011 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಶಲ್ಯವಧ ಪರ್ವ

ಅಧ್ಯಾಯ 11

ಸಾರ

ಶಲ್ಯ-ಭೀಮಸೇನರ ಗದಾಯುದ್ಧ, ಕೃಪನು ಶಲ್ಯನನ್ನು ತನ್ನ ರಥದ ಮೇಲೆ ಕುಳ್ಳಿರಿಸಿಕೊಂಡು ಹೋದುದು (1-26). ದುರ್ಯೋಧನನಿಂದ ಚೇಕಿತಾನನ ವಧೆ (27-31). ಸಂಕುಲಯುದ್ಧ (32-46). ಶಲ್ಯ-ಯುಧಿಷ್ಠಿರರ ಯುದ್ಧ (47-63).

09011001 ಸಂಜಯ ಉವಾಚ 09011001a ಪತಿತಂ ಪ್ರೇಕ್ಷ್ಯ ಯಂತಾರಂ ಶಲ್ಯಃ ಸರ್ವಾಯಸೀಂ ಗದಾಂ।
09011001c ಆದಾಯ ತರಸಾ ರಾಜಂಸ್ತಸ್ಥೌ ಗಿರಿರಿವಾಚಲಃ।।

ಸಂಜಯನು ಹೇಳಿದನು: “ರಾಜನ್! ಸಾರಥಿಯು ಬಿದ್ದುದನ್ನು ಕಂಡು ಶಲ್ಯನು ಬೇಗನೇ ಲೋಹಮಯ ಗದೆಯನ್ನು ಹಿಡಿದು ಅಚಲ ಪರ್ವತದಂತೆ ನಿಂತನು.

09011002a ತಂ ದೀಪ್ತಮಿವ ಕಾಲಾಗ್ನಿಂ ಪಾಶಹಸ್ತಮಿವಾಂತಕಂ।
09011002c ಸಶೃಂಗಮಿವ ಕೈಲಾಸಂ ಸವಜ್ರಮಿವ ವಾಸವಂ।।
09011003a ಸಶೂಲಮಿವ ಹರ್ಯಕ್ಷಂ ವನೇ ಮತ್ತಮಿವ ದ್ವಿಪಂ।
09011003c ಜವೇನಾಭ್ಯಪತದ್ಭೀಮಃ ಪ್ರಗೃಹ್ಯ ಮಹತೀಂ ಗದಾಂ।।

ಭೀಮಸೇನನು ಮಹಾ ಗದೆಯನ್ನು ಹಿಡಿದು ಪಾಶಹಸ್ತ ಅಂತಕನಂತೆ, ಶೃಂಗವಿರುವ ಕೈಲಾಸದಂತೆ, ವಜ್ರವನ್ನು ಹಿಡಿದಿರುವ ವಾಸವನಂತೆ, ಶೂಲವನ್ನು ಹಿಡಿದಿದ್ದ ಹರ್ಯಕ್ಷ ರುದ್ರನಂತೆ, ವನದಲ್ಲಿ ಮತ್ತ ಗಜದಂತೆ ಮತ್ತು ಕಾಲಾಗ್ನಿಯಂತೆ ಉರಿಯುತ್ತಿದ್ದ ಶಲ್ಯನನ್ನು ವೇಗದಿಂದ ಆಕ್ರಮಣಿಸಿದನು.

09011004a ತತಃ ಶಂಖಪ್ರಣಾದಶ್ಚ ತೂರ್ಯಾಣಾಂ ಚ ಸಹಸ್ರಶಃ।
09011004c ಸಿಂಹನಾದಶ್ಚ ಸಂಜಜ್ಞೇ ಶೂರಾಣಾಂ ಹರ್ಷವರ್ಧನಃ।।

ಆಗ ಸಹಸ್ರಾರು ಶಂಖ-ಪ್ರಣಾದ-ತೂರ್ಯಗಳು ಮೊಳಗಿದವು ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ ಸಿಂಹನಾದಗಳುಂಟಾದವು.

09011005a ಪ್ರೇಕ್ಷಂತಃ ಸರ್ವತಸ್ತೌ ಹಿ ಯೋಧಾ ಯೋಧಮಹಾದ್ವಿಪೌ।
09011005c ತಾವಕಾಶ್ಚ ಪರೇ ಚೈವ ಸಾಧು ಸಾಧ್ವಿತ್ಯಥಾಬ್ರುವನ್।।

ಕಾಳಗವಾಡುತ್ತಿರುವ ಎರಡು ಮಹಾಗಜಗಳಂತಿದ್ದ ಅವರಿಬ್ಬರನ್ನೂ ಅಲ್ಲಿದ್ದ ಪ್ರೇಕ್ಷಕ ಯೋಧರೆಲ್ಲರೂ – ನಿನ್ನವರು ಮತ್ತು ಅವರ ಕಡೆಯವರು – ಸಾಧು ಸಾಧು ಎಂದು ಹೇಳುತ್ತಿದ್ದರು.

09011006a ನ ಹಿ ಮದ್ರಾಧಿಪಾದನ್ಯೋ ರಾಮಾದ್ವಾ ಯದುನಂದನಾತ್।
09011006c ಸೋಢುಮುತ್ಸಹತೇ ವೇಗಂ ಭೀಮಸೇನಸ್ಯ ಸಂಯುಗೇ।।

ಮದ್ರಾಧಿಪ ಅಥವಾ ಯದುನಂದನ ಬಲರಾಮನನ್ನು ಬಿಟ್ಟರೆ ಬೇರೆ ಯಾರೂ ಯುದ್ಧದಲ್ಲಿ ಭೀಮಸೇನನ ವೇಗವನ್ನು ಸಹಿಸಿಕೊಳ್ಳಲು ಉತ್ಸಾಹಿತರಾಗಿರಲಿಲ್ಲ.

09011007a ತಥಾ ಮದ್ರಾಧಿಪಸ್ಯಾಪಿ ಗದಾವೇಗಂ ಮಹಾತ್ಮನಃ।
09011007c ಸೋಢುಮುತ್ಸಹತೇ ನಾನ್ಯೋ ಯೋಧೋ ಯುಧಿ ವೃಕೋದರಾತ್।।

ಅದೇರೀತಿ ಮಹಾತ್ಮ ಮದ್ರಾಧಿಪನ ಗದಾವೇಗವನ್ನು ಕೂಡ ಯುದ್ಧದಲ್ಲಿ ವೃಕೋದರನಲ್ಲದೇ ಅನ್ಯ ಯಾವ ಯೋಧನೂ ಸಹಿಸಿಕೊಳ್ಳಲು ಉತ್ಸಾಹಿತನಾಗಿರಲಿಲ್ಲ.

