ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಹ್ರದಪ್ರವೇಶ ಪರ್ವ
ಅಧ್ಯಾಯ 27
ಸಾರ
ಶಕುನಿ-ಉಲ್ಲೂಕರೊಡನೆ ಭೀಮಸೇನ-ಸಹದೇವರ ಯುದ್ಧ (1-17). ಪಲಾಯನ ಮಾಡುತ್ತಿದ್ದ ಶಕುನಿಯ ಅನುಯಾಯಿಗಳನ್ನು ದುರ್ಯೋಧನನು ಯುದ್ಧಕ್ಕೆ ಹಿಂದಿರುಗುವಂತೆ ಕರೆದುದು (18-23). ಸಹದೇವನಿಂದ ಉಲೂಕನ ವಧೆ (24-30). ಸಹದೇವನಿಂದ ಶಕುನಿಯ ವಧೆ (31-63).
09027001 ಸಂಜಯ ಉವಾಚ 09027001a ತಸ್ಮಿನ್ ಪ್ರವೃತ್ತೇ ಸಂಗ್ರಾಮೇ ನರವಾಜಿಗಜಕ್ಷಯೇ।
09027001c ಶಕುನಿಃ ಸೌಬಲೋ ರಾಜನ್ಸಹದೇವಂ ಸಮಭ್ಯಯಾತ್।।
ಸಂಜಯನು ಹೇಳಿದನು: “ರಾಜನ್! ನರ-ಕುದುರೆ-ಆನೆಗಳ ನಾಶಯುಕ್ತ ಆ ಸಂಗ್ರಾಮವು ನಡೆಯುತ್ತಿರಲು ಸೌಬಲ ಶಕುನಿಯು ಸಹದೇವನನ್ನು ಎದುರಿಸಿದನು.
09027002a ತತೋಽಸ್ಯಾಪತತಸ್ತೂರ್ಣಂ ಸಹದೇವಃ ಪ್ರತಾಪವಾನ್।
09027002c ಶರೌಘಾನ್ಪ್ರೇಷಯಾಮಾಸ ಪತಂಗಾನಿವ ಶೀಘ್ರಗಾನ್।
09027002e ಉಲೂಕಶ್ಚ ರಣೇ ಭೀಮಂ ವಿವ್ಯಾಧ ದಶಭಿಃ ಶರೈಃ।।
ಕೂಡಲೇ ಪ್ರತಾಪವಾನ್ ಸಹದೇವನು ಪತಂಗಗಳಂತೆ ಶೀಘ್ರ ಶರೌಘಗಳನ್ನು ಅವನ ಮೇಲೆ ಸುರಿಸಿದನು. ರಣದಲ್ಲಿ ಉಲೂಕನು ಹತ್ತು ಶರಗಳಿಂದ ಭೀಮನನ್ನು ಹೊಡೆದನು.
09027003a ಶಕುನಿಸ್ತು ಮಹಾರಾಜ ಭೀಮಂ ವಿದ್ಧ್ವಾ ತ್ರಿಭಿಃ ಶರೈಃ।
09027003c ಸಾಯಕಾನಾಂ ನವತ್ಯಾ ವೈ ಸಹದೇವಮವಾಕಿರತ್।।
ಮಹಾರಾಜ! ಶಕುನಿಯಾದರೋ ಮೂರು ಬಾಣಗಳಿಂದ ಭೀಮನನ್ನು ಹೊಡೆದು ತೊಂಬತ್ತು ಸಾಯಕಗಳಿಂದ ಸಹದೇವನನ್ನು ಮುಚ್ಚಿದನು.
09027004a ತೇ ಶೂರಾಃ ಸಮರೇ ರಾಜನ್ಸಮಾಸಾದ್ಯ ಪರಸ್ಪರಂ।
09027004c ವಿವ್ಯಧುರ್ನಿಶಿತೈರ್ಬಾಣೈಃ ಕಂಕಬರ್ಹಿಣವಾಜಿತೈಃ।।
09027004e ಸ್ವರ್ಣಪುಂಖೈಃ ಶಿಲಾಧೌತೈರಾ ಕರ್ಣಾತ್ಪ್ರಹಿತೈಃ ಶರೈಃ।।
ರಾಜನ್! ಆ ಶೂರರು ಪರಸ್ಪರರನ್ನು ಎದುರಿಸಿ ರಣಹದ್ದುಗಳ ರೆಕ್ಕೆಗಳನ್ನು ಹೊಂದಿದ್ದ ಸುವರ್ಣಪುಂಖಗಳುಳ್ಳ ಮಸೆಗಲ್ಲಿನಿಂದ ಹರಿತಗೊಳಿಸಲ್ಪಟ್ಟ ಮತ್ತು ಕಿವಿಯ ತುದಿಯವರೆಗೂ ಎಳೆಯಲ್ಪಟ್ಟು ಬಿಟ್ಟ ನಿಶಿತ ಬಾಣಗಳಿಂದ ಪರಸ್ಪರರನ್ನು ಹೊಡೆದರು.
09027005a ತೇಷಾಂ ಚಾಪಭುಜೋತ್ಸೃಷ್ಟಾ ಶರವೃಷ್ಟಿರ್ವಿಶಾಂ ಪತೇ।
09027005c ಆಚ್ಚಾದಯದ್ದಿಶಃ ಸರ್ವಾ ಧಾರಾಭಿರಿವ ತೋಯದಃ।।
ವಿಶಾಂಪತೇ! ಮೇಘಗಳ ಜಲಧಾರೆಗಳು ಎಲ್ಲ ದಿಕ್ಕುಗಳನ್ನೂ ಮುಚ್ಚುವಂತೆ ಅವರ ಚಾಪ-ಭುಜಗಳಿಂದ ಶರವೃಷ್ಟಿಯು ಸುರಿಯುತ್ತಿತ್ತು.
09027006a ತತಃ ಕ್ರುದ್ಧೋ ರಣೇ ಭೀಮಃ ಸಹದೇವಶ್ಚ ಭಾರತ।
09027006c ಚೇರತುಃ ಕದನಂ ಸಂಖ್ಯೇ ಕುರ್ವಂತೌ ಸುಮಹಾಬಲೌ।।
ಭಾರತ! ಆಗ ರಣದಲ್ಲಿ ಕ್ರುದ್ಧರಾದ ಭೀಮ-ಸಹದೇವರು ಶತ್ರುಗಳನ್ನು ಸಂಹರಿಸುತ್ತಾ ರಣರಂಗದಲ್ಲಿ ಸಂಚರಿಸುತ್ತಿದ್ದರು.
09027007a ತಾಭ್ಯಾಂ ಶರಶತೈಶ್ಚನ್ನಂ ತದ್ಬಲಂ ತವ ಭಾರತ।
09027007c ಅಂಧಕಾರಮಿವಾಕಾಶಮಭವತ್ತತ್ರ ತತ್ರ ಹ।।
ಭಾರತ! ಅವರಿಬ್ಬರ ನೂರಾರು ಶರಗಳಿಂದ ಮುಚ್ಚಲ್ಪಟ್ಟ ನಿನ್ನ ಸೇನೆಯು ಅಲ್ಲಲ್ಲಿ ಅಂಧಕಾರದಿಂದ ಮುಸುಕಲ್ಪಟ್ಟ ಆಕಾಶದಂತೆ ತೋರುತ್ತಿತ್ತು.
