಆ ಶುಭಲಕ್ಷಣ ಪತ್ನಿಯರು ನಕ್ಷತ್ರಯೋಗನಿರತರಾಗಿದ್ದರು.

09034042a ತಾಸ್ತು ಸರ್ವಾ ವಿಶಾಲಾಕ್ಷ್ಯೋ ರೂಪೇಣಾಪ್ರತಿಮಾ ಭುವಿ।
09034042c ಅತ್ಯರಿಚ್ಯತ ತಾಸಾಂ ತು ರೋಹಿಣೀ ರೂಪಸಂಪದಾ।।

ಆ ವಿಶಾಲಾಕ್ಷಿಯರೆಲ್ಲರೂ ಭುವಿಯಲ್ಲಿಯೇ ಅಪ್ರತಿಮ ರೂಪವುಳ್ಳವರಾಗಿದ್ದರು. ಅವರೆಲ್ಲರಲ್ಲಿ ರೋಹಿಣಿಯು ಅತ್ಯಂತ ರೂಪಸಂಪದೆಯಾಗಿದ್ದಳು.

09034043a ತತಸ್ತಸ್ಯಾಂ ಸ ಭಗವಾನ್ಪ್ರೀತಿಂ ಚಕ್ರೇ ನಿಶಾಕರಃ।
09034043c ಸಾಸ್ಯ ಹೃದ್ಯಾ ಬಭೂವಾಥ ತಸ್ಮಾತ್ತಾಂ ಬುಭುಜೇ ಸದಾ।।

ಆದುದರಿಂದ ಭಗವಾನ್ ನಿಶಾಕರನು ಅವಳಲ್ಲಿಯೇ ಹೆಚ್ಚು ಪ್ರೀತಿಯನ್ನಿಟ್ಟಿದ್ದನು. ಅವಳೂ ಕೂಡ ಅವನ ಹೃದಯ ವಲ್ಲಭೆಯಾಗಿದ್ದಳು. ಅವನು ಸದಾ ಅವಳೊಂದಿಗೇ ಭೋಗಿಸುತ್ತಿದ್ದನು.

09034044a ಪುರಾ ಹಿ ಸೋಮೋ ರಾಜೇಂದ್ರ ರೋಹಿಣ್ಯಾಮವಸಚ್ಚಿರಂ।
09034044c ತತೋಽಸ್ಯ ಕುಪಿತಾನ್ಯಾಸನ್ನಕ್ಷತ್ರಾಣಿ ಮಹಾತ್ಮನಃ।।

ರಾಜೇಂದ್ರ! ಮೊದಲಿನಿಂದಲೂ ಸೋಮನು ರೋಹಿಣಿಯಲ್ಲಿಯೇ ವಾಸಿಸುತ್ತಿದ್ದನು. ಇದರಿಂದ ನಕ್ಷತ್ರಗಳು ಆ ಮಹಾತ್ಮನ ಮೇಲೆ ಕುಪಿತರಾದರು.

09034045a ತಾ ಗತ್ವಾ ಪಿತರಂ ಪ್ರಾಹುಃ ಪ್ರಜಾಪತಿಮತಂದ್ರಿತಾಃ।
09034045c ಸೋಮೋ ವಸತಿ ನಾಸ್ಮಾಸು ರೋಹಿಣೀಂ ಭಜತೇ ಸದಾ।।

ಆ ಅತಂದ್ರಿತರು ತಂದೆ ಪ್ರಜಾಪತಿಯಲ್ಲಿಗೆ ಹೋಗಿ ಹೇಳಿದರು: “ಸೋಮನು ನಮ್ಮಲ್ಲಿ ವಾಸಿಸುವುದೇ ಇಲ್ಲ. ಸದಾ ರೋಹಿಣಿಯನ್ನೇ ಪ್ರೀತಿಸುತ್ತಾನೆ.

09034046a ತಾ ವಯಂ ಸಹಿತಾಃ ಸರ್ವಾಸ್ತ್ವತ್ಸಕಾಶೇ ಪ್ರಜೇಶ್ವರ।
09034046c ವತ್ಸ್ಯಾಮೋ ನಿಯತಾಹಾರಾಸ್ತಪಶ್ಚರಣತತ್ಪರಾಃ।।

ನಾವೆಲ್ಲರೂ ನಿನ್ನ ಬಳಿಯಲ್ಲಿಯೇ ಒಟ್ಟಿಗೇ ಇದ್ದುಬಿಡುತ್ತೇವೆ. ನಿನ್ನ ಚರಣತತ್ಪರರಾಗಿ ನಿಯತಾಹಾರದಿಂದ ತಪಸ್ಸನ್ನು ಮಾಡುತ್ತಾ ವಾಸಿಸುತ್ತೇವೆ.”

