007 ವ್ಯೂಹನಿರ್ಮಾಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯ ಪರ್ವ

ಶಲ್ಯವಧ ಪರ್ವ

ಅಧ್ಯಾಯ 7

ಸಾರ

ಹದಿನೆಂಟನೆಯ ದಿನದ ಯುದ್ಧಾರಂಭ (1-44).

09007001 ಸಂಜಯ ಉವಾಚ 09007001a ವ್ಯತೀತಾಯಾಂ ರಜನ್ಯಾಂ ತು ರಾಜಾ ದುರ್ಯೋಧನಸ್ತದಾ।
09007001c ಅಬ್ರವೀತ್ತಾವಕಾನ್ಸರ್ವಾನ್ಸಮ್ನಹ್ಯಂತಾಂ ಮಹಾರಥಾಃ।।

ಸಂಜಯನು ಹೇಳಿದನು: “ರಾತ್ರಿಯು ಕಳೆಯಲು ರಾಜಾ ದುರ್ಯೋಧನನು ಮಹಾರಥರೆಲ್ಲರೂ ಕವಚಗಳನ್ನು ಧರಿಸಿ ಯುದ್ಧಸನ್ನದ್ಧರಾಗುವಂತೆ ನಿನ್ನ ಕಡೆಯ ಎಲ್ಲರಿಗೆ ಹೇಳಿದನು:

09007002a ರಾಜ್ಞಸ್ತು ಮತಮಾಜ್ಞಾಯ ಸಮನಹ್ಯತ ಸಾ ಚಮೂಃ।
09007002c ಅಯೋಜಯನ್ರಥಾಂಸ್ತೂರ್ಣಂ ಪರ್ಯಧಾವಂಸ್ತಥಾಪರೇ।।

ರಾಜನ ಅಭಿಪ್ರಾಯವನ್ನು ತಿಳಿದ ಆ ಸೇನೆಯು ಸನ್ನದ್ಧವಾಗತೊಡಗಿತು. ಬೇಗನೆ ರಥವನ್ನು ಸಜ್ಜುಗೊಳಿಸಲು ಇನ್ನು ಕೆಲವರು ಅತ್ತಿತ್ತ ಓಡಾಡುತ್ತಿದ್ದರು.

09007003a ಅಕಲ್ಪ್ಯಂತ ಚ ಮಾತಂಗಾಃ ಸಮನಹ್ಯಂತ ಪತ್ತಯಃ।
09007003c ಹಯಾನಸ್ತರಣೋಪೇತಾಂಶ್ಚಕ್ರುರನ್ಯೇ19 ಸಹಸ್ರಶಃ।।

ಆನೆಗಳನ್ನು ಸಜ್ಜುಗೊಳಿಸಿದರು. ಪದಾತಿಗಳು ಕವಚಗಳನ್ನು ತೊಟ್ಟುಕೊಂಡರು. ಇನ್ನು ಕೆಲವರು ಸಹಸ್ರಾರು ಕುದುರೆಗಳನ್ನು ಸಜ್ಜುಗೊಳಿಸಿದರು.

09007004a ವಾದಿತ್ರಾಣಾಂ ಚ ನಿನದಃ ಪ್ರಾದುರಾಸೀದ್ವಿಶಾಂ ಪತೇ।
09007004c ಬೋಧನಾರ್ಥಂ ಹಿ20 ಯೋಧಾನಾಂ ಸೈನ್ಯಾನಾಂ ಚಾಪ್ಯುದೀರ್ಯತಾಂ।।

ವಿಶಾಂಪತೇ! ವಾದ್ಯಗಳು ಮೊಳಗಿದವು. ಗರ್ಜಿಸುತ್ತಿದ್ದ ಯೋಧ-ಮುಂದುವರೆಯುತ್ತಿದ್ದ ಸೇನೆಗಳ ತುಮುಲ ಶಬ್ಧಗಳೂ ಕೇಳಿಬಂದವು.

09007005a ತತೋ ಬಲಾನಿ ಸರ್ವಾಣಿ ಸೇನಾಶಿಷ್ಟಾನಿ ಭಾರತ।
09007005c ಸಂನದ್ಧಾನ್ಯೇವ ದದೃಶುರ್ಮೃತ್ಯುಂ21 ಕೃತ್ವಾ ನಿವರ್ತನಂ।।

ಭಾರತ! ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಕಲ್ಪಿಸಿಕೊಂಡಿದ್ದ ಅಳಿದುಳಿದಿದ್ದ ಸರ್ವ ಸೇನೆಗಳೂ ಯುದ್ಧಸನ್ನದ್ಧರಾಗಿ ಮುಂದುವರೆಯುತ್ತಿರುವುದು ಕಂಡಿತು.