09027008a ಅಶ್ವೈರ್ವಿಪರಿಧಾವದ್ಭಿಃ ಶರಚ್ಚನ್ನೈರ್ವಿಶಾಂ ಪತೇ।
09027008c ತತ್ರ ತತ್ರ ಕೃತೋ ಮಾರ್ಗೋ ವಿಕರ್ಷದ್ಭಿರ್ಹತಾನ್ಬಹೂನ್।।
ವಿಶಾಂಪತೇ! ಬಾಣಗಳಿಂದ ಆಚ್ಛಾದಿತರಾಗಿ ಸತ್ತುಹೋಗಿದ್ದ ಸವಾರರನ್ನು ಎಳೆದುಕೊಂಡು ಹೋಗುತ್ತಿದ್ದ ಅನೇಕ ಕುದುರೆಗಳಿಂದ ಅನೇಕ ಕಡೆಗಳಲ್ಲಿ ಮಾರ್ಗಗಳು ಮುಚ್ಚಿಹೋಗಿದ್ದವು.
09027009a ನಿಹತಾನಾಂ ಹಯಾನಾಂ ಚ ಸಹೈವ ಹಯಯೋಧಿಭಿಃ।
09027009c ವರ್ಮಭಿರ್ವಿನಿಕೃತ್ತೈಶ್ಚ ಪ್ರಾಸೈಶ್ಚಿನ್ನೈಶ್ಚ ಮಾರಿಷ।।
09027009e ಸಂಚನ್ನಾ ಪೃಥಿವೀ ಜಜ್ಞೇ ಕುಸುಮೈಃ ಶಬಲಾ ಇವ।।
ಮಾರಿಷ! ಸತ್ತುಹೋದ ಕುದುರೆಗಳಿಂದಲೂ, ಸತ್ತುಹೋದ ಯೋಧರನ್ನು ಹೊತ್ತಿದ್ದ ಕುದುರೆಗಳಿಂದಲೂ, ಕತ್ತರಿಸಲ್ಪಟ್ಟ ಕವಚಗಳಿಂದಲೂ, ತುಂಡಾದ ಪ್ರಾಸಗಳಿಂದಲೂ ಆಚ್ಛಾಧಿತ ಭೂಮಿಯು ಕುಸುಮಗಳಿಂದ ತುಂಬಿದಂತೆ ತೋರುತ್ತಿತ್ತು.
09027010a ಯೋಧಾಸ್ತತ್ರ ಮಹಾರಾಜ ಸಮಾಸಾದ್ಯ ಪರಸ್ಪರಂ।
09027010c ವ್ಯಚರಂತ ರಣೇ ಕ್ರುದ್ಧಾ ವಿನಿಘ್ನಂತಃ ಪರಸ್ಪರಂ।।
ಮಹಾರಾಜ! ಪರಸ್ಪರರನ್ನು ಎದುರಿಸಿ ಕ್ರುದ್ಧರಾಗಿ ಯೋಧರು ಪರಸ್ಪರರನ್ನು ಸಂಹರಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದರು.
09027011a ಉದ್ವೃತ್ತನಯನೈ ರೋಷಾತ್ಸಂದಷ್ಟೌಷ್ಠಪುಟೈರ್ಮುಖೈಃ।
09027011c ಸಕುಂಡಲೈರ್ಮಹೀ ಚನ್ನಾ ಪದ್ಮಕಿಂಜ್ವಲ್ಕಸಂನಿಭೈಃ।।
ಕಮಲದ ಕೇಸರಗಳಂತೆ ರೋಷದಿಂದ ಮೇಲೆದ್ದಿದ್ದ ಕಣ್ಣುಗಳುಳ್ಳ ಮುಖಗಳಿಂದ ಮತ್ತು ಕುಂಡಲಗಳೊಂದಿಗಿನ ಮುಖಗಳಿಂದ ಆ ರಣಾಂಗಣವು ತುಂಬಿಹೋಗಿತ್ತು.
09027012a ಭುಜೈಶ್ಚಿನ್ನೈರ್ಮಹಾರಾಜ ನಾಗರಾಜಕರೋಪಮೈಃ।
09027012c ಸಾಂಗದೈಃ ಸತನುತ್ರೈಶ್ಚ ಸಾಸಿಪ್ರಾಸಪರಶ್ವಧೈಃ।।
09027013a ಕಬಂಧೈರುತ್ಥಿತೈಶ್ಚಿನ್ನೈರ್ನೃತ್ಯದ್ಭಿಶ್ಚಾಪರೈರ್ಯುಧಿ।
09027013c ಕ್ರವ್ಯಾದಗಣಸಂಕೀರ್ಣಾ ಘೋರಾಭೂತ್ಪೃಥಿವೀ ವಿಭೋ।।
ವಿಭೋ! ಮಹಾರಾಜ! ತುಂಡಾದ ಆನೆಯ ಸೊಂಡಿಲಿನಂತಿರುವ, ಅಂಗದಗಳಿಂದ ಅಲಂಕೃತಗೊಂಡಿದ್ದ, ಕವಚಗಳನ್ನು ತೊಟ್ಟಿದ್ದ, ಖಡ್ಗ- ಪ್ರಾಸ-ಪರಶಾಯುಧಗಳನ್ನು ಹಿಡಿದಿದ್ದ ಭುಜಗಳಿಂದಲೂ, ಛಿನ್ನ-ಭಿನ್ನವಾಗಿ ಮೇಲೆದ್ದು ಕುಣಿದಾಡುತ್ತಿದ್ದ ಕಬಂಧಗಳಿಂದಲೂ, ಹದ್ದುಗಳ ಹಿಂಡಿನಿಂದಲೂ ತುಂಬಿದ್ದ ಆ ರಣಭೂಮಿಯು ಘೋರವಾಗಿತ್ತು.
09027014a ಅಲ್ಪಾವಶಿಷ್ಟೇ ಸೈನ್ಯೇ ತು ಕೌರವೇಯಾನ್ಮಹಾಹವೇ।
09027014c ಪ್ರಹೃಷ್ಟಾಃ ಪಾಂಡವಾ ಭೂತ್ವಾ ನಿನ್ಯಿರೇ ಯಮಸಾದನಂ।।
ಮಹಾಯುದ್ಧದಲ್ಲಿ ಸ್ವಲ್ಪವೇ ಉಳಿದಿದ್ದ ಕೌರವ ಸೇನೆಯನ್ನು ಪಾಂಡವರು ಸಂತೋಷದಿಂದ ಯಮಾಲಯಕ್ಕೆ ಕಳುಹಿಸಿದರು.
09027015a ಏತಸ್ಮಿನ್ನಂತರೇ ಶೂರಃ ಸೌಬಲೇಯಃ ಪ್ರತಾಪವಾನ್।
09027015c ಪ್ರಾಸೇನ ಸಹದೇವಸ್ಯ ಶಿರಸಿ ಪ್ರಾಹರದ್ಭೃಶಂ।।
09027015e ಸ ವಿಹ್ವಲೋ ಮಹಾರಾಜ ರಥೋಪಸ್ಥ ಉಪಾವಿಶತ್।।
ಮಹಾರಾಜ! ಇದರ ಮಧ್ಯೆ ಶೂರ ಪ್ರತಾಪವಾನ್ ಸೌಬಲೇಯನು ಪ್ರಾಸದಿಂದ ಸಹದೇವನ ತಲೆಗೆ ಜೋರಾಗಿ ಹೊಡೆದನು. ಅವನು ವಿಹ್ವಲನಾಗಿ ರಥದಲ್ಲಿಯೇ ಕುಳಿತುಕೊಂಡನು.
