024 ದುರ್ಯೋಧನಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 24

ಸಾರ

ಕೌರವ ಸೇನೆಯ ಪಲಾಯನ ಮತ್ತು ಪುನಃ ಯುದ್ಧಕ್ಕೆ ಹಿಂದಿರುಗಿದುದು (1-14). ಅರ್ಜುನ-ಭೀಮಸೇನರಿಂದ ಕೌರವ ಗಜಸೇನೆಯ ನಾಶ (15-35). ರಣಭೂಮಿಯಲ್ಲಿ ದುರ್ಯೋಧನನನ್ನು ಕಾಣದೇ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಶಕುನಿಯಿದ್ದಲ್ಲಿಗೆ ಹೋದುದು (36-43). ಸಾತ್ಯಕಿಯು ಸಂಜಯನನ್ನು ಸೆರೆಹಿಡಿದುದು (44-52). ಅಶ್ವತ್ಥಾಮ-ಕೃಪ-ಕೃತವರ್ಮರು ದುರ್ಯೋಧನನನ್ನು ಕಾಣದೇ ಉದ್ವಿಗ್ನರಾದುದು (53-56).

09024001 ಸಂಜಯ ಉವಾಚ 09024001a ಅಸ್ಯತಾಂ ಯತಮಾನಾನಾಂ ಶೂರಾಣಾಮನಿವರ್ತಿನಾಂ।
09024001c ಸಂಕಲ್ಪಮಕರೋನ್ಮೋಘಂ ಗಾಂಡೀವೇನ ಧನಂಜಯಃ।।

ಸಂಜಯನು ಹೇಳಿದನು: “ಯುದ್ಧದಿಂದ ಪಲಾಯನ ಮಾಡದೇ ಪ್ರಯತ್ನಪಡುತ್ತಿದ್ದ ನಮ್ಮ ಶೂರರ ಸಂಕಲ್ಪಗಳನ್ನು ಧನಂಜಯನು ಗಾಂಡೀವದಿಂದ ವ್ಯರ್ಥಗೊಳಿಸಿದನು.

09024002a ಇಂದ್ರಾಶನಿಸಮಸ್ಪರ್ಶಾನವಿಷಹ್ಯಾನ್ಮಹೌಜಸಃ।
09024002c ವಿಸೃಜನ್ದೃಶ್ಯತೇ ಬಾಣಾನ್ಧಾರಾ ಮುಂಚನ್ನಿವಾಂಬುದಃ।।

ಇಂದ್ರನ ವಜ್ರಸ್ಪರ್ಷಕ್ಕೆ ಸಮನಾದ ಸಹಿಸಲಸಾಧ್ಯ ಬಾಣಗಳನ್ನು ಪ್ರಯೋಗಿಸುತ್ತಿದ್ದ ಮಹೌಜಸ ಅರ್ಜುನನು ಮಳೆಗರೆಯುವ ಮೋಡದಂತೆ ಕಾಣುತ್ತಿದ್ದನು.

09024003a ತತ್ಸೈನ್ಯಂ ಭರತಶ್ರೇಷ್ಠ ವಧ್ಯಮಾನಂ ಕಿರೀಟಿನಾ।
09024003c ಸಂಪ್ರದುದ್ರಾವ ಸಂಗ್ರಾಮಾತ್ತವ ಪುತ್ರಸ್ಯ ಪಶ್ಯತಃ।।

ಭರತಶ್ರೇಷ್ಠ! ಆ ಸೇನೆಯನ್ನು ಕಿರೀಟಿಯು ವಧಿಸುತ್ತಿರಲು ನಿನ್ನ ಮಗನು ನೋಡುತ್ತಿದ್ದಂತೆಯೇ ಸಂಗ್ರಾಮದಿಂದ ಅದು ಪಲಾಯನಮಾಡಿತು.

09024004a ಹತಧುರ್ಯಾ ರಥಾಃ ಕೇ ಚಿದ್ಧತಸೂತಾಸ್ತಥಾಪರೇ।
09024004c ಭಗ್ನಾಕ್ಷಯುಗಚಕ್ರೇಷಾಃ ಕೇ ಚಿದಾಸನ್ವಿಶಾಂ ಪತೇ।।

ವಿಶಾಂಪತೇ! ಕೆಲವರ ರಥದ ಕುದುರೆಗಳು ಹತವಾಗಿದ್ದವು. ಇತರರ ಸಾರಥಿಗಳು ಹತರಾಗಿದ್ದರು. ಇನ್ನು ಕೆಲವರ ರಥದ ನೊಗಗಳು ಮತ್ತು ಚಕ್ರಗಳು ತುಂಡಾಗಿದ್ದವು.

09024005a ಅನ್ಯೇಷಾಂ ಸಾಯಕಾಃ ಕ್ಷೀಣಾಸ್ತಥಾನ್ಯೇ ಶರಪೀಡಿತಾಃ।
09024005c ಅಕ್ಷತಾ ಯುಗಪತ್ಕೇ ಚಿತ್ಪ್ರಾದ್ರವನ್ಭಯಪೀಡಿತಾಃ।।

ಅನ್ಯರಲ್ಲಿ ಸಾಯಕಗಳು ಕಡಿಮೆಯಿದ್ದವು. ಅನ್ಯರು ಶರಪೀಡಿತರಾಗಿದ್ದರು. ಕೆಲವರು ಬಾಣಗಳಿಂದ ಗಾಯಗೊಂಡಿರದಿದ್ದರೂ ಭಯಪೀಡಿತರಾಗಿ ಓಡಿಹೋಗುತ್ತಿದ್ದರು.

09024006a ಕೇ ಚಿತ್ಪುತ್ರಾನುಪಾದಾಯ ಹತಭೂಯಿಷ್ಠವಾಹನಾಃ।
09024006c ವಿಚುಕ್ರುಶುಃ ಪಿತೄನನ್ಯೇ ಸಹಾಯಾನಪರೇ ಪುನಃ।।

ವಾಹನಗಳನ್ನು ಕಳೆದುಕೊಂಡಿದ್ದ ಕೆಲವರು ಮಕ್ಕಳನ್ನು ಕರೆದುಕೊಂಡು ಪಲಾಯನಮಾಡುತ್ತಿದ್ದರೆ ಇನ್ನು ಕೆಲವರು ಅವರ ಪಿತರನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದರು.