09011008a ತೌ ವೃಷಾವಿವ ನರ್ದಂತೌ ಮಂಡಲಾನಿ ವಿಚೇರತುಃ।
09011008c ಆವಲ್ಗಿತೌ ಗದಾಹಸ್ತೌ ಮದ್ರರಾಜವೃಕೋದರೌ।।

ಮದ್ರರಾಜ-ವೃಕೋದರರಿಬ್ಬರೂ ಗೂಳಿಗಳಂತೆ ಗರ್ಜಿಸುತ್ತಾ ಗದೆಗಳನ್ನು ಹಿಡಿದು ತಿರುಗಿಸುತ್ತಾ ಮಂಡಲಾಕಾರಗಳಲ್ಲಿ ತಿರುಗುತ್ತಿದ್ದರು.

09011009a ಮಂಡಲಾವರ್ತಮಾರ್ಗೇಷು ಗದಾವಿಹರಣೇಷು ಚ।
09011009c ನಿರ್ವಿಶೇಷಮಭೂದ್ಯುದ್ಧಂ ತಯೋಃ ಪುರುಷಸಿಂಹಯೋಃ।।

ಮಂಡಲಾಕಾರದಲ್ಲಿ ತಿರುಗುವುದರಲ್ಲಾಗಲೀ, ಗದೆಗಳನ್ನು ತಿರುಗಿಸುವುದರಲ್ಲಾಗಲೀ ಆ ಇಬ್ಬರು ಪುರುಷಸಿಂಹಗಳ ನಡುವಿನ ಯುದ್ಧದಲ್ಲಿ ವ್ಯತ್ಯಾಸಗಳೇ ಇರಲಿಲ್ಲ.

09011010a ತಪ್ತಹೇಮಮಯೈಃ ಶುಭ್ರೈರ್ಬಭೂವ ಭಯವರ್ಧನೀ।
09011010c ಅಗ್ನಿಜ್ವಾಲೈರಿವಾವಿದ್ಧಾ ಪಟ್ಟೈಃ ಶಲ್ಯಸ್ಯ ಸಾ ಗದಾ।।

ಅಪ್ಪಟ ಚಿನ್ನದ ಪಟ್ಟಿಯ ಶಲ್ಯನ ಆ ಗದೆಯು ಅಗ್ನಿಜ್ವಾಲೆಯಂತೆ ಹೊಳೆಯುತ್ತಿದ್ದು ಶುಭ್ರವೂ ಭಯವರ್ಧನಿಯೂ ಆಗಿತ್ತು.

09011011a ತಥೈವ ಚರತೋ ಮಾರ್ಗಾನ್ಮಂಡಲೇಷು ಮಹಾತ್ಮನಃ।
09011011c ವಿದ್ಯುದಭ್ರಪ್ರತೀಕಾಶಾ ಭೀಮಸ್ಯ ಶುಶುಭೇ ಗದಾ।।

ಹಾಗೆಯೇ ಮಂಡಲಮಾರ್ಗಗಳಲ್ಲಿ ಸುತ್ತುತ್ತಿದ್ದ ಮಹಾತ್ಮ ಭೀಮನ ಗದೆಯೂ ಮಿಂಚಿನ ಪ್ರಕಾಶದಂತೆ ಹೊಳೆದು ಶೋಭಿಸುತ್ತಿತ್ತು.

09011012a ತಾಡಿತಾ ಮದ್ರರಾಜೇನ ಭೀಮಸ್ಯ ಗದಯಾ ಗದಾ।
09011012c ದೀಪ್ಯಮಾನೇವ ವೈ ರಾಜನ್ಸಸೃಜೇ ಪಾವಕಾರ್ಚಿಷಃ।।

ರಾಜನ್! ಮದ್ರರಾಜನು ಗದೆಯಿಂದ ಭೀಮನ ಗದೆಯನ್ನು ಹೊಡೆಯಲು ಅದರಿಂದ ಉರಿಯುವ ಅಗ್ನಿಜ್ವಾಲೆಗಳು ಹೊರಸೂಸುತ್ತಿದ್ದವು.

09011013a ತಥಾ ಭೀಮೇನ ಶಲ್ಯಸ್ಯ ತಾಡಿತಾ ಗದಯಾ ಗದಾ।
09011013c ಅಂಗಾರವರ್ಷಂ ಮುಮುಚೇ ತದದ್ಭುತಮಿವಾಭವತ್।।

ಹಾಗೆಯೇ ಭೀಮನು ತನ್ನ ಗದೆಯಿಂದ ಶಲ್ಯನ ಗದೆಯನ್ನು ಹೊಡೆಯಲು ಅದರಿಂದಲೂ ಕಿಡಿಗಳ ಮಳೆಯೇ ಸುರಿಯಿತು. ಅದೊಂದು ಅದ್ಭುತವಾಗಿತ್ತು.

09011014a ದಂತೈರಿವ ಮಹಾನಾಗೌ ಶೃಂಗೈರಿವ ಮಹರ್ಷಭೌ।
09011014c ತೋತ್ತ್ರೈರಿವ ತದಾನ್ಯೋನ್ಯಂ ಗದಾಗ್ರಾಭ್ಯಾಂ ನಿಜಘ್ನತುಃ।।

ಮಹಾಗಜಗಳು ದಂತಗಳಿಂದಲೂ ಮಹಾಗೂಳಿಗಳು ಕೋಡುಗಳಿಂದಲೂ ತಿವಿದಾಡುವಂತೆ ಅವರಿಬ್ಬರೂ ಅನ್ಯೋನ್ಯರನ್ನು ಗದೆಯ ಅಗ್ರಬಾಗದಿಂದ ಪ್ರಹರಿಸುತ್ತಿದ್ದರು.

09011015a ತೌ ಗದಾನಿಹತೈರ್ಗಾತ್ರೈಃ ಕ್ಷಣೇನ ರುಧಿರೋಕ್ಷಿತೌ।
09011015c ಪ್ರೇಕ್ಷಣೀಯತರಾವಸ್ತಾಂ ಪುಷ್ಪಿತಾವಿವ ಕಿಂಶುಕೌ।।

ಗದೆಗಳಿಂದ ಪ್ರಹರಿಸಲ್ಪಟ್ಟ ಅವರಿಬ್ಬರ ಶರೀರಗಳೂ ಕ್ಷಣದಲ್ಲಿಯೇ ಗಾಯಗಳುಂಟಾಗಿ ರಕ್ತವು ಸೋರುತ್ತಿರಲು ಅವರಿಬ್ಬರೂ ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಪ್ರೇಕ್ಷಣೀಯರಾಗಿದ್ದರು.

