ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 16
ಸಾರ
ಶಲ್ಯನ ಪರಾಕ್ರಮ (1-34). ಯುಧಿಷ್ಠಿರನಿಂದ ಶಲ್ಯನ ವಧೆ (35-57). ಯುಧಿಷ್ಠಿರನಿಂದ ಶಲ್ಯನ ಸಹೋದರನ ವಧೆ (58-65). ಸಾತ್ಯಕಿ-ಕೃತವರ್ಮರ ಯುದ್ಧ (66-76). ಸಂಕುಲ ಯುದ್ಧ(77-87).
09016001 ಸಂಜಯ ಉವಾಚ 09016001a ಅಥಾನ್ಯದ್ಧನುರಾದಾಯ ಬಲವದ್ವೇಗವತ್ತರಂ।
09016001c ಯುಧಿಷ್ಠಿರಂ ಮದ್ರಪತಿರ್ವಿದ್ಧ್ವಾ ಸಿಂಹ ಇವಾನದತ್।।
ಸಂಜಯನು ಹೇಳಿದನು: “ಕೂಡಲೇ ಇನ್ನೊಂದು ಬಲವತ್ತರ-ವೇಗವತ್ತರ ಧನುಸ್ಸನ್ನು ಎತ್ತಿಕೊಂಡು ಮದ್ರಪತಿಯು ಯುಧಿಷ್ಠಿರನನ್ನು ಗಾಯಗೊಳಿಸಿ ಸಿಂಹದಂತೆ ಗರ್ಜಿಸಿದನು.
09016002a ತತಃ ಸ ಶರವರ್ಷೇಣ ಪರ್ಜನ್ಯ ಇವ ವೃಷ್ಟಿಮಾನ್।
09016002c ಅಭ್ಯವರ್ಷದಮೇಯಾತ್ಮಾ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ।।
ಆಗ ಮಳೆಸುರಿಸುವ ಪರ್ಜನ್ಯನಂತೆ ಆ ಅಮೇಯಾತ್ಮ ಕ್ಷತ್ರಿಯರ್ಷಭ ಶಲ್ಯನು ಪಾಂಡವ ಕ್ಷತ್ರಿಯರ ಮೇಲೆ ಶರವರ್ಷಗಳನ್ನು ಸುರಿಸಿದನು.
09016003a ಸಾತ್ಯಕಿಂ ದಶಭಿರ್ವಿದ್ಧ್ವಾ ಭೀಮಸೇನಂ ತ್ರಿಭಿಃ ಶರೈಃ।
09016003c ಸಹದೇವಂ ತ್ರಿಭಿರ್ವಿದ್ಧ್ವಾ ಯುಧಿಷ್ಠಿರಮಪೀಡಯತ್।।
ಸಾತ್ಯಕಿಯನ್ನು ಹತ್ತು ಬಾಣಗಳಿಂದ, ಭೀಮಸೇನನನ್ನು ಮೂರರಿಂದ ಮತ್ತು ಸಹದೇವನನ್ನು ಮೂರರಿಂದ ಹೊಡೆದು ಯುಧಿಷ್ಠಿರನನ್ನು ಪೀಡಿಸಿದನು.
09016004a ತಾಂಸ್ತಾನನ್ಯಾನ್ಮಹೇಷ್ವಾಸಾನ್ಸಾಶ್ವಾನ್ಸರಥಕುಂಜರಾನ್।
09016004c ಕುಂಜರಾನ್ಕುಂಜರಾರೋಹಾನಶ್ವಾನಶ್ವಪ್ರಯಾಯಿನಃ।।
09016004e ರಥಾಂಶ್ಚ ರಥಿಭಿಃ ಸಾರ್ಧಂ ಜಘಾನ ರಥಿನಾಂ ವರಃ।।
ಆ ರಥಿಗಳಲ್ಲಿ ಶ್ರೇಷ್ಠನು ರಥ-ಕುಂಜರಗಳೊಂದಿಗೆ ಅನ್ಯ ಮಹೇಷ್ವಾಸರನ್ನೂ, ಆನೆಸವಾರರೊಂದಿಗೆ ಆನೆಗಳನ್ನು, ಸವಾರರೊಂದಿಗೆ ಕುದುರೆಗಳನ್ನು, ಮತ್ತು ರಥಿಗಳನ್ನು ರಥಗಳೊಂದಿಗೆ ಸಂಹರಿಸಿದನು.
09016005a ಬಾಹೂಂಶ್ಚಿಚ್ಚೇದ ಚ ತಥಾ ಸಾಯುಧಾನ್ಕೇತನಾನಿ ಚ।
09016005c ಚಕಾರ ಚ ಮಹೀಂ ಯೋಧೈಸ್ತೀರ್ಣಾಂ ವೇದೀಂ ಕುಶೈರಿವ।।
ಬಾಹುಗಳನ್ನು ಕತ್ತರಿಸಿದನು ಮತ್ತು ಹಾಗೆಯೇ ಆಯುಧಗಳನ್ನೂ ಧ್ವಜಗಳನ್ನು ತುಂಡರಿಸಿ ದರ್ಬೆಗಳನ್ನು ಹಾಸಿದ ಯಜ್ಞವೇದಿಕೆಯಂತೆ ರಣಭೂಮಿಯನ್ನು ಯೋಧರ ಮೃತಶರೀರಗಳಿಂದ ತುಂಬಿದನು.
09016006a ತಥಾ ತಮರಿಸೈನ್ಯಾನಿ ಘ್ನಂತಂ ಮೃತ್ಯುಮಿವಾಂತಕಂ।
09016006c ಪರಿವವ್ರುರ್ಭೃಶಂ ಕ್ರುದ್ಧಾಃ ಪಾಂಡುಪಾಂಚಾಲಸೋಮಕಾಃ।।
ಅಂತಕ ಮೃತ್ಯುವಿನಂತೆ ಹಾಗೆ ಶತ್ರುಸೇನೆಗಳನ್ನು ನಾಶಪಡಿಸುತ್ತಿದ್ದ ಅವನನ್ನು ಅತೀವ ಕ್ರುದ್ಧರಾದ ಪಾಂಡವ-ಪಾಂಚಾಲ-ಸೋಮಕರು ಸುತ್ತುವರೆದರು.
09016007a ತಂ ಭೀಮಸೇನಶ್ಚ ಶಿನೇಶ್ಚ ನಪ್ತಾ ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ।
09016007c ಸಮಾಗತಂ ಭೀಮಬಲೇನ ರಾಜ್ಞಾ ಪರ್ಯಾಪುರನ್ಯೋನ್ಯಮಥಾಹ್ವಯಂತಃ।।
ಭೀಮಸೇನ, ಶಿನಿಯ ಮೊಮ್ಮಗ ಸಾತ್ಯಕಿ, ಮಾದ್ರೀಪುತ್ರ ಪುರುಷಪ್ರವೀರರು, ಭೀಮಬಲದಿಂದೊಡಗೂಡಿ ಯುಧಿಷ್ಠಿರನೊಡನೆ ಯುದ್ಧಮಾಡುತ್ತಿದ್ದ ಶಲ್ಯನನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆಹ್ವಾನಿಸುತ್ತಿದ್ದರು.
09016008a ತತಸ್ತು ಶೂರಾಃ ಸಮರೇ ನರೇಂದ್ರಂ ಮದ್ರೇಶ್ವರಂ ಪ್ರಾಪ್ಯ ಯುಧಾಂ ವರಿಷ್ಠಂ।
09016008c ಆವಾರ್ಯ ಚೈನಂ ಸಮರೇ ನೃವೀರಾ ಜಘ್ನುಃ ಶರೈಃ ಪತ್ರಿಭಿರುಗ್ರವೇಗೈಃ।।
ನರೇಂದ್ರ! ಆಗ ಸಮರದಲ್ಲಿ ಆ ಶೂರ ನರವೀರರು ಯೋಧವರಿಷ್ಠ ಮದ್ರೇಶ್ವರನ ಸಮೀಪಕ್ಕೆ ಹೋಗಿ ತಡೆದು, ಉಗ್ರವೇಗದ ಪತ್ರಿ ಶರಗಳಿಂದ ಗಾಯಗೊಳಿಸಿದರು.
09016009a ಸಂರಕ್ಷಿತೋ ಭೀಮಸೇನೇನ ರಾಜಾ ಮಾದ್ರೀಸುತಾಭ್ಯಾಮಥ ಮಾಧವೇನ।
09016009c ಮದ್ರಾಧಿಪಂ ಪತ್ರಿಭಿರುಗ್ರವೇಗೈಃ ಸ್ತನಾಂತರೇ ಧರ್ಮಸುತೋ ನಿಜಘ್ನೇ।।
ಭೀಮಸೇನ, ಮಾದ್ರೀಸುತರು ಮತ್ತು ಮಾಧವ ಸಾತ್ಯಕಿಯಿಂದ ಸಂರಕ್ಷಿತನಾಗಿದ್ದ ರಾಜಾ ಧರ್ಮಸುತನು ಉಗ್ರವೇಗದ ಪತ್ರಿಗಳಿಂದ ಮದ್ರಾಧಿಪನ ವಕ್ಷಸ್ಥಳಕ್ಕೆ ಪ್ರಹರಿಸಿದನು.
09016010a ತತೋ ರಣೇ ತಾವಕಾನಾಂ ರಥೌಘಾಃ ಸಮೀಕ್ಷ್ಯ ಮದ್ರಾಧಿಪತಿಂ ಶರಾರ್ತಂ।
09016010c ಪರ್ಯಾವವ್ರುಃ ಪ್ರವರಾಃ ಸರ್ವಶಶ್ಚ ದುರ್ಯೋಧನಸ್ಯಾನುಮತೇ ಸಮಂತಾತ್।।
ರಣದಲ್ಲಿದ್ದ ಮದ್ರಾಧಿಪತಿಯು ಶರಗಳಿಂದ ಪೀಡಿತನಾಗಿದ್ದುದನ್ನು ಕಂಡು ನಿನ್ನವರ ಪ್ರಮುಖ ರಥಗುಂಪುಗಳು ಎಲ್ಲವೂ ದುರ್ಯೋಧನನ ಅನುಮತಿಯಂತೆ ಶಲ್ಯನನ್ನು ಸುತ್ತುವರೆದು ಬಂದವು.
09016011a ತತೋ ದ್ರುತಂ ಮದ್ರಜನಾಧಿಪೋ ರಣೇ ಯುಧಿಷ್ಠಿರಂ ಸಪ್ತಭಿರಭ್ಯವಿಧ್ಯತ್।
09016011c ತಂ ಚಾಪಿ ಪಾರ್ಥೋ ನವಭಿಃ ಪೃಷತ್ಕೈರ್ ವಿವ್ಯಾಧ ರಾಜಂಸ್ತುಮುಲೇ ಮಹಾತ್ಮಾ।।
ಆಗ ರಣದಲ್ಲಿ ಮದ್ರಾಧಿಪನು ಬೇಗನೇ ಏಳು ಬಾಣಗಳಿಂದ ಯುಧಿಷ್ಠಿರನನ್ನು ಹೊಡೆದನು. ರಾಜನ್! ಆ ತುಮುಲ ಯುದ್ಧದಲ್ಲಿ ಪಾರ್ಥನೂ ಕೂಡ ಅವನನ್ನು ಒಂಭತ್ತು ಪೃಷತಗಳಿಂದ ಹೊಡೆದನು.
