025 ಏಕಾದಶಧಾರ್ತರಾಷ್ಟ್ರವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 25

ಸಾರ

ಭೀಮಸೇನನು ಧೃತರಾಷ್ಟ್ರನ ಹನ್ನೊಂದು ಮಕ್ಕಳನ್ನು - ದುರ್ಮರ್ಷಣ, ಚೈತ್ರ, ಭೂರಿಬಲ, ರವಿ, ಶ್ರುತಾಂತ, ಜಯತ್ಸೇನ, ದುರ್ವಿಮೋಚನ, ದುಷ್ಪ್ರಧರ್ಷ, ಸುಜಾತ, ದುರ್ವಿಷಹ, ಶ್ರುತರ್ವ – ವಧಿಸಿದುದು (–37).

09025001 ಸಂಜಯ ಉವಾಚ 09025001a ಗಜಾನೀಕೇ ಹತೇ ತಸ್ಮಿನ್ಪಾಂಡುಪುತ್ರೇಣ ಭಾರತ।
09025001c ವಧ್ಯಮಾನೇ ಬಲೇ ಚೈವ ಭೀಮಸೇನೇನ ಸಂಯುಗೇ।।
09025002a ಚರಂತಂ ಚ ತಥಾ ದೃಷ್ಟ್ವಾ ಭೀಮಸೇನಮರಿಂದಮಂ।
09025002c ದಂಡಹಸ್ತಂ ಯಥಾ ಕ್ರುದ್ಧಮಂತಕಂ ಪ್ರಾಣಹಾರಿಣಂ।।

ಸಂಜಯನು ಹೇಳಿದನು: “ಭಾರತ! ಪಾಂಡುಪುತ್ರನಿಂದ ಆ ಗಜಸೇನೆಯು ಹತವಾಗಲು ಮತ್ತು ಯುದ್ಧದಲ್ಲಿ ಭೀಮಸೇನನಿಂದ ಸೇನೆಗಳು ಕೂಡ ವಧಿಸಲ್ಪಡಲು ಕ್ರುದ್ಧ ಪ್ರಾಣಹಾರೀ ಅಂತಕನಂತೆ ದಂಡವನ್ನು ಹಿಡಿದು ಅರಿಂದಮ ಭೀಮಸೇನನು ಸಂಚರಿಸುತ್ತಾ ಕಂಡುಬಂದನು.

09025003a ಸಮೇತ್ಯ ಸಮರೇ ರಾಜನ್ ಹತಶೇಷಾಃ ಸುತಾಸ್ತವ।
09025003c ಅದೃಶ್ಯಮಾನೇ ಕೌರವ್ಯೇ ಪುತ್ರೇ ದುರ್ಯೋಧನೇ ತವ।।
09025003e ಸೋದರ್ಯಾಃ ಸಹಿತಾ ಭೂತ್ವಾ ಭೀಮಸೇನಮುಪಾದ್ರವನ್।।

ರಾಜನ್! ನಿನ್ನ ಪುತ್ರ ಕೌರವ್ಯ ದುರ್ಯೋಧನನು ಅದೃಶ್ಯನಾಗಲು ಅಳಿದುಳಿದ ನಿನ್ನ ಮಕ್ಕಳು ಸಹೋದರರು ಒಟ್ಟಾಗಿ ಸಮರದಲ್ಲಿ ಭೀಮಸೇನನನ್ನು ಆಕ್ರಮಣಿಸಿದರು.

09025004a ದುರ್ಮರ್ಷಣೋ ಮಹಾರಾಜ ಜೈತ್ರೋ ಭೂರಿಬಲೋ ರವಿಃ।
09025004c ಇತ್ಯೇತೇ ಸಹಿತಾ ಭೂತ್ವಾ ತವ ಪುತ್ರಾಃ ಸಮಂತತಃ।।
09025004e ಭೀಮಸೇನಮಭಿದ್ರುತ್ಯ ರುರುಧುಃ ಸರ್ವತೋದಿಶಂ।।

ಮಹಾರಾಜ! ದುರ್ಮರ್ಷಣ, ಚೈತ್ರ, ಭೂರಿಬಲ, ರವಿ, ಮತ್ತು ಇತರ ನಿನ್ನ ಮಕ್ಕಳು ಒಟ್ಟಾಗಿ ಭೀಮಸೇನನನ್ನು ಆಕ್ರಮಣಿಸಿ ಅವನನ್ನು ಎಲ್ಲ ಕಡೆಗಳಿಂದ ತಡೆದರು.

