ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 1
ಸಾರ
ಧೃತರಾಷ್ಟ್ರ ಶೋಕ (1-52).
09001001 ಜನಮೇಜಯ ಉವಾಚ 09001001a ಏವಂ ನಿಪಾತಿತೇ ಕರ್ಣೇ ಸಮರೇ ಸವ್ಯಸಾಚಿನಾ।
09001001c ಅಲ್ಪಾವಶಿಷ್ಟಾಃ ಕುರವಃ ಕಿಮಕುರ್ವತ ವೈ ದ್ವಿಜ।।
ಜನಮೇಜಯನು ಹೇಳಿದನು: “ದ್ವಿಜ! ಹೀಗೆ ಸವ್ಯಸಾಚಿಯು ಸಮರದಲ್ಲಿ ಕರ್ಣನನ್ನು ಕೆಳಗುರುಳಿಸಲು ಅಳಿದುಳಿದ ಅಲ್ಪಸಂಖ್ಯಾತ ಕುರುಗಳು ಏನು ಮಾಡಿದರು?
09001002a ಉದೀರ್ಯಮಾಣಂ ಚ ಬಲಂ ದೃಷ್ಟ್ವಾ ರಾಜಾ ಸುಯೋಧನಃ।
09001002c ಪಾಂಡವೈಃ ಪ್ರಾಪ್ತಕಾಲಂ ಚ ಕಿಂ ಪ್ರಾಪದ್ಯತ ಕೌರವಃ।।
ಪಾಂಡವರ ಬಲವು ಹೆಚ್ಚಾಗುತ್ತಿರುವುದನ್ನು ನೋಡಿ ರಾಜ ಕೌರವ ಸುಯೋಧನನು ಸಮಯೋಚಿತ ಕಾರ್ಯಕೈಗೊಂಡನೇ?
09001003a ಏತದಿಚ್ಚಾಮ್ಯಹಂ ಶ್ರೋತುಂ ತದಾಚಕ್ಷ್ವ ದ್ವಿಜೋತ್ತಮ।
09001003c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್।।
ದ್ವಿಜೋತ್ತಮ! ಇದನ್ನು ಕೇಳಲು ಬಯಸುತ್ತೇನೆ. ಅದನ್ನು ಹೇಳು. ಪೂರ್ವಜರ ಈ ಮಹಾನ್ ಚರಿತೆಯಿಂದ ಇನ್ನೂ ತೃಪ್ತನಾಗಿಲ್ಲ!”
09001004 ವೈಶಂಪಾಯನ ಉವಾಚ 09001004a ತತಃ ಕರ್ಣೇ ಹತೇ ರಾಜನ್ಧಾರ್ತರಾಷ್ಟ್ರಃ ಸುಯೋಧನಃ।
09001004c ಭೃಶಂ ಶೋಕಾರ್ಣವೇ ಮಗ್ನೋ ನಿರಾಶಃ ಸರ್ವತೋಽಭವತ್।।
ವೈಶಂಪಾಯನನು ಹೇಳಿದನು: “ರಾಜನ್! ಕರ್ಣನು ಹತನಾಗಲು ಧಾರ್ತರಾಷ್ಟ್ರ ಸುಯೋಧನನು ಅತ್ಯಂತ ಶೋಕಸಾಗರದಲ್ಲಿ ಮುಳುಗಿಹೋದನು. ಎಲ್ಲೆಡೆಯೂ ನಿರಾಶೆಯೇ ಕಂಡುಬಂದಿತು.
09001005a ಹಾ ಕರ್ಣ ಹಾ ಕರ್ಣ ಇತಿ ಶೋಚಮಾನಃ ಪುನಃ ಪುನಃ।
09001005c ಕೃಚ್ಚ್ರಾತ್ಸ್ವಶಿಬಿರಂ ಪ್ರಾಯಾದ್ಧತಶೇಷೈರ್ನೃಪೈಃ ಸಹ।।
“ಹಾ ಕರ್ಣ! ಹಾ ಕರ್ಣ!” ಎಂದು ಪುನಃ ಪುನಃ ಶೋಕಿಸುತ್ತಾ ಬಹಳ ಕಷ್ಟದಿಂದ ಅವನು ಅಳಿದುಳಿದ ನೃಪರೊಂದಿಗೆ ಸ್ವಶಿಬಿರಕ್ಕೆ ತೆರಳಿದನು.
09001006a ಸ ಸಮಾಶ್ವಾಸ್ಯಮಾನೋಽಪಿ ಹೇತುಭಿಃ ಶಾಸ್ತ್ರನಿಶ್ಚಿತೈಃ।
09001006c ರಾಜಭಿರ್ನಾಲಭಚ್ಚರ್ಮ ಸೂತಪುತ್ರವಧಂ ಸ್ಮರನ್।।
ಶಾಸ್ತ್ರನಿಶ್ಚಿತ ಕಾರಣಗಳಿಂದ ರಾಜರು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಸೂತಪುತ್ರನ ವಧೆಯನ್ನು ಸ್ಮರಿಸಿಕೊಳ್ಳುತ್ತಾ ರಾಜನಿಗೆ ಶಾಂತಿಯೆನ್ನುವುದೇ ಇಲ್ಲವಾಯಿತು.
