ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 4
ಸಾರ
09004001 ಸಂಜಯ ಉವಾಚ 09004001a ಏವಮುಕ್ತಸ್ತತೋ ರಾಜಾ ಗೌತಮೇನ ಯಶಸ್ವಿನಾ।
09004001c ನಿಃಶ್ವಸ್ಯ ದೀರ್ಘಮುಷ್ಣಂ ಚ ತೂಷ್ಣೀಮಾಸೀದ್ವಿಶಾಂ ಪತೇ।।
ಸಂಜಯನು ಹೇಳಿದನು: “ವಿಶಾಂಪತೇ! ಯಶಸ್ವಿ ಗೌತಮನು ಹೀಗೆ ಹೇಳಲು ರಾಜ ದುರ್ಯೋಧನನು ದೀರ್ಘವಾಗಿ ಬಿಸಿಬಿಸಿ ನಿಟ್ಟುಸಿರು ಬಿಡುತ್ತಾ ಸುಮ್ಮನಿದ್ದನು.
09004002a ತತೋ ಮುಹೂರ್ತಂ ಸ ಧ್ಯಾತ್ವಾ ಧಾರ್ತರಾಷ್ಟ್ರೋ ಮಹಾಮನಾಃ।
09004002c ಕೃಪಂ ಶಾರದ್ವತಂ ವಾಕ್ಯಮಿತ್ಯುವಾಚ ಪರಂತಪಃ।।
ಸ್ವಲ್ಪಕಾಲ ಯೋಚಿಸಿ ಮಹಾಮನಸ್ವಿ ಪರಂತಪ ಧಾರ್ತರಾಷ್ಟ್ರನು ಶಾರದ್ವತ ಕೃಪನಿಗೆ ಇಂತೆಂದನು:
09004003a ಯತ್ಕಿಂ ಚಿತ್ಸುಹೃದಾ ವಾಚ್ಯಂ ತತ್ಸರ್ವಂ ಶ್ರಾವಿತೋ ಹ್ಯಹಂ।
09004003c ಕೃತಂ ಚ ಭವತಾ ಸರ್ವಂ ಪ್ರಾಣಾನ್ ಸಂತ್ಯಜ್ಯ ಯುಧ್ಯತಾ।।
“ಸುಹೃದಯರು ಏನೆಲ್ಲ ಹೇಳಬೇಕೋ ಅವೆಲ್ಲವನ್ನೂ ನೀವು ನನಗೆ ಹೇಳಿದ್ದೀರಿ. ನಿಮ್ಮ ಪ್ರಾಣ ಸರ್ವಸ್ವವನ್ನೂ ತ್ಯಜಿಸಿ ಯುದ್ಧಮಾಡುತ್ತಿರುವಿರಿ!
09004004a ಗಾಹಮಾನಮನೀಕಾನಿ ಯುಧ್ಯಮಾನಂ ಮಹಾರಥೈಃ।
09004004c ಪಾಂಡವೈರತಿತೇಜೋಭಿರ್ಲೋಕಸ್ತ್ವಾಮನುದೃಷ್ಟವಾನ್।।
ಅತಿತೇಜಸ್ವಿಗಳಾದ ಮಹಾರಥ ಪಾಂಡವರ ಸೇನೆಗಳಲ್ಲಿ ನುಗ್ಗಿ ಯುದ್ಧಮಾಡುತ್ತಿರುವ ನಿಮ್ಮನ್ನು ಲೋಕವೇ ಅವಲೋಕಿಸಿದೆ.
09004005a ಸುಹೃದಾ ಯದಿದಂ ವಾಚ್ಯಂ ಭವತಾ ಶ್ರಾವಿತೋ ಹ್ಯಹಂ।
09004005c ನ ಮಾಂ ಪ್ರೀಣಾತಿ ತತ್ಸರ್ವಂ ಮುಮೂರ್ಷೋರಿವ ಭೇಷಜಂ।।
ಆದರೆ ಸುಹೃದತೆಯಿಂದ ನೀವು ನನಗೆ ಹೇಳಿದ ಮಾತುಗಳು ಸಾಯುವವನಿಗೆ ಔಷಧಿಯು ಹೇಗೋ ಹಾಗೆ ಪ್ರಿಯವೆನಿಸುತ್ತಿಲ್ಲ.
09004006a ಹೇತುಕಾರಣಸಂಯುಕ್ತಂ ಹಿತಂ ವಚನಮುತ್ತಮಂ।
09004006c ಉಚ್ಯಮಾನಂ ಮಹಾಬಾಹೋ ನ ಮೇ ವಿಪ್ರಾಗ್ರ್ಯ ರೋಚತೇ।।
ವಿಪ್ರಾಗ್ರ್ಯ! ನೀವು ಯುಕ್ತಿ ಮತ್ತು ಕಾರಣಗಳಿಂದ ಸುಸಂಗತ- ಹಿತಕರ-ಉತ್ತಮ ಮಾತುಗಳನ್ನೇ ಆಡಿರುವಿರಿ. ಮಹಾಬಾಹೋ! ಆದರೆ ಅವು ನನಗೆ ರುಚಿಸುತ್ತಿಲ್ಲ.
09004007a ರಾಜ್ಯಾದ್ವಿನಿಕೃತೋಽಸ್ಮಾಭಿಃ ಕಥಂ ಸೋಽಸ್ಮಾಸು ವಿಶ್ವಸೇತ್।
09004007c ಅಕ್ಷದ್ಯೂತೇ ಚ ನೃಪತಿರ್ಜಿತೋಽಸ್ಮಾಭಿರ್ಮಹಾಧನಃ।
09004007e ಸ ಕಥಂ ಮಮ ವಾಕ್ಯಾನಿ ಶ್ರದ್ದಧ್ಯಾದ್ಭೂಯ ಏವ ತು।।
ನಮ್ಮಿಂದಲೇ ರಾಜ್ಯದಿಂದ ವಂಚಿತನಾದ ಅವನು ನಮ್ಮೊಡನೆ ಹೇಗೆ ವಿಶ್ವಾಸವಿಡುತ್ತಾನೆ? ಅಕ್ಷದ್ಯೂತದಲ್ಲಿ ಮಹಾಧವನ್ನು ಗೆದ್ದ ನಮ್ಮ ಮಾತುಗಳಲ್ಲಿ ಪುನಃ ಆ ನೃಪತಿಯು ಹೇಗೆ ಶ್ರದ್ಧೆಯಿಡುತ್ತಾನೆ?