09007006a ಶಲ್ಯಂ ಸೇನಾಪತಿಂ ಕೃತ್ವಾ ಮದ್ರರಾಜಂ ಮಹಾರಥಾಃ।
09007006c ಪ್ರವಿಭಜ್ಯ ಬಲಂ ಸರ್ವಮನೀಕೇಷು ವ್ಯವಸ್ಥಿತಾಃ।।

ಮಹಾರಥರು ಮದ್ರರಾಜ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಸೇನೆಗಳೆಲ್ಲವನ್ನೂ ವಿಭಜಿಸಿ ತಮ್ಮ ತಮ್ಮ ದಳಗಳಲ್ಲಿ ಸನ್ನದ್ಧರಾಗಿದ್ದರು.

09007007a ತತಃ ಸರ್ವೇ ಸಮಾಗಮ್ಯ ಪುತ್ರೇಣ ತವ ಸೈನಿಕಾಃ।
09007007c ಕೃಪಶ್ಚ ಕೃತವರ್ಮಾ ಚ ದ್ರೌಣಿಃ ಶಲ್ಯೋಽಥ ಸೌಬಲಃ।।
09007008a ಅನ್ಯೇ ಚ ಪಾರ್ಥಿವಾಃ ಶೇಷಾಃ ಸಮಯಂ ಚಕ್ರಿರೇ ತದಾ।

ಅನಂತರ ಸರ್ವ ಸೈನಿಕರೂ, ಕೃಪ, ಕೃತವರ್ಮ, ದ್ರೌಣಿ, ಶಲ್ಯ, ಸೌಬಲ ಮತ್ತು ಅಳಿದುಳಿದ ಅನ್ಯ ಪಾರ್ಥಿವರು ನಿನ್ನ ಪುತ್ರನೊಡನೆ ಸೇರಿ ಈ ನಿಯಮಗಳನ್ನು ಮಾಡಿಕೊಂಡರು:

09007008c ನ ನ ಏಕೇನ ಯೋದ್ಧವ್ಯಂ ಕಥಂ ಚಿದಪಿ ಪಾಂಡವೈಃ।।
09007009a ಯೋ ಹ್ಯೇಕಃ ಪಾಂಡವೈರ್ಯುಧ್ಯೇದ್ಯೋ ವಾ ಯುಧ್ಯಂತಮುತ್ಸೃಜೇತ್।
09007009c ಸ ಪಂಚಭಿರ್ಭವೇದ್ಯುಕ್ತಃ ಪಾತಕೈಃ ಸೋಪಪಾತಕೈಃ।

“ಪಾಂಡವರೊಂದಿಗೆ ನಮ್ಮವರಲ್ಲಿ ಯಾರೂ ಒಬ್ಬನೇ ಯುದ್ಧಮಾಡಬಾರದು. ಪಾಂಡವರೊಂದಿಗೆ ಒಬ್ಬನೇ ಯುದ್ಧಮಾಡುತ್ತಿರುವವನನ್ನು ಬಿಟ್ಟುಬಂದರೆ ಅಂತವನು ಪಂಚಮಹಾಪಾತಕ ಮತ್ತು ಉಪಪಾತಕಗಳಿಂದ ಯುಕ್ತನಾಗುತ್ತಾನೆ. 2209007009e ಅನ್ಯೋನ್ಯಂ ಪರಿರಕ್ಷದ್ಭಿರ್ಯೋದ್ಧವ್ಯಂ ಸಹಿತೈಶ್ಚ ನಃ।।

09007010a ಏವಂ ತೇ ಸಮಯಂ ಕೃತ್ವಾ ಸರ್ವೇ ತತ್ರ ಮಹಾರಥಾಃ।
09007010c ಮದ್ರರಾಜಂ ಪುರಸ್ಕೃತ್ಯ ತೂರ್ಣಮಭ್ಯದ್ರವನ್ಪರಾನ್।।

ನಾವೆಲ್ಲರೂ ಒಟ್ಟಾಗಿ ಅನ್ಯೋನ್ಯರನ್ನು ರಕ್ಷಿಸುತ್ತಾ ಶತ್ರುಗಳೊಂದಿಗೆ ಯುದ್ಧಮಾಡಬೇಕು!” ಹೀಗೆ ಒಪ್ಪಂದವನ್ನು ಮಾಡಿಕೊಂಡು ಆ ಮಹಾರಥರೆಲ್ಲರೂ ಮದ್ರರಾಜನನ್ನು ಮುಂದೆ ಬಿಟ್ಟುಕೊಂಡು ಬೇಗನೆ ಶತ್ರುಗಳ ಮೇಲೆ ಆಕ್ರಮಣ ನಡೆಸಿದರು.

