015 ಶಲ್ಯಯುಧಿಷ್ಠಿರಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಶಲ್ಯವಧ ಪರ್ವ

ಅಧ್ಯಾಯ 15

ಸಾರ

ಪಾಂಡವಸೇನೆಯ ಪಲಾಯನ (1-3). ಸಂಕುಲಯುದ್ಧ (4-8). ಶಲ್ಯನ ಪರಾಕ್ರಮ (9-13). ಯುಧಿಷ್ಠಿರವಾಕ್ಯ (14-25). ಯುಧಿಷ್ಠಿರ-ಶಲ್ಯರ ಯುದ್ಧ (26-35). ಭೀಮಸೇನ-ದುರ್ಯೋಧನರ ಯುದ್ಧ (36-43). ಶಲ್ಯ-ಯುಧಿಷ್ಠಿರರ ಯುದ್ಧ (44-67).

09015001 ಸಂಜಯ ಉವಾಚ 09015001a ತತಃ ಸೈನ್ಯಾಸ್ತವ ವಿಭೋ ಮದ್ರರಾಜಪುರಸ್ಕೃತಾಃ।
09015001c ಪುನರಭ್ಯದ್ರವನ್ಪಾರ್ಥಾನ್ವೇಗೇನ ಮಹತಾ ರಣೇ।।

ಸಂಜಯನು ಹೇಳಿದನು: “ವಿಭೋ! ಮದ್ರರಾಜನ ನಾಯಕತ್ವದಲ್ಲಿದ್ದ ನಿನ್ನ ಸೇನೆಯು ಆ ಮಹಾರಣದಲ್ಲಿ ಪುನಃ ವೇಗದಿಂದ ಪಾರ್ಥರನ್ನು ಆಕ್ರಮಣಿಸಿತು.

09015002a ಪೀಡಿತಾಸ್ತಾವಕಾಃ ಸರ್ವೇ ಪ್ರಧಾವಂತೋ ರಣೋತ್ಕಟಾಃ।
09015002c ಕ್ಷಣೇನೈವ ಚ ಪಾರ್ಥಾಂಸ್ತೇ ಬಹುತ್ವಾತ್ಸಮಲೋಡಯನ್।।

ಪೀಡೆಗೊಳಗಾಗಿದ್ದರೂ ರಣೋತ್ಕಟರಾದ ನಿನ್ನವರೆಲ್ಲರೂ ಸಂಖ್ಯೆಯಲ್ಲಿ ಅಧಿಕರಾಗಿದ್ದುದರಿಂದ ಕ್ಷಣದಲ್ಲಿಯೇ ಮುನ್ನುಗ್ಗಿ ಪಾರ್ಥರನ್ನು ಮರ್ದಿಸತೊಡಗಿದರು.

09015003a ತೇ ವಧ್ಯಮಾನಾಃ ಕುರುಭಿಃ ಪಾಂಡವಾ ನಾವತಸ್ಥಿರೇ।
09015003c ನಿವಾರ್ಯಮಾಣಾ ಭೀಮೇನ ಪಶ್ಯತೋಃ ಕೃಷ್ಣಪಾರ್ಥಯೋಃ।।

ಅವರಿಂದ ವಧಿಸಲ್ಪಡುತ್ತಿದ್ದ ಪಾಂಡವರು, ಭೀಮನಿಂದ ತಡೆಯಲ್ಪಟ್ಟರೂ, ಕೃಷ್ಣ-ಪಾರ್ಥರು ನೋಡುತ್ತಿದ್ದಂತೆಯೇ ಅಲ್ಲಿ ನಿಲ್ಲದೇ ಪಲಾಯನಮಾಡತೊಡಗಿದರು.

09015004a ತತೋ ಧನಂಜಯಃ ಕ್ರುದ್ಧಃ ಕೃಪಂ ಸಹ ಪದಾನುಗೈಃ।
09015004c ಅವಾಕಿರಚ್ಚರೌಘೇಣ ಕೃತವರ್ಮಾಣಮೇವ ಚ।।

ಆಗ ಧನಂಜಯನು ಕ್ರುದ್ಧನಾಗಿ ಅನುಯಾಯಿಗಳಿಂದ ಕೂಡಿದ್ದ ಕೃಪ-ಕೃತವರ್ಮರನ್ನು ಬಾಣಗಳ ಸಮೂಹಗಳಿಂದ ಮುಚ್ಚಿಬಿಟ್ಟನು.

09015005a ಶಕುನಿಂ ಸಹದೇವಸ್ತು ಸಹಸೈನ್ಯಮವಾರಯತ್।
09015005c ನಕುಲಃ ಪಾರ್ಶ್ವತಃ ಸ್ಥಿತ್ವಾ ಮದ್ರರಾಜಮವೈಕ್ಷತ।।

ಸಹದೇವನು ಸೇನಾಸಮೇತನಾಗಿ ಶಕುನಿಯನ್ನು ತಡೆದನು. ನಕುಲನು ಪಕ್ಕದಲ್ಲಿಯೇ ನಿಂತು ಮದ್ರರಾಜನನ್ನು ನೋಡುತ್ತಿದ್ದನು.

09015006a ದ್ರೌಪದೇಯಾ ನರೇಂದ್ರಾಂಶ್ಚ ಭೂಯಿಷ್ಠಂ ಸಮವಾರಯನ್।
09015006c ದ್ರೋಣಪುತ್ರಂ ಚ ಪಾಂಚಾಲ್ಯಃ ಶಿಖಂಡೀ ಸಮವಾರಯತ್।।

ದ್ರೌಪದೇಯರು ಮುನ್ನುಗ್ಗಿ ಅನೇಕ ಕುರು ನರೇಂದ್ರರರನ್ನು ತಡೆದರು. ಪಾಂಚಾಲ್ಯ ಶಿಖಂಡಿಯು ದ್ರೋಣಪುತ್ರನನ್ನು ಎದುರಿಸಿದನು.

09015007a ಭೀಮಸೇನಸ್ತು ರಾಜಾನಂ ಗದಾಪಾಣಿರವಾರಯತ್।
09015007c ಶಲ್ಯಂ ತು ಸಹ ಸೈನ್ಯೇನ ಕುಂತೀಪುತ್ರೋ ಯುಧಿಷ್ಠಿರಃ।।

ಭೀಮಸೇನನಾದರೋ ರಾಜರನ್ನು ಗದಾಪಾಣಿಯಾಗಿ ತಡೆದನು. ಕುಂತೀಪುತ್ರ ಯುಧಿಷ್ಠಿರನು ಸೇನೆಗಳೊಡಗೂಡಿ ಶಲ್ಯನನ್ನು ತಡೆದನು.

09015008a ತತಃ ಸಮಭವದ್ಯುದ್ಧಂ ಸಂಸಕ್ತಂ ತತ್ರ ತತ್ರ ಹ।
09015008c ತಾವಕಾನಾಂ ಪರೇಷಾಂ ಚ ಸಂಗ್ರಾಮೇಷ್ವನಿವರ್ತಿನಾಂ।।

ಆಗ ಸಂಗ್ರಾಮದಿಂದ ಹಿಂದಿರುಗದ ನಿನ್ನವರು ಮತ್ತು ಶತ್ರುಗಳು ಅಲ್ಲಲ್ಲಿಯೇ ಯುದ್ಧದಲ್ಲಿ ತೊಡಗಿದರು.

