026 ಸುಶರ್ಮವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 26

ಸಾರ

ಕೃಷ್ಣಾರ್ಜುನರ ಸಂವಾದ (1-25). ಅರ್ಜುನನು ಸತ್ಯಕರ್ಮ, ಸತ್ಯೇಷು ಮತ್ತು ಸುಶರ್ಮ ಮತ್ತು ಸುಶರ್ಮನ 49 ಮಕ್ಕಳನ್ನು ವಧಿಸಿದುದು (30-46). ಭೀಮಸೇನನಿಂದ ಧೃತರಾಷ್ಟ್ರನ ಮಗ ಸುದರ್ಶನನ ವಧೆ (47-48). ಸಂಕುಲಯುದ್ಧ (49-54).

09026001 ಸಂಜಯ ಉವಾಚ 09026001a ದುರ್ಯೋಧನೋ ಮಹಾರಾಜ ಸುದರ್ಶಶ್ಚಾಪಿ ತೇ ಸುತಃ।
09026001c ಹತಶೇಷೌ ತದಾ ಸಂಖ್ಯೇ ವಾಜಿಮಧ್ಯೇ ವ್ಯವಸ್ಥಿತೌ।।

ಸಂಜಯನು ಹೇಳಿದನು: “ಮಹಾರಾಜ! ಆಗ ಯುದ್ಧದ ಸೇನಾಮಧ್ಯದಲ್ಲಿ ನಿನ್ನ ಮಕ್ಕಳು ದುರ್ಯೋಧನ ಮತ್ತು ಸುದರ್ಶನ ಇವರಿಬ್ಬರೇ ಹತರಾಗದೇ ಉಳಿದಿದ್ದರು.

09026002a ತತೋ ದುರ್ಯೋಧನಂ ದೃಷ್ಟ್ವಾ ವಾಜಿಮಧ್ಯೇ ವ್ಯವಸ್ಥಿತಂ।
09026002c ಉವಾಚ ದೇವಕೀಪುತ್ರಃ ಕುಂತೀಪುತ್ರಂ ಧನಂಜಯಂ।।

ಆಗ ಸೇನಾಮಧ್ಯದಲ್ಲಿ ವ್ಯವಸ್ಥಿತನಾಗಿದ್ದ ದುರ್ಯೋಧನನನ್ನು ನೋಡಿ ದೇವಕೀಪುತ್ರನು ಕುಂತೀಪುತ್ರ ಧನಂಜಯನಿಗೆ ಹೇಳಿದನು:

09026003a ಶತ್ರವೋ ಹತಭೂಯಿಷ್ಠಾ ಜ್ಞಾತಯಃ ಪರಿಪಾಲಿತಾಃ।
09026003c ಗೃಹೀತ್ವಾ ಸಂಜಯಂ ಚಾಸೌ ನಿವೃತ್ತಃ ಶಿನಿಪುಂಗವಃ।।

“ಶತ್ರುಗಳು ಅಧಿಕಾಂಶವಾಗಿ ಹತರಾಗಿದ್ದಾರೆ. ನಮ್ಮ ಬಂಧುಜನರು ರಕ್ಷಿತರಾಗಿದ್ದಾರೆ. ಶಿನಿಪುಂಗವ ಸಾತ್ಯಕಿಯು ಸಂಜಯನನ್ನು ಕೂಡ ಸೆರೆಹಿಡಿದು ಹೋಗಿದ್ದಾನೆ.

09026004a ಪರಿಶ್ರಾಂತಶ್ಚ ನಕುಲಃ ಸಹದೇವಶ್ಚ ಭಾರತ।
09026004c ಯೋಧಯಿತ್ವಾ ರಣೇ ಪಾಪಾನ್ಧಾರ್ತರಾಷ್ಟ್ರಪದಾನುಗಾನ್।।

ಭಾರತ! ರಣದಲ್ಲಿ ಧಾರ್ತರಾಷ್ಟ್ರರ ಅನುಯಾಯಿಗಳೊಡನೆ ಯುದ್ಧಮಾಡಿ ನಕುಲ-ಸಹದೇವರು ಬಳಲಿದ್ದಾರೆ.

09026005a ಸುಯೋಧನಮಭಿತ್ಯಜ್ಯ ತ್ರಯ ಏತೇ ವ್ಯವಸ್ಥಿತಾಃ।
09026005c ಕೃಪಶ್ಚ ಕೃತವರ್ಮಾ ಚ ದ್ರೌಣಿಶ್ಚೈವ ಮಹಾರಥಃ।।

ಸುಯೋಧನನನ್ನು ಬಿಟ್ಟು ಕೃಪ, ಕೃತವರ್ಮ ಮತ್ತು ಮಹಾರಥ ದ್ರೌಣಿ ಈ ಮೂವರೂ ಯುದ್ಧದಲ್ಲಿ ನಿಂತಿದ್ದಾರೆ.

09026006a ಅಸೌ ತಿಷ್ಠತಿ ಪಾಂಚಾಲ್ಯಃ ಶ್ರಿಯಾ ಪರಮಯಾ ಯುತಃ।
09026006c ದುರ್ಯೋಧನಬಲಂ ಹತ್ವಾ ಸಹ ಸರ್ವೈಃ ಪ್ರಭದ್ರಕೈಃ।।

ದುರ್ಯೋಧನನ ಸೇನೆಯನ್ನು ಸಂಹರಿಸಿ ಸರ್ವ ಪ್ರಭದ್ರಕರೊಡನೆ ಪಾಂಚಾಲ್ಯನು ಇಲ್ಲಿ ಪರಮ ಕಾಂತಿಯಿಂದ ನಿಂತಿದ್ದಾನೆ.

