ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 13
ಸಾರ
ಅಶ್ವತ್ಥಾಮ ಮತ್ತು ತ್ರಿಗರ್ತರೊಡನೆ ಅರ್ಜುನನ ಯುದ್ಧ (1-33). ಅಶ್ವತ್ಥಾಮನಿಂದ ಪಾಂಚಾಲ ಸುರಥನ ವಧೆ (34-41). ಅರ್ಜುನ ಪರಾಕ್ರಮ (42-45).
09013001 ಸಂಜಯ ಉವಾಚ 09013001a ಅರ್ಜುನೋ ದ್ರೌಣಿನಾ ವಿದ್ಧೋ ಯುದ್ಧೇ ಬಹುಭಿರಾಯಸೈಃ।
09013001c ತಸ್ಯ ಚಾನುಚರೈಃ ಶೂರೈಸ್ತ್ರಿಗರ್ತಾನಾಂ ಮಹಾರಥೈಃ।।
09013001e ದ್ರೌಣಿಂ ವಿವ್ಯಾಧ ಸಮರೇ ತ್ರಿಭಿರೇವ ಶಿಲೀಮುಖೈಃ।।
ಸಂಜಯನು ಹೇಳಿದನು: “ದ್ರೌಣಿ ಮತ್ತು ಅವನನ್ನು ಅನುಸರಿಸಿ ಹೋಗುತ್ತಿದ್ದ ತ್ರಿಗರ್ತರ ಮಹಾರಥಶೂರರು ಅರ್ಜುನನನ್ನು ಅನೇಕ ಲೋಹಮಯ ಬಾಣಗಳಿಂದ ಗಾಯಗೊಳಿಸಿದರು. ಆಗ ಸಮರದಲ್ಲಿ ಅರ್ಜುನನು ದ್ರೌಣಿಯನ್ನು ಮೂರು ಶಿಲೀಮುಖಿಗಳಿಂದ ಹೊಡೆದನು.
09013002a ತಥೇತರಾನ್ಮಹೇಷ್ವಾಸಾನ್ದ್ವಾಭ್ಯಾಂ ದ್ವಾಭ್ಯಾಂ ಧನಂಜಯಃ।
09013002c ಭೂಯಶ್ಚೈವ ಮಹಾಬಾಹುಃ ಶರವರ್ಷೈರವಾಕಿರತ್।।
ಇತರ ಮಹೇಷ್ವಾಸರನ್ನೂ ಎರೆಡೆರಡು ಬಾಣಗಳಿಂದ ಮಹಾಬಾಹು ಧನಂಜಯನು ಹೊಡೆದು ಪುನಃ ಅವರನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು.
09013003a ಶರಕಂಟಕಿತಾಸ್ತೇ ತು ತಾವಕಾ ಭರತರ್ಷಭ।
09013003c ನ ಜಹುಃ ಸಮರೇ ಪಾರ್ಥಂ ವಧ್ಯಮಾನಾಃ ಶಿತೈಃ ಶರೈಃ।।
ಭರತರ್ಷಭ! ಮುಳ್ಳುಗಳಂತಿದ್ದ ಬಾಣಗಳು ನಾಟಿಕೊಂಡಿದ್ದರೂ ಪಾರ್ಥನ ನಿಶಿತ ಶರಗಳಿಂದ ಪ್ರಹರಿಸಲ್ಪಡುತ್ತಿದ್ದ ನಿನ್ನವರು ಸಮರದಲ್ಲಿ ಪಾರ್ಥನನ್ನು ಬಿಟ್ಟು ಕದಲಲಿಲ್ಲ.
09013004a ತೇಽರ್ಜುನಂ ರಥವಂಶೇನ ದ್ರೋಣಪುತ್ರಪುರೋಗಮಾಃ।
09013004c ಅಯೋಧಯಂತ ಸಮರೇ ಪರಿವಾರ್ಯ ಮಹಾರಥಾಃ।।
ದ್ರೋಣಪುತ್ರನ ನಾಯಕತ್ವದಲ್ಲಿ ಆ ಮಹಾರಥರು ರಥಸಮೂಹಗಳಿಂದ ಸಮರದಲ್ಲಿ ಅರ್ಜುನನನ್ನು ಸುತ್ತುವರೆದು ಯುದ್ಧಮಾಡುತ್ತಿದ್ದರು.
09013005a ತೈಸ್ತು ಕ್ಷಿಪ್ತಾಃ ಶರಾ ರಾಜನ್ಕಾರ್ತಸ್ವರವಿಭೂಷಿತಾಃ।
09013005c ಅರ್ಜುನಸ್ಯ ರಥೋಪಸ್ಥಂ ಪೂರಯಾಮಾಸುರಂಜಸಾ।।
ರಾಜನ್! ಅವರು ಪ್ರಯೋಗಿಸುತ್ತಿದ್ದ ಸುವರ್ಣ ವಿಭೂಷಿತ ಶರಗಳು ಬೇಗನೇ ಅರ್ಜುನನ ರಥಪೀಠವನ್ನು ತುಂಬಿಬಿಟ್ಟವು.
