030 ಸುಯೋಧನಯುಧಿಷ್ಠಿರಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಸಾರಸ್ವತ ಪರ್ವ

ಅಧ್ಯಾಯ 30

ಸಾರ

ದ್ವೈಪಾಯನ ಸರೋವರದ ಬಳಿ ಯುಧಿಷ್ಠಿರ-ಕೃಷ್ಣರ ಸಂವಾದ (1-14). ಸುಯೋಧನ-ಯುಧಿಷ್ಠಿರರ ಸಂವಾದ (15-68).

09030001 ಸಂಜಯ ಉವಾಚ 09030001a ತತಸ್ತೇಷ್ವಪಯಾತೇಷು ರಥೇಷು ತ್ರಿಷು ಪಾಂಡವಾಃ।
09030001c ತಂ ಹ್ರದಂ ಪ್ರತ್ಯಪದ್ಯಂತ ಯತ್ರ ದುರ್ಯೋಧನೋಽಭವತ್।।

ಸಂಜಯನು ಹೇಳಿದನು: “ಆ ಮೂವರು ಮಹಾರಥರೂ ಹೊರಟುಹೋದನಂತರ ದುರ್ಯೋಧನನಿದ್ದ ಆ ಸರೋವರಕ್ಕೆ ಪಾಂಡವರು ತಲುಪಿದರು.

09030002a ಆಸಾದ್ಯ ಚ ಕುರುಶ್ರೇಷ್ಠ ತದಾ ದ್ವೈಪಾಯನಹ್ರದಂ।
09030002c ಸ್ತಂಭಿತಂ ಧಾರ್ತರಾಷ್ಟ್ರೇಣ ದೃಷ್ಟ್ವಾ ತಂ ಸಲಿಲಾಶಯಂ।।
09030002e ವಾಸುದೇವಮಿದಂ ವಾಕ್ಯಮಬ್ರವೀತ್ಕುರುನಂದನಃ।।

ಕುರುಶ್ರೇಷ್ಠ! ದ್ವೈಪಾಯನ ಸರೋವರವನ್ನು ತಲುಪಿ ಧಾರ್ತರಾಷ್ಟ್ರನು ಆ ಜಲಾರಾಶಿಯನ್ನು ಸ್ತಂಭನಗೊಳಿಸಿರುವುದನ್ನು ಕಂಡು ಕುರುನಂದನ ಯುಧಿಷ್ಠಿರನು ವಾಸುದೇವನಿಗೆ ಈ ಮಾತನ್ನಾಡಿದನು:

09030003a ಪಶ್ಯೇಮಾಂ ಧಾರ್ತರಾಷ್ಟ್ರೇಣ ಮಾಯಾಮಪ್ಸು ಪ್ರಯೋಜಿತಾಂ।
09030003c ವಿಷ್ಟಭ್ಯ ಸಲಿಲಂ ಶೇತೇ ನಾಸ್ಯ ಮಾನುಷತೋ ಭಯಂ।।

“ಧಾರ್ತರಾಷ್ಟ್ರನು ನೀರಿನ ಮೇಲೆ ತನ್ನ ಮಾಯೆಯನ್ನು ಪ್ರಯೋಗಿಸಿದುದನ್ನು ನೋಡು! ನೀರನ್ನು ಗಟ್ಟಿಯಾಗಿಸಿ ಮನುಷ್ಯರ ಭಯವಿಲ್ಲದೇ ಇಲ್ಲಿ ಮಲಗಿದ್ದಾನೆ!

09030004a ದೈವೀಂ ಮಾಯಾಮಿಮಾಂ ಕೃತ್ವಾ ಸಲಿಲಾಂತರ್ಗತೋ ಹ್ಯಯಂ।
09030004c ನಿಕೃತ್ಯಾ ನಿಕೃತಿಪ್ರಜ್ಞೋ ನ ಮೇ ಜೀವನ್ವಿಮೋಕ್ಷ್ಯತೇ।।

ದೈವೀ ಮಾಯೆಯನ್ನುಪಯೋಗಿಸಿ ನೀರಿನೊಳಗಿದ್ದಾನೆ. ಮೋಸಗಳನ್ನು ಚೆನ್ನಾಗಿ ತಿಳಿದುಕೊಂಡಿರುವ ಇವನು ಮೋಸವನ್ನು ಬಳಸಿದರೂ ನನ್ನಿಂದ ಜೀವಂತವಾಗಿ ಉಳಿಯುವುದಿಲ್ಲ!

09030005a ಯದ್ಯಸ್ಯ ಸಮರೇ ಸಾಹ್ಯಂ ಕುರುತೇ ವಜ್ರಭೃತ್ಸ್ವಯಂ।
09030005c ತಥಾಪ್ಯೇನಂ ಹತಂ ಯುದ್ಧೇ ಲೋಕೋ ದ್ರಕ್ಷ್ಯತಿ ಮಾಧವ।।

ಮಾಧವ! ಒಂದುವೇಳೆ ಸಮರದಲ್ಲಿ ಸ್ವಯಂ ವಜ್ರಧಾರಿ ಇಂದ್ರನೇ ಇವನ ಸಹಾಯಕ್ಕೆ ಬಂದರೂ ಯುದ್ಧದಲ್ಲಿ ಇವನು ಹತನಾಗುವುದನ್ನು ಲೋಕವು ನೋಡುತ್ತದೆ!”

09030006 ಶ್ರೀವಾಸುದೇವ ಉವಾಚ 09030006a ಮಾಯಾವಿನ ಇಮಾಂ ಮಾಯಾಂ ಮಾಯಯಾ ಜಹಿ ಭಾರತ।
09030006c ಮಾಯಾವೀ ಮಾಯಯಾ ವಧ್ಯಃ ಸತ್ಯಮೇತದ್ಯುಧಿಷ್ಠಿರ।।

ಶ್ರೀ ವಾಸುದೇವನು ಹೇಳಿದನು: “ಭಾರತ! ಮಾಯಾವಿಯಾದ ಇವನ ಮಾಯೆಯನ್ನು ಮಾಯೆಯಿಂದಲೇ ನಾಶಗೊಳಿಸು. ಯುಧಿಷ್ಠಿರ! ಮಾಯಾವಿಯನ್ನು ಮಾಯೆಯಿಂದಲೇ ವಧಿಸಬೇಕು. ಇದು ಸತ್ಯ!

09030007a ಕ್ರಿಯಾಭ್ಯುಪಾಯೈರ್ಬಹುಲೈರ್ಮಾಯಾಮಪ್ಸು ಪ್ರಯೋಜ್ಯ ಹ।
09030007c ಜಹಿ ತ್ವಂ ಭರತಶ್ರೇಷ್ಠ ಪಾಪಾತ್ಮಾನಂ ಸುಯೋಧನಂ।।

ಭರತಶ್ರೇಷ್ಠ! ಉಪಾಯಗಳಿಂದ ಮತ್ತು ಕ್ರಿಯೆಗಳಿಂದ ಪಾಪಾತ್ಮ ಸುಯೋಧನನನ್ನು ಸಂಹರಿಸು! ಮಾಯೆಯನ್ನು ಪ್ರಯೋಗಿಸಿರುವ ನಿದರ್ಶನಗಳು ಅನೇಕವಿವೆ.

09030008a ಕ್ರಿಯಾಭ್ಯುಪಾಯೈರಿಂದ್ರೇಣ ನಿಹತಾ ದೈತ್ಯದಾನವಾಃ।
09030008c ಕ್ರಿಯಾಭ್ಯುಪಾಯೈರ್ಬಹುಭಿರ್ಬಲಿರ್ಬದ್ಧೋ ಮಹಾತ್ಮನಾ।।

ಉಪಾಯಯುಕ್ತ ಕ್ರಿಯೆಗಳಿಂದಲೇ ಇಂದ್ರನು ದೈತ್ಯ-ದಾನವರನ್ನು ಸಂಹರಿಸಿದನು. ಅನೇಕ ಉಪಾಯಯುಕ್ತ ಕ್ರಿಯೆಗಳಿಂದಲೇ ಮಹಾತ್ಮ ವಾಮನನು ಬಲಿಯನ್ನು ಬಂಧಿಸಿದನು.