09034047a ಶ್ರುತ್ವಾ ತಾಸಾಂ ತು ವಚನಂ ದಕ್ಷಃ ಸೋಮಮಥಾಬ್ರವೀತ್।
09034047c ಸಮಂ ವರ್ತಸ್ವ ಭಾರ್ಯಾಸು ಮಾ ತ್ವಾಧರ್ಮೋ ಮಹಾನ್ಸ್ಪೃಶೇತ್।।

ಅವರ ಆ ಮಾತನ್ನು ಕೇಳಿದ ದಕ್ಷನು ಸೋಮನಿಗೆ ಹೇಳಿದನು: “ಭಾರ್ಯೆಯರಲ್ಲಿ ಸಮನಾಗಿ ವರ್ತಿಸು. ಇಲ್ಲದಿದ್ದರೆ ಮಹಾ ಅಧರ್ಮವು ತಾಗೀತು!”

09034048a ತಾಶ್ಚ ಸರ್ವಾಬ್ರವೀದ್ದಕ್ಷೋ ಗಚ್ಚಧ್ವಂ ಸೋಮಮಂತಿಕಾತ್।
09034048c ಸಮಂ ವತ್ಸ್ಯತಿ ಸರ್ವಾಸು ಚಂದ್ರಮಾ ಮಮ ಶಾಸನಾತ್।।

ಅವರೆಲ್ಲರಿಗೂ ದಕ್ಷನು ಹೇಳಿದನು: “ಸೋಮನ ಬಳಿ ಹೋಗಿ. ನನ್ನ ಶಾಸನದಂತೆ ಅವನು ಎಲ್ಲರಲ್ಲಿಯೂ ಸಮನಾಗಿ ವರ್ತಿಸುತ್ತಾನೆ.”

09034049a ವಿಸೃಷ್ಟಾಸ್ತಾಸ್ತದಾ ಜಗ್ಮುಃ ಶೀತಾಂಶುಭವನಂ ತದಾ।
09034049c ತಥಾಪಿ ಸೋಮೋ ಭಗವಾನ್ಪುನರೇವ ಮಹೀಪತೇ।।
09034049e ರೋಹಿಣೀಂ ನಿವಸತ್ಯೇವ ಪ್ರೀಯಮಾಣೋ ಮುಹುರ್ಮುಹುಃ।।

ಬೀಳ್ಕೊಡಲ್ಪಟ್ಟ ಅವರು ನಂತರ ಶೀತಾಂಶುವಿನ ಭವನಕ್ಕೆ ತೆರಳಿದರು. ಆದರೂ ಕೂಡ ಮಹೀಪತೇ! ಭಗವಾನ್ ಸೋಮನು ಮೊದಲಿನಂತೆ ರೋಹಿಣಿಯೊಡನೆಯೇ ವಾಸಿಸುತ್ತಿದ್ದನು ಮತ್ತು ಪುನಃ ಪುನಃ ಅವಳನ್ನೇ ಪ್ರೀತಿಸುತ್ತಿದ್ದನು.

09034050a ತತಸ್ತಾಃ ಸಹಿತಾಃ ಸರ್ವಾ ಭೂಯಃ ಪಿತರಮಬ್ರುವನ್।
09034050c ತವ ಶುಶ್ರೂಷಣೇ ಯುಕ್ತಾ ವತ್ಸ್ಯಾಮೋ ಹಿ ತವಾಶ್ರಮೇ।।
09034050e ಸೋಮೋ ವಸತಿ ನಾಸ್ಮಾಸು ನಾಕರೋದ್ವಚನಂ ತವ।।

ಆಗ ಅವರೆಲ್ಲರೂ ಒಟ್ಟಿಗೇ ಪುನಃ ತಂದೆಯಲ್ಲಿ ಹೇಳಿಕೊಂಡರು: “ನಿನ್ನ ಶುಶ್ರೂಷಣೆಯಲ್ಲಿ ನಿನ್ನ ಆಶ್ರಮದಲ್ಲಿಯೇ ವಾಸಿಸುತ್ತೇವೆ. ಸೋಮನು ನಮ್ಮೊಡನೆ ವಾಸಿಸುತ್ತಿಲ್ಲ. ನಿನ್ನ ವಚನದಂತೆ ಅವನು ಮಾಡುತ್ತಿಲ್ಲ.”

