022 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 22

ಸಾರ

ಪಾಂಡವರು ಕೌರವ ಸೇನೆಯ ಏಳುನೂರು ರಥಗಳನ್ನು ನಾಶಗೊಳಿಸಿದುದು (1-14). ಸಂಕುಲಯುದ್ಧ (15-27). ಶಕುನಿಯ ಯುದ್ಧ (28-40). ಶಕುನಿಯ ಪಲಾಯನ (41-58). ಶಕುನಿಯು ಪುನಃ ಯುದ್ಧಕ್ಕೆ ಬಂದುದು (59-62). ತುಮುಲಯುದ್ಧ (63-88).

09022001 ಸಂಜಯ ಉವಾಚ 09022001a ವರ್ತಮಾನೇ ತಥಾ ಯುದ್ಧೇ ಘೋರರೂಪೇ ಭಯಾನಕೇ।
09022001c ಅಭಜ್ಯತ ಬಲಂ ತತ್ರ ತವ ಪುತ್ರಸ್ಯ ಪಾಂಡವೈಃ।।

ಸಂಜಯನು ಹೇಳಿದನು: “ಘೋರರೂಪದ ಆ ಭಯಾನಕ ಯುದ್ಧವು ನಡೆಯುತ್ತಿರಲು ಪಾಂಡವರು ನಿನ್ನ ಪುತ್ರನ ಸೇನೆಯನ್ನು ಭಗ್ನಗೊಳಿಸಿದರು.

09022002a ತಾಂಸ್ತು ಯತ್ನೇನ ಮಹತಾ ಸಂನಿವಾರ್ಯ ಮಹಾರಥಾನ್।
09022002c ಪುತ್ರಸ್ತೇ ಯೋಧಯಾಮಾಸ ಪಾಂಡವಾನಾಮನೀಕಿನೀಂ।।

ಓಡಿಹೋಗುತ್ತಿದ್ದ ಮಹಾರಥರನ್ನು ಮಹಾಯತ್ನದಿಂದ ತಡೆಯುತ್ತಾ ನಿನ್ನ ಮಗನು ಪಾಂಡವ ಸೇನೆಗಳೊಡನೆ ಯುದ್ಧಮಾಡುತ್ತಿದ್ದನು.

09022003a ನಿವೃತ್ತಾಃ ಸಹಸಾ ಯೋಧಾಸ್ತವ ಪುತ್ರಪ್ರಿಯೈಷಿಣಃ।
09022003c ಸಂನಿವೃತ್ತೇಷು ತೇಷ್ವೇವಂ ಯುದ್ಧಮಾಸೀತ್ಸುದಾರುಣಂ।।

ನಿನ್ನ ಪುತ್ರನಿಗೆ ಪ್ರಿಯವನ್ನೇ ಬಯಸಿದ ಯೋಧರು ಕೂಡಲೇ ಹಿಂದಿರುಗಿದರು. ಅವರು ಹಿಂದಿರುಗಲು, ಅಲ್ಲಿ ಸುದಾರುಣ ಯುದ್ಧವು ನಡೆಯಿತು.

09022004a ತಾವಕಾನಾಂ ಪರೇಷಾಂ ಚ ದೇವಾಸುರರಣೋಪಮಂ।
09022004c ಪರೇಷಾಂ ತವ ಸೈನ್ಯೇ ಚ ನಾಸೀತ್ಕಶ್ಚಿತ್ಪರಾಙ್ಮುಖಃ।।

ದೇವಾಸುರರ ಯುದ್ಧದಂತಿದ್ದ ನಿನ್ನವರ ಮತ್ತು ಶತ್ರುಗಳ ಆ ಯುದ್ಧದಲ್ಲಿ ನಿನ್ನ ಅಥವಾ ಶತ್ರು ಸೇನೆಗಳಲ್ಲಿ ಯಾರೂ ಪಾರಙ್ಮುಖರಾಗಲಿಲ್ಲ.

09022005a ಅನುಮಾನೇನ ಯುಧ್ಯಂತೇ ಸಂಜ್ಞಾಭಿಶ್ಚ ಪರಸ್ಪರಂ।
09022005c ತೇಷಾಂ ಕ್ಷಯೋ ಮಹಾನಾಸೀದ್ಯುಧ್ಯತಾಮಿತರೇತರಂ।।

ಅನುಮಾನ-ಸಂಜ್ಞೆಗಳಿಂದ ಪರಸ್ಪರರನ್ನು ಗುರುತಿಸಿ ಯುದ್ಧಮಾಡುತ್ತಿದ್ದರು. ಅನ್ಯೋನ್ಯರೊಂದಿಗೆ ಯುದ್ಧಮಾಡುತ್ತಿದ್ದ ಅವರಲ್ಲಿ ಮಹಾ ನಾಶವುಂಟಾಯಿತು.

09022006a ತತೋ ಯುಧಿಷ್ಠಿರೋ ರಾಜಾ ಕ್ರೋಧೇನ ಮಹತಾ ಯುತಃ।
09022006c ಜಿಗೀಷಮಾಣಃ ಸಂಗ್ರಾಮೇ ಧಾರ್ತರಾಷ್ಟ್ರಾನ್ಸರಾಜಕಾನ್।।
09022007a ತ್ರಿಭಿಃ ಶಾರದ್ವತಂ ವಿದ್ಧ್ವಾ ರುಕ್ಮಪುಂಖೈಃ ಶಿಲಾಶಿತೈಃ।
09022007c ಚತುರ್ಭಿರ್ನಿಜಘಾನಾಶ್ವಾನ್ಕಲ್ಯಾಣಾನ್ಕೃತವರ್ಮಣಃ।।

ಆಗ ರಾಜಾ ಯುಧಿಷ್ಠಿರನು ಮಹಾ ಕ್ರೋಧಯುಕ್ತನಾಗಿ ಸಂಗ್ರಾಮದಲ್ಲಿ ರಾಜನೊಂದಿಗೆ ಧಾರ್ತರಾಷ್ಟ್ರರನ್ನು ಗೆಲ್ಲಲು ಬಯಸಿ, ಮೂರು ರುಕ್ಮಪುಂಖ ಶಿಲಾಶಿತಗಳಿಂದ ಶಾರದ್ವತನನ್ನು ಹೊಡೆದು ನಾಲ್ಕು ಶರಗಳಿಂದ ಕೃತವರ್ಮನ ನಾಲ್ಕು ಕಲ್ಯಾಣ ಕುದುರೆಗಳನ್ನು ಸಂಹರಿಸಿದನು.

09022008a ಅಶ್ವತ್ಥಾಮಾ ತು ಹಾರ್ದಿಕ್ಯಮಪೋವಾಹ ಯಶಸ್ವಿನಂ।
09022008c ಅಥ ಶಾರದ್ವತೋಽಷ್ಟಾಭಿಃ ಪ್ರತ್ಯವಿಧ್ಯದ್ಯುಧಿಷ್ಠಿರಂ।।

ಅಶ್ವಾತ್ಥಾಮನು ಯಶಸ್ವಿ ಹಾರ್ದಿಕ್ಯನನ್ನು ಕರೆದುಕೊಂಡು ಹೋದನು. ಶಾರದ್ವತನು ಎಂಟು ಬಾಣಗಳಿಂದ ಯುಧಿಷ್ಠಿರನನ್ನು ಪ್ರತಿಯಾಗಿ ಹೊಡೆದನು.

09022009a ತತೋ ದುರ್ಯೋಧನೋ ರಾಜಾ ರಥಾನ್ಸಪ್ತಶತಾನ್ರಣೇ।
09022009c ಪ್ರೇಷಯದ್ಯತ್ರ ರಾಜಾಸೌ ಧರ್ಮಪುತ್ರೋ ಯುಧಿಷ್ಠಿರಃ।।

ಆಗ ರಾಜಾ ದುರ್ಯೋಧನನು ರಣದಲ್ಲಿ ಏಳುನೂರು ರಥಗಳನ್ನು ರಾಜಾ ಧರ್ಮಪುತ್ರ ಯುಧಿಷ್ಠಿರನಿರುವಲ್ಲಿಗೆ ಕಳುಹಿಸಿದನು.

09022010a ತೇ ರಥಾ ರಥಿಭಿರ್ಯುಕ್ತಾ ಮನೋಮಾರುತರಂಹಸಃ।
09022010c ಅಭ್ಯದ್ರವಂತ ಸಂಗ್ರಾಮೇ ಕೌಂತೇಯಸ್ಯ ರಥಂ ಪ್ರತಿ।।

ರಥಿಗಳಿಂದ ಕೂಡಿದ ಆ ರಥಗಳು ಮನಸ್ಸು-ಮಾರುತಗಳ ವೇಗದಿಂದ ಸಂಗ್ರಾಮದಲ್ಲಿ ಕೌಂತೇಯನ ರಥದ ಬಳಿ ಬಂದು ಅವನನ್ನು ಆಕ್ರಮಣಿಸಿದವು.

09022011a ತೇ ಸಮಂತಾನ್ಮಹಾರಾಜ ಪರಿವಾರ್ಯ ಯುಧಿಷ್ಠಿರಂ।
09022011c ಅದೃಶ್ಯಂ ಸಾಯಕೈಶ್ಚಕ್ರುರ್ಮೇಘಾ ಇವ ದಿವಾಕರಂ।।

ಮಹಾರಾಜ! ಅವರು ಯುಧಿಷ್ಠಿರನನ್ನು ಎಲ್ಲಕಡೆಗಳಿಂದ ಸುತ್ತುವರೆದು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಸಾಯಕಗಳಿಂದ ಅವನನ್ನು ಅದೃಶ್ಯಗೊಳಿಸಿದರು.

