012 ಶಲ್ಯಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಶಲ್ಯವಧ ಪರ್ವ

ಅಧ್ಯಾಯ 12

ಸಾರ

ಧರ್ಮರಾಜ-ಸಾತ್ಯಕಿ-ಭೀಮಸೇನ-ಮಾದ್ರೀಪುತ್ರರೊಂದಿಗೆ ಶಲ್ಯನ ಯುದ್ಧ (1-45).

09012001 ಸಂಜಯ ಉವಾಚ 09012001a ಪೀಡಿತೇ ಧರ್ಮರಾಜೇ ತು ಮದ್ರರಾಜೇನ ಮಾರಿಷ।
09012001c ಸಾತ್ಯಕಿರ್ಭೀಮಸೇನಶ್ಚ ಮಾದ್ರೀಪುತ್ರೌ ಚ ಪಾಂಡವೌ।।
09012001e ಪರಿವಾರ್ಯ ರಥೈಃ ಶಲ್ಯಂ ಪೀಡಯಾಮಾಸುರಾಹವೇ।।

ಸಂಜಯನು ಹೇಳಿದನು: “ಮಾರಿಷ! ಧರ್ಮರಾಜನು ಹಾಗೆ ಮದ್ರರಾಜನಿಂದ ಪೀಡಿತನಾಗಿರಲು ಸಾತ್ಯಕಿ, ಭೀಮಸೇನ ಮತ್ತು ಮಾದ್ರೀಪುತ್ರ ಪಾಂಡವರೀರ್ವರು ರಥಗಳಿಂದ ಶಲ್ಯನನ್ನು ಸುತ್ತುವರೆದು ಯುದ್ಧದಲ್ಲಿ ಅವನನ್ನು ಪೀಡಿಸತೊಡಗಿದರು.

09012002a ತಮೇಕಂ ಬಹುಭಿರ್ದೃಷ್ಟ್ವಾ ಪೀಡ್ಯಮಾನಂ ಮಹಾರಥೈಃ।
09012002c ಸಾಧುವಾದೋ ಮಹಾನ್ಜಜ್ಞೇ ಸಿದ್ಧಾಶ್ಚಾಸನ್ಪ್ರಹರ್ಷಿತಾಃ।।
09012002e ಆಶ್ಚರ್ಯಮಿತ್ಯಭಾಷಂತ ಮುನಯಶ್ಚಾಪಿ ಸಂಗತಾಃ।

ಅವನೊಬ್ಬನನ್ನು ಅನೇಕ ಮಹಾರಥರು ಪೀಡಿಸುತ್ತಿರುವುದನ್ನು ಕಂಡು ಸಾಧು ಸಾಧುವೆನ್ನುವ ಜೋರಾದ ಕೂಗುಗಳು ಕೇಳಿಬಂದವು. ಸಿದ್ಧರು ಪ್ರಹರ್ಷಿತರಾದರು. ಸೇರಿದ ಮುನಿಗಳೂ ಕೂಡ ಆಶ್ಚರ್ಯದಿಂದ ಮಾತನಾಡಿಕೊಳ್ಳುತ್ತಿದ್ದರು.

09012003a ಭೀಮಸೇನೋ ರಣೇ ಶಲ್ಯಂ ಶಲ್ಯಭೂತಂ ಪರಾಕ್ರಮೇ।।
09012003c ಏಕೇನ ವಿದ್ಧ್ವಾ ಬಾಣೇನ ಪುನರ್ವಿವ್ಯಾಧ ಸಪ್ತಭಿಃ।

ರಣದಲ್ಲಿ ಭೀಮಸೇನನು ತನ್ನ ಪರಾಕ್ರಮಕ್ಕೆ ಕಂಟಕಪ್ರಾಯನಾಗಿದ್ದ ಶಲ್ಯನನ್ನು ಒಂದೇ ಬಾಣದಿಂದ ಹೊಡೆದು ಪುನಃ ಏಳರಿಂದ ಹೊಡೆದನು.

09012004a ಸಾತ್ಯಕಿಶ್ಚ ಶತೇನೈನಂ ಧರ್ಮಪುತ್ರಪರೀಪ್ಸಯಾ।।
09012004c ಮದ್ರೇಶ್ವರಮವಾಕೀರ್ಯ ಸಿಂಹನಾದಮಥಾನದತ್।

ಸಾತ್ಯಕಿಯೂ ಕೂಡ ಧರ್ಮಪುತ್ರನನ್ನು ರಕ್ಷಿಸಲೋಸುಗ ಮದ್ರೇಶ್ವರನನ್ನು ನೂರು ಬಾಣಗಳಿಂದ ಮುಚ್ಚಿ ಸಿಂಹನಾದಗೈದನು.