09030009a ಕ್ರಿಯಾಭ್ಯುಪಾಯೈಃ ಪೂರ್ವಂ ಹಿ ಹಿರಣ್ಯಾಕ್ಷೋ ಮಹಾಸುರಃ।
09030009c ಹಿರಣ್ಯಕಶಿಪುಶ್ಚೈವ ಕ್ರಿಯಯೈವ ನಿಷೂದಿತೌ।।
09030009e ವೃತ್ರಶ್ಚ ನಿಹತೋ ರಾಜನ್ಕ್ರಿಯಯೈವ ನ ಸಂಶಯಃ।।

ಉಪಾಯಯುಕ್ತ ಕ್ರಿಯೆಗಳಿಂದಲೇ ಹಿಂದೆ ಮಹಾಸುರ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳು ವಧಿಸಲ್ಪಟ್ಟರು. ರಾಜನ್! ಇಂತಹ ಕ್ರಿಯೆಗಳಿಂದಲೇ ವೃತ್ರನೂ ಹತನಾದನು ಎನ್ನುವುದರಲ್ಲಿ ಸಂಶಯವೇ ಇಲ್ಲ.

09030010a ತಥಾ ಪೌಲಸ್ತ್ಯತನಯೋ ರಾವಣೋ ನಾಮ ರಾಕ್ಷಸಃ।
09030010c ರಾಮೇಣ ನಿಹತೋ ರಾಜನ್ಸಾನುಬಂಧಃ ಸಹಾನುಗಃ।।
09030010e ಕ್ರಿಯಯಾ ಯೋಗಮಾಸ್ಥಾಯ ತಥಾ ತ್ವಮಪಿ ವಿಕ್ರಮ।।

ರಾಜನ್! ಪೌಲಸ್ತ್ಯ ತನಯ ರಾವಣನೆಂಬ ಹೆಸರಿನ ರಾಕ್ಷಸನೂ ಕೂಡ ಬಾಂಧವ-ಅನುಯಾಯಿಗಳೊಂದಿಗೆ ರಾಮನಿಂದ ಹತನಾದನು. ಹಾಗೆಯೇ ನೀನೂ ಕೂಡ ಯೋಗ ಮತ್ತು ಕ್ರಿಯೆಗಳನ್ನು ಉಪಯೋಗಿಸಿ ನಿನ್ನ ವಿಕ್ರಮವನ್ನು ತೋರಿಸು!

09030011a ಕ್ರಿಯಾಭ್ಯುಪಾಯೈರ್ನಿಹತೋ ಮಯಾ ರಾಜನ್ಪುರಾತನೇ।
09030011c ತಾರಕಶ್ಚ ಮಹಾದೈತ್ಯೋ ವಿಪ್ರಚಿತ್ತಿಶ್ಚ ವೀರ್ಯವಾನ್।।

ರಾಜನ್! ಉಪಾಯಯುಕ್ತ ಕ್ರಿಯೆಗಳಿಂದಲೇ ನಾನು ಹಿಂದೆ ಮಹಾದೈತ್ಯ ತಾರಕನನ್ನೂ ವೀರ್ಯವಾನ್ ವಿಪ್ರಚಿತ್ತಿಯನ್ನೂ ಸಂಹರಿಸಿದ್ದೆ.

09030012a ವಾತಾಪಿರಿಲ್ವಲಶ್ಚೈವ ತ್ರಿಶಿರಾಶ್ಚ ತಥಾ ವಿಭೋ।
09030012c ಸುಂದೋಪಸುಂದಾವಸುರೌ ಕ್ರಿಯಯೈವ ನಿಷೂದಿತೌ।।

ವಿಭೋ! ಹಾಗೆಯೇ ವಾತಾಪಿ-ಇಲ್ವಲರೂ, ತ್ರಿಶಿರನೂ ಮತ್ತು ಅಸುರ ಸುಂದೋಪಸುಂದರೂ ಕ್ರಿಯೆಯಿಂದಲೇ ವಧಿಸಲ್ಪಟ್ಟರು.

09030013a ಕ್ರಿಯಾಭ್ಯುಪಾಯೈರಿಂದ್ರೇಣ ತ್ರಿದಿವಂ ಭುಜ್ಯತೇ ವಿಭೋ।
09030013c ಕ್ರಿಯಾ ಬಲವತೀ ರಾಜನ್ನಾನ್ಯತ್ಕಿಂ ಚಿದ್ಯುಧಿಷ್ಠಿರ।।

ವಿಭೋ! ಉಪಾಯಯುಕ್ತ ಕ್ರಿಯೆಗಳಿಂದಲೇ ಇಂದ್ರನು ತ್ರಿದಿವವನ್ನು ಭೋಗಿಸುತ್ತಿದ್ದಾನೆ. ರಾಜನ್! ಯುಧಿಷ್ಠಿರ! ಕ್ರಿಯೆಗಿಂತಲೂ ಬಲವಾದುದು ಬೇರೆ ಯಾವುದೂ ಇಲ್ಲ.

09030014a ದೈತ್ಯಾಶ್ಚ ದಾನವಾಶ್ಚೈವ ರಾಕ್ಷಸಾಃ ಪಾರ್ಥಿವಾಸ್ತಥಾ।
09030014c ಕ್ರಿಯಾಭ್ಯುಪಾಯೈರ್ನಿಹತಾಃ ಕ್ರಿಯಾಂ ತಸ್ಮಾತ್ಸಮಾಚರ।।

ದೈತ್ಯ-ದಾನವ-ರಾಕ್ಷಸರೂ ಮತ್ತು ಪಾರ್ಥಿವರೂ ಉಪಾಯಯುಕ್ತಕ್ರಿಯೆಗಳಿಂದಲೇ ಹತರಾದರು. ಆದುದರಿಂದ ನೀನೂ ಕೂಡ ಅಂತಹ ಕ್ರಿಯೆಗಳನ್ನು ಬಳಸು!””

09030015 ಸಂಜಯ ಉವಾಚ 09030015a ಇತ್ಯುಕ್ತೋ ವಾಸುದೇವೇನ ಪಾಂಡವಃ ಸಂಶಿತವ್ರತಃ।
09030015c ಜಲಸ್ಥಂ ತಂ ಮಹಾರಾಜ ತವ ಪುತ್ರಂ ಮಹಾಬಲಂ।।
09030015e ಅಭ್ಯಭಾಷತ ಕೌಂತೇಯಃ ಪ್ರಹಸನ್ನಿವ ಭಾರತ।

ಸಂಜಯನು ಹೇಳಿದನು: “ಭಾರತ! ಮಹಾರಾಜ! ವಾಸುದೇವನು ಹೀಗೆ ಹೇಳಲು ಸಂಶಿತವ್ರತ ಪಾಂಡವ ಕೌಂತೇಯನು ನಗುತ್ತಾ ಜಲಸ್ಥನಾಗಿದ್ದ ನಿನ್ನ ಮಹಾಬಲ ಪುತ್ರನನ್ನು ಉದ್ದೇಶಿಸಿ ಹೇಳಿದನು:

09030016a ಸುಯೋಧನ ಕಿಮರ್ಥೋಽಯಮಾರಂಭೋಽಪ್ಸು ಕೃತಸ್ತ್ವಯಾ।
09030016c ಸರ್ವಂ ಕ್ಷತ್ರಂ ಘಾತಯಿತ್ವಾ ಸ್ವಕುಲಂ ಚ ವಿಶಾಂ ಪತೇ।।

“ವಿಶಾಂಪತೇ! ಸುಯೋಧನ! ಎಲ್ಲ ಕ್ಷತ್ರಿಯರನ್ನೂ, ನಿನ್ನ ಕುಲವನ್ನೂ ನಾಶಗೊಳಿಸಿ ಈಗ ಯಾವ ಕಾರಣಕ್ಕಾಗಿ ನೀರಿನಲ್ಲಿ ಈ ಅನುಷ್ಟಾನವನ್ನು ಪ್ರಾರಂಭಿಸಿರುವೆ?

