028 ಹ್ರದಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 28

ಸಾರ

ಅರ್ಜುನನು ಅಳಿದುಳಿದ ಕೌರವಸೇನೆಯನ್ನು ಯಾರೂ ಉಳಿಯದಂತೆ ನಾಶಗೊಳಿಸಿದುದು (1-14). ರಣರಂಗದಲ್ಲಿ ಏಕಾಂಗಿಯಾಗಿದ್ದ ದುರ್ಯೋಧನನು ಪಲಾಯನದ ಮನಸ್ಸು ಮಾಡಿದುದು (15-28). ಸೆರೆಯಲ್ಲಿದ್ದ ಸಂಜಯನನ್ನು ಸಾತ್ಯಕಿಯು ಕೊಲ್ಲಲು ಹೊರಟಾಗ ವ್ಯಾಸನು ಅವನನ್ನು ತಡೆದುದು; ಸಂಜಯನು ಹಸ್ತಿನಾಪುರದ ಕಡೆ ತೆರಳುವುದು (29-39). ದಾರಿಯಲ್ಲಿ ಸಂಜಯ-ದುರ್ಯೋಧನರ ಸಂವಾದ ಮತ್ತು ದುರ್ಯೋಧನನು ಸರೋವರವನ್ನು ಪ್ರವೇಶಿಸಿದುದು (40-52). ದುರ್ಯೋಧನನು ಸರೋವರದಲ್ಲಿರುವನೆಂದು ಸಂಜಯನು ಕೃಪ-ಅಶ್ವತ್ಥಾಮ-ಕೃತವರ್ಮರಿಗೆ ತಿಳಿಸಿದುದು (53-62). ಯುಯುತ್ಸುವು ಯುಧಿಷ್ಠಿರನ ಅನುಮತಿಯನ್ನು ಪಡೆದು ಕೌರವ ಶಿಬಿರದಿಂದ ರಾಜಪತ್ನಿಯರನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಹಿಂದಿರುಗಿದುದು (63-92).

09028001 ಸಂಜಯ ಉವಾಚ 09028001a ತತಃ ಕ್ರುದ್ಧಾ ಮಹಾರಾಜ ಸೌಬಲಸ್ಯ ಪದಾನುಗಾಃ।
09028001c ತ್ಯಕ್ತ್ವಾ ಜೀವಿತಮಾಕ್ರಂದೇ ಪಾಂಡವಾನ್ಪರ್ಯವಾರಯನ್।।

ಸಂಜಯನು ಹೇಳಿದನು: “ಮಹಾರಾಜ! ಆಗ ಸೌಬಲನ ಅನುಯಾಯಿಗಳು ಕ್ರುದ್ಧರಾಗಿ ಜೀವವನ್ನು ತೊರೆದು ಪಾಂಡವರನ್ನು ಸುತ್ತುವರೆದು ಆಕ್ರಮಣಿಸಿದರು.

09028002a ತಾನರ್ಜುನಃ ಪ್ರತ್ಯಗೃಹ್ಣಾತ್ಸಹದೇವಜಯೇ ಧೃತಃ।
09028002c ಭೀಮಸೇನಶ್ಚ ತೇಜಸ್ವೀ ಕ್ರುದ್ಧಾಶೀವಿಷದರ್ಶನಃ।।

ಸಹದೇವಜಯದಲ್ಲಿ ಧೃತನಾದ ಅರ್ಜುನ ಮತ್ತು ಕ್ರುದ್ಧ ವಿಷಸರ್ಪದಂತೆ ತೋರುತ್ತಿದ್ದ ತೇಜಸ್ವೀ ಭೀಮಸೇನರು ಅವರನ್ನು ಎದುರಿಸಿದರು.

09028003a ಶಕ್ತ್ಯೃಷ್ಟಿಪ್ರಾಸಹಸ್ತಾನಾಂ ಸಹದೇವಂ ಜಿಘಾಂಸತಾಂ।
09028003c ಸಂಕಲ್ಪಮಕರೋನ್ಮೋಘಂ ಗಾಂಡೀವೇನ ಧನಂಜಯಃ।।

ಸಹದೇವನನ್ನು ಸಂಹರಿಸಲು ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದಿದ್ದ ಸಹಸ್ರಾರು ಯೋಧರ ಸಂಕಲ್ಪಗಳನ್ನು ಧನಂಜಯನು ಗಾಂಡೀವದಿಂದ ವ್ಯರ್ಥಗೊಳಿಸಿದನು.

09028004a ಪ್ರಗೃಹೀತಾಯುಧಾನ್ಬಾಹೂನ್ಯೋಧಾನಾಮಭಿಧಾವತಾಂ।
09028004c ಭಲ್ಲೈಶ್ಚಿಚ್ಚೇದ ಬೀಭತ್ಸುಃ ಶಿರಾಂಸ್ಯಪಿ ಹಯಾನಪಿ।।

ಧಾವಿಸಿ ಬರುತ್ತಿದ್ದ ಯೋಧರ ಆಯುಧಗಳನ್ನು ಹಿಡಿದಿದ್ದ ಬಾಹುಗಳನ್ನು, ಶಿರಗಳನ್ನು ಮತ್ತು ಕುದುರೆಗಳನ್ನು ಬೀಭತ್ಸುವು ಭಲ್ಲಗಳಿಂದ ತುಂಡರಿಸಿದನು.

09028005a ತೇ ಹತಾಃ ಪ್ರತ್ಯಪದ್ಯಂತ ವಸುಧಾಂ ವಿಗತಾಸವಃ।
09028005c ತ್ವರಿತಾ ಲೋಕವೀರೇಣ ಪ್ರಹತಾಃ ಸವ್ಯಸಾಚಿನಾ।।

ಲೋಕವೀರ ಸವ್ಯಸಾಚಿಯಿಂದ ಪ್ರಹರಿಸಲ್ಪಟ್ಟ ಅವರು ಅಸುನೀಗಿ ವಸುಧೆಯಮೇಲೆ ತೊಪತೊಪನೆ ಬೀಳುತ್ತಿದ್ದರು.

09028006a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಸ್ವಬಲಸಂಕ್ಷಯಂ।
09028006c ಹತಶೇಷಾನ್ಸಮಾನೀಯ ಕ್ರುದ್ಧೋ ರಥಶತಾನ್ವಿಭೋ।।
09028007a ಕುಂಜರಾಂಶ್ಚ ಹಯಾಂಶ್ಚೈವ ಪಾದಾತಾಂಶ್ಚ ಪರಂತಪ।
09028007c ಉವಾಚ ಸಹಿತಾನ್ಸರ್ವಾನ್ಧಾರ್ತರಾಷ್ಟ್ರ ಇದಂ ವಚಃ।।

ವಿಭೋ! ಪರಂತಪ! ಆಗ ರಾಜಾ ಧಾರ್ತರಾಷ್ಟ್ರ ದುರ್ಯೋಧನನು ತನ್ನ ಸೇನೆಯು ಕ್ಷಯವಾಗುತ್ತಿರುವುದನ್ನು ನೋಡಿ ಕ್ರುದ್ಧನಾಗಿ, ನಾಶಗೊಳ್ಳದೇ ಉಳಿದಿದ್ದ ನೂರಾರು ರಥ-ಆನೆ-ಕುದುರೆಗಳ ಸವಾರರನ್ನು ಮತ್ತು ಪದಾತಿಗಳನ್ನು ಒಟ್ಟಾಗಿ ಕರೆದು ಈ ಮಾತನ್ನಾಡಿದನು:

09028008a ಸಮಾಸಾದ್ಯ ರಣೇ ಸರ್ವಾನ್ಪಾಂಡವಾನ್ಸಸುಹೃದ್ಗಣಾನ್।
09028008c ಪಾಂಚಾಲ್ಯಂ ಚಾಪಿ ಸಬಲಂ ಹತ್ವಾ ಶೀಘ್ರಂ ನಿವರ್ತತ।।

“ಕೂಡಲೇ ರಣವನ್ನು ಸೇರಿ ತಮ್ಮ ಸೇನೆ ಮತ್ತು ಸುಹೃದಯ ಪಾಂಚಾಲ್ಯ ಗಣಗಳಿಂದ ಕೂಡಿರುವ ಪಾಂಡವರೆಲ್ಲರನ್ನೂ ಸಂಹರಿಸಿ ಹಿಂದಿರುಗಿರಿ!”

09028009a ತಸ್ಯ ತೇ ಶಿರಸಾ ಗೃಹ್ಯ ವಚನಂ ಯುದ್ಧದುರ್ಮದಾಃ।
09028009c ಪ್ರತ್ಯುದ್ಯಯೂ ರಣೇ ಪಾರ್ಥಾಂಸ್ತವ ಪುತ್ರಸ್ಯ ಶಾಸನಾತ್।।

ಅವನ ಆ ಮಾತನ್ನು ಶಿರಸಾವಹಿಸಿ ನಿನ್ನ ಪುತ್ರನ ಶಾಸನದಂತೆಯೇ ಆ ಯುದ್ಧದುರ್ಮದರು ರಣದಲ್ಲಿ ಪಾರ್ಥರನ್ನು ಎದುರಿಸಿ ಯುದ್ಧಮಾಡಿದರು.

09028010a ತಾನಭ್ಯಾಪತತಃ ಶೀಘ್ರಂ ಹತಶೇಷಾನ್ಮಹಾರಣೇ।
09028010c ಶರೈರಾಶೀವಿಷಾಕಾರೈಃ ಪಾಂಡವಾಃ ಸಮವಾಕಿರನ್।।

ಮಹಾರಣದಲ್ಲಿ ಹತರಾಗದೇ ತಮ್ಮ ಮೇಲೆ ಬೀಳುತ್ತಿದ್ದ ಅವರನ್ನು ಪಾಂಡವರು ಶೀಘ್ರದಲ್ಲಿಯೇ ವಿಷಸರ್ಪಗಳ ಆಕಾರದ ಬಾಣಗಳಿಂದ ಮುಚ್ಚಿಬಿಟ್ಟರು.