09012005a ನಕುಲಃ ಪಂಚಭಿಶ್ಚೈನಂ ಸಹದೇವಶ್ಚ ಸಪ್ತಭಿಃ।।
09012005c ವಿದ್ಧ್ವಾ ತಂ ತು ತತಸ್ತೂರ್ಣಂ ಪುನರ್ವಿವ್ಯಾಧ ಸಪ್ತಭಿಃ।

ನಕುಲನು ಐದು ಮತ್ತು ಸಹದೇವನು ಏಳು ಬಾಣಗಳಿಂದ ಅವನನ್ನು ಹೊಡೆದು ನಂತರ ತಕ್ಷಣವೇ ಪುನಃ ಏಳರಿಂದ ಹೊಡೆದರು.

09012006a ಸ ತು ಶೂರೋ ರಣೇ ಯತ್ತಃ ಪೀಡಿತಸ್ತೈರ್ಮಹಾರಥೈಃ।।
09012006c ವಿಕೃಷ್ಯ ಕಾರ್ಮುಕಂ ಘೋರಂ ವೇಗಘ್ನಂ ಭಾರಸಾಧನಂ।
09012007a ಸಾತ್ಯಕಿಂ ಪಂಚವಿಂಶತ್ಯಾ ಶಲ್ಯೋ ವಿವ್ಯಾಧ ಮಾರಿಷ।।
09012007c ಭೀಮಸೇನಂ ತ್ರಿಸಪ್ತತ್ಯಾ ನಕುಲಂ ಸಪ್ತಭಿಸ್ತಥಾ।

ಮಾರಿಷ! ರಣದಲ್ಲಿ ಮಹಾರಥರಿಂದ ಪೀಡಿತನಾದ ಶೂರ ಶಲ್ಯನು -ವೇಗವಾಗಿ ಕೊಲ್ಲುವ ಘೋರ ಭಾರಸಾಧನ ಕಾರ್ಮುಕವನ್ನು ಸೆಳೆದು ಸಾತ್ಯಕಿಯನ್ನು ಇಪ್ಪತ್ತೈದು ಬಾಣಗಳಿಂದ, ಭೀಮನನ್ನು ಎಪ್ಪತ್ತು ಬಾಣಗಳಿಂದ ಮತ್ತು ನಕುಲನನ್ನು ಏಳರಿಂದ ಹೊಡೆದನು.

09012008a ತತಃ ಸವಿಶಿಖಂ ಚಾಪಂ ಸಹದೇವಸ್ಯ ಧನ್ವಿನಃ।।
09012008c ಚಿತ್ತ್ವಾ ಭಲ್ಲೇನ ಸಮರೇ ವಿವ್ಯಾಧೈನಂ ತ್ರಿಸಪ್ತಭಿಃ।

ಆಗ ಧನ್ವಿ ಶಲ್ಯನು ಸಮರದಲ್ಲಿ ವಿಶಿಖದೊಂದಿಗೆ ಸಹದೇವನ ಧನುಸ್ಸನ್ನು ಭಲ್ಲದಿಂದ ತುಂಡರಿಸಿ ಅವನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದನು.

09012009a ಸಹದೇವಸ್ತು ಸಮರೇ ಮಾತುಲಂ ಭೂರಿವರ್ಚಸಂ।।
09012009c ಸಜ್ಯಮನ್ಯದ್ಧನುಃ ಕೃತ್ವಾ ಪಂಚಭಿಃ ಸಮತಾಡಯತ್।
09012009e ಶರೈರಾಶೀವಿಷಾಕಾರೈರ್ಜ್ವಲಜ್ಜ್ವಲನಸಂನಿಭೈಃ।।

ಸಹದೇವನಾದರೋ ಸಮರದಲ್ಲಿ ಇನ್ನೊಂದು ಧನುಸ್ಸನ್ನು ಸಜ್ಜುಗೊಳಿಸಿ ಪ್ರಜ್ವಲಿತ ಅಗ್ನಿ ಸಮಾನ ಸರ್ಪವಿಷದಾಕಾರದ ಐದು ಶರಗಳಿಂದ ತನ್ನ ಭೂರಿವರ್ಚಸ ಸೋದರಮಾವನನ್ನು ಹೊಡೆದನು.

09012010a ಸಾರಥಿಂ ಚಾಸ್ಯ ಸಮರೇ ಶರೇಣಾನತಪರ್ವಣಾ।
09012010c ವಿವ್ಯಾಧ ಭೃಶಸಂಕ್ರುದ್ಧಸ್ತಂ ಚ ಭೂಯಸ್ತ್ರಿಭಿಃ ಶರೈಃ।।

ಸಮರದಲ್ಲಿ ಅವನು ನತಪರ್ವ ಶರದಿಂದ ಅವನ ಸಾರಥಿಯನ್ನು ಹೊಡೆದು ಪುನಃ ಕ್ರುದ್ಧನಾಗಿ ಮೂರು ಬಾಣಗಳಿಂದ ಶಲ್ಯನನ್ನು ಹೊಡೆದನು.