09015009a ತತ್ರ ಪಶ್ಯಾಮಹೇ ಕರ್ಮ ಶಲ್ಯಸ್ಯಾತಿಮಹದ್ರಣೇ।
09015009c ಯದೇಕಃ ಸರ್ವಸೈನ್ಯಾನಿ ಪಾಂಡವಾನಾಮಯುಧ್ಯತ।।

ಆ ಮಹಾರಣಲ್ಲಿ ನಾವು ಪಾಂಡವರ ಸರ್ವಸೇನೆಗಳೊಡನೆ ಶಲ್ಯನೋರ್ವನೇ ಹೋರಾಡಿದ ಅತಿದೊಡ್ಡ ಸಾಹಸವನ್ನು ನೋಡಿದೆವು.

09015010a ವ್ಯದೃಶ್ಯತ ತದಾ ಶಲ್ಯೋ ಯುಧಿಷ್ಠಿರಸಮೀಪತಃ।
09015010c ರಣೇ ಚಂದ್ರಮಸೋಽಭ್ಯಾಶೇ ಶನೈಶ್ಚರ ಇವ ಗ್ರಹಃ।।

ಆಗ ಚಂದ್ರಗ್ರಹದ ಸಮೀಪದಲ್ಲಿ ಶನೈಶ್ಚರಗ್ರಹವು ಕಾಣಿಸಿಕೊಳ್ಳುವಂತೆ ಯುಧಿಷ್ಠಿರನ ಬಳಿ ಶಲ್ಯನು ಕಾಣಿಸಿಕೊಂಡನು.

09015011a ಪೀಡಯಿತ್ವಾ ತು ರಾಜಾನಂ ಶರೈರಾಶೀವಿಷೋಪಮೈಃ।
09015011c ಅಭ್ಯಧಾವತ್ ಪುನರ್ಭೀಮಂ ಶರವರ್ಷೈರವಾಕಿರತ್।।

ಸರ್ಪವಿಷಗಳಿಂತಿದ್ದ ಬಾಣಗಳಿಂದ ರಾಜ ಯುಧಿಷ್ಠಿರನನ್ನು ಪೀಡಿಸಿ, ಪುನಃ ಭೀಮನ ಬಳಿ ಹೋಗಿ ಅವನನ್ನು ಶರವರ್ಷಗಳಿಂದ ಮುಚ್ಚಿದನು.

09015012a ತಸ್ಯ ತಲ್ಲಾಘವಂ ದೃಷ್ಟ್ವಾ ತಥೈವ ಚ ಕೃತಾಸ್ತ್ರತಾಂ।
09015012c ಅಪೂಜಯನ್ನನೀಕಾನಿ ಪರೇಷಾಂ ತಾವಕಾನಿ ಚ।।

ಅವನ ಆ ಹಸ್ತಲಾಘವನ್ನು ಮತ್ತು ಹಾಗೆಯೇ ಅಸ್ತ್ರಗಳ ಪಾಂಡಿತ್ಯವನ್ನೂ ನೋಡಿ ನಿನ್ನ ಮತ್ತು ಶತ್ರುಸೇನೆಗಳು ಅವನನ್ನು ಶ್ಲಾಘಿಸಿದರು.

09015013a ಪೀಡ್ಯಮಾನಾಸ್ತು ಶಲ್ಯೇನ ಪಾಂಡವಾ ಭೃಶವಿಕ್ಷತಾಃ।
09015013c ಪ್ರಾದ್ರವಂತ ರಣಂ ಹಿತ್ವಾ ಕ್ರೋಶಮಾನೇ ಯುಧಿಷ್ಠಿರೇ।।

ಶಲ್ಯನಿಂದ ಪೀಡಿಸಲ್ಪಟ್ಟು ತುಂಬಾ ಗಾಯಗೊಂಡಿದ್ದ ಪಾಂಡವ ಸೈನಿಕರು ಯುಧಿಷ್ಠಿರನು ಕೂಗಿ ಕರೆಯುತ್ತಿದ್ದರೂ ರಣವನ್ನು ಬಿಟ್ಟು ಓಡಿಹೋಗುತ್ತಿದ್ದರು.

09015014a ವಧ್ಯಮಾನೇಷ್ವನೀಕೇಷು ಮದ್ರರಾಜೇನ ಪಾಂಡವಃ।
09015014c ಅಮರ್ಷವಶಮಾಪನ್ನೋ ಧರ್ಮರಾಜೋ ಯುಧಿಷ್ಠಿರಃ।।
09015014e ತತಃ ಪೌರುಷಮಾಸ್ಥಾಯ ಮದ್ರರಾಜಮಪೀಡಯತ್।।

ಮದ್ರರಾಜನಿಂದ ತನ್ನ ಸೇನೆಗಳು ವಧಿಸಲ್ಪಡುತ್ತಿರುವುದನ್ನು ನೋಡಿ ಕುಪಿತನಾದ ಪಾಂಡವ ಧರ್ಮರಾಜ ಯುಧಿಷ್ಠಿರನು ಪೌರುಷವನ್ನು ತಾಳಿ ಮದ್ರರಾಜನನ್ನು ಪೀಡಿಸಿದನು.

09015015a ಜಯೋ ವಾಸ್ತು ವಧೋ ವೇತಿ ಕೃತಬುದ್ಧಿರ್ಮಹಾರಥಃ।
09015015c ಸಮಾಹೂಯಾಬ್ರವೀತ್ಸರ್ವಾನ್ ಭ್ರಾತೄನ್ ಕೃಷ್ಣಂ ಚ ಮಾಧವಂ।।

ಜಯವಾಗಲಿ ಅಥವಾ ವಧೆಯಾಗಲಿ ಎಂದು ನಿಶ್ಚಯಿಸಿ ಮಹಾರಥ ಯುಧಿಷ್ಠಿರನು ತನ್ನ ಸಹೋದರರನ್ನೂ ಮಾಧವ ಕೃಷ್ಣನನ್ನೂ ಕರೆಯಿಸಿ ಹೇಳಿದನು:

09015016a ಭೀಷ್ಮೋ ದ್ರೋಣಶ್ಚ ಕರ್ಣಶ್ಚ ಯೇ ಚಾನ್ಯೇ ಪೃಥಿವೀಕ್ಷಿತಃ।
09015016c ಕೌರವಾರ್ಥೇ ಪರಾಕ್ರಾಂತಾಃ ಸಂಗ್ರಾಮೇ ನಿಧನಂ ಗತಾಃ।।

“ಭೀಷ್ಮ, ದ್ರೋಣ, ಕರ್ಣ ಮತ್ತು ಪರಾಕ್ರಾಂತ ಅನ್ಯ ಪೃಥಿವೀಪತಿಗಳು ಕೌರವನಿಗಾಗಿ ಯುದ್ಧಮಾಡಿ ನಿಧನಹೊಂದಿದ್ದಾರೆ.