09022012a ನಾಮೃಷ್ಯಂತ ಸುಸಂರಬ್ಧಾಃ ಶಿಖಂಡಿಪ್ರಮುಖಾ ರಥಾಃ।
09022012c ರಥೈರಗ್ರ್ಯಜವೈರ್ಯುಕ್ತೈಃ ಕಿಂಕಿಣೀಜಾಲಸಂವೃತೈಃ।
09022012e ಆಜಗ್ಮುರಭಿರಕ್ಷಂತಃ ಕುಂತೀಪುತ್ರಂ ಯುಧಿಷ್ಠಿರಂ।।

ಕುಪಿತರಾದ ಶಿಖಂಡಿ ಮೊದಲಾದ ರಥರು ಅದನ್ನು ಸಹಿಸಿಕೊಳ್ಳಲಾರದೇ ವೇಗಯುಕ್ತ ಕಿಂಕಿಣೀಜಾಲಗಳನ್ನು ಸುತ್ತಿದ್ದ ರಥಗಳ ಮೇಲೆ ಕುಳಿತು ಕುಂತೀಪುತ್ರ ಯುಧಿಷ್ಠಿರನನ್ನು ರಕ್ಷಿಸಲು ಅಲ್ಲಿಗೆ ಧಾವಿಸಿದರು.

09022013a ತತಃ ಪ್ರವವೃತೇ ರೌದ್ರಃ ಸಂಗ್ರಾಮಃ ಶೋಣಿತೋದಕಃ।
09022013c ಪಾಂಡವಾನಾಂ ಕುರೂಣಾಂ ಚ ಯಮರಾಷ್ಟ್ರವಿವರ್ಧನಃ।।

ಆಗ ಪಾಂಡವ-ಕೌರವರ ನಡುವೆ ಯಮರಾಷ್ಟ್ರವನ್ನು ವರ್ಧಿಸುವ ರಕ್ತವೇ ನೀರಾಗಿ ಹರಿಯುತ್ತಿದ್ದ ರೌದ್ರ ಸಂಗ್ರಾಮವು ನಡೆಯಿತು.

09022014a ರಥಾನ್ಸಪ್ತಶತಾನ್ ಹತ್ವಾ ಕುರೂಣಾಮಾತತಾಯಿನಾಂ।
09022014c ಪಾಂಡವಾಃ ಸಹ ಪಾಂಚಾಲೈಃ ಪುನರೇವಾಭ್ಯವಾರಯನ್।।

ಪಾಂಚಾಲರೊಂದಿಗೆ ಪಾಂಡವರು ಆತಯಾಯಿ ಕುರುಗಳ ಆ ಏಳುನೂರು ರಥಗಳನ್ನು ಧ್ವಂಸಗೊಳಿಸಿ ಪುನಃ ಅವರನ್ನು ತಡೆದರು.

09022015a ತತ್ರ ಯುದ್ಧಂ ಮಹಚ್ಚಾಸೀತ್ತವ ಪುತ್ರಸ್ಯ ಪಾಂಡವೈಃ।
09022015c ನ ಚ ನಸ್ತಾದೃಶಂ ದೃಷ್ಟಂ ನೈವ ಚಾಪಿ ಪರಿಶ್ರುತಂ।।

ಆಗ ಪಾಂಡವರೊಂದಿಗೆ ನಿನ್ನ ಪುತ್ರನ ಮಹಾಯುದ್ಧವು ನಡೆಯಿತು. ಅಂತಹ ಯುದ್ಧವನ್ನು ನಾವು ಈ ಹಿಂದೆ ನೋಡಿರಲಿಲ್ಲ, ಕೇಳಿಯೂ ಇರಲಿಲ್ಲ.

09022016a ವರ್ತಮಾನೇ ತಥಾ ಯುದ್ಧೇ ನಿರ್ಮರ್ಯಾದೇ ಸಮಂತತಃ।
09022016c ವಧ್ಯಮಾನೇಷು ಯೋಧೇಷು ತಾವಕೇಷ್ವಿತರೇಷು ಚ।।
09022017a ನಿನದತ್ಸು ಚ ಯೋಧೇಷು ಶಂಖವರ್ಯೈಶ್ಚ ಪೂರಿತೈಃ।
09022017c ಉತ್ಕೃಷ್ಟೈಃ ಸಿಂಹನಾದೈಶ್ಚ ಗರ್ಜಿತೇನ ಚ ಧನ್ವಿನಾಂ।।

ಎಲ್ಲಕಡೆ ನಿನ್ನಕಡೆಯ ಮತ್ತು ಶತ್ರು ಯೋಧರ ವಧೆಯಾಗುತ್ತಿದ್ದ ಆ ನಿರ್ಮರ್ಯಾದಾಯುಕ್ತ ಯುದ್ಧವು ನಡೆಯುತ್ತಿರುವಾಗ ಯೋಧರು ಗರ್ಜಿಸುತ್ತಿದ್ದರು. ಶಂಖಗಳನ್ನು ಜೋರಾಗಿ ಊದುತ್ತಿದ್ದರು. ಉಚ್ಛಧ್ವನಿಯಲ್ಲಿ ಸಿಂಹನಾದಗೈಯುತ್ತಿದ್ದರು ಮತ್ತು ಧನ್ವಿಗಳು ಗರ್ಜಿಸುತ್ತಿದ್ದರು.

09022018a ಅತಿಪ್ರವೃದ್ಧೇ ಯುದ್ಧೇ ಚ ಚಿದ್ಯಮಾನೇಷು ಮರ್ಮಸು।
09022018c ಧಾವಮಾನೇಷು ಯೋಧೇಷು ಜಯಗೃದ್ಧಿಷು ಮಾರಿಷ।।

ಮಾರಿಷ! ಅತಿ ಜೋರಾಗಿದ್ದ ಆ ಯುದ್ಧದಲ್ಲಿ ಜಯೇಚ್ಛು ಯೋಧರು ಮರ್ಮಸ್ಥಾನಗಳಲ್ಲಿ ಗಾಯಗೊಂಡು ಓಡಿ ಹೋಗುತ್ತಿದ್ದರು.

09022019a ಸಂಹಾರೇ ಸರ್ವತೋ ಜಾತೇ ಪೃಥಿವ್ಯಾಂ ಶೋಕಸಂಭವೇ।
09022019c ಬಹ್ವೀನಾಮುತ್ತಮಸ್ತ್ರೀಣಾಂ ಸೀಮಂತೋದ್ಧರಣೇ ತಥಾ।।

ರಣಭೂಮಿಯ ಎಲ್ಲಕಡೆ ಸಂಹಾರವು ನಡೆಯುತ್ತಿರಲು ಬಹುಸಂಖ್ಯಾತ ಉತ್ತಮ ಸ್ತ್ರೀಯರ ಸೀಮಂತವು ರಣದಲ್ಲಿ ಹರಣವಾಯಿತು.

09022020a ನಿರ್ಮರ್ಯಾದೇ ತಥಾ ಯುದ್ಧೇ ವರ್ತಮಾನೇ ಸುದಾರುಣೇ।
09022020c ಪ್ರಾದುರಾಸನ್ವಿನಾಶಾಯ ತದೋತ್ಪಾತಾಃ ಸುದಾರುಣಾಃ।।
09022020e ಚಚಾಲ ಶಬ್ದಂ ಕುರ್ವಾಣಾ ಸಪರ್ವತವನಾ ಮಹೀ।।

ಮರ್ಯಾದೆಗಳನ್ನು ಮೀರಿದ ಆ ಸುದಾರುಣ ಯುದ್ಧವು ನಡೆಯುತ್ತಿರಲು ವಿನಾಶವನ್ನು ಸೂಚಿಸುವ ಸುದಾರುಣ ಉತ್ಪಾತಗಳು ಕಾಣಿಸಿಕೊಂಡವು. ಪರ್ವತ-ವನಗಳೊಂದಿಗೆ ಭೂಮಿಯು ನಡುಗಿ ಶಬ್ಧಮಾಡಿತು.

09022021a ಸದಂಡಾಃ ಸೋಲ್ಮುಕಾ ರಾಜನ್ ಶೀರ್ಯಮಾಣಾಃ ಸಮಂತತಃ।
09022021c ಉಲ್ಕಾಃ ಪೇತುರ್ದಿವೋ ಭೂಮಾವಾಹತ್ಯ ರವಿಮಂಡಲಂ।।

ರಾಜನ್! ದಂಡ-ಕೊಳ್ಳಿಗಳುಳ್ಳ ಉಲ್ಕೆಗಳು ರವಿಮಂಡಲವನ್ನು ಅಪ್ಪಳಿಸಿ ಚೂರಾಗಿ ಭೂಮಿಯ ಮೇಲೆ ಎಲ್ಲಕಡೆ ಬಿದ್ದವು.

