ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 8
ಸಾರ
ಸಂಕುಲಯುದ್ಧ (1-46).
09008001 ಸಂಜಯ ಉವಾಚ 09008001a ತತಃ ಪ್ರವವೃತೇ ಯುದ್ಧಂ ಕುರೂಣಾಂ ಭಯವರ್ಧನಂ।
09008001c ಸೃಂಜಯೈಃ ಸಹ ರಾಜೇಂದ್ರ ಘೋರಂ ದೇವಾಸುರೋಪಮಂ।।
ಸಂಜಯನು ಹೇಳಿದನು: “ರಾಜೇಂದ್ರ! ಅನಂತರ ಕುರುಗಳು ಮತ್ತು ಸೃಂಜಯರ ನಡುವೆ ಕುರುಗಳ ಭಯವನ್ನು ಹೆಚ್ಚಿಸುವ, ದೇವಾಸುರರ ಯುದ್ಧಕ್ಕೆ ಸಮನಾದ ಘೋರ ಯುದ್ಧವು ಪ್ರಾರಂಭವಾಯಿತು.
09008002a ನರಾ ರಥಾ ಗಜೌಘಾಶ್ಚ ಸಾದಿನಶ್ಚ ಸಹಸ್ರಶಃ।
09008002c ವಾಜಿನಶ್ಚ ಪರಾಕ್ರಾಂತಾಃ ಸಮಾಜಗ್ಮುಃ ಪರಸ್ಪರಂ।।
ಪದಾತಿ-ರಥ-ಆನೆಗಳ ಗುಂಪುಗಳೂ, ಸಾವಿರಾರು ಕುದುರೆಸವಾರರೂ ತಮ್ಮ ಪರಾಕ್ರಮಗಳನ್ನು ಪ್ರದರ್ಶಿಸುತ್ತಾ ಪರಸ್ಪರರೊಡನೆ ಕಾದಾಡಿದರು.
09008003a ನಾಗಾನಾಂ ಭೀಮರೂಪಾಣಾಂ ದ್ರವತಾಂ ನಿಸ್ವನೋ ಮಹಾನ್।
09008003c ಅಶ್ರೂಯತ ಯಥಾ ಕಾಲೇ ಜಲದಾನಾಂ ನಭಸ್ತಲೇ।।
ಆಗ ನಭಸ್ತಲದಲ್ಲಿ ಮೇಘಗಳ ನಿನಾದದಂತೆ ಘೋರರೂಪೀ ಆನೆಗಳು ಓಡುತ್ತಿರುವ ಮಹಾ ನಿನಾದವು ಕೇಳಿಬಂದಿತು.
09008004a ನಾಗೈರಭ್ಯಾಹತಾಃ ಕೇ ಚಿತ್ಸರಥಾ ರಥಿನೋಽಪತನ್।
09008004c ವ್ಯದ್ರವಂತ ರಣೇ ವೀರಾ ದ್ರಾವ್ಯಮಾಣಾ ಮದೋತ್ಕಟೈಃ।।
ಕೆಲವು ರಥಿಗಳು ಆನೆಗಳ ಆಘಾತದಿಂದ ರಥಗಳೊಂದಿಗೆ ಕೆಳಕ್ಕುರುಳಿದರು. ಮದೋತ್ಕಟ ಆನೆಗಳಿಂದ ದೂಡಲ್ಪಟ್ಟ ಅನೇಕ ವೀರರು ರಣವನ್ನು ಬಿಟ್ಟು ಓಡಿಹೋಗುತ್ತಿದ್ದರು.
09008005a ಹಯೌಘಾನ್ಪಾದರಕ್ಷಾಂಶ್ಚ ರಥಿನಸ್ತತ್ರ ಶಿಕ್ಷಿತಾಃ।
09008005c ಶರೈಃ ಸಂಪ್ರೇಷಯಾಮಾಸುಃ ಪರಲೋಕಾಯ ಭಾರತ।।
ಭಾರತ! ಸುಶಿಕ್ಷಿತ ರಥಿಗಳು ಅಲ್ಲಿ ಶರಗಳಿಂದ ಕುದುರೆಗಳ ಗುಂಪುಗಳನ್ನೂ ಪಾದರಕ್ಷಕರನ್ನೂ ಪರಲೋಕಕ್ಕೆ ಕಳುಹಿಸುತ್ತಿದ್ದರು.
09008006a ಸಾದಿನಃ ಶಿಕ್ಷಿತಾ ರಾಜನ್ಪರಿವಾರ್ಯ ಮಹಾರಥಾನ್।
09008006c ವಿಚರಂತೋ ರಣೇಽಭ್ಯಘ್ನನ್ಪ್ರಾಸಶಕ್ತ್ಯೃಷ್ಟಿಭಿಸ್ತಥಾ।।
ರಾಜನ್! ಸುಶಿಕ್ಷಿತ ಅಶ್ವಾರೋಹಿಗಳು ಮಹಾರಥರನ್ನು ಸುತ್ತುವರೆದು ಪ್ರಾಸ-ಶಕ್ತಿ-ಋಷ್ಟಿಗಳಿಂದ ಅವರನ್ನು ಸಂಹರಿಸುತ್ತಾ ಸಂಚರಿಸುತ್ತಿದ್ದರು.