09015017a ಯಥಾಭಾಗಂ ಯಥೋತ್ಸಾಹಂ ಭವಂತಃ ಕೃತಪೌರುಷಾಃ।
09015017c ಭಾಗೋಽವಶಿಷ್ಟ ಏಕೋಽಯಂ ಮಮ ಶಲ್ಯೋ ಮಹಾರಥಃ।।

ನೀವು ಕೂಡ ನಿಮಗೆ ಹಂಚಿಕೊಟ್ಟ ಯುದ್ಧಭಾಗಳೊಡನೆ ಉತ್ಸಾಹಪೂರ್ಣರಾಗಿ ಪೌರುಷವನ್ನು ಪ್ರದರ್ಶಿಸುತ್ತಾ ಹೋರಾಡಿದ್ದೀರಿ. ನನ್ನ ಭಾಗವಾದ ಮಹಾರಥ ಶಲ್ಯನೋರ್ವನೇ ಉಳಿದುಕೊಂಡಿದ್ದಾನೆ.

09015018a ಸೋಽಹಮದ್ಯ ಯುಧಾ ಜೇತುಮಾಶಂಸೇ ಮದ್ರಕೇಶ್ವರಂ।
09015018c ತತ್ರ ಯನ್ಮಾನಸಂ ಮಹ್ಯಂ ತತ್ಸರ್ವಂ ನಿಗದಾಮಿ ವಃ।।

ಇಂದು ಯುದ್ಧದಲ್ಲಿ ನಾನು ಮದ್ರಕೇಶ್ವರನನ್ನು ಜಯಿಸಲು ಬಯಸುತ್ತೇನೆ. ಈ ವಿಷಯದಲ್ಲಿ ನನ್ನ ಮನಸ್ಸಿನಲ್ಲಿರುವುದನ್ನು ಹೇಳಿಬಿಡುತ್ತೇನೆ. ಎಲ್ಲರೂ ಕೇಳಿರಿ.

09015019a ಚಕ್ರರಕ್ಷಾವಿಮೌ ಶೂರೌ ಮಮ ಮಾದ್ರವತೀಸುತೌ।
09015019c ಅಜೇಯೌ ವಾಸವೇನಾಪಿ ಸಮರೇ ವೀರಸಮ್ಮತೌ।।

ಸಮರದಲ್ಲಿ ವಾಸವನಿಂದಲೂ ಅಜೇಯರಾಗಿರುವ ವೀರಸಮ್ಮತ ಶೂರ ಮಾದ್ರವತೀ ಸುತರಿಬ್ಬರೂ ನನ್ನ ಚಕ್ರರಕ್ಷಕರಾಗಲಿ.

09015020a ಸಾಧ್ವಿಮೌ ಮಾತುಲಂ ಯುದ್ಧೇ ಕ್ಷತ್ರಧರ್ಮಪುರಸ್ಕೃತೌ।
09015020c ಮದರ್ಥಂ ಪ್ರತಿಯುಧ್ಯೇತಾಂ ಮಾನಾರ್ಹೌ ಸತ್ಯಸಂಗರೌ।।

ಯುದ್ಧದಲ್ಲಿ ಕ್ಷತ್ರಧರ್ಮವನ್ನು ಮುಂದಿಟ್ಟುಕೊಂಡು ಈ ಇಬ್ಬರು ಸಾಧ್ವಿಗಳೂ, ಮಾನಾರ್ಹರೂ ಸತ್ಯಸಂಗರರೂ ನನಗಾಗಿ ತಮ್ಮ ಸೋದರಮಾವನೊಂದಿಗೆ ಯುದ್ಧಮಾಡುತ್ತಾರೆ.

09015021a ಮಾಂ ವಾ ಶಲ್ಯೋ ರಣೇ ಹಂತಾ ತಂ ವಾಹಂ ಭದ್ರಮಸ್ತು ವಃ।
09015021c ಇತಿ ಸತ್ಯಾಮಿಮಾಂ ವಾಣೀಂ ಲೋಕವೀರಾ ನಿಬೋಧತ।।

ರಣದಲ್ಲಿ ನಾನಾಗಲೀ ಶಲ್ಯನಾಗಲೀ ಹತರಾಗುತ್ತೇವೆ. ನಿಮಗೆ ಮಂಗಳವಾಗಲಿ! ಲೋಕವೀರರೇ! ನನ್ನ ಈ ಸತ್ಯವಚನವನ್ನು ನೀವೆಲ್ಲರೂ ಕೇಳಿಕೊಳ್ಳಿರಿ!

09015022a ಯೋತ್ಸ್ಯೇಽಹಂ ಮಾತುಲೇನಾದ್ಯ ಕ್ಷತ್ರಧರ್ಮೇಣ ಪಾರ್ಥಿವಾಃ।
09015022c ಸ್ವಯಂ ಸಮಭಿಸಂಧಾಯ ವಿಜಯಾಯೇತರಾಯ ವಾ।।

ಪಾರ್ಥಿವರೇ! ಕ್ಷತ್ರಧರ್ಮವನ್ನು ಅನುಸರಿಸಿ ನಾನಿಂದು ನನ್ನ ಭಾಗದ ಪ್ರತಿಜ್ಞೆಯನ್ನು ಪೂರೈಸಲು ವಿಜಯವಾಗಲೀ ಇನ್ನೊಂದಾಗಲೀ ಸೋದರಮಾವನೊಂದಿಗೆ ಯುದ್ಧಮಾಡುತ್ತೇನೆ.

09015023a ತಸ್ಯ ಮೇಽಭ್ಯಧಿಕಂ ಶಸ್ತ್ರಂ ಸರ್ವೋಪಕರಣಾನಿ ಚ।
09015023c ಸಮ್ಯುಝ್ಜಂತು ರಣೇ ಕ್ಷಿಪ್ರಂ ಶಾಸ್ತ್ರವದ್ರಥಯೋಜಕಾಃ।।

ರಥಯೋಜಕರು ನನ್ನ ರಥವನ್ನು ಅಧಿಕ ಶಸ್ತ್ರಗಳಿಂದ ಮತ್ತು ಸರ್ವೋಪಕರಣಗಳಿಂದ ಶಾಸ್ತ್ರವತ್ತಾಗಿ ರಣದಲ್ಲಿ ಸಿದ್ಧಗೊಳಿಸಲಿ.

09015024a ಶೈನೇಯೋ ದಕ್ಷಿಣಂ ಚಕ್ರಂ ಧೃಷ್ಟದ್ಯುಮ್ನಸ್ತಥೋತ್ತರಂ।
09015024c ಪೃಷ್ಠಗೋಪೋ ಭವತ್ವದ್ಯ ಮಮ ಪಾರ್ಥೋ ಧನಂಜಯಃ।।

ಶೈನೇಯ ಸಾತ್ಯಕಿಯು ಬಲಚಕ್ರವನ್ನೂ ಧೃಷ್ಟದ್ಯುಮ್ನನು ಎಡಚಕ್ರವನ್ನೂ ಮತ್ತು ಇಂದು ನನ್ನ ರಥದ ಹಿಂಭಾಗವನ್ನು ಪಾರ್ಥ ಧನಂಜಯನು ರಕ್ಷಿಸಲಿ.