09026007a ಅಸೌ ದುರ್ಯೋಧನಃ ಪಾರ್ಥ ವಾಜಿಮಧ್ಯೇ ವ್ಯವಸ್ಥಿತಃ।
09026007c ಚತ್ರೇಣ ಧ್ರಿಯಮಾಣೇನ ಪ್ರೇಕ್ಷಮಾಣೋ ಮುಹುರ್ಮುಹುಃ।।

ಪಾರ್ಥ! ವಾಜಿಮಧ್ಯದಲ್ಲಿ ದುರ್ಯೋಧನನು ಶ್ವೇತಚತ್ರದಡಿಯಲ್ಲಿ ಬಾರಿ ಬಾರಿಗೂ ಇತ್ತಕಡೆ ನೋಡುತ್ತಾ ನಿಂತಿದ್ದಾನೆ.

09026008a ಪ್ರತಿವ್ಯೂಹ್ಯ ಬಲಂ ಸರ್ವಂ ರಣಮಧ್ಯೇ ವ್ಯವಸ್ಥಿತಃ।
09026008c ಏನಂ ಹತ್ವಾ ಶಿತೈರ್ಬಾಣೈಃ ಕೃತಕೃತ್ಯೋ ಭವಿಷ್ಯಸಿ।।

ಸರ್ವ ಸೇನೆಯನ್ನೂ ಇನ್ನೊಮ್ಮೆ ವ್ಯೂಹದಲ್ಲಿ ರಚಿಸಿ ರಣಮಧ್ಯದಲ್ಲಿ ನಿಂತಿರುವ ಅವನನ್ನು ನಿಶಿತಬಾಣಗಳಿಂದ ಸಂಹರಿಸಿದರೆ ನೀನು ಕೃತಕೃತ್ಯನಾಗುತ್ತೀಯೆ.

09026009a ಗಜಾನೀಕಂ ಹತಂ ದೃಷ್ಟ್ವಾ ತ್ವಾಂ ಚ ಪ್ರಾಪ್ತಮರಿಂದಮ।
09026009c ಯಾವನ್ನ ವಿದ್ರವಂತ್ಯೇತೇ ತಾವಜ್ಜಹಿ ಸುಯೋಧನಂ।।

ಅರಿಂದಮ! ಗಜಸೇನೆಯು ನಾಶವಾದುದನ್ನು ನೋಡಿ ಮತ್ತು ನೀನು ಇಲ್ಲಿರುವುದನ್ನು ನೋಡಿ ಇವರು ಪಲಾಯಮಾಡುತ್ತಿರುವಾಗ ನೀನು ಸುಯೋಧನನನ್ನು ಸಂಹರಿಸು!

09026010a ಯಾತು ಕಶ್ಚಿತ್ತು ಪಾಂಚಾಲ್ಯಂ ಕ್ಷಿಪ್ರಮಾಗಮ್ಯತಾಮಿತಿ।
09026010c ಪರಿಶ್ರಾಂತಬಲಸ್ತಾತ ನೈಷ ಮುಚ್ಯೇತ ಕಿಲ್ಬಿಷೀ।।

ಯಾರಾದರೂ ಬೇಗನೆ ಹೋಗಿ ಪಾಂಚಾಲ್ಯನು ಇಲ್ಲಿಗೆ ಬರುವಂತೆ ಹೇಳಲಿ. ಅಯ್ಯಾ! ಸೇನೆಯು ಬಳಲಿರುವಾಗ ಈ ಪಾಪಿಯು ತಪ್ಪಿಸಿಕೊಂಡು ಹೋಗಬಾರದು!

09026011a ತವ ಹತ್ವಾ ಬಲಂ ಸರ್ವಂ ಸಂಗ್ರಾಮೇ ಧೃತರಾಷ್ಟ್ರಜಃ।
09026011c ಜಿತಾನ್ಪಾಂಡುಸುತಾನ್ಮತ್ವಾ ರೂಪಂ ಧಾರಯತೇ ಮಹತ್।।

ನಿನ್ನ ಸೇನೆಗಳೆಲ್ಲವನ್ನೂ ಸಂಹರಿಸಿ ಪಾಂಡುಸುತರನ್ನು ಜಯಿಸುತ್ತೇನೆಂದು ತಿಳಿದುಕೊಂಡು ಧೃತರಾಷ್ಟ್ರಜನು ಮಹಾ ರೂಪವನ್ನು ಧರಿಸಿದ್ದಾನೆ.

09026012a ನಿಹತಂ ಸ್ವಬಲಂ ದೃಷ್ಟ್ವಾ ಪೀಡಿತಂ ಚಾಪಿ ಪಾಂಡವೈಃ।
09026012c ಧ್ರುವಮೇಷ್ಯತಿ ಸಂಗ್ರಾಮೇ ವಧಾಯೈವಾತ್ಮನೋ ನೃಪಃ।।

ತನ್ನ ಸೇನೆಯು ನಾಶವಾದುದನ್ನು ಮತ್ತು ಪಾಂಡವರಿಂದ ಪೀಡಿಸಲ್ಪಟ್ಟಿರುವುದನ್ನು ನೋಡಿಯೂ ಕೂಡ ನೃಪನು ಸಂಗ್ರಾಮದಲ್ಲಿ ತನ್ನ ವಧೆಯನ್ನು ನಿಶ್ಚಯಿಸಿಯೇ ಬರುತ್ತಿದ್ದಾನೆ.”

09026013a ಏವಮುಕ್ತಃ ಫಲ್ಗುನಸ್ತು ಕೃಷ್ಣಂ ವಚನಮಬ್ರವೀತ್।
09026013c ಧೃತರಾಷ್ಟ್ರಸುತಾಃ ಸರ್ವೇ ಹತಾ ಭೀಮೇನ ಮಾನದ।।
09026013e ಯಾವೇತಾವಸ್ಥಿತೌ ಕೃಷ್ಣ ತಾವದ್ಯ ನ ಭವಿಷ್ಯತಃ।।

ಹೀಗೆ ಹೇಳಲು ಫಲ್ಗುನನಾದರೋ ಕೃಷ್ಣನಿಗೆ ಹೇಳಿದನು: “ಮಾನದ! ಧೃತರಾಷ್ಟ್ರನ ಮಕ್ಕಳೆಲ್ಲರೂ ಭೀಮನಿಂದಲೇ ಹತರಾದರು. ಕೃಷ್ಣ! ಇಂದು ಯುದ್ಧಕ್ಕೆ ನಿಂತಿರುವ ಇವರಿಬ್ಬರೂ ಅವನಿಂದ ಉಳಿಯಲಾರರು!

