ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 69
ಸಾರ
ಕರ್ಣನನ್ನು ವಧಿಸಿದ ಅರ್ಜುನನನ್ನು ಕೃಷ್ಣನು ಪ್ರಶಂಸಿದುದು (1-5). ಕೃಷ್ಣಾರ್ಜುನರು ಯುಧಿಷ್ಠಿರನನ್ನು ಸಂದರ್ಶಿಸಿ ಕರ್ಣನ ವಧೆಯ ವಿಷಯವನ್ನು ತಿಳಿಸಿದುದು; ಪಾಂಡವ ಶಿಬಿರದಲ್ಲಿ ವಿಜಯೋತ್ಸಾಹ (6-41). ಕರ್ಣನ ವಧೆಯ ವಿಷಯವನ್ನು ತಿಳಿದ ಧೃತರಾಷ್ಟ್ರ-ಗಾಂಧಾರಿಯರು ಮೂರ್ಛೆಹೋದುದು (42-43).
08069001 ಸಂಜಯ ಉವಾಚ।
08069001a ತಥಾ ನಿಪಾತಿತೇ ಕರ್ಣೇ ತವ ಸೈನ್ಯೇ ಚ ವಿದ್ರುತೇ।
08069001c ಆಶ್ಲಿಷ್ಯ ಪಾರ್ಥಂ ದಾಶಾರ್ಹೋ ಹರ್ಷಾದ್ವಚನಮಬ್ರವೀತ್।।
ಸಂಜಯನು ಹೇಳಿದನು: “ಹಾಗೆ ಕರ್ಣನ ಪತನವಾಗಿ ನಿನ್ನ ಸೇನೆಯು ಪಲಾಯನಮಾಡಲು ದಾಶಾರ್ಹನು ಪಾರ್ಥನನ್ನು ಬಿಗಿದಪ್ಪಿ ಹರ್ಷದಿಂದ ಈ ಮಾತನ್ನಾಡಿದನು:
08069002a ಹತೋ ಬಲಭಿದಾ ವೃತ್ರಸ್ತ್ವಯಾ ಕರ್ಣೋ ಧನಂಜಯ।
08069002c ವಧಂ ವೈ ಕರ್ಣವೃತ್ರಾಭ್ಯಾಂ ಕಥಯಿಷ್ಯಂತಿ ಮಾನವಾಃ।।
“ಧನಂಜಯ! ವೃತ್ರನು ಬಲಭಿದ ಇಂದ್ರನಿಂದ ಮತ್ತು ಕರ್ಣನು ನಿನ್ನಿಂದ ಹತರಾದರು. ಕರ್ಣ ಮತ್ತು ವೃತ್ರರ ವಧೆಯನ್ನು ಮಾನವರು ಹೇಳುತ್ತಿರುತ್ತಾರೆ.
08069003a ವಜ್ರಿಣಾ ನಿಹತೋ ವೃತ್ರಃ ಸಂಯುಗೇ ಭೂರಿತೇಜಸಾ।
08069003c ತ್ವಯಾ ತು ನಿಹತಃ ಕರ್ಣೋ ಧನುಷಾ ನಿಶಿತೈಃ ಶರೈಃ।।
ಭೂರಿತೇಜಸ ಇಂದ್ರನು ವೃತ್ರನನ್ನು ವಜ್ರದಿಂದ ಯುದ್ಧದಲ್ಲಿ ಸಂಹರಿಸಿದನು. ನೀನಾದರೋ ಕರ್ಣನನ್ನು ಧನುಸ್ಸು ಮತ್ತು ನಿಶಿತ ಶರಗಳಿಂದ ಸಂಹರಿಸಿದೆ.
08069004a ತಮಿಮಂ ವಿಕ್ರಮಂ ಲೋಕೇ ಪ್ರಥಿತಂ ತೇ ಯಶೋವಹಂ।
08069004c ನಿವೇದಯಾವಃ ಕೌಂತೇಯ ಧರ್ಮರಾಜಾಯ ಧೀಮತೇ।।
ನಿನ್ನ ಈ ಯಶೋಕಾರಿ ವಿಕ್ರಮವು ಲೋಕದಲ್ಲಿ ಪ್ರಥಿತವಾಗುತ್ತದೆ. ಇದರ ಕುರಿತು ಧೀಮತ ಕೌಂತೇಯ ಧರ್ಮರಾಜನಿಗೆ ಹೇಳೋಣ!