09028011a ತತ್ಸೈನ್ಯಂ ಭರತಶ್ರೇಷ್ಠ ಮುಹೂರ್ತೇನ ಮಹಾತ್ಮಭಿಃ।
09028011c ಅವಧ್ಯತ ರಣಂ ಪ್ರಾಪ್ಯ ತ್ರಾತಾರಂ ನಾಭ್ಯವಿಂದತ।।
09028011e ಪ್ರತಿಷ್ಠಮಾನಂ ತು ಭಯಾನ್ನಾವತಿಷ್ಠತ ದಂಶಿತಂ।।

ಭರತಶ್ರೇಷ್ಠ! ತ್ರಾತಾರರಿಲ್ಲದೇ ರಣವನ್ನು ಸೇರಿದ ಅವರನ್ನು ಮುಹೂರ್ತಮಾತ್ರದಲ್ಲಿ ಮಹಾತ್ಮ ಪಾಂಡವರು ವಧಿಸಿಬಿಟ್ಟರು. ಕವಚಧಾರಿಗಳಾಗಿ ಯುದ್ಧದಲ್ಲಿ ನಿಂತಿದ್ದರೂ ಭಯದಿಂದ ಅವರು ಹೆಚ್ಚುಕಾಲ ನಿಲ್ಲಲಿಲ್ಲ.

09028012a ಅಶ್ವೈರ್ವಿಪರಿಧಾವದ್ಭಿಃ ಸೈನ್ಯೇನ ರಜಸಾ ವೃತೇ।
09028012c ನ ಪ್ರಾಜ್ಞಾಯಂತ ಸಮರೇ ದಿಶಶ್ಚ ಪ್ರದಿಶಸ್ತಥಾ।।

ಕುದುರೆಗಳನ್ನೇರಿ ಪಲಾಯನ ಮಾಡುತ್ತಿದ್ದ ಸೇನೆಗಳಿಂದ ಮೇಲೆದ್ದ ಧೂಳು ತುಂಬಿಕೊಂಡಿರಲು ರಣರಂಗದಲ್ಲಿ ದಿಕ್ಕು ಉಪದಿಕ್ಕುಗಳ್ಯಾವುವೆಂದೇ ತೋರುತ್ತಿರಲಿಲ್ಲ.

09028013a ತತಸ್ತು ಪಾಂಡವಾನೀಕಾನ್ನಿಃಸೃತ್ಯ ಬಹವೋ ಜನಾಃ।
09028013c ಅಭ್ಯಘ್ನಂಸ್ತಾವಕಾನ್ಯುದ್ಧೇ ಮುಹೂರ್ತಾದಿವ ಭಾರತ।।
09028013e ತತೋ ನಿಃಶೇಷಮಭವತ್ತತ್ಸೈನ್ಯಂ ತವ ಭಾರತ।।

ಭಾರತ! ಆಗ ಪಾಂಡವರ ಸೇನೆಯಿಂದ ಹೊರಬಂದ ಅನೇಕ ಜನರು ಓಡಿಹೋಗುತ್ತಿರುವ ನಿನ್ನವರನ್ನು ಕ್ಷಣಮಾತ್ರದಲ್ಲಿ ಸಂಹರಿಸಿದರು. ಭಾರತ! ಆಗ ನಿನ್ನ ಸೇನೆಯಲ್ಲಿ ಯಾರೂ ಉಳಿದುಕೊಂಡಿರದ ಹಾಗಾಯಿತು.

09028014a ಅಕ್ಷೌಹಿಣ್ಯಃ ಸಮೇತಾಸ್ತು ತವ ಪುತ್ರಸ್ಯ ಭಾರತ।
09028014c ಏಕಾದಶ ಹತಾ ಯುದ್ಧೇ ತಾಃ ಪ್ರಭೋ ಪಾಂಡುಸೃಂಜಯೈಃ।।

ಭಾರತ! ಪ್ರಭೋ! ಯುದ್ಧದಲ್ಲಿ ಒಂದಾಗಿದ್ದ ನಿನ್ನ ಪುತ್ರನ ಹನ್ನೊಂದು ಅಕ್ಷೌಹಿಣೀ ಸೇನೆಯು ಪಾಂಡು-ಸೃಂಜಯರಿಂದ ನಾಶಗೊಂಡಿತು.

09028015a ತೇಷು ರಾಜಸಹಸ್ರೇಷು ತಾವಕೇಷು ಮಹಾತ್ಮಸು।
09028015c ಏಕೋ ದುರ್ಯೋಧನೋ ರಾಜನ್ನದೃಶ್ಯತ ಭೃಶಂ ಕ್ಷತಃ।।

ರಾಜನ್! ನಿನ್ನ ಆ ಸಹಸ್ರಾರು ಮಹಾತ್ಮ ರಾಜರಲ್ಲಿ ಅತ್ಯಂತ ಗಾಯಗೊಂಡಿರುವ ದುರ್ಯೋಧನನೊಬ್ಬನೇ ಅಲ್ಲಿ ಕಾಣುತ್ತಿದ್ದನು.

09028016a ತತೋ ವೀಕ್ಷ್ಯ ದಿಶಃ ಸರ್ವಾ ದೃಷ್ಟ್ವಾ ಶೂನ್ಯಾಂ ಚ ಮೇದಿನೀಂ।
09028016c ವಿಹೀನಃ ಸರ್ವಯೋಧೈಶ್ಚ ಪಾಂಡವಾನ್ವೀಕ್ಷ್ಯ ಸಂಯುಗೇ।।
09028017a ಮುದಿತಾನ್ಸರ್ವಸಿದ್ಧಾರ್ಥಾನ್ನರ್ದಮಾನಾನ್ಸಮಂತತಃ।
09028017c ಬಾಣಶಬ್ದರವಾಂಶ್ಚೈವ ಶ್ರುತ್ವಾ ತೇಷಾಂ ಮಹಾತ್ಮನಾಂ।।
09028018a ದುರ್ಯೋಧನೋ ಮಹಾರಾಜ ಕಶ್ಮಲೇನಾಭಿಸಂವೃತಃ।
09028018c ಅಪಯಾನೇ ಮನಶ್ಚಕ್ರೇ ವಿಹೀನಬಲವಾಹನಃ।।

ಆಗ ಸರ್ವದಿಕ್ಕುಗಳನ್ನೂ ನೋಡಿ, ಭೂಮಿಯು ಸರ್ವಯೋಧರಿಂದ ವಿಹೀನವಾಗಿ ಶೂನ್ಯವಾದುದನ್ನು ಕಂಡು, ಸರ್ವ ಉದ್ದೇಶಗಳನ್ನೂ ಪೂರೈಸಿ ಹರ್ಷಿತರಾದ ಪಾಂಡವರನ್ನು ಎಲ್ಲೆಡೆಯೂ ಕಂಡು, ಆ ಮಹಾತ್ಮರ ಬಾಣಗಳ ಶಬ್ಧ ಮತ್ತು ಕೂಗುಗಳನ್ನು ಕೇಳಿ ಸೇನೆ-ವಾಹನಗಳನ್ನು ಕಳೆದುಕೊಂಡಿದ್ದ ದುರ್ಯೋಧನನು ಶೋಕಸಂತಪ್ತನಾಗಿ ಯುದ್ಧದಿಂದ ಹಿಮ್ಮೆಟ್ಟುವ ಮನಸ್ಸುಮಾಡಿದನು.”

09028019 ಧೃತರಾಷ್ಟ್ರ ಉವಾಚ 09028019a ನಿಹತೇ ಮಾಮಕೇ ಸೈನ್ಯೇ ನಿಃಶೇಷೇ ಶಿಬಿರೇ ಕೃತೇ।
09028019c ಪಾಂಡವಾನಾಂ ಬಲಂ ಸೂತ ಕಿಂ ನು ಶೇಷಮಭೂತ್ತದಾ।।
09028019e ಏತನ್ಮೇ ಪೃಚ್ಚತೋ ಬ್ರೂಹಿ ಕುಶಲೋ ಹ್ಯಸಿ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸೂತ! ನನ್ನಕಡೆಯ ಸೇನೆಯನ್ನು ಸಂಹರಿಸಿ ಶಿಬಿರಗಳನ್ನು ನಿಃಶೇಷವನ್ನಾಗಿ ಮಾಡಿದ ಪಾಂಡವ ಸೇನೆಯು ಆ ಸಮಯದಲ್ಲಿ ಎಷ್ಟು ಉಳಿದು ಕೊಂಡಿತ್ತು? ಸಂಜಯ! ಹೀಗೆ ಕೇಳುತ್ತಿರುವ ನನಗೆ ಹೇಳು. ನೀನು ಕುಶಲನಾಗಿರುವೆ!

09028020a ಯಚ್ಚ ದುರ್ಯೋಧನೋ ಮಂದಃ ಕೃತವಾಂಸ್ತನಯೋ ಮಮ।
09028020c ಬಲಕ್ಷಯಂ ತಥಾ ದೃಷ್ಟ್ವಾ ಸ ಏಕಃ ಪೃಥಿವೀಪತಿಃ।।

ಹಾಗೆ ತನ್ನ ಸೇನೆಯು ನಾಶವಾದುದನ್ನು ನೋಡಿ ಒಬ್ಬಂಟಿಗ ಪೃಥಿವೀಪತಿ ನನ್ನ ಮಗ ಮೂಢ ದುರ್ಯೋಧನನು ಏನು ಮಾಡಿದನು?”

09028021 ಸಂಜಯ ಉವಾಚ 09028021a ರಥಾನಾಂ ದ್ವೇ ಸಹಸ್ರೇ ತು ಸಪ್ತ ನಾಗಶತಾನಿ ಚ।
09028021c ಪಂಚ ಚಾಶ್ವಸಹಸ್ರಾಣಿ ಪತ್ತೀನಾಂ ಚ ಶತಂ ಶತಾಃ।।
09028022a ಏತಚ್ಚೇಷಮಭೂದ್ರಾಜನ್ಪಾಂಡವಾನಾಂ ಮಹದ್ಬಲಂ।
09028022c ಪರಿಗೃಹ್ಯ ಹಿ ಯದ್ಯುದ್ಧೇ ಧೃಷ್ಟದ್ಯುಮ್ನೋ ವ್ಯವಸ್ಥಿತಃ।।

ಸಂಜಯನು ಹೇಳಿದನು: “ರಾಜನ್! ಪಾಂಡವರ ಮಹಾ ಸೇನೆಯಲ್ಲಿ ಎರಡು ಸಾವಿರ ರಥಗಳೂ, ಏಳು ನೂರು ಆನೆಗಳೂ, ಐದು ಸಾವಿರ ಕುದುರೆಗಳೂ, ಹತ್ತುಸಾವಿರ ಪದಾತಿಗಳೂ ಉಳಿದುಕೊಂಡಿದ್ದವು. ಆ ಸೇನೆಯೊಡನೆ ಧೃಷ್ಟದ್ಯುಮ್ನನು ಯುದ್ಧದಲ್ಲಿ ನಿಂತಿದ್ದನು.