09026014a ಹತೋ ಭೀಷ್ಮೋ ಹತೋ ದ್ರೋಣಃ ಕರ್ಣೋ ವೈಕರ್ತನೋ ಹತಃ।
09026014c ಮದ್ರರಾಜೋ ಹತಃ ಶಲ್ಯೋ ಹತಃ ಕೃಷ್ಣ ಜಯದ್ರಥಃ।।

ಕೃಷ್ಣ! ಭೀಷ್ಮನು ಹತನಾದನು. ದ್ರೋಣನು ಹತನಾದನು. ವೈಕರ್ತನ ಕರ್ಣನೂ ಹತನಾದನು. ಮದ್ರರಾಜ ಶಲ್ಯನು ಹತನಾದನು. ಜಯದ್ರಥನೂ ಹತನಾದನು.

09026015a ಹಯಾಃ ಪಂಚಶತಾಃ ಶಿಷ್ಟಾಃ ಶಕುನೇಃ ಸೌಬಲಸ್ಯ ಚ।
09026015c ರಥಾನಾಂ ತು ಶತೇ ಶಿಷ್ಟೇ ದ್ವೇ ಏವ ತು ಜನಾರ್ದನ।।
09026015e ದಂತಿನಾಂ ಚ ಶತಂ ಸಾಗ್ರಂ ತ್ರಿಸಾಹಸ್ರಾಃ ಪದಾತಯಃ।।

ಸೌಬಲ ಶಕುನಿಯ ಐದುನೂರು ಕುದುರೆಗಳು ಉಳಿದುಕೊಂಡಿವೆ. ಜನಾರ್ದನ! ಇನ್ನೂರು ರಥಗಳು ಉಳಿದುಕೊಂಡಿವೆ. ನೂರು ಆನೆಗಳಿವೆ ಮತ್ತು ಮೂರು ಸಾವಿರ ಪದಾತಿಗಳಿದ್ದಾರೆ.

09026016a ಅಶ್ವತ್ಥಾಮಾ ಕೃಪಶ್ಚೈವ ತ್ರಿಗರ್ತಾಧಿಪತಿಸ್ತಥಾ।
09026016c ಉಲೂಕಃ ಶಕುನಿಶ್ಚೈವ ಕೃತವರ್ಮಾ ಚ ಸಾತ್ವತಃ।।
09026017a ಏತದ್ಬಲಮಭೂಚ್ಚೇಷಂ ಧಾರ್ತರಾಷ್ಟ್ರಸ್ಯ ಮಾಧವ।
09026017c ಮೋಕ್ಷೋ ನ ನೂನಂ ಕಾಲಾದ್ಧಿ ವಿದ್ಯತೇ ಭುವಿ ಕಸ್ಯ ಚಿತ್।।

ಮಾಧವ! ಅಶ್ವತ್ಥಾಮ, ಕೃಪ, ತ್ರಿಗರ್ತಾಧಿಪತಿ, ಉಲೂಕ, ಶಕುನಿ, ಮತ್ತು ಸಾತ್ವತ ಕೃತವರ್ಮ – ಇವರಿಷ್ಟೇ ಧಾರ್ತರಾಷ್ಟ್ರನ ಸೇನೆಯಲ್ಲಿ ಉಳಿದುಕೊಂಡಿದ್ದಾರೆ. ಭುವಿಯಲ್ಲಿ ಯಾರಿಗೂ ಕಾಲದಿಂದ ಮೋಕ್ಷ ಎನ್ನುವುದಿಲ್ಲ.

09026018a ತಥಾ ವಿನಿಹತೇ ಸೈನ್ಯೇ ಪಶ್ಯ ದುರ್ಯೋಧನಂ ಸ್ಥಿತಂ।
09026018c ಅದ್ಯಾಹ್ನಾ ಹಿ ಮಹಾರಾಜೋ ಹತಾಮಿತ್ರೋ ಭವಿಷ್ಯತಿ।।

ಸೇನೆಗಳು ಹತವಾದರೂ ಹಾಗೆ ನಿಂತಿರುವ ದುರ್ಯೋಧನನನ್ನು ನೋಡು! ಇಂದು ರಾತ್ರಿಯಾಗುವುದರೊಳಗೆ ಮಹಾರಾಜ ಯುಧಿಷ್ಠಿರನು ಶತ್ರುರಹಿತನಾಗುತ್ತಾನೆ.

09026019a ನ ಹಿ ಮೇ ಮೋಕ್ಷ್ಯತೇ ಕಶ್ಚಿತ್ಪರೇಷಾಮಿತಿ ಚಿಂತಯೇ।
09026019c ಯೇ ತ್ವದ್ಯ ಸಮರಂ ಕೃಷ್ಣ ನ ಹಾಸ್ಯಂತಿ ರಣೋತ್ಕಟಾಃ।।
09026019e ತಾನ್ವೈ ಸರ್ವಾನ್ ಹನಿಷ್ಯಾಮಿ ಯದ್ಯಪಿ ಸ್ಯುರಮಾನುಷಾಃ।।

ಇಂದು ಶತ್ರುಗಳ್ಯಾರೂ ನನ್ನಿಂದ ತಪ್ಪಿಸಿಕೊಂಡು ಹೋಗಲಾರರೆಂದು ಭಾವಿಸುತ್ತೇನೆ. ಕೃಷ್ಣ! ಒಂದುವೇಳೆ ಈ ರಣೋತ್ಕಟರು ಸಮರದಿಂದ ಪಲಾಯನ ಮಾಡದಿದ್ದರೆ, ಅವರು ಸುರ-ಅಮಾನುಷರೇ ಆಗಿರಲಿ, ಎಲ್ಲರನ್ನೂ ನಾನು ಸಂಹರಿಸುತ್ತೇನೆ.

