ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 68
ಸಾರ
ಕರ್ಣನು ಹತನಾದ ನಂತರ ಶಲ್ಯನು ದುರ್ಯೋಧನನಿಗೆ ರಣಭೂಮಿಯನ್ನು ತೋರಿಸಿದುದು (1-31). ಕರ್ಣನ ಮರಣದಿಂದ ದುಃಖಿತರಾದ ಕುರುಸೇನಾ ಪ್ರಮುಖರು ತಮ್ಮತಮ್ಮ ಶಿಬಿರಗಳಿಗೆ ತೆರಳಿದುದು; ಅಂತರಿಕ್ಷದಲ್ಲಿ ಹಾಹಾಕಾರವುಂಟಾದುದು (32-51). ಪಾಂಡವ ಸೇನೆ ಮತ್ತು ಇತರ ಲೋಕಗಳು ಕೃಷ್ಣಾರ್ಜುನರನ್ನು ಪ್ರಶಂಸಿಸಿ ಅಭಿನಂದಿಸಿದುದು (52-63).
08068001 ಸಂಜಯ ಉವಾಚ।
08068001a ಶಲ್ಯಸ್ತು ಕರ್ಣಾರ್ಜುನಯೋರ್ವಿಮರ್ದೇ ಬಲಾನಿ ದೃಷ್ಟ್ವಾ ಮೃದಿತಾನಿ ಬಾಣೈಃ।
08068001c ದುರ್ಯೋಧನಂ ಯಾಂತಮವೇಕ್ಷಮಾಣೋ ಸಂದರ್ಶಯದ್ಭಾರತ ಯುದ್ಧಭೂಮಿಂ।।
ಸಂಜಯನು ಹೇಳಿದನು: “ಭಾರತ! ಕರ್ಣಾರ್ಜುನರ ಯುದ್ಧದಲ್ಲಿ ಬಾಣಗಳಿಂದ ನಾಶಗೊಂಡ ಸೇನೆಗಳನ್ನು ನೋಡಿ ಶಲ್ಯನು ವೀಕ್ಷಿಸಲು ಬರುತ್ತಿದ್ದ ದುರ್ಯೋಧನನಿಗೆ ಯುದ್ಧಭೂಮಿಯನ್ನು ತೋರಿಸಿದನು.
08068002a ನಿಪಾತಿತಸ್ಯಂದನವಾಜಿನಾಗಂ ದೃಷ್ಟ್ವಾ ಬಲಂ ತದ್ಧತಸೂತಪುತ್ರಂ।
08068002c ದುರ್ಯೋಧನೋಽಶ್ರುಪ್ರತಿಪೂರ್ಣನೇತ್ರೋ ಮುಹುರ್ಮುಹುರ್ನ್ಯಶ್ವಸದಾರ್ತರೂಪಃ।।
ನಾಶವಾಗಿ ಕೆಳಗುರುಳಿದ್ದ ರಥ-ಕುದುರೆ-ಆನೆಗಳ ಸೇನೆಯನ್ನು ಮತ್ತು ಸೂತಪುತ್ರನು ಹತನಾದುದನ್ನು ನೋಡಿ ದುರ್ಯೋಧನನು ಕಂಬನಿದುಂಬಿದ ಕಣ್ಣುಗಳುಳ್ಳವನಾಗಿ ಆರ್ತರೂಪವನ್ನು ತಾಳಿ ಬಾರಿಬಾರಿಗೂ ನಿಟ್ಟುಸಿರುಬಿಡುತ್ತಿದ್ದನು.