09011016a ಗದಯಾ ಮದ್ರರಾಜೇನ ಸವ್ಯದಕ್ಷಿಣಮಾಹತಃ।
09011016c ಭೀಮಸೇನೋ ಮಹಾಬಾಹುರ್ನ ಚಚಾಲಾಚಲೋ ಯಥಾ।।

ಮದ್ರರಾಜನು ಗದೆಯಿಂದ ಭೀಮಸೇನನ ಎಡ ಮತ್ತು ಬಲ ಪಾರ್ಶ್ವಗಳಲ್ಲಿ ಹೊಡೆಯಲು ಆ ಮಹಾಬಾಹುವು ಪರ್ವತದಂತೆ ಅಲುಗಾಡಲೇ ಇಲ್ಲ.

09011017a ತಥಾ ಭೀಮಗದಾವೇಗೈಸ್ತಾಡ್ಯಮಾನೋ ಮುಹುರ್ಮುಹುಃ।
09011017c ಶಲ್ಯೋ ನ ವಿವ್ಯಥೇ ರಾಜನ್ದಂತಿನೇವಾಹತೋ ಗಿರಿಃ।।

ರಾಜನ್! ಅದೇ ರೀತಿಯಲ್ಲಿ ಭೀಮನ ಗದೆಯಿಂದ ವೇಗವಾಗಿ ಪುನಃ ಪುನಃ ಪ್ರಹರಿಸಲ್ಪಡುತ್ತಿದ್ದರೂ ಶಲ್ಯನು ಆನೆಯಿಂದ ಪ್ರಹರಿಸಲ್ಪಟ್ಟ ಗಿರಿಯಂತೆ ಸ್ವಲ್ಪವೂ ವ್ಯಥೆಗೊಳ್ಳಲಿಲ್ಲ.

09011018a ಶುಶ್ರುವೇ ದಿಕ್ಷು ಸರ್ವಾಸು ತಯೋಃ ಪುರುಷಸಿಂಹಯೋಃ।
09011018c ಗದಾನಿಪಾತಸಂಹ್ರಾದೋ ವಜ್ರಯೋರಿವ ನಿಸ್ವನಃ।।

ಆ ಇಬ್ಬರು ಪುರುಷಸಿಂಹರ ಗದಾಪ್ರಹಾರಗಳ ಧ್ವನಿಯು ಮಿಂಚಿನ ಧ್ವನಿಯಂತೆ ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿತು.

09011019a ನಿವೃತ್ಯ ತು ಮಹಾವೀರ್ಯೌ ಸಮುಚ್ಚ್ರಿತಗದಾವುಭೌ।
09011019c ಪುನರಂತರಮಾರ್ಗಸ್ಥೌ ಮಂಡಲಾನಿ ವಿಚೇರತುಃ।।

ಆ ಮಹಾವೀರ್ಯರಿಬ್ಬರೂ ಗದೆಯನ್ನೆತ್ತಿ ಮುಂದೆಸಾಗುತ್ತಿದ್ದರು, ಹಿಂದೆ ಸರಿಯುತ್ತಿದ್ದರು ಮತ್ತು ಪುನಃ ಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಿದ್ದರು.

09011020a ಅಥಾಭ್ಯೇತ್ಯ ಪದಾನ್ಯಷ್ಟೌ ಸಂನಿಪಾತೋಽಭವತ್ತಯೋಃ।
09011020c ಉದ್ಯಮ್ಯ ಲೋಹದಂಡಾಭ್ಯಾಮತಿಮಾನುಷಕರ್ಮಣೋಃ।।

ಹೀಗೆ ಅವರು ಎಂಟು ಹೆಜ್ಜೆಗಳನ್ನಿಟ್ಟ ಮೇಲೆ ಆ ಅತಿಮಾನುಷಕರ್ಮಿಗಳು ಲೋಹದಂಡಗಳನ್ನು ಮೇಲೆತ್ತಿ ಒಬ್ಬರನ್ನೊಬ್ಬರು ಹೊಡೆಯತೊಡಗಿದರು.

09011021a ಪ್ರಾರ್ಥಯಾನೌ ತದಾನ್ಯೋಽನ್ಯಂ ಮಂಡಲಾನಿ ವಿಚೇರತುಃ।
09011021c ಕ್ರಿಯಾವಿಶೇಷಂ ಕೃತಿನೌ ದರ್ಶಯಾಮಾಸತುಸ್ತದಾ।।

ಹೀಗೆ ಅವರು ಮಂಡಲಗಳಲ್ಲಿ ಸಂಚರಿಸುತ್ತಾ ಅನ್ಯೋನ್ಯರನ್ನು ಹೊಡೆಯಲು ಪ್ರಯತ್ನಿಸುತ್ತಿದ್ದರು. ಇಬ್ಬರೂ ತಮ್ಮ ಕ್ರಿಯಾವಿಶೇಷತೆಗಳನ್ನು ಪ್ರದರ್ಶಿಸುತ್ತಿದ್ದರು.

09011022a ಅಥೋದ್ಯಮ್ಯ ಗದೇ ಘೋರೇ ಸಶೃಂಗಾವಿವ ಪರ್ವತೌ।
09011022c ತಾವಜಘ್ನತುರನ್ಯೋನ್ಯಂ ಯಥಾ ಭೂಮಿಚಲೇಽಚಲೌ।।

ಶೃಂಗಸಹಿತ ಪರ್ವತಗಳಂತಿದ್ದ ಅವರಿಬ್ಬರೂ ಘೋರ ಗದೆಗಳನ್ನು ಮೇಲೆತ್ತಿ ಅನ್ಯೋನ್ಯರನ್ನು ಪ್ರಹರಿಸಿದರು. ಆದರೂ ಅವರು ರಣಭೂಮಿಯಲ್ಲಿ ಅಚಲರಾಗಿಯೇ ಇದ್ದರು.

09011023a ತೌ ಪರಸ್ಪರವೇಗಾಚ್ಚ ಗದಾಭ್ಯಾಂ ಚ ಭೃಶಾಹತೌ।
09011023c ಯುಗಪತ್ ಪೇತತುರ್ವೀರಾವುಭಾವಿಂದ್ರಧ್ವಜಾವಿವ।।

ಪರಸ್ಪರರ ಗದಾವೇಗದಿಂದ ತುಂಬಾ ಗಾಯಗೊಂಡ ಆ ವೀರರಿಬ್ಬರೂ ಎರಡು ಇಂದ್ರಧ್ವಜಗಳೋಪಾದಿಯಲ್ಲಿ ಒಟ್ಟಿಗೇ ಕೆಳಕ್ಕೆ ಬಿದ್ದರು.