09034051a ತಾಸಾಂ ತದ್ವಚನಂ ಶ್ರುತ್ವಾ ದಕ್ಷಃ ಸೋಮಮಥಾಬ್ರವೀತ್।
09034051c ಸಮಂ ವರ್ತಸ್ವ ಭಾರ್ಯಾಸು ಮಾ ತ್ವಾಂ ಶಪ್ಸ್ಯೇ ವಿರೋಚನ।।

ಅವರ ಆ ಮಾತನ್ನು ಕೇಳಿ ದಕ್ಷನು ಸೋಮನಿಗೆ ಹೇಳಿದನು: “ವಿರೋಚನ! ಭಾರ್ಯೆಯರಲ್ಲಿ ಸಮವಾಗಿ ವರ್ತಿಸು. ಇಲ್ಲವಾದರೆ ನಾನು ನಿನ್ನನ್ನು ಶಪಿಸುತ್ತೇನೆ.”

09034052a ಅನಾದೃತ್ಯ ತು ತದ್ವಾಕ್ಯಂ ದಕ್ಷಸ್ಯ ಭಗವಾನ್ ಶಶೀ।
09034052c ರೋಹಿಣ್ಯಾ ಸಾರ್ಧಮವಸತ್ತತಸ್ತಾಃ ಕುಪಿತಾಃ ಪುನಃ।।

ದಕ್ಷನ ಆ ಮಾತನ್ನು ಅನಾದರಿಸಿ ಭಗವಾನ್ ಶಶಿಯು ರೋಹಿಣಿಯ ಜೊತೆಯಲ್ಲಿಯೇ ವಾಸಿಸುತ್ತಿದ್ದನು. ಇದರಿಂದ ಅವರು ಪುನಃ ಕುಪಿತರಾದರು.

09034053a ಗತ್ವಾ ಚ ಪಿತರಂ ಪ್ರಾಹುಃ ಪ್ರಣಮ್ಯ ಶಿರಸಾ ತದಾ।
09034053c ಸೋಮೋ ವಸತಿ ನಾಸ್ಮಾಸು ತಸ್ಮಾನ್ನಃ ಶರಣಂ ಭವ।।

ತಂದೆಯಲ್ಲಿಗೆ ಹೋಗಿ ಶಿರಬಾಗಿ ನಮಸ್ಕರಿಸಿ ಹೇಳಿದರು: “ಸೋಮನು ನಮ್ಮೊಡನೆ ವಾಸಿಸುತ್ತಿಲ್ಲ. ಆದುದರಿಂದ ನಮಗೆ ನೀನೇ ಶರಣು.

09034054a ರೋಹಿಣ್ಯಾಮೇವ ಭಗವನ್ಸದಾ ವಸತಿ ಚಂದ್ರಮಾಃ।
09034054c ತಸ್ಮಾನ್ನಸ್ತ್ರಾಹಿ ಸರ್ವಾ ವೈ ಯಥಾ ನಃ ಸೋಮ ಆವಿಶೇತ್।।

ಭಗವನ್! ಚಂದ್ರಮನು ಸದಾ ರೋಹಿಣಿಯಲ್ಲಿಯೇ ವಾಸಿಸುತ್ತಾನೆ. ಸೋಮನು ನಮ್ಮನ್ನು ಸ್ವೀಕರಿಸುವಂತೆ ಮಾಡಿ ನೀನೇ ನಮ್ಮೆಲ್ಲರನ್ನೂ ಕಾಪಾಡಬೇಕು.”

09034055a ತಚ್ಛೃತ್ವಾ ಭಗವಾನ್ಕ್ರುದ್ಧೋ ಯಕ್ಷ್ಮಾಣಂ ಪೃಥಿವೀಪತೇ।
09034055c ಸಸರ್ಜ ರೋಷಾತ್ಸೋಮಾಯ ಸ ಚೋಡುಪತಿಮಾವಿಶತ್।।

ಪೃಥಿವೀಪತೇ! ಅದನ್ನು ಕೇಳಿ ಭಗವಾನನು ಕ್ರುದ್ಧನಾಗಿ ರೋಷದಿಂದ ಯಕ್ಷ್ಮ ರೋಗವನ್ನು ಸೃಷ್ಟಿಸಿದನು. ಅದು ಉಡುಪತಿ ಚಂದ್ರನನ್ನು ಪ್ರವೇಶಿಸಿತು.