09030017a ಜಲಾಶಯಂ ಪ್ರವಿಷ್ಟೋಽದ್ಯ ವಾಂಚನ್ಜೀವಿತಮಾತ್ಮನಃ।
09030017c ಉತ್ತಿಷ್ಠ ರಾಜನ್ಯುಧ್ಯಸ್ವ ಸಹಾಸ್ಮಾಭಿಃ ಸುಯೋಧನ।।

ರಾಜನ್! ಸುಯೋಧನ! ಜಲಾಶಯವನ್ನು ಪ್ರವೇಶಿಸಿ ನಿನ್ನ ಜೀವವನ್ನುಳಿಸಿಕೊಳ್ಳಲು ಇಚ್ಛಿಸಿರುವೆಯಾ? ಮೇಲೇಳು! ನಮ್ಮೊಡನೆ ಯುದ್ಧಮಾಡು!

09030018a ಸ ಚ ದರ್ಪೋ ನರಶ್ರೇಷ್ಠ ಸ ಚ ಮಾನಃ ಕ್ವ ತೇ ಗತಃ।
09030018c ಯಸ್ತ್ವಂ ಸಂಸ್ತಭ್ಯ ಸಲಿಲಂ ಭೀತೋ ರಾಜನ್ವ್ಯವಸ್ಥಿತಃ।।

ರಾಜನ್! ನರಶ್ರೇಷ್ಠ! ಭೀತನಾಗಿ ಜಲವನ್ನು ಸ್ತಂಭನಗೊಳಿಸಿ ಕುಳಿತುಕೊಂಡಿರುವೆಯಲ್ಲಾ! ನಿನ್ನ ಆ ದರ್ಪ-ಅಭಿಮಾನಗಳು ಎಲ್ಲಿ ಹೋದವು?

09030019a ಸರ್ವೇ ತ್ವಾಂ ಶೂರ ಇತ್ಯೇವ ಜನಾ ಜಲ್ಪಂತಿ ಸಂಸದಿ।
09030019c ವ್ಯರ್ಥಂ ತದ್ಭವತೋ ಮನ್ಯೇ ಶೌರ್ಯಂ ಸಲಿಲಶಾಯಿನಃ।।

ಸಭೆಗಳಲ್ಲಿ ಜನರೆಲ್ಲರೂ ನಿನ್ನನ್ನು ಶೂರನೆಂದು ಹೊಗಳುತ್ತಿದ್ದರು. ನೀರಿನಲ್ಲಿ ಮಲಗಿ ನಿನ್ನ ಆ ಶೌರ್ಯವು ವ್ಯರ್ಥವಾಯಿತೆಂದೇ ಭಾವಿಸುತ್ತೇನೆ.

09030020a ಉತ್ತಿಷ್ಠ ರಾಜನ್ಯುಧ್ಯಸ್ವ ಕ್ಷತ್ರಿಯೋಽಸಿ ಕುಲೋದ್ಭವಃ।
09030020c ಕೌರವೇಯೋ ವಿಶೇಷೇಣ ಕುಲೇ ಜನ್ಮ ಚ ಸಂಸ್ಮರ।।

ರಾಜನ್! ಎದ್ದೇಳು! ಯುದ್ಧಮಾಡು! ಕ್ಷತ್ರಿಯನಾಗಿರುವೆ. ಕುಲೋದ್ಭವನಾಗಿರುವೆ! ವಿಶೇಷವಾಗಿ ಕೌರವೇಯನಾಗಿರುವೆ. ಉತ್ತಮ ಕುಲದಲ್ಲಿ ಜನಿಸಿರುವುದನ್ನು ಸ್ಮರಿಸಿಕೋ!

09030021a ಸ ಕಥಂ ಕೌರವೇ ವಂಶೇ ಪ್ರಶಂಸನ್ಜನ್ಮ ಚಾತ್ಮನಃ।
09030021c ಯುದ್ಧಾದ್ಭೀತಸ್ತತಸ್ತೋಯಂ ಪ್ರವಿಶ್ಯ ಪ್ರತಿತಿಷ್ಠಸಿ।।

ಕೌರವ ವಂಶದಲ್ಲಿ ಜನ್ಮತಾಳಿದುದಕ್ಕೆ ಪ್ರಶಂಸೆಮಾಡಿಸಿ ಕೊಳ್ಳುತ್ತಿದ್ದ ನೀನು ಹೇಗೆ ತಾನೇ ಈಗ ಯುದ್ಧಕ್ಕೆ ಹೆದರಿ ನೀರನ್ನು ಪ್ರವೇಶಿಸಿ ಕುಳಿತುಕೊಂಡಿರುವೆ?

09030022a ಅಯುದ್ಧಮವ್ಯವಸ್ಥಾನಂ ನೈಷ ಧರ್ಮಃ ಸನಾತನಃ।
09030022c ಅನಾರ್ಯಜುಷ್ಟಮಸ್ವರ್ಗ್ಯಂ ರಣೇ ರಾಜನ್ಪಲಾಯನಂ।।

ಯುದ್ಧಮಾಡದಿರುವುದೂ, ಯುದ್ಧದಲ್ಲಿ ನಿಲ್ಲದೇ ಓಡಿಹೋಗುವುದೂ ಸನಾತನ ಧರ್ಮವಲ್ಲ. ರಾಜನ್! ರಣದಿಂದ ಪಲಾಯನಗೈಯುವ ಅನಾರ್ಯ ಕಾರ್ಯವು ಸ್ವರ್ಗವನ್ನು ನೀಡಲಾರದು!

09030023a ಕಥಂ ಪಾರಮಗತ್ವಾ ಹಿ ಯುದ್ಧೇ ತ್ವಂ ವೈ ಜಿಜೀವಿಷುಃ।
09030023c ಇಮಾನ್ನಿಪತಿತಾನ್ದೃಷ್ಟ್ವಾ ಪುತ್ರಾನ್ಭ್ರಾತೄನ್ಪಿತೄನ್ತಥಾ।।
09030024a ಸಂಬಂಧಿನೋ ವಯಸ್ಯಾಂಶ್ಚ ಮಾತುಲಾನ್ಬಾಂಧವಾಂಸ್ತಥಾ।
09030024c ಘಾತಯಿತ್ವಾ ಕಥಂ ತಾತ ಹ್ರದೇ ತಿಷ್ಠಸಿ ಸಾಂಪ್ರತಂ।।

ಯುದ್ಧವು ಇನ್ನೂ ಮುಗಿಯುವುದರೊಳಗೇ ನೀನು ಹೇಗೆ ತಾನೇ ಜೀವಿಸಲು ಇಚ್ಛಿಸುವೆ? ಅಯ್ಯಾ! ಪುತ್ರರು-ಸಹೋದರರು-ಪಿತೃಗಳು- ಹಾಗೆಯೇ ಸಂಬಂಧಿಗಳು-ಸ್ನೇಹಿತರು-ಸೋದರ ಮಾವಂದಿರು ಮತ್ತು ಬಾಂಧವರು ಹೀಗೆ ವಧಿಸಲ್ಪಟ್ಟು ಕೆಳಗುರುಳಿರುವಾಗ ನೀನು ಹೇಗೆ ತಾನೇ ಸರೋವರದಲ್ಲಿ ಅಡಗಿಕೊಂಡಿರುವೆ?

09030025a ಶೂರಮಾನೀ ನ ಶೂರಸ್ತ್ವಂ ಮಿಥ್ಯಾ ವದಸಿ ಭಾರತ।
09030025c ಶೂರೋಽಹಮಿತಿ ದುರ್ಬುದ್ಧೇ ಸರ್ವಲೋಕಸ್ಯ ಶೃಣ್ವತಃ।।

ಭಾರತ! ಶೂರನೆಂದು ತಿಳಿದುಕೊಂಡಿರುವ ನೀನು ಶೂರನಲ್ಲ! ದುರ್ಬುದ್ಧೇ! ನಾನು ಶೂರನೆಂದು ಸರ್ವಲೋಕಕ್ಕೆ ಸುಳ್ಳುಹೇಳಿಕೊಂಡು ಬಂದಿರುವೆ.