08068003a ಕರ್ಣಂ ತು ಶೂರಂ ಪತಿತಂ ಪೃಥಿವ್ಯಾಂ ಶರಾಚಿತಂ ಶೋಣಿತದಿಗ್ಧಗಾತ್ರಂ।
08068003c ಯದೃಚ್ಚಯಾ ಸೂರ್ಯಮಿವಾವನಿಸ್ಥಂ ದಿದೃಕ್ಷವಃ ಸಂಪರಿವಾರ್ಯ ತಸ್ಥುಃ।।
ಬಾಣಗಳಿಂದ ಚುಚ್ಚಲ್ಪಟ್ಟು ರಕ್ತದಿಂದ ತೋಯ್ದುಹೋಗಿ ರಣಭೂಮಿಯಲ್ಲಿ ಬಿದ್ದು ಸ್ವೇಚ್ಛೆಯಿಂದ ಭೂಮಿಗೆ ಬಂದಿಳಿದಿರುವ ಸೂರ್ಯನಂತೆ ಕಾಣುತ್ತಿದ್ದ ಶೂರ ಕರ್ಣನನ್ನು ನೋಡಲು ಎಲ್ಲ ಯೋಧರೂ ಅವನನ್ನು ಸುತ್ತುವರೆದು ನಿಂತರು.
08068004a ಪ್ರಹೃಷ್ಟವಿತ್ರಸ್ತವಿಷಣ್ಣವಿಸ್ಮೃತಾಸ್ ತಥಾಪರೇ ಶೋಕಗತಾ ಇವಾಭವನ್।
08068004c ಪರೇ ತ್ವದೀಯಾಶ್ಚ ಪರಸ್ಪರೇಣ ಯಥಾ ಯಥೈಷಾಂ ಪ್ರಕೃತಿಸ್ತಥಾಭವನ್।।
ಕೆಲವರು ಪ್ರಹೃಷ್ಟರಾಗಿದ್ದರು, ಕೆಲವರು ಭಯಗ್ರಸ್ಥರಾಗಿದ್ದರು, ಕೆಲವರು ವಿಷಣ್ಣರಾಗಿದ್ದರು, ಕೆಲವರು ವಿಸ್ಮಿತರಾಗಿದ್ದರು ಮತ್ತು ಇತರರು ಶೋಕಗತರಾಗಿದ್ದರು. ಹೀಗೆ ನಿನ್ನವರು ಮತ್ತು ನಿನ್ನ ಶತ್ರುಗಳು ತಮ್ಮ ತಮ್ಮ ಸ್ವಭಾವಗಳಿಗನುಗುಣವಾಗಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದರು.
08068005a ಪ್ರವಿದ್ಧವರ್ಮಾಭರಣಾಂಬರಾಯುಧಂ ಧನಂಜಯೇನಾಭಿಹತಂ ಹತೌಜಸಂ।
08068005c ನಿಶಮ್ಯ ಕರ್ಣಂ ಕುರವಃ ಪ್ರದುದ್ರುವುರ್ ಹತರ್ಷಭಾ ಗಾವ ಇವಾಕುಲಾಕುಲಾಃ।।
ಧನಂಜಯನಿಂದ ಹತನಾಗಿ ವೀರ್ಯವನ್ನು ಕಳೆದುಕೊಂಡು ಚದುರಿಹೋಗಿದ್ದ ಕವಚ-ವಸ್ತ್ರ-ಆಭರಣ-ಆಯುಧಗಳಿಂದ ಯುಕ್ತನಾಗಿದ್ದ ಕರ್ಣನನ್ನು ನೋಡಿ ವಿಜನ ಅರಣ್ಯದಲ್ಲಿ ಗೂಳಿಯು ಸತ್ತುಹೋದನಂತರ ಹಸುಗಳು ಹೇಗೋ ಹಾಗೆ ದಿಕ್ಕಾಪಾಲಾಗಿ ಓಡಿ ಹೋದರು.
08068006a ಕೃತ್ವಾ ವಿಮರ್ದಂ ಭೃಶಮರ್ಜುನೇನ ಕರ್ಣಂ ಹತಂ ಕೇಸರಿಣೇವ ನಾಗಂ।
08068006c ದೃಷ್ಟ್ವಾ ಶಯಾನಂ ಭುವಿ ಮದ್ರರಾಜೋ ಭೀತೋಽಪಸರ್ಪತ್ಸರಥಃ ಸುಶೀಘ್ರಂ।।
ಸಿಂಹದಿಂದ ಆನೆಯು ಹತಗೊಂಡಂತೆ ಅರ್ಜುನನೊಡನೆ ಭೀಕರ ಯುದ್ಧವನ್ನು ಮಾಡಿ ರಣಭೂಮಿಯಲ್ಲಿ ಮಲಗಿದ್ದ ಕರ್ಣನನ್ನು ನೋಡಿ ಭೀತ ಮದ್ರರಾಜನು ಶೀಘ್ರವಾಗಿ ತನ್ನ ರಥವನ್ನು ಓಡಿಸಿದನು.