09016012a ಆಕರ್ಣಪೂರ್ಣಾಯತಸಂಪ್ರಯುಕ್ತೈಃ ಶರೈಸ್ತದಾ ಸಮ್ಯತಿ ತೈಲಧೌತೈಃ।
09016012c ಅನ್ಯೋನ್ಯಮಾಚ್ಚಾದಯತಾಂ ಮಹಾರಥೌ ಮದ್ರಾಧಿಪಶ್ಚಾಪಿ ಯುಧಿಷ್ಠಿರಶ್ಚ।।
ಮಹಾರಥ ಮದ್ರಾಧಿಪ ಯುಧಿಷ್ಠಿರರಿಬ್ಬರೂ ಎಣ್ಣೆಯಿಂದ ಹದಮಾಡಲ್ಪಟ್ಟ ಬಾಣಗಳನ್ನು ಕಿವಿಯ ತುದಿಯವರೆಗೂ ಸೆಳೆದು ಬಿಟ್ಟು ಅನ್ಯೋನ್ಯರನ್ನು ಮುಚ್ಚಿಬಿಟ್ಟರು.
09016013a ತತಸ್ತು ತೂರ್ಣಂ ಸಮರೇ ಮಹಾರಥೌ ಪರಸ್ಪರಸ್ಯಾಂತರಮೀಕ್ಷಮಾಣೌ।
09016013c ಶರೈರ್ಭೃಶಂ ವಿವ್ಯಧತುರ್ನೃಪೋತ್ತಮೌ ಮಹಾಬಲೌ ಶತ್ರುಭಿರಪ್ರಧೃಷ್ಯೌ।।
ಆಗ ಸಮರದಲ್ಲಿ ಪರಸ್ಪರರ ದುರ್ಬಲತೆಯನ್ನು ಹುಡುಕುತ್ತಿದ್ದ, ಶತ್ರುಗಳಿಂದ ಎದುರಿಸಲು ಅಸಾಧ್ಯರಾಗಿದ್ದ, ಮಹಾರಥ ಮಹಾಬಲ ನೃಪೋತ್ತಮರಿಬ್ಬರೂ ಬೇಗ ಬೇಗನೇ ಶರಗಳಿಂದ ಪರಸ್ಪರರನ್ನು ಹೊಡೆಯುತ್ತಿದ್ದರು.
09016014a ತಯೋರ್ಧನುರ್ಜ್ಯಾತಲನಿಸ್ವನೋ ಮಹಾನ್ ಮಹೇಂದ್ರವಜ್ರಾಶನಿತುಲ್ಯನಿಸ್ವನಃ।
09016014c ಪರಸ್ಪರಂ ಬಾಣಗಣೈರ್ಮಹಾತ್ಮನೋಃ ಪ್ರವರ್ಷತೋರ್ಮದ್ರಪಪಾಂಡುವೀರಯೋಃ।।
ಪರಸ್ಪರರ ಮೇಲೆ ಬಾಣಗಣಗಳನ್ನು ಸುರಿಸುತ್ತಿದ್ದ ಆ ಪಾಂಡವ-ಮದ್ರ ವೀರರ ಧನುಸ್ಸಿನ ಶಿಂಜನಿಯ ಟೇಂಕಾರ ಶಬ್ಧವು ಮಹೇಂದ್ರನ ವಜ್ರಾಯುಧದ ಗರ್ಜನೆಗೆ ಸಮನಾಗಿದ್ದಿತು.
09016015a ತೌ ಚೇರತುರ್ವ್ಯಾಘ್ರಶಿಶುಪ್ರಕಾಶೌ ಮಹಾವನೇಷ್ವಾಮಿಷಗೃದ್ಧಿನಾವಿವ।
09016015c ವಿಷಾಣಿನೌ ನಾಗವರಾವಿವೋಭೌ ತತಕ್ಷತುಃ ಸಮ್ಯುಗಜಾತದರ್ಪೌ।।
ಮಹಾವನದಲ್ಲಿ ಮಾಂಸದ ತುಂಡಿಗಾಗಿ ಪರಚಾಡುವ ಹುಲಿಯ ಮರಿಗಳಂತಿದ್ದ ಮತ್ತು ದಂತಗಳುಳ್ಳ ಸಲಗಶ್ರೇಷ್ಠರಂತೆ ದರ್ಪಿತರಾಗಿದ್ದ ಅವರಿಬ್ಬರೂ ಪರಸ್ಪರರನ್ನು ಗಾಯಗೊಳಿಸಿದರು.
09016016a ತತಸ್ತು ಮದ್ರಾಧಿಪತಿರ್ಮಹಾತ್ಮಾ ಯುಧಿಷ್ಠಿರಂ ಭೀಮಬಲಂ ಪ್ರಸಹ್ಯ।
09016016c ವಿವ್ಯಾಧ ವೀರಂ ಹೃದಯೇಽತಿವೇಗಂ ಶರೇಣ ಸೂರ್ಯಾಗ್ನಿಸಮಪ್ರಭೇಣ।।
ಆಗ ಮಹಾತ್ಮ ಮದ್ರಾಧಿಪತಿಯು ಸೂರ್ಯಾಗ್ನಿತೇಜಸ್ಸಿಗೆ ಸಮಾನ ತೇಜಸ್ಸುಳ್ಳ ಅತಿವೇಗದ ಶರವನ್ನು, ಭಯಂಕರ ಬಲವನ್ನುಪಯೋಗಿಸಿ, ವೀರ ಯುಧಿಷ್ಠಿರನ ಎದೆಗೆ ಪ್ರಹರಿಸಿದನು.
09016017a ತತೋಽತಿವಿದ್ಧೋಽಥ ಯುಧಿಷ್ಠಿರೋಽಪಿ ಸುಸಂಪ್ರಯುಕ್ತೇನ ಶರೇಣ ರಾಜನ್।
09016017c ಜಘಾನ ಮದ್ರಾಧಿಪತಿಂ ಮಹಾತ್ಮಾ ಮುದಂ ಚ ಲೇಭೇ ಋಷಭಃ ಕುರೂಣಾಂ।।
ರಾಜನ್! ಅತಿಯಾಗಿ ಗಾಯಗೊಂಡ ಮಹಾತ್ಮಾ ಕುರುಋಷಭ ಯುಧಿಷ್ಠಿರನಾದರೋ ಚೆನ್ನಾಗಿ ಹೂಡಿದ ಬಾಣದಿಂದ ಮದ್ರಾಧಿಪತಿಯನ್ನು ಹೊಡೆದು ಮತ್ತು ಅವನು ಮೂರ್ಛಿತನಾದುದನ್ನು ಕಂಡು ಆನಂದಿಸಿದನು.
09016018a ತತೋ ಮುಹೂರ್ತಾದಿವ ಪಾರ್ಥಿವೇಂದ್ರೋ ಲಬ್ಧ್ವಾ ಸಂಜ್ಞಾಂ ಕ್ರೋಧಸಂರಕ್ತನೇತ್ರಃ।
09016018c ಶತೇನ ಪಾರ್ಥಂ ತ್ವರಿತೋ ಜಘಾನ ಸಹಸ್ರನೇತ್ರಪ್ರತಿಮಪ್ರಭಾವಃ।।
ಸಹಸ್ರನೇತ್ರನಂತೆ ಅಪ್ರತಿಮ ಪ್ರಭಾವವುಳ್ಳ ಪಾರ್ಥಿವೇಂದ್ರ ಶಲ್ಯನು ಮುಹೂರ್ತಕಾಲದಲ್ಲಿಯೇ ಸಂಜ್ಞೆಯನ್ನು ಪಡೆದು ಕ್ರೋಧದಿಂದ ಕೆಂಗಣ್ಣನಾಗಿ ತ್ವರೆಮಾಡಿ ನೂರು ಬಾಣಗಳಿಂದ ಪಾರ್ಥನನ್ನು ಪ್ರಹರಿಸಿದನು.
09016019a ತ್ವರಂಸ್ತತೋ ಧರ್ಮಸುತೋ ಮಹಾತ್ಮಾ ಶಲ್ಯಸ್ಯ ಕ್ರುದ್ಧೋ ನವಭಿಃ ಪೃಷತ್ಕೈಃ।
09016019c ಭಿತ್ತ್ವಾ ಹ್ಯುರಸ್ತಪನೀಯಂ ಚ ವರ್ಮ ಜಘಾನ ಷಡ್ಭಿಸ್ತ್ವಪರೈಃ ಪೃಷತ್ಕೈಃ।।
ಆಗ ತ್ವರೆಮಾಡಿ ಮಹಾತ್ಮ ಕ್ರುದ್ಧ ಧರ್ಮಸುತನು ಒಂಭತ್ತು ಬಾಣಗಳಿಂದ ಶಲ್ಯನ ಸುವರ್ಣಮಯ ಕವಚವನ್ನು ಭೇದಿಸಿ ಪುನಃ ಆರು ಪೃಷತಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.
09016020a ತತಸ್ತು ಮದ್ರಾಧಿಪತಿಃ ಪ್ರಹೃಷ್ಟೋ ಧನುರ್ವಿಕೃಷ್ಯ ವ್ಯಸೃಜತ್ ಪೃಷತ್ಕಾನ್।
09016020c ದ್ವಾಭ್ಯಾಂ ಕ್ಷುರಾಭ್ಯಾಂ ಚ ತಥೈವ ರಾಜ್ಞಶ್ ಚಿಚ್ಚೇದ ಚಾಪಂ ಕುರುಪುಂಗವಸ್ಯ।।
ಆಗ ಪ್ರಹೃಷ್ಟ ಮದ್ರಾಧಿಪತಿಯು ಧನುಸ್ಸನ್ನು ಸೆಳೆದು ಪೃಷತಗಳನ್ನೂ ಎರಡು ಕ್ಷುರಗಳನ್ನು ಪ್ರಯೋಗಿಸಿ ರಾಜನನ್ನು ಹೊಡೆದು ಕುರುಪುಂಗವನ ಧನುಸ್ಸನ್ನು ತುಂಡರಿಸಿದನು.
09016021a ನವಂ ತತೋಽನ್ಯತ್ಸಮರೇ ಪ್ರಗೃಹ್ಯ ರಾಜಾ ಧನುರ್ಘೋರತರಂ ಮಹಾತ್ಮಾ।
09016021c ಶಲ್ಯಂ ತು ವಿದ್ಧ್ವಾ ನಿಶಿತೈಃ ಸಮಂತಾದ್ ಯಥಾ ಮಹೇಂದ್ರೋ ನಮುಚಿಂ ಶಿತಾಗ್ರೈಃ।।
ಆಗ ಮಹಾತ್ಮ ರಾಜನು ಸಮರದಲ್ಲಿ ಘೋರತರ ಅನ್ಯ ಧನುಸ್ಸನ್ನು ತೆಗೆದುಕೊಂಡು ನಿಶಿತ ಶರಗಳಿಂದ ಮಹೇಂದ್ರನು ಶಿತಾಗ್ರಗಳಿಂದ ನಮುಚಿಯನ್ನು ಹೇಗೋ ಹಾಗೆ ಎಲ್ಲ ಕಡೆಗಳಲ್ಲಿ ಪ್ರಹರಿಸಿದನು.