09030026a ನ ಹಿ ಶೂರಾಃ ಪಲಾಯಂತೇ ಶತ್ರೂನ್ದೃಷ್ಟ್ವಾ ಕಥಂ ಚನ।
09030026c ಬ್ರೂಹಿ ವಾ ತ್ವಂ ಯಯಾ ಧೃತ್ಯಾ ಶೂರ ತ್ಯಜಸಿ ಸಂಗರಂ।।

ಶೂರರು ಎಂದೂ ಶತ್ರುಗಳನ್ನು ನೋಡಿ ಪಲಾಯನಮಾಡುವುದಿಲ್ಲ. ಶೂರ! ನಿಜವಾಗಿ ಹೇಳು. ನೀನು ಏಕೆ ಯುದ್ಧವನ್ನು ತ್ಯಜಿಸಿ ಇಲ್ಲಿಗೆ ಬಂದಿರುವೆ?

09030027a ಸ ತ್ವಮುತ್ತಿಷ್ಠ ಯುಧ್ಯಸ್ವ ವಿನೀಯ ಭಯಮಾತ್ಮನಃ।
09030027c ಘಾತಯಿತ್ವಾ ಸರ್ವಸೈನ್ಯಂ ಭ್ರಾತೄನ್ ಚೈವ ಸುಯೋಧನ।।
09030028a ನೇದಾನೀಂ ಜೀವಿತೇ ಬುದ್ಧಿಃ ಕಾರ್ಯಾ ಧರ್ಮಚಿಕೀರ್ಷಯಾ।
09030028c ಕ್ಷತ್ರಧರ್ಮಮಪಾಶ್ರಿತ್ಯ ತ್ವದ್ವಿಧೇನ ಸುಯೋಧನ।।

ಸುಯೋಧನ! ನಿನ್ನಲ್ಲಿರುವ ಭಯವನ್ನು ತೊರೆದು ಎದ್ದೇಳು! ಯುದ್ಧಮಾಡು! ಸುಯೋಧನ! ಸರ್ವ ಸೈನ್ಯವನ್ನೂ, ಸೋದರರನ್ನೂ ಸಾಯಗೊಟ್ಟು ಧರ್ಮಾಚರಣೆಯನ್ನು ಬಯಸಿ ಜೀವವನ್ನುಳಿಸಿಕೊಳ್ಳುವ ಬುದ್ಧಿ-ಕಾರ್ಯಗಳನ್ನೆಸಗುವುದು ಕ್ಷತ್ರಧರ್ಮವನ್ನುಸರಿಸಿದ ನಿನ್ನಂಥವನಿಗೆ ಸರಿಯಲ್ಲ!

09030029a ಯತ್ತತ್ಕರ್ಣಮುಪಾಶ್ರಿತ್ಯ ಶಕುನಿಂ ಚಾಪಿ ಸೌಬಲಂ।
09030029c ಅಮರ್ತ್ಯ ಇವ ಸಮ್ಮೋಹಾತ್ತ್ವಮಾತ್ಮಾನಂ ನ ಬುದ್ಧವಾನ್।।

ಕರ್ಣ ಮತ್ತು ಸೌಬಲ ಶಕುನಿಯರನ್ನು ಆಶ್ರಯಿಸಿ ಮೋಹಪರವಶನಾಗಿ ನಾನೂ ಕೂಡ ಮರಣಧರ್ಮವಿರುವವನು ಎಂದು ನೀನು ತಿಳಿದುಕೊಂಡಿರಲೇ ಇಲ್ಲ.

09030030a ತತ್ಪಾಪಂ ಸುಮಹತ್ಕೃತ್ವಾ ಪ್ರತಿಯುಧ್ಯಸ್ವ ಭಾರತ।
09030030c ಕಥಂ ಹಿ ತ್ವದ್ವಿಧೋ ಮೋಹಾದ್ರೋಚಯೇತ ಪಲಾಯನಂ।।

ಭಾರತ! ಮಹಾಪಾಪವನ್ನು ಮಾಡಿರುವ ನೀನು ಪ್ರತಿಯಾಗಿ ಯುದ್ಧಮಾಡು! ಮೋಹದಿಂದ ಪಲಾಯನಮಾಡುವುದನ್ನು ನಿನ್ನಂಥವನು ಹೇಗೆ ತಾನೇ ಬಯಸುತ್ತಾನೆ?

09030031a ಕ್ವ ತೇ ತತ್ಪೌರುಷಂ ಯಾತಂ ಕ್ವ ಚ ಮಾನಃ ಸುಯೋಧನ।
09030031c ಕ್ವ ಚ ವಿಕ್ರಾಂತತಾ ಯಾತಾ ಕ್ವ ಚ ವಿಸ್ಫೂರ್ಜಿತಂ ಮಹತ್।।

ಸುಯೋಧನ! ನಿನ್ನ ಆ ಪೌರುಷವೆಲ್ಲಿ ಹೋಯಿತು? ಮಾನವೆಲ್ಲಿ ಹೋಯಿತು? ಆ ನಿನ್ನ ವಿಕ್ರಾಂತವೆಲ್ಲಿ ಹೋಯಿತು? ನಿನ್ನ ಆ ಮಹಾ ಗರ್ಜನೆಯು ಎಲ್ಲಿ ಅಡಗಿತು?

09030032a ಕ್ವ ತೇ ಕೃತಾಸ್ತ್ರತಾ ಯಾತಾ ಕಿಂ ಚ ಶೇಷೇ ಜಲಾಶಯೇ।
09030032c ಸ ತ್ವಮುತ್ತಿಷ್ಠ ಯುಧ್ಯಸ್ವ ಕ್ಷತ್ರಧರ್ಮೇಣ ಭಾರತ।।

ನಿನ್ನ ಅಸ್ತ್ರವಿದ್ಯೆಯು ಎಲ್ಲಿ ಹೋಯಿತು? ಜಲಾಶಯದಲ್ಲೇಕೆ ಮಲಗಿರುವೆ? ಭಾರತ! ಮೇಲೆದ್ದು ಕ್ಷತ್ರಧರ್ಮದಂತೆ ಯುದ್ಧಮಾಡು!

09030033a ಅಸ್ಮಾನ್ವಾ ತ್ವಂ ಪರಾಜಿತ್ಯ ಪ್ರಶಾಧಿ ಪೃಥಿವೀಮಿಮಾಂ।
09030033c ಅಥ ವಾ ನಿಹತೋಽಸ್ಮಾಭಿರ್ಭೂಮೌ ಸ್ವಪ್ಸ್ಯಸಿ ಭಾರತ।।

ಭಾರತ! ನೀನು ನಮ್ಮನ್ನು ಪರಾಜಯಗೊಳಿಸಿ ಈ ಪೃಥ್ವಿಯನ್ನು ಆಳು. ಅಥವಾ ನಮ್ಮಿಂದ ಹತನಾಗಿ ನೆಲದ ಮೇಲೆ ಮಲಗು!

09030034a ಏಷ ತೇ ಪ್ರಥಮೋ ಧರ್ಮಃ ಸೃಷ್ಟೋ ಧಾತ್ರಾ ಮಹಾತ್ಮನಾ।
09030034c ತಂ ಕುರುಷ್ವ ಯಥಾತಥ್ಯಂ ರಾಜಾ ಭವ ಮಹಾರಥ।।

ಮಹಾರಥ! ಇದೇ ಮಹಾತ್ಮ ಧಾತ್ರನು ಸೃಷ್ಟಿಸಿರುವ ನಿನ್ನ ಪ್ರಥಮ ಧರ್ಮ! ಅದನ್ನು ಹಾಗೆಯೇ ಮಾಡಿ ರಾಜನಾಗು!”