09013006a ತಥಾ ಕೃಷ್ಣೌ ಮಹೇಷ್ವಾಸೌ ವೃಷಭೌ ಸರ್ವಧನ್ವಿನಾಂ।
09013006c ಶರೈರ್ವೀಕ್ಷ್ಯ ವಿತುನ್ನಾಂಗೌ ಪ್ರಹೃಷ್ಟೌ ಯುದ್ಧದುರ್ಮದೌ।।
ಆಗ ಸರ್ವಧನ್ವಿಗಳಲ್ಲಿ ವೃಷಭರಂತಿದ್ದ ಯುದ್ಧದುರ್ಮದ ಮಹೇಷ್ವಾಸ ಕೃಷ್ಣರಿಬ್ಬರ ಅಂಗಗಳೂ ತಮ್ಮ ಶರಗಳಿಂದ ಕ್ಷತವಿಕ್ಷತವಾಗಿರುವುದನ್ನು ನೋಡಿ ಅವರು ಪ್ರಹೃಷ್ಟರಾದರು.
09013007a ಕೂಬರಂ ರಥಚಕ್ರಾಣಿ ಈಷಾ ಯೋಕ್ತ್ರಾಣಿ ಚಾಭಿಭೋ।
09013007c ಯುಗಂ ಚೈವಾನುಕರ್ಷಂ ಚ ಶರಭೂತಮಭೂತ್ತದಾ।।
ವಿಭೋ! ಅರ್ಜುನನ ರಥದ ಮೂಕಿ, ಚಕ್ರಗಳು, ಹಗ್ಗಗಳು, ನೊಗ, ತೋಳುಮರ – ಎಲ್ಲವೂ ಬಾಣಮಯವಾಗಿದ್ದವು. ಅದೊಂದು ಅಭೂತಪೂರ್ವವಾಗಿತ್ತು.
09013008a ನೈತಾದೃಶಂ ದೃಷ್ಟಪೂರ್ವಂ ರಾಜನ್ನೈವ ಚ ನಃ ಶ್ರುತಂ।
09013008c ಯಾದೃಶಂ ತತ್ರ ಪಾರ್ಥಸ್ಯ ತಾವಕಾಃ ಸಂಪ್ರಚಕ್ರಿರೇ।।
ರಾಜನ್! ಅಲ್ಲಿ ನಿನ್ನವರು ಪಾರ್ಥನಿಗೆ ಕೊಟ್ಟ ಉಪಟಳವನ್ನು ಇದಕ್ಕೂ ಮೊದಲು ಯಾರೂ ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ.
09013009a ಸ ರಥಃ ಸರ್ವತೋ ಭಾತಿ ಚಿತ್ರಪುಂಖೈಃ ಶಿತೈಃ ಶರೈಃ।
09013009c ಉಲ್ಕಾಶತೈಃ ಸಂಪ್ರದೀಪ್ತಂ ವಿಮಾನಮಿವ ಭೂತಲೇ।।
ವಿಚಿತ್ರ ಪುಂಖಗಳ ನಿಶಿತ ಶರಗಳಿಂದ ಎಲ್ಲಕಡೆ ತುಂಬಿಹೋಗಿದ್ದ ಅವನ ರಥವು ರಣಭೂಮಿಯಲ್ಲಿ ನೂರಾರು ಉಲ್ಕೆಗಳು ಉರಿಯುತ್ತಿರುವ ವಿಮಾನದಂತೆಯೇ ಕಾಣುತ್ತಿತ್ತು.
09013010a ತತೋಽರ್ಜುನೋ ಮಹಾರಾಜ ಶರೈಃ ಸನ್ನತಪರ್ವಭಿಃ।
09013010c ಅವಾಕಿರತ್ತಾಂ ಪೃತನಾಂ ಮೇಘೋ ವೃಷ್ಟ್ಯಾ ಯಥಾಚಲಂ।।
ಮಹಾರಾಜ! ಆಗ ಅರ್ಜುನನು ಸನ್ನತಪರ್ವ ಶರಗಳಿಂದ ಮೇಘವು ಪರ್ವತವನ್ನು ಮಳೆಯಿಂದ ಹೇಗೋ ಹಾಗೆ ಸೇನಾಸಮೂಹಗಳನ್ನು ಮುಚ್ಚಿಬಿಟ್ಟನು.
