031 ಸುಯೋಧನಯುಧಿಷ್ಠಿರಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಸಾರಸ್ವತ ಪರ್ವ

ಅಧ್ಯಾಯ 31

ಸಾರ

ದುರ್ಯೋಧನನು ತಾನು ಯುದ್ಧಕ್ಕೆ ಸಿದ್ಧನಾಗಿದ್ದೇನೆಂದು ಹೇಳಿದುದು (1-21). ಯುಧಿಷ್ಠಿರನು ತಮ್ಮವರಲ್ಲಿ ಓರ್ವನನ್ನು ಆರಿಸಿಕೊಂಡು ಯುದ್ಧಮಾಡೆಂದು ದುರ್ಯೋಧನನಿಗೆ ಹೇಳಿದುದು (22-32). ದುರ್ಯೋಧನನು ಸರೋವರದಿಂದ ಮೇಲೆದ್ದು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದುದು (33-48). “ಐವರು ಪಾಂಡವರಲ್ಲಿ ಯಾರೊಡನೆ ಯುದ್ಧಮಾಡಲು ಇಚ್ಛಿಸುವೆಯೋ ಅವನನ್ನು ಸಂಹರಿಸಿ ರಾಜನಾಗು ಅಥವಾ ಹತನಾಗಿ ಸ್ವರ್ಗವನ್ನು ಪಡೆ!” ಎಂದು ಯುಧಿಷ್ಠಿರನು ಹೇಳಿದುದು (49-53). “ನನ್ನೊಡನೆ ಇಂದು ಯುದ್ಧಮಾಡುವವನು ಗದೆಯನ್ನೆತ್ತಿಕೊಳ್ಳಲಿ!” ಎಂದು ದುರ್ಯೋಧನನು ಗದೆಯೆತ್ತಿ ನಿಂತಿದುದು (54-60).

09031001 ಧೃತರಾಷ್ಟ್ರ ಉವಾಚ 09031001a ಏವಂ ಸಂತರ್ಜ್ಯಮಾನಸ್ತು ಮಮ ಪುತ್ರೋ ಮಹೀಪತಿಃ।
09031001c ಪ್ರಕೃತ್ಯಾ ಮನ್ಯುಮಾನ್ವೀರಃ ಕಥಮಾಸೀತ್ಪರಂತಪಃ।।

ಧೃತರಾಷ್ಟ್ರನು ಹೇಳಿದನು: “ಹೀಗೆ ಚುಚ್ಚುಮಾತುಗಳಿಂದ ಹೆದರಿಸಲ್ಪಡಲು ಸ್ವಾಭಾವದಲ್ಲಿಯೇ ಕೋಪಿಷ್ಟನಾಗಿದ್ದ ನನ್ನ ಮಗ ವೀರ ಮಹೀಪತಿ ಪರಂತಪನು ಹೇಗಿದ್ದನು?

09031002a ನ ಹಿ ಸಂತರ್ಜನಾ ತೇನ ಶ್ರುತಪೂರ್ವಾ ಕದಾ ಚನ।
09031002c ರಾಜಭಾವೇನ ಮಾನ್ಯಶ್ಚ ಸರ್ವಲೋಕಸ್ಯ ಸೋಽಭವತ್।।

ಈ ಹಿಂದೆ ಅವನು ಇಂಥಹ ಬೆದರಿಕೆಯ ಮಾತುಗಳನ್ನು ಎಂದೂ ಕೇಳಿರಲಿಲ್ಲ. ರಾಜಭಾವದಿಂದ ಸರ್ವಲೋಕಗಳ ಗೌರವಕ್ಕೆ ಪಾತ್ರನಾಗಿದ್ದನು.

09031003a ಇಯಂ ಚ ಪೃಥಿವೀ ಸರ್ವಾ ಸಂಲೇಚ್ಛಾಟವಿಕಾ ಭೃಶಂ।
09031003c ಪ್ರಸಾದಾದ್ಧ್ರಿಯತೇ ಯಸ್ಯ ಪ್ರತ್ಯಕ್ಷಂ ತವ ಸಂಜಯ।।

ಮ್ಲೇಚ್ಛ-ಕಾಡುಜನರನ್ನೂ ಸೇರಿ ಈ ಇಡೀ ಭೂಮಿಯೂ ಇವನ ಪ್ರಸಾದದಿಂದ ನಡೆಯುತ್ತಿತ್ತು. ಸಂಜಯ! ಇದನ್ನು ನೀನು ಪ್ರತ್ಯಕ್ಷ ಕಂಡಿದ್ದೀಯೆ.

09031004a ಸ ತಥಾ ತರ್ಜ್ಯಮಾನಸ್ತು ಪಾಂಡುಪುತ್ರೈರ್ವಿಶೇಷತಃ।
09031004c ವಿಹೀನಶ್ಚ ಸ್ವಕೈರ್ಭೃತ್ಯೈರ್ನಿರ್ಜನೇ ಚಾವೃತೋ ಭೃಶಂ।।

ತನ್ನ ಸೇವಕರ್ಯಾರೂ ಇಲ್ಲದ ಆ ನಿರ್ಜನ ಪ್ರದೇಶದಲ್ಲಿ ವಿಶೇಷವಾಗಿ ಪಾಂಡುಪುತ್ರರಿಂದ ಸುತ್ತುವರೆಯಲ್ಪಟ್ಟು ಏಕಾಕಿಯಾಗಿ ಅವನು ಬೆದರಿಕೆಗೊಳಪಟ್ಟಿದ್ದನು!

09031005a ಶ್ರುತ್ವಾ ಸ ಕಟುಕಾ ವಾಚೋ ಜಯಯುಕ್ತಾಃ ಪುನಃ ಪುನಃ।
09031005c ಕಿಮಬ್ರವೀತ್ಪಾಂಡವೇಯಾಂಸ್ತನ್ಮಮಾಚಕ್ಷ್ವ ಸಂಜಯ।।

ವಿಜಯಿಗಳಾದವರ ಆ ಕಟುಕ ಮಾತುಗಳನ್ನು ಪುನಃ ಪುನಃ ಕೇಳಿ ಅವನು ಪಾಂಡವೇಯರಿಗೆ ಏನು ಹೇಳಿದನು ಎನ್ನುವುದನ್ನು ನನಗೆ ಹೇಳು ಸಂಜಯ!”

09031006 ಸಂಜಯ ಉವಾಚ 09031006a ತರ್ಜ್ಯಮಾನಸ್ತದಾ ರಾಜನ್ನುದಕಸ್ಥಸ್ತವಾತ್ಮಜಃ।
09031006c ಯುಧಿಷ್ಠಿರೇಣ ರಾಜೇಂದ್ರ ಭ್ರಾತೃಭಿಃ ಸಹಿತೇನ ಹ।।

ಸಂಜಯನು ಹೇಳಿದನು: “ರಾಜೇಂದ್ರ! ರಾಜನ್! ನೀರಿನಲ್ಲಿದ್ದ ನಿನ್ನ ಮಗನನ್ನು ಸಹೋದರರೊಂದಿಗೆ ಯುಧಿಷ್ಠಿರನು ಬಹಳವಾಗಿ ಬೆದರಿಸಿದನು.