09030035 ದುರ್ಯೋಧನ ಉವಾಚ 09030035a ನೈತಚ್ಚಿತ್ರಂ ಮಹಾರಾಜ ಯದ್ಭೀಃ ಪ್ರಾಣಿನಮಾವಿಶೇತ್।
09030035c ನ ಚ ಪ್ರಾಣಭಯಾದ್ಭೀತೋ ವ್ಯಪಯಾತೋಽಸ್ಮಿ ಭಾರತ।।

ದುರ್ಯೋಧನನು ಹೇಳಿದನು: “ಮಹಾರಾಜ! ಪ್ರಾಣಿಗಳನ್ನು ಭಯವು ಆವರಿಸುತ್ತದೆ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಭಾರತ! ನಾನು ಮಾತ್ರ ಪ್ರಾಣಭಯದಿಂದ ಭೀತನಾಗಿ ಇಲ್ಲಿಗೆ ಬಂದಿಲ್ಲ!

09030036a ಅರಥಶ್ಚಾನಿಷಂಗೀ ಚ ನಿಹತಃ ಪಾರ್ಷ್ಣಿಸಾರಥಿಃ।
09030036c ಏಕಶ್ಚಾಪ್ಯಗಣಃ ಸಂಖ್ಯೇ ಪ್ರತ್ಯಾಶ್ವಾಸಮರೋಚಯಂ।।

ರಥಹೀನನಾಗಿದ್ದೆ. ಬತ್ತಳಿಕೆಯೂ ಇರಲಿಲ್ಲ. ಪಾರ್ಷ್ಣಿಸಾರಥಿಗಳು ಹತರಾಗಿದ್ದರು. ಸೇನೆಗಳಿಲ್ಲದೇ ಏಕಾಂಗಿಯಾಗಿದ್ದೆನು. ಆಗ ಸ್ವಲ್ಪಹೊತ್ತು ವಿಶ್ರಾಂತಿ ಪಡೆಯಲು ರಣದಿಂದ ಇಲ್ಲಿಗೆ ಬಂದಿದ್ದೇನೆ.

09030037a ನ ಪ್ರಾಣಹೇತೋರ್ನ ಭಯಾನ್ನ ವಿಷಾದಾದ್ವಿಶಾಂ ಪತೇ।
09030037c ಇದಮಂಭಃ ಪ್ರವಿಷ್ಟೋಽಸ್ಮಿ ಶ್ರಮಾತ್ತ್ವಿದಮನುಷ್ಠಿತಂ।।

ವಿಶಾಂಪತೇ! ಪ್ರಾಣಕ್ಕಾಗಿಯಾಗಲೀ, ಭಯದಿಂದಾಗಲೀ, ವಿಷಾದದಿಂದಾಗಲೀ ನಾನು ಈ ನೀರನ್ನು ಪ್ರವೇಶಿಸಿಲ್ಲ! ಆಯಾಸಪರಿಹಾರಮಾಡಿಕೊಳ್ಳಲು ಇಲ್ಲಿ ಕುಳಿತಿದ್ದೇನೆ.

09030038a ತ್ವಂ ಚಾಶ್ವಸಿಹಿ ಕೌಂತೇಯ ಯೇ ಚಾಪ್ಯನುಗತಾಸ್ತವ।
09030038c ಅಹಮುತ್ಥಾಯ ವಃ ಸರ್ವಾನ್ಪ್ರತಿಯೋತ್ಸ್ಯಾಮಿ ಸಂಯುಗೇ।।

ಕೌಂತೇಯ! ನೀನು ಕೂಡ ಬಳಲಿರುವೆ ಮತ್ತು ನಿನ್ನ ಅನುಯಾಯಿಗಳೂ ಬಳಲಿದ್ದಾರೆ. ನಾಳೆ ನಾನು ಮೇಲೆ ಎದ್ದು ರಣದಲ್ಲಿ ನಿಮ್ಮೆಲ್ಲರನ್ನೂ ಎದುರಿಸಿ ಯುದ್ಧಮಾಡುತ್ತೇನೆ.”

09030039 ಯುಧಿಷ್ಠಿರ ಉವಾಚ 09030039a ಆಶ್ವಸ್ತಾ ಏವ ಸರ್ವೇ ಸ್ಮ ಚಿರಂ ತ್ವಾಂ ಮೃಗಯಾಮಹೇ।
09030039c ತದಿದಾನೀಂ ಸಮುತ್ತಿಷ್ಠ ಯುಧ್ಯಸ್ವೇಹ ಸುಯೋಧನ।।

ಯುಧಿಷ್ಠಿರನು ಹೇಳಿದನು: “ನಾವೆಲ್ಲಾ ವಿಶ್ರಮಿಸಿಕೊಂಡಿದ್ದೇವೆ. ನಿನ್ನನ್ನು ನಾವು ಬಹಳ ಸಮಯದಿಂದ ಹುಡುಕುತ್ತಿದ್ದೇವೆ. ಆದುದರಿಂದ ಸುಯೋಧನ! ಈಗಲೇ ಮೇಲೆದ್ದು ಯುದ್ಧಮಾಡು.

09030040a ಹತ್ವಾ ವಾ ಸಮರೇ ಪಾರ್ಥಾನ್ ಸ್ಫೀತಂ ರಾಜ್ಯಮವಾಪ್ನುಹಿ।
09030040c ನಿಹತೋ ವಾ ರಣೇಽಸ್ಮಾಭಿರ್ವೀರಲೋಕಮವಾಪ್ಸ್ಯಸಿ।।

ಸಮರದಲ್ಲಿ ಪಾರ್ಥರನ್ನು ಸಂಹರಿಸಿ ಸಮೃದ್ಧ ರಾಜ್ಯವನ್ನು ಹೊಂದು. ಅಥವಾ ರಣದಲ್ಲಿ ನಮ್ಮಿಂದ ವಧಿಸಲ್ಪಟ್ಟು ವೀರಲೋಕವನ್ನು ಪಡೆ!”

09030041 ದುರ್ಯೋಧನ ಉವಾಚ 09030041a ಯದರ್ಥಂ ರಾಜ್ಯಮಿಚ್ಚಾಮಿ ಕುರೂಣಾಂ ಕುರುನಂದನ।
09030041c ತ ಇಮೇ ನಿಹತಾಃ ಸರ್ವೇ ಭ್ರಾತರೋ ಮೇ ಜನೇಶ್ವರ।।

ದುರ್ಯೋಧನನು ಹೇಳಿದನು: “ಕುರುನಂದನ! ಜನೇಶ್ವರ! ಯಾರಿಗಾಗಿ ರಾಜ್ಯವನ್ನು ಇಚ್ಛಿಸಿದ್ದೆನೋ ಆ ಕುರುಭ್ರಾತರರೆಲ್ಲರೂ ಹತರಾಗಿದ್ದಾರೆ!

09030042a ಕ್ಷೀಣರತ್ನಾಂ ಚ ಪೃಥಿವೀಂ ಹತಕ್ಷತ್ರಿಯಪುಂಗವಾಂ।
09030042c ನಾಭ್ಯುತ್ಸಹಾಮ್ಯಹಂ ಭೋಕ್ತುಂ ವಿಧವಾಮಿವ ಯೋಷಿತಂ।।

ಸಂಪತ್ತನ್ನು ಕಳೆದುಕೊಂಡು ಮತ್ತು ಕ್ಷತ್ರಿಯ ಪುಂಗವರು ಹತರಾಗಿ ವಿಧವೆಯಂತೆ ಹೀನವಾಗಿರುವ ಈ ಪೃಥ್ವಿಯನ್ನು ಭೋಗಿಸುವಲ್ಲಿ ನನಗೆ ಉತ್ಸಾಹವಿಲ್ಲ!