09022022a ವಿಷ್ವಗ್ವಾತಾಃ ಪ್ರಾದುರಾಸನ್ನೀಚೈಃ ಶರ್ಕರವರ್ಷಿಣಃ।
09022022c ಅಶ್ರೂಣಿ ಮುಮುಚುರ್ನಾಗಾ ವೇಪಥುಶ್ಚಾಸ್ಪೃಶದ್ ಭೃಶಂ।।

ಕೆಳಗೆ ಭೂಮಿಯ ಮೇಲೆ ಮರಳುಕಲ್ಲುಗಳನ್ನು ಸುರಿಸುವ ಗಾಳಿಯು ಬೀಸಿತು. ಆನೆಗಳು ಕಣ್ಣೀರಿಡುತ್ತಾ ಥರ ಥರನೆ ನಡುಗುತ್ತಿದ್ದವು.

09022023a ಏತಾನ್ಘೋರಾನನಾದೃತ್ಯ ಸಮುತ್ಪಾತಾನ್ಸುದಾರುಣಾನ್।
09022023c ಪುನರ್ಯುದ್ಧಾಯ ಸಮ್ಮಂತ್ರ್ಯ ಕ್ಷತ್ರಿಯಾಸ್ತಸ್ಥುರವ್ಯಥಾಃ।।
09022023e ರಮಣೀಯೇ ಕುರುಕ್ಷೇತ್ರೇ ಪುಣ್ಯೇ ಸ್ವರ್ಗಂ ಯಿಯಾಸವಃ।।

ಉಂಟಾದ ಈ ಸುದಾರುಣ ಘೋರ ಶಕುನಗಳನ್ನು ಅನಾದರಿಸಿ ರಮಣೀಯ ಕುರುಕ್ಷೇತ್ರದಲ್ಲಿ ಪುಣ್ಯ ಸ್ವರ್ಗವನ್ನೇ ಬಯಸಿದ್ದ ವ್ಯಥೆಯಿಲ್ಲದ ಕ್ಷತ್ರಿಯರು ಪುನಃ ಯುದ್ಧಕ್ಕಾಗಿ ವಿಚಾರಮಾಡಿ ಸಿದ್ಧರಾದರು.

09022024a ತತೋ ಗಾಂಧಾರರಾಜಸ್ಯ ಪುತ್ರಃ ಶಕುನಿರಬ್ರವೀತ್।
09022024c ಯುಧ್ಯಧ್ವಮಗ್ರತೋ ಯಾವತ್ಪೃಷ್ಠತೋ ಹನ್ಮಿ ಪಾಂಡವಾನ್।।

ಆಗ ಗಾಂಧಾರರಾಜನ ಮಗ ಶಕುನಿಯು “ನೀವು ಮುಂದಿನಿಂದ ಪಾಂಡವರೊಡನೆ ಯುದ್ಧಮಾಡಿ. ನಾನು ಹಿಂದಿನಿಂದ ಅವರನ್ನು ಸಂಹರಿಸುತ್ತೇನೆ!” ಎಂದು ಹೇಳಿದನು.

09022025a ತತೋ ನಃ ಸಂಪ್ರಯಾತಾನಾಂ ಮದ್ರಯೋಧಾಸ್ತರಸ್ವಿನಃ।
09022025c ಹೃಷ್ಟಾಃ ಕಿಲಕಿಲಾಶಬ್ದಮಕುರ್ವಂತಾಪರೇ ತಥಾ।।

ಆಗ ನಾವು ಮುಂದಿನಿಂದ ಯುದ್ಧಮಾಡಲು ಹೋದೆವು. ತರಸ್ವಿ ಮದ್ರಯೋಧರು ಹೃಷ್ಟರಾಗಿ ಕಿಲಕಿಲಾ ಶಬ್ಧಮಾಡುತ್ತಿದ್ದರು.

09022026a ಅಸ್ಮಾಂಸ್ತು ಪುನರಾಸಾದ್ಯ ಲಬ್ಧಲಕ್ಷಾ ದುರಾಸದಾಃ।
09022026c ಶರಾಸನಾನಿ ಧುನ್ವಂತಃ ಶರವರ್ಷೈರವಾಕಿರನ್।।

ಲಕ್ಷಬದ್ಧ-ದುರಾಸದ ಪಾಂಡವರು ಪುನಃ ನಮ್ಮಬಳಿಬಂದು ಧನುಸ್ಸನ್ನು ಟೇಂಕರಿಸುತ್ತಾ ಶರವರ್ಷಗಳಿಂದ ನಮ್ಮನ್ನು ಮುಸುಕಿದರು.

09022027a ತತೋ ಹತಂ ಪರೈಸ್ತತ್ರ ಮದ್ರರಾಜಬಲಂ ತದಾ।
09022027c ದುರ್ಯೋಧನಬಲಂ ದೃಷ್ಟ್ವಾ ಪುನರಾಸೀತ್ ಪರಾಙ್ಮುಖಂ।।

ಶತ್ರುಗಳಿಂದ ಮದ್ರರಾಜನ ಬಲವು ನಾಶವಾದುದನ್ನು ನೋಡಿ ದುರ್ಯೋಧನನ ಸೇನೆಯು ಪುನಃ ಪರಾಙ್ಮುಖವಾಯಿತು.

09022028a ಗಾಂಧಾರರಾಜಸ್ತು ಪುನರ್ವಾಕ್ಯಮಾಹ ತತೋ ಬಲೀ।
09022028c ನಿವರ್ತಧ್ವಮಧರ್ಮಜ್ಞಾ ಯುಧ್ಯಧ್ವಂ ಕಿಂ ಸೃತೇನ ವಃ।।

ಆಗ ಬಲಶಾಲೀ ಗಾಂಧಾರರಾಜನು “ಧರ್ಮವನ್ನು ತಿಳಿಯದವರೇ! ಹಿಂದಿರುಗಿರಿ! ಕೆಚ್ಚಿನಿಂದ ಯುದ್ಧಮಾಡಿ! ಪಲಾಯನ ಮಾಡುವುದರಿಂದ ಏನು ಪ್ರಯೋಜನ?” ಎಂದು ಕೂಗಿ ಕರೆದನು.

09022029a ಅನೀಕಂ ದಶಸಾಹಸ್ರಮಶ್ವಾನಾಂ ಭರತರ್ಷಭ।
09022029c ಆಸೀದ್ಗಾಂಧಾರರಾಜಸ್ಯ ವಿಮಲಪ್ರಾಸಯೋಧಿನಾಂ।।

ಭರತರ್ಷಭ! ಹೊಳೆಯುವ ಪ್ರಾಸಗಳೊಂದಿಗೆ ಯುದ್ಧಮಾಡಬಲ್ಲ ಹತ್ತು ಸಾವಿರ ಅಶ್ವಗಳ ಸೇನೆಯು ಗಾಂಧಾರರಾಜನಲ್ಲಿತ್ತು.

09022030a ಬಲೇನ ತೇನ ವಿಕ್ರಮ್ಯ ವರ್ತಮಾನೇ ಜನಕ್ಷಯೇ।
09022030c ಪೃಷ್ಠತಃ ಪಾಂಡವಾನೀಕಮಭ್ಯಘ್ನನ್ನಿಶಿತೈಃ ಶರೈಃ।।

ಹಾಗೆ ಜನಕ್ಷಯವು ನಡೆಯುತ್ತಿರಲಾಗಿ ಆ ವಿಕ್ರಮಿಯು ತನ್ನ ಸೇನೆಯನ್ನೊಡಗೂಡಿ ಪಾಂಡವರ ಸೇನೆಯನ್ನು ಹಿಂದಿನಿಂದ ನಿಶಿತ ಶರಗಳನ್ನು ಪ್ರಯೋಗಿಸಿ ಸಂಹರಿಸತೊಡಗಿದನು.

09022031a ತದಭ್ರಮಿವ ವಾತೇನ ಕ್ಷಿಪ್ಯಮಾಣಂ ಸಮಂತತಃ।
09022031c ಅಭಜ್ಯತ ಮಹಾರಾಜ ಪಾಂಡೂನಾಂ ಸುಮಹದ್ಬಲಂ।।

ಮಹಾರಾಜ! ಭಿರುಗಾಳಿಯಿಂದ ಮೋಡಗಳು ಹೇಗೋ ಹಾಗೆ ಪಾಂಡವರ ಮಹಾ ಬಲವು ಆಗ ಭಗ್ನವಾಗಿ ಹೋಯಿತು.

09022032a ತತೋ ಯುಧಿಷ್ಠಿರಃ ಪ್ರೇಕ್ಷ್ಯ ಭಗ್ನಂ ಸ್ವಬಲಮಂತಿಕಾತ್।
09022032c ಅಭ್ಯಚೋದಯದವ್ಯಗ್ರಃ ಸಹದೇವಂ ಮಹಾಬಲಂ।।

ತನ್ನ ಸೇನೆಯು ಭಗ್ನವಾಗುತ್ತಿದ್ದುದನ್ನು ಹತ್ತಿರದಿಂದಲೇ ನೋಡಿದ ಅವ್ಯಗ್ರ ಯುಧಿಷ್ಠಿರನು ಮಹಾಬಲ ಸಹದೇವನನ್ನು ಪ್ರಚೋದಿಸಿದನು:

09022033a ಅಸೌ ಸುಬಲಪುತ್ರೋ ನೋ ಜಘನಂ ಪೀಡ್ಯ ದಂಶಿತಃ।
09022033c ಸೇನಾಂ ನಿಸೂದಯಂತ್ಯೇಷ ಪಶ್ಯ ಪಾಂಡವ ದುರ್ಮತಿಂ।।

“ಪಾಂಡವ! ಕವಚಧಾರಿಯಾಗಿ ನಮ್ಮ ಸೇನೆಯನ್ನು ಹಿಂಬಾಗದಿಂದ ಪೀಡಿಸಿ ಸಂಹರಿಸುತ್ತಿರುವ ಆ ದುರ್ಮತಿಯನ್ನು ನೋಡು!

