021 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 21

ಸಾರ

ದುರ್ಯೋಧನನ ಪರಾಕ್ರಮ (1-17). ಯುಧಿಷ್ಠಿರ-ಶಕುನಿಯರ ಯುದ್ಧ (18-24). ದ್ವಂದ್ವಯುದ್ಧಗಳು (25-35). ಸಂಕುಲಯುದ್ಧ (36-44).

09021001 ಸಂಜಯ ಉವಾಚ 09021001a ಪುತ್ರಸ್ತು ತೇ ಮಹಾರಾಜ ರಥಸ್ಥೋ ರಥಿನಾಂ ವರಃ।
09021001c ದುರುತ್ಸಹೋ ಬಭೌ ಯುದ್ಧೇ ಯಥಾ ರುದ್ರಃ ಪ್ರತಾಪವಾನ್।।

ಸಂಜಯನು ಹೇಳಿದನು: “ಮಹಾರಾಜ! ನಿನ್ನ ಮಗನಾದರೋ ರಥಿಗಳಲ್ಲಿ ಶ್ರೇಷ್ಠ ಪ್ರತಾಪವಾನ್ ರುದ್ರನಂತೆ ರಥದಲ್ಲಿ ಕುಳಿತು ಶತ್ರುಗಳಿಗೆ ದುಃಸ್ಸಹನಾಗಿದ್ದನು.

09021002a ತಸ್ಯ ಬಾಣಸಹಸ್ರೈಸ್ತು ಪ್ರಚ್ಚನ್ನಾ ಹ್ಯಭವನ್ಮಹೀ।
09021002c ಪರಾಂಶ್ಚ ಸಿಷಿಚೇ ಬಾಣೈರ್ಧಾರಾಭಿರಿವ ಪರ್ವತಾನ್।।

ಬಾಣಧಾರೆಗಳಿಂದ ಪರ್ವತವನ್ನು ತೋಯಿಸುವಂತೆ ಅವನು ಶತ್ರುಸೇನೆಗಳನ್ನು ತೋಯಿಸಲು, ಅವನ ಸಹಸ್ರಾರು ಬಾಣಗಳಿಂದ ರಣಭೂಮಿಯು ಮುಚ್ಚಿಹೋಯಿತು.

09021003a ನ ಚ ಸೋಽಸ್ತಿ ಪುಮಾನ್ಕಶ್ಚಿತ್ಪಾಂಡವಾನಾಂ ಮಹಾಹವೇ।
09021003c ಹಯೋ ಗಜೋ ರಥೋ ವಾಪಿ ಯೋಽಸ್ಯ ಬಾಣೈರವಿಕ್ಷತಃ।।

ಆ ಮಹಾರಣದಲ್ಲಿ ಅವನ ಬಾಣದಿಂದ ಗಾಯಗೊಳ್ಳದ ಪಾಂಡವರ ಕಡೆಯ ಯಾರೊಬ್ಬ ಪುರುಷನಾಗಲೀ, ಆನೆಯಾಗಲೀ, ಕುದುರೆಯಾಗಲೀ, ರಥವಾಗಲೀ ಇರಲಿಲ್ಲ.

09021004a ಯಂ ಯಂ ಹಿ ಸಮರೇ ಯೋಧಂ ಪ್ರಪಶ್ಯಾಮಿ ವಿಶಾಂ ಪತೇ।
09021004c ಸ ಸ ಬಾಣೈಶ್ಚಿತೋಽಭೂದ್ವೈ ಪುತ್ರೇಣ ತವ ಭಾರತ।।

ವಿಶಾಂಪತೇ! ಭಾರತ! ಸಮರದಲ್ಲಿ ಯಾವ ಯಾವ ಯೋಧರನ್ನು ನಾನು ನೋಡಿದೆನೋ ಅವರೆಲ್ಲರೂ ನಿನ್ನ ಮಗನ ಬಾಣಗಳಿಂದ ಗಾಯಗೊಂಡಿದ್ದರು.

09021005a ಯಥಾ ಸೈನ್ಯೇನ ರಜಸಾ ಸಮುದ್ಧೂತೇನ ವಾಹಿನೀ।
09021005c ಪ್ರತ್ಯದೃಶ್ಯತ ಸಂಚನ್ನಾ ತಥಾ ಬಾಣೈರ್ಮಹಾತ್ಮನಃ।।

ಓಡಾಡುತ್ತಿರುವ ಸೈನ್ಯದಿಂದ ಮೇಲೆದ್ದ ಧೂಳಿನಂತೆ ಆ ಮಹಾತ್ಮನ ಬಾಣಗಳಿಂದ ಮುಚ್ಚಿಹೋದ ಸೇನೆಯು ಕಾಣುತ್ತಲೇ ಇರಲಿಲ್ಲ.