09011024a ಉಭಯೋಃ ಸೇನಯೋರ್ವೀರಾಸ್ತದಾ ಹಾಹಾಕೃತೋಽಭವನ್।
09011024c ಭೃಶಂ ಮರ್ಮಣ್ಯಭಿಹತಾವುಭಾವಸ್ತಾಂ ಸುವಿಹ್ವಲೌ।।

ಆಗ ಎರಡೂ ಸೇನೆಗಳ ವೀರರಲ್ಲಿ ಹಾಹಾಕಾರವುಂಟಾಯಿತು. ಮರ್ಮಸ್ಥಾನಗಳಲ್ಲಿ ತುಂಬಾ ಗಾಯಗೊಂಡಿದ್ದ ಅವರಿಬ್ಬರೂ ಅತ್ಯಂತ ವಿಹ್ವಲರಾಗಿದ್ದರು.

09011025a ತತಃ ಸಗದಮಾರೋಪ್ಯ ಮದ್ರಾಣಾಂ ಋಷಭಂ ರಥೇ।
09011025c ಅಪೋವಾಹ ಕೃಪಃ ಶಲ್ಯಂ ತೂರ್ಣಮಾಯೋಧನಾದಪಿ।।

ಆಗ ಕೃಪನು ಮದ್ರರ ಋಷಭ ಶಲ್ಯನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಬೇಗನೇ ಅಲ್ಲಿಂದ ಕರೆದುಕೊಂಡು ಹೋದನು.

09011026a ಕ್ಷೀಬವದ್ವಿಹ್ವಲತ್ವಾತ್ತು ನಿಮೇಷಾತ್ಪುನರುತ್ಥಿತಃ।
09011026c ಭೀಮಸೇನೋ ಗದಾಪಾಣಿಃ ಸಮಾಹ್ವಯತ ಮದ್ರಪಂ।।

ವಿಹ್ವಲತೆಯಿಂದ ಕ್ಷೀಣನಾದವನಂತೆಯೇ ಇದ್ದ ಭೀಮಸೇನನು ನಿಮಿಷಮಾತ್ರದಲ್ಲಿ ಪುನಃ ಮೇಲೆದ್ದು ಗದಾಪಾಣಿಯಾಗಿ ಮದ್ರಪನನ್ನು ಯುದ್ಧಕ್ಕೆ ಆಹ್ವಾನಿಸಿದನು.

09011027a ತತಸ್ತು ತಾವಕಾಃ ಶೂರಾ ನಾನಾಶಸ್ತ್ರಸಮಾಯುತಾಃ।
09011027c ನಾನಾವಾದಿತ್ರಶಬ್ದೇನ ಪಾಂಡುಸೇನಾಮಯೋಧಯನ್।।

ಆಗ ನಿನ್ನ ಕಡೆಯ ಶೂರರು ನಾನಾಶಸ್ತ್ರಗಳನ್ನು ಹಿಡಿದು ನಾನಾ ವಾದಿತ್ರಶಬ್ಧಗಳೊಂದಿಗೆ ಪಾಂಡುಸೇನೆಯೊಡನೆ ಹೋರಾಡಿದರು.

09011028a ಭುಜಾವುಚ್ಚ್ರಿತ್ಯ ಶಸ್ತ್ರಂ ಚ ಶಬ್ದೇನ ಮಹತಾ ತತಃ।
09011028c ಅಭ್ಯದ್ರವನ್ ಮಹಾರಾಜ ದುರ್ಯೋಧನಪುರೋಗಮಾಃ।।

ಮಹಾರಾಜ! ದುರ್ಯೋಧನನೇ ಮೊದಲಾದವರು ಭುಜ-ಶಸ್ತ್ರಗಳನ್ನು ಮೇಲೆತ್ತಿ ಮಹಾ ಗರ್ಜನೆಗಳೊಂದಿಗೆ ಶತ್ರುಸೇನೆಯನ್ನು ಆಕ್ರಮಣಿಸಿದರು.

09011029a ತದಾನೀಕಮಭಿಪ್ರೇಕ್ಷ್ಯ ತತಸ್ತೇ ಪಾಂಡುನಂದನಾಃ।
09011029c ಪ್ರಯಯುಃ ಸಿಂಹನಾದೇನ ದುರ್ಯೋಧನವಧೇಪ್ಸಯಾ।।

ಆ ಸೇನೆಯನ್ನು ನೋಡಿ ಪಾಂಡುನಂದನರು ದುರ್ಯೋಧನನ್ನು ವಧಿಸಲು ಬಯಸಿ ಸಿಂಹನಾದದೊಂದಿಗೆ ಆಕ್ರಮಣಿಸಿದರು.

09011030a ತೇಷಾಮಾಪತತಾಂ ತೂರ್ಣಂ ಪುತ್ರಸ್ತೇ ಭರತರ್ಷಭ।
09011030c ಪ್ರಾಸೇನ ಚೇಕಿತಾನಂ ವೈ ವಿವ್ಯಾಧ ಹೃದಯೇ ಭೃಶಂ।।

ಭರತರ್ಷಭ! ರಭಸದಿಂದ ಅವರು ಮೇಲೆ ಬೀಳುತ್ತಿರಲು ನಿನ್ನ ಮಗನು ಪ್ರಾಸದಿಂದ ಚೇಕಿತಾನನ ಹೃದಯಕ್ಕೆ ಜೋರಾಗಿ ಪ್ರಹರಿಸಿದನು.

09011031a ಸ ಪಪಾತ ರಥೋಪಸ್ಥೇ ತವ ಪುತ್ರೇಣ ತಾಡಿತಃ।
09011031c ರುಧಿರೌಘಪರಿಕ್ಲಿನ್ನಃ ಪ್ರವಿಶ್ಯ ವಿಪುಲಂ ತಮಃ।।

ನಿನ್ನ ಮಗನಿಂದ ಹೊಡೆಯಲ್ಪಟ್ಟ ಚೇಕಿತಾನನು ಅಸುನೀಗಿ ಕುಳಿತಿದ್ದ ರಥದಿಂದ ಬಿದ್ದನು. ರಕ್ತದಿಂದ ಅವನು ತೋಯ್ದುಹೋಗಿದ್ದನು.

