ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಸಾರಸ್ವತ ಪರ್ವ
ಅಧ್ಯಾಯ 29
ಸಾರ
ರಣದಲ್ಲಿ ದುರ್ಯೋಧನನನ್ನು ಹುಡುಕಾಡಿ ಬಳಲಿದ ಪಾಂಡವರು ವಿಶ್ರಾಂತಿಪಡೆಯಲು ಸ್ವ-ಶಿಬಿರಕ್ಕೆ ತೆರಳಿದಿದು ಹಾಗೂ ಕೃಪ-ಅಶ್ವತ್ಥಾಮ-ಕೃತವರ್ಮರು ಖಾಲಿಯಾಗಿದ್ದ ಶಿಬಿರದಲ್ಲಿ ರಾತ್ರಿ ಉಳಿಯಬಾರದೆಂದು ನಿರ್ಧರಿಸಿ ದುರ್ಯೋಧನನನ್ನು ಕಾಣಲು ಸರೋವರಕ್ಕೆ ಬಂದುದು (1-9). ಕೃಪ-ಅಶ್ವತ್ಥಾಮ-ಕೃತವರ್ಮರೊಂದಿಗೆ ಸರೋವರದಲ್ಲಿದ್ದ ದುರ್ಯೋಧನನ ಸಂವಾದ (10-21). ಅವರ ಸಂವಾದವನ್ನು ಕೇಳಿಕೊಂಡ ಮೃಗವ್ಯಾಧರು ದುರ್ಯೋಧನನ ಕುರುಹನ್ನು ಪಾಂಡವರಿಗೆ ತಿಳಿಸಿದುದು (22-42). ಯುಧಿಷ್ಠಿರನು ತನ್ನ ಅನುಯಾಯಿಗಳೊಂದಿಗೆ ದ್ವೈಪಾಯನ ಸರೋವರವನ್ನು ತಲುಪಿದುದು (43-58). ದುರ್ಯೋಧನನೊಂದಿಗೆ ಮಾತನಾಡುತ್ತಿದ್ದ ಕೃಪ-ಅಶ್ವತ್ಥಾಮ-ಕೃತವರ್ಮರು ಪಾಂಡವರ ಆಗಮನವನ್ನು ಕೇಳಿ, ಸರೋವರದಿಂದ ಪಲಾಯನಗೈದುದು (59-66).
09029001 ಧೃತರಾಷ್ಟ್ರ ಉವಾಚ 09029001a ಹತೇಷು ಸರ್ವಸೈನ್ಯೇಷು ಪಾಂಡುಪುತ್ರೈ ರಣಾಜಿರೇ।
09029001c ಮಮ ಸೈನ್ಯಾವಶಿಷ್ಟಾಸ್ತೇ ಕಿಮಕುರ್ವತ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ರಣರಂಗದಲ್ಲಿ ಪಾಂಡುಪುತ್ರರಿಂದ ಸರ್ವಸೇನೆಗಳೂ ಹತರಾಗಲು ನನ್ನ ಸೇನೆಯಲ್ಲಿ ಅಳಿದುಳಿದಿದ್ದವರು ಏನು ಮಾಡಿದರು?
09029002a ಕೃತವರ್ಮಾ ಕೃಪಶ್ಚೈವ ದ್ರೋಣಪುತ್ರಶ್ಚ ವೀರ್ಯವಾನ್।
09029002c ದುರ್ಯೋಧನಶ್ಚ ಮಂದಾತ್ಮಾ ರಾಜಾ ಕಿಮಕರೋತ್ತದಾ।।
ಆಗ ಕೃತವರ್ಮ, ಕೃಪ, ವೀರ್ಯವಾನ್ ದ್ರೋಣಪುತ್ರ ಮತ್ತು ಮಂದಾತ್ಮ ದುರ್ಯೋಧನರು ಏನು ಮಾಡಿದರು?”
09029003 ಸಂಜಯ ಉವಾಚ 09029003a ಸಂಪ್ರಾದ್ರವತ್ಸು ದಾರೇಷು ಕ್ಷತ್ರಿಯಾಣಾಂ ಮಹಾತ್ಮನಾಂ।
09029003c ವಿದ್ರುತೇ ಶಿಬಿರೇ ಶೂನ್ಯೇ ಭೃಶೋದ್ವಿಗ್ನಾಸ್ತ್ರಯೋ ರಥಾಃ।।
09029004a ನಿಶಮ್ಯ ಪಾಂಡುಪುತ್ರಾಣಾಂ ತದಾ ವಿಜಯಿನಾಂ ಸ್ವನಂ।
09029004c ವಿದ್ರುತಂ ಶಿಬಿರಂ ದೃಷ್ಟ್ವಾ ಸಾಯಾಹ್ನೇ ರಾಜಗೃದ್ಧಿನಃ।।
09029004e ಸ್ಥಾನಂ ನಾರೋಚಯಂಸ್ತತ್ರ ತತಸ್ತೇ ಹ್ರದಮಭ್ಯಯುಃ।।
ಸಂಜಯನು ಹೇಳಿದನು: “ಮಹಾತ್ಮ ಕ್ಷತ್ರಿಯರ ಪತ್ನಿಯರು ಪಲಾಯನ ಮಾಡಿ ಶಿಬಿರವು ಶೂನ್ಯವಾಗಲು, ವಿಜಯಿ ಪಾಂಡುಪುತ್ರರ ಕೂಗನ್ನು ಕೇಳಿ, ಖಾಲಿಯಾದ ಶಿಬಿರವನ್ನು ನೋಡಿ ಆ ರಾತ್ರಿ ಅಲ್ಲಿ ಉಳಿಯಲು ಇಚ್ಛಿಸದೇ ಆ ಮೂವರು ಮಹಾರಥರು ತುಂಬಾ ಉದ್ವಿಗ್ನಗೊಂಡು ರಾಜನನ್ನು ನೋಡಬೇಕೆಂದು ಬಯಸಿ ಸರೋವರಕ್ಕೆ ಆಗಮಿಸಿದರು.
09029005a ಯುಧಿಷ್ಠಿರೋಽಪಿ ಧರ್ಮಾತ್ಮಾ ಭ್ರಾತೃಭಿಃ ಸಹಿತೋ ರಣೇ।
09029005c ಹೃಷ್ಟಃ ಪರ್ಯಪತದ್ರಾಜನ್ದುರ್ಯೋಧನವಧೇಪ್ಸಯಾ।।
ರಾಜನ್! ಹೃಷ್ಟನಾಗಿದ್ದ ಧರ್ಮಾತ್ಮ ಯುಧಿಷ್ಠಿರನಾದರೋ ದುರ್ಯೋಧನನನ್ನು ವಧಿಸಲು ಬಯಸಿ ಸಹೋದರರೊಂದಿಗೆ ಅವನನ್ನು ರಣದಲ್ಲಿ ಹುಡುಕಾಡಿದನು.
09029006a ಮಾರ್ಗಮಾಣಾಸ್ತು ಸಂಕ್ರುದ್ಧಾಸ್ತವ ಪುತ್ರಂ ಜಯೈಷಿಣಃ।
09029006c ಯತ್ನತೋಽನ್ವೇಷಮಾಣಾಸ್ತು ನೈವಾಪಶ್ಯನ್ಜನಾಧಿಪಂ।।
ಸಂಕ್ರುದ್ಧರಾಗಿ ನಿನ್ನ ಪುತ್ರನನ್ನು ಜಯಿಸಲು ಬಯಸಿದ್ದ ಅವರು ಎಷ್ಟೇ ಪ್ರಯತ್ನಪಟ್ಟು ಹುಡುಕಿದರೂ ಜನಾಧಿಪ ದುರ್ಯೋಧನನ್ನು ಕಾಣಲಿಲ್ಲ.