09026020a ಅದ್ಯ ಯುದ್ಧೇ ಸುಸಂಕ್ರುದ್ಧೋ ದೀರ್ಘಂ ರಾಜ್ಞಃ ಪ್ರಜಾಗರಂ।
09026020c ಅಪನೇಷ್ಯಾಮಿ ಗಾಂಧಾರಂ ಪಾತಯಿತ್ವಾ ಶಿತೈಃ ಶರೈಃ।।

ಇಂದು ಯುದ್ಧದಲ್ಲಿ ಕ್ರುದ್ಧನಾಗಿ ನಿಶಿತ ಶರಗಳಿಂದ ಗಾಂಧಾರನನ್ನು ಕೆಳಗುರುಳಿಸಿ ರಾಜ ಯುಧಿಷ್ಠಿರನ ದೀರ್ಘ ನಿದ್ರಾಹೀನತೆಯನ್ನು ಇಲ್ಲವಾಗಿಸುತ್ತೇನೆ.

09026021a ನಿಕೃತ್ಯಾ ವೈ ದುರಾಚಾರೋ ಯಾನಿ ರತ್ನಾನಿ ಸೌಬಲಃ।
09026021c ಸಭಾಯಾಮಹರದ್ದ್ಯೂತೇ ಪುನಸ್ತಾನ್ಯಾಹರಾಮ್ಯಹಂ।।

ದುರಾಚಾರಿ ಸೌಬಲನು ಸಭೆಯಲ್ಲಿ ಮೋಸದ ದ್ಯೂತದಲ್ಲಿ ಯಾವ ರತ್ನಗಳನ್ನು ಅಪಹರಿಸಿದ್ದನೋ ಅವುಗಳನ್ನು ನಾನು ಯುದ್ಧದಲ್ಲಿ ಪುನಃ ಪಡೆಯುತ್ತೇನೆ.

09026022a ಅದ್ಯ ತಾ ಅಪಿ ವೇತ್ಸ್ಯಂತಿ ಸರ್ವಾ ನಾಗಪುರಸ್ತ್ರಿಯಃ।
09026022c ಶ್ರುತ್ವಾ ಪತೀಂಶ್ಚ ಪುತ್ರಾಂಶ್ಚ ಪಾಂಡವೈರ್ನಿಹತಾನ್ಯುಧಿ।।

ಇಂದು ಹಸ್ತಿನಾಪುರದ ಸ್ತ್ರೀಯರೆಲ್ಲರೂ ಯುದ್ಧದಲ್ಲಿ ತಮ್ಮ ಪತಿ-ಪುತ್ರರು ಪಾಂಡವರಿಂದ ಹತರಾದರೆಂದು ಕೇಳಿ ಗೋಳಿಡಲಿದ್ದಾರೆ.

09026023a ಸಮಾಪ್ತಮದ್ಯ ವೈ ಕರ್ಮ ಸರ್ವಂ ಕೃಷ್ಣ ಭವಿಷ್ಯತಿ।
09026023c ಅದ್ಯ ದುರ್ಯೋಧನೋ ದೀಪ್ತಾಂ ಶ್ರಿಯಂ ಪ್ರಾಣಾಂಶ್ಚ ತ್ಯಕ್ಷ್ಯತಿ।।

ಕೃಷ್ಣ! ಇಂದು ನಮ್ಮ ಕರ್ಮಗಳೆಲ್ಲವೂ ಸಮಾಪ್ತಗೊಳ್ಳುತ್ತವೆ. ಇಂದು ದುರ್ಯೋಧನನು ಬೆಳಗುತ್ತಿದ್ದ ಸಂಪತ್ತಿನೊಂದಿಗೆ ಪ್ರಾಣಗಳನ್ನೂ ತ್ಯಜಿಸಲಿದ್ದಾನೆ.

09026024a ನಾಪಯಾತಿ ಭಯಾತ್ಕೃಷ್ಣ ಸಂಗ್ರಾಮಾದ್ಯದಿ ಚೇನ್ಮಮ।
09026024c ನಿಹತಂ ವಿದ್ಧಿ ವಾರ್ಷ್ಣೇಯ ಧಾರ್ತರಾಷ್ಟ್ರಂ ಸುಬಾಲಿಶಂ।।

ಕೃಷ್ಣ! ವಾರ್ಷ್ಣೇಯ! ಬಾಲಮತಿ ಧಾರ್ತರಾಷ್ಟ್ರನು ಒಂದು ವೇಳೆ ಭಯಪಟ್ಟು ಸಂಗ್ರಾಮದಿಂದ ಪಲಾಯನ ಮಾಡದಿದ್ದರೆ ಅವನು ನನ್ನಿಂದ ಹತನಾದನೆಂದೇ ತಿಳಿ!

09026025a ಮಮ ಹ್ಯೇತದಶಕ್ತಂ ವೈ ವಾಜಿವೃಂದಮರಿಂದಮ।
09026025c ಸೋಢುಂ ಜ್ಯಾತಲನಿರ್ಘೋಷಂ ಯಾಹಿ ಯಾವನ್ನಿಹನ್ಮ್ಯಹಂ।।

ಅರಿಂದಮ! ಮುಂದೆ ಹೋಗು! ನನ್ನ ಧನುಸ್ಸಿನ ಟೇಂಕಾರವನ್ನೇ ಸಹಿಸಿಕೊಳ್ಳಲು ಅಶಕ್ತವಾಗಿರುವ ಈ ಗಜಸೇನೆಯನ್ನು ನಾನು ಸಂಹರಿಸುತ್ತೇನೆ.”

09026026a ಏವಮುಕ್ತಸ್ತು ದಾಶಾರ್ಹಃ ಪಾಂಡವೇನ ಯಶಸ್ವಿನಾ।
09026026c ಅಚೋದಯದ್ಧಯಾನ್ರಾಜನ್ದುರ್ಯೋಧನಬಲಂ ಪ್ರತಿ।।

ರಾಜನ್! ಯಶಸ್ವಿ ಪಾಂಡವನು ಹೀಗೆ ಹೇಳಲು ದಾಶಾರ್ಹನು ಕುದುರೆಗಳನ್ನು ದುರ್ಯೋಧನನ ಸೇನೆಯ ಕಡೆ ಓಡಿಸಿದನು.

