020 ಸಾತ್ಯಕಿಕೃತವರ್ಮಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಹ್ರದಪ್ರವೇಶ ಪರ್ವ

ಅಧ್ಯಾಯ 20

ಸಾರ

ಸಾತ್ಯಕಿಯಿಂದ ಕ್ಷೇಮಧೂರ್ತಿಯ ವಧೆ (1-8). ಸಾತ್ಯಕಿಯಿಂದ ಕೃತವರ್ಮನ ಸೋಲು (9-29). ಕೌರವ ಸೇನಾ ಪಲಾಯನ; ದುರ್ಯೋಧನನು ಶತ್ರುಗಳನ್ನು ಎದುರಿಸಿ ನಿಂತಿದುದು (30-36).

09020001 ಸಂಜಯ ಉವಾಚ 09020001a ತಸ್ಮಿಂಸ್ತು ನಿಹತೇ ಶೂರೇ ಶಾಲ್ವೇ ಸಮಿತಿಶೋಭನೇ।
09020001c ತವಾಭಜ್ಯದ್ಬಲಂ ವೇಗಾದ್ವಾತೇನೇವ ಮಹಾದ್ರುಮಃ।।

ಸಂಜಯನು ಹೇಳಿದನು: “ಆ ಸಮಿತಿಶೋಭನ ಶೂರ ಶಾಲ್ವನು ಹತನಾಗಲು ಭಿರುಗಾಳಿಯಿಂದ ಮಹಾವೃಕ್ಷವು ಮುರಿದುಬೀಳುವಂತೆ ನಿನ್ನ ಸೇನೆಯು ಬೇಗನೆ ಭಗ್ನವಾಯಿತು.

09020002a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಕೃತವರ್ಮಾ ಮಹಾರಥಃ।
09020002c ದಧಾರ ಸಮರೇ ಶೂರಃ ಶತ್ರುಸೈನ್ಯಂ ಮಹಾಬಲಃ।।

ಆ ಸೇನೆಯು ಭಗ್ನವಾದುದನ್ನು ಕಂಡು ಮಹಾರಥ ಶೂರ ಕೃತವರ್ಮನು ಸಮರದಲ್ಲಿ ನಿಂತನು.

09020003a ಸಂನಿವೃತ್ತಾಸ್ತು ತೇ ಶೂರಾ ದೃಷ್ಟ್ವಾ ಸಾತ್ವತಮಾಹವೇ।
09020003c ಶೈಲೋಪಮಂ ಸ್ಥಿತಂ ರಾಜನ್ಕೀರ್ಯಮಾಣಂ ಶರೈರ್ಯುಧಿ।।

ರಾಜನ್! ಯುದ್ಧದಲ್ಲಿ ಶರಗಳನ್ನು ಎರಚುತ್ತಾ ಪರ್ವತದಂತೆ ನಿಂತಿದ್ದ ಶೂರ ಸಾತ್ವತನನ್ನು ನೋಡಿ ನಿನ್ನವರು ಹಿಂದಿರುಗಿದರು.

09020004a ತತಃ ಪ್ರವವೃತೇ ಯುದ್ಧಂ ಕುರೂಣಾಂ ಪಾಂಡವೈಃ ಸಹ।
09020004c ನಿವೃತ್ತಾನಾಂ ಮಹಾರಾಜ ಮೃತ್ಯುಂ ಕೃತ್ವಾ ನಿವರ್ತನಂ।।

ಮಹಾರಾಜ! ಆಗ ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಹಿಂದಿರುಗಿದ್ದ ಕುರು ಮತ್ತು ಪಾಂಡವ ಸೇನೆಗಳ ನಡುವೆ ಯುದ್ಧವು ಪುನಃ ಪ್ರಾರಂಭವಾಯಿತು.

09020005a ತತ್ರಾಶ್ಚರ್ಯಮಭೂದ್ಯುದ್ಧಂ ಸಾತ್ವತಸ್ಯ ಪರೈಃ ಸಹ।
09020005c ಯದೇಕೋ ವಾರಯಾಮಾಸ ಪಾಂಡುಸೇನಾಂ ದುರಾಸದಾಂ।।

ದುರಾಸದ ಪಾಂಡುಸೇನೆಯನ್ನು ಒಬ್ಬನೇ ತಡೆಯುತ್ತಿದ್ದ ಸಾತ್ವತ ಮತ್ತು ಶತ್ರುಗಳ ನಡುವೆ ಆಶ್ಚರ್ಯಕರ ಯುದ್ಧವು ನಡೆಯಿತು.

