032 ಭೀಮಸೇನದುರ್ಯೋಧನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಸಾರಸ್ವತ ಪರ್ವ

ಅಧ್ಯಾಯ 32

ಸಾರ

“ಹೇಗೆ ತಾನೇ ನೀನು ಶತ್ರುವಿಗೆ “ನಮ್ಮಲ್ಲಿ ಒಬ್ಬನನ್ನು ಸಂಹರಿಸಿ ರಾಜನಾಗು!” ಎಂದು ಹೇಳಿಬಿಟ್ಟೆ?” ಎಂದು ಕೃಷ್ಣನು ಯುಧಿಷ್ಠಿರನನ್ನು ನಿಂದಿಸಿದುದು (1-14). ಭೀಮಸೇನ ವಾಕ್ಯ (15-18). ಕೃಷ್ಣವಾಕ್ಯ (19-25). ತಾನು ದುರ್ಯೋಧನನೊಡನೆ ಗದಾಯುದ್ಧ ಮಾಡೂತ್ತೇನೆಂದು ಹೇಳಿ ಭೀಮಸೇನನು ಯುದ್ಧಕ್ಕೆ ಸಿದ್ಧನಾಗುವುದು (26-35). ಭೀಮಸೇನ-ದುರ್ಯೋಧನರ ಸಂವಾದ (36-52).

09032001 ಸಂಜಯ ಉವಾಚ 09032001a ಏವಂ ದುರ್ಯೋಧನೇ ರಾಜನ್ಗರ್ಜಮಾನೇ ಮುಹುರ್ಮುಹುಃ।
09032001c ಯುಧಿಷ್ಠಿರಸ್ಯ ಸಂಕ್ರುದ್ಧೋ ವಾಸುದೇವೋಽಬ್ರವೀದಿದಂ।।

ಸಂಜಯನು ಹೇಳಿದನು: “ರಾಜನ್! ಹೀಗೆ ಮತ್ತೆ ಮತ್ತೆ ದುರ್ಯೋಧನನು ಗರ್ಜಿಸುತ್ತಿರಲು ಯುಧಿಷ್ಠಿರನ ಮೇಲೆ ಸಂಕ್ರುದ್ಧನಾಗಿ ವಾಸುದೇವನು ಇದನ್ನು ಹೇಳಿದನು:

09032002a ಯದಿ ನಾಮ ಹ್ಯಯಂ ಯುದ್ಧೇ ವರಯೇತ್ತ್ವಾಂ ಯುಧಿಷ್ಠಿರ।
09032002c ಅರ್ಜುನಂ ನಕುಲಂ ವಾಪಿ ಸಹದೇವಮಥಾಪಿ ವಾ।।

“ಯುಧಿಷ್ಠಿರ! ಯುದ್ಧದಲ್ಲಿ ಎಂಥಹ ವರವನ್ನು ನೀನು ಕೊಟ್ಟುಬಿಟ್ಟೆ! ಒಂದುವೇಳೆ ಅವನು ಅರ್ಜುನ, ನಕುಲ, ಸಹದೇವ ಅಥವಾ ನಿನ್ನೊಡನೆ ಯುದ್ಧಮಾಡಲು ಬಯಸಿದರೆ ಏನಾಗುತ್ತದೆ?

09032003a ಕಿಮಿದಂ ಸಾಹಸಂ ರಾಜಂಸ್ತ್ವಯಾ ವ್ಯಾಹೃತಮೀದೃಶಂ।
09032003c ಏಕಮೇವ ನಿಹತ್ಯಾಜೌ ಭವ ರಾಜಾ ಕುರುಷ್ವಿತಿ।।

ರಾಜನ್! “ನಮ್ಮೈವರಲ್ಲಿ ಒಬ್ಬನನ್ನೇ ಕೊಂದು ನೀನು ರಾಜನಾಗು!” ಎಂದು ಹೇಳಿ ಇದೇನು ಸಾಹಸಮಾಡಿಬಿಟ್ಟೆ?

09032004a ಏತೇನ ಹಿ ಕೃತಾ ಯೋಗ್ಯಾ ವರ್ಷಾಣೀಹ ತ್ರಯೋದಶ।
09032004c ಆಯಸೇ ಪುರುಷೇ ರಾಜನ್ಭೀಮಸೇನಜಿಘಾಂಸಯಾ।।

ರಾಜನ್! ಭೀಮಸೇನನನ್ನು ಸಂಹರಿಸಲು ಬಯಸಿ ಇವನು ಕಳೆದ ಹದಿಮೂರು ವರ್ಷಗಳು ಭೀಮಸೇನನ ಲೋಹದ ಮೂರ್ತಿಯನ್ನು ಮಾಡಿಕೊಂಡು ಅದರೊಡನೆ ಗದಾಯುದ್ಧದ ಅಭ್ಯಾಸಮಾಡಿಕೊಂಡು ಬಂದಿರುವನು!

09032005a ಕಥಂ ನಾಮ ಭವೇತ್ಕಾರ್ಯಮಸ್ಮಾಭಿರ್ಭರತರ್ಷಭ।
09032005c ಸಾಹಸಂ ಕೃತವಾಂಸ್ತ್ವಂ ತು ಹ್ಯನುಕ್ರೋಶಾನ್ನೃಪೋತ್ತಮ।।

ಭರತರ್ಷಭ! ನೃಪೋತ್ತಮ! ಈಗ ನಾವು ನಿನ್ನ ಕಾರ್ಯವನ್ನು ಹೇಗೆ ಪೂರೈಸಿಕೊಡಬಲ್ಲೆವು? ಕೇವಲ ದಯಾಪೂರ್ಣನಾಗಿ ಈ ದುಃಸ್ಸಾಹಸವನ್ನು ನೀನು ಮಾಡಿರುವೆ!