09001007a ಸ ದೈವಂ ಬಲವನ್ಮತ್ವಾ ಭವಿತವ್ಯಂ ಚ ಪಾರ್ಥಿವಃ।
09001007c ಸಂಗ್ರಾಮೇ ನಿಶ್ಚಯಂ ಕೃತ್ವಾ ಪುನರ್ಯುದ್ಧಾಯ ನಿರ್ಯಯೌ।।
ಆಗಬೇಕಾದುದನ್ನು ಆಗಿಸಿಕೊಳ್ಳುವುದರಲ್ಲಿ ದೈವವೇ ಬಲಶಾಲಿಯಾದುದೆಂದು ಮನ್ನಿಸಿ ರಾಜನು ಸಂಗ್ರಾಮವನ್ನು ನಿಶ್ಚಯಿಸಿ ಪುನಃ ಯುದ್ಧಕ್ಕೆ ಹೊರಟನು.
09001008a ಶಲ್ಯಂ ಸೇನಾಪತಿಂ ಕೃತ್ವಾ ವಿಧಿವದ್ರಾಜಪುಂಗವಃ।
09001008c ರಣಾಯ ನಿರ್ಯಯೌ ರಾಜಾ ಹತಶೇಷೈರ್ನೃಪೈಃ ಸಹ।।
ವಿಧಿವತ್ತಾಗಿ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ ರಾಜಾ ರಾಜಪುಂಗವನು ಅಳಿದುಳಿದ ನೃಪರೊಂದಿಗೆ ರಣಕ್ಕೆ ತೆರಳಿದನು.
09001009a ತತಃ ಸುತುಮುಲಂ ಯುದ್ಧಂ ಕುರುಪಾಂಡವಸೇನಯೋಃ।
09001009c ಬಭೂವ ಭರತಶ್ರೇಷ್ಠ ದೇವಾಸುರರಣೋಪಮಂ।।
ಭರತಶ್ರೇಷ್ಠ! ಆಗ ಕುರು-ಪಾಂಡವ ಸೇನೆಗಳ ನಡುವೆ ದೇವಾಸುರರ ರಣದಂತೆ ಅತ್ಯಂತ ತುಮುಲ ಯುದ್ಧವು ನಡೆಯಿತು.
09001010a ತತಃ ಶಲ್ಯೋ ಮಹಾರಾಜ ಕೃತ್ವಾ ಕದನಮಾಹವೇ।
09001010c ಪಾಂಡುಸೈನ್ಯಸ್ಯ1 ಮಧ್ಯಾಹ್ನೇ ಧರ್ಮರಾಜೇನ ಪಾತಿತಃ।।
ಮಹಾರಾಜ! ಆ ದಿನ ಶಲ್ಯನು ಪಾಂಡುಸೇನೆಯೊಂದಿಗೆ ಕದನವಾಡಿ ಮಧ್ಯಾಹ್ನದಲ್ಲಿ ಧರ್ಮರಾಜನಿಂದ ಹತನಾದನು.
09001011a ತತೋ ದುರ್ಯೋಧನೋ ರಾಜಾ ಹತಬಂಧೂ ರಣಾಜಿರಾತ್।
09001011c ಅಪಸೃತ್ಯ ಹ್ರದಂ ಘೋರಂ ವಿವೇಶ ರಿಪುಜಾದ್ಭಯಾತ್।।
ಆಗ ಬಂಧುಗಳನ್ನು ಕಳೆದುಕೊಂಡ ರಾಜಾ ದುರ್ಯೋಧನನು ರಿಪುಗಳ ಭಯದಿಂದ ರಣದಿಂದ ತಪ್ಪಿಸಿಕೊಂಡು ಘೋರ ಸರೋವರವನ್ನು ಪ್ರವೇಶಿಸಿದನು.
09001012a ಅಥಾಪರಾಹ್ಣೇ ತಸ್ಯಾಹ್ನಃ ಪರಿವಾರ್ಯ ಮಹಾರಥೈಃ।
09001012c ಹ್ರದಾದಾಹೂಯ ಯೋಗೇನ ಭೀಮಸೇನೇನ ಪಾತಿತಃ।।
ಆ ದಿನದ ಅಪರಾಹ್ಣದಲ್ಲಿ ಮಹಾರಥರಿಂದ ಸುತ್ತುವರೆಯಲ್ಪಟ್ಟು ಭೀಮಸೇನನು ಸರೋವರದಿಂದ ದುರ್ಯೋಧನನ್ನು ಕರೆದು ಯೋಗವಶಾತ್ ಕೆಳಗುರುಳಿಸಿದನು.
09001013a ತಸ್ಮಿನ್ ಹತೇ ಮಹೇಷ್ವಾಸೇ ಹತಶಿಷ್ಟಾಸ್ತ್ರಯೋ ರಥಾಃ।
09001013c ಸಂರಭಾನ್ನಿಶಿ ರಾಜೇಂದ್ರ ಜಘ್ನುಃ ಪಾಂಚಾಲಸೈನಿಕಾನ್।।
ರಾಜೇಂದ್ರ! ಆ ಮಹೇಷ್ವಾಸನು ಹತನಾಗಲು ಅಳಿದುಳಿದ ಮೂರು ಮಹಾರಥರು ಕೋಪದಿಂದ ರಾತ್ರಿಯಲ್ಲಿ ಪಾಂಚಾಲಸೈನಿಕರನ್ನು ಸಂಹರಿಸಿದರು.