08068007a ಮದ್ರಾಧಿಪಶ್ಚಾಪಿ ವಿಮೂಢಚೇತಾಸ್ ತೂರ್ಣಂ ರಥೇನಾಪಹೃತಧ್ವಜೇನ।
08068007c ದುರ್ಯೋಧನಸ್ಯಾಂತಿಕಂ ಏತ್ಯ ಶೀಘ್ರಂ ಸಂಭಾಷ್ಯ ದುಃಖಾರ್ತಮುವಾಚ ವಾಕ್ಯಂ।।
ವಿಮೂಢಚೇತನನಾಗಿದ್ದ ಮದ್ರಾಧಿಪತಿಯು ಬೇಗನೆ ಧ್ವಜವಿಲ್ಲದ ತನ್ನ ರಥದಲ್ಲಿ ಕುಳಿತು ಶೀಘ್ರವಾಗಿ ದುರ್ಯೋಧನನ ಬಳಿ ಹೋಗಿ ದುಃಖಾರ್ತನಾಗಿ ಈ ಮಾತುಗಳನ್ನಾಡಿದನು:
08068008a ವಿಶೀರ್ಣನಾಗಾಶ್ವರಥಪ್ರವೀರಂ ಬಲಂ ತ್ವದಿಯಂ ಯಮರಾಷ್ಟ್ರಕಲ್ಪಂ।
08068008c ಅನ್ಯೋನ್ಯಮಾಸಾದ್ಯ ಹತಂ ಮಹದ್ಭಿರ್ ನರಾಶ್ವನಾಗೈರ್ಗಿರಿಕೂಟಕಲ್ಪೈಃ।।
“ಆನೆ-ಕುದುರೆ-ರಥಪ್ರವೀರರು ನಾಶವಾಗಿರುವ ನಿನ್ನ ಸೇನೆಯು ಯಮರಾಷ್ಟ್ರದಂತಾಗಿ ಹೋಗಿದೆ! ಪರ್ವತ ಶಿಖರಗಳಂತಿದ್ದ ಮನುಷ್ಯ-ಆನೆ-ಕುದುರೆ-ರಥಗಳಿಂದ ಕೂಡಿದ್ದ ನಿನ್ನ ಮಹಾಸೇನೆಯು ಅನ್ಯೋನ್ಯರೊಡನೆ ಕಾದಾಡಿ ಅವಸಾನಹೊಂದಿದೆ!
08068009a ನೈತಾದೃಶಂ ಭಾರತ ಯುದ್ಧಮಾಸೀದ್ ಯಥಾದ್ಯ ಕರ್ಣಾರ್ಜುನಯೋರ್ಬಭೂವ।
08068009c ಗ್ರಸ್ತೌ ಹಿ ಕರ್ಣೇನ ಸಮೇತ್ಯ ಕೃಷ್ಣಾವ್ ಅನ್ಯೇ ಚ ಸರ್ವೇ ತವ ಶತ್ರವೋ ಯೇ।।
ಭಾರತ! ಇಂದು ಕರ್ಣಾರ್ಜುನರ ನಡುವೆ ನಡೆದ ಯುದ್ಧವು ಹಿಂದೆಂದೂ ನಡೆದಿರಲಿಲ್ಲ. ಕೃಷ್ಣಾರ್ಜುನರಿಬ್ಬರೂ, ನಿನ್ನ ಅನ್ಯ ಶತ್ರುಗಳೆಲ್ಲರೂ ಕರ್ಣನ ಹಿಡಿತಕ್ಕೆ ಬಂದಿದ್ದರು!