09030043a ಅದ್ಯಾಪಿ ತ್ವಹಮಾಶಂಸೇ ತ್ವಾಂ ವಿಜೇತುಂ ಯುಧಿಷ್ಠಿರ।
09030043c ಭಂಕ್ತ್ವಾ ಪಾಂಚಾಲಪಾಂಡೂನಾಮುತ್ಸಾಹಂ ಭರತರ್ಷಭ।।

ಯುಧಿಷ್ಠಿರ! ಭರತರ್ಷಭ! ಆದರೆ ಇಂದು ಕೂಡ ಪಾಂಚಾಲ-ಪಾಂಡವರ ಉತ್ಸಾಹವನ್ನು ಭಗ್ನಗೊಳಿಸಿ ನಿನ್ನನ್ನು ಜಯಿಸುವ ಆಸೆಯನ್ನಿಟ್ಟುಕೊಂಡಿದ್ದೇನೆ!

09030044a ನ ತ್ವಿದಾನೀಮಹಂ ಮನ್ಯೇ ಕಾರ್ಯಂ ಯುದ್ಧೇನ ಕರ್ಹಿ ಚಿತ್।
09030044c ದ್ರೋಣೇ ಕರ್ಣೇ ಚ ಸಂಶಾಂತೇ ನಿಹತೇ ಚ ಪಿತಾಮಹೇ।।

ಆದರೆ ದ್ರೋಣ, ಕರ್ಣ ಮತ್ತು ಪಿತಾಮಹರು ಹತರಾಗಿ ಮಲಗಿರುವ ನಂತರ ಈ ಯುದ್ಧದಿಂದ ಏನಾದರೂ ಪ್ರಯೋಜನವಾಗುತ್ತದೆಯೆಂದು ನನಗನ್ನಿಸುವುದಿಲ್ಲ.

09030045a ಅಸ್ತ್ವಿದಾನೀಮಿಯಂ ರಾಜನ್ಕೇವಲಾ ಪೃಥಿವೀ ತವ।
09030045c ಅಸಹಾಯೋ ಹಿ ಕೋ ರಾಜಾ ರಾಜ್ಯಮಿಚ್ಚೇತ್ಪ್ರಶಾಸಿತುಂ।।

ರಾಜನ್! ಕೇವಲ ಈ ಪೃಥ್ವಿಯು ಮಾತ್ರ ನಿನ್ನದಾಗುತ್ತದೆ. ಆದರೆ ಯಾವುದೂ ಮತ್ತು ಯಾರೂ ಇಲ್ಲದ ರಾಜ್ಯವನ್ನು ಯಾವ ರಾಜನು ತಾನೇ ಆಳಲು ಬಯಸುತ್ತಾನೆ?

09030046a ಸುಹೃದಸ್ತಾದೃಶಾನ್ ಹಿತ್ವಾ ಪುತ್ರಾನ್ಭ್ರಾತೄನ್ಪಿತೄನಪಿ।
09030046c ಭವದ್ಭಿಶ್ಚ ಹೃತೇ ರಾಜ್ಯೇ ಕೋ ನು ಜೀವೇತ ಮಾದೃಶಃ।।

ಅಂತಹ ಸುಹೃದರನ್ನೂ, ಪುತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ ವಧೆಗೀಡುಮಾಡಿ, ನಿನ್ನಿಂದ ರಾಜ್ಯವೂ ಅಪಹೃತವಾದನಂತರ ನನ್ನಂಥವನು ಹೇಗೆ ತಾನೇ ಜೀವಿಸಿರುವನು?

09030047a ಅಹಂ ವನಂ ಗಮಿಷ್ಯಾಮಿ ಹ್ಯಜಿನೈಃ ಪ್ರತಿವಾಸಿತಃ।
09030047c ರತಿರ್ಹಿ ನಾಸ್ತಿ ಮೇ ರಾಜ್ಯೇ ಹತಪಕ್ಷಸ್ಯ ಭಾರತ।।

ನಾನು ಮೃಗಚರ್ಮವನ್ನು ಹೊದ್ದು ವನಕ್ಕೆ ಹೊರಟುಹೋಗುತ್ತೇನೆ. ಭಾರತ! ನನ್ನ ಕಡೆಯವರನ್ನು ಕಳೆದುಕೊಂಡ ನನಗೆ ರಾಜ್ಯದ ಮೇಲಿನ ಪ್ರೀತಿಯೇ ಇಲ್ಲವಾಗಿದೆ.

09030048a ಹತಬಾಂಧವಭೂಯಿಷ್ಠಾ ಹತಾಶ್ವಾ ಹತಕುಂಜರಾ।
09030048c ಏಷಾ ತೇ ಪೃಥಿವೀ ರಾಜನ್ಭುಂಕ್ತ್ವೈನಾಂ ವಿಗತಜ್ವರಃ।।

ರಾಜನ್! ಅನೇಕ ರಾಜಬಾಂಧವರನ್ನು ಕಳೆದುಕೊಂಡ, ಹತಾಶ್ವ-ಹತಕುಂಜರವಾಗಿರುವ ಈ ಪೃಥ್ವಿಯನ್ನು ಆತಂಕವಿಲ್ಲದೇ ಭೋಗಿಸು!

09030049a ವನಮೇವ ಗಮಿಷ್ಯಾಮಿ ವಸಾನೋ ಮೃಗಚರ್ಮಣೀ।
09030049c ನ ಹಿ ಮೇ ನಿರ್ಜಿತಸ್ಯಾಸ್ತಿ ಜೀವಿತೇಽದ್ಯ ಸ್ಪೃಹಾ ವಿಭೋ।।

ಮೃಗಚರ್ಮವನ್ನು ಧರಿಸಿ ವನಕ್ಕೇ ಹೋಗುತ್ತೇನೆ. ವಿಭೋ! ಸ್ವಜನರಿಂದ ವಿಹೀನರಾಗಿರುವ ನನಗೆ ಇಂದು ಜೀವಿಸಿರುವುದರಲ್ಲಿ ಆಸಕ್ತಿಯೇ ಇಲ್ಲವಾಗಿದೆ.

09030050a ಗಚ್ಚ ತ್ವಂ ಭುಂಕ್ತ್ವ ರಾಜೇಂದ್ರ ಪೃಥಿವೀಂ ನಿಹತೇಶ್ವರಾಂ।
09030050c ಹತಯೋಧಾಂ ನಷ್ಟರತ್ನಾಂ ಕ್ಷೀಣವಪ್ರಾಂ ಯಥಾಸುಖಂ।।

ರಾಜೇಂದ್ರ! ಹೋಗು! ಈಶ್ವರರನ್ನು ಕಳೆದುಕೊಂಡಿರುವ, ಯೋಧರು ಹತರಾಗಿರುವ, ಸಂಪತ್ತುಗಳು ನಷ್ಟವಾಗಿರುವ, ಕ್ಷೀಣ ಕಾಂತಿಯುಳ್ಳ ಈ ಪೃಥ್ವಿಯನ್ನು ಯಥಾಸುಖವಾಗಿ ಭೋಗಿಸು!”

09030051 ಯುಧಿಷ್ಠಿರ ಉವಾಚ 09030051a ಆರ್ತಪ್ರಲಾಪಾನ್ಮಾ ತಾತ ಸಲಿಲಸ್ಥಃ ಪ್ರಭಾಷಥಾಃ।
09030051c ನೈತನ್ಮನಸಿ ಮೇ ರಾಜನ್ವಾಶಿತಂ ಶಕುನೇರಿವ।।

ಯುಧಿಷ್ಠಿರನು ಹೇಳಿದನು: “ಅಯ್ಯಾ! ನೀರಿನಲ್ಲೇ ಕುಳಿತುಕೊಂಡು ಆರ್ತಪ್ರಲಾಪಮಾಡುತ್ತಾ ಮಾತನಾಡಬೇಡ! ರಾಜನ್! ಪಕ್ಷಿಯಂತೆ ಚಿಲಿಪಿಲಿಗುಡುತ್ತಿರುವ ನಿನ್ನ ಈ ಮಾತುಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲ!