09004008a ತಥಾ ದೌತ್ಯೇನ ಸಂಪ್ರಾಪ್ತಃ ಕೃಷ್ಣಃ ಪಾರ್ಥಹಿತೇ ರತಃ।
09004008c ಪ್ರಲಬ್ಧಶ್ಚ ಹೃಷೀಕೇಶಸ್ತಚ್ಚ ಕರ್ಮ ವಿರೋಧಿತಂ।
09004008e ಸ ಚ ಮೇ ವಚನಂ ಬ್ರಹ್ಮನ್ಕಥಮೇವಾಭಿಮಂಸ್ಯತೇ।।
ಬ್ರಹ್ಮನ್! ಹಾಗೆಯೇ ದ್ಯೂತದ ಪರಿಣಾಮವಾಗಿ ಪಾರ್ಥಹಿತರತನಾಗಿರುವ ಹೃಷೀಕೇಶನು ಸಂಧಿಗಾಗಿ ಬಂದಾಗ ಅವನನ್ನು ನಾವು ವಿರೋಧಿಸಿದೆವು. ಈಗ ಅವನು ನಮ್ಮ ಮಾತನ್ನು ಹೇಗೆ ಮನ್ನಿಸುತ್ತಾನೆ?
09004009a ವಿಲಲಾಪ ಹಿ ಯತ್ಕೃಷ್ಣಾ ಸಭಾಮಧ್ಯೇ ಸಮೇಯುಷೀ।
09004009c ನ ತನ್ಮರ್ಷಯತೇ ಕೃಷ್ಣೋ ನ ರಾಜ್ಯಹರಣಂ ತಥಾ।।
ಸಭಾಮಧ್ಯದಲ್ಲಿ ಕೃಷ್ಣೆಯನ್ನು ಎಳೆತಂದಾಗ ಅವಳು ವಿಲಪಿಸಿದುದನ್ನು ಮತ್ತು ರಾಜ್ಯಹರಣವನ್ನು ಕೃಷ್ಣನು ಎಂದಿಗೂ ಸಹಿಸುವವನಲ್ಲ.
09004010a ಏಕಪ್ರಾಣಾವುಭೌ ಕೃಷ್ಣಾವನ್ಯೋನ್ಯಂ ಪ್ರತಿ ಸಂಹತೌ।
09004010c ಪುರಾ ಯಚ್ಛೃತಮೇವಾಸೀದದ್ಯ ಪಶ್ಯಾಮಿ ತತ್ಪ್ರಭೋ।।
ಪ್ರಭೋ! ಕೃಷ್ಣರಿಬ್ಬರ ಪ್ರಾಣವೂ ಒಂದೇ. ಅವರು ಅನ್ಯೋನ್ಯರನ್ನು ಆಶ್ರಯಿಸಿರುವರು ಎಂದು ಹೇಳಿದುದನ್ನು ನಾನು ಹಿಂದೆ ಕೇಳಿದ್ದೆನು. ಆದರೆ ಅದನ್ನು ಇಂದು ನಾನು ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ.
09004011a ಸ್ವಸ್ರೀಯಂ ಚ ಹತಂ ಶ್ರುತ್ವಾ ದುಃಖಂ ಸ್ವಪಿತಿ ಕೇಶವಃ।
09004011c ಕೃತಾಗಸೋ ವಯಂ ತಸ್ಯ ಸ ಮದರ್ಥಂ ಕಥಂ ಕ್ಷಮೇತ್।।
ಅವನ ಸೋದರಳಿಯನು ಹತನಾದುದನ್ನು ಕೇಳಿ ಕೇಶವನು ದುಃಖದಿಂದ ನಿದ್ದೆಮಾಡುತ್ತಿಲ್ಲ. ಅವನ ಮೇಲೆ ಈ ಅಪರಾಧವೆಸಗಿದ ನಮ್ಮನ್ನು ಅವನು ಹೇಗೆ ತಾನೇ ಕ್ಷಮಿಸಿಯಾನು?
09004012a ಅಭಿಮನ್ಯೋರ್ವಿನಾಶೇನ ನ ಶರ್ಮ ಲಭತೇಽರ್ಜುನಃ।
09004012c ಸ ಕಥಂ ಮದ್ಧಿತೇ ಯತ್ನಂ ಪ್ರಕರಿಷ್ಯತಿ ಯಾಚಿತಃ।।
ಅಭಿಮನ್ಯುವಿನ ವಿನಾಶದಿಂದ ಅರ್ಜುನನಿಗೆ ಸುಖವೆಂಬುದೇ ಇಲ್ಲವಾಗಿದೆ. ಪ್ರಾರ್ಥಿಸಿದರೂ ಅವನು ನನ್ನ ಹಿತವನ್ನು ಏಕೆ ಪ್ರಯತ್ನಿಸುತ್ತಾನೆ?