09020006a ತೇಷಾಮನ್ಯೋನ್ಯಸುಹೃದಾಂ ಕೃತೇ ಕರ್ಮಣಿ ದುಷ್ಕರೇ।
09020006c ಸಿಂಹನಾದಃ ಪ್ರಹೃಷ್ಟಾನಾಂ ದಿವಃಸ್ಪೃಕ್ಸುಮಹಾನಭೂತ್।।

ಕೃತವರ್ಮನ ಆ ದುಷ್ಕರ ಕರ್ಮಗಳನ್ನು ನೋಡಿ ಪ್ರಹೃಷ್ಟ ಅನ್ಯೋನ್ಯ ಸುಹೃದಯರು ಮಾಡಿದ ಸಿಂಹನಾದವು ಆಕಾಶವನ್ನೂ ಮುಟ್ಟುವಷ್ಟು ಜೋರಾಗಿತ್ತು.

09020007a ತೇನ ಶಬ್ದೇನ ವಿತ್ರಸ್ತಾನ್ಪಾಂಚಾಲಾನ್ಭರತರ್ಷಭ।
09020007c ಶಿನೇರ್ನಪ್ತಾ ಮಹಾಬಾಹುರನ್ವಪದ್ಯತ ಸಾತ್ಯಕಿಃ।।

ಭರತರ್ಷಭ! ಆ ಶಬ್ಧದಿಂದ ಪಾಂಚಾಲರು ನಡುಗಿದರು. ಆಗ ಶಿನಿಯ ಮೊಮ್ಮಗ ಮಹಾಬಾಹು ಸಾತ್ಯಕಿಯು ಶತ್ರುಗಳನ್ನು ಆಕ್ರಮಣಿಸಿದನು.

09020008a ಸ ಸಮಾಸಾದ್ಯ ರಾಜಾನಂ ಕ್ಷೇಮಧೂರ್ತಿಂ ಮಹಾಬಲಂ।
09020008c ಸಪ್ತಭಿರ್ನಿಶಿತೈರ್ಬಾಣೈರನಯದ್ಯಮಸಾದನಂ।।

ಅವನು ಮಹಾಬಲ ರಾಜಾ ಕ್ಷೇಮಧೂರ್ತಿಯನ್ನು ಎದುರಿಸಿ ಏಳು ನಿಶಿತ ಬಾಣಗಳಿಂದ ಅವನನ್ನು ಯಮಸಾದನಕ್ಕೆ ಕಳುಹಿಸಿದನು.

09020009a ತಮಾಯಾಂತಂ ಮಹಾಬಾಹುಂ ಪ್ರವಪಂತಂ ಶಿತಾನ್ ಶರಾನ್।
09020009c ಜವೇನಾಭ್ಯಪತದ್ಧೀಮಾನ್ ಹಾರ್ದಿಕ್ಯಃ ಶಿನಿಪುಂಗವಂ।।

ನಿಶಿತ ಶರಗಳನ್ನು ಪ್ರಯೋಗಿಸುತ್ತಾ ತನ್ನ ಕಡೆ ಬರುತ್ತಿದ್ದ ಶಿನಿಪುಂಗವನನ್ನು ಧೀಮಾನ್ ಹಾರ್ದಿಕ್ಯನು ವೇಗದಿಂದ ತಡೆದನು.

09020010a ತೌ ಸಿಂಹಾವಿವ ನರ್ದಂತೌ ಧನ್ವಿನೌ ರಥಿನಾಂ ವರೌ।
09020010c ಅನ್ಯೋನ್ಯಮಭ್ಯಧಾವೇತಾಂ ಶಸ್ತ್ರಪ್ರವರಧಾರಿಣೌ।।

ಸಿಂಹಗಳಂತೆ ಗರ್ಜಿಸುತ್ತಿದ್ದ ಆ ಇಬ್ಬರು ಧನ್ವಿ-ರಥಶ್ರೇಷ್ಠ-ಶಸ್ತ್ರಧಾರಿಶ್ರೇಷ್ಠರಿಬ್ಬರೂ ಅನ್ಯೋನ್ಯರನ್ನು ಆಕ್ರಮಣಿಸಿದರು.