09028023a ಏಕಾಕೀ ಭರತಶ್ರೇಷ್ಠ ತತೋ ದುರ್ಯೋಧನೋ ನೃಪಃ।
09028023c ನಾಪಶ್ಯತ್ಸಮರೇ ಕಂ ಚಿತ್ಸಹಾಯಂ ರಥಿನಾಂ ವರಃ।।

ಭರತಶ್ರೇಷ್ಠ! ಆಗ ಏಕಾಕಿಯಾಗಿದ್ದ ರಥಿಗಳಲ್ಲಿ ಶ್ರೇಷ್ಠ ನೃಪ ದುರ್ಯೋಧನನು ಸಮರದಲ್ಲಿ ಸಹಾಯಕರಾಗಿರುವ ಯಾರೊಬ್ಬನನ್ನೂ ಕಾಣಲಿಲ್ಲ.

09028024a ನರ್ದಮಾನಾನ್ಪರಾಂಶ್ಚೈವ ಸ್ವಬಲಸ್ಯ ಚ ಸಂಕ್ಷಯಂ।
09028024c ಹತಂ ಸ್ವಹಯಮುತ್ಸೃಜ್ಯ ಪ್ರಾಙ್ಮುಖಃ ಪ್ರಾದ್ರವದ್ಭಯಾತ್।।

ಗರ್ಜಿಸುತ್ತಿದ್ದ ಶತ್ರುಗಳನ್ನೂ, ನಾಶವಾಗಿದ್ದ ತನ್ನ ಸೇನೆಯನ್ನೂ, ಮತ್ತು ಸತ್ತುಹೋಗಿದ್ದ ತನ್ನ ಕುದುರೆಯನ್ನು ಬಿಟ್ಟು ಭಯದಿಂದ ಪೂರ್ವದಿಕ್ಕಿನಲ್ಲಿ ಓಡತೊಡಗಿದನು.

09028025a ಏಕಾದಶಚಮೂಭರ್ತಾ ಪುತ್ರೋ ದುರ್ಯೋಧನಸ್ತವ।
09028025c ಗದಾಮಾದಾಯ ತೇಜಸ್ವೀ ಪದಾತಿಃ ಪ್ರಸ್ಥಿತೋ ಹ್ರದಂ।।

ಹನ್ನೊಂದು ಅಕ್ಷೌಹಿಣೀ ಸೇನೆಗಳ ಒಡೆಯನಾಗಿದ್ದ ನಿನ್ನ ಮಗ ತೇಜಸ್ವೀ ದುರ್ಯೋಧನನು ಗದೆಯನ್ನೆತ್ತಿಕೊಂಡು ಕಾಲ್ನಡುಗೆಯಲ್ಲಿಯೇ ಸರೋವರದ ಕಡೆ ಹೊರಟನು.

09028026a ನಾತಿದೂರಂ ತತೋ ಗತ್ವಾ ಪದ್ಭ್ಯಾಮೇವ ನರಾಧಿಪಃ।
09028026c ಸಸ್ಮಾರ ವಚನಂ ಕ್ಷತ್ತುರ್ಧರ್ಮಶೀಲಸ್ಯ ಧೀಮತಃ।।

ಕಾಲ್ನಡುಗೆಯಲ್ಲಿಯೇ ಸ್ವಲ್ಪದೂರ ಹೋಗಿ ನರಾಧಿಪನು ಧರ್ಮಶೀಲ ಧೀಮಂತ ಕ್ಷತ್ತ ವಿದುರನ ಮಾತನ್ನು ನೆನಪಿಸಿಕೊಂಡನು:

09028027a ಇದಂ ನೂನಂ ಮಹಾಪ್ರಾಜ್ಞೋ ವಿದುರೋ ದೃಷ್ಟವಾನ್ಪುರಾ।
09028027c ಮಹದ್ವೈಶಸಮಸ್ಮಾಕಂ ಕ್ಷತ್ರಿಯಾಣಾಂ ಚ ಸಂಯುಗೇ।।

“ಯುದ್ಧದಲ್ಲಿ ನಮ್ಮ ಕ್ಷತ್ರಿಯರ ಈ ಮಹಾ ವಿನಾಶವನ್ನು ಮಹಾಪ್ರಾಜ್ಞ ವಿದುರನು ಬಹಳ ಹಿಂದೆಯೇ ಕಂಡಿದ್ದನು!”

09028028a ಏವಂ ವಿಚಿಂತಯಾನಸ್ತು ಪ್ರವಿವಿಕ್ಷುರ್ಹ್ರದಂ ನೃಪಃ।
09028028c ದುಃಖಸಂತಪ್ತಹೃದಯೋ ದೃಷ್ಟ್ವಾ ರಾಜನ್ಬಲಕ್ಷಯಂ।।

ರಾಜನ್! ಹೀಗೆ ಯೋಚಿಸುತ್ತಾ ಸೇನೆಗಳ ನಾಶವನ್ನು ನೋಡಿ ದುಃಖಸಂತಪ್ತ ಹೃದಯನಾಗಿ ನೃಪನು ಸರೋವರವನ್ನು ಪ್ರವೇಶಿಸಿದನು.

09028029a ಪಾಂಡವಾಶ್ಚ ಮಹಾರಾಜ ಧೃಷ್ಟದ್ಯುಮ್ನಪುರೋಗಮಾಃ।
09028029c ಅಭ್ಯಧಾವಂತ ಸಂಕ್ರುದ್ಧಾಸ್ತವ ರಾಜನ್ಬಲಂ ಪ್ರತಿ।।

ಮಹಾರಾಜ! ರಾಜನ್! ಧೃಷ್ಟದ್ಯುಮ್ನನನ್ನು ಮುಂದಿರಿಸಿಕೊಂಡು ಪಾಂಡವರು ಸಂಕ್ರುದ್ಧರಾಗಿ ನಿನ್ನ ಸೇನೆಯನ್ನು ಆಕ್ರಮಣಿಸಿದರು.

09028030a ಶಕ್ತ್ಯೃಷ್ಟಿಪ್ರಾಸಹಸ್ತಾನಾಂ ಬಲಾನಾಮಭಿಗರ್ಜತಾಂ।
09028030c ಸಂಕಲ್ಪಮಕರೋನ್ಮೋಘಂ ಗಾಂಡೀವೇನ ಧನಂಜಯಃ।।

ಆಗ ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಗರ್ಜಿಸುತ್ತಿರುವ ಸಹಸ್ರಾರು ಯೋಧರ ಸಂಕಲ್ಪಗಳನ್ನು ಗಾಂಡೀವದಿಂದ ಧನಂಜಯನು ವ್ಯರ್ಥಗೊಳಿಸಿದನು.

09028031a ತಾನ್ ಹತ್ವಾ ನಿಶಿತೈರ್ಬಾಣೈಃ ಸಾಮಾತ್ಯಾನ್ಸಹ ಬಂಧುಭಿಃ।
09028031c ರಥೇ ಶ್ವೇತಹಯೇ ತಿಷ್ಠನ್ನರ್ಜುನೋ ಬಹ್ವಶೋಭತ।।

ಅಮಾತ್ಯ-ಬಂಧುಗಳೊಂದಿಗೆ ಅವರನ್ನು ನಿಶಿತಬಾಣಗಳಿಂದ ಸಂಹರಿಸಿ ಶ್ವೇತಕುದುರೆಗಳ ರಥದಲ್ಲಿ ನಿಂತಿದ್ದ ಅರ್ಜುನನು ಬಹಳವಾಗಿ ಶೋಭಿಸಿದನು.

09028032a ಸುಬಲಸ್ಯ ಹತೇ ಪುತ್ರೇ ಸವಾಜಿರಥಕುಂಜರೇ।
09028032c ಮಹಾವನಮಿವ ಚಿನ್ನಮಭವತ್ತಾವಕಂ ಬಲಂ।।

ರಥ-ಕುದುರೆ-ಆನೆಗಳೊಂದಿಗೆ ಸುಬಲನ ಮಗನು ಹತನಾಗಲು ನಿನ್ನ ಸೇನೆಯು ಮರಗಳು ಕಡಿದುಬಿದ್ದಿರುವ ಮಹಾವನದಂತೆ ತೋರುತ್ತಿತ್ತು.

09028033a ಅನೇಕಶತಸಾಹಸ್ರೇ ಬಲೇ ದುರ್ಯೋಧನಸ್ಯ ಹ।
09028033c ನಾನ್ಯೋ ಮಹಾರಥೋ ರಾಜನ್ಜೀವಮಾನೋ ವ್ಯದೃಶ್ಯತ।।
09028034a ದ್ರೋಣಪುತ್ರಾದೃತೇ ವೀರಾತ್ತಥೈವ ಕೃತವರ್ಮಣಃ।
09028034c ಕೃಪಾಚ್ಚ ಗೌತಮಾದ್ರಾಜನ್ಪಾರ್ಥಿವಾಚ್ಚ ತವಾತ್ಮಜಾತ್।।

ರಾಜನ್! ದುರ್ಯೋಧನನ ಅನೇಕ ಲಕ್ಷಸಂಖ್ಯಾತ ಸೇನೆಯಲ್ಲಿ ದ್ರೋಣಪುತ್ರ, ವೀರ ಕೃತವರ್ಮ, ಗೌತಮ ಕೃಪ ಮತ್ತು ನಿನ್ನ ಮಗ ಪಾರ್ಥಿವನನ್ನು ಬಿಟ್ಟು ಬೇರೆ ಯಾವ ಮಹಾರಥನೂ ಜೀವಂತವಾಗಿರುವುದು ತೋರಿಬರಲಿಲ್ಲ.