09001014a ತತಃ ಪೂರ್ವಾಹ್ಣಸಮಯೇ ಶಿಬಿರಾದೇತ್ಯ ಸಂಜಯಃ।
09001014c ಪ್ರವಿವೇಶ ಪುರೀಂ ದೀನೋ ದುಃಖಶೋಕಸಮನ್ವಿತಃ।।
ಮರು ದಿನ ಪೂರ್ವಾಹ್ಣ ಸಮಯದಲ್ಲಿ ದುಃಖಶೋಕಸಮನ್ವಿತ ದೀನ ಸಂಜಯನು ಶಿಬಿರದಿಂದ ಹೊರಟು ಹಸ್ತಿನಾಪುರಿಯನ್ನು ಪ್ರವೇಶಿಸಿದನು.
09001015a ಪ್ರವಿಶ್ಯ ಚ ಪುರಂ ತೂರ್ಣಂ ಭುಜಾವುಚ್ಚ್ರಿತ್ಯ ದುಃಖಿತಃ।
09001015c ವೇಪಮಾನಸ್ತತೋ ರಾಜ್ಞಃ ಪ್ರವಿವೇಶ ನಿವೇಶನಂ।।
ಪುರವನ್ನು ಪ್ರವೇಶಿಸಿ ಭುಜಗಳನ್ನು ಮೇಲೆತ್ತಿ ದುಃಖಿತನಾಗಿ ನಡುಗುತ್ತಾ ಅವನು ಬೇಗನೇ ರಾಜನಿವೇಶನವನ್ನು ಪ್ರವೇಶಿಸಿದನು.
09001016a ರುರೋದ ಚ ನರವ್ಯಾಘ್ರ ಹಾ ರಾಜನ್ನಿತಿ ದುಃಖಿತಃ।
09001016c ಅಹೋ ಬತ ವಿವಿಗ್ನಾಃ2 ಸ್ಮ ನಿಧನೇನ ಮಹಾತ್ಮನಃ।।
“ನರವ್ಯಾಘ್ರ! ಹಾ ರಾಜ! ಮಹಾತ್ಮನ ನಿಧನದಿಂದ ನಾವೆಲ್ಲರೂ ವಿವಿಗ್ನರಾಗಿದ್ದೇವೆ!” ಎಂದು ದುಃಖಿತನಾಗಿ ರೋದಿಸಿದನು.
09001017a ಅಹೋ ಸುಬಲವಾನ್ಕಾಲೋ ಗತಿಶ್ಚ ಪರಮಾ ತಥಾ।
09001017c ಶಕ್ರತುಲ್ಯಬಲಾಃ ಸರ್ವೇ ಯತ್ರಾವಧ್ಯಂತ ಪಾರ್ಥಿವಾಃ।।
“ಅಯ್ಯೋ! ಕಾಲವೇ ಅತ್ಯಂತ ಬಲಶಾಲಿ! ಬಲದಲ್ಲಿ ಶಕ್ರನಿಗೆ ಸಮನಾಗಿದ್ದ ಪಾರ್ಥಿವರೆಲ್ಲರೂ ವಧಿಸಲ್ಪಟ್ಟು ಪರಮ ಗತಿಯನ್ನು ಹೊಂದಿದರು.”
09001018a ದೃಷ್ಟ್ವೈವ ಚ ಪುರೋ ರಾಜನ್ಜನಃ ಸರ್ವಃ ಸ ಸಂಜಯಂ।
309001018c ಪ್ರರುರೋದ ಭೃಶೋದ್ವಿಗ್ನೋ ಹಾ ರಾಜನ್ನಿತಿ ಸಸ್ವರಂ।।
ರಾಜನ್! ಸಂಜಯನನ್ನು ನೋಡಿದ ಪುರಜನರೆಲ್ಲರೂ ಅತ್ಯಂತ ಉದ್ವಿಗ್ನರಾಗಿ ಒಟ್ಟು ಸ್ವರದಲ್ಲಿ “ಹಾ ರಾಜಾ!” ಎಂದು ಗೋಳಿಟ್ಟರು.
09001019a ಆಕುಮಾರಂ ನರವ್ಯಾಘ್ರ ತತ್ಪುರಂ ವೈ ಸಮಂತತಃ।
09001019c ಆರ್ತನಾದಂ ಮಹಚ್ಚಕ್ರೇ ಶ್ರುತ್ವಾ ವಿನಿಹತಂ ನೃಪಂ।।
ನರವ್ಯಾಘ್ರ! ನೃಪನು ಹತನಾದುದನ್ನು ಕೇಳಿ ಕುಮಾರಾದ್ಯಂತರಾಗಿ ಸುತ್ತಲಿದ್ದ ಎಲ್ಲರೂ ಆರ್ತನಾದಗೈದರು.
09001020a ಧಾವತಶ್ಚಾಪ್ಯಪಶ್ಯಚ್ಚ ತತ್ರ ತ್ರೀನ್ಪುರುಷರ್ಷಭಾನ್।
09001020c ನಷ್ಟಚಿತ್ತಾನಿವೋನ್ಮತ್ತಾನ್ ಶೋಕೇನ ಭೃಶಪೀಡಿತಾನ್।।
ಅಲ್ಲಿ ಅವರು ಬುದ್ಧಿಕಳೆದುಕೊಂಡು ಅತ್ಯಂತ ಶೋಕದಿಂದ ಪೀಡಿತರಾಗಿ ಹುಚ್ಚರಂತೆ ಓಡಿ ಹೋಗುತ್ತಿದ್ದ ಮೂವರು ಪುರುಷರ್ಷಭರನ್ನು ಕೂಡ ನೋಡಿದರು.
