ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 10
ಸಾರ
ಶಲ್ಯನ ಪರಾಕ್ರಮ (1-31). ದ್ವಂದ್ವಯುದ್ಧ (33-41). ಭೀಮಸೇನನಿಂದ ಶಲ್ಯನ ಪರಾಜಯ (42-56).
09010001 ಸಂಜಯ ಉವಾಚ 09010001a ತಸ್ಮಿನ್ವಿಲುಲಿತೇ ಸೈನ್ಯೇ ವಧ್ಯಮಾನೇ ಪರಸ್ಪರಂ।
09010001c ದ್ರವಮಾಣೇಷು ಯೋಧೇಷು ನಿನದತ್ಸು ಚ ದಂತಿಷು।।
ಸಂಜಯನು ಹೇಳಿದನು: “ಪರಸ್ಪರರನ್ನು ವಧಿಸುತ್ತಾ ಹೋರಾಡುತ್ತಿದ್ದ ಆ ಸೇನೆಗಳಲ್ಲಿ ಯೋಧರು ಓಡಿ ಹೋಗುತ್ತಿದ್ದರು ಮತ್ತು ಆನೆಗಳು ಚೀತ್ಕರಿಸುತ್ತಿದ್ದವು.
09010002a ಕೂಜತಾಂ ಸ್ತನತಾಂ ಚೈವ ಪದಾತೀನಾಂ ಮಹಾಹವೇ।
09010002c ವಿದ್ರುತೇಷು ಮಹಾರಾಜ ಹಯೇಷು ಬಹುಧಾ ತದಾ।।
ಮಹಾರಾಜ! ಆ ಮಹಾಹವದಲ್ಲಿ ಪದಾತಿಗಳು ಜೋರಾಗಿ ಕೂಗಿಕೊಳ್ಳುತ್ತಿದ್ದರು. ಅನೇಕ ಕುದುರೆಗಳು ಓಡಿಹೋಗುತ್ತಿದ್ದವು.
09010003a ಪ್ರಕ್ಷಯೇ ದಾರುಣೇ ಜಾತೇ ಸಂಹಾರೇ ಸರ್ವದೇಹಿನಾಂ।
09010003c ನಾನಾಶಸ್ತ್ರಸಮಾವಾಪೇ ವ್ಯತಿಷಕ್ತರಥದ್ವಿಪೇ।।
ಸರ್ವದೇಹಿಗಳ ಸಂಹಾರಕ ದಾರುಣ ಕ್ಷಯವು ನಡೆಯಿತು. ನಾನಾ ಶಸ್ತ್ರಗಳ ಪ್ರಹಾರಗಳಾಗುತ್ತಿದ್ದವು ಮತ್ತು ರಥ-ಆನೆಗಳು ಸಂಘರ್ಷಿಸುತ್ತಿದ್ದವು.
09010004a ಹರ್ಷಣೇ ಯುದ್ಧಶೌಂಡಾನಾಂ ಭೀರೂಣಾಂ ಭಯವರ್ಧನೇ।
09010004c ಗಾಹಮಾನೇಷು ಯೋಧೇಷು ಪರಸ್ಪರವಧೈಷಿಷು।।
ಯುದ್ಧಶೌಂಡರಿಗೆ ಹರ್ಷವನ್ನುಂಟುಮಾಡುವ, ಹೇಡಿಗಳ ಭಯವನ್ನು ಹೆಚ್ಚಿಸುವ ಆ ಯುದ್ಧದಲ್ಲಿ ಯೋಧರು ಪರಸ್ಪರರನ್ನು ವಧಿಸಲು ಬಯಸಿ ನುಗ್ಗಿ ಹೋಗುತ್ತಿದ್ದರು.
09010005a ಪ್ರಾಣಾದಾನೇ ಮಹಾಘೋರೇ ವರ್ತಮಾನೇ ದುರೋದರೇ।
09010005c ಸಂಗ್ರಾಮೇ ಘೋರರೂಪೇ ತು ಯಮರಾಷ್ಟ್ರವಿವರ್ಧನೇ।।
ಯಮರಾಷ್ಟ್ರವನ್ನು ವರ್ಧಿಸುವ ಆ ಘೋರರೂಪೀ ಸಂಗ್ರಾಮದಲ್ಲಿ ಪ್ರಾಣಗಳನ್ನು ಪಣವಾಗಿಟ್ಟ ಮಹಾ ಜೂಜಾಟವು ನಡೆಯುತ್ತಿತ್ತು.
09010006a ಪಾಂಡವಾಸ್ತಾವಕಂ ಸೈನ್ಯಂ ವ್ಯಧಮನ್ನಿಶಿತೈಃ ಶರೈಃ।
09010006c ತಥೈವ ತಾವಕಾ ಯೋಧಾ ಜಘ್ನುಃ ಪಾಂಡವಸೈನಿಕಾನ್।।
ಪಾಂಡವರು ನಿನ್ನ ಸೈನ್ಯವನ್ನು ನಿಶಿತ ಶರಗಳಿಂದ ವಧಿಸುತ್ತಿದ್ದರು. ನಿನ್ನ ಕಡೆಯ ಯೋಧರೂ ಕೂಡ ಪಾಂಡವ ಸೈನಿಕರನ್ನು ಸಂಹರಿಸುತ್ತಿದ್ದರು.
09010007a ತಸ್ಮಿಂಸ್ತಥಾ ವರ್ತಮಾನೇ ಯುದ್ಧೇ ಭೀರುಭಯಾವಹೇ।
09010007c ಪೂರ್ವಾಹ್ಣೇ ಚೈವ ಸಂಪ್ರಾಪ್ತೇ ಭಾಸ್ಕರೋದಯನಂ ಪ್ರತಿ।।
ಹೇಡಿಗಳಿಗೆ ಭಯವನ್ನು ನೀಡುವ ಆ ಯುದ್ಧವು ಹಾಗೆ ನಡೆಯುತ್ತಿರಲು, ಸೂರ್ಯನು ಉದಯಿಸಿ ಪೂರ್ವಾಹ್ಣವು ಪ್ರಾಪ್ತವಾಯಿತು.