09020011a ಪಾಂಡವಾಃ ಸಹ ಪಾಂಚಾಲೈರ್ಯೋಧಾಶ್ಚಾನ್ಯೇ ನೃಪೋತ್ತಮಾಃ।
09020011c ಪ್ರೇಕ್ಷಕಾಃ ಸಮಪದ್ಯಂತ ತಯೋಃ ಪುರುಷಸಿಂಹಯೋಃ।।

ಪಾಂಡವರೊಂದಿಗೆ ಪಾಂಚಾಲರೂ ಮತ್ತು ಅನ್ಯ ಯೋಧ-ನೃಪೋತ್ತಮರೂ ಆ ಇಬ್ಬರು ಪುರುಷಸಿಂಹರ ಯುದ್ಧದ ಪ್ರೇಕ್ಷಕರಾದರು.

09020012a ನಾರಾಚೈರ್ವತ್ಸದಂತೈಶ್ಚ ವೃಷ್ಣ್ಯಂಧಕಮಹಾರಥೌ।
09020012c ಅಭಿಜಘ್ನತುರನ್ಯೋನ್ಯಂ ಪ್ರಹೃಷ್ಟಾವಿವ ಕುಂಜರೌ।।

ಪ್ರಹೃಷ್ಟ ಆನೆಗಳಂತೆ ಆ ವೃಷ್ಣಿ-ಅಂಧಕ ಮಹಾರಥರು ನಾರಾಚ-ವತ್ಸದಂತಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

09020013a ಚರಂತೌ ವಿವಿಧಾನ್ಮಾರ್ಗಾನ್ ಹಾರ್ದಿಕ್ಯಶಿನಿಪುಂಗವೌ।
09020013c ಮುಹುರಂತರ್ದಧಾತೇ ತೌ ಬಾಣವೃಷ್ಟ್ಯಾ ಪರಸ್ಪರಂ।।

ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಹಾರ್ದಿಕ್ಯ-ಶಿನಿಪುಂಗವರು ಬಾಣಗಳ ಮಳೆಸುರಿಸಿ ಮುಹೂರ್ತಕಾಲ ಪರಸ್ಪರರನ್ನು ಅಂತರ್ಧಾನಗೊಳಿಸಿದರು.

09020014a ಚಾಪವೇಗಬಲೋದ್ಧೂತಾನ್ಮಾರ್ಗಣಾನ್ವೃಷ್ಣಿಸಿಂಹಯೋಃ।
09020014c ಆಕಾಶೇ ಸಮಪಶ್ಯಾಮ ಪತಂಗಾನಿವ ಶೀಘ್ರಗಾನ್।।

ಆ ವೃಷ್ಣಿಸಿಂಹರ ಧನುಸ್ಸುಗಳಿಂದ ವೇಗವಾಗಿ ಬರುತ್ತಿದ್ದ ಮಾರ್ಗಣಗಳು ಆಕಾಶದಲ್ಲಿ ಪತಂಗಗಳಂತೆ ಶೀಘ್ರವಾಗಿ ಹೋಗುತ್ತಿರುವುದನ್ನು ನಾವು ನೋಡಿದೆವು.

09020015a ತಮೇಕಂ ಸತ್ಯಕರ್ಮಾಣಮಾಸಾದ್ಯ ಹೃದಿಕಾತ್ಮಜಃ।
09020015c ಅವಿಧ್ಯನ್ನಿಶಿತೈರ್ಬಾಣೈಶ್ಚತುರ್ಭಿಶ್ಚತುರೋ ಹಯಾನ್।।

ಹೃದಿಕಾತ್ಮಜನು ಸತ್ಯಕರ್ಮ ಸಾತ್ಯಕಿಯನ್ನೊಬ್ಬನನ್ನೇ ಎದುರಿಸಿ ನಿಶಿತ ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನು ಪ್ರಹರಿಸಿದನು.