09034056a ಸ ಯಕ್ಷ್ಮಣಾಭಿಭೂತಾತ್ಮಾಕ್ಷೀಯತಾಹರಹಃ ಶಶೀ।
09034056c ಯತ್ನಂ ಚಾಪ್ಯಕರೋದ್ರಾಜನ್ಮೋಕ್ಷಾರ್ಥಂ ತಸ್ಯ ಯಕ್ಷ್ಮಣಃ।।

ಯಕ್ಷ್ಮದಿಂದ ಪೀಡಿತನಾದ ಶಶಿಯು ದಿನದಿನವೂ ಕ್ಷೀಣಿಸಿದನು. ರಾಜನ್! ಯಕ್ಷ್ಮದಿಂದ ಮುಕ್ತಿಯನ್ನು ಪಡೆಯಲು ಪ್ರಯತ್ನವನ್ನೂ ಮಾಡಿದನು.

09034057a ಇಷ್ಟ್ವೇಷ್ಟಿಭಿರ್ಮಹಾರಾಜ ವಿವಿಧಾಭಿರ್ನಿಶಾಕರಃ।
09034057c ನ ಚಾಮುಚ್ಯತ ಶಾಪಾದ್ವೈ ಕ್ಷಯಂ ಚೈವಾಭ್ಯಗಚ್ಚತ।।

ಮಹಾರಾಜ! ನಿಶಾಕರನು ವಿವಿಧ ಯಜ್ಞ-ಯಾಗಾದಿಗಳನ್ನೂ ಮಾಡಿದನು. ಆದರೂ ಆ ಶಾಪದಿಂದ ವಿಮೋಚನೆಹೊಂದದೇ ಕ್ಷಯವಾಗುತ್ತಾ ಹೋದನು.

09034058a ಕ್ಷೀಯಮಾಣೇ ತತಃ ಸೋಮೇ ಓಷಧ್ಯೋ ನ ಪ್ರಜಜ್ಞಿರೇ।
09034058c ನಿರಾಸ್ವಾದರಸಾಃ ಸರ್ವಾ ಹತವೀರ್ಯಾಶ್ಚ ಸರ್ವಶಃ।।

ಸೋಮನು ಕ್ಷೀಣನಾಗುತ್ತಿರಲು ಔಷಧಿಗಳೂ ಬೆಳೆಯಲಿಲ್ಲ. ಎಲ್ಲೆಡೆ ಎಲ್ಲ ಔಷಧಿಗಳಲ್ಲಿನ ಋಚಿ-ರಸ-ಶಕ್ತಿಗಳು ಉಡುಗಿಹೋದವು.

09034059a ಓಷಧೀನಾಂ ಕ್ಷಯೇ ಜಾತೇ ಪ್ರಾಣಿನಾಮಪಿ ಸಂಕ್ಷಯಃ।
09034059c ಕೃಶಾಶ್ಚಾಸನ್ಪ್ರಜಾಃ ಸರ್ವಾಃ ಕ್ಷೀಯಮಾಣೇ ನಿಶಾಕರೇ।।

ನಿಶಾಕರನು ಕ್ಷೀಣಿಸುತ್ತಿರಲು ಔಷಧಿಗಳ ಕ್ಷಯಯೂ ಉಂಟಾಗಲು ಪ್ರಾಣಿಗಳೂ ಸರ್ವ ಪ್ರಜೆಗಳೂ ಕೃಶರಾಗಿ ನಾಶವಾಗತೊಡಗಿದವು.

09034060a ತತೋ ದೇವಾಃ ಸಮಾಗಮ್ಯ ಸೋಮಮೂಚುರ್ಮಹೀಪತೇ।
09034060c ಕಿಮಿದಂ ಭವತೋ ರೂಪಮೀದೃಶಂ ನ ಪ್ರಕಾಶತೇ।।

ಮಹೀಪತೇ! ಆಗ ದೇವತೆಗಳು ಒಟ್ಟಾಗಿ ಸೋಮನಿಗೆ ಹೇಳಿದರು: “ನಿನ್ನ ರೂಪವು ಹೀಗೇಕಾಯಿತು? ಪ್ರಕಾಶಿಸುತ್ತಿಲ್ಲವಲ್ಲ?