09016022a ತತಸ್ತು ಶಲ್ಯೋ ನವಭಿಃ ಪೃಷತ್ಕೈರ್ ಭೀಮಸ್ಯ ರಾಜ್ಞಶ್ಚ ಯುಧಿಷ್ಠಿರಸ್ಯ।
09016022c ನಿಕೃತ್ಯ ರೌಕ್ಮೇ ಪಟುವರ್ಮಣೀ ತಯೋರ್ ವಿದಾರಯಾಮಾಸ ಭುಜೌ ಮಹಾತ್ಮಾ।।
ಆಗ ಮಹಾತ್ಮಾ ಶಲ್ಯನು ಒಂಭತ್ತು ಪೃಷತಗಳಿಂದ ಭೀಮಸೇನ ಮತ್ತು ರಾಜಾ ಯುಧಿಷ್ಠಿರರ ಸುವರ್ಣಮಯ ಸುದೃಢ ಕವಚಗಳನ್ನು ಕತ್ತರಿಸಿ ಅವರಿಬ್ಬರ ಭುಜಗಳನ್ನು ಸೀಳಿದನು.
09016023a ತತೋಽಪರೇಣ ಜ್ವಲಿತಾರ್ಕತೇಜಸಾ ಕ್ಷುರೇಣ ರಾಜ್ಞೋ ಧನುರುನ್ಮಮಾಥ।
09016023c ಕೃಪಶ್ಚ ತಸ್ಯೈವ ಜಘಾನ ಸೂತಂ ಷಡ್ಭಿಃ ಶರೈಃ ಸೋಽಭಿಮುಖಂ ಪಪಾತ।।
ಅನಂತರ ಇನ್ನೊಂದು ಅಗ್ನಿ ಮತ್ತು ಸೂರ್ಯರ ತೇಜಸ್ಸಿನಿಂದ ಬೆಳಗುತ್ತಿದ್ದ ಕ್ಷುರದಿಂದ ರಾಜ ಯುಧಿಷ್ಠಿರನ ಧನುಸ್ಸನ್ನು ಧ್ವಂಸಗೊಳಿಸಿದನು. ಎದುರಿಗಿದ್ದ ಕೃಪನೂ ಕೂಡ ಆರು ಶರಗಳಿಂದ ಯುಧಿಷ್ಠಿರನ ಸಾರಥಿಯನ್ನು ಕೆಳಗುರುಳಿಸಿದನು.
09016024a ಮದ್ರಾಧಿಪಶ್ಚಾಪಿ ಯುಧಿಷ್ಠಿರಸ್ಯ ಶರೈಶ್ಚತುರ್ಭಿರ್ನಿಜಘಾನ ವಾಹಾನ್।
09016024c ವಾಹಾಂಶ್ಚ ಹತ್ವಾ ವ್ಯಕರೋನ್ ಮಹಾತ್ಮಾ ಯೋಧಕ್ಷಯಂ ಧರ್ಮಸುತಸ್ಯ ರಾಜ್ಞಃ।।
ಮದ್ರಾಧಿಪತಿಯೂ ಕೂಡ ಶರಗಳಿಂದ ಯುಧಿಷ್ಠಿರನ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಕುದುರೆಗಳನ್ನು ಸಂಹರಿಸಿ ಮಹಾತ್ಮ ರಾಜನು ಧರ್ಮಸುತನ ಯೋಧರನ್ನು ನಾಶಗೊಳಿಸಿದನು.
09016025a ತಥಾ ಕೃತೇ ರಾಜನಿ ಭೀಮಸೇನೋ ಮದ್ರಾಧಿಪಸ್ಯಾಶು ತತೋ ಮಹಾತ್ಮಾ।
09016025c ಚಿತ್ತ್ವಾ ಧನುರ್ವೇಗವತಾ ಶರೇಣ ದ್ವಾಭ್ಯಾಮವಿಧ್ಯತ್ ಸುಭೃಶಂ ನರೇಂದ್ರಂ।।
ಮದ್ರಾಧಿಪನು ರಾಜನನ್ನು ಈ ಅವಸ್ಥೆಗೊಳಪಡಿಸಿದುದನ್ನು ನೋಡಿದ ಮಹಾತ್ಮ ಭೀಮಸೇನನು ವೇಗವತ ಶರದಿಂದ ಅವನ ಧನುಸ್ಸನ್ನು ತುಂಡರಿಸಿ, ಇನ್ನೆರಡು ಶರಗಳಿಂದ ನರೇಂದ್ರನನ್ನು ಬಹಳವಾಗಿ ಗಾಯಗೊಳಿಸಿದನು.
09016026a ಅಥಾಪರೇಣಾಸ್ಯ ಜಹಾರ ಯಂತುಃ ಕಾಯಾಚ್ಚಿರಃ ಸಂನಹನೀಯಮಧ್ಯಾತ್।
09016026c ಜಘಾನ ಚಾಶ್ವಾಂಶ್ಚತುರಃ ಸ ಶೀಘ್ರಂ ತಥಾ ಭೃಶಂ ಕುಪಿತೋ ಭೀಮಸೇನಃ।।
ತುಂಬಾ ಕುಪಿತನಾಗಿದ್ದ ಭೀಮಸೇನನು ಹಾಗೆಯೇ ಶೀಘ್ರವಾಗಿ ಇನ್ನೊಂದು ಶರದಿಂದ ಸಾರಥಿಯ ಶಿರವನ್ನು ಶರೀರದಿಂದ ಬೇರ್ಪಡಿಸಿ, ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು.
09016027a ತಮಗ್ರಣೀಃ ಸರ್ವಧನುರ್ಧರಾಣಾಂ ಏಕಂ ಚರಂತಂ ಸಮರೇಽತಿವೇಗಂ।
09016027c ಭೀಮಃ ಶತೇನ ವ್ಯಕಿರಚ್ಚರಾಣಾಂ ಮಾದ್ರೀಪುತ್ರಃ ಸಹದೇವಸ್ತಥೈವ।।
ಸಮರದಲ್ಲಿ ಅತಿವೇಗದಿಂದ ಸಂಚರಿಸುತ್ತಿದ್ದ ಆ ಸರ್ವಧನುರ್ಧರರಲ್ಲಿ ಅಗ್ರಣಿ ಶಲ್ಯನ ಮೇಲೆ ಭೀಮ ಮತ್ತು ಮಾದ್ರೀಪುತ್ರ ಸಹದೇವರು ನೂರು ಬಾಣಗಳನ್ನು ಎರಚಿದರು.
09016028a ತೈಃ ಸಾಯಕೈರ್ಮೋಹಿತಂ ವೀಕ್ಷ್ಯ ಶಲ್ಯಂ ಭೀಮಃ ಶರೈರಸ್ಯ ಚಕರ್ತ ವರ್ಮ।
09016028c ಸ ಭೀಮಸೇನೇನ ನಿಕೃತ್ತವರ್ಮಾ ಮದ್ರಾಧಿಪಶ್ಚರ್ಮ ಸಹಸ್ರತಾರಂ।।
09016029a ಪ್ರಗೃಹ್ಯ ಖಡ್ಗಂ ಚ ರಥಾನ್ಮಹಾತ್ಮಾ ಪ್ರಸ್ಕಂದ್ಯ ಕುಂತೀಸುತಮಭ್ಯಧಾವತ್।
ಆ ಸಾಯಕಗಳಿಂದ ಶಲ್ಯನು ಮೂರ್ಛಿತನಾದುದನ್ನು ಕಂಡು ಭೀಮನು ಶರಗಳಿಂದ ಅವನ ಕವಚವನ್ನು ತುಂಡರಿಸಿದನು. ಭೀಮಸೇನನು ಕವಚಗಳನ್ನು ಕತ್ತರಿಸಲು ಮದ್ರಾಧಿಪನು ಸಹಸ್ರತಾರೆಗಳ ಚಿತ್ರವುಳ್ಳ ಗುರಾಣಿ-ಖಡ್ಗಗಳನ್ನು ಹಿಡಿದು ರಥದಿಂದ ಧುಮಿಕಿ ಕುಂತೀಸುತನೆಡೆಗೆ ಧಾವಿಸಿದನು.
09016029c ಚಿತ್ತ್ವಾ ರಥೇಷಾಂ ನಕುಲಸ್ಯ ಸೋಽಥ ಯುಧಿಷ್ಠಿರಂ ಭೀಮಬಲೋಽಭ್ಯಧಾವತ್।।
09016030a ತಂ ಚಾಪಿ ರಾಜಾನಮಥೋತ್ಪತಂತಂ ಕ್ರುದ್ಧಂ ಯಥೈವಾಂತಕಮಾಪತಂತಂ।
09016030c ಧೃಷ್ಟದ್ಯುಮ್ನೋ ದ್ರೌಪದೇಯಾಃ ಶಿಖಂಡೀ ಶಿನೇಶ್ಚ ನಪ್ತಾ ಸಹಸಾ ಪರೀಯುಃ।।
ನಕುಲನ ರಥದ ಈಷಾದಂಡವನ್ನು ತುಂಡರಿಸಿ ಆ ಭೀಮಬಲನು ಯುಧಿಷ್ಠಿರನನನ್ನು ಆಕ್ರಮಣಿಸಿದನು. ಹಾಗೆ ಕ್ರುದ್ಧ ಅಂತಕನಂತೆ ಮೇಲೆ ಬೀಳುತ್ತಿದ್ದ ರಾಜನನ್ನು ಧೃಷ್ಟದ್ಯುಮ್ನ, ದ್ರೌಪದೇಯರು, ಶಿಖಂಡೀ, ಮತ್ತು ಶೈನೇಯರು ಕೂಡಲೇ ಸುತ್ತುವರೆದರು.
09016031a ಅಥಾಸ್ಯ ಚರ್ಮಾಪ್ರತಿಮಂ ನ್ಯಕೃಂತದ್ ಭೀಮೋ ಮಹಾತ್ಮಾ ದಶಭಿಃ ಪೃಷತ್ಕಃ।
09016031c ಖಡ್ಗಂ ಚ ಭಲ್ಲೈರ್ನಿಚಕರ್ತ ಮುಷ್ಟೌ ನದನ್ಪ್ರಹೃಷ್ಟಸ್ತವ ಸೈನ್ಯಮಧ್ಯೇ।।
ಕೂಡಲೇ ಮಹಾತ್ಮ ಭೀಮನು ಹತ್ತು ಪೃಷತಗಳಿಂದ ಅವನ ಅಪ್ರತಿಮ ಗುರಾಣಿಯನ್ನು ಪುಡಿಮಾಡಿ, ಭಲ್ಲದಿಂದ ಮುಷ್ಟಿಪ್ರದೇಶದಲ್ಲಿ ಅವನ ಖಡ್ಗವನ್ನೂ ಕತ್ತರಿಸಿ ನಿನ್ನ ಸೇನಾಮಧ್ಯದಲ್ಲಿ ಪ್ರಹೃಷ್ಟನಾಗಿ ಗರ್ಜಿಸಿದನು.