09004013a ಮಧ್ಯಮಃ ಪಾಂಡವಸ್ತೀಕ್ಷ್ಣೋ ಭೀಮಸೇನೋ ಮಹಾಬಲಃ।
09004013c ಪ್ರತಿಜ್ಞಾತಂ ಚ ತೇನೋಗ್ರಂ ಸ ಭಜ್ಯೇತ ನ ಸಂನಮೇತ್।।
ಮಧ್ಯಮ ಪಾಂಡವ ತೀಕ್ಷ್ಣ ಮಹಾಬಲ ಭೀಮಸೇನನು ಉಗ್ರ ಪ್ರತಿಜ್ಞೆಯನ್ನು ಮಾಡಿರುವನು. ಅವನು ಭಗ್ನನಾಗಬಲ್ಲನೇ ಹೊರತು ಬಾಗುವವನಲ್ಲ!
09004014a ಉಭೌ ತೌ ಬದ್ಧನಿಸ್ತ್ರಿಂಶಾವುಭೌ ಚಾಬದ್ಧಕಂಕಟೌ।
09004014c ಕೃತವೈರಾವುಭೌ ವೀರೌ ಯಮಾವಪಿ ಯಮೋಪಮೌ।।
ಕವಚಗಳನ್ನು ತೊಟ್ಟು ಖಡ್ಗಗಳನ್ನು ಸೊಂಟಗಳಿಗೆ ಕಟ್ಟಿಕೊಂಡಿರುವ ಯಮರೂಪದ ವೀರ ಯಮಳರು ಕೂಡ ನಮಗೆ ಬದ್ಧವೈರಿಗಳು.
09004015a ಧೃಷ್ಟದ್ಯುಮ್ನಃ ಶಿಖಂಡೀ ಚ ಕೃತವೈರೌ ಮಯಾ ಸಹ।
09004015c ತೌ ಕಥಂ ಮದ್ಧಿತೇ ಯತ್ನಂ ಪ್ರಕುರ್ಯಾತಾಂ ದ್ವಿಜೋತ್ತಮ।।
ದ್ವಿಜೋತ್ತಮ! ಧೃಷ್ಟದ್ಯುಮ್ನ ಮತ್ತು ಶಿಖಂಡಿಯರು ಸಹ ನನ್ನೊಡನೆ ವೈರವನ್ನು ಕಟ್ಟಿಕೊಂಡಿರುವರು. ಅವರಿಬ್ಬರೂ ನನ್ನ ಹಿತಕ್ಕಾಗಿ ಏಕೆ ಪ್ರಯತ್ನಿಸುವರು?
09004016a ದುಃಶಾಸನೇನ ಯತ್ಕೃಷ್ಣಾ ಏಕವಸ್ತ್ರಾ ರಜಸ್ವಲಾ।
09004016c ಪರಿಕ್ಲಿಷ್ಟಾ ಸಭಾಮಧ್ಯೇ ಸರ್ವಲೋಕಸ್ಯ ಪಶ್ಯತಃ।।
09004017a ತಥಾ ವಿವಸನಾಂ ದೀನಾಂ ಸ್ಮರಂತ್ಯದ್ಯಾಪಿ ಪಾಂಡವಾಃ।
09004017c ನ ನಿವಾರಯಿತುಂ ಶಕ್ಯಾಃ ಸಂಗ್ರಾಮಾತ್ತೇ ಪರಂತಪಾಃ।।
ಏಕವಸ್ತ್ರಳೂ ರಜಸ್ವಲೆಯೂ ಆಗಿದ್ದ ಕೃಷ್ಣೆಯನ್ನು ದುಃಶಾಸನನು ಸಭಾಮಧ್ಯದಲ್ಲಿ ಸರ್ವರೂ ನೋಡುತ್ತಿರುವಂತೆಯೇ ಕಾಡಿಸಿದ್ದು, ಹಾಗೆಯೇ ಆ ದೀನಳಾದವಳನ್ನು ವಸ್ತ್ರಹೀನಳನ್ನಾಗಿ ಮಾಡಿದುದು ಇವುಗಳನ್ನು ಸ್ಮರಿಸಿಕೊಂಡಿರುವ ಪರಂತಪ ಪಾಂಡವರು ಈಗ ಸಂಗ್ರಾಮವನ್ನು ನಿಲ್ಲಿಸಲು ಸಾಧ್ಯವಿಲ್ಲ.
09004018a ಯದಾ ಚ ದ್ರೌಪದೀ ಕೃಷ್ಣಾ ಮದ್ವಿನಾಶಾಯ ದುಃಖಿತಾ।
09004018c ಉಗ್ರಂ ತೇಪೇ ತಪಃ ಕೃಷ್ಣಾ ಭರ್ತೄಣಾಮರ್ಥಸಿದ್ಧಯೇ।
09004018e ಸ್ಥಂಡಿಲೇ ನಿತ್ಯದಾ ಶೇತೇ ಯಾವದ್ವೈರಸ್ಯ ಯಾತನಾ।।
ದುಃಖಿತಳಾದ ದ್ರೌಪದೀ ಕೃಷ್ಣೆಯು ತನ್ನ ಪತಿಯಂದಿರ ಅರ್ಥಸಿದ್ಧಿಗಾಗಿ ಉಗ್ರತಪಸ್ಸನ್ನು ತಪಿಸುತ್ತಿದ್ದಾಳೆ. ವೈರದ ಯಾತನೆಯಿರುವವರೆಗೆ ಅವಳು ನಿತ್ಯವೂ ನೆಲದ ಮೇಲೆಯೇ ಮಲಗುತ್ತಿದ್ದಾಳೆ.
09004019a ನಿಕ್ಷಿಪ್ಯ ಮಾನಂ ದರ್ಪಂ ಚ ವಾಸುದೇವಸಹೋದರಾ।
09004019c ಕೃಷ್ಣಾಯಾಃ ಪ್ರೇಷ್ಯವದ್ಭೂತ್ವಾ ಶುಶ್ರೂಷಾಂ ಕುರುತೇ ಸದಾ।।
ಮಾನ ಮತ್ತು ದರ್ಪಗಳನ್ನು ಬದಿಗೊತ್ತಿ ವಾಸುದೇವನ ಸಹೋದರಿ ಸುಭದ್ರೆಯು ಕೃಷ್ಣೆಯ ದಾಸಿಯಾಗಿ ಸದಾ ಅವಳ ಶುಶ್ರೂಷೆಯನ್ನು ಮಾಡುತ್ತಿದ್ದಾಳೆ.