09012011a ಭೀಮಸೇನಸ್ತ್ರಿಸಪ್ತತ್ಯಾ ಸಾತ್ಯಕಿರ್ನವಭಿಃ ಶರೈಃ।
09012011c ಧರ್ಮರಾಜಸ್ತಥಾ ಷಷ್ಟ್ಯಾ ಗಾತ್ರೇ ಶಲ್ಯಂ ಸಮರ್ಪಯತ್।।

ಭೀಮಸೇನನು ಎಪ್ಪತ್ಮೂರು ಶರಗಳಿಂದಲೂ, ಸಾತ್ಯಕಿಯು ಒಂಭತ್ತರಿಂದಲೂ, ಹಾಗೆಯೇ ಧರ್ಮರಾಜನು ಅರವತ್ತು ಶರಗಳಿಂದಲೂ ಶಲ್ಯನ ದೇಹವನ್ನು ಚುಚ್ಚಿದರು.

09012012a ತತಃ ಶಲ್ಯೋ ಮಹಾರಾಜ ನಿರ್ವಿದ್ಧಸ್ತೈರ್ಮಹಾರಥೈಃ।
09012012c ಸುಸ್ರಾವ ರುಧಿರಂ ಗಾತ್ರೈರ್ಗೈರಿಕಂ ಪರ್ವತೋ ಯಥಾ।।

ಮಹಾರಾಜ! ಆ ಮಹಾರಥರಿಂದ ಚೆನ್ನಾಗಿ ಪ್ರಹರಿಸಲ್ಪಟ್ಟ ಶಲ್ಯನ ದೇಹದಿಂದ ರಕ್ತವು ಗೈರಕಾದಿ ಧಾತುಗಳುಳ್ಳ ಕೆಂಪು ನೀರು ಪರ್ವತದಿಂದ ಸುರಿಯುವಂತೆ ಸುರಿಯಿತು.

09012013a ತಾಂಶ್ಚ ಸರ್ವಾನ್ಮಹೇಷ್ವಾಸಾನ್ಪಂಚಭಿಃ ಪಂಚಭಿಃ ಶರೈಃ।
09012013c ವಿವ್ಯಾಧ ತರಸಾ ರಾಜಂಸ್ತದದ್ಭುತಮಿವಾಭವತ್।।

ರಾಜನ್! ಕೂಡಲೇ ಅವನು ಆ ಎಲ್ಲ ಮಹಾರಥರನ್ನೂ ಐದೈದು ಶರಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.

09012014a ತತೋಽಪರೇಣ ಭಲ್ಲೇನ ಧರ್ಮಪುತ್ರಸ್ಯ ಮಾರಿಷ।
09012014c ಧನುಶ್ಚಿಚ್ಚೇದ ಸಮರೇ ಸಜ್ಯಂ ಸ ಸುಮಹಾರಥಃ।।

ಮಾರಿಷ! ಅನಂತರ ಇನ್ನೊಂದು ಭಲ್ಲದಿಂದ ಆ ಸುಮಹಾರಥನು ಸಮರದಲ್ಲಿ ಧರ್ಮಪುತ್ರನ ಧನುಸ್ಸನ್ನು ತುಂಡರಿಸಿದನು.

09012015a ಅಥಾನ್ಯದ್ಧನುರಾದಾಯ ಧರ್ಮಪುತ್ರೋ ಮಹಾರಥಃ।
09012015c ಸಾಶ್ವಸೂತಧ್ವಜರಥಂ ಶಲ್ಯಂ ಪ್ರಾಚ್ಚಾದಯಚ್ಚರೈಃ।।

ಆಗ ಮಹಾರಥ ಧರ್ಮಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶರಗಳಿಂದ ಕುದುರೆಗಳು, ಸಾರಥಿ, ಧ್ವಜ ಮತ್ತು ರಥಗಳ ಸಹಿತ ಶಲ್ಯನನ್ನು ಮುಚ್ಚಿಬಿಟ್ಟನು.

09012016a ಸ ಚ್ಚಾದ್ಯಮಾನಃ ಸಮರೇ ಧರ್ಮಪುತ್ರಸ್ಯ ಸಾಯಕೈಃ।
09012016c ಯುಧಿಷ್ಠಿರಮಥಾವಿಧ್ಯದ್ದಶಭಿರ್ನಿಶಿತೈಃ ಶರೈಃ।।

ಸಮರದಲ್ಲಿ ಧರ್ಮಪುತ್ರನ ಸಾಯಕಗಳಿಂದ ಮುಚ್ಚಿಹೋದ ಶಲ್ಯನು ಕೂಡಲೇ ಯುಧಿಷ್ಠಿರನನ್ನು ಹತ್ತು ನಿಶಿತ ಶರಗಳಿಂದ ಪ್ರಹರಿಸಿದನು.