09026027a ತದನೀಕಮಭಿಪ್ರೇಕ್ಷ್ಯ ತ್ರಯಃ ಸಜ್ಜಾ ಮಹಾರಥಾಃ।
09026027c ಭೀಮಸೇನೋಽರ್ಜುನಶ್ಚೈವ ಸಹದೇವಶ್ಚ ಮಾರಿಷ।।
09026027e ಪ್ರಯಯುಃ ಸಿಂಹನಾದೇನ ದುರ್ಯೋಧನಜಿಘಾಂಸಯಾ।।

ಮಾರಿಷ! ಆ ಸೇನೆಯನ್ನು ನೋಡಿ ದುರ್ಯೋಧನನನ್ನು ಸಂಹರಿಸುವ ಇಚ್ಛೆಯಿಂದ ಸಜ್ಜಾಗಿ ಭೀಮಸೇನ, ಅರ್ಜುನ ಮತ್ತು ಸಹದೇವ ಈ ಮೂವರು ಮಹಾರಥರು ಸಿಂಹನಾದಗಳೊಂದಿಗೆ ಹೊರಟರು.

09026028a ತಾನ್ಪ್ರೇಕ್ಷ್ಯ ಸಹಿತಾನ್ಸರ್ವಾನ್ಜವೇನೋದ್ಯತಕಾರ್ಮುಕಾನ್।
09026028c ಸೌಬಲೋಽಭ್ಯದ್ರವದ್ಯುದ್ಧೇ ಪಾಂಡವಾನಾತತಾಯಿನಃ।।

ಧನುಸ್ಸುಗಳನ್ನು ಮೇಲೆತ್ತಿ ವೇಗದಿಂದ ಒಟ್ಟಿಗೇ ಬರುತ್ತಿದ್ದ ಆ ಪಾಂಡವರೆಲ್ಲರನ್ನೂ ನೋಡಿ ಆತತಾಯಿ ಸೌಬಲನು ಯುದ್ಧದಲ್ಲಿ ಅವರನ್ನು ಎದುರಿಸಿದನು.

09026029a ಸುದರ್ಶನಸ್ತವ ಸುತೋ ಭೀಮಸೇನಂ ಸಮಭ್ಯಯಾತ್।
09026029c ಸುಶರ್ಮಾ ಶಕುನಿಶ್ಚೈವ ಯುಯುಧಾತೇ ಕಿರೀಟಿನಾ।।
09026029e ಸಹದೇವಂ ತವ ಸುತೋ ಹಯಪೃಷ್ಠಗತೋಽಭ್ಯಯಾತ್।।

ನಿನ್ನ ಮಗ ಸುದರ್ಶನನು ಭೀಮಸೇನನನ್ನು ಎದುರಿಸಿದನು. ಸುಶರ್ಮ ಶಕುನಿಯರು ಕಿರೀಟಿಯೊಂದಿಗೆ ಹೋರಾಡಿದರು. ಕುದುರೆಯ ಮೇಲೆ ಕುಳಿತಿದ್ದ ನಿನ್ನ ಮಗನು ಸಹದೇವನ ಮೇಲೆ ಆಕ್ರಮಣಿಸಿದನು.

09026030a ತತೋ ಹ್ಯಯತ್ನತಃ ಕ್ಷಿಪ್ರಂ ತವ ಪುತ್ರೋ ಜನಾಧಿಪ।
09026030c ಪ್ರಾಸೇನ ಸಹದೇವಸ್ಯ ಶಿರಸಿ ಪ್ರಾಹರದ್ಭೃಶಂ।।

ಜನಾಧಿಪ! ಆಗ ಸತತ ಪ್ರಯತ್ನದಿಂದ ನಿನ್ನ ಮಗನು ಬೇಗನೆ ಪ್ರಾಸದಿಂದ ಸಹದೇವನ ಶಿರಸ್ಸಿಗೆ ಜೋರಾಗಿ ಹೊಡೆದನು.

09026031a ಸೋಪಾವಿಶದ್ರಥೋಪಸ್ಥೇ ತವ ಪುತ್ರೇಣ ತಾಡಿತಃ।
09026031c ರುಧಿರಾಪ್ಲುತಸರ್ವಾಂಗ ಆಶೀವಿಷ ಇವ ಶ್ವಸನ್।।

ನಿನ್ನ ಮಗನಿಂದ ಪ್ರಹರಿಸಲ್ಪಟ್ಟು ಸರ್ವಾಂಗಗಳೂ ರಕ್ತದಿಂದ ತೋಯ್ದ ಸಹದೇವನು ವಿಷಸರ್ಪದಂತೆ ನಿಟ್ಟುಸಿರು ಬಿಡುತ್ತಾ ರಥಪೀಠದ ಮೇಲೆ ಕುಳಿತನು.

09026032a ಪ್ರತಿಲಭ್ಯ ತತಃ ಸಂಜ್ಞಾಂ ಸಹದೇವೋ ವಿಶಾಂ ಪತೇ।
09026032c ದುರ್ಯೋಧನಂ ಶರೈಸ್ತೀಕ್ಷ್ಣೈಃ ಸಂಕ್ರುದ್ಧಃ ಸಮವಾಕಿರತ್।।

ವಿಶಾಂಪತೇ! ಆಗ ಸಂಜ್ಞೆಗಳನ್ನು ಪುನಃ ಪಡೆದುಕೊಂಡು ಸಹದೇವನು ಕ್ರುದ್ಧನಾಗಿ ದುರ್ಯೋಧನನ್ನು ತೀಕ್ಷ್ಣ ಶರಗಳಿಂದ ಮುಚ್ಚಿದನು.