09024007a ಬಾಂಧವಾಂಶ್ಚ ನರವ್ಯಾಘ್ರ ಭ್ರಾತೄನ್ಸಂಬಂಧಿನಸ್ತಥಾ।
09024007c ದುದ್ರುವುಃ ಕೇ ಚಿದುತ್ಸೃಜ್ಯ ತತ್ರ ತತ್ರ ವಿಶಾಂ ಪತೇ।।

ವಿಶಾಂಪತೇ! ನರವ್ಯಾಘ್ರ! ಕೆಲವರು ಬಾಂಧವರನ್ನೂ, ಸಂಬಂಧಿಗಳನ್ನೂ ಅಲ್ಲಲ್ಲಿಯೇ ಬಿಟ್ಟು ಓಡಿ ಹೋಗುತ್ತಿದ್ದರು.

09024008a ಬಹವೋಽತ್ರ ಭೃಶಂ ವಿದ್ಧಾ ಮುಹ್ಯಮಾನಾ ಮಹಾರಥಾಃ।
09024008c ನಿಷ್ಟನಂತಃ ಸ್ಮ ದೃಶ್ಯಂತೇ ಪಾರ್ಥಬಾಣಹತಾ ನರಾಃ।।

ಅಲ್ಲಿ ಅನೇಕ ಮಹಾರಥರು ಬಹಳ ಗಾಯಗೊಂಡು ಮೂರ್ಛಿತರಾಗಿದ್ದರು. ಪಾರ್ಥನ ಬಾಣಗಳಿಂದ ಗಾಯಗೊಂಡ ನರರು ನಿಟ್ಟುಸಿರು ಬಿಡುತ್ತಿರುವುದು ಕಂಡುಬಂದಿತು.

09024009a ತಾನನ್ಯೇ ರಥಮಾರೋಪ್ಯ ಸಮಾಶ್ವಾಸ್ಯ ಮುಹೂರ್ತಕಂ।
09024009c ವಿಶ್ರಾಂತಾಶ್ಚ ವಿತೃಷ್ಣಾಶ್ಚ ಪುನರ್ಯುದ್ಧಾಯ ಜಗ್ಮಿರೇ।।

ಅಂಥವರು ಅನ್ಯರ ರಥವನ್ನೇರಿ ಸಮಾಧಾನಗೊಂಡು ಸ್ವಲ್ಪಕಾಲ ವಿಶ್ರಾಂತಿ ಪಡೆದು ಬಾಯಾರಿಕೆಯನ್ನು ತೀರಿಸಿಕೊಂಡು ಪುನಃ ಯುದ್ಧಕ್ಕೆ ಹಿಂದಿರುಗಿದರು.

09024010a ತಾನಪಾಸ್ಯ ಗತಾಃ ಕೇ ಚಿತ್ಪುನರೇವ ಯುಯುತ್ಸವಃ।
09024010c ಕುರ್ವಂತಸ್ತವ ಪುತ್ರಸ್ಯ ಶಾಸನಂ ಯುದ್ಧದುರ್ಮದಾಃ।।

ಓಡಿ ಹೋದವರಲ್ಲಿ ಕೆಲವು ಯುದ್ಧದುರ್ಮದರು ನಿನ್ನ ಮಗನ ಶಾಸನದಂತೆ ಮಾಡಲು ಯುದ್ಧೋತ್ಸುಕರಾಗಿ ಪುನಃ ಯುದ್ಧಕ್ಕೆ ಹಿಂದಿರುಗುತ್ತಿದ್ದರು.

09024011a ಪಾನೀಯಮಪರೇ ಪೀತ್ವಾ ಪರ್ಯಾಶ್ವಾಸ್ಯ ಚ ವಾಹನಂ।
09024011c ವರ್ಮಾಣಿ ಚ ಸಮಾರೋಪ್ಯ ಕೇ ಚಿದ್ಭರತಸತ್ತಮ।।

ಭರತಸತ್ತಮ! ಕೆಲವರು ಪಾನೀಯಗಳನ್ನು ಕುಡಿದು, ವಾಹನಗಳನ್ನು ಉಪಚರಿಸಿ, ಕವಚಗಳನ್ನು ಧರಿಸಿ ಬರುತ್ತಿದ್ದರು.

09024012a ಸಮಾಶ್ವಾಸ್ಯಾಪರೇ ಭ್ರಾತೄನ್ನಿಕ್ಷಿಪ್ಯ ಶಿಬಿರೇಽಪಿ ಚ।
09024012c ಪುತ್ರಾನನ್ಯೇ ಪಿತೄನನ್ಯೇ ಪುನರ್ಯುದ್ಧಮರೋಚಯನ್।।

ಕೆಲವರು ಸಹೋದರರರನ್ನು, ಕೆಲವರು ಮಕ್ಕಳನ್ನು, ಕೆಲವರು ತಂದೆಯರನ್ನು ಶಿಬಿರಗಳಿಗೆ ಕೊಂಡೊಯ್ದು, ಸಮಾಧಾನಪಡಿಸಿ, ಪುನಃ ಯುದ್ಧಕ್ಕೆ ಮರಳುತ್ತಿದ್ದರು.

09024013a ಸಜ್ಜಯಿತ್ವಾ ರಥಾನ್ಕೇ ಚಿದ್ಯಥಾಮುಖ್ಯಂ ವಿಶಾಂ ಪತೇ।
09024013c ಆಪ್ಲುತ್ಯ ಪಾಂಡವಾನೀಕಂ ಪುನರ್ಯುದ್ಧಮರೋಚಯನ್।।

ವಿಶಾಂಪತೇ! ಕೆಲವರು ರಥಗಳನ್ನು ಸಜ್ಜುಗೊಳಿಸಿ ಪಾಂಡವ ಸೇನೆಯನ್ನು ಆಕ್ರಮಣಿಸಿ ತಮ್ಮ ತಮ್ಮ ಅಂತಸ್ಥಿಗೆ ಸಮನಾಗಿ ಪುನಃ ಯುದ್ಧದಲ್ಲಿ ತೊಡಗಿದರು.