09028035a ಧೃಷ್ಟದ್ಯುಮ್ನಸ್ತು ಮಾಂ ದೃಷ್ಟ್ವಾ ಹಸನ್ಸಾತ್ಯಕಿಮಬ್ರವೀತ್।
09028035c ಕಿಮನೇನ ಗೃಹೀತೇನ ನಾನೇನಾರ್ಥೋಽಸ್ತಿ ಜೀವತಾ।।

ಧೃಷ್ಟದ್ಯುಮ್ನನಾದರೋ ನನ್ನನ್ನು ನೋಡಿ ನಗುತ್ತಾ ಸಾತ್ಯಕಿಗೆ ಹೇಳಿದನು: “ಸೆರೆಯಲ್ಲಿರುವ ಇವನನ್ನು ಜೀವಂತವಿಡುವುದರಿಂದ ನಮಗೇನಾಗಲಿಕ್ಕಿದೆ?”

09028036a ಧೃಷ್ಟದ್ಯುಮ್ನವಚಃ ಶ್ರುತ್ವಾ ಶಿನೇರ್ನಪ್ತಾ ಮಹಾರಥಃ।
09028036c ಉದ್ಯಮ್ಯ ನಿಶಿತಂ ಖಡ್ಗಂ ಹಂತುಂ ಮಾಮುದ್ಯತಸ್ತದಾ।।

ಧೃಷ್ಟದ್ಯುಮ್ನನ ಮಾತನ್ನು ಕೇಳಿ ಮಹಾರಥ ಶಿನಿಯ ಮಗನು ನನ್ನನ್ನು ಕೊಲ್ಲಲು ನಿಶಿತ ಖಡ್ಗವನ್ನು ಮೇಲೆತ್ತಿದನು.

09028037a ತಮಾಗಮ್ಯ ಮಹಾಪ್ರಾಜ್ಞಃ ಕೃಷ್ಣದ್ವೈಪಾಯನೋಽಬ್ರವೀತ್।
09028037c ಮುಚ್ಯತಾಂ ಸಂಜಯೋ ಜೀವನ್ನ ಹಂತವ್ಯಃ ಕಥಂ ಚನ।।

ಆಗ ಅಲ್ಲಿಗೆ ಮಹಾಪ್ರಾಜ್ಞ ಕೃಷ್ಣದ್ವೈಪಾಯನನು ಬಂದು “ಸಂಜಯನನ್ನು ಜೀವಸಹಿತ ಬಿಟ್ಟು ಬಿಡಿ! ಯಾವುದೇ ಕಾರಣದಿಂದ ಇವನನ್ನು ಸಂಹರಿಸಬಾರದು!” ಎಂದು ಹೇಳಿದನು.

09028038a ದ್ವೈಪಾಯನವಚಃ ಶ್ರುತ್ವಾ ಶಿನೇರ್ನಪ್ತಾ ಕೃತಾಂಜಲಿಃ।
09028038c ತತೋ ಮಾಮಬ್ರವೀನ್ಮುಕ್ತ್ವಾ ಸ್ವಸ್ತಿ ಸಂಜಯ ಸಾಧಯ।।

ದ್ವೈಪಾಯನನ ಮಾತನ್ನು ಕೇಳಿ ಶೈನೇಯನು ಕೈಮುಗಿದು ನನ್ನನ್ನು ಬಂಧನದಿಂದ ಬಿಡಿಸಿ “ಸಂಜಯ! ನಿನಗೆ ಮಂಗಳವಾಗಲಿ! ನೀನಿನ್ನು ಹೊರಡು!” ಎಂದನು.

09028039a ಅನುಜ್ಞಾತಸ್ತ್ವಹಂ ತೇನ ನ್ಯಸ್ತವರ್ಮಾ ನಿರಾಯುಧಃ।
09028039c ಪ್ರಾತಿಷ್ಠಂ ಯೇನ ನಗರಂ ಸಾಯಾಹ್ನೇ ರುಧಿರೋಕ್ಷಿತಃ।।

ಹಾಗೆ ಅವನಿಂದ ಅನುಜ್ಞೆಯನ್ನು ಪಡೆದು ಕವಚವನ್ನು ಬಿಚ್ಚಿಟ್ಟು ನಿರಾಯುಧನಾಗಿ ರಕ್ತದಿಂದ ತೋಯ್ದು ಹೋಗಿದ್ದ ನಾನು ಸಾಯಂಕಾಲದ ಹೊತ್ತಿಗೆ ನಗರದ ಕಡೆ ಹೊರಟೆನು.

09028040a ಕ್ರೋಶಮಾತ್ರಮಪಕ್ರಾಂತಂ ಗದಾಪಾಣಿಮವಸ್ಥಿತಂ।
09028040c ಏಕಂ ದುರ್ಯೋಧನಂ ರಾಜನ್ನಪಶ್ಯಂ ಭೃಶವಿಕ್ಷತಂ।।

ರಾಜನ್! ಕ್ರೋಶಮಾತ್ರ ದೂರಬಂದಾಗ ಅಲ್ಲಿ ತುಂಬಾ ಗಾಯಗೊಂಡು ಗದಾಪಾಣಿಯಾಗಿ ಏಕಾಂಗಿಯಾಗಿ ನಿಂತಿದ್ದ ದುರ್ಯೋಧನನನ್ನು ಕಂಡೆನು.

09028041a ಸ ತು ಮಾಮಶ್ರುಪೂರ್ಣಾಕ್ಷೋ ನಾಶಕ್ನೋದಭಿವೀಕ್ಷಿತುಂ।
09028041c ಉಪಪ್ರೈಕ್ಷತ ಮಾಂ ದೃಷ್ಟ್ವಾ ತದಾ ದೀನಮವಸ್ಥಿತಂ।।

ಕಣ್ಣೀರು ತುಂಬಿಕೊಂಡಿದ್ದುದರಿಂದ ಅವನಿಗೆ ನನ್ನನ್ನು ನೋಡಲಾಗಲಿಲ್ಲ. ಸ್ವಲ್ಪಹೊತ್ತಿನ ನಂತರ ದೀನನಾಗಿ ಬಳಿಯಲ್ಲಿಯೇ ನಿಂತಿದ್ದ ನನ್ನನ್ನು ಅವನು ನೋಡಿದನು.

09028042a ತಂ ಚಾಹಮಪಿ ಶೋಚಂತಂ ದೃಷ್ಟ್ವೈಕಾಕಿನಮಾಹವೇ।
09028042c ಮುಹೂರ್ತಂ ನಾಶಕಂ ವಕ್ತುಂ ಕಿಂ ಚಿದ್ದುಃಖಪರಿಪ್ಲುತಃ।।

ರಣರಂಗದಲ್ಲಿ ಏಕಾಂಗಿಯಾಗಿ ಶೋಕಿಸುತ್ತಿದ್ದ ಅವನನ್ನು ನೋಡಿ ದುಃಖತುಂಬಿಬಂದಿದ್ದ ನನಗೂ ಸ್ವಲ್ಪಹೊತ್ತು ಅವನಿಗೆ ಏನನ್ನು ಹೇಳಲೂ ಸಾಧ್ಯವಾಗಲಿಲ್ಲ.

09028043a ತತೋಽಸ್ಮೈ ತದಹಂ ಸರ್ವಮುಕ್ತವಾನ್ಗ್ರಹಣಂ ತದಾ।
09028043c ದ್ವೈಪಾಯನಪ್ರಸಾದಾಚ್ಚ ಜೀವತೋ ಮೋಕ್ಷಮಾಹವೇ।।

ಅನಂತರ ಅವನಿಗೆ ಯುದ್ಧದಲ್ಲಿ ನಾನು ಸೆರೆಯಾದುದು ಮತ್ತು ದ್ವೈಪಾಯನನ ಪ್ರಸಾದದಿಂದ ಜೀವಂತನಾಗಿ ಬಿಡುಗಡೆಹೊಂದಿದ್ದುದು ಎಲ್ಲದರ ಕುರಿತು ಹೇಳಿದೆನು.

09028044a ಮುಹೂರ್ತಮಿವ ಚ ಧ್ಯಾತ್ವಾ ಪ್ರತಿಲಭ್ಯ ಚ ಚೇತನಾಂ।
09028044c ಭ್ರಾತೄಂಶ್ಚ ಸರ್ವಸೈನ್ಯಾನಿ ಪರ್ಯಪೃಚ್ಚತ ಮಾಂ ತತಃ।।

ಮುಹೂರ್ತಕಾಲ ಚಿಂತಿಸುತ್ತಲೇ ಇದ್ದು, ಪುನಃ ತನ್ನ ಮನಸ್ಸನ್ನು ಹಿಡಿತಕ್ಕೆ ತಂದುಕೊಂಡು, ನನ್ನಲ್ಲಿ ತನ್ನ ಸಹೋದರರ ಮತ್ತು ಸರ್ವ ಸೇನೆಗಳ ಕುರಿತು ಪ್ರಶ್ನಿಸಿದನು.

09028045a ತಸ್ಮೈ ತದಹಮಾಚಕ್ಷಂ ಸರ್ವಂ ಪ್ರತ್ಯಕ್ಷದರ್ಶಿವಾನ್।
09028045c ಭ್ರಾತೄಂಶ್ಚ ನಿಹತಾನ್ಸರ್ವಾನ್ಸೈನ್ಯಂ ಚ ವಿನಿಪಾತಿತಂ।।

ಆಗ ಎಲ್ಲವನ್ನೂ ಪ್ರತ್ಯಕ್ಷವಾಗಿ ಕಂಡಿದ್ದ ನಾನು ಅವನಿಗೆ ಸರ್ವ ಸಹೋದರರೂ ಸೇನೆಗಳೂ ನಿಧನಹೊಂದಿರುವುದನ್ನು ವರದಿಮಾಡಿದೆ.

09028046a ತ್ರಯಃ ಕಿಲ ರಥಾಃ ಶಿಷ್ಟಾಸ್ತಾವಕಾನಾಂ ನರಾಧಿಪ।
09028046c ಇತಿ ಪ್ರಸ್ಥಾನಕಾಲೇ ಮಾಂ ಕೃಷ್ಣದ್ವೈಪಾಯನೋಽಬ್ರವೀತ್।।

“ನರಾಧಿಪ! ನಿನ್ನ ಕಡೆಯಲ್ಲಿ ಮೂವರು ಮಹಾರಥರು ಮಾತ್ರ ಉಳಿದುಕೊಂಡಿದ್ದಾರೆಂದು ನಾನು ಯುದ್ಧಭೂಮಿಯಿಂದ ಹೊರಡುವಾಗ ಕೃಷ್ಣದ್ವೈಪಾಯನನು ಹೇಳಿದ್ದನು.”