09025005a ತತೋ ಭೀಮೋ ಮಹಾರಾಜ ಸ್ವರಥಂ ಪುನರಾಸ್ಥಿತಃ।
09025005c ಮುಮೋಚ ನಿಶಿತಾನ್ಬಾಣಾನ್ಪುತ್ರಾಣಾಂ ತವ ಮರ್ಮಸು।।

ಮಹಾರಾಜ! ಆಗ ಭೀಮನು ತನ್ನ ರಥವನ್ನು ಪುನಃ ಏರಿ ನಿನ್ನ ಮಕ್ಕಳ ಮರ್ಮಸ್ಥಾನಗಳಿಗೆ ಗುರಿಯಿಟ್ಟು ನಿಶಿತ ಬಾಣಗಳನ್ನು ಪ್ರಯೋಗಿಸಿದನು.

09025006a ತೇ ಕೀರ್ಯಮಾಣಾ ಭೀಮೇನ ಪುತ್ರಾಸ್ತವ ಮಹಾರಣೇ।
09025006c ಭೀಮಸೇನಮಪಾಸೇಧನ್ಪ್ರವಣಾದಿವ ಕುಂಜರಂ।।

ಮಹಾರಣದಲ್ಲಿ ಭೀಮಸೇನನಿಂದ ಪ್ರಹರಿಸಲ್ಪಟ್ಟ ನಿನ್ನ ಮಕ್ಕಳು ಇಳಿಜಾರಿನ ಪ್ರದೇಶದಿಂದ ಆನೆಯನ್ನು ಮೇಲಕ್ಕೆಳೆಯುವಂತೆ ಭೀಮಸೇನನನ್ನು ಸೆಳೆಯಲು ತೊಡಗಿದರು.

09025007a ತತಃ ಕ್ರುದ್ಧೋ ರಣೇ ಭೀಮಃ ಶಿರೋ ದುರ್ಮರ್ಷಣಸ್ಯ ಹ।
09025007c ಕ್ಷುರಪ್ರೇಣ ಪ್ರಮಥ್ಯಾಶು ಪಾತಯಾಮಾಸ ಭೂತಲೇ।।

ಆಗ ಕ್ರುದ್ಧ ಭೀಮಸೇನನು ರಣದಲ್ಲಿ ದುರ್ಮರ್ಷಣನ ಶಿರವನ್ನು ಕ್ಷುರಪ್ರದಿಂದ ಹೊಡೆಯಲು ಅವನು ಭೂತಲದ ಮೇಲೆ ಬಿದ್ದನು.

09025008a ತತೋಽಪರೇಣ ಭಲ್ಲೇನ ಸರ್ವಾವರಣಭೇದಿನಾ।
09025008c ಶ್ರುತಾಂತಮವಧೀದ್ಭೀಮಸ್ತವ ಪುತ್ರಂ ಮಹಾರಥಃ।।

ಮಹಾರಥ ಭೀಮನು ಸರ್ವಾವರಣಗಳನ್ನೂ ಭೇದಿಸಬಲ್ಲ ಇನ್ನೊಂದು ಭಲ್ಲದಿಂದ ನಿನ್ನ ಪುತ್ರ ಶ್ರುತಾಂತನನ್ನು ವಧಿಸಿದನು.

09025009a ಜಯತ್ಸೇನಂ ತತೋ ವಿದ್ಧ್ವಾ ನಾರಾಚೇನ ಹಸನ್ನಿವ।
09025009c ಪಾತಯಾಮಾಸ ಕೌರವ್ಯಂ ರಥೋಪಸ್ಥಾದರಿಂದಮಃ।।
09025009e ಸ ಪಪಾತ ರಥಾದ್ರಾಜನ್ಭೂಮೌ ತೂರ್ಣಂ ಮಮಾರ ಚ।।

ಅನಂತರ ಮುಗುಳ್ನಗೆಯೊಂದಿಗೆ ನಾರಾಚದಿಂದ ಜಯತ್ಸೇನನನ್ನು ಹೊಡೆದು ಆ ಅರಿಂದಮನು ಕೌರವ್ಯನನ್ನು ರಥಪೀಠದಿಂದ ಕೆಳಕ್ಕುರುಳಿಸಿದನು. ರಾಜನ್! ಕೂಡಲೇ ಅವನು ರಥದಿಂದ ಕೆಳಕ್ಕೆ ಬಿದ್ದು ಅಸುನೀಗಿದನು.