09013011a ತೇ ವಧ್ಯಮಾನಾಃ ಸಮರೇ ಪಾರ್ಥನಾಮಾಂಕಿತೈಃ ಶರೈಃ।
09013011c ಪಾರ್ಥಭೂತಮಮನ್ಯಂತ ಪ್ರೇಕ್ಷಮಾಣಾಸ್ತಥಾವಿಧಂ।।
ಸಮರದಲ್ಲಿ ಪಾರ್ಥನಾಮಾಂಕಿತ ಶರಗಳಿಂದ ವಧಿಸಲ್ಪಟ್ಟ ಅವರು ಪಾರ್ಥನನ್ನು ಬಾಣರೂಪದಲ್ಲಿಯೇ ಕಾಣುತ್ತಾ ಸರ್ವವೂ ಪಾರ್ಥಮಯವಾಗಿದೆಯೆಂದೇ ಭಾವಿಸಿದರು.
09013012a ತತೋಽದ್ಭುತಶರಜ್ವಾಲೋ ಧನುಃಶಬ್ದಾನಿಲೋ ಮಹಾನ್।
09013012c ಸೇನೇಂಧನಂ ದದಾಹಾಶು ತಾವಕಂ ಪಾರ್ಥಪಾವಕಃ।।
ಆಗ ಅದ್ಭುತ ಶರಜ್ವಾಲೆ ಮತ್ತು ಧನುಸ್ಸಿನ ಟೇಂಕಾರ ಶಬ್ಧದ ಮಹಾ ಭಿರುಗಾಳಿಯಿಂದ ಪಾರ್ಥನೆಂಬ ಪಾವಕನು ನಿನ್ನ ಸೇನೆಯನ್ನು ಇಂಧನದಂತೆ ಸುಟ್ಟನು.
09013013a ಚಕ್ರಾಣಾಂ ಪತತಾಂ ಚೈವ ಯುಗಾನಾಂ ಚ ಧರಾತಲೇ।
09013013c ತೂಣೀರಾಣಾಂ ಪತಾಕಾನಾಂ ಧ್ವಜಾನಾಂ ಚ ರಥೈಃ ಸಹ।।
09013014a ಈಷಾಣಾಮನುಕರ್ಷಾಣಾಂ ತ್ರಿವೇಣೂನಾಂ ಚ ಭಾರತ।
09013014c ಅಕ್ಷಾಣಾಮಥ ಯೋಕ್ತ್ರಾಣಾಂ ಪ್ರತೋದಾನಾಂ ಚ ಸರ್ವಶಃ।।
09013015a ಶಿರಸಾಂ ಪತತಾಂ ಚೈವ ಕುಂಡಲೋಷ್ಣೀಷಧಾರಿಣಾಂ।
09013015c ಭುಜಾನಾಂ ಚ ಮಹಾರಾಜ ಸ್ಕಂಧಾನಾಂ ಚ ಸಮಂತತಃ।।
09013016a ಚತ್ರಾಣಾಂ ವ್ಯಜನೈಃ ಸಾರ್ಧಂ ಮುಕುಟಾನಾಂ ಚ ರಾಶಯಃ।
09013016c ಸಮದೃಶ್ಯಂತ ಪಾರ್ಥಸ್ಯ ರಥಮಾರ್ಗೇಷು ಭಾರತ।।
ಭಾರತ! ರಣಭೂಮಿಯಲ್ಲಿ ಪಾರ್ಥನ ರಥಮಾರ್ಗದಲ್ಲಿ ರಥಗಳೊಂದಿಗೆ ಚಕ್ರಗಳು-ನೊಗಗಳು-ತೂಣೀರಗಳು-ಪತಾಕೆಗಳು- ಧ್ವಜಗಳು-ಈಷಾದಂಡಗಳು-ಹಗ್ಗಗಳು-ತ್ರಿವೇಣುಗಳು-ಅಚ್ಚುಮರಗಳು- ಲಗಾಮುಗಳು-ಚಾವಟಿಗಳು-ಕುಂಡಲ-ಶಿರಸ್ತ್ರಾಣಗಳನ್ನು ಧರಿಸಿದ್ದ ಶಿರಸ್ಸುಗಳು-ಭುಜಗಳು-ಹೆಗಲುಗಳು-ಛತ್ರ-ವ್ಯಜನಗಳು-ಕಿರೀಟಗಳು ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದಿತು.
09013017a ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ।
09013017c ಬಭೂವ ಭರತಶ್ರೇಷ್ಠ ರುದ್ರಸ್ಯಾಕ್ರೀಡನಂ ಯಥಾ।।
09013017e ಭೀರೂಣಾಂ ತ್ರಾಸಜನನೀ ಶೂರಾಣಾಂ ಹರ್ಷವರ್ಧನೀ।।
ಭರತಶ್ರೇಷ್ಠ! ಮಾಂಸ-ರಕ್ತಗಳ ಕೆಸರಿನಿಂದ ರಣಭೂಮಿಯು ತಿರುಗಾಡಲು ದುರ್ಗಮವಾಗಿ, ಅದು ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ, ರುದ್ರದೇವನ ಆಟದ ಮೈದಾನದಂತಾಯಿತು.