09004020a ಇತಿ ಸರ್ವಂ ಸಮುನ್ನದ್ಧಂ ನ ನಿರ್ವಾತಿ ಕಥಂ ಚನ।
09004020c ಅಭಿಮನ್ಯೋರ್ವಿನಾಶೇನ ಸ ಸಂಧೇಯಃ ಕಥಂ ಮಯಾ।।
ಹೀಗೆ ಎಲ್ಲ ಪ್ರಕಾರಗಳಿಂದ ವೃದ್ಧಿಯಾಗುತ್ತಿರುವ ವೈರವನ್ನು ಎಂದೂ ನಿವಾರಿಸಲು ಸಾಧ್ಯವಿಲ್ಲ. ಅಭಿಮನ್ಯುವಿನ ವಿನಾಶ ಕಾರಣನಾದ ನನ್ನೊಂದಿಗೆ ಅವರು ಹೇಗೆ ತಾನೇ ಸಂಧಿಮಾಡಿಕೊಂಡಾರು?
09004021a ಕಥಂ ಚ ನಾಮ ಭುಕ್ತ್ವೇಮಾಂ ಪೃಥಿವೀಂ ಸಾಗರಾಂಬರಾಂ।
09004021c ಪಾಂಡವಾನಾಂ ಪ್ರಸಾದೇನ ಭುಂಜೀಯಾಂ ರಾಜ್ಯಮಲ್ಪಕಂ।।
ಪಾಂಡವರ ಪ್ರಸಾದವೆಂದೆನಿಸಿಕೊಳ್ಳುವ ಸಾಗರವೇ ವಸ್ತ್ರಪ್ರಾಯವಾಗಿರುವ ಈ ಇಡೀ ಭೂಮಿಯನ್ನು ನಾನು ಅಲ್ಪಕ ರಾಜನಂತೆ ಹೇಗೆ ತಾನೇ ಭೋಗಿಸಲಿ?
09004022a ಉಪರ್ಯುಪರಿ ರಾಜ್ಞಾಂ ವೈ ಜ್ವಲಿತೋ ಭಾಸ್ಕರೋ ಯಥಾ।
09004022c ಯುಧಿಷ್ಠಿರಂ ಕಥಂ ಪಶ್ಚಾದನುಯಾಸ್ಯಾಮಿ ದಾಸವತ್।।
ರಾಜರನ್ನು ಮೆಟ್ಟಿ ಭಾಸ್ಕರನಂತೆ ಪ್ರಜ್ವಲಿಸುತ್ತಿರುವ ನಾನು ಹೇಗೆ ತಾನೇ ಯುಧಿಷ್ಠಿರನ ಹಿಂದೆ ಓರ್ವ ದಾಸನಂತೆ ಹೋಗುತ್ತಿರಬಲ್ಲೆ?
09004023a ಕಥಂ ಭುಕ್ತ್ವಾ ಸ್ವಯಂ ಭೋಗಾನ್ದತ್ತ್ವಾ ದಾಯಾಂಶ್ಚ ಪುಷ್ಕಲಾನ್।
09004023c ಕೃಪಣಂ ವರ್ತಯಿಷ್ಯಾಮಿ ಕೃಪಣೈಃ ಸಹ ಜೀವಿಕಾಂ।।
ಸ್ವಯಂ ನಾನು ಭೋಗಗಳನ್ನು ಭೋಗಿಸಿ ಪುಷ್ಕಲ ದಾನಗಳನ್ನು ನೀಡಿ ದೈನ್ಯನಾಗಿ ದೀನತೆಯಿಂದ ಹೇಗೆ ಜೀವಿಸಬಲ್ಲೆ?
09004024a ನಾಭ್ಯಸೂಯಾಮಿ ತೇ ವಾಕ್ಯಮುಕ್ತಂ ಸ್ನಿಗ್ಧಂ ಹಿತಂ ತ್ವಯಾ।
09004024c ನ ತು ಸಂಧಿಮಹಂ ಮನ್ಯೇ ಪ್ರಾಪ್ತಕಾಲಂ ಕಥಂ ಚನ।।
ನಿನ್ನ ಸ್ನೇಹಪೂರಕ-ಹಿತಕರ ಮಾತುಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ನನಗೆ ಸಂಧಿಮಾಡಿಕೊಳ್ಳುವ ಕಾಲವೊದಗಿದೆ ಎನ್ನುವುದನ್ನು ಮಾತ್ರ ಸರ್ವಥಾ ಒಪ್ಪಿಕೊಳ್ಳುವುದಿಲ್ಲ.
09004025a ಸುನೀತಮನುಪಶ್ಯಾಮಿ ಸುಯುದ್ಧೇನ ಪರಂತಪ।
09004025c ನಾಯಂ ಕ್ಲೀಬಯಿತುಂ ಕಾಲಃ ಸಮ್ಯೋದ್ಧುಂ ಕಾಲ ಏವ ನಃ।।
ಪರಂತಪ! ಉತ್ತಮ ನೀತಿಯನ್ನನುಸರಿಸಿ ಉತ್ತಮವಾಗಿ ಯುದ್ಧಮಾಡಬೇಕೆಂದು ನನಗೆ ತೋರುತ್ತದೆ. ದುರ್ಬಲರಾಗಿರುವ ಕಾಲವಿದಲ್ಲ. ನಾವು ಇನ್ನೂ ಸರಿಯಾಗಿ ಯುದ್ಧಮಾಡುವ ಕಾಲವಿದು.