09025010a ಶ್ರುತರ್ವಾ ತು ತತೋ ಭೀಮಂ ಕ್ರುದ್ಧೋ ವಿವ್ಯಾಧ ಮಾರಿಷ।
09025010c ಶತೇನ ಗೃಧ್ರವಾಜಾನಾಂ ಶರಾಣಾಂ ನತಪರ್ವಣಾಂ।।

ಮಾರಿಷ! ಆಗ ಶ್ರುತರ್ವನು ಕ್ರುದ್ಧನಾಗಿ ಭೀಮನನ್ನು ಹದ್ದಿನಗರಿಗಳುಳ್ಳ ನೂರು ನತಪರ್ವ ಶರಗಳಿಂದ ಹೊಡೆದನು.

09025011a ತತಃ ಕ್ರುದ್ಧೋ ರಣೇ ಭೀಮೋ ಜೈತ್ರಂ ಭೂರಿಬಲಂ ರವಿಂ।
09025011c ತ್ರೀನೇತಾಂಸ್ತ್ರಿಭಿರಾನರ್ಚದ್ವಿಷಾಗ್ನಿಪ್ರತಿಮೈಃ ಶರೈಃ।।

ರಣದಲ್ಲಿ ಆಗ ಕ್ರುದ್ಧನಾದ ಭೀಮನು ಚೈತ್ರ, ಭೂರಿಬಲ ಮತ್ತು ರವಿ ಈ ಮೂವರನ್ನು ವಿಷಾಗ್ನಿ-ಸಮ ಮೂರು ಶರಗಳಿಂದ ಪ್ರಹರಿಸಿದನು.

09025012a ತೇ ಹತಾ ನ್ಯಪತನ್ಭೂಮೌ ಸ್ಯಂದನೇಭ್ಯೋ ಮಹಾರಥಾಃ।
09025012c ವಸಂತೇ ಪುಷ್ಪಶಬಲಾ ನಿಕೃತ್ತಾ ಇವ ಕಿಂಶುಕಾಃ।।

ವಸಂತ‌ಋತುವಿನಲ್ಲಿ ಕತ್ತರಿಸಿ ಕೆಳಗೆ ಬೀಳುವ ಪುಷ್ಪಭರಿತ ಮುತ್ತುಗದ ಮರಗಳಂತೆ ಆ ಮೂವರು ಮಹಾರಥರೂ ಹತರಾಗಿ ತಮ್ಮ ತಮ್ಮ ರಥಗಳಿಂದ ಭೂಮಿಯ ಮೇಲೆ ಬಿದ್ದರು.

09025013a ತತೋಽಪರೇಣ ತೀಕ್ಷ್ಣೇನ ನಾರಾಚೇನ ಪರಂತಪಃ।
09025013c ದುರ್ವಿಮೋಚನಮಾಹತ್ಯ ಪ್ರೇಷಯಾಮಾಸ ಮೃತ್ಯವೇ।।

ಅನಂತರ ಪರಂತಪ ಭೀಮನು ಇನ್ನೊಂದು ತೀಕ್ಷ್ಣ ನಾರಾಚದಿಂದ ದುರ್ವಿಮೋಚನನನ್ನು ಹೊಡೆದು ಅವನನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.