09022034a ಗಚ್ಚ ತ್ವಂ ದ್ರೌಪದೇಯಾಶ್ಚ ಶಕುನಿಂ ಸೌಬಲಂ ಜಹಿ।
09022034c ರಥಾನೀಕಮಹಂ ರಕ್ಷ್ಯೇ ಪಾಂಚಾಲಸಹಿತೋಽನಘ।।

ಅನಘ! ನೀನು ದ್ರೌಪದೇಯರೊಂದಿಗೆ ಹೋಗು! ಸೌಬಲ ಶಕುನಿಯನ್ನು ಸಂಹರಿಸು! ಪಾಂಚಾಲಸಹಿತನಾಗಿ ನಾನು ಈ ರಥಸೇನೆಯನ್ನು ರಕ್ಷಿಸುತ್ತೇನೆ!

09022035a ಗಚ್ಚಂತು ಕುಂಜರಾಃ ಸರ್ವೇ ವಾಜಿನಶ್ಚ ಸಹ ತ್ವಯಾ।
09022035c ಪಾದಾತಾಶ್ಚ ತ್ರಿಸಾಹಸ್ರಾಃ ಶಕುನಿಂ ಸೌಬಲಂ ಜಹಿ।।

ನಿನ್ನೊಂದಿಗೆ ಆನೆ-ಕುದುರೆಗಳೆಲ್ಲವೂ ಮತ್ತು ಮೂರು ಸಾವಿರ ಪದಾತಿಗಳೂ ಹೋಗಲಿ! ಸೌಬಲ ಶಕುನಿಯನ್ನು ಸಂಹರಿಸು!”

09022036a ತತೋ ಗಜಾಃ ಸಪ್ತಶತಾಶ್ಚಾಪಪಾಣಿಭಿರಾಸ್ಥಿತಾಃ।
09022036c ಪಂಚ ಚಾಶ್ವಸಹಸ್ರಾಣಿ ಸಹದೇವಶ್ಚ ವೀರ್ಯವಾನ್।।
09022037a ಪಾದಾತಾಶ್ಚ ತ್ರಿಸಾಹಸ್ರಾ ದ್ರೌಪದೇಯಾಶ್ಚ ಸರ್ವಶಃ।
09022037c ರಣೇ ಹ್ಯಭ್ಯದ್ರವಂಸ್ತೇ ತು ಶಕುನಿಂ ಯುದ್ಧದುರ್ಮದಂ।।

ಆಗ ಧನುಷ್ಪಾಣಿಗಳೊಂದಿಗೆ ಏಳು ನೂರು ಆನೆಗಳು, ಐದು ಸಾವಿರ ಕುದುರೆಗಳು, ಮೂರು ಸಾವಿರ ಪದಾತಿಗಳೂ ಮತ್ತು ದ್ರೌಪದೇಯರೂ ಸೇರಿ ವೀರ್ಯವಾನ್ ಸಹದೇವನು ರಣದಲ್ಲಿ ಯುದ್ಧದುರ್ಮದ ಶಕುನಿಯನ್ನು ಎಲ್ಲ ಕಡೆಗಳಿಂದ ಮುತ್ತಿದನು.

09022038a ತತಸ್ತು ಸೌಬಲೋ ರಾಜನ್ನಭ್ಯತಿಕ್ರಮ್ಯ ಪಾಂಡವಾನ್।
09022038c ಜಘಾನ ಪೃಷ್ಠತಃ ಸೇನಾಂ ಜಯಗೃಧ್ರಃ ಪ್ರತಾಪವಾನ್।।

ರಾಜನ್! ಜಯೇಚ್ಛು ಪ್ರತಾಪವಾನ್ ಸೌಬಲನು ಪಾಂಡವರನ್ನು ಅತಿಕ್ರಮಿಸಿ ಸೇನೆಯನ್ನು ಹಿಂದಿನಿಂದ ಸಂಹರಿಸುತ್ತಿದ್ದನು.

09022039a ಅಶ್ವಾರೋಹಾಸ್ತು ಸಂರಬ್ಧಾಃ ಪಾಂಡವಾನಾಂ ತರಸ್ವಿನಾಂ।
09022039c ಪ್ರಾವಿಶನ್ಸೌಬಲಾನೀಕಮಭ್ಯತಿಕ್ರಮ್ಯ ತಾನ್ರಥಾನ್।।

ಕುಪಿತ ತರಸ್ವೀ ಪಾಂಡವ ಅಶ್ವಾರೋಹಿಗಳು ಸುಬಲನ ರಥಸೇನೆಯನ್ನು ಆಕ್ರಮಣಿಸಿ ಪವೇಶಿಸಿದರು.

09022040a ತೇ ತತ್ರ ಸಾದಿನಃ ಶೂರಾಃ ಸೌಬಲಸ್ಯ ಮಹದ್ಬಲಂ।
09022040c ಗಜಮಧ್ಯೇಽವತಿಷ್ಠಂತಃ ಶರವರ್ಷೈರವಾಕಿರನ್।।

ಶೂರ ಅಶ್ವಸೈನಿಕರು ಸೌಬಲನ ಮಹಾಸೇನೆಯ ಮಧ್ಯೆ ನಿಂತು ಶರವರ್ಷಗಳಿಂದ ಅದನ್ನು ಮುಸುಕಿದರು.

09022041a ತದುದ್ಯತಗದಾಪ್ರಾಸಮಕಾಪುರುಷಸೇವಿತಂ।
09022041c ಪ್ರಾವರ್ತತ ಮಹದ್ಯುದ್ಧಂ ರಾಜನ್ದುರ್ಮಂತ್ರಿತೇ ತವ।।

ರಾಜನ್! ಆಗ ಶತ್ರುಸೇನೆಗಳನ್ನು ಸಂಹರಿಸಲು ಗದ-ಪ್ರಾಸಗಳನ್ನು ಎತ್ತಿ ಹಿಡಿದಿದ್ದ ಪುರುಷರ ನಡುವೆ, ನಿನ್ನ ದುರ್ಮಂತ್ರದಿಂದ ಪ್ರಾರಂಭವಾದ, ಮಹಾ ಯುದ್ಧವು ನಡೆಯಿತು.

09022042a ಉಪಾರಮಂತ ಜ್ಯಾಶಬ್ದಾಃ ಪ್ರೇಕ್ಷಕಾ ರಥಿನೋಽಭವನ್।
09022042c ನ ಹಿ ಸ್ವೇಷಾಂ ಪರೇಷಾಂ ವಾ ವಿಶೇಷಃ ಪ್ರತ್ಯದೃಶ್ಯತ।।

ಧನುಸ್ಸಿನ ಶಿಂಜನಿಯ ಶಬ್ಧಗಳು ತಣ್ಣಗಾಗಿ ರಥಿಗಳು ಪ್ರೇಕ್ಷಕರಾದರು. ಅಲ್ಲಿ ನಿನ್ನ ಮತ್ತು ಶತ್ರುಗಳ ನಡುವೆ ಯಾವ ವ್ಯತ್ಯಾಸವೂ ಕಾಣಲಿಲ್ಲ.

09022043a ಶೂರಬಾಹುವಿಸೃಷ್ಟಾನಾಂ ಶಕ್ತೀನಾಂ ಭರತರ್ಷಭ।
09022043c ಜ್ಯೋತಿಷಾಮಿವ ಸಂಪಾತಮಪಶ್ಯನ್ಕುರುಪಾಂಡವಾಃ।।

ಭರತರ್ಷಭ! ಶೂರಬಾಹುಗಳು ಪ್ರಯೋಗಿಸಿದ ಶಕ್ತಿಗಳು ನಕ್ಷತ್ರಗಳಂತೆ ಬೀಳುವುದನ್ನು ಕುರು-ಪಾಂಡವರು ನೋಡಿದರು.

09022044a ಋಷ್ಟಿಭಿರ್ವಿಮಲಾಭಿಶ್ಚ ತತ್ರ ತತ್ರ ವಿಶಾಂ ಪತೇ।
09022044c ಸಂಪತಂತೀಭಿರಾಕಾಶಮಾವೃತಂ ಬಹ್ವಶೋಭತ।।

ವಿಶಾಂಪತೇ! ಅಲ್ಲಲ್ಲಿ ಬೀಳುತ್ತಿದ್ದ ವಿಮಲ ಋಷ್ಟಿಗಳು ಆಕಾಶದಲ್ಲಿ ತುಂಬಿ ಬಹಳವಾಗಿ ಶೋಭಿಸಿದವು.

09022045a ಪ್ರಾಸಾನಾಂ ಪತತಾಂ ರಾಜನ್ರೂಪಮಾಸೀತ್ಸಮಂತತಃ।
09022045c ಶಲಭಾನಾಮಿವಾಕಾಶೇ ತದಾ ಭರತಸತ್ತಮ।।

ರಾಜನ್! ಭರತಸತ್ತಮ! ಆಗ ಸುತ್ತಲೂ ಬೀಳುತ್ತಿದ್ದ ಪ್ರಾಸಗಳು ಆಕಾಶದಲ್ಲಿ ಹಾರಾಡುವ ಮಿಡಿತೆಗಳಂತೆ ತೋರಿದವು.