09024014a ತೇ ಶೂರಾಃ ಕಿಂಕಿಣೀಜಾಲೈಃ ಸಮಾಚ್ಚನ್ನಾ ಬಭಾಸಿರೇ।
09024014c ತ್ರೈಲೋಕ್ಯವಿಜಯೇ ಯುಕ್ತಾ ಯಥಾ ದೈತೇಯದಾನವಾಃ।।

ತ್ರೈಲೋಕ್ಯವಿಜಯದಲ್ಲಿ ನಿರತರಾದ ದೈತ್ಯ-ದಾನವರಂತೆ ಆ ಶೂರರು ಕಿಂಕಿಣೀಜಾಲಗಳಿಂದ ಆಚ್ಛಾದಿತರಾಗಿ ಪ್ರಕಾಶಿಸುತ್ತಿದ್ದರು.

09024015a ಆಗಮ್ಯ ಸಹಸಾ ಕೇ ಚಿದ್ರಥೈಃ ಸ್ವರ್ಣವಿಭೂಷಿತೈಃ।
09024015c ಪಾಂಡವಾನಾಮನೀಕೇಷು ಧೃಷ್ಟದ್ಯುಮ್ನಮಯೋಧಯನ್।।

ಕೆಲವರು ಸುವರ್ಣವಿಭೂಷಿತ ರಥಗಳಲ್ಲಿ ಬೇಗನೇ ಬಂದು ಪಾಂಡವರ ಸೇನೆಗಳಲ್ಲಿ ಧೃಷ್ಟದ್ಯುಮ್ನನೊಡನೆ ಯುದ್ಧದಲ್ಲಿ ತೊಡಗಿದರು.

09024016a ಧೃಷ್ಟದ್ಯುಮ್ನೋಽಪಿ ಪಾಂಚಾಲ್ಯಃ ಶಿಖಂಡೀ ಚ ಮಹಾರಥಃ।
09024016c ನಾಕುಲಿಶ್ಚ ಶತಾನೀಕೋ ರಥಾನೀಕಮಯೋಧಯನ್।।

ಆ ರಥಸೇನೆಯನ್ನು ಪಾಂಚಾಲ್ಯ ಧೃಷ್ಟದ್ಯುಮ್ನ, ಮಹಾರಥ ಶಿಖಂಡೀ, ನಾಕುಲೀ ಶತಾನೀಕರು ಎದುರಿಸಿ ಯುದ್ಧಮಾಡಿದರು.

09024017a ಪಾಂಚಾಲ್ಯಸ್ತು ತತಃ ಕ್ರುದ್ಧಃ ಸೈನ್ಯೇನ ಮಹತಾ ವೃತಃ।
09024017c ಅಭ್ಯದ್ರವತ್ಸುಸಂರಬ್ಧಸ್ತಾವಕಾನ್ ಹಂತುಮುದ್ಯತಃ।।

ಆಗ ಪಾಂಚಾಲ್ಯನು ಕ್ರುದ್ಧನಾಗಿ ತನ್ನ ಮಹಾಸೇನೆಯಿಂದ ಆವೃತನಾಗಿ ನಿನ್ನವರನ್ನು ಕೂಡಲೇ ಆಕ್ರಮಣಿಸಿ ಸಂಹರಿಸಲು ತೊಡಗಿದನು.

09024018a ತತಸ್ತ್ವಾಪತತಸ್ತಸ್ಯ ತವ ಪುತ್ರೋ ಜನಾಧಿಪ।
09024018c ಬಾಣಸಂಘಾನನೇಕಾನ್ವೈ ಪ್ರೇಷಯಾಮಾಸ ಭಾರತ।।

ಜನಾಧಿಪ! ಭಾರತ! ಆಗ ನಿನ್ನ ಮಗನು ತನ್ನ ಸೇನೆಯನ್ನು ಆಕ್ರಮಣಿಸುತ್ತಿದ್ದ ಧೃಷ್ಟದ್ಯುಮ್ನನ ಮೇಲೆ ಅನೇಕ ಬಾಣಸಮೂಹಗಳನ್ನು ಪ್ರಯೋಗಿಸಿದನು.

09024019a ಧೃಷ್ಟದ್ಯುಮ್ನಸ್ತತೋ ರಾಜಂಸ್ತವ ಪುತ್ರೇಣ ಧನ್ವಿನಾ।
09024019c ನಾರಾಚೈರ್ಬಹುಭಿಃ ಕ್ಷಿಪ್ರಂ ಬಾಹ್ವೋರುರಸಿ ಚಾರ್ಪಿತಃ।।

ರಾಜನ್! ಆಗ ನಿನ್ನ ಮಗ ಧನ್ವಿಯು ಕ್ಷಿಪ್ರವಾಗಿ ಅನೇಕ ನಾರಾಚಗಳಿಂದ ಧೃಷ್ಟದ್ಯುಮ್ನನ ಬಾಹು-ಎದೆಗಳಿಗೆ ಹೊಡೆದನು.

09024020a ಸೋಽತಿವಿದ್ಧೋ ಮಹೇಷ್ವಾಸಸ್ತೋತ್ತ್ರಾರ್ದಿತ ಇವ ದ್ವಿಪಃ।
09024020c ತಸ್ಯಾಶ್ವಾಂಶ್ಚತುರೋ ಬಾಣೈಃ ಪ್ರೇಷಯಾಮಾಸ ಮೃತ್ಯವೇ।।
09024020e ಸಾರಥೇಶ್ಚಾಸ್ಯ ಭಲ್ಲೇನ ಶಿರಃ ಕಾಯಾದಪಾಹರತ್।।

ಅಂಕುಶದಿಂದ ಚುಚ್ಚಲ್ಪಟ್ಟ ಆನೆಯಂತೆ ಅತಿಯಾಗಿ ಗಾಯಗೊಂಡ ಮಹೇಷ್ವಾಸ ಧೃಷ್ಟದ್ಯುಮ್ನನು ಬಾಣಗಳಿಂದ ದುರ್ಯೋಧನನ ನಾಲ್ಕು ಕುದುರೆಗಳನ್ನೂ ಮೃತ್ಯುಲೋಕಗಳಿಗೆ ಕಳುಹಿಸಿದನು. ಮತ್ತು ಭಲ್ಲದಿಂದ ಸಾರಥಿಯ ಶಿರವನ್ನು ಕಾಯದಿಂದ ಅಪಹರಿಸಿದನು.