09031007a ಶ್ರುತ್ವಾ ಸ ಕಟುಕಾ ವಾಚೋ ವಿಷಮಸ್ಥೋ ಜನಾಧಿಪಃ।
09031007c ದೀರ್ಘಮುಷ್ಣಂ ಚ ನಿಃಶ್ವಸ್ಯ ಸಲಿಲಸ್ಥಃ ಪುನಃ ಪುನಃ।।

ಕಟುಕು ಮಾತುಗಳನ್ನು ಕೇಳಿ ವಿಷಮ ಪರಿಸ್ಥಿತಿಯಲ್ಲಿ ನೀರಿನಲ್ಲಿದ್ದ ಜನಾಧಿಪನು ಪುನಃ ಪುನಃ ದೀರ್ಘ ಬಿಸಿಯುಸಿರನ್ನು ಬಿಡುತ್ತಿದ್ದನು.

09031008a ಸಲಿಲಾಂತರ್ಗತೋ ರಾಜಾ ಧುನ್ವನ್ ಹಸ್ತೌ ಪುನಃ ಪುನಃ।
09031008c ಮನಶ್ಚಕಾರ ಯುದ್ಧಾಯ ರಾಜಾನಂ ಚಾಭ್ಯಭಾಷತ।।

ನೀರಿನಲ್ಲಿ ಹುದುಗಿದ್ದ ರಾಜನು ಪುನಃ ಪುನಃ ಕೈಗಳನ್ನು ಕೊಡವುತ್ತಾ ಯುದ್ಧದ ಮನಸ್ಸು ಮಾಡಿ ರಾಜನಿಗೆ ಹೇಳಿದನು:

09031009a ಯೂಯಂ ಸಸುಹೃದಃ ಪಾರ್ಥಾಃ ಸರ್ವೇ ಸರಥವಾಹನಾಃ।
09031009c ಅಹಮೇಕಃ ಪರಿದ್ಯೂನೋ ವಿರಥೋ ಹತವಾಹನಃ।।

“ಪಾರ್ಥರೇ! ನೀವೆಲ್ಲರೂ ಸುಹೃದಯರೊಂದಿಗಿದ್ದೀರಿ. ರಥವಾಹನಗಳೊಂದಿಗಿದ್ದೀರಿ. ನಾನಾದರೋ ಏಕಾಂಗಿಯಾಗಿದ್ದೇನೆ. ವಿರಥನಾಗಿದ್ದೇನೆ. ವಾಹನಗಳನ್ನು ಕಳೆದುಕೊಂಡಿದ್ದೇನೆ.

09031010a ಆತ್ತಶಸ್ತ್ರೈ ರಥಗತೈರ್ಬಹುಭಿಃ ಪರಿವಾರಿತಃ।
09031010c ಕಥಮೇಕಃ ಪದಾತಿಃ ಸನ್ನಶಸ್ತ್ರೋ ಯೋದ್ಧುಮುತ್ಸಹೇ।।

ಪದಾತಿಯಾಗಿರುವ, ಶಸ್ತ್ರರಹಿತನಾಗಿರುವ, ಏಕಾಂಗಿಯಾಗಿರುವ ನಾನು ರಥಾರೂಢರಾಗಿರುವ, ಅನೇಕರಿಂದ ಸುತ್ತುವರೆಯಲ್ಪಟ್ಟಿರುವ ನಿಮ್ಮೊಡನೆ ಹೇಗೆ ಯುದ್ಧಮಾಡಲಿ?

09031011a ಏಕೈಕೇನ ತು ಮಾಂ ಯೂಯಂ ಯೋಧಯಧ್ವಂ ಯುಧಿಷ್ಠಿರ।
09031011c ನ ಹ್ಯೇಕೋ ಬಹುಭಿರ್ವೀರೈರ್ನ್ಯಾಯ್ಯಂ ಯೋಧಯಿತುಂ ಯುಧಿ।।

ಯುಧಿಷ್ಠಿರ! ನೀವು ಯೋಧರು ಒಬ್ಬೊಬ್ಬರೇ ನನ್ನೊಡನೆ ಯುದ್ಧಮಾಡಿ! ಅನೇಕ ವೀರರೊಂದಿಗೆ ಒಬ್ಬನನ್ನೇ ಯುದ್ಧದಲ್ಲಿ ತೊಡಗಿಸುವುದು ನ್ಯಾಯವಲ್ಲ.

09031012a ವಿಶೇಷತೋ ವಿಕವಚಃ ಶ್ರಾಂತಶ್ಚಾಪಃ ಸಮಾಶ್ರಿತಃ।
09031012c ಭೃಶಂ ವಿಕ್ಷತಗಾತ್ರಶ್ಚ ಶ್ರಾಂತವಾಹನಸೈನಿಕಃ।।

ವಿಶೇಷವಾಗಿ ನಾನು ಕವಚಗಳಿಲ್ಲದವನಾಗಿದ್ದೇನೆ. ಬಹಳವಾಗಿ ಬಳಲಿದ್ದೇನೆ. ನೀರನ್ನು ಆಶ್ರಯಿಸಿ ಕುಳಿತಿದ್ದೇನೆ. ದೇಹವು ಬಹಳವಾಗಿ ಗಾಯಗೊಂಡಿದೆ. ವಾಹನ-ಸೈನಿಕರು ಹತರಾಗಿದ್ದಾರೆ.

09031013a ನ ಮೇ ತ್ವತ್ತೋ ಭಯಂ ರಾಜನ್ನ ಚ ಪಾರ್ಥಾದ್ವೃಕೋದರಾತ್।
09031013c ಫಲ್ಗುನಾದ್ವಾಸುದೇವಾದ್ವಾ ಪಾಂಚಾಲೇಭ್ಯೋಽಥ ವಾ ಪುನಃ।।

ರಾಜನ್! ನನಗೆ ನಿನ್ನ ಭಯವಿಲ್ಲ. ಪಾರ್ಥ ವೃಕೋದರ, ಫಲ್ಗುನ-ವಾಸುದೇವರ ಅಥವಾ ಪುನಃ ಪಾಂಚಾಲರಿಬ್ಬರು – ಧೃಷ್ಟದ್ಯುಮ್ನ-ಶಿಖಂಡಿಯರ ಭಯವೂ ನನಗಿಲ್ಲ.

09031014a ಯಮಾಭ್ಯಾಂ ಯುಯುಧಾನಾದ್ವಾ ಯೇ ಚಾನ್ಯೇ ತವ ಸೈನಿಕಾಃ।
09031014c ಏಕಃ ಸರ್ವಾನಹಂ ಕ್ರುದ್ಧೋ ನ ತಾನ್ಯೋದ್ಧುಮಿಹೋತ್ಸಹೇ।।

ನಕುಲ-ಸಹದೇವರ ಅಥವಾ ಯುಯುಧಾನ ಸಾತ್ಯಕಿಯ ಅಥವಾ ನಿನ್ನ ಅನ್ಯ ಸೈನಿಕರ ಭಯವಿಲ್ಲ. ಯುದ್ಧದಲ್ಲಿ ಕ್ರುದ್ಧನಾದ ನಾನೊಬ್ಬನೇ ಅವರನ್ನು ಎದುರಿಸಬಲ್ಲೆನು.