09013018a ಹತ್ವಾ ತು ಸಮರೇ ಪಾರ್ಥಃ ಸಹಸ್ರೇ ದ್ವೇ ಪರಂತಪ।
09013018c ರಥಾನಾಂ ಸವರೂಥಾನಾಂ ವಿಧೂಮೋಽಗ್ನಿರಿವ ಜ್ವಲನ್।।
ಸಮರದಲ್ಲಿ ಪರಂತಪ ಪಾರ್ಥನು ಎರಡು ಸಾವಿರ ರಥಗಳನ್ನು ಧ್ವಂಸಮಾಡಿ ಧೂಮರಹಿತ ಅಗ್ನಿಜ್ವಾಲೆಯಂತೆ ಪ್ರಕಾಶಿಸಿದನು.
09013019a ಯಥಾ ಹಿ ಭಗವಾನಗ್ನಿರ್ಜಗದ್ದಗ್ಧ್ವಾ ಚರಾಚರಂ।
09013019c ವಿಧೂಮೋ ದೃಶ್ಯತೇ ರಾಜಂಸ್ತಥಾ ಪಾರ್ಥೋ ಮಹಾರಥಃ।।
ರಾಜನ್! ಚರಾಜರಗಳೊಂದಿಗೆ ಜಗತ್ತನ್ನೇ ಸುಟ್ಟ ಭಗವಾನ್ ಅಗ್ನಿಯು ಧೂಮರಹಿತನಾಗಿ ಕಾಣುವಂತೆ ಮಹಾರಥ ಪಾರ್ಥನು ಕಂಡನು.
09013020a ದ್ರೌಣಿಸ್ತು ಸಮರೇ ದೃಷ್ಟ್ವಾ ಪಾಂಡವಸ್ಯ ಪರಾಕ್ರಮಂ।
09013020c ರಥೇನಾತಿಪತಾಕೇನ ಪಾಂಡವಂ ಪ್ರತ್ಯವಾರಯತ್।।
ಸಮರದಲ್ಲಿ ಪಾಂಡವನ ಪರಾಕ್ರಮವನ್ನು ನೋಡಿ ದ್ರೌಣಿಯಾದರೋ ಉನ್ನತ ಧ್ವಜವುಳ್ಳ ರಥದಿಂದ ಪಾಂಡವನನ್ನು ತಡೆದನು.
09013021a ತಾವುಭೌ ಪುರುಷವ್ಯಾಘ್ರೌ ಶ್ವೇತಾಶ್ವೌ ಧನ್ವಿನಾಂ ವರೌ।
09013021c ಸಮೀಯತುಸ್ತದಾ ತೂರ್ಣಂ ಪರಸ್ಪರವಧೈಷಿಣೌ।।
ಆ ಇಬ್ಬರು ಪುರುಷವ್ಯಾಘ್ರ-ಶ್ವೇತಾಶ್ವ ಧನ್ವಿಗಳಲ್ಲಿ ಶ್ರೇಷ್ಠರು ಪರಸ್ಪರರನ್ನು ವಧಿಸಲು ಬಯಸಿ ಬೇಗನೇ ಸಂಘರ್ಷಿಸಿದರು.
09013022a ತಯೋರಾಸೀನ್ಮಹಾರಾಜ ಬಾಣವರ್ಷಂ ಸುದಾರುಣಂ।
09013022c ಜೀಮೂತಾನಾಂ ಯಥಾ ವೃಷ್ಟಿಸ್ತಪಾಂತೇ ಭರತರ್ಷಭ।।
ಮಹಾರಾಜ! ಭರತರ್ಷಭ! ಆಗ ಮಳೆಗಾಲದಲ್ಲಿ ಮೇಘಗಳು ಮಳೆಸುರಿಸುವಂತೆ ಅವರ ಸುದಾರುಣ ಬಾಣವರ್ಷವು ಸುರಿಯಿತು.
09013023a ಅನ್ಯೋನ್ಯಸ್ಪರ್ಧಿನೌ ತೌ ತು ಶರೈಃ ಸನ್ನತಪರ್ವಭಿಃ।
09013023c ತತಕ್ಷತುರ್ಮೃಧೇಽನ್ಯೋನ್ಯಂ ಶೃಂಗಾಭ್ಯಾಂ ವೃಷಭಾವಿವ।।
ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿರುವ ಅವರಿಬ್ಬರೂ ಎರಡು ಗೂಳಿಗಳು ತಮ್ಮ ಕೋಡುಗಳಿಂದ ಹೇಗೋ ಹಾಗೆ ಸನ್ನತಪರ್ವ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.