09026033a ಪಾರ್ಥೋಽಪಿ ಯುಧಿ ವಿಕ್ರಮ್ಯ ಕುಂತೀಪುತ್ರೋ ಧನಂಜಯಃ।
09026033c ಶೂರಾಣಾಮಶ್ವಪೃಷ್ಠೇಭ್ಯಃ ಶಿರಾಂಸಿ ನಿಚಕರ್ತ ಹ।।

ಕುಂತೀಪುತ್ರ ಧನಂಜಯ ಪಾರ್ಥನೂ ಕೂಡ ಯುದ್ಧದಲ್ಲಿ ವಿಕ್ರಮದಿಂದ ಕುದುರೆಗಳ ಮೇಲೆ ಕುಳಿತಿದ್ದ ಶೂರರ ಶಿರಗಳನ್ನು ಕತ್ತರಿಸುತ್ತಿದ್ದನು.

09026034a ತದಾನೀಕಂ ತದಾ ಪಾರ್ಥೋ ವ್ಯಧಮದ್ಬಹುಭಿಃ ಶರೈಃ।
09026034c ಪಾತಯಿತ್ವಾ ಹಯಾನ್ಸರ್ವಾಂಸ್ತ್ರಿಗರ್ತಾನಾಂ ರಥಾನ್ಯಯೌ।।

ಅನೇಕ ಶರಗಳಿಂದ ಪಾರ್ಥನು ಅ ಸೇನೆಯನ್ನು ಸಂಹರಿಸಿದನು. ಎಲ್ಲ ಕುದುರೆಗಳನ್ನೂ ಕೆಳಗುರುಳಿಸಿ ಅವನು ತ್ರಿಗರ್ತರ ರಥಗಳ ಕಡೆ ಹೋದನು.

09026035a ತತಸ್ತೇ ಸಹಿತಾ ಭೂತ್ವಾ ತ್ರಿಗರ್ತಾನಾಂ ಮಹಾರಥಾಃ।
09026035c ಅರ್ಜುನಂ ವಾಸುದೇವಂ ಚ ಶರವರ್ಷೈರವಾಕಿರನ್।।

ಆಗ ಮಹಾರಥ ತ್ರಿಗರ್ತರು ಒಟ್ಟಾಗಿ ಶರವರ್ಷಗಳಿಂದ ಅರ್ಜುನ-ವಾಸುದೇವರನ್ನು ಮುಚ್ಚಿದರು.

09026036a ಸತ್ಯಕರ್ಮಾಣಮಾಕ್ಷಿಪ್ಯ ಕ್ಷುರಪ್ರೇಣ ಮಹಾಯಶಾಃ।
09026036c ತತೋಽಸ್ಯ ಸ್ಯಂದನಸ್ಯೇಷಾಂ ಚಿಚ್ಚಿದೇ ಪಾಂಡುನಂದನಃ।।

ಆಗ ಮಹಾಯಶಸ್ವಿ ಪಾಂಡುನಂದನನು ಕ್ಷುರದಿಂದ ಸತ್ಯಕರ್ಮನನ್ನು ಪ್ರಹರಿಸಿ ನಂತರ ಅವನ ರಥದ ಈಷಾದಂಡವನ್ನು ಕತ್ತರಿಸಿದನು.

09026037a ಶಿಲಾಶಿತೇನ ಚ ವಿಭೋ ಕ್ಷುರಪ್ರೇಣ ಮಹಾಯಶಾಃ।
09026037c ಶಿರಶ್ಚಿಚ್ಚೇದ ಪ್ರಹಸಂಸ್ತಪ್ತಕುಂಡಲಭೂಷಣಂ।।

ವಿಭೋ! ಮಹಾಯಶಸ್ವಿಯು ಶಿಲಾಶಿತ ಕ್ಷುರಗಳಿಂದ ಅವನ ಸುವರ್ಣಕುಂಡಲ ಭೂಷಿತ ಶಿರವನ್ನು ತುಂಡರಿಸಿ ನಕ್ಕನು.

09026038a ಸತ್ಯೇಷುಮಥ ಚಾದತ್ತ ಯೋಧಾನಾಂ ಮಿಷತಾಂ ತತಃ।
09026038c ಯಥಾ ಸಿಂಹೋ ವನೇ ರಾಜನ್ಮೃಗಂ ಪರಿಬುಭುಕ್ಷಿತಃ।।

ರಾಜನ್! ವನದಲ್ಲಿ ಹಸಿದ ಸಿಂಹವು ಮೃಗವನ್ನು ಕಬಳಿಸುವಂತೆ ಯೋಧರು ನೋಡುತ್ತಿದ್ದಂತೆಯೇ ಅವನು ಸತ್ಯೇಷುವನ್ನು ಸಂಹರಿಸಿದನು.

09026039a ತಂ ನಿಹತ್ಯ ತತಃ ಪಾರ್ಥಃ ಸುಶರ್ಮಾಣಂ ತ್ರಿಭಿಃ ಶರೈಃ।
09026039c ವಿದ್ಧ್ವಾ ತಾನಹನತ್ಸರ್ವಾನ್ರಥಾನ್ರುಕ್ಮವಿಭೂಷಿತಾನ್।।

ಅವನನ್ನು ಸಂಹರಿಸಿದ ನಂತರ ಪಾರ್ಥನು ಮೂರು ಶರಗಳಿಂದ ಸುಶರ್ಮನನ್ನು ಹೊಡೆದು ಅವನ ಸುವರ್ಣವಿಭೂಷಿತ ರಥಗಳೆಲ್ಲವನ್ನೂ ಧ್ವಂಸಗೊಳಿಸಿದನು.

09026040a ತತಸ್ತು ಪ್ರತ್ವರನ್ಪಾರ್ಥೋ ದೀರ್ಘಕಾಲಂ ಸುಸಂಭೃತಂ।
09026040c ಮುಂಚನ್ಕ್ರೋಧವಿಷಂ ತೀಕ್ಷ್ಣಂ ಪ್ರಸ್ಥಲಾಧಿಪತಿಂ ಪ್ರತಿ।।

ಆಗ ಪಾರ್ಥನು ದೀರ್ಘಕಾಲ ಒಟ್ಟುಗೂಡಿದ್ದ ತೀಕ್ಷ್ಣ ಕ್ರೋಧವಿಷವನ್ನು ಪ್ರಸ್ಥಲಾಧಿಪತಿ ಸುಶರ್ಮನ ಮೇಲೆ ಪ್ರಯೋಗಿಸಿದನು.