09024021a ತತೋ ದುರ್ಯೋಧನೋ ರಾಜಾ ಪೃಷ್ಠಮಾರುಹ್ಯ ವಾಜಿನಃ।
09024021c ಅಪಾಕ್ರಾಮದ್ಧತರಥೋ ನಾತಿದೂರಮರಿಂದಮಃ।।

ಆಗ ರಥವನ್ನು ಕಳೆದುಕೊಂಡ ಅರಿಂದಮ ರಾಜಾ ದುರ್ಯೋಧನನು ಕುದುರೆಯನ್ನೇರಿ ರಣರಂಗದಿಂದ ಸ್ವಲ್ಪ ದೂರ ಹೋದನು.

09024022a ದೃಷ್ಟ್ವಾ ತು ಹತವಿಕ್ರಾಂತಂ ಸ್ವಮನೀಕಂ ಮಹಾಬಲಃ।
09024022c ತವ ಪುತ್ರೋ ಮಹಾರಾಜ ಪ್ರಯಯೌ ಯತ್ರ ಸೌಬಲಃ।।

ಮಹಾರಾಜ! ತನ್ನ ಸೇನೆಯ ವಿಕ್ರಮವು ಹತವಾದುದನ್ನು ನೋಡಿದ ನಿನ್ನ ಪುತ್ರ ಮಹಾಬಲನು ಸೌಬಲನಿದ್ದಲ್ಲಿಗೆ ಹೋದನು.

09024023a ತತೋ ರಥೇಷು ಭಗ್ನೇಷು ತ್ರಿಸಾಹಸ್ರಾ ಮಹಾದ್ವಿಪಾಃ।
09024023c ಪಾಂಡವಾನ್ರಥಿನಃ ಪಂಚ ಸಮಂತಾತ್ಪರ್ಯವಾರಯನ್।।

ರಥಸೇನೆಯು ಭಗ್ನವಾಗಲು ಮೂರುಸಾವಿರ ಮಹಾಗಜಗಳು ಐವರು ಮಹಾರಥ ಪಾಂಡವರನ್ನು ಎಲ್ಲ ಕಡೆಗಳಿಂದ ಸುತ್ತುವರೆದವು.

09024024a ತೇ ವೃತಾಃ ಸಮರೇ ಪಂಚ ಗಜಾನೀಕೇನ ಭಾರತ।
09024024c ಅಶೋಭಂತ ನರವ್ಯಾಘ್ರಾ ಗ್ರಹಾ ವ್ಯಾಪ್ತಾ ಘನೈರಿವ।।

ಭಾರತ! ಸಮರದಲ್ಲಿ ಗಜಸೇನೆಯಿಂದ ಸಮಾವೃತರಾದ ಆ ಐವರು ನರವ್ಯಾಘ್ರರು ಮೋಡಗಳು ಮುಚ್ಚಿದ ಗ್ರಹಗಳಂತೆ ಶೋಭಿಸಿದರು.

09024025a ತತೋಽರ್ಜುನೋ ಮಹಾರಾಜ ಲಬ್ಧಲಕ್ಷೋ ಮಹಾಭುಜಃ।
09024025c ವಿನಿರ್ಯಯೌ ರಥೇನೈವ ಶ್ವೇತಾಶ್ವಃ ಕೃಷ್ಣಸಾರಥಿಃ।।

ಆಗ ಮಹಾರಾಜ! ಲಬ್ಧಲಕ್ಷ-ಮಹಾಭುಜ-ಶ್ವೇತಾಶ್ವ-ಕೃಷ್ಣಸಾರಥಿ ಅರ್ಜುನನು ತನ್ನ ರಥವನ್ನು ಅಲ್ಲಿಗೇ ಕೊಂಡೊಯ್ದನು.

09024026a ತೈಃ ಸಮಂತಾತ್ಪರಿವೃತಃ ಕುಂಜರೈಃ ಪರ್ವತೋಪಮೈಃ।
09024026c ನಾರಾಚೈರ್ವಿಮಲೈಸ್ತೀಕ್ಷ್ಣೈರ್ಗಜಾನೀಕಮಪೋಥಯತ್।।

ಪರ್ವತೋಪಮ ಆನೆಗಳಿಂದ ಪರಿವೃತನಾಗಿದ್ದ ಅವನು ವಿಮಲ ತೀಕ್ಷ್ಣ ನಾರಾಚಗಳಿಂದ ಗಜಸೇನೆಯನ್ನು ಧ್ವಂಸಗೊಳಿಸಿದನು.

09024027a ತತ್ರೈಕಬಾಣನಿಹತಾನಪಶ್ಯಾಮ ಮಹಾಗಜಾನ್।
09024027c ಪತಿತಾನ್ಪಾತ್ಯಮಾನಾಂಶ್ಚ ವಿಭಿನ್ನಾನ್ಸವ್ಯಸಾಚಿನಾ।।

ಅಲ್ಲಿ ನಾವು ಸವ್ಯಸಾಚಿಯ ಒಂದೊಂದು ಬಾಣದಿಂದ ಹತವಾಗಿ ಕೆಳಗೆ ಬಿದ್ದಿದ್ದ, ಬೀಳುತ್ತಿದ್ದ ಮತ್ತು ಭಿನ್ನಶರೀರವುಳ್ಳ ಮಹಾಗಜಗಳನ್ನು ನೋಡಿದೆವು.

09024028a ಭೀಮಸೇನಸ್ತು ತಾನ್ದೃಷ್ಟ್ವಾ ನಾಗಾನ್ಮತ್ತಗಜೋಪಮಃ।
09024028c ಕರೇಣ ಗೃಹ್ಯ ಮಹತೀಂ ಗದಾಮಭ್ಯಪತದ್ಬಲೀ।
09024028e ಅವಪ್ಲುತ್ಯ ರಥಾತ್ತೂರ್ಣಂ ದಂಡಪಾಣಿರಿವಾಂತಕಃ।।

ಆ ಆನೆಗಳನ್ನು ನೋಡಿ ಮದಿಸಿದ ಆನೆಯಂತಿದ್ದ ಬಲಶಾಲಿ ಭೀಮಸೇನನು ಕೈಯಲ್ಲಿ ಅತಿದೊಡ್ಡ ಗದೆಯನ್ನು ಹಿಡಿದು ಬೇಗನೆ ರಥದಿಂದ ಧುಮುಕಿ ದಂಡಪಾಣಿ ಅಂತಕನಂತೆ ಮುನ್ನುಗ್ಗಿದನು.