09001021a ತಥಾ ಸ ವಿಹ್ವಲಃ ಸೂತಃ ಪ್ರವಿಶ್ಯ ನೃಪತಿಕ್ಷಯಂ।
09001021c ದದರ್ಶ ನೃಪತಿಶ್ರೇಷ್ಠಂ ಪ್ರಜ್ಞಾಚಕ್ಷುಷಮೀಶ್ವರಂ।।
ಹಾಗೆ ವಿಹ್ವಲನಾಗಿದ್ದ ಸೂತನು ನೃಪತಿಕಕ್ಷವನ್ನು ಪ್ರವೇಶಿಸಿ ಅಲ್ಲಿ ನೃಪತಿಶ್ರೇಷ್ಠ ಪ್ರಜ್ಞಾಚಕ್ಷು ತನ್ನ ಒಡೆಯನನ್ನು ಕಂಡನು.
09001022a ದೃಷ್ಟ್ವಾ ಚಾಸೀನಮನಘಂ ಸಮಂತಾತ್ಪರಿವಾರಿತಂ।
09001022c ಸ್ನುಷಾಭಿರ್ಭರತಶ್ರೇಷ್ಠ ಗಾಂಧಾರ್ಯಾ ವಿದುರೇಣ ಚ।।
09001023a ತಥಾನ್ಯೈಶ್ಚ ಸುಹೃದ್ಭಿಶ್ಚ ಜ್ಞಾತಿಭಿಶ್ಚ ಹಿತೈಷಿಭಿಃ।
09001023c ತಮೇವ ಚಾರ್ಥಂ ಧ್ಯಾಯಂತಂ ಕರ್ಣಸ್ಯ ನಿಧನಂ ಪ್ರತಿ।।
09001024a ರುದನ್ನೇವಾಬ್ರವೀದ್ವಾಕ್ಯಂ ರಾಜಾನಂ ಜನಮೇಜಯ।
09001024c ನಾತಿಹೃಷ್ಟಮನಾಃ ಸೂತೋ ಬಾಷ್ಪಸಂದಿಗ್ಧಯಾ ಗಿರಾ।।
ಜನಮೇಜಯ! ಅಲ್ಲಿ ಕರ್ಣನ ನಿಧನದ ಕುರಿತೇ ಯೋಚಿಸುತ್ತಿದ್ದ, ಗಾಂಧಾರೀ, ಸೊಸೆಯಂದಿರು, ವಿದುರ ಮತ್ತು ಅನ್ಯ ಸುಹೃದಯರು, ಕುಟುಂಬದವರು, ಮತ್ತು ಹಿತೈಷಿಗಳಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ಅನಘ ಭರತಶ್ರೇಷ್ಠನನ್ನು ನೋಡಿ ದುಃಖಮನಸ್ಕನಾಗಿ ಅಳುತ್ತಾ ಕಣ್ಣೀರಿನಿಂದ ತಡೆಯಲ್ಪಟ್ಟ ಧ್ವನಿಯಿಂದ ಸೂತನು ರಾಜನಿಗೆ ಈ ಮಾತನ್ನಾಡಿದನು.
09001025a ಸಂಜಯೋಽಹಂ ನರವ್ಯಾಘ್ರ ನಮಸ್ತೇ ಭರತರ್ಷಭ।
09001025c ಮದ್ರಾಧಿಪೋ ಹತಃ ಶಲ್ಯಃ ಶಕುನಿಃ ಸೌಬಲಸ್ತಥಾ।।
09001025e ಉಲೂಕಃ ಪುರುಷವ್ಯಾಘ್ರ ಕೈತವ್ಯೋ ದೃಢವಿಕ್ರಮಃ।।
“ನರವ್ಯಾಘ್ರ! ಭರತರ್ಷಭ! ಪುರುಷವ್ಯಾಘ್ರ! ನಾನು ಸಂಜಯ! ಮದ್ರಾಧಿಪ ಶಲ್ಯ ಮತ್ತು ಹಾಗೆಯೇ ಸೌಬಲ ಶಕುನಿ, ಕೈತವ್ಯ ದೃಢವಿಕ್ರಮಿ ಉಲೂಕರು ಹತರಾದರು!
09001026a ಸಂಶಪ್ತಕಾ ಹತಾಃ ಸರ್ವೇ ಕಾಂಬೋಜಾಶ್ಚ ಶಕೈಃ ಸಹ।
09001026c ಮ್ಲೇಚ್ಛಾಶ್ಚ ಪಾರ್ವತೀಯಾಶ್ಚ ಯವನಾಶ್ಚ ನಿಪಾತಿತಾಃ।।
ಕಾಂಬೋಜರು ಮತ್ತು ಶಕರೊಂದಿಗೆ ಸಂಶಪ್ತಕರು ಎಲ್ಲರೂ ಹತರಾದರು! ಮ್ಲೇಚ್ಛರು, ಪರ್ವತೇಯರು, ಮತ್ತು ಯವನರು ಕೂಡ ಕೆಳಗುರುಳಿದರು!
09001027a ಪ್ರಾಚ್ಯಾ ಹತಾ ಮಹಾರಾಜ ದಾಕ್ಷಿಣಾತ್ಯಾಶ್ಚ ಸರ್ವಶಃ।
09001027c ಉದೀಚ್ಯಾ ನಿಹತಾಃ ಸರ್ವೇ ಪ್ರತೀಚ್ಯಾಶ್ಚ ನರಾಧಿಪ।।
09001027e ರಾಜಾನೋ ರಾಜಪುತ್ರಾಶ್ಚ ಸರ್ವತೋ ನಿಹತಾ ನೃಪ।।
ಮಹಾರಾಜ! ಪೂರ್ವದೇಶದವರು ದಕ್ಷಿಣದವರು ಎಲ್ಲರೂ ಹತರಾದರು! ನರಾಧಿಪ! ಉತ್ತರದವರು ಮತ್ತು ಪಶ್ಚಿಮದವರು ಎಲ್ಲರೂ ಹತರಾದರು! ನೃಪ! ರಾಜರು ಮತ್ತು ರಾಜಪುತ್ರರೆಲ್ಲರೂ ಹತರಾದರು!