09026041a ತಮರ್ಜುನಃ ಪೃಷತ್ಕಾನಾಂ ಶತೇನ ಭರತರ್ಷಭ।
09026041c ಪೂರಯಿತ್ವಾ ತತೋ ವಾಹಾನ್ನ್ಯಹನತ್ತಸ್ಯ ಧನ್ವಿನಃ।।

ಭರತರ್ಷಭ! ಧನ್ವಿ ಅರ್ಜುನನು ನೂರು ಪೃಷತ್ಕಗಳಿಂದ ಅವನನ್ನು ಮುಚ್ಚಿ, ಅವನ ಕುದುರೆಗಳನ್ನು ಗಾಯಗೊಳಿಸಿದನು.

09026042a ತತಃ ಶರಂ ಸಮಾದಾಯ ಯಮದಂಡೋಪಮಂ ಶಿತಂ।
09026042c ಸುಶರ್ಮಾಣಂ ಸಮುದ್ದಿಶ್ಯ ಚಿಕ್ಷೇಪಾಶು ಹಸನ್ನಿವ।।

ಅನಂತರ ಯಮದಂಡದಂತಿರುವ ನಿಶಿತ ಶರವನ್ನೆತ್ತಿಕೊಂಡು ಸುಶರ್ಮನನ್ನೇ ಗುರಿಯನ್ನಾಗಿಸಿ ಬೇಗನೆ ಪ್ರಹರಿಸಿ ನಕ್ಕನು.

09026043a ಸ ಶರಃ ಪ್ರೇಷಿತಸ್ತೇನ ಕ್ರೋಧದೀಪ್ತೇನ ಧನ್ವಿನಾ।
09026043c ಸುಶರ್ಮಾಣಂ ಸಮಾಸಾದ್ಯ ಬಿಭೇದ ಹೃದಯಂ ರಣೇ।।

ಆ ಧನ್ವಿಯಿಂದ ಪ್ರಹರಿಸಲ್ಪಟ್ಟ ಕ್ರೋಧದೀಪ್ತವಾದ ಆ ಬಾಣವು ರಣದಲ್ಲಿ ಸುಷರ್ಮನ ಬಳಿ ಹೋಗಿ ಅವನ ಹೃದಯವನ್ನು ಭೇದಿಸಿತು.

09026044a ಸ ಗತಾಸುರ್ಮಹಾರಾಜ ಪಪಾತ ಧರಣೀತಲೇ।
09026044c ನಂದಯನ್ಪಾಂಡವಾನ್ಸರ್ವಾನ್ವ್ಯಥಯಂಶ್ಚಾಪಿ ತಾವಕಾನ್।।

ಮಹಾರಾಜ! ಅವನು ಪ್ರಾಣಹೋಗಿ ಸರ್ವಪಾಂಡವರನ್ನೂ ಸಂತೋಷಗೊಳಿಸುತ್ತಾ ಮತ್ತು ನಿನ್ನ ಕಡೆಯವರಿಗೆ ದುಃಖವನ್ನುಂಟುಮಾಡುತ್ತಾ ಧರಣೀತಲದಲ್ಲಿ ಬಿದ್ದನು.

09026045a ಸುಶರ್ಮಾಣಂ ರಣೇ ಹತ್ವಾ ಪುತ್ರಾನಸ್ಯ ಮಹಾರಥಾನ್।
09026045c ಸಪ್ತ ಚಾಷ್ಟೌ ಚ ತ್ರಿಂಶಚ್ಚ ಸಾಯಕೈರನಯತ್ ಕ್ಷಯಂ।।

ರಣದಲ್ಲಿ ಸುಶರ್ಮನನ್ನು ಸಂಹರಿಸಿ ಪಾರ್ಥನು ಅವನ ನಲವತ್ತೈದು ಮಹಾರಥ ಪುತ್ರರನ್ನೂ ಸಾಯಕಗಳಿಂದ ಹೊಡೆದು ಯಮಸಾದನಕ್ಕೆ ಕಳುಹಿಸಿದನು.

09026046a ತತೋಽಸ್ಯ ನಿಶಿತೈರ್ಬಾಣೈಃ ಸರ್ವಾನ್ ಹತ್ವಾ ಪದಾನುಗಾನ್।
09026046c ಅಭ್ಯಗಾದ್ಭಾರತೀಂ ಸೇನಾಂ ಹತಶೇಷಾಂ ಮಹಾರಥಃ।।

ಅನಂತರ ಆ ಮಹಾರಥನು ನಿಶಿತ ಬಾಣಗಳಿಂದ ಅವರ ಅನುಯಾಯಿಗಳೆಲ್ಲರನ್ನೂ ಸಂಹರಿಸಿ ಹತಶೇಷವಾಗಿದ್ದ ಭಾರತೀ ಸೇನೆಯನ್ನು ಆಕ್ರಮಣಿಸಿದನು.

09026047a ಭೀಮಸ್ತು ಸಮರೇ ಕ್ರುದ್ಧಃ ಪುತ್ರಂ ತವ ಜನಾಧಿಪ।
09026047c ಸುದರ್ಶನಮದೃಶ್ಯಂ ತಂ ಶರೈಶ್ಚಕ್ರೇ ಹಸನ್ನಿವ।।

ಜನಾಧಿಪ! ಸಮರದಲ್ಲಿ ಕ್ರುದ್ಧನಾದ ಭೀಮನಾದರೋ ನಗುನಗುತ್ತಲೇ ಬಾಣಗಳಿಂದ ನಿನ್ನ ಮಗ ಸುದರ್ಶನನ್ನು ಅದೃಶ್ಯನನ್ನಾಗಿ ಮಾಡಿದನು.