09016032a ತತ್ಕರ್ಮ ಭೀಮಸ್ಯ ಸಮೀಕ್ಷ್ಯ ಹೃಷ್ಟಾಸ್ ತೇ ಪಾಂಡವಾನಾಂ ಪ್ರವರಾ ರಥೌಘಾಃ।
09016032c ನಾದಂ ಚ ಚಕ್ರುರ್ಭೃಶಮುತಯಂತಃ ಶಂಖಾಂಶ್ಚ ದಧ್ಮುಃ ಶಶಿಸಂನಿಕಾಶಾನ್।।
ಭೀಮನ ಆ ಕರ್ಮವನ್ನು ನೋಡಿ ಪಾಂಡವರ ಕಡೆಯ ಪ್ರಮುಖ ರಥಸೇನೆಗಳು ಉತ್ಸಾಹದಿಂದ ಜೋರಾಗಿ ಸಿಂಹನಾದಗೈದು ಚಂದ್ರಪ್ರಭೆಯ ಶಂಖಗಳನ್ನು ಊದಿದರು.
09016033a ತೇನಾಥ ಶಬ್ದೇನ ವಿಭೀಷಣೇನ ತವಾಭಿತಪ್ತಂ ಬಲಮಪ್ರಹೃಷ್ಟಂ।
09016033c ಸ್ವೇದಾಭಿಭೂತಂ ರುಧಿರೋಕ್ಷಿತಾಂಗಂ ವಿಸಂಜ್ಞಕಲ್ಪಂ ಚ ತಥಾ ವಿಷಣ್ಣಂ।।
ರಕ್ತದಿಂದ ತೋಯ್ದುಹೋಗಿದ್ದ ನಿನ್ನ ಸೇನೆಯು ಆ ವಿಭೀಷಣ ಶಬ್ಧದಿಂದ ತಪಿಸಿ ದುಃಖಗೊಂಡು ವಿಷಣ್ಣರಾಗಿ ದಿಕ್ಕುಗಾಣದೇ ಸ್ತಬ್ಧವಾಗಿ ನಿಂತುಬಿಟ್ಟಿತು.
09016034a ಸ ಮದ್ರರಾಜಃ ಸಹಸಾವಕೀರ್ಣೋ ಭೀಮಾಗ್ರಗೈಃ ಪಾಂಡವಯೋಧಮುಖ್ಯೈಃ।
09016034c ಯುಧಿಷ್ಠಿರಸ್ಯಾಭಿಮುಖಂ ಜವೇನ ಸಿಂಹೋ ಯಥಾ ಮೃಗಹೇತೋಃ ಪ್ರಯಾತಃ।।
ಪಾಂಡವ ಯೋಧಮುಖ್ಯ ಭೀಮಸೇನನೇ ಮೊದಲಾದವರ ಶರಗಳಿಂದ ಪೀಡಿತ ಮದ್ರರಾಜನು ಜಿಂಕೆಯ ಸಲುವಾಗಿ ಸಿಂಹವು ಹೇಗೋ ಹಾಗೆ ವೇಗದಿಂದ ಯುಧಿಷ್ಠಿರನ ಬಳಿಗೆ ಓಡಿದನು.
09016035a ಸ ಧರ್ಮರಾಜೋ ನಿಹತಾಶ್ವಸೂತಂ ಕ್ರೋಧೇನ ದೀಪ್ತಜ್ವಲನಪ್ರಕಾಶಂ।
09016035c ದೃಷ್ಟ್ವಾ ತು ಮದ್ರಾಧಿಪತಿಂ ಸ ತೂರ್ಣಂ ಸಮಭ್ಯಧಾವತ್ತಮರಿಂ ಬಲೇನ।।
ಕುದುರೆ-ಸಾರಥಿಯರನ್ನು ಕಳೆದುಕೊಂಡು ಕ್ರೋಧದಿಂದ ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಧರ್ಮರಾಜನು ಮದ್ರಾಧಿಪತಿಯನ್ನು ನೋಡಿ ಬೇಗನೆ ಬಲವನ್ನುಪಯೋಗಿಸಿ ಶತ್ರುವನ್ನು ಆಕ್ರಮಣಿಸಿದನು.
09016036a ಗೋವಿಂದವಾಕ್ಯಂ ತ್ವರಿತಂ ವಿಚಿಂತ್ಯ ದಧ್ರೇ ಮತಿಂ ಶಲ್ಯವಿನಾಶನಾಯ।
09016036c ಸ ಧರ್ಮರಾಜೋ ನಿಹತಾಶ್ವಸೂತೇ ರಥೇ ತಿಷ್ಠನ್ ಶಕ್ತಿಮೇವಾಭಿಕಾಂಕ್ಷನ್।।
ಕೂಡಲೇ ಗೋವಿಂದನ ಮಾತನ್ನು ನೆನಪಿಸಿಕೊಂಡ ಅವನು ಶಲ್ಯನ ವಿನಾಶಕ್ಕೆ ಮನಸ್ಸುಮಾಡಿದನು. ಕುದುರೆ-ಸಾರಥಿಗಳನ್ನು ಕಳೆದುಕೊಂಡಿದ್ದ ಆ ಧರ್ಮರಾಜನು ರಥದಲ್ಲಿ ನಿಂತು ಶಕ್ತಿಯನ್ನೇ ಬಯಸಿದನು.
09016037a ತಚ್ಚಾಪಿ ಶಲ್ಯಸ್ಯ ನಿಶಮ್ಯ ಕರ್ಮ ಮಹಾತ್ಮನೋ ಭಾಗಮಥಾವಶಿಷ್ಟಂ।
09016037c ಸ್ಮೃತ್ವಾ ಮನಃ ಶಲ್ಯವಧೇ ಯತಾತ್ಮಾ ಯಥೋಕ್ತಮಿಂದ್ರಾವರಜಸ್ಯ ಚಕ್ರೇ।।
ಶಲ್ಯನ ಕರ್ಮಗಳನ್ನು ವೀಕ್ಷಿಸಿ, ತನ್ನ ಭಾಗವೊಂದು ಉಳಿದುಕೊಂಡಿದೆಯೆಂದು ನೆನಪಿಸಿಕೊಂಡು, ಶಲ್ಯವಧೆಗೆ ಪ್ರಯತ್ನಿಸಿ, ಇಂದ್ರಾವರಜ ಕೃಷ್ಣನು ಹೇಳಿದಂತೆಯೇ ಮಾಡಿದನು.
09016038a ಸ ಧರ್ಮರಾಜೋ ಮಣಿಹೇಮದಂಡಾಂ ಜಗ್ರಾಹ ಶಕ್ತಿಂ ಕನಕಪ್ರಕಾಶಾಂ।
09016038c ನೇತ್ರೇ ಚ ದೀಪ್ತೇ ಸಹಸಾ ವಿವೃತ್ಯ ಮದ್ರಾಧಿಪಂ ಕ್ರುದ್ಧಮನಾ ನಿರೈಕ್ಷತ್।।
ಆ ಧರ್ಮರಾಜನು ಮಣಿಹೇಮದಂಡವುಳ್ಳ ಕನಕಪ್ರಕಾಶಿತ ಶಕ್ತಿಯನ್ನು ಹಿಡಿದು, ಉರಿಯುತ್ತಿದ್ದ ಕಣ್ಣುಗಳನ್ನು ಅರಳಿಸಿಕೊಂಡು, ಕ್ರುದ್ಧಮನಸ್ಕನಾಗಿ ಮದ್ರಾಧಿಪನನ್ನು ದಿಟ್ಟಿಸಿ ನೋಡಿದನು.
09016039a ನಿರೀಕ್ಷಿತೋ ವೈ ನರದೇವ ರಾಜ್ಞಾ ಪೂತಾತ್ಮನಾ ನಿರ್ಹೃತಕಲ್ಮಷೇಣ।
09016039c ಅಭೂನ್ನ ಯದ್ಭಸ್ಮಸಾನ್ಮದ್ರರಾಜಃ ತದದ್ಭುತಂ ಮೇ ಪ್ರತಿಭಾತಿ ರಾಜನ್।।
ನರದೇವ! ರಾಜನ್! ಆ ಪೂತಾತ್ಮ ಕಲ್ಮಷಗಳೇ ಇಲ್ಲದ ಪರಿಶುದ್ಧ ರಾಜನು ದುರುಗುಟ್ಟಿ ನೋಡಿದರೂ ಮದ್ರರಾಜನು ಭಸ್ಮೀಭೂತನಾಗಲಿಲ್ಲ! ಅದೊಂದು ನನಗೆ ಅದ್ಭುತವಾಗಿಯೇ ತೋರುತ್ತಿತ್ತು.
09016040a ತತಸ್ತು ಶಕ್ತಿಂ ರುಚಿರೋಗ್ರದಂಡಾಂ ಮಣಿಪ್ರವಾಲೋಜ್ಜ್ವಲಿತಾಂ ಪ್ರದೀಪ್ತಾಂ।
09016040c ಚಿಕ್ಷೇಪ ವೇಗಾತ್ ಸುಭೃಶಂ ಮಹಾತ್ಮಾ ಮದ್ರಾಧಿಪಾಯ ಪ್ರವರಃ ಕುರೂಣಾಂ।।
ಆಗ ಕುರುಗಳ ಪ್ರಮುಖ ಮಹಾತ್ಮ ಯುಧಿಷ್ಠಿರನು ಆ ಸುಂದರ, ಉಗ್ರದಂಡವುಳ್ಳ, ಮಣಿರತ್ನಗಳಿಂದ ಪ್ರಜ್ವಲಿಸುತ್ತಿದ್ದ ಶಕ್ತ್ಯಾಯುಧವನ್ನು ಅತಿವೇಗದಿಂದ ಮದ್ರಾಧಿಪನ ಮೇಲೆ ಪ್ರಹರಿಸಿದನು.
09016041a ದೀಪ್ತಾಮಥೈನಾಂ ಮಹತಾ ಬಲೇನ ಸವಿಸ್ಫುಲಿಗಾಂಗಂ ಸಹಸಾ ಪತಂತೀಂ।
09016041c ಪ್ರೈಕ್ಷಂತ ಸರ್ವೇ ಕುರವಃ ಸಮೇತಾ ಯಥಾ ಯುಗಾಂತೇ ಮಹತೀಮಿವೋಲ್ಕಾಂ।।
ಮಹಾಬಲದಿಂದ ಪ್ರಯೋಗಿಸಲ್ಪಟ್ಟು ವೇಗವಾಗಿ ಬೀಳುತ್ತಿದ್ದ, ಕಿಡಿಗಳನ್ನು ಕಾರುತ್ತಾ ಉರಿಯುತ್ತಿದ್ದ, ಯುಗಾಂತದಲ್ಲಿ ಕಾಣುವ ಮಹಾ ಉಲ್ಕೆಯಂತೆ ತೋರುತ್ತಿದ್ದ ಆ ಶಕ್ತಿಯನ್ನು ಸರ್ವಕುರುಗಳೂ ನೋಡಿದರು.