09028047a ಸ ದೀರ್ಘಮಿವ ನಿಃಶ್ವಸ್ಯ ವಿಪ್ರೇಕ್ಷ್ಯ ಚ ಪುನಃ ಪುನಃ।
09028047c ಅಂಸೇ ಮಾಂ ಪಾಣಿನಾ ಸ್ಪೃಷ್ಟ್ವಾ ಪುತ್ರಸ್ತೇ ಪರ್ಯಭಾಷತ।।

ಆಗ ನಿನ್ನ ಮಗನು ದೀರ್ಘ ನಿಟ್ಟುಸಿರು ಬಿಡುತ್ತಾ ನನ್ನನ್ನೇ ಪುನಃ ಪುನಃ ನೋಡುತ್ತಾ ಕೈಯಿಂದ ಮುಟ್ಟಿ ಹೇಳಿದನು:

09028048a ತ್ವದನ್ಯೋ ನೇಹ ಸಂಗ್ರಾಮೇ ಕಶ್ಚಿಜ್ಜೀವತಿ ಸಂಜಯ।
09028048c ದ್ವಿತೀಯಂ ನೇಹ ಪಶ್ಯಾಮಿ ಸಸಹಾಯಾಶ್ಚ ಪಾಂಡವಾಃ।।

“ಸಂಜಯ! ಈ ಸಂಗ್ರಾಮದಲ್ಲಿ ನಮ್ಮ ಕಡೆಯವನಾಗಿ ನಿನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಜೀವಿಸಿರುವುದಿಲ್ಲ. ಏಕೆಂದರೆ ನಿನ್ನನ್ನು ಬಿಟ್ಟು ಎರಡನೆಯವನನ್ನು ನಾನು ಕಾಣುತ್ತಲೇ ಇಲ್ಲ. ಆದರೆ ಪಾಂಡವರು ಸಹಾಯಕರಿಂದ ಸಂಪನ್ನರಾಗಿದ್ದಾರೆ.

09028049a ಬ್ರೂಯಾಃ ಸಂಜಯ ರಾಜಾನಂ ಪ್ರಜ್ಞಾಚಕ್ಷುಷಮೀಶ್ವರಂ।
09028049c ದುರ್ಯೋಧನಸ್ತವ ಸುತಃ ಪ್ರವಿಷ್ಟೋ ಹ್ರದಮಿತ್ಯುತ।।

ಸಂಜಯ! ಪ್ರಜ್ಞಾಚಕ್ಷು ಈಶ್ವರ ರಾಜನಿಗೆ “ನಿನ್ನ ಮಗ ದುರ್ಯೋಧನನು ಸರೋವರವನ್ನು ಪ್ರವೇಶಿಸಿದ್ದಾನೆ” ಎಂದು ಹೇಳು.

09028050a ಸುಹೃದ್ಭಿಸ್ತಾದೃಶೈರ್ಹೀನಃ ಪುತ್ರೈರ್ಭ್ರಾತೃಭಿರೇವ ಚ।
09028050c ಪಾಂಡವೈಶ್ಚ ಹೃತೇ ರಾಜ್ಯೇ ಕೋ ನು ಜೀವತಿ ಮಾದೃಶಃ।।

ಸುಹೃದಯರಿಂದಲೂ, ಪುತ್ರರಿಂದಲೂ, ಸಹೋದರರಿಂದಲೂ ವಿಹೀನನಾದ ನನ್ನಂಥವನು ಪಾಂಡವರು ರಾಜ್ಯವನ್ನು ಅಪಹರಿಸಿದ ನಂತರ ಹೇಗೆತಾನೇ ಜೀವಿಸಿರುವನು?

09028051a ಆಚಕ್ಷೇಥಾಃ ಸರ್ವಮಿದಂ ಮಾಂ ಚ ಮುಕ್ತಂ ಮಹಾಹವಾತ್।
09028051c ಅಸ್ಮಿಂಸ್ತೋಯಹ್ರದೇ ಸುಪ್ತಂ ಜೀವಂತಂ ಭೃಶವಿಕ್ಷತಂ।।

ತುಂಬಾ ಗಾಯಗೊಂಡಿರುವ ನಾನು ಮಹಾಯುದ್ಧದಿಂದ ತಪ್ಪಿಸಿಕೊಂಡು ಜೀವಂತನಾಗಿ ನೀರಿನಿಂದ ತುಂಬಿದ ಈ ಸರೋವರದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ ಎಂದು ಎಲ್ಲವನ್ನೂ ಅವನಿಗೆ ಹೇಳು.”

09028052a ಏವಮುಕ್ತ್ವಾ ಮಹಾರಾಜ ಪ್ರಾವಿಶತ್ತಂ ಹ್ರದಂ ನೃಪಃ।
09028052c ಅಸ್ತಂಭಯತ ತೋಯಂ ಚ ಮಾಯಯಾ ಮನುಜಾಧಿಪಃ।।

ಮಹಾರಾಜ! ಹೀಗೆ ಹೇಳಿ ನೃಪ ಮನುಜಾಧಿಪನು ಸರೋವರವನ್ನು ಪ್ರವೇಶಿಸಿದನು ಮತ್ತು ಮಾಯೆಯಿಂದ ನೀರನ್ನು ಸ್ತಂಭಿಸಿದನು.

09028053a ತಸ್ಮಿನ್ ಹ್ರದಂ ಪ್ರವಿಷ್ಟೇ ತು ತ್ರೀನ್ರಥಾನ್ ಶ್ರಾಂತವಾಹನಾನ್।
09028053c ಅಪಶ್ಯಂ ಸಹಿತಾನೇಕಸ್ತಂ ದೇಶಂ ಸಮುಪೇಯುಷಃ।।
09028054a ಕೃಪಂ ಶಾರದ್ವತಂ ವೀರಂ ದ್ರೌಣಿಂ ಚ ರಥಿನಾಂ ವರಂ।
09028054c ಭೋಜಂ ಚ ಕೃತವರ್ಮಾಣಂ ಸಹಿತಾನ್ ಶರವಿಕ್ಷತಾನ್।।

ಅವನು ಸರೋವರವನ್ನು ಪ್ರವೇಶಿಸಲು ಒಂಟಿಯಾಗಿ ನಿಂತಿದ್ದ ನಾನು ಆ ಪ್ರದೇಶವನ್ನು ಒಟ್ಟಾಗಿ ತಲುಪಿದ ಮೂವರು ರಥರನ್ನು – ವೀರ ಕೃಪ ಶಾರದ್ವತ, ರಥಿಗಳಲ್ಲಿ ಶ್ರೇಷ್ಠ ದ್ರೌಣಿ ಮತ್ತು ಭೋಜ ಕೃತವರ್ಮರನ್ನು ನೋಡಿದೆನು. ಅವರ ಕುದುರೆಗಳು ಬಳಲಿದ್ದವು ಮತ್ತು ಅವರುಗಳು ಕೂಡ ಶರಪ್ರಹಾರಗಳಿಂದ ಗಾಯಗೊಂಡಿದ್ದರು.

09028055a ತೇ ಸರ್ವೇ ಮಾಮಭಿಪ್ರೇಕ್ಷ್ಯ ತೂರ್ಣಮಶ್ವಾನಚೋದಯನ್।
09028055c ಉಪಯಾಯ ಚ ಮಾಮೂಚುರ್ದಿಷ್ಟ್ಯಾ ಜೀವಸಿ ಸಂಜಯ।।

ಅವರೆಲ್ಲರೂ ನನ್ನನ್ನು ನೋಡಿ ಬೇಗನೇ ಕುದುರೆಗಳನ್ನು ಓಡಿಸಿಕೊಂಡು ಹತ್ತಿರಬಂದು “ಸಂಜಯ! ಒಳ್ಳೆಯದಾಯಿತು! ನೀನು ಜೀವಂತವಿರುವೆ!” ಎಂದರು.

09028056a ಅಪೃಚ್ಚಂಶ್ಚೈವ ಮಾಂ ಸರ್ವೇ ಪುತ್ರಂ ತವ ಜನಾಧಿಪಂ।
09028056c ಕಚ್ಚಿದ್ದುರ್ಯೋಧನೋ ರಾಜಾ ಸ ನೋ ಜೀವತಿ ಸಂಜಯ।।

ಜನಾಧಿಪ ನಿನ್ನ ಮಗನ ವಿಷಯವಾಗಿ ಎಲ್ಲವನ್ನೂ ಅವರು ಪ್ರಶ್ನಿಸುತ್ತಾ “ಸಂಜಯ! ನಮ್ಮ ರಾಜ ದುರ್ಯೋಧನನು ಬದುಕಿರುವನೇ?” ಎಂದು ಪ್ರಶ್ನಿಸಿದರು.

09028057a ಆಖ್ಯಾತವಾನಹಂ ತೇಭ್ಯಸ್ತದಾ ಕುಶಲಿನಂ ನೃಪಂ।
09028057c ತಚ್ಚೈವ ಸರ್ವಮಾಚಕ್ಷಂ ಯನ್ಮಾಂ ದುರ್ಯೋಧನೋಽಬ್ರವೀತ್।।
09028057e ಹ್ರದಂ ಚೈವಾಹಮಾಚಷ್ಟ ಯಂ ಪ್ರವಿಷ್ಟೋ ನರಾಧಿಪಃ।।

ಅವರೊಡನೆ ನಾನು ನೃಪನು ಕುಶಲನಾಗಿರುವನೆಂದು ಹೇಳಿ ದುರ್ಯೋಧನನು ನನಗೆ ಹೇಳಿದುದೆಲ್ಲವನ್ನೂ ಅವರಿಗೆ ಹೇಳಿದೆನು. ನರಾಧಿಪನು ಸರೋವರವನ್ನು ಪ್ರವೇಶಿಸಿದನೆನ್ನುವುದನ್ನೂ ಹೇಳಿದೆನು.

