009 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಶಲ್ಯವಧ ಪರ್ವ

ಅಧ್ಯಾಯ 9

ಸಾರ

ಶಲ್ಯನು ಯುಧಿಷ್ಠಿರನನ್ನು ಆಕ್ರಮಣಿಸಿದುದು (1-8). ನಕುಲನಿಂದ ಕರ್ಣಪುತ್ರ ಚಿತ್ರಸೇನನ ವಧೆ (9-19). ನಕುಲನಿಂದ ಕರ್ಣಪುತ್ರ ಸತ್ಯಸೇನನ ವಧೆ (20-39). ನಕುಲನಿಂದ ಕರ್ಣಪುತ್ರ ಸುಷೇಣನ ವಧೆ (40-49). ಸಂಕುಲಯುದ್ಧ (50-65).

09009001 ಸಂಜಯ ಉವಾಚ 09009001a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಮದ್ರರಾಜಃ ಪ್ರತಾಪವಾನ್।
09009001c ಉವಾಚ ಸಾರಥಿಂ ತೂರ್ಣಂ ಚೋದಯಾಶ್ವಾನ್ಮಹಾಜವಾನ್।।

ಸಂಜಯನು ಹೇಳಿದನು: “ಆ ಸೇನೆಯು ಭಗ್ನವಾಗುತ್ತಿರುವುದನ್ನು ಕಂಡ ಪ್ರತಾಪವಾನ್ ಮದ್ರರಾಜನು ಮಹಾವೇಗವುಳ್ಳ ಕುದುರೆಗಳನ್ನು ಶೀಘ್ರವಾಗಿ ನಡೆಸುವಂತೆ ಸಾರಥಿಗೆ ಹೇಳಿದನು.

09009002a ಏಷ ತಿಷ್ಠತಿ ವೈ ರಾಜಾ ಪಾಂಡುಪುತ್ರೋ ಯುಧಿಷ್ಠಿರಃ।
09009002c ಚತ್ರೇಣ ಧ್ರಿಯಮಾಣೇನ ಪಾಂಡುರೇಣ ವಿರಾಜತಾ।।

“ಇಗೋ ರಾಜಾ ಪಾಂಡುಪುತ್ರ ಯುಧಿಷ್ಠಿರನು ಹೊಳೆಯುತ್ತಿರುವ ಬಿಳಿಯ ಚತ್ರದಡಿಯಲ್ಲಿ ವಿರಾಜಿಸುತ್ತಿದ್ದಾನೆ!

09009003a ಅತ್ರ ಮಾಂ ಪ್ರಾಪಯ ಕ್ಷಿಪ್ರಂ ಪಶ್ಯ ಮೇ ಸಾರಥೇ ಬಲಂ।
09009003c ನ ಸಮರ್ಥಾ ಹಿ ಮೇ ಪಾರ್ಥಾಃ ಸ್ಥಾತುಮದ್ಯ ಪುರೋ ಯುಧಿ।।

ಸಾರಥೇ! ಅಲ್ಲಿಗೆ ನನ್ನನ್ನು ಬೇಗನೆ ತಲುಪಿಸಿ ನನ್ನ ಬಲವನ್ನು ನೋಡು. ಇಂದಿನ ಯುದ್ಧದಲ್ಲಿ ನನ್ನನ್ನು ಎದುರಿಸಿಸಲು ಪಾರ್ಥರು ಸಮರ್ಥರಿಲ್ಲ!”

09009004a ಏವಮುಕ್ತಸ್ತತಃ ಪ್ರಾಯಾನ್ಮದ್ರರಾಜಸ್ಯ ಸಾರಥಿಃ।
09009004c ಯತ್ರ ರಾಜಾ ಸತ್ಯಸಂಧೋ ಧರ್ಮರಾಜೋ ಯುಧಿಷ್ಠಿರಃ।।

ಹೀಗೆ ಹೇಳಲು ಮದ್ರರಾಜನ ಸಾರಥಿಯು ಸತ್ಯಸಂಧ ರಾಜಾ ಧರ್ಮರಾಜಾ ಯುಧಿಷ್ಠಿರನಿದ್ದಲ್ಲಿಗೆ ಅವನನ್ನು ಕೊಂಡೊಯ್ದನು.

09009005a ಆಪತಂತಂ ಚ ಸಹಸಾ ಪಾಂಡವಾನಾಂ ಮಹದ್ಬಲಂ।
09009005c ದಧಾರೈಕೋ ರಣೇ ಶಲ್ಯೋ ವೇಲೇವೋದ್ಧೃತಮರ್ಣವಂ।।

ಒಮ್ಮೆಲೇ ಆಕ್ರಮಣಿಸುತ್ತಿದ್ದ ಪಾಂಡವರ ಮಹಾ ಬಲವನ್ನು ರಣದಲ್ಲಿ ಶಲ್ಯನು ಓರ್ವನೇ ಮೇಲುಕ್ಕಿ ಬರುತ್ತಿರುವ ಸಾಗರವನ್ನು ದಡವು ಹೇಗೋ ಹಾಗೆ ತಡೆದನು.

09009006a ಪಾಂಡವಾನಾಂ ಬಲೌಘಸ್ತು ಶಲ್ಯಮಾಸಾದ್ಯ ಮಾರಿಷ।
09009006c ವ್ಯತಿಷ್ಠತ ತದಾ ಯುದ್ಧೇ ಸಿಂಧೋರ್ವೇಗ ಇವಾಚಲಂ।।

ಮಾರಿಷ! ಪಾಂಡವರ ಸೇನೆಯಾದರೋ ಯುದ್ಧದಲ್ಲಿ ಶಲ್ಯನನ್ನು ಸಮೀಪಿಸಿ ವೇಗವಾಗಿ ಹರಿಯುತ್ತಿದ್ದ ನದಿಯು ಪರ್ವತವನ್ನು ಸಮೀಪಿಸಿ ನಿಲ್ಲುವಂತೆ ನಿಂತುಬಿಟ್ಟಿತು.

09009007a ಮದ್ರರಾಜಂ ತು ಸಮರೇ ದೃಷ್ಟ್ವಾ ಯುದ್ಧಾಯ ವಿಷ್ಠಿತಂ।
09009007c ಕುರವಃ ಸಂನ್ಯವರ್ತಂತ ಮೃತ್ಯುಂ ಕೃತ್ವಾ ನಿವರ್ತನಂ।।

ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಕುರುಗಳು ಸಮರದಲ್ಲಿ ಯುದ್ಧಕ್ಕೆಂದು ನಿಂತಿದ್ದ ಮದ್ರರಾಜನನ್ನು ಸುತ್ತುವರೆದರು.