09034061a ಕಾರಣಂ ಬ್ರೂಹಿ ನಃ ಸರ್ವಂ ಯೇನೇದಂ ತೇ ಮಹದ್ಭಯಂ।
09034061c ಶ್ರುತ್ವಾ ತು ವಚನಂ ತ್ವತ್ತೋ ವಿಧಾಸ್ಯಾಮಸ್ತತೋ ವಯಂ।।

ನಮಗೆ ಇದರ ಕಾರಣವೆಲ್ಲವನ್ನೂ ಈ ಮಹಾ ಭಯವು ಎಲ್ಲಿಂದ ಉಂಟಾಯಿತೆನ್ನುವುದನ್ನೂ ಹೇಳು. ನಿನ್ನ ಮಾತನ್ನು ಕೇಳಿ ನಾವು ಮಾಡಬೇಕಾದುದನ್ನು ಮಾಡುತ್ತೇವೆ.”

09034062a ಏವಮುಕ್ತಃ ಪ್ರತ್ಯುವಾಚ ಸರ್ವಾಂಸ್ತಾನ್ ಶಶಲಕ್ಷಣಃ।
09034062c ಶಾಪಂ ಚ ಕಾರಣಂ ಚೈವ ಯಕ್ಷ್ಮಾಣಂ ಚ ತಥಾತ್ಮನಃ।।

ಅವರಮಾತಿಗೆ ಶಶಲಕ್ಷಣನು ಉತ್ತರಿಸಿ ಅವರೆಲ್ಲರಿಗೆ ಶಾಪದ ಕಾರಣವನ್ನೂ ಮತ್ತು ತನಗೆ ಯಕ್ಷ್ಮರೋಗವು ಹೇಗೆ ಬಂದಿತೆನ್ನುವುದನ್ನೂ ಹೇಳಿದನು.

09034063a ದೇವಾಸ್ತಸ್ಯ ವಚಃ ಶ್ರುತ್ವಾ ಗತ್ವಾ ದಕ್ಷಮಥಾಬ್ರುವನ್।
09034063c ಪ್ರಸೀದ ಭಗವನ್ಸೋಮೇ ಶಾಪಶ್ಚೈಷ ನಿವರ್ತ್ಯತಾಂ।।

ಅವನ ಮಾತನ್ನು ಕೇಳಿ ದೇವತೆಗಳು ದಕ್ಷನಲ್ಲಿಗೆ ಹೋಗಿ ಹೇಳಿದರು: “ಭಗವನ್! ಪ್ರಸನ್ನನಾಗು! ಸೋಮನ ಶಾಪವನ್ನು ಹಿಂದೆತೆಗೆದುಕೋ!

09034064a ಅಸೌ ಹಿ ಚಂದ್ರಮಾಃ ಕ್ಷೀಣಃ ಕಿಂಚಿಚ್ಚೇಷೋ ಹಿ ಲಕ್ಷ್ಯತೇ।
09034064c ಕ್ಷಯಾಚ್ಚೈವಾಸ್ಯ ದೇವೇಶ ಪ್ರಜಾಶ್ಚಾಪಿ ಗತಾಃ ಕ್ಷಯಂ।।

ಚಂದ್ರನು ಕ್ಷೀಣನಾಗಿ ಹೋಗಿದ್ದಾನೆ. ಒಂದು ಸ್ವಲ್ಪಮಾತ್ರ ಉಳಿದುಕೊಂಡಿರುವನಂತಿದ್ದಾನೆ. ದೇವೇಶ! ಅವನ ಕ್ಷಯದಿಂದಾಗಿ ಪ್ರಜೆಗಳೂ ಕೂಡ ಕ್ಷಯಿಸಿ ಹೋಗುತ್ತಿದ್ದಾರೆ.

09034065a ವೀರುದೋಷಧಯಶ್ಚೈವ ಬೀಜಾನಿ ವಿವಿಧಾನಿ ಚ।
09034065c ತಥಾ ವಯಂ ಲೋಕಗುರೋ ಪ್ರಸಾದಂ ಕರ್ತುಮರ್ಹಸಿ।।

ಲೋಕಗುರುವೇ! ವಿವಿಧ ಬೇರು-ಔಷಧ-ಬೀಜಗಳು ಮತ್ತು ನಾವು ಕ್ಷಯವಾಗಿ ಹೋಗುತ್ತಿದ್ದೇವೆ. ಆದುದರಿಂದ ಪ್ರಸನ್ನನಾಗಬೇಕು!”