08069005a ವಧಂ ಕರ್ಣಸ್ಯ ಸಂಗ್ರಾಮೇ ದೀರ್ಘಕಾಲಚಿಕೀರ್ಷಿತಂ।
08069005c ನಿವೇದ್ಯ ಧರ್ಮರಾಜಸ್ಯ ತ್ವಮಾನೃಣ್ಯಂ ಗಮಿಷ್ಯಸಿ।।
ದೀರ್ಘಕಾಲದಿಂದ ಸಂಗ್ರಾಮದಲ್ಲಿ ಕರ್ಣನ ವಧೆಯಾಗಬೇಕೆಂದು ಅವನು ಬಯಸಿದ್ದನು. ಅದು ಆಯಿತೆಂದು ಧರ್ಮರಾಜನಿಗೆ ಹೇಳು. ಅವನ ಋಣದಿಂದ ನೀನು ಮುಕ್ತನಾಗುವೆ.”
08069006a ತಥೇತ್ಯುಕ್ತೇ ಕೇಶವಸ್ತು ಪಾರ್ಥೇನ ಯದುಪುಂಗವಃ।
08069006c ಪರ್ಯವರ್ತಯದವ್ಯಗ್ರೋ ರಥಂ ರಥವರಸ್ಯ ತಂ।।
ಹಾಗೆಯೇ ಆಗಲೆಂದು ಪಾರ್ಥನು ಹೇಳಲು ಯದುಪುಂಗವ ಕೇಶವನು ಅವ್ಯಗ್ರನಾಗಿ ರಥಶ್ರೇಷ್ಠನ ರಥವನ್ನು ಹಿಂದಿರುಗಿಸಿದನು.
08069007a ಧೃಷ್ಟದ್ಯುಮ್ನಂ ಯುಧಾಮನ್ಯುಂ ಮಾದ್ರೀಪುತ್ರೌ ವೃಕೋದರಂ।
08069007c ಯುಯುಧಾನಂ ಚ ಗೋವಿಂದ ಇದಂ ವಚನಮಬ್ರವೀತ್।।
ಗೋವಿಂದನು ಧೃಷ್ಟದ್ಯುಮ್ನ, ಯುಧಾಮನ್ಯು, ಮಾದ್ರೀಪುತ್ರರು, ವೃಕೋದರ ಮತ್ತು ಯುಯುಧಾನರಿಗೆ ಇದನ್ನು ಹೇಳಿದನು:
08069008a ಪರಾನಭಿಮುಖಾ ಯತ್ತಾಸ್ತಿಷ್ಠಧ್ವಂ ಭದ್ರಮಸ್ತು ವಃ।
08069008c ಯಾವದಾವೇದ್ಯತೇ ರಾಜ್ಞೇ ಹತಃ ಕರ್ಣೋಽರ್ಜುನೇನ ವೈ।।
“ಕರ್ಣನು ಅರ್ಜುನನಿಂದ ಹತನಾದುದನ್ನು ರಾಜನಿಗೆ ತಿಳಿಸಿ ಬರುವವರೆಗೆ ನೀವು ಶತ್ರುಗಳಿಗೆ ಅಭಿಮುಖರಾಗಿ ನಿಂತು ಪ್ರಯತ್ನಪಟ್ಟು ಅವರನ್ನು ತಡೆಯಿರಿ. ನಿಮಗೆ ಮಂಗಳವಾಗಲಿ! “
08069009a ಸ ತೈಃ ಶೂರೈರನುಜ್ಞಾತೋ ಯಯೌ ರಾಜನಿವೇಶನಂ।
08069009c ಪಾರ್ಥಮಾದಾಯ ಗೋವಿಂದೋ ದದರ್ಶ ಚ ಯುಧಿಷ್ಠಿರಂ।।
ಹಾಗೆ ಆ ಶೂರರಿಂದ ಬೀಳ್ಕೊಂಡು ಅವರಿಬ್ಬರೂ ರಾಜನಿವೇಶನಕ್ಕೆ ಹೋದರು. ಪಾರ್ಥನನ್ನು ಕರೆದುಕೊಂಡು ಗೋವಿಂದನು ಯುಧಿಷ್ಠಿರನನ್ನು ಸಂದರ್ಶಿಸಿದನು.
08069010a ಶಯಾನಂ ರಾಜಶಾರ್ದೂಲಂ ಕಾಂಚನೇ ಶಯನೋತ್ತಮೇ।
08069010c ಅಗೃಹ್ಣೀತಾಂ ಚ ಚರಣೌ ಮುದಿತೌ ಪಾರ್ಥಿವಸ್ಯ ತೌ।।
ಕಾಂಚನದ ಉತ್ತಮ ಶಯನದಲ್ಲಿ ಮಲಗಿದ್ದ ಆ ರಾಜಶಾರ್ದೂಲನ ಚರಣಗಳನ್ನು ಸಂತೋಷದಿಂದಿದ್ದ ಅವರಿಬ್ಬರೂ ಹಿಡಿದುಕೊಂಡರು.