09020016a ಸ ದೀರ್ಘಬಾಹುಃ ಸಂಕ್ರುದ್ಧಸ್ತೋತ್ತ್ರಾರ್ದಿತ ಇವ ದ್ವಿಪಃ।
09020016c ಅಷ್ಟಾಭಿಃ ಕೃತವರ್ಮಾಣಮವಿಧ್ಯತ್ಪರಮೇಷುಭಿಃ।।

ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಸಂಕ್ರುದ್ಧನಾದ ಆ ದೀರ್ಘಬಾಹು ಸಾತ್ಯಕಿಯು ಎಂಟು ಪರಮ ಬಾಣಗಳಿಂದ ಕೃತವರ್ಮನನ್ನು ಪ್ರಹರಿಸಿದನು.

09020017a ತತಃ ಪೂರ್ಣಾಯತೋತ್ಸೃಷ್ಟೈಃ ಕೃತವರ್ಮಾ ಶಿಲಾಶಿತೈಃ।
09020017c ಸಾತ್ಯಕಿಂ ತ್ರಿಭಿರಾಹತ್ಯ ಧನುರೇಕೇನ ಚಿಚ್ಚಿದೇ।।

ಆಗ ಕೃತವರ್ಮನು ಧನುಸ್ಸನ್ನು ಸಂಪೂರ್ಣವಾಗಿ ಸೆಳೆದು ಬಿಟ್ಟ ಮೂರು ಶಿಲಾಶಿತಗಳಿಂದ ಸಾತ್ಯಕಿಯನ್ನು ಹೊಡೆದು ಒಂದರಿಂದ ಅವನ ಧನುಸ್ಸನ್ನು ತುಂಡರಿಸಿದನು.

09020018a ನಿಕೃತ್ತಂ ತದ್ಧನುಃಶ್ರೇಷ್ಠಮಪಾಸ್ಯ ಶಿನಿಪುಂಗವಃ।
09020018c ಅನ್ಯದಾದತ್ತ ವೇಗೇನ ಶೈನೇಯಃ ಸಶರಂ ಧನುಃ।।

ತುಂಡಾದ ಆ ಶ್ರೇಷ್ಠ ಧನುಸ್ಸನ್ನು ಎಸೆದು ಶಿನಿಪುಂಗವ ಶೈನೇಯನು ವೇಗದಿಂದ ಶರದೊಂದಿಗೆ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.

09020019a ತದಾದಾಯ ಧನುಃಶ್ರೇಷ್ಠಂ ವರಿಷ್ಠಃ ಸರ್ವಧನ್ವಿನಾಂ।
09020019c ಆರೋಪ್ಯ ಚ ಮಹಾವೀರ್ಯೋ ಮಹಾಬುದ್ಧಿರ್ಮಹಾಬಲಃ।।
09020020a ಅಮೃಷ್ಯಮಾಣೋ ಧನುಷಶ್ಚೇದನಂ ಕೃತವರ್ಮಣಾ।
09020020c ಕುಪಿತೋಽತಿರಥಃ ಶೀಘ್ರಂ ಕೃತವರ್ಮಾಣಮಭ್ಯಯಾತ್।।

ಕೃತವರ್ಮನು ತನ್ನ ಧನುಸ್ಸನ್ನು ಕತ್ತರಿಸಿದುದನ್ನು ಸಹಿಸಿಕೊಳ್ಳಲಾರದೇ ಕುಪಿತನಾದ ಅತಿರಥ-ಮಹಾವೀರ್ಯ-ಮಹಾಬುದ್ಧಿ-ಮಹಾಬಲ- ಸರ್ವಧನ್ವಿ ವರಿಷ್ಠ ಸಾತ್ಯಕಿಯು ಆ ಶ್ರೇಷ್ಠ ಧನುಸ್ಸನ್ನು ತೆಗೆದುಕೊಂಡು ಸಿದ್ಧಗೊಳಿಸಿ ಶೀಘ್ರದಲ್ಲಿಯೇ ಕೃತವರ್ಮನನ್ನು ಆಕ್ರಮಣಿಸಿದನು.

09020021a ತತಃ ಸುನಿಶಿತೈರ್ಬಾಣೈರ್ದಶಭಿಃ ಶಿನಿಪುಂಗವಃ।
09020021c ಜಘಾನ ಸೂತಮಶ್ವಾಂಶ್ಚ ಧ್ವಜಂ ಚ ಕೃತವರ್ಮಣಃ।।

ಅನಂತರ ಶಿನಿಪುಂಗವನು ಹತ್ತು ನಿಶಿತ ಬಾಣಗಳಿಂದ ಕೃತವರ್ಮನ ಸೂತ-ಕುದುರೆ-ಧ್ವಜಗಳನ್ನು ನಾಶಗೊಳಿಸಿದನು.