09032006a ನಾನ್ಯಮಸ್ಯಾನುಪಶ್ಯಾಮಿ ಪ್ರತಿಯೋದ್ಧಾರಮಾಹವೇ।
09032006c ಋತೇ ವೃಕೋದರಾತ್ಪಾರ್ಥಾತ್ಸ ಚ ನಾತಿಕೃತಶ್ರಮಃ।।

ಪಾರ್ಥ ವೃಕೋದರನಲ್ಲದೇ ಇವನೊಂದಿಗೆ ಯುದ್ಧಮಾಡಬಲ್ಲ ಬೇರೆ ಯಾರನ್ನೂ ನಾನು ಕಾಣೆ. ಇವನೂ ಕೂಡ ಚೆನ್ನಾಗಿ ಅಭ್ಯಾಸವನ್ನು ಮಾಡಿಲ್ಲ.

09032007a ತದಿದಂ ದ್ಯೂತಮಾರಬ್ಧಂ ಪುನರೇವ ಯಥಾ ಪುರಾ।
09032007c ವಿಷಮಂ ಶಕುನೇಶ್ಚೈವ ತವ ಚೈವ ವಿಶಾಂ ಪತೇ।।

ವಿಶಾಂಪತೇ! ಹಿಂದಿನಂತೆಯೇ ಈಗ ಕೂಡ ಪುನಃ ದ್ಯೂತವನ್ನು ಪ್ರಾರಂಭಿಸಿಬಿಟ್ಟೆಯಲ್ಲ! ಇಂದಿನ ಈ ಜೂಜಾಟವು ಶಕುನಿಯೊಡನಾಡಿನ ಅಂದಿನಂತೆ ವಿಷಮವಾದುದು.

09032008a ಬಲೀ ಭೀಮಃ ಸಮರ್ಥಶ್ಚ ಕೃತೀ ರಾಜಾ ಸುಯೋಧನಃ।
09032008c ಬಲವಾನ್ವಾ ಕೃತೀ ವೇತಿ ಕೃತೀ ರಾಜನ್ವಿಶಿಷ್ಯತೇ।।

ಭೀಮನು ಬಲಶಾಲಿ ಮತ್ತು ಸಮರ್ಥ. ರಾಜಾ ಸುಯೋಧನನು ಕುಶಲನು. ರಾಜನ್! ನೋಡಿದರೆ ಬಲಶಾಲಿ ಮತ್ತು ಕುಶಲಿ ಇಬ್ಬರಲ್ಲಿ ಕುಶಲಿಯೇ ಅಧಿಕನೆನಿಸಿಕೊಳ್ಳುತ್ತಾನೆ.

09032009a ಸೋಽಯಂ ರಾಜಂಸ್ತ್ವಯಾ ಶತ್ರುಃ ಸಮೇ ಪಥಿ ನಿವೇಶಿತಃ।
09032009c ನ್ಯಸ್ತಶ್ಚಾತ್ಮಾ ಸುವಿಷಮೇ ಕೃಚ್ಚ್ರಮಾಪಾದಿತಾ ವಯಂ।।

ರಾಜನ್! ಅತ್ಯಂತ ವಿಷಮ ಪ್ರದೇಶದಲ್ಲಿ ಕಷ್ಟಪಡುತ್ತಿರುವ ಶತ್ರುವನ್ನು ನೀನು ಸಮಪ್ರದೇಶಕ್ಕೆ ತಂದು ಇಟ್ಟಿರುವೆ. ಸಮಪ್ರದೇಶದಲ್ಲಿದ್ದ ನಮ್ಮನ್ನು ವಿಷಮಪ್ರದೇಶಕ್ಕೆ ಕೊಂಡೊಯ್ದು ಮಹಾ ಕಷ್ಟದಲ್ಲಿ ಸಿಕ್ಕಿಸಿದೆ.

09032010a ಕೋ ನು ಸರ್ವಾನ್ವಿನಿರ್ಜಿತ್ಯ ಶತ್ರೂನೇಕೇನ ವೈರಿಣಾ।
09032010c ಪಣಿತ್ವಾ ಚೈಕಪಾಣೇನ ರೋಚಯೇದೇವಮಾಹವಂ।।

ಯಾರುತಾನೇ ಸರ್ವ ಶತ್ರುಗಳನ್ನೂ ಸೋಲಿಸಿ ಒಂಟಿಗನಾಗಿರುವ ವೈರಿಗೆ ಒಂದೇ ಒಂದು ಪಣದಲ್ಲಿ ರಾಜ್ಯವನ್ನು ಕೊಡಲು ಬಯಸುತ್ತಾನೆ?

09032011a ನ ಹಿ ಪಶ್ಯಾಮಿ ತಂ ಲೋಕೇ ಗದಾಹಸ್ತಂ ನರೋತ್ತಮಂ।
09032011c ಯುಧ್ಯೇದ್ದುರ್ಯೋಧನಂ ಸಂಖ್ಯೇ ಕೃತಿತ್ವಾದ್ಧಿ ವಿಶೇಷಯೇತ್।।

ಯುದ್ಧದಲ್ಲಿ ದುರ್ಯೋಧನನೊಡನೆ, ಅದರಲ್ಲೂ ವಿಶೇಷವಾಗಿ ಅಭ್ಯಾಸಮಾಡಿರುವ ಇವನೊಡನೆ, ಗದಾಪಾಣಿಯಾಗಿ ಯುದ್ಧಮಾಡುವ ನರೋತ್ತಮನನ್ನು ನಾನು ಈ ಲೋಕಗಳಲ್ಲಿ ಯಾರನ್ನೂ ಕಾಣುತ್ತಿಲ್ಲ.