09027016a ಸಹದೇವಂ ತಥಾ ದೃಷ್ಟ್ವಾ ಭೀಮಸೇನಃ ಪ್ರತಾಪವಾನ್।
09027016c ಸರ್ವಸೈನ್ಯಾನಿ ಸಂಕ್ರುದ್ಧೋ ವಾರಯಾಮಾಸ ಭಾರತ।।
ಭಾರತ! ಹಾಗಾದ ಸಹದೇವನನ್ನು ನೋಡಿ ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಎಲ್ಲ ಸೇನೆಗಳನ್ನು ತಡೆದನು.
09027017a ನಿರ್ಬಿಭೇದ ಚ ನಾರಾಚೈಃ ಶತಶೋಽಥ ಸಹಸ್ರಶಃ।
09027017c ವಿನಿರ್ಭಿದ್ಯಾಕರೋಚ್ಚೈವ ಸಿಂಹನಾದಮರಿಂದಮ।।
ನೂರಾರು ಸಹಸ್ರಾರು ನಾರಾಚಗಳಿಂದ ಭೇದಿಸಿ, ನಾಶಗೊಳಿಸಿ ಆ ಅರಿಂದಮನು ಸಿಂಹನಾದಗೈದನು.
09027018a ತೇನ ಶಬ್ದೇನ ವಿತ್ರಸ್ತಾಃ ಸರ್ವೇ ಸಹಯವಾರಣಾಃ।
09027018c ಪ್ರಾದ್ರವನ್ಸಹಸಾ ಭೀತಾಃ ಶಕುನೇಶ್ಚ ಪದಾನುಗಾಃ।।
ಆ ಶಬ್ಧದಿಂದ ನಡುಗಿದ ಶಕುನಿಯ ಅನುಯಾಯಿಗಳೆಲ್ಲರೂ ಭೀತರಾಗಿ ಕುದುರೆ-ಆನೆಗಳೊಡನೆ ಬೇಗನೆ ಓಡಿ ಹೋದರು.
09027019a ಪ್ರಭಗ್ನಾನಥ ತಾನ್ದೃಷ್ಟ್ವಾ ರಾಜಾ ದುರ್ಯೋಧನೋಽಬ್ರವೀತ್।
09027019c ನಿವರ್ತಧ್ವಮಧರ್ಮಜ್ಞಾ ಯುಧ್ಯಧ್ವಂ ಕಿಂ ಸೃತೇನ ವಃ।।
ಭಗ್ನರಾಗಿ ಓಡಿಹೋಗುತ್ತಿದ್ದ ಅವರನ್ನು ನೋಡಿ ರಾಜಾ ದುರ್ಯೋಧನನು ಹೇಳಿದನು: “ಅಧರ್ಮಜ್ಞರೇ! ಹಿಂದುರಿಗಿ ಬಂದು ಯುದ್ಧಮಾಡಿರಿ! ಓಡಿ ಹೋಗುವುದರಿಂದ ಏನಾಗಲಿಕ್ಕಿದೆ?
09027020a ಇಹ ಕೀರ್ತಿಂ ಸಮಾಧಾಯ ಪ್ರೇತ್ಯ ಲೋಕಾನ್ಸಮಶ್ನುತೇ।
09027020c ಪ್ರಾಣಾನ್ಜಹಾತಿ ಯೋ ವೀರೋ ಯುಧಿ ಪೃಷ್ಠಮದರ್ಶಯನ್।।
ರಣದಲ್ಲಿ ಬೆನ್ನುತೋರಿಸದೇ ಯುದ್ಧಮಾಡುತ್ತಾ ಪ್ರಾಣಬಿಡುವ ವೀರನು ಇಲ್ಲಿ ಕೀರ್ತಿಯನ್ನೂ ಮರಣದ ನಂತರ ಉತ್ತಮ ಲೋಕಗಳನ್ನೂ ಹೊಂದುತ್ತಾನೆ.”
09027021a ಏವಮುಕ್ತಾಸ್ತು ತೇ ರಾಜ್ಞಾ ಸೌಬಲಸ್ಯ ಪದಾನುಗಾಃ।
09027021c ಪಾಂಡವಾನಭ್ಯವರ್ತಂತ ಮೃತ್ಯುಂ ಕೃತ್ವಾ ನಿವರ್ತನಂ।।
ರಾಜನು ಹೀಗೆ ಹೇಳಲು ಸೌಬಲನ ಪದಾನುಗರು ಮೃತ್ಯುವಿಗೇ ಹಿಂದಿರುಗುವಂತೆ ಪಾಂಡವರ ಮೇಲೆ ಎರಗಿದರು.
09027022a ದ್ರವದ್ಭಿಸ್ತತ್ರ ರಾಜೇಂದ್ರ ಕೃತಃ ಶಬ್ದೋಽತಿದಾರುಣಃ।
09027022c ಕ್ಷುಬ್ಧಸಾಗರಸಂಕಾಶಃ ಕ್ಷುಭಿತಃ ಸರ್ವತೋಽಭವತ್।।
ರಾಜೇಂದ್ರ! ಓಡಿಬಂದು ಎರಗುತ್ತಿದ್ದ ಅವರು ಅತಿ ದಾರುಣ ಶಬ್ಧಮಾಡುತ್ತಿದ್ದರು. ಅಲ್ಲೋಲಕಲ್ಲೋಲಗೊಂಡ ಸಾಗರದಂತೆ ಎಲ್ಲ ಕಡೆ ಕ್ಷೋಭೆಯುಂಟಾಗುತ್ತಿತ್ತು.
09027023a ತಾಂಸ್ತದಾಪತತೋ ದೃಷ್ಟ್ವಾ ಸೌಬಲಸ್ಯ ಪದಾನುಗಾನ್।
09027023c ಪ್ರತ್ಯುದ್ಯಯುರ್ಮಹಾರಾಜ ಪಾಂಡವಾ ವಿಜಯೇ ವೃತಾಃ।।
ಮಹಾರಾಜ! ಸೌಬಲನ ಪದಾನುಗರು ಮೇಲೆ ಬೀಳುತ್ತಿರುವುದನ್ನು ನೋಡಿ ವಿಜಯದಲ್ಲಿ ನಡೆಯುತ್ತಿದ್ದ ಪಾಂಡವರು ಅವರನ್ನು ಎದುರಿಸಿ ಯುದ್ಧಮಾಡಿದರು.