09015025a ಪುರಃಸರೋ ಮಮಾದ್ಯಾಸ್ತು ಭೀಮಃ ಶಸ್ತ್ರಭೃತಾಂ ವರಃ।
09015025c ಏವಮಭ್ಯಧಿಕಃ ಶಲ್ಯಾದ್ಭವಿಷ್ಯಾಮಿ ಮಹಾಮೃಧೇ।।

ಶಸ್ತ್ರಪಾಣಿಗಳಲ್ಲಿ ಶ್ರೇಷ್ಠ ಭೀಮನು ಇಂದು ನನ್ನ ಮುಂದಿರಲಿ. ಹೀಗೆ ನಾನು ಮಹಾರಣದಲ್ಲಿ ಶಲ್ಯನಿಗಿಂತ ಅಧಿಕನಾಗುತ್ತೇನೆ!”

09015026a ಏವಮುಕ್ತಾಸ್ತಥಾ ಚಕ್ರುಃ ಸರ್ವೇ ರಾಜ್ಞಃ ಪ್ರಿಯೈಷಿಣಃ।
09015026c ತತಃ ಪ್ರಹರ್ಷಃ ಸೈನ್ಯಾನಾಂ ಪುನರಾಸೀತ್ತದಾ ನೃಪ।।

ಅವನು ಹೀಗೆ ಹೇಳಲು ರಾಜ-ಹಿತೈಷಿಗಳೆಲ್ಲರೂ ಹಾಗೆಯೇ ಮಾಡಿದರು. ನೃಪ! ಆಗ ಸೇನೆಗಳು ಪುನಃ ಹರ್ಷಿತರಾದವು.

09015027a ಪಾಂಚಾಲಾನಾಂ ಸೋಮಕಾನಾಂ ಮತ್ಸ್ಯಾನಾಂ ಚ ವಿಶೇಷತಃ।
09015027c ಪ್ರತಿಜ್ಞಾಂ ತಾಂ ಚ ಸಂಗ್ರಾಮೇ ಧರ್ಮರಾಜಸ್ಯ ಪೂರಯನ್।।

ಸಂಗ್ರಾಮದಲ್ಲಿ ಧರ್ಮರಾಜನು ಪ್ರತಿಜ್ಞೆಯನ್ನು ಪೂರೈಸುವನೆಂದು ವಿಶೇಷವಾಗಿ ಪಾಂಚಾಲ-ಸೋಮಕ-ಮತ್ಸ್ಯರು ಉತ್ಸಾಹಿತರಾದರು.

09015028a ತತಃ ಶಂಖಾಂಶ್ಚ ಭೇರೀಶ್ಚ ಶತಶಶ್ಚೈವ ಪುಷ್ಕರಾನ್।
09015028c ಅವಾದಯಂತ ಪಾಂಚಾಲಾಃ ಸಿಂಹನಾದಾಂಶ್ಚ ನೇದಿರೇ।।

ಆಗ ಪಾಂಚಾಲರು ನೂರಾರು ಶಂಖ-ಭೇರಿ-ಪುಷ್ಕರಗಳನ್ನು ಮೊಳಗಿಸಿ ಮತ್ತು ಸಿಂಹನಾದಗೈದರು.

09015029a ತೇಽಭ್ಯಧಾವಂತ ಸಂರಬ್ಧಾ ಮದ್ರರಾಜಂ ತರಸ್ವಿನಃ।
09015029c ಮಹತಾ ಹರ್ಷಜೇನಾಥ ನಾದೇನ ಕುರುಪುಂಗವಾಃ।।
09015030a ಹ್ರಾದೇನ ಗಜಘಂಟಾನಾಂ ಶಂಖಾನಾಂ ನಿನದೇನ ಚ।
09015030c ತೂರ್ಯಶಬ್ದೇನ ಮಹತಾ ನಾದಯಂತಶ್ಚ ಮೇದಿನೀಂ।।

ಕುರುಪುಂಗವರು ಕುಪಿತರಾಗಿ, ಭೂಮಿಯನ್ನೇ ಮೊಳಗಿಸುವ ಜೋರಾದ ಹರ್ಷನಾದ, ಆನೆಗಳ ಗಂಟೆಗಳ ಶಬ್ಧ, ಶಂಖ ನಿನಾದ ಮತ್ತು ಜೋರಾದ ತೂರ್ಯಶಬ್ಧಗಳೊಂದಿಗೆ ವೇಗಶಾಲೀ ಮದ್ರರಾಜನನ್ನು ಆಕ್ರಮಣಿಸಿದರು.

09015031a ತಾನ್ ಪ್ರತ್ಯಗೃಹ್ಣಾತ್ಪುತ್ರಸ್ತೇ ಮದ್ರರಾಜಶ್ಚ ವೀರ್ಯವಾನ್।
09015031c ಮಹಾಮೇಘಾನಿವ ಬಹೂನ್ ಶೈಲಾವಸ್ತೋದಯಾವುಭೌ।।

ಉದಯಾಚಲ ಮತ್ತು ಅಸ್ತಾಚಲ ಪರ್ವತಗಳು ಅನೇಕ ಮಹಾಮೇಘಗಳನ್ನು ತಡೆದು ನಿಲ್ಲಿಸುವಂತೆ ನಿನ್ನ ಮಗ ದುರ್ಯೋಧನ ಮತ್ತು ವೀರ್ಯವಾನ್ ಮದ್ರರಾಜರು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿದರು.

09015032a ಶಲ್ಯಸ್ತು ಸಮರಶ್ಲಾಘೀ ಧರ್ಮರಾಜಮರಿಂದಮಂ।
09015032c ವವರ್ಷ ಶರವರ್ಷೇಣ ವರ್ಷೇಣ ಮಘವಾನಿವ।।

ಸಮರಶ್ಲಾಘೀ ಶಲ್ಯನಾದರೋ ಅರಿಂದಮ ಧರ್ಮರಾಜನ ಮೇಲೆ ಇಂದ್ರನು ಮಳೆಸುರಿಸುವಂತೆ ಶರಗಳ ಮಳೆಗರೆದನು.

09015033a ತಥೈವ ಕುರುರಾಜೋಽಪಿ ಪ್ರಗೃಹ್ಯ ರುಚಿರಂ ಧನುಃ।
09015033c ದ್ರೋಣೋಪದೇಶಾನ್ವಿವಿಧಾನ್ದರ್ಶಯಾನೋ ಮಹಾಮನಾಃ।।
09015034a ವವರ್ಷ ಶರವರ್ಷಾಣಿ ಚಿತ್ರಂ ಲಘು ಚ ಸುಷ್ಠು ಚ।

ಹಾಗೆಯೇ ಕುರುರಾಜ ಮಹಾಮನ ಯುಧಿಷ್ಠಿರನೂ ಕೂಡ ಸುಂದರ ಧನುಸ್ಸನ್ನು ಹಿಡಿದು ದ್ರೋಣನು ಉಪದೇಶಿಸಿದ್ದ ವಿವಿಧ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಶೀಘ್ರವಾಗಿ ವಿಚಿತ್ರ-ದಟ್ಟ ಶರವರ್ಷಗಳನ್ನು ಸುರಿಸಿದನು.