09021006a ಬಾಣಭೂತಾಮಪಶ್ಯಾಮ ಪೃಥಿವೀಂ ಪೃಥಿವೀಪತೇ।
09021006c ದುರ್ಯೋಧನೇನ ಪ್ರಕೃತಾಂ ಕ್ಷಿಪ್ರಹಸ್ತೇನ ಧನ್ವಿನಾ।।

ಪೃಥಿವೀಪತೇ! ಧನ್ವಿ ದುರ್ಯೋಧನನ ಕ್ಷಿಪ್ರಹಸ್ತದಿಂದ ಪ್ರಯೋಗಿಸಲ್ಪಟ್ಟ ಬಾಣಗಳಿಂದ ಸಮರಭೂಮಿಯೇ ಬಾಣಮಯವಾಗಿದ್ದುದನ್ನು ನೋಡಿದೆವು.

09021007a ತೇಷು ಯೋಧಸಹಸ್ರೇಷು ತಾವಕೇಷು ಪರೇಷು ಚ।
09021007c ಏಕೋ ದುರ್ಯೋಧನೋ ಹ್ಯಾಸೀತ್ಪುಮಾನಿತಿ ಮತಿರ್ಮಮ।।

ನಿನ್ನ ಮತ್ತು ಶತ್ರುಗಳ ಸಹಸ್ರಾರು ಯೋಧರಲ್ಲಿ ದುರ್ಯೋಧನನೊಬ್ಬನೇ ವೀರಪುರುಷನೆಂದು ನನಗನ್ನಿಸಿತು.

09021008a ತತ್ರಾದ್ಭುತಮಪಶ್ಯಾಮ ತವ ಪುತ್ರಸ್ಯ ವಿಕ್ರಮಂ।
09021008c ಯದೇಕಂ ಸಹಿತಾಃ ಪಾರ್ಥಾ ನಾತ್ಯವರ್ತಂತ ಭಾರತ।।

ಭಾರತ! ಪಾರ್ಥರೆಲ್ಲರೂ ಒಟ್ಟಾಗಿದ್ದರೂ ನಿನ್ನ ಮಗ ವಿಕ್ರಮಿಯೊಬ್ಬನನ್ನೇ ಎದುರಿಸಲಾರದೇ ಹೋದರು!

09021009a ಯುಧಿಷ್ಠಿರಂ ಶತೇನಾಜೌ ವಿವ್ಯಾಧ ಭರತರ್ಷಭ।
09021009c ಭೀಮಸೇನಂ ಚ ಸಪ್ತತ್ಯಾ ಸಹದೇವಂ ಚ ಸಪ್ತಭಿಃ।।
09021010a ನಕುಲಂ ಚ ಚತುಃಷಷ್ಟ್ಯಾ ಧೃಷ್ಟದ್ಯುಮ್ನಂ ಚ ಪಂಚಭಿಃ।
09021010c ಸಪ್ತಭಿರ್ದ್ರೌಪದೇಯಾಂಶ್ಚ ತ್ರಿಭಿರ್ವಿವ್ಯಾಧ ಸಾತ್ಯಕಿಂ।।
09021010e ಧನುಶ್ಚಿಚ್ಚೇದ ಭಲ್ಲೇನ ಸಹದೇವಸ್ಯ ಮಾರಿಷ।

ಮಾರಿಷ! ಭರತರ್ಷಭ! ಯುಧಿಷ್ಠಿರನನ್ನು ನೂರು ಬಾಣಗಳಿಂದ ಹೊಡೆದನು. ಭೀಮಸೇನನನ್ನು ಎಪ್ಪತ್ತು ಬಾಣಗಳಿಂದಲೂ, ಸಹದೇವನನ್ನು ಏಳರಿಂದಲೂ, ನಕುಲನನ್ನು ಅರವತ್ನಾಲ್ಕರಿಂದಲೂ, ಧೃಷ್ಟದ್ಯುಮ್ನನನ್ನು ಐದರಿಂದಲೂ, ದ್ರೌಪದೇಯರನ್ನು ಏಳರಿಂದಲೂ, ಮೂರರಿಂದ ಸಾತ್ಯಕಿಯನ್ನೂ ಹೊಡೆದು, ಭಲ್ಲದಿಂದ ಸಹದೇವನ ಧನುಸ್ಸನ್ನು ತುಂಡರಿಸಿದನು.

09021011a ತದಪಾಸ್ಯ ಧನುಶ್ಚಿನ್ನಂ ಮಾದ್ರೀಪುತ್ರಃ ಪ್ರತಾಪವಾನ್।।
09021011c ಅಭ್ಯಧಾವತ ರಾಜಾನಂ ಪ್ರಗೃಹ್ಯಾನ್ಯನ್ಮಹದ್ಧನುಃ।
09021011e ತತೋ ದುರ್ಯೋಧನಂ ಸಂಖ್ಯೇ ವಿವ್ಯಾಧ ದಶಭಿಃ ಶರೈಃ।।

ಪ್ರತಾಪವಾನ್ ಮಾದ್ರೀಪುತ್ರನು ತುಂಡಾದ ಧನುಸ್ಸನ್ನು ಬಿಸುಟು ಇನ್ನೊಂದು ಮಹಾಧನುಸ್ಸನ್ನು ಹಿಡಿದು ರಾಜನನ್ನು ಆಕ್ರಮಣಿಸಿದನು. ಆಗ ರಣದಲ್ಲಿ ದುರ್ಯೋಧನನು ಅವನನ್ನು ಹತ್ತು ಶರಗಳಿಂದ ಪ್ರಹರಿಸಿದನು.

