014 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಶಲ್ಯವಧ ಪರ್ವ

ಅಧ್ಯಾಯ 14

ಸಾರ

ದುರ್ಯೋಧನ-ಧೃಷ್ಟದ್ಯುಮ್ನರ ಯುದ್ಧ (1-6). ಕೃಪ-ಕೃತವರ್ಮರೊಡನೆ ಶಿಖಂಡಿಯ ಯುದ್ಧ (7-8). ಯುಧಿಷ್ಠಿರ-ಭೀಮಸೇನ-ಮಾದ್ರೀಪುತ್ರರು ಮತ್ತು ಸಾತ್ಯಕಿಯೊಡನೆ ಶಲ್ಯನ ಯುದ್ಧ (9-41).

09014001 ಸಂಜಯ ಉವಾಚ 09014001a ದುರ್ಯೋಧನೋ ಮಹಾರಾಜ ಧೃಷ್ಟದ್ಯುಮ್ನಶ್ಚ ಪಾರ್ಷತಃ।
09014001c ಚಕ್ರತುಃ ಸುಮಹದ್ಯುದ್ಧಂ ಶರಶಕ್ತಿಸಮಾಕುಲಂ।।

ಸಂಜಯನು ಹೇಳಿದನು: “ಮಹಾರಾಜ! ದುರ್ಯೋಧನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಬಾಣ-ಶಕ್ತ್ಯಾಯುಧಗಳಿಂದ ಕೂಡಿ ಮಹಾ ಯುದ್ಧದಲ್ಲಿ ತೊಡಗಿದರು.

09014002a ತಯೋರಾಸನ್ಮಹಾರಾಜ ಶರಧಾರಾಃ ಸಹಸ್ರಶಃ।
09014002c ಅಂಬುದಾನಾಂ ಯಥಾ ಕಾಲೇ ಜಲಧಾರಾಃ ಸಮಂತತಃ।।

ಮಹಾರಾಜ! ವರ್ಷಾಕಾಲದಲ್ಲಿ ಮೋಡಗಳು ಜಲಧಾರೆಗಳನ್ನು ಸುರಿಸುವಂತೆ ಅಲ್ಲಿ ಸಹಸ್ರಾರು ಬಾಣಗಳ ಮಳೆಯೇ ಸುರಿಯಿತು.

09014003a ರಾಜಾ ತು ಪಾರ್ಷತಂ ವಿದ್ಧ್ವಾ ಶರೈಃ ಪಂಚಭಿರಾಯಸೈಃ।
09014003c ದ್ರೋಣಹಂತಾರಮುಗ್ರೇಷುಃ ಪುನರ್ವಿವ್ಯಾಧ ಸಪ್ತಭಿಃ।।

ರಾಜಾ ದುರ್ಯೋಧನನು ಪಾರ್ಷತನನ್ನು ಐದು ಉಕ್ಕಿನ ಶರಗಳಿಂದ ಹೊಡೆದು ಆ ದ್ರೋಣಹಂತಾರನನ್ನು ಪುನಃ ಏಳು ಉಗ್ರಬಾಣಗಳಿಂದ ಪ್ರಹರಿಸಿದನು.

09014004a ಧೃಷ್ಟದ್ಯುಮ್ನಸ್ತು ಸಮರೇ ಬಲವಾನ್ದೃಢವಿಕ್ರಮಃ।
09014004c ಸಪ್ತತ್ಯಾ ವಿಶಿಖಾನಾಂ ವೈ ದುರ್ಯೋಧನಮಪೀಡಯತ್।।

ಬಲವಾನ್ ದೃಢವಿಕ್ರಮಿ ಧೃಷ್ಟದ್ಯುಮ್ನನಾದರೋ ಸಮರದಲ್ಲಿ ದುರ್ಯೋಧನನನ್ನು ಎಪ್ಪತ್ತು ವಿಶಿಖಗಳಿಂದ ಪೀಡಿಸಿದನು.

09014005a ಪೀಡಿತಂ ಪ್ರೇಕ್ಷ್ಯ ರಾಜಾನಂ ಸೋದರ್ಯಾ ಭರತರ್ಷಭ।
09014005c ಮಹತ್ಯಾ ಸೇನಯಾ ಸಾರ್ಧಂ ಪರಿವವ್ರುಃ ಸ್ಮ ಪಾರ್ಷತಂ।।

ಭರತರ್ಷಭ! ರಾಜನು ಪೀಡಿತನಾಗುತ್ತಿರುವುದನ್ನು ನೋಡಿ ಅವನ ಸಹೋದರರು ಮಹಾ ಸೇನೆಯೊಂದಿಗೆ ಪಾರ್ಷತನನ್ನು ಸುತ್ತುವರೆದು ಆಕ್ರಮಣಿಸಿದರು.