09027024a ಪ್ರತ್ಯಾಶ್ವಸ್ಯ ಚ ದುರ್ಧರ್ಷಃ ಸಹದೇವೋ ವಿಶಾಂ ಪತೇ।
09027024c ಶಕುನಿಂ ದಶಭಿರ್ವಿದ್ಧ್ವಾ ಹಯಾಂಶ್ಚಾಸ್ಯ ತ್ರಿಭಿಃ ಶರೈಃ।।
09027024e ಧನುಶ್ಚಿಚ್ಚೇದ ಚ ಶರೈಃ ಸೌಬಲಸ್ಯ ಹಸನ್ನಿವ।।
ವಿಶಾಂಪತೇ! ಪುನಃ ಚೇತರಿಸಿಕೊಂಡಿದ್ದ ದುರ್ಧರ್ಷ ಸಹದೇವನು ಶಕುನಿಯನ್ನು ಹತ್ತು ಮತ್ತು ಅವನ ಕುದುರೆಗಳನ್ನು ಮೂರು ಶರಗಳಿಂದ ಹೊಡೆದನು. ಹಾಗೂ ನಸುನಗುತ್ತಾ ಶರಗಳಿಂದ ಶಕುನಿಯ ಧನುಸ್ಸನ್ನು ಕತ್ತರಿಸಿದನು.
09027025a ಅಥಾನ್ಯದ್ಧನುರಾದಾಯ ಶಕುನಿರ್ಯುದ್ಧದುರ್ಮದಃ।
09027025c ವಿವ್ಯಾಧ ನಕುಲಂ ಷಷ್ಟ್ಯಾ ಭೀಮಸೇನಂ ಚ ಸಪ್ತಭಿಃ।।
ಆಗ ಯುದ್ಧದುರ್ಮದ ಶಕುನಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಕುಲನನ್ನು ಆರು ಮತ್ತು ಭೀಮಸೇನನನ್ನು ಏಳು ಬಾಣಗಳಿಂದ ಹೊಡೆದನು.
09027026a ಉಲೂಕೋಽಪಿ ಮಹಾರಾಜ ಭೀಮಂ ವಿವ್ಯಾಧ ಸಪ್ತಭಿಃ।
09027026c ಸಹದೇವಂ ಚ ಸಪ್ತತ್ಯಾ ಪರೀಪ್ಸನ್ ಪಿತರಂ ರಣೇ।।
ಮಹಾರಾಜ! ಉಲೂಕನು ಕೂಡ ಏಳು ಬಾಣಗಳಿಂದ ಭೀಮನನ್ನು ಮತ್ತು ಏಳರಿಂದ ಸಹದೇವನನ್ನು ಹೊಡೆದು ರಣದಲ್ಲಿ ತನ್ನ ತಂದೆಗೆ ಸಂತಸವನ್ನಿತ್ತನು.
09027027a ತಂ ಭೀಮಸೇನಃ ಸಮರೇ ವಿವ್ಯಾಧ ನಿಶಿತೈಃ ಶರೈಃ।
09027027c ಶಕುನಿಂ ಚ ಚತುಃಷಷ್ಟ್ಯಾ ಪಾರ್ಶ್ವಸ್ಥಾಂಶ್ಚ ತ್ರಿಭಿಸ್ತ್ರಿಭಿಃ।।
ಸಮರದಲ್ಲಿ ಭೀಮಸೇನನು ಶಕುನಿಯನ್ನು ಅರವತ್ನಾಲ್ಕು ನಿಶಿತ ಶರಗಳಿಂದ ಮತ್ತು ಅವನ ಪಾರ್ಶ್ವಸಾರಥಿಗಳನ್ನು ಮೂರು ಮೂರು ಬಾಣಗಳಿಂದ ಹೊಡೆದನು.
09027028a ತೇ ಹನ್ಯಮಾನಾ ಭೀಮೇನ ನಾರಾಚೈಸ್ತೈಲಪಾಯಿತೈಃ।
09027028c ಸಹದೇವಂ ರಣೇ ಕ್ರುದ್ಧಾಶ್ಚಾದಯನ್ ಶರವೃಷ್ಟಿಭಿಃ।।
09027028e ಪರ್ವತಂ ವಾರಿಧಾರಾಭಿಃ ಸವಿದ್ಯುತ ಇವಾಂಬುದಾಃ।।
ಎಣ್ಣೆಯಿಂದ ತೋಯಿಸಿದ ಭೀಮನ ನಾರಾಚಗಳಿಂದ ಹೊಡೆಯಲ್ಪಟ್ಟ ಅವರು ಕ್ರುದ್ಧರಾಗಿ ಮಿಂಚಿನಿಂದ ಕೂಡಿದ ಮೋಡಗಳು ಮಳೆಯಿಂದ ಪರ್ವತವನ್ನು ಹೇಗೋ ಹಾಗೆ ರಣದಲ್ಲಿ ಸಹದೇವನನ್ನು ಶರವೃಷ್ಟಿಗಳಿಂದ ಮುಚ್ಚಿಬಿಟ್ಟರು.
09027029a ತತೋಽಸ್ಯಾಪತತಃ ಶೂರಃ ಸಹದೇವಃ ಪ್ರತಾಪವಾನ್।
09027029c ಉಲೂಕಸ್ಯ ಮಹಾರಾಜ ಭಲ್ಲೇನಾಪಾಹರಚ್ಚಿರಃ।।
ಮಹಾರಾಜ! ಆಗ ಪ್ರತಾಪವಾನ್ ಶೂರ ಸಹದೇವನು ತನ್ನ ಮೇಲೆ ಆಕ್ರಮಣಿಸುತ್ತಿದ್ದ ಉಲೂಕನ ಶಿರವನ್ನು ಭಲ್ಲದಿಂದ ತುಂಡರಿಸಿದನು.
09027030a ಸ ಜಗಾಮ ರಥಾದ್ಭೂಮಿಂ ಸಹದೇವೇನ ಪಾತಿತಃ।
09027030c ರುಧಿರಾಪ್ಲುತಸರ್ವಾಂಗೋ ನಂದಯನ್ಪಾಂಡವಾನ್ಯುಧಿ।।
ಯುದ್ಧದಲ್ಲಿ ಪಾಂಡವರಿಗೆ ಸಂತಸವನ್ನು ನೀಡುತ್ತಾ ಸಹದೇವನಿಂದ ಕೆಳಗುರುಳಿಸಲ್ಪಟ್ಟ ಉಲೂಕನು ಸರ್ವಾಂಗಗಳೂ ರಕ್ತದಿಂದ ತೋಯಿಸಲ್ಪಟ್ಟು ರಥದಿಂದ ನೆಲಕ್ಕುರುಳಿ ಬಿದ್ದನು.
09027031a ಪುತ್ರಂ ತು ನಿಹತಂ ದೃಷ್ಟ್ವಾ ಶಕುನಿಸ್ತತ್ರ ಭಾರತ।
09027031c ಸಾಶ್ರುಕಂಠೋ ವಿನಿಃಶ್ವಸ್ಯ ಕ್ಷತ್ತುರ್ವಾಕ್ಯಮನುಸ್ಮರನ್।।
ಭಾರತ! ಪುತ್ರನು ಹತನಾದುದನ್ನು ನೋಡಿ ಶಕುನಿಯು ಅಲ್ಲಿ ಕಣ್ಣೀರುತುಂಬಿದ ಕಂಠವುಳ್ಳವನಾಗಿ, ನಿಟ್ಟುಸಿರುಬಿಡುತ್ತಾ ಕ್ಷತ್ತ ವಿದುರನ ಮಾತನ್ನು ಸ್ಮರಿಸಿಕೊಂಡನು.