09007011a ತಥೈವ ಪಾಂಡವಾ ರಾಜನ್ವ್ಯೂಹ್ಯ ಸೈನ್ಯಂ ಮಹಾರಣೇ।
09007011c ಅಭ್ಯಯುಃ ಕೌರವಾನ್ಸರ್ವಾನ್ಯೋತ್ಸ್ಯಮಾನಾಃ ಸಮಂತತಃ।।

ರಾಜನ್! ಹಾಗೆಯೇ ಪಾಂಡವರು ಕೂಡ ಮಹಾರಣದಲ್ಲಿ ಸೈನ್ಯವನ್ನು ವ್ಯೂಹದಲ್ಲಿ ರಚಿಸಿ ಉತ್ಸಾಹದಿಂದ ಎಲ್ಲಕಡೆಗಳಿಂದ ಕೌರವರೆಲ್ಲರನ್ನೂ ಆಕ್ರಮಣಿಸಿದರು.

09007012a ತದ್ಬಲಂ ಭರತಶ್ರೇಷ್ಠ ಕ್ಷುಬ್ಧಾರ್ಣವಸಮಸ್ವನಂ।
09007012c ಸಮುದ್ಧೂತಾರ್ಣವಾಕಾರಮುದ್ಧೂತರಥಕುಂಜರಂ।।

ಭರತಶ್ರೇಷ್ಠ! ಆ ಸೇನೆಯು ಕ್ಷೋಭೆಗೊಂಡ ಮಹಾ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಉಕ್ಕಿಬರುವ ಮಹಾಸಮುದ್ರದಂತೆ ರಥ-ಆನೆಗಳು ಮುನ್ನುಗ್ಗಿ ಹೋಗುತ್ತಿದ್ದವು.”

09007013 ಧೃತರಾಷ್ಟ್ರ ಉವಾಚ 09007013a ದ್ರೋಣಸ್ಯ ಭೀಷ್ಮಸ್ಯ ಚ ವೈ ರಾಧೇಯಸ್ಯ ಚ ಮೇ ಶ್ರುತಂ।
09007013c ಪಾತನಂ ಶಂಸ ಮೇ ಭೂಯಃ ಶಲ್ಯಸ್ಯಾಥ ಸುತಸ್ಯ ಮೇ।।

ಧೃತರಾಷ್ಟ್ರನು ಹೇಳಿದನು: “ದ್ರೋಣ, ಭೀಷ್ಮ ಮತ್ತು ರಾಧೇಯರ ಕುರಿತು ನಾನು ಕೇಳಿದೆನು. ಈಗ ಪುನಃ ಶಲ್ಯ ಮತ್ತು ನನ್ನ ಮಗನ ಪತನದ ಕುರಿತು ನನಗೆ ಹೇಳು.

09007014a ಕಥಂ ರಣೇ ಹತಃ ಶಲ್ಯೋ ಧರ್ಮರಾಜೇನ ಸಂಜಯ।
09007014c ಭೀಮೇನ ಚ ಮಹಾಬಾಹುಃ ಪುತ್ರೋ ದುರ್ಯೋಧನೋ ಮಮ।।

ಸಂಜಯ! ರಣದಲ್ಲಿ ಹೇಗೆ ಧರ್ಮರಾಜನಿಂದ ಶಲ್ಯ ಮತ್ತು ಭೀಮನಿಂದ ನನ್ನ ಮಗ ಮಹಾಬಾಹು ದುರ್ಯೋಧನರು ಹತರಾದರು?”

09007015 ಸಂಜಯ ಉವಾಚ 09007015a ಕ್ಷಯಂ ಮನುಷ್ಯದೇಹಾನಾಂ ರಥನಾಗಾಶ್ವಸಂಕ್ಷಯಂ।
09007015c ಶೃಣು ರಾಜನ್ ಸ್ಥಿರೋ ಭೂತ್ವಾ ಸಂಗ್ರಾಮಂ ಶಂಸತೋ ಮಮ।।

ಸಂಜಯನು ಹೇಳಿದನು: “ರಾಜನ್! ಮನುಷ್ಯದೇಹಗಳು ಮತ್ತು ರಥ-ಆನೆ-ಕುದುರೆಗಳು ನಾಶಗೊಂಡ ಸಂಗ್ರಾಮದ ಕುರಿತು ಹೇಳುತ್ತೇನೆ. ಸ್ಥಿರನಾಗಿ ಕೇಳು.