09014006a ಸ ತೈಃ ಪರಿವೃತಃ ಶೂರೈಃ ಸರ್ವತೋಽತಿರಥೈರ್ಭೃಶಂ।
09014006c ವ್ಯಚರತ್ಸಮರೇ ರಾಜನ್ದರ್ಶಯನ್ ಹಸ್ತಲಾಘವಂ।।

ರಾಜನ್! ಎಲ್ಲಕಡೆಗಳಿಂದಲೂ ಆ ಶೂರ ಅತಿರಥರಿಂದ ಸುತ್ತುವರೆಯಲ್ಪಟ್ಟ ಧೃಷ್ಟದ್ಯುಮ್ನನು ಸಮರದಲ್ಲಿ ತನ್ನ ಹಸ್ತಲಾಘವವನ್ನು ಚೆನ್ನಾಗಿ ಪ್ರದರ್ಶಿಸಿದನು.

09014007a ಶಿಖಂಡೀ ಕೃತವರ್ಮಾಣಂ ಗೌತಮಂ ಚ ಮಹಾರಥಂ।
09014007c ಪ್ರಭದ್ರಕೈಃ ಸಮಾಯುಕ್ತೋ ಯೋಧಯಾಮಾಸ ಧನ್ವಿನೌ।।

ಶಿಖಂಡಿಯು ಪ್ರಭದ್ರಕರಿಂದ ಕೂಡಿ ಧನ್ವಿಗಳಾದ ಮಹಾರಥ ಗೌತಮ -ಕೃತವರ್ಮರೊಡನೆ ಯುದ್ಧಮಾಡಿದನು.

09014008a ತತ್ರಾಪಿ ಸುಮಹದ್ಯುದ್ಧಂ ಘೋರರೂಪಂ ವಿಶಾಂ ಪತೇ।
09014008c ಪ್ರಾಣಾನ್ಸಂತ್ಯಜತಾಂ ಯುದ್ಧೇ ಪ್ರಾಣದ್ಯೂತಾಭಿದೇವನೇ।।

ವಿಶಾಂಪತೇ! ಅಲ್ಲಿ ಕೂಡ ಪ್ರಾಣಗಳನ್ನೇ ತೊರೆದು ಯುದ್ಧವೆಂಬ ದ್ಯೂತದಲ್ಲಿ ಪ್ರಾಣಗಳನ್ನೇ ಪಣವನ್ನಾಗಿಟ್ಟ ಘೋರರೂಪದ ಯುದ್ಧವು ನಡೆಯಿತು.

09014009a ಶಲ್ಯಸ್ತು ಶರವರ್ಷಾಣಿ ವಿಮುಂಚನ್ಸರ್ವತೋದಿಶಂ।
09014009c ಪಾಂಡವಾನ್ಪೀಡಯಾಮಾಸ ಸಸಾತ್ಯಕಿವೃಕೋದರಾನ್।।

ಶಲ್ಯನಾದರೋ ಸರ್ವ ದಿಕ್ಕುಗಳಲ್ಲಿ ಶರವರ್ಷಗಳನ್ನು ಸುರಿಸುತ್ತಾ ಸಾತ್ಯಕಿ-ವೃಕೋದರರೊಡನಿದ್ದ ಪಾಂಡವರನ್ನು ಪೀಡಿಸತೊಡಗಿದನು.

09014010a ತಥೋಭೌ ಚ ಯಮೌ ಯುದ್ಧೇ ಯಮತುಲ್ಯಪರಾಕ್ರಮೌ।
09014010c ಯೋಧಯಾಮಾಸ ರಾಜೇಂದ್ರ ವೀರ್ಯೇಣ ಚ ಬಲೇನ ಚ।।

ರಾಜೇಂದ್ರ! ಹಾಗೆಯೇ ಅವನು ಯುದ್ಧ ಪರಾಕ್ರಮದಲ್ಲಿ ಯಮನ ಸಮನಾಗಿದ್ದ ಯಮಳರೊಂದಿಗೆ ವೀರ್ಯ-ಬಲಗಳೊಂದಿಗೆ ಹೋರಾಡಿದನು.