09008007a ಧನ್ವಿನಃ ಪುರುಷಾಃ ಕೇ ಚಿತ್ಸಂನಿವಾರ್ಯ ಮಹಾರಥಾನ್।
09008007c ಏಕಂ ಬಹವ ಆಸಾದ್ಯ ಪ್ರೇಷಯೇಯುರ್ಯಮಕ್ಷಯಂ।।
ಧನುಸ್ಸುಗಳನ್ನು ಹಿಡಿದಿದ್ದ ಕೆಲವು ಪುರುಷರು ಮಹಾರಥರನ್ನು ತಡೆದು -ಒಬ್ಬರೇ ಅನೇಕರನ್ನು ಎದುರಿಸಿ, ಯಮಕ್ಷಯಕ್ಕೆ ಕಳುಹಿಸುತ್ತಿದ್ದರು.
09008008a ನಾಗಂ ರಥವರಾಂಶ್ಚಾನ್ಯೇ ಪರಿವಾರ್ಯ ಮಹಾರಥಾಃ।
09008008c ಸೋತ್ತರಾಯುಧಿನಂ ಜಘ್ನುರ್ದ್ರವಮಾಣಾ ಮಹಾರವಂ।।
ಅನ್ಯ ರಥಶ್ರೇಷ್ಠರು ಮಹಾರಥರನ್ನು ಸುತ್ತುವರೆದು ಮಹಾರವದೊಂದಿಗೆ ಆಯುಧಗಳನ್ನು ಬಿಟ್ಟು ಓಡಿಹೋಗುತ್ತಿದ್ದವರನ್ನು ಸಂಹರಿಸುತ್ತಿದ್ದರು.
09008009a ತಥಾ ಚ ರಥಿನಂ ಕ್ರುದ್ಧಂ ವಿಕಿರಂತಂ ಶರಾನ್ಬಹೂನ್।
09008009c ನಾಗಾ ಜಘ್ನುರ್ಮಹಾರಾಜ ಪರಿವಾರ್ಯ ಸಮಂತತಃ।।
ಮಹಾರಾಜ! ಹಾಗೆಯೇ ಕ್ರುದ್ಧ ಆನೆಗಳು ಅನೇಕ ಶರಗಳನ್ನು ಚೆಲ್ಲುತ್ತಿದ್ದ ರಥಿಗಳನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಕೊಲ್ಲುತ್ತಿದ್ದವು.
09008010a ನಾಗೋ ನಾಗಮಭಿದ್ರುತ್ಯ ರಥೀ ಚ ರಥಿನಂ ರಣೇ।
09008010c ಶಕ್ತಿತೋಮರನಾರಾಚೈರ್ನಿಜಘ್ನುಸ್ತತ್ರ ತತ್ರ ಹ।।
ರಣದಲ್ಲಿ ಆನೆಗಳು ಆನೆಗಳ ಮೇಲೆ ಎರಗಿದವು. ಅಲ್ಲಲ್ಲಿ ರಥಿಗಳು ರಥಿಗಳನ್ನು ಶಕ್ತಿ-ತೋಮರ-ನಾರಚಗಳಿಂದ ಸಂಹರಿಸುತ್ತಿದ್ದರು.
09008011a ಪಾದಾತಾನವಮೃದ್ನಂತೋ ರಥವಾರಣವಾಜಿನಃ।
09008011c ರಣಮಧ್ಯೇ ವ್ಯದೃಶ್ಯಂತ ಕುರ್ವಂತೋ ಮಹದಾಕುಲಂ।।
ರಥ-ಆನೆ-ಕುದುರೆಗಳು ರಣಮಧ್ಯದಲ್ಲಿ ಪಾದಾತಿಗಳನ್ನು ತುಳಿದು ಮಹಾ ವ್ಯಾಕುಲವನ್ನುಂಟುಮಾಡುತ್ತಿರುವುದು ಕಾಣುತ್ತಿತ್ತು.
09008012a ಹಯಾಶ್ಚ ಪರ್ಯಧಾವಂತ ಚಾಮರೈರುಪಶೋಭಿತಾಃ।
09008012c ಹಂಸಾ ಹಿಮವತಃ ಪ್ರಸ್ಥೇ ಪಿಬಂತ ಇವ ಮೇದಿನೀಂ।।
ಹಿಮವತ್ಪರ್ವತ ಪ್ರಸ್ಥದಲ್ಲಿರುವ ಹಂಸಗಳು ನೀರು ಕುಡಿಯಲು ಭೂಮಿಯ ಕಡೆ ವೇಗದಿಂದ ಹಾರಿಬರುವಂತೆ ಚಾಮರಗಳಿಂದ ಸುಶೋಭಿತ ಕುದುರೆಗಳು ಓಡುತ್ತಿದ್ದವು.
