ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಹ್ರದಪ್ರವೇಶ ಪರ್ವ
ಅಧ್ಯಾಯ 23
ಸಾರ
ಯುದ್ಧದಿಂದ ಹಿಂದೆಸರಿದ ಶಕುನಿಯು ದುರ್ಯೋಧನ ಮತ್ತು ಉಳಿದ ಕ್ಷತ್ರಿಯರನ್ನು ಕೂಡಿ ಪುನಃ ಪಾಂಡವ ಸೇನೆಯನ್ನು ಆಕ್ರಮಣಿಸಿದ್ದುದು (1-13). ಅರ್ಜುನನು ಯುದ್ಧವು ಇನ್ನೂ ಏಕೆ ನಿಲ್ಲಲಿಲ್ಲವೆಂದು ಆಶ್ಚರ್ಯಪಡುತ್ತಾ ರಥವನ್ನು ಕೌರವ ಸೇನೆಯೊಳಗೆ ನಡೆಸುವಂತೆ ಕೃಷ್ಣನಿಗೆ ಹೇಳಿದುದು (14-48). ಅರ್ಜುನನು ಕೌರವ ಸೇನೆಯನ್ನು ಸಂಹರಿಸಿದುದು (49-64).
09023001 ಸಂಜಯ ಉವಾಚ 09023001a ತಸ್ಮಿನ್ ಶಬ್ದೇ ಮೃದೌ ಜಾತೇ ಪಾಂಡವೈರ್ನಿಹತೇ ಬಲೇ।
09023001c ಅಶ್ವೈಃ ಸಪ್ತಶತೈಃ ಶಿಷ್ಟೈರುಪಾವರ್ತತ ಸೌಬಲಃ।।
ಸಂಜಯನು ಹೇಳಿದನು: “ಸೇನೆಗಳು ಪಾಂಡವರಿಂದ ಹತಗೊಳ್ಳಲು ಯುದ್ಧದ ಕೋಲಹಲ ಶಬ್ಧವು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಉಳಿದಿರುವ ಏಳು ನೂರು ಕುದುರೆಗಳೊಂದಿಗೆ ಸೌಬಲನು ಯುದ್ಧದಿಂದ ಹಿಮ್ಮೆಟ್ಟಿದನು.
09023002a ಸ ಯಾತ್ವಾ ವಾಹಿನೀಂ ತೂರ್ಣಮಬ್ರವೀತ್ತ್ವರಯನ್ಯುಧಿ।
09023002c ಯುಧ್ಯಧ್ವಮಿತಿ ಸಂಹೃಷ್ಟಾಃ ಪುನಃ ಪುನರರಿಂದಮಃ।।
09023002e ಅಪೃಚ್ಚತ್ ಕ್ಷತ್ರಿಯಾಂಸ್ತತ್ರ ಕ್ವ ನು ರಾಜಾ ಮಹಾರಥಃ।।
ಕೂಡಲೇ ಆ ಅರಿಂದಮನು ಸೇನೆಯ ಬಳಿ ಹೋಗಿ “ಸಂಹೃಷ್ಟರಾಗಿ ಯುದ್ಧಮಾಡಿ!” ಎಂದು ಪುನಃ ಪುನಃ ಹೇಳಿದನು. ಆ ಮಹಾರಥನು ಕ್ಷತ್ರಿಯರಲ್ಲಿ ರಾಜನು ಎಲ್ಲಿರುವನೆಂದು ಕೇಳಿದನು:
09023003a ಶಕುನೇಸ್ತು ವಚಃ ಶ್ರುತ್ವಾ ತ ಊಚುರ್ಭರತರ್ಷಭ।
09023003c ಅಸೌ ತಿಷ್ಠತಿ ಕೌರವ್ಯೋ ರಣಮಧ್ಯೇ ಮಹಾರಥಃ।।
ಭರತರ್ಷಭ! ಶಕುನಿಯ ಆ ಮಾತನ್ನು ಕೇಳಿದ ಅವರು ಹೇಳಿದರು: “ರಣಮಧ್ಯದಲ್ಲಿ ಮಹಾರಥ ಕೌರವನು ನಿಂತಿರುವನು.
09023004a ಯತ್ರೈತತ್ಸುಮಹಚ್ಚತ್ರಂ ಪೂರ್ಣಚಂದ್ರಸಮಪ್ರಭಂ।
09023004c ಯತ್ರೈತೇ ಸತಲತ್ರಾಣಾ ರಥಾಸ್ತಿಷ್ಠಂತಿ ದಂಶಿತಾಃ।।
09023005a ಯತ್ರೈಷ ಶಬ್ದಸ್ತುಮುಲಃ ಪರ್ಜನ್ಯನಿನದೋಪಮಃ।
09023005c ತತ್ರ ಗಚ್ಚ ದ್ರುತಂ ರಾಜಂಸ್ತತೋ ದ್ರಕ್ಷ್ಯಸಿ ಕೌರವಂ।।
ಎಲ್ಲಿ ಪೂರ್ಣಚಂದ್ರಸಮ ಪ್ರಭೆಯುಳ್ಳ ಮಹಾ ಚತ್ರವಿರುವುದೋ, ಎಲ್ಲಿ ಕವಚಧಾರೀ ಎತ್ತರ ಕಾಯದವರು ರಥಗಳಲ್ಲಿ ನಿಂತಿರುವರೋ, ಎಲ್ಲಿಂದ ಮೋಡದ ಗುಡುಗಿನಂತಿರುವ ತುಮುಲ ಶಬ್ಧವು ಕೇಳಿ ಬರುತ್ತಿದೆಯೋ ಅಲ್ಲಿಗೆ ಧಾವಿಸಿ ಹೋಗು! ಅಲ್ಲಿ ರಾಜ ಕೌರವನನ್ನು ನೀನು ಕಾಣುವೆ!”
09023006a ಏವಮುಕ್ತಸ್ತು ತೈಃ ಶೂರೈಃ ಶಕುನಿಃ ಸೌಬಲಸ್ತದಾ।
09023006c ಪ್ರಯಯೌ ತತ್ರ ಯತ್ರಾಸೌ ಪುತ್ರಸ್ತವ ನರಾಧಿಪ।।
09023006e ಸರ್ವತಃ ಸಂವೃತೋ ವೀರೈಃ ಸಮರೇಷ್ವನಿವರ್ತಿಭಿಃ।।
ನರಾಧಿಪ! ಆ ಶೂರರು ಹೀಗೆ ಹೇಳಲು ಸೌಬಲ ಶಕುನಿಯು ಸಮರದಲ್ಲಿ ಹಿಂದಿರುಗದ ವೀರರಿಂದ ಸುತ್ತಲೂ ಸಂವೃತನಾಗಿದ್ದ ನಿನ್ನ ಪುತ್ರನೆಲ್ಲಿದ್ದನೋ ಅಲ್ಲಿಗೆ ಹೋದನು.