09014011a ಶಲ್ಯಸಾಯಕನುನ್ನಾನಾಂ ಪಾಂಡವಾನಾಂ ಮಹಾಮೃಧೇ।
09014011c ತ್ರಾತಾರಂ ನಾಧ್ಯಗಚ್ಚಂತ ಕೇ ಚಿತ್ತತ್ರ ಮಹಾರಥಾಃ।।

ಶಲ್ಯನ ಸಾಯಕಗಳಿಂದ ಪೀಡಿತರಾದ ಪಾಂಡವ ಮಹಾರಥರು ಆ ಮಹಾಯುದ್ಧದಲ್ಲಿ ಯಾವ ತ್ರಾತಾರನನ್ನೂ ಕಾಣದೇ ಹೋದರು.

09014012a ತತಸ್ತು ನಕುಲಃ ಶೂರೋ ಧರ್ಮರಾಜೇ ಪ್ರಪೀಡಿತೇ।
09014012c ಅಭಿದುದ್ರಾವ ವೇಗೇನ ಮಾತುಲಂ ಮಾದ್ರಿನಂದನಃ।।

ಧರ್ಮರಾಜನೂ ಪೀಡಿತನಾಗಿರಲು ಶೂರ ಮಾದ್ರಿನಂದನ ನಕುಲನು ವೇಗದಿಂದ ತನ್ನ ಸೋದರ ಮಾವ ಶಲ್ಯನನ್ನು ಆಕ್ರಮಣಿಸಿದನು.

09014013a ಸಂಚಾದ್ಯ ಸಮರೇ ಶಲ್ಯಂ ನಕುಲಃ ಪರವೀರಹಾ।
09014013c ವಿವ್ಯಾಧ ಚೈನಂ ದಶಭಿಃ ಸ್ಮಯಮಾನಃ ಸ್ತನಾಂತರೇ।।

ಸಮರದಲ್ಲಿ ಪರವೀರಹ ನಕುಲನು ಶಲ್ಯನನ್ನು ಬಾಣಗಳಿಂದ ಮುಚ್ಚಿಬಿಟ್ಟು, ನಸುನಗುತ್ತಾ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು.

09014014a ಸರ್ವಪಾರಶವೈರ್ಬಾಣೈಃ ಕರ್ಮಾರಪರಿಮಾರ್ಜಿತೈಃ।
09014014c ಸ್ವರ್ಣಪುಂಖೈಃ ಶಿಲಾಧೌತೈರ್ಧನುರ್ಯಂತ್ರಪ್ರಚೋದಿತೈಃ।।
09014015a ಶಲ್ಯಸ್ತು ಪೀಡಿತಸ್ತೇನ ಸ್ವಸ್ರೀಯೇಣ ಮಹಾತ್ಮನಾ।
09014015c ನಕುಲಂ ಪೀಡಯಾಮಾಸ ಪತ್ರಿಭಿರ್ನತಪರ್ವಭಿಃ।।

ಮಹಾತ್ಮ ಸೋದರಳಿಯನ ಕಮ್ಮಾರನಿಂದ ಹದಗೊಳಿಸಲ್ಪಟ್ಟಿದ್ದ, ಸ್ವರ್ಣಪುಂಖಗಳ, ಶಿಲೆಗೆ ಉಜ್ಜಿ ಹರಿತಗೊಂಡಿದ್ದ, ಧನುಸ್ಸೆಂಬ ಯಂತ್ರದಿಂದ ಪ್ರಯೋಗಿಸಲ್ಪಟ್ಟ ಎಲ್ಲ ಲೋಹಮಯ ಬಾಣಗಳಿಂದ ಪೀಡಿತನಾದ ಶಲ್ಯನು ನತಪರ್ವ-ಪತ್ರಿಗಳಿಂದ ನಕುಲನನ್ನು ಪೀಡಿಸತೊಡಗಿದನು.

09014016a ತತೋ ಯುಧಿಷ್ಠಿರೋ ರಾಜಾ ಭೀಮಸೇನೋಽಥ ಸಾತ್ಯಕಿಃ।
09014016c ಸಹದೇವಶ್ಚ ಮಾದ್ರೇಯೋ ಮದ್ರರಾಜಮುಪಾದ್ರವನ್।।

ಆಗ ರಾಜಾ ಯುಧಿಷ್ಠಿರ, ಭೀಮಸೇನ, ಸಾತ್ಯಕಿ ಮತ್ತು ಮಾದ್ರೇಯ ಸಹದೇವರು ಮದ್ರರಾಜನನ್ನು ಮುತ್ತಿದರು.