09009008a ತೇಷು ರಾಜನ್ನಿವೃತ್ತೇಷು ವ್ಯೂಢಾನೀಕೇಷು ಭಾಗಶಃ।
09009008c ಪ್ರಾವರ್ತತ ಮಹಾರೌದ್ರಃ ಸಂಗ್ರಾಮಃ ಶೋಣಿತೋದಕಃ।।
09009008e ಸಮಾರ್ಚಚ್ಚಿತ್ರಸೇನೇನ ನಕುಲೋ ಯುದ್ಧದುರ್ಮದಃ।।

ರಾಜನ್! ಪ್ರತ್ಯೇಕ ವ್ಯೂಹಗಳನ್ನು ರಚಿಸಿಕೊಂಡು ಸೇನೆಗಳು ಹಿಂದಿರುಗಲು ಆ ಸೇನೆಗಳ ನಡುವೆ ರಕ್ತವೇ ನೀರಾಗಿ ಚೆಲ್ಲಿದ ಮಹಾರೌದ್ರ ಸಂಗ್ರಾಮವು ನಡೆಯಿತು. ಆಗ ಚಿತ್ರಸೇನ25ನು ಯುದ್ಧದುರ್ಮದ ನಕುಲನನ್ನು ಪ್ರಹರಿಸಿದನು.

09009009a ತೌ ಪರಸ್ಪರಮಾಸಾದ್ಯ ಚಿತ್ರಕಾರ್ಮುಕಧಾರಿಣೌ।
09009009c ಮೇಘಾವಿವ ಯಥೋದ್ವೃತ್ತೌ ದಕ್ಷಿಣೋತ್ತರವರ್ಷಿಣೌ।।

ದಕ್ಷಿಣೋತ್ತರ ದಿಕ್ಕುಗಳಿಂದ ಮೇಲ್ಮುಖವಾಗಿ ಬಂದು ಆಕಾಶ ಮಧ್ಯದಲ್ಲಿ ಸಂಘರ್ಷಿಸಿ ಮಳೆಗರೆಯುವ ಎರಡು ಮೋಡಗಳಂತೆ ಚಿತ್ರಿತ ಧನುಸ್ಸುಗಳನ್ನು ಧರಿಸಿದ್ದ ಅವರಿಬ್ಬರೂ ಪರಸ್ಪರರನ್ನು ಎದುರಿಸಿದರು.

09009010a ಶರತೋಯೈಃ ಸಿಷಿಚತುಸ್ತೌ ಪರಸ್ಪರಮಾಹವೇ।
09009010c ನಾಂತರಂ ತತ್ರ ಪಶ್ಯಾಮಿ ಪಾಂಡವಸ್ಯೇತರಸ್ಯ ವಾ।।

ಯುದ್ಧದಲ್ಲಿ ಪರಸ್ಪರರ ಮೇಲೆ ಶರಗಳ ಮಳೆಗರೆಯುತ್ತಿದ್ದ ಪಾಂಡವ ಅಥವಾ ಚಿತ್ರಸೇನರ ನಡುವೆ ಅಂತರವನ್ನೇ ನಾನು ಕಾಣಲಿಲ್ಲ.

09009011a ಉಭೌ ಕೃತಾಸ್ತ್ರೌ ಬಲಿನೌ ರಥಚರ್ಯಾವಿಶಾರದೌ।
09009011c ಪರಸ್ಪರವಧೇ ಯತ್ತೌ ಚಿದ್ರಾನ್ವೇಷಣತತ್ಪರೌ।।

ಯುದ್ಧದಲ್ಲಿ ಇಬ್ಬರೂ ಕೃತಾಸ್ತ್ರರಾಗಿದ್ದರು. ಇಬ್ಬರೂ ಬಲಶಾಲಿಗಳಾಗಿದ್ದರು. ರಥವನ್ನು ನಡೆಸುವುದರಲ್ಲಿ ವಿಶಾರದರಾಗಿದ್ದರು. ಇಬ್ಬರೂ ಪರಸ್ಪರರ ವಧೆಗೆ ಪ್ರಯತ್ನಶೀಲರಾಗಿದ್ದರು ಮತ್ತು ಪರಸ್ಪರರಲ್ಲಿ ನ್ಯೂನತೆಗಳನ್ನು ಹುಡುಕುತ್ತಿದ್ದರು.

09009012a ಚಿತ್ರಸೇನಸ್ತು ಭಲ್ಲೇನ ಪೀತೇನ ನಿಶಿತೇನ ಚ।
09009012c ನಕುಲಸ್ಯ ಮಹಾರಾಜ ಮುಷ್ಟಿದೇಶೇಽಚ್ಛಿನದ್ಧನುಃ।।

ಮಹಾರಾಜ! ಚಿತ್ರಸೇನನಾದರೋ ಹಳದೀ ಬಣ್ಣದ ನಿಶಿತ ಭಲ್ಲದಿಂದ ನಕುಲನ ಧನುಸ್ಸನ್ನು ಮುಷ್ಟಿದೇಶದಲ್ಲಿ ತುಂಡರಿಸಿದನು.

09009013a ಅಥೈನಂ ಚಿನ್ನಧನ್ವಾನಂ ರುಕ್ಮಪುಂಖೈಃ ಶಿಲಾಶಿತೈಃ।
09009013c ತ್ರಿಭಿಃ ಶರೈರಸಂಭ್ರಾಂತೋ ಲಲಾಟೇ ವೈ ಸಮರ್ಪಯತ್।।

ಪುನಃ ಕೂಡಲೇ ಅವನು ಅಸಂಭ್ರಾಂತನಾಗಿ ಧನುಸ್ಸುತುಂಡಾಗಿದ್ದ ನಕುಲನ ಹಣೆಗೆ ಮೂರು ರುಕ್ಮಪುಂಖಗಳ ಶಿಲಾಶಿತ ಬಾಣಗಳಿಂದ ಹೊಡೆದನು.

09009014a ಹಯಾಂಶ್ಚಾಸ್ಯ ಶರೈಸ್ತೀಕ್ಷ್ಣೈಃ ಪ್ರೇಷಯಾಮಾಸ ಮೃತ್ಯವೇ।
09009014c ತಥಾ ಧ್ವಜಂ ಸಾರಥಿಂ ಚ ತ್ರಿಭಿಸ್ತ್ರಿಬಿರಪಾತಯತ್।।

ತೀಕ್ಷ್ಣ ಶರಗಳಿಂದ ಚಿತ್ರಸೇನನು ನಕುಲನ ಕುದುರೆಗಳನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ಹಾಗೆಯೇ ಧ್ವಜ ಮತ್ತು ಸಾರಥಿಗಳನ್ನು ಮೂರು ಮೂರು ಬಾಣಗಳಿಂದ ಹೊಡೆದು ಕೆಳಗುರುಳಿಸಿದನು.

09009015a ಸ ಶತ್ರುಭುಜನಿರ್ಮುಕ್ತೈರ್ಲಲಾಟಸ್ಥೈಸ್ತ್ರಿಭಿಃ ಶರೈಃ।
09009015c ನಕುಲಃ ಶುಶುಭೇ ರಾಜಂಸ್ತ್ರಿಶೃಂಗ ಇವ ಪರ್ವತಃ।।

ರಾಜನ್! ಶತ್ರುಭುಜದಿಂದ ಪ್ರಯೋಗಿಸಲ್ಪಟ್ಟ ಆ ಮೂರು ಶರಗಳು ಹಣೆಗೆ ತಾಗಲು ನಕುಲನು ಮೂರು ಶೃಂಗಗಳುಳ್ಳ ಪರ್ವತದಂತೆ ಸುಶೋಭಿಸಿದನು.