09029007a ಸ ಹಿ ತೀವ್ರೇಣ ವೇಗೇನ ಗದಾಪಾಣಿರಪಾಕ್ರಮತ್।
09029007c ತಂ ಹ್ರದಂ ಪ್ರಾವಿಶಚ್ಚಾಪಿ ವಿಷ್ಟಭ್ಯಾಪಃ ಸ್ವಮಾಯಯಾ।।
ದುರ್ಯೋಧನನಾದರೋ ಗದಾಪಾಣಿಯಾಗಿ ತೀವ್ರ ವೇಗದಿಂದ ಆ ಸರೋವರಕ್ಕೆ ಹೋಗಿ ತನ್ನದೇ ಮಾಯೆಯಿಂದ ನೀರನ್ನು ಸ್ಥಂಭಿಸಿ ಪ್ರವೇಶಿಸಿದ್ದನು.
09029008a ಯದಾ ತು ಪಾಂಡವಾಃ ಸರ್ವೇ ಸುಪರಿಶ್ರಾಂತವಾಹನಾಃ।
09029008c ತತಃ ಸ್ವಶಿಬಿರಂ ಪ್ರಾಪ್ಯ ವ್ಯತಿಷ್ಠನ್ಸಹಸೈನಿಕಾಃ।।
ಅವರ ವಾಹನಗಳೂ ಅತ್ಯಂತ ಬಳಲಿರಲು ಪಾಂಡವರೆಲ್ಲರೂ ಸೈನಿಕರೊಂದಿಗೆ ತಮ್ಮ ಶಿಬಿರಗಳಿಗೆ ಹಿಂದಿರುಗಿದರು.
09029009a ತತಃ ಕೃಪಶ್ಚ ದ್ರೌಣಿಶ್ಚ ಕೃತವರ್ಮಾ ಚ ಸಾತ್ವತಃ।
09029009c ಸಂನಿವಿಷ್ಟೇಷು ಪಾರ್ಥೇಷು ಪ್ರಯಾತಾಸ್ತಂ ಹ್ರದಂ ಶನೈಃ।।
ಪಾರ್ಥರು ವಿಶ್ರಾಂತಿಪಡೆಯುತ್ತಿರಲಾಗಿ ಕೃಪ, ದ್ರೌಣಿ ಮತ್ತು ಸಾತ್ವತ ಕೃತಮರ್ವರು ಮೆಲ್ಲನೆ ಆ ಸರೋವರದ ಬಳಿ ಬಂದರು.
09029010a ತೇ ತಂ ಹ್ರದಂ ಸಮಾಸಾದ್ಯ ಯತ್ರ ಶೇತೇ ಜನಾಧಿಪಃ।
09029010c ಅಭ್ಯಭಾಷಂತ ದುರ್ಧರ್ಷಂ ರಾಜಾನಂ ಸುಪ್ತಮಂಭಸಿ।।
ಜನಾಧಿಪನು ಮಲಗಿದ್ದ ಆ ಸರೋವರವನ್ನು ತಲುಪಿ ಅವರು ನೀರಿನಲ್ಲಿ ಮಲಗಿದ್ದ ದುರ್ಧರ್ಷ ರಾಜನನ್ನು ಸಂಬೋಧಿಸಿ ಹೀಗೆಂದರು:
09029011a ರಾಜನ್ನುತ್ತಿಷ್ಠ ಯುಧ್ಯಸ್ವ ಸಹಾಸ್ಮಾಭಿರ್ಯುಧಿಷ್ಠಿರಂ।
09029011c ಜಿತ್ವಾ ವಾ ಪೃಥಿವೀಂ ಭುಂಕ್ಷ್ವ ಹತೋ ವಾ ಸ್ವರ್ಗಮಾಪ್ನುಹಿ।।
“ರಾಜನ್! ಕೂಡಲೇ ಮೇಲೇಳು! ನಮ್ಮೊಂದಿಗೆ ಸೇರಿ ಯುಧಿಷ್ಠಿರನೊಡನೆ ಯುದ್ಧಮಾಡು! ಗೆದ್ದರೆ ಪೃಥ್ವಿಯನ್ನು ಭೋಗಿಸುವೆ ಅಥವಾ ಹತನಾಗಿ ಸ್ವರ್ಗವನ್ನು ಪಡೆಯುವೆ!
09029012a ತೇಷಾಮಪಿ ಬಲಂ ಸರ್ವಂ ಹತಂ ದುರ್ಯೋಧನ ತ್ವಯಾ।
09029012c ಪ್ರತಿರಬ್ಧಾಶ್ಚ ಭೂಯಿಷ್ಠಂ ಯೇ ಶಿಷ್ಟಾಸ್ತತ್ರ ಸೈನಿಕಾಃ।।
ದುರ್ಯೋಧನ! ಅವರ ಸೇನೆಯೆಲ್ಲವನ್ನೂ ನೀನು ಸಂಹರಿಸಿರುವೆ! ಅಳಿದುಳಿದಿರುವ ಸೈನಿಕರು ಕೂಡ ಬಳಲಿ ಬೆಂಡಾಗಿದ್ದಾರೆ.
09029013a ನ ತೇ ವೇಗಂ ವಿಷಹಿತುಂ ಶಕ್ತಾಸ್ತವ ವಿಶಾಂ ಪತೇ।
09029013c ಅಸ್ಮಾಭಿರಭಿಗುಪ್ತಸ್ಯ ತಸ್ಮಾದುತ್ತಿಷ್ಠ ಭಾರತ।।
ವಿಶಾಂಪತೇ! ನಮ್ಮ ರಕ್ಷಣೆಯಿರುವ ನಿನ್ನ ಶಕ್ತಿಯ ವೇಗವನ್ನು ತಡೆದುಕೊಳ್ಳಲು ಅವರು ಶಕ್ಯರಿಲ್ಲ. ಆದುದರಿಂದ ಭಾರತ! ಮೇಲೇಳು!”
09029014 ದುರ್ಯೋಧನ ಉವಾಚ 09029014a ದಿಷ್ಟ್ಯಾ ಪಶ್ಯಾಮಿ ವೋ ಮುಕ್ತಾನೀದೃಶಾತ್ಪುರುಷಕ್ಷಯಾತ್।
09029014c ಪಾಂಡುಕೌರವಸಮ್ಮರ್ದಾಜ್ಜೀವಮಾನಾನ್ನರರ್ಷಭಾನ್।।
ದುರ್ಯೋಧನನು ಹೇಳಿದನು: “ಒಳ್ಳೆಯದಾಯಿತು ಈ ರೀತಿಯ ಪುರುಷಕ್ಷಯಕಾರೀ ಪಾಂಡವ-ಕೌರವರ ಮಹಾಸಂಗ್ರಾಮದಿಂದ ಜೀವನ್ಮುಕ್ತರಾಗಿರುವ ನರರ್ಷಭ ನಿಮ್ಮನ್ನು ನಾನು ನೋಡುತ್ತಿದ್ದೇನೆ.