08069011a ತಯೋಃ ಪ್ರಹರ್ಷಮಾಲಕ್ಷ್ಯ ಪ್ರಹಾರಾಂಶ್ಚಾತಿಮಾನುಷಾನ್।
08069011c ರಾಧೇಯಂ ನಿಹತಂ ಮತ್ವಾ ಸಮುತ್ತಸ್ಥೌ ಯುಧಿಷ್ಠಿರಃ।।
ಅವರ ಹರ್ಷವನ್ನೂ ಸೈನಿಕರು ಎದೆತಟ್ಟಿಕೊಳ್ಳುತ್ತಿರುವುದನ್ನೂ ಕಂಡ ಯುಧಿಷ್ಠಿರನು ರಾಧೇಯನು ಹತನಾದನೆಂದು ತಿಳಿದು ಮೇಲೆದ್ದು ನಿಂತನು.
08069012a ತತೋಽಸ್ಮೈ ತದ್ಯಥಾವೃತ್ತಂ ವಾಸುದೇವಃ ಪ್ರಿಯಂವದಃ।
08069012c ಕಥಯಾಮಾಸ ಕರ್ಣಸ್ಯ ನಿಧನಂ ಯದುನಂದನಃ।।
ಆಗ ಪ್ರಿಯಂವದ ವಾಸುದೇವ ಯದುನಂದನನು ಅವನಿಗೆ ಕರ್ಣನ ನಿಧನದ ಕುರಿತು, ಅಲ್ಲಿ ಹೇಗೆ ನಡೆಯಿತೋ ಹಾಗೆ, ಹೇಳಿದನು.
08069013a ಈಷದುತ್ಸ್ಮಯಮಾನಸ್ತು ಕೃಷ್ಣೋ ರಾಜಾನಮಬ್ರವೀತ್।
08069013c ಯುಧಿಷ್ಠಿರಂ ಹತಾಮಿತ್ರಂ ಕೃತಾಂಜಲಿರಥಾಚ್ಯುತಃ।।
ಅಚ್ಯುತ ಕೃಷ್ಣನು ನಸುನಗುತ್ತ ಶತ್ರುವನ್ನು ಕಳೆದುಕೊಂಡ ರಾಜಾ ಯುಧಿಷ್ಠಿರನಿಗೆ ಬದ್ಧಾಂಜಲಿಯಾಗಿ ಹೇಳಿದನು:
08069014a ದಿಷ್ಟ್ಯಾ ಗಾಂಡೀವಧನ್ವಾ ಚ ಪಾಂಡವಶ್ಚ ವೃಕೋದರಃ।
08069014c ತ್ವಂ ಚಾಪಿ ಕುಶಲೀ ರಾಜನ್ಮಾದ್ರೀಪುತ್ರೌ ಚ ಪಾಂಡವೌ।।
“ರಾಜನ್! ಒಳ್ಳೆಯದಾಯಿತು ಗಾಂಡೀವಧನ್ವಿ ಪಾಂಡವ, ವೃಕೋದರ, ಮಾದ್ರೀಪುತ್ರ ಪಾಂಡವರೀರ್ವರೂ ಮತ್ತು ನೀನೂ ಕೂಡ ಕುಶಲರಾಗಿರುವಿರಿ!
08069015a ಮುಕ್ತಾ ವೀರಕ್ಷಯಾದಸ್ಮಾತ್ಸಂಗ್ರಾಮಾಲ್ಲೋಮಹರ್ಷಣಾತ್।
08069015c ಕ್ಷಿಪ್ರಮುತ್ತರಕಾಲಾನಿ ಕುರು ಕಾರ್ಯಾಣಿ ಪಾರ್ಥಿವ।।
ಪಾರ್ಥಿವ! ಈ ಲೋಮಹರ್ಷಣ ವೀರಕ್ಷಯಕಾರಕ ಸಂಗ್ರಾಮದಿಂದ ನೀವು ಪಾರಾಗಿದ್ದೀರಿ. ಆದುದರಿಂದ ಮುಂದೆ ಮಾಡಬೇಕಾದ ಕಾರ್ಯಗಳನ್ನು ಮಾಡಲು ಬೇಗನೇ ಉಪಕ್ರಮಿಸು.
08069016a ಹತೋ ವೈಕರ್ತನಃ ಕ್ರೂರಃ ಸೂತಪುತ್ರೋ ಮಹಾಬಲಃ।
08069016c ದಿಷ್ಟ್ಯಾ ಜಯಸಿ ರಾಜೇಂದ್ರ ದಿಷ್ಟ್ಯಾ ವರ್ಧಸಿ ಪಾಂಡವ।।
ರಾಜೇಂದ್ರ! ಕ್ರೂರ ಮಹಾಬಲ ವೈಕರ್ತನ ಸೂತಪುತ್ರನು ಹತನಾಗಿದ್ದಾನೆ. ಅದೃಷ್ಟವಷಾತ್ ನಿನಗೆ ಜಯವಾಗಿದೆ. ಪಾಂಡವ! ಅದೃಷ್ಟವಷಾತ್ ನಿನ್ನ ಏಳ್ಗೆಯಾಗುತ್ತಿದೆ.