08068010a ದೈವಂ ತು ಯತ್ತತ್ಸ್ವವಶಂ ಪ್ರವೃತ್ತಂ ತತ್ಪಾಂಡವಾನ್ಪಾತಿ ಹಿನಸ್ತಿ ಚಾಸ್ಮಾನ್।
08068010c ತವಾರ್ಥಸಿದ್ಧ್ಯರ್ಥಕರಾ ಹಿ ಸರ್ವೇ ಪ್ರಸಹ್ಯ ವೀರಾ ನಿಹತಾ ದ್ವಿಷದ್ಭಿಃ।।
ತನ್ನದೇ ವಶದಲ್ಲಿದ್ದುಕೊಂಡು ನಡೆದುಕೊಳ್ಳುವ ದೈವವು ಪಾಂಡವರನ್ನು ರಕ್ಷಿಸುತ್ತಿದೆ ಮತ್ತು ನಮ್ಮನ್ನು ವಿನಾಶಗೊಳಿಸುತ್ತಿದೆ! ಇದರಿಂದಲೇ ಬಹುಷಃ ನಿನ್ನ ಸಿದ್ಧಿ-ಅರ್ಥ-ಹಿತಗಳಿಗೆ ನಡೆದುಕೊಳ್ಳುತ್ತಿರುವ ಎಲ್ಲ ವೀರರೂ ಶತ್ರುಗಳಿಂದ ಹತರಾಗುತ್ತಿದ್ದಾರೆ!
08068011a ಕುಬೇರವೈವಸ್ವತವಾಸವಾನಾಂ ತುಲ್ಯಪ್ರಭಾವಾಂಬುಪತೇಶ್ಚ ವೀರಾಃ।
08068011c ವೀರ್ಯೇಣ ಶೌರ್ಯೇಣ ಬಲೇನ ಚೈವ ತೈಸ್ತೈಶ್ಚ ಯುಕ್ತಾ ವಿಪುಲೈರ್ಗುಣೌಘೈಃ।।
ನಿನ್ನೊಡನಿದ್ದ ವೀರರು ವೀರ್ಯ-ಶೌರ್ಯಗಳಲ್ಲಿ ಕುಬೇರ-ವೈವಸ್ವತ-ವಾಸವ-ವರುಣರ ಸಮಾನರಾಗಿದ್ದು ವಿಪುಲ ಗುಣಸಮೇತರಾಗಿದ್ದರು.
08068012a ಅವಧ್ಯಕಲ್ಪಾ ನಿಹತಾ ನರೇಂದ್ರಾಸ್ ತವಾರ್ಥಕಾಮಾ ಯುಧಿ ಪಾಂಡವೇಯೈಃ।
08068012c ತನ್ಮಾ ಶುಚೋ ಭಾರತ ದಿಷ್ಟಮೇತತ್ ಪರ್ಯಾಯಸಿದ್ಧಿರ್ನ ಸದಾಸ್ತಿ ಸಿದ್ಧಿಃ।।
ನಿನ್ನ ಅರ್ಥಕಾಮಗಳಿಗಾಗಿ ಪಾಂಡವೇಯರೊಂದಿಗೆ ಹೋರಾಡಿ ನಿಧನರಾದ ನರೇಂದ್ರರು ಅವಧ್ಯರೇ ಆಗಿದ್ದರು. ಈ ಪರ್ಯಾಯ ಸಿದ್ಧಿಯು ದೈವದ ಇಚ್ಛೆ. ಆದುದರಿಂದ ಭಾರತ! ಶೋಕಿಸಬೇಡ! ಎಲ್ಲರಿಗೂ ಎಲ್ಲ ಸಮಯಗಳಲ್ಲಿಯೂ ಕಾರ್ಯಸಿದ್ಧಿಯಾಗುವುದಿಲ್ಲ!”