09014017a ತಾನಾಪತತ ಏವಾಶು ಪೂರಯಾನಾನ್ರಥಸ್ವನೈಃ।
09014017c ದಿಶಶ್ಚ ಪ್ರದಿಶಶ್ಚೈವ ಕಂಪಯಾನಾಂಶ್ಚ ಮೇದಿನೀಂ।।
09014017e ಪ್ರತಿಜಗ್ರಾಹ ಸಮರೇ ಸೇನಾಪತಿರಮಿತ್ರಜಿತ್।।

ರಥಘೋಷಗಳಿಂದ ದಿಕ್ಕು-ಉಪದಿಕ್ಕುಗಳನ್ನು ಮೊಳಗಿಸುತ್ತಾ, ಭೂಮಿಯನ್ನೇ ನಡುಗಿಸುತ್ತಾ ತನ್ನ ಮೇಲೆ ಬೀಳುತ್ತಿದ್ದ ಅವರನ್ನು ಸಮರದಲ್ಲಿ ಸೇನಾಪತಿ-ಅಮಿತ್ರಜಿತು ಶಲ್ಯನು ತಡೆದನು.

09014018a ಯುಧಿಷ್ಠಿರಂ ತ್ರಿಭಿರ್ವಿದ್ಧ್ವಾ ಭೀಮಸೇನಂ ಚ ಸಪ್ತಭಿಃ।
09014018c ಸಾತ್ಯಕಿಂ ಚ ಶತೇನಾಜೌ ಸಹದೇವಂ ತ್ರಿಭಿಃ ಶರೈಃ।।

ಅವನು ಯುಧಿಷ್ಠಿರನನ್ನು ಮೂರು ಬಾಣಗಳಿಂದಲೂ, ಭೀಮಸೇನನನ್ನು ಏಳರಿಂದಲೂ, ಸಾತ್ಯಕಿಯನ್ನು ನೂರರಿಂದಲೂ ಮತ್ತು ಸಹದೇವನನ್ನು ಮೂರು ಶರಗಳಿಂದಲೂ ಹೊಡೆದನು.

09014019a ತತಸ್ತು ಸಶರಂ ಚಾಪಂ ನಕುಲಸ್ಯ ಮಹಾತ್ಮನಃ।
09014019c ಮದ್ರೇಶ್ವರಃ ಕ್ಷುರಪ್ರೇಣ ತದಾ ಚಿಚ್ಚೇದ ಮಾರಿಷ।।
09014019e ತದಶೀರ್ಯತ ವಿಚ್ಚಿನ್ನಂ ಧನುಃ ಶಲ್ಯಸ್ಯ ಸಾಯಕೈಃ।।

ಮಾರಿಷ! ಅನಂತರ ಮದ್ರರಾಜನು ಮಹಾತ್ಮ ನಕುಲನ ಬಾಣಸಹಿತ ಧನುಸ್ಸನ್ನು ಕ್ಷುರಪ್ರದಿಂದ ಕತ್ತರಿಸಿದನು. ಶಲ್ಯನ ಸಾಯಕಗಳಿಂದ ಸೀಳಲ್ಪಟ್ಟ ಆ ಧನುಸ್ಸು ಚೂರುಚೂರಾಯಿತು.

09014020a ಅಥಾನ್ಯದ್ಧನುರಾದಾಯ ಮಾದ್ರೀಪುತ್ರೋ ಮಹಾರಥಃ।
09014020c ಮದ್ರರಾಜರಥಂ ತೂರ್ಣಂ ಪೂರಯಾಮಾಸ ಪತ್ರಿಭಿಃ।।

ಕೂಡಲೇ ಮಹಾರಥ ಮಾದ್ರೀಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪತ್ರಿಗಳಿಂದ ಮದ್ರರಾಜನ ರಥವನ್ನು ತುಂಬಿಸಿಬಿಟ್ಟನು.

09014021a ಯುಧಿಷ್ಠಿರಸ್ತು ಮದ್ರೇಶಂ ಸಹದೇವಶ್ಚ ಮಾರಿಷ।
09014021c ದಶಭಿರ್ದಶಭಿರ್ಬಾಣೈರುರಸ್ಯೇನಮವಿಧ್ಯತಾಂ।।

ಮಾರಿಷ! ಯುಧಿಷ್ಠಿರ ಮತ್ತು ಸಹದೇವರಾದರೋ ಮದ್ರೇಶನ ಎದೆಗೆ ಹತ್ತು-ಹತ್ತು ಬಾಣಗಳಿಂದ ಹೊಡೆದರು.