09007016a ಆಶಾ ಬಲವತೀ ರಾಜನ್ಪುತ್ರಾಣಾಂ ತೇಽಭವತ್ತದಾ।
09007016c ಹತೇ ಭೀಷ್ಮೇ ಚ ದ್ರೋಣೇ ಚ ಸೂತಪುತ್ರೇ ಚ ಪಾತಿತೇ।।
09007016e ಶಲ್ಯಃ ಪಾರ್ಥಾನ್ರಣೇ ಸರ್ವಾನ್ನಿಹನಿಷ್ಯತಿ ಮಾರಿಷ।

ರಾಜನ್! ಮಾರಿಷ! ಭೀಷ್ಮ, ದ್ರೋಣ ಮತ್ತು ಸೂತಪುತ್ರರು ಹತರಾಗಲು ರಣದಲ್ಲಿ ಶಲ್ಯನು ಪಾರ್ಥರೆಲ್ಲರನ್ನೂ ಸಂಹರಿಸುತ್ತಾನೆ ಎಂಬ ಬಲವತ್ತಾದ ಆಶೆಯು ನಿನ್ನ ಪುತ್ರರಲ್ಲುಂಟಾಗಿತ್ತು.

09007017a ತಾಮಾಶಾಂ ಹೃದಯೇ ಕೃತ್ವಾ ಸಮಾಶ್ವಾಸ್ಯ ಚ ಭಾರತ।।
09007017c ಮದ್ರರಾಜಂ ಚ ಸಮರೇ ಸಮಾಶ್ರಿತ್ಯ ಮಹಾರಥಂ।
09007017e ನಾಥವಂತಮಥಾತ್ಮಾನಮಮನ್ಯತ ಸುತಸ್ತವ।।

ಭಾರತ! ಅದೇ ಆಶೆಯನ್ನು ಹೃದಯಲ್ಲಿಟ್ಟುಕೊಂಡು ಆಶ್ವಾಸನೆಗಳಿಂದ ಸಮರದಲ್ಲಿ ಮಹಾರಥ ಮದ್ರರಾಜನನ್ನು ಆಶ್ರಯಿಸಿ ನಿನ್ನ ಮಕ್ಕಳು ತಮ್ಮನ್ನು ತಾವೇ ನಾಥವಂತರೆಂದು ತಿಳಿದುಕೊಂಡಿದ್ದರು.

09007018a ಯದಾ ಕರ್ಣೇ ಹತೇ ಪಾರ್ಥಾಃ ಸಿಂಹನಾದಂ ಪ್ರಚಕ್ರಿರೇ।
09007018c ತದಾ ರಾಜನ್ಧಾರ್ತರಾಷ್ಟ್ರಾನಾವಿವೇಶ ಮಹದ್ಭಯಂ।।

ಕರ್ಣನು ಹತನಾದಾಗ ಪಾರ್ಥರು ಮಾಡಿದ ಸಿಂಹನಾದದಿಂದ ಧಾರ್ತರಾಷ್ಟ್ರರಲ್ಲಿ ಮಹಾ ಭಯವು ಆವೇಶಗೊಂಡಿತ್ತು.

09007019a ತಾನ್ಸಮಾಶ್ವಾಸ್ಯ ತು ತದಾ ಮದ್ರರಾಜಃ ಪ್ರತಾಪವಾನ್।
09007019c ವ್ಯೂಹ್ಯ ವ್ಯೂಹಂ ಮಹಾರಾಜ ಸರ್ವತೋಭದ್ರಮೃದ್ಧಿಮತ್।।

ಮಹಾರಾಜ! ಅವರನ್ನು ಸಮಾಧಾನಗೊಳಿಸಿ ಪ್ರತಾಪವಾನ್ ಮದ್ರರಾಜನು ವೃದ್ಧಿಕಾರಕ ಸರ್ವತೋಭದ್ರ ಸೇನಾವ್ಯೂಹವನ್ನು ರಚಿಸಿದನು.

09007020a ಪ್ರತ್ಯುದ್ಯಾತೋ ರಣೇ ಪಾರ್ಥಾನ್ಮದ್ರರಾಜಃ ಪ್ರತಾಪವಾನ್।
09007020c ವಿಧುನ್ವನ್ಕಾರ್ಮುಕಂ ಚಿತ್ರಂ ಭಾರಘ್ನಂ ವೇಗವತ್ತರಂ।।
09007021a ರಥಪ್ರವರಮಾಸ್ಥಾಯ ಸೈಂಧವಾಶ್ವಂ ಮಹಾರಥಃ।
09007021c ತಸ್ಯ ಸೀತಾ23 ಮಹಾರಾಜ ರಥಸ್ಥಾಶೋಭಯದ್ರಥಂ।।

ಮಹಾರಾಜ! ಮಹಾರಥ ಪ್ರತಾಪವಾನ್ ಮದ್ರರಾಜನು ರಣದಲ್ಲಿ ಚಿತ್ರಿತ-ಶತ್ರುಭಾರನಾಶಕ-ವೇಗವತ್ತರ ಧನುಸ್ಸನ್ನು ಸೆಳೆಯುತ್ತಾ ಸಿಂಧುದೇಶದ ಕುದುರೆಗಳನ್ನು ಕಟ್ಟಿದ್ದ ಶೇಷ್ಠ ರಥವನ್ನು ಏರಿ ಪಾರ್ಥರನ್ನು ಆಕ್ರಮಣಿಸಿದನು. ರಥದಲ್ಲಿದ್ದ ಅವನ ಸಾರಥಿಯೂ ರಥವನ್ನು ಶೋಭಾಯಮಾನಗೊಳಿಸಿದನು.