09023007a ತತೋ ದುರ್ಯೋಧನಂ ದೃಷ್ಟ್ವಾ ರಥಾನೀಕೇ ವ್ಯವಸ್ಥಿತಂ।
09023007c ಸರಥಾಂಸ್ತಾವಕಾನ್ಸರ್ವಾನ್ ಹರ್ಷಯನ್ ಶಕುನಿಸ್ತತಃ।।
ರಥಾನೀಕದ ಮಧ್ಯದಲ್ಲಿ ವ್ಯವಸ್ಥಿತನಾಗಿದ್ದ ದುರ್ಯೋಧನನನ್ನು ಮತ್ತು ರಥಗಳೊಂದಿಗಿದ್ದ ಅವರೆಲ್ಲರನ್ನೂ ನೋಡಿ ಶಕುನಿಯು ಹರ್ಷಿತನಾದನು.
09023008a ದುರ್ಯೋಧನಮಿದಂ ವಾಕ್ಯಂ ಹೃಷ್ಟರೂಪೋ ವಿಶಾಂ ಪತೇ।
09023008c ಕೃತಕಾರ್ಯಮಿವಾತ್ಮಾನಂ ಮನ್ಯಮಾನೋಽಬ್ರವೀನ್ನೃಪಂ।।
ವಿಶಾಂಪತೇ! ತಾನು ಕೃತಾರ್ಥನಾದನೆಂದೇ ಭಾವಿಸಿ ಹೃಷ್ಟರೂಪನಾಗಿ ದುರ್ಯೋಧನನಿಗೆ ಈ ಮಾತನ್ನಾಡಿದನು:
09023009a ಜಹಿ ರಾಜನ್ರಥಾನೀಕಮಶ್ವಾಃ ಸರ್ವೇ ಜಿತಾ ಮಯಾ।
09023009c ನಾತ್ಯಕ್ತ್ವಾ ಜೀವಿತಂ ಸಂಖ್ಯೇ ಶಕ್ಯೋ ಜೇತುಂ ಯುಧಿಷ್ಠಿರಃ।।
“ರಾಜನ್! ರಥಸೇನೆಯನ್ನು ಸಂಹರಿಸು! ಅಶ್ವಸೇನೆಗಳೆಲ್ಲವನ್ನೂ ನಾನು ಜಯಿಸಿದ್ದೇನೆ. ಪ್ರಾಣಗಳ ಮೇಲಿನ ಹಂಗನ್ನೇ ತೊರೆದು ಯುದ್ಧಮಾಡದಿದ್ದರೆ ಯುಧಿಷ್ಠಿರನನ್ನು ಜಯಿಸಲು ಶಕ್ಯವಿಲ್ಲ.
09023010a ಹತೇ ತಸ್ಮಿನ್ರಥಾನೀಕೇ ಪಾಂಡವೇನಾಭಿಪಾಲಿತೇ।
09023010c ಗಜಾನೇತಾನ್ ಹನಿಷ್ಯಾಮಃ ಪದಾತೀಂಶ್ಚೇತರಾಂಸ್ತಥಾ।।
ಪಾಂಡವನಿಂದ ರಕ್ಷಿಸಲ್ಪಟ್ಟಿರುವ ಆ ರಥಸೇನೆಯನ್ನು ಸಂಹರಿಸಿದ ನಂತರ ನಾವು ಈ ಗಜಸೇನೆಯನ್ನು ಮತ್ತು ಇತರ ಪದಾತಿಗಳನ್ನು ಸಂಹರಿಸೋಣ!”
09023011a ಶ್ರುತ್ವಾ ತು ವಚನಂ ತಸ್ಯ ತಾವಕಾ ಜಯಗೃದ್ಧಿನಃ।
09023011c ಜವೇನಾಭ್ಯಪತನ್ ಹೃಷ್ಟಾಃ ಪಾಂಡವಾನಾಮನೀಕಿನೀಂ।।
ಅವನ ಆ ಮಾತನ್ನು ಕೇಳಿ ಜಯವನ್ನು ಬಯಸಿದ್ದ ನಿನ್ನವರು ಹೃಷ್ಟರಾಗಿ ವೇಗದಿಂದ ಪಾಂಡವರ ಸೇನೆಯನ್ನು ಆಕ್ರಮಣಿಸಿದರು.
09023012a ಸರ್ವೇ ವಿವೃತತೂಣೀರಾಃ ಪ್ರಗೃಹೀತಶರಾಸನಾಃ।
09023012c ಶರಾಸನಾನಿ ಧುನ್ವಾನಾಃ ಸಿಂಹನಾದಂ ಪ್ರಚಕ್ರಿರೇ।।
ಎಲ್ಲರೂ ಬತ್ತಳಿಕೆಗಳನ್ನು ತೆರೆದು, ಧನುಸ್ಸುಗಳನ್ನು ಹಿಡಿದು, ಧನುಸ್ಸುಗಳನ್ನು ಟೇಂಕರಿಸುತ್ತಾ ಸಿಂಹನಾದಗೈದರು.
09023013a ತತೋ ಜ್ಯಾತಲನಿರ್ಘೋಷಃ ಪುನರಾಸೀದ್ವಿಶಾಂ ಪತೇ।
09023013c ಪ್ರಾದುರಾಸೀಚ್ಚರಾಣಾಂ ಚ ಸುಮುಕ್ತಾನಾಂ ಸುದಾರುಣಃ।।
ವಿಶಾಂಪತೇ! ಪುನಃ ಅಲ್ಲಿ ಟೇಂಕಾರ ಶಬ್ಧವೂ ಬಾಣಗಳನ್ನು ಪ್ರಯೋಗಿಸುತ್ತಿದ್ದ ಸುದಾರುಣ ಶಬ್ಧವೂ ಕೇಳಿಬಂದವು.
09023014a ತಾನ್ಸಮೀಪಗತಾನ್ದೃಷ್ಟ್ವಾ ಜವೇನೋದ್ಯತಕಾರ್ಮುಕಾನ್।
09023014c ಉವಾಚ ದೇವಕೀಪುತ್ರಂ ಕುಂತೀಪುತ್ರೋ ಧನಂಜಯಃ।।
ಧನುಸ್ಸುಗಳನ್ನು ಮೇಲೆತ್ತಿ ತನ್ನ ಹತ್ತಿರವೇ ಬರುತ್ತಿದ್ದ ಅವರನ್ನು ನೋಡಿ ಕುಂತೀಪುತ್ರ ಧನಂಜಯನು ದೇವಕೀಪುತ್ರನಿಗೆ ಹೇಳಿದನು:
09023015a ಚೋದಯಾಶ್ವಾನಸಂಭ್ರಾಂತಃ ಪ್ರವಿಶೈತದ್ಬಲಾರ್ಣವಂ।
09023015c ಅಂತಮದ್ಯ ಗಮಿಷ್ಯಾಮಿ ಶತ್ರೂಣಾಂ ನಿಶಿತೈಃ ಶರೈಃ।।
“ಗಾಬರಿಗೊಳ್ಳದೇ ಅಶ್ವಗಳನ್ನು ಓಡಿಸಿ ಈ ಸೇನಾಸಾಗರವನ್ನು ಪ್ರವೇಶಿಸು. ಇಂದು ನಿಶಿತ ಶರಗಳಿಂದ ಶತ್ರುಗಳನ್ನು ಹೋಗಲಾಡಿಸಿಬಿಡುತ್ತೇನೆ!