09011032a ಚೇಕಿತಾನಂ ಹತಂ ದೃಷ್ಟ್ವಾ ಪಾಂಡವಾನಾಂ ಮಹಾರಥಾಃ।
09011032c ಪ್ರಸಕ್ತಮಭ್ಯವರ್ಷಂತ ಶರವರ್ಷಾಣಿ ಭಾಗಶಃ।।

ಚೇಕಿತಾನನು ಹತನಾದುದನ್ನು ನೋಡಿ ಮಹಾರಥ ಪಾಂಡವರು ಪ್ರತ್ಯೇಕ ಪ್ರತ್ಯೇಕವಾಗಿ ಶರವರ್ಷಗಳನ್ನು ಸುರಿಸಲು ಉಪಕ್ರಮಿಸಿದರು.

09011033a ತಾವಕಾನಾಮನೀಕೇಷು ಪಾಂಡವಾ ಜಿತಕಾಶಿನಃ।
09011033c ವ್ಯಚರಂತ ಮಹಾರಾಜ ಪ್ರೇಕ್ಷಣೀಯಾಃ ಸಮಂತತಃ।।

ಮಹಾರಾಜ! ವಿಜಯೋತ್ಸಾಹೀ ಪಾಂಡವರು ನಿನ್ನ ಸೇನೆಗಳಲ್ಲಿ ನುಗ್ಗಿ ಸಂಚರಿಸುತ್ತಿರುವಾಗ ಎಲ್ಲಕಡೆಗಳಿಂದ ಪ್ರೇಕ್ಷಣೀಯರಾಗಿದ್ದರು.

09011034a ಕೃಪಶ್ಚ ಕೃತವರ್ಮಾ ಚ ಸೌಬಲಶ್ಚ ಮಹಾಬಲಃ।
09011034c ಅಯೋಧಯನ್ ಧರ್ಮರಾಜಂ ಮದ್ರರಾಜಪುರಸ್ಕೃತಾಃ।।

ಮದ್ರರಾಜನನ್ನು ಮುಂದಿಟ್ಟುಕೊಂಡು ಕೃಪ, ಕೃತವರ್ಮ, ಮತ್ತು ಮಹಾಬಲ ಸೌಬಲರು ಧರ್ಮರಾಜನನ್ನು ಆಕ್ರಮಣಿಸಿದರು.

09011035a ಭಾರದ್ವಾಜಸ್ಯ ಹಂತಾರಂ ಭೂರಿವೀರ್ಯಪರಾಕ್ರಮಂ।
09011035c ದುರ್ಯೋಧನೋ ಮಹಾರಾಜ ಧೃಷ್ಟದ್ಯುಮ್ನಮಯೋಧಯತ್।।

ಮಹಾರಾಜ! ದುರ್ಯೋಧನನು ಭಾರದ್ವಾಜ ದ್ರೋಣನ ಹಂತಕ, ಅತ್ಯಂತ ವೀರಪರಾಕ್ರಮಿ ಧೃಷ್ಟದ್ಯುಮ್ನನೊಡನೆ ಯುದ್ಧಮಾಡಿದನು.

09011036a ತ್ರಿಸಾಹಸ್ರಾ ರಥಾ ರಾಜಂಸ್ತವ ಪುತ್ರೇಣ ಚೋದಿತಾಃ।
09011036c ಅಯೋಧಯಂತ ವಿಜಯಂ ದ್ರೋಣಪುತ್ರಪುರಸ್ಕೃತಾಃ।।

ರಾಜನ್! ನಿನ್ನ ಪುತ್ರನಿಂದ ಪ್ರಚೋದಿತರಾದ ಮೂರು ಸಾವಿರ ರಥಗಳು ದ್ರೋಣಪುತ್ರನನ್ನು ಮುಂದೆಮಾಡಿಕೊಂಡು ವಿಜಯ ಅರ್ಜುನನೊಡನೆ ಯುದ್ಧಮಾಡಿದರು.

09011037a ವಿಜಯೇ ಧೃತಸಂಕಲ್ಪಾಃ ಸಮಭಿತ್ಯಕ್ತಜೀವಿತಾಃ।
09011037c ಪ್ರಾವಿಶಂಸ್ತಾವಕಾ ರಾಜನ್ ಹಂಸಾ ಇವ ಮಹತ್ಸರಃ।।

ರಾಜನ್! ಹಂಸಗಳು ಮಹಾಸರೋವರವನ್ನು ಹೇಗೋ ಹಾಗೆ ವಿಜಯವನ್ನೇ ಧೃಢಸಂಕಲ್ಪವಾಗಿಟ್ಟುಕೊಂಡು ಜೀವನವನ್ನೇ ತೊರೆದು ನಿನ್ನವರು ಶತ್ರುಸೇನೆಗಳನ್ನು ಪ್ರವೇಶಿಸಿದರು.

09011038a ತತೋ ಯುದ್ಧಮಭೂದ್ಘೋರಂ ಪರಸ್ಪರವಧೈಷಿಣಾಂ।
09011038c ಅನ್ಯೋನ್ಯವಧಸಮ್ಯುಕ್ತಮನ್ಯೋನ್ಯಪ್ರೀತಿವರ್ಧನಂ।।

ಆಗ ಪರಸ್ಪರರನ್ನು ವಧಿಸಲು ಇಚ್ಛಿಸಿದವರ ಮಧ್ಯೆ ಅನ್ಯೋನ್ಯರನ್ನು ವಧಿಸುವ ಮತ್ತು ಅನ್ಯೋನ್ಯರಿಗೆ ಸಂತೋಷವನ್ನುಂಟುಮಾಡುವ ಆ ಘೋರ ಯುದ್ಧವು ನಡೆಯಿತು.

09011039a ತಸ್ಮಿನ್ಪ್ರವೃತ್ತೇ ಸಂಗ್ರಾಮೇ ರಾಜನ್ವೀರವರಕ್ಷಯೇ।
09011039c ಅನಿಲೇನೇರಿತಂ ಘೋರಮುತ್ತಸ್ಥೌ ಪಾರ್ಥಿವಂ ರಜಃ।।

ರಾಜನ್! ವೀರಶ್ರೇಷ್ಠರ ಕ್ಷಯವಾಗುತ್ತಿರುವ ಆ ಸಂಗ್ರಾಮವು ನಡೆಯಲು ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಭಯಂಕರ ಧೂಳು ಭೂಮಿಯಿಂದ ಮೇಲೆದ್ದಿತು.

09011040a ಶ್ರವಣಾನ್ನಾಮಧೇಯಾನಾಂ ಪಾಂಡವಾನಾಂ ಚ ಕೀರ್ತನಾತ್।
09011040c ಪರಸ್ಪರಂ ವಿಜಾನೀಮೋ ಯೇ ಚಾಯುಧ್ಯನ್ನಭೀತವತ್।।

ಪಾಂಡವರು ತಮ್ಮ ನಾಮಧೇಯಗಳನ್ನು ಹೇಳಿಕೊಂಡಿದ್ದುದನ್ನು ಕೇಳಿದ ನಂತರವೇ ನಾವು ನಮ್ಮೆದುರಿಗೆ ನಿಂತು ಯುದ್ಧಮಾಡುವವರು ಯಾರೆಂದು ತಿಳಿದುಕೊಳ್ಳುತ್ತಿದ್ದೆವು.