09012017a ಸಾತ್ಯಕಿಸ್ತು ತತಃ ಕ್ರುದ್ಧೋ ಧರ್ಮಪುತ್ರೇ ಶರಾರ್ದಿತೇ।
09012017c ಮದ್ರಾಣಾಮಧಿಪಂ ಶೂರಂ ಶರೌಘೈಃ ಸಮವಾರಯತ್।।

ಧರ್ಮಪುತ್ರನನ್ನು ಶರಗಳಿಂದ ಪೀಡಿಸಲು, ಕ್ರುದ್ಧನಾದ ಸಾತ್ಯಕಿಯು ಶೂರ ಮದ್ರಾಧಿಪನನ್ನು ಶರಸಮೂಹಗಳಿಂದ ತುಂಬಿಬಿಟ್ಟನು.

09012018a ಸ ಸಾತ್ಯಕೇಃ ಪ್ರಚಿಚ್ಚೇದ ಕ್ಷುರಪ್ರೇಣ ಮಹದ್ಧನುಃ।
09012018c ಭೀಮಸೇನಮುಖಾಂಸ್ತಾಂಶ್ಚ ತ್ರಿಭಿಸ್ತ್ರಿಭಿರತಾಡಯತ್।।

ಶಲ್ಯನು ಕ್ಷುರಪ್ರದಿಂದ ಸಾತ್ಯಕಿಯ ಮಹಾ ಧನುಸ್ಸನ್ನು ಕತ್ತರಿಸಿದನು ಮತ್ತು ಭೀಮಸೇನನೇ ಮೊದಲಾದವರನ್ನು ಮೂರು ಮೂರು ಬಾಣಗಳಿಂದ ಹೊಡೆದನು.

09012019a ತಸ್ಯ ಕ್ರುದ್ಧೋ ಮಹಾರಾಜ ಸಾತ್ಯಕಿಃ ಸತ್ಯವಿಕ್ರಮಃ।
09012019c ತೋಮರಂ ಪ್ರೇಷಯಾಮಾಸ ಸ್ವರ್ಣದಂಡಂ ಮಹಾಧನಂ।।

ಮಹಾರಾಜ! ಆಗ ಕ್ರುದ್ಧ ಸತ್ಯವಿಕ್ರಮಿ ಸಾತ್ಯಕಿಯು ಮಹಾಬೆಲೆಬಾಳುವ ಸ್ವರ್ಣದಂಡದ ತೋಮರವನ್ನು ಶಲ್ಯನ ಮೇಲೆ ಪ್ರಯೋಗಿಸಿದನು.

09012020a ಭೀಮಸೇನೋಽಥ ನಾರಾಚಂ ಜ್ವಲಂತಮಿವ ಪನ್ನಗಂ।
09012020c ನಕುಲಃ ಸಮರೇ ಶಕ್ತಿಂ ಸಹದೇವೋ ಗದಾಂ ಶುಭಾಂ।।
09012020e ಧರ್ಮರಾಜಃ ಶತಘ್ನೀಂ ತು ಜಿಘಾಂಸುಃ ಶಲ್ಯಮಾಹವೇ।

ಯುದ್ಧದಲ್ಲಿ ಶಲ್ಯನನ್ನು ಸಂಹರಿಸಲೋಸುಗ ಭೀಮಸೇನನು ಸರ್ಪದಂತೆ ಪ್ರಜ್ಚಲಿಸುತ್ತಿದ್ದ ನಾರಾಚವನ್ನೂ, ನಕುಲನು ಶಕ್ತಿಯನ್ನೂ, ಸಹದೇವನು ಶುಭ ಗದೆಯನ್ನೂ ಮತ್ತು ಧರ್ಮರಾಜನು ಶತಘ್ನಿಯನ್ನೂ ಪ್ರಯೋಗಿಸಿದರು.

09012021a ತಾನಾಪತತ ಏವಾಶು ಪಂಚಾನಾಂ ವೈ ಭುಜಚ್ಯುತಾನ್।।
09012021c ಸಾತ್ಯಕಿಪ್ರಹಿತಂ ಶಲ್ಯೋ ಭಲ್ಲೈಶ್ಚಿಚ್ಚೇದ ತೋಮರಂ।

ಈ ಐವರ ಭುಜಗಳಿಂದ ಹೊರಟ ಅಸ್ತ್ರಗಳು ತನ್ನ ಮೇಲೆ ಬೀಳುವುದರೊಳಗೇ ಶಲ್ಯನು ಅವುಗಳನ್ನು ನಿವಾರಿಸಿದನು. ಸಾತ್ಯಕಿಯು ಕಳುಹಿಸಿದ ತೋಮರವನ್ನು ಭಲ್ಲಗಳಿಂದ ತುಂಡರಿಸಿದನು.

09012022a ಭೀಮೇನ ಪ್ರಹಿತಂ ಚಾಪಿ ಶರಂ ಕನಕಭೂಷಣಂ।।
09012022c ದ್ವಿಧಾ ಚಿಚ್ಚೇದ ಸಮರೇ ಕೃತಹಸ್ತಃ ಪ್ರತಾಪವಾನ್।

ಭೀಮನು ಪ್ರಯೋಗಿಸಿದ ಕನಕಭೂಷಣ ಶರವನ್ನು ಕೂಡ ಸಮರದಲ್ಲಿ ಕೃತಹಸ್ತ ಪ್ರತಾಪವಾನ್ ಶಲ್ಯನು ಎರಡಾಗಿ ತುಂಡರಿಸಿದನು.