09009016a ಸ ಚಿನ್ನಧನ್ವಾ ವಿರಥಃ ಖಡ್ಗಮಾದಾಯ ಚರ್ಮ ಚ।
09009016c ರಥಾದವಾತರದ್ವೀರಃ ಶೈಲಾಗ್ರಾದಿವ ಕೇಸರೀ।।

ಧನುಸ್ಸು ತುಂಡಾಗಿ ವಿರಥನಾಗಿದ್ದ ಆ ವೀರನು ಖಡ್ಗ-ಗುರಾಣಿಗಳನ್ನು ಹಿಡಿದು ಬೆಟ್ಟದಿಂದ ಧುಮುಕುವ ಕೇಸರಿಯಂತೆ ರಥದ ಮೇಲಿಂದ ಕೆಳಕ್ಕೆ ಹಾರಿದನು.

09009017a ಪದ್ಭ್ಯಾಮಾಪತತಸ್ತಸ್ಯ ಶರವೃಷ್ಟಿಮವಾಸೃಜತ್।
09009017c ನಕುಲೋಽಪ್ಯಗ್ರಸತ್ತಾಂ ವೈ ಚರ್ಮಣಾ ಲಘುವಿಕ್ರಮಃ।।

ಪದಾತಿಯಾಗಿಯೇ ತನ್ನನ್ನು ಆಕ್ರಮಿಸಿ ಬರುತ್ತಿದ್ದ ನಕುಲನ ಮೇಲೆ ಚಿತ್ರಸೇನನು ಶರಗಳ ಮಳೆಯನ್ನು ಸುರಿಸಿದನು. ಆದರೆ ಲಘುವಿಕ್ರಮಿ ನಕುಲನು ಅವುಗಳನ್ನು ತನ್ನ ಗುರಾಣಿಯಿಂದಲೇ ತಡೆದನು.

09009018a ಚಿತ್ರಸೇನರಥಂ ಪ್ರಾಪ್ಯ ಚಿತ್ರಯೋಧೀ ಜಿತಶ್ರಮಃ।
09009018c ಆರುರೋಹ ಮಹಾಬಾಹುಃ ಸರ್ವಸೈನ್ಯಸ್ಯ ಪಶ್ಯತಃ।।

ಆಗ ಚಿತ್ರಯೋಧೀ ಜಿತಶ್ರಮಿ ಮಹಾಬಾಹು ನಕುಲನು ಸರ್ವ ಸೇನೆಗಳು ನೋಡುತ್ತಿದ್ದಂತೆ ಚಿತ್ರಸೇನನ ರಥದ ಬಳಿಸಾರಿ ಅದನ್ನು ಏರಿದನು.

09009019a ಸಕುಂಡಲಂ ಸಮುಕುಟಂ ಸುನಸಂ ಸ್ವಾಯತೇಕ್ಷಣಂ।
09009019c ಚಿತ್ರಸೇನಶಿರಃ ಕಾಯಾದಪಾಹರತ ಪಾಂಡವಃ।।
09009019e ಸ ಪಪಾತ ರಥೋಪಸ್ಥಾದ್ದಿವಾಕರಸಮಪ್ರಭಃ।।

ಪಾಂಡವ ನಕುಲನು ಕುಂಡಲ, ಮುಕುಟ, ಸುಂದರ ಮೂಗು ಮತ್ತು ವಿಶಾಲ ಕಣ್ಣುಗಳಿದ್ದ ಚಿತ್ರಸೇನನ ಶಿರವನ್ನು ಕಾಯದಿಂದ ಅಪಹರಿಸಿದನು. ದಿವಾಕರಪ್ರಭೆಯ ಚಿತ್ರಸೇನನು ರಥಾಸನದ ಕೆಳಕ್ಕೆ ಬಿದ್ದನು.

09009020a ಚಿತ್ರಸೇನಂ ವಿಶಸ್ತಂ ತು ದೃಷ್ಟ್ವಾ ತತ್ರ ಮಹಾರಥಾಃ।
09009020c ಸಾಧುವಾದಸ್ವನಾಂಶ್ಚಕ್ರುಃ ಸಿಂಹನಾದಾಂಶ್ಚ ಪುಷ್ಕಲಾನ್।।

ಚಿತ್ರಸೇನನು ಹತನಾದುದನ್ನು ನೋಡಿ ಮಹಾರಥ ಪಾಂಡವರು “ಸಾಧು! ಸಾಧು!” ಎಂದು ಕೂಗಿಕೊಂಡರು ಮತ್ತು ಪುಷ್ಕಲ ಸಿಂಹನಾದಗೈದರು.

09009021a ವಿಶಸ್ತಂ ಭ್ರಾತರಂ ದೃಷ್ಟ್ವಾ ಕರ್ಣಪುತ್ರೌ ಮಹಾರಥೌ।
09009021c ಸುಷೇಣಃ ಸತ್ಯಸೇನಶ್ಚ ಮುಂಚಂತೌ ನಿಶಿತಾನ್ ಶರಾನ್।।
09009022a ತತೋಽಭ್ಯಧಾವತಾಂ ತೂರ್ಣಂ ಪಾಂಡವಂ ರಥಿನಾಂ ವರಂ।
09009022c ಜಿಘಾಂಸಂತೌ ಯಥಾ ನಾಗಂ ವ್ಯಾಘ್ರೌ ರಾಜನ್ಮಹಾವನೇ।।

ರಾಜನ್! ಸಹೋದರನು ಹತನಾದುದನ್ನು ನೋಡಿ ಕರ್ಣನ ಇನ್ನಿಬ್ಬರು ಮಹಾರಥ ಪುತ್ರರು – ಸುಷೇಣ ಮತ್ತು ಸತ್ಯಸೇನ – ನಿಶಿತ ಶರಗಳನ್ನು ಎರಚುತ್ತಾ ಮಹಾವನದಲ್ಲಿ ಆನೆಯನ್ನು ಕೊಲ್ಲಲು ಬರುವ ವ್ಯಾಘ್ರಗಳಂತೆ ಬೇಗನೇ ರಥಿಗಳಲ್ಲಿ ಶ್ರೇಷ್ಠ ಪಾಂಡವ ನಕುಲನನ್ನು ಆಕ್ರಮಣಿಸಿದರು.

09009023a ತಾವಭ್ಯಧಾವತಾಂ ತೀಕ್ಷ್ಣೌ ದ್ವಾವಪ್ಯೇನಂ ಮಹಾರಥಂ।
09009023c ಶರೌಘಾನ್ಸಮ್ಯಗಸ್ಯಂತೌ ಜೀಮೂತೌ ಸಲಿಲಂ ಯಥಾ।।

ಆ ಇಬ್ಬರು ತೀಕ್ಷ್ಣರೂ ಮಹಾರಥ ನಕುಲನನ್ನು ಮೇಘಗಳು ಮಳೆಗರೆಯುವಂತೆ ಬಾಣಗಳನ್ನು ಸುರಿಸುತ್ತಾ ಆಕ್ರಮಣಿಸಿದರು.