09032012a ಫಲ್ಗುನಂ ವಾ ಭವಂತಂ ವಾ ಮಾದ್ರೀಪುತ್ರಾವಥಾಪಿ ವಾ।
09032012c ನ ಸಮರ್ಥಾನಹಂ ಮನ್ಯೇ ಗದಾಹಸ್ತಸ್ಯ ಸಮ್ಯುಗೇ।।

ಫಲ್ಗುನನಾಗಲೀ, ನೀನಾಗಲೀ, ಮಾದ್ರೀಪುತ್ರರಾಗಲೀ ಯುದ್ಧದಲ್ಲಿ ಈ ಗದಾಪಾಣಿಯನ್ನು ಎದುರಿಸಲು ಸಮರ್ಥರೆಂದು ನನಗನ್ನಿಸುವುದಿಲ್ಲ.

09032013a ಸ ಕಥಂ ವದಸೇ ಶತ್ರುಂ ಯುಧ್ಯಸ್ವ ಗದಯೇತಿ ಹ।
09032013c ಏಕಂ ಚ ನೋ ನಿಹತ್ಯಾಜೌ ಭವ ರಾಜೇತಿ ಭಾರತ।।

ಭಾರತ! ಹೇಗೆ ತಾನೇ ನೀನು ಶತ್ರುವಿಗೆ “ನಮ್ಮಲ್ಲಿ ಒಬ್ಬನನ್ನು ಸಂಹರಿಸಿ ರಾಜನಾಗು!” ಎಂದು ಹೇಳಿಬಿಟ್ಟೆ?

09032014a ವೃಕೋದರಂ ಸಮಾಸಾದ್ಯ ಸಂಶಯೋ ವಿಜಯೇ ಹಿ ನಃ।
09032014c ನ್ಯಾಯತೋ ಯುಧ್ಯಮಾನಾನಾಂ ಕೃತೀ ಹ್ಯೇಷ ಮಹಾಬಲಃ।।

ವೃಕೋದರನೇ ಇವನನ್ನು ಎದುರಿಸಿದರೂ ನ್ಯಾಯರೀತಿಯಲ್ಲಿ ಯುದ್ಧಮಾಡುವ ನಮಗೆ ವಿಜಯದ ಸಂದೇಹವೇ ಇದೆ. ಏಕೆಂದರೆ ಮಹಾಬಲ ದುರ್ಯೋಧನನು ಗದಾಯುದ್ಧದಲ್ಲಿ ಪರಿಣಿತನಾಗಿದ್ದಾನೆ.”

09032015 ಭೀಮ ಉವಾಚ 09032015a ಮಧುಸೂದನ ಮಾ ಕಾರ್ಷೀರ್ವಿಷಾದಂ ಯದುನಂದನ।
09032015c ಅದ್ಯ ಪಾರಂ ಗಮಿಷ್ಯಾಮಿ ವೈರಸ್ಯ ಭೃಶದುರ್ಗಮಂ।।

ಭೀಮನು ಹೇಳಿದನು: “ಮಧುಸೂದನ! ಯದುನಂದನ! ವಿಷಾದಪಡಬೇಡ! ಅತ್ಯಂತ ದುರ್ಗಮ ವೈರದ ದಡವನ್ನು ನಾನು ಇಂದು ಸೇರಿಯೇ ತೀರುತ್ತೇನೆ!

09032016a ಅಹಂ ಸುಯೋಧನಂ ಸಂಖ್ಯೇ ಹನಿಷ್ಯಾಮಿ ನ ಸಂಶಯಃ।
09032016c ವಿಜಯೋ ವೈ ಧ್ರುವಂ ಕೃಷ್ಣ ಧರ್ಮರಾಜಸ್ಯ ದೃಶ್ಯತೇ।।

ಸುಯೋಧನನನ್ನು ನಾನು ಯುದ್ಧದಲ್ಲಿ ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ! ಕೃಷ್ಣ! ಧರ್ಮರಾಜನ ಕಣ್ಣೆದುರಿಗೆ ವಿಜಯವು ನಿಶ್ಚಯವಾದುದು!

09032017a ಅಧ್ಯರ್ಧೇನ ಗುಣೇನೇಯಂ ಗದಾ ಗುರುತರೀ ಮಮ।
09032017c ನ ತಥಾ ಧಾರ್ತರಾಷ್ಟ್ರಸ್ಯ ಮಾ ಕಾರ್ಷೀರ್ಮಾಧವ ವ್ಯಥಾಂ।।

ಮಾಧವ! ನನ್ನ ಈ ಗದೆಯು ಅವನ ಗದೆಗಿಂತ ಒಂದೂವರೆಯಷ್ಟು ಹೆಚ್ಚು ಭಾರವಾಗಿದೆ. ಧಾರ್ತರಾಷ್ಟ್ರನ ಗದೆಯು ನನ್ನ ಗದೆಗೆ ಸಮಾನವಲ್ಲ. ವ್ಯಥೆಪಡೆಯದಿರು!

09032018a ಸಾಮರಾನಪಿ ಲೋಕಾಂಸ್ತ್ರೀನ್ನಾನಾಶಸ್ತ್ರಧರಾನ್ಯುಧಿ।
09032018c ಯೋಧಯೇಯಂ ರಣೇ ಹೃಷ್ಟಃ ಕಿಮುತಾದ್ಯ ಸುಯೋಧನಂ।।

ಯುದ್ಧದಲ್ಲಿ ನಾನಾ ಶಸ್ತ್ರಗಳನ್ನು ಧರಿಸಿರುವ ಮೂರುಲೋಕಗಳ ಅಮರರೊಂದಿಗೆ ಕೂಡ ನಾನು ಸಂತೋಷದಿಂದ ಯುದ್ಧಮಾಡಬಲ್ಲೆನು. ಇನ್ನು ರಣದಲ್ಲಿ ಸುಯೋಧನನೇನು?””