08069017a ಯಃ ಸ ದ್ಯೂತಜಿತಾಂ ಕೃಷ್ಣಾಂ ಪ್ರಾಹಸತ್ಪುರುಷಾಧಮಃ।
08069017c ತಸ್ಯಾದ್ಯ ಸೂತಪುತ್ರಸ್ಯ ಭೂಮಿಃ ಪಿಬತಿ ಶೋಣಿತಂ।।
ದ್ಯೂತದಲ್ಲಿ ಗೆದ್ದಿದ್ದ ಕೃಷ್ಣೆಯನ್ನು ನೋಡಿ ಯಾವ ಪುರುಷಾಧಮನು ನಕ್ಕಿದ್ದನೋ ಆ ಸೂತಪುತ್ರನ ರಕ್ತವನ್ನು ಇಂದು ಭೂಮಿಯು ಕುಡಿಯುತ್ತಿದೆ.
08069018a ಶೇತೇಽಸೌ ಶರದೀರ್ಣಾಂಗಃ ಶತ್ರುಸ್ತೇ ಕುರುಪುಂಗವ।
08069018c ತಂ ಪಶ್ಯ ಪುರುಷವ್ಯಾಘ್ರ ವಿಭಿನ್ನಂ ಬಹುಧಾ ಶರೈಃ।।
ಪುರುಷವ್ಯಾಘ್ರ! ಕುರುಪುಂಗವ! ಬಾಣಗಳಿಂದ ಸೀಳಲ್ಪಟ್ಟು ಅನೇಕ ಶರಗಳಿಂದ ಕತ್ತರಿಸಲ್ಪಟ್ಟಿರುವ ನಿನ್ನ ಶತ್ರುವನ್ನು ನೋಡು!”
08069019a ಯುಧಿಷ್ಠಿರಸ್ತು ದಾಶಾರ್ಹಂ ಪ್ರಹೃಷ್ಟಃ ಪ್ರತ್ಯಪೂಜಯತ್।
08069019c ದಿಷ್ಟ್ಯಾ ದಿಷ್ಟ್ಯೇತಿ ರಾಜೇಂದ್ರ ಪ್ರೀತ್ಯಾ ಚೇದಮುವಾಚ ಹ।।
ಯುಧಿಷ್ಠಿರನಾದರೋ ಪ್ರಹೃಷ್ಟನಾಗಿ ದಾಶಾರ್ಹನನ್ನು ಪ್ರತಿಪೂಜಿಸಿದನು. ಸಂತೋಷದಿಂದ “ಒಳ್ಳೆಯದಾಯಿತು! ಒಳ್ಳೆಯದಾಯಿತು!” ಎಂದು ಹೇಳುತ್ತಾ ಇದನ್ನೂ ಹೇಳಿದನು:
08069020a ನೈತಚ್ಚಿತ್ರಂ ಮಹಾಬಾಹೋ ತ್ವಯಿ ದೇವಕಿನಂದನ।
08069020c ತ್ವಯಾ ಸಾರಥಿನಾ ಪಾರ್ಥೋ ಯತ್ಕುರ್ಯಾದದ್ಯ ಪೌರುಷಂ।।
“ಮಹಾಬಾಹೋ! ದೇವಕೀನಂದನ! ನೀನಿರುವಾಗ ಮತ್ತು ನೀನು ಸಾರಥಿಯಾಗಿರುವಾಗ ಇಂದು ಪಾರ್ಥನು ತೋರಿಸಿದ ಪೌರುಷವು ನನಗೆ ಆಶ್ಚರ್ಯವೆನಿಸುವುದಿಲ್ಲ.”
08069021a ಪ್ರಗೃಹ್ಯ ಚ ಕುರುಶ್ರೇಷ್ಠಃ ಸಾಂಗದಂ ದಕ್ಷಿಣಂ ಭುಜಂ।
08069021c ಉವಾಚ ಧರ್ಮಭೃತ್ಪಾರ್ಥ ಉಭೌ ತೌ ಕೇಶವಾರ್ಜುನೌ।।
ಅನಂತರ ಆ ಕುರುಶ್ರೇಷ್ಠ ಧರ್ಮಭೃತ್ ಪಾರ್ಥನು ತೋಳ್ಬಂದಿಯಿಂದ ಕೂಡಿದ ಬಲಭುಜವನ್ನು ಮೇಲೆತ್ತಿ ಕೇಶವಾರ್ಜುನರಿಬ್ಬರಿಗೂ ಹೇಳಿದನು:
08069022a ನರನಾರಾಯಣೌ ದೇವೌ ಕಥಿತೌ ನಾರದೇನ ಹ।
08069022c ಧರ್ಮಸಂಸ್ಥಾಪನೇ ಯುಕ್ತೌ ಪುರಾಣೌ ಪುರುಷೋತ್ತಮೌ।।
“ನಾರದನು ಹೇಳಿದಂತೆ ನೀವಿಬ್ಬರೂ ನರ-ನಾರಾಯಣ ದೇವರುಗಳು. ಧರ್ಮಸಂಸ್ಥಾಪನೆಯಲ್ಲಿ ನಿರತರಾಗಿರುವ ಪುರಾಣ ಪುರುಷೋತ್ತಮರು.