09010008a ಲಬ್ಧಲಕ್ಷಾಃ ಪರೇ ರಾಜನ್ರಕ್ಷಿತಾಶ್ಚ ಮಹಾತ್ಮನಾ।
09010008c ಅಯೋಧಯಂಸ್ತವ ಬಲಂ ಮೃತ್ಯುಂ ಕೃತ್ವಾ ನಿವರ್ತನಂ।।
ರಾಜನ್! ಮಹಾತ್ಮ ಅರ್ಜುನನಿಂದ ರಕ್ಷಿತವಾಗಿದ್ದ, ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಗುರಿಯನ್ನಿಟ್ಟುಕೊಂಡಿದ್ದ ಶತ್ರುಸೇನೆಯು ನಿನ್ನ ಸೇನೆಯೊಂದಿಗೆ ಹೋರಾಡುತ್ತಿತ್ತು.
09010009a ಬಲಿಭಿಃ ಪಾಂಡವೈರ್ದೃಪ್ತೈರ್ಲಬ್ಧಲಕ್ಷೈಃ ಪ್ರಹಾರಿಭಿಃ।
09010009c ಕೌರವ್ಯಸೀದತ್ಪೃತನಾ ಮೃಗೀವಾಗ್ನಿಸಮಾಕುಲಾ।।
ಪ್ರಹಾರ ಕುಶಲ ಲಬ್ಧಲಕ್ಷ್ಯ ದೃಪ್ತ ಬಲಿಷ್ಠ ಪಾಂಡವ ಯೋಧರಿಂದ ಪ್ರಹರಿಸಲ್ಪಟ್ಟ ನಿನ್ನ ಸೇನೆಯು ದಾವಾಗ್ನಿಯಿಂದ ಸುತ್ತುವರೆಯಲ್ಪಟ್ಟ ಹರಿಣಿಯಂತೆ ವ್ಯಾಕುಲಗೊಂಡಿತ್ತು.
09010010a ತಾಂ ದೃಷ್ಟ್ವಾ ಸೀದತೀಂ ಸೇನಾಂ ಪಂಕೇ ಗಾಮಿವ ದುರ್ಬಲಾಂ।
09010010c ಉಜ್ಜಿಹೀರ್ಷುಸ್ತದಾ ಶಲ್ಯಃ ಪ್ರಾಯಾತ್ಪಾಂಡುಚಮೂಂ ಪ್ರತಿ।।
ಕೆಸರಿನಲ್ಲಿ ಸಿಕ್ಕಿಬಿದ್ದ ದುರ್ಬಲ ಹಸುವಿನಂತೆ ಕೌರವ ಸೇನೆಯು ಕುಸಿಯುತ್ತಿರುವುದನ್ನು ನೋಡಿ ಶಲ್ಯನು ಅದನ್ನು ಮೇಲೆತ್ತಲು ಬಯಸಿ ಪಾಂಡವ ಸೇನೆಯ ಕಡೆ ಹೋದನು.
09010011a ಮದ್ರರಾಜಸ್ತು ಸಂಕ್ರುದ್ಧೋ ಗೃಹೀತ್ವಾ ಧನುರುತ್ತಮಂ।
09010011c ಅಭ್ಯದ್ರವತ ಸಂಗ್ರಾಮೇ ಪಾಂಡವಾನಾತತಾಯಿನಃ।।
ಮದ್ರರಾಜನಾದರೋ ಸಂಕ್ರುದ್ಧನಾಗಿ ಉತ್ತಮ ಧನುಸ್ಸನ್ನು ಹಿಡಿದು ಸಂಗ್ರಾಮದಲ್ಲಿ ಆತತಾಯಿನ ಪಾಂಡವರನ್ನು ಆಕ್ರಮಣಿಸಿದನು.
09010012a ಪಾಂಡವಾಶ್ಚ ಮಹಾರಾಜ ಸಮರೇ ಜಿತಕಾಶಿನಃ।
09010012c ಮದ್ರರಾಜಂ ಸಮಾಸಾದ್ಯ ವಿವ್ಯಧುರ್ನಿಶಿತೈಃ ಶರೈಃ।।
ಮಹಾರಾಜ! ವಿಜಯೋತ್ಸಾಹಿಗಳಾಗಿದ್ದ ಪಾಂಡವರು ಕೂಡ ಸಮರದಲ್ಲಿ ಮದ್ರರಾಜನನ್ನು ಎದುರಿಸಿ ನಿಶಿತ ಶರಗಳಿಂದ ಹೊಡೆದರು.
09010013a ತತಃ ಶರಶತೈಸ್ತೀಕ್ಷ್ಣೈರ್ಮದ್ರರಾಜೋ ಮಹಾಬಲಃ।
09010013c ಅರ್ದಯಾಮಾಸ ತಾಂ ಸೇನಾಂ ಧರ್ಮರಾಜಸ್ಯ ಪಶ್ಯತಃ।।
ಆಗ ಧರ್ಮರಾಜನು ನೋಡುತ್ತಿದ್ದಂತೆಯೇ ಮಹಾಬಲ ಮದ್ರರಾಜನು ನೂರಾರು ತೀಕ್ಷ್ಣ ಶರಗಳಿಂದ ಅವನ ಸೇನೆಯನ್ನು ಮರ್ದಿಸತೊಡಗಿದನು.
09010014a ಪ್ರಾದುರಾಸಂಸ್ತತೋ ರಾಜನ್ನಾನಾರೂಪಾಣ್ಯನೇಕಶಃ।
09010014c ಚಚಾಲ ಶಬ್ದಂ ಕುರ್ವಾಣಾ ಮಹೀ ಚಾಪಿ ಸಪರ್ವತಾ।।
ರಾಜನ್! ಆಗ ನಾನಾ ರೂಪದ ಅನೇಕ ನಿಮಿತ್ತಗಳು ಕಾಣಿಸಿಕೊಂಡವು. ಶಬ್ಧಮಾಡುತ್ತಾ ಪರ್ವತಗಳೊಂದಿಗೆ ಭೂಮಿಯು ನಡುಗಿತು.
09010015a ಸದಂಡಶೂಲಾ ದೀಪ್ತಾಗ್ರಾಃ ಶೀರ್ಯಮಾಣಾಃ ಸಮಂತತಃ।
09010015c ಉಲ್ಕಾ ಭೂಮಿಂ ದಿವಃ ಪೇತುರಾಹತ್ಯ ರವಿಮಂಡಲಂ।।
ಆಕಾಶದಿಂದ ಅನೇಕ ಉಲ್ಕೆಗಳು ಮತ್ತು ದಂಡಗಳೊಡನೆ ದೀಪ್ತಾಗ್ರ ಶೂಲಗಳು ಸೂರ್ಯಮಂಡಲವನ್ನು ಅಪ್ಪಳಿಸಿ ಸೀಳುವಂತೆ ಎಲ್ಲ ಕಡೆಗಳಿಂದ ಭೂಮಿಯ ಮೇಲೆ ಬಿದ್ದವು.
