033 ಬಲದೇವಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಸಾರಸ್ವತ ಪರ್ವ

ಅಧ್ಯಾಯ 33

ಸಾರ

ಬಲದೇವನ ಆಗಮನ; ಪಾಂಡವ-ಸೃಂಜಯರು ಮತ್ತು ದುರ್ಯೋಧನನು ಅವನನ್ನು ಸ್ವಾಗತಿಸಿದುದು (1-14). ಭೀಮ-ದುರ್ಯೋಧನರ ಗದಾಯುದ್ಧವನ್ನು ನೋಡಲು ಬಲರಾಮನು ಕುಳಿತುಕೊಂಡಿದುದು (15-18).

09033001 ಸಂಜಯ ಉವಾಚ 09033001a ತಸ್ಮಿನ್ಯುದ್ಧೇ ಮಹಾರಾಜ ಸಂಪ್ರವೃತ್ತೇ ಸುದಾರುಣೇ।
09033001c ಉಪವಿಷ್ಟೇಷು ಸರ್ವೇಷು ಪಾಂಡವೇಷು ಮಹಾತ್ಮಸು।।
09033002a ತತಸ್ತಾಲಧ್ವಜೋ ರಾಮಸ್ತಯೋರ್ಯುದ್ಧ ಉಪಸ್ಥಿತೇ।
09033002c ಶ್ರುತ್ವಾ ತಚ್ಚಿಷ್ಯಯೋ ರಾಜನ್ನಾಜಗಾಮ ಹಲಾಯುಧಃ।।

ಸಂಜಯನು ಹೇಳಿದನು: “ಮಹಾರಾಜ! ರಾಜನ್! ಆ ಸುದಾರುಣ ಯುದ್ಧವು ಪ್ರಾರಂಭವಾಗಲಿದ್ದಾಗ, ಸರ್ವ ಮಹಾತ್ಮ ಪಾಂಡವರೂ ಕುಳಿತುಕೊಂಡಿರುವಾಗ, ತನ್ನ ಶಿಷ್ಯರ ನಡುವೆ ಯುದ್ಧವು ನಡೆಯಲಿದೆಯೆಂದು ಕೇಳಿದ ಹಲಾಯುಧ ತಾಲಧ್ವಜ ರಾಮನು ಅಲ್ಲಿಗೆ ಆಗಮಿಸಿದನು.

09033003a ತಂ ದೃಷ್ಟ್ವಾ ಪರಮಪ್ರೀತಾಃ ಪೂಜಯಿತ್ವಾ ನರಾಧಿಪಾಃ।
09033003c ಶಿಷ್ಯಯೋಃ ಕೌಶಲಂ ಯುದ್ಧೇ ಪಶ್ಯ ರಾಮೇತಿ ಚಾಬ್ರುವನ್।।

ಅವನನ್ನು ನೋಡಿ ಪರಮಪ್ರೀತ ನರಾಧಿಪರು ಪೂಜಿಸಿ “ರಾಮ! ಶಿಷ್ಯರ ಕೌಶಲ ಯುದ್ಧವನ್ನು ನೋಡು!” ಎಂದು ಹೇಳಿದರು.

09033004a ಅಬ್ರವೀಚ್ಚ ತದಾ ರಾಮೋ ದೃಷ್ಟ್ವಾ ಕೃಷ್ಣಂ ಚ ಪಾಂಡವಂ।
09033004c ದುರ್ಯೋಧನಂ ಚ ಕೌರವ್ಯಂ ಗದಾಪಾಣಿಮವಸ್ಥಿತಂ।।

ಆಗ ರಾಮನು ಕೃಷ್ಣ, ಮತ್ತು ಗದಾಪಾಣಿಗಳಾಗಿ ನಿಂತಿದ್ದ ಪಾಂಡವ ಮತ್ತು ಕೌರವ್ಯ ದುರ್ಯೋಧನನನ್ನು ನೋಡಿ ಹೀಗೆಂದನು:

09033005a ಚತ್ವಾರಿಂಶದಹಾನ್ಯದ್ಯ ದ್ವೇ ಚ ಮೇ ನಿಃಸೃತಸ್ಯ ವೈ।
09033005c ಪುಷ್ಯೇಣ ಸಂಪ್ರಯಾತೋಽಸ್ಮಿ ಶ್ರವಣೇ ಪುನರಾಗತಃ।।
09033005e ಶಿಷ್ಯಯೋರ್ವೈ ಗದಾಯುದ್ಧಂ ದ್ರಷ್ಟುಕಾಮೋಽಸ್ಮಿ ಮಾಧವ।।

“ನಾನು ಹೊರಟುಹೋಗಿ ಇಂದಿಗೆ ನಲವತ್ತೆರಡು ದಿನಗಳಾದವು. ಪುಷ್ಯ ನಕ್ಷತ್ರದಲ್ಲಿ ಹೋದ ನಾನು ಶ್ರವಣ ನಕ್ಷತ್ರದಲ್ಲಿ ಹಿಂದಿರುಗಿದ್ದೇನೆ. ಮಾಧವ! ಶಿಷ್ಯರಿಬ್ಬರ ನಡುವಿನ ಗದಾಯುದ್ಧವನ್ನು ನೋಡಲು ಬಯಸುತ್ತೇನೆ.”

09033006a ತತೋ ಯುಧಿಷ್ಠಿರೋ ರಾಜಾ ಪರಿಷ್ವಜ್ಯ ಹಲಾಯುಧಂ।
09033006c ಸ್ವಾಗತಂ ಕುಶಲಂ ಚಾಸ್ಮೈ ಪರ್ಯಪೃಚ್ಚದ್ಯಥಾತಥಂ।।

ಆಗ ರಾಜಾ ಯುಧಿಷ್ಠಿರನು ಹಲಾಯುಧನನ್ನು ಆಲಂಗಿಸಿ ಸ್ವಾಗತಿಸಿ ಯಥಾವತ್ತಾಗಿ ಅವನ ಕುಶಲವನ್ನು ಕೇಳಿದನು.

09033007a ಕೃಷ್ಣೌ ಚಾಪಿ ಮಹೇಷ್ವಾಸಾವಭಿವಾದ್ಯ ಹಲಾಯುಧಂ।
09033007c ಸಸ್ವಜಾತೇ ಪರಿಪ್ರೀತೌ ಪ್ರಿಯಮಾಣೌ ಯಶಸ್ವಿನೌ।।

ಮಹೇಷ್ವಾಸ ಯಶಸ್ವಿ ಕೃಷ್ಣಾರ್ಜುನರು ಕೂಡ ಹಲಾಯುಧನನ್ನು ನಮಸ್ಕರಿಸಿ ಅತ್ಯಂತಪ್ರಸನ್ನರಾಗಿ ಪ್ರೇಮಪೂರ್ವಕವಾಗಿ ಆಲಂಗಿಸಿಕೊಂಡರು.

09033008a ಮಾದ್ರೀಪುತ್ರೌ ತಥಾ ಶೂರೌ ದ್ರೌಪದ್ಯಾಃ ಪಂಚ ಚಾತ್ಮಜಾಃ।
09033008c ಅಭಿವಾದ್ಯ ಸ್ಥಿತಾ ರಾಜನ್ರೌಹಿಣೇಯಂ ಮಹಾಬಲಂ।।

ಶೂರ ಮಾದ್ರೀಪುತ್ರರಿಬ್ಬರೂ ಮತ್ತು ಹಾಗೆಯೇ ದ್ರೌಪದಿಯ ಐವರು ಮಕ್ಕಳೂ ಮಹಾಬಲ ರೌಹಿಣೇಯನನ್ನು ನಮಸ್ಕರಿಸಿ ನಿಂತುಕೊಂಡರು.

09033009a ಭೀಮಸೇನೋಽಥ ಬಲವಾನ್ಪುತ್ರಸ್ತವ ಜನಾಧಿಪ।
09033009c ತಥೈವ ಚೋದ್ಯತಗದೌ ಪೂಜಯಾಮಾಸತುರ್ಬಲಂ।।

ಜನಾಧಿಪ! ಆಗ ಭೀಮಸೇನ ಮತ್ತು ನಿನ್ನ ಬಲವಾನ್ ಮಗನೂ ಕೂಡ ಗದೆಗಳನ್ನು ಮೇಲೆತ್ತಿ ಬಲರಾಮನನ್ನು ಗೌರವಿಸಿದರು.