09023016a ಅಷ್ಟಾದಶ ದಿನಾನ್ಯದ್ಯ ಯುದ್ಧಸ್ಯಾಸ್ಯ ಜನಾರ್ದನ।
09023016c ವರ್ತಮಾನಸ್ಯ ಮಹತಃ ಸಮಾಸಾದ್ಯ ಪರಸ್ಪರಂ।।
ಜನಾರ್ದನ! ಪರಸ್ಪರರನ್ನು ಎದುರಿಸಿ ನಡೆಯುತ್ತಿರುವ ಈ ಮಹಾ ಯುದ್ಧದ ಹದಿನೆಂಟನೆಯ ದಿನವಿದು.
09023017a ಅನಂತಕಲ್ಪಾ ಧ್ವಜಿನೀ ಭೂತ್ವಾ ಹ್ಯೇಷಾಂ ಮಹಾತ್ಮನಾಂ।
09023017c ಕ್ಷಯಮದ್ಯ ಗತಾ ಯುದ್ಧೇ ಪಶ್ಯ ದೈವಂ ಯಥಾವಿಧಂ।।
ಅನಂತವಾಗಿದೆಯೋ ಎಂಬಂತಿದ್ದ ಈ ಮಹಾತ್ಮರ ಸೇನೆಯು ಇಂದು ಬಹಳವಾಗಿ ಕ್ಷಯಗೊಂಡಿದೆ. ದೈವದ ರೀತಿಯನ್ನಾದರೂ ನೋಡು!
09023018a ಸಮುದ್ರಕಲ್ಪಂ ತು ಬಲಂ ಧಾರ್ತರಾಷ್ಟ್ರಸ್ಯ ಮಾಧವ।
09023018c ಅಸ್ಮಾನಾಸಾದ್ಯ ಸಂಜಾತಂ ಗೋಷ್ಪದೋಪಮಮಚ್ಯುತ।।
ಮಾಧವ! ಅಚ್ಯುತ! ಸಮುದ್ರದಂತಿದ್ದ ಧಾರ್ತರಾಷ್ಟ್ರನ ಸೇನೆಯು ನಮ್ಮೊಡನೆ ಹೋರಾಡಿ ಈಗ ಗೋಪಾದದಷ್ಟಾಗಿದೆ!
09023019a ಹತೇ ಭೀಷ್ಮೇ ಚ ಸಂದಧ್ಯಾಚ್ಚಿವಂ ಸ್ಯಾದಿಹ ಮಾಧವ।
09023019c ನ ಚ ತತ್ಕೃತವಾನ್ಮೂಢೋ ಧಾರ್ತರಾಷ್ಟ್ರಃ ಸುಬಾಲಿಶಃ।।
ಭೀಷ್ಮನು ಹತನಾದಾಗಲೇ ಸಂಧಿಯನ್ನು ಮಾಡಿಕೊಂಡಿದ್ದರೆ ಮಂಗಳವಾಗುತ್ತಿತ್ತು. ಆದರೆ ಬಾಲಬುದ್ಧಿಯ ಮೂಢ ಧಾರ್ತರಾಷ್ಟ್ರನು ಹಾಗೆ ಮಾಡಲಿಲ್ಲ!
09023020a ಉಕ್ತಂ ಭೀಷ್ಮೇಣ ಯದ್ವಾಕ್ಯಂ ಹಿತಂ ಪಥ್ಯಂ ಚ ಮಾಧವ।
09023020c ತಚ್ಚಾಪಿ ನಾಸೌ ಕೃತವಾನ್ವೀತಬುದ್ಧಿಃ ಸುಯೋಧನಃ।।
ಮಾಧವ! ಬುದ್ಧಿಯನ್ನು ಕಳೆದುಕೊಂಡಿರುವ ಸುಯೋಧನನು ಹಿತವೂ ಪಥ್ಯವೂ ಆಗಿದ್ದ ಭೀಷ್ಮನಾಡಿದ ಮಾತಿನಂತೆ ಮಾಡಲಿಲ್ಲ.
09023021a ತಸ್ಮಿಂಸ್ತು ಪತಿತೇ ಭೀಷ್ಮೇ ಪ್ರಚ್ಯುತೇ ಪೃಥಿವೀತಲೇ।
09023021c ನ ಜಾನೇ ಕಾರಣಂ ಕಿಂ ನು ಯೇನ ಯುದ್ಧಮವರ್ತತ।।
ರಥದಿಂದ ಚ್ಯುತನಾಗಿ ಭೂಮಿಯ ಮೇಲೆ ಭೀಷ್ಮನು ಬಿದ್ದ ನಂತರವೂ ಯುದ್ಧವು ಏಕೆ ಮುಂದುವರೆಯಿತೆನ್ನುವುದು ಅರ್ಥವಾಗುತ್ತಿಲ್ಲ.
09023022a ಮೂಢಾಂಸ್ತು ಸರ್ವಥಾ ಮನ್ಯೇ ಧಾರ್ತರಾಷ್ಟ್ರಾನ್ಸುಬಾಲಿಶಾನ್।
09023022c ಪತಿತೇ ಶಂತನೋಃ ಪುತ್ರೇ ಯೇಽಕಾರ್ಷುಃ ಸಮ್ಯುಗಂ ಪುನಃ।।
ಶಂತನುವಿನ ಮಗನು ಬಿದ್ದನಂತರವೂ ಪುನಃ ಯುದ್ಧವನ್ನು ಮುಂದುವರೆಸಿದ ಧಾರ್ತರಾಷ್ಟ್ರರನ್ನು ನಾನು ತುಂಬಾ ಬಾಲಿಶರೆಂದು ತಿಳಿಯುತ್ತೇನೆ.
09023023a ಅನಂತರಂ ಚ ನಿಹತೇ ದ್ರೋಣೇ ಬ್ರಹ್ಮವಿದಾಂ ವರೇ।
09023023c ರಾಧೇಯೇ ಚ ವಿಕರ್ಣೇ ಚ ನೈವಾಶಾಮ್ಯತ ವೈಶಸಂ।।
ಬ್ರಹ್ಮವಿದರಲ್ಲಿ ಶ್ರೇಷ್ಠ ದ್ರೋಣ, ರಾಧೇಯ ಮತ್ತು ವಿಕರ್ಣರು ಹತರಾದ ನಂತರವೂ ಈ ವೈರವು ಶಾಂತವಾಗಲಿಲ್ಲ.
09023024a ಅಲ್ಪಾವಶಿಷ್ಟೇ ಸೈನ್ಯೇಽಸ್ಮಿನ್ಸೂತಪುತ್ರೇ ಚ ಪಾತಿತೇ।
09023024c ಸಪುತ್ರೇ ವೈ ನರವ್ಯಾಘ್ರೇ ನೈವಾಶಾಮ್ಯತ ವೈಶಸಂ।।
ಪುತ್ರನೊಂದಿಗೆ ನರವ್ಯಾಘ್ರ ಸೂತಪುತ್ರನು ಬಿದ್ದಾಗ ಸ್ವಲ್ಪವೇ ಸೇನೆಯು ಉಳಿದುಕೊಂಡಿತ್ತು. ಆಗಲೂ ಈ ವೈರವು ಶಾಂತವಾಗಲಿಲ್ಲ.