08069023a ಅಸಕೃಚ್ಚಾಪಿ ಮೇಧಾವೀ ಕೃಷ್ಣದ್ವೈಪಾಯನೋ ಮಮ।
08069023c ಕಥಾಮೇತಾಂ ಮಹಾಬಾಹೋ ದಿವ್ಯಾಮಕಥಯತ್ಪ್ರಭುಃ।।
ಮಹಾಬಾಹೋ! ಹಾಗೆಯೇ ತತ್ತ್ವವಿದ ಮೇಧಾವೀ ಪ್ರಭು ಕೃಷ್ಣದ್ವೈಪಾಯನನೂ ಕೂಡ ಈ ವಿಷಯವನ್ನು ಹಲವು ಬಾರಿ ನನಗೆ ಹೇಳಿದ್ದನು.
08069024a ತವ ಕೃಷ್ಣ ಪ್ರಭಾವೇಣ ಗಾಂಡೀವೇನ ಧನಂಜಯಃ।
08069024c ಜಯತ್ಯಭಿಮುಖಾಂ ಶತ್ರೂನ್ನ ಚಾಸೀದ್ವಿಮುಖಃ ಕ್ವ ಚಿತ್।।
ಕೃಷ್ಣ! ನಿನ್ನ ಪ್ರಭಾವದಿಂದಾಗಿ ಧನಂಜಯನು ಗಾಂಡೀವದಿಂದ ಶತ್ರುಗಳನ್ನು ಎದುರಿಸಿ ಜಯವನ್ನೇ ಪಡೆದಿದ್ದಾನೆ. ಎಂದೂ ವಿಮುಖನಾಗಲಿಲ್ಲ.
08069025a ಜಯಶ್ಚೈವ ಧ್ರುವೋಽಸ್ಮಾಕಂ ನ ತ್ವಸ್ಮಾಕಂ ಪರಾಜಯಃ।
08069025c ಯದಾ ತ್ವಂ ಯುಧಿ ಪಾರ್ಥಸ್ಯ ಸಾರಥ್ಯಮುಪಜಗ್ಮಿವಾನ್।।
ಯುದ್ಧದಲ್ಲಿ ನೀನು ಪಾರ್ಥನ ಸಾರಥ್ಯವನ್ನು ವಹಿಸುತ್ತಿರುವಾಗ ನಮಗೆ ಜಯವೇ ನಿಶ್ಚಯವಾದುದು. ನಮಗೆ ಪರಾಜಯವೆನ್ನುವುದೇ ಇರುವುದಿಲ್ಲ.”
08069026a ಏವಮುಕ್ತ್ವಾ ಮಹಾರಾಜ ತಂ ರಥಂ ಹೇಮಭೂಷಿತಂ।
08069026c ದಂತವರ್ಣೈರ್ಹಯೈರ್ಯುಕ್ತಂ ಕಾಲವಾಲೈರ್ಮಹಾರಥಃ।।
08069027a ಆಸ್ಥಾಯ ಪುರುಷವ್ಯಾಘ್ರಃ ಸ್ವಬಲೇನಾಭಿಸಂವೃತಃ।
08069027c ಕೃಷ್ಣಾರ್ಜುನಾಭ್ಯಾಂ ವೀರಾಭ್ಯಾಮನುಮನ್ಯ ತತಃ ಪ್ರಿಯಂ।।
ಮಹಾರಾಜ! ಹೀಗೆ ಹೇಳಿ ಆ ಪುರುಷವ್ಯಾಘ್ರ ಮಹಾರಥನು ಶರೀರದಲ್ಲಿ ಬಿಳುಪಾಗಿಯೂ ಬಾಲದಲ್ಲಿ ಕಪ್ಪಾಗಿಯೂ ಇದ್ದ ಕುದುರೆಗಳನ್ನು ಕಟ್ಟಿದ್ದ ಪ್ರಿಯ ಹೇಮಭೂಷಿತ ರಥವನ್ನೇರಿ ಸ್ವಸೇನೆಯಿಂದ ಪರಿವೃತವಾಗಿ, ಕೃಷ್ಣಾರ್ಜುನರನ್ನೊಡಗೂಡಿ ಹೊರಟನು.