09034066a ಏವಮುಕ್ತಸ್ತದಾ ಚಿಂತ್ಯ ಪ್ರಾಹ ವಾಕ್ಯಂ ಪ್ರಜಾಪತಿಃ।
09034066c ನೈತಚ್ಚಕ್ಯಂ ಮಮ ವಚೋ ವ್ಯಾವರ್ತಯಿತುಮನ್ಯಥಾ।।
09034066e ಹೇತುನಾ ತು ಮಹಾಭಾಗಾ ನಿವರ್ತಿಷ್ಯತಿ ಕೇನ ಚಿತ್।।

ಹೀಗೆ ಹೇಳಲು ಪ್ರಜಾಪತಿಯು ಯೋಚಿಸಿ ಈ ಮಾತನ್ನಾಡಿದನು: “ನನ್ನ ಮಾತಿನ ಹೊರತಾಗಿ ನಡೆಯುವಂತೆ ಮಾಡಲು ಸಾಧ್ಯವಿಲ್ಲ. ಮಹಾಭಾಗರೇ! ಆದರೆ ಯಾವುದೋ ಒಂದು ಕಾರಣದಿಂದ ಅದು ಪರಿಹಾರಗೊಳ್ಳುತ್ತದೆ.

09034067a ಸಮಂ ವರ್ತತು ಸರ್ವಾಸು ಶಶೀ ಭಾರ್ಯಾಸು ನಿತ್ಯಶಃ।
09034067c ಸರಸ್ವತ್ಯಾ ವರೇ ತೀರ್ಥೇ ಉನ್ಮಜ್ಜನ್ ಶಶಲಕ್ಷಣಃ।।
09034067e ಪುನರ್ವರ್ಧಿಷ್ಯತೇ ದೇವಾಸ್ತದ್ವೈ ಸತ್ಯಂ ವಚೋ ಮಮ।।

ಶಶಿಯು ನಿತ್ಯವೂ ಸರ್ವ ಭಾರ್ಯೆಯರಲ್ಲಿ ಸಮನಾಗಿ ನಡೆದುಕೊಳ್ಳಲಿ. ಶ್ರೇಷ್ಠ ಸರಸ್ವತೀ ತೀರ್ಥದಲ್ಲಿ ಶಶಲಕ್ಷಣನು ಮುಳುಗಲಿ. ದೇವತೆಗಳೇ! ಆಗ ಅವನು ಪುನಃ ವರ್ಧಿಸುತ್ತಾನೆ. ನನ್ನ ಈ ಮಾತು ಸತ್ಯ.

09034068a ಮಾಸಾರ್ಧಂ ಚ ಕ್ಷಯಂ ಸೋಮೋ ನಿತ್ಯಮೇವ ಗಮಿಷ್ಯತಿ।
09034068c ಮಾಸಾರ್ಧಂ ಚ ಸದಾ ವೃದ್ಧಿಂ ಸತ್ಯಮೇತದ್ವಚೋ ಮಮ।।

ಅರ್ಧಮಾಸ ಸೋಮನು ನಿತ್ಯವೂ ಕ್ಷಯಿಸುತ್ತಾ ಹೋಗುತ್ತಾನೆ. ಮಾಸಾರ್ಧದಲ್ಲಿ ಅವನು ಸದಾ ವೃದ್ಧಿಯನ್ನೂ ಹೊಂದುತ್ತಾನೆ. ನನ್ನ ಈ ಮಾತು ಸತ್ಯ.”

09034069a ಸರಸ್ವತೀಂ ತತಃ ಸೋಮೋ ಜಗಾಮ ಋಷಿಶಾಸನಾತ್।
09034069c ಪ್ರಭಾಸಂ ಪರಮಂ ತೀರ್ಥಂ ಸರಸ್ವತ್ಯಾ ಜಗಾಮ ಹ।।

ಅನಂತರ ಋಷಿಶಾಸನದಂತೆ ಸೋಮನು ಸರಸ್ವತಿಗೆ ಹೋದನು. ಸರಸ್ವತಿಯ ಪರಮ ತೀರ್ಥವಾದ ಪ್ರಭಾಸಕ್ಕೆ ಹೋದನು.

09034070a ಅಮಾವಾಸ್ಯಾಂ ಮಹಾತೇಜಾಸ್ತತ್ರೋನ್ಮಜ್ಜನ್ಮಹಾದ್ಯುತಿಃ।
09034070c ಲೋಕಾನ್ಪ್ರಭಾಸಯಾಮಾಸ ಶೀತಾಂಶುತ್ವಮವಾಪ ಚ।।

ಆ ಮಹಾದ್ಯುತಿಯು ಅಲ್ಲಿ ಅಮವಾಸ್ಯೆಯಂದು ಮುಳುಗಿ ಮಹಾತೇಜಸ್ಸಿನಿಂದ ಲೋಕಗಳನ್ನು ಬೆಳಗತೊಡಗಿದನು ಮತ್ತು ಶೀತಲಕಿರಣಗಳನ್ನೂ ಪಡೆದನು.