09016042a ತಾಂ ಕಾಲರಾತ್ರೀಮಿವ ಪಾಶಹಸ್ತಾಂ ಯಮಸ್ಯ ಧಾತ್ರೀಮಿವ ಚೋಗ್ರರೂಪಾಂ।
09016042c ಸಬ್ರಹ್ಮದಂಡಪ್ರತಿಮಾಮಮೋಘಾಂ ಸಸರ್ಜ ಯತ್ತೋ ಯುಧಿ ಧರ್ಮರಾಜಃ।।
ಕಾಲರಾತ್ರಿಯಂತಿದ್ದ, ಯಮನ ಕೈಯಲ್ಲಿರುವ ಪಾಶದಂತಿದ್ದ, ಧಾತ್ರಿಯಂತೆ ಉಗ್ರರೂಪದ, ಬ್ರಹ್ಮದಂಡದಂತೆ ಅಪ್ರತಿಮ ಅಮೋಘವಾಗಿದ್ದ ಆ ಶಕ್ತಿಯನ್ನು ಯುದ್ಧದಲ್ಲಿ ಧರ್ಮರಾಜನು ಪ್ರಯತ್ನಿಸಿ ಪ್ರಯೋಗಿಸಿದನು.
09016043a ಗಂಧಸ್ರಗಗ್ರ್ಯಾಸನಪಾನಭೋಜನೈರ್ ಅಭ್ಯರ್ಚಿತಾಂ ಪಾಂಡುಸುತೈಃ ಪ್ರಯತ್ನಾತ್।
09016043c ಸಂವರ್ತಕಾಗ್ನಿಪ್ರತಿಮಾಂ ಜ್ವಲಂತೀಂ ಕೃತ್ಯಾಮಥರ್ವಾಂಗಿರಸೀಮಿವೋಗ್ರಾಂ।।
09016044a ಈಶಾನಹೇತೋಃ ಪ್ರತಿನಿರ್ಮಿತಾಂ ತಾಂ ತ್ವಷ್ಟ್ರಾ ರಿಪೂಣಾಮಸುದೇಹಭಕ್ಷಾಂ।
09016044c ಭೂಮ್ಯಂತರಿಕ್ಷಾದಿಜಲಾಶಯಾನಿ ಪ್ರಸಹ್ಯ ಭೂತಾನಿ ನಿಹಂತುಮೀಶಾಂ।।
09016045a ಘಂಟಾಪತಾಕಾಮಣಿವಜ್ರಭಾಜಂ ವೈಡೂರ್ಯಚಿತ್ರಾಂ ತಪನೀಯದಂಡಾಂ।
09016045c ತ್ವಷ್ಟ್ರಾ ಪ್ರಯತ್ನಾನ್ನಿಯಮೇನ ಕ್ಷ್ಲಾಂತಂ ಬ್ರಹ್ಮದ್ವಿಷಾಮಂತಕರೀಮಮೋಘಾಂ।।
09016046a ಬಲಪ್ರಯತ್ನಾದಧಿರೂಢವೇಗಾಂ ಮಂತ್ರೈಶ್ಚ ಘೋರೈರಭಿಮಂತ್ರಯಿತ್ವಾ।
09016046c ಸಸರ್ಜ ಮಾರ್ಗೇಣ ಚ ತಾಂ ಪರೇಣ ವಧಾಯ ಮದ್ರಾಧಿಪತೇಸ್ತದಾನೀಂ।।
ಪಾಂಡುಸುತನಿಂದ ಗಂಧ-ಮಾಲೆ-ಅಗ್ರಾಸನ-ಪಾನ-ಭೋಜನಗಳಿಂದ ಪ್ರಯತ್ನಪೂರ್ವಕವಾಗಿ ಪೂಜಿಸಲ್ಪಡುತ್ತಿದ್ದ, ಪ್ರಳಯಕಾಲದ ಅಗ್ನಿಗೆ ಸಮನಾಗಿ ಪ್ರಜ್ವಲಿಸುತ್ತಿದ್ದ, ಅಥರ್ವಾಂಗಿರಸ ಮಂತ್ರಗಳಿಂದ ಅಭಿಮಂತ್ರಿತ ಕೃತ್ಯೆಯಂತೆ ಉಗ್ರವಾಗಿದ್ದ, ಈಶಾನನ ಸಲುವಾಗಿ ಶತ್ರುಗಳ ಪ್ರಾಣ-ದೇಹಗಳನ್ನು ಭಕ್ಷಿಸಲು ತ್ವಷ್ಟನಿಂದ ನಿರ್ಮಿಸಲ್ಪಟ್ಟಿದ್ದ, ಭೂಮಿ-ಅಂತರಿಕ್ಷ-ಜಲಾಶಯಾದಿಗಳಲ್ಲಿದ್ದರೂ ಪ್ರಾಣಿಗಳನ್ನು ಸೆಳೆದು ಕೊಲ್ಲಬಹುದಾಗಿದ್ದ, ಘಂಟೆ-ಪತಾಕೆ-ಮಣಿ-ವಜ್ರಗಳಿಂದ ಬೆಳಗುತ್ತಿದ್ದ, ವೈಡೂರ್ಯ ಚಿತ್ರಿತ ಹೇಮದಂಡವಿದ್ದ, ತ್ವಷ್ಟನು ಪ್ರಯತ್ನಪೂರ್ವಕವಾಗಿ ಮತ್ತು ನಿಯಮಬದ್ಧವಾಗಿ ರಚಿಸಿದ್ದ, ಬ್ರಹ್ಮದ್ವೇಷಿಗಳನ್ನು ವಿನಾಶಗೊಳಿಸುವ, ಆ ಅಮೋಘ ಶಕ್ತಿಯನ್ನು ಯುಧಿಷ್ಠಿರನು ಬಲ-ಪ್ರಯತ್ನ ಮತ್ತು ಘೋರ ಮಂತ್ರಗಳಿಂದ ಅಭಿಮಂತ್ರಿಸಿ ಶತ್ರು ಮದ್ರಾಧಿಪತಿಯ ವಧೆಗಾಗಿ ಮಾರ್ಗದಲ್ಲಿ ಅತಿವೇಗವಾಗಿ ಹೋಗುವಂತೆ ಪ್ರಯೋಗಿಸಿದನು.
09016047a ಹತೋಽಸ್ಯಸಾವಿತ್ಯಭಿಗರ್ಜಮಾನೋ ರುದ್ರೋಽಮ್ತಕಾಯಾಂತಕರಂ ಯಥೇಷುಂ।
09016047c ಪ್ರಸಾರ್ಯ ಬಾಹುಂ ಸುದೃಢಂ ಸುಪಾಣಿಂ ಕ್ರೋಧೇನ ನೃತ್ಯನ್ನಿವ ಧರ್ಮರಾಜಃ।।
ರುದ್ರನು ಅಂತಕನನ್ನು ಸಂಹರಿಸಲು ಹೇಗೆ ಬಾಣಪ್ರಯೋಗ ಮಾಡಿದ್ದನೋ ಹಾಗೆ ಕ್ರೋಧದಿಂದ ನರ್ತಿಸುತ್ತಿರುವನೋ ಎಂಬಂತೆ ಧರ್ಮರಾಜನು ತನ್ನ ಸುಂದರ ಸುದೃಢ ಕೈ-ಬಾಹುಗಳನ್ನು ಚಾಚಿ “ಇವನನ್ನು ಕೊಲ್ಲು!” ಎಂದು ಗರ್ಜಿಸುತ್ತಾ ಆ ಶಕ್ತಿಯನ್ನು ಪ್ರಯೋಗಿಸಿದನು.
09016048a ತಾಂ ಸರ್ವಶಕ್ತ್ಯಾ ಪ್ರಹಿತಾಂ ಸ ಶಕ್ತಿಂ ಯುಧಿಷ್ಠಿರೇಣಾಪ್ರತಿವಾರ್ಯವೀರ್ಯಾಂ।
09016048c ಪ್ರತಿಗ್ರಹಾಯಾಭಿನನರ್ದ ಶಲ್ಯಃ ಸಮ್ಯಗ್ ಹುತಾಮಗ್ನಿರಿವಾಜ್ಯಧಾರಾಂ।।
ಸರ್ವಶಕ್ತಿಯನ್ನುಪಯೋಗಿಸಿ ವೀರ ಯುಧಿಷ್ಠಿರನು ಪ್ರಯೋಗಿಸಿದ, ತಡೆಯಲಸಾಧ್ಯ ಆ ಶಕ್ತಿಯನ್ನು ಶಲ್ಯನು ಆಜ್ಯಧಾರೆಯನ್ನು ಸ್ವೀಕರಿಸುವಾಗ ಅಗ್ನಿಯು ಚಟಪಟ ಶಬ್ಧಮಾಡುವಂತೆ ಸ್ವೀಕರಿಸಿ ಗರ್ಜಿಸಿದನು.
09016049a ಸಾ ತಸ್ಯ ಮರ್ಮಾಣಿ ವಿದಾರ್ಯ ಶುಭ್ರಂ ಉರೋ ವಿಶಾಲಂ ಚ ತಥೈವ ವರ್ಮ।
09016049c ವಿವೇಶ ಗಾಂ ತೋಯಮಿವಾಪ್ರಸಕ್ತಾ ಯಶೋ ವಿಶಾಲಂ ನೃಪತೇರ್ದಹಂತೀ।।
ಆ ಶಕ್ತಿಯು ಶಲ್ಯನ ಮರ್ಮಸ್ಥಳಗಳನ್ನು ಸೀಳಿ, ಶುಭ್ರ-ವಿಶಾಲ ಕವಚ-ವಕ್ಷಸ್ಥಲಗಳನ್ನು ಭೇದಿಸಿ, ಸರ್ವತ್ರ ವ್ಯಾಪಿ ನೃಪತಿಯ ಕೀರ್ತಿಯನ್ನು ದಹಿಸುತ್ತಾ, ತಡೆಯಿಲ್ಲದೇ ನೀರನ್ನು ಪ್ರವೇಶಿಸುವಂತೆ ಭೂಮಿಯನ್ನು ಹೊಕ್ಕಿತು.
09016050a ನಾಸಾಕ್ಷಿಕರ್ಣಾಸ್ಯವಿನಿಹ್ಸೃತೇನ ಪ್ರಸ್ಯಂದತಾ ಚ ವ್ರಣಸಂಭವೇನ।
09016050c ಸಂಸಿಕ್ತಗಾತ್ರೋ ರುಧಿರೇಣ ಸೋಽಭೂತ್ ಕ್ರೌಂಚೋ ಯಥಾ ಸ್ಕಂದಹತೋ ಮಹಾದ್ರಿಃ।।
ಮೂಗು-ಕಣ್ಣು-ಕಿವಿ-ಮುಖಗಳಿಂದ ಮತ್ತು ಗಾಯಗಳಿಂದ ಪಸರಿಸುವ ರಕ್ತದಿಂದ ತೋಯ್ದುಹೋಗಿದ್ದ ಶಲ್ಯನ ಶರೀರವು ಸ್ಕಂದನಿಂದ ಪ್ರಹರಿಸಲ್ಪಟ್ಟ ಮಹಾದ್ರಿ ಕ್ರೌಂಚದಂತೆ ತೋರಿತು.