09011041a ತದ್ರಜಃ ಪುರುಷವ್ಯಾಘ್ರ ಶೋಣಿತೇನ ಪ್ರಶಾಮಿತಂ।
09011041c ದಿಶಶ್ಚ ವಿಮಲಾ ಜಜ್ಞುಸ್ತಸ್ಮಿನ್ರಜಸಿ ಶಾಮಿತೇ।।

ಪುರುಷವ್ಯಾಘ್ರ! ರಕ್ತದಿಂದ ಆ ಧೂಳು ಅಡಗಿತು. ಧೂಳು ನಾಶವಾಗಲು ದಿಕ್ಕುಗಳು ಸ್ವಚ್ಛವಾದವು.

09011042a ತಥಾ ಪ್ರವೃತ್ತೇ ಸಂಗ್ರಾಮೇ ಘೋರರೂಪೇ ಭಯಾನಕೇ।
09011042c ತಾವಕಾನಾಂ ಪರೇಷಾಂ ಚ ನಾಸೀತ್ಕಶ್ಚಿತ್ಪರಾಙ್ಮುಖಃ।।

ಆ ಘೋರರೂಪೀ ಭಯಾನಕ ಸಂಗ್ರಾಮವು ನಡೆಯುತ್ತಿರಲು ನಿನ್ನವರಲ್ಲಾಗಲೀ ಪಾಂಡವರಲ್ಲಾಗಲೀ ಯಾರೂ ಪರಾಙ್ಮುಖರಾಗಲಿಲ್ಲ.

09011043a ಬ್ರಹ್ಮಲೋಕಪರಾ ಭೂತ್ವಾ ಪ್ರಾರ್ಥಯಂತೋ ಜಯಂ ಯುಧಿ।
09011043c ಸುಯುದ್ಧೇನ ಪರಾಕ್ರಾಂತಾ ನರಾಃ ಸ್ವರ್ಗಮಭೀಪ್ಸವಃ।।

ಬ್ರಹ್ಮಲೋಕವನ್ನೇ ಗುರಿಯನ್ನಾಗಿಟ್ಟುಕೊಂಡು ಯುದ್ಧದಲ್ಲಿ ಜಯವನ್ನು ಪ್ರಾರ್ಥಿಸುತ್ತಿದ್ದರು. ಧರ್ಮಯುದ್ಧದಲ್ಲಿ ತಮ್ಮ ಪರಾಕ್ರಮವನ್ನು ತೋರಿಸಿ ನರರು ಸ್ವರ್ಗವನ್ನೇ ಬಯಸುತ್ತಿದ್ದರು.

09011044a ಭರ್ತೃಪಿಂಡವಿಮೋಕ್ಷಾರ್ಥಂ ಭರ್ತೃಕಾರ್ಯವಿನಿಶ್ಚಿತಾಃ।
09011044c ಸ್ವರ್ಗಸಂಸಕ್ತಮನಸೋ ಯೋಧಾ ಯುಯುಧಿರೇ ತದಾ।।

ಒಡೆಯನ ಅನ್ನದ ಋಣವನ್ನು ತೀರಿಸಲು, ಒಡೆಯನ ಕಾರ್ಯವನ್ನು ಮಾಡುವ ನಿಷ್ಠೆಯುಳ್ಳವರಾಗಿ ಯೋಧರು ಸ್ವರ್ಗಪ್ರಾಪ್ತಿಯಲ್ಲಿಯೇ ಮನಸ್ಸನ್ನು ಇಟ್ಟುಕೊಂಡು ಯುದ್ಧಮಾಡುತ್ತಿದ್ದರು.

09011045a ನಾನಾರೂಪಾಣಿ ಶಸ್ತ್ರಾಣಿ ವಿಸೃಜಂತೋ ಮಹಾರಥಾಃ।
09011045c ಅನ್ಯೋನ್ಯಮಭಿಗರ್ಜಂತಃ ಪ್ರಹರಂತಃ ಪರಸ್ಪರಂ।।

ಮಹಾರಥರು ನಾನಾರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಿದ್ದರು. ಅನ್ಯೋನ್ಯರ ಮೇಲೆ ಗರ್ಜಿಸುತ್ತಾ ಪರಸ್ಪರ ಪ್ರಹರಿಸುತ್ತಿದ್ದರು.

09011046a ಹತ ವಿಧ್ಯತ ಗೃಹ್ಣೀತ ಪ್ರಹರಧ್ವಂ ನಿಕೃಂತತ।
09011046c ಇತಿ ಸ್ಮ ವಾಚಃ ಶ್ರೂಯಂತೇ ತವ ತೇಷಾಂ ಚ ವೈ ಬಲೇ।।

“ಕೊಲ್ಲಿರಿ! ಪ್ರಹರಿಸಿರಿ! ಬಂಧಿಸಿರಿ! ಹೊಡೆಯಿರಿ! ಕತ್ತರಿಸಿರಿ!” ಇವೇ ಮೊದಲಾದ ಕೂಗುಗಳು ನಿನ್ನ ಸೈನ್ಯ ಮತ್ತು ಶತ್ರು ಸೈನ್ಯಗಳಲ್ಲಿ ಕೇಳಿಬರುತ್ತಿತ್ತು.

09011047a ತತಃ ಶಲ್ಯೋ ಮಹಾರಾಜ ಧರ್ಮರಾಜಂ ಯುಧಿಷ್ಠಿರಂ।
09011047c ವಿವ್ಯಾಧ ನಿಶಿತೈರ್ಬಾಣೈರ್ಹಂತುಕಾಮೋ ಮಹಾರಥಂ।।

ಮಹಾರಾಜ! ಆಗ ಶಲ್ಯನು ಧರ್ಮರಾಜ ಮಹಾರಥ ಯುಧಿಷ್ಠಿರನನ್ನು ಕೊಲ್ಲಲು ಬಯಸಿ ಅವನನ್ನು ನಿಶಿತ ಬಾಣಗಳಿಂದ ಹೊಡೆದನು.