09032019 ಸಂಜಯ ಉವಾಚ 09032019a ತಥಾ ಸಂಭಾಷಮಾಣಂ ತು ವಾಸುದೇವೋ ವೃಕೋದರಂ।
09032019c ಹೃಷ್ಟಃ ಸಂಪೂಜಯಾಮಾಸ ವಚನಂ ಚೇದಮಬ್ರವೀತ್।।

ಸಂಜಯನು ಹೇಳಿದನು: “ಹಾಗೆ ಮಾತನಾಡುತ್ತಿದ್ದ ವೃಕೋದರನನ್ನು ಸಂತೋಷದಿಂದ ಗೌರವಿಸಿ ವಾಸುದೇವನು ಈ ಮಾತುಗಳನ್ನಾಡಿದನು:

09032020a ತ್ವಾಮಾಶ್ರಿತ್ಯ ಮಹಾಬಾಹೋ ಧರ್ಮರಾಜೋ ಯುಧಿಷ್ಠಿರಃ।
09032020c ನಿಹತಾರಿಃ ಸ್ವಕಾಂ ದೀಪ್ತಾಂ ಶ್ರಿಯಂ ಪ್ರಾಪ್ತೋ ನ ಸಂಶಯಃ।।

“ಮಹಾಬಾಹೋ! ನಿನ್ನನ್ನೇ ಆಶ್ರಯಿಸಿ ಧರ್ಮರಾಜ ಯುಧಿಷ್ಠಿರನು ಶತ್ರುಗಳನ್ನು ಕಳೆದುಕೊಂಡು ಬೆಳಗುತ್ತಿರುವ ತನ್ನ ಸಂಪತ್ತನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

09032021a ತ್ವಯಾ ವಿನಿಹತಾಃ ಸರ್ವೇ ಧೃತರಾಷ್ಟ್ರಸುತಾ ರಣೇ।
09032021c ರಾಜಾನೋ ರಾಜಪುತ್ರಾಶ್ಚ ನಾಗಾಶ್ಚ ವಿನಿಪಾತಿತಾಃ।।

ರಣದಲ್ಲಿ ಧೃತರಾಷ್ಟ್ರನ ಸರ್ವ ಸುತರೂ, ರಾಜರೂ, ರಾಜಪುತ್ರರೂ, ಆನೆಗಳೂ ನಿನ್ನಿಂದ ಹತರಾಗಿ ಬಿದ್ದಿದ್ದಾರೆ.

09032022a ಕಲಿಂಗಾ ಮಾಗಧಾಃ ಪ್ರಾಚ್ಯಾ ಗಾಂಧಾರಾಃ ಕುರವಸ್ತಥಾ।
09032022c ತ್ವಾಮಾಸಾದ್ಯ ಮಹಾಯುದ್ಧೇ ನಿಹತಾಃ ಪಾಂಡುನಂದನ।।

ಪಾಂಡುನಂದನ! ಮಹಾಯುದ್ಧದಲ್ಲಿ ನಿನ್ನನ್ನು ಎದುರಿಸಿ ಕಲಿಂಗರು, ಮಾಗಧರು, ಪೂರ್ವದವರು, ಗಾಂಧಾರರು ಮತ್ತು ಕುರವರು ಹತರಾಗಿದ್ದಾರೆ.

09032023a ಹತ್ವಾ ದುರ್ಯೋಧನಂ ಚಾಪಿ ಪ್ರಯಚ್ಚೋರ್ವೀಂ ಸಸಾಗರಾಂ।
09032023c ಧರ್ಮರಾಜಾಯ ಕೌಂತೇಯ ಯಥಾ ವಿಷ್ಣುಃ ಶಚೀಪತೇಃ।।

ಕೌಂತೇಯ! ದುರ್ಯೋಧನನನ್ನು ಕೂಡ ಸಂಹರಿಸಿ ವಿಷ್ಣುವು ಶಚೀಪತಿಗೆ ಹೇಗೋ ಹಾಗೆ ನೀನು ಧರ್ಮರಾಜನಿಗೆ ಈ ಸಾಗರಮೇಖಲೆ ಭೂಮಿಯನ್ನು ಸಮರ್ಪಿಸು.

09032024a ತ್ವಾಂ ಚ ಪ್ರಾಪ್ಯ ರಣೇ ಪಾಪೋ ಧಾರ್ತರಾಷ್ಟ್ರೋ ವಿನಂಕ್ಷ್ಯತಿ।
09032024c ತ್ವಮಸ್ಯ ಸಕ್ಥಿನೀ ಭಂಕ್ತ್ಯಾ ಪ್ರತಿಜ್ಞಾಂ ಪಾರಯಿಷ್ಯಸಿ।।

ರಣದಲ್ಲಿ ನಿನ್ನನ್ನು ಎದುರಿಸಿ ಪಾಪಿ ಧಾರ್ತರಾಷ್ಟ್ರನು ವಿನಾಶಹೊಂದುತ್ತಾನೆ. ಅವನ ಎಡ ತೊಡೆಯನ್ನು ಮುರಿದು ನೀನು ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವೆ.

09032025a ಯತ್ನೇನ ತು ಸದಾ ಪಾರ್ಥ ಯೋದ್ಧವ್ಯೋ ಧೃತರಾಷ್ಟ್ರಜಃ।
09032025c ಕೃತೀ ಚ ಬಲವಾಂಶ್ಚೈವ ಯುದ್ಧಶೌಂಡಶ್ಚ ನಿತ್ಯದಾ।।

ಪಾರ್ಥ! ಸದಾ ಪ್ರಯತ್ನಪೂರ್ವಕವಾಗಿ ಧೃತರಾಷ್ಟ್ರಜನೊಡನೆ ಯುದ್ಧಮಾಡಬೇಕು. ಏಕೆಂದರೆ ಅವನು ಕುಶಲನು, ಬಲಿಷ್ಠನು ಮತ್ತು ನಿತ್ಯವೂ ಯುದ್ಧಕಲೆಯನ್ನು ಸಂಪೂರ್ಣವಾಗಿ ತಿಳಿದಿರುವನು.”