09023025a ಶ್ರುತಾಯುಷಿ ಹತೇ ಶೂರೇ ಜಲಸಂಧೇ ಚ ಪೌರವೇ।
09023025c ಶ್ರುತಾಯುಧೇ ಚ ನೃಪತೌ ನೈವಾಶಾಮ್ಯತ ವೈಶಸಂ।।
ಶೂರ ಶ್ರುತಾಯುಷಿ, ಜಲಸಂಧ, ಪೌರವ-ಶೃತಾಯುಧ ನೃಪತಿಯರು ಹತರಾದ ನಂತರವೂ ಈ ಸಂಹಾರಕಾರ್ಯವು ಉಪಶಮನಗೊಳ್ಳಲಿಲ್ಲ.
09023026a ಭೂರಿಶ್ರವಸಿ ಶಲ್ಯೇ ಚ ಶಾಲ್ವೇ ಚೈವ ಜನಾರ್ದನ।
09023026c ಆವಂತ್ಯೇಷು ಚ ವೀರೇಷು ನೈವಾಶಾಮ್ಯತ ವೈಶಸಂ।।
ಜನಾರ್ದನ! ಭೂರಿಶ್ರವ, ಶಲ್ಯ, ಶಾಲ್ವ, ಮತ್ತು ಅವಂತಿಯ ವೀರರು ಹತರಾದ ನಂತರವೂ ಈ ಸಂಹಾರಕಾರ್ಯವು ನಿಲ್ಲಲಿಲ್ಲ.
09023027a ಜಯದ್ರಥೇ ಚ ನಿಹತೇ ರಾಕ್ಷಸೇ ಚಾಪ್ಯಲಾಯುಧೇ।
09023027c ಬಾಹ್ಲೀಕೇ ಸೋಮದತ್ತೇ ಚ ನೈವಾಶಾಮ್ಯತ ವೈಶಸಂ।।
ಜಯದ್ರಥ, ರಾಕ್ಷಸ ಅಲಾಯುಧ, ಬಾಹ್ಲೀಕ-ಸೋಮದತ್ತರು ಹತರಾದ ನಂತರವೂ ಈ ಸಂಹಾರಕಾರ್ಯವು ಪ್ರಶಮನಗೊಳ್ಳಲಿಲ್ಲ.
09023028a ಭಗದತ್ತೇ ಹತೇ ಶೂರೇ ಕಾಂಬೋಜೇ ಚ ಸುದಕ್ಷಿಣೇ।
09023028c ದುಃಶಾಸನೇ ಚ ನಿಹತೇ ನೈವಾಶಾಮ್ಯತ ವೈಶಸಂ।।
ಶೂರ ಭಗದತ್ತ, ಕಾಂಬೋಜದ ಸುದಕ್ಷಿಣ, ಮತ್ತು ದುಃಶಾಸನರು ಹತರಾದ ನಂತರವೂ ಈ ವೈರವು ಪ್ರಶಮನಗೊಳ್ಳಲಿಲ್ಲ.
09023029a ದೃಷ್ಟ್ವಾ ಚ ನಿಹತಾನ್ ಶೂರಾನ್ಪೃಥಗ್ಮಾಂಡಲಿಕಾನ್ನೃಪಾನ್।
09023029c ಬಲಿನಶ್ಚ ರಣೇ ಕೃಷ್ಣ ನೈವಾಶಾಮ್ಯತ ವೈಶಸಂ।।
ಕೃಷ್ಣ! ಬೇರೆ ಬೇರೆ ದೇಶಗಳಿಂದ ಆಗಮಿಸಿದ್ದ ಶೂರ ಬಲಶಾಲೀ ನೃಪರು ರಣದಲ್ಲಿ ಹತರಾದುದನ್ನು ನೋಡಿಯೂ ಈ ಸಂಹಾರಕಾರ್ಯವು ನಿಲ್ಲಲಿಲ್ಲ!
09023030a ಅಕ್ಷೌಹಿಣೀಪತೀನ್ದೃಷ್ಟ್ವಾ ಭೀಮಸೇನೇನ ಪಾತಿತಾನ್।
09023030c ಮೋಹಾದ್ವಾ ಯದಿ ವಾ ಲೋಭಾನ್ನೈವಾಶಾಮ್ಯತ ವೈಶಸಂ।।
ಭೀಮಸೇನನಿಂದ ಹತರಾಗಿ ಕೆಳಗುರುಳುತ್ತಿದ್ದ ಅಕ್ಷೌಹಿಣೀಪತಿಗಳನ್ನು ನೋಡಿಯೂ ಮೋಹದಿಂದಲೋ ಅಥವಾ ಲೋಭದಿಂದಲೋ ಈ ವೈರವು ಉಪಶಮನಗೊಳ್ಳಲಿಲ್ಲ.
09023031a ಕೋ ನು ರಾಜಕುಲೇ ಜಾತಃ ಕೌರವೇಯೋ ವಿಶೇಷತಃ।
09023031c ನಿರರ್ಥಕಂ ಮಹದ್ವೈರಂ ಕುರ್ಯಾದನ್ಯಃ ಸುಯೋಧನಾತ್।।
ರಾಜಕುಲದಲ್ಲಿ, ಅದರಲ್ಲೂ ವಿಶೇಷವಾಗಿ ಕೌರವಕುಲದಲ್ಲಿ ಹುಟ್ಟಿದ ಸುಯೋಧನನಲ್ಲದೇ ಬೇರೆ ಯಾರುತಾನೇ ನಿರರ್ಥಕವಾದ ಈ ಮಹಾ ವೈರವನ್ನು ಕಟ್ಟಿಕೊಂಡಾನು?
09023032a ಗುಣತೋಽಭ್ಯಧಿಕಂ ಜ್ಞಾತ್ವಾ ಬಲತಃ ಶೌರ್ಯತೋಽಪಿ ವಾ।
09023032c ಅಮೂಢಃ ಕೋ ನು ಯುಧ್ಯೇತ ಜಾನನ್ಪ್ರಾಜ್ಞೋ ಹಿತಾಹಿತಂ।।
ಗುಣ-ಬಲ-ಶೌರ್ಯಗಳಲ್ಲಿ ಶತ್ರುಗಳು ತನಗಿಂತಲೂ ಅಧಿಕರಾಗಿರುವರೆನ್ನುವುದನ್ನು ತಿಳಿದೂ ಹಿತಾಹಿತಗಳನ್ನು ತಿಳಿದ ಮೂಢನಲ್ಲದ ಬೇರೆ ಯಾರುತಾನೇ ಯುದ್ಧಮಾಡುತ್ತಾನೆ?
09023033a ಯನ್ನ ತಸ್ಯ ಮನೋ ಹ್ಯಾಸೀತ್ತ್ವಯೋಕ್ತಸ್ಯ ಹಿತಂ ವಚಃ।
09023033c ಪ್ರಶಮೇ ಪಾಂಡವೈಃ ಸಾರ್ಧಂ ಸೋಽನ್ಯಸ್ಯ ಶೃಣುಯಾತ್ಕಥಂ।।
ನೀನೇ ಹೇಳಿದ ಹಿತವಚನಗಳನ್ನು ಮನಸ್ಸಿಗೆ ತೆಗೆದುಕೊಳ್ಳದಿದ್ದ ಅವನು ಪಾಂಡವರೊಂದಿಗೆ ಶಾಂತಿಯಿಂದಿರು ಎನ್ನುವ ಬೇರೆ ಯಾರ ಮಾತನ್ನು ಹೇಗೆ ಕೇಳಿಯಾನು?