09008013a ತೇಷಾಂ ತು ವಾಜಿನಾಂ ಭೂಮಿಃ ಖುರೈಶ್ಚಿತ್ರಾ ವಿಶಾಂ ಪತೇ।
09008013c ಅಶೋಭತ ಯಥಾ ನಾರೀ ಕರಜಕ್ಷತವಿಕ್ಷತಾ।।
ವಿಶಾಂಪತೇ! ಆ ಕುದುರೆಗಳ ಖುರಗಳಿಂದ ಚಿತ್ರಿತವಾದ ರಣಭೂಮಿಯು ಪ್ರಿಯತಮನ ಉಗುರುಗಳಿಂದ ಗಾಯಗೊಂಡ ನಾರಿಯಂತೆ ಶೋಭಿಸುತ್ತಿತ್ತು.
09008014a ವಾಜಿನಾಂ ಖುರಶಬ್ದೇನ ರಥನೇಮಿಸ್ವನೇನ ಚ।
09008014c ಪತ್ತೀನಾಂ ಚಾಪಿ ಶಬ್ದೇನ ನಾಗಾನಾಂ ಬೃಂಹಿತೇನ ಚ।।
09008015a ವಾದಿತ್ರಾಣಾಂ ಚ ಘೋಷೇಣ ಶಂಖಾನಾಂ ನಿಸ್ವನೇನ ಚ।
09008015c ಅಭವನ್ನಾದಿತಾ ಭೂಮಿರ್ನಿರ್ಘಾತೈರಿವ ಭಾರತ।।
ಭಾರತ! ಕುದುರೆಗಳ ಖುರಶಬ್ಧಗಳಿಂದ, ರಥಚಕ್ರಗಳ ನಿಸ್ವನಗಳಿಂದ, ಪದಾತಿಗಳ ಕೂಗು, ಆನೆಗಳ ಘೀಂಕಾರ, ವಾದ್ಯಗಳ ಘೋಷ ಮತ್ತು ಶಂಖಗಳ ನಿನಾದಗಳು ಸಿಡಿಲುಗಳು ಭೂಮಿಯನ್ನು ಬಡಿಯುತ್ತಿವೆಯೋ ಎಂಬಂತೆ ತೋರುತ್ತಿದ್ದವು.
09008016a ಧನುಷಾಂ ಕೂಜಮಾನಾನಾಂ ನಿಸ್ತ್ರಿಂಶಾನಾಂ ಚ ದೀಪ್ಯತಾಂ।
09008016c ಕವಚಾನಾಂ ಪ್ರಭಾಭಿಶ್ಚ ನ ಪ್ರಾಜ್ಞಾಯತ ಕಿಂ ಚನ।।
ಟೇಂಕರಿಸುತ್ತಿದ್ದ ಧನುಸ್ಸುಗಳಿಂದಲೂ, ಉರಿಯುತ್ತಿದ್ದ ಅಸ್ತ್ರಗಳಿಂದಲೂ ಮತ್ತು ಕವಚಗಳ ಪ್ರಭೆಗಳಿಂದಲೂ ಯಾವುದೊಂದೂ ತಿಳಿಯುತ್ತಿರಲಿಲ್ಲ.
09008017a ಬಹವೋ ಬಾಹವಶ್ಚಿನ್ನಾ ನಾಗರಾಜಕರೋಪಮಾಃ।
09008017c ಉದ್ವೇಷ್ಟಂತೇ ವಿವೇಷ್ಟಂತೇ ವೇಗಂ ಕುರ್ವಂತಿ ದಾರುಣಂ।।
ಆನೆಗಳ ಸೊಂಡಿಲುಗಳಂತಿದ್ದ ಅನೇಕ ಬಾಹುಗಳು ತುಂಡಾಗಿ ವೇಗದಿಂದ ಕುಪ್ಪಳಿಸಿ ದಾರುಣವಾಗಿ ಸುತ್ತುತ್ತಿದ್ದವು.
09008018a ಶಿರಸಾಂ ಚ ಮಹಾರಾಜ ಪತತಾಂ ವಸುಧಾತಲೇ।
09008018c ಚ್ಯುತಾನಾಮಿವ ತಾಲೇಭ್ಯಃ ಫಲಾನಾಂ ಶ್ರೂಯತೇ ಸ್ವನಃ।।
ಮಹಾರಾಜ! ವಸುಧಾತಲದಲ್ಲಿ ಬೀಳುತ್ತಿದ್ದ ಶಿರಗಳು ತಾಳೆಯ ಮರದಿಂದ ಕೆಳಕ್ಕೆ ಬೀಳುತ್ತಿದ್ದ ತಾಲಫಲಗಳಂತೆ ಶಬ್ಧಮಾಡುತ್ತಿದ್ದವು.