09024029a ತಮುದ್ಯತಗದಂ ದೃಷ್ಟ್ವಾ ಪಾಂಡವಾನಾಂ ಮಹಾರಥಂ।
09024029c ವಿತ್ರೇಸುಸ್ತಾವಕಾಃ ಸೈನ್ಯಾಃ ಶಕೃನ್ಮೂತ್ರಂ ಪ್ರಸುಸ್ರುವುಃ।।
09024029e ಆವಿಗ್ನಂ ಚ ಬಲಂ ಸರ್ವಂ ಗದಾಹಸ್ತೇ ವೃಕೋದರೇ।।

ಗದೆಯನ್ನು ಎತ್ತಿಹಿಡಿದ ಆ ಪಾಂಡವ ಮಹಾರಥನನ್ನು ನೋಡಿ ನಿನ್ನ ಸೇನೆಗಳು ನಡುಗಿದವು ಮತ್ತು ಮಲ-ಮೂತ್ರಗಳನ್ನು ವಿಸರ್ಜಿಸಿದವು. ಗದಾಧಾರಿಯಾದ ವೃಕೋದರನನ್ನು ನೋಡಿ ಎಲ್ಲ ಸೇನೆಗಳೂ ಉದ್ವಿಗ್ನಗೊಂಡವು.

09024030a ಗದಯಾ ಭೀಮಸೇನೇನ ಭಿನ್ನಕುಂಭಾನ್ರಜಸ್ವಲಾನ್।
09024030c ಧಾವಮಾನಾನಪಶ್ಯಾಮ ಕುಂಜರಾನ್ಪರ್ವತೋಪಮಾನ್।।

ಪರ್ವತೋಪಮ ಆನೆಗಳು ಭೀಮಸೇನನ ಗದೆಯಿಂದ ಕುಂಭಗಳೊಡೆದು ಧೂಳುಮುಕ್ಕಿ ಓಡಿಹೋಗುತ್ತಿರುವುದನ್ನು ನಾವು ನೋಡಿದೆವು.

09024031a ಪ್ರಧಾವ್ಯ ಕುಂಜರಾಸ್ತೇ ತು ಭೀಮಸೇನಗದಾಹತಾಃ।
09024031c ಪೇತುರಾರ್ತಸ್ವರಂ ಕೃತ್ವಾ ಚಿನ್ನಪಕ್ಷಾ ಇವಾದ್ರಯಃ।।

ಭೀಮಸೇನನ ಗದೆಯಿಂದ ಪ್ರಹರಿತಗೊಂಡ ಆ ಆನೆಗಳು ಓಡಿಹೋದವು. ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಂತೆ ಆರ್ತಸ್ವರದಲ್ಲಿ ಚೀರಿಕೊಳ್ಳುತ್ತಾ ಕೆಲವು ಅಲ್ಲಿಯೇ ಬಿದ್ದವು.

09024032a ತಾನ್ಭಿನ್ನಕುಂಭಾನ್ಸುಬಹೂನ್ದ್ರವಮಾಣಾನಿತಸ್ತತಃ।
09024032c ಪತಮಾನಾಂಶ್ಚ ಸಂಪ್ರೇಕ್ಷ್ಯ ವಿತ್ರೇಸುಸ್ತವ ಸೈನಿಕಾಃ।।

ಕುಂಭಗಳೊಡೆದು ಹಾಗೆ ಓಡಿಹೋಗುತ್ತಿದ್ದ ಮತ್ತು ಕೆಳಗೆ ಉರುಳುತ್ತಿದ್ದ ಅನೇಕ ಆನೆಗಳನ್ನು ನೋಡಿ ನಿನ್ನ ಸೈನಿಕರು ನಡುಗಿದರು.

09024033a ಯುಧಿಷ್ಠಿರೋಽಪಿ ಸಂಕ್ರುದ್ಧೋ ಮಾದ್ರೀಪುತ್ರೌ ಚ ಪಾಂಡವೌ।
09024033c ಗೃಧ್ರಪಕ್ಷೈಃ ಶಿತೈರ್ಬಾಣೈರ್ಜಘ್ನುರ್ವೈ ಗಜಯೋಧಿನಃ।।

ಸಂಕ್ರುದ್ಧ ಯುಧಿಷ್ಠಿರನೂ, ಮಾದ್ರೀಪುತ್ರ ಪಾಂಡವರೂ ಹದ್ದಿನ ಗರಿಗಳುಳ್ಳ ನಿಶಿತ ಬಾಣಗಳಿಂದ ಗಜಯೋಧಿಗಳನ್ನು ಸಂಹರಿಸುತ್ತಿದ್ದರು.

09024034a ಧೃಷ್ಟದ್ಯುಮ್ನಸ್ತು ಸಮರೇ ಪರಾಜಿತ್ಯ ನರಾಧಿಪಂ।
09024034c ಅಪಕ್ರಾಂತೇ ತವ ಸುತೇ ಹಯಪೃಷ್ಠಂ ಸಮಾಶ್ರಿತೇ।।
09024035a ದೃಷ್ಟ್ವಾ ಚ ಪಾಂಡವಾನ್ಸರ್ವಾನ್ಕುಂಜರೈಃ ಪರಿವಾರಿತಾನ್।
09024035c ಧೃಷ್ಟದ್ಯುಮ್ನೋ ಮಹಾರಾಜ ಸಹ ಸರ್ವೈಃ ಪ್ರಭದ್ರಕೈಃ।।
09024035e ಪುತ್ರಃ ಪಾಂಚಾಲರಾಜಸ್ಯ ಜಿಘಾಂಸುಃ ಕುಂಜರಾನ್ಯಯೌ।।

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ನರಾಧಿಪನನ್ನು ಸೋಲಿಸಿ, ನಿನ್ನ ಮಗನು ಕುದುರೆಯ ಮೇಲೆ ಹೊರಟುಹೋಗಲು, ಸುಧಾರಿಸಿಕೊಂಡು, ಪಾಂಡವರೆಲ್ಲರೂ ಆನೆಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ಕಂಡನು. ಮಹಾರಾಜ! ಆಗ ಪಾಂಚಾಲರಾಜ ಪುತ್ರ ಧೃಷ್ಟದ್ಯುಮ್ನನು ಸರ್ವ ಪ್ರಭದ್ರಕರೊಡನೆ ಆನೆಗಳನ್ನು ಸಂಹರಿಸಲು ಬಂದನು.