09023034a ಯೇನ ಶಾಂತನವೋ ಭೀಷ್ಮೋ ದ್ರೋಣೋ ವಿದುರ ಏವ ಚ।
09023034c ಪ್ರತ್ಯಾಖ್ಯಾತಾಃ ಶಮಸ್ಯಾರ್ಥೇ ಕಿಂ ನು ತಸ್ಯಾದ್ಯ ಭೇಷಜಂ।।
ಶಾಂತಿಗಾಗಿ ಶಾಂತನವ ಭೀಷ್ಮ, ದ್ರೋಣ, ಮತ್ತು ವಿದುರರು ಕೇಳಿಕೊಂಡರೂ ತಿರಸ್ಕರಿಸಿದ ಅವನಿಗೆ ಇಂದು ಔಷಧಿಯೇನಿದೆ?
09023035a ಮೌರ್ಖ್ಯಾದ್ಯೇನ ಪಿತಾ ವೃದ್ಧಃ ಪ್ರತ್ಯಾಖ್ಯಾತೋ ಜನಾರ್ದನ।
09023035c ತಥಾ ಮಾತಾ ಹಿತಂ ವಾಕ್ಯಂ ಭಾಷಮಾಣಾ ಹಿತೈಷಿಣೀ।।
09023035e ಪ್ರತ್ಯಾಖ್ಯಾತಾ ಹ್ಯಸತ್ಕೃತ್ಯ ಸ ಕಸ್ಮೈ ರೋಚಯೇದ್ವಚಃ।।
ಜನಾರ್ದನ! ವೃದ್ಧ ತಂದೆಯೂ ಹೇಳಿದ ಹಾಗೆ ಹಿತೈಷಿಣೀ ತಾಯಿಯ ಹಿತವಚನವನ್ನೂ ಸತ್ಕರಿಸದೇ ಇದ್ದ ಈ ಮೂರ್ಖನಿಗೆ ಬೇರೆ ಯಾರ ಮಾತು ಹಿಡಿಸುತ್ತದೆ?
09023036a ಕುಲಾಂತಕರಣೋ ವ್ಯಕ್ತಂ ಜಾತ ಏಷ ಜನಾರ್ದನ।
09023036c ತಥಾಸ್ಯ ದೃಶ್ಯತೇ ಚೇಷ್ಟಾ ನೀತಿಶ್ಚೈವ ವಿಶಾಂ ಪತೇ।।
09023036e ನೈಷ ದಾಸ್ಯತಿ ನೋ ರಾಜ್ಯಮಿತಿ ಮೇ ಮತಿರಚ್ಯುತ।।
ಜನಾರ್ದನ! ಕುಲವನ್ನು ಅಂತ್ಯಗೊಳಿಸುವುದಕ್ಕಾಗಿಯೇ ಇವನು ಹುಟ್ಟಿದನೆಂದು ವ್ಯಕ್ತವಾಗುತ್ತಿದೆ. ವಿಶಾಂಪತೇ! ಅದಕ್ಕೆ ಅನುಗುಣವಾಗಿಯೇ ಅವನ ನಡತೆ-ನೀತಿಗಳು ತೋರುತ್ತಿವೆ. ಅಚ್ಯುತ! ಈಗಲೂ ಇವನು ನಮಗೆ ರಾಜ್ಯವನ್ನು ಕೊಡುವುದಿಲ್ಲ ಎನಿಸುತ್ತದೆ.
09023037a ಉಕ್ತೋಽಹಂ ಬಹುಶಸ್ತಾತ ವಿದುರೇಣ ಮಹಾತ್ಮನಾ।
09023037c ನ ಜೀವನ್ದಾಸ್ಯತೇ ಭಾಗಂ ಧಾರ್ತರಾಷ್ಟ್ರಃ ಕಥಂ ಚನ।।
“ಮಗೂ! ಧಾರ್ತರಾಷ್ಟ್ರನು ಜೀವಂತವಿರುವಾಗ ರಾಜ್ಯದ ಭಾಗವನ್ನು ಕೊಡುವುದಿಲ್ಲ!” ಎಂದು ಮಹಾತ್ಮ ವಿದುರನು ನನಗೆ ಅನೇಕ ಬಾರಿ ಹೇಳಿದ್ದನು.
09023038a ಯಾವತ್ಪ್ರಾಣಾ ಧಮಿಷ್ಯಂತಿ ಧಾರ್ತರಾಷ್ಟ್ರಸ್ಯ ಮಾನದ।
09023038c ತಾವದ್ಯುಷ್ಮಾಸ್ವಪಾಪೇಷು ಪ್ರಚರಿಷ್ಯತಿ ಪಾತಕಂ।।
“ಮಾನದ! ಎಂದಿನವರೆಗೆ ಧಾರ್ತರಾಷ್ಟ್ರನ ಪ್ರಾಣವು ಸ್ಥಿರವಾಗಿರುವುದೋ ಅಲ್ಲಿಯವರೆಗೆ ನಿಷ್ಪಾಪಿಗಳಾದ ನಿಮ್ಮೊಡನೆ ಪಾತಕನಾಗಿಯೇ ವ್ಯವಹರಿಸುತ್ತಾನೆ!
09023039a ನ ಸ ಯುಕ್ತೋಽನ್ಯಥಾ ಜೇತುಂ ಋತೇ ಯುದ್ಧೇನ ಮಾಧವ।
09023039c ಇತ್ಯಬ್ರವೀತ್ಸದಾ ಮಾಂ ಹಿ ವಿದುರಃ ಸತ್ಯದರ್ಶನಃ।।
ಯುದ್ಧದಿಂದಲ್ಲದೇ ಅನ್ಯಥಾ ಇವನನ್ನು ಗೆಲ್ಲಲು ಸಾಧ್ಯವಿಲ್ಲ!” ಮಾಧವ! ಹೀಗೆ ನನಗೆ ಸತ್ಯದರ್ಶನ ವಿದುರನು ಸದಾ ಹೇಳುತ್ತಿದ್ದನು.
09023040a ತತ್ಸರ್ವಮದ್ಯ ಜಾನಾಮಿ ವ್ಯವಸಾಯಂ ದುರಾತ್ಮನಃ।
09023040c ಯದುಕ್ತಂ ವಚನಂ ತೇನ ವಿದುರೇಣ ಮಹಾತ್ಮನಾ।।
ಮಹಾತ್ಮ ವಿದುರನಾಡಿದ ಆ ಮಾತುಗಳಿಂದಲೇ ನಾನು ದುರಾತ್ಮ ದುರ್ಯೋಧನನ ವ್ಯವಸಾಯಗಳೆಲ್ಲವನ್ನೂ ಅರಿತುಕೊಂಡಿದ್ದೇನೆ.