09027032a ಚಿಂತಯಿತ್ವಾ ಮುಹೂರ್ತಂ ಸ ಬಾಷ್ಪಪೂರ್ಣೇಕ್ಷಣಃ ಶ್ವಸನ್।
09027032c ಸಹದೇವಂ ಸಮಾಸಾದ್ಯ ತ್ರಿಭಿರ್ವಿವ್ಯಾಧ ಸಾಯಕೈಃ।।
ಕಣ್ಣುಗಳು ಕಣ್ಣೀರಿನಿಂದ ತುಂಬಿ, ನಿಟ್ಟುಸಿರುಬಿಡುತ್ತಾ ಅವನು ಮುಹೂರ್ತಕಾಲ ಯೋಚಿಸಿದನು. ನಂತರ ಸಹದೇವನ ಬಳಿಸಾರಿ ಅವನನ್ನು ಮೂರು ಸಾಯಕಗಳಿಂದ ಹೊಡೆದನು.
09027033a ತಾನಪಾಸ್ಯ ಶರಾನ್ಮುಕ್ತಾನ್ ಶರಸಂಘೈಃ ಪ್ರತಾಪವಾನ್।
09027033c ಸಹದೇವೋ ಮಹಾರಾಜ ಧನುಶ್ಚಿಚ್ಚೇದ ಸಂಯುಗೇ।।
ಮಹಾರಾಜ! ಪ್ರತಾಪವಾನ್ ಸಹದೇವನು ಅವನು ಪ್ರಯೋಗಿಸಿದ ಬಾಣಗಳನ್ನು ಶರಸಂಘಗಳಿಂದ ನಿರಸನಗೊಳಿಸಿ ಸಂಯುಗದಲ್ಲಿ ಅವನ ಧನುಸ್ಸನ್ನು ತುಂಡರಿಸಿದನು.
09027034a ಚಿನ್ನೇ ಧನುಷಿ ರಾಜೇಂದ್ರ ಶಕುನಿಃ ಸೌಬಲಸ್ತದಾ।
09027034c ಪ್ರಗೃಹ್ಯ ವಿಪುಲಂ ಖಡ್ಗಂ ಸಹದೇವಾಯ ಪ್ರಾಹಿಣೋತ್।।
ರಾಜೇಂದ್ರ! ಧನುಸ್ಸು ತುಂಡಾಗಲು ಸೌಬಲ ಶಕುನಿಯು ಭಾರವಾದ ಖಡ್ಗವನ್ನು ಹಿಡಿದು ಸಹದೇವನ ಮೇಲೆ ಪ್ರಯೋಗಿಸಿದನು.
09027035a ತಮಾಪತಂತಂ ಸಹಸಾ ಘೋರರೂಪಂ ವಿಶಾಂ ಪತೇ।
09027035c ದ್ವಿಧಾ ಚಿಚ್ಚೇದ ಸಮರೇ ಸೌಬಲಸ್ಯ ಹಸನ್ನಿವ।।
ವಿಶಾಂಪತೇ! ಸಮರದಲ್ಲಿ ರಭಸದಿಂದ ಮೇಲೆ ಬೀಳುತ್ತಿದ್ದ ಸೌಬಲನ ಘೋರರೂಪೀ ಖಡ್ಗವನ್ನು ಅವನು ನಸುನಗುತ್ತಾ ಎರಡಾಗಿ ಕತ್ತರಿಸಿದನು.
09027036a ಅಸಿಂ ದೃಷ್ಟ್ವಾ ದ್ವಿಧಾ ಚಿನ್ನಂ ಪ್ರಗೃಹ್ಯ ಮಹತೀಂ ಗದಾಂ।
09027036c ಪ್ರಾಹಿಣೋತ್ಸಹದೇವಾಯ ಸಾ ಮೋಘಾ ನ್ಯಪತದ್ಭುವಿ।।
ಖಡ್ಗವು ಎರಡಾಗಿ ತುಂಡಾದುದನ್ನು ನೋಡಿ ಅವನು ಭಾರ ಗದೆಯೊಂದನ್ನು ಹಿಡಿದು ಸಹದೇವನ ಮೇಲೆ ಪ್ರಯೋಗಿಸಲು ಅದು ನಿಷ್ಪಲವಾಗಿ ನೆಲದ ಮೇಲೆ ಬಿದ್ದಿತು.
09027037a ತತಃ ಶಕ್ತಿಂ ಮಹಾಘೋರಾಂ ಕಾಲರಾತ್ರಿಮಿವೋದ್ಯತಾಂ।
09027037c ಪ್ರೇಷಯಾಮಾಸ ಸಂಕ್ರುದ್ಧಃ ಪಾಂಡವಂ ಪ್ರತಿ ಸೌಬಲಃ।।
ಆಗ ಸಂಕ್ರುದ್ಧ ಸೌಬಲನು ಪಾಂಡವನ ಮೇಲೆ ಮೇಲೆದ್ದುಬಂದ ಕಾಲರಾತ್ರಿಯಂತೆ ಇದ್ದ ಮಹಾಘೋರ ಶಕ್ತಿಯನ್ನು ಪ್ರಯೋಗಿಸಿದನು.
09027038a ತಾಮಾಪತಂತೀಂ ಸಹಸಾ ಶರೈಃ ಕಾಂಚನಭೂಷಣೈಃ।
09027038c ತ್ರಿಧಾ ಚಿಚ್ಚೇದ ಸಮರೇ ಸಹದೇವೋ ಹಸನ್ನಿವ।।
ರಭಸದಿಂದ ಬರುತ್ತಿದ್ದ ಅದನ್ನು ಸಮರದಲ್ಲಿ ಸಹದೇವನು ನಸುನಗುತ್ತಾ ಕಾಂಚನಭೂಷಣ ಶರಗಳಿಂದ ಮೂರಾಗಿ ಕತ್ತರಿಸಿದನು.
09027039a ಸಾ ಪಪಾತ ತ್ರಿಧಾ ಚಿನ್ನಾ ಭೂಮೌ ಕನಕಭೂಷಣಾ।
09027039c ಶೀರ್ಯಮಾಣಾ ಯಥಾ ದೀಪ್ತಾ ಗಗನಾದ್ವೈ ಶತಹ್ರದಾ।।
ಉರಿಯುತ್ತಿರುವ ಮಿಂಚು ಗಗನವನ್ನು ಸೀಳಿ ಬರುವಂತೆ ಆ ಕನಕಭೂಷಣ ಶಕ್ತಿಯು ಮೂರು ಭಾಗಗಳಾಗಿ ಕೆಳಗೆ ಬಿದ್ದಿತು.
09027040a ಶಕ್ತಿಂ ವಿನಿಹತಾಂ ದೃಷ್ಟ್ವಾ ಸೌಬಲಂ ಚ ಭಯಾರ್ದಿತಂ।
09027040c ದುದ್ರುವುಸ್ತಾವಕಾಃ ಸರ್ವೇ ಭಯೇ ಜಾತೇ ಸಸೌಬಲಾಃ।।
ಶಕ್ತಿಯು ನಾಶವಾದುದನ್ನು ಮತ್ತು ಭಯಾರ್ದಿತ ಸೌಬಲನನ್ನು ನೋಡಿ ನಿನ್ನಕಡೆಯವರೆಲ್ಲರೂ ಭಯಪಟ್ಟು, ಶಕುನಿಯ ಸೇನೆಯೊಂದಿಗೆ ಪಲಾಯನಗೈದರು.