09031015a ಧರ್ಮಮೂಲಾ ಸತಾಂ ಕೀರ್ತಿರ್ಮನುಷ್ಯಾಣಾಂ ಜನಾಧಿಪ।
09031015c ಧರ್ಮಂ ಚೈವೇಹ ಕೀರ್ತಿಂ ಚ ಪಾಲಯನ್ಪ್ರಬ್ರವೀಮ್ಯಹಂ।।

ಜನಾಧಿಪ! ಸತ್ಪುರುಷರ ಕೀರ್ತಿಗೆ ಧರ್ಮವೇ ಮೂಲ. ಧರ್ಮ ಮತ್ತು ಕೀರ್ತಿಯನ್ನು ಪಾಲಿಸುವಂತಹ ಈ ಮಾತುಗಳನ್ನಾಡುತ್ತಿದ್ದೇನೆ.

09031016a ಅಹಮುತ್ಥಾಯ ವಃ ಸರ್ವಾನ್ಪ್ರತಿಯೋತ್ಸ್ಯಾಮಿ ಸಂಯುಗೇ।
09031016c ಅನ್ವಂಶಾಭ್ಯಾಗತಾನ್ಸರ್ವಾನೃತೂನ್ಸಂವತ್ಸರೋ ಯಥಾ।।

ಸಂವತ್ಸರವು ಎಲ್ಲ ಋತುಗಳನ್ನು ಒಂದಾದ ನಂತರ ಒಂದನ್ನು ಎದುರಿಸುವಂತೆ ಮೇಲೆದ್ದು ನಾನು ಯುದ್ಧದಲ್ಲಿ ಒಬ್ಬೊಬ್ಬರಾಗಿ ನಿಮ್ಮೆಲ್ಲರನ್ನೂ ಎದುರಿಸುತ್ತೇನೆ.

09031017a ಅದ್ಯ ವಃ ಸರಥಾನ್ಸಾಶ್ವಾನಶಸ್ತ್ರೋ ವಿರಥೋಽಪಿ ಸನ್।
09031017c ನಕ್ಷತ್ರಾಣೀವ ಸರ್ವಾಣಿ ಸವಿತಾ ರಾತ್ರಿಸಂಕ್ಷಯೇ।।
09031017e ತೇಜಸಾ ನಾಶಯಿಷ್ಯಾಮಿ ಸ್ಥಿರೀಭವತ ಪಾಂಡವಾಃ।।

ಪಾಂಡವರೇ! ಸ್ಥಿರರಾಗಿರಿ! ನಿಃಶಸ್ತ್ರ ಮತ್ತು ವಿರಥನಾಗಿದ್ದರೂ ನಾನು ಇಂದು ನಿಮ್ಮೆಲ್ಲರನ್ನೂ ರಾತ್ರಿಕಳೆಯುವಾಗ ಸೂರ್ಯನು ಸರ್ವ ನಕ್ಷತ್ರಗಳನ್ನು ಹೇಗೋ ಹಾಗೆ ನನ್ನ ತೇಜಸ್ಸಿನಿಂದ ನಾಶಗೊಳಿಸುತ್ತೇನೆ.

09031018a ಅದ್ಯಾನೃಣ್ಯಂ ಗಮಿಷ್ಯಾಮಿ ಕ್ಷತ್ರಿಯಾಣಾಂ ಯಶಸ್ವಿನಾಂ।
09031018c ಬಾಹ್ಲೀಕದ್ರೋಣಭೀಷ್ಮಾಣಾಂ ಕರ್ಣಸ್ಯ ಚ ಮಹಾತ್ಮನಃ।।
09031019a ಜಯದ್ರಥಸ್ಯ ಶೂರಸ್ಯ ಭಗದತ್ತಸ್ಯ ಚೋಭಯೋಃ।
09031019c ಮದ್ರರಾಜಸ್ಯ ಶಲ್ಯಸ್ಯ ಭೂರಿಶ್ರವಸ ಏವ ಚ।।
09031020a ಪುತ್ರಾಣಾಂ ಭರತಶ್ರೇಷ್ಠ ಶಕುನೇಃ ಸೌಬಲಸ್ಯ ಚ।

ಭರತಶ್ರೇಷ್ಠ! ಇಂದು ನಾನು ಯಶಸ್ವಿ ಕ್ಷತ್ರಿಯರ – ಬಾಹ್ಲೀಕ, ದ್ರೋಣ, ಭೀಷ್ಮ, ಮಹಾತ್ಮ ಕರ್ಣ, ಶೂರ ಜಯದ್ರಥ, ಭಗದತ್ತ, ಮದ್ರರಾಜ ಶಲ್ಯ, ಭೂರಿಶ್ರವ, ಸೌಬಲ ಶಕುನಿ ಮತ್ತು ಪುತ್ರರ – ಋಣಮುಕ್ತನಾಗುತ್ತೇನೆ.

09031020c ಮಿತ್ರಾಣಾಂ ಸುಹೃದಾಂ ಚೈವ ಬಾಂಧವಾನಾಂ ತಥೈವ ಚ।।
09031021a ಆನೃಣ್ಯಮದ್ಯ ಗಚ್ಚಾಮಿ ಹತ್ವಾ ತ್ವಾಂ ಭ್ರಾತೃಭಿಃ ಸಹ।
09031021c ಏತಾವದುಕ್ತ್ವಾ ವಚನಂ ವಿರರಾಮ ಜನಾಧಿಪಃ।।

ಸಹೋದರರೊಂದಿಗೆ ನಿನ್ನನ್ನು ಸಂಹರಿಸಿ ಇಂದು ನಾನು ಮಿತ್ರ-ಸುಹೃದಯ-ಬಾಂಧವರ ಋಣಮುಕ್ತನಾಗುತ್ತೇನೆ!” ಹೀಗೆ ಹೇಳಿ ಜನಾಧಿಪನು ಸುಮ್ಮನಾದನು.