09022046a ರುಧಿರೋಕ್ಷಿತಸರ್ವಾಂಗಾ ವಿಪ್ರವಿದ್ಧೈರ್ನಿಯಂತೃಭಿಃ।
09022046c ಹಯಾಃ ಪರಿಪತಂತಿ ಸ್ಮ ಶತಶೋಽಥ ಸಹಸ್ರಶಃ।।

ಗಾಯಗೊಂಡು ಸರ್ವಾಂಗಗಳೂ ರಕ್ತದಿಂದ ತೋಯ್ದ ಸವಾರರೊಂದಿಗೆ ನೂರಾರು ಸಹಸ್ರಾರು ಕುದುರೆಗಳು ಕೆಳಗುರುಳುತ್ತಿದ್ದವು.

09022047a ಅನ್ಯೋನ್ಯಪರಿಪಿಷ್ಟಾಶ್ಚ ಸಮಾಸಾದ್ಯ ಪರಸ್ಪರಂ।
09022047c ಅವಿಕ್ಷತಾಃ ಸ್ಮ ದೃಶ್ಯಂತೇ ವಮಂತೋ ರುಧಿರಂ ಮುಖೈಃ।।

ಪರಸ್ಪರರೊಡನೆ ಸಂಘರ್ಷಿಸಿ ಅನ್ಯೋನ್ಯರನ್ನು ಪಿಂಡಿಗಳನ್ನಾಗಿ ಹಿಂಡಿ, ಗಾಯಗೊಳಿಸಿ, ಬಾಯಿಯಿಂದ ರಕ್ತವನ್ನು ಕಾರುತ್ತಿರುವುದು ಕಂಡುಬಂಡಿತು.

09022048a ತತೋಽಭವತ್ತಮೋ ಘೋರಂ ಸೈನ್ಯೇನ ರಜಸಾ ವೃತೇ।
09022048c ತಾನಪಾಕ್ರಮತೋಽದ್ರಾಕ್ಷಂ ತಸ್ಮಾದ್ದೇಶಾದರಿಂದಮಾನ್।।
09022048e ಅಶ್ವಾನ್ರಾಜನ್ಮನುಷ್ಯಾಂಶ್ಚ ರಜಸಾ ಸಂವೃತೇ ಸತಿ।।

ಆಗ ಸೇನೆಯು ಧೂಳಿನಿಂದ ತುಂಬಿ ಘೋರ ಕತ್ತಲೆಯು ಆವರಿಸಿತು. ರಾಜನ್! ಧೂಳಿನಿಂದ ತುಂಬಿಹೋಗಿದ್ದ ಆ ಪ್ರದೇಶದಿಂದ ಅನೇಕ ಅರಿಂದಮರು – ಕುದುರೆ-ಮನುಷ್ಯರು - ಓಡಿಹೋಗುತ್ತಿರುವುದನ್ನು ಕಂಡೆನು.

09022049a ಭೂಮೌ ನಿಪತಿತಾಶ್ಚಾನ್ಯೇ ವಮಂತೋ ರುಧಿರಂ ಬಹು।
09022049c ಕೇಶಾಕೇಶಿಸಮಾಲಗ್ನಾ ನ ಶೇಕುಶ್ಚೇಷ್ಟಿತುಂ ಜನಾಃ।।

ಅನ್ಯರು ಬಹಳವಾಗಿ ರಕ್ತವನ್ನು ಕಾರುತ್ತಾ ಭೂಮಿಯ ಮೇಲೆ ಬೀಳುತ್ತಿದ್ದರು. ತಮ್ಮ ಜುಟ್ಟನ್ನು ಹಿಡಿದಿದ್ದುದರಿಂದ ಕೆಲವರಿಗೆ ಚಲಿಸಲೂ ಸಾಧ್ಯವಾಗುತ್ತಿರಲಿಲ್ಲ.

09022050a ಅನ್ಯೋನ್ಯಮಶ್ವಪೃಷ್ಠೇಭ್ಯೋ ವಿಕರ್ಷಂತೋ ಮಹಾಬಲಾಃ।
09022050c ಮಲ್ಲಾ ಇವ ಸಮಾಸಾದ್ಯ ನಿಜಘ್ನುರಿತರೇತರಂ।।
09022050e ಅಶ್ವೈಶ್ಚ ವ್ಯಪಕೃಷ್ಯಂತ ಬಹವೋಽತ್ರ ಗತಾಸವಃ।।

ಕುದುರೆಗಳ ಮೇಲೆ ಕುಳಿತಿದ್ದ ಮಹಾಬಲರು ಅನ್ಯೋನ್ಯರನ್ನು ಎಳೆಯುತ್ತಿದ್ದರು. ಕೆಲವರು ಮಲ್ಲರಂತೆ ಇತರೇತರರನ್ನು ಹೊಡೆದು ಸಂಹರಿಸುತ್ತಿದ್ದರು. ಸತ್ತುಹೋಗಿದ್ದ ಅನೇಕರನ್ನು ಕುದುರೆಗಳು ಅಲ್ಲಿಂದಿಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದವು.

09022051a ಭೂಮೌ ನಿಪತಿತಾಶ್ಚಾನ್ಯೇ ಬಹವೋ ವಿಜಯೈಷಿಣಃ।
09022051c ತತ್ರ ತತ್ರ ವ್ಯದೃಶ್ಯಂತ ಪುರುಷಾಃ ಶೂರಮಾನಿನಃ।।

ರಣಭೂಮಿಯಲ್ಲಿ ಅಲ್ಲಲ್ಲಿ ತಾವೇ ಶೂರರೆಂದು ತಿಳಿದುಕೊಂಡಿದ್ದ ಅನ್ಯ ಅನೇಕ ವಿಜಯೇಚ್ಛು ಪುರುಷರು ಬಿದ್ದುದನ್ನು ನೋಡಿದೆವು.

09022052a ರಕ್ತೋಕ್ಷಿತೈಶ್ಚಿನ್ನಭುಜೈರಪಕೃಷ್ಟಶಿರೋರುಹೈಃ।
09022052c ವ್ಯದೃಶ್ಯತ ಮಹೀ ಕೀರ್ಣಾ ಶತಶೋಽಥ ಸಹಸ್ರಶಃ।।

ರಕ್ತದಿಂದ ತೋಯ್ದುಹೋಗಿದ್ದ, ಭುಜಗಳು ತುಂಡಾಗಿದ್ದ, ಕೆದರಿದ ಕೇಶರಾಶಿಗಳಿಂದ ಕೂಡಿದ್ದ ನೂರಾರು ಸಹಸ್ರಾರು ಶರೀರಗಳು ರಣಭೂಮಿಯಲ್ಲಿ ಚೆಲ್ಲಿಹೋಗಿರುವುದು ಕಾಣುತ್ತಿತ್ತು.

09022053a ದೂರಂ ನ ಶಕ್ಯಂ ತತ್ರಾಸೀದ್ಗಂತುಮಶ್ವೇನ ಕೇನ ಚಿತ್।
09022053c ಸಾಶ್ವಾರೋಹೈರ್ಹತೈರಶ್ವೈರಾವೃತೇ ವಸುಧಾತಲೇ।।

ಹತರಾದ ಅಶ್ವಾರೋಹಿಗಳು ಮತ್ತು ಕುದುರೆಗಳಿಂದ ತುಂಬಿದ್ದ ರಣಭೂಮಿಯಲ್ಲಿ ಯಾರಿಗೂ ದೂರ ಸಾಗಲು ಸಾಧ್ಯವಾಗುತ್ತಿರಲಿಲ್ಲ.

09022054a ರುಧಿರೋಕ್ಷಿತಸಂನಾಹೈರಾತ್ತಶಸ್ತ್ರೈರುದಾಯುಧೈಃ।
09022054c ನಾನಾಪ್ರಹರಣೈರ್ಘೋರೈಃ ಪರಸ್ಪರವಧೈಷಿಭಿಃ।।
09022054e ಸುಸಂನಿಕೃಷ್ಟೈಃ ಸಂಗ್ರಾಮೇ ಹತಭೂಯಿಷ್ಠಸೈನಿಕೈಃ।।

ಶಸ್ತ್ರಗಳನ್ನು ಮೇಲೆತ್ತಿ, ಆಯುಧಗಳನ್ನು ಹಿಡಿದು ನಾನಾ ಘೋರ ಪ್ರಹರಗಳಿಂದ ಪರಸ್ಪರರನ್ನು ವಧಿಸಲು ಬಯಸಿ ಹತ್ತಿರ-ಹತ್ತಿರದಲ್ಲಿಯೇ ಇನ್ನೂ ಯುದ್ಧಮಾಡುತ್ತಿದ್ದ ಮತ್ತು ಆಗಲೇ ಸತ್ತುಹೋಗಿದ್ದ ಸೈನಿಕರಿಂದ ರಣಭೂಮಿಯು ತುಂಬಿಹೋಯಿತು.