09025014a ಸ ಹತಃ ಪ್ರಾಪತದ್ಭೂಮೌ ಸ್ವರಥಾದ್ರಥಿನಾಂ ವರಃ।
09025014c ಗಿರೇಸ್ತು ಕೂಟಜೋ ಭಗ್ನೋ ಮಾರುತೇನೇವ ಪಾದಪಃ।।

ಪರ್ವತ ಶಿಖರದಲ್ಲಿದ್ದ ವೃಕ್ಷವು ಭಿರುಗಾಳಿಯಿಂದ ಭಗ್ನವಾಗಿ ಉರುಳಿ ಬೀಳುವಂತೆ ಆ ರಥಿ-ಶ್ರೇಷ್ಠನು ಹತನಾಗಿ ಭೂಮಿಯ ಮೇಲೆ ಬಿದ್ದನು.

09025015a ದುಷ್ಪ್ರಧರ್ಷಂ ತತಶ್ಚೈವ ಸುಜಾತಂ ಚ ಸುತೌ ತವ।
09025015c ಏಕೈಕಂ ನ್ಯವಧೀತ್ಸಂಖ್ಯೇ ದ್ವಾಭ್ಯಾಂ ದ್ವಾಭ್ಯಾಂ ಚಮೂಮುಖೇ।।
09025015e ತೌ ಶಿಲೀಮುಖವಿದ್ಧಾಂಗೌ ಪೇತತೂ ರಥಸತ್ತಮೌ।।

ಅನಂತರ ಭೀಮಸೇನನು ರಣದಲ್ಲಿ ನಿನ್ನ ಮಕ್ಕಳಾದ ದುಷ್ಪ್ರಧರ್ಷ ಮತ್ತು ಸುಜಾತರನ್ನು ಸೇನಾಮುಖದಲ್ಲಿ ಒಬ್ಬೊಬ್ಬರನ್ನೂ ಎರಡೆರಡು ಬಾಣಗಳಿಂದ ಹೊಡೆದು ಸಂಹರಿಸಿದನು. ಶಿಲೀಮುಖಗಳಿಂದ ಗಾಯಗೊಂಡಿದ್ದ ಆ ಇಬ್ಬರು ರಥಸತ್ತಮರೂ ಕೆಳಗೆ ಬಿದ್ದರು.

09025016a ತತೋ ಯತಂತಮಪರಮಭಿವೀಕ್ಷ್ಯ ಸುತಂ ತವ।
09025016c ಭಲ್ಲೇನ ಯುಧಿ ವಿವ್ಯಾಧ ಭೀಮೋ ದುರ್ವಿಷಹಂ ರಣೇ।।
09025016e ಸ ಪಪಾತ ಹತೋ ವಾಹಾತ್ಪಶ್ಯತಾಂ ಸರ್ವಧನ್ವಿನಾಂ।।

ಆಗ ರಣದಲ್ಲಿ ಪ್ರಯತ್ನಿಸುತ್ತಿದ್ದ ನಿನ್ನ ಇನ್ನೊಬ್ಬ ಮಗ ದುರ್ವಿಷಹನನ್ನು ನೋಡಿ ಭೀಮನು ಅವನನ್ನು ಭಲ್ಲದಿಂದ ಹೊಡೆದನು. ಅವನು ಸರ್ವಧನ್ವಿಗಳೂ ನೋಡುತ್ತಿದ್ದಂತೆ ವಾಹನದಿಂದ ಕೆಳಕ್ಕುರುಳಿ ಬಿದ್ದನು.

09025017a ದೃಷ್ಟ್ವಾ ತು ನಿಹತಾನ್ಭ್ರಾತೄನ್ಬಹೂನೇಕೇನ ಸಂಯುಗೇ।
09025017c ಅಮರ್ಷವಶಮಾಪನ್ನಃ ಶ್ರುತರ್ವಾ ಭೀಮಮಭ್ಯಯಾತ್।।
09025018a ವಿಕ್ಷಿಪನ್ಸುಮಹಚ್ಚಾಪಂ ಕಾರ್ತಸ್ವರವಿಭೂಷಿತಂ।
09025018c ವಿಸೃಜನ್ಸಾಯಕಾಂಶ್ಚೈವ ವಿಷಾಗ್ನಿಪ್ರತಿಮಾನ್ ಬಹೂನ್।।

ಯುದ್ಧದಲ್ಲಿ ಒಬ್ಬನಿಂದಲೇ ತನ್ನ ಅನೇಕ ಸಹೋದರರು ಹತರಾಗಿದ್ದುದನ್ನು ಕಂಡು ಸಹಿಸಿಕೊಳ್ಳಲಾರದೇ ಶ್ರುತರ್ವನು ಸುವರ್ಣವಿಭೂಷಿತ ಮಹಾಚಾಪವನ್ನು ಸೆಳೆಯುತ್ತಾ ವಿಷಾಗ್ನಿಗೆ ಸಮಾನ ಅನೇಕ ಸಾಯಕಗಳನ್ನು ಪ್ರಯೋಗಿಸುತ್ತಾ ಭೀಮನನ್ನು ಆಕ್ರಮಣಿಸಿದನು.