09031022 ಯುಧಿಷ್ಠಿರ ಉವಾಚ 09031022a ದಿಷ್ಟ್ಯಾ ತ್ವಮಪಿ ಜಾನೀಷೇ ಕ್ಷತ್ರಧರ್ಮಂ ಸುಯೋಧನ।
09031022c ದಿಷ್ಟ್ಯಾ ತೇ ವರ್ತತೇ ಬುದ್ಧಿರ್ಯುದ್ಧಾಯೈವ ಮಹಾಭುಜ।।
09031023a ದಿಷ್ಟ್ಯಾ ಶೂರೋಽಸಿ ಕೌರವ್ಯ ದಿಷ್ಟ್ಯಾ ಜಾನಾಸಿ ಸಂಗರಂ।
09031023c ಯಸ್ತ್ವಮೇಕೋ ಹಿ ನಃ ಸರ್ವಾನ್ಸಂಯುಗೇ ಯೋದ್ಧುಮಿಚ್ಚಸಿ।।

ಯುಧಿಷ್ಠಿರನು ಹೇಳಿದನು: “ಒಳ್ಳೆಯದಾಯಿತು! ಸುಯೋಧನ! ನೀನೂ ಕೂಡ ಕ್ಷತ್ರಧರ್ಮವನ್ನು ತಿಳಿದುಕೊಂಡಿರುವೆ! ಮಹಾಭುಜ! ಒಳ್ಳೆಯದಾಯಿತು! ನೀನು ಯುದ್ಧಕ್ಕೆ ಮನಸ್ಸು ಮಾಡಿರುವೆ! ಕೌರವ್ಯ! ಒಳ್ಳೆಯದಾಯಿತು! ನೀನೊಬ್ಬನೇ ನಮ್ಮೆಲ್ಲರೊಡನೆಯೂ ರಣದಲ್ಲಿ ಹೋರಾಡಲು ಬಯಸುತ್ತಿರುವೆ! ಶೂರನಾಗಿರುವೆ. ಯುದ್ಧವನ್ನು ತಿಳಿದುಕೊಂಡಿರುವೆ.

09031024a ಏಕ ಏಕೇನ ಸಂಗಮ್ಯ ಯತ್ತೇ ಸಮ್ಮತಮಾಯುಧಂ।
09031024c ತತ್ತ್ವಮಾದಾಯ ಯುಧ್ಯಸ್ವ ಪ್ರೇಕ್ಷಕಾಸ್ತೇ ವಯಂ ಸ್ಥಿತಾಃ।।

ಏಕಾಂಗಿಯಾಗಿ ನಿನಗೆ ಸಮ್ಮತವಾದ ಆಯುಧವನ್ನು ತೆಗೆದುಕೊಂಡು ಒಬ್ಬನೊಂದಿಗೇ ಯುದ್ಧಮಾಡು. ನಾವು ಪ್ರೇಕ್ಷಕರಾಗಿ ನಿಂತಿರುತ್ತೇವೆ.

09031025a ಅಯಮಿಷ್ಟಂ ಚ ತೇ ಕಾಮಂ ವೀರ ಭೂಯೋ ದದಾಮ್ಯಹಂ।
09031025c ಹತ್ವೈಕಂ ಭವತೋ ರಾಜ್ಯಂ ಹತೋ ವಾ ಸ್ವರ್ಗಮಾಪ್ನುಹಿ।।

ವೀರ! ನಿನಗಿಷ್ಟವಾದ ಈ ಅವಕಾಶವನ್ನು ಪುನಃ ನಾನು ನೀಡುತ್ತಿದ್ದೇನೆ. ಒಬ್ಬನನ್ನು ಸಂಹರಿಸಿದರೂ ರಾಜ್ಯವು ನಿನ್ನದಾಗುವುದು. ಅಥವಾ ನೀನೇ ಹತನಾದರೆ ಸ್ವರ್ಗವನ್ನು ಹೊಂದುತ್ತೀಯೆ!”

09031026 ದುರ್ಯೋಧನ ಉವಾಚ 09031026a ಏಕಶ್ಚೇದ್ಯೋದ್ಧುಮಾಕ್ರಂದೇ ವರೋಽದ್ಯ ಮಮ ದೀಯತೇ।
09031026c ಆಯುಧಾನಾಮಿಯಂ ಚಾಪಿ ವೃತಾ ತ್ವತ್ಸಮ್ಮತೇ ಗದಾ।।

ದುರ್ಯೋಧನನು ಹೇಳಿದನು: “ಒಬ್ಬನೊಡನೆಯೇ ಯುದ್ಧಮಾಡಬಹುದೆಂದಾದರೆ ಆ ಒಬ್ಬನನ್ನು ಆರಿಸಿ ನನಗೆ ಕೊಡು! ನಿನ್ನ ಅನುಮತಿಯಂತೆ ಆಯುಧಗಳಲ್ಲಿ ನಾನು ಗದೆಯನ್ನು ಆರಿಸಿಕೊಂಡಿದ್ದೇನೆ.

09031027a ಭ್ರಾತೄಣಾಂ ಭವತಾಮೇಕಃ ಶಕ್ಯಂ ಮಾಂ ಯೋಽಭಿಮನ್ಯತೇ।
09031027c ಪದಾತಿರ್ಗದಯಾ ಸಂಖ್ಯೇ ಸ ಯುಧ್ಯತು ಮಯಾ ಸಹ।।

ನಿನ್ನ ಸಹೋದರರಲ್ಲಿ ನನ್ನೊಡನೆ ಹೋರಾಡಲು ಶಕ್ಯನೆಂದು ತಿಳಿದುಕೊಂಡಿರುವವನು ರಣದಲ್ಲಿ ಪದಾತಿಯಾಗಿ ಗದೆಯನ್ನು ಹಿಡಿದೇ ನನ್ನೊಡನೆ ಯುದ್ಧಮಾಡಲಿ.

09031028a ವೃತ್ತಾನಿ ರಥಯುದ್ಧಾನಿ ವಿಚಿತ್ರಾಣಿ ಪದೇ ಪದೇ।
09031028c ಇದಮೇಕಂ ಗದಾಯುದ್ಧಂ ಭವತ್ವದ್ಯಾದ್ಭುತಂ ಮಹತ್।।

ವಿಚಿತ್ರ ರಥಯುದ್ಧಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಮಹತ್ತರ ಅದ್ಭುತವಾದ ಇದೊಂದು ಗದಾಯುದ್ಧವೂ ನಡೆದುಹೋಗಲಿ!

09031029a ಅನ್ನಾನಾಮಪಿ ಪರ್ಯಾಯಂ ಕರ್ತುಮಿಚ್ಚಂತಿ ಮಾನವಾಃ।
09031029c ಯುದ್ಧಾನಾಮಪಿ ಪರ್ಯಾಯೋ ಭವತ್ವನುಮತೇ ತವ।।

ಸಾಮಾನ್ಯವಾಗಿ ಮಾನವರು ಒಂದರ ನಂತರ ಇನ್ನೊಂದು ಅಸ್ತ್ರಗಳನ್ನು ಬಳಸುತ್ತಾರೆ. ನಿನ್ನ ಅನುಮತಿಯಂತೆ ಯುದ್ಧಗಳ ಪರ್ಯಾಯವೂ ನಡೆದುಹೋಗಲಿ!

09031030a ಗದಯಾ ತ್ವಾಂ ಮಹಾಬಾಹೋ ವಿಜೇಷ್ಯಾಮಿ ಸಹಾನುಜಂ।
09031030c ಪಾಂಚಾಲಾನ್ಸೃಂಜಯಾಂಶ್ಚೈವ ಯೇ ಚಾನ್ಯೇ ತವ ಸೈನಿಕಾಃ।।

ಮಹಾಬಾಹೋ! ಗದೆಯಿಂದಲೇ ನಾನು ಅನುಜರೊಂದಿಗೆ ನಿನ್ನನ್ನು, ಹಾಗೆಯೇ ಪಾಂಚಾಲ-ಸೃಂಜಯರನ್ನೂ, ನಿನ್ನ ಇತರ ಸೈನಿಕರನ್ನೂ ಜಯಿಸುತ್ತೇನೆ!”