09026048a ತತೋಽಸ್ಯ ಪ್ರಹಸನ್ಕ್ರುದ್ಧಃ ಶಿರಃ ಕಾಯಾದಪಾಹರತ್।
09026048c ಕ್ಷುರಪ್ರೇಣ ಸುತೀಕ್ಷ್ಣೇನ ಸ ಹತಃ ಪ್ರಾಪತದ್ ಭುವಿ।।

ಕ್ರುದ್ಧನಾಗಿ ಜೋರಾಗಿ ನಗುತ್ತಾ ಅವನು ತೀಕ್ಷ್ಣ ಕ್ಷುರಪ್ರದಿಂದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿ ಕೆಳಕ್ಕೆ ಕೆಡವಿದನು.

09026049a ತಸ್ಮಿಂಸ್ತು ನಿಹತೇ ವೀರೇ ತತಸ್ತಸ್ಯ ಪದಾನುಗಾಃ।
09026049c ಪರಿವವ್ರೂ ರಣೇ ಭೀಮಂ ಕಿರಂತೋ ವಿಶಿಖಾನ್ ಶಿತಾನ್।।

ಆ ವೀರನು ಹತನಾಗಲು ಅವನ ಅನುಯಾಯಿಗಳು ರಣದಲ್ಲಿ ನಿಶಿತ ವಿಶಿಖಗಳನ್ನು ತೂರುತ್ತಾ ಭೀಮನನ್ನು ಸುತ್ತುವರೆದರು.

09026050a ತತಸ್ತು ನಿಶಿತೈರ್ಬಾಣೈಸ್ತದನೀಕಂ ವೃಕೋದರಃ।
09026050c ಇಂದ್ರಾಶನಿಸಮಸ್ಪರ್ಶೈಃ ಸಮಂತಾತ್ಪರ್ಯವಾಕಿರತ್।।
09026050e ತತಃ ಕ್ಷಣೇನ ತದ್ಭೀಮೋ ನ್ಯಹನದ್ಭರತರ್ಷಭ।।

ಭರತರ್ಷಭ! ಅನಂತರ ವೃಕೋದರನು ಇಂದ್ರನ ವಜ್ರಾಯುಧದ ಸ್ಪರ್ಶಕ್ಕೆ ಸಮನಾದ ನಿಶಿತ ಬಾಣಗಳಿಂದ ನಿನ್ನ ಸೇನೆಯನ್ನು ಮುಚ್ಚಿದನು. ಕ್ಷಣದಲ್ಲಿಯೇ ಭೀಮನು ಅವರನ್ನು ಸಂಹರಿಸಿದನು.

09026051a ತೇಷು ತೂತ್ಸಾದ್ಯಮಾನೇಷು ಸೇನಾಧ್ಯಕ್ಷಾ ಮಹಾಬಲಾಃ।
09026051c ಭೀಮಸೇನಂ ಸಮಾಸಾದ್ಯ ತತೋಽಯುಧ್ಯಂತ ಭಾರತ।।
09026051e ತಾಂಸ್ತು ಸರ್ವಾನ್ ಶರೈರ್ಘೋರೈರವಾಕಿರತ ಪಾಂಡವಃ।।

ಭಾರತ! ಅವರು ಹತರಾಗಲು ಮಹಾಬಲ ಸೇನಾಧ್ಯಕ್ಷರು ಭೀಮಸೇನನ ಬಳಿಸಾರಿ ಅವನೊಡನೆ ಯುದ್ಧಮಾಡತೊಡಗಿದರು. ಅವರೆಲ್ಲರನ್ನೂ ಪಾಂಡವನು ಘೋರ ಶರಗಳಿಂದ ಮುಚ್ಚಿದನು.

09026052a ತಥೈವ ತಾವಕಾ ರಾಜನ್ಪಾಂಡವೇಯಾನ್ಮಹಾರಥಾನ್।
09026052c ಶರವರ್ಷೇಣ ಮಹತಾ ಸಮಂತಾತ್ಪರ್ಯವಾರಯನ್।।

ರಾಜನ್! ಹಾಗೆಯೇ ನಿನ್ನ ಕಡೆಯ ಮಹಾರಥರು ಮಹಾ ಶರವರ್ಷದಿಂದ ಎಲ್ಲಕಡೆಗಳಿಂದ ಪಾಂಡವೇಯರನ್ನು ಸುತ್ತುವರೆದರು.

09026053a ವ್ಯಾಕುಲಂ ತದಭೂತ್ಸರ್ವಂ ಪಾಂಡವಾನಾಂ ಪರೈಃ ಸಹ।
09026053c ತಾವಕಾನಾಂ ಚ ಸಮರೇ ಪಾಂಡವೇಯೈರ್ಯುಯುತ್ಸತಾಂ।।

ಆಗ ಶತ್ರುಗಳೊಡನೆ ಯುದ್ಧಮಾಡುತ್ತಿದ್ದ ಪಾಂಡವರಿಗೂ ಮತ್ತು ಸಮರದಲ್ಲಿ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದ ನಿನ್ನವರಿಗೂ ಎಲ್ಲರಿಗೂ ವ್ಯಾಕುಲವುಂಟಾಯಿತು.

09026054a ತತ್ರ ಯೋಧಾಸ್ತದಾ ಪೇತುಃ ಪರಸ್ಪರಸಮಾಹತಾಃ।
09026054c ಉಭಯೋಃ ಸೇನಯೋ ರಾಜನ್ಸಂಶೋಚಂತಃ ಸ್ಮ ಬಾಂಧವಾನ್।।

ರಾಜನ್! ಬಾಂಧವರ ಕುರಿತು ಶೋಕಿಸುತ್ತಾ ಪರಸ್ಪರರನ್ನು ಹೊಡೆಯುತ್ತಾ ಎರಡೂ ಕಡೆಯ ಸೇನೆಗಳ ಯೋಧರು ಕೆಳಗುರುಳಿದರು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸುಶರ್ಮವಧೇ ಷಡ್ವಿಂಶೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸುಶರ್ಮವಧ ಎನ್ನುವ ಇಪ್ಪತ್ತಾರನೇ ಅಧ್ಯಾಯವು.