09009024a ಸ ಶರೈಃ ಸರ್ವತೋ ವಿದ್ಧಃ ಪ್ರಹೃಷ್ಟ ಇವ ಪಾಂಡವಃ।
09009024c ಅನ್ಯತ್ಕಾರ್ಮುಕಮಾದಾಯ ರಥಮಾರುಹ್ಯ ವೀರ್ಯವಾನ್।।
09009024e ಅತಿಷ್ಠತ ರಣೇ ವೀರಃ ಕ್ರುದ್ಧರೂಪ ಇವಾಂತಕಃ।।

ಶರಗಳಿಂದ ಎಲ್ಲಕಡೆ ಪ್ರಹರಿಸಲ್ಪಟ್ಟರೂ ಪಾಂಡವ ನಕುಲನು ಪ್ರಹೃಷ್ಟನಾಗಿಯೇ ಇದ್ದನು. ಆ ವೀರ್ಯವಾನ್ ವೀರನು ಇನ್ನೊಂದು ಧನುಸ್ಸನ್ನು ಹಿಡಿದು ರಥವನ್ನೇರಿ ರಣದಲ್ಲಿ ಕ್ರುದ್ಧರೂಪೀ ಅಂತಕನಂತೆ ನಿಂತನು.

09009025a ತಸ್ಯ ತೌ ಭ್ರಾತರೌ ರಾಜನ್ ಶರೈಃ ಸಂನತಪರ್ವಭಿಃ।
09009025c ರಥಂ ವಿಶಕಲೀಕರ್ತುಂ ಸಮಾರಬ್ಧೌ ವಿಶಾಂ ಪತೇ।।

ವಿಶಾಂಪತೇ! ಆ ಇಬ್ಬರು ಸಹೋದರರು ಸನ್ನತಪರ್ವ ಶರಗಳಿಂದ ಅವನ ರಥವನ್ನೇ ಚೂರು ಚೂರು ಮಾಡಲು ಪ್ರಾರಂಭಿಸಿದರು.

09009026a ತತಃ ಪ್ರಹಸ್ಯ ನಕುಲಶ್ಚತುರ್ಭಿಶ್ಚತುರೋ ರಣೇ।
09009026c ಜಘಾನ ನಿಶಿತೈಸ್ತೀಕ್ಷ್ಣೈಃ ಸತ್ಯಸೇನಸ್ಯ ವಾಜಿನಃ।।

ಆಗ ನಕುಲನು ರಣದಲ್ಲಿ ನಗುತ್ತಾ ನಿಶಿತ ತೀಕ್ಷ್ಣ ನಾಲ್ಕು ಶರಗಳಿಂದ ಸತ್ಯಸೇನನ ನಾಲ್ಕೂ ಕುದುರೆಗಳನ್ನು ಸಂಹರಿಸಿದನು.

09009027a ತತಃ ಸಂಧಾಯ ನಾರಾಚಂ ರುಕ್ಮಪುಂಖಂ ಶಿಲಾಶಿತಂ।
09009027c ಧನುಶ್ಚಿಚ್ಚೇದ ರಾಜೇಂದ್ರ ಸತ್ಯಸೇನಸ್ಯ ಪಾಂಡವಃ।।

ರಾಜೇಂದ್ರ! ಅನಂತರ ಪಾಂಡವನು ರುಕ್ಮಪುಂಖ ಶಿಲಾಶಿತ ನಾರಚವನ್ನು ಸಂಧಾನಮಾಡಿ ಸತ್ಯಸೇನನ ಧನುಸ್ಸನ್ನು ತುಂಡರಿಸಿದನು.

09009028a ಅಥಾನ್ಯಂ ರಥಮಾಸ್ಥಾಯ ಧನುರಾದಾಯ ಚಾಪರಂ।
09009028c ಸತ್ಯಸೇನಃ ಸುಷೇಣಶ್ಚ ಪಾಂಡವಂ ಪರ್ಯಧಾವತಾಂ।।

ಕೂಡಲೇ ಅನ್ಯ ರಥವನ್ನೇರಿ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸತ್ಯಸೇನ-ಸುಷೇಣರು ಪಾಂಡವನನ್ನು ಪುನಃ ಆಕ್ರಮಣಿಸಿದರು.

09009029a ಅವಿಧ್ಯತ್ತಾವಸಂಭ್ರಾಂತೌ ಮಾದ್ರೀಪುತ್ರಃ ಪ್ರತಾಪವಾನ್।
09009029c ದ್ವಾಭ್ಯಾಂ ದ್ವಾಭ್ಯಾಂ ಮಹಾರಾಜ ಶರಾಭ್ಯಾಂ ರಣಮೂರ್ಧನಿ।।

ಮಹಾರಾಜ! ಅದರಿಂದ ಸ್ವಲ್ಪವೂ ಗಾಬರಿಗೊಳ್ಳದೇ ಪ್ರತಾಪವಾನ್ ಮಾದ್ರೀಪುತ್ರನು ಅವರಿಬ್ಬರನ್ನು ರಣಮೂರ್ಧನಿಯಲ್ಲಿ ಎರಡೆರಡು ಬಾಣಗಳಿಂದ ಹೊಡೆದನು.

09009030a ಸುಷೇಣಸ್ತು ತತಃ ಕ್ರುದ್ಧಃ ಪಾಂಡವಸ್ಯ ಮಹದ್ಧನುಃ।
09009030c ಚಿಚ್ಚೇದ ಪ್ರಹಸನ್ಯುದ್ಧೇ ಕ್ಷುರಪ್ರೇಣ ಮಹಾರಥಃ।।

ಆಗ ಮಹಾರಥ ಸುಷೇಣನಾದರೋ ಕ್ರುದ್ಧನಾಗಿ ಕ್ಷುರಪ್ರದಿಂದ ಪಾಂಡವನ ಮಹಾ ಧನುಸ್ಸನ್ನು ತುಂಡರಿಸಿ ನಕ್ಕನು.

09009031a ಅಥಾನ್ಯದ್ಧನುರಾದಾಯ ನಕುಲಃ ಕ್ರೋಧಮೂರ್ಚಿತಃ।
09009031c ಸುಷೇಣಂ ಪಂಚಭಿರ್ವಿದ್ಧ್ವಾ ಧ್ವಜಮೇಕೇನ ಚಿಚ್ಛಿದೇ।।

ಕೂಡಲೇ ಕ್ರೋಧಮೂರ್ಛಿತ ನಕುಲನು ಇನ್ನೊಂದು ಧನುಸ್ಸನ್ನು ಹಿಡಿದು ಸುಷೇಣನನ್ನು ಐದು ಬಾಣಗಳಿಂದ ಹೊಡೆದು ಒಂದರಿಂದ ಧ್ವಜವನ್ನು ಕತ್ತರಿಸಿದನು.