09031031 ಯುಧಿಷ್ಠಿರ ಉವಾಚ 09031031a ಉತ್ತಿಷ್ಠೋತ್ತಿಷ್ಠ ಗಾಂಧಾರೇ ಮಾಂ ಯೋಧಯ ಸುಯೋಧನ।
09031031c ಏಕ ಏಕೇನ ಸಂಗಮ್ಯ ಸಂಯುಗೇ ಗದಯಾ ಬಲೀ।।

ಯುಧಿಷ್ಠಿರನು ಹೇಳಿದನು: “ಗಾಂಧಾರೇ! ಸುಯೋಧನ! ಏಳು ಎದ್ದೇಳು! ನನ್ನೊಡನೆ ಯುದ್ಧಮಾಡು. ಬಲಶಾಲಿಯಾದ ನೀನು ನಮ್ಮಲ್ಲಿನ ಒಬ್ಬ ಯೋಧನೊಡನೆಯೇ ಗದೆಯಿಂದ ಯುದ್ಧಮಾಡು.

09031032a ಪುರುಷೋ ಭವ ಗಾಂಧಾರೇ ಯುಧ್ಯಸ್ವ ಸುಸಮಾಹಿತಃ।
09031032c ಅದ್ಯ ತೇ ಜೀವಿತಂ ನಾಸ್ತಿ ಯದ್ಯಪಿ ತ್ವಂ ಮನೋಜವಃ।।

ಗಾಂಧಾರೇ! ಪುರುಷನಾಗು! ಸಮಾಹಿತನಾಗಿ ಯುದ್ಧಮಾಡು! ಒಂದುವೇಳೆ ಮನಸ್ಸಿನ ವೇಗವುಳ್ಳವನಾಗಿದ್ದರೂ ಇಂದು ನೀನು ಜೀವಂತವಾಗಿರಲಾರೆ!””

09031033 ಸಂಜಯ ಉವಾಚ 09031033a ಏತತ್ಸ ನರಶಾರ್ದೂಲೋ ನಾಮೃಷ್ಯತ ತವಾತ್ಮಜಃ।
09031033c ಸಲಿಲಾಂತರ್ಗತಃ ಶ್ವಭ್ರೇ ಮಹಾನಾಗ ಇವ ಶ್ವಸನ್।।

ಸಂಜಯನು ಹೇಳಿದನು: “ನಿನ್ನ ಮಗ ನರಶಾರ್ದೂಲನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ನೀರಿನಲ್ಲಿದ್ದ ಅವನು ಬಿಲದಲ್ಲಿದ್ದ ಮಹಾನಾಗದಂತೆ ಭುಸುಗುಟ್ಟುತ್ತಿದ್ದನು.

09031034a ತಥಾಸೌ ವಾಕ್ಪ್ರತೋದೇನ ತುದ್ಯಮಾನಃ ಪುನಃ ಪುನಃ।
09031034c ವಾಚಂ ನ ಮಮೃಷೇ ಧೀಮಾನುತ್ತಮಾಶ್ವಃ ಕಶಾಮಿವ।।

ಶ್ರೇಷ್ಠ ಕುದುರೆಯು ಚಾವಟಿಯನ್ನು ಹೇಗೋ ಹಾಗೆ ಪುನಃ ಪುನಃ ಚುಚ್ಚುತ್ತಿದ್ದ ಅವನ ಆ ಮಾತೆಂಬ ಚಾವಟಿಯೇಟುಗಳನ್ನು ಅವನು ಸಹಿಸಿಕೊಳ್ಳಲಾರದೇ ಹೋದನು.

09031035a ಸಂಕ್ಷೋಭ್ಯ ಸಲಿಲಂ ವೇಗಾದ್ಗದಾಮಾದಾಯ ವೀರ್ಯವಾನ್।
09031035c ಅದ್ರಿಸಾರಮಯೀಂ ಗುರ್ವೀಂ ಕಾಂಚನಾಂಗದಭೂಷಣಾಂ।।
09031035e ಅಂತರ್ಜಲಾತ್ಸಮುತ್ತಸ್ಥೌ ನಾಗೇಂದ್ರ ಇವ ನಿಃಶ್ವಸನ್।।

ಆ ವೀರ್ಯವಾನನು ಲೋಹಮಯ-ಬಹುಭಾರ-ಕಾಂಚನಾಂಗದಗಳಿಂದ ವಿಭೂಷಿತವಾಗಿದ್ದ ಗದೆಯನ್ನು ಹಿಡಿದು ನಾಗೇಂದ್ರನಂತೆ ಭುಸುಗುಟ್ಟುತ್ತಾ, ನೀರನ್ನು ಅಲ್ಲೋಲಕಲ್ಲೋಲಗೊಳಿಸುತ್ತಾ ವೇಗದಿಂದ ಸರೋವರದ ತಳದಿಂದ ಮೇಲೆದ್ದನು.

09031036a ಸ ಭಿತ್ತ್ವಾ ಸ್ತಂಭಿತಂ ತೋಯಂ ಸ್ಕಂಧೇ ಕೃತ್ವಾಯಸೀಂ ಗದಾಂ।
09031036c ಉದತಿಷ್ಠತ ಪುತ್ರಸ್ತೇ ಪ್ರತಪನ್ರಶ್ಮಿಮಾನಿವ।।

ಸ್ತಂಭಿತ ನೀರನ್ನು ಒಡೆದು ಉಕ್ಕಿನ ಗದೆಯನ್ನು ಹೆಗಲಮೇಲಿರಿಸಿಕೊಂಡು ನಿನ್ನ ಮಗನು ಸೂರ್ಯನಂತೆ ಸುಡುತ್ತಾ ಸರೋವರದಿಂದ ಮೇಲೆ ಬಂದನು.

09031037a ತತಃ ಶೈಕ್ಯಾಯಸೀಂ ಗುರ್ವೀಂ ಜಾತರೂಪಪರಿಷ್ಕೃತಾಂ।
09031037c ಗದಾಂ ಪರಾಮೃಶದ್ಧೀಮಾನ್ಧಾರ್ತರಾಷ್ಟ್ರೋ ಮಹಾಬಲಃ।।

ಆಗ ಮಹಾಬಲ ಧಾರ್ತರಾಷ್ಟ್ರನು ಬಂಗಾರದಿಂದ ಪರಿಷ್ಕೃತಗೊಂಡ ಆ ಲೋಹಮಯ ಭಾರ ಗದೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು.