09001028a ದುರ್ಯೋಧನೋ ಹತೋ ರಾಜನ್ಯಥೋಕ್ತಂ ಪಾಂಡವೇನ ಚ।
09001028c ಭಗ್ನಸಕ್ಥೋ ಮಹಾರಾಜ ಶೇತೇ ಪಾಂಸುಷು ರೂಷಿತಃ।।
ರಾಜನ್! ದುರ್ಯೋಧನನೂ ಹತನಾದನು! ಮಹಾರಾಜ! ಪಾಂಡವನು ಹೇಳಿದ್ದಂತೆಯೇ ಅವನು ತೊಡೆಯೊಡೆದು ಗಾಯಗೊಂಡು ಕೆಸರಿನಲ್ಲಿ ಮಲಗಿದ್ದಾನೆ!
09001029a ಧೃಷ್ಟದ್ಯುಮ್ನೋ ಹತೋ ರಾಜನ್ ಶಿಖಂಡೀ ಚಾಪರಾಜಿತಃ।
09001029c ಉತ್ತಮೌಜಾ ಯುಧಾಮನ್ಯುಸ್ತಥಾ ರಾಜನ್ಪ್ರಭದ್ರಕಾಃ।।
ರಾಜನ್! ಧೃಷ್ಟದ್ಯುಮ್ನ, ಅಪರಾಜಿತ ಶಿಖಂಡೀ, ಉತ್ತಮೌಜ, ಯುಧಾಮನ್ಯು ಮತ್ತು ಇತರ ಪ್ರಭದ್ರಕರೂ ಹತರಾದರು!
09001030a ಪಾಂಚಾಲಾಶ್ಚ ನರವ್ಯಾಘ್ರಾಶ್ಚೇದಯಶ್ಚ ನಿಷೂದಿತಾಃ।
09001030c ತವ ಪುತ್ರಾ ಹತಾಃ ಸರ್ವೇ ದ್ರೌಪದೇಯಾಶ್ಚ ಭಾರತ।।
09001030e ಕರ್ಣಪುತ್ರೋ ಹತಃ ಶೂರೋ ವೃಷಸೇನೋ ಮಹಾಬಲಃ।।
ನರವ್ಯಾಘ್ರ ಪಾಂಚಾಲರೂ, ಚೇದಿದೇಶದವರೂ ಸಂಹರಿಸಲ್ಪಟ್ಟರು! ಭಾರತ! ನಿನ್ನ ಮತ್ತು ದ್ರೌಪದಿಯ ಪುತ್ರರೆಲ್ಲರೂ ಹತರಾಗಿದ್ದಾರೆ! ಕರ್ಣಪುತ್ರ ಶೂರ ಮಹಾಬಲ ವೃಷಸೇನನೂ ಹತನಾಗಿದ್ದಾನೆ!
09001031a ನರಾ ವಿನಿಹತಾಃ ಸರ್ವೇ ಗಜಾಶ್ಚ ವಿನಿಪಾತಿತಾಃ।
09001031c ರಥಿನಶ್ಚ ನರವ್ಯಾಘ್ರ ಹಯಾಶ್ಚ ನಿಹತಾ ಯುಧಿ।।
ನರರು ಹತರಾದರು! ಆನೆಗಳು ಕೆಳಗುರುಳಿದವು! ನರವ್ಯಾಘ್ರ! ಯುದ್ಧದಲ್ಲಿ ರಥಿಗಳು ಮತ್ತು ಕುದುರೆಗಳೂ ಹತವಾದವು!
09001032a ಕಿಂಚಿಚ್ಛೇಷಂ ಚ ಶಿಬಿರಂ ತಾವಕಾನಾಂ ಕೃತಂ ವಿಭೋ।
09001032c ಪಾಂಡವಾನಾಂ ಚ ಶೂರಾಣಾಂ ಸಮಾಸಾದ್ಯ ಪರಸ್ಪರಂ।।
ವಿಭೋ! ಪರಸ್ಪರರನ್ನು ಎದುರಿಸಿದ ಶೂರ ಪಾಂಡವರ ಮತ್ತು ನಿನ್ನ ಶಿಬಿರಗಳಲ್ಲಿ ಕೆಲವರು ಮಾತ್ರ ಉಳಿದುಕೊಂಡಿದ್ದಾರೆ.
09001033a ಪ್ರಾಯಃ ಸ್ತ್ರೀಶೇಷಮಭವಜ್ಜಗತ್ಕಾಲೇನ ಮೋಹಿತಂ।
09001033c ಸಪ್ತ ಪಾಂಡವತಃ ಶೇಷಾ ಧಾರ್ತರಾಷ್ಟ್ರಾಸ್ತಥಾ ತ್ರಯಃ।।
ಕಾಲಮೋಹಿತವಾದ ಈ ಜಗತ್ತಿನಲ್ಲಿ ಪ್ರಾಯಶಃ ಕೇವಲ ಸ್ತ್ರೀಯರು ಮಾತ್ರ ಉಳಿದುಕೊಂಡಿದ್ದಾರೆ. ಪಾಂಡವರು ಏಳು ಮಂದಿ ಮತ್ತು ಧಾರ್ತರಾಷ್ಟ್ರರು ಮೂರು ಮಂದಿ ಉಳಿದುಕೊಂಡಿದ್ದಾರೆ.