09011048a ತಸ್ಯ ಪಾರ್ಥೋ ಮಹಾರಾಜ ನಾರಾಚಾನ್ವೈ ಚತುರ್ದಶ।
09011048c ಮರ್ಮಾಣ್ಯುದ್ದಿಶ್ಯ ಮರ್ಮಜ್ಞೋ ನಿಚಖಾನ ಹಸನ್ನಿವ।।

ಮಹಾರಾಜ! ಅದಕ್ಕೆ ಪ್ರತಿಯಾಗಿ ಮರ್ಮಜ್ಞ ಪಾರ್ಥನು ನಗು ನಗುತ್ತಲೇ ಹದಿನಾಲ್ಕು ನಾರಾಚಗಳನ್ನು ಶಲ್ಯನ ಮರ್ಮಸ್ಥಾನಗಳಲ್ಲಿ ನಾಟಿಸಿದನು.

09011049a ತಂ ವಾರ್ಯ ಪಾಂಡವಂ ಬಾಣೈರ್ಹಂತುಕಾಮೋ ಮಹಾಯಶಾಃ।
09011049c ವಿವ್ಯಾಧ ಸಮರೇ ಕ್ರುದ್ಧೋ ಬಹುಭಿಃ ಕಂಕಪತ್ರಿಭಿಃ।।

ಪಾಂಡವನನ್ನು ಕೊಲ್ಲಲು ಬಯಸಿದ್ದ ಮಹಾಯಶಸ್ವಿ ಶಲ್ಯನು ಕ್ರುದ್ಧನಾಗಿ ಬಾಣಗಳಿಂದ ಅವನನ್ನು ತಡೆದು ಸಮರದಲ್ಲಿ ಅನೇಕ ಕಂಕಪತ್ರಿ ಬಾಣಗಳಿಂದ ಅವನನ್ನು ಹೊಡೆದನು.

09011050a ಅಥ ಭೂಯೋ ಮಹಾರಾಜ ಶರೇಣ ನತಪರ್ವಣಾ।
09011050c ಯುಧಿಷ್ಠಿರಂ ಸಮಾಜಘ್ನೇ ಸರ್ವಸೈನ್ಯಸ್ಯ ಪಶ್ಯತಃ।।

ಮಹಾರಾಜ! ಪುನಃ ಸರ್ವ ಸೇನೆಗಳೂ ನೋಡುತ್ತಿರುವಂತೆಯೇ, ಅವನು ನತಪರ್ವ ಶರಗಳಿಂದ ಯುಧಿಷ್ಠಿರನನ್ನು ಪ್ರಹರಿಸಿದನು.

09011051a ಧರ್ಮರಾಜೋಽಪಿ ಸಂಕ್ರುದ್ಧೋ ಮದ್ರರಾಜಂ ಮಹಾಯಶಾಃ।
09011051c ವಿವ್ಯಾಧ ನಿಶಿತೈರ್ಬಾಣೈಃ ಕಂಕಬರ್ಹಿಣವಾಜಿತೈಃ।।

ಮಹಾಯಶಸ್ವಿ ಧರ್ಮರಾಜನೂ ಕೂಡ ಕುಪಿತನಾಗಿ ನವಿಲು ಮತ್ತು ರಣಹದ್ದುಗಳ ರೆಕ್ಕೆಗಳ ನಿಶಿತ ಬಾಣಗಳಿಂದ ಮದ್ರರಾಜನನ್ನು ಹೊಡೆದನು.

09011052a ಚಂದ್ರಸೇನಂ ಚ ಸಪ್ತತ್ಯಾ ಸೂತಂ ಚ ನವಭಿಃ ಶರೈಃ।
09011052c ದ್ರುಮಸೇನಂ ಚತುಹ್ಷಷ್ಟ್ಯಾ ನಿಜಘಾನ ಮಹಾರಥಃ।।

ಮಹಾರಥ ಯುಧಿಷ್ಠಿರನು ಚಂದ್ರಸೇನನನ್ನು ಎಪ್ಪತ್ತು, ಸಾರಥಿಯನ್ನು ಒಂಭತ್ತು, ಮತ್ತು ದ್ರುಮಸೇನನನ್ನು26 ಅರವತ್ನಾಲ್ಕು ಬಾಣಗಳಿಂದ ಹೊಡೆದು ಸಂಹರಿಸಿದನು.

09011053a ಚಕ್ರರಕ್ಷೇ ಹತೇ ಶಲ್ಯಃ ಪಾಂಡವೇನ ಮಹಾತ್ಮನಾ।
09011053c ನಿಜಘಾನ ತತೋ ರಾಜಂಶ್ಚೇದೀನ್ವೈ ಪಂಚವಿಂಶತಿಂ।।

ರಾಜನ್! ಮಹಾತ್ಮ ಪಾಂಡವನಿಂದ ತನ್ನ ಚಕ್ರರಕ್ಷಕರು ಹತರಾಗಲು ಶಲ್ಯನು ಇಪ್ಪತ್ತೈದು ಚೇದಿಯೋಧರನ್ನು ಸಂಹರಿಸಿದನು.

09011054a ಸಾತ್ಯಕಿಂ ಪಂಚವಿಂಶತ್ಯಾ ಭೀಮಸೇನಂ ಚ ಪಂಚಭಿಃ।
09011054c ಮಾದ್ರೀಪುತ್ರೌ ಶತೇನಾಜೌ ವಿವ್ಯಾಧ ನಿಶಿತೈಃ ಶರೈಃ।।

ಸಾತ್ಯಕಿಯನ್ನು ಇಪ್ಪತ್ತೈದು, ಭೀಮಸೇನನನ್ನು ಐದು, ಮತ್ತು ಮಾದ್ರೀಪುತ್ರರನ್ನು ನೂರು ನಿಶಿತ ಶರಗಳಿಂದ ಪ್ರಹರಿಸಿದನು.

09011055a ಏವಂ ವಿಚರತಸ್ತಸ್ಯ ಸಂಗ್ರಾಮೇ ರಾಜಸತ್ತಮ।
09011055c ಸಂಪ್ರೇಷಯಚ್ಚಿತಾನ್ಪಾರ್ಥಃ ಶರಾನಾಶೀವಿಷೋಪಮಾನ್।।

ರಾಜಸತ್ತಮ! ಸಂಗ್ರಾಮದಲ್ಲಿ ಹೀಗೆ ಸಂಚರಿಸುತ್ತಿದ್ದ ಶಲ್ಯನ ಮೇಲೆ ಪಾರ್ಥನು ಅನೇಕ ಸರ್ಪವಿಷಸಮಾನ ಬಾಣಗಳನ್ನು ಪ್ರಯೋಗಿಸಿದನು.