09007022a ಸ ತೇನ ಸಂವೃತೋ ವೀರೋ ರಥೇನಾಮಿತ್ರಕರ್ಶನಃ।
09007022c ತಸ್ಥೌ ಶೂರೋ ಮಹಾರಾಜ ಪುತ್ರಾಣಾಂ ತೇ ಭಯಪ್ರಣುತ್।।

ಮಹಾರಾಜ! ಆ ವೀರ ಅಮಿತ್ರಕರ್ಶನ ಶೂರನು ನಿನ್ನ ಪುತ್ರರ ಭಯವನ್ನು ಹೋಗಲಾಡಿಸುತ್ತಾ ಆ ರಥದಲ್ಲಿ ಸಿದ್ಧನಾಗಿ ನಿಂತಿದ್ದನು.

09007023a ಪ್ರಯಾಣೇ ಮದ್ರರಾಜೋಽಭೂನ್ಮುಖಂ ವ್ಯೂಹಸ್ಯ ದಂಶಿತಃ।
09007023c ಮದ್ರಕೈಃ ಸಹಿತೋ ವೀರೈಃ ಕರ್ಣಪುತ್ರೈಶ್ಚ ದುರ್ಜಯೈಃ।।

ಪ್ರಯಾಣದ ಸಮದಲ್ಲಿ ಮದ್ರರಾಜನು ಕವಚವನ್ನು ಧರಿಸಿ ವೀರ ಮದ್ರಕರು ಮತ್ತು ದುರ್ಜಯ ಕರ್ಣಪುತ್ರರೊಂದಿಗೆ ವ್ಯೂಹದ ಮುಖಭಾಗದಲ್ಲಿದ್ದನು.

09007024a ಸವ್ಯೇಽಭೂತ್ಕೃತವರ್ಮಾ ಚ ತ್ರಿಗರ್ತೈಃ ಪರಿವಾರಿತಃ।
09007024c ಗೌತಮೋ ದಕ್ಷಿಣೇ ಪಾರ್ಶ್ವೇ ಶಕೈಶ್ಚ ಯವನೈಃ ಸಹ।।

ಎಡಭಾಗದಲ್ಲಿ ತ್ರಿಗರ್ತರಿಂದ ಪರಿವಾರಿತನಾದ ಕೃತವರ್ಮನೂ, ಬಲಭಾಗದಲ್ಲಿ ಶಕ-ಯವನರೊಂದಿಗೆ ಗೌತಮ ಕೃಪನೂ ಇದ್ದರು.

09007025a ಅಶ್ವತ್ಥಾಮಾ ಪೃಷ್ಠತೋಽಭೂತ್ಕಾಂಬೋಜೈಃ ಪರಿವಾರಿತಃ।
09007025c ದುರ್ಯೋಧನೋಽಭವನ್ಮಧ್ಯೇ ರಕ್ಷಿತಃ ಕುರುಪುಂಗವೈಃ।।

ಕಾಂಬೋಜರಿಂದ ಪರಿವಾರಿತನಾಗಿ ಅಶ್ವತ್ಥಾಮನು ಪೃಷ್ಠ ಭಾಗದಲ್ಲಿದ್ದನು ಮತ್ತು ಕುರುಪುಂಗವರಿಂದ ರಕ್ಷಿತನಾಗಿ ದುರ್ಯೋಧನನು ಮಧ್ಯದಲ್ಲಿದ್ದನು.

09007026a ಹಯಾನೀಕೇನ ಮಹತಾ ಸೌಬಲಶ್ಚಾಪಿ ಸಂವೃತಃ।
09007026c ಪ್ರಯಯೌ ಸರ್ವಸೈನ್ಯೇನ ಕೈತವ್ಯಶ್ಚ ಮಹಾರಥಃ।।

ಮಹಾ ಸೇನೆಯಿಂದ ಪರಿವೃತನಾಗಿ ಸೌಬಲ ಶಕುನಿಯೂ ಮಹಾರಥ ಕೈತವ್ಯ ಉಲೂಕನೂ ಸರ್ವಸೇನೆಗಳಿಂದ ಪರಿವೃತರಾಗಿ ಹೊರಟರು.