09029015a ವಿಜೇಷ್ಯಾಮೋ ವಯಂ ಸರ್ವೇ ವಿಶ್ರಾಂತಾ ವಿಗತಕ್ಲಮಾಃ।
09029015c ಭವಂತಶ್ಚ ಪರಿಶ್ರಾಂತಾ ವಯಂ ಚ ಭೃಶವಿಕ್ಷತಾಃ।।
09029015e ಉದೀರ್ಣಂ ಚ ಬಲಂ ತೇಷಾಂ ತೇನ ಯುದ್ಧಂ ನ ರೋಚಯೇ।
ವಿಶ್ರಾಂತಿಪಡೆದು ಬಳಲಿಕೆಯನ್ನು ಕಳೆದುಕೊಂಡ ನಂತರ ನಾವೆಲ್ಲರೂ ಅವರನ್ನು ಜಯಿಸೋಣ. ನೀವೂ ಕೂಡ ಬಳಲಿದ್ದೀರಿ. ನಾನೂ ಕೂಡ ತುಂಬಾ ಗಾಯಗೊಂಡಿದ್ದೇನೆ. ಇನ್ನೂ ಅಪಾರ ಸೇನೆಯಿರುವ ಅವರೊಂದಿಗೆ ಈಗ ಯುದ್ಧಮಾಡುವುದು ಸೂಕ್ತವೆಂದು ನನಗನ್ನಿಸುತ್ತಿಲ್ಲ.
09029016a ನ ತ್ವೇತದದ್ಭುತಂ ವೀರಾ ಯದ್ವೋ ಮಹದಿದಂ ಮನಃ।
09029016c ಅಸ್ಮಾಸು ಚ ಪರಾ ಭಕ್ತಿರ್ನ ತು ಕಾಲಃ ಪರಾಕ್ರಮೇ।।
ಇದು ಮಹಾ ವೀರತನವೆಂದು ನನ್ನ ಮನಸ್ಸಿಗೆ ಅನಿಸುತ್ತಿಲ್ಲ. ನನ್ನ ಮೇಲಿನ ಅಪಾರ ಭಕ್ತಿಯ ಹೊರತಾಗಿ ಇದು ಪರಾಕ್ರಮಕ್ಕೆ ಸಮಯವೆಂದು ಕಾಣುತ್ತಿಲ್ಲ.
09029017a ವಿಶ್ರಮ್ಯೈಕಾಂ ನಿಶಾಮದ್ಯ ಭವದ್ಭಿಃ ಸಹಿತೋ ರಣೇ।
09029017c ಪ್ರತಿಯೋತ್ಸ್ಯಾಮ್ಯಹಂ ಶತ್ರೂನ್ ಶ್ವೋ ನ ಮೇಽಸ್ತ್ಯತ್ರ ಸಂಶಯಃ।।
ಇಂದು ಒಂದು ರಾತ್ರಿ ವಿಶ್ರಮಿಸಿಕೊಂಡ ನಂತರ ನಾಳೆ ನಿಮ್ಮೊಂದಿಗೆ ರಣದಲ್ಲಿ ನಾನು ಶತ್ರುಗಳನ್ನು ಎದುರಿಸಿ ಹೋರಾಡುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!””
09029018 ಸಂಜಯ ಉವಾಚ 09029018a ಏವಮುಕ್ತೋಽಬ್ರವೀದ್ದ್ರೌಣೀ ರಾಜಾನಂ ಯುದ್ಧದುರ್ಮದಂ।
09029018c ಉತ್ತಿಷ್ಠ ರಾಜನ್ಭದ್ರಂ ತೇ ವಿಜೇಷ್ಯಾಮೋ ರಣೇ ಪರಾನ್।।
ಸಂಜಯನು ಹೇಳಿದನು: “ಹೀಗೆ ಹೇಳಲು ದ್ರೌಣಿಯು ಯುದ್ಧದುರ್ಮದ ರಾಜನನ್ನುದ್ದೇಶಿಸಿ ಹೇಳಿದನು: “ರಾಜನ್! ಎದ್ದೇಳು! ನಿನಗೆ ಮಂಗಳವಾಗಲಿ! ರಣದಲ್ಲಿ ಶತ್ರುಗಳನ್ನು ಜಯಿಸೋಣ!
09029019a ಇಷ್ಟಾಪೂರ್ತೇನ ದಾನೇನ ಸತ್ಯೇನ ಚ ಜಪೇನ ಚ।
09029019c ಶಪೇ ರಾಜನ್ಯಥಾ ಹ್ಯದ್ಯ ನಿಹನಿಷ್ಯಾಮಿ ಸೋಮಕಾನ್।।
ರಾಜನ್! ಪೂರೈಸಿರುವ ಇಷ್ಟಿ-ದಾನಗಳ, ಸತ್ಯ-ಜಪಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಇಂದು ನಾನು ಸೋಮಕರನ್ನು ನಾಶಗೊಳಿಸುತ್ತೇನೆ!
09029020a ಮಾ ಸ್ಮ ಯಜ್ಞಕೃತಾಂ ಪ್ರೀತಿಂ ಪ್ರಾಪ್ನುಯಾಂ ಸಜ್ಜನೋಚಿತಾಂ।
09029020c ಯದೀಮಾಂ ರಜನೀಂ ವ್ಯುಷ್ಟಾಂ ನ ನಿಹನ್ಮಿ ಪರಾನ್ರಣೇ।।
ಈ ರಾತ್ರಿ ಕಳೆಯುವುದರೊಳಗೆ ಒಂದುವೇಳೆ ನಾನು ರಣದಲ್ಲಿ ಶತ್ರುಗಳನ್ನು ಸಂಹರಿಸದೇ ಇದ್ದರೆ ಯಜ್ಞಗಳನ್ನು ಮಾಡಿದ ಸಜ್ಜನರಿಗೆ ಉಚಿತವಾದ ಪ್ರಸನ್ನತೆಯನ್ನು ನಾನು ಹೊಂದದಂತಾಗಲಿ!
09029021a ನಾಹತ್ವಾ ಸರ್ವಪಾಂಚಾಲಾನ್ವಿಮೋಕ್ಷ್ಯೇ ಕವಚಂ ವಿಭೋ।
09029021c ಇತಿ ಸತ್ಯಂ ಬ್ರವೀಮ್ಯೇತತ್ತನ್ಮೇ ಶೃಣು ಜನಾಧಿಪ।।
ವಿಭೋ! ಜನಾಧಿಪ! ಸರ್ವಪಾಂಚಾಲರನ್ನೂ ಸಂಹರಿಸದೇ ನಾನು ಕವಚವನ್ನು ಬಿಚ್ಚುವುದಿಲ್ಲ. ನಿನಗೆ ಹೇಳುತ್ತಿರುವ ಈ ನನ್ನ ಮಾತು ಸತ್ಯ!”
09029022a ತೇಷು ಸಂಭಾಷಮಾಣೇಷು ವ್ಯಾಧಾಸ್ತಂ ದೇಶಮಾಯಯುಃ।
09029022c ಮಾಂಸಭಾರಪರಿಶ್ರಾಂತಾಃ ಪಾನೀಯಾರ್ಥಂ ಯದೃಚ್ಚಯಾ।।
ಅವರು ಹೀಗೆ ಮಾತನಾಡಿಕೊಳ್ಳುತ್ತಿರಲು ಮಾಂಸದ ಭಾರವನ್ನು ಹೊತ್ತು ಪರಿಶ್ರಾಂತರಾಗಿದ್ದ ಕೆಲವು ವ್ಯಾಧರು ನೀರನ್ನು ಕುಡಿಯಲೋಸುಗ ಆ ಪ್ರದೇಶಕ್ಕೆ ಆಗಮಿಸಿದರು.