09015034c ನ ಚಾಸ್ಯ ವಿವರಂ ಕಶ್ಚಿದ್ದದರ್ಶ ಚರತೋ ರಣೇ।।
09015035a ತಾವುಭೌ ವಿವಿಧೈರ್ಬಾಣೈಸ್ತತಕ್ಷಾತೇ ಪರಸ್ಪರಂ।
09015035c ಶಾರ್ದೂಲಾವಮಿಷಪ್ರೇಪ್ಸೂ ಪರಾಕ್ರಾಂತಾವಿವಾಹವೇ।।

ರಣದಲ್ಲಿ ಅವನು ಚರಿಸುತ್ತಿದ್ದ ರೀತಿಯಲ್ಲಿ ಯಾವುದೇ ದೋಷವು ಕಾಣುತ್ತಿರಲಿಲ್ಲ. ಮಾಂಸದ ಲೋಭಕ್ಕಾಗಿ ಹೊಡೆದಾಡುತ್ತಿರುವ ಎರಡು ಶಾರ್ದೂಲಗಳಂತೆ ಅವರಿಬ್ಬರು ಪರಾಕ್ರಾಂತರೂ ಯುದ್ಧದಲ್ಲಿ ಪರಸ್ಪರರನ್ನು ವಿವಿಧ ಬಾಣಗಳಿಂದ ಗಾಯಗೊಳಿಸಿದರು.

09015036a ಭೀಮಸ್ತು ತವ ಪುತ್ರೇಣ ರಣಶೌಂಡೇನ ಸಂಗತಃ।
09015036c ಪಾಂಚಾಲ್ಯಃ ಸಾತ್ಯಕಿಶ್ಚೈವ ಮಾದ್ರೀಪುತ್ರೌ ಚ ಪಾಂಡವೌ।।
09015036e ಶಕುನಿಪ್ರಮುಖಾನ್ವೀರಾನ್ ಪ್ರತ್ಯಗೃಹ್ಣನ್ಸಮಂತತಃ।।

ಭೀಮನಾದರೋ ಯುದ್ಧಕುಶಲನಾದ ನಿನ್ನ ಮಗನೊಂದಿಗೆ ಯುದ್ಧದಲ್ಲಿ ತೊಡಗಿದನು. ಪಾಂಚಾಲ್ಯ ಧೃಷ್ಟದ್ಯುಮ್ನ, ಸಾತ್ಯಕಿ, ಮತ್ತು ಪಾಂಡವ ಮಾದ್ರೀಪುತ್ರರಿಬ್ಬರೂ ಶಕುನಿಪ್ರಮುಖ ವೀರರನ್ನು ಎದುರಿಸಿ ಯುದ್ಧಮಾಡುತ್ತಿದ್ದರು.

09015037a ತದಾಸೀತ್ತುಮುಲಂ ಯುದ್ಧಂ ಪುನರೇವ ಜಯೈಷಿಣಾಂ।
09015037c ತಾವಕಾನಾಂ ಪರೇಷಾಂ ಚ ರಾಜನ್ ದುರ್ಮಂತ್ರಿತೇ ತವ।।

ರಾಜನ್! ನಿನ್ನ ದುರ್ಮಂತ್ರದ ಫಲವಾಗಿ ವಿಜಯೇಚ್ಛುಗಳಾದ ನಿನ್ನವರ ಮತ್ತು ಶತ್ರುಗಳ ನಡುವೆ ತುಮುಲ ಯುದ್ಧವು ಪುನಃ ಪ್ರಾರಂಭವಾಯಿತು.

09015038a ದುರ್ಯೋಧನಸ್ತು ಭೀಮಸ್ಯ ಶರೇಣಾನತಪರ್ವಣಾ।
09015038c ಚಿಚ್ಚೇದಾದಿಶ್ಯ ಸಂಗ್ರಾಮೇ ಧ್ವಜಂ ಹೇಮವಿಭೂಷಿತಂ।।

ದುರ್ಯೋಧನನಾದರೋ ನತಪರ್ವ ಶರದಿಂದ ಸಂಗ್ರಾಮದಲ್ಲಿ ಭೀಮನ ಹೇಮವಿಭೂಷಿತ ಧ್ವಜವನ್ನು ಕತ್ತರಿಸಿದನು.

09015039a ಸಕಿಂಕಿಣೀಕಜಾಲೇನ ಮಹತಾ ಚಾರುದರ್ಶನಃ।
09015039c ಪಪಾತ ರುಚಿರಃ ಸಿಂಹೋ ಭೀಮಸೇನಸ್ಯ ನಾನದನ್।।

ಕಿರು-ಗಂಟೆಗಳ ಸಮೂಹದಿಂದ ಕೂಡಿ ನೋಡಲು ಸುಂದರವಾಗಿದ್ದ ಭೀಮಸೇನನ ಆ ಧ್ವಜವು ಕೆಳಗೆ ಬೀಳಲು ಭೀಮಸೇನನು ಸಿಂಹದಂತೆ ಗರ್ಜಿಸಿದನು.

09015040a ಪುನಶ್ಚಾಸ್ಯ ಧನುಶ್ಚಿತ್ರಂ ಗಜರಾಜಕರೋಪಮಂ।
09015040c ಕ್ಷುರೇಣ ಶಿತಧಾರೇಣ ಪ್ರಚಕರ್ತ ನರಾಧಿಪಃ।।

ನರಾಧಿಪ ದುರ್ಯೋಧನನು ಪುನಃ ಆನೆಯ ಸೊಂಡಿಲಿನಂತಿದ್ದ ಭೀಮನ ಚಿತ್ರಿತ ಧನುಸ್ಸನ್ನು ನಿಶಿತ ಅಲುಗಿನ ಕ್ಷುರದಿಂದ ಕತ್ತರಿಸಿದನು.

09015041a ಸ ಚ್ಚಿನ್ನಧನ್ವಾ ತೇಜಸ್ವೀ ರಥಶಕ್ತ್ಯಾ ಸುತಂ ತವ।
09015041c ಬಿಭೇದೋರಸಿ ವಿಕ್ರಮ್ಯ ಸ ರಥೋಪಸ್ಥ ಆವಿಶತ್।।

ಧನುಸ್ಸು ತುಂಡಾದ ಭೀಮಸೇನನು ವಿಕ್ರಮದಿಂದ ರಥಶಕ್ತಿಯನ್ನು ನಿನ್ನ ಮಗನ ಎದೆಗೆ ಎಸೆಯಲು ಅದರಿಂದ ಪೀಡಿತ ದುರ್ಯೋಧನನು ರಥದಲ್ಲಿ ಕುಸಿದು ಬಿದ್ದನು.

09015042a ತಸ್ಮಿನ್ಮೋಹಮನುಪ್ರಾಪ್ತೇ ಪುನರೇವ ವೃಕೋದರಃ।
09015042c ಯಂತುರೇವ ಶಿರಃ ಕಾಯಾತ್ ಕ್ಷುರಪ್ರೇಣಾಹರತ್ತದಾ।।

ಅವನು ಮೂರ್ಛಿತನಾಗಲು ವೃಕೋದರನು ಪುನಃ ಕ್ಷುರಪ್ರದಿಂದ ದುರ್ಯೋಧನನ ಸಾರಥಿಯ ಶಿರವನ್ನು ಶರೀರದಿಂದ ಪ್ರತ್ಯೇಕಿಸಿದನು.