09021012a ನಕುಲಶ್ಚ ತತೋ ವೀರೋ ರಾಜಾನಂ ನವಭಿಃ ಶರೈಃ।
09021012c ಘೋರರೂಪೈರ್ಮಹೇಷ್ವಾಸೋ ವಿವ್ಯಾಧ ಚ ನನಾದ ಚ।।

ಆಗ ವೀರ ಮಹೇಷ್ವಾಸ ನಕುಲನಾದರೋ ರಾಜನನ್ನು ಒಂಭತ್ತು ಘೋರರೂಪೀ ಶರಗಳಿಂದ ಹೊಡೆದು ಗರ್ಜಿಸಿದನು.

09021013a ಸಾತ್ಯಕಿಶ್ಚಾಪಿ ರಾಜಾನಂ ಶರೇಣಾನತಪರ್ವಣಾ।
09021013c ದ್ರೌಪದೇಯಾಸ್ತ್ರಿಸಪ್ತತ್ಯಾ ಧರ್ಮರಾಜಶ್ಚ ಸಪ್ತಭಿಃ।।
09021013e ಅಶೀತ್ಯಾ ಭೀಮಸೇನಶ್ಚ ಶರೈ ರಾಜಾನಮಾರ್ದಯತ್।।

ರಾಜನನ್ನು ಸಾತ್ಯಕಿಯು ನತಪರ್ವ ಶರದಿಂದ, ದ್ರೌಪದೇಯರು ಎಪ್ಪತ್ಮೂರು, ಧರ್ಮರಾಜನು ಏಳು, ಮತ್ತು ಭೀಮಸೇನನು ಎಂಭತ್ತು ಬಾಣಗಳಿಂದಲೂ ಹೊಡೆದರು.

09021014a ಸಮಂತಾತ್ಕೀರ್ಯಮಾಣಸ್ತು ಬಾಣಸಂಘೈರ್ಮಹಾತ್ಮಭಿಃ।
09021014c ನ ಚಚಾಲ ಮಹಾರಾಜ ಸರ್ವಸೈನ್ಯಸ್ಯ ಪಶ್ಯತಃ।।

ಮಹಾರಾಜ! ಎಲ್ಲಕಡೆಗಳಿಂದಲೂ ಆ ಮಹಾತ್ಮರು ಬಾಣಸಂಘಗಳನ್ನು ಎರಚಿದರೂ, ಎಲ್ಲ ಸೇನೆಗಳೂ ನೋಡುತ್ತಿದ್ದಂತೆಯೇ, ಅವನು ವಿಚಲಿತನಾಗಲಿಲ್ಲ.

09021015a ಲಾಘವಂ ಸೌಷ್ಠವಂ ಚಾಪಿ ವೀರ್ಯಂ ಚೈವ ಮಹಾತ್ಮನಃ।
09021015c ಅತಿ ಸರ್ವಾಣಿ ಭೂತಾನಿ ದದೃಶುಃ ಸರ್ವಮಾನವಾಃ।।

ಸರ್ವಭೂತಗಳನ್ನೂ ಮೀರಿಸಿದ ಆ ಮಹಾತ್ಮನ ಸೊಗಸಾದ ಹಸ್ತಲಾಘವ ಮತ್ತು ವೀರ್ಯವನ್ನು ಸರ್ವಮಾನವರೂ ನೋಡಿದರು.

09021016a ಧಾರ್ತರಾಷ್ಟ್ರಾಸ್ತು ರಾಜೇಂದ್ರ ಯಾತ್ವಾ ತು ಸ್ವಲ್ಪಮಂತರಂ।
09021016c ಅಪಶ್ಯಮಾನಾ ರಾಜಾನಂ ಪರ್ಯವರ್ತಂತ ದಂಶಿತಾಃ।।

ರಾಜೇಂದ್ರ! ಸ್ವಲ್ಪದೂರವೇ ಓಡಿಹೋಗಿದ್ದ ಧಾರ್ತರಾಷ್ಟ್ರರು ರಾಜನನ್ನು ನೋಡಿ ಕವಚಧಾರಿಗಳಾಗಿ ಹಿಂದಿರುಗಿದರು.