09013024a ತಯೋರ್ಯುದ್ಧಂ ಮಹಾರಾಜ ಚಿರಂ ಸಮಮಿವಾಭವತ್।
09013024c ಅಸ್ತ್ರಾಣಾಂ ಸಂಗಮಶ್ಚೈವ ಘೋರಸ್ತತ್ರಾಭವನ್ಮಹಾನ್।।
ಮಹಾರಾಜ! ಬಹಳ ಸಮಯದವರೆಗೆ ಅವರಿಬ್ಬರ ಯುದ್ಧವು ಸಮಸಮವಾಗಿಯೇ ನಡೆಯಿತು. ಅಲ್ಲಿ ಘೋರ ಅಸ್ತ್ರಗಳ ಮಹಾ ಸಂಗಮವು ನಡೆಯಿತು.
09013025a ತತೋಽರ್ಜುನಂ ದ್ವಾದಶಭೀ ರುಕ್ಮಪುಂಖೈಃ ಸುತೇಜನೈಃ।
09013025c ವಾಸುದೇವಂ ಚ ದಶಭಿರ್ದ್ರೌಣಿರ್ವಿವ್ಯಾಧ ಭಾರತ।।
ಭಾರತ! ಆಗ ದ್ರೌಣಿಯು ಅರ್ಜುನನನ್ನು ಹನ್ನೆರಡು ರುಕ್ಮಪುಂಖಗಳ ತೇಜಯುಕ್ತ ಬಾಣಗಳಿಂದ ಮತ್ತು ವಾಸುದೇವನನ್ನು ಹತ್ತು ಬಾಣಗಳಿಂದ ಹೊಡೆದನು.
09013026a ತತಃ ಪ್ರಹಸ್ಯ ಬೀಭತ್ಸುರ್ವ್ಯಾಕ್ಷಿಪದ್ಗಾಂಡಿವಂ ಧನುಃ।
09013026c ಮಾನಯಿತ್ವಾ ಮುಹೂರ್ತಂ ಚ ಗುರುಪುತ್ರಂ ಮಹಾಹವೇ।।
ಆ ಮಹಾಯುದ್ಧದಲ್ಲಿ ಮುಹೂರ್ತಕಾಲ ಗುರುಪುತ್ರನನ್ನು ಗೌರವಿಸಿ, ಜೋರಾಗಿ ನಗುತ್ತಾ ಬೀಭತ್ಸುವು ಗಾಂಡೀವ ಧನುಸ್ಸನ್ನು ದೀರ್ಘವಾಗಿ ಸೆಳೆದನು.
09013027a ವ್ಯಶ್ವಸೂತರಥಂ ಚಕ್ರೇ ಸವ್ಯಸಾಚೀ ಮಹಾರಥಃ।
09013027c ಮೃದುಪೂರ್ವಂ ತತಶ್ಚೈನಂ ತ್ರಿಭಿರ್ವಿವ್ಯಾಧ ಸಾಯಕೈಃ।।
ಮಹಾರಥ ಸವ್ಯಸಾಚಿಯು ಅಶ್ವ-ಸೂತ-ರಥಗಳಿಂದ ವಿಹೀನನನ್ನಾಗಿ ಮಾಡಿ ಅವನನ್ನು ಮೂರು ಸಾಯಕಗಳಿಂದ ಮೃದುಪೂರ್ವಕವಾಗಿಯೇ ಹೊಡೆದನು.
09013028a ಹತಾಶ್ವೇ ತು ರಥೇ ತಿಷ್ಠನ್ದ್ರೋಣಪುತ್ರಸ್ತ್ವಯಸ್ಮಯಂ।
09013028c ಮುಸಲಂ ಪಾಂಡುಪುತ್ರಾಯ ಚಿಕ್ಷೇಪ ಪರಿಘೋಪಮಂ।।
ಕುದುರೆಗಳು ಹತಗೊಳ್ಳಲು ದ್ರೋಣಪುತ್ರನು ರಥದ ಮೇಲೆಯೇ ನಿಂತು ಲೋಹಮಯ ಪರಿಘದಂತಿದ್ದ ಮುಸಲವನ್ನು ಪಾಂಡುಪುತ್ರನ ಮೇಲೆ ಎಸೆದನು.
09013029a ತಮಾಪತಂತಂ ಸಹಸಾ ಹೇಮಪಟ್ಟವಿಭೂಷಿತಂ।
09013029c ಚಿಚ್ಚೇದ ಸಪ್ತಧಾ ವೀರಃ ಪಾರ್ಥಃ ಶತ್ರುನಿಬರ್ಹಣಃ।।
ಮೇಲೆ ಬೀಳುತ್ತಿದ್ದ ಆ ಹೇಮಪಟ್ಟವಿಭೂಷಿತ ಮುಸಲವನ್ನು ತಕ್ಷಣವೇ ವೀರ ಶತ್ರುನಿಬರ್ಹಣ ಪಾರ್ಥನು ಏಳು ತುಂಡುಗಳನ್ನಾಗಿ ಕತ್ತರಿಸಿದನು.