09016051a ಪ್ರಸಾರ್ಯ ಬಾಹೂ ಸ ರಥಾದ್ಗತೋ ಗಾಂ ಸಂಚಿನ್ನವರ್ಮಾ ಕುರುನಂದನೇನ।
09016051c ಮಹೇಂದ್ರವಾಹಪ್ರತಿಮೋ ಮಹಾತ್ಮಾ ವಜ್ರಾಹತಂ ಶೃಂಗಮಿವಾಚಲಸ್ಯ।।
ಕುರುನಂದನನು ಕವಚವನ್ನು ತುಂಡರಿಸಿದ್ದ ಮಹಾತ್ಮ ಶಲ್ಯನು ಮಹೇಂದ್ರನು ಪ್ರಯೋಗಿಸಿದ ಅಪ್ರತಿಮ ವಜ್ರದಿಂದ ಹತಗೊಂಡ ಪರ್ವತ ಶಿಖರದಂತೆ ಬಾಹುಗಳನ್ನು ಚಾಚಿ ರಥದಿಂದ ಭೂಮಿಯ ಮೇಲೆ ಬಿದ್ದನು.
09016052a ಬಾಹೂ ಪ್ರಸಾರ್ಯಾಭಿಮುಖೋ ಧರ್ಮರಾಜಸ್ಯ ಮದ್ರರಾಟ್।
09016052c ತತೋ ನಿಪತಿತೋ ಭೂಮಾವಿಂದ್ರಧ್ವಜ ಇವೋಚ್ಚ್ರಿತಃ।।
ಮದ್ರರಾಜನು ಬಾಹುಗಳನ್ನು ಚಾಚಿ ಎತ್ತರ ಇಂದ್ರಧ್ವಜವು ಬೀಳುವಂತೆ ಧರ್ಮರಾಜನ ಅಭಿಮುಖನಾಗಿಯೇ ಭೂಮಿಯ ಮೇಲೆ ಬಿದ್ದನು.
09016053a ಸ ತಥಾ ಭಿನ್ನಸರ್ವಾಂಗೋ ರುಧಿರೇಣ ಸಮುಕ್ಷಿತಃ।
09016053c ಪ್ರತ್ಯುದ್ಗತ ಇವ ಪ್ರೇಮ್ಣಾ ಭೂಮ್ಯಾ ಸ ನರಪುಂಗವಃ।।
09016054a ಪ್ರಿಯಯಾ ಕಾಂತಯಾ ಕಾಂತಃ ಪತಮಾನ ಇವೋರಸಿ।
ಸರ್ವಾಂಗಗಳಲ್ಲಿ ಗಾಯಗೊಂಡು ರಕ್ತದಿಂದ ತೋಯ್ದುಹೋಗಿದ್ದ ಆ ನರಪುಂಗವನು ಬೀಳಲು ಭೂಮಿಯು ಪ್ರೇಮದಿಂದ ಪ್ರಿಯ ಕಾಂತನು ಎದೆಯ ಮೇಲೆ ಬೀಳುವಾಗ ತಬ್ಬಿಕೊಳ್ಳುವಂತೆ ಅವನನ್ನು ಸ್ವೀಕರಿಸಿದಳು.
09016054c ಚಿರಂ ಭುಕ್ತ್ವಾ ವಸುಮತೀಂ ಪ್ರಿಯಾಂ ಕಾಂತಾಮಿವ ಪ್ರಭುಃ।
09016054e ಸರ್ವೈರಂಗೈಃ ಸಮಾಶ್ಲಿಷ್ಯ ಪ್ರಸುಪ್ತ ಇವ ಸೋಽಭವತ್।।
ಪ್ರಿಯಕಾಂತೆಯಂತಿದ್ದ ವಸುಮತಿಯನ್ನು ಬಹುಕಾಲ ಭೋಗಿಸಿ ಅವಳನ್ನು ಸರ್ವಾಂಗಗಳಿಂದ ಆಲಿಂಗನಮಾಡಿಕೊಂಡು ಮಲಗಿರುವನೋ ಎನ್ನುವಂತೆ ಪ್ರಭು ಶಲ್ಯನು ತೋರುತ್ತಿದ್ದನು.
09016055a ಧರ್ಮ್ಯೇ ಧರ್ಮಾತ್ಮನಾ ಯುದ್ಧೇ ನಿಹತೋ ಧರ್ಮಸೂನುನಾ।
09016055c ಸಮ್ಯಗ್ ಹುತ ಇವ ಸ್ವಿಷ್ಟಃ ಪ್ರಶಾಂತೋಽಗ್ನಿರಿವಾಧ್ವರೇ।।
ಧರ್ಮಯುದ್ಧದಲ್ಲಿ ಧರ್ಮಾತ್ಮಾ ಧರ್ಮಸೂನುವಿನಿಂದ ಹತನಾದ ಶಲ್ಯನು ಯಜ್ಞದಲ್ಲಿ ವಿಧಿಪೂರ್ವಕ ಆಜ್ಯಾಹುತಿಯನ್ನು ಪಡೆದು ಪೂಜಾದಿಗಳಿಂದ ಆರಾಧಿಸಲ್ಪಟ್ಟು ಪ್ರಶಾಂತನಾಗುವ ಅಗ್ನಿಯಂತೆ ಶಾಂತನಾದನು.
09016056a ಶಕ್ತ್ಯಾ ವಿಭಿನ್ನಹೃದಯಂ ವಿಪ್ರವಿದ್ಧಾಯುಧಧ್ವಜಂ।
09016056c ಸಂಶಾಂತಮಪಿ ಮದ್ರೇಶಂ ಲಕ್ಷ್ಮೀರ್ನೈವ ವ್ಯಮುಂಚತ।।
ಶಕ್ತಿಯಿಂದ ಹೃದಯವು ಒಡೆದುಹೋಗಿದ್ದ, ಆಯುಧ-ಧ್ವಜಗಳು ವಿನಾಶಗೊಂಡು ಸುಶಾಂತನಾಗಿದ್ದ ಮದ್ರೇಶನನ್ನು ಲಕ್ಷ್ಮಿಯು ಬಿಟ್ಟು ಹೋಗಿರಲಿಲ್ಲ.
09016057a ತತೋ ಯುಧಿಷ್ಠಿರಶ್ಚಾಪಮಾದಾಯೇಂದ್ರಧನುಷ್ಪ್ರಭಂ।
09016057c ವ್ಯಧಮದ್ದ್ವಿಷತಃ ಸಂಖ್ಯೇ ಖಗರಾಡಿವ ಪನ್ನಗಾನ್।
ಅನಂತರ ಯುಧಿಷ್ಠಿರನು ಪ್ರಭೆಯುಳ್ಳ ಧನುಸ್ಸನ್ನೆತ್ತಿಕೊಂಡು ಪಕ್ಷಿರಾಜ ಗರುಡನು ಸರ್ಪಗಳನ್ನು ಹೇಗೋ ಹಾಗೆ ಯುದ್ಧದಲ್ಲಿ ಶತ್ರುಗಳನ್ನು ನಾಶಪಡಿಸಿದನು.
09016057e ದೇಹಾಸೂನ್ನಿಶಿತೈರ್ಭಲ್ಲೈ ರಿಪೂಣಾಂ ನಾಶಯನ್ ಕ್ಷಣಾತ್।।
09016058a ತತಃ ಪಾರ್ಥಸ್ಯ ಬಾಣೌಘೈರಾವೃತಾಃ ಸೈನಿಕಾಸ್ತವ।
09016058c ನಿಮೀಲಿತಾಕ್ಷಾಃ ಕ್ಷಿಣ್ವಂತೋ ಭೃಶಮನ್ಯೋನ್ಯಮರ್ದಿತಾಃ।
09016058e ಸಂನ್ಯಸ್ತಕವಚಾ ದೇಹೈರ್ವಿಪತ್ರಾಯುಧಜೀವಿತಾಃ।।
ನಿಶಿತ ಭಲ್ಲಗಳಿಂದ ಶತ್ರುಗಳ ಶರೀರಗಳನ್ನು ಕ್ಷಣದಲ್ಲಿ ನಾಶಗೊಳಿಸಿದನು. ಪಾರ್ಥನ ಬಾಣಸಮೂಹಗಳಿಂದ ಆಚ್ಛಾದಿತ ನಿನ್ನ ಸೈನಿಕರು ಕಣ್ಣುಗಳನ್ನು ಮುಚ್ಚಿಕೊಂಡರು. ಪರಸ್ಪರರ ಸಂಘರ್ಷದಿಂದ ಬಹಳವಾಗಿ ಗಾಯಗೊಂಡರು. ಕವಚಗಳು ಕಳಚಿಕೊಂಡಂತೆ ಶರೀರ-ಆಯುಧ-ಜೀವಗಳನ್ನು ತೊರೆದರು.
09016059a ತತಃ ಶಲ್ಯೇ ನಿಪತಿತೇ ಮದ್ರರಾಜಾನುಜೋ ಯುವಾ।
09016059c ಭ್ರಾತುಃ ಸರ್ವೈರ್ಗುಣೈಸ್ತುಲ್ಯೋ ರಥೀ ಪಾಂಡವಮಭ್ಯಯಾತ್।।
ಶಲ್ಯನು ಬೀಳಲು ಎಲ್ಲಗುಣಗಳಲ್ಲಿಯೂ ಅಣ್ಣನ ಸಮನಾಗಿದ್ದ ಮದ್ರರಾಜನ ಯುವ ಸಹೋದರ ರಥಿಯು ಪಾಂಡವನನ್ನು ಆಕ್ರಮಣಿಸಿದನು.
09016060a ವಿವ್ಯಾಧ ಚ ನರಶ್ರೇಷ್ಠೋ ನಾರಾಚೈರ್ಬಹುಭಿಸ್ತ್ವರನ್।
09016060c ಹತಸ್ಯಾಪಚಿತಿಂ ಭ್ರಾತುಶ್ಚಿಕೀರ್ಷುರ್ಯುದ್ಧದುರ್ಮದಃ।।
ಆ ನರಶ್ರೇಷ್ಠ ಯುದ್ಧದುರ್ಮದನು ಅನೇಕ ನಾರಾಚಗಳಿಂದ ಯುಧಿಷ್ಠಿರನನ್ನು ಗಾಯಗೊಳಿಸಿದನು.
09016061a ತಂ ವಿವ್ಯಾಧಾಶುಗೈಃ ಷಡ್ಭಿರ್ಧರ್ಮರಾಜಸ್ತ್ವರನ್ನಿವ।
09016061c ಕಾರ್ಮುಕಂ ಚಾಸ್ಯ ಚಿಚ್ಚೇದ ಕ್ಷುರಾಭ್ಯಾಂ ಧ್ವಜಮೇವ ಚ।।
ಧರ್ಮರಾಜನು ತ್ವರೆಮಾಡಿ ಅವನನ್ನು ಆರು ಆಶುಗಗಳಿಂದ ಹೊಡೆದನು ಮತ್ತು ಎರಡು ಕ್ಷುರಗಳಿಂದ ಅವನ ಧನುಸ್ಸು-ಧ್ವಜಗಳನ್ನು ತುಂಡರಿಸಿದನು.