09033010a ಸ್ವಾಗತೇನ ಚ ತೇ ತತ್ರ ಪ್ರತಿಪೂಜ್ಯ ಪುನಃ ಪುನಃ।
09033010c ಪಶ್ಯ ಯುದ್ಧಂ ಮಹಾಬಾಹೋ ಇತಿ ತೇ ರಾಮಮಬ್ರುವನ್।।
09033010e ಏವಮೂಚುರ್ಮಹಾತ್ಮಾನಂ ರೌಹಿಣೇಯಂ ನರಾಧಿಪಾಃ।।

ಪುನಃ ಪುನಃ ಅವನನ್ನು ಅಲ್ಲಿಗೆ ಸ್ವಾಗತಿಸಿ “ಮಹಾಬಾಹೋ! ಯುದ್ಧವನ್ನು ನೋಡು!” ಎಂದು ನರಾಧಿಪರು ಮಹಾತ್ಮ ರೌಹಿಣೇಯ ರಾಮನಿಗೆ ಹೇಳಿದರು.

09033011a ಪರಿಷ್ವಜ್ಯ ತದಾ ರಾಮಃ ಪಾಂಡವಾನ್ಸೃಂಜಯಾನಪಿ।
09033011c ಅಪೃಚ್ಚತ್ಕುಶಲಂ ಸರ್ವಾನ್ಪಾಂಡವಾಂಶ್ಚಾಮಿತೌಜಸಃ।।
09033011e ತಥೈವ ತೇ ಸಮಾಸಾದ್ಯ ಪಪ್ರಚ್ಚುಸ್ತಮನಾಮಯಂ।।

ಆಗ ಅಮಿತೌಜಸ ರಾಮನು ಪಾಂಡವ-ಸೃಂಜಯರನ್ನು ಆಲಂಗಿಸಿ ಪಾಂಡವರ ಮತ್ತು ಎಲ್ಲರ ಕುಶಲವನ್ನೂ ಕೇಳಿದನು. ಹಾಗೆಯೇ ಅವರೂ ಸಹ ಅವನ ಯೋಗಕ್ಷೇಮಗಳನ್ನು ವಿಚಾರಿಸಿದರು.

09033012a ಪ್ರತ್ಯಭ್ಯರ್ಚ್ಯ ಹಲೀ ಸರ್ವಾನ್ ಕ್ಷತ್ರಿಯಾಂಶ್ಚ ಮಹಾಮನಾಃ।
09033012c ಕೃತ್ವಾ ಕುಶಲಸಮ್ಯುಕ್ತಾಂ ಸಂವಿದಂ ಚ ಯಥಾವಯಃ।।

ಮಹಾಮನ ಹಲಿಯೂ ಕೂಡ ಸರ್ವ ಕ್ಷತ್ರಿಯರನ್ನು ಪ್ರತಿಯಾಗಿ ಅಭಿನಂದಿಸಿ ವಯಸ್ಸಿಗೆ ತಕ್ಕಂತೆ ಕುಶಲಸಂಯುಕ್ತ ಮಾತುಗಳನ್ನಾಡಿದನು.

09033013a ಜನಾರ್ದನಂ ಸಾತ್ಯಕಿಂ ಚ ಪ್ರೇಮ್ಣಾ ಸ ಪರಿಷಸ್ವಜೇ।
09033013c ಮೂರ್ಧ್ನಿ ಚೈತಾವುಪಾಘ್ರಾಯ ಕುಶಲಂ ಪರ್ಯಪೃಚ್ಚತ।।

ಪ್ರೇಮದಿಂದ ಜನಾರ್ದನ-ಸಾತ್ಯಕಿಯರನ್ನು ಆಲಂಗಿಸಿ ಅವರ ನೆತ್ತಿಗಳನ್ನು ಆಘ್ರಾಣಿಸಿ ಕುಶಲಪ್ರಶ್ನೆಗಳನ್ನು ಕೇಳಿದನು.