09027041a ಅಥೋತ್ಕ್ರುಷ್ಟಂ ಮಹದ್ಧ್ಯಾಸೀಪಾಂಡವೈರ್ಜಿತಕಾಶಿಭಿಃ।
09027041c ಧಾರ್ತರಾಷ್ಟ್ರಾಸ್ತತಃ ಸರ್ವೇ ಪ್ರಾಯಶೋ ವಿಮುಖಾಭವನ್।।
ಆಗ ವಿಜಯೋಲ್ಲಾಸಿ ಪಾಂಡವರ ಕೂಗು ಜೋರಾಗಿದ್ದಿತು. ದುರ್ಯೋಧನನ ಕಡೆಯ ಪ್ರಾಯಶಃ ಎಲ್ಲರೂ ವಿಮುಖರಾಗಿದ್ದರು.
09027042a ತಾನ್ವೈ ವಿಮನಸೋ ದೃಷ್ಟ್ವಾ ಮಾದ್ರೀಪುತ್ರಃ ಪ್ರತಾಪವಾನ್।
09027042c ಶರೈರನೇಕಸಾಹಸ್ರೈರ್ವಾರಯಾಮಾಸ ಸಂಯುಗೇ।।
ಸಂಯುಗದಲ್ಲಿ ಅವರು ವಿಮನಸ್ಕರಾದುದನ್ನು ನೋಡಿ ಪ್ರತಾಪವಾನ್ ಮಾದ್ರೀಪುತ್ರನು ಅನೇಕ ಸಹಸ್ರ ಶರಗಳಿಂದ ಅವರನ್ನು ತಡೆದು ನಿಲ್ಲಿಸಿದನು.
09027043a ತತೋ ಗಾಂಧಾರಕೈರ್ಗುಪ್ತಂ ಪೃಷ್ಠೈರಶ್ವೈರ್ಜಯೇ ಧೃತಂ।
09027043c ಆಸಸಾದ ರಣೇ ಯಾಂತಂ ಸಹದೇವೋಽಥ ಸೌಬಲಂ।।
ಅನಂತರ ಗಾಂಧಾರರ ಅಶ್ವಸೇನೆಯಿಂದ ರಕ್ಷಿಸಲ್ಪಟ್ಟು ರಣದಲ್ಲಿ ಎದುರಾಗಿ ಬಂದ ಜಯದಲ್ಲಿ ದೃಢನಾಗಿದ್ದ ಸೌಬಲನನ್ನು ಸಹದೇವನು ಆಕ್ರಮಣಿಸಿದನು.
09027044a ಸ್ವಮಂಶಮವಶಿಷ್ಟಂ ಸ ಸಂಸ್ಮೃತ್ಯ ಶಕುನಿಂ ನೃಪ।
09027044c ರಥೇನ ಕಾಂಚನಾಂಗೇನ ಸಹದೇವಃ ಸಮಭ್ಯಯಾತ್।।
09027044e ಅಧಿಜ್ಯಂ ಬಲವತ್ಕೃತ್ವಾ ವ್ಯಾಕ್ಷಿಪನ್ಸುಮಹದ್ಧನುಃ।।
ನೃಪ! ಅಳಿದುಳಿದಿರುವ ಶಕುನಿಯು ತನ್ನ ಪಾಲಿಗೆ ಸೇರಿದವನೆಂದು ನೆನಪಿಸಿಕೊಂಡು ಸಹದೇವನು ಕಾಂಚನ ರಥದ ಮೇಲೆ ಕುಳಿತು ಧನುಸ್ಸಿಗೆ ಶಿಂಜನಿಯನ್ನು ಬಲವಾಗಿ ಬಿಗಿದು ಕಟ್ಟಿ, ಸೆಳೆದು ಟೇಂಕರಿಸಿ ಅವನನ್ನು ಆಕ್ರಮಣಿಸಿದನು.
09027045a ಸ ಸೌಬಲಮಭಿದ್ರುತ್ಯ ಗೃಧ್ರಪತ್ರೈಃ ಶಿಲಾಶಿತೈಃ।
09027045c ಭೃಶಮಭ್ಯಹನತ್ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ।।
ಅವನು ಕ್ರುದ್ಧನಾಗಿ ಶಿಲಾಶಿತ ಹದ್ದಿನ ಗರಿಗಳ ಬಾಣಗಳಿಂದ ಸೌಬಲನನ್ನು ಅಂಕುಶದಿಂದ ಮಹಾಗಜವನ್ನು ತಿವಿಯುವಂತೆ ಹೊಡೆದು ನೋಯಿಸಿದನು.
09027046a ಉವಾಚ ಚೈನಂ ಮೇಧಾವೀ ನಿಗೃಹ್ಯ ಸ್ಮಾರಯನ್ನಿವ।
09027046c ಕ್ಷತ್ರಧರ್ಮೇ ಸ್ಥಿತೋ ಭೂತ್ವಾ ಯುಧ್ಯಸ್ವ ಪುರುಷೋ ಭವ।।
ಮೇಧಾವೀ ಸಹದೇವನು ಅವನಿಗೆ ಹಿಂದಿನದನ್ನು ಸ್ಮರಿಸಿಕೊಡುವಂತೆ ಹೀಗೆ ಹೇಳಿದನು: “ಕ್ಷತ್ರಧರ್ಮದಲ್ಲಿ ಸ್ಥಿರನಾಗಿದ್ದುಕೊಂಡು ಯುದ್ಧಮಾಡಿ ಪುರುಷನಾಗು!
09027047a ಯತ್ತದಾ ಹೃಷ್ಯಸೇ ಮೂಢ ಗ್ಲಹನ್ನಕ್ಷೈಃ ಸಭಾತಲೇ।
09027047c ಫಲಮದ್ಯ ಪ್ರಪದ್ಯಸ್ವ ಕರ್ಮಣಸ್ತಸ್ಯ ದುರ್ಮತೇ।।
ದುರ್ಮತೇ! ಮೂಢ! ಸಭಾತಲದಲ್ಲಿ ದಾಳಗಳನ್ನೆಸೆದು ಹೇಗೆ ನಗುತ್ತಿದ್ದೆಯೋ ಆ ಪಾಪಕರ್ಮದ ಫಲವೇನೆನ್ನುವುದನ್ನು ಈಗ ನೋಡು!
09027048a ನಿಹತಾಸ್ತೇ ದುರಾತ್ಮಾನೋ ಯೇಽಸ್ಮಾನವಹಸನ್ಪುರಾ।
09027048c ದುರ್ಯೋಧನಃ ಕುಲಾಂಗಾರಃ ಶಿಷ್ಟಸ್ತ್ವಂ ತಸ್ಯ ಮಾತುಲಃ।।
ಹಿಂದೆ ನಮ್ಮನ್ನು ನೋಡಿ ನಗುತ್ತಿದ್ದ ದುರಾತ್ಮರು ಹತರಾದರು. ಕುಲಕ್ಕೆ ಅಗ್ನಿಪ್ರಾಯ ದುರ್ಯೋಧನ ಮತ್ತು ಅವನ ಮಾವನಾದ ನೀನು ಉಳಿದುಕೊಂಡಿರುವಿರಿ.