09021017a ತೇಷಾಮಾಪತತಾಂ ಘೋರಸ್ತುಮುಲಃ ಸಮಜಾಯತ।
09021017c ಕ್ಷುಬ್ಧಸ್ಯ ಹಿ ಸಮುದ್ರಸ್ಯ ಪ್ರಾವೃತ್ಕಾಲೇ ಯಥಾ ನಿಶಿ।।

ವರ್ಷಾಕಾಲದ ರಾತ್ರಿಯಲ್ಲಿ ಕ್ಷೋಭೆಗೊಂಡ ಸಮುದ್ರದ ಭೋರ್ಗರೆತದಂತೆ ಹಿಂದಿರುಗಿ ಆಕ್ರಮಣಿಸುತ್ತಿದ್ದ ಸೇನೆಯಿಂದಾಗಿ ಘೋರ ತುಮುಲ ಶಬ್ಧವುಂಟಾಯಿತು.

09021018a ಸಮಾಸಾದ್ಯ ರಣೇ ತೇ ತು ರಾಜಾನಮಪರಾಜಿತಂ।
09021018c ಪ್ರತ್ಯುದ್ಯಯುರ್ಮಹೇಷ್ವಾಸಾಃ ಪಾಂಡವಾನಾತತಾಯಿನಃ।।

ರಣದಲ್ಲಿ ಆ ಅಪರಾಜಿತ ರಾಜನನ್ನು ಸೇರಿ ಮಹೇಷ್ವಾಸರು ಆತತಾಯಿ ಪಾಂಡವರೊಡನೆ ಪುನಃ ಯುದ್ಧಮಾಡಿದರು.

09021019a ಭೀಮಸೇನಂ ರಣೇ ಕ್ರುದ್ಧಂ ದ್ರೋಣಪುತ್ರೋ ನ್ಯವಾರಯತ್।
09021019c ತತೋ ಬಾಣೈರ್ಮಹಾರಾಜ ಪ್ರಮುಕ್ತೈಃ ಸರ್ವತೋದಿಶಂ।।
09021019e ನಾಜ್ಞಾಯಂತ ರಣೇ ವೀರಾ ನ ದಿಶಃ ಪ್ರದಿಶಸ್ತಥಾ।।

ರಣದಲ್ಲಿ ಕ್ರುದ್ಧ ಭೀಮಸೇನನನ್ನು ದ್ರೋಣಪುತ್ರನು ತಡೆದನು. ಮಹಾರಾಜ! ಎಲ್ಲಕಡೆಗಳಿಂದ ಪ್ರಯೋಗಿಸಲ್ಪಟ್ಟ ಬಾಣಗಳಿಂದ ದಿಕ್ಕು-ಉಪದಿಕ್ಕುಗಳೆಲ್ಲ ಮುಚ್ಚಿಹೋಗಿ ರಣದಲ್ಲಿ ವೀರರ್ಯಾರು ಕಾಣುತ್ತಿರಲಿಲ್ಲ.

09021020a ತಾವುಭೌ ಕ್ರೂರಕರ್ಮಾಣಾವುಭೌ ಭಾರತ ದುಃಸ್ಸಹೌ।
09021020c ಘೋರರೂಪಮಯುಧ್ಯೇತಾಂ ಕೃತಪ್ರತಿಕೃತೈಷಿಣೌ।।
09021020e ತ್ರಾಸಯಂತೌ ಜಗತ್ಸರ್ವಂ ಜ್ಯಾಕ್ಷೇಪವಿಹತತ್ವಚೌ।।

ಭಾರತ! ಆ ಇಬ್ಬರು ಕ್ರೂರಕರ್ಮಿ-ದುಃಸ್ಸಹರು ಪೆಟ್ಟಿಗೆ ಪೆಟ್ಟುಕೊಡಲು ಬಯಸುತ್ತಾ ಘೋರರೂಪದ ಯುದ್ಧದಲ್ಲಿ ತೊಡಗಿದರು, ಅವರು ಶಿಂಜನಿಯನ್ನು ತೀಡಿ ಟೇಂಕಾರಮಾಡುತ್ತಿರಲು ಸರ್ವ ಜಗತ್ತೂ ಭಯಗೊಂಡಿತು.

09021021a ಶಕುನಿಸ್ತು ರಣೇ ವೀರೋ ಯುಧಿಷ್ಠಿರಮಪೀಡಯತ್।
09021021c ತಸ್ಯಾಶ್ವಾಂಶ್ಚತುರೋ ಹತ್ವಾ ಸುಬಲಸ್ಯ ಸುತೋ ವಿಭುಃ।।
09021021e ನಾದಂ ಚಕಾರ ಬಲವಾನ್ಸರ್ವಸೈನ್ಯಾನಿ ಕಂಪಯನ್।।

ವೀರ ಶಕುನಿಯಾದರೋ ರಣದಲ್ಲಿ ಯುಧಿಷ್ಠಿರನನ್ನು ಪೀಡಿಸಿದನು. ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಸುಬಲನ ಬಲವಾನ್ ಮಗ ವಿಭು ಶಕುನಿಯು ಸರ್ವಸೈನ್ಯಗಳನ್ನೂ ನಡುಗಿಸುವಂಥಹ ಸಿಂಹನಾದಗೈದನು.