09025019a ಸ ತು ರಾಜನ್ಧನುಶ್ಚಿತ್ತ್ವಾ ಪಾಂಡವಸ್ಯ ಮಹಾಮೃಧೇ।
09025019c ಅಥೈನಂ ಚಿನ್ನಧನ್ವಾನಂ ವಿಂಶತ್ಯಾ ಸಮವಾಕಿರತ್।।

ರಾಜನ್! ಆ ಮಹಾಯುದ್ಧದಲ್ಲಿ ಅವನು ಪಾಂಡವನ ಧನುಸ್ಸನ್ನು ತುಂಡರಿಸಿ, ಧನುಸ್ಸು ಕತ್ತರಿಸಲ್ಪಟ್ಟ ಅವನನ್ನು ಇಪ್ಪತ್ತು ಬಾಣಗಳಿಂದ ಮುಸುಕಿದನು.

09025020a ತತೋಽನ್ಯದ್ಧನುರಾದಾಯ ಭೀಮಸೇನೋ ಮಹಾರಥಃ।
09025020c ಅವಾಕಿರತ್ತವ ಸುತಂ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಆಗ ಮಹಾರಥ ಭೀಮಸೇನನು ಅನ್ಯ ಧನುಸ್ಸನ್ನು ಮೇಲೆತ್ತಿಕೊಂಡು ನಿನ್ನ ಮಗನನ್ನು ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು.

09025021a ಮಹದಾಸೀತ್ತಯೋರ್ಯುದ್ಧಂ ಚಿತ್ರರೂಪಂ ಭಯಾನಕಂ।
09025021c ಯಾದೃಶಂ ಸಮರೇ ಪೂರ್ವಂ ಜಂಭವಾಸವಯೋರಭೂತ್।।

ಹಿಂದೆ ಜಂಭವ-ವಾಸವರ ನಡುವೆ ನಡೆದ ಸಮರದಂತೆ ಅವರಿಬ್ಬರ ಮಹಾ ಯುದ್ಧವು ವಿಚಿತ್ರವೂ ಭಯಾನಕವೂ ಆಗಿತ್ತು.

09025022a ತಯೋಸ್ತತ್ರ ಶರೈರ್ಮುಕ್ತೈರ್ಯಮದಂಡನಿಭೈಃ ಶುಭೈಃ।
09025022c ಸಮಾಚ್ಚನ್ನಾ ಧರಾ ಸರ್ವಾ ಖಂ ಚ ಸರ್ವಾ ದಿಶಸ್ತಥಾ।।

ಅವರಿಬ್ಬರಿಂದ ಮುಕ್ತವಾದ ಯಮದಂಡಗಳಂತೆ ನಿಶಿತ-ಶುಭ ಬಾಣಗಳು ಭೂಮಿ, ಆಕಾಶ, ದಿಕ್ಕು ಮತ್ತು ಉಪದಿಕ್ಕುಗಳನ್ನು ಮುಸುಕಿದವು.

09025023a ತತಃ ಶ್ರುತರ್ವಾ ಸಂಕ್ರುದ್ಧೋ ಧನುರಾಯಮ್ಯ ಸಾಯಕೈಃ।
09025023c ಭೀಮಸೇನಂ ರಣೇ ರಾಜನ್ಬಾಹ್ವೋರುರಸಿ ಚಾರ್ಪಯತ್।।

ರಾಜನ್! ಆಗ ರಣದಲ್ಲಿ ಸಂಕ್ರುದ್ಧನಾದ ಶ್ರುತರ್ವನು ಧನುಸ್ಸನ್ನೆತ್ತಿ ಸಾಯಕಗಳಿಂದ ಭೀಮಸೇನನ ಬಾಹು-ಎದೆಗಳಿಗೆ ಹೊಡೆದನು.