09028058a ಅಶ್ವತ್ಥಾಮಾ ತು ತದ್ರಾಜನ್ನಿಶಮ್ಯ ವಚನಂ ಮಮ।
09028058c ತಂ ಹ್ರದಂ ವಿಪುಲಂ ಪ್ರೇಕ್ಷ್ಯ ಕರುಣಂ ಪರ್ಯದೇವಯತ್।।

ರಾಜನ್! ನನ್ನ ವಚನವನ್ನು ಕೇಳಿದ ಅಶ್ವತ್ಥಾಮನಾದರೋ ಆ ವಿಶಾಲ ಸರೋವರವನ್ನು ನೋಡಿ ಕರುಣೆಯಿಂದ ವಿಲಪಿಸಿದನು:

09028059a ಅಹೋ ಧಿಘ್ ನ ಸ ಜಾನಾತಿ ಜೀವತೋಽಸ್ಮಾನ್ನರಾಧಿಪಃ।
09028059c ಪರ್ಯಾಪ್ತಾ ಹಿ ವಯಂ ತೇನ ಸಹ ಯೋಧಯಿತುಂ ಪರಾನ್।।

“ಅಯ್ಯೋ! ನಮಗೆ ಧಿಕ್ಕಾರ! ನರಾಧಿಪನಿಗೆ ನಾವಿನ್ನೂ ಜೀವಿಸಿರುವೆವೆಂದು ತಿಳಿದಿಲ್ಲ. ಅವನೊಂದಿಗೆ ಸೇರಿ ಶತ್ರುಗಳೊಡನೆ ಯುದ್ಧಮಾಡಲು ಈಗಲೂ ನಾವು ಪರ್ಯಾಪ್ತರಾಗಿದ್ದೇವೆ!”

09028060a ತೇ ತು ತತ್ರ ಚಿರಂ ಕಾಲಂ ವಿಲಪ್ಯ ಚ ಮಹಾರಥಾಃ।
09028060c ಪ್ರಾದ್ರವನ್ರಥಿನಾಂ ಶ್ರೇಷ್ಠಾ ದೃಷ್ಟ್ವಾ ಪಾಂಡುಸುತಾನ್ರಣೇ।।

ಬಹಳ ಹೊತ್ತಿನವರೆಗೆ ಆ ಮಹಾರಥರು ಅಲ್ಲಿ ವಿಲಪಿಸುತ್ತಿದ್ದರು. ರಣದಲ್ಲಿ ಪಾಂಡುಸುತರನ್ನು ಕಂಡು ಆ ರಥಶ್ರೇಷ್ಠರು ಪಲಾಯನಗೈದರು.

09028061a ತೇ ತು ಮಾಂ ರಥಮಾರೋಪ್ಯ ಕೃಪಸ್ಯ ಸುಪರಿಷ್ಕೃತಂ।
09028061c ಸೇನಾನಿವೇಶಮಾಜಗ್ಮುರ್ಹತಶೇಷಾಸ್ತ್ರಯೋ ರಥಾಃ।।

ಅಳಿದುಳಿದಿದ್ದ ಆ ಮೂವರು ಮಹಾರಥರೂ ನನ್ನನ್ನು ಕೃಪನ ಸುಸಜ್ಜಿತ ರಥದಲ್ಲಿ ಕುಳ್ಳಿರಿಸಿಕೊಂಡು ಸೇನಾ ಶಿಬಿರದಕಡೆ ತೆರಳಿದರು.

09028062a ತತ್ರ ಗುಲ್ಮಾಃ ಪರಿತ್ರಸ್ತಾಃ ಸೂರ್ಯೇ ಚಾಸ್ತಮಿತೇ ಸತಿ।
09028062c ಸರ್ವೇ ವಿಚುಕ್ರುಶುಃ ಶ್ರುತ್ವಾ ಪುತ್ರಾಣಾಂ ತವ ಸಂಕ್ಷಯಂ।।

ಸೂರ್ಯನು ಅಸ್ತಮಿಸಲಾಗಿ ಶಿಬಿರವನ್ನು ಕಾಯುತ್ತಿದ್ದ ಸೈನಿಕರು ಬಹಳವಾಗಿ ಭಯಗೊಂಡರು ಮತ್ತು ನಿನ್ನ ಮಕ್ಕಳೆಲ್ಲರೂ ಹತರಾದುದನ್ನು ಕೇಳಿ ಎಲ್ಲರೂ ಗಟ್ಟಿಯಾಗಿ ರೋದಿಸಿದರು.

09028063a ತತೋ ವೃದ್ಧಾ ಮಹಾರಾಜ ಯೋಷಿತಾಂ ರಕ್ಷಣೋ ನರಾಃ।
09028063c ರಾಜದಾರಾನುಪಾದಾಯ ಪ್ರಯಯುರ್ನಗರಂ ಪ್ರತಿ।।

ಮಹಾರಾಜ! ಆಗ ರಕ್ಷಣೆಯಲ್ಲಿದ್ದ ವೃದ್ಧರು ರಾಜಪತ್ನಿಯರನ್ನು ಕರೆದುಕೊಂಡು ನಗರದ ಕಡೆ ಹೊರಟರು.

09028064a ತತ್ರ ವಿಕ್ರೋಶತೀನಾಂ ಚ ರುದತೀನಾಂ ಚ ಸರ್ವಶಃ।
09028064c ಪ್ರಾದುರಾಸೀನ್ಮಹಾನ್ ಶಬ್ದಃ ಶ್ರುತ್ವಾ ತದ್ಬಲಸಂಕ್ಷಯಂ।।

ಸೇನೆಗಳು ನಾಶವಾದುದನ್ನು ಕೇಳಿ ರೋದಿಸುತ್ತಿದ್ದ ಅವರ ಮಹಾಧ್ವನಿಯು ಎಲ್ಲಕಡೆಗಳಿಂದಲೂ ಕೇಳಿಬರುತ್ತಿತ್ತು.

09028065a ತತಸ್ತಾ ಯೋಷಿತೋ ರಾಜನ್ಕ್ರಂದಂತ್ಯೋ ವೈ ಮುಹುರ್ಮುಹುಃ।
09028065c ಕುರರ್ಯ ಇವ ಶಬ್ದೇನ ನಾದಯಂತ್ಯೋ ಮಹೀತಲಂ।।

ರಾಜನ್! ಕಡಲ ಹದ್ದುಗಳು ಕೂಗಿಕೊಳ್ಳುವಂತೆ ಪುನಃ ಪುನಃ ರೋದಿಸುತ್ತಿದ್ದ ಅವರ ಧ್ವನಿಗಳು ಭೂತಲದಲ್ಲಿಯೇ ಪ್ರತಿಧ್ವನಿಸುತ್ತಿದ್ದವು.

09028066a ಆಜಘ್ನುಃ ಕರಜೈಶ್ಚಾಪಿ ಪಾಣಿಭಿಶ್ಚ ಶಿರಾಂಸ್ಯುತ।
09028066c ಲುಲುವುಶ್ಚ ತದಾ ಕೇಶಾನ್ಕ್ರೋಶಂತ್ಯಸ್ತತ್ರ ತತ್ರ ಹ।।

ಕೈಗಳಿಂದ ಪರಚಿಕೊಳ್ಳುತ್ತಿದ್ದರು. ಕೈಗಳಿಂದ ತಲೆಗಳನ್ನು ಬಡಿದುಕೊಳ್ಳುತ್ತಿದ್ದರು. ತಲೆಗೂದಲನ್ನು ಕಿತ್ತುಕೊಳ್ಳುತ್ತಾ ಅಲ್ಲಲ್ಲಿ ವಿಲಪಿಸುತ್ತಿದ್ದರು.

09028067a ಹಾಹಾಕಾರವಿನಾದಿನ್ಯೋ ವಿನಿಘ್ನಂತ್ಯ ಉರಾಂಸಿ ಚ।
09028067c ಕ್ರೋಶಂತ್ಯಸ್ತತ್ರ ರುರುದುಃ ಕ್ರಂದಮಾನಾ ವಿಶಾಂ ಪತೇ।।

ವಿಶಾಂಪತೇ! ಎದೆಗಳನ್ನು ಬಡಿದುಕೊಂಡು ಹಾಹಾಕಾರಮಾಡುತ್ತಿದ್ದರು. ಶೋಕತಪ್ತರಾಗಿ ಕರೆಕರೆದು ಕೂಗಿಕೊಳ್ಳುತ್ತಿದ್ದರು.

09028068a ತತೋ ದುರ್ಯೋಧನಾಮಾತ್ಯಾಃ ಸಾಶ್ರುಕಂಠಾ ಭೃಶಾತುರಾಃ।
09028068c ರಾಜದಾರಾನುಪಾದಾಯ ಪ್ರಯಯುರ್ನಗರಂ ಪ್ರತಿ।।

ಆಗ ದುರ್ಯೋಧನನ ಅಮಾತ್ಯರು ಆ ಅಶೃಕಂಠ ಅತಿ ಆತುರ ರಾಜಪತ್ನಿಯರನ್ನು ಕರೆದುಕೊಂಡು ನಗರದ ಕಡೆ ನಡೆದರು.

09028069a ವೇತ್ರಜರ್ಝರಹಸ್ತಾಶ್ಚ ದ್ವಾರಾಧ್ಯಕ್ಷಾ ವಿಶಾಂ ಪತೇ।
09028069c ಶಯನೀಯಾನಿ ಶುಭ್ರಾಣಿ ಸ್ಪರ್ಧ್ಯಾಸ್ತರಣವಂತಿ ಚ।।
09028069e ಸಮಾದಾಯ ಯಯುಸ್ತೂರ್ಣಂ ನಗರಂ ದಾರರಕ್ಷಿಣಃ।।

ವಿಶಾಂಪತೇ! ಹಾಗೆಯೇ ದಂಡಧಾರಿ ದ್ವಾರಪಾಲಕರೂ ರಾಜಪತ್ನಿಯರ ರಕ್ಷಕರೂ ಶುಭ್ರ ಅಮೂಲ್ಯ ಹಾಸಿಗೆಗಳನ್ನೂ ಎತ್ತಿಕೊಂಡು ಬಹುಬೇಗ ನಗರವನ್ನು ಸೇರಿದರು.