09023041a ಯೋ ಹಿ ಶ್ರುತ್ವಾ ವಚಃ ಪಥ್ಯಂ ಜಾಮದಗ್ನ್ಯಾದ್ಯಥಾತಥಂ।
09023041c ಅವಾಮನ್ಯತ ದುರ್ಬುದ್ಧಿರ್ಧ್ರುವಂ ನಾಶಮುಖೇ ಸ್ಥಿತಃ।।
ಜಾಮದಗ್ನಿಯು ಇದ್ದಹಾಗೆ ಪಥ್ಯ ಮಾತುಗಳನ್ನು ಹೇಳಿದಾಗಲೂ ಅದನ್ನು ಮನ್ನಿಸದೇ ಇದ್ದ ದುರ್ಬುದ್ಧಿಯು ನಿಜವಾಗಿಯೂ ನಾಶದ ಎದಿರೇ ನಿಂತಿದ್ದಾನೆ!
09023042a ಉಕ್ತಂ ಹಿ ಬಹುಭಿಃ ಸಿದ್ಧೈರ್ಜಾತಮಾತ್ರೇ ಸುಯೋಧನೇ।
09023042c ಏನಂ ಪ್ರಾಪ್ಯ ದುರಾತ್ಮಾನಂ ಕ್ಷಯಂ ಕ್ಷತ್ರಂ ಗಮಿಷ್ಯತಿ।।
ಸುಯೋಧನನು ಹುಟ್ಟಿದಾಗಲೇ ಅನೇಕ ಸಿದ್ಧರು ಹೇಳಿದ್ದರಂತೆ: “ಈ ದುರಾತ್ಮನನ್ನು ಪಡೆದ ಕ್ಷತ್ರಿಯರು ಕ್ಷಯರಾಗುತ್ತಾರೆ!”
09023043a ತದಿದಂ ವಚನಂ ತೇಷಾಂ ನಿರುಕ್ತಂ ವೈ ಜನಾರ್ದನ।
09023043c ಕ್ಷಯಂ ಯಾತಾ ಹಿ ರಾಜಾನೋ ದುರ್ಯೋಧನಕೃತೇ ಭೃಶಂ।।
ಜನಾರ್ದನ! ಅವರ ಆ ಮಾತು ಸುಳ್ಳಾಗಲಿಲ್ಲ. ದುರ್ಯೋಧನನ ಕೃತ್ಯದಿಂದಲೇ ರಾಜರ ಭೀಷಣ ಕ್ಷಯವಾಗುತ್ತಿದೆ.
09023044a ಸೋಽದ್ಯ ಸರ್ವಾನ್ರಣೇ ಯೋಧಾನ್ನಿಹನಿಷ್ಯಾಮಿ ಮಾಧವ।
09023044c ಕ್ಷತ್ರಿಯೇಷು ಹತೇಷ್ವಾಶು ಶೂನ್ಯೇ ಚ ಶಿಬಿರೇ ಕೃತೇ।।
ಮಾಧವ! ಇಂದು ನಾನು ರಣದಲ್ಲಿ ಸರ್ವ ಯೋಧರನ್ನೂ ಸಂಹರಿಸುತ್ತೇನೆ. ಎಲ್ಲ ಕ್ಷತ್ರಿಯರನ್ನೂ ಸಂಹರಿಸಿ ಅವನ ಶಿಬಿರವನ್ನು ಶೂನ್ಯಗೊಳಿಸುತ್ತೇನೆ.
09023045a ವಧಾಯ ಚಾತ್ಮನೋಽಸ್ಮಾಭಿಃ ಸಮ್ಯುಗಂ ರೋಚಯಿಷ್ಯತಿ।
09023045c ತದಂತಂ ಹಿ ಭವೇದ್ವೈರಮನುಮಾನೇನ ಮಾಧವ।।
ಆಗ ಅವನು ತನ್ನ ವಧೆಗಾಗಿಯಾದರೂ ನಮ್ಮೊಡನೆ ಯುದ್ಧಮಾಡಲು ಬಯಸುತ್ತಾನೆ. ಮಾಧವ! ಆಗಲೇ ಈ ವೈರದ ಅಂತ್ಯವಾಗುತ್ತದೆ ಎಂದು ಊಹಿಸುತ್ತೇನೆ.
09023046a ಏವಂ ಪಶ್ಯಾಮಿ ವಾರ್ಷ್ಣೇಯ ಚಿಂತಯನ್ಪ್ರಜ್ಞಯಾ ಸ್ವಯಾ।
09023046c ವಿದುರಸ್ಯ ಚ ವಾಕ್ಯೇನ ಚೇಷ್ಟಯಾ ಚ ದುರಾತ್ಮನಃ।।
ವಾರ್ಷ್ಣೇಯ! ವಿದುರನ ಮಾತು, ದುರಾತ್ಮ ದುರ್ಯೋಧನನ ಚೇಷ್ಟೆಗಳು ಮತ್ತು ನನ್ನ ಸ್ವಂತ ಬುದ್ಧಿಯ ಯೋಚನೆಯಿಂದ ಇದು ಹೀಗೆಯೇ ಆಗುತ್ತದೆ ಎಂದು ನನಗೆ ತೋರುತ್ತದೆ.
09023047a ಸಮ್ಯಾಹಿ ಭಾರತೀಂ ವೀರ ಯಾವದ್ಧನ್ಮಿ ಶಿತೈಃ ಶರೈಃ।
09023047c ದುರ್ಯೋಧನಂ ದುರಾತ್ಮಾನಂ ವಾಹಿನೀಂ ಚಾಸ್ಯ ಸಮ್ಯುಗೇ।।
ವೀರ! ಭಾರತೀ ಸೇನೆಯೊಳಗೆ ಪ್ರವೇಶಿಸು! ಅಲ್ಲಿ ನಾನು ನಿಶಿತ ಬಾಣಗಳಿಂದ ದುರ್ಯೋಧನನನ್ನೂ ಅವನ ಸೇನೆಯನ್ನೂ ಯುದ್ಧದಲ್ಲಿ ಸಂಹರಿಸುತ್ತೇನೆ.
09023048a ಕ್ಷೇಮಮದ್ಯ ಕರಿಷ್ಯಾಮಿ ಧರ್ಮರಾಜಸ್ಯ ಮಾಧವ।
09023048c ಹತ್ವೈತದ್ದುರ್ಬಲಂ ಸೈನ್ಯಂ ಧಾರ್ತರಾಷ್ಟ್ರಸ್ಯ ಪಶ್ಯತಃ।।
ಮಾಧವ! ಧಾರ್ತರಾಷ್ಟ್ರನು ನೋಡುತ್ತಿರುವಂತೆಯೇ ಅವನ ದುರ್ಬಲ ಸೈನ್ಯವನ್ನು ಸಂಹರಿಸಿ ಇಂದು ಧರ್ಮರಾಜನಿಗೆ ಕ್ಷೇಮವನ್ನುಂಟುಮಾಡುತ್ತೇನೆ!””