09024036a ಅದೃಷ್ಟ್ವಾ ತು ರಥಾನೀಕೇ ದುರ್ಯೋಧನಮರಿಂದಮಂ।
09024036c ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ।।
09024036e ಅಪೃಚ್ಚನ್ ಕ್ಷತ್ರಿಯಾಂಸ್ತತ್ರ ಕ್ವ ನು ದುರ್ಯೋಧನೋ ಗತಃ।।

ರಥಸೇನೆಯಲ್ಲಿ ಅರಿಂದಮ ದುರ್ಯೋಧನನನ್ನು ಕಾಣದೇ ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ಅಲ್ಲಿದ್ದ ಕ್ಷತ್ರಿಯರಲ್ಲಿ ದುರ್ಯೋಧನನು ಎಲ್ಲಿ ಹೋದ ಎಂದು ಪ್ರಶ್ನಿಸಿದರು.

09024037a ಅಪಶ್ಯಮಾನಾ ರಾಜಾನಂ ವರ್ತಮಾನೇ ಜನಕ್ಷಯೇ।
09024037c ಮನ್ವಾನಾ ನಿಹತಂ ತತ್ರ ತವ ಪುತ್ರಂ ಮಹಾರಥಾಃ।।
09024037e ವಿಷಣ್ಣವದನಾ ಭೂತ್ವಾ ಪರ್ಯಪೃಚ್ಚಂತ ತೇ ಸುತಂ।।

ಜನಕ್ಷಯವು ನಡೆಯುತ್ತಿರುವಾಗ ರಾಜನನ್ನು ಕಾಣದೇ ಆ ಮಹಾರಥರು ನಿನ್ನ ಮಗನು ಅಲ್ಲಿ ಹತನಾದನೆಂದೇ ಭಾವಿಸಿ ವಿಷಣ್ಣವದನರಾಗಿ ನಿನ್ನ ಮಗನ ಕುರಿತಾಗಿ ಪುನಃ ಪುನಃ ಕೇಳತೊಡಗಿದರು.

09024038a ಆಹುಃ ಕೇ ಚಿದ್ಧತೇ ಸೂತೇ ಪ್ರಯಾತೋ ಯತ್ರ ಸೌಬಲಃ।
09024038c ಅಪರೇ ತ್ವಬ್ರುವಂಸ್ತತ್ರ ಕ್ಷತ್ರಿಯಾ ಭೃಶವಿಕ್ಷತಾಃ।।

ಸೂತನು ಹತನಾಗಲು ಅವನು ಸೌಬಲನಿದ್ದಲ್ಲಿಗೆ ಹೋದನೆಂದು ಕೆಲವರು ಹೇಳಿದರೆ ತುಂಬಾ ಗಾಯಗೊಂಡಿರುವ ಇತರ ಕ್ಷತ್ರಿಯರು ಅವರಿಗೆ ಹೀಗೆ ಹೇಳಿದರು:

09024039a ದುರ್ಯೋಧನೇನ ಕಿಂ ಕಾರ್ಯಂ ದ್ರಕ್ಷ್ಯಧ್ವಂ ಯದಿ ಜೀವತಿ।
09024039c ಯುಧ್ಯಧ್ವಂ ಸಹಿತಾಃ ಸರ್ವೇ ಕಿಂ ವೋ ರಾಜಾ ಕರಿಷ್ಯತಿ।।

“ದುರ್ಯೋಧನನಿಂದ ಇನ್ನೇನು ಕೆಲಸವಾಗಬೇಕಾಗಿದೆ? ಜೀವಂತವಾಗಿದ್ದರೆ ಅವನನ್ನು ನೀವು ಕಾಣುತ್ತಿದ್ದಿರಿ. ನೀವೆಲ್ಲರೂ ಒಟ್ಟಾಗಿ ಯುದ್ಧಮಾಡಿರಿ. ಇದರಲ್ಲಿ ರಾಜನೇನು ಮಾಡಬಲ್ಲನು?”

09024040a ತೇ ಕ್ಷತ್ರಿಯಾಃ ಕ್ಷತೈರ್ಗಾತ್ರೈರ್ಹತಭೂಯಿಷ್ಠವಾಹನಾಃ।
09024040c ಶರೈಃ ಸಂಪೀಡ್ಯಮಾನಾಶ್ಚ ನಾತಿವ್ಯಕ್ತಮಿವಾಬ್ರುವನ್।।

ಹೆಚ್ಚು ಭಾಗ ವಾಹನಗಳೆಲ್ಲವನ್ನೂ ಕಳೆದುಕೊಂಡಿದ್ದ ಶರೀರಗಳಲ್ಲಿ ಅತ್ಯಂತ ಗಾಯಗೊಂಡಿದ್ದ ಕ್ಷತ್ರಿಯರು ಶರಗಳಿಂದ ಪೀಡಿಸಲ್ಪಟ್ಟು ಅಸ್ಪಷ್ಟವಾಗಿ ಈ ಮಾತುಗಳನ್ನಾಡಿದರು:

09024041a ಇದಂ ಸರ್ವಂ ಬಲಂ ಹನ್ಮೋ ಯೇನ ಸ್ಮ ಪರಿವಾರಿತಾಃ।
09024041c ಏತೇ ಸರ್ವೇ ಗಜಾನ್ ಹತ್ವಾ ಉಪಯಾಂತಿ ಸ್ಮ ಪಾಂಡವಾಃ।।

“ನಮ್ಮನ್ನು ಸುತ್ತುವರೆದಿರುವ ಈ ಸೇನೆಗಳೆಲ್ಲವನ್ನೂ ನಾವು ಸಂಹರಿಸುತ್ತೇವೆ. ಆದರೆ ಆ ಆನೆಗಳೆಲ್ಲವನ್ನೂ ಸಂಹರಿಸಿ ಪಾಂಡವರು ನಮ್ಮ ಕಡೆಗೇ ಬರುತ್ತಿದ್ದಾರೆ!”