09027049a ಅದ್ಯ ತೇ ವಿಹನಿಷ್ಯಾಮಿ ಕ್ಷುರೇಣೋನ್ಮಥಿತಂ ಶಿರಃ।
09027049c ವೃಕ್ಷಾತ್ಫಲಮಿವೋದ್ಧೃತ್ಯ ಲಗುಡೇನ ಪ್ರಮಾಥಿನಾ।।
ದೊಣ್ಣೆಯನ್ನು ಎಸೆದು ಮರದಿಂದ ಹಣ್ಣನ್ನು ಕೆಡಹುವಂತೆ ನಾನು ಇಂದು ಕ್ಷುರದಿಂದ ನಿನ್ನ ತಲೆಯನ್ನು ಕತ್ತರಿಸಿ ಕೆಡುಹಿ ಸಂಹರಿಸುತ್ತೇನೆ.”
09027050a ಏವಮುಕ್ತ್ವಾ ಮಹಾರಾಜ ಸಹದೇವೋ ಮಹಾಬಲಃ।
09027050c ಸಂಕ್ರುದ್ಧೋ ನರಶಾರ್ದೂಲೋ ವೇಗೇನಾಭಿಜಗಾಮ ಹ।।
ಮಹಾರಾಜ! ಹೀಗೆ ಹೇಳಿ ಸಂಕ್ರುದ್ಧನಾದ ಮಹಾಬಲ ನರಶಾರ್ದೂಲ ಸಹದೇವನು ವೇಗದಿಂದ ಅವನನ್ನು ಆಕ್ರಮಣಿಸಿದನು.
09027051a ಅಭಿಗಮ್ಯ ತು ದುರ್ಧರ್ಷಃ ಸಹದೇವೋ ಯುಧಾಂ ಪತಿಃ।
09027051c ವಿಕೃಷ್ಯ ಬಲವಚ್ಚಾಪಂ ಕ್ರೋಧೇನ ಪ್ರಹಸನ್ನಿವ।।
ಯುಧಾಂಪತಿ ದುರ್ಧರ್ಷ ಸಹದೇವನು ಅವನ ಬಳಿಸಾರಿ ಕ್ರೋಧದಿಂದ ಗಹಗಹಿಸಿ ನಗುತ್ತಿರುವನಂತೆ ಬಲವತ್ತಾಗಿ ಬಿಲ್ಲನ್ನು ಸೆಳೆದನು.
09027052a ಶಕುನಿಂ ದಶಭಿರ್ವಿದ್ಧ್ವಾ ಚತುರ್ಭಿಶ್ಚಾಸ್ಯ ವಾಜಿನಃ।
09027052c ಚತ್ರಂ ಧ್ವಜಂ ಧನುಶ್ಚಾಸ್ಯ ಚಿತ್ತ್ವಾ ಸಿಂಹ ಇವಾನದತ್।।
ಹತ್ತು ಬಾಣಗಳಿಂದ ಶಕುನಿಯನ್ನೂ, ನಾಲ್ಕರಿಂದ ಅವನ ಕುದುರೆ-ಚತ್ರ-ಧ್ವಜ-ಧನುಸ್ಸುಗಳನ್ನೂ ಕತ್ತರಿಸಿ ಸಿಂಹದಂತೆ ಗರ್ಜಿಸಿದನು.
09027053a ಚಿನ್ನಧ್ವಜಧನುಶ್ಚತ್ರಃ ಸಹದೇವೇನ ಸೌಬಲಃ।
09027053c ತತೋ ವಿದ್ಧಶ್ಚ ಬಹುಭಿಃ ಸರ್ವಮರ್ಮಸು ಸಾಯಕೈಃ।।
ಸಹದೇವನು ಧ್ವಜ-ಧನುಸ್ಸು-ಚತ್ರಗಳನ್ನು ತುಂಡರಿಸಲು ಸೌಬಲನು ಅನೇಕ ಸಾಯಕಗಳಿಂದ ಅವನ ಸರ್ವಮರ್ಮಗಳಿಗೆ ಹೊಡೆದನು.
09027054a ತತೋ ಭೂಯೋ ಮಹಾರಾಜ ಸಹದೇವಃ ಪ್ರತಾಪವಾನ್।
09027054c ಶಕುನೇಃ ಪ್ರೇಷಯಾಮಾಸ ಶರವೃಷ್ಟಿಂ ದುರಾಸದಾಂ।।
ಮಹಾರಾಜ! ಅನಂತರ ಪ್ರತಾಪವಾನ್ ಸಹದೇವನು ಇನ್ನೊಮ್ಮೆ ದುರಾಸದ ಶರವೃಷ್ಟಿಯನ್ನು ಶಕುನಿಯ ಮೇಲೆ ಪ್ರಹರಿಸಿದನು.
09027055a ತತಸ್ತು ಕ್ರುದ್ಧಃ ಸುಬಲಸ್ಯ ಪುತ್ರೋ ಮಾದ್ರೀಸುತಂ ಸಹದೇವಂ ವಿಮರ್ದೇ।
09027055c ಪ್ರಾಸೇನ ಜಾಂಬೂನದಭೂಷಣೇನ ಜಿಘಾಂಸುರೇಕೋಽಭಿಪಪಾತ ಶೀಘ್ರಂ।।
ಆಗ ಕ್ರುದ್ಧನಾದ ಸುಬಲನ ಪುತ್ರನು ಏಕಾಕಿಯಾಗಿ ಮಾದ್ರೀಪುತ್ರ ಸಹದೇವನನ್ನು ಸಂಹರಿಸಲು ಶೀಘ್ರವಾಗಿ ಸುವರ್ಣಭೂಷಿತ ಪ್ರಾಸದಿಂದ ಅವನ ಮೇಲೆ ಎರಗಿದನು.
09027056a ಮಾದ್ರೀಸುತಸ್ತಸ್ಯ ಸಮುದ್ಯತಂ ತಂ ಪ್ರಾಸಂ ಸುವೃತ್ತೌ ಚ ಭುಜೌ ರಣಾಗ್ರೇ।
09027056c ಭಲ್ಲೈಸ್ತ್ರಿಭಿರ್ಯುಗಪತ್ಸಂಚಕರ್ತ ನನಾದ ಚೋಚ್ಚೈಸ್ತರಸಾಜಿಮಧ್ಯೇ।।
ಆಗ ಮಾದ್ರೀಸುತನು ಒಡನೆಯೇ ರಣಾಗ್ರದಲ್ಲಿ ಪ್ರಾಸವನ್ನು ಮೇಲೆತ್ತಿ ಹಿಡಿದಿದ್ದ ಅವನ ದುಂಡಾದ ಭುಜಗಳೆರಡನ್ನೂ ಭಲ್ಲದಿಂದ ಒಂದೇ ಬಾರಿಗೆ ಕತ್ತರಿಸಿ ಉಚ್ಛ ಸ್ವರದಲ್ಲಿ ಗರ್ಜಿಸಿದನು.
09027057a ತಸ್ಯಾಶುಕಾರೀ ಸುಸಮಾಹಿತೇನ ಸುವರ್ಣಪುಂಖೇನ ದೃಢಾಯಸೇನ।
09027057c ಭಲ್ಲೇನ ಸರ್ವಾವರಣಾತಿಗೇನ ಶಿರಃ ಶರೀರಾತ್ಪ್ರಮಮಾಥ ಭೂಯಃ।।
ಆಗ ಶೀಘ್ರವಾಗಿ ಕೆಲಸಮಾಡಿ ಮುಗಿಸುವ ಸಹದೇವನು ಸಮಾಹಿತನಾಗಿ ಸುವರ್ಣಪುಂಖಗಳುಳ್ಳ ಸರ್ವ ಆವರಣಗಳನ್ನೂ ಅತಿಕ್ರಮಿಸಿ ಹೋಗಬಲ್ಲ ದೃಢವಾದ ಉಕ್ಕಿನ ಭಲ್ಲದಿಂದ ಶಕುನಿಯ ಶಿರವನ್ನು ಶರೀರದಿಂದ ಕೆಳಕ್ಕೆ ಕೆಡಹಿದನು.