09009032a ಸತ್ಯಸೇನಸ್ಯ ಚ ಧನುರ್ಹಸ್ತಾವಾಪಂ ಚ ಮಾರಿಷ।
09009032c ಚಿಚ್ಚೇದ ತರಸಾ ಯುದ್ಧೇ ತತ ಉಚ್ಚುಕ್ರುಶುರ್ಜನಾಃ।।

ಮಾರಿಷ! ಕೂಡಲೇ ಅವನು ಯುದ್ಧದಲ್ಲಿ ಸತ್ಯಸೇನನ ಧನುಸ್ಸನ್ನೂ ಕೈಚೀಲವನ್ನೂ ಕತ್ತರಿಸಿದನು. ಆಗ ಜನರು ಗಟ್ಟಿಯಾಗಿ ಕೂಗಿಕೊಂಡರು.

09009033a ಅಥಾನ್ಯದ್ಧನುರಾದಾಯ ವೇಗಘ್ನಂ ಭಾರಸಾಧನಂ।
09009033c ಶರೈಃ ಸಂಚಾದಯಾಮಾಸ ಸಮಂತಾತ್ಪಾಂಡುನಂದನಂ।।

ಆಗ ಸತ್ಯಸೇನನು ಇನ್ನೊಂದು ವೇಗವಾದ ಮತ್ತು ಭಾರವನ್ನು ಹೊರಬಲ್ಲ ಧನುಸ್ಸನ್ನು ಎತ್ತಿಕೊಂಡು ಶರಗಳಿಂದ ಪಾಂಡುನಂದನನನ್ನು ಎಲ್ಲ ಕಡೆಗಳಿಂದ ಮುಚ್ಚಿಬಿಟ್ಟನು.

09009034a ಸಂನಿವಾರ್ಯ ತು ತಾನ್ಬಾಣಾನ್ನಕುಲಃ ಪರವೀರಹಾ।
09009034c ಸತ್ಯಸೇನಂ ಸುಷೇಣಂ ಚ ದ್ವಾಭ್ಯಾಂ ದ್ವಾಭ್ಯಾಮವಿಧ್ಯತ।।

ಪರವೀರಹ ನಕುಲನು ಆ ಬಾಣಗಳನ್ನು ತಡೆದು ನಿಲ್ಲಿಸಿ, ಸತ್ಯಸೇನ ಮತ್ತು ಸುಷೇಣರನ್ನು ಎರಡೆರಡು ಬಾಣಗಳಿಂದ ಹೊಡೆದನು.

09009035a ತಾವೇನಂ ಪ್ರತ್ಯವಿಧ್ಯೇತಾಂ ಪೃಥಕ್ಪೃಥಗಜಿಹ್ಮಗೈಃ।
09009035c ಸಾರಥಿಂ ಚಾಸ್ಯ ರಾಜೇಂದ್ರ ಶರೈರ್ವಿವ್ಯಧತುಃ ಶಿತೈಃ।।

ರಾಜೇಂದ್ರ! ಅವರಿಬ್ಬರೂ ಪ್ರತ್ಯೇಕ ಪ್ರತ್ಯೇಕವಾಗಿ ತಿರುಗಿ ಹೊಡೆಯುತ್ತಾ ನಿಶಿತ ಶರಗಳಿಂದ ನಕುಲನ ಸಾರಥಿಯನ್ನು ಪ್ರಹರಿಸಿದರು.

09009036a ಸತ್ಯಸೇನೋ ರಥೇಷಾಂ ತು ನಕುಲಸ್ಯ ಧನುಸ್ತಥಾ।
09009036c ಪೃಥಕ್ ಶರಾಭ್ಯಾಂ ಚಿಚ್ಚೇದ ಕೃತಹಸ್ತಃ ಪ್ರತಾಪವಾನ್।।

ಕೃತಹಸ್ತ ಪ್ರತಾಪವಾನ್ ಸತ್ಯಸೇನನು ಪ್ರತ್ಯೇಕ ಎರಡು ಬಾಣಗಳಿಂದ ನಕುಲನ ರಥದ ಈಷಾದಂಡವನ್ನೂ ಧನುಸ್ಸನ್ನೂ ತುಂಡರಿಸಿದನು.

09009037a ಸ ರಥೇಽತಿರಥಸ್ತಿಷ್ಠನ್ರಥಶಕ್ತಿಂ ಪರಾಮೃಶತ್।
09009037c ಸ್ವರ್ಣದಂಡಾಮಕುಂಠಾಗ್ರಾಂ ತೈಲಧೌತಾಂ ಸುನಿರ್ಮಲಾಂ।।
09009038a ಲೇಲಿಹಾನಾಮಿವ ವಿಭೋ ನಾಗಕನ್ಯಾಂ ಮಹಾವಿಷಾಂ।
09009038c ಸಮುದ್ಯಮ್ಯ ಚ ಚಿಕ್ಷೇಪ ಸತ್ಯಸೇನಸ್ಯ ಸಂಯುಗೇ।।

ಅದರಿಂದ ಕುಪಿತನಾದ ಅತಿರಥಿ ನಕುಲನು ರಥದಲ್ಲಿಯೇ ನಿಂತು ಸ್ವರ್ಣದಂಡವೂ ನೇರ ಅಗ್ರಭಾಗವೂ ಇದ್ದ, ಎಣ್ಣೆಯಿಂದ ಹದಮಾಡಲ್ಪಟ್ಟಿದ್ದ, ಕಟವಾಯಿಯನ್ನು ನೆಕ್ಕುತ್ತಿರುವ ಮಹಾ ವಿಷಯುಕ್ತ ಸರ್ಪಿಣಿಯಂತಿರುವ ನಿರ್ಮಲ ರಥಶಕ್ತಿಯನ್ನು ಹಿಡಿದೆತ್ತಿ ಸತ್ಯಸೇನನ ಮೇಲೆ ಎಸೆದನು.

09009039a ಸಾ ತಸ್ಯ ಹೃದಯಂ ಸಂಖ್ಯೇ ಬಿಭೇದ ಶತಧಾ ನೃಪ।
09009039c ಸ ಪಪಾತ ರಥಾದ್ಭೂಮೌ ಗತಸತ್ತ್ವೋಽಲ್ಪಚೇತನಃ।।

ನೃಪ! ಅದು ಅವನ ಹೃದಯವನ್ನು ನೂರು ಚೂರುಗಳಾಗಿ ಒಡೆಯಲು ಅವನು ಪ್ರಾಣಗಳನ್ನು ತೊರೆದು ಒಡನೆಯೇ ರಥದಿಂದ ಭೂಮಿಯ ಮೇಲೆ ಬಿದ್ದನು.