08069028a ಆಗತೋ ಬಹುವೃತ್ತಾಂತಂ ದ್ರಷ್ಟುಮಾಯೋಧನಂ ತದಾ।
08069028c ಆಭಾಷಮಾಣಸ್ತೌ ವೀರಾವುಭೌ ಮಾಧವಫಲ್ಗುನೌ।।
08069029a ಸ ದದರ್ಶ ರಣೇ ಕರ್ಣಂ ಶಯಾನಂ ಪುರುಷರ್ಷಭಂ।
08069029c ಗಾಂಡೀವಮುಕ್ತೈರ್ವಿಶಿಖೈಃ ಸರ್ವತಃ ಶಕಲೀಕೃತಂ।।
ದಾರಿಯಲ್ಲಿ ವೀರರಾದ ಮಾಧವ-ಫಲ್ಗುನರೊಂದಿಗೆ ಯುದ್ಧದ ವಿಷವಾಗಿ ಬಹಳವಾಗಿ ಮಾತನಾಡಿಕೊಳ್ಳುತ್ತಾ ರಣಭೂಮಿಯನ್ನು ನೋಡಲು ಹೊರಟ ಅವನು ರಣದಲ್ಲಿ ಗಾಂಡೀವದಿಂದ ಹೊರಟ ವಿಶಿಖಗಳಿಂದ ದೇಹದಲ್ಲೆಲ್ಲಾ ಗಾಯಗೊಂಡು ಮಲಗಿದ್ದ ಪುರುಷರ್ಷಭ ಕರ್ಣನನ್ನು ನೋಡಿದನು.
08069030a ಸಪುತ್ರಂ ನಿಹತಂ ದೃಷ್ಟ್ವಾ ಕರ್ಣಂ ರಾಜಾ ಯುಧಿಷ್ಠಿರಃ।
08069030c ಪ್ರಶಶಂಸ ನರವ್ಯಾಘ್ರಾವುಭೌ ಮಾಧವಪಾಂಡವೌ।।
ಪುತ್ರನೊಂದಿಗೆ ಹತನಾಗಿದ್ದ ಕರ್ಣನನ್ನು ನೋಡಿ ರಾಜಾ ಯುಧಿಷ್ಠಿರನು ನರವ್ಯಾಘ್ರ ಮಾಧವ-ಪಾಂಡವರಿಬ್ಬರನ್ನೂ ಪ್ರಶಂಸಿಸಿದನು.
08069031a ಅದ್ಯ ರಾಜಾಸ್ಮಿ ಗೋವಿಂದ ಪೃಥಿವ್ಯಾಂ ಭ್ರಾತೃಭಿಃ ಸಹ।
08069031c ತ್ವಯಾ ನಾಥೇನ ವೀರೇಣ ವಿದುಷಾ ಪರಿಪಾಲಿತಃ।।
“ಗೋವಿಂದ! ನಿನ್ನ ರಕ್ಷಣೆ, ವೀರ್ಯ, ಮತ್ತು ಬುದ್ಧಿವಂತಿಕೆಯಿಂದ ಪರಿಪಾಲಿತನಾದ ನಾನು ಇಂದು ಸಹೋದರರೊಂದಿಗೆ ಪೃಥ್ವಿಯ ರಾಜನಾಗಿದ್ದೇನೆ.
08069032a ಹತಂ ದೃಷ್ಟ್ವಾ ನರವ್ಯಾಘ್ರಂ ರಾಧೇಯಮಭಿಮಾನಿನಂ।
08069032c ನಿರಾಶೋಽದ್ಯ ದುರಾತ್ಮಾಸೌ ಧಾರ್ತರಾಷ್ಟ್ರೋ ಭವಿಷ್ಯತಿ।
08069032e ಜೀವಿತಾಚ್ಚಾಪಿ ರಾಜ್ಯಾಚ್ಚ ಹತೇ ಕರ್ಣೇ ಮಹಾರಥೇ।।
ನರವ್ಯಾಘ್ರ ಅಭಿಮಾನಿ ರಾಧೇಯನು ಹತನಾದುದನ್ನು ನೋಡಿ ಇಂದು ದುರಾತ್ಮ ಧಾರ್ತರಾಷ್ಟ್ರನು ಮಹಾರಥ ಕರ್ಣನು ಹತನಾದನೆಂದು ಜೀವಿತದಲ್ಲಿಯೂ ರಾಜ್ಯದ ವಿಷಯದಲ್ಲಿಯೂ ಅತ್ಯಂತ ನಿರಾಶನಾಗುತ್ತಾನೆ.