09032026a ತತಸ್ತು ಸಾತ್ಯಕೀ ರಾಜನ್ಪೂಜಯಾಮಾಸ ಪಾಂಡವಂ।
09032026c ವಿವಿಧಾಭಿಶ್ಚ ತಾಂ ವಾಗ್ಭಿಃ ಪೂಜಯಾಮಾಸ ಮಾಧವಃ।।

ರಾಜನ್! ಆಗ ಮಾಧವ ಸಾತ್ಯಕಿಯು ಪಾಂಡವನನ್ನು ವಿವಿಧ ಮಾತುಗಳಿಂದ ಪ್ರಶಂಸಿಸಿದನು.

09032027a ಪಾಂಚಾಲಾಃ ಪಾಂಡವೇಯಾಶ್ಚ ಧರ್ಮರಾಜಪುರೋಗಮಾಃ।
09032027c ತದ್ವಚೋ ಭೀಮಸೇನಸ್ಯ ಸರ್ವ ಏವಾಭ್ಯಪೂಜಯನ್।।

ಧರ್ಮರಾಜನ ನಾಯಕತ್ವದಲ್ಲಿದ್ದ ಪಾಂಚಾಲರೂ ಪಾಂಡವೇಯರೂ ಎಲ್ಲರೂ ಭೀಮಸೇನನ ಆ ಮಾತನ್ನು ಗೌರವಿಸಿದರು.

09032028a ತತೋ ಭೀಮಬಲೋ ಭೀಮೋ ಯುಧಿಷ್ಠಿರಮಥಾಬ್ರವೀತ್।
09032028c ಸೃಂಜಯೈಃ ಸಹ ತಿಷ್ಠಂತಂ ತಪಂತಮಿವ ಭಾಸ್ಕರಂ।।

ಆಗ ಭೀಮಬಲ ಭೀಮನು ಸೃಂಜಯರೊಡನೆ ಸುಡುತ್ತಿರುವ ಭಾಸ್ಕರನಂತೆ ನಿಂತಿರುವ ಯುಧಿಷ್ಠಿರನಿಗೆ ಹೇಳಿದನು:

09032029a ಅಹಮೇತೇನ ಸಂಗಮ್ಯ ಸಂಯುಗೇ ಯೋದ್ಧುಮುತ್ಸಹೇ।
09032029c ನ ಹಿ ಶಕ್ತೋ ರಣೇ ಜೇತುಂ ಮಾಮೇಷ ಪುರುಷಾಧಮಃ।।

“ರಣದಲ್ಲಿ ನಾನೇ ಇವನೊಡನೆ ಯುದ್ಧಮಾಡಲು ಬಯಸುತ್ತೇನೆ. ಏಕೆಂದರೆ ಈ ಪುರುಷಾಧಮನು ರಣದಲ್ಲಿ ನನ್ನನ್ನು ಗೆಲ್ಲಲು ಶಕ್ತನಿಲ್ಲ.

09032030a ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ನಿಹಿತಂ ಹೃದಯೇ ಭೃಶಂ।
09032030c ಸುಯೋಧನೇ ಧಾರ್ತರಾಷ್ಟ್ರೇ ಖಾಂಡವೇಽಗ್ನಿಮಿವಾರ್ಜುನಃ।।

ಖಾಂಡವದಲ್ಲಿ ಅರ್ಜುನನು ಅಗ್ನಿಯನ್ನು ಸುರಿಸಿದಂತೆ ನನ್ನ ಹೃದಯದಲ್ಲಿ ಚೆನ್ನಾಗಿ ಹುದುಗಿರುವ ಕ್ರೋಧಾಗ್ನಿಯನ್ನು ಇಂದು ನಾನು ಧಾರ್ತರಾಷ್ಟ್ರ ಸುಯೋಧನನ ಮೇಲೆ ಸುರಿಯುತ್ತೇನೆ.

09032031a ಶಲ್ಯಮದ್ಯೋದ್ಧರಿಷ್ಯಾಮಿ ತವ ಪಾಂಡವ ಹೃಚ್ಚಯಂ।
09032031c ನಿಹತ್ಯ ಗದಯಾ ಪಾಪಮದ್ಯ ರಾಜನ್ಸುಖೀ ಭವ।।

ಪಾಂಡವ! ರಾಜನ್! ಇಂದು ಈ ಪಾಪಿಯನ್ನು ಗದೆಯಿಂದ ಸಂಹರಿಸಿ ನಿನ್ನ ಹೃದಯದಲ್ಲಿ ನೆಟ್ಟಿಕೊಂಡಿರುವ ಮುಳ್ಳನ್ನು ಕಿತ್ತುಹಾಕುತ್ತೇನೆ. ಸುಖಿಯಾಗಿರು!

09032032a ಅದ್ಯ ಕೀರ್ತಿಮಯೀಂ ಮಾಲಾಂ ಪ್ರತಿಮೋಕ್ಷ್ಯೇ ತವಾನಘ।
09032032c ಪ್ರಾಣಾನ್ ಶ್ರಿಯಂ ಚ ರಾಜ್ಯಂ ಚ ಮೋಕ್ಷ್ಯತೇಽದ್ಯ ಸುಯೋಧನಃ।।

ಅನಘ! ಇಂದು ಕೀರ್ತಿಮಯೀ ಮಾಲೆಯನ್ನು ನಿನಗೆ ತೊಡಿಸುತ್ತೇನೆ. ಸುಯೋಧನನನ್ನು ಪ್ರಾಣ-ಸಂಪತ್ತು-ರಾಜ್ಯಗಳಿಂದ ಇಂದು ಮೋಕ್ಷಗೊಳಿಸುತ್ತೇನೆ.