09021022a ಏತಸ್ಮಿನ್ನಂತರೇ ವೀರಂ ರಾಜಾನಮಪರಾಜಿತಂ।
09021022c ಅಪೋವಾಹ ರಥೇನಾಜೌ ಸಹದೇವಃ ಪ್ರತಾಪವಾನ್।।

ಅಷ್ಟರಲ್ಲಿಯೇ ಪ್ರತಾಪವಾನ್ ಸಹದೇವನು ಅಪರಾಜಿತ ವೀರ ರಾಜ ಯುಧಿಷ್ಠಿರನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೊರಟುಹೋದನು.

09021023a ಅಥಾನ್ಯಂ ರಥಮಾಸ್ಥಾಯ ಧರ್ಮರಾಜೋ ಯುಧಿಷ್ಠಿರಃ।
09021023c ಶಕುನಿಂ ನವಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ।।
09021023e ನನಾದ ಚ ಮಹಾನಾದಂ ಪ್ರವರಃ ಸರ್ವಧನ್ವಿನಾಂ।।

ಧರ್ಮರಾಜ ಯುಧಿಷ್ಠಿರನು ಕೂಡಲೇ ಇನ್ನೊಂದು ರಥವನ್ನೇರಿ ಶಕುನಿಯನ್ನು ಒಂಭತ್ತು ಶರಗಳಿಂದ ಹೊಡೆದು ಪುನಃ ಐದರಿಂದ ಪ್ರಹರಿಸಿದನು. ಆ ಸರ್ವಧನ್ವಿಶ್ರೇಷ್ಠನು ಜೋರಾಗಿ ಸಿಂಹನಾದವನ್ನೂ ಮಾಡಿದನು.

09021024a ತದ್ಯುದ್ಧಮಭವಚ್ಚಿತ್ರಂ ಘೋರರೂಪಂ ಚ ಮಾರಿಷ।
09021024c ಈಕ್ಷಿತೃಪ್ರೀತಿಜನನಂ ಸಿದ್ಧಚಾರಣಸೇವಿತಂ।।

ಮಾರಿಷ! ಆ ಯುದ್ಧವು ವಿಚಿತ್ರವೂ, ಘೋರರೂಪವೂ, ಪ್ರೇಕ್ಷಕರಿಗೆ ಆನಂದದಾಯಕವೂ, ಸಿದ್ಧ-ಚಾರಣರ ಪ್ರಶಂಸೆಗೆ ಪಾತ್ರವೂ ಆಗಿತ್ತು.

09021025a ಉಲೂಕಸ್ತು ಮಹೇಷ್ವಾಸಂ ನಕುಲಂ ಯುದ್ಧದುರ್ಮದಂ।
09021025c ಅಭ್ಯದ್ರವದಮೇಯಾತ್ಮಾ ಶರವರ್ಷೈಃ ಸಮಂತತಃ।।

ಅಮೇಯಾತ್ಮಾ ಉಲೂಕನಾದರೋ ಯುದ್ಧದುರ್ಮದ ಮಹೇಷ್ವಾಸ ನಕುಲನನ್ನು ಶರವರ್ಷಗಳನ್ನು ಸುರಿಸಿ ಎಲ್ಲಕಡೆಗಳಿಂದಲೂ ಆಕ್ರಮಣಿಸಿದನು.

09021026a ತಥೈವ ನಕುಲಃ ಶೂರಃ ಸೌಬಲಸ್ಯ ಸುತಂ ರಣೇ।
09021026c ಶರವರ್ಷೇಣ ಮಹತಾ ಸಮಂತಾತ್ಪರ್ಯವಾರಯತ್।।

ಹಾಗೆಯೇ ಶೂರ ನಕುಲನೂ ಕೂಡ ರಣದಲ್ಲಿ ಸೌಬಲನ ಮಗನನ್ನು ಮಹಾ ಶರವರ್ಷದಿಂದ ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು.

09021027a ತೌ ತತ್ರ ಸಮರೇ ವೀರೌ ಕುಲಪುತ್ರೌ ಮಹಾರಥೌ।
09021027c ಯೋಧಯಂತಾವಪಶ್ಯೇತಾಂ ಪರಸ್ಪರಕೃತಾಗಸೌ।।

ಪರಸ್ಪರರನ್ನು ನಿರಸನಗೊಳಿಸಲು ತೊಡಗಿದ್ದ ಆ ವೀರ-ಸತ್ಕುಲಪ್ರಸೂತ-ಮಹಾರಥರಿಬ್ಬರೂ ಸಮರದಲ್ಲಿ ಯುದ್ಧಮಾಡುತ್ತಿರುವುದನ್ನು ನೋಡಿದೆವು.