09015043a ಹತಸೂತಾ ಹಯಾಸ್ತಸ್ಯ ರಥಮಾದಾಯ ಭಾರತ।
09015043c ವ್ಯದ್ರವಂತ ದಿಶೋ ರಾಜನ್ ಹಾಹಾಕಾರಸ್ತದಾಭವತ್।।

ಸಾರಥಿಯನ್ನು ಕಳೆದುಕೊಂಡ ಆ ಕುದುರೆಗಳು ರಥವನ್ನೆಳೆದುಕೊಂಡು ದಿಕ್ಕಾಪಾಲಾಗಿ ಓಡಿಹೋದವು. ಭಾರತ! ಆಗ ಹಾಹಾಕಾರವುಂಟಾಯಿತು.

09015044a ತಮಭ್ಯಧಾವತ್ತ್ರಾಣಾರ್ಥಂ ದ್ರೋಣಪುತ್ರೋ ಮಹಾರಥಃ।
09015044c ಕೃಪಶ್ಚ ಕೃತವರ್ಮಾ ಚ ಪುತ್ರಂ ತೇಽಭಿಪರೀಪ್ಸವಃ।।

ಆಗ ನಿನ್ನ ಮಗನನ್ನು ರಕ್ಷಿಸಲು ಅಲ್ಲಿಗೆ ಮಹಾರಥ ದ್ರೋಣಪುತ್ರ, ಕೃಪ ಮತ್ತು ಕೃತವರ್ಮರು ಧಾವಿಸಿ ಬಂದರು.

09015045a ತಸ್ಮಿನ್ವಿಲುಲಿತೇ ಸೈನ್ಯೇ ತ್ರಸ್ತಾಸ್ತಸ್ಯ ಪದಾನುಗಾಃ।
09015045c ಗಾಂಡೀವಧನ್ವಾ ವಿಸ್ಫಾರ್ಯ ಧನುಸ್ತಾನಹನಚ್ಚರೈಃ।।

ದುರ್ಯೋಧನನ ಸೇನೆಯು ಅಸ್ತವ್ಯಸ್ತಗೊಳ್ಳಲು ಅವನ ಅನುಚರರು ಭಯಗ್ರಸ್ತರಾದರು. ಆಗ ಗಾಂಡೀವಧನ್ವಿಯು ಧನುಸ್ಸನ್ನು ಟೇಂಕರಿಸುತ್ತಾ ಅವರನ್ನು ಶರಗಳಿಂದ ಸಂಹರಿಸಿದನು.

09015046a ಯುಧಿಷ್ಠಿರಸ್ತು ಮದ್ರೇಶಮಭ್ಯಧಾವದಮರ್ಷಿತಃ।
09015046c ಸ್ವಯಂ ಸಂಚೋದಯನ್ನಶ್ವಾನ್ದಂತವರ್ಣಾನ್ಮನೋಜವಾನ್।।

ಅಸಹನಾಯುಕ್ತ ಯುಧಿಷ್ಠಿರನಾದರೋ ದಂತದ ಬಣ್ಣದ ಮನೋವೇಗದ ಕುದುರೆಗಳನ್ನು ತಾನೇ ಓಡಿಸುತ್ತಾ ಮದ್ರೇಶನನ್ನು ಆಕ್ರಮಣಿಸಿದನು.

09015047a ತತ್ರಾದ್ಭುತಮಪಶ್ಯಾಮ ಕುಂತೀಪುತ್ರೇ ಯುಧಿಷ್ಠಿರೇ।
09015047c ಪುರಾ ಭೂತ್ವಾ ಮೃದುರ್ದಾಂತೋ ಯತ್ತದಾ ದಾರುಣೋಽಭವತ್।।

ಆಗ ನಾವು ಕುಂತೀಪುತ್ರ ಯುಧಿಷ್ಠಿರನಲ್ಲಿ ಒಂದು ಅದ್ಭುತವನ್ನು ಕಂಡೆವು. ಹಿಂದೆ ಮೃದುಸ್ವಭಾವದವನೂ ಜಿತೇಂದ್ರಿಯನೂ ಆಗಿದ್ದ ಅವನು ಆಗ ಕಠೋರಸ್ವಭಾವದವನಾಗಿದ್ದನು.

09015048a ವಿವೃತಾಕ್ಷಶ್ಚ ಕೌಂತೇಯೋ ವೇಪಮಾನಶ್ಚ ಮನ್ಯುನಾ।
09015048c ಚಿಚ್ಚೇದ ಯೋಧಾನ್ನಿಶಿತೈಃ ಶರೈಃ ಶತಸಹಸ್ರಶಃ।।

ಕೌಂತೇಯನು ಕೋಪದಿಂದ ಕಣ್ಣುಗಳನ್ನರಳಿಸಿಕೊಂಡು ಕಂಪಿಸುತ್ತಾ ನಿಶಿತ ಶರಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು.

09015049a ಯಾಂ ಯಾಂ ಪ್ರತ್ಯುದ್ಯಯೌ ಸೇನಾಂ ತಾಂ ತಾಂ ಜ್ಯೇಷ್ಠಃ ಸ ಪಾಂಡವಃ।
09015049c ಶರೈರಪಾತಯದ್ರಾಜನ್ಗಿರೀನ್ವಜ್ರೈರಿವೋತ್ತಮೈಃ।।

ಯಾವ ಸೇನೆಗಳು ಎದುರಿಸಿ ಯುದ್ಧ ಮಾಡುತ್ತಿದ್ದವೋ ಆ ಸೇನೆಗಳನ್ನು ಜ್ಯೇಷ್ಠ ಪಾಂಡವನು ಇಂದ್ರನು ಉತ್ತಮ ವಜ್ರಪ್ರಹಾರಗಳಿಂದ ಪರ್ವತಗಳನ್ನು ಕೆಳಗುರುಳಿಸಿದಂತೆ ಬಾಣಗಳಿಂದ ಧ್ವಂಸಮಾಡುತ್ತಿದ್ದನು.

09015050a ಸಾಶ್ವಸೂತಧ್ವಜರಥಾನ್ರಥಿನಃ ಪಾತಯನ್ಬಹೂನ್।
09015050c ಆಕ್ರೀಡದೇಕೋ ಬಲವಾನ್ಪವನಸ್ತೋಯದಾನಿವ।।

ಭಿರುಗಾಳಿಯು ಮೇಘಗಳನ್ನು ಛಿನ್ನ-ಭಿನ್ನಗೊಳಿಸುವಂತೆ ಅವನು ಒಬ್ಬನೇ ಅಶ್ವ-ಸಾರಥಿ-ಧ್ವಜ-ರಥಗಳೊಂದಿಗೆ ರಥಿಗಳನ್ನು ಅನೇಕ ಸಂಖ್ಯೆಗಳಲ್ಲಿ ಕೆಡವುತ್ತಾ ರಣರಂಗದಲ್ಲಿ ಆಟವಾಡುತ್ತಿದ್ದನು.