09004026a ಇಷ್ಟಂ ಮೇ ಬಹುಭಿರ್ಯಜ್ಞೈರ್ದತ್ತಾ ವಿಪ್ರೇಷು ದಕ್ಷಿಣಾಃ।
09004026c ಪ್ರಾಪ್ತಾಃ ಕ್ರಮಶ್ರುತಾ13 ವೇದಾಃ ಶತ್ರೂಣಾಂ ಮೂರ್ಧ್ನಿ ಚ ಸ್ಥಿತಂ।।
ನಾನು ವಿಪ್ರರಿಗೆ ದಕ್ಷಿಣೆಗಳನ್ನಿತ್ತು ಅನೇಕ ಇಷ್ಟಿ-ಯಜ್ಞಗಳನ್ನು ಮಾಡಿದ್ದೇನೆ. ವೇದ-ಶ್ರುತಿಗಳನ್ನು ಕಲಿತುಕೊಂಡಿದ್ದೇನೆ. ಶತ್ರುಗಳ ತಲೆಮೆಟ್ಟಿ ನಿಂತಿದ್ದೇನೆ.
09004027a ಭೃತ್ಯಾ ಮೇ ಸುಭೃತಾಸ್ತಾತ ದೀನಶ್ಚಾಭ್ಯುದ್ಧೃತೋ ಜನಃ।
1409004027c ಯಾತಾನಿ15 ಪರರಾಷ್ಟ್ರಾಣಿ ಸ್ವರಾಷ್ಟ್ರಮನುಪಾಲಿತಂ।।
ಅಯ್ಯಾ! ಭೃತ್ಯರ ಪಾಲನೆ-ಪೋಷಣೆಗಳನ್ನು ಮಾಡುತ್ತಿದ್ದೇನೆ. ದೀನ ದಲಿತರನ್ನು ಉದ್ಧರಿಸಿದ್ದೇನೆ. ಪರರಾಷ್ಟ್ರಗಳನ್ನೂ ನನ್ನ ರಾಷ್ಟ್ರಗಳಲ್ಲಿ ಸೇರಿಸಿಕೊಂಡು ಪರಿಪಾಲಿಸುತ್ತಿದ್ದೇನೆ.
09004028a ಭುಕ್ತಾಶ್ಚ ವಿವಿಧಾ ಭೋಗಾಸ್ತ್ರಿವರ್ಗಃ ಸೇವಿತೋ ಮಯಾ।
09004028c ಪಿತೄಣಾಂ ಗತಮಾನೃಣ್ಯಂ ಕ್ಷತ್ರಧರ್ಮಸ್ಯ ಚೋಭಯೋಃ।।
ವಿವಿಧ ಭೋಗಗಳನ್ನು ಅನುಭವಿಸಿದ್ದೇನೆ. ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳನ್ನೂ ಸೇವಿಸಿದ್ದೇನೆ. ಕ್ಷತ್ರಿಯ ಧರ್ಮ ಮತ್ತು ಪಿತೃಗಳ ಋಣಗಳೆರಡನ್ನೂ ತೀರಿಸಿದ್ದೇನೆ.
09004029a ನ ಧ್ರುವಂ ಸುಖಮಸ್ತೀಹ ಕುತೋ ರಾಜ್ಯಂ ಕುತೋ ಯಶಃ।
09004029c ಇಹ ಕೀರ್ತಿರ್ವಿಧಾತವ್ಯಾ ಸಾ ಚ ಯುದ್ಧೇನ ನಾನ್ಯಥಾ।।
ಸುಖವೇ ಶಾಶ್ವತವಿಲ್ಲದಿರುವಾಗ ರಾಜ್ಯವಾಗಲೀ ಯಶಸ್ಸಾಗಲೀ ಹೇಗೆ ತಾನೇ ಶಾಶ್ವತವಾಗಿರುವವು? ಇಲ್ಲಿ ಕೀರ್ತಿಯನ್ನು ಪಡೆಯಬೇಕೆಂದರೆ ಯುದ್ಧದಿಂದ ಮಾತ್ರವೇ ಹೊರತಾಗಿ ಅನ್ಯ ಕಾರ್ಯಗಳಿಂದಲ್ಲ!
09004030a ಗೃಹೇ ಯತ್ ಕ್ಷತ್ರಿಯಸ್ಯಾಪಿ ನಿಧನಂ ತದ್ವಿಗರ್ಹಿತಂ।
09004030c ಅಧರ್ಮಃ ಸುಮಹಾನೇಷ ಯಚ್ಚಯ್ಯಾಮರಣಂ ಗೃಹೇ।।
ಮನೆಯಲ್ಲಿ ನಿಧನಹೊಂದಿದ ಕ್ಷತ್ರಿಯನು ಅತಿನಿಂದನೀಯನು. ಅದರನ್ನೂ ಮನೆಯಲ್ಲಿ ಹಾಸಿಗೆಯ ಮೇಲೆ ಮರಣಹೊಂದಿದರೆ ಮಹಾ ಅಧರ್ಮವೆನಿಸಿಕೊಳ್ಳುತ್ತದೆ.
09004031a ಅರಣ್ಯೇ ಯೋ ವಿಮುಂಚೇತ ಸಂಗ್ರಾಮೇ ವಾ ತನುಂ ನರಃ।
09004031c ಕ್ರತೂನಾಹೃತ್ಯ ಮಹತೋ ಮಹಿಮಾನಂ ಸ ಗಚ್ಚತಿ।।
ಮಹಾ ಕ್ರತುಗಳನ್ನು ಮಾಡಿ ಅರಣ್ಯದಲ್ಲಿ ಅಥವಾ ಸಂಗ್ರಾಮದಲ್ಲಿ ಶರೀರತ್ಯಾಗ ಮಾಡುವ ಕ್ಷತ್ರಿಯನು ಮಹಾ ಮಹಿಮೆಯನ್ನು ಪಡೆಯುತ್ತಾನೆ.