09001034a ತೇ ಚೈವ ಭ್ರಾತರಃ ಪಂಚ ವಾಸುದೇವೋಽಥ ಸಾತ್ಯಕಿಃ।
09001034c ಕೃಪಶ್ಚ ಕೃತವರ್ಮಾ ಚ ದ್ರೌಣಿಶ್ಚ ಜಯತಾಂ ವರಃ।।
ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಕೃಪ, ಕೃತವರ್ಮ ಹಾಗೂ ವಿಜಯಿಗಳಲ್ಲಿ ಶ್ರೇಷ್ಠ ದ್ರೌಣಿ.
09001035a ತವಾಪ್ಯೇತೇ ಮಹಾರಾಜ ರಥಿನೋ ನೃಪಸತ್ತಮ।
09001035c ಅಕ್ಷೌಹಿಣೀನಾಂ ಸರ್ವಾಸಾಂ ಸಮೇತಾನಾಂ ಜನೇಶ್ವರ।।
09001035e ಏತೇ ಶೇಷಾ ಮಹಾರಾಜ ಸರ್ವೇಽನ್ಯೇ ನಿಧನಂ ಗತಾಃ।।
ಮಹಾರಾಜ! ನೃಪಸತ್ತಮ! ಜನೇಶ್ವರ! ಒಂದುಗೂಡಿದ್ದ ಎಲ್ಲ ಅಕ್ಷೌಹಿಣೀ ಸೇನೆಗಳಲ್ಲಿ ಈ ರಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಮಹಾರಾಜ! ಅನ್ಯ ಎಲ್ಲರೂ ನಿಧನಹೊಂದಿದರು.
09001036a ಕಾಲೇನ ನಿಹತಂ ಸರ್ವಂ ಜಗದ್ವೈ ಭರತರ್ಷಭ।
09001036c ದುರ್ಯೋಧನಂ ವೈ ಪುರತಃ ಕೃತ್ವಾ ವೈರಸ್ಯ ಭಾರತ।।
ಭರತರ್ಷಭ! ಭಾರತ! ದುರ್ಯೋಧನ ಮತ್ತು ಅವನ ವೈರವನ್ನು ಮುಂದೆಮಾಡಿಕೊಂಡು ಕಾಲನೇ ಈ ಜಗತ್ತೆಲ್ಲವನ್ನೂ ವಿನಾಶಗೊಳಿಸಿದನು!”
09001037a ಏತಚ್ಛ್ರುತ್ವಾ ವಚಃ ಕ್ರೂರಂ ಧೃತರಾಷ್ಟ್ರೋ ಜನೇಶ್ವರಃ।
09001037c ನಿಪಪಾತ ಮಹಾರಾಜ ಗತಸತ್ತ್ವೋ ಮಹೀತಲೇ।।
ಮಹಾರಾಜ! ಈ ಕ್ರೂರ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಪ್ರಾಣಹೋದಂತಾಗಿ ನೆಲದಮೇಲೆ ಬಿದ್ದನು.
09001038a ತಸ್ಮಿನ್ನಿಪತಿತೇ ಭೂಮೌ ವಿದುರೋಽಪಿ ಮಹಾಯಶಾಃ।
09001038c ನಿಪಪಾತ ಮಹಾರಾಜ ರಾಜವ್ಯಸನಕರ್ಶಿತಃ।।
ಮಹಾರಾಜ! ಅವನು ಕೆಳಗೆ ಬೀಳಲು ರಾಜವ್ಯಸನದಿಂದ ದುಃಖಿತನಾಗಿದ್ದ ಮಹಾಯಶಸ್ವಿ ವಿದುರನು ಕೂಡ ಭೂಮಿಯಮೇಲೆ ಬಿದ್ದನು.
09001039a ಗಾಂಧಾರೀ ಚ ನೃಪಶ್ರೇಷ್ಠ ಸರ್ವಾಶ್ಚ ಕುರುಯೋಷಿತಃ।
09001039c ಪತಿತಾಃ ಸಹಸಾ ಭೂಮೌ ಶ್ರುತ್ವಾ ಕ್ರೂರಂ ವಚಶ್ಚ ತಾಃ।।
ನೃಪಶ್ರೇಷ್ಠ! ಆ ಕ್ರೂರ ಮಾತನ್ನು ಕೇಳಿ ಕೂಡಲೇ ಗಾಂಧಾರಿ ಮತ್ತು ಕುರುಸ್ತ್ರೀಯರೆಲ್ಲರೂ ಭೂಮಿಯಮೇಲೆ ಬಿದ್ದರು.
09001040a ನಿಃಸಂಜ್ಞಂ ಪತಿತಂ ಭೂಮೌ ತದಾಸೀದ್ರಾಜಮಂಡಲಂ।
09001040c ಪ್ರಲಾಪಯುಕ್ತಾ ಮಹತೀ ಕಥಾ ನ್ಯಸ್ತಾ ಪಟೇ ಯಥಾ।।
ಪ್ರಲಪಿಸುತ್ತಿದ್ದ ಆ ರಾಜಮಂಡಲವು ಸಂಜ್ಞೆಗಳನ್ನು ಕಳೆದುಕೊಂಡು ವಿಶಾಲ ಚಿತ್ರಪಟದಲ್ಲಿ ಅಂಕಿತ ಚಿತ್ರಗಳಂತೆ ಭೂಮಿಯ ಮೇಲೆ ಬಿದ್ದಿತು.