09022055a ಸ ಮುಹೂರ್ತಂ ತತೋ ಯುದ್ಧ್ವಾ ಸೌಬಲೋಽಥ ವಿಶಾಂ ಪತೇ।
09022055c ಷಟ್ಸಹಸ್ರೈರ್ಹಯೈಃ ಶಿಷ್ಟೈರಪಾಯಾಚ್ಚಕುನಿಸ್ತತಃ।।

ವಿಶಾಂಪತೇ! ಸ್ವಲ್ಪವೇ ಹೊತ್ತು ಯುದ್ಧಮಾಡಿದ ಸೌಬಲನು ಅಳಿದುಳಿದ ಅವನ ಆರುಸಾವಿರ ಅಶ್ವಸೈನಿಕರೊಂದಿಗೆ ಪಲಾಯನಗೈದನು.

09022056a ತಥೈವ ಪಾಂಡವಾನೀಕಂ ರುಧಿರೇಣ ಸಮುಕ್ಷಿತಂ।
09022056c ಷಟ್ಸಹಸ್ರೈರ್ಹಯೈಃ ಶಿಷ್ಟೈರಪಾಯಾಚ್ಚ್ರಾಂತವಾಹನಂ।।

ಹಾಗೆಯೇ ರಕ್ತದಿಂದ ತೋಯ್ದುಹೋಗಿದ್ದ ಮತ್ತು ಬಳಲಿದ್ದ ಅಳಿದುಳಿದ ಆರುಸಾವಿರ ಅಶ್ವಸೈನಿಕರೊಂದಿಗೆ ಪಾಂಡವ ಸೇನೆಯೂ ಯುದ್ಧದಿಂದ ಹಿಮ್ಮೆಟ್ಟಿತು.

09022057a ಅಶ್ವಾರೋಹಾಸ್ತು ಪಾಂಡೂನಾಮಬ್ರುವನ್ರುಧಿರೋಕ್ಷಿತಾಃ।
09022057c ಸುಸಂನಿಕೃಷ್ಟಾಃ ಸಂಗ್ರಾಮೇ ಭೂಯಿಷ್ಠಂ ತ್ಯಕ್ತಜೀವಿತಾಃ।।

ರಕ್ತದಿಂದ ತೋಯ್ದುಹೋಗಿದ್ದ, ಸಂಗ್ರಾಮದಲ್ಲಿ ಜೀವವನ್ನೇ ತೊರೆದು ನಿಕಟದಿಂದ ಯುದ್ಧಮಾಡುತ್ತಿದ್ದ ಪಾಂಡವರ ಅಶ್ವಾರೋಹಿಗಳು ಹೇಳಿದರು:

09022058a ನೇಹ ಶಕ್ಯಂ ರಥೈರ್ಯೋದ್ಧುಂ ಕುತ ಏವ ಮಹಾಗಜೈಃ।
09022058c ರಥಾನೇವ ರಥಾ ಯಾಂತು ಕುಂಜರಾಃ ಕುಂಜರಾನಪಿ।।

“ನಾವು ರಥಗಳೊಂದಿಗೆ ಯುದ್ಧಮಾಡಲು ಶಕ್ಯರಿಲ್ಲ. ಇನ್ನು ಮಹಾಗಜಗಳೊಂದಿಗೆ ಹೇಗೆ ಯುದ್ಧಮಾಡಬಲ್ಲೆವು? ರಥಗಳೇ ರಥಗಳನ್ನು ಎದುರಿಸಲಿ ಮತ್ತು ಆನೆಗಳೇ ಆನೆಗಳನ್ನು ಎದುರಿಸಲಿ!

09022059a ಪ್ರತಿಯಾತೋ ಹಿ ಶಕುನಿಃ ಸ್ವಮನೀಕಮವಸ್ಥಿತಃ।
09022059c ನ ಪುನಃ ಸೌಬಲೋ ರಾಜಾ ಯುದ್ಧಮಭ್ಯಾಗಮಿಷ್ಯತಿ।।

ಪಲಾಯನಮಾಡಿದ ಶಕುನಿಯು ತನ್ನ ಸೇನೆಯೊಳಗೆ ಸೇರಿಕೊಂಡುಬಿಟ್ಟಿದ್ದಾನೆ. ರಾಜಾ ಸೌಬಲನು ಪುನಃ ಯುದ್ಧಕ್ಕೆ ಬರುವುದಿಲ್ಲ!”

09022060a ತತಸ್ತು ದ್ರೌಪದೇಯಾಶ್ಚ ತೇ ಚ ಮತ್ತಾ ಮಹಾದ್ವಿಪಾಃ।
09022060c ಪ್ರಯಯುರ್ಯತ್ರ ಪಾಂಚಾಲ್ಯೋ ಧೃಷ್ಟದ್ಯುಮ್ನೋ ಮಹಾರಥಃ।।

ಆಗ ದ್ರೌಪದೇಯರು ಮತ್ತು ಮದಿಸಿದ ಮಹಾ ಆನೆಗಳು ಮಹಾರಥ ಪಾಂಚಾಲ್ಯ ಧೃಷ್ಟದ್ಯುಮ್ನನಿದ್ದೆಡಗೆ ಹೋದವು.

09022061a ಸಹದೇವೋಽಪಿ ಕೌರವ್ಯ ರಜೋಮೇಘೇ ಸಮುತ್ಥಿತೇ।
09022061c ಏಕಾಕೀ ಪ್ರಯಯೌ ತತ್ರ ಯತ್ರ ರಾಜಾ ಯುಧಿಷ್ಠಿರಃ।।

ಕೌರವ್ಯ! ಧೂಳಿನ ಮೋಡಗಳು ಮೇಲೇಳಲು ಸಹದೇವನೂ ಕೂಡ ಏಕಾಂಗಿಯಾಗಿ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೊರಟುಹೋದನು.

09022062a ತತಸ್ತೇಷು ಪ್ರಯಾತೇಷು ಶಕುನಿಃ ಸೌಬಲಃ ಪುನಃ।
09022062c ಪಾರ್ಶ್ವತೋಽಭ್ಯಹನತ್ಕ್ರುದ್ಧೋ ಧೃಷ್ಟದ್ಯುಮ್ನಸ್ಯ ವಾಹಿನೀಂ।।

ಅವರು ಹಾಗೆ ಹೊರಟುಹೋಗಲು ಕ್ರುದ್ಧ ಸೌಬಲ ಶಕುನಿಯು ಪುನಃ ಹಿಂದಿನಿಂದ ಧೃಷ್ಟದ್ಯುಮ್ನನ ಸೇನೆಯನ್ನು ಆಕ್ರಮಣಿಸಿದನು.

09022063a ತತ್ಪುನಸ್ತುಮುಲಂ ಯುದ್ಧಂ ಪ್ರಾಣಾಂಸ್ತ್ಯಕ್ತ್ವಾಭ್ಯವರ್ತತ।
09022063c ತಾವಕಾನಾಂ ಪರೇಷಾಂ ಚ ಪರಸ್ಪರವಧೈಷಿಣಾಂ।।

ಆಗ ಅಲ್ಲಿ ಪುನಃ ಪ್ರಾಣಗಳನ್ನು ತೊರೆದು ಪರಸ್ಪರರನ್ನು ವಧಿಸಲು ಬಯಸಿದ್ದ ನಿನ್ನವರ ಮತ್ತು ಶತ್ರುಗಳ ನಡುವೆ ತುಮುಲ ಯುದ್ಧವು ಪ್ರಾರಂಭವಾಯಿತು.

09022064a ತೇ ಹ್ಯನ್ಯೋನ್ಯಮವೇಕ್ಷಂತ ತಸ್ಮಿನ್ವೀರಸಮಾಗಮೇ।
09022064c ಯೋಧಾಃ ಪರ್ಯಪತನ್ರಾಜನ್ ಶತಶೋಽಥ ಸಹಸ್ರಶಃ।।

ಅವರು ಅನ್ಯೋನ್ಯರನ್ನು ಸಂಹರಿಸುವುದಕ್ಕೇ ಕಾಯುತ್ತಿದ್ದರು. ರಾಜನ್! ಆ ವೀರಸಮಾಗಮದಲ್ಲಿ ನೂರಾರು ಸಹಸ್ರಾರು ಯೋಧರು ಕೆಳಗುರುಳಿದರು.

09022065a ಅಸಿಭಿಶ್ಚಿದ್ಯಮಾನಾನಾಂ ಶಿರಸಾಂ ಲೋಕಸಂಕ್ಷಯೇ।
09022065c ಪ್ರಾದುರಾಸೀನ್ಮಹಾಶಬ್ದಸ್ತಾಲಾನಾಂ ಪತತಾಮಿವ।।

ಲೋಕಕ್ಷಯಕಾರಕ ಆ ಮಹಾಯುದ್ಧದಲ್ಲಿ ಖಡ್ಗಗಳಿಂದ ಕತ್ತರಿಸಲ್ಪಟ್ಟ ಶಿರಗಳು ತಾಳೆಯ ಹಣ್ಣುಗಳು ಬೀಳುವಂತೆ ಜೋರಾಗಿ ಶಬ್ಧಮಾಡುತ್ತಾ ಬೀಳುತ್ತಿದ್ದವು.