09031038a ಗದಾಹಸ್ತಂ ತು ತಂ ದೃಷ್ಟ್ವಾ ಸಶೃಂಗಮಿವ ಪರ್ವತಂ।
09031038c ಪ್ರಜಾನಾಮಿವ ಸಂಕ್ರುದ್ಧಂ ಶೂಲಪಾಣಿಮವಸ್ಥಿತಂ।।
09031038e ಸಗದೋ ಭಾರತೋ ಭಾತಿ ಪ್ರತಪನ್ಭಾಸ್ಕರೋ ಯಥಾ।।

ಶಿಖರವುಳ್ಳ ಪರ್ವತದಂತೆ ಗದೆಯನ್ನು ಹಿಡಿದಿದ್ದ ಅವನು ಪ್ರಜೆಗಳ ಮೇಲೆ ಸಂಕ್ರುದ್ಧನಾಗಿ ನಿಂತಿದ್ದ ಶೂಲಪಾಣಿಯಂತೆ ಕಂಡನು. ಗದೆಯನ್ನು ಹಿಡಿದಿದ್ದ ಭಾರತನು ತಾಪವನ್ನುಂಟುಮಾಡುವ ಭಾಸ್ಕರನಂತೆ ಕಾಣುತ್ತಿದ್ದನು.

09031039a ತಮುತ್ತೀರ್ಣಂ ಮಹಾಬಾಹುಂ ಗದಾಹಸ್ತಮರಿಂದಮಂ।
09031039c ಮೇನಿರೇ ಸರ್ವಭೂತಾನಿ ದಂಡಹಸ್ತಮಿವಾಂತಕಂ।।

ಹಾಗೆ ಗದೆಯನ್ನು ಹಿಡಿದು ಮೇಲೆ ಬರುತ್ತಿರುವ ಆ ಮಹಾಬಾಹು ಅರಿಂದಮನನ್ನು ನೋಡಿ ಸರ್ವಭೂತಗಳೂ ದಂಡವನ್ನು ಹಿಡಿದ ಅಂತಕನೇ ಮೇಲೇರಿ ಬರುತ್ತಿದ್ದಾನೋ ಎಂದು ಅಭಿಪ್ರಾಯಪಟ್ಟರು.

09031040a ವಜ್ರಹಸ್ತಂ ಯಥಾ ಶಕ್ರಂ ಶೂಲಹಸ್ತಂ ಯಥಾ ಹರಂ।
09031040c ದದೃಶುಃ ಸರ್ವಪಾಂಚಾಲಾಃ ಪುತ್ರಂ ತವ ಜನಾಧಿಪ।।

ಜನಾಧಿಪ! ಸರ್ವ ಪಾಂಚಾಲರಿಗೆ ನಿನ್ನ ಮಗನು ವಜ್ರವನ್ನು ಹಿಡಿದ ಶಕ್ರನಂತೆ ಮತ್ತು ಶೂಲವನ್ನು ಹಿಡಿದ ಹರನಂತೆ ಕಂಡನು.

09031041a ತಮುತ್ತೀರ್ಣಂ ತು ಸಂಪ್ರೇಕ್ಷ್ಯ ಸಮಹೃಷ್ಯಂತ ಸರ್ವಶಃ।
09031041c ಪಾಂಚಾಲಾಃ ಪಾಂಡವೇಯಾಶ್ಚ ತೇಽನ್ಯೋನ್ಯಸ್ಯ ತಲಾನ್ದದುಃ।।

ಮೇಲೆದ್ದುಬರುತ್ತಿದ್ದ ಅವನನ್ನು ನೋಡಿ ಎಲ್ಲೆಡೆಯೂ ಹರ್ಷವುಂಟಾಯಿತು. ಪಾಂಚಾಲ-ಪಾಂಡವರು ಅನ್ಯೋನ್ಯರ ಅಂಗೈಗಳಿಗೆ ಹೊಡೆದು ಚಪ್ಪಾಳೆತಟ್ಟಿದರು.

09031042a ಅವಹಾಸಂ ತು ತಂ ಮತ್ವಾ ಪುತ್ರೋ ದುರ್ಯೋಧನಸ್ತವ।
09031042c ಉದ್ವೃತ್ಯ ನಯನೇ ಕ್ರುದ್ಧೋ ದಿಧಕ್ಷುರಿವ ಪಾಂಡವಾನ್।।

ಅದು ತನಗೆ ಅಪಹಾಸ್ಯವೆಂದು ತಿಳಿದ ನಿನ್ನ ಮಗ ದುರ್ಯೋಧನನು ಸಿಟ್ಟಿನಿಂದ ಕಣ್ಣುಗಳನ್ನು ಮೇಲೆಮಾಡಿ ಸುಟ್ಟುಬಿಡುವನೋ ಎಂಬಂತೆ ಪಾಂಡವರನ್ನು ನೋಡಿದನು.

09031043a ತ್ರಿಶಿಖಾಂ ಭ್ರುಕುಟೀಂ ಕೃತ್ವಾ ಸಂದಷ್ಟದಶನಚ್ಚದಃ।
09031043c ಪ್ರತ್ಯುವಾಚ ತತಸ್ತಾನ್ ವೈ ಪಾಂಡವಾನ್ ಸಹಕೇಶವಾನ್।।

ಹುಬ್ಬನ್ನು ಗಂಟಿಕ್ಕಿ ಅವುಡುಗಚ್ಚುತ್ತಾ ಅವನು ಕೇಶವಸಹಿತರಾದ ಪಾಂಡವರಿಗೆ ಹೇಳಿದನು:

09031044a ಅವಹಾಸಸ್ಯ ವೋಽಸ್ಯಾದ್ಯ ಪ್ರತಿವಕ್ತಾಸ್ಮಿ ಪಾಂಡವಾಃ।
09031044c ಗಮಿಷ್ಯಥ ಹತಾಃ ಸದ್ಯಃ ಸಪಾಂಚಾಲಾ ಯಮಕ್ಷಯಂ।।

“ಪಾಂಡವರೇ! ನೀವು ಮಾಡುವ ಈ ಅಪಹಾಸ್ಯಕ್ಕೆ ಪ್ರತೀಕಾರವನ್ನು ಇಂದೇ ಪಡೆಯುವಿರಿ! ಸದ್ಯದಲ್ಲಿಯೇ ನೀವು ಪಾಂಚಾಲರೊಂದಿಗೆ ಹತರಾಗಿ ಯಮಕ್ಷಯಕ್ಕೆ ಹೋಗುವಿರಿ!”

09031045a ಉತ್ಥಿತಸ್ತು ಜಲಾತ್ತಸ್ಮಾತ್ ಪುತ್ರೋ ದುರ್ಯೋಧನಸ್ತವ।
09031045c ಅತಿಷ್ಠತ ಗದಾಪಾಣೀ ರುಧಿರೇಣ ಸಮುಕ್ಷಿತಃ।।

ರಕ್ತದಿಂದ ತುಂಬಿಕೊಂಡಿದ್ದ ನಿನ್ನ ಮಗ ದುರ್ಯೋಧನನು ನೀರಿನಿಂದ ಮೇಲೆದ್ದು ಗದಾಪಾಣಿಯಾಗಿ ನಿಂತನು.