09025024a ಸೋಽತಿವಿದ್ಧೋ ಮಹಾರಾಜ ತವ ಪುತ್ರೇಣ ಧನ್ವಿನಾ।
09025024c ಭೀಮಃ ಸಂಚುಕ್ಷುಭೇ ಕ್ರುದ್ಧಃ ಪರ್ವಣೀವ ಮಹೋದಧಿಃ।।

ಮಹಾರಾಜ! ನಿನ್ನ ಧನ್ವಿ ಪುತ್ರನಿಂದ ಹೀಗೆ ಅತಿಯಾಗಿ ಪ್ರಹರಿಸಲ್ಪಟ್ಟ ಭೀಮನು ಪರ್ವಕಾಲದಲ್ಲಿ ಮಹಾಸಾಗರವು ಕ್ಷೋಭೆಗೊಳ್ಳುವಂತೆ ಕ್ರುದ್ಧನಾಗಿ ಭುಗಿಲೆದ್ದನು.

09025025a ತತೋ ಭೀಮೋ ರುಷಾವಿಷ್ಟಃ ಪುತ್ರಸ್ಯ ತವ ಮಾರಿಷ।
09025025c ಸಾರಥಿಂ ಚತುರಶ್ಚಾಶ್ವಾನ್ಬಾಣೈರ್ನಿನ್ಯೇ ಯಮಕ್ಷಯಂ।।

ಮಾರಿಷ! ಆಗ ರೋಷಾವಿಷ್ಟನಾದ ಭೀಮನು ನಿನ್ನ ಪುತ್ರನ ಸಾರಥಿಯನ್ನೂ, ನಾಲ್ಕು ಅಶ್ವಗಳನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.

09025026a ವಿರಥಂ ತಂ ಸಮಾಲಕ್ಷ್ಯ ವಿಶಿಖೈರ್ಲೋಮವಾಹಿಭಿಃ।
09025026c ಅವಾಕಿರದಮೇಯಾತ್ಮಾ ದರ್ಶಯನ್ಪಾಣಿಲಾಘವಂ।।

ಅವನು ವಿರಥನಾದುದನ್ನು ನೋಡಿ ಆ ಅಮೇಯಾತ್ಮ ಭೀಮನು ಕೂದಲನ್ನೂ ಸೀಳಬಲ್ಲಷ್ಟು ಹರಿತವಾದ ವಿಶಿಖಗಳಿಂದ ಅವನನ್ನು ಮುಚ್ಚಿ ತನ್ನ ಹಸ್ತಲಾಘವವನ್ನು ತೋರಿಸಿದನು.

09025027a ಶ್ರುತರ್ವಾ ವಿರಥೋ ರಾಜನ್ನಾದದೇ ಖಡ್ಗಚರ್ಮಣೀ।
09025027c ಅಥಾಸ್ಯಾದದತಃ ಖಡ್ಗಂ ಶತಚಂದ್ರಂ ಚ ಭಾನುಮತ್।।
09025027e ಕ್ಷುರಪ್ರೇಣ ಶಿರಃ ಕಾಯಾತ್ಪಾತಯಾಮಾಸ ಪಾಂಡವಃ।।

ರಾಜನ್! ವಿರಥನಾದ ಶ್ರುತರ್ವನು ಖಡ್ಗ-ಗುರಾಣಿಗಳನ್ನು ಎತ್ತಿಕೊಂಡನು. ಅವನು ನೂರು ಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಎತ್ತಿಕೊಳ್ಳಲು ಪಾಂಡವ ಭೀಮನು ಕ್ಷುರಪ್ರದಿಂದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿ ಬೀಳಿಸಿದನು.