09028070a ಆಸ್ಥಾಯಾಶ್ವತರೀಯುಕ್ತಾನ್ಸ್ಯಂದನಾನಪರೇ ಜನಾಃ।
09028070c ಸ್ವಾನ್ಸ್ವಾನ್ದಾರಾನುಪಾದಾಯ ಪ್ರಯಯುರ್ನಗರಂ ಪ್ರತಿ।।

ಇತರರು ಹೇಸರಗತ್ತೆಗಳಿಗೆ ಕಟ್ಟಿದ ರಥಗಳಲ್ಲಿ ತಮ್ಮ ತಮ್ಮ ಪತ್ನಿಯರನ್ನು ಕರೆದುಕೊಂಡು ನಗರದ ಕಡೆ ಹೊರಟರು.

09028071a ಅದೃಷ್ಟಪೂರ್ವಾ ಯಾ ನಾರ್ಯೋ ಭಾಸ್ಕರೇಣಾಪಿ ವೇಶ್ಮಸು।
09028071c ದದೃಶುಸ್ತಾ ಮಹಾರಾಜ ಜನಾ ಯಾಂತೀಃ ಪುರಂ ಪ್ರತಿ।।

ಮಹಾರಾಜ! ಹಿಂದೆ ಸೂರ್ಯನ ಕಣ್ಣಿಗೂ ಬೀಳದಿದ್ದ ಅಂತಃಪುರದ ಸ್ತ್ರೀಯರು ಈಗ ಪುರದ ಕಡೆ ಹೋಗುತ್ತಿರುವಾಗ ಸಾಮಾನ್ಯ ಜನರಿಗೂ ಕಾಣುತ್ತಿದ್ದರು.

09028072a ತಾಃ ಸ್ತ್ರಿಯೋ ಭರತಶ್ರೇಷ್ಠ ಸೌಕುಮಾರ್ಯಸಮನ್ವಿತಾಃ।
09028072c ಪ್ರಯಯುರ್ನಗರಂ ತೂರ್ಣಂ ಹತಸ್ವಜನಬಾಂಧವಾಃ।।

ಭರತಶ್ರೇಷ್ಠ! ಸ್ವಜನರನ್ನೂ ಬಾಂಧವರನ್ನೂ ಕಳೆದುಕೊಂಡ ಆ ಸುಕುಮಾರ ಸ್ತ್ರೀಯರು ಬೇಗ ಬೇಗನೇ ನಗರದ ಕಡೆ ಪ್ರಯಾಣಿಸಿದರು.

09028073a ಆ ಗೋಪಾಲಾವಿಪಾಲೇಭ್ಯೋ ದ್ರವಂತೋ ನಗರಂ ಪ್ರತಿ।
09028073c ಯಯುರ್ಮನುಷ್ಯಾಃ ಸಂಭ್ರಾಂತಾ ಭೀಮಸೇನಭಯಾರ್ದಿತಾಃ।।

ಭೀಮಸೇನನ ಭಯದಿಂದ ಪೀಡಿತರಾದ ಗೊಲ್ಲ-ಕುರುಬರೂ ಕೂಡ ಸಂಭ್ರಾಂತರಾಗಿ ನಗರದ ಕಡೆ ಓಡಿಹೋಗುತ್ತಿದ್ದರು.

09028074a ಅಪಿ ಚೈಷಾಂ ಭಯಂ ತೀವ್ರಂ ಪಾರ್ಥೇಭ್ಯೋಽಭೂತ್ಸುದಾರುಣಂ।
09028074c ಪ್ರೇಕ್ಷಮಾಣಾಸ್ತದಾನ್ಯೋನ್ಯಮಾಧಾವನ್ನಗರಂ ಪ್ರತಿ।।

ಪಾರ್ಥರ ತೀವ್ರ ದಾರುಣ ಭಯದಿಂದಾಗಿ ಅವರು ಅನ್ಯೋನ್ಯರನ್ನು ನೋಡುತ್ತಾ ನಗರದ ಕಡೆ ಓಡಿ ಹೋಗುತ್ತಿದ್ದರು.

09028075a ತಸ್ಮಿಂಸ್ತದಾ ವರ್ತಮಾನೇ ವಿದ್ರವೇ ಭೃಶದಾರುಣೇ।
09028075c ಯುಯುತ್ಸುಃ ಶೋಕಸಮ್ಮೂಢಃ ಪ್ರಾಪ್ತಕಾಲಮಚಿಂತಯತ್।।

ಹಾಗೆ ದಾರುಣ ಪಲಾಯನವು ನಡೆಯುತ್ತಿರಲು ಶೋಕಸಮ್ಮೂಢನಾದ ಯುಯುತ್ಸುವು ಆಗ ಮಾಡಬೇಕಾದುದರ ಕುರಿತು ಯೋಚಿಸಿದನು.

09028076a ಜಿತೋ ದುರ್ಯೋಧನಃ ಸಂಖ್ಯೇ ಪಾಂಡವೈರ್ಭೀಮವಿಕ್ರಮೈಃ।
09028076c ಏಕಾದಶಚಮೂಭರ್ತಾ ಭ್ರಾತರಶ್ಚಾಸ್ಯ ಸೂದಿತಾಃ।।
09028076e ಹತಾಶ್ಚ ಕುರವಃ ಸರ್ವೇ ಭೀಷ್ಮದ್ರೋಣಪುರಃಸರಾಃ।।

“ಹನ್ನೊಂದು ಅಕ್ಷೌಹಿಣೀ ಸೇನೆಗಳ ಒಡೆಯ ದುರ್ಯೋಧನನು ರಣದಲ್ಲಿ ಪಾಂಡವರ ಭೀಮವಿಕ್ರಮದಿಂದ ಗೆಲ್ಲಲ್ಪಟ್ಟಿದ್ದಾನೆ. ಅವನ ಸಹೋದರರೂ ಸಂಹರಿಸಲ್ಪಟ್ಟಿದ್ದಾರೆ. ಭೀಷ್ಮ-ದ್ರೋಣರೇ ಮೊದಲಾದ ಕುರುಗಳು ಎಲ್ಲರೂ ಹತರಾಗಿದ್ದಾರೆ.

09028077a ಅಹಮೇಕೋ ವಿಮುಕ್ತಸ್ತು ಭಾಗ್ಯಯೋಗಾದ್ಯದೃಚ್ಚಯಾ।
09028077c ವಿದ್ರುತಾನಿ ಚ ಸರ್ವಾಣಿ ಶಿಬಿರಾಣಿ ಸಮಂತತಃ।।

ಭಾಗ್ಯ-ಯೋಗಗಳ ಇಚ್ಛೆಯಂತೆ ನಾನೊಬ್ಬನೇ ತಪ್ಪಿಸಿಕೊಂಡಿದ್ದೇನೆ. ಶಿಬಿರಗಳಲ್ಲಿದ್ದವರೆಲ್ಲರೂ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದಾರೆ.

09028078a ದುರ್ಯೋಧನಸ್ಯ ಸಚಿವಾ ಯೇ ಕೇ ಚಿದವಶೇಷಿತಾಃ।
09028078c ರಾಜದಾರಾನುಪಾದಾಯ ವ್ಯಧಾವನ್ನಗರಂ ಪ್ರತಿ।।

ದುರ್ಯೋಧನನ ಅಳಿದುಳಿದ ಕೆಲವೇ ಸಚಿವರು ರಾಜಪತ್ನಿಯರನ್ನು ಕರೆದುಕೊಂಡು ನಗರದ ಕಡೆ ಓಡಿ ಹೋಗುತ್ತಿದ್ದಾರೆ.

09028079a ಪ್ರಾಪ್ತಕಾಲಮಹಂ ಮನ್ಯೇ ಪ್ರವೇಶಂ ತೈಃ ಸಹಾಭಿಭೋ।
09028079c ಯುಧಿಷ್ಠಿರಮನುಜ್ಞಾಪ್ಯ ಭೀಮಸೇನಂ ತಥೈವ ಚ।।

ವಿಭು ಯುಧಿಷ್ಠಿರನ ಮತ್ತು ಭೀಮಸೇನನ ಅನುಮತಿಯನ್ನು ಪಡೆದು ನಾನೂ ಕೂಡ ಅವರೊಡನೆ ನಗರಪ್ರವೇಶಮಾಡುವ ಕಾಲ ಬಂದೊದಗಿದೆಯೆಂದು ನನಗನ್ನಿಸುತ್ತದೆ.”

09028080a ಏತಮರ್ಥಂ ಮಹಾಬಾಹುರುಭಯೋಃ ಸ ನ್ಯವೇದಯತ್।
09028080c ತಸ್ಯ ಪ್ರೀತೋಽಭವದ್ರಾಜಾ ನಿತ್ಯಂ ಕರುಣವೇದಿತಾ।।
09028080e ಪರಿಷ್ವಜ್ಯ ಮಹಾಬಾಹುರ್ವೈಶ್ಯಾಪುತ್ರಂ ವ್ಯಸರ್ಜಯತ್।।

ಹೀಗೆ ಯೋಚಿಸಿದುದನ್ನು ಆ ಮಹಾಬಾಹುವು ಅವರಿಬ್ಬರಿಗೂ ನಿವೇದಿಸಿದನು. ನಿತ್ಯವೂ ಕರುಣಾಮಯಿಯಾದ ಮಹಾಬಾಹು ರಾಜನು ಪ್ರೀತನಾಗಿ ವೈಶ್ಯಾಪುತ್ರನನ್ನು ಆಲಂಗಿಸಿ ಬೀಳ್ಕೊಟ್ಟನು.

09028081a ತತಃ ಸ ರಥಮಾಸ್ಥಾಯ ದ್ರುತಮಶ್ವಾನಚೋದಯತ್।
09028081c ಅಸಂಭಾವಿತವಾಂಶ್ಚಾಪಿ ರಾಜದಾರಾನ್ಪುರಂ ಪ್ರತಿ।।

ಕೂಡಲೇ ಅವನು ರಾಜಪತ್ನಿಯರನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಪುರದ ಕಡೆ ಕುದುರೆಗಳನ್ನು ಓಡಿಸಿದನು.