09032033a ರಾಜಾ ಚ ಧೃತರಾಷ್ಟ್ರೋಽದ್ಯ ಶ್ರುತ್ವಾ ಪುತ್ರಂ ಮಯಾ ಹತಂ।
09032033c ಸ್ಮರಿಷ್ಯತ್ಯಶುಭಂ ಕರ್ಮ ಯತ್ತಚ್ಚಕುನಿಬುದ್ಧಿಜಂ।।

ತನ್ನ ಮಗನು ನನ್ನಿಂದ ಹತನಾದುದನ್ನು ಕೇಳಿ ರಾಜಾ ಧೃತರಾಷ್ಟ್ರನೂ ಕೂಡ ಇಂದು ಶಕುನಿಯ ಬುದ್ಧಿಯಿಂದ ಹುಟ್ಟಿದ ಅಶುಭ ಕರ್ಮಗಳನ್ನು ನೆನಪಿಸಿಕೊಳ್ಳುತ್ತಾನೆ!”

09032034a ಇತ್ಯುಕ್ತ್ವಾ ಭರತಶ್ರೇಷ್ಠೋ ಗದಾಮುದ್ಯಮ್ಯ ವೀರ್ಯವಾನ್।
09032034c ಉದತಿಷ್ಠತ ಯುದ್ಧಾಯ ಶಕ್ರೋ ವೃತ್ರಮಿವಾಹ್ವಯನ್।।

ಹೀಗೆ ಹೇಳಿ ಆ ಭರತಶ್ರೇಷ್ಠ ವೀರ್ಯವಾನನು ಗದೆಯನ್ನು ಮೇಲೆತ್ತಿ ಶಕ್ರನು ವೃತ್ರನನ್ನು ಯುದ್ಧಕ್ಕೆ ಆಹ್ವಾನಿಸುವಂತೆ ಮೇಲೆದ್ದುನಿಂತನು.

09032035a ತಮೇಕಾಕಿನಮಾಸಾದ್ಯ ಧಾರ್ತರಾಷ್ಟ್ರಂ ಮಹಾಬಲಂ।
09032035c ನಿರ್ಯೂಥಮಿವ ಮಾತಂಗಂ ಸಮಹೃಷ್ಯಂತ ಪಾಂಡವಾಃ।।

ಹಿಂಡಿನಿಂದ ಬೇರ್ಪಟ್ಟ ಸಲಗದಂತೆ ಒಂಟಿಯಾಗಿದ್ದ ಮಹಾಬಲ ಧಾರ್ತರಾಷ್ಟ್ರನನ್ನು ನೋಡಿ ಪಾಂಡವರೆಲ್ಲರೂ ಹರ್ಷಿತರಾದರು.

09032036a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ।
09032036c ಭೀಮಸೇನಸ್ತದಾ ರಾಜನ್ದುರ್ಯೋಧನಮಥಾಬ್ರವೀತ್।।

ರಾಜನ್! ಗದೆಯನ್ನು ಎತ್ತಿಹಿಡಿದು ಶಿಖರಯುಕ್ತ ಕೈಲಾಸದಂತೆ ನಿಂತಿರುವ ದುರ್ಯೋಧನನನ್ನು ನೋಡಿ ಭೀಮಸೇನನು ಹೇಳಿದನು:

09032037a ರಾಜ್ಞಾಪಿ ಧೃತರಾಷ್ಟ್ರೇಣ ತ್ವಯಾ ಚಾಸ್ಮಾಸು ಯತ್ಕೃತಂ।
09032037c ಸ್ಮರ ತದ್ದುಷ್ಕೃತಂ ಕರ್ಮ ಯದ್ವೃತ್ತಂ ವಾರಣಾವತೇ।।

“ನೀನು ಮತ್ತು ರಾಜಾ ಧೃತರಾಷ್ಟ್ರರು ನಮ್ಮ ಮೇಲೆ ವಾರಣಾವತಲ್ಲಿ ಎಸಗಿದ ದುಷ್ಕೃತಗಳನ್ನು ಸ್ಮರಿಸಿಕೋ!

09032038a ದ್ರೌಪದೀ ಚ ಪರಿಕ್ಲಿಷ್ಟಾ ಸಭಾಮಧ್ಯೇ ರಜಸ್ವಲಾ।
09032038c ದ್ಯೂತೇ ಯದ್ವಿಜಿತೋ ರಾಜಾ ಶಕುನೇರ್ಬುದ್ಧಿನಿಶ್ಚಯಾತ್।।
09032039a ಯಾನಿ ಚಾನ್ಯಾನಿ ದುಷ್ಟಾತ್ಮನ್ಪಾಪಾನಿ ಕೃತವಾನಸಿ।
09032039c ಅನಾಗಃಸು ಚ ಪಾರ್ಥೇಷು ತಸ್ಯ ಪಶ್ಯ ಮಹತ್ಫಲಂ।।

ರಾಜನ್! ದುಷ್ಟಾತ್ಮನ್! ಸಭಾಮಧ್ಯದಲ್ಲಿ ರಜಸ್ವಲೆ ದ್ರೌಪದಿಯನ್ನು ಕಾಡಿದುದು ಮತ್ತು ಶಕುನಿಯ ಬುದ್ಧಿನಿಶ್ಚಯದಂತೆ ದ್ಯೂತದಲ್ಲಿ ರಾಜನನ್ನು ಗೆದ್ದುದು – ಇವು ಮತ್ತು ಇನ್ನೂ ಅನೇಕ ಪಾಪಗಳನ್ನೆಸಗಿರುವೆ! ನಿರಪರಾಧಿ ಪಾರ್ಥರ ಮೇಲೆಸಗಿದ ಅವುಗಳ ಮಹಾಫಲವನ್ನು ನೋಡು!