09029023a ತೇ ಹಿ ನಿತ್ಯಂ ಮಹಾರಾಜ ಭೀಮಸೇನಸ್ಯ ಲುಬ್ಧಕಾಃ।
09029023c ಮಾಂಸಭಾರಾನುಪಾಜಹ್ರುರ್ಭಕ್ತ್ಯಾ ಪರಮಯಾ ವಿಭೋ।।
ವಿಭೋ! ಮಹಾರಾಜ! ಆಸೆಬುರುಕರಾದ ಅವರು ನಿತ್ಯವೂ ಪರಮ ಭಕ್ತಿಯಿಂದ ಭೀಮಸೇನನಿಗೆ ಮಾಂಸವನ್ನು ಹೊತ್ತುಕೊಂಡು ಹೋಗಿ ಕೊಡುತ್ತಿದ್ದರು.
09029024a ತೇ ತತ್ರ ವಿಷ್ಠಿತಾಸ್ತೇಷಾಂ ಸರ್ವಂ ತದ್ವಚನಂ ರಹಃ।
09029024c ದುರ್ಯೋಧನವಚಶ್ಚೈವ ಶುಶ್ರುವುಃ ಸಂಗತಾ ಮಿಥಃ।।
ಅಲ್ಲಿ ಅವರು ಒಟ್ಟಾಗಿ ಅಡಗಿನಿಂತು ರಹಸ್ಯದಲ್ಲಿ ಅವರಾಡಿದ ಎಲ್ಲ ಮಾತುಗಳನ್ನೂ, ದುರ್ಯೋಧನನ ಮಾತನ್ನೂ ಕೇಳಿಸಿಕೊಂಡರು.
09029025a ತೇಽಪಿ ಸರ್ವೇ ಮಹೇಷ್ವಾಸಾ ಅಯುದ್ಧಾರ್ಥಿನಿ ಕೌರವೇ।
09029025c ನಿರ್ಬಂಧಂ ಪರಮಂ ಚಕ್ರುಸ್ತದಾ ವೈ ಯುದ್ಧಕಾಂಕ್ಷಿಣಃ।।
ಯುದ್ಧಾಕಾಂಕ್ಷಿಗಳಾಗಿದ್ದ ಆ ಎಲ್ಲ ಮಹೇಷ್ವಾಸರೂ ಯುದ್ಧಮಾಡಲು ಬಯಸಿರದಿದ್ದ ಕೌರವನಿಗೆ ಪರಮ ನಿರ್ಬಂಧಗಳನ್ನು ಹಾಕುತ್ತಿದ್ದರು.
09029026a ತಾಂಸ್ತಥಾ ಸಮುದೀಕ್ಷ್ಯಾಥ ಕೌರವಾಣಾಂ ಮಹಾರಥಾನ್।
09029026c ಅಯುದ್ಧಮನಸಂ ಚೈವ ರಾಜಾನಂ ಸ್ಥಿತಮಂಭಸಿ।।
ಆಗ ಅವರು ಮಹಾರಥ ಕೌರವರನ್ನೂ ಮತ್ತು ಯುದ್ಧಮಾಡಲು ಮನಸ್ಸಿಲ್ಲದ ರಾಜನು ನೀರಿನಲ್ಲಿ ಕುಳಿತುಕೊಂಡಿರುವುದನ್ನೂ ನೋಡಿದರು.
09029027a ತೇಷಾಂ ಶ್ರುತ್ವಾ ಚ ಸಂವಾದಂ ರಾಜ್ಞಶ್ಚ ಸಲಿಲೇ ಸತಃ।
09029027c ವ್ಯಾಧಾಭ್ಯಜಾನನ್ರಾಜೇಂದ್ರ ಸಲಿಲಸ್ಥಂ ಸುಯೋಧನಂ।।
ರಾಜೇಂದ್ರ! ಅವರ ಮತ್ತು ನೀರಿನಲ್ಲಿದ್ದುಕೊಂಡು ಮಾತನಾಡುತ್ತಿದ್ದ ರಾಜನ ಸಂಭಾಷಣೆಯನ್ನು ಕೇಳಿ ವ್ಯಾಧರು ಸುಯೋಧನನು ನೀರಿನಲ್ಲಿ ಮುಳುಗಿಕೊಂಡಿದ್ದಾನೆಂದು ತಿಳಿದುಕೊಂಡರು.
09029028a ತೇ ಪೂರ್ವಂ ಪಾಂಡುಪುತ್ರೇಣ ಪೃಷ್ಟಾ ಹ್ಯಾಸನ್ಸುತಂ ತವ।
09029028c ಯದೃಚ್ಚೋಪಗತಾಸ್ತತ್ರ ರಾಜಾನಂ ಪರಿಮಾರ್ಗಿತಾಃ।।
ಇದಕ್ಕೆ ಮೊದಲು ನಿನ್ನ ಮಗ ರಾಜನನ್ನು ಹುಡುಕಿಕೊಂಡು ಬರುತ್ತಿರುವ ಪಾಂಡುಪುತ್ರರಿಗೆ ದಾರಿಯಲ್ಲಿ ಇವರು ಸಿಕ್ಕಿದ್ದರು.
09029029a ತತಸ್ತೇ ಪಾಂಡುಪುತ್ರಸ್ಯ ಸ್ಮೃತ್ವಾ ತದ್ಭಾಷಿತಂ ತದಾ।
09029029c ಅನ್ಯೋನ್ಯಮಬ್ರುವನ್ರಾಜನ್ಮೃಗವ್ಯಾಧಾಃ ಶನೈರಿದಂ।।
ಆ ಮೃಗವ್ಯಾಧರು ಪಾಂಡುಪುತ್ರನು ಆಗ ಆಡಿದ ಮಾತನ್ನು ಸ್ಮರಿಸಿಕೊಂಡು ಅನ್ಯೋನ್ಯರೊಡನೆ ಮೆಲ್ಲನೆ ಹೀಗೆ ಮಾತನಾಡಿಕೊಂಡರು:
09029030a ದುರ್ಯೋಧನಂ ಖ್ಯಾಪಯಾಮೋ ಧನಂ ದಾಸ್ಯತಿ ಪಾಂಡವಃ।
09029030c ಸುವ್ಯಕ್ತಮಿತಿ ನಃ ಖ್ಯಾತೋ ಹ್ರದೇ ದುರ್ಯೋಧನೋ ನೃಪಃ।।
“ದುರ್ಯೋಧನನ ಕುರುಹನ್ನು ನೀಡೋಣ! ಪಾಂಡವನು ನಮಗೆ ಧನವನ್ನು ನೀಡುತ್ತಾನೆ. ಸರೋವರದಲ್ಲಿ ನೃಪ ದುರ್ಯೋಧನನಿರುವನೆಂದು ನಮಗೆ ಸ್ಪಷ್ಟವಾಗಿ ತಿಳಿದುಹೋಯಿತು.