09034071a ದೇವಾಶ್ಚ ಸರ್ವೇ ರಾಜೇಂದ್ರ ಪ್ರಭಾಸಂ ಪ್ರಾಪ್ಯ ಪುಷ್ಕಲಂ।
09034071c ಸೋಮೇನ ಸಹಿತಾ ಭೂತ್ವಾ ದಕ್ಷಸ್ಯ ಪ್ರಮುಖೇಽಭವನ್।।

ರಾಜೇಂದ್ರ! ದೇವತೆಗಳೆಲ್ಲರೂ ಪುಷ್ಕಲ ಪ್ರಭೆಗಳನ್ನು ಪಡೆದು ಸೋಮನೊಂದಿಗೆ ದಕ್ಷನ ಎದಿರು ಬಂದರು.

09034072a ತತಃ ಪ್ರಜಾಪತಿಃ ಸರ್ವಾ ವಿಸಸರ್ಜಾಥ ದೇವತಾಃ।
09034072c ಸೋಮಂ ಚ ಭಗವಾನ್ಪ್ರೀತೋ ಭೂಯೋ ವಚನಮಬ್ರವೀತ್।।

ಆಗ ಭಗವಾನ್ ಪ್ರಜಾಪತಿಯು ಸರ್ವ ದೇವತೆಗಳನ್ನೂ ಕಳುಹಿಸಿ, ಪ್ರೀತನಾಗಿ ಸೋಮನಿಗೆ ಇನ್ನೊಮ್ಮೆ ಹೇಳಿದನು:

09034073a ಮಾವಮಂಸ್ಥಾಃ ಸ್ತ್ರಿಯಃ ಪುತ್ರ ಮಾ ಚ ವಿಪ್ರಾನ್ಕದಾ ಚನ।
09034073c ಗಚ್ಚ ಯುಕ್ತಃ ಸದಾ ಭೂತ್ವಾ ಕುರು ವೈ ಶಾಸನಂ ಮಮ।।

“ಪುತ್ರ! ಸ್ತ್ರೀಯರನ್ನು ಮತ್ತು ವಿಪ್ರರನ್ನು ಎಂದೂ ಅವಮಾನಿಸಬೇಡ! ಸದಾ ಜಾಗರೂಕತೆಯಲ್ಲಿದ್ದುಕೊಂಡು ನನ್ನ ಶಾಸನದಂತೆ ಮಾಡು. ಹೋಗು!”

09034074a ಸ ವಿಸೃಷ್ಟೋ ಮಹಾರಾಜ ಜಗಾಮಾಥ ಸ್ವಮಾಲಯಂ।
09034074c ಪ್ರಜಾಶ್ಚ ಮುದಿತಾ ಭೂತ್ವಾ ಭೋಜನೇ ಚ ಯಥಾ ಪುರಾ।।

ಮಹಾರಾಜ! ಬೀಳ್ಕೊಂಡ ಅವನು ತನ್ನ ಭವನಕ್ಕೆ ತೆರಳಿದನು. ಪ್ರಜೆಗಳೂ ಭೋಜನಗಳೂ ಹಿಂದಿನಂತೆ ಮುದಿತಗೊಂಡವು.

09034075a ಏತತ್ತೇ ಸರ್ವಮಾಖ್ಯಾತಂ ಯಥಾ ಶಪ್ತೋ ನಿಶಾಕರಃ।
09034075c ಪ್ರಭಾಸಂ ಚ ಯಥಾ ತೀರ್ಥಂ ತೀರ್ಥಾನಾಂ ಪ್ರವರಂ ಹ್ಯಭೂತ್।।

ನಿಶಾಕರನು ಹೇಗೆ ಶಪ್ತನಾದನೆಂದೂ ಮತ್ತು ಪ್ರಭಾಸತೀರ್ಥವು ಹೇಗೆ ತೀರ್ಥಗಳಲ್ಲಿಯೇ ಶ್ರೇಷ್ಠವಾಯಿತೆಂದೂ ಎಲ್ಲವನ್ನೂ ನಿನಗೆ ಹೇಳಿದ್ದೇನೆ.