09001041a ಕೃಚ್ಚ್ರೇಣ ತು ತತೋ ರಾಜಾ ಧೃತರಾಷ್ಟ್ರೋ ಮಹೀಪತಿಃ।
09001041c ಶನೈರಲಭತ ಪ್ರಾಣಾನ್ಪುತ್ರವ್ಯಸನಕರ್ಶಿತಃ।।
ಅನಂತರ ಪುತ್ರವ್ಯಸನದಿಂದ ದುಃಖಿತ ಮಹೀಪತಿ ರಾಜಾ ಧೃತರಾಷ್ಟ್ರನು ಕಷ್ಟದಿಂದ ಮೆಲ್ಲನೆ ಚೇತರಿಸಿಕೊಂಡನು.
09001042a ಲಬ್ಧ್ವಾ ತು ಸ ನೃಪಃ ಸಂಜ್ಞಾಂ ವೇಪಮಾನಃ ಸುದುಃಖಿತಃ।
09001042c ಉದೀಕ್ಷ್ಯ ಚ ದಿಶಃ ಸರ್ವಾಃ ಕ್ಷತ್ತಾರಂ ವಾಕ್ಯಮಬ್ರವೀತ್।।
ಸಂಜ್ಞೆಗಳನ್ನು ಪಡೆದ ಆ ನೃಪನು ಅತಿ ದುಃಖದಿಂದ ಕಂಪಿಸುತ್ತಾ ಎಲ್ಲ ದಿಕ್ಕುಗಳಲ್ಲಿಯೂ ನೋಡುತ್ತಾ ಕ್ಷತ್ತನಿಗೆ ಈ ಮಾತನ್ನಾಡಿದನು:
09001043a ವಿದ್ವನ್ ಕ್ಷತ್ತರ್ಮಹಾಪ್ರಾಜ್ಞ ತ್ವಂ ಗತಿರ್ಭರತರ್ಷಭ।
09001043c ಮಮಾನಾಥಸ್ಯ ಸುಭೃಶಂ ಪುತ್ರೈರ್ಹೀನಸ್ಯ ಸರ್ವಶಃ।।
09001043e ಏವಮುಕ್ತ್ವಾ ತತೋ ಭೂಯೋ ವಿಸಂಜ್ಞೋ ನಿಪಪಾತ ಹ।।
“ವಿದ್ವನ್! ಕ್ಷತ್ತ! ಮಹಾಪ್ರಾಜ್ಞ! ಭರತರ್ಷಭ! ಎಲ್ಲ ಪುತ್ರರನ್ನೂ ಕಳೆದುಕೊಂಡು ಅತೀವ ಅನಾಥನಾಗಿರುವ ನನಗೆ ನೀನೇ ಗತಿ!” ಹೀಗೆ ಹೇಳಿ ಅವನು ಪುನಃ ಮೂರ್ಛಿತನಾಗಿ ಕೆಳಗೆ ಬಿದ್ದನು.
09001044a ತಂ ತಥಾ ಪತಿತಂ ದೃಷ್ಟ್ವಾ ಬಾಂಧವಾ ಯೇಽಸ್ಯ ಕೇ ಚನ।
09001044c ಶೀತೈಸ್ತು ಸಿಷಿಚುಸ್ತೋಯೈರ್ವಿವ್ಯಜುರ್ವ್ಯಜನೈರಪಿ।।
ಹಾಗೆ ಅವನು ಬಿದ್ದುದನ್ನು ನೋಡಿ ಬಾಂಧವರಲ್ಲಿ ಕೆಲವರು ತಣ್ಣೀರನ್ನು ಚಿಮುಕಿಸಿದರು ಮತ್ತು ಬೀಸಣಿಗೆಯನ್ನು ಬೀಸಿದರು.
09001045a ಸ ತು ದೀರ್ಘೇಣ ಕಾಲೇನ ಪ್ರತ್ಯಾಶ್ವಸ್ತೋ ಮಹೀಪತಿಃ।
09001045c ತೂಷ್ಣೀಂ ದಧ್ಯೌ ಮಹೀಪಾಲಃ ಪುತ್ರವ್ಯಸನಕರ್ಶಿತಃ।।
09001045e ನಿಃಶ್ವಸನ್ಜಿಹ್ಮಗ ಇವ ಕುಂಭಕ್ಷಿಪ್ತೋ ವಿಶಾಂ ಪತೇ।।
ವಿಶಾಂಪತೇ! ದೀರ್ಘಕಾಲದ ನಂತರ ಪುನಃ ಎಚ್ಚರಗೊಂಡ ಆ ಮಹೀಪತಿ ಮಹೀಪಾಲನು ಪುತ್ರವ್ಯಸನದಿಂದ ಪೀಡಿತನಾಗಿ ಗಡಿಗೆಯಲ್ಲಿಟ್ಟ ಹಾವಿನಂತೆ ನಿಟ್ಟುಸಿರುಬಿಡುತ್ತಾ ಮೌನಿಯಾಗಿ ಕುಳಿತಿದ್ದನು.