09029031a ತಸ್ಮಾದ್ಗಚ್ಚಾಮಹೇ ಸರ್ವೇ ಯತ್ರ ರಾಜಾ ಯುಧಿಷ್ಠಿರಃ।
09029031c ಆಖ್ಯಾತುಂ ಸಲಿಲೇ ಸುಪ್ತಂ ದುರ್ಯೋಧನಮಮರ್ಷಣಂ।।
ಆದುದರಿಂದ ನಾವೆಲ್ಲರೂ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೋಗಿ ನೀರಿನಲ್ಲಿ ಮಲಗಿರುವ ಅಮರ್ಷಣ ದುರ್ಯೋಧನನ ಕುರಿತು ಹೇಳೋಣ!
09029032a ಧೃತರಾಷ್ಟ್ರಾತ್ಮಜಂ ತಸ್ಮೈ ಭೀಮಸೇನಾಯ ಧೀಮತೇ।
09029032c ಶಯಾನಂ ಸಲಿಲೇ ಸರ್ವೇ ಕಥಯಾಮೋ ಧನುರ್ಭೃತೇ।।
ಧೀಮತ ಧನುರ್ಧರ ಭೀಮಸೇನನಿಗೆ ಧೃತರಾಷ್ಟ್ರನ ಮಗನು ನೀರಿನಲ್ಲಿ ಮಲಗಿರುವುದೆಲ್ಲವನ್ನೂ ಹೇಳೋಣ!
09029033a ಸ ನೋ ದಾಸ್ಯತಿ ಸುಪ್ರೀತೋ ಧನಾನಿ ಬಹುಲಾನ್ಯುತ।
09029033c ಕಿಂ ನೋ ಮಾಂಸೇನ ಶುಷ್ಕೇಣ ಪರಿಕ್ಲಿಷ್ಟೇನ ಶೋಷಿಣಾ।।
ಸುಪ್ರೀತನಾಗಿ ಅವನು ನಮಗೆ ಹೇಳಿದಂತೆ ಬಹಳ ಧನವನ್ನು ನೀಡುತ್ತಾನೆ. ಕಷ್ಟದಿಂದ ನಮ್ಮನ್ನೇ ಶೋಷಿಸುವ ಈ ಶುಷ್ಕ ಮಾಂಸದಿಂದ ನಮಗೇನಾಗಬೇಕಾಗಿದೆ?”
09029034a ಏವಮುಕ್ತ್ವಾ ತತೋ ವ್ಯಾಧಾಃ ಸಂಪ್ರಹೃಷ್ಟಾ ಧನಾರ್ಥಿನಃ।
09029034c ಮಾಂಸಭಾರಾನುಪಾದಾಯ ಪ್ರಯಯುಃ ಶಿಬಿರಂ ಪ್ರತಿ।।
ಹೀಗೆ ಮಾತನಾಡಿಕೊಂಡು ಸಂತೋಷಗೊಂಡ ಆ ಧನಾರ್ಥಿ ವ್ಯಾಧರು ಮಾಂಸದ ಹೊರೆಯನ್ನು ಹೊತ್ತುಕೊಂಡು ಶಿಬಿರದ ಕಡೆ ನಡೆದರು.
09029035a ಪಾಂಡವಾಶ್ಚ ಮಹಾರಾಜ ಲಬ್ಧಲಕ್ಷಾಃ ಪ್ರಹಾರಿಣಃ।
09029035c ಅಪಶ್ಯಮಾನಾಃ ಸಮರೇ ದುರ್ಯೋಧನಮವಸ್ಥಿತಂ।।
09029036a ನಿಕೃತೇಸ್ತಸ್ಯ ಪಾಪಸ್ಯ ತೇ ಪಾರಂ ಗಮನೇಪ್ಸವಃ।
09029036c ಚಾರಾನ್ಸಂಪ್ರೇಷಯಾಮಾಸುಃ ಸಮಂತಾತ್ತದ್ರಣಾಜಿರಂ।।
ಮಹಾರಾಜ! ಪ್ರಹಾರಿ-ಲಬ್ಧಲಕ್ಷ ಪಾಂಡವರಾದರೋ ಸಮರದಲ್ಲಿ ದುರ್ಯೋಧನನ ಕುರುಹನ್ನು ಕಾಣದೇ ಆ ಪಾಪಿಯು ಮೋಸದಿಂದ ಪಾರಾಗಬೇಕೆಂದು ಬಯಸಿ, ರಣಾಂಗಣದ ಎಲ್ಲ ಕಡೆಗಳಲ್ಲಿ ಚಾರರನ್ನು ಕಳುಹಿಸಿದ್ದರು.
09029037a ಆಗಮ್ಯ ತು ತತಃ ಸರ್ವೇ ನಷ್ಟಂ ದುರ್ಯೋಧನಂ ನೃಪಂ।
09029037c ನ್ಯವೇದಯಂತ ಸಹಿತಾ ಧರ್ಮರಾಜಸ್ಯ ಸೈನಿಕಾಃ।।
ಧರ್ಮರಾಜನ ಸೈನಿಕರೆಲ್ಲರೂ ಒಟ್ಟಾಗಿ ಬಂದು ನೃಪ ದುರ್ಯೋಧನನು ಯಾರಿಗೂ ಕಾಣಲಿಲ್ಲವೆಂದು ನಿವೇದಿಸಿದರು.
09029038a ತೇಷಾಂ ತದ್ವಚನಂ ಶ್ರುತ್ವಾ ಚಾರಾಣಾಂ ಭರತರ್ಷಭ।
09029038c ಚಿಂತಾಮಭ್ಯಗಮತ್ತೀವ್ರಾಂ ನಿಶಶ್ವಾಸ ಚ ಪಾರ್ಥಿವಃ।।
ಭರತರ್ಷಭ! ಚಾರರ ಆ ಮಾತನ್ನು ಕೇಳಿ ಪಾರ್ಥಿವನು ತೀವ್ರ ಚಿಂತಾಮಗ್ನನಾಗಿ ನಿಟ್ಟುಸಿರು ಬಿಟ್ಟನು.
09029039a ಅಥ ಸ್ಥಿತಾನಾಂ ಪಾಂಡೂನಾಂ ದೀನಾನಾಂ ಭರತರ್ಷಭ।
09029039c ತಸ್ಮಾದ್ದೇಶಾದಪಕ್ರಮ್ಯ ತ್ವರಿತಾ ಲುಬ್ಧಕಾ ವಿಭೋ।।
ಭರತರ್ಷಭ! ವಿಭೋ! ಹಾಗೆ ಪಾಂಡವರು ದೀನರಾಗಿ ಕುಳಿತುಕೊಂಡಿರುವ ಸ್ಥಳಕ್ಕೆ ಆ ಆಸೆಬುರುಕರು ತ್ವರೆಮಾಡಿ ಆಗಮಿಸಿದರು.
09029040a ಆಜಗ್ಮುಃ ಶಿಬಿರಂ ಹೃಷ್ಟಾ ದೃಷ್ಟ್ವಾ ದುರ್ಯೋಧನಂ ನೃಪಂ।
09029040c ವಾರ್ಯಮಾಣಾಃ ಪ್ರವಿಷ್ಟಾಶ್ಚ ಭೀಮಸೇನಸ್ಯ ಪಶ್ಯತಃ।।
ನೃಪ ದುರ್ಯೋಧನನ್ನು ನೋಡಿ ಹರ್ಷಗೊಂಡಿದ್ದ ಅವರು ಶಿಬಿರಕ್ಕೆ ಬಂದು ತಡೆಯಲ್ಪಟ್ಟರೂ ಭೀಮಸೇನನನ್ನು ನೋಡಿ ಒಳನುಗ್ಗಿದರು.