09009040a ಭ್ರಾತರಂ ನಿಹತಂ ದೃಷ್ಟ್ವಾ ಸುಷೇಣಃ ಕ್ರೋಧಮೂರ್ಚಿತಃ।
09009040c ಅಭ್ಯವರ್ಷಚ್ಚರೈಸ್ತೂರ್ಣಂ ಪದಾತಿಂ ಪಾಂಡುನಂದನಂ।।

ಸಹೋದರನು ಹತನಾದುದನ್ನು ನೋಡಿ ಕ್ರೋಧಮೂರ್ಛಿತ ಸುಷೇಣನು ಕೂಡಲೇ ಪದಾತಿ ಪಾಂಡುನಂದನನನ್ನು ಶರಗಳಿಂದ ಮುಚ್ಚಿಬಿಟ್ಟನು.

09009041a ನಕುಲಂ ವಿರಥಂ ದೃಷ್ಟ್ವಾ ದ್ರೌಪದೇಯೋ ಮಹಾಬಲಃ।
09009041c ಸುತಸೋಮೋಽಭಿದುದ್ರಾವ ಪರೀಪ್ಸನ್ಪಿತರಂ ರಣೇ।।

ನಕುಲನು ವಿರಥನಾದುದನ್ನು ನೋಡಿ ಮಹಾಬಲ ದ್ರೌಪದೇಯ ಸುತಸೋಮನು ರಣದಲ್ಲಿ ತಂದೆಯನ್ನು ರಕ್ಷಿಸುತ್ತಾ ಅಲ್ಲಿಗೆ ಧಾವಿಸಿಬಂದನು.

09009042a ತತೋಽಧಿರುಹ್ಯ ನಕುಲಃ ಸುತಸೋಮಸ್ಯ ತಂ ರಥಂ।
09009042c ಶುಶುಭೇ ಭರತಶ್ರೇಷ್ಠೋ ಗಿರಿಸ್ಥ ಇವ ಕೇಸರೀ।।
09009042e ಸೋಽನ್ಯತ್ಕಾರ್ಮುಕಮಾದಾಯ ಸುಷೇಣಂ ಸಮಯೋಧಯತ್।।

ಅನಂತರ ಭರತಶೇಷ್ಠ ನಕುಲನು ಸುತಸೋಮನ ಆ ರಥವನ್ನೇರಿ ಗಿರಿಯನ್ನೇರಿದ ಕೇಸರಿಯಂತೆ ಸುಶೋಭಿಸಿದನು. ಅವನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಸುಷೇಣನೊಡನೆ ಯುದ್ಧಮಾಡಿದನು.

09009043a ತಾವುಭೌ ಶರವರ್ಷಾಭ್ಯಾಂ ಸಮಾಸಾದ್ಯ ಪರಸ್ಪರಂ।
09009043c ಪರಸ್ಪರವಧೇ ಯತ್ನಂ ಚಕ್ರತುಃ ಸುಮಹಾರಥೌ।।

ಅವರಿಬ್ಬರು ಮಹಾರಥರೂ ಶರವರ್ಷಗಳಿಂದ ಪರಸ್ಪರರನ್ನು ಎದುರಿಸುತ್ತಾ ಪರಸ್ಪರರ ವಧೆಯನ್ನು ಪ್ರಯತ್ನಿಸುತ್ತಿದ್ದರು.

09009044a ಸುಷೇಣಸ್ತು ತತಃ ಕ್ರುದ್ಧಃ ಪಾಂಡವಂ ವಿಶಿಖೈಸ್ತ್ರಿಭಿಃ।
09009044c ಸುತಸೋಮಂ ಚ ವಿಂಶತ್ಯಾ ಬಾಹ್ವೋರುರಸಿ ಚಾರ್ಪಯತ್।।

ಅನಂತರ ಸುಷೇಣನಾದರೋ ಕ್ರುದ್ಧನಾಗಿ ಪಾಂಡವನನ್ನು ಮೂರು ವಿಶಿಖಗಳಿಂದ ಮತ್ತು ಇಪ್ಪತ್ತು ಬಾಣಗಳಿಂದ ಸುತಸೋಮನ ಬಾಹು-ಎದೆಗಳಿಗೆ ಹೊಡೆದನು.

09009045a ತತಃ ಕ್ರುದ್ಧೋ ಮಹಾರಾಜ ನಕುಲಃ ಪರವೀರಹಾ।
09009045c ಶರೈಸ್ತಸ್ಯ ದಿಶಃ ಸರ್ವಾಶ್ಚಾದಯಾಮಾಸ ವೀರ್ಯವಾನ್।।

ಮಹಾರಾಜ! ಆಗ ಪರವೀರಹ ವೀರ್ಯವಾನ್ ನಕುಲನು ಕ್ರುದ್ಧನಾಗಿ ಶರಗಳಿಂದ ಎಲ್ಲ ಕಡೆಗಳಲ್ಲಿ ಅವನನ್ನು ಮುಚ್ಚಿಬಿಟ್ಟನು.

09009046a ತತೋ ಗೃಹೀತ್ವಾ ತೀಕ್ಷ್ಣಾಗ್ರಮರ್ಧಚಂದ್ರಂ ಸುತೇಜನಂ।
09009046c ಸ ವೇಗಯುಕ್ತಂ ಚಿಕ್ಷೇಪ ಕರ್ಣಪುತ್ರಸ್ಯ ಸಂಯುಗೇ।।

ಅನಂತರ ಯುದ್ಧದಲ್ಲಿ ನಕುಲನು ತೀಕ್ಷ್ಣ‌ಅಗ್ರದ ಸುತೇಜನ ಅರ್ಧಚಂದ್ರವನ್ನು ಹಿಡಿದು ಅದನ್ನು ವೇಗಯುಕ್ತವಾಗಿ ಕರ್ಣಪುತ್ರನ ಮೇಲೆ ಎಸೆದನು.

09009047a ತಸ್ಯ ತೇನ ಶಿರಃ ಕಾಯಾಜ್ಜಹಾರ ನೃಪಸತ್ತಮ।
09009047c ಪಶ್ಯತಾಂ ಸರ್ವಸೈನ್ಯಾನಾಂ ತದದ್ಭುತಮಿವಾಭವತ್।।

ನೃಪಸತ್ತಮ! ಅದು ಅವನ ಶಿರವನ್ನು ದೇಹದಿಂದ ಬೇರ್ಪಡಿಸಿತು. ಅದನ್ನು ಸರ್ವಸೇನೆಗಳೂ ನೋಡಿದವು. ಅದೊಂದು ಅದ್ಭುತವಾಗಿತ್ತು.

09009048a ಸ ಹತಃ ಪ್ರಾಪತದ್ರಾಜನ್ನಕುಲೇನ ಮಹಾತ್ಮನಾ।
09009048c ನದೀವೇಗಾದಿವಾರುಗ್ಣಸ್ತೀರಜಃ ಪಾದಪೋ ಮಹಾನ್।।

ರಾಜನ್! ಮಹಾತ್ಮ ನಕುಲನಿಂದ ಹತನಾದ ಅವನು ನದಿಯ ವೇಗಕ್ಕೆ ಸಿಲುಕಿದ ದಡದಲ್ಲಿದ್ದ ಮಹಾ ವೃಕ್ಷದಂತೆ ಕೆಳಕ್ಕುರುಳಿದನು.