09027058a ಶರೇಣ ಕಾರ್ತಸ್ವರಭೂಷಿತೇನ ದಿವಾಕರಾಭೇನ ಸುಸಂಶಿತೇನ।
09027058c ಹೃತೋತ್ತಮಾಂಗೋ ಯುಧಿ ಪಾಂಡವೇನ ಪಪಾತ ಭೂಮೌ ಸುಬಲಸ್ಯ ಪುತ್ರಃ।।
ಚೆನ್ನಾಗಿ ಪ್ರಯೋಗಿಸಲ್ಪಟ್ಟ ಪಾಂಡವನ ಆ ಸುವರ್ಣಭೂಷಿತ ದಿವಾಕರನ ಪ್ರಭೆಯುಳ್ಳ ಶರದಿಂದ ಶಿರವನ್ನು ಕಳೆದುಕೊಂಡ ಸುಬಲನ ಪುತ್ರನು ರಣರಂಗದ ಮೇಲೆ ಬಿದ್ದನು.
09027059a ಸ ತಚ್ಚಿರೋ ವೇಗವತಾ ಶರೇಣ ಸುವರ್ಣಪುಂಖೇನ ಶಿಲಾಶಿತೇನ।
09027059c ಪ್ರಾವೇರಯತ್ಕುಪಿತಃ ಪಾಂಡುಪುತ್ರೋ ಯತ್ತತ್ಕುರೂಣಾಮನಯಸ್ಯ ಮೂಲಂ।।
ಹೀಗೆ ಕುಪಿತ ಪಾಂಡುಪುತ್ರನು ಕುರುಗಳ ಅನ್ಯಾಯಕ್ಕೆ ಮೂಲನಾದ ಅವನ ಶಿರವನ್ನು ವೇಗವಾದ ಸುವರ್ಣಪುಂಖಗಳುಳ್ಳ ಶಿಲಾಶಿತ ಶರದಿಂದ ಕತ್ತರಿಸಿದನು.
09027060a ಹೃತೋತ್ತಮಾಂಗಂ ಶಕುನಿಂ ಸಮೀಕ್ಷ್ಯ ಭೂಮೌ ಶಯಾನಂ ರುಧಿರಾರ್ದ್ರಗಾತ್ರಂ।
09027060c ಯೋಧಾಸ್ತ್ವದೀಯಾ ಭಯನಷ್ಟಸತ್ತ್ವಾ ದಿಶಃ ಪ್ರಜಗ್ಮುಃ ಪ್ರಗೃಹೀತಶಸ್ತ್ರಾಃ।।
ಶಿರವನ್ನು ಕಳೆದುಕೊಂಡು ಅಂಗಾಂಗಗಳು ರಕ್ತದಿಂದ ತೋಯ್ದುಹೋಗಿ ನೆಲದಮೇಲೆ ಮಲಗಿದ ಶಕುನಿಯನ್ನು ನೋಡಿ ನಿನ್ನ ಕಡೆಯ ಯೋಧರು ಭಯದಿಂದ ಸತ್ತ್ವವನ್ನೇ ಕಳೆದುಕೊಂಡು ಶಸ್ತ್ರಪಾಣಿಗಳಾಗಿಯೇ ದಿಕ್ಕುಪಾಲರಾದರು.
09027061a ವಿಪ್ರದ್ರುತಾಃ ಶುಷ್ಕಮುಖಾ ವಿಸಂಜ್ಞಾ ಗಾಂಡೀವಘೋಷೇಣ ಸಮಾಹತಾಶ್ಚ।
09027061c ಭಯಾರ್ದಿತಾ ಭಗ್ನರಥಾಶ್ವನಾಗಾಃ ಪದಾತಯಶ್ಚೈವ ಸಧಾರ್ತರಾಷ್ಟ್ರಾಃ।।
ಮುಖವೊಣಗಿ, ಸಂಜ್ಞೆಗಳನ್ನು ಕಳೆದುಕೊಂಡಿದ್ದ, ಗಾಂಡೀವಘೋಷದಿಂದ ಮೃತಪ್ರಾಯರಾದವರಂತೆ ಭಯಾರ್ದಿತರಾಗಿದ್ದ, ರಥ-ಅಶ್ವ-ಗಜಗಳನ್ನು ಕಳೆದುಕೊಂಡಿದ್ದ ಅವರು ಧಾರ್ತರಾಷ್ಟ್ರನೊಂದಿಗೆ ಪದಾತಿಗಳಾಗಿಯೇ ಓಡಿ ಹೋಗುತ್ತಿದ್ದರು.
09027062a ತತೋ ರಥಾಚ್ಚಕುನಿಂ ಪಾತಯಿತ್ವಾ ಮುದಾನ್ವಿತಾ ಭಾರತ ಪಾಂಡವೇಯಾಃ।
09027062c ಶಂಖಾನ್ಪ್ರದಧ್ಮುಃ ಸಮರೇ ಪ್ರಹೃಷ್ಟಾಃ ಸಕೇಶವಾಃ ಸೈನಿಕಾನ್ ಹರ್ಷಯಂತಃ।।
ಭಾರತ! ಹಾಗೆ ರಥದಿಂದ ಶಕುನಿಯನ್ನು ಕೆಳಗುರುಳಿಸಿ ಮುದಾನ್ವಿತ ಪಾಂಡವೇಯರು ಕೇಶವ ಮತ್ತು ಸೈನಿಕರೊಂದಿಗೆ ಪ್ರಹೃಷ್ಟರಾಗಿ ಶಂಖಗಳನ್ನೂದಿ ಹರ್ಷಿತರಾದರು.
09027063a ತಂ ಚಾಪಿ ಸರ್ವೇ ಪ್ರತಿಪೂಜಯಂತೋ ಹೃಷ್ಟಾ ಬ್ರುವಾಣಾಃ ಸಹದೇವಮಾಜೌ।
09027063c ದಿಷ್ಟ್ಯಾ ಹತೋ ನೈಕೃತಿಕೋ ದುರಾತ್ಮಾ ಸಹಾತ್ಮಜೋ ವೀರ ರಣೇ ತ್ವಯೇತಿ।।
ಅವರೆಲ್ಲರೂ ಸಹದೇವನನ್ನು ಪ್ರಶಂಸಿಸುತ್ತಾ ಹೃಷ್ಟರಾಗಿ “ವೀರ! ಒಳ್ಳೆಯದಾಯಿತು! ನೀನು ವಂಚಕ ದುರಾತ್ಮ ಶಕುನಿಯನ್ನು ಅವನ ಪುತ್ರನೊಂದಿಗೆ ರಣದಲ್ಲಿ ಸಂಹರಿಸಿದೆ!” ಎಂದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಶಕುನ್ಯುಲೂಕವಧೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಶಕುನ್ಯುಲೂಕವಧ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.