09029041a ತೇ ತು ಪಾಂಡವಮಾಸಾದ್ಯ ಭೀಮಸೇನಂ ಮಹಾಬಲಂ।
09029041c ತಸ್ಮೈ ತತ್ಸರ್ವಮಾಚಖ್ಯುರ್ಯದ್ವೃತ್ತಂ ಯಚ್ಚ ವೈ ಶ್ರುತಂ।।
ಅವರು ಮಹಾಬಲ ಪಾಂಡವ ಭೀಮಸೇನನ ಬಳಿಸಾರಿ ಅವನಿಗೆ ಅಲ್ಲಿ ನಡೆದ ಮತ್ತು ಕೇಳಿದುದೆಲ್ಲವನ್ನೂ ವರದಿಮಾಡಿದರು.
09029042a ತತೋ ವೃಕೋದರೋ ರಾಜನ್ದತ್ತ್ವಾ ತೇಷಾಂ ಧನಂ ಬಹು।
09029042c ಧರ್ಮರಾಜಾಯ ತತ್ಸರ್ವಮಾಚಚಕ್ಷೇ ಪರಂತಪಃ।।
ರಾಜನ್! ಆಗ ಪರಂತಪ ವೃಕೋದರನು ಅವರಿಗೆ ಬಹಳ ಧನವನ್ನಿತ್ತು ಅವೆಲ್ಲವನ್ನೂ ಧರ್ಮರಾಜನಿಗೆ ತಿಳಿಸಿದನು.
09029043a ಅಸೌ ದುರ್ಯೋಧನೋ ರಾಜನ್ವಿಜ್ಞಾತೋ ಮಮ ಲುಬ್ಧಕೈಃ।
09029043c ಸಂಸ್ತಭ್ಯ ಸಲಿಲಂ ಶೇತೇ ಯಸ್ಯಾರ್ಥೇ ಪರಿತಪ್ಯಸೇ।।
“ರಾಜನ್! ನನ್ನ ಬೇಟೆಗಾರರು ದುರ್ಯೋಧನ ಕುರುಹನ್ನು ತಿಳಿದಿದ್ದಾರೆ. ಯಾರಿಗಾಗಿ ಪರಿತಪಿಸುತ್ತಿರುವೆಯೋ ಅವನು ಸರೋವರವನ್ನು ಸ್ತಂಭನಗೊಳಿಸಿ ನೀರಿನಲ್ಲಿ ಮಲಗಿದ್ದಾನೆ!”
09029044a ತದ್ವಚೋ ಭೀಮಸೇನಸ್ಯ ಪ್ರಿಯಂ ಶ್ರುತ್ವಾ ವಿಶಾಂ ಪತೇ।
09029044c ಅಜಾತಶತ್ರುಃ ಕೌಂತೇಯೋ ಹೃಷ್ಟೋಽಭೂತ್ಸಹ ಸೋದರೈಃ।।
ವಿಶಾಂಪತೇ! ಭೀಮಸೇನನ ಆ ಪ್ರಿಯ ಮಾತನ್ನು ಕೇಳಿದ ಕೌಂತೇಯ ಅಜಾತಶತ್ರುವು ಸಹೋದರರೊಂದಿಗೆ ಹರ್ಷಿತನಾದನು.
09029045a ತಂ ಚ ಶ್ರುತ್ವಾ ಮಹೇಷ್ವಾಸಂ ಪ್ರವಿಷ್ಟಂ ಸಲಿಲಹ್ರದಂ।
09029045c ಕ್ಷಿಪ್ರಮೇವ ತತೋಽಗಚ್ಚತ್ಪುರಸ್ಕೃತ್ಯ ಜನಾರ್ದನಂ।।
ಆ ಮಹೇಷ್ವಾಸನು ಸರೋವರದ ನೀರನ್ನು ಪ್ರವೇಶಿಸಿದ್ದಾನೆಂದು ಕೇಳಿ ಅವನು ಕ್ಷಿಪ್ರದಲ್ಲಿಯೇ ಜನಾರ್ದನನನ್ನು ಮುಂದಿರಿಸಿಕೊಂಡು ಅಲ್ಲಿಗೆ ಧಾವಿಸಿದನು.
09029046a ತತಃ ಕಿಲಕಿಲಾಶಬ್ದಃ ಪ್ರಾದುರಾಸೀದ್ವಿಶಾಂ ಪತೇ।
09029046c ಪಾಂಡವಾನಾಂ ಪ್ರಹೃಷ್ಟಾನಾಂ ಪಾಂಚಾಲಾನಾಂ ಚ ಸರ್ವಶಃ।।
ವಿಶಾಂಪತೇ! ಆಗ ಪ್ರಹೃಷ್ಟ ಪಾಂಡವ-ಪಾಂಚಾಲರ ಕಿಲಕಿಲಾ ಶಬ್ಧವು ಎಲ್ಲೆಡೆ ಕೇಳಿಬಂದಿತು.
09029047a ಸಿಂಹನಾದಾಂಸ್ತತಶ್ಚಕ್ರುಃ ಕ್ಷ್ವೇಡಾಂಶ್ಚ ಭರತರ್ಷಭ।
09029047c ತ್ವರಿತಾಃ ಕ್ಷತ್ರಿಯಾ ರಾಜನ್ಜಗ್ಮುರ್ದ್ವೈಪಾಯನಂ ಹ್ರದಂ।।
ಭರತರ್ಷಭ! ರಾಜನ್! ಸಿಂಹನಾದ ಗೈಯುತ್ತಾ ಗರ್ಜಿಸುತ್ತಾ ತ್ವರೆಮಾಡಿ ಆ ಕ್ಷತ್ರಿಯರು ದ್ವೈಪಾಯನ ಸರೋವರಕ್ಕೆ ಹೊರಟರು.
09029048a ಜ್ಞಾತಃ ಪಾಪೋ ಧಾರ್ತರಾಷ್ಟ್ರೋ ದೃಷ್ಟಶ್ಚೇತ್ಯಸಕೃದ್ರಣೇ।
09029048c ಪ್ರಾಕ್ರೋಶನ್ಸೋಮಕಾಸ್ತತ್ರ ಹೃಷ್ಟರೂಪಾಃ ಸಮಂತತಃ।।
“ಪಾಪಿ ಧಾರ್ತರಾಷ್ಟ್ರನ ಕುರುಹು ಸಿಕ್ಕಿಬಿಟ್ಟಿತು! ಅವನನ್ನು ರಣದಲ್ಲಿ ಕಂಡುಬಿಟ್ಟೆವು!” ಎಂದು ಹೃಷ್ಟರೂಪ ಸೋಮಕರು ಎಲ್ಲಕಡೆ ಕೂಗಿಕೊಳ್ಳುತ್ತಿದ್ದರು.
09029049a ತೇಷಾಮಾಶು ಪ್ರಯಾತಾನಾಂ ರಥಾನಾಂ ತತ್ರ ವೇಗಿನಾಂ।
09029049c ಬಭೂವ ತುಮುಲಃ ಶಬ್ದೋ ದಿವಸ್ಪೃಕ್ಪೃಥಿವೀಪತೇ।।
ಪೃಥಿವೀಪತೇ! ಅಲ್ಲಿ ವೇಗದಿಂದ ಹೋಗುತ್ತಿರುವ ಅವರ ರಥಗಳ ತುಮುಲ ಶಬ್ಧವು ಆಕಾಶವನ್ನೂ ತಲುಪಿತು.