09031046a ತಸ್ಯ ಶೋಣಿತದಿಗ್ಧಸ್ಯ ಸಲಿಲೇನ ಸಮುಕ್ಷಿತಂ।
09031046c ಶರೀರಂ ಸ್ಮ ತದಾ ಭಾತಿ ಸ್ರವನ್ನಿವ ಮಹೀಧರಃ।।

ರಕ್ತಮಿಶ್ರಿತ ನೀರಿನ್ನು ಸುರಿಸುತ್ತಿದ್ದ ಅವನ ಶರೀರವು ಲೋಹಮಯ ನದಿಯನ್ನು ಸುರಿಸುತ್ತಿದ್ದ ಪರ್ವತದಂತೆ ತೋರುತ್ತಿತ್ತು.

09031047a ತಮುದ್ಯತಗದಂ ವೀರಂ ಮೇನಿರೇ ತತ್ರ ಪಾಂಡವಾಃ।
09031047c ವೈವಸ್ವತಮಿವ ಕ್ರುದ್ಧಂ ಕಿಂಕರೋದ್ಯತಪಾಣಿನಂ।।

ಅಲ್ಲಿ ಮೇಲೆದ್ದು ನಿಂತಿದ್ದ ಅವನು ಕ್ರುದ್ಧ ವೈವಸ್ವತನಂತೆ ಮತ್ತು ಶೂಲಪಾಣಿ ರುದ್ರನಂತೆ ಪಾಂಡವರಿಗೆ ತೋರಿದನು.

09031048a ಸ ಮೇಘನಿನದೋ ಹರ್ಷಾನ್ನದನ್ನಿವ ಚ ಗೋವೃಷಃ।
09031048c ಆಜುಹಾವ ತತಃ ಪಾರ್ಥಾನ್ಗದಯಾ ಯುಧಿ ವೀರ್ಯವಾನ್।।

ಗೂಳಿಯಂತೆ ಹರ್ಷದಿಂದ ಮೇಘಸ್ವರದಲ್ಲಿ ಕೂಗುತ್ತಾ ಆ ವೀರ್ಯವಾನನು ಗದೆಯಿಂದ ಪಾರ್ಥರನ್ನು ಯುದ್ಧಕ್ಕೆ ಆಹ್ವಾನಿಸಿದನು.

09031049 ದುರ್ಯೋಧನ ಉವಾಚ 09031049a ಏಕೈಕೇನ ಚ ಮಾಂ ಯೂಯಮಾಸೀದತ ಯುಧಿಷ್ಠಿರ।
09031049c ನ ಹ್ಯೇಕೋ ಬಹುಭಿರ್ನ್ಯಾಯ್ಯೋ ವೀರ ಯೋಧಯಿತುಂ ಯುಧಿ।।
09031050a ನ್ಯಸ್ತವರ್ಮಾ ವಿಶೇಷೇಣ ಶ್ರಾಂತಶ್ಚಾಪ್ಸು ಪರಿಪ್ಲುತಃ।
09031050c ಭೃಶಂ ವಿಕ್ಷತಗಾತ್ರಶ್ಚ ಹತವಾಹನಸೈನಿಕಃ।।

ದುರ್ಯೋಧನನು ಹೇಳಿದನು: “ಯುಧಿಷ್ಠಿರ! ನೀವು ಒಬ್ಬೊಬ್ಬರಾಗಿಯೇ ನನ್ನೊಡನೆ ಯುದ್ಧಮಾಡಿರಿ! ವೀರ! ಯುದ್ಧದಲ್ಲಿ ಅನೇಕರು ಒಬ್ಬನೊಡನೆ, ಅದರಲ್ಲೂ ವಿಶೇಷವಾಗಿ, ಕವಚವನ್ನು ಬಿಚ್ಚಿಟ್ಟಿದ್ದ, ಬಳಲಿರುವ, ನೀರಿನಿಂದ ಮೇಲೆದ್ದುಬಂದಿರುವ, ದೇಹದಲ್ಲಿ ತುಂಬಾಗಾಯಗೊಂಡಿರುವ, ವಾಹನ-ಸೈನಿಕರನ್ನು ಕಳೆದುಕೊಂಡಿರುವವನೊಡನೆ, ಯುದ್ಧಮಾಡುವುದು ನ್ಯಾಯವಲ್ಲ!”

09031051 ಯುಧಿಷ್ಠಿರ ಉವಾಚ 09031051a ನಾಭೂದಿಯಂ ತವ ಪ್ರಜ್ಞಾ ಕಥಮೇವಂ ಸುಯೋಧನ।
09031051c ಯದಾಭಿಮನ್ಯುಂ ಬಹವೋ ಜಘ್ನುರ್ಯುಧಿ ಮಹಾರಥಾಃ।।

ಯುಧಿಷ್ಠಿರನು ಹೇಳಿದನು: “ಸುಯೋಧನ! ಯುದ್ಧದಲ್ಲಿ ಅಭಿಮನ್ಯುವನ್ನು ಅನೇಕ ಮಹಾರಥರು ಕೊಲ್ಲುವಾಗ ಈ ಪ್ರಜ್ಞೆಯು ನಿನಗೆ ಏಕೆ ಇರಲಿಲ್ಲ?

09031052a ಆಮುಂಚ ಕವಚಂ ವೀರ ಮೂರ್ಧಜಾನ್ಯಮಯಸ್ವ ಚ।
09031052c ಯಚ್ಚಾನ್ಯದಪಿ ತೇ ನಾಸ್ತಿ ತದಪ್ಯಾದತ್ಸ್ವ ಭಾರತ।।
09031052e ಇಮಮೇಕಂ ಚ ತೇ ಕಾಮಂ ವೀರ ಭೂಯೋ ದದಾಮ್ಯಹಂ।।

ವೀರ! ಕವಚವನ್ನು ಧರಿಸು! ತಲೆಗೂದಲನ್ನು ಕಟ್ಟಿಕೋ! ಭಾರತ! ಇನ್ನ್ಯಾವುದಾದರೂ ನಿನ್ನಲ್ಲಿ ಇಲ್ಲದಿದ್ದರೆ ಅದನ್ನೂ ನೀನು ಪಡೆದುಕೊಳ್ಳಬಹುದು. ವೀರ! ನಾನು ಪುನಃ ನಿನಗೆ ನಿನಗಿಷ್ಟವಾದುದೊಂದನ್ನು ಕೊಡುತ್ತಿದ್ದೇನೆ.

09031053a ಪಂಚಾನಾಂ ಪಾಂಡವೇಯಾನಾಂ ಯೇನ ಯೋದ್ಧುಮಿಹೇಚ್ಚಸಿ।
09031053c ತಂ ಹತ್ವಾ ವೈ ಭವಾನ್ರಾಜಾ ಹತೋ ವಾ ಸ್ವರ್ಗಮಾಪ್ನುಹಿ।।
09031053e ಋತೇ ಚ ಜೀವಿತಾದ್ವೀರ ಯುದ್ಧೇ ಕಿಂ ಕುರ್ಮ ತೇ ಪ್ರಿಯಂ।।

ಐವರು ಪಾಂಡವರಲ್ಲಿ ಯಾರೊಡನೆ ಯುದ್ಧಮಾಡಲು ಇಚ್ಛಿಸುವೆಯೋ ಅವನನ್ನು ಸಂಹರಿಸಿ ರಾಜನಾಗು ಅಥವಾ ಹತನಾಗಿ ಸ್ವರ್ಗವನ್ನು ಪಡೆ! ವೀರ! ನಿನ್ನನ್ನು ಜೀವಂತ ಬಿಡುವುದರ ಹೊರತಾಗಿ ಯುದ್ಧದಲ್ಲಿ ನಿನಗೆ ಪ್ರಿಯವಾದ ಬೇರೆ ಏನನ್ನು ಮಾಡಬಲ್ಲೆವು?””