09012023a ನಕುಲಪ್ರೇಷಿತಾಂ ಶಕ್ತಿಂ ಹೇಮದಂಡಾಂ ಭಯಾವಹಾಂ।।
09012023c ಗದಾಂ ಚ ಸಹದೇವೇನ ಶರೌಘೈಃ ಸಮವಾರಯತ್।

ಶರೌಘಗಳಿಂದ ನಕುಲನು ಪ್ರಯೋಗಿಸಿದ ಭಯವನ್ನುಂಟುಮಾಡುವ ಹೇಮದಂಡಯುಕ್ತ ಶಕ್ತಿಯನ್ನು ಮತ್ತು ಸಹದೇವನ ಗದೆಯನ್ನು ನಿವಾರಿಸಿದನು.

09012024a ಶರಾಭ್ಯಾಂ ಚ ಶತಘ್ನೀಂ ತಾಂ ರಾಜ್ಞಶ್ಚಿಚ್ಚೇದ ಭಾರತ।।
09012024c ಪಶ್ಯತಾಂ ಪಾಂಡುಪುತ್ರಾಣಾಂ ಸಿಂಹನಾದಂ ನನಾದ ಚ।
09012024e ನಾಮೃಷ್ಯತ್ತಂ ತು ಶೈನೇಯಃ ಶತ್ರೋರ್ವಿಜಯಮಾಹವೇ।।

ಭಾರತ! ಧರ್ಮರಾಜನ ಶರಗಳನ್ನೂ ಶತಘ್ನಿಯನ್ನೂ ತುಂಡರಿಸಿ, ಪಾಂಡುಪುತ್ರರು ನೋಡುತ್ತಿದ್ದಂತೆಯೇ ಸಿಂಹನಾದಗೈದನು. ಯುದ್ಧದಲ್ಲಿ ಶತ್ರುವಿನ ಆ ವಿಜಯವನ್ನು ಶೈನೇಯನಿಗೆ ಸಹಿಸಿಕೊಳ್ಳಲಾಗಲಿಲ್ಲ.

09012025a ಅಥಾನ್ಯದ್ಧನುರಾದಾಯ ಸಾತ್ಯಕಿಃ ಕ್ರೋಧಮೂರ್ಚಿತಃ।
09012025c ದ್ವಾಭ್ಯಾಂ ಮದ್ರೇಶ್ವರಂ ವಿದ್ಧ್ವಾ ಸಾರಥಿಂ ಚ ತ್ರಿಭಿಃ ಶರೈಃ।।

ಆಗ ಕ್ರೋಧಮೂರ್ಛಿತ ಸಾತ್ಯಕಿಯು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಎರಡು ಬಾಣಗಳಿಂದ ಮದ್ರೇಶ್ವರನನ್ನೂ ಮೂರರಿಂದ ಅವನ ಸಾರಥಿಯನ್ನೂ ಹೊಡೆದನು.

09012026a ತತಃ ಶಲ್ಯೋ ಮಹಾರಾಜ ಸರ್ವಾಂಸ್ತಾನ್ದಶಭಿಃ ಶರೈಃ।
09012026c ವಿವ್ಯಾಧ ಸುಭೃಶಂ ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಾನ್।।

ಮಹಾರಾಜ! ಆಗ ಕ್ರುದ್ಧ ಶಲ್ಯನು ಅವರೆಲ್ಲರನ್ನು – ಮಹಾಗಜಗಳನ್ನು ಅಂಕುಶಗಳಿಂದ ಹೇಗೋ ಹಾಗೆ – ಹತ್ತು ಬಾಣಗಳಿಂದ ಪ್ರಹರಿಸಿದನು.

09012027a ತೇ ವಾರ್ಯಮಾಣಾಃ ಸಮರೇ ಮದ್ರರಾಜ್ಞಾ ಮಹಾರಥಾಃ।
09012027c ನ ಶೇಕುಃ ಪ್ರಮುಖೇ ಸ್ಥಾತುಂ ತಸ್ಯ ಶತ್ರುನಿಷೂದನಾಃ।।

ಸಮರದಲ್ಲಿ ಮದ್ರರಾಜನಿಂದ ತಡೆಯಲ್ಪಡುತ್ತಿದ್ದ ಆ ಶತ್ರುನಿಷೂದನ ಮಹಾರಥರು ಅವನ ಎದಿರು ನಿಲ್ಲಲು ಶಕ್ಯರಾಗಿರಲಿಲ್ಲ.

09012028a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಶಲ್ಯಸ್ಯ ವಿಕ್ರಮಂ।
09012028c ನಿಹತಾನ್ಪಾಂಡವಾನ್ಮೇನೇ ಪಾಂಚಾಲಾನಥ ಸೃಂಜಯಾನ್।।

ಆಗ ಶಲ್ಯನ ವಿಕ್ರಮವನ್ನು ನೋಡಿ ರಾಜಾ ದುರ್ಯೋಧನನು ಪಾಂಡವ-ಪಾಂಚಾಲ-ಸೃಂಜಯರು ಹತರಾದರೆಂದೇ ಭಾವಿಸಿದನು.