09030052a ಯದಿ ಚಾಪಿ ಸಮರ್ಥಃ ಸ್ಯಾಸ್ತ್ವಂ ದಾನಾಯ ಸುಯೋಧನ।
09030052c ನಾಹಮಿಚ್ಚೇಯಮವನಿಂ ತ್ವಯಾ ದತ್ತಾಂ ಪ್ರಶಾಸಿತುಂ।।

ಸುಯೋಧನ! ಒಂದುವೇಳೆ ನೀನು ದಾನಮಾಡಲು ಸಮರ್ಥನಾಗಿರುವೆಯಾದರೂ ನೀನು ದಾನವಾಗಿ ಕೊಡುವ ಈ ಅವನಿಯನ್ನು ಆಳಲು ನನಗೆ ಇಚ್ಛೆಯಿಲ್ಲ.

09030053a ಅಧರ್ಮೇಣ ನ ಗೃಹ್ಣೀಯಾಂ ತ್ವಯಾ ದತ್ತಾಂ ಮಹೀಮಿಮಾಂ।
09030053c ನ ಹಿ ಧರ್ಮಃ ಸ್ಮೃತೋ ರಾಜನ್ ಕ್ಷತ್ರಿಯಸ್ಯ ಪ್ರತಿಗ್ರಹಃ।।

ಅಧರ್ಮದಿಂದ ನೀಡುತ್ತಿರುವ ಈ ಮಹಿಯನ್ನು ನಾನು ಸ್ವೀಕರಿಸುವುದಿಲ್ಲ. ರಾಜನ್! ಕ್ಷತ್ರಿಯನು ದಾನವನ್ನು ಸ್ವೀಕರಿಸಬಹುದೆಂದು ಯಾವ ಸ್ಮೃತಿಯಲ್ಲಿಯೂ ಹೇಳಿಲ್ಲ.

09030054a ತ್ವಯಾ ದತ್ತಾಂ ನ ಚೇಚ್ಚೇಯಂ ಪೃಥಿವೀಮಖಿಲಾಮಹಂ।
09030054c ತ್ವಾಂ ತು ಯುದ್ಧೇ ವಿನಿರ್ಜಿತ್ಯ ಭೋಕ್ತಾಸ್ಮಿ ವಸುಧಾಮಿಮಾಂ।।

ನೀನು ದಾನವನ್ನಾಗಿ ನೀಡುವ ಈ ಅಖಿಲ ಪೃಥ್ವಿಯನ್ನೂ ನಾನು ಬಯಸುವುದಿಲ್ಲ. ಆದರೆ ಯುದ್ಧದಲ್ಲಿ ನಿನ್ನನ್ನು ಸೋಲಿಸಿ ಈ ವಸುಧೆಯನ್ನು ಭೋಗಿಸುತ್ತೇನೆ.

09030055a ಅನೀಶ್ವರಶ್ಚ ಪೃಥಿವೀಂ ಕಥಂ ತ್ವಂ ದಾತುಮಿಚ್ಚಸಿ।
09030055c ತ್ವಯೇಯಂ ಪೃಥಿವೀ ರಾಜನ್ಕಿಂ ನ ದತ್ತಾ ತದೈವ ಹಿ।।

ಈಶ್ವರನಿಲ್ಲದಿರುವ ಈ ಪೃಥ್ವಿಯನ್ನು ನೀನು ಹೇಗೆ ದಾನವಾಗಿ ಕೊಡಲಿಚ್ಛಿಸುವೆ? ರಾಜನ್! ನಿನ್ನದಲ್ಲದಾಗಿರುವ ಈ ಭೂಮಿಯನ್ನು ನೀನು ಹೇಗೆ ದಾನವಾಗಿ ಕೊಡಬಲ್ಲೆ?

09030056a ಧರ್ಮತೋ ಯಾಚಮಾನಾನಾಂ ಶಮಾರ್ಥಂ ಚ ಕುಲಸ್ಯ ನಃ।
09030056c ವಾರ್ಷ್ಣೇಯಂ ಪ್ರಥಮಂ ರಾಜನ್ಪ್ರತ್ಯಾಖ್ಯಾಯ ಮಹಾಬಲಂ।।

ರಾಜನ್! ಕುಲದಲ್ಲಿ ಶಾಂತಿಯನ್ನಿರಿಸಲೋಸುಗ ಧರ್ಮದಿಂದ ಮಹಾಬಲ ವಾರ್ಷ್ಣೇಯನು ಮೊದಲು ಬಂದು ಕೇಳಿದಾಗ ನೀನೇನು ಪ್ರತ್ಯುತ್ತರವನ್ನಿತ್ತಿದ್ದೆ?

09030057a ಕಿಮಿದಾನೀಂ ದದಾಸಿ ತ್ವಂ ಕೋ ಹಿ ತೇ ಚಿತ್ತವಿಭ್ರಮಃ।
09030057c ಅಭಿಯುಕ್ತಸ್ತು ಕೋ ರಾಜಾ ದಾತುಮಿಚ್ಚೇದ್ಧಿ ಮೇದಿನೀಂ।।

ಈಗ ನೀನು ದಾನವಾಗಿ ಕೊಡುತ್ತೇನೆ ಎಂದು ಹೇಳುತ್ತಿರುವೆಯಲ್ಲ! ನಿನಗೇನಾದರೂ ಚಿತ್ತಭ್ರಮೆಯುಂಟಾಗಿದೆಯೇ? ಶತ್ರುಗಳ ಆಕ್ರಮಣಕ್ಕೊಳಗಾಗಿರುವ ರಾಜ್ಯವನ್ನು ಯಾವ ರಾಜನು ತಾನೇ ದಾನವಾಗಿ ಕೊಡಲು ಬಯಸುತ್ತಾನೆ?

09030058a ನ ತ್ವಮದ್ಯ ಮಹೀಂ ದಾತುಮೀಶಃ ಕೌರವನಂದನ।
09030058c ಆಚ್ಚೇತ್ತುಂ ವಾ ಬಲಾದ್ರಾಜನ್ಸ ಕಥಂ ದಾತುಮಿಚ್ಚಸಿ।।

ಕೌರವನಂದನ! ಇಂದು ನೀನು ಭೂಮಿಯನ್ನು ದಾನವನ್ನಾಗಿಕೊಡಲು ಈಶನೂ ಆಗಿಲ್ಲ ಅಥವಾ ಬಲವಾಗಿ ಕಸಿದುಕೊಳ್ಳಲೂ ಸಮರ್ಥನಾಗಿಲ್ಲ! ಹೀಗಿರುವಾಗ ಹೇಗೆ ತಾನೇ ದಾನವನ್ನು ಕೊಡಲು ಬಯಸುತ್ತಿರುವೆ?

09030058e ಮಾಂ ತು ನಿರ್ಜಿತ್ಯ ಸಂಗ್ರಾಮೇ ಪಾಲಯೇಮಾಂ ವಸುಂಧರಾಂ।।
09030059a ಸೂಚ್ಯಗ್ರೇಣಾಪಿ ಯದ್ಭೂಮೇರಪಿ ಧ್ರೀಯೇತ ಭಾರತ।
09030059c ತನ್ಮಾತ್ರಮಪಿ ನೋ ಮಹ್ಯಂ ನ ದದಾತಿ ಪುರಾ ಭವಾನ್।।

“ನನ್ನನ್ನು ಸಂಗ್ರಾಮದಲ್ಲಿ ಸೋಲಿಸಿಯೇ ನೀನು ಈ ವಸುಂಧರೆಯನ್ನು ಪಾಲಿಸು! ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ” ಎಂದು ಹೇಳಿದ್ದೆ. ಭಾರತ! ಆಗ ನೀನು ನನಗೆ ಅಷ್ಟು ಭೂಮಿಯನ್ನೂ ಕೊಡಲು ಇಷ್ಟಪಟ್ಟಿರಲಿಲ್ಲ!