09023049 ಸಂಜಯ ಉವಾಚ 09023049a ಅಭೀಶುಹಸ್ತೋ ದಾಶಾರ್ಹಸ್ತಥೋಕ್ತಃ ಸವ್ಯಸಾಚಿನಾ।
09023049c ತದ್ಬಲೌಘಮಮಿತ್ರಾಣಾಮಭೀತಃ ಪ್ರಾವಿಶದ್ರಣೇ।।
ಸಂಜಯನು ಹೇಳಿದನು: “ಸವ್ಯಸಾಚಿಯು ಹೀಗೆ ಹೇಳಲು ಲಗಾಮುಗಳನ್ನು ಕೈಯಲ್ಲಿ ಹಿಡಿದು ದಾಶಾರ್ಹನು ಭೀತಿಯಿಲ್ಲದೇ ರಣದಲ್ಲಿ ಶತ್ರುಸೇನೆಗಳನ್ನು ಪ್ರವೇಶಿಸಿದನು.
09023050a ಶರಾಸನವರಂ ಘೋರಂ ಶಕ್ತಿಕಂಟಕಸಂವೃತಂ।
09023050c ಗದಾಪರಿಘಪಂಥಾನಂ ರಥನಾಗಮಹಾದ್ರುಮಂ।।
09023051a ಹಯಪತ್ತಿಲತಾಕೀರ್ಣಂ ಗಾಹಮಾನೋ ಮಹಾಯಶಾಃ।
09023051c ವ್ಯಚರತ್ತತ್ರ ಗೋವಿಂದೋ ರಥೇನಾತಿಪತಾಕಿನಾ।।
ಧನುಸ್ಸಿನ ಘೋರ ಟೇಂಕಾರ ಶಬ್ಧಗಳಿಂದ ಕೂಡಿದ್ದ, ಶಕ್ತಿಗಳೇ ಮುಳ್ಳಾಗಿದ್ದ, ಗದೆ-ಪರಿಘಗಳೇ ಮಾರ್ಗಗಳಂತಿದ್ದ, ರಥ-ಆನೆಗಳೇ ಮಹಾವೃಕ್ಷಗಳಂತಿದ್ದ, ಕುದುರೆ-ಪದಾತಿಗಳೇ ಲತೆಗಳಂತಿದ್ದ, ಮಹಾಯಶರಿಂದ ಗಹನವಾಗಿದ್ದ ಆ ಸೇನಾರಣ್ಯದಲ್ಲಿ ಗೋವಿಂದನು ಅತಿ ಎತ್ತರದಲ್ಲಿ ಹಾರಾಡುತ್ತಿದ್ದ ಪತಾಕೆಯುಳ್ಳ ರಥದಲ್ಲಿ ಸಂಚರಿಸುತ್ತಿದ್ದನು.
09023052a ತೇ ಹಯಾಃ ಪಾಂಡುರಾ ರಾಜನ್ವಹಂತೋಽರ್ಜುನಮಾಹವೇ।
09023052c ದಿಕ್ಷು ಸರ್ವಾಸ್ವದೃಶ್ಯಂತ ದಾಶಾರ್ಹೇಣ ಪ್ರಚೋದಿತಾಃ।।
ರಾಜನ್! ದಾಶಾರ್ಹನು ಓಡಿಸುತ್ತಿದ್ದ ಮತ್ತು ಅರ್ಜುನನನ್ನು ಯುದ್ಧಕ್ಕೆ ಕೊಂಡೊಯ್ಯುತ್ತಿದ್ದ ಆ ಬಿಳಿಯ ವರ್ಣದ ಕುದುರೆಗಳು ಎಲ್ಲ ದಿಕ್ಕುಗಳಲ್ಲಿಯೂ ಕಾಣಿಸುತ್ತಿದ್ದವು.
09023053a ತತಃ ಪ್ರಾಯಾದ್ರಥೇನಾಜೌ ಸವ್ಯಸಾಚೀ ಪರಂತಪಃ।
09023053c ಕಿರನ್ ಶರಶತಾಂಸ್ತೀಕ್ಷ್ಣಾನ್ವಾರಿಧಾರಾ ಇವಾಂಬುದಃ।।
ಪರಂತಪ ಸವ್ಯಸಾಚಿಯು ಮಳೆಯನ್ನು ಸುರಿಸುವ ಮೋಡದಂತೆ ನೂರಾರು ತೀಕ್ಷ್ಣ ಬಾಣಗಳನ್ನು ಸುರಿಸುತ್ತಾ ವೇಗದಿಂದ ರಥದಲ್ಲಿ ಮುಂದುವರೆದನು.
09023054a ಪ್ರಾದುರಾಸೀನ್ಮಹಾನ್ ಶಬ್ದಃ ಶರಾಣಾಂ ನತಪರ್ವಣಾಂ।
09023054c ಇಷುಭಿಶ್ಚಾದ್ಯಮಾನಾನಾಂ ಸಮರೇ ಸವ್ಯಸಾಚಿನಾ।।
ಸಮರದಲ್ಲಿ ಸವ್ಯಸಾಚಿಯು ಪ್ರಯೋಗಿಸುತ್ತಿದ್ದ ನತಪರ್ವ ಶರಗಳ ಮಹಾ ಶಬ್ಧವು ಕೇಳಿಬರುತ್ತಿತ್ತು.
09023055a ಅಸಜ್ಜಂತಸ್ತನುತ್ರೇಷು ಶರೌಘಾಃ ಪ್ರಾಪತನ್ಭುವಿ।
09023055c ಇಂದ್ರಾಶನಿಸಮಸ್ಪರ್ಶಾ ಗಾಂಡೀವಪ್ರೇಷಿತಾಃ ಶರಾಃ।।
ಗಾಂಡೀವವು ಪ್ರಯೋಗಿಸುತ್ತಿದ್ದ ಇಂದ್ರನ ವಜ್ರಾಯುಧಕ್ಕೆ ಸಮಾನ ಸ್ಪರ್ಶವುಳ್ಳ ಶರಗಳು ಶರೀರಗಳನ್ನು ಹೊಕ್ಕು ಭೂಮಿಯ ಮೇಲೆ ಬೀಳುತ್ತಿದ್ದವು.
09023056a ನರಾನ್ನಾಗಾನ್ಸಮಾಹತ್ಯ ಹಯಾಂಶ್ಚಾಪಿ ವಿಶಾಂ ಪತೇ।
09023056c ಅಪತಂತ ರಣೇ ಬಾಣಾಃ ಪತಂಗಾ ಇವ ಘೋಷಿಣಃ।।
ವಿಶಾಂಪತೇ! ಮನುಷ್ಯ-ಆನೆ-ಕುದುರೆಗಳನ್ನು ಸಂಹರಿಸಿ ಬಾಣಗಳು ಪತಂಗಗಳಂತೆ ಶಬ್ಧಮಾಡುತ್ತಾ ರಣದಲ್ಲಿ ಬೀಳುತ್ತಿದ್ದವು.
09023057a ಆಸೀತ್ಸರ್ವಮವಚ್ಚನ್ನಂ ಗಾಂಡೀವಪ್ರೇಷಿತೈಃ ಶರೈಃ।
09023057c ನ ಪ್ರಾಜ್ಞಾಯಂತ ಸಮರೇ ದಿಶೋ ವಾ ಪ್ರದಿಶೋಽಪಿ ವಾ।।
ಗಾಂಡೀವದಿಂದ ಪ್ರಯೋಗಿಸಿದ ಬಾಣಗಳಿಂದ ಎಲ್ಲವೂ ಮುಚ್ಚಿಹೋಯಿತು. ಸಮರದಲ್ಲಿ ದಿಕ್ಕುಗಳಾಗಲೀ ಉಪದಿಕ್ಕುಗಳಾಗಲೀ ತಿಳಿಯುತ್ತಿರಲಿಲ್ಲ.