09011056a ಧ್ವಜಾಗ್ರಂ ಚಾಸ್ಯ ಸಮರೇ ಕುಂತೀಪುತ್ರೋ ಯುಧಿಷ್ಠಿರಃ।
09011056c ಪ್ರಮುಖೇ ವರ್ತಮಾನಸ್ಯ ಭಲ್ಲೇನಾಪಹರದ್ರಥಾತ್।।

ಕುಂತೀಪುತ್ರ ಯುಧಿಷ್ಠಿರನು ಸಮರದಲ್ಲಿ ತನ್ನ ಮುಂದೆಯೇ ಇದ್ದ ಶಲ್ಯನ ಧ್ವಜದ ಅಗ್ರಭಾಗವನ್ನು ಭಲ್ಲದಿಂದ ಕತ್ತರಿಸಿ ರಥದಿಂದ ಕೆಳಕ್ಕೆ ಬೀಳಿಸಿದನು.

09011057a ಪಾಂಡುಪುತ್ರೇಣ ವೈ ತಸ್ಯ ಕೇತುಂ ಚಿನ್ನಂ ಮಹಾತ್ಮನಾ।
09011057c ನಿಪತಂತಮಪಶ್ಯಾಮ ಗಿರಿಶೃಂಗಮಿವಾಹತಂ।।

ಮಹಾತ್ಮ ಪಾಂಡುಪುತ್ರನಿಂದ ತುಂಡರಿಸಲ್ಪಟ್ಟ ಆ ಕೇತುವು ಪ್ರಹಾರದಿಂದ ಕತ್ತರಿಸಲ್ಪಟ್ಟು ಪರ್ವತ ಶಿಖರದಂತೆ ಬೀಳುವುದನ್ನು ನಾವು ನೋಡಿದೆವು.

09011058a ಧ್ವಜಂ ನಿಪತಿತಂ ದೃಷ್ಟ್ವಾ ಪಾಂಡವಂ ಚ ವ್ಯವಸ್ಥಿತಂ।
09011058c ಸಂಕ್ರುದ್ಧೋ ಮದ್ರರಾಜೋಽಭೂಚ್ಚರವರ್ಷಂ ಮುಮೋಚ ಹ।।

ಧ್ವಜವು ಕೆಳಗೆ ಬಿದ್ದುದನ್ನೂ, ವ್ಯವಸ್ಥಿತನಾಗಿ ನಿಂತಿದ್ದ ಪಾಂಡವನನ್ನೂ ನೋಡಿ ಸಂಕ್ರುದ್ಧನಾದ ಮದ್ರರಾಜನು ಶರವರ್ಷಗಳನ್ನು ಪ್ರಯೋಗಿಸಿದನು.

09011059a ಶಲ್ಯಃ ಸಾಯಕವರ್ಷೇಣ ಪರ್ಜನ್ಯ ಇವ ವೃಷ್ಟಿಮಾನ್।
09011059c ಅಭ್ಯವರ್ಷದಮೇಯಾತ್ಮಾ ಕ್ಷತ್ರಿಯಂ ಕ್ಷತ್ರಿಯರ್ಷಭಃ।।

ಮಳೆಸುರಿಸುತ್ತಿರುವ ಮೋಡದಂತೆ ಕ್ಷತ್ರಿಯರ್ಷಭ ಶಲ್ಯನು ಸಾಯಕಗಳ ಮಳೆಯನ್ನು ಕ್ಷತ್ರಿಯ ಅಮೇಯಾತ್ಮ ಯುಧಿಷ್ಠಿರನ ಮೇಲೆ ಸುರಿಸಿದನು.

09011060a ಸಾತ್ಯಕಿಂ ಭೀಮಸೇನಂ ಚ ಮಾದ್ರೀಪುತ್ರೌ ಚ ಪಾಂಡವೌ।
09011060c ಏಕೈಕಂ ಪಂಚಭಿರ್ವಿದ್ಧ್ವಾ ಯುಧಿಷ್ಠಿರಮಪೀಡಯತ್।।

ಶಲ್ಯನು ಸಾತ್ಯಕಿ, ಭೀಮಸೇನ, ಮಾದ್ರೀಪುತ್ರ ಪಾಂಡವರಿಬ್ಬರಲ್ಲಿ ಒಬ್ಬೊಬ್ಬರನ್ನೂ ಐದೈದು ಬಾಣಗಳಿಂದ ಹೊಡೆದು ಯುಧಿಷ್ಠಿರನನ್ನು ಪೀಡಿಸಿದನು.

09011061a ತತೋ ಬಾಣಮಯಂ ಜಾಲಂ ವಿತತಂ ಪಾಂಡವೋರಸಿ।
09011061c ಅಪಶ್ಯಾಮ ಮಹಾರಾಜ ಮೇಘಜಾಲಮಿವೋದ್ಗತಂ।।

ಮಹಾರಾಜ! ಆಗ ಮೇಘಗಳ ಜಾಲವು ಮೇಲೆದ್ದು ಬರುವಂತೆ ಬಾಣಮಯ ಜಾಲವು ಪಾಂಡವನ ಎದೆಯಮೇಲೆ ಬರುವುದನ್ನು ನಾವು ಕಂಡೆವು.

09011062a ತಸ್ಯ ಶಲ್ಯೋ ರಣೇ ಕ್ರುದ್ಧೋ ಬಾಣೈಃ ಸನ್ನತಪರ್ವಭಿಃ।
09011062c ದಿಶಃ ಪ್ರಚ್ಚಾದಯಾಮಾಸ ಪ್ರದಿಶಶ್ಚ ಮಹಾರಥಃ।।

ಅವನ ಮೇಲೆ ಕ್ರುದ್ಧನಾದ ಮಹಾರಥ ಶಲ್ಯನು ರಣದಲ್ಲಿ ಸನ್ನತಪರ್ವ ಬಾಣಗಳಿಂದ ದಿಕ್ಕು ಉಪದಿಕ್ಕುಗಳನ್ನು ಮುಚ್ಚಿಬಿಟ್ಟನು.

09011063a ತತೋ ಯುಧಿಷ್ಠಿರೋ ರಾಜಾ ಬಾಣಜಾಲೇನ ಪೀಡಿತಃ।
09011063c ಬಭೂವ ಹೃತವಿಕ್ರಾಂತೋ ಜಂಭೋ ವೃತ್ರಹಣಾ ಯಥಾ।।

ಆಗ ರಾಜಾ ಯುಧಿಷ್ಠಿರನು ಬಾಣಜಾಲಗಳಿಂದ ಪೀಡಿತನಾಗಿ ಇಂದ್ರನಿಂದ ಜಂಭಾಸುರನು ಹೇಗೋ ಹಾಗೆ ಹತವಿಕ್ರಾಂತನಾದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹನ್ನೊಂದನೇ ಅಧ್ಯಾಯವು.