09014022a ಭೀಮಸೇನಸ್ತತಃ ಷಷ್ಟ್ಯಾ ಸಾತ್ಯಕಿರ್ನವಭಿಃ ಶರೈಃ।
09014022c ಮದ್ರರಾಜಮಭಿದ್ರುತ್ಯ ಜಘ್ನತುಃ ಕಂಕಪತ್ರಿಭಿಃ।।

ಅನಂತರ ಭೀಮಸೇನನು ಅರವತ್ತು ಬಾಣಗಳಿಂದಲೂ ಸಾತ್ಯಕಿಯು ಒಂಭತ್ತು ಕಂಕಪತ್ರಿ ಶರಗಳಿಂದಲೂ ಮದ್ರರಾಜನನ್ನು ವೇಗದಿಂದ ಹೊಡೆದರು.

09014023a ಮದ್ರರಾಜಸ್ತತಃ ಕ್ರುದ್ಧಃ ಸಾತ್ಯಕಿಂ ನವಭಿಃ ಶರೈಃ।
09014023c ವಿವ್ಯಾಧ ಭೂಯಃ ಸಪ್ತತ್ಯಾ ಶರಾಣಾಂ ನತಪರ್ವಣಾಂ।।

ಆಗ ಕ್ರುದ್ಧ ಮದ್ರರಾಜನು ಸಾತ್ಯಕಿಯನ್ನು ಒಂಭತ್ತು ಶರಗಳಿಂದ ಹೊಡೆದು ಪುನಃ ಅವನನ್ನು ಏಳು ನತಪರ್ವ ಶರಗಳಿಂದ ಹೊಡೆದನು.

09014024a ಅಥಾಸ್ಯ ಸಶರಂ ಚಾಪಂ ಮುಷ್ಟೌ ಚಿಚ್ಚೇದ ಮಾರಿಷ।
09014024c ಹಯಾಂಶ್ಚ ಚತುರಃ ಸಂಖ್ಯೇ ಪ್ರೇಷಯಾಮಾಸ ಮೃತ್ಯವೇ।।

ಮಾರಿಷ! ಕೂಡಲೇ ಅವನು ಸಾತ್ಯಕಿಯ ಧನುಸ್ಸನ್ನು ಬಾಣದೊಂದಿಗೆ ಅದರ ಮುಷ್ಟಿಪ್ರದೇಶದಲ್ಲಿ ತುಂಡರಿಸಿ, ಯುದ್ಧದಲ್ಲಿ ಅವನ ನಾಲ್ಕು ಕುದುರೆಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

09014025a ವಿರಥಂ ಸಾತ್ಯಕಿಂ ಕೃತ್ವಾ ಮದ್ರರಾಜೋ ಮಹಾಬಲಃ।
09014025c ವಿಶಿಖಾನಾಂ ಶತೇನೈನಮಾಜಘಾನ ಸಮಂತತಃ।।

ಸಾತ್ಯಕಿಯನ್ನು ವಿರಥನನ್ನಾಗಿಸಿ ಮಹಾಬಲ ಮದ್ರರಾಜನು ನೂರು ವಿಶಿಖಗಳಿಂದ ಅವನನ್ನು ಎಲ್ಲಕಡೆ ಗಾಯಗೊಳಿಸಿದನು.

09014026a ಮಾದ್ರೀಪುತ್ರೌ ತು ಸಂರಬ್ಧೌ ಭೀಮಸೇನಂ ಚ ಪಾಂಡವಂ।
09014026c ಯುಧಿಷ್ಠಿರಂ ಚ ಕೌರವ್ಯ ವಿವ್ಯಾಧ ದಶಭಿಃ ಶರೈಃ।।

ಶಲ್ಯನು ಕ್ರುದ್ಧ ಮಾದ್ರೀಪುತ್ರರಿಬ್ಬರನ್ನೂ, ಪಾಂಡವ ಭೀಮಸೇನನನ್ನೂ, ಕೌರವ್ಯ ಯುಧಿಷ್ಠಿರನನ್ನೂ ಹತ್ತು ಶರಗಳಿಂದ ಪ್ರಹರಿಸಿದನು.