09024042a ಶ್ರುತ್ವಾ ತು ವಚನಂ ತೇಷಾಮಶ್ವತ್ಥಾಮಾ ಮಹಾಬಲಃ।
09024042c ಹಿತ್ವಾ ಪಾಂಚಾಲರಾಜಸ್ಯ ತದನೀಕಂ ದುರುತ್ಸಹಂ।।
09024043a ಕೃಪಶ್ಚ ಕೃತವರ್ಮಾ ಚ ಪ್ರಯಯುರ್ಯತ್ರ ಸೌಬಲಃ।
09024043c ರಥಾನೀಕಂ ಪರಿತ್ಯಜ್ಯ ಶೂರಾಃ ಸುದೃಢಧನ್ವಿನಃ।।

ಅವರ ಆ ಮಾತನ್ನು ಕೇಳಿ ದೃಢಧನ್ವಿ-ಶೂರ-ಮಹಾಬಲ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಪಾಂಚಾಲರಾಜನ ಆ ದುರ್ಗಮ ರಥ ಸೇನೆಯನ್ನು ಬಿಟ್ಟು ಸೌಬಲನಿದ್ದಲ್ಲಿಗೆ ತೆರಳಿದರು.

09024044a ತತಸ್ತೇಷು ಪ್ರಯಾತೇಷು ಧೃಷ್ಟದ್ಯುಮ್ನಪುರೋಗಮಾಃ।
09024044c ಆಯಯುಃ ಪಾಂಡವಾ ರಾಜನ್ವಿನಿಘ್ನಂತಃ ಸ್ಮ ತಾವಕಾನ್।।

ರಾಜನ್! ಅವರು ಹಾಗೆ ಹೊರಟುಹೋಗಲು ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಪಾಂಡವರು ನಿಮ್ಮವರನ್ನು ಸಂಹರಿಸಲು ಮುಂದುವರೆದರು.

09024045a ದೃಷ್ಟ್ವಾ ತು ತಾನಾಪತತಃ ಸಂಪ್ರಹೃಷ್ಟಾನ್ಮಹಾರಥಾನ್।
09024045c ಪರಾಕ್ರಾಂತಾಂಸ್ತತೋ ವೀರಾನ್ನಿರಾಶಾನ್ ಜೀವಿತೇ ತದಾ।
09024045e ವಿವರ್ಣಮುಖಭೂಯಿಷ್ಠಮಭವತ್ತಾವಕಂ ಬಲಂ।।

ತಮ್ಮ ಮೇಲೆ ಎರಗುತ್ತಿದ್ದ ಸಂಪ್ರಹೃಷ್ಟ ಮಹಾರಥರನ್ನು ನೋಡಿ ಆ ವೀರರಲ್ಲಿ ಜೀವದ ನಿರಾಶೆಯು ಆವರಿಸಿತು. ನಿನ್ನ ಸೇನೆಯಲ್ಲಿ ಹೆಚ್ಚುಜನರ ಮುಖಗಳು ವಿವರ್ಣವಾದವು.

09024046a ಪರಿಕ್ಷೀಣಾಯುಧಾನ್ದೃಷ್ಟ್ವಾ ತಾನಹಂ ಪರಿವಾರಿತಾನ್।
09024046c ರಾಜನ್ಬಲೇನ ದ್ವ್ಯಂಗೇನ ತ್ಯಕ್ತ್ವಾ ಜೀವಿತಮಾತ್ಮನಃ।।
09024047a ಆತ್ಮನಾಪಂಚಮೋಽಯುಧ್ಯಂ ಪಾಂಚಾಲಸ್ಯ ಬಲೇನ ಹ।
09024047c ತಸ್ಮಿನ್ದೇಶೇ ವ್ಯವಸ್ಥಾಪ್ಯ ಯತ್ರ ಶಾರದ್ವತಃ ಸ್ಥಿತಃ।।

ರಾಜನ್! ಅವರ ಆಯುಧಗಳೆಲ್ಲವೂ ಮುಗಿದುಹೋಗಿರುವುದನ್ನು ನೋಡಿ ಅವರಿಂದ ಪರಿವಾರಿತನಾಗಿ ನಾನು ನನ್ನ ಜೀವವನ್ನೇ ತೊರೆದು ಆ ಅಶ್ವ-ಗಜ ಸೇನೆಗಳೊಂದಿಗೆ ಎಲ್ಲಿ ಶಾರದ್ವತ ಕೃಪನು ನಿಂತು ಯುದ್ಧಮಾಡಿದ್ದನೋ ಅದೇ ಸ್ಥಳದಲ್ಲಿ ನಿಂತು ನಾನು ಮತ್ತು ಇತರ ಐವರು ಯೋಧರು ಪಾಂಚಾಲ್ಯನ ಸೇನೆಯೊಂದಿಗೆ ಯುದ್ಧಮಾಡಿದೆವು.

09024048a ಸಂಪ್ರಯುದ್ಧಾ ವಯಂ ಪಂಚ ಕಿರೀಟಿಶರಪೀಡಿತಾಃ।
09024048c ಧೃಷ್ಟದ್ಯುಮ್ನಂ ಮಹಾನೀಕಂ ತತ್ರ ನೋಽಭೂದ್ರಣೋ ಮಹಾನ್।।
09024048e ಜಿತಾಸ್ತೇನ ವಯಂ ಸರ್ವೇ ವ್ಯಪಯಾಮ ರಣಾತ್ತತಃ।।

ಕಿರೀಟಿಯ ಶರಗಳಿಂದ ಪೀಡಿತರಾಗಿದ್ದ ನಾವು ಐವರು ಆ ಮಹಾರಣದಲ್ಲಿ ಧೃಷ್ಟದ್ಯುಮ್ನನ ಮಹಾಸೇನೆಯೊಂದಿಗೆ ಯುದ್ಧಮಾಡಿದೆವು. ಆದರೆ ಅವನಿಂದ ಸೋತ ನಾವೆಲ್ಲರೂ ಆಗ ರಣದಿಂದ ಹಿಂದೆಸರಿದೆವು.