09031054 ಸಂಜಯ ಉವಾಚ 09031054a ತತಸ್ತವ ಸುತೋ ರಾಜನ್ವರ್ಮ ಜಗ್ರಾಹ ಕಾಂಚನಂ।
09031054c ವಿಚಿತ್ರಂ ಚ ಶಿರಸ್ತ್ರಾಣಂ ಜಾಂಬೂನದಪರಿಷ್ಕೃತಂ।।

ಸಂಜಯನು ಹೇಳಿದನು: “ರಾಜನ್! ಆಗ ನಿನ್ನ ಮಗನು ಕಾಂಚನ ಕವಚವನ್ನು ಮತ್ತು ಕಾಂಚನಪರಿಷ್ಕೃತ ವಿಚಿತ್ರ ಶಿರಸ್ತ್ರಾಣವನ್ನೂ ಧರಿಸಿದನು.

09031055a ಸೋಽವಬದ್ಧಶಿರಸ್ತ್ರಾಣಃ ಶುಭಕಾಂಚನವರ್ಮಭೃತ್।
09031055c ರರಾಜ ರಾಜನ್ಪುತ್ರಸ್ತೇ ಕಾಂಚನಃ ಶೈಲರಾಡಿವ।।

ರಾಜನ್! ಶಿರಸ್ತ್ರಾಣವನ್ನು ಕಟ್ಟಿದ, ಶುಭಕಾಂಚನ ಕವಚವನ್ನು ಧರಿಸಿದ ನಿನ್ನ ಮಗನು ಕಾಂಚನಪರ್ವತದಂತೆ ರಾರಾಜಿಸಿದನು.

09031056a ಸಂನದ್ಧಃ ಸ ಗದೀ ರಾಜನ್ ಸಜ್ಜಃ ಸಂಗ್ರಾಮಮೂರ್ಧನಿ।
09031056c ಅಬ್ರವೀತ್ ಪಾಂಡವಾನ್ಸರ್ವಾನ್ಪುತ್ರೋ ದುರ್ಯೋಧನಸ್ತವ।।

ರಾಜನ್! ಸಂಗ್ರಾಮಮೂರ್ಧನಿಯಲ್ಲಿ ಹಾಗೆ ಗದೆಯನ್ನು ಹಿಡಿದು ಸನ್ನದ್ಧನಾಗಿರುವ ನಿನ್ನ ಮಗ ದುರ್ಯೋಧನನು ಪಾಂಡವರೆಲ್ಲರಿಗೆ ಹೇಳಿದನು:

09031057a ಭ್ರಾತೄಣಾಂ ಭವತಾಮೇಕೋ ಯುಧ್ಯತಾಂ ಗದಯಾ ಮಯಾ।
09031057c ಸಹದೇವೇನ ವಾ ಯೋತ್ಸ್ಯೇ ಭೀಮೇನ ನಕುಲೇನ ವಾ।।
09031058a ಅಥ ವಾ ಫಲ್ಗುನೇನಾದ್ಯ ತ್ವಯಾ ವಾ ಭರತರ್ಷಭ।
09031058c ಯೋತ್ಸ್ಯೇಽಹಂ ಸಂಗರಂ ಪ್ರಾಪ್ಯ ವಿಜೇಷ್ಯೇ ಚ ರಣಾಜಿರೇ।।

“ಭಾತೃಗಳಾದ ನಿಮ್ಮಲ್ಲಿ ಒಬ್ಬನು ನನ್ನೊಡನೆ ಗದಾಯುದ್ಧಮಾಡಲಿ! ನಾನಾದರೋ ಸಹದೇವನೊಡನೆ ಅಥವಾ ಭೀಮನೊಡನೆ ಅಥವಾ ನಕುಲನೊಂದಿಗೆ ಅಥವಾ ಫಲ್ಗುನನೊಂದಿಗೆ ಅಥವಾ ಭರತರ್ಷಭ ನಿನ್ನೊಡನೆ ಯುದ್ಧಮಾಡಬಲ್ಲೆ. ರಣರಂಗದಲ್ಲಿ ಯುದ್ಧಮಾಡಿ ನಾನು ವಿಜಯವನ್ನು ಪಡೆಯುತ್ತೇನೆ.

09031059a ಅಹಮದ್ಯ ಗಮಿಷ್ಯಾಮಿ ವೈರಸ್ಯಾಂತಂ ಸುದುರ್ಗಮಂ।
09031059c ಗದಯಾ ಪುರುಷವ್ಯಾಘ್ರ ಹೇಮಪಟ್ಟವಿನದ್ಧಯಾ।।

ಪುರುಷವ್ಯಾಘ್ರ! ಕಾಂಚನಪಟ್ಟಿಯಿರುವ ಈ ಗದೆಯಿಂದ ನಾನು ಇಂದು ನಮ್ಮ ಈ ಸುದುರ್ಗಮ ವೈರದ ಅಂತ್ಯವನ್ನು ಕಾಣುತ್ತೇನೆ.

09031060a ಗದಾಯುದ್ಧೇ ನ ಮೇ ಕಶ್ಚಿತ್ಸದೃಶೋಽಸ್ತೀತಿ ಚಿಂತಯ।
09031060c ಗದಯಾ ವೋ ಹನಿಷ್ಯಾಮಿ ಸರ್ವಾನೇವ ಸಮಾಗತಾನ್।।
09031060e ಗೃಹ್ಣಾತು ಸ ಗದಾಂ ಯೋ ವೈ ಯುಧ್ಯತೇಽದ್ಯ ಮಯಾ ಸಹ।।

ಗದಾಯುದ್ಧದಲ್ಲಿ ನನ್ನ ಸಮಾನರು ಯಾರೂ ಇಲ್ಲವೆಂದು ನಾನು ಯೋಚಿಸುತ್ತಾ ಬಂದಿದ್ದೇನೆ. ನನ್ನನ್ನು ಎದುರಿಸುವ ಎಲ್ಲರನ್ನೂ ಗದೆಯಿಂದ ಸಂಹರಿಸುತ್ತೇನೆ. ನನ್ನೊಡನೆ ಇಂದು ಯುದ್ಧಮಾಡುವವನು ಗದೆಯನ್ನೆತ್ತಿಕೊಳ್ಳಲಿ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಸುಯೋಧನಯುಧಿಷ್ಠಿರಸಂವಾದೇ ಏಕತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಸುಯೋಧನಯುಧಿಷ್ಠಿರಸಂವಾದ ಎನ್ನುವ ಮೂವತ್ತೊಂದನೇ ಅಧ್ಯಾಯವು.