09010016a ಮೃಗಾಶ್ಚ ಮಾಹಿಷಾಶ್ಚಾಪಿ ಪಕ್ಷಿಣಶ್ಚ ವಿಶಾಂ ಪತೇ।
09010016c ಅಪಸವ್ಯಂ ತದಾ ಚಕ್ರುಃ ಸೇನಾಂ ತೇ ಬಹುಶೋ ನೃಪ।।
ವಿಶಾಂಪತೇ! ನೃಪ! ಮೃಗಗಳು, ಎಮ್ಮೆಗಳು ಮತ್ತು ಪಕ್ಷಿಗಳು ಅನೇಕ ಸಂಖ್ಯೆಗಳಲ್ಲಿ ನಿನ್ನ ಸೇನೆಯನ್ನು ಬಲಬದಿಯಿಂದ ಸುತ್ತುತ್ತಿದ್ದವು.
09010017a ತತಸ್ತದ್ಯುದ್ಧಮತ್ಯುಗ್ರಮಭವತ್ಸಂಘಚಾರಿಣಾಂ।
09010017c ತಥಾ ಸರ್ವಾಣ್ಯನೀಕಾನಿ ಸಂನಿಪತ್ಯ ಜನಾಧಿಪ।।
09010017e ಅಭ್ಯಯುಃ ಕೌರವಾ ರಾಜನ್ಪಾಂಡವಾನಾಮನೀಕಿನೀಂ।।
ಆಗ ಸಂಘಟಿತರಾಗಿದ್ದವರ ನಡುವೆ ಅತ್ಯುಗ್ರ ಯುದ್ಧವು ನಡೆಯಿತು. ಜನಾಧಿಪ! ಕೌರವರು ಸರ್ವ ಸೇನೆಗಳನ್ನೂ ಒಟ್ಟುಮಾಡಿಕೊಂಡು ಪಾಂಡವಸೇನೆಯನ್ನು ಆಕ್ರಮಣಿಸಿದರು.
09010018a ಶಲ್ಯಸ್ತು ಶರವರ್ಷೇಣ ವರ್ಷನ್ನಿವ ಸಹಸ್ರದೃಕ್।
09010018c ಅಭ್ಯವರ್ಷದದೀನಾತ್ಮಾ ಕುಂತೀಪುತ್ರಂ ಯುಧಿಷ್ಠಿರಂ।।
ಶಲ್ಯನಾದರೋ ವರ್ಷಾಕಾಲದಲ್ಲಿ ಸಹಸ್ರಾಕ್ಷನು ಮಳೆಸುರಿಸುವಂತೆ ಶರವರ್ಷಗಳನ್ನು ಅದೀನಾತ್ಮ ಕುಂತೀಪುತ್ರ ಯುಧಿಷ್ಠಿರನ ಮೇಲೆ ಸುರಿಸಿದನು.
09010019a ಭೀಮಸೇನಂ ಶರೈಶ್ಚಾಪಿ ರುಕ್ಮಪುಂಖೈಃ ಶಿಲಾಶಿತಃ।
09010019c ದ್ರೌಪದೇಯಾಂಸ್ತಥಾ ಸರ್ವಾನ್ಮಾದ್ರೀಪುತ್ರೌ ಚ ಪಾಂಡವೌ।।
09010020a ಧೃಷ್ಟದ್ಯುಮ್ನಂ ಚ ಶೈನೇಯಂ ಶಿಖಂಡಿನಮಥಾಪಿ ಚ।
09010020c ಏಕೈಕಂ ದಶಭಿರ್ಬಾಣೈರ್ವಿವ್ಯಾಧ ಚ ಮಹಾಬಲಃ।।
09010020e ತತೋಽಸೃಜದ್ಬಾಣವರ್ಷಂ ಘರ್ಮಾಂತೇ ಮಘವಾನಿವ।।
ಆ ಮಹಾಬಲನು ರುಕ್ಮಪುಂಖ ಶಿಲಾಶಿತ ಶರಗಳಿಂದ ಭೀಮಸೇನ, ದ್ರೌಪದೇಯರೆಲ್ಲರು, ಮಾದ್ರೀಪುತ್ರ ಪಾಂಡವರಿಬ್ಬರು, ಧೃಷ್ಟದ್ಯುಮ್ನ, ಶೈನೇಯ, ಶಿಖಂಡಿಯರು ಒಬ್ಬೊಬ್ಬರನ್ನೂ ಹತ್ತತ್ತು ಬಾಣಗಳಿಂದ ಹೊಡೆದನು. ಅನಂತರ ಬೇಸಗೆಯ ಕೊನೆಯಲ್ಲಿ ಇಂದ್ರನು ಮಳೆ ಸುರಿಸುವಂತೆ ಬಾಣವರ್ಷಗಳನ್ನು ಸೃಷ್ಟಿಸಿದನು.
09010021a ತತಃ ಪ್ರಭದ್ರಕಾ ರಾಜನ್ಸೋಮಕಾಶ್ಚ ಸಹಸ್ರಶಃ।
09010021c ಪತಿತಾಃ ಪಾತ್ಯಮಾನಾಶ್ಚ ದೃಶ್ಯಂತೇ ಶಲ್ಯಸಾಯಕೈಃ।।
ರಾಜನ್! ಆಗ ಸಹಸ್ರಾರು ಪ್ರಭದ್ರಕ-ಸೋಮಕರು ಶಲ್ಯಸಾಯಕಗಳಿಂದ ಉರುಳಿಸಲ್ಪಟ್ಟು ಕೆಳಗೆ ಬೀಳುತ್ತಿರುವುದು ಕಾಣುತ್ತಿತ್ತು.