09008019a ಶಿರೋಭಿಃ ಪತಿತೈರ್ಭಾತಿ ರುಧಿರಾರ್ದ್ರೈರ್ವಸುಂಧರಾ।
09008019c ತಪನೀಯನಿಭೈಃ ಕಾಲೇ ನಲಿನೈರಿವ ಭಾರತ।।
ಭಾರತ! ಕೆಳಕ್ಕೆ ಬೀಳುತ್ತಿದ್ದ ರಕ್ತ-ಸಿಕ್ತ ಶಿರಗಳು ಸುವರ್ಣಮಯ ಕಮಲಪುಷ್ಪಗಳಂತೆ ತೋರುತ್ತಿದ್ದವು.
09008020a ಉದ್ವೃತ್ತನಯನೈಸ್ತೈಸ್ತು ಗತಸತ್ತ್ವೈಃ ಸುವಿಕ್ಷತೈಃ।
09008020c ವ್ಯಭ್ರಾಜತ ಮಹಾರಾಜ ಪುಂಡರೀಕೈರಿವಾವೃತಾ।।
ಮಹಾರಾಜ! ಕಣ್ಣುಗಳು ಹೊರಬಂದಿದ್ದ ಮತ್ತು ಗಾಯಗೊಂಡು ಪ್ರಾಣಹೋದ ಶಿರಸ್ಸುಗಳಿಂದ ಆವೃತವಾಗಿದ್ದ ರಣರಂಗವು ಕಮಲಪುಷ್ಪಗಳಿಂದ ಅಚ್ಛಾದಿತವಾಗಿದೆಯೋ ಎನ್ನುವಂತೆ ಕಾಣುತ್ತಿತ್ತು.
09008021a ಬಾಹುಭಿಶ್ಚಂದನಾದಿಗ್ಧೈಃ ಸಕೇಯೂರೈರ್ಮಹಾಧನೈಃ।
09008021c ಪತಿತೈರ್ಭಾತಿ ರಾಜೇಂದ್ರ ಮಹೀ ಶಕ್ರಧ್ವಜೈರಿವ।।
ರಾಜೇಂದ್ರ! ಚಂದನ-ಲೇಪಿತ ಮಹಾಧನ-ಅಂಗದ ಕೇಯೂರಗಳಿಂದ ಅಲಂಕೃತ ತೋಳುಗಳು ಸುತ್ತಲೂ ಬಿದ್ದಿರಲು ರಣರಂಗವು ದೊಡ್ಡ ದೊಡ್ಡ ಇಂದ್ರಧ್ವಜಗಳಿಂದ ಆವೃತವಾಗಿರುವಂತೆ ತೋರುತ್ತಿತ್ತು.
09008022a ಊರುಭಿಶ್ಚ ನರೇಂದ್ರಾಣಾಂ ವಿನಿಕೃತ್ತೈರ್ಮಹಾಹವೇ।
09008022c ಹಸ್ತಿಹಸ್ತೋಪಮೈರನ್ಯೈಃ ಸಂವೃತಂ ತದ್ರಣಾಂಗಣಂ।।
ಆ ಮಹಾಹವದಲ್ಲಿ ಆನೆಗಳ ಸೊಂಡಿಲುಗಳಂತಿದ್ದ ನರೇಂದ್ರರ ತೊಡೆಗಳು ಕತ್ತರಿಸಿ ಬಿದ್ದು ರಣಾಂಗಣವನ್ನು ತುಂಬಿದ್ದವು.
09008023a ಕಬಂಧಶತಸಂಕೀರ್ಣಂ ಚತ್ರಚಾಮರಶೋಭಿತಂ।
09008023c ಸೇನಾವನಂ ತಚ್ಚುಶುಭೇ ವನಂ ಪುಷ್ಪಾಚಿತಂ ಯಥಾ।।
ನೂರಾರು ಮುಂಡಗಳ ಸಮಾಕುಲವಾಗಿದ್ದ, ಚತ್ರಚಾಮರಗಳಿಂದ ಶೋಭಿತವಾದ ಆ ಸೇನಾವನವು ಪುಷ್ಪಭರಿತ ಶುಭ ವನದಂತೆ ತೋರುತ್ತಿತ್ತು.
09008024a ತತ್ರ ಯೋಧಾ ಮಹಾರಾಜ ವಿಚರಂತೋ ಹ್ಯಭೀತವತ್।
09008024c ದೃಶ್ಯಂತೇ ರುಧಿರಾಕ್ತಾಂಗಾಃ ಪುಷ್ಪಿತಾ ಇವ ಕಿಂಶುಕಾಃ।।
ಮಹಾರಾಜ! ಅಂಗಗಳು ರಕ್ತಲೇಪಿತಗೊಂಡು ಅಭೀತರಾಗಿ ಸಂಚರಿಸುತ್ತಿದ್ದ ಯೋಧರು ಪುಷ್ಪಿತ ಕಿಂಶುಕ ವೃಕ್ಷಗಳಂತೆ ಕಾಣುತ್ತಿದ್ದರು.