09029050a ದುರ್ಯೋಧನಂ ಪರೀಪ್ಸಂತಸ್ತತ್ರ ತತ್ರ ಯುಧಿಷ್ಠಿರಂ।
09029050c ಅನ್ವಯುಸ್ತ್ವರಿತಾಸ್ತೇ ವೈ ರಾಜಾನಂ ಶ್ರಾಂತವಾಹನಾಃ।।
09029051a ಅರ್ಜುನೋ ಭೀಮಸೇನಶ್ಚ ಮಾದ್ರೀಪುತ್ರೌ ಚ ಪಾಂಡವೌ।
09029051c ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಶಿಖಂಡೀ ಚಾಪರಾಜಿತಃ।।
09029052a ಉತ್ತಮೌಜಾ ಯುಧಾಮನ್ಯುಃ ಸಾತ್ಯಕಿಶ್ಚಾಪರಾಜಿತಃ।
09029052c ಪಾಂಚಾಲಾನಾಂ ಚ ಯೇ ಶಿಷ್ಟಾ ದ್ರೌಪದೇಯಾಶ್ಚ ಭಾರತ।।
09029052e ಹಯಾಶ್ಚ ಸರ್ವೇ ನಾಗಾಶ್ಚ ಶತಶಶ್ಚ ಪದಾತಯಃ।।
ಭಾರತ! ವಾಹನಗಳು ಬಳಲಿದ್ದರೂ, ದುರ್ಯೋಧನನನ್ನು ಹುಡುಕುತ್ತಾ ಅರ್ಜುನ-ಭೀಮಸೇನ-ಮಾದ್ರೀಪುತ್ರ ಪಾಂಡವರಿಬ್ಬರು- ಪಾಂಚಾಲ್ಯ ಧೃಷ್ಟದ್ಯುಮ್ನ-ಅಪರಾಜಿತ ಶಿಖಂಡೀ-ಉತ್ತಮೌಜ-ಯುಧಾಮನ್ಯು-ಅಪರಾಜಿತ ಸಾತ್ಯಕಿ-ಉಳಿದ ಪಾಂಚಾಲರು-ದ್ರೌಪದೇಯರು-ಎಲ್ಲ ಕುದುರೆಗಳು-ಆನೆಗಳು ಮತ್ತು ನೂರಾರು ಪದಾತಿಗಳು ತ್ವರೆಮಾಡಿ ರಾಜಾ ಯುಧಿಷ್ಠಿರನನ್ನು ಹಿಂಬಾಲಿಸಿಕೊಂಡು ಹೋದರು.
09029053a ತತಃ ಪ್ರಾಪ್ತೋ ಮಹಾರಾಜ ಧರ್ಮಪುತ್ರೋ ಯುಧಿಷ್ಠಿರಃ।
09029053c ದ್ವೈಪಾಯನಹ್ರದಂ ಖ್ಯಾತಂ ಯತ್ರ ದುರ್ಯೋಧನೋಽಭವತ್।।
ಮಹಾರಾಜ! ಅನಂತರ ಧರ್ಮಪುತ್ರ ಯುಧಿಷ್ಠಿರನು ಎಲ್ಲಿ ದುರ್ಯೋಧನನಿರುವನೆಂದು ಹೇಳಿದ್ದರೋ ಆ ದ್ವೈಪಾಯನ ಸರೋವರವನ್ನು ತಲುಪಿದನು.
09029054a ಶೀತಾಮಲಜಲಂ ಹೃದ್ಯಂ ದ್ವಿತೀಯಮಿವ ಸಾಗರಂ।
09029054c ಮಾಯಯಾ ಸಲಿಲಂ ಸ್ತಭ್ಯ ಯತ್ರಾಭೂತ್ತೇ ಸುತಃ ಸ್ಥಿತಃ।।
ಶುದ್ಧ ಶೀತಲ ನೀರಿನಿಂದ ಕೂಡಿದ್ದು ಎರಡನೆಯ ಸಮುದ್ರವೋ ಎಂಬಂತೆ ತೋರುತ್ತಿದ್ದ ಆ ಸರೋವರದಲ್ಲಿ ಮಾಯೆಯಿಂದ ನೀರನ್ನು ಸ್ತಬ್ಧಗೊಳಿಸಿ ನಿನ್ನ ಮಗನು ಕುಳಿತಿದ್ದನು.
09029055a ಅತ್ಯದ್ಭುತೇನ ವಿಧಿನಾ ದೈವಯೋಗೇನ ಭಾರತ।
09029055c ಸಲಿಲಾಂತರ್ಗತಃ ಶೇತೇ ದುರ್ದರ್ಶಃ ಕಸ್ಯ ಚಿತ್ ಪ್ರಭೋ।।
09029055e ಮಾನುಷಸ್ಯ ಮನುಷ್ಯೇಂದ್ರ ಗದಾಹಸ್ತೋ ಜನಾಧಿಪಃ।।
ಭಾರತ! ಪ್ರಭೋ! ಮನುಷ್ಯೇಂದ್ರ! ಜನಾಧಿಪ! ಅತ್ಯದ್ಭುತ ವಿಧಿಯಲ್ಲಿ, ದೈವಯೋಗದಿಂದ ನೀರಿನಲ್ಲಿ ಅಂತರ್ಗತನಾಗಿ ಮಲಗಿದ್ದ ಆ ಗದಾಪಾಣಿಯು ಯಾವ ಮನುಷ್ಯನಿಗೂ ಕಾಣಿಸುತ್ತಿರಲಿಲ್ಲ.
09029056a ತತೋ ದುರ್ಯೋಧನೋ ರಾಜಾ ಸಲಿತಾಂತರ್ಗತೋ ವಸನ್।
09029056c ಶುಶ್ರುವೇ ತುಮುಲಂ ಶಬ್ದಂ ಜಲದೋಪಮನಿಃಸ್ವನಂ।।
ನೀರಿನಲ್ಲಿ ಅಂತರ್ಗತನಾಗಿ ಮಲಗಿದ್ದ ರಾಜಾ ದುರ್ಯೋಧನನು ಮೇಘಗಳ ಗುಡುಗಿನಂತಹ ತುಮುಲ ಶಬ್ಧವನ್ನು ಕೇಳಿದನು.
09029057a ಯುಧಿಷ್ಠಿರಸ್ತು ರಾಜೇಂದ್ರ ಹ್ರದಂ ತಂ ಸಹ ಸೋದರೈಃ।
09029057c ಆಜಗಾಮ ಮಹಾರಾಜ ತವ ಪುತ್ರವಧಾಯ ವೈ।।
09029058a ಮಹತಾ ಶಂಖನಾದೇನ ರಥನೇಮಿಸ್ವನೇನ ಚ।
09029058c ಉದ್ಧುನ್ವಂಶ್ಚ ಮಹಾರೇಣುಂ ಕಂಪಯಂಶ್ಚಾಪಿ ಮೇದಿನೀಂ।।
ಮಹಾರಾಜ! ರಾಜೇಂದ್ರ! ಯುಧಿಷ್ಠಿರನಾದರೋ ಸೋದರೊಂದಿಗೆ ಮಹಾ ಶಂಖನಾದಗಳು ಮತ್ತು ರಥಚಕ್ರದ ಸದ್ದಿನೊಂದಿಗೆ ಮಹಾ ಧೂಳಿನ ರಾಶಿಯನ್ನೆಬ್ಬಿಸಿ ಮೇದಿನಿಯನ್ನು ನಡುಗಿಸುತ್ತಾ ನಿನ್ನ ಪುತ್ರನ ವಧೆಗಾಗಿ ಆ ಸರೋವರಕ್ಕೆ ಆಗಮಿಸಿದನು.