09013030a ಸ ಚ್ಚಿನ್ನಂ ಮುಸಲಂ ದೃಷ್ಟ್ವಾ ದ್ರೌಣಿಃ ಪರಮಕೋಪನಃ।
09013030c ಆದದೇ ಪರಿಘಂ ಘೋರಂ ನಗೇಂದ್ರಶಿಖರೋಪಮಂ।।
09013030e ಚಿಕ್ಷೇಪ ಚೈವ ಪಾರ್ಥಾಯ ದ್ರೌಣಿರ್ಯುದ್ಧವಿಶಾರದಃ।
ಆ ಮುಸಲವು ತುಂಡಾಗಿದ್ದುದನ್ನು ಕಂಡ ಯುದ್ಧ ವಿಶಾರದ ದ್ರೌಣಿಯು ಪರ್ವತಶಿಖರದಂತಿದ್ದ ಘೋರ ಪರಿಘವನ್ನು ತೆಗೆದುಕೊಂಡು ಅದನ್ನು ಪಾರ್ಥನ ಮೇಲೆ ಎಸೆದನು.
09013031a ತಮಂತಕಮಿವ ಕ್ರುದ್ಧಂ ಪರಿಘಂ ಪ್ರೇಕ್ಷ್ಯ ಪಾಂಡವಃ।।
09013031c ಅರ್ಜುನಸ್ತ್ವರಿತೋ ಜಘ್ನೇ ಪಂಚಭಿಃ ಸಾಯಕೋತ್ತಮೈಃ।
ಕ್ರುದ್ಧ ಅಂತಕನಂತಿದ್ದ ಆ ಪರಿಘವನ್ನು ನೋಡಿದ ಪಾಂಡವ ಅರ್ಜುನನು ತ್ವರೆಮಾಡಿ ಐದು ಉತ್ತಮ ಸಾಯಕಗಳಿಂದ ಅದನ್ನು ನಾಶಗೊಳಿಸಿದನು.
09013032a ಸ ಚ್ಚಿನ್ನಃ ಪತಿತೋ ಭೂಮೌ ಪಾರ್ಥಬಾಣೈರ್ಮಹಾಹವೇ।।
09013032c ದಾರಯನ್ಪೃಥಿವೀಂದ್ರಾಣಾಂ ಮನಃ ಶಬ್ದೇನ ಭಾರತ।
ಭಾರತ! ಮಹಾಹವದಲ್ಲಿ ಪಾರ್ಥನ ಬಾಣಗಳಿಂದ ಕತ್ತರಿಸಲ್ಪಟ್ಟ ಆ ಪರಿಘವು ರಾಜರ ಮನಸ್ಸನ್ನು ಸೀಳುವಂತೆ ಶಬ್ಧಮಾಡುತ್ತಾ ಭೂಮಿಯ ಮೇಲೆ ಬಿದ್ದಿತು.
09013033a ತತೋಽಪರೈಸ್ತ್ರಿಭಿರ್ಬಾಣೈರ್ದ್ರೌಣಿಂ ವಿವ್ಯಾಧ ಪಾಂಡವಃ।।
09013033c ಸೋಽತಿವಿದ್ಧೋ ಬಲವತಾ ಪಾರ್ಥೇನ ಸುಮಹಾಬಲಃ।
09013033e ನ ಸಂಭ್ರಾಂತಸ್ತದಾ ದ್ರೌಣಿಃ ಪೌರುಷೇ ಸ್ವೇ ವ್ಯವಸ್ಥಿತಃ।।
ಅನಂತರ ಪಾಂಡವನು ದ್ರೌಣಿಯನ್ನು ಬೇರೆ ಮೂರು ಬಾಣಗಳಿಂದ ಹೊಡೆದನು. ಪಾರ್ಥನಿಂದ ಬಲವಾಗಿ ಪ್ರಹರಿಸಲ್ಪಟ್ಟರೂ ಆ ಸುಮಹಾಬಲ ದ್ರೌಣಿಯು ಪೌರುಷದಿಂದ ಸ್ವಲ್ವವೂ ವಿಚಲಿತನಾಗಲಿಲ್ಲ.
09013034a ಸುಧರ್ಮಾ ತು ತತೋ ರಾಜನ್ಭಾರದ್ವಾಜಂ ಮಹಾರಥಂ।
09013034c ಅವಾಕಿರಚ್ಚರವ್ರಾತೈಃ ಸರ್ವಕ್ಷತ್ರಸ್ಯ ಪಶ್ಯತಃ।।
ರಾಜನ್! ಆಗ ಸುಧರ್ಮನು ಸರ್ವ ಕ್ಷತ್ರಿಯರೂ ನೋಡುತ್ತಿದ್ದಂತೆಯೇ ಭಾರದ್ವಾಜ ಮಹಾರಥ ಅಶ್ವತ್ಥಾಮನನ್ನು ಶರಗಳಿಂದ ಆಚ್ಛಾದಿಸಿದನು.