09004032a ಕೃಪಣಂ ವಿಲಪನ್ನಾರ್ತೋ ಜರಯಾಭಿಪರಿಪ್ಲುತಃ।
09004032c ಮ್ರಿಯತೇ ರುದತಾಂ ಮಧ್ಯೇ ಜ್ಞಾತೀನಾಂ ನ ಸ ಪೂರುಷಃ।।
ಮುಪ್ಪಿನಿಂದ ಶಿಥಿಲಹೊಂದಿದ ಶರೀರವುಳ್ಳವನಾಗಿ ರೋಗಪೀಡಿತನಾಗಿ ಆರ್ತನಾಗಿ ವಿಲಪಿಸುತ್ತಾ ಗೋಳಾಡುತ್ತಾ ಜ್ಞಾತಿಗಳ ಮಧ್ಯದಲ್ಲಿ ಮರಣಹೊಂದುವವನು ಖಂಡಿತವಾಗಿಯೂ ಪುರುಷನೇ ಅಲ್ಲ!
09004033a ತ್ಯಕ್ತ್ವಾ ತು ವಿವಿಧಾನ್ಭೋಗಾನ್ಪ್ರಾಪ್ತಾನಾಂ ಪರಮಾಂ ಗತಿಂ।
09004033c ಅಪೀದಾನೀಂ ಸುಯುದ್ಧೇನ ಗಚ್ಚೇಯಂ ಸತ್ಸಲೋಕತಾಂ।।
ವಿವಿಧ ಭೋಗಗಳನ್ನು ಪರಿತ್ಯಜಿಸಿದವರಿಗೆ ಯಾವ ಪರಮ ಗತಿಯು ದೊರಕುವುದೋ ಆ ಉತ್ತಮ ಲೋಕಗಳಿಗೆ ನಾನು ಇದೋ ಈ ಉತ್ತಮ ಯುದ್ಧದಿಂದ ಹೋಗುತ್ತೇನೆ!
09004034a ಶೂರಾಣಾಮಾರ್ಯವೃತ್ತಾನಾಂ ಸಂಗ್ರಾಮೇಷ್ವನಿವರ್ತಿನಾಂ।
09004034c ಧೀಮತಾಂ ಸತ್ಯಸಂಧಾನಾಂ ಸರ್ವೇಷಾಂ ಕ್ರತುಯಾಜಿನಾಂ।।
09004035a ಶಸ್ತ್ರಾವಭೃಥಮಾಪ್ತಾನಾಂ ಧ್ರುವಂ ವಾಸಸ್ತ್ರಿವಿಷ್ಟಪೇ।
ಶೂರರಿಗೆ, ಉತ್ತಮ ನಡತೆಯುಳ್ಳವರಿಗೆ, ಸಂಗ್ರಾಮದಿಂದ ಹಿಂದಿರುಗದವರಿಗೆ, ಧೀಮತ ಸತ್ಯಸಂಧರಿಗೆ, ಕ್ರತು-ಯಜ್ಞಗಳನ್ನು ನಡೆಸಿದವರಿಗೆ, ಶಸ್ತ್ರಗಳಿಂದ ಅವಭೃತಸ್ನಾನ ಮಾಡಿ ಪೂತರಾದವರಿಗೆ – ಇವರೆಲ್ಲರಿಗೂ ಸ್ವರ್ಗವಾಸವು ನಿಶ್ಚಿತವಾಗಿದೆ.
09004035c ಮುದಾ ನೂನಂ ಪ್ರಪಶ್ಯಂತಿ ಶುಭ್ರಾ ಹ್ಯಪ್ಸರಸಾಂ ಗಣಾಃ।।
09004036a ಪಶ್ಯಂತಿ ನೂನಂ ಪಿತರಃ ಪೂಜಿತಾನ್ಶಕ್ರಸಂಸದಿ।
09004036c ಅಪ್ಸರೋಭಿಃ ಪರಿವೃತಾನ್ಮೋದಮಾನಾಂಸ್ತ್ರಿವಿಷ್ಟಪೇ।।
ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದವರನ್ನು ಅಪ್ಸರೆಯರು ಪರಮ ಸಂತೋಷದಿಂದ ಸ್ವಾಗತಿಸುತ್ತಾರೆ. ಶಕ್ರಸಭೆಯಲ್ಲಿ ಅಪ್ಸರೆಯರಿಂದ ಪರಿವೃತರಾಗಿ ಸ್ವರ್ಗದಲ್ಲಿ ಗೌರವಿಸಲ್ಪಡುವವರನ್ನು ಪಿತೃಗಳು ಕೂಡ ನೋಡಿ ಸಂತೋಷಪಡುತ್ತಾರೆ.
09004037a ಪಂಥಾನಮಮರೈರ್ಯಾತಂ ಶೂರೈಶ್ಚೈವಾನಿವರ್ತಿಭಿಃ।
09004037c ಅಪಿ ತೈಃ ಸಂಗತಂ ಮಾರ್ಗಂ ವಯಮಪ್ಯಾರುಹೇಮಹಿ।।
09004038a ಪಿತಾಮಹೇನ ವೃದ್ಧೇನ ತಥಾಚಾರ್ಯೇಣ ಧೀಮತಾ।
09004038c ಜಯದ್ರಥೇನ ಕರ್ಣೇನ ತಥಾ ದುಃಶಾಸನೇನ ಚ।।
ಯುದ್ಧದಿಂದ ಹಿಂದಿರುಗದ ಶೂರರು ಹೋಗುವ ದಾರಿಯಲ್ಲಿಯೇ ಹೋದರೆ ನಾವೂ ಕೂಡ ವೃದ್ಧ ಪಿತಾಮಹ ಭೀಷ್ಮ, ಧೀಮಂತ ಆಚಾರ್ಯ, ಜಯದ್ರಥ, ಕರ್ಣ ಮತ್ತು ದುಃಶಾಸನರು ಹೋಗಿರುವ ಪುಣ್ಯ ಲೋಕಗಳಿಗೆ ಹೋಗುತ್ತೇವೆ.