09020022a ತತೋ ರಾಜನ್ಮಹೇಷ್ವಾಸಃ ಕೃತವರ್ಮಾ ಮಹಾರಥಃ।
09020022c ಹತಾಶ್ವಸೂತಂ ಸಂಪ್ರೇಕ್ಷ್ಯ ರಥಂ ಹೇಮಪರಿಷ್ಕೃತಂ।।
09020023a ರೋಷೇಣ ಮಹತಾವಿಷ್ಟಃ ಶೂಲಮುದ್ಯಮ್ಯ ಮಾರಿಷ।
09020023c ಚಿಕ್ಷೇಪ ಭುಜವೇಗೇನ ಜಿಘಾಂಸುಃ ಶಿನಿಪುಂಗವಂ।।

ರಾಜನ್! ಮಾರಿಷ! ಆಗ ಹೇಮಪರಿಷ್ಕೃತ ರಥ, ಕುದುರೆ ಮತ್ತು ಸಾರಥಿಗಳು ಹತಗೊಂಡಿದುದನ್ನು ನೋಡಿ ಮಹಾ ರೋಷದಿಂದ ಆವಿಷ್ಟನಾದ ಮಹೇಷ್ವಾಸ-ಮಹಾರಥ ಕೃತವರ್ಮನು ಶೂಲವನ್ನೆತ್ತಿ ಭುಜವೇಗದಿಂದ ಶಿನಿಪುಂಗವನನ್ನು ಕೊಲ್ಲಲು ಎಸೆದನು.

09020024a ತಚ್ಚೂಲಂ ಸಾತ್ವತೋ ಹ್ಯಾಜೌ ನಿರ್ಭಿದ್ಯ ನಿಶಿತೈಃ ಶರೈಃ।
09020024c ಚೂರ್ಣಿತಂ ಪಾತಯಾಮಾಸ ಮೋಹಯನ್ನಿವ ಮಾಧವಂ।।
09020024e ತತೋಽಪರೇಣ ಭಲ್ಲೇನ ಹೃದ್ಯೇನಂ ಸಮತಾಡಯತ್।।

ಸಾತ್ವತನು ಆ ಶೂಲವನ್ನು ನಿಶಿತ ಶರಗಳಿಂದ ಭೇದಿಸಿ ಚೂರುಚೂರುಮಾಡಿ ಮಾಧವನನ್ನು ಮೋಹಗೊಳಿಸುವಂತೆ ಕೆಳಗುರುಳಿಸಿದನು. ಅನಂತರ ಇನ್ನೊಂದು ಭಲ್ಲದಿಂದ ಅವನ ಎದೆಗೆ ಹೊಡೆದನು.

09020025a ಸ ಯುದ್ಧೇ ಯುಯುಧಾನೇನ ಹತಾಶ್ವೋ ಹತಸಾರಥಿಃ।
09020025c ಕೃತವರ್ಮಾ ಕೃತಾಸ್ತ್ರೇಣ ಧರಣೀಮನ್ವಪದ್ಯತ।।

ಕೃತಾಸ್ತ್ರ ಯುಯುಧಾನನಿಂದ ಹತಾಶ್ವನೂ ಹತಸಾರಥಿಯೂ ಆದ ಕೃತವರ್ಮನು ಭೂಮಿಯ ಮೇಲೆ ಹಾರಿ ನಿಂತುಕೊಂಡನು.

09020026a ತಸ್ಮಿನ್ಸಾತ್ಯಕಿನಾ ವೀರೇ ದ್ವೈರಥೇ ವಿರಥೀಕೃತೇ।
09020026c ಸಮಪದ್ಯತ ಸರ್ವೇಷಾಂ ಸೈನ್ಯಾನಾಂ ಸುಮಹದ್ಭಯಂ।।

ದ್ವೈರಥ ಯುದ್ಧದಲ್ಲಿ ಹಾಗೆ ಸಾತ್ಯಕಿಯಿಂದ ವೀರ ಕೃತವರ್ಮನು ವಿರಥನಾಗಲು ಸರ್ವ ಸೇನೆಗಳಲ್ಲಿ ಮಹಾ ಭಯವುಂಟಾಯಿತು.