09013035a ತತಸ್ತು ಸುರಥೋಽಪ್ಯಾಜೌ ಪಾಂಚಾಲಾನಾಂ ಮಹಾರಥಃ।
09013035c ರಥೇನ ಮೇಘಘೋಷೇಣ ದ್ರೌಣಿಮೇವಾಭ್ಯಧಾವತ।।
ಆಗ ಪಾಂಚಾಲರ ಮಹಾರಥ ಸುರಥನು ಮೇಘಘೋಷದ ರಥದಿಂದ ದ್ರೌಣಿಯನ್ನು ಆಕ್ರಮಣಿಸಿದನು.
09013036a ವಿಕರ್ಷನ್ವೈ ಧನುಃ ಶ್ರೇಷ್ಠಂ ಸರ್ವಭಾರಸಹಂ ದೃಢಂ।
09013036c ಜ್ವಲನಾಶೀವಿಷನಿಭೈಃ ಶರೈಶ್ಚೈನಮವಾಕಿರತ್।।
ಸರ್ವಭಾರವನ್ನು ಸಹಿಸಬಲ್ಲ ದೃಢ ಶ್ರೇಷ್ಠ ಧನುಸ್ಸನ್ನು ಸೆಳೆದು ಸುರಥನು ಸರ್ಪಾಗ್ನಿಸದೃಶ ಬಾಣಗಳಿಂದ ಅಶ್ವತ್ಥಾಮನನ್ನು ಮುಚ್ಚಿದನು.
09013037a ಸುರಥಂ ತು ತತಃ ಕ್ರುದ್ಧಮಾಪತಂತಂ ಮಹಾರಥಂ।
09013037c ಚುಕೋಪ ಸಮರೇ ದ್ರೌಣಿರ್ದಂಡಾಹತ ಇವೋರಗಃ।।
ಸಮರದಲ್ಲಿ ಕ್ರುದ್ಧನಾಗಿ ತನ್ನ ಮೇಲೆ ಎರಗುತ್ತಿದ್ದ ಮಹಾರಥ ಸುರಥನನ್ನು ನೋಡಿ ದ್ರೌಣಿಯು ದಂಡದಿಂದ ಪೆಟ್ಟುತಿಂದ ಸರ್ಪದಂತೆ ಅತಿ ಕುಪಿತನಾದನು.
09013038a ತ್ರಿಶಿಖಾಂ ಭ್ರುಕುಟೀಂ ಕೃತ್ವಾ ಸೃಕ್ಕಿಣೀ ಪರಿಲೇಲಿಹನ್।
09013038c ಉದ್ವೀಕ್ಷ್ಯ ಸುರಥಂ ರೋಷಾದ್ಧನುರ್ಜ್ಯಾಮವಮೃಜ್ಯ ಚ।।
09013038e ಮುಮೋಚ ತೀಕ್ಷ್ಣಂ ನಾರಾಚಂ ಯಮದಂಡಸಮದ್ಯುತಿಂ।।
ಹುಬ್ಬನ್ನು ಗಂಟಿಕ್ಕಿ ಕಟವಾಯಿಯನ್ನು ನೆಕ್ಕುತ್ತಾ ಸುರಥನನ್ನು ಕೋಪದಿಂದ ದಿಟ್ಟಿಸಿ ನೋಡುತ್ತಾ ಧನುಸ್ಸಿನ ಶಿಂಜನಿಯನ್ನು ತೀಡಿ ಯಮದಂಡದಂತೆ ಬೆಳಗುತ್ತಿದ್ದ ತೀಕ್ಷ್ಣ ನಾರಾಚವನ್ನು ಅವನ ಮೇಲೆ ಪ್ರಯೋಗಿಸಿದನು.
09013039a ಸ ತಸ್ಯ ಹೃದಯಂ ಭಿತ್ತ್ವಾ ಪ್ರವಿವೇಶಾತಿವೇಗತಃ।
09013039c ಶಕ್ರಾಶನಿರಿವೋತ್ಸೃಷ್ಟಾ ವಿದಾರ್ಯ ಧರಣೀತಲಂ।।
ಶಕ್ರನಿಂದ ಪ್ರಯೋಗಿಸಲ್ಪಟ್ಟ ವಜ್ರಾಯುಧವು ಭೂಮಿಯನ್ನು ಭೇದಿಸಿ ಹೋಗುವಂತೆ ಅದು ಅತಿವೇಗದಿಂದ ಸುರಥನ ಹೃದಯವನ್ನು ಭೇದಿಸಿ ಭೂಮಿಯನ್ನು ಹೊಕ್ಕಿತು.