09004039a ಘಟಮಾನಾ ಮದರ್ಥೇಽಸ್ಮಿನ್ ಹತಾಃ ಶೂರಾ ಜನಾಧಿಪಾಃ।
09004039c ಶೇರತೇ ಲೋಹಿತಾಕ್ತಾಂಗಾಃ ಪೃಥಿವ್ಯಾಂ ಶರವಿಕ್ಷತಾಃ।।
ನನಗಾಗಿ ಸಂಘಟಿತರಾಗಿ ಬಂದಿರುವ ಶೂರ ಜನಾಧಿಪರು ಬಾಣಗಳಿಂದ ಗಾಯಗೊಂಡು ಅಂಗಗಳು ರಕ್ತದಿಂದ ತೋಯ್ದುಹೋಗಿ ರಣಭೂಮಿಯ ಮೇಲೆ ಮಲಗಿದ್ದಾರೆ.
09004040a ಉತ್ತಮಾಸ್ತ್ರವಿದಃ ಶೂರಾ ಯಥೋಕ್ತಕ್ರತುಯಾಜಿನಃ।
09004040c ತ್ಯಕ್ತ್ವಾ ಪ್ರಾಣಾನ್ಯಥಾನ್ಯಾಯಮಿಂದ್ರಸದ್ಮಸು ಧಿಷ್ಠಿತಾಃ।।
ಉತ್ತಮಾಸ್ತ್ರಗಳನ್ನು ತಿಳಿದಿದ್ದ ಶೂರರು ಯಥೋಕ್ತವಾಗಿ ಕ್ರತುಗಳನ್ನು ಯಾಜಿಸಿ ಯಥಾನ್ಯಾಯವಾಗಿ ಪ್ರಾಣಗಳನ್ನು ತೊರೆದು ಇಂದ್ರಲೋಕದಲ್ಲಿ ಆಶ್ರಯಪಡೆದಿದ್ದಾರೆ.
09004041a ತೈಸ್ತ್ವಯಂ ರಚಿತಃ ಪಂಥಾ ದುರ್ಗಮೋ ಹಿ ಪುನರ್ಭವೇತ್।
09004041c ಸಂಪತದ್ಭಿರ್ಮಹಾವೇಗೈರಿತೋ ಯಾದ್ಭಿಶ್ಚ ಸದ್ಗತಿಂ।।
ಮಹಾರಭಸದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಮಡಿದು ಸದ್ಗತಿಯನ್ನು ಪಡೆದಿರುವವರು ನಿರ್ಮಿಸಿದ ಈ ಮಾರ್ಗವು ಸುಗಮವಾಗಿದೆ. ಇಂತಹ ಮಾರ್ಗವು ಪುನಃ ದೊರೆಯದೇ ಇರಬಹುದು.
09004042a ಯೇ ಮದರ್ಥೇ ಹತಾಃ ಶೂರಾಸ್ತೇಷಾಂ ಕೃತಮನುಸ್ಮರನ್।
09004042c ಋಣಂ ತತ್ಪ್ರತಿಮುಂಚಾನೋ ನ ರಾಜ್ಯೇ ಮನ ಆದಧೇ।।
ನನಗೋಸ್ಕರವಾಗಿ ಹತರಾಗಿರುವವರ ಕರ್ಮಗಳನ್ನು ಸ್ಮರಿಸುತ್ತಾ ಅವರ ಋಣದಿಂದ ಮುಕ್ತನಾಗಲು ಪ್ರಯತ್ನಿಸುತ್ತಿರುವ ನನಗೆ ರಾಜ್ಯದಲ್ಲಿ ಮನಸ್ಸಿಲ್ಲ.
09004043a ಪಾತಯಿತ್ವಾ16 ವಯಸ್ಯಾಂಶ್ಚ ಭ್ರಾತೄನಥ ಪಿತಾಮಹಾನ್।
09004043c ಜೀವಿತಂ ಯದಿ ರಕ್ಷೇಯಂ ಲೋಕೋ ಮಾಂ ಗರ್ಹಯೇದ್ಧ್ರುವಂ।।
ಸ್ನೇಹಿತರನ್ನೂ, ಸಹೋದರರನ್ನೂ, ಪಿತಾಮಹರನ್ನೂ ಸಾಯಗೊಟ್ಟು ಈ ಜೀವವನ್ನು ರಕ್ಷಿಸಿಕೊಂಡರೆ ಲೋಕವು ನನ್ನನ್ನು ನಿಶ್ಚಯವಾಗಿಯೂ ನಿಂದಿಸುತ್ತದೆ.
09004044a ಕೀದೃಶಂ ಚ ಭವೇದ್ರಾಜ್ಯಂ ಮಮ ಹೀನಸ್ಯ ಬಂಧುಭಿಃ।
09004044c ಸಖಿಭಿಶ್ಚ ಸುಹೃದ್ಭಿಶ್ಚ ಪ್ರಣಿಪತ್ಯ ಚ ಪಾಂಡವಂ।।
ಬಂಧು-ಸ್ನೇಹಿತ-ಸುಹೃದಯರಿಂದ ವಿಹೀನನಾಗಿ ಪಾಂಡವನಿಗೆ ಶರಣಾಗತನಾಗಿ ಪಡೆಯುವ ರಾಜ್ಯದ ರಾಜ್ಯಭಾರವಾದರೂ ಹೇಗಿರಬಹುದು?