09014027a ತತ್ರಾದ್ಭುತಮಪಶ್ಯಾಮ ಮದ್ರರಾಜಸ್ಯ ಪೌರುಷಂ।
09014027c ಯದೇನಂ ಸಹಿತಾಃ ಪಾರ್ಥಾ ನಾಭ್ಯವರ್ತಂತ ಸಮ್ಯುಗೇ।।

ಅಲ್ಲಿ ಮದ್ರರಾಜನ ಅದ್ಭುತ ಪೌರುಷವನ್ನು ನೋಡಿದೆವು. ಪಾರ್ಥರು ಒಂದಾಗಿ ಹೋರಾಡುತ್ತಿದ್ದರೂ ಅವನನ್ನು ಯುದ್ಧದಿಂದ ಹಿಮ್ಮೆಟ್ಟಿಸಲಾಗಲಿಲ್ಲ.

09014028a ಅಥಾನ್ಯಂ ರಥಮಾಸ್ಥಾಯ ಸಾತ್ಯಕಿಃ ಸತ್ಯವಿಕ್ರಮಃ।
09014028c ಪೀಡಿತಾನ್ಪಾಂಡವಾನ್ದೃಷ್ಟ್ವಾ ಮದ್ರರಾಜವಶಂ ಗತಾನ್।।
09014028e ಅಭಿದುದ್ರಾವ ವೇಗೇನ ಮದ್ರಾಣಾಮಧಿಪಂ ಬಲೀ।।

ಆಗ ಸತ್ಯವಿಕ್ರಮಿ ಸಾತ್ಯಕಿಯು ಇನ್ನೊಂದು ರಥವನ್ನೇರಿ ಮದ್ರರಾಜನ ವಶರಾಗಿ ಪೀಡೆಗೊಳಗಾಗುತ್ತಿದ್ದ ಪಾಂಡವರನ್ನು ನೋಡಿ ವೇಗದಿಂದ ಬಲಶಾಲೀ ಮದ್ರರಾಜನನ್ನು ಆಕ್ರಮಣಿಸಿದನು.

09014029a ಆಪತಂತಂ ರಥಂ ತಸ್ಯ ಶಲ್ಯಃ ಸಮಿತಿಶೋಭನಃ।
09014029c ಪ್ರತ್ಯುದ್ಯಯೌ ರಥೇನೈವ ಮತ್ತೋ ಮತ್ತಮಿವ ದ್ವಿಪಂ।।

ಮೇಲೆ ಎರಗುತ್ತಿದ್ದ ಅವನ ರಥವನ್ನು ಸಮಿತಿಶೋಭನ ಶಲ್ಯನು ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಹೇಗೋ ಹಾಗೆ ರಥದಿಂದಲೇ ಆಕ್ರಮಣಿಸಿ ಯುದ್ಧಮಾಡಿದನು.

09014030a ಸ ಸಂನಿಪಾತಸ್ತುಮುಲೋ ಬಭೂವಾದ್ಭುತದರ್ಶನಃ।
09014030c ಸಾತ್ಯಕೇಶ್ಚೈವ ಶೂರಸ್ಯ ಮದ್ರಾಣಾಮಧಿಪಸ್ಯ ಚ।।
09014030e ಯಾದೃಶೋ ವೈ ಪುರಾ ವೃತ್ತಃ ಶಂಬರಾಮರರಾಜಯೋಃ।।

ಸಾತ್ಯಕಿ ಮತ್ತು ಶೂರ ಮದ್ರರಾಜರ ನಡುವೆ ನಡೆದ ಆ ತುಮುಲ ಯುದ್ಧವು ಹಿಂದೆ ಶಂಬರ-ಅಮರರಾಜರ ನಡುವೆ ನಡೆದ ಯುದ್ಧದಂತೆ ನೋಡಲು ಅದ್ಭುತವಾಗಿತ್ತು.

09014031a ಸಾತ್ಯಕಿಃ ಪ್ರೇಕ್ಷ್ಯ ಸಮರೇ ಮದ್ರರಾಜಂ ವ್ಯವಸ್ಥಿತಂ।
09014031c ವಿವ್ಯಾಧ ದಶಭಿರ್ಬಾಣೈಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।

ಸಮರದಲ್ಲಿ ವ್ಯವಸ್ಥಿತನಾಗಿದ್ದ ಮದ್ರರಾಜನನ್ನು ನೋಡಿ ಸಾತ್ಯಕಿಯು ಅವನನ್ನು ಹತ್ತು ಬಾಣಗಳಿಂದ ಪ್ರಹರಿಸಿ ನಿಲ್ಲು ನಿಲ್ಲೆಂದು ಹೇಳಿದನು.