09034076a ಅಮಾವಾಸ್ಯಾಂ ಮಹಾರಾಜ ನಿತ್ಯಶಃ ಶಶಲಕ್ಷಣಃ।
09034076c ಸ್ನಾತ್ವಾ ಹ್ಯಾಪ್ಯಾಯತೇ ಶ್ರೀಮಾನ್ ಪ್ರಭಾಸೇ ತೀರ್ಥ ಉತ್ತಮೇ।।

ಮಹಾರಾಜ! ಶ್ರೀಮಾನ್ ಶಶಲಕ್ಷಣನು ನಿತ್ಯವೂ ಅಮಾವಾಸ್ಯೆಯಂದು ಉತ್ತಮ ತೀರ್ಥ ಪ್ರಭಾಸದಲ್ಲಿ ಸ್ನಾನಮಾಡಿ ಪುಷ್ಟನಾಗುತ್ತಾನೆ.

09034077a ಅತಶ್ಚೈನಂ ಪ್ರಜಾನಂತಿ ಪ್ರಭಾಸಮಿತಿ ಭೂಮಿಪ।
09034077c ಪ್ರಭಾಂ ಹಿ ಪರಮಾಂ ಲೇಭೇ ತಸ್ಮಿನ್ನುನ್ಮಜ್ಜ್ಯ ಚಂದ್ರಮಾಃ।।

ಭೂಮಿಪ! ಇದರಲ್ಲಿ ಮುಳುಗಿ ಚಂದ್ರಮನು ಪರಮ ಪ್ರಭೆಯನ್ನು ಪಡೆದುದರಿಂದಲೇ ಇದನ್ನು ಪ್ರಜೆಗಳು ಪ್ರಭಾಸ ಎಂದು ಕರೆಯುತ್ತಾರೆ.

09034078a ತತಸ್ತು ಚಮಸೋದ್ಭೇದಮಚ್ಯುತಸ್ತ್ವಗಮದ್ಬಲೀ।
09034078c ಚಮಸೋದ್ಭೇದ ಇತ್ಯೇವಂ ಯಂ ಜನಾಃ ಕಥಯಂತ್ಯುತ।।

ಅನಂತರ ಅಚ್ಯುತ ಬಲರಾಮನು ಚಮಸೋದ್ಭೇದಕ್ಕೆ ಹೋದನು. ಅದನ್ನು ಜನರು ಚಮಸೋದ್ಭೇದ ಎಂದೇ ಕರೆಯುತ್ತಾರೆ.

09034079a ತತ್ರ ದತ್ತ್ವಾ ಚ ದಾನಾನಿ ವಿಶಿಷ್ಟಾನಿ ಹಲಾಯುಧಃ।
09034079c ಉಷಿತ್ವಾ ರಜನೀಮೇಕಾಂ ಸ್ನಾತ್ವಾ ಚ ವಿಧಿವತ್ತದಾ।।

ಹಲಾಯುಧನು ಅಲ್ಲಿ ವಿಶಿಷ್ಟ ದಾನಗಳನ್ನಿತ್ತು ಒಂದು ರಾತ್ರಿ ತಂಗಿ ವಿಧಿವತ್ತಾಗಿ ಸ್ನಾನಮಾಡಿದನು.

09034080a ಉದಪಾನಮಥಾಗಚ್ಚತ್ತ್ವರಾವಾನ್ಕೇಶವಾಗ್ರಜಃ।
09034080c ಆದ್ಯಂ ಸ್ವಸ್ತ್ಯಯನಂ ಚೈವ ತತ್ರಾವಾಪ್ಯ ಮಹತ್ಫಲಂ।।

ಅನಂತರ ಕೇಶವಾಗ್ರಜನು ವರಗಳನ್ನೀಯುವ ಉದಪಾನಕ್ಕೆ ಹೋದನು. ಅಲ್ಲಿ ಕಾಲಿಡುತ್ತಲೇ ಮಹಾ ಫಲಗಳು ದೊರೆಯುತ್ತವೆ.

09034081a ಸ್ನಿಗ್ಧತ್ವಾದೋಷಧೀನಾಂ ಚ ಭೂಮೇಶ್ಚ ಜನಮೇಜಯ।
09034081c ಜಾನಂತಿ ಸಿದ್ಧಾ ರಾಜೇಂದ್ರ ನಷ್ಟಾಮಪಿ ಸರಸ್ವತೀಂ।।

ಜನಮೇಜಯ! ರಾಜೇಂದ್ರ! ಔಷಧಿಗಳ ಸ್ನಿಗ್ಧತ್ವದಿಂದಾಗಿ ಸಿದ್ಧರು ಇದೇ ಪ್ರದೇಶದಲ್ಲಿ ಸರಸ್ವತಿಯು ನಷ್ಟಳಾದಳೆಂದು ತಿಳಿದಿದ್ದಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನೇ ಚತುಸ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.