08069033a ತ್ವತ್ಪ್ರಸಾದಾದ್ವಯಂ ಚೈವ ಕೃತಾರ್ಥಾಃ ಪುರುಷರ್ಷಭ।
08069033c ತ್ವಂ ಚ ಗಾಂಡೀವಧನ್ವಾ ಚ ವಿಜಯೀ ಯದುನಂದನ।
08069033e ದಿಷ್ಟ್ಯಾ ಜಯಸಿ ಗೋವಿಂದ ದಿಷ್ಟ್ಯಾ ಕರ್ಣೋ ನಿಪಾತಿತಃ।।
ಪುರುಷರ್ಷಭ! ನಿನ್ನ ಅನುಗ್ರಹದಿಂದ ನಾವು ಕೃತಾರ್ಥರಾಗಿದ್ದೇವೆ. ಯದುನಂದನ! ನೀನು ಮತ್ತು ಗಾಂಡೀವಧನ್ವಿಯು ವಿಜಯಿಯಾಗಿರುವಿರಿ. ಗೋವಿಂದ! ಸೌಭಾಗ್ಯದಿಂದಲೇ ನೀವು ಜಯಿಸಿರುವಿರಿ! ಸೌಭಾಗ್ಯದಿಂದಲೇ ಕರ್ಣನು ಪತನಹೊಂದಿದನು!”
08069034a ಏವಂ ಸ ಬಹುಶೋ ಹೃಷ್ಟಃ ಪ್ರಶಶಂಸ ಜನಾರ್ದನಂ।
08069034c ಅರ್ಜುನಂ ಚಾಪಿ ರಾಜೇಂದ್ರ ಧರ್ಮರಾಜೋ ಯುಧಿಷ್ಠಿರಃ।।
ರಾಜೇಂದ್ರ! ಹೀಗೆ ಧರ್ಮರಾಜ ಯುಧಿಷ್ಠಿರನು ಅತ್ಯಂತ ಹರ್ಷಿತನಾಗಿ ಜನಾರ್ದನನನ್ನೂ ಅರ್ಜುನನನ್ನೂ ಬಹಳವಾಗಿ ಪ್ರಶಂಸಿಸಿದನು.
08069035a ತತೋ ಭೀಮಪ್ರಭೃತಿಭಿಃ ಸರ್ವೈಶ್ಚ ಭ್ರಾತೃಭಿರ್ವೃತಂ।
08069035c ವರ್ಧಯಂತಿ ಸ್ಮ ರಾಜಾನಂ ಹರ್ಷಯುಕ್ತಾ ಮಹಾರಥಾಃ।।
ಆಗ ಭೀಮಸೇನನೇ ಮೊದಲಾದ ಸರ್ವ ಭಾತೃಗಳೂ ಹರ್ಷಯುಕ್ತ ಮಹಾರಥರೂ ರಾಜನನ್ನು ಅಭಿನಂದಿಸಿದರು.
08069036a ನಕುಲಃ ಸಹದೇವಶ್ಚ ಪಾಂಡವಶ್ಚ ವೃಕೋದರಃ।
08069036c ಸಾತ್ಯಕಿಶ್ಚ ಮಹಾರಾಜ ವೃಷ್ಣೀನಾಂ ಪ್ರವರೋ ರಥಃ।।
08069037a ಧೃಷ್ಟದ್ಯುಮ್ನಃ ಶಿಖಂಡೀ ಚ ಪಾಂಡುಪಾಂಚಾಲಸೃಂಜಯಾಃ।
08069037c ಪೂಜಯಂತಿ ಸ್ಮ ಕೌಂತೇಯಂ ನಿಹತೇ ಸೂತನಂದನೇ।।
ಸೂತನಂದನನು ಹತನಾಗಲು ನಕುಲ-ಸಹದೇವರು, ಪಾಂಡವ ವೃಕೋದರ, ವೃಷ್ಣಿಗಳ ರಥಪ್ರವರ ಸಾತ್ಯಕಿ, ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಇತರ ಪಾಂಡು-ಪಾಂಚಾಲ-ಸೃಂಜಯರು ಕೌಂತೇಯನನ್ನು ಗೌರವಿಸಿದರು.