09014032a ಮದ್ರರಾಜಸ್ತು ಸುಭೃಶಂ ವಿದ್ಧಸ್ತೇನ ಮಹಾತ್ಮನಾ।
09014032c ಸಾತ್ಯಕಿಂ ಪ್ರತಿವಿವ್ಯಾಧ ಚಿತ್ರಪುಂಖೈಃ ಶಿತೈಃ ಶರೈಃ।।

ಆ ಮಹಾತ್ಮನಿಂದ ಬಹಳವಾಗಿ ಗಾಯಗೊಂಡ ಮದ್ರರಾಜನು ವಿಚಿತ್ರ ಪುಂಖಗಳ ನಿಶಿತ ಶರಗಳಿಂದ ಸಾತ್ಯಕಿಯನ್ನು ತಿರುಗಿ ಪ್ರಹರಿಸಿದನು.

09014033a ತತಃ ಪಾರ್ಥಾ ಮಹೇಷ್ವಾಸಾಃ ಸಾತ್ವತಾಭಿಸೃತಂ ನೃಪಂ।
09014033c ಅಭ್ಯದ್ರವನ್ರಥೈಸ್ತೂರ್ಣಂ ಮಾತುಲಂ ವಧಕಾಮ್ಯಯಾ।।

ಆಗ ಮಹೇಷ್ವಾಸ ಪಾರ್ಥರು ಸಾತ್ವತನೊಡನೆ ಯುದ್ಧದಲ್ಲಿ ತೊಡಗಿದ್ದ ಸೋದರಮಾವ ನೃಪನನ್ನು ವಧಿಸಲು ಬಯಸಿ ಕೂಡಲೇ ರಥಗಳೊಂದಿಗೆ ಅವನನ್ನು ಆಕ್ರಮಣಿಸಿದರು.

09014034a ತತ ಆಸೀತ್ಪರಾಮರ್ದಸ್ತುಮುಲಃ ಶೋಣಿತೋದಕಃ।
09014034c ಶೂರಾಣಾಂ ಯುಧ್ಯಮಾನಾನಾಂ ಸಿಂಹಾನಾಮಿವ ನರ್ದತಾಂ।।

ಆಗ ಅಲ್ಲಿ ಸಿಂಹಗಳಂತೆ ಗರ್ಜಿಸುತ್ತಿದ್ದ ಪರಸ್ಪರರನ್ನು ಗಾಯಗೊಳಿಸಿ ರಕ್ತದ ನೀರನ್ನೇ ಸುರಿಸುತ್ತಿದ್ದ ಶೂರರ ತುಮುಲಯುದ್ಧವು ನಡೆಯಿತು.

09014035a ತೇಷಾಮಾಸೀನ್ಮಹಾರಾಜ ವ್ಯತಿಕ್ಷೇಪಃ ಪರಸ್ಪರಂ।
09014035c ಸಿಂಹಾನಾಮಾಮಿಷೇಪ್ಸೂನಾಂ ಕೂಜತಾಮಿವ ಸಂಯುಗೇ।।

ಮಹಾರಾಜ! ಒಂದೇ ಮಾಂಸದ ತುಂಡಿಗಾಗಿ ಗರ್ಜಿಸಿ ಹೊಡೆದಾಡುತ್ತಿರುವ ಸಿಂಹಗಳಂತೆ ಪರಸ್ಪರರನ್ನು ಗಾಯಗೊಳಿಸುವ ಮಹಾಯುದ್ಧವು ಅವರ ನಡುವೆ ನಡೆಯಿತು.

09014036a ತೇಷಾಂ ಬಾಣಸಹಸ್ರೌಘೈರಾಕೀರ್ಣಾ ವಸುಧಾಭವತ್।
09014036c ಅಂತರಿಕ್ಷಂ ಚ ಸಹಸಾ ಬಾಣಭೂತಮಭೂತ್ತದಾ।।

ಅವರ ಸಹಸ್ರಾರು ಬಾಣಗಳಿಂದ ಭೂಮಿಯು ತುಂಬಿಹೋಯಿತು. ಕೂಡಲೇ ಅಂತರಿಕ್ಷವೂ ಕೂಡ ಬಾಣಮಯವಾಯಿತು.