09033014a ತೌ ಚೈನಂ ವಿಧಿವದ್ರಾಜನ್ಪೂಜಯಾಮಾಸತುರ್ಗುರುಂ।
09033014c ಬ್ರಹ್ಮಾಣಮಿವ ದೇವೇಶಮಿಂದ್ರೋಪೇಂದ್ರೌ ಮುದಾ ಯುತೌ।।

ರಾಜನ್! ಉಪೇಂದ್ರರಿಬ್ಬರು ದೇವೇಶ ಬ್ರಹ್ಮನನ್ನು ಹೇಗೋ ಹಾಗೆ ಮುದದಿಂದ ಅವರಿಬ್ಬರೂ ವಿಧಿವತ್ತಾಗಿ ಹಿರಿಯನನ್ನು ಪೂಜಿಸಿದರು.

09033015a ತತೋಽಬ್ರವೀದ್ಧರ್ಮಸುತೋ ರೌಹಿಣೇಯಮರಿಂದಮಂ।
09033015c ಇದಂ ಭ್ರಾತ್ರೋರ್ಮಹಾಯುದ್ಧಂ ಪಶ್ಯ ರಾಮೇತಿ ಭಾರತ।।

ಭಾರತ! ಆಗ ಧರ್ಮಸುತನು ಅರಿಂದಮ ರೌಹಿಣೇಯನಿಗೆ “ರಾಮ! ಸಹೋದರರ ಈ ಮಹಾಯುದ್ಧವನ್ನು ನೋಡು!” ಎಂದನು.

09033016a ತೇಷಾಂ ಮಧ್ಯೇ ಮಹಾಬಾಹುಃ ಶ್ರೀಮಾನ್ಕೇಶವಪೂರ್ವಜಃ।
09033016c ನ್ಯವಿಶತ್ಪರಮಪ್ರೀತಃ ಪೂಜ್ಯಮಾನೋ ಮಹಾರಥೈಃ।।

ಮಹಾರಥರಿಂದ ಗೌರವಿಸಲ್ಪಟ್ಟು ಪರಮಪ್ರೀತನಾದ ಮಹಾಬಾಹು ಶ್ರೀಮಾನ್ ಕೇಶವಪೂರ್ವಜನು ಅವರ ಮಧ್ಯ ಕುಳಿತುಕೊಂಡನು.

09033017a ಸ ಬಭೌ ರಾಜಮಧ್ಯಸ್ಥೋ ನೀಲವಾಸಾಃ ಸಿತಪ್ರಭಃ।
09033017c ದಿವೀವ ನಕ್ಷತ್ರಗಣೈಃ ಪರಿಕೀರ್ಣೋ ನಿಶಾಕರಃ।।

ನೀಲವಸ್ತ್ರವನ್ನುಟ್ಟಿದ್ದ ಬಿಳಿಯ ಬಣ್ಣದ ಬಲರಾಮನು ರಾಜರ ಮಧ್ಯದಲ್ಲಿ ಕುಳಿತು ಆಕಾಶದಲ್ಲಿ ನಕ್ಷತ್ರಗಣಗಳ ಮಧ್ಯದಲ್ಲಿದ್ದ ನಿಶಾಕರ ಚಂದ್ರನಂತೆ ಶೋಭಿಸಿದನು.

09033018a ತತಸ್ತಯೋಃ ಸಂನಿಪಾತಸ್ತುಮುಲೋ ರೋಮಹರ್ಷಣಃ।
09033018c ಆಸೀದಂತಕರೋ ರಾಜನ್ವೈರಸ್ಯ ತವ ಪುತ್ರಯೋಃ।।

ರಾಜನ್! ಆಗ ನಿನ್ನ ಪುತ್ರರ ವೈರವನ್ನು ಅಂತ್ಯಗೊಳಿಸುವ ರೋಮಹರ್ಷಣ ತುಮುಲಯುದ್ಧವು ಪ್ರಾರಂಭವಾಯಿತು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವಾಗಮನೇ ತ್ರಯಾಸ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವಾಗಮನ ಎನ್ನುವ ಮೂವತ್ಮೂರನೇ ಅಧ್ಯಾಯವು.