09021028a ತಥೈವ ಕೃತವರ್ಮಾ ತು ಶೈನೇಯಂ ಶತ್ರುತಾಪನಂ।
09021028c ಯೋಧಯನ್ ಶುಶುಭೇ ರಾಜನ್ಬಲಂ ಶಕ್ರ ಇವಾಹವೇ।।

ರಾಜನ್! ಹಾಗೆಯೇ ಕೃತವರ್ಮನು ಯುದ್ಧದಲ್ಲಿ ಶತ್ರುತಾಪನ ಶೈನೇಯನೊಡನೆ ಯುದ್ಧಮಾಡುತ್ತಿರಲು ಬಲನೊಂದಿಗೆ ಯುದ್ಧಮಾಡುತ್ತಿದ್ದ ಶಕ್ರನಂತೆ ರಣದಲ್ಲಿ ಶೋಭಿಸಿದನು.

09021029a ದುರ್ಯೋಧನೋ ಧನುಶ್ಚಿತ್ತ್ವಾ ಧೃಷ್ಟದ್ಯುಮ್ನಸ್ಯ ಸಂಯುಗೇ।
09021029c ಅಥೈನಂ ಚಿನ್ನಧನ್ವಾನಂ ವಿವ್ಯಾಧ ನಿಶಿತೈಃ ಶರೈಃ।।

ಯುದ್ಧದಲ್ಲಿ ದುರ್ಯೋಧನನು ಧೃಷ್ಟದ್ಯುಮ್ನನ ಧನುಸ್ಸನ್ನು ತುಂಡರಿಸಿ, ಧನುಸ್ಸು ತುಂಡಾದ ಅವನನ್ನು ನಿಶಿತ ಶರಗಳಿಂದ ಪ್ರಹರಿಸಿದನು.

09021030a ಧೃಷ್ಟದ್ಯುಮ್ನೋಽಪಿ ಸಮರೇ ಪ್ರಗೃಹ್ಯ ಪರಮಾಯುಧಂ।
09021030c ರಾಜಾನಂ ಯೋಧಯಾಮಾಸ ಪಶ್ಯತಾಂ ಸರ್ವಧನ್ವಿನಾಂ।।

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ಪರಮಾಯುಧವನ್ನು ಹಿಡಿದು ಸರ್ವಧನ್ವಿಗಳೂ ನೋಡುತ್ತಿರಲು ರಾಜಾ ದುರ್ಯೋಧನನನೊಡನೆ ಯುದ್ಧಮಾಡತೊಡಗಿದನು.

09021031a ತಯೋರ್ಯುದ್ಧಂ ಮಹಚ್ಚಾಸೀತ್ಸಂಗ್ರಾಮೇ ಭರತರ್ಷಭ।
09021031c ಪ್ರಭಿನ್ನಯೋರ್ಯಥಾ ಸಕ್ತಂ ಮತ್ತಯೋರ್ವರಹಸ್ತಿನೋಃ।।

ಭರತರ್ಷಭ! ಸಂಗ್ರಾಮದಲ್ಲಿ ಅವರಿಬ್ಬರ ಯುದ್ಧವು ಕುಂಭಸ್ಥಳವೊಡೆದು ಮದಿಸಿದ ಆನೆಗಳು ಸೆಣಸಾಡುವಂತೆ ಜೋರಾಗಿತ್ತು.

09021032a ಗೌತಮಸ್ತು ರಣೇ ಕ್ರುದ್ಧೋ ದ್ರೌಪದೇಯಾನ್ಮಹಾಬಲಾನ್।
09021032c ವಿವ್ಯಾಧ ಬಹುಭಿಃ ಶೂರಃ ಶರೈಃ ಸಂನತಪರ್ವಭಿಃ।।

ರಣದಲ್ಲಿ ಕ್ರುದ್ಧನಾದ ಶೂರ ಗೌತಮನಾದರೋ ಮಹಾಬಲ ದ್ರೌಪದೇಯರನ್ನು ಅನೇಕ ಸನ್ನತಪರ್ವ ಶರಗಳಿಂದ ಪ್ರಹರಿಸಿದನು.

09021033a ತಸ್ಯ ತೈರಭವದ್ಯುದ್ಧಮಿಂದ್ರಿಯೈರಿವ ದೇಹಿನಃ।
09021033c ಘೋರರೂಪಮಸಂವಾರ್ಯಂ ನಿರ್ಮರ್ಯಾದಮತೀವ ಚ।।

ದೇಹಧಾರಿ ಜೀವ ಮತ್ತು ಪಂಚೇಂದ್ರಿಯಗಳ ನಡುವೆ ನಡೆಯುವ ಸಂಘರ್ಷದಂತೆ ಅವರ ಯುದ್ಧವು ಘೋರರೂಪವೂ, ಅನಿವಾರ್ಯವೂ, ಯುದ್ಧಮರ್ಯಾದೆಯನ್ನು ಮೀರಿದ ಸಂಘರ್ಷವಾಗಿತ್ತು.