09025028a ಚಿನ್ನೋತ್ತಮಾಂಗಸ್ಯ ತತಃ ಕ್ಷುರಪ್ರೇಣ ಮಹಾತ್ಮನಃ।
09025028c ಪಪಾತ ಕಾಯಃ ಸ ರಥಾದ್ವಸುಧಾಮನುನಾದಯನ್।।

ಆ ಮಹಾತ್ಮನ ಕ್ಷುರಪ್ರದಿಂದ ಶಿರವು ಕತ್ತರಿಸಲ್ಪಡಲು ಅವನ ಕಾಯವು ಶಬ್ಧಮಾಡುತ್ತಾ ರಥದಿಂದ ಭೂಮಿಯ ಮೇಲೆ ಬಿದ್ದಿತು.

09025029a ತಸ್ಮಿನ್ನಿಪತಿತೇ ವೀರೇ ತಾವಕಾ ಭಯಮೋಹಿತಾಃ।
09025029c ಅಭ್ಯದ್ರವಂತ ಸಂಗ್ರಾಮೇ ಭೀಮಸೇನಂ ಯುಯುತ್ಸವಃ।।

ಆ ವೀರನು ಕೆಳಗೆ ಬೀಳಲು ಭಯಮೋಹಿತರಾದ ನಿನ್ನವರು ಸಂಗ್ರಾಮದಲ್ಲಿ ಭೀಮಸೇನನೊಡನೆ ಯುದ್ಧಮಾಡುತ್ತಾ ಆಕ್ರಮಣಿಸಿದರು.

09025030a ತಾನಾಪತತ ಏವಾಶು ಹತಶೇಷಾದ್ಬಲಾರ್ಣವಾತ್।
09025030c ದಂಶಿತಃ ಪ್ರತಿಜಗ್ರಾಹ ಭೀಮಸೇನಃ ಪ್ರತಾಪವಾನ್।।
09025030e ತೇ ತು ತಂ ವೈ ಸಮಾಸಾದ್ಯ ಪರಿವವ್ರುಃ ಸಮಂತತಃ।

ತನ್ನ ಮೇಲೆ ಎರಗಿದ ಆ ಅಳಿದುಳಿದ ಸೇನೆಯನ್ನು ಕವಚಧಾರೀ ಪ್ರತಾಪವಾನ್ ಭೀಮಸೇನನು ತಡೆದು ಎದುರಿಸಿದನು.

09025031a ತತಸ್ತು ಸಂವೃತೋ ಭೀಮಸ್ತಾವಕೈರ್ನಿಶಿತೈಃ ಶರೈಃ।
09025031c ಪೀಡಯಾಮಾಸ ತಾನ್ಸರ್ವಾನ್ಸಹಸ್ರಾಕ್ಷ ಇವಾಸುರಾನ್।।

ಅವರಿಂದ ಸುತ್ತುವರೆಯಲ್ಪಟ್ಟ ಭೀಮಸೇನನು ನಿಶಿತ ಶರಗಳಿಂದ ಅವರೆಲ್ಲರನ್ನೂ ಸಹಸ್ರಾಕ್ಷ ಇಂದ್ರನು ಅಸುರರನ್ನು ಹೇಗೋ ಹಾಗೆ ಪೀಡಿಸತೊಡಗಿದನು.

09025032a ತತಃ ಪಂಚಶತಾನ್ ಹತ್ವಾ ಸವರೂಥಾನ್ಮಹಾರಥಾನ್।
09025032c ಜಘಾನ ಕುಂಜರಾನೀಕಂ ಪುನಃ ಸಪ್ತಶತಂ ಯುಧಿ।।

ಆಗ ಅವನು ಯುದ್ಧದಲ್ಲಿ ಐದು ನೂರು ಆವರಣಗಳಿಂದ ಕೂಡಿದ್ದ ಮಹಾರಥರನ್ನು ಸಂಹರಿಸಿ ಪುನಃ ಏಳು ನೂರು ಗಜಸೇನೆಗಳನ್ನು ಸಂಹರಿಸಿದನು.

09025033a ಹತ್ವಾ ದಶ ಸಹಸ್ರಾಣಿ ಪತ್ತೀನಾಂ ಪರಮೇಷುಭಿಃ।
09025033c ವಾಜಿನಾಂ ಚ ಶತಾನ್ಯಷ್ಟೌ ಪಾಂಡವಃ ಸ್ಮ ವಿರಾಜತೇ।।

ಪರಮ ಬಾಣಗಳಿಂದ ಹತ್ತುಸಾವಿರ ಪದಾತಿಗಳನ್ನು ಸಂಹರಿಸಿ ಪಾಂಡವನು ಎಂಟು ನೂರು ಕುದುರೆಗಳನ್ನು ಸಂಹರಿಸಿ ವಿರಾಜಿಸಿದನು.