09001046a ಸಂಜಯೋಽಪ್ಯರುದತ್ತತ್ರ ದೃಷ್ಟ್ವಾ ರಾಜಾನಮಾತುರಂ।
09001046c ತಥಾ ಸರ್ವಾಃ ಸ್ತ್ರಿಯಶ್ಚೈವ ಗಾಂಧಾರೀ ಚ ಯಶಸ್ವಿನೀ।।
ಆತುರನಾಗಿದ್ದ ರಾಜನನ್ನು ನೋಡಿ ಸಂಜಯನೂ, ಮತ್ತು ಹಾಗೆಯೇ ಯಶಸ್ವಿನೀ ಗಾಂಧಾರೀ ಮತ್ತು ಎಲ್ಲ ಸ್ತ್ರೀಯರೂ ರೋದಿಸತೊಡಗಿದರು.
09001047a ತತೋ ದೀರ್ಘೇಣ ಕಾಲೇನ ವಿದುರಂ ವಾಕ್ಯಮಬ್ರವೀತ್।
09001047c ಧೃತರಾಷ್ಟ್ರೋ ನರವ್ಯಾಘ್ರೋ ಮುಹ್ಯಮಾನೋ ಮುಹುರ್ಮುಹುಃ।।
ದೀರ್ಘ ಕಾಲದ ನಂತರ ಕ್ಷಣ-ಕ್ಷಣಕ್ಕೂ ಮೂರ್ಛಿತನಾಗುತ್ತಿದ್ದ ನರವ್ಯಾಘ್ರ ಧೃತರಾಷ್ಟ್ರನು ವಿದುರನಲ್ಲಿ ಈ ಮಾತನ್ನಾಡಿದನು:
09001048a ಗಚ್ಚಂತು ಯೋಷಿತಃ ಸರ್ವಾ ಗಾಂಧಾರೀ ಚ ಯಶಸ್ವಿನೀ।
09001048c ತಥೇಮೇ ಸುಹೃದಃ ಸರ್ವೇ ಭ್ರಶ್ಯತೇ ಮೇ ಮನೋ ಭೃಶಂ।।
“ಯಶಸ್ವಿನೀ ಗಾಂಧಾರಿಯೂ, ಎಲ್ಲ ಸ್ತ್ರೀಯರು ಮತ್ತು ಎಲ್ಲ ಸುಹೃದರೂ ಹೊರಟುಹೋಗಲಿ! ನನ್ನ ಮನಸ್ಸು ತುಂಬಾ ಭ್ರಮೆಗೊಂಡಿದೆ!”
09001049a ಏವಮುಕ್ತಸ್ತತಃ ಕ್ಷತ್ತಾ ತಾಃ ಸ್ತ್ರಿಯೋ ಭರತರ್ಷಭ।
09001049c ವಿಸರ್ಜಯಾಮಾಸ ಶನೈರ್ವೇಪಮಾನಃ ಪುನಃ ಪುನಃ।।
ಭರತರ್ಷಭ! ಹೀಗೆ ಹೇಳಲು ಪುನಃ ಪುನಃ ಕಂಪಿಸುತ್ತಿದ್ದ ಕ್ಷತ್ತನು ಮೆಲ್ಲನೆ ಸ್ತ್ರೀಯರನ್ನು ಕಳುಹಿಸಿಕೊಟ್ಟನು.
09001050a ನಿಶ್ಚಕ್ರಮುಸ್ತತಃ ಸರ್ವಾಸ್ತಾಃ ಸ್ತ್ರಿಯೋ ಭರತರ್ಷಭ।
09001050c ಸುಹೃದಶ್ಚ ತತಃ ಸರ್ವೇ ದೃಷ್ಟ್ವಾ ರಾಜಾನಮಾತುರಂ।।
ಭರತರ್ಷಭ! ಆತುರ ರಾಜನನ್ನು ನೋಡಿ ಆ ಎಲ್ಲ ಸ್ತ್ರೀಯರೂ ಎಲ್ಲ ಸುಹೃದರೂ ಅಲ್ಲಿಂದ ಹೊರಟುಹೋದರು.
09001051a ತತೋ ನರಪತಿಂ ತತ್ರ ಲಬ್ಧಸಂಜ್ಞಂ ಪರಂತಪ।
09001051c ಅವೇಕ್ಷ್ಯ ಸಂಜಯೋ ದೀನೋ ರೋದಮಾನಂ ಭೃಶಾತುರಂ।।
ಪರಂತಪ! ಆಗ ಅಲ್ಲಿ ಸಂಜ್ಞೆಗಳನ್ನು ಪಡೆದು ತುಂಬಾ ಆತುರನಾಗಿ ರೋದಿಸುತ್ತಿದ್ದ ನರಪತಿಯನ್ನು ಸಂಜಯನು ನೋಡಿದನು.
09001052a ಪ್ರಾಂಜಲಿರ್ನಿಃಶ್ವಸಂತಂ ಚ ತಂ ನರೇಂದ್ರಂ ಮುಹುರ್ಮುಹುಃ।
09001052c ಸಮಾಶ್ವಾಸಯತ ಕ್ಷತ್ತಾ ವಚಸಾ ಮಧುರೇಣ ಹ।।
ಬಾರಿ ಬಾರಿ ನಿಟ್ಟುಸಿರುಬಿಡುತ್ತಿದ್ದ ಆ ನರೇಂದ್ರನನ್ನು ಅಂಜಲೀಬದ್ಧ ಕ್ಷತ್ತನು ಮಧುರ ಮಾತುಗಳಿಂದ ಸಂತಯಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಧೃತರಾಷ್ಟ್ರಮೋಹೇ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಧೃತರಾಷ್ಟ್ರಮೋಹ ಎನ್ನುವ ಮೊದಲನೇ ಅಧ್ಯಾಯವು.