09021034a ತೇ ಚ ತಂ ಪೀಡಯಾಮಾಸುರಿಂದ್ರಿಯಾಣೀವ ಬಾಲಿಶಂ।
09021034c ಸ ಚ ತಾನ್ಪ್ರತಿಸಂರಬ್ಧಃ ಪ್ರತ್ಯಯೋಧಯದಾಹವೇ।।

ಇಂದ್ರಿಯಗಳು ಬಾಲಿಶ ಮನುಷ್ಯನನ್ನು ಪೀಡಿಸುವಂತೆ ದ್ರೌಪದೇಯರು ಕೃಪರನ್ನು ಬಹಳವಾಗಿ ಪೀಡಿಸಲು, ಅವನು ಪರಮಕೃದ್ಧನಾಗಿ ಪ್ರತಿಪ್ರಹಾರಗಳೊಂದಿಗೆ ಯುದ್ಧಮಾಡಿದನು.

09021035a ಏವಂ ಚಿತ್ರಮಭೂದ್ಯುದ್ಧಂ ತಸ್ಯ ತೈಃ ಸಹ ಭಾರತ।
09021035c ಉತ್ಥಾಯೋತ್ಥಾಯ ಹಿ ಯಥಾ ದೇಹಿನಾಮಿಂದ್ರಿಯೈರ್ವಿಭೋ।।

ಭಾರತ! ವಿಭೋ! ಬಾರಿಬಾರಿಗೂ ಉಲ್ಬಣಗೊಳ್ಳುವ ಇಂದಿರ್ಯಗಳಿಗೂ ಜೀವಾತ್ಮನಿಗೂ ಸಂಘರ್ಷಣೆಯಾಗುವಂತೆ ದ್ರೌಪದೇಯರೊಡನೆ ಕೃಪನ ಯುದ್ಧವು ವಿಚಿತ್ರವಾಗಿತ್ತು.

09021036a ನರಾಶ್ಚೈವ ನರೈಃ ಸಾರ್ಧಂ ದಂತಿನೋ ದಂತಿಭಿಸ್ತಥಾ।
09021036c ಹಯಾ ಹಯೈಃ ಸಮಾಸಕ್ತಾ ರಥಿನೋ ರಥಿಭಿಸ್ತಥಾ।।
09021036e ಸಂಕುಲಂ ಚಾಭವದ್ಭೂಯೋ ಘೋರರೂಪಂ ವಿಶಾಂ ಪತೇ।

ವಿಶಾಂಪತೇ! ಪದಾತಿಗಳು ಪದಾತಿಗಳೊಡನೆ, ಆನೆಗಳು ಆನೆಗಳೊಡನೆ, ಕುದುರೆಗಳು ಕುದುರೆಗಳೊಡನೆ ಮತ್ತು ರಥಿಗಳು ರಥಿಗಳೊಡನೆ ಘೋರರೂಪದ ಸಂಕುಲ ಯುದ್ಧವು ಪುನಃ ನಡೆಯಿತು.

09021037a ಇದಂ ಚಿತ್ರಮಿದಂ ಘೋರಮಿದಂ ರೌದ್ರಮಿತಿ ಪ್ರಭೋ।।
09021037c ಯುದ್ಧಾನ್ಯಾಸನ್ಮಹಾರಾಜ ಘೋರಾಣಿ ಚ ಬಹೂನಿ ಚ।

ಪ್ರಭೋ! ಮಹಾರಾಜ! ಇಂತಹ ಅನೇಕ ವಿಚಿತ್ರ, ಘೋರ, ರೌದ್ರ ಯುದ್ಧಗಳು ಅಲ್ಲಿ ನಡೆದವು.

09021038a ತೇ ಸಮಾಸಾದ್ಯ ಸಮರೇ ಪರಸ್ಪರಮರಿಂದಮಾಃ।।
09021038c ವಿವ್ಯಧುಶ್ಚೈವ ಜಘ್ನುಶ್ಚ ಸಮಾಸಾದ್ಯ ಮಹಾಹವೇ।

ಸಮರದಲ್ಲಿ ಪರಸ್ಪರರನ್ನು ಎದುರಿಸಿ ಆ ಅರಿಂದಮರು ಮಹಾರಣದಲ್ಲಿ ಸಿಂಹನಾದಗೈಯುತ್ತಿದ್ದರು ಮತ್ತು ಸಂಹರಿಸುತ್ತಿದ್ದರು.

09021039a ತೇಷಾಂ ಶಸ್ತ್ರಸಮುದ್ಭೂತಂ ರಜಸ್ತೀವ್ರಮದೃಶ್ಯತ।।
09021039c ಪ್ರವಾತೇನೋದ್ಧತಂ ರಾಜನ್ಧಾವದ್ಭಿಶ್ಚಾಶ್ವಸಾದಿಭಿಃ।

ರಾಜನ್! ಶಸ್ತ್ರಗಳಿಂದುಂಟಾದ, ಓಡುತ್ತಿದ್ದ ಕುದುರೆ-ಪದಾತಿಗಳಿಂದುಂಟಾದ ಧೂಳು ಗಾಳಿಯಿಂದ ತೀವ್ರವಾಗಿ ಮೇಲೆದ್ದು ಪಸರಿಸಿದುದು ಕಂಡುಬಂದಿತು.