09025034a ಭೀಮಸೇನಸ್ತು ಕೌಂತೇಯೋ ಹತ್ವಾ ಯುದ್ಧೇ ಸುತಾಂಸ್ತವ।
09025034c ಮೇನೇ ಕೃತಾರ್ಥಮಾತ್ಮಾನಂ ಸಫಲಂ ಜನ್ಮ ಚ ಪ್ರಭೋ।।

ಪ್ರಭೋ! ನಿನ್ನ ಮಕ್ಕಳನ್ನು ಯುದ್ಧದಲ್ಲಿ ಕೊಂದು ಕೌಂತೇಯ ಭೀಮಸೇನನು ತನ್ನನ್ನು ತಾನು ಕೃತಾರ್ಥನಾದನೆಂದೂ ಜನ್ಮವು ಸಫಲವಾಯಿತೆಂದೂ ತಿಳಿದುಕೊಂಡನು.

09025035a ತಂ ತಥಾ ಯುಧ್ಯಮಾನಂ ಚ ವಿನಿಘ್ನಂತಂ ಚ ತಾವಕಾನ್।
09025035c ಈಕ್ಷಿತುಂ ನೋತ್ಸಹಂತೇ ಸ್ಮ ತವ ಸೈನ್ಯಾನಿ ಭಾರತ।।

ಭಾರತ! ಹಾಗೆ ಯುದ್ಧಮಾಡಿ ನಿನ್ನವರನ್ನು ಸಂಹರಿಸುತ್ತಿದ್ದ ಅವನನ್ನು ನೋಡಲು ನಿನ್ನ ಸೈನ್ಯದವರು ಯಾರೂ ಉತ್ಸುಕರಾಗಿರಲಿಲ್ಲ.

09025036a ವಿದ್ರಾವ್ಯ ತು ಕುರೂನ್ಸರ್ವಾಂಸ್ತಾಂಶ್ಚ ಹತ್ವಾ ಪದಾನುಗಾನ್।
09025036c ದೋರ್ಭ್ಯಾಂ ಶಬ್ದಂ ತತಶ್ಚಕ್ರೇ ತ್ರಾಸಯಾನೋ ಮಹಾದ್ವಿಪಾನ್।।

ಕುರುಗಳೆಲ್ಲರನ್ನೂ ಓಡಿಸಿ, ಅವರ ಅನುಯಾಯಿಗಳೆಲ್ಲರನ್ನೂ ಸಂಹರಿಸಿ, ತನ್ನ ಎರಡೂ ಭುಜಗಳನ್ನು ತಟ್ಟಿಕೊಳ್ಳುತ್ತಾ ಅದರ ಶಬ್ಧದಿಂದ ಮಹಾಗಜಗಳನ್ನು ಹೆದರಿಸುತ್ತಿದ್ದನು.

09025037a ಹತಭೂಯಿಷ್ಠಯೋಧಾ ತು ತವ ಸೇನಾ ವಿಶಾಂ ಪತೇ।
09025037c ಕಿಂಚಿಚ್ಚೇಷಾ ಮಹಾರಾಜ ಕೃಪಣಾ ಸಮಪದ್ಯತ।।

ವಿಶಾಂಪತೇ! ನಿನ್ನ ಸೇನೆಯಲ್ಲಿ ಬಹುಪಾಲು ಯೋಧರು ಹತರಾಗಿ ಹೋಗಿದ್ದರು. ಮಹಾರಾಜ! ಉಳಿದ ಸ್ವಲ್ಪ ಜನರೂ ದೀನರಾಗಿದ್ದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಏಕಾದಶಧಾರ್ತರಾಷ್ಟ್ರವಧೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಏಕಾದಶಧಾರ್ತರಾಷ್ಟ್ರವಧ ಎನ್ನುವ ಇಪ್ಪತ್ತೈದನೇ ಅಧ್ಯಾಯವು.