09009049a ಕರ್ಣಪುತ್ರವಧಂ ದೃಷ್ಟ್ವಾ ನಕುಲಸ್ಯ ಚ ವಿಕ್ರಮಂ।
09009049c ಪ್ರದುದ್ರಾವ ಭಯಾತ್ಸೇನಾ ತಾವಕೀ ಭರತರ್ಷಭ।।

ಭರತರ್ಷಭ! ಕರ್ಣಪುತ್ರನ ವಧೆಯನ್ನು ಮತ್ತು ನಕುಲನ ವಿಕ್ರಮವನ್ನು ನೋಡಿ ನಿನ್ನ ಸೇನೆಯು ಭಯದಿಂದ ಓಡಿ ಹೋಯಿತು.

09009050a ತಾಂ ತು ಸೇನಾಂ ಮಹಾರಾಜ ಮದ್ರರಾಜಃ ಪ್ರತಾಪವಾನ್।
09009050c ಅಪಾಲಯದ್ರಣೇ ಶೂರಃ ಸೇನಾಪತಿರರಿಂದಮಃ।।

ಮಹಾರಾಜ! ಆಗ ಅರಿಂದಮ ಶೂರ ಸೇನಾಪತಿ ಪ್ರತಾಪವಾನ್ ಮದ್ರರಾಜನು ರಣದಲ್ಲಿ ಆ ಸೇನೆಯನ್ನು ಪಾಲಿಸಿದನು.

09009051a ವಿಭೀಸ್ತಸ್ಥೌ ಮಹಾರಾಜ ವ್ಯವಸ್ಥಾಪ್ಯ ಚ ವಾಹಿನೀಂ।
09009051c ಸಿಂಹನಾದಂ ಭೃಶಂ ಕೃತ್ವಾ ಧನುಃಶಬ್ದಂ ಚ ದಾರುಣಂ।।

ಮಹಾರಾಜ! ಭೀತರಾಗಿದ್ದ ಸೇನೆಯನ್ನು ಪುನಃ ವ್ಯವಸ್ಥೆಗೊಳಿಸಿ ಅವನು ಜೋರಾಗಿ ಸಿಂಹನಾದ ಗೈದು ಧನುಸ್ಸನ್ನು ದಾರುಣವಾಗಿ ಟೇಂಕರಿಸಿದನು.

09009052a ತಾವಕಾಃ ಸಮರೇ ರಾಜನ್ರಕ್ಷಿತಾ ದೃಢಧನ್ವನಾ।
09009052c ಪ್ರತ್ಯುದ್ಯಯುರಾರಾತೀಂಸ್ತೇ ಸಮಂತಾದ್ವಿಗತವ್ಯಥಾಃ।।

ರಾಜನ್! ಧೃಢಧನ್ವಿಯಿಂದ ರಕ್ಷಿತರಾಗಿದ್ದ ನಿಮ್ಮವರು ಸಮರದಲ್ಲಿ ವ್ಯಥೆಯನ್ನು ಕಳೆದುಕೊಂಡು ಒಟ್ಟಾಗಿ ಶತ್ರುಗಳನ್ನು ಎದುರಿಸಿ ಯುದ್ಧಮಾಡತೊಡಗಿದರು.

09009053a ಮದ್ರರಾಜಂ ಮಹೇಷ್ವಾಸಂ ಪರಿವಾರ್ಯ ಸಮಂತತಃ।
09009053c ಸ್ಥಿತಾ ರಾಜನ್ಮಹಾಸೇನಾ ಯೋದ್ಧುಕಾಮಾಃ ಸಮಂತತಃ।।

ರಾಜನ್! ಯುದ್ಧಮಾಡಲು ಬಯಸಿದ ಮಹಾಸೇನೆಯು ಮಹೇಷ್ವಾಸ ಮದ್ರರಾಜನನ್ನು ಸುತ್ತಲಿನಿಂದಲೂ ಆವರಿಸಿ ನಿಂತುಕೊಂಡಿತು.

09009054a ಸಾತ್ಯಕಿರ್ಭೀಮಸೇನಶ್ಚ ಮಾದ್ರೀಪುತ್ರೌ ಚ ಪಾಂಡವೌ।
09009054c ಯುಧಿಷ್ಠಿರಂ ಪುರಸ್ಕೃತ್ಯ ಹ್ರೀನಿಷೇಧಮರಿಂದಮಂ।।

ಸಾತ್ಯಕಿ, ಭೀಮಸೇನ, ಮಾದ್ರೀಪುತ್ರ ಪಾಂಡವರೀರ್ವರು ಲಜ್ಜಾಶೀಲ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಅರಿಂದಮ ಶಲ್ಯನನ್ನು ಎದುರಿಸಿದರು.

09009055a ಪರಿವಾರ್ಯ ರಣೇ ವೀರಾಃ ಸಿಂಹನಾದಂ ಪ್ರಚಕ್ರಿರೇ।
09009055c ಬಾಣಶಬ್ದರವಾಂಶ್ಚೋಗ್ರಾನ್ ಕ್ಷ್ವೇಡಾಂಶ್ಚ ವಿವಿಧಾನ್ದಧುಃ।।

ಯುಧಿಷ್ಠಿರನನ್ನು ರಣದಲ್ಲಿ ಸುತ್ತುವರೆದು ಆ ವೀರರು ಸಿಂಹನಾದಗೈದರು. ಉಗ್ರ ಬಾಣಗಳಿಂದ ಶಬ್ಧಗೈದರು ಮತ್ತು ಶಂಖಗಳನ್ನು ಮೊಳಗಿಸಿದರು.

09009056a ತಥೈವ ತಾವಕಾಃ ಸರ್ವೇ ಮದ್ರಾಧಿಪತಿಮಂಜಸಾ।
09009056c ಪರಿವಾರ್ಯ ಸುಸಂರಬ್ಧಾಃ ಪುನರ್ಯುದ್ಧಮರೋಚಯನ್।।

ಹಾಗೆಯೇ ನಿನ್ನವರೆಲ್ಲರೂ ಮದ್ರಾಧಿಪತಿಯನ್ನು ಸುತ್ತುವರೆದು ನಿಂತು ರೋಷಾಯುಕ್ತರಾಗಿ ಪುನಃ ಯುದ್ಧಮಾಡಲು ಆಸಕ್ತಿತೋರಿಸುತ್ತಿದ್ದರು.

09009057a ತತಃ ಪ್ರವವೃತೇ ಯುದ್ಧಂ ಭೀರೂಣಾಂ ಭಯವರ್ಧನಂ।
09009057c ತಾವಕಾನಾಂ ಪರೇಷಾಂ ಚ ಮೃತ್ಯುಂ ಕೃತ್ವಾ ನಿವರ್ತನಂ।।

ಆಗ ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿಸಿಕೊಂಡಿದ್ದ ನಿನ್ನವರ ಮತ್ತು ಶತ್ರುಗಳ ನಡುವೆ ಹೇಡಿಗಳ ಭಯವನ್ನು ಹೆಚ್ಚಿಸುವ ಯುದ್ಧವು ಪ್ರಾರಂಭವಾಯಿತು.