09007027a ಪಾಂಡವಾಶ್ಚ ಮಹೇಷ್ವಾಸಾ ವ್ಯೂಹ್ಯ ಸೈನ್ಯಮರಿಂದಮಾಃ।
09007027c ತ್ರಿಧಾ ಭೂತ್ವಾ ಮಹಾರಾಜ ತವ ಸೈನ್ಯಮುಪಾದ್ರವನ್।।

ಮಹಾರಾಜ! ಮಹೇಷ್ವಾಸ ಅರಿಂದಮ ಪಾಂಡವರು ವ್ಯೂಹವನ್ನು ಮೂರು ಭಾಗಗಳಲ್ಲಿ ರಚಿಸಿಕೊಂಡು ನಿನ್ನ ಸೇನೆಯನ್ನು ಆಕ್ರಮಣಿಸಿದರು.

09007028a ಧೃಷ್ಟದ್ಯುಮ್ನಃ ಶಿಖಂಡೀ ಚ ಸಾತ್ಯಕಿಶ್ಚ ಮಹಾರಥಃ।
09007028c ಶಲ್ಯಸ್ಯ ವಾಹಿನೀಂ ತೂರ್ಣಮಭಿದುದ್ರುವುರಾಹವೇ।।

ಧೃಷ್ಟದ್ಯುಮ್ನ, ಶಿಖಂಡೀ ಮತ್ತು ಮಹಾರಥ ಸಾತ್ಯಕಿಯರು ಕೂಡಲೇ ಶಲ್ಯನ ಸೇನೆಯನ್ನು ಯುದ್ಧದಲ್ಲಿ ಆಕ್ರಮಣಿಸಿದರು.

09007029a ತತೋ ಯುಧಿಷ್ಠಿರೋ ರಾಜಾ ಸ್ವೇನಾನೀಕೇನ ಸಂವೃತಃ।
09007029c ಶಲ್ಯಮೇವಾಭಿದುದ್ರಾವ ಜಿಘಾಂಸುರ್ಭರತರ್ಷಭ।।

ಭರತರ್ಷಭ! ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಗಳಿಂದ ಪರಿವೃತನಾಗಿ ಶಲ್ಯನನ್ನೇ ಕೊಲ್ಲಲು ಬಯಸಿ ಅವನನ್ನು ಆಕ್ರಮಣಿಸಿದನು.

09007030a ಹಾರ್ದಿಕ್ಯಂ ತು ಮಹೇಷ್ವಾಸಮರ್ಜುನಃ ಶತ್ರುಪೂಗಹಾ।
09007030c ಸಂಶಪ್ತಕಗಣಾಂಶ್ಚೈವ ವೇಗತೋಽಭಿವಿದುದ್ರುವೇ।।

ಶತ್ರುಸೈನ್ಯಹಂತಕ ಅರ್ಜುನನು ವೇಗದಿಂದ ಮಹೇಷ್ವಾಸ ಹಾರ್ದಿಕ್ಯನನ್ನೂ ಮತ್ತು ಸಂಶಪ್ತಕಗಣಗಳನ್ನೂ ಆಕ್ರಮಣಿಸಿದನು.

09007031a ಗೌತಮಂ ಭೀಮಸೇನೋ ವೈ ಸೋಮಕಾಶ್ಚ ಮಹಾರಥಾಃ।
09007031c ಅಭ್ಯದ್ರವಂತ ರಾಜೇಂದ್ರ ಜಿಘಾಂಸಂತಃ ಪರಾನ್ಯುಧಿ।।

ರಾಜೇಂದ್ರ! ಭೀಮಸೇನ ಮತ್ತು ಮಹಾರಥ ಸೋಮಕರು ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸುತ್ತಾ ಗೌತಮ ಕೃಪನನ್ನು ಆಕ್ರಮಣಿಸಿದರು.

09007032a ಮಾದ್ರೀಪುತ್ರೌ ತು ಶಕುನಿಮುಲೂಕಂ ಚ ಮಹಾರಥೌ।
09007032c ಸಸೈನ್ಯೌ ಸಹಸೇನೌ ತಾವುಪತಸ್ಥತುರಾಹವೇ।।

ಮಹಾರಥ ಮಾದ್ರೀಪುತ್ರರಿಬ್ಬರೂ ಸೇನೆಗಳೊಂದಿಗೆ ಶಕುನಿ-ಉಲೂಕರನ್ನು ಅವರ ಸೇನೆಗಳೊಂದಿಗೆ ಯುದ್ಧದಲ್ಲಿ ಆಕ್ರಮಣಿಸಿದರು.