09010022a ಭ್ರಮರಾಣಾಮಿವ ವ್ರಾತಾಃ ಶಲಭಾನಾಮಿವ ವ್ರಜಾಃ।
09010022c ಹ್ರಾದಿನ್ಯ ಇವ ಮೇಘೇಭ್ಯಃ ಶಲ್ಯಸ್ಯ ನ್ಯಪತನ್ ಶರಾಃ।।
ಶಲ್ಯನ ಶರಗಳು ದುಂಬಿಗಳ ಸಮೂಹಗಳಂತೆ, ಮಿಡತೆಗಳ ಗುಂಪುಗಳಂತೆ, ಮತ್ತು ಮೇಘಗಳ ಗುಂಪುಗಳಂತೆ ಸೇನೆಗಳ ಮೇಲೆ ಬೀಳುತ್ತಿದ್ದವು.
09010023a ದ್ವಿರದಾಸ್ತುರಗಾಶ್ಚಾರ್ತಾಃ ಪತ್ತಯೋ ರಥಿನಸ್ತಥಾ।
09010023c ಶಲ್ಯಸ್ಯ ಬಾಣೈರ್ನ್ಯಪತನ್ಬಭ್ರಮುರ್ವ್ಯನದಂಸ್ತಥಾ।।
ಶಲ್ಯನ ಬಾಣಗಳಿಂದ ಆರ್ತರಾಗಿ ಆನೆಗಳೂ, ಕುದುರೆಗಳೂ, ಪದಾತಿಗಳೂ, ರಥಿಗಳೂ ಕೆಳಗುರುಳುತ್ತಿದ್ದವು. ದಿಕ್ಕುಕಾಣದೇ ತಿರುಗುತ್ತಿದ್ದವು.
09010024a ಆವಿಷ್ಟ ಇವ ಮದ್ರೇಶೋ ಮನ್ಯುನಾ ಪೌರುಷೇಣ ಚ।
09010024c ಪ್ರಾಚ್ಚಾದಯದರೀನ್ಸಂಖ್ಯೇ ಕಾಲಸೃಷ್ಟ ಇವಾಂತಕಃ।।
ಕಾಲಸೃಷ್ಟ ಅಂತಕನಂತೆ ಕೋಪ-ಪೌರುಷಗಳಿಂದ ಆವಿಷ್ಟನಾಗಿದ್ದ ಮದ್ರೇಶನು ಯುದ್ಧದಲ್ಲಿ ಶತ್ರುಗಳನ್ನು ಬಾಣಗಳಿಂದ ಮುಚ್ಚಿಬಿಟ್ಟನು.
09010024e ವಿನರ್ದಮಾನೋ ಮದ್ರೇಶೋ ಮೇಘಹ್ರಾದೋ ಮಹಾಬಲಃ।।
09010025a ಸಾ ವಧ್ಯಮಾನಾ ಶಲ್ಯೇನ ಪಾಂಡವಾನಾಮನೀಕಿನೀ।
09010025c ಅಜಾತಶತ್ರುಂ ಕೌಂತೇಯಮಭ್ಯಧಾವದ್ ಯುಧಿಷ್ಠಿರಂ।।
ಮಹಾಬಲ ಮದ್ರೇಶನು ಮೇಘಗಳಂತೆ ಗರ್ಜಿಸುತ್ತಿದ್ದನು. ಶಲ್ಯನಿಂದ ಹಾಗೆ ವಧಿಸಲ್ಪಡುತ್ತಿದ್ದ ಪಾಂಡವ ಸೇನೆಯು ಅಜಾತಶತ್ರು ಕೌಂತೇಯ ಯುಧಿಷ್ಠಿರನ ಬಳಿ ಸಾರಿತು.
09010026a ತಾಂ ಸಮರ್ಪ್ಯ ತತಃ ಸಂಖ್ಯೇ ಲಘುಹಸ್ತಃ ಶಿತೈಃ ಶರೈಃ।
09010026c ಶರವರ್ಷೇಣ ಮಹತಾ ಯುಧಿಷ್ಠಿರಮಪೀಡಯತ್।।
ಲಘುಹಸ್ತ ಶಲ್ಯನು ನಿಶಿತ ಶರಗಳಿಂದ ಆ ಸೇನೆಯನ್ನು ಮರ್ದಿಸಿ ಮಹಾ ಶರವರ್ಷದಿಂದ ಯುಧಿಷ್ಠಿರನನ್ನು ಪೀಡಿಸಿದನು.
09010027a ತಮಾಪತಂತಂ ಪತ್ತ್ಯಶ್ವೈಃ ಕ್ರುದ್ಧೋ ರಾಜಾ ಯುಧಿಷ್ಠಿರಃ।
09010027c ಅವಾರಯಚ್ಚರೈಸ್ತೀಕ್ಷ್ಣೈರ್ಮತ್ತಂ ದ್ವಿಪಮಿವಾಂಕುಶೈಃ।।
ಪದಾತಿ-ಅಶ್ವಗಳೊಂದಿಗೆ ತನ್ನ ಮೇಲೆ ಎರಗುತ್ತಿದ್ದ ಶಲ್ಯನನ್ನು ಕ್ರುದ್ಧ ರಾಜಾ ಯುಧಿಷ್ಠಿರನು ತೀಕ್ಷ್ಣ ಶರಗಳಿಂದ ಮುಸುಕಿ ಮದಿಸಿದ ಆನೆಯನ್ನು ಅಂಕುಶಗಳಿಂದ ಹೇಗೋ ಹಾಗೆ ನಿಯಂತ್ರಿಸಿದನು.
09010028a ತಸ್ಯ ಶಲ್ಯಃ ಶರಂ ಘೋರಂ ಮುಮೋಚಾಶೀವಿಷೋಪಮಂ।
09010028c ಸೋಽಭ್ಯವಿಧ್ಯನ್ಮಹಾತ್ಮಾನಂ ವೇಗೇನಾಭ್ಯಪತಚ್ಚ ಗಾಂ।।
ಅವನ ಮೇಲೆ ಶಲ್ಯನು ಘೋರ ಸರ್ಪವಿಷದಂತಿರುವ ಶರವನ್ನು ಪ್ರಯೋಗಿಸಿದನು. ಅದು ಮಹಾತ್ಮ ಯುಧಿಷ್ಠಿರನನ್ನು ಭೇಧಿಸಿ ವೇಗದಿಂದ ಭೂಮಿಯನ್ನು ಹೊಕ್ಕಿತು.