09015051a ಸಾಶ್ವಾರೋಹಾಂಶ್ಚ ತುರಗಾನ್ಪತ್ತೀಂಶ್ಚೈವ ಸಹಸ್ರಶಃ।
09015051c ವ್ಯಪೋಥಯತ ಸಂಗ್ರಾಮೇ ಕ್ರುದ್ಧೋ ರುದ್ರಃ ಪಶೂನಿವ।।

ಅಶ್ವಾರೋಹಿಗಳೊಂದಿಗೆ ಕುದುರೆಗಳೂ ಪದಾತಿಗಳೂ ಸಹಸ್ರಾರು ಸಂಖ್ಯೆಗಳಲ್ಲಿ ಕ್ರುದ್ಧ ರುದ್ರನಿಂದ ಪಶುಗಳು ಹೇಗೋ ಹಾಗೆ ಸಂಗ್ರಾಮದಲ್ಲಿ ಬೀಳುತ್ತಿದ್ದರು.

09015052a ಶೂನ್ಯಮಾಯೋಧನಂ ಕೃತ್ವಾ ಶರವರ್ಷೈಃ ಸಮಂತತಃ।
09015052c ಅಭ್ಯದ್ರವತ ಮದ್ರೇಶಂ ತಿಷ್ಠ ಶಲ್ಯೇತಿ ಚಾಬ್ರವೀತ್।।

ಶರವರ್ಷಗಳಿಂದ ಸುತ್ತಲೂ ರಣರಂಗವನ್ನು ಶೂನ್ಯವನ್ನಾಗಿ ಮಾಡಿ “ಶಲ್ಯ! ನಿಲ್ಲು!” ಎಂದು ಕೂಗುತ್ತಾ ಮದ್ರೇಶನನ್ನು ಆಕ್ರಮಣಿಸಿದನು.

09015053a ತಸ್ಯ ತಚ್ಚರಿತಂ ದೃಷ್ಟ್ವಾ ಸಂಗ್ರಾಮೇ ಭೀಮಕರ್ಮಣಃ।
09015053c ವಿತ್ರೇಸುಸ್ತಾವಕಾಃ ಸರ್ವೇ ಶಲ್ಯಸ್ತ್ವೇನಂ ಸಮಭ್ಯಯಾತ್।।

ಸಂಗ್ರಾಮದಲ್ಲಿ ಅವನ ಭಯಂಕರ ಕೃತ್ಯವನ್ನು ನೋಡಿ ನಿನ್ನವರೆಲ್ಲರೂ ಭಯದಿಂದ ನಡುಗಿದರು. ಆದರೆ ಶಲ್ಯನೊಬ್ಬನೇ ನಿರ್ಭಯನಾಗಿ ಅವನನ್ನು ಎದುರಿಸಿದನು.

09015054a ತತಸ್ತೌ ತು ಸುಸಂರಬ್ಧೌ ಪ್ರಧ್ಮಾಪ್ಯ ಸಲಿಲೋದ್ಭವೌ।
09015054c ಸಮಾಹೂಯ ತದಾನ್ಯೋನ್ಯಂ ಭರ್ತ್ಸಯಂತೌ ಸಮೀಯತುಃ।।

ಕುಪಿತರಾಗಿದ್ದ ಶಲ್ಯ-ಧರ್ಮಜರಿಬ್ಬರೂ ಶಂಖಗಳನ್ನೂದಿ ಅನ್ಯೋನ್ಯರನ್ನು ಯುದ್ಧಕ್ಕೆ ಆಹ್ವಾನಿಸುತ್ತಾ, ಗರ್ಜನೆಗಳಿಂದ ಅನ್ಯೋನ್ಯರನ್ನು ಭಯಪಡಿಸುತ್ತಾ ಭೀಕರ ಯುದ್ಧದಲ್ಲಿ ತೊಡಗಿದರು.

09015055a ಶಲ್ಯಸ್ತು ಶರವರ್ಷೇಣ ಯುಧಿಷ್ಠಿರಮವಾಕಿರತ್।
09015055c ಮದ್ರರಾಜಂ ಚ ಕೌಂತೇಯಃ ಶರವರ್ಷೈರವಾಕಿರತ್।।

ಶಲ್ಯನಾದರೋ ಶರವರ್ಷದಿಂದ ಯುಧಿಷ್ಠಿರನನ್ನು ಮುಚ್ಚಿಬಿಟ್ಟನು. ಕೌಂತೇಯನೂ ಕೂಡ ಮದ್ರರಾಜನನ್ನು ಶರವರ್ಷದಿಂದ ಮುಚ್ಚಿದನು.

09015056a ವ್ಯದೃಶ್ಯೇತಾಂ ತದಾ ರಾಜನ್ಕಂಕಪತ್ರಿಭಿರಾಹವೇ।
09015056c ಉದ್ಭಿನ್ನರುಧಿರೌ ಶೂರೌ ಮದ್ರರಾಜಯುಧಿಷ್ಠಿರೌ।।

ರಾಜನ್! ಆಗ ಯುದ್ಧದಲ್ಲಿ ಕಂಕಪತ್ರಿ ಬಾಣಗಳಿಂದ ಗಾಯಗೊಂಡ ಶೂರ ಮದ್ರರಾಜ-ಯುಧಿಷ್ಠಿರರಿಬ್ಬರ ಶರೀರಗಳಿಂದ ರಕ್ತವು ಹರಿಯುತ್ತಿರುವುದು ಕಾಣುತ್ತಿತ್ತು.

09015057a ಪುಷ್ಪಿತಾವಿವ ರೇಜಾತೇ ವನೇ ಶಲ್ಮಲಿಕಿಂಶುಕಾ।
09015057c ದೀಪ್ಯಮಾನೌ ಮಹಾತ್ಮಾನೌ ಪ್ರಾಣಯೋರ್ಯುದ್ಧದುರ್ಮದೌ।।

ಪ್ರಾಣಗಳನ್ನೇ ಪಣವಾಗಿಟ್ಟ ಆ ಮಹಾತ್ಮ ಯುದ್ಧದುರ್ಮದರಿಬ್ಬರೂ ವಸಂತಕಾಲದಲ್ಲಿ ವನದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ಪ್ರಕಾಶಿಸುತ್ತಿದ್ದರು.

09015058a ದೃಷ್ಟ್ವಾ ಸರ್ವಾಣಿ ಸೈನ್ಯಾನಿ ನಾಧ್ಯವಸ್ಯಂಸ್ತಯೋರ್ಜಯಂ।
09015058c ಹತ್ವಾ ಮದ್ರಾಧಿಪಂ ಪಾರ್ಥೋ ಭೋಕ್ಷ್ಯತೇಽದ್ಯ ವಸುಂಧರಾಂ।।
09015059a ಶಲ್ಯೋ ವಾ ಪಾಂಡವಂ ಹತ್ವಾ ದದ್ಯಾದ್ದುರ್ಯೋಧನಾಯ ಗಾಂ।
09015059c ಇತೀವ ನಿಶ್ಚಯೋ ನಾಭೂದ್ಯೋಧಾನಾಂ ತತ್ರ ಭಾರತ।।

ಭಾರತ! ಯುದ್ಧವನ್ನು ನೋಡುತ್ತಿದ್ದ ಸರ್ವ ಸೇನೆಗಳೂ ಅವರಿಬ್ಬರಲ್ಲಿ ಯಾರಿಗೆ ಜಯವಾಗುತ್ತದೆಯೆಂದು ನಿರ್ಧರಿಸಲು ಅಶಕ್ಯರಾಗಿದ್ದರು. “ಯುಧಿಷ್ಠಿರನು ಮದ್ರಾಧಿಪತಿಯನ್ನು ಸಂಹರಿಸಿ ವಸುಂಧರೆಯನ್ನು ಭೋಗಿಸುತ್ತಾನೋ ಅಥವಾ ಪಾಂಡವನನ್ನು ಸಂಹರಿಸಿ ಶಲ್ಯನು ಈ ಭೂಮಂಡಲವನ್ನು ದುರ್ಯೋಧನನಿಗೆ ನೀಡುತ್ತಾನೋ” ಎಂದು ಯೋಧರು ಯಾವ ನಿಶ್ಚಯಕ್ಕೂ ಬರಲಿಲ್ಲ.