09020027a ಪುತ್ರಸ್ಯ ತವ ಚಾತ್ಯರ್ಥಂ ವಿಷಾದಃ ಸಮಪದ್ಯತ।
09020027c ಹತಸೂತೇ ಹತಾಶ್ವೇ ಚ ವಿರಥೇ ಕೃತವರ್ಮಣಿ।।

ಕೃತವರ್ಮನು ಹತಸಾರಥಿಯೂ ಹತಾಶ್ವನೂ ವಿರಥನೂ ಆಗಿದುದನ್ನು ನೋಡಿ ನಿನ್ನ ಮಗನಿಗೂ ವಿಷಾದವುಂಟಾಯಿತು.

09020028a ಹತಾಶ್ವಂ ಚ ಸಮಾಲಕ್ಷ್ಯ ಹತಸೂತಮರಿಂದಮಂ।
09020028c ಅಭ್ಯಧಾವತ್ಕೃಪೋ ರಾಜನ್ಜಿಘಾಂಸುಃ ಶಿನಿಪುಂಗವಂ।।

ರಾಜನ್! ಅರಿಂದಮನು ಹತಾಶ್ವನೂ ಹತಸೂತನೂ ಆದುದನ್ನು ನೋಡಿದ ಕೃಪನು ಶಿನಿಪುಂಗವನನ್ನು ಸಂಹರಿಸಲು ವೇಗವಾಗಿ ಬಂದನು.

09020029a ತಮಾರೋಪ್ಯ ರಥೋಪಸ್ಥೇ ಮಿಷತಾಂ ಸರ್ವಧನ್ವಿನಾಂ।
09020029c ಅಪೋವಾಹ ಮಹಾಬಾಹುಸ್ತೂರ್ಣಮಾಯೋಧನಾದಪಿ।।

ಸರ್ವಧನ್ವಿಗಳೂ ನೋಡುತ್ತಿದ್ದಂತೆಯೇ ಆ ಮಹಾಬಾಹುವು ಬೇಗನೇ ಕೃತವರ್ಮನನ್ನು ತನ್ನ ರಥದಲ್ಲಿ ಏರಿಸಿಕೊಂಡು ರಣದಿಂದ ದೂರ ಹೊರಟುಹೋದನು.

09020030a ಶೈನೇಯೇಽಧಿಷ್ಠಿತೇ ರಾಜನ್ವಿರಥೇ ಕೃತವರ್ಮಣಿ।
09020030c ದುರ್ಯೋಧನಬಲಂ ಸರ್ವಂ ಪುನರಾಸೀತ್ಪರಾಙ್ಮುಖಂ।।

ರಾಜನ್! ಶೈನೇಯನು ಯುದ್ಧಕ್ಕೆ ನಿಂತಿರಲು ಮತ್ತು ಕೃತವರ್ಮನು ವಿರಥನಾಗಲು ದುರ್ಯೋಧನನ ಸೇನೆಯು ಪುನಃ ಪರಾಙ್ಮುಖವಾಯಿತು.

09020031a ತತ್ಪರೇ ನಾವಬುಧ್ಯಂತ ಸೈನ್ಯೇನ ರಜಸಾವೃತೇ।
09020031c ತಾವಕಾಃ ಪ್ರದ್ರುತಾ ರಾಜನ್ದುರ್ಯೋಧನಂ ಋತೇ ನೃಪಂ।।

ಧೂಳುತುಂಬಿಕೊಂಡಿದ್ದುದರಿಂದ ಸೇನೆಗಳು ಓಡಿಹೋಗುತ್ತಿರುವುದೂ ಕಾಣುತ್ತಿರಲಿಲ್ಲ. ರಾಜನ್! ನೃಪ ದುರ್ಯೋಧನನನ್ನು ಬಿಟ್ಟು ನಿನ್ನವರೆಲ್ಲರೂ ಓಡಿಹೋದರು.