09010029a ತತೋ ವೃಕೋದರಃ ಕ್ರುದ್ಧಃ ಶಲ್ಯಂ ವಿವ್ಯಾಧ ಸಪ್ತಭಿಃ।
09010029c ಪಂಚಭಿಃ ಸಹದೇವಸ್ತು ನಕುಲೋ ದಶಭಿಃ ಶರೈಃ।।
ಆಗ ಶಲ್ಯನನ್ನು ಕ್ರುದ್ಧ ವೃಕೋದರನು ಏಳು ಬಾಣಗಳಿಂದ, ಸಹದೇವನು ಐದರಿಂದ ಮತ್ತು ನಕುಲನು ಹತ್ತು ಶರಗಳಿಂದ ಹೊಡೆದರು.
09010030a ದ್ರೌಪದೇಯಾಶ್ಚ ಶತ್ರುಘ್ನಂ ಶೂರಮಾರ್ತಾಯನಿಂ ಶರೈಃ।
09010030c ಅಭ್ಯವರ್ಷನ್ಮಹಾಭಾಗಂ ಮೇಘಾ ಇವ ಮಹೀಧರಂ।।
ದ್ರೌಪದೇಯರು ಕೂಡ ಮೇಘಗಳು ಭೂಮಿಯ ಮೇಲೆ ಹೇಗೋ ಹಾಗೆ ಶತ್ರುಘ್ನ-ಶೂರ-ಆರ್ತಾಯನಿ-ಮಹಾಭಾಗ ಶಲ್ಯನ ಮೇಲೆ ಶರಗಳನ್ನು ಸುರಿಸಿದರು.
09010031a ತತೋ ದೃಷ್ಟ್ವಾ ತುದ್ಯಮಾನಂ ಶಲ್ಯಂ ಪಾರ್ಥೈಃ ಸಮಂತತಃ।
09010031c ಕೃತವರ್ಮಾ ಕೃಪಶ್ಚೈವ ಸಂಕ್ರುದ್ಧಾವಭ್ಯಧಾವತಾಂ।।
ಎಲ್ಲಕಡೆಗಳಲ್ಲಿ ಪಾರ್ಥರಿಂದ ಆಕ್ರಮಣಿಸಲ್ಪಟ್ಟ ಶಲ್ಯನನ್ನು ನೋಡಿ ಸಂಕ್ರುದ್ಧ ಕೃತವರ್ಮ-ಕೃಪರು ಅಲ್ಲಿಗೆ ಧಾವಿಸಿದರು.
09010032a ಉಲೂಕಶ್ಚ ಪತತ್ರೀ ಚ ಶಕುನಿಶ್ಚಾಪಿ ಸೌಬಲಃ।
09010032c ಸ್ಮಯಮಾನಶ್ಚ ಶನಕೈರಶ್ವತ್ಥಾಮಾ ಮಹಾರಥಃ।।
09010032e ತವ ಪುತ್ರಾಶ್ಚ ಕಾರ್ತ್ಸ್ನ್ಯೆನ ಜುಗುಪುಃ ಶಲ್ಯಮಾಹವೇ।।
ಉಲೂಕ, ಪತತ್ರೀ, ಸೌಬಲ ಶಕುನಿ, ಮೆಲ್ಲನೆ ನಗುತ್ತಿದ್ದ ಮಹಾರಥ ಅಶ್ವತ್ಥಾಮ, ನಿನ್ನ ಪುತ್ರರು ಎಲ್ಲರೂ ಯುದ್ಧದಲ್ಲಿ ಶಲ್ಯನ ಸಹಾಯಕ್ಕಾಗಿ ಹೋದರು.
09010033a ಭೀಮಸೇನಂ ತ್ರಿಭಿರ್ವಿದ್ಧ್ವಾ ಕೃತವರ್ಮಾ ಶಿಲೀಮುಖೈಃ।
09010033c ಬಾಣವರ್ಷೇಣ ಮಹತಾ ಕ್ರುದ್ಧರೂಪಮವಾರಯತ್।।
ಕೃತವರ್ಮನು ಮೂರು ಶಿಲೀಮುಖಗಳಿಂದ ಭೀಮಸೇನನನ್ನು ಹೊಡೆದು ಮಹಾ ಬಾಣವರ್ಷದಿಂದ ಆ ಕ್ರುದ್ಧರೂಪನನ್ನು ತಡೆದನು.
09010034a ಧೃಷ್ಟದ್ಯುಮ್ನಂ ಕೃಪಃ ಕ್ರುದ್ಧೋ ಬಾಣವರ್ಷೈರಪೀಡಯತ್।
09010034c ದ್ರೌಪದೇಯಾಂಶ್ಚ ಶಕುನಿರ್ಯಮೌ ಚ ದ್ರೌಣಿರಭ್ಯಯಾತ್।।
ಕೃಪನು ಕ್ರುದ್ಧ ಧೃಷ್ಟದ್ಯುಮ್ನನನ್ನು ಬಾಣವರ್ಷಗಳಿಂದ ಪೀಡಿಸಿದನು. ದ್ರೌಪದೇಯರನ್ನು ಶಕುನಿಯೂ, ದ್ರೌಣಿಯು ಯಮಳರನ್ನೂ ಆಕ್ರಮಣಿಸಿದರು.
09010035a ದುರ್ಯೋಧನೋ ಯುಧಾಂ ಶ್ರೇಷ್ಠಾವಾಹವೇ ಕೇಶವಾರ್ಜುನೌ।
09010035c ಸಮಭ್ಯಯಾದುಗ್ರತೇಜಾಃ ಶರೈಶ್ಚಾಭ್ಯಹನದ್ಬಲೀ।।
ಯೋಧರಲ್ಲಿ ಶ್ರೇಷ್ಠ ಉಗ್ರತೇಜಸ್ವಿ ಬಲಶಾಲೀ ದುರ್ಯೋಧನನು ಯುದ್ಧದಲ್ಲಿ ಕೇಶವಾರ್ಜುನರನ್ನು ಎದುರಿಸಿ ಬಾಣಗಳಿಂದ ಅವರನ್ನು ಪ್ರಹರಿಸಿದನು.