09022066a ವಿಮುಕ್ತಾನಾಂ ಶರೀರಾಣಾಂ ಭಿನ್ನಾನಾಂ ಪತತಾಂ ಭುವಿ।
09022066c ಸಾಯುಧಾನಾಂ ಚ ಬಾಹೂನಾಮುರೂಣಾಂ ಚ ವಿಶಾಂ ಪತೇ।।
09022066e ಆಸೀತ್ಕಟಕಟಾಶಬ್ದಃ ಸುಮಹಾನ್ರೋಮಹರ್ಷಣಃ।।

ವಿಶಾಂಪತೇ! ತುಂಡಾಗಿ ಪ್ರಾಣತೊರೆದು ರಣಭೂಮಿಯ ಮೇಲೆ ಬೀಳುತ್ತಿದ್ದ ಶರೀರಗಳ, ಆಯುಧಗಳೊಂದಿಗೆ ಬಾಹುಗಳ ಮತ್ತು ತೊಡೆಗಳ ಕಟ-ಕಟಾ ಶಬ್ಧವು ಮಹಾ ರೋಮಾಂಚನವಾಗಿದ್ದಿತು.

09022067a ನಿಘ್ನಂತೋ ನಿಶಿತೈಃ ಶಸ್ತ್ರೈರ್ಭ್ರಾತೄನ್ಪುತ್ರಾನ್ಸಖೀನಪಿ।
09022067c ಯೋಧಾಃ ಪರಿಪತಂತಿ ಸ್ಮ ಯಥಾಮಿಷಕೃತೇ ಖಗಾಃ।।

ಮಾಂಸದ ತುಂಡಿಗಾಗಿ ಪರದಾಡುವ ಪಕ್ಷಿಗಳಂತೆ ನಿಶಿತ ಶಸ್ತ್ರಗಳಿಂದ ಸಹೋದರ-ಪುತ್ರ-ಸಖರನ್ನು ಕೂಡ ಸಂಹರಿಸಿ ಯೋಧರು ಕೆಳಗುರುಳುತ್ತಿದ್ದರು.

09022068a ಅನ್ಯೋನ್ಯಂ ಪ್ರತಿಸಂರಬ್ಧಾಃ ಸಮಾಸಾದ್ಯ ಪರಸ್ಪರಂ।
09022068c ಅಹಂ ಪೂರ್ವಮಹಂ ಪೂರ್ವಮಿತಿ ನ್ಯಘ್ನನ್ಸಹಸ್ರಶಃ।।

ಕೋಪದಿಂದ ಪರಸ್ಪರರೊಡನೆ ಸಂಘರ್ಷಿತ್ತಾ “ನಾನು ಮೊದಲು! ನಾನು ಮೊದಲು!” ಎನ್ನುತ್ತಾ ಸಾವಿರಾರು ಸಂಖ್ಯೆಗಳಲ್ಲಿ ಅನ್ಯೋನ್ಯರನ್ನು ಸಂಹರಿಸಿದರು.

09022069a ಸಂಘಾತೈರಾಸನಭ್ರಷ್ಟೈರಶ್ವಾರೋಹೈರ್ಗತಾಸುಭಿಃ।
09022069c ಹಯಾಃ ಪರಿಪತಂತಿ ಸ್ಮ ಶತಶೋಽಥ ಸಹಸ್ರಶಃ।।

ಘಾತಿಗೊಂಡು ಆಸನಭ್ರಷ್ಟರಾಗಿ ಪ್ರಾಣತೊರೆದು ಅಶ್ವಾರೋಹಿಗಳು ಮತ್ತು ಕುದುರೆಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಕೆಳಗುರುಳುತ್ತಿದ್ದವು.

09022070a ಸ್ಫುರತಾಂ ಪ್ರತಿಪಿಷ್ಟಾನಾಮಶ್ವಾನಾಂ ಶೀಘ್ರಸಾರಿಣಾಂ।
09022070c ಸ್ತನತಾಂ ಚ ಮನುಷ್ಯಾಣಾಂ ಸಂನದ್ಧಾನಾಂ ವಿಶಾಂ ಪತೇ।।
09022071a ಶಕ್ತ್ಯೃಷ್ಟಿಪ್ರಾಸಶಬ್ದಶ್ಚ ತುಮುಲಃ ಸಮಜಾಯತ।
09022071c ಭಿಂದತಾಂ ಪರಮರ್ಮಾಣಿ ರಾಜನ್ದುರ್ಮಂತ್ರಿತೇ ತವ।।

ವಿಶಾಂಪತೇ! ರಾಜನ್! ನಿನ್ನ ದುರ್ಮಂತ್ರದಿಂದಾಗಿ ಜಜ್ಜಿಹೋಗಿ ನಡುಗುತ್ತಿದ್ದ ಶೀಘ್ರಸಾರಿಣ ಕುದುರೆಗಳ ದಾರುಣಧ್ವನಿಯೂ ಮನುಷ್ಯರು ಪ್ರಯೋಗಿಸುತ್ತಿದ್ದ ಶಕ್ತಿ-ಋಷ್ಟಿ-ಪ್ರಾಸಗಳು ಶತ್ರುಗಳ ಕವಚಗಳನ್ನು ಭೇದಿಸುವ ತುಮುಲ ಶಬ್ಧಗಳೂ ಕೇಳಿಬಂದವು.

09022072a ಶ್ರಮಾಭಿಭೂತಾಃ ಸಂರಬ್ಧಾಃ ಶ್ರಾಂತವಾಹಾಃ ಪಿಪಾಸಿತಾಃ।
09022072c ವಿಕ್ಷತಾಶ್ಚ ಶಿತೈಃ ಶಸ್ತ್ರೈರಭ್ಯವರ್ತಂತ ತಾವಕಾಃ।।

ಬಾಯಾರಿದ್ದ ಮತ್ತು ಬಳಲಿದ್ದ ಕುದುರೆಗಳನ್ನು ಏರಿದ್ದ ಗಾಯಗೊಂಡು ಬಳಲಿದ್ದ ನಿನ್ನವರು ನಿಶಿತ ಶಸ್ತ್ರಗಳಿಂದ ಆಕ್ರಮಣಿಸಿದರು.

09022073a ಮತ್ತಾ ರುಧಿರಗಂಧೇನ ಬಹವೋಽತ್ರ ವಿಚೇತಸಃ।
09022073c ಜಘ್ನುಃ ಪರಾನ್ಸ್ವಕಾಂಶ್ಚೈವ ಪ್ರಾಪ್ತಾನ್ಪ್ರಾಪ್ತಾನನಂತರಾನ್।।

ರಕ್ತದ ವಾಸನೆಯಿಂದ ಮತ್ತರಾಗಿದ್ದ ಅನೇಕರು ಅಲ್ಲಿ ಬುದ್ಧಿಕಳೆದುಕೊಂಡು ಹತ್ತಿರಬಂದ ಶತ್ರುಗಳನ್ನೂ ತಮ್ಮ ಕಡೆಯವರನ್ನೂ ಸಂಹರಿಸುತ್ತಿದ್ದರು.

09022074a ಬಹವಶ್ಚ ಗತಪ್ರಾಣಾಃ ಕ್ಷತ್ರಿಯಾ ಜಯಗೃದ್ಧಿನಃ।
09022074c ಭೂಮಾವಭ್ಯಪತನ್ರಾಜನ್ ಶರವೃಷ್ಟಿಭಿರಾವೃತಾಃ।।

ರಾಜನ್! ಜಯವನ್ನು ಬಯಸಿ, ಪ್ರಾಣಗಳನ್ನು ಕಳೆದುಕೊಂಡಿದ್ದ ಅನೇಕ ಕ್ಷತ್ರಿಯರು ಶರವೃಷ್ಟಿಗಳಿಂದ ಆವೃತರಾಗಿ ಭೂಮಿಯ ಮೇಲೆ ಬಿದ್ದರು.

09022075a ವೃಕಗೃಧ್ರಶೃಗಾಲಾನಾಂ ತುಮುಲೇ ಮೋದನೇಽಹನಿ।
09022075c ಆಸೀದ್ಬಲಕ್ಷಯೋ ಘೋರಸ್ತವ ಪುತ್ರಸ್ಯ ಪಶ್ಯತಃ।।

ತೋಳ-ಹದ್ದು-ನರಿಗಳಿಗೆ ಆನಂದದಾಯಕವಾಗಿದ್ದ ಆ ದಿನದ ತುಮುಲ ಯುದ್ಧದಲ್ಲಿ ನಿನ್ನ ಮಗನು ನೋಡುತ್ತಿದ್ದಂತೆಯೇ ಘೋರ ಬಲಕ್ಷಯವಾಯಿತು.

09022076a ನರಾಶ್ವಕಾಯಸಂಚನ್ನಾ ಭೂಮಿರಾಸೀದ್ವಿಶಾಂ ಪತೇ।
09022076c ರುಧಿರೋದಕಚಿತ್ರಾ ಚ ಭೀರೂಣಾಂ ಭಯವರ್ಧಿನೀ।।

ವಿಶಾಂಪತೇ! ಮನುಷ್ಯರು ಮತ್ತು ಕುದುರೆಗಳ ಶರೀರಗಳಿಂದ ರಣಭೂಮಿಯು ತುಂಬಿಹೋಗಿತ್ತು. ರಕ್ತವೇ ನೀರಾಗಿ ಹರಿಯುತ್ತಿದ್ದ ಅದು ಹೇಡಿಗಳಿಗೆ ಭಯವನ್ನುಂಟುಮಾಡುವಂತಿತ್ತು.