09008025a ಮಾತಂಗಾಶ್ಚಾಪ್ಯದೃಶ್ಯಂತ ಶರತೋಮರಪೀಡಿತಾಃ।
09008025c ಪತಂತಸ್ತತ್ರ ತತ್ರೈವ ಚಿನ್ನಾಭ್ರಸದೃಶಾ ರಣೇ।।
ಶರ-ತೋಮರಗಳಿಂದ ಪೀಡಿತ ಆನೆಗಳು ಅಲ್ಲಲ್ಲಿಯೇ ಮೋಡಗಳು ತುಂಡಾಗಿ ಬೀಳುತ್ತಿವೆಯೋ ಎನ್ನುವಂತೆ ಬೀಳುತ್ತಿದ್ದವು.
09008026a ಗಜಾನೀಕಂ ಮಹಾರಾಜ ವಧ್ಯಮಾನಂ ಮಹಾತ್ಮಭಿಃ।
09008026c ವ್ಯದೀರ್ಯತ ದಿಶಃ ಸರ್ವಾ ವಾತನುನ್ನಾ ಘನಾ ಇವ।।
ಮಹಾರಾಜ! ಮಹಾತ್ಮರು ವಧಿಸುತ್ತಿದ್ದ ಗಜಸೇನೆಯು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಎಲ್ಲ ದಿಕ್ಕುಗಳಲ್ಲಿಯೂ ಚದುರಿಹೋಯಿತು.
09008027a ತೇ ಗಜಾ ಘನಸಂಕಾಶಾಃ ಪೇತುರುರ್ವ್ಯಾಂ ಸಮಂತತಃ।
09008027c ವಜ್ರರುಗ್ಣಾ ಇವ ಬಭುಃ ಪರ್ವತಾ ಯುಗಸಂಕ್ಷಯೇ।।
ಮೋಡಗಳಂತಿದ್ದ ಆ ಆನೆಗಳು ಯುಗಸಂಕ್ಷಯದಲ್ಲಿ ವಜ್ರಗಳಿಂದ ಪ್ರಹರಿಸಲ್ಪಟ್ಟ ಪರ್ವತಗಳಂತೆ ಭೂಮಿಯ ಮೇಲೆ ಎಲ್ಲಕಡೆ ಬಿದ್ದವು.
09008028a ಹಯಾನಾಂ ಸಾದಿಭಿಃ ಸಾರ್ಧಂ ಪತಿತಾನಾಂ ಮಹೀತಲೇ।
09008028c ರಾಶಯಃ ಸಂಪ್ರದೃಶ್ಯಂತೇ ಗಿರಿಮಾತ್ರಾಸ್ತತಸ್ತತಃ।।
ಆರೋಹಿಗಳೊಂದಿಗೆ ರಣದಲ್ಲಿ ಅಲ್ಲಲ್ಲಿ ಬೀಳುತ್ತಿದ್ದ ಕುದುರೆಗಳ ರಾಶಿಗಳು ಕೂಡ ಪರ್ವತಗಳಂತೆಯೇ ಕಾಣುತ್ತಿದ್ದವು.
09008029a ಸಂಜಜ್ಞೇ ರಣಭೂಮೌ ತು ಪರಲೋಕವಹಾ ನದೀ।
09008029c ಶೋಣಿತೋದಾ ರಥಾವರ್ತಾ ಧ್ವಜವೃಕ್ಷಾಸ್ಥಿಶರ್ಕರಾ।।
ಆಗ ರಣಭೂಮಿಯಲ್ಲಿ ರಕ್ತವೇ ನೀರಾಗಿದ್ದ, ರಥಗಳೇ ಸುಳಿಗಳಾಗಿದ್ದ, ಧ್ವಜಗಳೇ ವೃಕ್ಷಗಳಾಗಿದ್ದ ಮತ್ತು ಮೂಳೆಗಳೇ ಕಲ್ಲಾಗಿದ್ದ ಪರಲೋಕಕ್ಕೆ ಕೊಂಡೊಯ್ಯುವ ನದಿಯೇ ಹರಿಯತೊಡಗಿತು.
09008030a ಭುಜನಕ್ರಾ ಧನುಃಸ್ರೋತಾ ಹಸ್ತಿಶೈಲಾ ಹಯೋಪಲಾ।
09008030c ಮೇದೋಮಜ್ಜಾಕರ್ದಮಿನೀ ಚತ್ರಹಂಸಾ ಗದೋಡುಪಾ।।
ಆ ನದಿಯಲ್ಲಿ ಭುಜಗಳು ಮೊಸಳೆಗಳಂತಿದ್ದವು. ಧನುಸ್ಸುಗಳು ಪ್ರಹಾವರೂಪದಲ್ಲಿದ್ದವು. ಆನೆಗಳು ಪರ್ವತಗಳಂತೆಯೂ, ಕುದುರೆಗಳು ಪರ್ವತದ ಕಲ್ಲುಬಂಡೆಗಳಂತೆಯೂ, ಮೇದಮಜ್ಜೆಗಳೇ ಕೆಸರಾಗಿಯೂ, ಶ್ವೇತಚ್ಛತ್ರಗಳು ಹಂಸಗಳಂತೆಯೂ, ಗದೆಗಳು ನೌಕೆಗಳಂತೆಯೂ ತೋರುತ್ತಿದ್ದವು.