08069038a ತೇ ವರ್ಧಯಿತ್ವಾ ನೃಪತಿಂ ಪಾಂಡುಪುತ್ರಂ ಯುಧಿಷ್ಠಿರಂ।
08069038c ಜಿತಕಾಶಿನೋ ಲಬ್ಧಲಕ್ಷಾ ಯುದ್ಧಶೌಂಡಾಃ ಪ್ರಹಾರಿಣಃ।।
08069039a ಸ್ತುವಂತಃ ಸ್ತವಯುಕ್ತಾಭಿರ್ವಾಗ್ಭಿಃ ಕೃಷ್ಣೌ ಪರಂತಪೌ।
08069039c ಜಗ್ಮುಃ ಸ್ವಶಿಬಿರಾಯೈವ ಮುದಾ ಯುಕ್ತಾ ಮಹಾರಥಾಃ।।
ವಿಜಯೋಲ್ಲಾಸಿತರಾದ, ಗುರಿಯನ್ನು ತಲುಪಿದ್ದ, ಯುದ್ಧಕುಶಲರಾದ, ಪ್ರಹಾರಿಗಳಾದ ಮಹಾರಥರು ಮುದಿತರಾಗಿ ನೃಪತಿ ಪಾಂಡುಪುತ್ರ ಯುಧಿಷ್ಠಿರನನ್ನು ಅಭಿನಂದಿಸಿ, ಪರಂತಪರಾದ ಕೃಷ್ಣರಿಬ್ಬರನ್ನೂ ಪ್ರಶಂಸಯುಕ್ತ ಮಾತುಗಳಿಂದ ಸ್ತುತಿಸುತ್ತಾ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
08069040a ಏವಮೇಷ ಕ್ಷಯೋ ವೃತ್ತಃ ಸುಮಹಾಽಲ್ಲೋಮಹರ್ಷಣಃ।
08069040c ತವ ದುರ್ಮಂತ್ರಿತೇ ರಾಜನ್ನತೀತಂ ಕಿಂ ನು ಶೋಚಸಿ।।
ರಾಜನ್! ನಿನ್ನ ದುರ್ಮಂತ್ರದಿಂದಾಗಿ ಈ ಮಹಾ ಲೋಮಹರ್ಷಣಕಾರೀ ವಿನಾಶವು ನಡೆದುಹೋಯಿತು. ಆಗಿಹೋದುದಕ್ಕೆ ನೀನೇಕೆ ದುಃಖಿಸುವೆ?””
08069041 ವೈಶಂಪಾಯನ ಉವಾಚ।
08069041a ಶ್ರುತ್ವಾ ತದಪ್ರಿಯಂ ರಾಜನ್ಧೃತರಾಷ್ಟ್ರೋ ಮಹೀಪತಿಃ।
08069041c ಪಪಾತ ಭೂಮೌ ನಿಶ್ಚೇಷ್ಟಃ ಕೌರವ್ಯಃ ಪರಮಾರ್ತಿವಾನ್।
08069041e ತಥಾ ಸತ್ಯವ್ರತಾ ದೇವೀ ಗಾಂಧಾರೀ ಧರ್ಮದರ್ಶಿನೀ।।
ವೈಶಂಪಾಯನನು ಹೇಳಿದನು: “ರಾಜನ್! ಅಪ್ರಿಯವಾದ ಅದನ್ನು ಕೇಳಿ ಪರಮ ದುಃಖಿತನಾದ ಕೌರವ್ಯ ಮಹೀಪತಿ ಧೃತರಾಷ್ಟ್ರನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು. ಹಾಗೆಯೇ ಸತ್ಯವ್ರತೆ ದೇವೀ ಧರ್ಮದರ್ಶಿನಿ ಗಾಂಧಾರಿಯೂ ಕೂಡ ಕೆಳಗೆ ಬಿದ್ದಳು.
08069042a ತಂ ಪ್ರತ್ಯಗೃಹ್ಣಾದ್ವಿದುರೋ ನೃಪತಿಂ ಸಂಜಯಸ್ತಥಾ।
08069042c ಪರ್ಯಾಶ್ವಾಸಯತಶ್ಚೈವಂ ತಾವುಭಾವೇವ ಭೂಮಿಪಂ।।
ಅವಳನ್ನು ವಿದುರನೂ ನೃಪತಿಯನ್ನು ಸಂಜಯನೂ ಹಿಡಿದು ಕುಳ್ಳಿರಿಸಿದರು. ಅನಂತರ ಅವರಿಬ್ಬರೂ ಭೂಮಿಪನನ್ನು ಶೈತ್ಯೋಪಚಾರ ಮಾಡಿ ಸಮಾಧಾನಗೊಳಿಸಿದರು.
08069043a ತಥೈವೋತ್ಥಾಪಯಾಮಾಸುರ್ಗಾಂಧಾರೀಂ ರಾಜಯೋಷಿತಃ।
08069043c ತಾಭ್ಯಾಮಾಶ್ವಾಸಿತೋ ರಾಜಾ ತೂಷ್ಣೀಮಾಸೀದ್ವಿಚೇತನಃ।।
ಹಾಗೆಯೇ ರಾಜಕನ್ಯೆಯರು ಗಾಂಧಾರಿಯನ್ನು ಎಬ್ಬಿಸಿ ಸಂತವಿಸಿದರು. ಅವರಿಬ್ಬರಿಂದಲೂ ಆಶ್ವಾಸಿತನಾದ ರಾಜನು ಬುದ್ಧಿಯನ್ನು ಕಳೆದುಕೊಂಡವನಂತೆ ಸುಮ್ಮನೇ ಕುಳಿತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರಹರ್ಷೇ ಏಕೋನಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರಹರ್ಷ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಕರ್ಣಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-8/18, ಉಪಪರ್ವಗಳು-73/100೦, ಅಧ್ಯಾಯಗಳು-1219/1995, ಶ್ಲೋಕಗಳು-45193/73784.