09032040a ತ್ವತ್ಕೃತೇ ನಿಹತಃ ಶೇತೇ ಶರತಲ್ಪೇ ಮಹಾಯಶಾಃ।
09032040c ಗಾಂಗೇಯೋ ಭರತಶ್ರೇಷ್ಠಃ ಸರ್ವೇಷಾಂ ನಃ ಪಿತಾಮಹಃ।।

ನೀನು ಮಾಡಿದುದರಿಂದಾಗಿ ಭರತಶ್ರೇಷ್ಠ-ಮಹಾಯಶ-ನಮ್ಮೆಲ್ಲರ ಪಿತಾಮಹ ಗಾಂಗೇಯನು ಹತನಾಗಿ ಶರತಲ್ಪದಲ್ಲಿ ಮಲಗಿದ್ದಾನೆ.

09032041a ಹತೋ ದ್ರೋಣಶ್ಚ ಕರ್ಣಶ್ಚ ಹತಃ ಶಲ್ಯಃ ಪ್ರತಾಪವಾನ್।
09032041c ವೈರಸ್ಯ ಚಾದಿಕರ್ತಾಸೌ ಶಕುನಿರ್ನಿಹತೋ ಯುಧಿ।।

ದ್ರೋಣನು ಹತನಾದನು. ಕರ್ಣನೂ ಮತ್ತು ಪ್ರತಾಪವಾನ್ ಶಲ್ಯನೂ ಹತರಾದರು. ವೈರದ ಆದಿಕರ್ತ ಶಕುನಿಯೂ ಯುದ್ಧದಲ್ಲಿ ಮಡಿದನು.

09032042a ಭ್ರಾತರಸ್ತೇ ಹತಾಃ ಶೂರಾಃ ಪುತ್ರಾಶ್ಚ ಸಹಸೈನಿಕಾಃ।
09032042c ರಾಜಾನಶ್ಚ ಹತಾಃ ಶೂರಾಃ ಸಮರೇಷ್ವನಿವರ್ತಿನಃ।।

ನಿನ್ನ ಶೂರ ಭ್ರಾತರರೂ, ಸೈನಿಕರೊಂದಿಗೆ ಪುತ್ರರೂ, ಸಮರದಿಂದ ಹಿಂದಿರುಗದ ಶೂರ ರಾಜರೂ ಹತರಾದರು.

09032043a ಏತೇ ಚಾನ್ಯೇ ಚ ನಿಹತಾ ಬಹವಃ ಕ್ಷತ್ರಿಯರ್ಷಭಾಃ।
09032043c ಪ್ರಾತಿಕಾಮೀ ತಥಾ ಪಾಪೋ ದ್ರೌಪದ್ಯಾಃ ಕ್ಲೇಶಕೃದ್ಧತಃ।।

ಇವರು ಮತ್ತು ಅನ್ಯ ಅನೇಕ ಕ್ಷತ್ರಿಯರ್ಷಭರೂ ಹತರಾದರು. ದ್ರೌಪದಿಗೆ ಕ್ಲೇಶವನ್ನು ತಂದ ಪಾಪಿ ಪ್ರತಿಕಾಮಿಯೂ ಹತನಾದನು.

09032044a ಅವಶಿಷ್ಟಸ್ತ್ವಮೇವೈಕಃ ಕುಲಘ್ನೋಽಧಮಪೂರುಷಃ।
09032044c ತ್ವಾಮಪ್ಯದ್ಯ ಹನಿಷ್ಯಾಮಿ ಗದಯಾ ನಾತ್ರ ಸಂಶಯಃ।।

ನೀನೊಬ್ಬನೇ ಕುಲಘ್ನ ಅಧಮ ಪುರುಷ ಉಳಿದುಕೊಂಡಿದ್ದೀಯೆ. ನಿನ್ನನ್ನು ಇಂದು ಗದೆಯಿಂದ ಕೊಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

09032045a ಅದ್ಯ ತೇಽಹಂ ರಣೇ ದರ್ಪಂ ಸರ್ವಂ ನಾಶಯಿತಾ ನೃಪ।
09032045c ರಾಜ್ಯಾಶಾಂ ವಿಪುಲಾಂ ರಾಜನ್ಪಾಂಡವೇಷು ಚ ದುಷ್ಕೃತಂ।।

ನೃಪ! ರಾಜನ್! ಇಂದು ರಣದಲ್ಲಿ ನಿನ್ನ ದರ್ಪವೆಲ್ಲವನ್ನೂ, ರಾಜ್ಯದಮೇಲಿನ ಅತ್ಯಾಶೆಯನ್ನೂ, ಪಾಂಡವರ ಮೇಲೆಸಗಿದ ದುಷ್ಕೃತಗಳನ್ನೂ ನಾಶಗೊಳಿಸುತ್ತೇನೆ!”

09032046 ದುರ್ಯೋಧನ ಉವಾಚ 09032046a ಕಿಂ ಕತ್ಥಿತೇನ ಬಹುಧಾ ಯುಧ್ಯಸ್ವಾದ್ಯ ಮಯಾ ಸಹ।
09032046c ಅದ್ಯ ತೇಽಹಂ ವಿನೇಷ್ಯಾಮಿ ಯುದ್ಧಶ್ರದ್ಧಾಂ ವೃಕೋದರ।।

ದುರ್ಯೋಧನನು ಹೇಳಿದನು: “ವೃಕೋದರ! ವೃಥಾ ಕೊಚ್ಚಿಕೊಳ್ಳುವುದರಿಂದ ಏನಾಗಲಿಕ್ಕಿದೆ? ಇಂದು ನನ್ನೊಡನೆ ಯುದ್ಧಮಾಡು! ನಿನ್ನಲ್ಲಿರುವ ಯುದ್ಧಶ್ರದ್ಧೆಯನ್ನು ಇಂದು ನಾನು ನಾಶಗೊಳಿಸುತ್ತೇನೆ!