09010036a ಏವಂ ದ್ವಂದ್ವಶತಾನ್ಯಾಸಂಸ್ತ್ವದೀಯಾನಾಂ ಪರೈಃ ಸಹ।
09010036c ಘೋರರೂಪಾಣಿ ಚಿತ್ರಾಣಿ ತತ್ರ ತತ್ರ ವಿಶಾಂ ಪತೇ।।
ವಿಶಾಂಪತೇ! ಹೀಗೆ ನಿನ್ನ ಮತ್ತು ಶತ್ರುಗಳ ನಡುವೆ ನೂರಾರು ಘೋರರೂಪೀ-ವಿಚಿತ್ರ ದ್ವಂದ್ವಯುದ್ಧಗಳು ಅಲ್ಲಲ್ಲಿ ನಡೆಯುತ್ತಿದ್ದವು.
09010037a ಋಶ್ಯವರ್ಣಾನ್ಜಘಾನಾಶ್ವಾನ್ಭೋಜೋ ಭೀಮಸ್ಯ ಸಂಯುಗೇ।
09010037c ಸೋಽವತೀರ್ಯ ರಥೋಪಸ್ಥಾದ್ಧತಾಶ್ವಃ ಪಾಂಡುನಂದನಃ।।
09010037e ಕಾಲೋ ದಂಡಮಿವೋದ್ಯಮ್ಯ ಗದಾಪಾಣಿರಯುಧ್ಯತ।।
ಯುದ್ಧದಲ್ಲಿ ಭೋಜನು ಭೀಮನ ಕರಡಿಬಣ್ಣದ ಕುದುರೆಗಳನ್ನು ಸಂಹರಿಸಿದನು. ಹತಾಶ್ವ ಪಾಂಡುನಂದನನು ರಥದಿಂದ ಕೆಳಗಿಳಿದು ಕಾಲದಂಡದಂತಿರುವ ಗದೆಯನ್ನು ಎತ್ತಿಹಿಡಿದು ಯುದ್ಧಮಾಡಿದನು.
09010038a ಪ್ರಮುಖೇ ಸಹದೇವಸ್ಯ ಜಘಾನಾಶ್ವಾಂಶ್ಚ ಮದ್ರರಾಟ್।
09010038c ತತಃ ಶಲ್ಯಸ್ಯ ತನಯಂ ಸಹದೇವೋಽಸಿನಾವಧೀತ್।।
ಎದುರಾಳಿಯಾಗಿದ್ದ ಸಹದೇವನ ಕುದುರೆಗಳನ್ನು ಮದ್ರರಾಜನು ಸಂಹರಿಸಿದನು. ಆಗ ಸಹದೇವನು ಖಡ್ಗದಿಂದ ಶಲ್ಯನ ಮಗನನ್ನು ವಧಿಸಿದನು.
09010039a ಗೌತಮಃ ಪುನರಾಚಾರ್ಯೋ ಧೃಷ್ಟದ್ಯುಮ್ನಮಯೋಧಯತ್।
09010039c ಅಸಂಭ್ರಾಂತಮಸಂಭ್ರಾಂತೋ ಯತ್ನವಾನ್ಯತ್ನವತ್ತರಂ।।
ಆಚಾರ್ಯ ಗೌತಮನು ಅಸಂಭ್ರಾಂತನಾಗಿ, ಪ್ರಯತ್ನಪಟ್ಟು ಅಸಂಭ್ರಾಂತನಾಗಿದ್ದ, ಪ್ರಯತ್ನಪಡುತ್ತಿದ್ದ ಧೃಷ್ಟದ್ಯುಮ್ನನೊಡನೆ ಹೋರಾಡಿದನು.
09010040a ದ್ರೌಪದೇಯಾಂಸ್ತಥಾ ವೀರಾನೇಕೈಕಂ ದಶಭಿಃ ಶರೈಃ।
09010040c ಅವಿಧ್ಯದಾಚಾರ್ಯಸುತೋ ನಾತಿಕ್ರುದ್ಧಃ ಸ್ಮಯನ್ನಿವ।।
ಆಚಾರ್ಯಸುತ ಅಶ್ವತ್ಥಾಮನು ಹೆಚ್ಚು ಕೋಪಗೊಳ್ಳದೇ ನಗುತ್ತಿರುವನೋ ಎನ್ನುವಂತೆ ಹತ್ತತ್ತು ಶರಗಳಿಂದ ಒಬ್ಬೊಬ್ಬ ದ್ರೌಪದೇಯ ವೀರನನ್ನೂ ಪ್ರಹರಿಸಿದನು.
09010041a ಶಲ್ಯೋಽಪಿ ರಾಜನ್ಸಂಕ್ರುದ್ಧೋ ನಿಘ್ನನ್ಸೋಮಕಪಾಂಡವಾನ್।
09010041c ಪುನರೇವ ಶಿತೈರ್ಬಾಣೈರ್ಯುಧಿಷ್ಠಿರಮಪೀಡಯತ್।।
ರಾಜನ್! ಶಲ್ಯನೂ ಕೂಡ ಸಂಕ್ರುದ್ಧನಾಗಿ ಸೋಮಕ-ಪಾಂಡವರನ್ನು ವಧಿಸುತ್ತ ಪುನಃ ನಿಶಿತ ಬಾಣಗಳಿಂದ ಯುಧಿಷ್ಠಿರನನ್ನು ಪೀಡಿಸಿದನು.
09010042a ತಸ್ಯ ಭೀಮೋ ರಣೇ ಕ್ರುದ್ಧಃ ಸಂದಷ್ಟದಶನಚ್ಚದಃ।
09010042c ವಿನಾಶಾಯಾಭಿಸಂಧಾಯ ಗದಾಮಾದತ್ತ ವೀರ್ಯವಾನ್।।
09010043a ಯಮದಂಡಪ್ರತೀಕಾಶಾಂ ಕಾಲರಾತ್ರಿಮಿವೋದ್ಯತಾಂ।
09010043c ಗಜವಾಜಿಮನುಷ್ಯಾಣಾಂ ಪ್ರಾಣಾಂತಕರಣೀಮಪಿ।।
ಅದರಿಂದ ವೀರ್ಯವಾನ್ ಭೀಮನು ಕ್ರುದ್ಧನಾಗಿ ತುಟಿಯನ್ನು ಕಚ್ಚುತ್ತಾ ರಣದಲ್ಲಿ ಶಲ್ಯನನ್ನು ವಿನಾಶಗೊಳಿಸಲು ಯಮದಂಡ ಸದೃಶ, ಮೇಲೆದ್ದುಬಂದ ಕಾಳರಾತ್ರಿಯಂತೆ ಕಾಣುತ್ತಿದ್ದ, ಆನೆ-ಕುದುರೆ-ಪದಾತಿ ಶರೀರಗಳನ್ನು ವಿನಾಶಗೊಳಿಸಬಹುದಾದ ಮಹಾ ಗದೆಯನ್ನು ಎತ್ತಿ ಹಿಡಿದನು.