09028082a ತೈಶ್ಚೈವ ಸಹಿತಃ ಕ್ಷಿಪ್ರಮಸ್ತಂ ಗಚ್ಚತಿ ಭಾಸ್ಕರೇ।
09028082c ಪ್ರವಿಷ್ಟೋ ಹಾಸ್ತಿನಪುರಂ ಬಾಷ್ಪಕಂಠೋಽಶ್ರುಲೋಚನಃ।।

ಸೂರ್ಯನು ಅಸ್ತಂಗತನಾಗುತ್ತಿರಲಾಗಿ ಕ್ಷಿಪ್ರವಾಗಿ ಆ ಬಾಷ್ಪಕಂಠ ಅಶ್ರುಲೋಚನನು ಅವರೊಂದಿಗೆ ಹಸ್ತಿನಾಪುರವನ್ನು ಪ್ರವೇಶಿಸಿದನು.

09028083a ಅಪಶ್ಯತ ಮಹಾಪ್ರಾಜ್ಞಂ ವಿದುರಂ ಸಾಶ್ರುಲೋಚನಂ।
09028083c ರಾಜ್ಞಃ ಸಮೀಪಾನ್ನಿಷ್ಕ್ರಾಂತಂ ಶೋಕೋಪಹತಚೇತಸಂ।।

ಅಲ್ಲಿ ಅವನು ರಾಜನ ಸಮೀಪದಲ್ಲಿ ಶೋಕದಿಂದ ಹತಚೇತನನಾಗಿ ಕಣ್ಣೀರುತುಂಬಿದ ಮಹಾಪ್ರಾಜ್ಞ ವಿದುರನನ್ನು ಕಂಡನು.

09028084a ತಮಬ್ರವೀತ್ಸತ್ಯಧೃತಿಃ ಪ್ರಣತಂ ತ್ವಗ್ರತಃ ಸ್ಥಿತಂ।
09028084c ಅಸ್ಮಿನ್ಕುರುಕ್ಷಯೇ ವೃತ್ತೇ ದಿಷ್ಟ್ಯಾ ತ್ವಂ ಪುತ್ರ ಜೀವಸಿ।।

ನಮಸ್ಕರಿಸಿ ಎದುರು ನಿಂತಿದ್ದ ಅವನಿಗೆ ಸತ್ಯಧೃತಿ ವಿದುರನು ಹೇಳಿದನು: “ನಡೆದುಹೋದ ಈ ಕುರುಕ್ಷಯದಲ್ಲಿ ಮಗನೇ ನೀನು ಜೀವಿಸಿರುವುದು ಅದೃಷ್ಟವೇ ಸರಿ!

09028085a ವಿನಾ ರಾಜ್ಞಃ ಪ್ರವೇಶಾದ್ವೈ ಕಿಮಸಿ ತ್ವಮಿಹಾಗತಃ।
09028085c ಏತನ್ಮೇ ಕಾರಣಂ ಸರ್ವಂ ವಿಸ್ತರೇಣ ನಿವೇದಯ।।

ಆದರೆ ರಾಜಾ ಯುಧಿಷ್ಠಿರನು ರಾಜ್ಯಪ್ರವೇಶಮಾಡದೇ ನೀನೇಕೆ ಇಲ್ಲಿಗೆ ಆಗಮಿಸಿರುವೆ? ಇದರ ಕಾರಣವೆಲ್ಲವನ್ನೂ ವಿಸ್ತಾರವಾಗಿ ಹೇಳು!”

09028086 ಯುಯುತ್ಸುರುವಾಚ 09028086a ನಿಹತೇ ಶಕುನೌ ತಾತ ಸಜ್ಞಾತಿಸುತಬಾಂಧವೇ।
09028086c ಹತಶೇಷಪರೀವಾರೋ ರಾಜಾ ದುರ್ಯೋಧನಸ್ತತಃ।।
09028086e ಸ್ವಕಂ ಸ ಹಯಮುತ್ಸೃಜ್ಯ ಪ್ರಾಙ್ಮುಖಃ ಪ್ರಾದ್ರವದ್ಭಯಾತ್।।

ಯುಯುತ್ಸುವು ಹೇಳಿದನು: “ಅಯ್ಯಾ! ಜ್ಞಾತಿ-ಸುತ-ಬಾಂಧವರೊಡನೆ ಶಕುನಿಯು ಹತನಾಗಲು ಮತ್ತು ಅಳಿದುಳಿದ ಪರಿವಾರದವರೂ ಹತರಾಗಲು ರಾಜಾ ದುರ್ಯೋಧನನು ತನ್ನ ಕುದುರೆಯನ್ನು ತೊರೆದು ಭಯದಿಂದ ಪೂರ್ವಾಭಿಮುಖವಾಗಿ ಹೊರಟುಹೋದನು.

09028087a ಅಪಕ್ರಾಂತೇ ತು ನೃಪತೌ ಸ್ಕಂಧಾವಾರನಿವೇಶನಾತ್।
09028087c ಭಯವ್ಯಾಕುಲಿತಂ ಸರ್ವಂ ಪ್ರಾದ್ರವನ್ನಗರಂ ಪ್ರತಿ।।

ನೃಪತಿಯು ಪಲಾಯನಮಾಡಲಾಗಿ ಸೇನಾಶಿಬಿರದಿಂದ ಭಯವ್ಯಾಕುಲಿತರು ಎಲ್ಲರೂ ನಗರದ ಕಡೆ ಓಡಿಬಂದರು.

09028088a ತತೋ ರಾಜ್ಞಃ ಕಲತ್ರಾಣಿ ಭ್ರಾತೄಣಾಂ ಚಾಸ್ಯ ಸರ್ವಶಃ।
09028088c ವಾಹನೇಷು ಸಮಾರೋಪ್ಯ ಸ್ತ್ರ್ಯಧ್ಯಕ್ಷಾಃ ಪ್ರಾದ್ರವನ್ಭಯಾತ್।।

ಆಗ ಶಿಬಿರಾಧ್ಯಕ್ಷರು ಭಯದಿಂದ ರಾಜನ ಮತ್ತು ಅವನ ಸಹೋದರರ ಪತ್ನಿಯರೆಲ್ಲರನ್ನೂ ವಾಹನಗಳಲ್ಲಿ ಏರಿಸಿಕೊಂಡು ಓಡಿದರು.

09028089a ತತೋಽಹಂ ಸಮನುಜ್ಞಾಪ್ಯ ರಾಜಾನಂ ಸಹಕೇಶವಂ।
09028089c ಪ್ರವಿಷ್ಟೋ ಹಾಸ್ತಿನಪುರಂ ರಕ್ಷಽಲ್ಲೋಕಾದ್ಧಿ ವಾಚ್ಯತಾಂ।।

ಆಗ ನಾನು ಕೇಶವನೊಡನೆ ರಾಜನ ಅನುಜ್ಞೆಯನ್ನು ಪಡೆದು ಅವರನ್ನು ರಕ್ಷಿಸುತ್ತಾ ಹಸ್ತಿನಾಪುರಕ್ಕೆ ಬಂದೆನು.”

09028090a ಏತಚ್ಚ್ರುತ್ವಾ ತು ವಚನಂ ವೈಶ್ಯಾಪುತ್ರೇಣ ಭಾಷಿತಂ।
09028090c ಪ್ರಾಪ್ತಕಾಲಮಿತಿ ಜ್ಞಾತ್ವಾ ವಿದುರಃ ಸರ್ವಧರ್ಮವಿತ್।।
09028090e ಅಪೂಜಯದಮೇಯಾತ್ಮಾ ಯುಯುತ್ಸುಂ ವಾಕ್ಯಕೋವಿದಂ।।

ವೈಶ್ಯಾಪುತ್ರನಾಡಿದ ಮಾತನ್ನು ಕೇಳಿ ಅಮೇಯಾತ್ಮ ಸರ್ವಧರ್ಮವಿದು ವಿದುರನು ಸಮಯಕ್ಕೆ ಸರಿಯಾದುದನ್ನೇ ಮಾಡಿರುವನೆಂದು ತಿಳಿದು ವಾಕ್ಯಕೋವಿದ ಯುಯುತ್ಸುವನ್ನು ಪ್ರಶಂಸಿಸಿದನು.

09028091a ಪ್ರಾಪ್ತಕಾಲಮಿದಂ ಸರ್ವಂ ಭವತೋ ಭರತಕ್ಷಯೇ।
09028091c ಅದ್ಯ ತ್ವಮಿಹ ವಿಶ್ರಾಂತಃ ಶ್ವೋಽಭಿಗಂತಾ ಯುಧಿಷ್ಠಿರಂ।।

“ಭರತರ ಈ ವಿನಾಶಸಮಯದಲ್ಲಿ ನೀನು ಸಮಯೋಚಿತ ಕಾರ್ಯವನ್ನೇ ಮಾಡಿದ್ದೀಯೆ. ಇಂದು ನೀನು ಇಲ್ಲಿಯೇ ವಿಶ್ರಾಂತಿಪಡೆ. ನಾಳೆ ಯುಧಿಷ್ಠಿರನಲ್ಲಿಗೆ ಹೋಗುವಿಯಂತೆ.”

09028092a ಏತಾವದುಕ್ತ್ವಾ ವಚನಂ ವಿದುರಃ ಸರ್ವಧರ್ಮವಿತ್।
09028092c ಯುಯುತ್ಸುಂ ಸಮನುಜ್ಞಾಪ್ಯ ಪ್ರವಿವೇಶ ನೃಪಕ್ಷಯಂ।।
09028092e ಯುಯುತ್ಸುರಪಿ ತಾಂ ರಾತ್ರಿಂ ಸ್ವಗೃಹೇ ನ್ಯವಸತ್ತದಾ।।

ಹೀಗೆ ಮಾತನಾಡಿ ಸರ್ವಧರ್ಮವಿದು ವಿದುರನು ಯುಯುತ್ಸುವಿಗೆ ಅಪ್ಪಣೆಯನ್ನಿತ್ತು ರಾಜಭವನವನ್ನು ಪ್ರವೇಶಿಸಿದನು. ಯುಯುತ್ಸುವಾದರೂ ರಾತ್ರಿಯನ್ನು ತನ್ನ ಮನೆಯಲ್ಲಿಯೇ ಕಳೆದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಹ್ರದಪ್ರವೇಶೇ ಅಷ್ಠಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಹ್ರದಪ್ರವೇಶ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪ್ರವೇಶಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-8/18, ಉಪಪರ್ವಗಳು-75/100, ಅಧ್ಯಾಯಗಳು-1247/1995, ಶ್ಲೋಕಗಳು-46701/73784.