09020032a ದುರ್ಯೋಧನಸ್ತು ಸಂಪ್ರೇಕ್ಷ್ಯ ಭಗ್ನಂ ಸ್ವಬಲಮಂತಿಕಾತ್।
09020032c ಜವೇನಾಭ್ಯಪತತ್ತೂರ್ಣಂ ಸರ್ವಾಂಶ್ಚೈಕೋ ನ್ಯವಾರಯತ್।।

ತನ್ನ ಸೇನೆಯು ಭಗ್ನವಾಗುತ್ತಿರುವುದನ್ನು ಹತ್ತಿರದಿಂದಲೇ ನೋಡಿದ ದುರ್ಯೋಧನನಾದರೋ ಬೇಗನೇ ವೇಗದಿಂದ ಒಬ್ಬನೇ ಎಲ್ಲರನ್ನೂ ತಡೆದನು.

09020033a ಪಾಂಡೂಂಶ್ಚ ಸರ್ವಾನ್ಸಂಕ್ರುದ್ಧೋ ಧೃಷ್ಟದ್ಯುಮ್ನಂ ಚ ಪಾರ್ಷತಂ।
09020033c ಶಿಖಂಡಿನಂ ದ್ರೌಪದೇಯಾನ್ಪಾಂಚಾಲಾನಾಂ ಚ ಯೇ ಗಣಾಃ।।
09020034a ಕೇಕಯಾನ್ಸೋಮಕಾಂಶ್ಚೈವ ಪಾಂಚಾಲಾಂಶ್ಚೈವ ಮಾರಿಷ।
09020034c ಅಸಂಭ್ರಮಂ ದುರಾಧರ್ಷಃ ಶಿತೈರಸ್ತ್ರೈರವಾರಯತ್।।

ದುರಾಧರ್ಷ ದುರ್ಯೋಧನನು ಸಂಕ್ರುದ್ಧನಾಗಿ ಸ್ವಲ್ಪವೂ ಗಾಬರಿಗೊಳ್ಳದಿದ್ದ ಪಾಂಡವರೆಲ್ಲರನ್ನೂ, ಪಾರ್ಷತ ಧೃಷ್ಟದ್ಯುಮ್ನ, ಶಿಖಂಡಿ, ದ್ರೌಪದೇಯರು, ಪಾಂಚಾಲಗಣಗಳು, ಕೇಕಯ-ಸೋಮಕ-ಪಾಂಚಾಲರನ್ನೂ ನಿಶಿತ ಅಸ್ತ್ರಗಳಿಂದ ಮುಸುಕಿದನು.

09020035a ಅತಿಷ್ಠದಾಹವೇ ಯತ್ತಃ ಪುತ್ರಸ್ತವ ಮಹಾಬಲಃ।
09020035c ಯಥಾ ಯಜ್ಞೇ ಮಹಾನಗ್ನಿರ್ಮಂತ್ರಪೂತಃ ಪ್ರಕಾಶಯನ್।।

ಮಂತ್ರಗಳಿಂದ ಪೂತನಾದ ಮಹಾ ಅಗ್ನಿಯು ಯಜ್ಞದಲ್ಲಿ ಹೇಗೋ ಹಾಗೆ ರಣದಲ್ಲಿ ನಿನ್ನ ಮಹಾಬಲ ಪುತ್ರನು ಪ್ರಕಾಶಿಸುತ್ತಾ ನಿಂತಿದ್ದನು.

09020036a ತಂ ಪರೇ ನಾಭ್ಯವರ್ತಂತ ಮರ್ತ್ಯಾ ಮೃತ್ಯುಮಿವಾಹವೇ।
09020036c ಅಥಾನ್ಯಂ ರಥಮಾಸ್ಥಾಯ ಹಾರ್ದಿಕ್ಯಃ ಸಮಪದ್ಯತ।।

ಮರ್ತ್ಯರು ಮೃತ್ಯುವನ್ನು ಹೇಗೋ ಹಾಗೆ ಶತ್ರುಗಳು ರಣದಲ್ಲಿ ಅವನನ್ನು ಮೀರಿ ಹೋಗಲಿಕ್ಕಾಗಲಿಲ್ಲ. ಆಗ ಹಾರ್ದಿಕ್ಯ ಕೃತವರ್ಮನು ಇನ್ನೊಂದು ರಥವನ್ನೇರಿ ಅಲ್ಲಿ ಸೇರಿಕೊಂಡನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಸಾತ್ಯಕಿಕೃತವರ್ಮಯುದ್ಧೇ ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಸಾತ್ಯಕಿಕೃತವರ್ಮಯುದ್ಧ ಎನ್ನುವ ಇಪ್ಪತ್ತನೇ ಅಧ್ಯಾಯವು.