09023058a ಸರ್ವಮಾಸೀಜ್ಜಗತ್ಪೂರ್ಣಂ ಪಾರ್ಥನಾಮಾಂಕಿತೈಃ ಶರೈಃ।
09023058c ರುಕ್ಮಪುಂಖೈಸ್ತೈಲಧೌತೈಃ ಕರ್ಮಾರಪರಿಮಾರ್ಜಿತೈಃ।।
ಜಗತ್ತೆಲ್ಲವೂ ಪಾರ್ಥ-ನಾಮಾಂಕಿತ ರುಕ್ಮಪುಂಖ-ತೈಲಧೌತ-ಕಮ್ಮಾರನಿರ್ಮಿತ ಶರಗಳಿಂದ ತುಂಬಿಹೋಯಿತು.
09023059a ತೇ ದಹ್ಯಮಾನಾಃ ಪಾರ್ಥೇನ ಪಾವಕೇನೇವ ಕುಂಜರಾಃ।
09023059c ಸಮಾಸೀದಂತ ಕೌರವ್ಯಾ ವಧ್ಯಮಾನಾಃ ಶಿತೈಃ ಶರೈಃ।।
ಕಾಡ್ಗಿಚ್ಚಿನಲ್ಲಿ ಆನೆಗಳು ಹೇಗೋ ಹಾಗೆ ಪಾರ್ಥನ ನಿಶಿತ ಶರಗಳಿಂದ ಕೌರವ್ಯರು ವಧಿಸಲ್ಪಟ್ಟರು.
09023060a ಶರಚಾಪಧರಃ ಪಾರ್ಥಃ ಪ್ರಜ್ವಲನ್ನಿವ ಭಾರತ।
09023060c ದದಾಹ ಸಮರೇ ಯೋಧಾನ್ಕಕ್ಷಮಗ್ನಿರಿವ ಜ್ವಲನ್।।
ಭಾರತ! ಶರ-ಚಾಪಗಳನ್ನು ಹಿಡಿದು ಪ್ರಜ್ವಲಿಸುತ್ತಿದ್ದ ಪಾರ್ಥನು ಪ್ರಜ್ವಲಿತ ಅಗ್ನಿಯು ಹುಲ್ಲುಮೆದೆಗಳನ್ನು ಹೇಗೋ ಹಾಗೆ ಸಮರದಲ್ಲಿ ಯೋಧರನ್ನು ಸುಟ್ಟುಹಾಕಿದನು.
09023061a ಯಥಾ ವನಾಂತೇ ವನಪೈರ್ವಿಸೃಷ್ಟಃ ಕಕ್ಷಂ ದಹೇತ್ಕೃಷ್ಣಗತಿಃ ಸಘೋಷಃ।
09023061c ಭೂರಿದ್ರುಮಂ ಶುಷ್ಕಲತಾವಿತಾನಂ ಭೃಶಂ ಸಮೃದ್ಧೋ ಜ್ವಲನಃ ಪ್ರತಾಪೀ।।
09023062a ಏವಂ ಸ ನಾರಾಚಗಣಪ್ರತಾಪೀ ಶರಾರ್ಚಿರುಚ್ಚಾವಚತಿಗ್ಮತೇಜಾಃ।
09023062c ದದಾಹ ಸರ್ವಾಂ ತವ ಪುತ್ರಸೇನಾಂ ಅಮೃಷ್ಯಮಾಣಸ್ತರಸಾ ತರಸ್ವೀ।।
ವನದಲ್ಲಿ ವನಚರರು ಹುಟ್ಟಿಸಿದ ಸಮೃದ್ಧ ಪ್ರಜ್ವಲಿತ ಪ್ರತಾಪೀ ಅಗ್ನಿಯು ಶಬ್ಧಮಾಡುತ್ತಾ ಕಪ್ಪುಹೊಗೆಯಿಂದ ಕೂಡಿ ಪೊದರು-ವೃಕ್ಷ -ಒಣ ಲತೆಗಳನ್ನು ಸುಟ್ಟುಬಿಡುವಂತೆ ಪ್ರತಾಪೀ ಕುಪಿತ ತರಸ್ವೀ ಅರ್ಜುನನು ಜೋರಾಗಿ ಶಬ್ಧಮಾಡುತ್ತಿದ್ದ ತಿಗ್ಮತೇಜಸ್ಸಿನ ನಾರಾಚಸಮೂಹಗಳಿಂದ ನಿನ್ನ ಪುತ್ರನ ಸೇನೆಯೆಲ್ಲವನ್ನೂ ದಹಿಸಿಬಿಟ್ಟನು.
09023063a ತಸ್ಯೇಷವಃ ಪ್ರಾಣಹರಾಃ ಸುಮುಕ್ತಾ ನಾಸಜ್ಜನ್ವೈ ವರ್ಮಸು ರುಕ್ಮಪುಂಖಾಃ।
09023063c ನ ಚ ದ್ವಿತೀಯಂ ಪ್ರಮುಮೋಚ ಬಾಣಂ ನರೇ ಹಯೇ ವಾ ಪರಮದ್ವಿಪೇ ವಾ।।
ಉತ್ತಮವಾಗಿ ಪ್ರಹರಿಸಿದ ಆ ರುಕ್ಮಪುಂಖ ಬಾಣಗಳು ಕವಚಗಳನ್ನು ಮಾತ್ರ ಚುಚ್ಚದೇ ಪ್ರಾಣಗಳನ್ನೂ ತೆಗೆದುಕೊಂಡು ಬೀಳುತ್ತಿದ್ದವು. ಅರ್ಜುನನು ಮನುಷ್ಯ-ಕುದುರೆ-ಮಹಾಗಜಗಳ ಮೇಲೆ ಎರಡನೆಯ ಬಾಣವನ್ನು ಪ್ರಯೋಗಿಸುತ್ತಿರಲಿಲ್ಲ.
09023064a ಅನೇಕರೂಪಾಕೃತಿಭಿರ್ಹಿ ಬಾಣೈರ್ ಮಹಾರಥಾನೀಕಮನುಪ್ರವಿಶ್ಯ।
09023064c ಸ ಏವ ಏಕಸ್ತವ ಪುತ್ರಸೇನಾಂ ಜಘಾನ ದೈತ್ಯಾನಿವ ವಜ್ರಪಾಣಿಃ।।
ವಜ್ರಪಾಣಿಯು ದೈತ್ಯರನ್ನು ಹೇಗೋ ಹಾಗೆ ಏಕಾಕಿಯಾಗಿ ಅರ್ಜುನನು ರಥಿಗಳ ವಿಶಾಲಸೇನೆಯನ್ನು ಪ್ರವೇಶಿಸಿ ಅನೇಕ ರೂಪ-ಆಕೃತಿಗಳ ಬಾಣಗಳಿಂದ ನಿನ್ನ ಮಗನ ಸೇನೆಯನ್ನು ಸಂಹರಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ತ್ರಯೋವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.