09010044a ಹೇಮಪಟ್ಟಪರಿಕ್ಷಿಪ್ತಾಮುಲ್ಕಾಂ ಪ್ರಜ್ವಲಿತಾಮಿವ।
09010044c ಶೈಕ್ಯಾಂ ವ್ಯಾಲೀಮಿವಾತ್ಯುಗ್ರಾಂ ವಜ್ರಕಲ್ಪಾಮಯಸ್ಮಯೀಂ।।
09010045a ಚಂದನಾಗುರುಪಂಕಾಕ್ತಾಂ ಪ್ರಮದಾಮೀಪ್ಸಿತಾಮಿವ।
09010045c ವಸಾಮೇದೋಸೃಗಾದಿಗ್ಧಾಂ ಜಿಹ್ವಾಂ ವೈವಸ್ವತೀಮಿವ।।
09010046a ಪಟುಘಂಟಾರವಶತಾಂ ವಾಸವೀಮಶನೀಮಿವ।
09010046c ನಿರ್ಮುಕ್ತಾಶೀವಿಷಾಕಾರಾಂ ಪೃಕ್ತಾಂ ಗಜಮದೈರಪಿ।।
09010047a ತ್ರಾಸನೀಂ ರಿಪುಸೈನ್ಯಾನಾಂ ಸ್ವಸೈನ್ಯಪರಿಹರ್ಷಿಣೀಂ।
09010047c ಮನುಷ್ಯಲೋಕೇ ವಿಖ್ಯಾತಾಂ ಗಿರಿಶೃಂಗವಿದಾರಿಣೀಂ।।
ಸುವರ್ಣಪಟ್ಟಿಯನ್ನು ಸುತ್ತಿದ್ದ, ಉಲ್ಕೆಯಂತೆ ಪ್ರಜ್ವಲಿಸುತ್ತಿದ್ದ, ವಜ್ರದಂತಹ ಕಠಿನ ಲೋಹಮಯವಾಗಿದ್ದ, ಉಯ್ಯಾಲೆಯ ಮೇಲಿರುವ ಭಯಂಕರ ವಿಷಸರ್ಪಿಣಿಯಂತಿದ್ದ, ಚಂದನ-ಅಗರುಗಳಿಂದ ಲೇಪಿತಗೊಂಡು ಅಭೀಷ್ಟಳಾದ ಪ್ರಿಯತಮೆಯಂತಿದ್ದ ಆ ಗದೆಯು ಪ್ರಾಣಿಗಳ ವಸೆ-ಮೇಧಸ್ಸುಗಳಿಂದ ಲೇಪಿಸಲ್ಪಟ್ಟು ಯಮರಾಜನ ನಾಲಿಗೆಯಂತೆ ಭಯಂಕರವಾಗಿತ್ತು. ಆ ಗದೆಯಲ್ಲಿದ್ದ ನೂರಾರು ಕಿರುಗಂಟೆಗಳು ಯಾವಾಗಲೂ ಧ್ವನಿಗೈಯುತ್ತಿದ್ದವು. ವಾಸವನ ವಜ್ರದಂತಿದ್ದ ಆ ಗದೆಯು ಪೊರೆಕಳಚಿದ ವಿಷಸರ್ಪದಂತಿತ್ತು ಮತ್ತು ಆನೆಗಳ ಮದೋದಕಗಳಿಂದ ತೋಯ್ದುಹೋಗಿತ್ತು. ಶತ್ರುಸೇನೆಗಳಿಗೆ ಭಯದಾಯಕವೂ ಸ್ವಸೈನ್ಯಗಳಿಗೆ ಹರ್ಷದಾಯಕವೂ ಆಗಿದ್ದ ಅದು ಮನುಷ್ಯಲೋಕದಲ್ಲಿ ಗಿರಿಶೃಂಗಗಳನ್ನೂ ಸೀಳಬಲ್ಲದು ಎಂದು ವಿಖ್ಯಾತವಾಗಿತ್ತು.
09010048a ಯಯಾ ಕೈಲಾಸಭವನೇ ಮಹೇಶ್ವರಸಖಂ ಬಲೀ।
09010048c ಆಹ್ವಯಾಮಾಸ ಕೌಂತೇಯಃ ಸಂಕ್ರುದ್ಧಮಲಕಾಧಿಪಂ।।
ಆ ಗದೆಯ ಆಶ್ರಯದಿಂದಲೇ ಸಂಕ್ರುದ್ದ ಕೌಂತೇಯನು ಕೈಲಾಸಭವನದಲ್ಲಿ ಮಹೇಶ್ವರಸಖ-ಬಲಶಾಲಿ-ಅಲಕಾಧಿಪ ಕುಬೇರನನ್ನು ಯುದ್ಧಕ್ಕೆ ಆಹ್ವಾನಿಸಿದ್ದನು.
09010049a ಯಯಾ ಮಾಯಾವಿನೋ ದೃಪ್ತಾನ್ಸುಬಹೂನ್ಧನದಾಲಯೇ।
09010049c ಜಘಾನ ಗುಹ್ಯಕಾನ್ಕೃದ್ಧೋ ಮಂದಾರಾರ್ಥೇ ಮಹಾಬಲಃ।।
09010049e ನಿವಾರ್ಯಮಾಣೋ ಬಹುಭಿರ್ದ್ರೌಪದ್ಯಾಃ ಪ್ರಿಯಮಾಸ್ಥಿತಃ।।
ದ್ರೌಪದಿಗೆ ಪ್ರಿಯವನ್ನುಂಟುಮಾಡಲು ಮಂದಾರ ಪುಷ್ಪಕ್ಕಾಗಿ ಮಹಾಬಲ ಕ್ರುದ್ಧ ಭೀಮನು ಅನೇಕರು ತಡೆದಿದ್ದರೂ ಗಣನೆಗೆ ತೆಗೆದುಕೊಳ್ಳದೇ ಆ ಗದೆಯನ್ನೇ ಅವಲಂಬಿಸಿ ಕುಬೇರನ ಪಟ್ಟಣದಲ್ಲಿ ಮಾಯಾವೀ ದೃಪ್ತ ಗುಹ್ಯಕರನ್ನು ಸಂಹರಿಸಿದ್ದನು.