09008031a ಕವಚೋಷ್ಣೀಷಸಂಚನ್ನಾ ಪತಾಕಾರುಚಿರದ್ರುಮಾ।
09008031c ಚಕ್ರಚಕ್ರಾವಲೀಜುಷ್ಟಾ ತ್ರಿವೇಣೂದಂಡಕಾವೃತಾ।।
ಕವಚ-ಕಿರೀಟಗಳಿಂದ ತುಂಬಿದ್ದ ಆ ನದಿಯಲ್ಲಿ ಪತಾಕೆಗಳು ಸುಂದರ ವೃಕ್ಷಗಳಂತೆಯೂ, ಚಕ್ರಗಳಿಂದ ಸಮೃದ್ಧ ಆ ನದಿಯು ಚಕ್ರವಾಕ ಪಕ್ಷಿಗಳಿಂದ ತುಂಬಿದಂತೆಯೂ, ರಥಗಳ ತ್ರಿವೇಣಿಗಳೆಂಬ ಸರ್ಪಗಳಿಂದ ತುಂಬಿದಂತೆಯೂ ತೋರುತ್ತಿತ್ತು.
09008032a ಶೂರಾಣಾಂ ಹರ್ಷಜನನೀ ಭೀರೂಣಾಂ ಭಯವರ್ಧಿನೀ।
09008032c ಪ್ರಾವರ್ತತ ನದೀ ರೌದ್ರಾ ಕುರುಸೃಂಜಯಸಂಕುಲಾ।।
ಕುರು-ಸೃಂಜಯರಿಂದ ಹುಟ್ಟಿದ್ದ, ಶೂರರಿಗೆ ಹರ್ಷವನ್ನುಂಟುಮಾಡುವ ಮತ್ತು ಹೇಡಿಗಳ ಭಯವನ್ನು ಹೆಚ್ಚಿಸುವ ಆ ರೌದ್ರ ನದಿಯು ಹರಿಯತೊಡಗಿತು.
09008033a ತಾಂ ನದೀಂ ಪಿತೃಲೋಕಾಯ ವಹಂತೀಮತಿಭೈರವಾಂ।
09008033c ತೇರುರ್ವಾಹನನೌಭಿಸ್ತೇ ಶೂರಾಃ ಪರಿಘಬಾಹವಃ।।
ಪಿತೃಲೋಕಗಳಿಗೊಯ್ಯುತ್ತಿದ್ದ ಆ ಭೈರವನದಿಯನ್ನು ಪರಿಘದಂತಹ ಬಾಹುಗಳುಳ್ಳ ಶೂರರು ವಾಹನಗಳ ಮೇಲೆ ದಾಟುತ್ತಿದ್ದರು.
09008034a ವರ್ತಮಾನೇ ತಥಾ ಯುದ್ಧೇ ನಿರ್ಮರ್ಯಾದೇ ವಿಶಾಂ ಪತೇ।
09008034c ಚತುರಂಗಕ್ಷಯೇ ಘೋರೇ ಪೂರ್ವಂ ದೇವಾಸುರೋಪಮೇ।।
09008035a ಅಕ್ರೋಶನ್ಬಾಂಧವಾನನ್ಯೇ ತತ್ರ ತತ್ರ ಪರಂತಪ।
09008035c ಕ್ರೋಶದ್ಭಿರ್ಬಾಂಧವೈಶ್ಚಾನ್ಯೇ ಭಯಾರ್ತಾ ನ ನಿವರ್ತಿರೇ।।
ಪರಂತಪ! ವಿಶಾಂಪತೇ! ಹಿಂದೆ ನಡೆದ ದೇವಾಸುರ ಯುದ್ಧದಂತಿದ್ದ, ಮರ್ಯಾದೆ ಮೀರಿದ, ಚತುರಂಗ ಬಲಗಳನ್ನೂ ನಾಶಗೊಳಿಸುವ ಆ ಘೋರ ಯುದ್ಧವು ನಡೆಯುತ್ತಿರಲು ಭಯಾರ್ತ ಯೋಧರು ಅನ್ಯ ಬಾಂಧವರನ್ನು ಕೂಗಿ ಕರೆಯುತ್ತಿದ್ದರು. ಕೆಲವರು ಬಾಂಧವರಿಂದ ಕರೆಯಲ್ಪಡುತ್ತಿದ್ದರೂ ಯುದ್ಧದಿಂದ ಹಿಮ್ಮೆಟ್ಟುತ್ತಿರಲಿಲ್ಲ.