09014037a ಶರಾಂಧಕಾರಂ ಬಹುಧಾ ಕೃತಂ ತತ್ರ ಸಮಂತತಃ।
09014037c ಅಭ್ರಚ್ಚಾಯೇವ ಸಂಜಜ್ಞೇ ಶರೈರ್ಮುಕ್ತೈರ್ಮಹಾತ್ಮಭಿಃ।।

ಆ ಮಹಾತ್ಮರು ಪ್ರಯೋಗಿಸಿದ ಶರಗಳಿಂದ ಅಲ್ಲಿ ಎಲ್ಲ ಕಡೆ ಅತ್ಯಂತ ಶರಾಂಧಕಾರವುಂಟಾಗಿ, ಮೋಡಗಳಿಂದ ಉಂಟಾದ ನೆರಳಿನಂತೆಯೇ ಕಾಣುತ್ತಿತ್ತು.

09014038a ತತ್ರ ರಾಜನ್ ಶರೈರ್ಮುಕ್ತೈರ್ನಿರ್ಮುಕ್ತೈರಿವ ಪನ್ನಗೈಃ।
09014038c ಸ್ವರ್ಣಪುಂಖೈಃ ಪ್ರಕಾಶದ್ಭಿರ್ವ್ಯರೋಚಂತ ದಿಶಸ್ತಥಾ।।

ರಾಜನ್! ಅಲ್ಲಿ ಪ್ರಯೋಗಿಸಲ್ಪಟ್ಟ ಪೊರೆಬಿಟ್ಟ ಸರ್ಪಗಳಂತೆ ಹೊಳೆಯುತ್ತಿದ್ದ ಸ್ವರ್ಣಪುಂಖ ಶರಗಳಿಂದ ದಿಕ್ಕುಗಳು ಬೆಳಗಿದವು.

09014039a ತತ್ರಾದ್ಭುತಂ ಪರಂ ಚಕ್ರೇ ಶಲ್ಯಃ ಶತ್ರುನಿಬರ್ಹಣಃ।
09014039c ಯದೇಕಃ ಸಮರೇ ಶೂರೋ ಯೋಧಯಾಮಾಸ ವೈ ಬಹೂನ್।।

ಸಮರದಲ್ಲಿ ಶತ್ರುನಾಶಕ ಶೂರ ಶಲ್ಯನು ಒಬ್ಬನೇ ಅನೇಕರೊಡನೆ ಯುದ್ಧಮಾಡುತ್ತಿದ್ದ ಅದು ಒಂದು ಪರಮ ಅದ್ಭುತವಾಗಿತ್ತು.

09014040a ಮದ್ರರಾಜಭುಜೋತ್ಸೃಷ್ಟೈಃ ಕಂಕಬರ್ಹಿಣವಾಜಿತೈಃ।
09014040c ಸಂಪತದ್ಭಿಃ ಶರೈರ್ಘೋರೈರವಾಕೀರ್ಯತ ಮೇದಿನೀ।।

ಮದ್ರರಾಜನ ಭುಜಗಳಿಂದ ಪ್ರಮುಕ್ತವಾಗಿ ಕೆಳಗೆ ಬೀಳುತ್ತಿದ್ದ ರಣಹದ್ದು-ನವಿಲ ಗರಿಗಳ ಘೋರಶರಗಳಿಂದ ರಣಭೂಮಿಯು ತುಂಬಿಹೋಯಿತು.

09014041a ತತ್ರ ಶಲ್ಯರಥಂ ರಾಜನ್ವಿಚರಂತಂ ಮಹಾಹವೇ।
09014041c ಅಪಶ್ಯಾಮ ಯಥಾ ಪೂರ್ವಂ ಶಕ್ರಸ್ಯಾಸುರಸಂಕ್ಷಯೇ।।

ರಾಜನ್! ಹಿಂದೆ ಅಸುರವಿನಾಶನಸಮಯದಲ್ಲಿ ಶಕ್ರನ ರಥವು ಹೇಗಿತ್ತೋ ಹಾಗೆ ಆ ಮಹಾಯುದ್ಧದಲ್ಲಿ ಶಲ್ಯನ ರಥವು ಸಂಚರಿಸುತ್ತಿದ್ದುದನ್ನು ನಾವು ನೋಡಿದೆವು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ಚತುರ್ದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನಾಲ್ಕನೇ ಅಧ್ಯಾಯವು.