09012029a ತತೋ ರಾಜನ್ಮಹಾಬಾಹುರ್ಭೀಮಸೇನಃ ಪ್ರತಾಪವಾನ್।
09012029c ಸಂತ್ಯಜ್ಯ ಮನಸಾ ಪ್ರಾಣಾನ್ಮದ್ರಾಧಿಪಮಯೋಧಯತ್।।

ರಾಜನ್! ಆಗ ಪ್ರತಾಪವಾನ್ ಮಹಾಬಾಹು ಭೀಮಸೇನನು ಮನಸಾ ಪ್ರಾಣಗಳನ್ನೇ ಪರಿತ್ಯಜಿಸಿ ಮದ್ರಾಧಿಪನೊಡನೆ ಯುದ್ಧಮಾಡಿದನು.

09012030a ನಕುಲಃ ಸಹದೇವಶ್ಚ ಸಾತ್ಯಕಿಶ್ಚ ಮಹಾರಥಃ।
09012030c ಪರಿವಾರ್ಯ ತದಾ ಶಲ್ಯಂ ಸಮಂತಾದ್ವ್ಯಕಿರನ್ ಶರೈಃ।।

ನಕುಲ, ಸಹದೇವ ಮತ್ತು ಮಹಾರಥ ಸಾತ್ಯಕಿಯರು ಎಲ್ಲಕಡೆಗಳಲ್ಲಿ ಶರಗಳನ್ನು ಎರಚುತ್ತಾ ಶಲ್ಯನನ್ನು ತಡೆದರು.

09012031a ಸ ಚತುರ್ಭಿರ್ಮಹೇಷ್ವಾಸೈಃ ಪಾಂಡವಾನಾಂ ಮಹಾರಥೈಃ।
09012031c ವೃತಸ್ತಾನ್ಯೋಧಯಾಮಾಸ ಮದ್ರರಾಜಃ ಪ್ರತಾಪವಾನ್।।

ಪ್ರತಾಪವಾನ್ ಮದ್ರರಾಜನು ಆ ನಾಲ್ಕು ಪಾಂಡವ ಮಹೇಷ್ವಾಸ ಮಹಾರಥರಿಂದ ಸುತ್ತುವರೆಯಲ್ಪಟ್ಟು ಯುದ್ಧಮಾಡಿದನು.

09012032a ತಸ್ಯ ಧರ್ಮಸುತೋ ರಾಜನ್ ಕ್ಷುರಪ್ರೇಣ ಮಹಾಹವೇ।
09012032c ಚಕ್ರರಕ್ಷಂ ಜಘಾನಾಶು ಮದ್ರರಾಜಸ್ಯ ಪಾರ್ಥಿವ।।

ರಾಜನ್! ಮಹಾಯುದ್ಧದಲ್ಲಿ ಪಾರ್ಥಿವ ಧರ್ಮಸುತನು ಮದ್ರರಾಜನ ಚಕ್ರರಕ್ಷಕನನ್ನು ಕ್ಷುರಪ್ರದಿಂದ ಸಂಹರಿಸಿದನು.

09012033a ತಸ್ಮಿಂಸ್ತು ನಿಹತೇ ಶೂರೇ ಚಕ್ರರಕ್ಷೇ ಮಹಾರಥೇ।
09012033c ಮದ್ರರಾಜೋಽತಿಬಲವಾನ್ಸೈನಿಕಾನಸ್ತೃಣೋಚ್ಚರೈಃ।।

ಚಕ್ರರಕ್ಷಕನು ಹತನಾಗಲು ಶೂರ ಮಹಾರಥಿ ಬಲವಾನ್ ಮದ್ರರಾಜನು ಶರಗಳಿಂದ ಸೈನಿಕರನ್ನು ಮುಚ್ಚಿಬಿಟ್ಟನು.

09012034a ಸಮಾಚ್ಚನ್ನಾಂಸ್ತತಸ್ತಾಂಸ್ತು ರಾಜನ್ವೀಕ್ಷ್ಯ ಸ ಸೈನಿಕಾನ್।
09012034c ಚಿಂತಯಾಮಾಸ ಸಮರೇ ಧರ್ಮರಾಜೋ ಯುಧಿಷ್ಠಿರಃ।।

ರಾಜನ್! ಸೈನಿಕರು ಶಲ್ಯನ ಬಾಣಗಳಿಂದ ಮುಚ್ಚಿಹೋಗಿರುವುದನ್ನು ವೀಕ್ಷಿಸಿದ ಧರ್ಮರಾಜ ಯುಧಿಷ್ಠಿರನು ಸಮರದಲ್ಲಿ ಚಿಂತಿಸತೊಡಗಿದನು:

09012035a ಕಥಂ ನು ನ ಭವೇತ್ಸತ್ಯಂ ತನ್ಮಾಧವವಚೋ ಮಹತ್।
09012035c ನ ಹಿ ಕ್ರುದ್ಧೋ ರಣೇ ರಾಜಾ ಕ್ಷಪಯೇತ ಬಲಂ ಮಮ।।

“ಮಾಧವನ ಮಹಾ ವಚನವು ಹೇಗೆ ತಾನೇ ಸತ್ಯವಾಗಬಲ್ಲದು? ರಣದಲ್ಲಿ ಕ್ರುದ್ಧನಾದ ಈ ರಾಜನು ನನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಮಾಡದೇ ಇರುವನೇ?”

09012036a ತತಃ ಸರಥನಾಗಾಶ್ವಾಃ ಪಾಂಡವಾಃ ಪಾಂಡುಪೂರ್ವಜ।
09012036c ಮದ್ರೇಶ್ವರಂ ಸಮಾಸೇದುಃ ಪೀಡಯಂತಃ ಸಮಂತತಃ।।

ಪಾಂಡುವಿನ ಅಣ್ಣನೇ! ಅನಂತರ ರಥ-ಗಜ-ಅಶ್ವ ಸೇನಾ ಸಮೇತರಾದ ಪಾಂಡವರು ಮದ್ರೇಶ್ವರನನ್ನು ಎಲ್ಲ ಕಡೆಗಳಿಂದ ಪೀಡಿಸುತ್ತಾ ಅವನ ಮೇಲೆ ಧಾಳಿನಡೆಸಿದರು.

09012037a ನಾನಾಶಸ್ತ್ರೌಘಬಹುಲಾಂ ಶಸ್ತ್ರವೃಷ್ಟಿಂ ಸಮುತ್ಥಿತಾಂ।
09012037c ವ್ಯಧಮತ್ಸಮರೇ ರಾಜನ್ಮಹಾಭ್ರಾಣೀವ ಮಾರುತಃ।।

ರಾಜನ್! ಮೇಲೆದ್ದ ದೊಡ್ಡ ದೊಡ್ಡ ಮೇಘಗಳನ್ನು ಭಿರುಗಾಳಿಯು ಹೇಗೋ ಹಾಗೆ ಅವನು ಸಮರದಲ್ಲಿ ನಾನಾ ಶಸ್ತ್ರಗಳಿಂದ ಕೂಡಿದ್ದ ಆ ಅನೇಕ ಶರವೃಷ್ಟಿಯನ್ನು ನಾಶಗೊಳಿಸಿದನು.

09012038a ತತಃ ಕನಕಪುಂಖಾಂ ತಾಂ ಶಲ್ಯಕ್ಷಿಪ್ತಾಂ ವಿಯದ್ಗತಾಂ।
09012038c ಶರವೃಷ್ಟಿಮಪಶ್ಯಾಮ ಶಲಭಾನಾಮಿವಾತತಿಂ।।

ಶಲ್ಯನು ಪ್ರಯೋಗಿಸಿದ ಸುವರ್ಣಮಯ ಬುಡಗಳಿದ್ದ ಬಾಣಗಳ ವೃಷ್ಟಿಯು ಮಿಡತೆಗಳ ಹಿಂಡುಗಳಂತೆ ಆಕಾಶವನ್ನೇ ತುಂಬಿದುದನ್ನು ನಾವು ನೋಡಿದೆವು.

09012039a ತೇ ಶರಾ ಮದ್ರರಾಜೇನ ಪ್ರೇಷಿತಾ ರಣಮೂರ್ಧನಿ।
09012039c ಸಂಪತಂತಃ ಸ್ಮ ದೃಶ್ಯಂತೇ ಶಲಭಾನಾಂ ವ್ರಜಾ ಇವ।।

ಮದ್ರರಾಜನಿಂದ ಪ್ರಯೋಗಿಸಲ್ಪಟ್ಟ ಆ ಬಾಣಗಳು ಮಿಡತೆಗಳ ಗುಂಪುಗಳಂತೆ ರಣಮೂರ್ಧನಿಯಲ್ಲಿ ಬೀಳುತ್ತಿರುವುದನ್ನು ನಾವು ನೋಡಿದೆವು.

09012040a ಮದ್ರರಾಜಧನುರ್ಮುಕ್ತೈಃ ಶರೈಃ ಕನಕಭೂಷಣೈಃ।
09012040c ನಿರಂತರಮಿವಾಕಾಶಂ ಸಂಬಭೂವ ಜನಾಧಿಪ।।

ಜನಾಧಿಪ! ಮದ್ರರಾಜನ ಧನುಸ್ಸಿನಿಂದ ಹೊರಟ ಆ ಕನಕಭೂಷಣ ಶರಗಳಿಂದ ತುಂಬಿಹೋದ ಆಕಾಶದಲ್ಲಿ ಸ್ವಲ್ಪವೂ ಸ್ಥಳಾವಕಾಶವಿಲ್ಲದಂತಾಯಿತು.