09016062a ತತೋಽಸ್ಯ ದೀಪ್ಯಮಾನೇನ ಸುದೃಢೇನ ಶಿತೇನ ಚ।
09016062c ಪ್ರಮುಖೇ ವರ್ತಮಾನಸ್ಯ ಭಲ್ಲೇನಾಪಾಹರಚ್ಚಿರಃ।।
ಅನಂತರ ಬೆಳಗುತ್ತಿದ್ದ ಸುದೃಢ ನಿಶಿತ ಭಲ್ಲದಿಂದ ಪ್ರಮುಖದಲ್ಲಿದ್ದ ಶಲ್ಯಾನುಜನ ಶಿರವನ್ನು ಅಪಹರಿಸಿದನು.
09016063a ಸಕುಂಡಲಂ ತದ್ದದೃಶೇ ಪತಮಾನಂ ಶಿರೋ ರಥಾತ್।
09016063c ಪುಣ್ಯಕ್ಷಯಮಿವ ಪ್ರಾಪ್ಯ ಪತಂತಂ ಸ್ವರ್ಗವಾಸಿನಂ।।
ಕುಂಡಲ ಸಹಿತ ರಥದಿಂದ ಕೆಳಗೆ ಬೀಳುತ್ತಿದ್ದ ಆ ಶಿರವು ಪುಣ್ಯಕಳೆದು ಕೆಳಕ್ಕೆ ಬೀಳುವ ಸ್ವರ್ಗವಾಸಿಯಂತೆ ತೋರುತ್ತಿತ್ತು.
09016064a ತಸ್ಯಾಪಕೃಷ್ಟಶೀರ್ಷಂ ತಚ್ಚರೀರಂ ಪತಿತಂ ರಥಾತ್।
09016064c ರುಧಿರೇಣಾವಸಿಕ್ತಾಂಗಂ ದೃಷ್ಟ್ವಾ ಸೈನ್ಯಮಭಜ್ಯತ।।
ಶಿರಸ್ಸಿನಿಂದ ಬೇರ್ಪಟ್ಟಿದ್ದ ಅವನ ಶರೀರವೂ ಕೂಡ ರಥದಿಂದ ಕೆಳಗೆ ಬಿದ್ದಿತು. ರಕ್ತದಿಂದ ತೋಯ್ದುಹೋಗಿದ್ದ ಅವನ ಶರೀರವನ್ನು ನೋಡಿ ಸೈನ್ಯವು ಭಗ್ನವಾಗಿ ಹೋಯಿತು.
09016065a ವಿಚಿತ್ರಕವಚೇ ತಸ್ಮಿನ್ ಹತೇ ಮದ್ರನೃಪಾನುಜೇ।
09016065c ಹಾಹಾಕಾರಂ ವಿಕುರ್ವಾಣಾಃ ಕುರವೋ ವಿಪ್ರದುದ್ರುವುಃ।।
ವಿಚಿತ್ರಕವಚಿ ಆ ಮದ್ರನೃಪನ ಅನುಜನು ಹತನಾಗಲು ಸೇನೆಯು ಹಾಹಾಕಾರಮಾಡುತ್ತಾ ಪಲಾಯನಮಾಡಿತು.
09016066a ಶಲ್ಯಾನುಜಂ ಹತಂ ದೃಷ್ಟ್ವಾ ತಾವಕಾಸ್ತ್ಯಕ್ತಜೀವಿತಾಃ।
09016066c ವಿತ್ರೇಸುಃ ಪಾಂಡವಭಯಾದ್ರಜೋಧ್ವಸ್ತಾಸ್ತಥಾ ಭೃಶಂ।।
ಶಲ್ಯಾನುಜನು ಹತನಾದುದನ್ನು ಕಂಡು ಜೀವವನ್ನೇ ಮುಡುಪಾಗಿಟ್ಟಿದ್ದ ನಿನ್ನವರು ಪಾಂಡವರ ಭಯದಿಂದ ಗಾಬರಿಗೊಂಡರು.
09016067a ತಾಂಸ್ತಥಾ ಭಜ್ಯತಸ್ತ್ರಸ್ತಾನ್ಕೌರವಾನ್ಭರತರ್ಷಭ।
09016067c ಶಿನೇರ್ನಪ್ತಾ ಕಿರನ್ಬಾಣೈರಭ್ಯವರ್ತತ ಸಾತ್ಯಕಿಃ।।
ಭರತರ್ಷಭ! ಭಯಗೊಂಡಿದ್ದ ಕೌರವರ ಮೇಲೆ ಶಿನಿಯ ಮೊಮ್ಮಗ ಸಾತ್ಯಕಿಯು ಬಾಣಗಳನ್ನು ಎರಚುತ್ತಾ ಹಿಂಬಾಲಿಸಿದನು.
09016068a ತಮಾಯಾಂತಂ ಮಹೇಷ್ವಾಸಮಪ್ರಸಹ್ಯಂ ದುರಾಸದಂ।
09016068c ಹಾರ್ದಿಕ್ಯಸ್ತ್ವರಿತೋ ರಾಜನ್ಪ್ರತ್ಯಗೃಹ್ಣಾದಭೀತವತ್।।
ಹಾಗೆ ಹಿಂಬಾಲಿಸಿ ಬರುತ್ತಿದ್ದ ಆ ಮಹೇಷ್ವಾಸ-ದುರಾಸದ-ಸಹಿಸಲಸಾಧ್ಯ ಸಾತ್ಯಕಿಯನ್ನು ಹಾರ್ದಿಕ್ಯ ಕೃತವರ್ಮನು ತ್ವರೆಮಾಡಿ ಸ್ವಲ್ಪವೂ ಭಯವಿಲ್ಲದವನಂತೆ ಎದುರಿಸಿದನು.
09016069a ತೌ ಸಮೇತೌ ಮಹಾತ್ಮಾನೌ ವಾರ್ಷ್ಣೇಯಾವಪರಾಜಿತೌ।
09016069c ಹಾರ್ದಿಕ್ಯಃ ಸಾತ್ಯಕಿಶ್ಚೈವ ಸಿಂಹಾವಿವ ಮದೋತ್ಕಟೌ।।
ಆ ಇಬ್ಬರು ಮಹಾತ್ಮ-ಅಪರಾಜಿತ-ವಾರ್ಷ್ಣೇಯ ಹಾರ್ದಿಕ್ಯ-ಸಾತ್ಯಕಿಯರು ಮದೋತ್ಕಟ ಸಿಂಹಗಳಂತೆ ಸಂಘರ್ಷಿಸಿದರು.
09016070a ಇಷುಭಿರ್ವಿಮಲಾಭಾಸೈಶ್ಚಾದಯಂತೌ ಪರಸ್ಪರಂ।
09016070c ಅರ್ಚಿರ್ಭಿರಿವ ಸೂರ್ಯಸ್ಯ ದಿವಾಕರಸಮಪ್ರಭೌ।।
ದಿವಾಕರನ ಸಮಪ್ರಭೆಯುಳ್ಳ ಅವರಿಬ್ಬರೂ ಸೂರ್ಯಕಿರಣಗಳಂತೆ ವಿಮಲವಾಗಿ ಹೊಳೆಯುತ್ತಿರುವ ಬಾಣಗಳಿಂದ ಪರಸ್ಪರರನ್ನು ಮುಸುಕಿದರು.
09016071a ಚಾಪಮಾರ್ಗಬಲೋದ್ಧೂತಾನ್ಮಾರ್ಗಣಾನ್ ವೃಷ್ಣಿಸಿಂಹಯೋಃ।
09016071c ಆಕಾಶೇ ಸಮಪಶ್ಯಾಮ ಪತಂಗಾನಿವ ಶೀಘ್ರಗಾನ್।।
ವೃಷ್ಣಿಸಿಂಹರ ಚಾಪಮಾರ್ಗದಿಂದ ಬಲವಾಗಿ ಹೊರಟ ಮಾರ್ಗಣಗಳು ಆಕಾಶದಲ್ಲಿ ಪತಂಗಗಳಂತೆ ಶೀಘ್ರವಾಗಿ ಹೋಗುತ್ತಿರುವುದನ್ನು ನಾವು ಕಂಡೆವು.
09016072a ಸಾತ್ಯಕಿಂ ದಶಭಿರ್ವಿದ್ಧ್ವಾ ಹಯಾಂಶ್ಚಾಸ್ಯ ತ್ರಿಭಿಃ ಶರೈಃ।
09016072c ಚಾಪಮೇಕೇನ ಚಿಚ್ಚೇದ ಹಾರ್ದಿಕ್ಯೋ ನತಪರ್ವಣಾ।।
ಹಾರ್ದಿಕ್ಯನು ಹತ್ತು ಬಾಣಗಳಿಂದ ಸಾತ್ಯಕಿಯನ್ನು ಮತ್ತು ಮೂರು ಶರಗಳಿಂದ ಅವನ ಕುದುರೆಗಳ ಪ್ರಹರಿಸಿ ಒಂದು ನತಪರ್ವಶರದಿಂದ ಅವನ ಧನುಸ್ಸನ್ನು ತುಂಡರಿಸಿದನು.
09016073a ತನ್ನಿಕೃತ್ತಂ ಧನುಃ ಶ್ರೇಷ್ಠಮಪಾಸ್ಯ ಶಿನಿಪುಂಗವಃ।
09016073c ಅನ್ಯದಾದತ್ತ ವೇಗೇನ ವೇಗವತ್ತರಮಾಯುಧಂ।।
ತುಂಡಾದ ಆ ಶ್ರೇಷ್ಠ ಧನುಸ್ಸನ್ನು ಎಸೆದು ಶಿನಿಪುಂಗವನು ವೇಗದಿಂದ ವೇಗವತ್ತರವಾದ ಇನ್ನೊಂದು ಆಯುಧವನ್ನು ಎತ್ತಿಕೊಂಡನು.
09016074a ತದಾದಾಯ ಧನುಃ ಶ್ರೇಷ್ಠಂ ವರಿಷ್ಠಃ ಸರ್ವಧನ್ವಿನಾಂ।
09016074c ಹಾರ್ದಿಕ್ಯಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ।।
ಸರ್ವಧನ್ವಿಗಳಲ್ಲಿ ವರಿಷ್ಠ ಸಾತ್ಯಕಿಯು ಆ ಶ್ರೇಷ್ಠ ಧನುಸ್ಸನ್ನೆತ್ತಿಕೊಂಡು ಹತ್ತು ಬಾಣಗಳಿಂದ ಹಾರ್ದಿಕ್ಯನ ಎದೆಗೆ ಹೊಡೆದನು.
09016075a ತತೋ ರಥಂ ಯುಗೇಷಾಂ ಚ ಚಿತ್ತ್ವಾ ಭಲ್ಲೈಃ ಸುಸಮ್ಯತೈಃ।
09016075c ಅಶ್ವಾಂಸ್ತಸ್ಯಾವಧೀತ್ತೂರ್ಣಮುಭೌ ಚ ಪಾರ್ಷ್ಣಿಸಾರಥೀ।।
ಅನಂತರ ಚೆನ್ನಾಗಿ ಹೂಡಿ ಪ್ರಹರಿಸಿದ ಭಲ್ಲಗಳಿಂದ ಅವನ ರಥದ ನೊಗಗಳನ್ನು ತುಂಡರಿಸಿ, ಅವನ ಕುದುರೆಗಳನ್ನೂ ಇಬ್ಬರು ಪಾರ್ಶ್ವಸಾರಥಿಗಳನ್ನೂ ಬೇಗನೇ ಸಂಹರಿಸಿದನು.