09004045a ಸೋಽಹಮೇತಾದೃಶಂ ಕೃತ್ವಾ ಜಗತೋಽಸ್ಯ ಪರಾಭವಂ।
09004045c ಸುಯುದ್ಧೇನ ತತಃ ಸ್ವರ್ಗಂ ಪ್ರಾಪ್ಸ್ಯಾಮಿ ನ ತದನ್ಯಥಾ।।
ಜಗತ್ತನ್ನೇ ಪರಾಭವಗೊಳಿಸಿದಂತಹ ಕಾರ್ಯಗಳನ್ನು ಮಾಡಿ ಈಗ ಉತ್ತಮ ಯುದ್ಧದಿಂದ ಸ್ವರ್ಗವನ್ನು ಪಡೆಯುತ್ತೇನೆ. ಅನ್ಯಥಾ ಇಲ್ಲ!”
09004046a ಏವಂ ದುರ್ಯೋಧನೇನೋಕ್ತಂ ಸರ್ವೇ ಸಂಪೂಜ್ಯ ತದ್ವಚಃ।
09004046c ಸಾಧು ಸಾಧ್ವಿತಿ ರಾಜಾನಂ ಕ್ಷತ್ರಿಯಾಃ ಸಂಬಭಾಷಿರೇ।।
ದುರ್ಯೋಧನನಾಡಿದ ಆ ಮಾತನ್ನು ಸರ್ವರೂ ಗೌರವಿಸಿದರು. ಕ್ಷತ್ರಿಯ ರಾಜರು “ಸಾಧು! ಸಾಧು!” ಎಂದು ಮಾತನಾಡಿಕೊಂಡರು.
09004047a ಪರಾಜಯಮಶೋಚಂತಃ ಕೃತಚಿತ್ತಾಶ್ಚ ವಿಕ್ರಮೇ।
09004047c ಸರ್ವೇ ಸುನಿಶ್ಚಿತಾ ಯೋದ್ಧುಮುದಗ್ರಮನಸೋಽಭವನ್।।
ತಮ್ಮ ಪರಾಜಯದ ಕುರಿತು ಶೋಕಿಸುವುದನ್ನು ನಿಲ್ಲಿಸಿ ಪರಾಕ್ರಮವನ್ನು ತೋರಿಸುವುದರಲ್ಲಿಯೇ ದೃಢಚಿತ್ತರಾಗಿ ಯುದ್ಧಮಾಡಲು ನಿಶ್ಚಯಿಸಿ ಮುದಿತ ಮನಸ್ಕರಾದರು.
09004048a ತತೋ ವಾಹಾನ್ಸಮಾಶ್ವಾಸ್ಯ ಸರ್ವೇ ಯುದ್ಧಾಭಿನಂದಿನಃ।
09004048c ಊನೇ ದ್ವಿಯೋಜನೇ ಗತ್ವಾ ಪ್ರತ್ಯತಿಷ್ಠಂತ ಕೌರವಾಃ।।
ಅನಂತರ ವಾಹನಗಳನ್ನು ಸಂತಯಿಸಿ, ಯುದ್ಧಾಭಿನಂದಿನ ಕೌರವರೆಲ್ಲರೂ ಅಲ್ಲಿಂದ ಎರಡು ಯೋಜನ ದೂರಕ್ಕೆ ಹೋಗಿ ನಿಂತುಕೊಂಡರು.
09004049a ಆಕಾಶೇ ವಿದ್ರುಮೇ ಪುಣ್ಯೇ ಪ್ರಸ್ಥೇ ಹಿಮವತಃ ಶುಭೇ।
09004049c ಅರುಣಾಂ ಸರಸ್ವತೀಂ ಪ್ರಾಪ್ಯ ಪಪುಃ ಸಸ್ನುಶ್ಚ ತಜ್ಜಲಂ।।
ಆಕಾಶದಲ್ಲಿರುವಂತೆ ತೋರುತ್ತಿದ್ದ, ವೃಕ್ಷಭರಿತ ಪುಣ್ಯ ಹಿಮವತ್ಪರ್ವತ ತಪ್ಪಲಿನಲ್ಲಿ ಹರಿಯುತ್ತಿದ್ದ ಎಣೆಗೆಂಪಿನ ಸರಸ್ವತೀ ನದಿಗೆ ಹೋಗಿ ಆ ನೀರನ್ನು ಕುಡಿದರು ಮತ್ತು ಅಲ್ಲಿ ಸ್ನಾನಮಾಡಿದರು.
09004050a ತವ ಪುತ್ರಾಃ ಕೃತೋತ್ಸಾಹಾಃ ಪರ್ಯವರ್ತಂತ ತೇ ತತಃ।
09004050c ಪರ್ಯವಸ್ಥಾಪ್ಯ ಚಾತ್ಮಾನಮನ್ಯೋನ್ಯೇನ ಪುನಸ್ತದಾ।।
09004050e ಸರ್ವೇ ರಾಜನ್ನ್ಯವರ್ತಂತ ಕ್ಷತ್ರಿಯಾಃ ಕಾಲಚೋದಿತಾಃ।।
ರಾಜನ್! ಕಾಲಚೋದಿತ ಸರ್ವ ಕ್ಷತ್ರಿಯರೂ ನಿನ್ನ ಮಗನಿಂದ ಪ್ರೋತ್ಸಾಹಿತರಾಗಿ ಅನ್ಯೋನ್ಯರೊಂದಿಗೆ ಸಂಭಾಷಣೆಗೈಯುತ್ತಾ ತಮ್ಮ ಮನಸ್ಸನ್ನು ಯುದ್ಧದಲ್ಲಿಯೇ ಸ್ಥಿರಗೊಳಿಸಿ ಪುನಃ ಯುದ್ಧಭೂಮಿಗೆ ಹಿಂದಿರುಗಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ದುರ್ಯೋಧನವಾಕ್ಯೇ ಚತುರ್ಥೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ದುರ್ಯೋಧನವಾಕ್ಯ ಎನ್ನುವ ನಾಲ್ಕನೇ ಅಧ್ಯಾಯವು.