09009058a ಯಥಾ ದೇವಾಸುರಂ ಯುದ್ಧಂ ಪೂರ್ವಮಾಸೀದ್ವಿಶಾಂ ಪತೇ।
09009058c ಅಭೀತಾನಾಂ ತಥಾ ರಾಜನ್ಯಮರಾಷ್ಟ್ರವಿವರ್ಧನಂ।।

ವಿಶಾಂಪತೇ! ರಾಜನ್! ಹಿಂದೆ ದೇವಾಸುರರ ನಡುವೆ ನಡೆದ ಯುದ್ಧದಂತೆ ಯಮರಾಷ್ಟ್ರವನ್ನು ವಿವರ್ಧಿಸುವ ಆ ಅಭೀತರ ಯುದ್ಧವು ನಡೆಯಿತು.

09009059a ತತಃ ಕಪಿಧ್ವಜೋ ರಾಜನ್ ಹತ್ವಾ ಸಂಶಪ್ತಕಾನ್ರಣೇ।
09009059c ಅಭ್ಯದ್ರವತ ತಾಂ ಸೇನಾಂ ಕೌರವೀಂ ಪಾಂಡುನಂದನಃ।।

ರಾಜನ್! ಆಗ ಪಾಂಡುನಂದನ ಕಪಿಧ್ವಜನು ರಣದಲ್ಲಿ ಸಂಶಪ್ತಕರನ್ನು ಸಂಹರಿಸಿ ನಿನ್ನ ಕೌರವೀ ಸೇನೆಯನ್ನು ಆಕ್ರಮಣಿಸಿದನು.

09009060a ತಥೈವ ಪಾಂಡವಾಃ ಶೇಷಾ ಧೃಷ್ಟದ್ಯುಮ್ನಪುರೋಗಮಾಃ।
09009060c ಅಭ್ಯಧಾವಂತ ತಾಂ ಸೇನಾಂ ವಿಸೃಜಂತಃ ಶಿತಾನ್ ಶರಾನ್।।

ಹಾಗೆಯೇ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಉಳಿದ ಪಾಂಡವರು ನಿಶಿತ ಶರಗಳನ್ನು ಪ್ರಯೋಗಿಸುತ್ತಾ ನಿನ್ನ ಸೇನೆಯನ್ನು ಆಕ್ರಮಣಿಸಿದರು.

09009061a ಪಾಂಡವೈರವಕೀರ್ಣಾನಾಂ ಸಮ್ಮೋಹಃ ಸಮಜಾಯತ।
09009061c ನ ಚ ಜಜ್ಞುರನೀಕಾನಿ ದಿಶೋ ವಾ ಪ್ರದಿಶಸ್ತಥಾ।।

ಪಾಂಡವರು ಎರಚುತ್ತಿದ್ದ ಬಾಣಗಳಿಂದ ನಿನ್ನ ಸೇನೆಯಲ್ಲಿ ಸಮ್ಮೋಹವುಂಟಾಯಿತು. ಸೇನೆಗಳಿಗೆ ದಿಕ್ಕು-ಉಪದಿಕ್ಕುಗಳೇ ತೋಚದಂತಾಯಿತು.

09009062a ಆಪೂರ್ಯಮಾಣಾ ನಿಶಿತೈಃ ಶರೈಃ ಪಾಂಡವಚೋದಿತೈಃ।
09009062c ಹತಪ್ರವೀರಾ ವಿಧ್ವಸ್ತಾ ಕೀರ್ಯಮಾಣಾ ಸಮಂತತಃ।।

ಪಾಂಡವರು ಪ್ರಯೋಗಿಸಿದ ನಿಶಿತ ಶರಗಳಿಂದ ತುಂಬಿಹೋದ ಆ ಸೇನೆಯಲ್ಲಿ ಮುಖ್ಯರು ಹತರಾದರು ಮತ್ತು ಸೇನೆಗಳು ಎಲ್ಲಕಡೆ ಚದುರಿಹೋದವು.

09009062e ಕೌರವ್ಯವಧ್ಯತ ಚಮೂಃ ಪಾಂಡುಪುತ್ರೈರ್ಮಹಾರಥೈಃ।।
09009063a ತಥೈವ ಪಾಂಡವೀ ಸೇನಾ ಶರೈ ರಾಜನ್ಸಮಂತತಃ।
09009063c ರಣೇಽಹನ್ಯತ ಪುತ್ರೈಸ್ತೇ ಶತಶೋಽಥ ಸಹಸ್ರಶಃ।।

ಹೀಗೆ ಮಹಾರಥ ಪಾಂಡುಪುತ್ರರು ಕೌರವ ಸೇನೆಗಳನ್ನು ಧ್ವಂಸಗೊಳಿಸಿದರು. ರಾಜನ್! ಹಾಗೆಯೇ ರಣದಲ್ಲಿ ನಿನ್ನ ಪುತ್ರರೂ ಪಾಂಡವೀ ಸೇನೆಯನ್ನು ಶರಗಳಿಂದ ಎಲ್ಲಕಡೆ ಮುಚ್ಚಿ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದರು.

09009064a ತೇ ಸೇನೇ ಭೃಶಸಂತಪ್ತೇ ವಧ್ಯಮಾನೇ ಪರಸ್ಪರಂ।
09009064c ವ್ಯಾಕುಲೇ ಸಮಪದ್ಯೇತಾಂ ವರ್ಷಾಸು ಸರಿತಾವಿವ।।

ಪರಸ್ಪರರನ್ನು ವಧಿಸುತ್ತಿದ್ದ ಆ ಸೇನೆಗಳು ತುಂಬಾ ಸಂತಾಪಗೊಂಡು ವರ್ಷಾಕಾಲದ ಎರಡು ನದಿಗಳಂತೆ ವ್ಯಾಕುಲಗೊಂಡಿದ್ದವು.

09009065a ಆವಿವೇಶ ತತಸ್ತೀವ್ರಂ ತಾವಕಾನಾಂ ಮಹದ್ಭಯಂ।
09009065c ಪಾಂಡವಾನಾಂ ಚ ರಾಜೇಂದ್ರ ತಥಾಭೂತೇ ಮಹಾಹವೇ।।

ರಾಜೇಂದ್ರ! ಹಾಗೆ ಮಹಾಯುದ್ಧವು ನಡೆಯುತ್ತಿರಲು ನಿನ್ನವರನ್ನು ಮತ್ತು ಪಾಂಡವರನ್ನು ತೀವ್ರ ಮಹಾ ಭಯವು ಆವೇಶಗೊಂಡಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ನವಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಒಂಭತ್ತನೇ ಅಧ್ಯಾಯವು.