09008036a ನಿರ್ಮರ್ಯಾದೇ ತಥಾ ಯುದ್ಧೇ ವರ್ತಮಾನೇ ಭಯಾನಕೇ।
09008036c ಅರ್ಜುನೋ ಭೀಮಸೇನಶ್ಚ ಮೋಹಯಾಂ ಚಕ್ರತುಃ ಪರಾನ್।।
ಆ ರೀತಿ ನಿರ್ಮರ್ಯಾದಾಯುಕ್ತ ಭಯಾನಕ ಯುದ್ಧವು ನಡೆಯುತ್ತಿರಲು ಅರ್ಜುನ-ಭೀಮಸೇನರು ಶತ್ರುಗಳನ್ನು ವಿಮೋಹಗೊಳಿಸಿದರು.
09008037a ಸಾ ವಧ್ಯಮಾನಾ ಮಹತೀ ಸೇನಾ ತವ ಜನಾಧಿಪ।
09008037c ಅಮುಹ್ಯತ್ತತ್ರ ತತ್ರೈವ ಯೋಷಿನ್ಮದವಶಾದಿವ।।
ಜನಾಧಿಪ! ಅವರಿಂದ ವಧಿಸಲ್ಪಡುತ್ತಿದ್ದ ನಿನ್ನ ಮಹಾ ಸೇನೆಯು ಮದಮತ್ತ ಯುವತಿಯಂತೆ ಅಲ್ಲಲ್ಲಿಯೇ ಮೂರ್ಛೆಹೋಗುತ್ತಿತ್ತು.
09008038a ಮೋಹಯಿತ್ವಾ ಚ ತಾಂ ಸೇನಾಂ ಭೀಮಸೇನಧನಂಜಯೌ।
09008038c ದಧ್ಮತುರ್ವಾರಿಜೌ ತತ್ರ ಸಿಂಹನಾದಂ ಚ ನೇದತುಃ।।
ಭೀಮಸೇನ-ಧನಂಜಯರಿಬ್ಬರೂ ಆ ಸೇನೆಯನ್ನು ಮೋಹಗೊಳಿಸಿ ಶಂಖಗಳನ್ನು ಊದಿದರು ಮತ್ತು ಸಿಂಹನಾದಗೈದರು.
09008039a ಶ್ರುತ್ವೈವ ತು ಮಹಾಶಬ್ದಂ ಧೃಷ್ಟದ್ಯುಮ್ನಶಿಖಂಡಿನೌ।
09008039c ಧರ್ಮರಾಜಂ ಪುರಸ್ಕೃತ್ಯ ಮದ್ರರಾಜಮಭಿದ್ರುತೌ।।
ಆ ಮಹಾಶಬ್ಧವನ್ನು ಕೇಳಿ ಧೃಷ್ಟದ್ಯುಮ್ನ-ಶಿಖಂಡಿಯರು ಧರ್ಮರಾಜನನ್ನು ಮುಂದಿಟ್ಟುಕೊಂಡು ಮದ್ರರಾಜನನ್ನು ಆಕ್ರಮಣಿಸಿದರು.
09008040a ತತ್ರಾಶ್ಚರ್ಯಮಪಶ್ಯಾಮ ಘೋರರೂಪಂ ವಿಶಾಂ ಪತೇ।
09008040c ಶಲ್ಯೇನ ಸಂಗತಾಃ ಶೂರಾ ಯದಯುಧ್ಯಂತ ಭಾಗಶಃ।।
ವಿಶಾಂಪತೇ! ಭಾಗ-ಭಾಗಗಳಲ್ಲಿ ಆ ಶೂರರು ಶಲ್ಯನೊಂದಿಗೆ ಘೋರರೂಪದಲ್ಲಿ ಯುದ್ಧಮಾಡುತ್ತಿರುವುದನ್ನು ಅಲ್ಲಿ ನೋಡಿದೆವು.
09008041a ಮಾದ್ರೀಪುತ್ರೌ ಸರಭಸೌ ಕೃತಾಸ್ತ್ರೌ ಯುದ್ಧದುರ್ಮದೌ।
09008041c ಅಭ್ಯಯಾತಾಂ ತ್ವರಾಯುಕ್ತೌ ಜಿಗೀಷಂತೌ ಬಲಂ ತವ।।
ಕೃತಾಸ್ತ್ರರಾದ ಯುದ್ಧದುರ್ಮದ ಮಾದ್ರೀಪುತ್ರರಿಬ್ಬರೂ ರಭಸದಿಂದ ತ್ವರೆಮಾಡಿ ನಿನ್ನ ಸೇನೆಯನ್ನು ಗೆಲ್ಲಲು ಆಕ್ರಮಣಿಸಿದರು.