09007033a ತಥೈವಾಯುತಶೋ ಯೋಧಾಸ್ತಾವಕಾಃ ಪಾಂಡವಾನ್ರಣೇ।
09007033c ಅಭ್ಯದ್ರವಂತ ಸಂಕ್ರುದ್ಧಾ ವಿವಿಧಾಯುಧಪಾಣಯಃ।।

ಹಾಗೆಯೇ ವಿವಿಧ ಆಯುಧಗಳನ್ನು ಹಿಡಿದಿದ್ದ ನಿನ್ನ ಕಡೆಯ ಹತ್ತು ಸಾವಿರ ಯೋಧರು ರಣದಲ್ಲಿ ಪಾಂಡವರನ್ನು ಆಕ್ರಮಣಿಸಿದರು.”

09007034 ಧೃತರಾಷ್ಟ್ರ ಉವಾಚ 09007034a ಹತೇ ಭೀಷ್ಮೇ ಮಹೇಷ್ವಾಸೇ ದ್ರೋಣೇ ಕರ್ಣೇ ಮಹಾರಥೇ।
09007034c ಕುರುಷ್ವಲ್ಪಾವಶಿಷ್ಟೇಷು ಪಾಂಡವೇಷು ಚ ಸಮ್ಯುಗೇ।।

ಧೃತರಾಷ್ಟ್ರನು ಹೇಳಿದನು: “ಯುದ್ಧದಲ್ಲಿ ಮಹೇಷ್ವಾಸ ಭೀಷ್ಮ-ದ್ರೋಣರು ಮತ್ತು ಮಹಾರಥ ಕರ್ಣನು ಹತರಾಗಲು ಕುರುಗಳು ಮತ್ತು ಪಾಂಡವರಲ್ಲಿ ಸ್ವಲ್ಪವೇ ಸೈನ್ಯವು ಉಳಿದಿತ್ತು.

09007035a ಸುಸಂರಬ್ಧೇಷು ಪಾರ್ಥೇಷು ಪರಾಕ್ರಾಂತೇಷು ಸಂಜಯ।
09007035c ಮಾಮಕಾನಾಂ ಪರೇಷಾಂ ಚ ಕಿಂ ಶಿಷ್ಟಮಭವದ್ಬಲಂ।।

ಸಂಜಯ! ಪಾರ್ಥರು ಕೋಪಾವಿಷ್ಟರಾಗಿ ಆಕ್ರಮಣ ನಡೆಸುತ್ತಿರಲು ಆಗ ನನ್ನವರ ಕಡೆ ಮತ್ತು ಶತ್ರುಗಳ ಕಡೆ ಎಷ್ಟು ಸೇನೆಗಳು ಉಳಿದುಕೊಂಡಿದ್ದವು?”

09007036 ಸಂಜಯ ಉವಾಚ 09007036a ಯಥಾ ವಯಂ ಪರೇ ರಾಜನ್ಯುದ್ಧಾಯ ಸಮವಸ್ಥಿತಾಃ।
09007036c ಯಾವಚ್ಚಾಸೀದ್ಬಲಂ ಶಿಷ್ಟಂ ಸಂಗ್ರಾಮೇ ತನ್ನಿಬೋಧ ಮೇ।।

ಸಂಜಯನು ಹೇಳಿದನು: “ರಾಜನ್! ನಾವು ಮತ್ತು ಶತ್ರುಗಳು ಯುದ್ಧಕ್ಕೆ ಸಜ್ಜಾಗಿರುವಾಗ ಸಂಗ್ರಾಮದಲ್ಲಿ ಎಷ್ಟು ಸೇನೆಗಳಿದ್ದವು ಎನ್ನುವುದನ್ನು ನನ್ನಿಂದ ಕೇಳು!

09007037a ಏಕಾದಶ ಸಹಸ್ರಾಣಿ ರಥಾನಾಂ ಭರತರ್ಷಭ।
09007037c ದಶ ದಂತಿಸಹಸ್ರಾಣಿ ಸಪ್ತ ಚೈವ ಶತಾನಿ ಚ।।
09007038a ಪೂರ್ಣೇ ಶತಸಹಸ್ರೇ ದ್ವೇ ಹಯಾನಾಂ ಭರತರ್ಷಭ।
09007038c ನರಕೋಟ್ಯಸ್ತಥಾ24 ತಿಸ್ರೋ ಬಲಮೇತತ್ತವಾಭವತ್।।

ಭರತರ್ಷಭ! ನಿನ್ನ ಪಕ್ಷದಲ್ಲಿ ಹನ್ನೊಂದು ಸಾವಿರ ರಥಗಳೂ, ಹತ್ತು ಸಾವಿರದ ಏಳು ನೂರು ಆನೆಗಳೂ, ಎರಡು ಲಕ್ಷ ಕುದುರೆಗಳೂ ಮತ್ತು ಮೂರು ಕೋಟಿ ಪದಾತಿಸೈನಿಕರೂ ಉಳಿದುಕೊಂಡಿದ್ದರು.