09022077a ಅಸಿಭಿಃ ಪಟ್ಟಿಶೈಃ ಶೂಲೈಸ್ತಕ್ಷಮಾಣಾಃ ಪುನಃ ಪುನಃ।
09022077c ತಾವಕಾಃ ಪಾಂಡವಾಶ್ಚೈವ ನಾಭ್ಯವರ್ತಂತ ಭಾರತ।।

ಭಾರತ! ಖಡ್ಗ-ಪಟ್ಟಿಷ-ಶೂಲಗಳಿಂದ ಪುನಃ ಪುನಃ ಗಾಯಗೊಳ್ಳುತ್ತಿದ್ದರೂ ನಿನ್ನಕಡೆಯವರಾಗಲೀ ಪಾಂಡವರ ಕಡೆಯವರಾಗಲೀ ಹಿಮ್ಮೆಟ್ಟಲಿಲ್ಲ.

09022078a ಪ್ರಹರಂತೋ ಯಥಾಶಕ್ತಿ ಯಾವತ್ಪ್ರಾಣಸ್ಯ ಧಾರಣಂ।
09022078c ಯೋಧಾಃ ಪರಿಪತಂತಿ ಸ್ಮ ವಮಂತೋ ರುಧಿರಂ ವ್ರಣೈಃ।।

ಪ್ರಾಣವಿರುವವರೆಗೆ ಯಥಾಶಕ್ತಿಯಾಗಿ ಪ್ರಹರಿಸಿ ಗಾಯಗಳಿಂದ ರಕ್ತವನ್ನು ಸುರಿಸುತ್ತಾ ಯೋಧರು ಕೆಳಗುರುಳುತ್ತಿದ್ದರು.

09022079a ಶಿರೋ ಗೃಹೀತ್ವಾ ಕೇಶೇಷು ಕಬಂಧಃ ಸಮದೃಶ್ಯತ।
09022079c ಉದ್ಯಮ್ಯ ನಿಶಿತಂ ಖಡ್ಗಂ ರುಧಿರೇಣ ಸಮುಕ್ಷಿತಂ।।

ಕೂದಲಿನಿಂದ ರುಂಡ-ಮುಂಡಗಳನ್ನು ಹಿಡಿದು ರಕ್ತದಿಂದ ತೋಯ್ದ ನಿಶಿತ ಖಡ್ಗವನ್ನು ಮೇಲಿತ್ತಿ ಹಿಡಿದಿರುವವರನ್ನು ನೋಡಿದೆವು.

09022080a ಅಥೋತ್ಥಿತೇಷು ಬಹುಷು ಕಬಂಧೇಷು ಜನಾಧಿಪ।
09022080c ತಥಾ ರುಧಿರಗಂಧೇನ ಯೋಧಾಃ ಕಶ್ಮಲಮಾವಿಶನ್।।

ಜನಾಧಿಪ! ಅನೇಕ ಮುಂಡಗಳು ಮೇಲೆದ್ದು ನಿಲ್ಲುತ್ತಿದ್ದವು. ರಕ್ತದ ವಾಸನೆಯಿಂದ ಯೋಧರು ಮೂರ್ಛಿತರಾಗುತ್ತಿದ್ದರು.

09022081a ಮಂದೀಭೂತೇ ತತಃ ಶಬ್ದೇ ಪಾಂಡವಾನಾಂ ಮಹದ್ಬಲಂ।
09022081c ಅಲ್ಪಾವಶಿಷ್ಟೈಸ್ತುರಗೈರಭ್ಯವರ್ತತ ಸೌಬಲಃ।।

ಆ ಶಬ್ಧವು ಸ್ವಲ್ಪ ಮಂದವಾಗಲು ಸೌಬಲನು ಅಳಿದುಳಿದ ಅಲ್ಪ ಅಶ್ವಸೈನಿಕರೊಂದಿಗೆ ಪಾಂಡವರ ಮಹಾಸೇನೆಯನ್ನು ಆಕ್ರಮಣಿಸಿದನು.

09022082a ತತೋಽಭ್ಯಧಾವಂಸ್ತ್ವರಿತಾಃ ಪಾಂಡವಾ ಜಯಗೃದ್ಧಿನಃ।
09022082c ಪದಾತಯಶ್ಚ ನಾಗಾಶ್ಚ ಸಾದಿನಶ್ಚೋದ್ಯತಾಯುಧಾಃ।।
09022083a ಕೋಷ್ಟಕೀಕೃತ್ಯ ಚಾಪ್ಯೇನಂ ಪರಿಕ್ಷಿಪ್ಯ ಚ ಸರ್ವಶಃ।
09022083c ಶಸ್ತ್ರೈರ್ನಾನಾವಿಧೈರ್ಜಘ್ನುರ್ಯುದ್ಧಪಾರಂ ತಿತೀರ್ಷವಃ।।

ಜಯವನ್ನು ಬಯಸಿದ್ದ ಪಾಂಡವರು ಅಲ್ಲಿಗೆ ತ್ವರೆಮಾಡಿ ಬಂದರು. ಪದಾತಿ-ಆನೆ-ಅಶ್ವಾರೋಹಿಗಳೊಂದಿಗೆ ಆಯುಧಗಳನ್ನು ಮೇಲೆತ್ತಿ ಶಕುನಿಯನ್ನು ಎಲ್ಲಕಡೆಗಳಿಂದಲೂ ಸುತ್ತುವರೆದು ನಾನಾವಿಧದ ಶಸ್ತ್ರಗಳಿಂದ ಪ್ರಹರಿಸಿದರು.

09022084a ತ್ವದೀಯಾಸ್ತಾಂಸ್ತು ಸಂಪ್ರೇಕ್ಷ್ಯ ಸರ್ವತಃ ಸಮಭಿದ್ರುತಾನ್।
09022084c ಸಾಶ್ವಪತ್ತಿದ್ವಿಪರಥಾಃ ಪಾಂಡವಾನಭಿದುದ್ರುವುಃ।।

ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ನೋಡಿ ನಿನ್ನ ಕಡೆಯವರು ಕುದುರೆ-ಪದಾತಿ-ಆನೆ-ರಥಗಳಿಂದ ಪಾಂಡವರನ್ನು ಆಕ್ರಮಣಿಸಿದರು.

09022085a ಕೇ ಚಿತ್ಪದಾತಯಃ ಪದ್ಭಿರ್ಮುಷ್ಟಿಭಿಶ್ಚ ಪರಸ್ಪರಂ।
09022085c ನಿಜಘ್ನುಃ ಸಮರೇ ಶೂರಾಃ ಕ್ಷೀಣಶಸ್ತ್ರಾಸ್ತತೋಽಪತನ್।।

ಶಸ್ತ್ರಗಳೆಲ್ಲವೂ ಮುಗಿದು ಹೋಗಲು ಕೆಲವು ಶೂರ ಪದಾತಿಗಳು ಸಮರದಲ್ಲಿ ಪರಸ್ಪರರ ಮೇಲೆ ಬಿದ್ದು ಕಾಲು-ಮುಷ್ಟಿಗಳಿಂದ ಸಂಹರಿಸುತ್ತಿದ್ದರು.

09022086a ರಥೇಭ್ಯೋ ರಥಿನಃ ಪೇತುರ್ದ್ವಿಪೇಭ್ಯೋ ಹಸ್ತಿಸಾದಿನಃ।
09022086c ವಿಮಾನೇಭ್ಯ ಇವ ಭ್ರಷ್ಟಾಃ ಸಿದ್ಧಾಃ ಪುಣ್ಯಕ್ಷಯಾದ್ಯಥಾ।।

ಪುಣ್ಯಕ್ಷಯವಾಗಲು ಸಿದ್ಧರು ವಿಮಾನಗಳಿಂದ ಭ್ರಷ್ಟರಾಗಿ ಕೆಳಗೆ ಬೀಳುವಂತೆ ರಥಗಳಿಂದ ರಥಿಗಳು ಮತ್ತು ಆನೆಗಳ ಮೇಲಿಂದ ಗಜಸೈನಿಕರು ಕೆಳಗೆ ಬೀಳುತ್ತಿದ್ದರು.

09022087a ಏವಮನ್ಯೋನ್ಯಮಾಯಸ್ತಾ ಯೋಧಾ ಜಘ್ನುರ್ಮಹಾಮೃಧೇ।
09022087c ಪಿತೄನ್ಭ್ರಾತೄನ್ವಯಸ್ಯಾಂಶ್ಚ ಪುತ್ರಾನಪಿ ತಥಾಪರೇ।।

ಈ ರೀತಿ ಆ ಮಹಾಯುದ್ಧದಲ್ಲಿ ಯೋಧರು ಅನ್ಯೋನ್ಯರನ್ನು ಇನ್ನು ಕೆಲವರು ತಂದೆ-ಸಹೋದರ-ಸ್ನೇಹಿತ-ಮಕ್ಕಳನ್ನೂ ಕೊಲ್ಲುತ್ತಿದ್ದರು.

09022088a ಏವಮಾಸೀದಮರ್ಯಾದಂ ಯುದ್ಧಂ ಭರತಸತ್ತಮ।
09022088c ಪ್ರಾಸಾಸಿಬಾಣಕಲಿಲೇ ವರ್ತಮಾನೇ ಸುದಾರುಣೇ।।

ಭರತಸತ್ತಮ! ಪ್ರಾಸ-ಖಡ್ಗ-ಬಾಣಗಳಿಂದ ವ್ಯಾಪ್ತವಾಗಿದ್ದ ಮರ್ಯಾದೆಗಳಿಲ್ಲದ ಆ ಸುದಾರಣಯುದ್ಧವು ಹೀಗೆ ನಡೆಯಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.