09021040a ರಥನೇಮಿಸಮುದ್ಭೂತಂ ನಿಃಶ್ವಾಸೈಶ್ಚಾಪಿ ದಂತಿನಾಂ।।
09021040c ರಜಃ ಸಂಧ್ಯಾಭ್ರಕಪಿಲಂ ದಿವಾಕರಪಥಂ ಯಯೌ।

ರಥಚಕ್ರಗಳಿಂದ ಮತ್ತು ಆನೆಗಳ ನಿಃಶ್ವಾಸಗಳಿಂದ ಮೇಲೆದ್ದ ಧೂಳು ಸಂಧ್ಯಾಕಾಲದ ಮೋಡದಂತೆ ಸೂರ್ಯನ ಪಥದಲ್ಲಿ ಹೋಗುತ್ತಿತ್ತು.

09021041a ರಜಸಾ ತೇನ ಸಂಪೃಕ್ತೇ ಭಾಸ್ಕರೇ ನಿಷ್ಪ್ರಭೀಕೃತೇ।।
09021041c ಸಂಚಾದಿತಾಭವದ್ಭೂಮಿಸ್ತೇ ಚ ಶೂರಾ ಮಹಾರಥಾಃ।

ಆ ಧೂಳಿನಿಂದಾಗಿ ಬಾಸ್ಕರನು ಕಾಂತಿಹೀನನಾದನು. ರಣದಲ್ಲಿ ಮಹಾರಥ ಶೂರರು ಧೂಳಿನಲ್ಲಿ ಮುಚ್ಚಿಹೋದರು.

09021042a ಮುಹೂರ್ತಾದಿವ ಸಂವೃತ್ತಂ ನೀರಜಸ್ಕಂ ಸಮಂತತಃ।।
09021042c ವೀರಶೋಣಿತಸಿಕ್ತಾಯಾಂ ಭೂಮೌ ಭರತಸತ್ತಮ।
09021042e ಉಪಾಶಾಮ್ಯತ್ತತಸ್ತೀವ್ರಂ ತದ್ರಜೋ ಘೋರದರ್ಶನಂ।।

ಧೂಳು ಸ್ವಲ್ಪಕಾಲ ಮಾತ್ರವೇ ಇತ್ತು. ಭಾರತ! ಭೂಮಿಯು ವೀರಯೋಧರ ರಕ್ತದಿಂದ ತೋಯ್ದುಹೋಗಿ ಘೋರವಾಗಿ ಕಾಣುತ್ತಿದ್ದ ಆ ತೀವ್ರ ಧೂಳು ಉಪಶಮನಹೊಂದಿತು.

09021043a ತತೋಽಪಶ್ಯಂ ಮಹಾರಾಜ ದ್ವಂದ್ವಯುದ್ಧಾನಿ ಭಾರತ।
09021043c ಯಥಾಪ್ರಾಗ್ರ್ಯಂ ಯಥಾಜ್ಯೇಷ್ಠಂ ಮಧ್ಯಾಹ್ನೇ ವೈ ಸುದಾರುಣೇ।।
09021043e ವರ್ಮಣಾಂ ತತ್ರ ರಾಜೇಂದ್ರ ವ್ಯದೃಶ್ಯಂತೋಜ್ಜ್ವಲಾಃ ಪ್ರಭಾಃ।।

ಮಹಾರಾಜ! ಭಾರತ! ಮಧ್ಯಾಹ್ನದ ಆ ಸಮಯದಲ್ಲಿ ನಾವು ಬಲ ಮತ್ತು ಶ್ರೇಷ್ಠತೆಗಳಿಗನುಗುಣವಾಗಿ ದ್ವಂದ್ವಯುದ್ಧಗಳು ನಡೆದುದನ್ನು ನೋಡಿದೆವು. ರಾಜೇಂದ್ರ! ಯೋಧರ ಕವಚಗಳ ಉಜ್ವಲ ಪ್ರಭೆಯು ಎಲ್ಲೆಡೆ ತೋರಿಬರುತ್ತಿತ್ತು.

09021044a ಶಬ್ದಃ ಸುತುಮುಲಃ ಸಂಖ್ಯೇ ಶರಾಣಾಂ ಪತತಾಮಭೂತ್।
09021044c ಮಹಾವೇಣುವನಸ್ಯೇವ ದಹ್ಯಮಾನಸ್ಯ ಸರ್ವತಃ।।

ಬಿದುರಿನ ಮಹಾವನವು ಸುಡುವಾಗ ಉಂಟಾಗುವ ಶಬ್ಧದಂತೆ ಆ ತುಮುಲ ಯುದ್ಧದಲ್ಲಿ ಶರಗಳು ಬೀಳುವ ಶಬ್ಧವು ಎಲ್ಲಕಡೆಗಳಲ್ಲಿ ಕೇಳಿ ಬರುತ್ತಿತ್ತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಂಕುಲಯುದ್ಧೇ ಏಕವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.