09015060a ಪ್ರದಕ್ಷಿಣಮಭೂತ್ಸರ್ವಂ ಧರ್ಮರಾಜಸ್ಯ ಯುಧ್ಯತಃ।
09015061a ತತಃ ಶರಶತಂ ಶಲ್ಯೋ ಮುಮೋಚಾಶು ಯುಧಿಷ್ಠಿರೇ।।
09015061c ಧನುಶ್ಚಾಸ್ಯ ಶಿತಾಗ್ರೇಣ ಬಾಣೇನ ನಿರಕೃಂತತ।

ಆದರೆ ಯುದ್ಧದಲ್ಲಿ ಎಲ್ಲವೂ ಧರ್ಮರಾಜನಿಗೆ ಅನುಕೂಲವಾಗಿಯೇ ನಡೆಯುತ್ತಿತ್ತು. ಅನಂತರ ಶಲ್ಯನು ಯುಧಿಷ್ಠಿರನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿದನು ಮತ್ತು ನಿಶಿತ ಮೊನೆಯಿರುವ ಬಾಣದಿಂದ ಅವನ ಧನುಸ್ಸನ್ನೂ ಕತ್ತರಿಸಿದನು.

09015062a ಸೋಽನ್ಯತ್ಕಾರ್ಮುಕಮಾದಾಯ ಶಲ್ಯಂ ಶರಶತೈಸ್ತ್ರಿಭಿಃ।।
09015062c ಅವಿಧ್ಯತ್ಕಾರ್ಮುಕಂ ಚಾಸ್ಯ ಕ್ಷುರೇಣ ನಿರಕೃಂತತ।

ಕೂಡಲೇ ಯುಧಿಷ್ಠಿರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶಲ್ಯನನ್ನು ಮುನ್ನೂರು ಬಾಣಗಳಿಂದ ಪ್ರಹರಿಸಿ, ಅವನ ಧನುಸ್ಸನ್ನೂ ಕ್ಷುರದಿಂದ ಕತ್ತರಿಸಿದನು.

09015063a ಅಥಾಸ್ಯ ನಿಜಘಾನಾಶ್ವಾಂಶ್ಚತುರೋ ನತಪರ್ವಭಿಃ।।
09015063c ದ್ವಾಭ್ಯಾಮಥ ಶಿತಾಗ್ರಾಭ್ಯಾಮುಭೌ ಚ ಪಾರ್ಷ್ಣಿಸಾರಥೀ।

ಅನಂತರ ನತಪರ್ವ ಬಾಣಗಳಿಂದ ಶಲ್ಯನ ನಾಲ್ಕುಕುದುರೆಗಳನ್ನೂ ಸಂಹರಿಸಿದನು. ಶಿತಾಗ್ರ ಬಾಣಗಳೆರಡರಿಂದ ಅವನ ಇಬ್ಬರು ಪಾರ್ಶ್ವಸಾರಥಿಗಳನ್ನೂ ಸಂಹರಿಸಿದನು.

09015064a ತತೋಽಸ್ಯ ದೀಪ್ಯಮಾನೇನ ಪೀತೇನ ನಿಶಿತೇನ ಚ।।
09015064c ಪ್ರಮುಖೇ ವರ್ತಮಾನಸ್ಯ ಭಲ್ಲೇನಾಪಾಹರದ್ಧ್ವಜಂ।

ಉರಿಯುತ್ತಿದ್ದ ನಿಶಿತ ಹೊಂಬಣ್ಣದ ಭಲ್ಲದಿಂದ ಎದಿರು ಯುದ್ಧಮಾಡುತ್ತಿದ್ದ ಶಲ್ಯನ ಧ್ವಜವನ್ನೂ ಕತ್ತರಿಸಿದನು.

09015064e ತತಃ ಪ್ರಭಗ್ನಂ ತತ್ಸೈನ್ಯಂ ದೌರ್ಯೋಧನಮರಿಂದಮ।।
09015065a ತತೋ ಮದ್ರಾಧಿಪಂ ದ್ರೌಣಿರಭ್ಯಧಾವತ್ತಥಾಕೃತಂ।
09015065c ಆರೋಪ್ಯ ಚೈನಂ ಸ್ವರಥಂ ತ್ವರಮಾಣಃ ಪ್ರದುದ್ರುವೇ।।

ಆಗ ದುರ್ಯೋಧನನ ಸೈನ್ಯವು ಭಗ್ನವಾಗಿ ಹೋಯಿತು. ಅನಂತರ ದ್ರೌಣಿಯು ಧಾವಿಸಿಬಂದು ತ್ವರೆಮಾಡಿ ಮದ್ರಾಧಿಪನನ್ನು ತನ್ನ ರಥದಲ್ಲೇರಿಸಿಕೊಂಡು ಹೊರಟುಹೋದನು.

09015066a ಮುಹೂರ್ತಮಿವ ತೌ ಗತ್ವಾ ನರ್ದಮಾನೇ ಯುಧಿಷ್ಠಿರೇ।
09015066c ಸ್ಥಿತ್ವಾ ತತೋ ಮದ್ರಪತಿರನ್ಯಂ ಸ್ಯಂದನಮಾಸ್ಥಿತಃ।।
09015067a ವಿಧಿವತ್ಕಲ್ಪಿತಂ ಶುಭ್ರಂ ಮಹಾಂಬುದನಿನಾದಿನಂ।
09015067c ಸಜ್ಜಯಂತ್ರೋಪಕರಣಂ ದ್ವಿಷತಾಂ ರೋಮಹರ್ಷಣಂ।।

ಯುಧಿಷ್ಠಿರನು ಸ್ವಲ್ಪಹೊತ್ತು ಅವನನ್ನು ಹಿಂಬಾಲಿಸಿ ಹೋಗಿ ಗರ್ಜಿಸಿದನು. ಅನಂತರ ಮದ್ರಪತಿಯು ವಿಧಿವತ್ತಾಗಿ ಸಜ್ಜಾಗಿಸಿದ, ಯಂತ್ರೋಪಕರಣಗಳಿಂದ ಸುಸಜ್ಜಿತವಾದ, ಶುಭ್ರ, ಮಹಾಮೇಘದ ಗುಡುಗಿನಂತೆ ಶಬ್ಧಮಾಡುತ್ತಿದ್ದ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಇನ್ನೊಂದು ರಥವನ್ನೇರಿ ನಿಂತನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯಯುಧಿಷ್ಠಿರಯುದ್ಧೇ ಪಂಚಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯಯುಧಿಷ್ಠಿರಯುದ್ಧ ಎನ್ನುವ ಹದಿನೈದನೇ ಅಧ್ಯಾಯವು.