09016076a ಮದ್ರರಾಜೇ ಹತೇ ರಾಜನ್ವಿರಥೇ ಕೃತವರ್ಮಣಿ।
09016076c ದುರ್ಯೋಧನಬಲಂ ಸರ್ವಂ ಪುನರಾಸೀತ್ಪರಾಙ್ಮುಖಂ।।
ರಾಜನ್! ಮದ್ರರಾಜನು ಹತನಾಗಲು ಮತ್ತು ಕೃತವರ್ಮನು ವಿರಥನಾಗಲು ದುರ್ಯೋಧನನ ಸೇನೆಗಳೆಲ್ಲವೂ ಪುನಃ ಪರಾಙ್ಮುಖವಾಯಿತು.
09016077a ತತ್ಪರೇ ನಾವಬುಧ್ಯಂತ ಸೈನ್ಯೇನ ರಜಸಾ ವೃತೇ।
09016077c ಬಲಂ ತು ಹತಭೂಯಿಷ್ಠಂ ತತ್ತದಾಸೀತ್ಪರಾಙ್ಮುಖಂ।।
ಆದರೆ ಆ ಸಮಯದಲ್ಲಿ ರಣರಂಗವು ಧೂಳಿನಿಂದ ತುಂಬಿಹೋಗಿದ್ದುದರಿಂದ ಅಳಿದುಳಿದ ಸೇನೆಯು ಪರಾಙ್ಮುಖವಾದುದು ಇತರರಿಗೆ ತಿಳಿಯಲಿಲ್ಲ.
09016078a ತತೋ ಮುಹೂರ್ತಾತ್ತೇಽಪಶ್ಯನ್ರಜೋ ಭೌಮಂ ಸಮುತ್ಥಿತಂ।
09016078c ವಿವಿಧೈಃ ಶೋಣಿತಸ್ರಾವೈಃ ಪ್ರಶಾಂತಂ ಪುರುಷರ್ಷಭ।।
ಪುರುಷರ್ಷಭ! ಮುಹೂರ್ತದಲ್ಲಿಯೇ ವಿವಿಧ ರಕ್ತಸ್ರಾವಗಳಿಂದ ಭೂಮಿಯ ಮೇಲೆದ್ದಿದ್ದ ಧೂಳು ಪ್ರಶಾಂತವಾದುದನ್ನು ನೋಡಿದೆವು.
09016079a ತತೋ ದುರ್ಯೋಧನೋ ದೃಷ್ಟ್ವಾ ಭಗ್ನಂ ಸ್ವಬಲಮಂತಿಕಾತ್।
09016079c ಜವೇನಾಪತತಃ ಪಾರ್ಥಾನೇಕಃ ಸರ್ವಾನವಾರಯತ್।।
ತನ್ನ ಸೇನೆಯು ಭಗ್ನವಾಗುತ್ತಿರುವುದನ್ನು ಹತ್ತಿರದಿಂದಲೇ ನೋಡಿದ ದುರ್ಯೋಧನನು ವೇಗದಿಂದ ಮೇಲೆ ಬೀಳುತ್ತಿದ್ದ ಅನೇಕ ಪಾರ್ಥರೆಲ್ಲರನ್ನೂ ತಡೆದನು.
09016080a ಪಾಂಡವಾನ್ಸರಥಾನ್ದೃಷ್ಟ್ವಾ ಧೃಷ್ಟದ್ಯುಮ್ನಂ ಚ ಪಾರ್ಷತಂ।
09016080c ಆನರ್ತಂ ಚ ದುರಾಧರ್ಷಂ ಶಿತೈರ್ಬಾಣೈರವಾಕಿರತ್।।
ರಥವೇರಿದ್ದ ಪಾಂಡವರನ್ನೂ, ಪಾರ್ಷತ ಧೃಷ್ಟದ್ಯುಮ್ನ, ದುರಾಧರ್ಷ ಆನರ್ತನನ್ನೂ ನೋಡಿ ನಿಶಿತ ಬಾಣಗಳಿಂದ ಅವರನ್ನು ಮುಸುಕಿದನು.
09016081a ತಂ ಪರೇ ನಾಭ್ಯವರ್ತಂತ ಮರ್ತ್ಯಾ ಮೃತ್ಯುಮಿವಾಗತಂ।
09016081c ಅಥಾನ್ಯಂ ರಥಮಾಸ್ಥಾಯ ಹಾರ್ದಿಕ್ಯೋಽಪಿ ನ್ಯವರ್ತತ।।
ಬಂದಿರುವ ಮೃತ್ಯುವನ್ನು ತಡೆಯಲಾರದ ಮರ್ತ್ಯರಂತೆ ಪಾಂಡವರು ದುರ್ಯೋಧನನನ್ನು ಅತಿಕ್ರಮಿಸಿ ಹೋಗಲಾಗಲಿಲ್ಲ. ಆಗ ಹಾರ್ದಿಕ್ಯನೂ ಇನ್ನೊಂದು ರಥವನ್ನೇರಿ ಹಿಂದಿರುಗಿದನು.
09016082a ತತೋ ಯುಧಿಷ್ಠಿರೋ ರಾಜಾ ತ್ವರಮಾಣೋ ಮಹಾರಥಃ।
09016082c ಚತುರ್ಭಿರ್ನಿಜಘಾನಾಶ್ವಾನ್ಪತ್ರಿಭಿಃ ಕೃತವರ್ಮಣಃ।।
09016082e ವಿವ್ಯಾಧ ಗೌತಮಂ ಚಾಪಿ ಷಡ್ಭಿರ್ಭಲ್ಲೈಃ ಸುತೇಜನೈಃ।।
ಆಗ ಮಹಾರಥ ರಾಜಾ ಯುಧಿಷ್ಠಿರನು ತ್ವರೆಮಾಡಿ ನಾಲ್ಕು ಪತ್ರಿಗಳಿಂದ ಕೃತವರ್ಮನ ಕುದುರೆಗಳನ್ನು ಸಂಹರಿಸಿದನು. ಮತ್ತು ತೇಜಸ್ಸಿನಿಂದ ಉರಿಯುತ್ತಿರುವ ಆರು ಭಲ್ಲಗಳಿಂದ ಗೌತಮ ಕೃಪನನ್ನು ಪ್ರಹರಿಸಿದನು.
09016083a ಅಶ್ವತ್ಥಾಮಾ ತತೋ ರಾಜ್ಞಾ ಹತಾಶ್ವಂ ವಿರಥೀಕೃತಂ।
09016083c ಸಮಪೋವಾಹ ಹಾರ್ದಿಕ್ಯಂ ಸ್ವರಥೇನ ಯುಧಿಷ್ಠಿರಾತ್।।
ರಾಜನಿಂದ ಹತಾಶ್ವನೂ ವಿರಥನೂ ಆಗಿದ್ದ ಹಾರ್ದಿಕ್ಯನನ್ನು ಅಶ್ವತ್ಥಾಮನು ತನ್ನ ರಥದ ಮೇಲೇರಿಸಿಕೊಂಡು ಯುಧಿಷ್ಠಿರನಿಂದ ದೂರಕ್ಕೆ ಕೊಂಡೊಯ್ದನು.
09016084a ತತಃ ಶಾರದ್ವತೋಽಷ್ಟಾಭಿಃ ಪ್ರತ್ಯವಿಧ್ಯದ್ಯುಧಿಷ್ಠಿರಂ।
09016084c ವಿವ್ಯಾಧ ಚಾಶ್ವಾನ್ನಿಶಿತೈಸ್ತಸ್ಯಾಷ್ಟಾಭಿಃ ಶಿಲೀಮುಖೈಃ।।
ಅನಂತರ ಪ್ರತಿಯಾಗಿ ಶಾರದ್ವತ ಕೃಪನು ಯುಧಿಷ್ಠಿರನನ್ನು ಎಂಟು ಬಾಣಗಳಿಂದ ಪ್ರಹರಿಸಿ, ಎಂಟು ನಿಶಿತ ಶಿಲೀಮುಖಗಳಿಂದ ಅವನ ಕುದುರೆಗಳನ್ನೂ ಗಾಯಗೊಳಿಸಿದನು.
09016085a ಏವಮೇತನ್ಮಹಾರಾಜ ಯುದ್ಧಶೇಷಮವರ್ತತ।
09016085c ತವ ದುರ್ಮಂತ್ರಿತೇ ರಾಜನ್ಸಹಪುತ್ರಸ್ಯ ಭಾರತ।।
ಮಹಾರಾಜ! ಭಾರತ! ರಾಜನ್! ಹೀಗೆ ಪುತ್ರರೊಂದಿಗೆ ನಿನ್ನ ದುರ್ಮಂತ್ರದಿಂದಾದ ಆ ಯುದ್ಧದ ಕೊನೆಯು ಈ ರೀತಿ ನಡೆಯಿತು.
09016086a ತಸ್ಮಿನ್ಮಹೇಷ್ವಾಸವರೇ ವಿಶಸ್ತೇ ಸಂಗ್ರಾಮಮಧ್ಯೇ ಕುರುಪುಂಗವೇನ।
09016086c ಪಾರ್ಥಾಃ ಸಮೇತಾಃ ಪರಮಪ್ರಹೃಷ್ಟಾಃ। ಶಂಖಾನ್ಪ್ರದಧ್ಮುರ್ಹತಮೀಕ್ಷ್ಯ ಶಲ್ಯಂ।।
ಸಂಗ್ರಾಮದಲ್ಲಿ ಕುರುಪುಂಗವನಿಂದ ಮಹೇಷ್ವಾಸರಲ್ಲಿ ಶ್ರೇಷ್ಠ ಶಲ್ಯನು ಹತನಾದುದನ್ನು ಕಂಡು ಪರಮಹೃಷ್ಟರಾದ ಪಾರ್ಥರು ಒಟ್ಟಿಗೇ ಶಂಖಗಳನ್ನೂದಿದರು.
09016087a ಯುಧಿಷ್ಠಿರಂ ಚ ಪ್ರಶಶಂಸುರಾಜೌ ಪುರಾ ಸುರಾ ವೃತ್ರವಧೇ ಯಥೇಂದ್ರಂ।
09016087c ಚಕ್ರುಶ್ಚ ನಾನಾವಿಧವಾದ್ಯಶಬ್ದಾನ್ ನಿನಾದಯಂತೋ ವಸುಧಾಂ ಸಮಂತಾತ್।।
ಹಿಂದೆ ವೃತ್ರವಧೆಯಾದಾಗ ಸುರರು ಇಂದ್ರನನ್ನು ಹೇಗೋ ಹಾಗೆ ಯುಧಿಷ್ಠಿರನನ್ನು ಪ್ರಶಂಸಿಸಿದರು. ನಾನಾವಿಧದ ವಾದ್ಯಶಬ್ಧಗಳಿಂದ ವಸುಧೆಯ ಎಲ್ಲ ದಿಕ್ಕುಗಳನ್ನು ಮೊಳಗಿಸಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯವಧೇ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯವಧೆ ಎನ್ನುವ ಹದಿನಾರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-8/18, ಉಪಪರ್ವಗಳು-74/100, ಅಧ್ಯಾಯಗಳು-1235/1995, ಶ್ಲೋಕಗಳು-46037/73784.