09029059a ಯೌಧಿಷ್ಠಿರಸ್ಯ ಸೈನ್ಯಸ್ಯ ಶ್ರುತ್ವಾ ಶಬ್ದಂ ಮಹಾರಥಾಃ।
09029059c ಕೃತವರ್ಮಾ ಕೃಪೋ ದ್ರೌಣೀ ರಾಜಾನಮಿದಮಬ್ರುವನ್।।
ಯುಧಿಷ್ಠಿರನ ಸೈನ್ಯದ ಶಬ್ಧವನ್ನು ಕೇಳಿದ ಮಹಾರಥ ಕೃತವರ್ಮ, ಕೃಪ, ದ್ರೌಣಿಯರು ರಾಜನಿಗೆ ಇದನ್ನು ಹೇಳಿದರು:
09029060a ಇಮೇ ಹ್ಯಾಯಾಂತಿ ಸಂಹೃಷ್ಟಾಃ ಪಾಂಡವಾ ಜಿತಕಾಶಿನಃ।
09029060c ಅಪಯಾಸ್ಯಾಮಹೇ ತಾವದನುಜಾನಾತು ನೋ ಭವಾನ್।।
“ವಿಜಯೋಲಾಸಿತ ಪಾಂಡವರು ಇಲ್ಲಿಗೇ ಬರುತ್ತಿದ್ದಾರೆ. ನಾವು ಇಲ್ಲಿಂದ ಹೊರಟುಹೋಗುತ್ತೇವೆ. ಅನುಮತಿಯನ್ನು ನೀಡು!”
09029061a ದುರ್ಯೋಧನಸ್ತು ತಚ್ಛೃತ್ವಾ ತೇಷಾಂ ತತ್ರ ಯಶಸ್ವಿನಾಂ।
09029061c ತಥೇತ್ಯುಕ್ತ್ವಾ ಹ್ರದಂ ತಂ ವೈ ಮಾಯಯಾಸ್ತಂಭಯತ್ಪ್ರಭೋ।।
ಪ್ರಭೋ! ಆ ಯಶಸ್ವಿಗಳನ್ನು ಕೇಳಿದ ದುರ್ಯೋಧನನಾದರೋ ಹಾಗೆಯೇ ಆಗಲೆಂದು ಹೇಳಿ ಮಾಯೆಯಿಂದ ಪುನಃ ಸರೋವರವನ್ನು ಸ್ತಂಭಿಸಿದನು.
09029062a ತೇ ತ್ವನುಜ್ಞಾಪ್ಯ ರಾಜಾನಂ ಭೃಶಂ ಶೋಕಪರಾಯಣಾಃ।
09029062c ಜಗ್ಮುರ್ದೂರಂ ಮಹಾರಾಜ ಕೃಪಪ್ರಭೃತಯೋ ರಥಾಃ।।
ಮಹಾರಾಜ! ರಾಜನ ಅನುಜ್ಞೆಯನ್ನು ಪಡೆದು ತುಂಬಾ ಶೋಕಪರಾಯಣರಾಗಿದ್ದ ಕೃಪನೇ ಮೊದಲಾದ ಮಹಾರಥರು ದೂರ ಹೊರಟುಹೋದರು.
09029063a ತೇ ಗತ್ವಾ ದೂರಮಧ್ವಾನಂ ನ್ಯಗ್ರೋಧಂ ಪ್ರೇಕ್ಷ್ಯ ಮಾರಿಷ।
09029063c ನ್ಯವಿಶಂತ ಭೃಶಂ ಶ್ರಾಂತಾಶ್ಚಿಂತಯಂತೋ ನೃಪಂ ಪ್ರತಿ।।
ಮಾರಿಷ! ದೂರ ಹೋಗಿ ಆಯಾಸಗೊಂಡಿದ್ದ ಅವರು ಅಲ್ಲೊಂದು ಆಲದ ಮರವನ್ನು ನೋಡಿ ಅದರಡಿಯಲ್ಲಿ ನೃಪನ ಕುರಿತೇ ಚಿಂತಿಸುತ್ತಾ ವಿಶ್ರಾಂತಿಪಡೆದರು.
09029064a ವಿಷ್ಟಭ್ಯ ಸಲಿಲಂ ಸುಪ್ತೋ ಧಾರ್ತರಾಷ್ಟ್ರೋ ಮಹಾಬಲಃ।
09029064c ಪಾಂಡವಾಶ್ಚಾಪಿ ಸಂಪ್ರಾಪ್ತಾಸ್ತಂ ದೇಶಂ ಯುದ್ಧಮೀಪ್ಸವಃ।।
“ಮಹಾಬಲ ಧಾರ್ತರಾಷ್ಟ್ರನು ನೀರನ್ನು ಸ್ತಂಭನಗೊಳಿಸಿ ಮಲಗಿದ್ದಾನೆ. ಯುದ್ಧವನ್ನು ಬಯಸಿರುವ ಪಾಂಡವರಾದರೋ ಆ ಪ್ರದೇಶಕ್ಕೆ ಬಂದುಬಿಟ್ಟಿದ್ದಾರೆ.
09029065a ಕಥಂ ನು ಯುದ್ಧಂ ಭವಿತಾ ಕಥಂ ರಾಜಾ ಭವಿಷ್ಯತಿ।
09029065c ಕಥಂ ನು ಪಾಂಡವಾ ರಾಜನ್ಪ್ರತಿಪತ್ಸ್ಯಂತಿ ಕೌರವಂ।।
ಯುದ್ಧವು ಹೇಗೆ ನಡೆದೀತು? ರಾಜನು ಏನಾಗುತ್ತಾನೆ? ಪಾಂಡವ ರಾಜನು ಕೌರವನನ್ನು ಹೇಗೆ ಮೇಲೆಬ್ಬಿಸುತ್ತಾನೆ?”
09029066a ಇತ್ಯೇವಂ ಚಿಂತಯಂತಸ್ತೇ ರಥೇಭ್ಯೋಽಶ್ವಾನ್ವಿಮುಚ್ಯ ಹ।
09029066c ತತ್ರಾಸಾಂ ಚಕ್ರಿರೇ ರಾಜನ್ಕೃಪಪ್ರಭೃತಯೋ ರಥಾಃ।।
ರಾಜನ್! ಹೀಗೆಯೇ ಚಿಂತಿಸುತ್ತಾ ಕೃಪನೇ ಮೊದಲಾದ ಆ ಮಹಾರಥರು ಕುದುರೆಗಳನ್ನು ರಥಗಳಿಂದ ಬಿಚ್ಚಿ ಅಲ್ಲಿಯೇ ಕುಳಿತು ವಿಶ್ರಾಂತಿ ಪಡೆದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಪಾಂಡವಾನಾಂ ಸರೋವರಾಗಮನೇ ಏಕೋನತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಪಾಂಡವಾನಾಂ ಸರೋವರಾಗಮನ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.