09008042a ತತೋ ನ್ಯವರ್ತತ ಬಲಂ ತಾವಕಂ ಭರತರ್ಷಭ।
09008042c ಶರೈಃ ಪ್ರಣುನ್ನಂ ಬಹುಧಾ ಪಾಂಡವೈರ್ಜಿತಕಾಶಿಭಿಃ।।
ಭರತರ್ಷಭ! ವಿಜಯೋತ್ಸಾಹಿತ ಪಾಂಡವರ ಶರಗಳಿಂದ ಬಹಳವಾಗಿ ಪ್ರಹರಿಸಲ್ಪಟ್ಟ ನಿನ್ನ ಸೇನೆಯು ಹಿಂದೆಸರಿಯಿತು.
09008043a ವಧ್ಯಮಾನಾ ಚಮೂಃ ಸಾ ತು ಪುತ್ರಾಣಾಂ ಪ್ರೇಕ್ಷತಾಂ ತವ।
09008043c ಭೇಜೇ ದಿಶೋ ಮಹಾರಾಜ ಪ್ರಣುನ್ನಾ ದೃಢಧನ್ವಿಭಿಃ।
ಮಹಾರಾಜ! ನಿನ್ನ ಮಕ್ಕಳು ನೋಡುತ್ತಿದ್ದಂತೆಯೇ ದೃಢಧನ್ವಿಗಳು ಚುಚ್ಚಿ ವಧಿಸುತ್ತಿದ್ದ ಆ ಸೇನೆಯು ದಿಕ್ಕಾಪಾಲಾಗಿ ಹೋಯಿತು.
09008043e ಹಾಹಾಕಾರೋ ಮಹಾನ್ಜಜ್ಞೇ ಯೋಧಾನಾಂ ತವ ಭಾರತ।।
09008044a ತಿಷ್ಠ ತಿಷ್ಠೇತಿ ವಾಗಾಸೀದ್ದ್ರಾವಿತಾನಾಂ ಮಹಾತ್ಮನಾಂ।
09008044c ಕ್ಷತ್ರಿಯಾಣಾಂ ತದಾನ್ಯೋನ್ಯಂ ಸಮ್ಯುಗೇ ಜಯಮಿಚ್ಚತಾಂ।
ಭಾರತ! ನಿನ್ನ ಯೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ಯುದ್ಧದಲ್ಲಿ ಅನ್ಯೋನ್ಯರ ಸಹಾಯದಿಂದ ಜಯವನ್ನು ಬಯಸಿದ್ದ ಕ್ಷತ್ರಿಯರು ಓಡಿಹೋಗುತ್ತಿದ್ದ ಮಹಾತ್ಮರಿಗೆ “ನಿಲ್ಲಿ! ನಿಲ್ಲಿ!” ಎಂದು ಕೂಗಿ ಕರೆಯುವುದೂ ಕೇಳಿಬರುತ್ತಿತ್ತು.
09008044e ಆದ್ರವನ್ನೇವ ಭಗ್ನಾಸ್ತೇ ಪಾಂಡವೈಸ್ತವ ಸೈನಿಕಾಃ।।
09008045a ತ್ಯಕ್ತ್ವಾ ಯುದ್ಧೇ ಪ್ರಿಯಾನ್ಪುತ್ರಾನ್ಭ್ರಾತೄನಥ ಪಿತಾಮಹಾನ್।
09008045c ಮಾತುಲಾನ್ಭಾಗಿನೇಯಾಂಶ್ಚ ತಥಾ ಸಂಬಂಧಿಬಾಂಧವಾನ್।।
ಪಾಂಡವರಿಂದ ಭಗ್ನರಾದ ನಿನ್ನ ಸೈನಿಕರು ಯುದ್ಧದಲ್ಲಿ ಪ್ರಿಯ ಪುತ್ರ-ಸಹೋದರ-ಪಿತಾಮಹ-ಸೋದರಮಾವಂದಿರನ್ನೂ, ತಂಗಿಯ ಮಕ್ಕಳನ್ನೂ, ಸಂಬಂಧಿ-ಬಾಂಧವರನ್ನೂ ಬಿಟ್ಟು ಓಡುತ್ತಿದ್ದರು.
09008046a ಹಯಾನ್ದ್ವಿಪಾಂಸ್ತ್ವರಯಂತೋ ಯೋಧಾ ಜಗ್ಮುಃ ಸಮಂತತಃ।
09008046c ಆತ್ಮತ್ರಾಣಕೃತೋತ್ಸಾಹಾಸ್ತಾವಕಾ ಭರತರ್ಷಭ।।
ಭರತರ್ಷಭ! ಕುದುರೆಗಳನ್ನೂ ಆನೆಗಳನ್ನು ತ್ವರೆಗೊಳಿಸುತ್ತಾ ಆತ್ಮರಕ್ಷಣೆಯಲ್ಲಿ ಉತ್ಸಾಹವಿದ್ದ ನಿನ್ನ ಕಡೆಯ ಯೋಧರು ಎಲ್ಲ ದಿಕ್ಕುಗಳಲ್ಲಿ ಓಡಿ ಹೋದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ಅಷ್ಠಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಂಟನೇ ಅಧ್ಯಾಯವು.