09010050a ತಾಂ ವಜ್ರಮಣಿರತ್ನೌಘಾಮಷ್ಟಾಶ್ರಿಂ ವಜ್ರಗೌರವಾಂ।
09010050c ಸಮುದ್ಯಮ್ಯ ಮಹಾಬಾಹುಃ ಶಲ್ಯಮಭ್ಯದ್ರವದ್ರಣೇ।।
ಮಹಾಬಾಹು ಭೀಮನು ವಜ್ರ-ಮಣಿ-ರತ್ನ ಚಿತ್ರಿತ, ವಜ್ರದಂತೆ ಭಾರವಾಗಿದ್ದ ಆ ಗದೆಯನ್ನೆತ್ತಿಕೊಂಡು ರಣದಲ್ಲಿ ಶಲ್ಯನನ್ನು ಆಕ್ರಮಣಿಸಿದನು.
09010051a ಗದಯಾ ಯುದ್ಧಕುಶಲಸ್ತಯಾ ದಾರುಣನಾದಯಾ।
09010051c ಪೋಥಯಾಮಾಸ ಶಲ್ಯಸ್ಯ ಚತುರೋಽಶ್ವಾನ್ಮಹಾಜವಾನ್।।
ದಾರುಣ ಶಬ್ಧಮಾಡುತ್ತಿದ್ದ ಆ ಗದೆಯಿಂದ ಯುದ್ಧಕುಶಲ ಭೀಮಸೇನನು ಶಲ್ಯನ ನಾಲ್ಕೂ ಮಹಾವೇಗಯುಕ್ತ ಕುದುರೆಗಳನ್ನು ಅಪ್ಪಳಿಸಿ ಧ್ವಂಸಮಾಡಿದನು.
09010052a ತತಃ ಶಲ್ಯೋ ರಣೇ ಕ್ರುದ್ಧಃ ಪೀನೇ ವಕ್ಷಸಿ ತೋಮರಂ।
09010052c ನಿಚಖಾನ ನದನ್ವೀರೋ ವರ್ಮ ಭಿತ್ತ್ವಾ ಚ ಸೋಽಭ್ಯಗಾತ್।।
ಆಗ ರಣದಲ್ಲಿ ಕ್ರುದ್ಧನಾದ ವೀರ ಶಲ್ಯನು ಗರ್ಜಿಸುತ್ತಾ ಭೀಮಸೇನನ ವಿಶಾಲ ವಕ್ಷಃಸ್ಥಳಕ್ಕೆ ತೋಮರವನ್ನು ಎಸೆಯಲು ಅದು ಅವನ ಕವಚವನ್ನು ಭೇದಿಸಿ ನೆಟ್ಟಿಕೊಂಡಿತು.
09010053a ವೃಕೋದರಸ್ತ್ವಸಂಭ್ರಾತಸ್ತಮೇವೋದ್ಧೃತ್ಯ ತೋಮರಂ।
09010053c ಯಂತಾರಂ ಮದ್ರರಾಜಸ್ಯ ನಿರ್ಬಿಭೇದ ತತೋ ಹೃದಿ।।
ಅಸಂಭ್ರಾಂತ ವೃಕೋದರನು ಆ ತೋಮರವನ್ನು ಕಿತ್ತೆತ್ತಿ ಅದರಿಂದಲೇ ಮದ್ರರಾಜನ ಸಾರಥಿಯ ಹೃದಯವನ್ನು ಭೇದಿಸಿದನು.
09010054a ಸ ಭಿನ್ನವರ್ಮಾ ರುಧಿರಂ ವಮನ್ವಿತ್ರಸ್ತಮಾನಸಃ।
09010054c ಪಪಾತಾಭಿಮುಖೋ ದೀನೋ ಮದ್ರರಾಜಸ್ತ್ವಪಾಕ್ರಮತ್।।
ಭಿನ್ನ ಕವಚನಾದ ಅವನು ರಕ್ತವನ್ನು ಕಾರುತ್ತಾ ಭಯಗೊಂಡು ನಡುಗುತ್ತಾ ದೀನನಾಗಿ ಶಲ್ಯನಿಗೆ ಅಭಿಮುಖನಾಗಿ ಬಳಿಯಲ್ಲಿಯೇ ಬಿದ್ದನು.
09010055a ಕೃತಪ್ರತಿಕೃತಂ ದೃಷ್ಟ್ವಾ ಶಲ್ಯೋ ವಿಸ್ಮಿತಮಾನಸಃ।
09010055c ಗದಾಮಾಶ್ರಿತ್ಯ ಧೀರಾತ್ಮಾ ಪ್ರತ್ಯಮಿತ್ರಮವೈಕ್ಷತ।।
ಪ್ರತೀಕಾರಮಾಡಿದುದನ್ನು ನೋಡಿ ವಿಸ್ಮಿತಮಾನಸನಾದ ಧೀರಾತ್ಮಾ ಶಲ್ಯನು ಗದೆಯನ್ನು ಹಿಡಿದು ಶತ್ರುವನ್ನು ದುರುಗುಟ್ಟಿ ನೋಡಿದನು.
09010056a ತತಃ ಸುಮನಸಃ ಪಾರ್ಥಾ ಭೀಮಸೇನಮಪೂಜಯನ್।
09010056c ತದ್ದೃಷ್ಟ್ವಾ ಕರ್ಮ ಸಂಗ್ರಾಮೇ ಘೋರಮಕ್ಲಿಷ್ಟಕರ್ಮಣಃ।।
ಸಂಗ್ರಾಮದಲ್ಲಿ ಅನಾಯಾಸವಾಗಿ ಘೋರಕರ್ಮಗಳನ್ನೆಸಗುವ ಭೀಮಸೇನನ ಆ ಕೃತ್ಯವನ್ನು ನೋಡಿ ಸುಮನಸ್ಕ ಪಾರ್ಥರು ಭೀಮಸೇನನನ್ನು ಗೌರವಿಸಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಭೀಮಸೇನಶಲ್ಯಯುದ್ಧೇ ದಶಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಭೀಮಸೇನಶಲ್ಯಯುದ್ಧ ಎನ್ನುವ ಹತ್ತನೇ ಅಧ್ಯಾಯವು.