09024049a ಅಥಾಪಶ್ಯಂ ಸಾತ್ಯಕಿಂ ತಮುಪಾಯಾಂತಂ ಮಹಾರಥಂ।
09024049c ರಥೈಶ್ಚತುಹ್ಶತೈರ್ವೀರೋ ಮಾಂ ಚಾಭ್ಯದ್ರವದಾಹವೇ।।

ಆಗ ಅಲ್ಲಿಗೆ ಬರುತ್ತಿದ್ದ ಮಹಾರಥ ಸಾತ್ಯಕಿಯನ್ನು ನಾವು ನೋಡಿದೆವು. ಆ ವೀರನು ನಾಲ್ಕು ನೂರು ರಥಗಳೊಡನೆ ನಮ್ಮನ್ನು ಆಕ್ರಮಣಿಸಿದನು.

09024050a ಧೃಷ್ಟದ್ಯುಮ್ನಾದಹಂ ಮುಕ್ತಃ ಕಥಂ ಚಿಚ್ಚ್ರಾಂತವಾಹನಃ।
09024050c ಪತಿತೋ ಮಾಧವಾನೀಕಂ ದುಷ್ಕೃತೀ ನರಕಂ ಯಥಾ।।
09024050e ತತ್ರ ಯುದ್ಧಮಭೂದ್ಘೋರಂ ಮುಹೂರ್ತಮತಿದಾರುಣಂ।।

ಕುದುರೆಗಳು ಬಳಲಿರಲು ಧೃಷ್ಟದ್ಯುಮ್ನನಿಂದ ಹೇಗೋ ತಪ್ಪಿಸಿಕೊಂಡು ಬಂದ ನಾವು ಪಾಪಿಯು ನರಕವನ್ನು ಹೇಗೋ ಹಾಗೆ ಮಾಧವ ಸಾತ್ಯಕಿಯ ಸೇನೆಯಡಿಯಲ್ಲಿ ಬಿದ್ದೆವು!

09024051a ಸಾತ್ಯಕಿಸ್ತು ಮಹಾಬಾಹುರ್ಮಮ ಹತ್ವಾ ಪರಿಚ್ಚದಂ।
09024051c ಜೀವಗ್ರಾಹಮಗೃಹ್ಣಾನ್ಮಾಂ ಮೂರ್ಚಿತಂ ಪತಿತಂ ಭುವಿ।।

ಮಹಾಬಾಹು ಸಾತ್ಯಕಿಯಾದರೋ ನನ್ನ ಕುದುರೆ-ಸಾರಥಿಗಳನ್ನು ಸಂಹರಿಸಿ, ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದ ನನ್ನನ್ನು ಜೀವಂತ ಸೆರೆಹಿಡಿದನು.

09024052a ತತೋ ಮುಹೂರ್ತಾದಿವ ತದ್ಗಜಾನೀಕಮವಧ್ಯತ।
09024052c ಗದಯಾ ಭೀಮಸೇನೇನ ನಾರಾಚೈರರ್ಜುನೇನ ಚ।।

ಆಗ ಭೀಮಸೇನನು ಗದೆಯಿಂದಲೂ ಅರ್ಜುನನು ನಾರಾಚಗಳಿಂದಲೂ ಮುಹೂರ್ತಮಾತ್ರದಲ್ಲಿ ಆ ಗಜಸೇನೆಯನ್ನು ಸಂಹರಿಸಿದರು.

09024053a ಪ್ರತಿಪಿಷ್ಟೈರ್ಮಹಾನಾಗೈಃ ಸಮಂತಾತ್ಪರ್ವತೋಪಮೈಃ।
09024053c ನಾತಿಪ್ರಸಿದ್ಧೇವ ಗತಿಃ ಪಾಂಡವಾನಾಮಜಾಯತ।।

ಎಲ್ಲ ಕಡೆಗಳಲ್ಲಿಯೂ ಪರ್ವತೋಪಮ ಮಹಾ ‌ಆನೆಗಳ ಮೃತಶರೀರಗಳು ಬಿದ್ದಿರಲು ಪಾಂಡವ ರಥಗಳಿಗೆ ಮುಂದುವರೆಯಲೇ ಸಾಧ್ಯವಾಗಲಿಲ್ಲ.

09024054a ರಥಮಾರ್ಗಾಂಸ್ತತಶ್ಚಕ್ರೇ ಭೀಮಸೇನೋ ಮಹಾಬಲಃ।
09024054c ಪಾಂಡವಾನಾಂ ಮಹಾರಾಜ ವ್ಯಪಕರ್ಷನ್ಮಹಾಗಜಾನ್।।

ಆಗ ಮಹಾರಾಜ! ಮಹಾಬಲ ಭೀಮಸೇನನು ಮಹಾ ‌ಆನೆಗಳನ್ನು ಎಳೆದು ಸರಿಸಿ ಪಾಂಡವರಿಗೆ ರಥಮಾರ್ಗವನ್ನು ಮಾಡಿಕೊಟ್ಟನು.

09024055a ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ।
09024055c ಅಪಶ್ಯಂತೋ ರಥಾನೀಕೇ ದುರ್ಯೋಧನಮರಿಂದಮಂ।
09024055e ರಾಜಾನಂ ಮೃಗಯಾಮಾಸುಸ್ತವ ಪುತ್ರಂ ಮಹಾರಥಂ।।

ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ರಥಸೇನೆಯಲ್ಲಿ ಅರಿಂದಮ ದುರ್ಯೋಧನನನ್ನು ಕಾಣದೇ ನಿನ್ನ ಮಗ ಮಹಾರಥ ರಾಜನನ್ನು ಹುಡುಕತೊಡಗಿದರು.

09024056a ಪರಿತ್ಯಜ್ಯ ಚ ಪಾಂಚಾಲಂ ಪ್ರಯಾತಾ ಯತ್ರ ಸೌಬಲಃ।
09024056c ರಾಜ್ಞೋಽದರ್ಶನಸಂವಿಗ್ನಾ ವರ್ತಮಾನೇ ಜನಕ್ಷಯೇ।।

ಪಾಂಚಾಲರನ್ನು ಬಿಟ್ಟು ಸೌಬಲನಿದ್ದಲ್ಲಿಗೆ ಹೋಗಿ ಜನಕ್ಷಯವು ನಡೆಯುತ್ತಿರುವ ಅಲ್ಲಿಯೂ ರಾಜನನ್ನು ಕಾಣದೇ ಅವರು ಉದ್ವಿಗ್ನರಾದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ದುರ್ಯೋಧನಾಪಯಾನೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ದುರ್ಯೋಧನಾಪಯಾನ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.