09012041a ನ ಪಾಂಡವಾನಾಂ ನಾಸ್ಮಾಕಂ ತತ್ರ ಕಶ್ಚಿದ್ವ್ಯದೃಶ್ಯತ।
09012041c ಬಾಣಾಂಧಕಾರೇ ಮಹತಿ ಕೃತೇ ತತ್ರ ಮಹಾಭಯೇ।।

ಅವನು ಸೃಷ್ಟಿಸಿದ ಮಹಾ ಬಾಣಾಂಧಕಾರದಿಂದ ನಮ್ಮವರಿಗಾಗಲೀ ಪಾಂಡವರಿಗಾಗಲೀ ಏನೂ ಕಾಣುತ್ತಿರಲಿಲ್ಲ. ಅಲ್ಲಿ ಮಹಾಭಯವೇ ಉತ್ಪನ್ನವಾಯಿತು.

09012042a ಮದ್ರರಾಜೇನ ಬಲಿನಾ ಲಾಘವಾಚ್ಚರವೃಷ್ಟಿಭಿಃ।
09012042c ಲೋಡ್ಯಮಾನಂ ತಥಾ ದೃಷ್ಟ್ವಾ ಪಾಂಡವಾನಾಂ ಬಲಾರ್ಣವಂ।
09012042e ವಿಸ್ಮಯಂ ಪರಮಂ ಜಗ್ಮುರ್ದೇವಗಂಧರ್ವದಾನವಾಃ।।

ಬಲಶಾಲೀ ಮದ್ರರಾಜನ ಹಸ್ತಲಾಘವದಿಂದ ಸೃಷ್ಟಿಸಲ್ಪಟ್ಟ ಆ ಶರವೃಷ್ಟಿಯಿಂದ ಪಾಂಡವರ ಸೇನಾಸಾಗರವು ಅಲ್ಲೋಲಕಲ್ಲೋಲವಾಗುತ್ತಿರುವುದನ್ನು ನೋಡಿ ದೇವ-ಗಂಧರ್ವ-ದಾನವರಲ್ಲಿಯೂ ಪರಮ ವಿಸ್ಮಯವುಂಟಾಯಿತು.

09012043a ಸ ತು ತಾನ್ಸರ್ವತೋ ಯತ್ತಾನ್ ಶರೈಃ ಸಂಪೀಡ್ಯ ಮಾರಿಷ।
09012043c ಧರ್ಮರಾಜಮವಚ್ಚಾದ್ಯ ಸಿಂಹವದ್ವ್ಯನದನ್ಮುಹುಃ।।

ಮಾರಿಷ! ಶಲ್ಯನು ಆ ಪ್ರಯತ್ನಶೀಲರೆಲ್ಲರನ್ನೂ ಶರಗಳಿಂದ ಪೀಡಿಸಿ, ಧರ್ಮರಾಜನನ್ನೂ ಶರಗಳಿಂದ ಮುಚ್ಚಿ, ಪುನಃ ಪುನಃ ಸಿಂಹನಾದಗೈದನು.

09012044a ತೇ ಚನ್ನಾಃ ಸಮರೇ ತೇನ ಪಾಂಡವಾನಾಂ ಮಹಾರಥಾಃ।
09012044c ನ ಶೇಕುಸ್ತಂ ತದಾ ಯುದ್ಧೇ ಪ್ರತ್ಯುದ್ಯಾತುಂ ಮಹಾರಥಂ।।

ಸಮರದಲ್ಲಿ ಅವನಿಂದ ಮುಸುಕಲ್ಪಟ್ಟ ಪಾಂಡವ ಮಹಾರಥರು ಆಗ ಯುದ್ಧದಲ್ಲಿ ಆ ಮಹಾರಥ ಶಲ್ಯನನ್ನು ಎದುರಿಸಿ ಯುದ್ಧಮಾಡಲು ಶಕ್ಯರಾಗಿರಲಿಲ್ಲ.

09012045a ಧರ್ಮರಾಜಪುರೋಗಾಸ್ತು ಭೀಮಸೇನಮುಖಾ ರಥಾಃ।
09012045c ನ ಜಹುಃ ಸಮರೇ ಶೂರಂ ಶಲ್ಯಮಾಹವಶೋಭಿನಂ।।

ಆದರೂ ಧರ್ಮರಾಜನ ನಾಯಕತ್ವದಲ್ಲಿದ್ದ ಭೀಮಸೇನನೇ ಮೊದಲಾದ ಮಹಾರಥರು ಸಮರದಲ್ಲಿ ಆಹವಶೋಭೀ ಶೂರ ಶಲ್ಯನನ್ನು ಬಿಟ್ಟು ಹಿಂದೆ ಸರಿಯಲಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯಯುದ್ಧೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯಯುದ್ಧ ಎನ್ನುವ ಹನ್ನೆರಡನೇ ಅಧ್ಯಾಯವು.