09030060a ಸ ಕಥಂ ಪೃಥಿವೀಮೇತಾಂ ಪ್ರದದಾಸಿ ವಿಶಾಂ ಪತೇ।
09030060c ಸೂಚ್ಯಗ್ರಂ ನಾತ್ಯಜಃ ಪೂರ್ವಂ ಸ ಕಥಂ ತ್ಯಜಸಿ ಕ್ಷಿತಿಂ।।

ವಿಶಾಂಪತೇ! ಹಾಗಿರುವಾಗ ಈಗ ಹೇಗೆ ಈ ಪೃಥ್ವಿಯನ್ನು ನನಗೆ ಕೊಡುತ್ತಿರುವೆ? ಹಿಂದೆ ಸೂಜಿಯ ಮೊನೆಯಷ್ಟು ಭೂಮಿಯನ್ನು ಬಿಟ್ಟುಕೊಟ್ಟಿರದವನು ಈಗ ಇಡೀ ಭೂಮಿಯನ್ನೇ ಹೇಗೆ ತ್ಯಜಿಸುತ್ತಿದ್ದೀಯೆ?

09030061a ಏವಮೈಶ್ವರ್ಯಮಾಸಾದ್ಯ ಪ್ರಶಾಸ್ಯ ಪೃಥಿವೀಮಿಮಾಂ।
09030061c ಕೋ ಹಿ ಮೂಢೋ ವ್ಯವಸ್ಯೇತ ಶತ್ರೋರ್ದಾತುಂ ವಸುಂಧರಾಂ।।

ಈ ರೀತಿ ಐಶ್ವರ್ಯವನ್ನು ಒಟ್ಟುಗೂಡಿಸಿಕೊಂಡು ಈ ಭೂಮಿಯನ್ನಾಳಿದ ಯಾವ ಮೂಢನು ತಾನೇ ವಸುಂಧರೆಯನ್ನು ಶತ್ರುವಿಗೆ ಕೊಡಲು ಬಯಸುತ್ತಾನೆ?

09030062a ತ್ವಂ ತು ಕೇವಲಮೌರ್ಖ್ಯೇಣ ವಿಮೂಢೋ ನಾವಬುಧ್ಯಸೇ।
09030062c ಪೃಥಿವೀಂ ದಾತುಕಾಮೋಽಪಿ ಜೀವಿತೇನಾದ್ಯ ಮೋಕ್ಷ್ಯಸೇ।।

ನಿನಾದರೋ ಕೇವಲ ಮೂರ್ಖತನದಿಂದ ವಿಮೂಢನಾಗಿರುವೆ! ಪೃಥ್ವಿಯನ್ನು ಕೊಡಲು ಬಯಸಿದರೂ ಇಂದು ಜೀವವನ್ನು ತೊರೆಯಬೇಕಾಗುತ್ತದೆ ಎನ್ನುವುದನ್ನು ನೀನು ಅರಿತಿಲ್ಲ!

09030063a ಅಸ್ಮಾನ್ವಾ ತ್ವಂ ಪರಾಜಿತ್ಯ ಪ್ರಶಾಧಿ ಪೃಥಿವೀಮಿಮಾಂ।
09030063c ಅಥ ವಾ ನಿಹತೋಽಸ್ಮಾಭಿರ್ವ್ರಜ ಲೋಕಾನನುತ್ತಮಾನ್।।

ನಮ್ಮನ್ನು ನೀನು ಪರಾಜಯಗೊಳಿಸಿ ಈ ಪೃಥ್ವಿಯನ್ನು ಆಳು. ಅಥವಾ ನಮ್ಮಿಂದ ಹತನಾಗಿ ಉತ್ತಮ ಲೋಕಗಳಿಗೆ ತೆರಳು!

09030064a ಆವಯೋರ್ಜೀವತೋ ರಾಜನ್ಮಯಿ ಚ ತ್ವಯಿ ಚ ಧ್ರುವಂ।
09030064c ಸಂಶಯಃ ಸರ್ವಭೂತಾನಾಂ ವಿಜಯೇ ನೋ ಭವಿಷ್ಯತಿ।।

ರಾಜನ್! ನಾನು ಮತ್ತು ನೀನು ಇಬ್ಬರೂ ಜೀವಂತವಾಗಿದ್ದರೆ ನಮ್ಮಿಬ್ಬರಲ್ಲಿ ವಿಜಯಿಯಾರೆಂದು ಸರ್ವಭೂತಗಳಲ್ಲಿಯೂ ಸಂಶಯವುಂಟಾಗುತ್ತದೆ.

09030065a ಜೀವಿತಂ ತವ ದುಷ್ಪ್ರಜ್ಞ ಮಯಿ ಸಂಪ್ರತಿ ವರ್ತತೇ।
09030065c ಜೀವಯೇಯಂ ತ್ವಹಂ ಕಾಮಂ ನ ತು ತ್ವಂ ಜೀವಿತುಂ ಕ್ಷಮಃ।।

ದುಷ್ಪ್ರಜ್ಞ! ನಿನ್ನ ಜೀವನವು ನನ್ನ ಕೈಯಲ್ಲಿದೆ! ನಾನು ಬಯಸಿದರೆ ಮಾತ್ರ ನೀನು ಜೀವಂತನಾಗಿರಬಲ್ಲೆ! ನಿನ್ನ ಇಚ್ಚೆಯಿಂದ ಜೀವಿಸಲು ನೀನು ಶಕ್ಯನಿಲ್ಲ!

09030066a ದಹನೇ ಹಿ ಕೃತೋ ಯತ್ನಸ್ತ್ವಯಾಸ್ಮಾಸು ವಿಶೇಷತಃ।
09030066c ಆಶೀವಿಷೈರ್ವಿಷೈಶ್ಚಾಪಿ ಜಲೇ ಚಾಪಿ ಪ್ರವೇಶನೈಃ।।
09030066e ತ್ವಯಾ ವಿನಿಕೃತಾ ರಾಜನ್ರಾಜ್ಯಸ್ಯ ಹರಣೇನ ಚ।।

ವಿಶೇಷವಾಗಿ ನೀನು ನಮ್ಮನ್ನು ಮೋಸದಿಂದ ಸುಡಲು ಪ್ರಯತ್ನಿಸಿದೆ. ಹಾವಿನ ವಿಷವನ್ನುಣ್ಣಿಸಿದೆ. ನೀರಿಗೆ ಕೂಡ ತಳ್ಳಿದೆ!

09030067a ಏತಸ್ಮಾತ್ಕಾರಣಾತ್ಪಾಪ ಜೀವಿತಂ ತೇ ನ ವಿದ್ಯತೇ।
09030067c ಉತ್ತಿಷ್ಠೋತ್ತಿಷ್ಠ ಯುಧ್ಯಸ್ವ ತತ್ತೇ ಶ್ರೇಯೋ ಭವಿಷ್ಯತಿ।।

ಪಾಪಿಯೇ! ಈ ಎಲ್ಲ ಕಾರಣಗಳಿಂದ ನೀನು ಜೀವದಿಂದುಳಿಯಲು ಸಾಧ್ಯವಿಲ್ಲ. ಮೇಲೇಳು! ಎದ್ದೇಳು! ಯುದ್ಧಮಾಡು! ಅದರಿಂದಲೇ ನಿನಗೆ ಶ್ರೇಯಸ್ಸುಂಟಾಗುತ್ತದೆ!””

09030068 ಸಂಜಯ ಉವಾಚ 09030068a ಏವಂ ತು ವಿವಿಧಾ ವಾಚೋ ಜಯಯುಕ್ತಾಃ ಪುನಃ ಪುನಃ।
09030068c ಕೀರ್ತಯಂತಿ ಸ್ಮ ತೇ ವೀರಾಸ್ತತ್ರ ತತ್ರ ಜನಾಧಿಪ।।

ಸಂಜಯನು ಹೇಳಿದನು: “ಜನಾಧಿಪ! ಜಯಯುಕ್ತ ಆ ವೀರರು ಅಲ್ಲಿ ಪುನಃ ಪುನಃ ಈ ರೀತಿಯ ಮಾತುಗಳನ್ನು ಹೇಳುತ್ತಲೇ ಇದ್ದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಸುಯೋಧನಯುಧಿಷ್ಠಿರಸಂವಾದೇ ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಸುಯೋಧನಯುಧಿಷ್ಠಿರಸಂವಾದ ಎನ್ನುವ ಮೂವತ್ತನೇ ಅಧ್ಯಾಯವು.