09032047a ಕಿಂ ನ ಪಶ್ಯಸಿ ಮಾಂ ಪಾಪ ಗದಾಯುದ್ಧೇ ವ್ಯವಸ್ಥಿತಂ।
09032047c ಹಿಮವಚ್ಛಿಖರಾಕಾರಾಂ ಪ್ರಗೃಹ್ಯ ಮಹತೀಂ ಗದಾಂ।।

ಪಾಪಿ! ಹಿಮಾಲಯ ಶಿಖರಾಕಾರದ ಮಹಾ ಗದೆಯನ್ನು ಹಿಡಿದು ಗದಾಯುದ್ಧಕ್ಕೆ ನಿಂತಿರುವ ನನ್ನನ್ನು ನೀನು ನೋಡುತ್ತಿಲ್ಲವೇ?

09032048a ಗದಿನಂ ಕೋಽದ್ಯ ಮಾಂ ಪಾಪ ಜೇತುಮುತ್ಸಹತೇ ರಿಪುಃ।
09032048c ನ್ಯಾಯತೋ ಯುಧ್ಯಮಾನಸ್ಯ ದೇವೇಷ್ವಪಿ ಪುರಂದರಃ।।

ಪಾಪಿ! ಇಂದು ಗದಾಪಾಣಿಯಾಗಿರುವ ನನ್ನನ್ನು ಯಾವ ಶತ್ರುವು ಗೆಲ್ಲುವ ಉತ್ಸಾಹತಾಳಿರುತ್ತಾನೆ? ನ್ಯಾಯರೀತಿಯಲ್ಲಿ ಯುದ್ಧಮಾಡುವ ದೇವ ಪುರಂದರನೂ ಈ ಉತ್ಸಾಹತೋರಿಸಲಿಕ್ಕಿಲ್ಲ!

09032049a ಮಾ ವೃಥಾ ಗರ್ಜ ಕೌಂತೇಯ ಶಾರದಾಭ್ರಮಿವಾಜಲಂ।
09032049c ದರ್ಶಯಸ್ವ ಬಲಂ ಯುದ್ಧೇ ಯಾವತ್ತತ್ತೇಽದ್ಯ ವಿದ್ಯತೇ।।

ಕೌಂತೇಯ! ಶರತ್ಕಾಲದ ನಿರ್ಜಲ ಮೇಘದಂತೆ ವ್ಯರ್ಥವಾಗಿ ಗರ್ಜಿಸಬೇಡ! ನಿನ್ನಲ್ಲಿ ಎಷ್ಟು ಬಲವಿದೆಯೆಂದು ತಿಳಿದುಕೊಂಡಿರುವೆಯೋ ಅದನ್ನು ಯುದ್ಧದಲ್ಲಿ ಪ್ರದರ್ಶಿಸು!”

09032050a ತಸ್ಯ ತದ್ವಚನಂ ಶ್ರುತ್ವಾ ಪಾಂಚಾಲಾಃ ಸಹಸೃಂಜಯಾಃ।
09032050c ಸರ್ವೇ ಸಂಪೂಜಯಾಮಾಸುಸ್ತದ್ವಚೋ ವಿಜಿಗೀಷವಃ।।

ಅವನ ಆ ಮಾತನ್ನು ಕೇಳಿ ವಿಜಯೇಚ್ಛಿ ಸೃಂಜಯರೊಂದಿಗೆ ಪಾಂಚಾಲರೆಲ್ಲರೂ ಆ ಮಾತನ್ನು ಗೌರವಿಸಿದರು.

09032051a ತಂ ಮತ್ತಮಿವ ಮಾತಂಗಂ ತಲಶಬ್ದೇನ ಮಾನವಾಃ।
09032051c ಭೂಯಃ ಸಂಹರ್ಷಯಾಮಾಸೂ ರಾಜನ್ದುರ್ಯೋಧನಂ ನೃಪಂ।।

ರಾಜನ್! ಚಪ್ಪಾಳೆಶಬ್ಧಗಳಿಂದ ಮಾನವರು ಮದಿಸಿದ ಆನೆಯನ್ನು ಉದ್ರೇಕಗೊಳಿಸುವಂತೆ ರಾಜ ದುರ್ಯೋಧನನನ್ನು ಮತ್ತೆ ಮತ್ತೆ ಅವರು ಹರ್ಷಗೊಳಿಸಿದರು.

09032052a ಬೃಂಹಂತಿ ಕುಂಜರಾಸ್ತತ್ರ ಹಯಾ ಹೇಷಂತಿ ಚಾಸಕೃತ್।
09032052c ಶಸ್ತ್ರಾಣಿ ಸಂಪ್ರದೀಪ್ಯಂತೇ ಪಾಂಡವಾನಾಂ ಜಯೈಷಿಣಾಂ।।

ಆಗ ಜಯೈಷಿ ಪಾಂಡವರ ಆನೆಗಳು ಘೀಳಿಟ್ಟವು. ಕುದುರೆಗಳು ಕೆನೆದವು, ಮತ್ತು ಶಸ್ತ್ರಗಳು ಪ್ರಜ್ವಲಿಸಿದವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಭೀಮಸೇನದುರ್ಯೋಧನಸಂವಾದೇ ದ್ವಾತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಭೀಮಸೇನದುರ್ಯೋಧನಸಂವಾದ ಎನ್ನುವ ಮೂವತ್ತೆರಡನೇ ಅಧ್ಯಾಯವು.