09007039a ರಥಾನಾಂ ಷಟ್ಸಹಸ್ರಾಣಿ ಷಟ್ಸಹಸ್ರಾಶ್ಚ ಕುಂಜರಾಃ।
09007039c ದಶ ಚಾಶ್ವಸಹಸ್ರಾಣಿ ಪತ್ತಿಕೋಟೀ ಚ ಭಾರತ।।
09007040a ಏತದ್ಬಲಂ ಪಾಂಡವಾನಾಮಭವಚ್ಚೇಷಮಾಹವೇ।

ಭಾರತ! ಪಾಂಡವರ ಪಕ್ಷದಲ್ಲಿ ಆರು ಸಾವಿರ ರಥಗಳೂ, ಆರು ಸಾವಿರ ಆನೆಗಳೂ, ಹತ್ತು ಸಾವಿರ ಕುದುರೆಗಳೂ ಮತ್ತು ಎರಡು ಕೋಟಿ ಪದಾತಿಸೈನಿಕರೂ ಉಳಿದುಕೊಂಡಿದ್ದರು.

09007040c ಏತ ಏವ ಸಮಾಜಗ್ಮುರ್ಯುದ್ಧಾಯ ಭರತರ್ಷಭ।।
09007041a ಏವಂ ವಿಭಜ್ಯ ರಾಜೇಂದ್ರ ಮದ್ರರಾಜಮತೇ ಸ್ಥಿತಾಃ।
09007041c ಪಾಂಡವಾನ್ಪ್ರತ್ಯುದೀಯಾಮ ಜಯಗೃದ್ಧಾಃ ಪ್ರಮನ್ಯವಃ।।

ಭರತರ್ಷಭ! ಹೀಗೆ ಅವರು ಯುದ್ಧಕ್ಕೆ ಸೇರಿದ್ದರು. ರಾಜೇಂದ್ರ! ಈ ರೀತಿ ವಿಭಜನೆಗೊಂಡು ಮದ್ರರಾಜನ ಅಧೀನರಾಗಿದ್ದ ನಾವು ಜಯವನ್ನು ಬಯಸಿ ಅತ್ಯಂತ ಕುಪಿತರಾಗಿ ಪಾಂಡವರನ್ನು ಎದುರಿಸಿ ಯುದ್ಧಮಾಡಿದೆವು.

09007042a ತಥೈವ ಪಾಂಡವಾಃ ಶೂರಾಃ ಸಮರೇ ಜಿತಕಾಶಿನಃ।
09007042c ಉಪಯಾತಾ ನರವ್ಯಾಘ್ರಾಃ ಪಾಂಚಾಲಾಶ್ಚ ಯಶಸ್ವಿನಃ।।

ಹಾಗೆಯೇ ಜಯೋಲ್ಲಾಸಿತ ಶೂರ ಪಾಂಡವರು ಮತ್ತು ಯಶಸ್ವಿ ನರವ್ಯಾಘ್ರ ಪಾಂಚಾಲರು ಸಮರದಲ್ಲಿ ಮುಂದುವರೆದರು.

09007043a ಏವಮೇತೇ ಬಲೌಘೇನ ಪರಸ್ಪರವಧೈಷಿಣಃ।
09007043c ಉಪಯಾತಾ ನರವ್ಯಾಘ್ರಾಃ ಪೂರ್ವಾಂ ಸಂಧ್ಯಾಂ ಪ್ರತಿ ಪ್ರಭೋ।।

ಪ್ರಭೋ! ಈ ರೀತಿ ಸೇನೆಗಳೊಂದಿಗೆ ಪರಸ್ಪರರನ್ನು ವಧಿಸಲು ಇಚ್ಛಿಸಿ ನರವ್ಯಾಘ್ರರು ಆ ದಿನದ ಪ್ರಾತಃಸಂಧ್ಯಾಸಮಯದಲ್ಲಿ ಹೊರಟರು.

09007044a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾನಕಂ।
09007044c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ।।

ಆಗ ನಿನ್ನವರ ಮತ್ತು ಶತ್ರುಗಳ ನಡುವೆ ಪರಸ್ಪರರನ್ನು ಸಂಹರಿಸುವ ಭಯಾನಕ ಘೋರರೂಪೀ ಯುದ್ಧವು ಪ್ರಾರಂಭವಾಯಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ವ್ಯೂಹನಿರ್ಮಾಣೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ವ್ಯೂಹನಿರ್ಮಾಣ ಎನ್ನುವ ಏಳನೇ ಅಧ್ಯಾಯವು.