09013040a ತತಸ್ತಂ ಪತಿತಂ ಭೂಮೌ ನಾರಾಚೇನ ಸಮಾಹತಂ।
09013040c ವಜ್ರೇಣೇವ ಯಥಾ ಶೃಂಗಂ ಪರ್ವತಸ್ಯ ಮಹಾಧನಂ।।
ವಜ್ರಾಯುಧ ಪ್ರಹಾರದಿಂದ ಭಿನ್ನ ಪರ್ವತ ಶಿಖರವು ಕೆಳಕ್ಕೆ ಬೀಳುವಂತೆ ಆ ನಾರಾಚದಿಂದ ಪ್ರಹೃತನಾದ ಸುರಥನು ಭಗ್ನನಾಗಿ ಭೂಮಿಯ ಮೇಲೆ ಬಿದ್ದನು.
09013041a ತಸ್ಮಿಂಸ್ತು ನಿಹತೇ ವೀರೇ ದ್ರೋಣಪುತ್ರಃ ಪ್ರತಾಪವಾನ್।
09013041c ಆರುರೋಹ ರಥಂ ತೂರ್ಣಂ ತಮೇವ ರಥಿನಾಂ ವರಃ।।
ಆ ವೀರನು ಹತನಾಗಲು ರಥಿಗಳಲ್ಲಿ ಶ್ರೇಷ್ಠ ಪ್ರತಾಪವಾನ್ ದ್ರೋಣಪುತ್ರನು ಬೇಗನೇ ತನ್ನದೇ ರಥವನ್ನು ಏರಿದನು.
09013042a ತತಃ ಸಜ್ಜೋ ಮಹಾರಾಜ ದ್ರೌಣಿರಾಹವದುರ್ಮದಃ।
09013042c ಅರ್ಜುನಂ ಯೋಧಯಾಮಾಸ ಸಂಶಪ್ತಕವೃತೋ ರಣೇ।।
ಮಹಾರಾಜ! ಅನಂತರ ಯುದ್ಧದುರ್ಮದ ದ್ರೌಣಿಯು ಸಜ್ಜಾಗಿ ರಣದಲ್ಲಿ ಸಂಶಪ್ತಕರಿಂದ ಸುತ್ತುವರೆಯಲ್ಪಟ್ಟು ಅರ್ಜುನನೊಡನೆ ಯುದ್ಧದಲ್ಲಿ ತೊಡಗಿದನು.
09013043a ತತ್ರ ಯುದ್ಧಂ ಮಹಚ್ಚಾಸೀದರ್ಜುನಸ್ಯ ಪರೈಃ ಸಹ।
09013043c ಮಧ್ಯಂದಿನಗತೇ ಸೂರ್ಯೇ ಯಮರಾಷ್ಟ್ರವಿವರ್ಧನಂ।।
ಸೂರ್ಯನು ನಡುನೆತ್ತಿಗೆ ಬರಲು ಶತ್ರುಗಳೊಂದಿಗೆ ಅರ್ಜುನನ ಯಮರಾಷ್ಟ್ರವನ್ನು ವರ್ಧಿಸುವ ಮಹಾ ಯುದ್ಧವು ನಡೆಯಿತು.
09013044a ತತ್ರಾಶ್ಚರ್ಯಮಪಶ್ಯಾಮ ದೃಷ್ಟ್ವಾ ತೇಷಾಂ ಪರಾಕ್ರಮಂ।
09013044c ಯದೇಕೋ ಯುಗಪದ್ವೀರಾನ್ ಸಮಯೋಧಯದರ್ಜುನಃ।।
ಒಬ್ಬನೇ ಅನೇಕ ವೀರ ಯೋಧರೊಡನೆ ಯುದ್ಧಮಾಡುತ್ತಿರುವ ಅರ್ಜುನನ ಪರಾಕ್ರಮವನ್ನು ನೋಡಿದೆವು. ಅದೊಂದು ಆಶ್ಚರ್ಯವಾಗಿತ್ತು.
09013045a ವಿಮರ್ದಸ್ತು ಮಹಾನಾಸೀದರ್ಜುನಸ್ಯ ಪರೈಃ ಸಹ।
09013045c ಶತಕ್ರತೋರ್ಯಥಾ ಪೂರ್ವಂ ಮಹತ್ಯಾ ದೈತ್ಯಸೇನಯಾ।।
ದೈತ್ಯರ ಮಹಾಸೇನೆಯೊಡನೆ ಹಿಂದೆ ಶತಕ್ರತುವಿನ ಯುದ್ಧವು ಹೇಗಿತ್ತೋ ಹಾಗೆ ಶತ್ರುಗಳೊಂದಿಗೆ ಅರ್ಜುನನ ಯುದ್ಧವು ಮಹಾ ವಿಮರ್ದನಕಾರಿಯಾಗಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ತ್ರಯೋದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿಮೂರನೇ ಅಧ್ಯಾಯವು.