08068013a ಏತದ್ವಚೋ ಮದ್ರಪತೇರ್ನಿಶಮ್ಯ ಸ್ವಂ ಚಾಪನೀತಂ ಮನಸಾ ನಿರೀಕ್ಷ್ಯ।
08068013c ದುರ್ಯೋಧನೋ ದೀನಮನಾ ವಿಸಂಜ್ಞಃ ಪುನಃ ಪುನರ್ನ್ಯಶ್ವಸದಾರ್ತರೂಪಃ।।
ಮದ್ರಪತಿಯ ಈ ಮಾತುಗಳನ್ನು ಕೇಳಿ ತನ್ನದೇ ಅನೀತಿಗಳನ್ನು ಮನಸಾ ನಿರೀಕ್ಷಿಸಿ ದುರ್ಯೋಧನನು ದೀನಮನಸ್ಕನಾಗಿ ಮೂರ್ಛಿತನಾದನು. ಆರ್ತರೂಪನಾದ ಅವನು ಪುನಃ ಪುನಃ ನಿಟ್ಟುಸಿರುಬಿಡುತ್ತಿದ್ದನು.
08068014a ತಂ ಧ್ಯಾನಮೂಕಂ ಕೃಪಣಂ ಭೃಶಾರ್ತಂ ಆರ್ತಾಯನಿರ್ದೀನಮುವಾಚ ವಾಕ್ಯಂ।
08068014c ಪಶ್ಯೇದಮುಗ್ರಂ ನರವಾಜಿನಾಗೈರ್ ಆಯೋಧನಂ ವೀರಹತೈಃ ಪ್ರಪನ್ನಂ।।
ಧ್ಯಾನಮೂಕನೂ ಕೃಪಣನೂ ತುಂಬಾ ಆರ್ತನೂ ಆಗಿದ್ದ ದುರ್ಯೋಧನನಿಗೆ ಶಲ್ಯನು ಈ ಮಾತನ್ನಾಡಿದನು: “ಯುದ್ಧಮಾಡುತ್ತ ಹತರಾದ ವೀರ ನರಾಶ್ವಗಜಗಳಿಂದ ತುಂಬಿಹೋಗಿರುವ ಈ ಉಗ್ರ ಭೂಮಿಯನ್ನು ನೋಡು!
08068015a ಮಹೀಧರಾಭೈಃ ಪತಿತೈರ್ಮಹಾಗಜೈಃ ಸಕೃತ್ಪ್ರವಿದ್ಧೈಃ ಶರವಿದ್ಧಮರ್ಮಭಿಃ।
08068015c ತೈರ್ವಿಹ್ವಲದ್ಭಿಶ್ಚ ಗತಾಸುಭಿಶ್ಚ ಪ್ರಧ್ವಸ್ತಯಂತ್ರಾಯುಧವರ್ಮಯೋಧೈಃ।।
ಮದೋದಕವನ್ನು ಸುರಿಸುತ್ತಿದ್ದ ಪರ್ವತೋಪಮ ಆನೆಗಳು ಬಾಣಗಳಿಂದ ಶರೀರಗಳನ್ನು ಕತ್ತರಿಸಿಕೊಂಡು, ವಿಹ್ವಲಿಸುತ್ತಾ ಅಥವಾ ಅಸುನೀಗಿ, ಸುತ್ತಲೂ ಹರಡಿಹೋಗಿರುವ ಯೋಧರು, ಕವಚ-ಆಯುಧ-ಯಂತ್ರಗಳೊಂದಿಗೆ ಈ ರಣರಂಗದ ಸುತ್ತಲೂ ಬಿದ್ದಿವೆ!
08068016a ವಜ್ರಾಪವಿದ್ಧೈರಿವ ಚಾಚಲೇಂದ್ರೈರ್ ವಿಭಿನ್ನಪಾಷಾಣಮೃಗದ್ರುಮೌಷಧೈಃ।
08068016c ಪ್ರವಿದ್ಧಘಂಟಾಂಕುಶತೋಮರಧ್ವಜೈಃ ಸಹೇಮಮಾಲೈ ರುಧಿರೌಘಸಂಪ್ಲುತೈಃ।।
ಈ ಆನೆಗಳು ವಜ್ರಾಯುಧದಿಂದ ಒಡೆದು ಬಿದ್ದಿರುವ ವಿಭಿನ್ನ ಕಲ್ಲುಬಂಡೆಗಳು, ಮೃಗಗಳು, ಔಷಧ-ವೃಕ್ಷಗಳನ್ನೊಡಗೂಡಿದ ಪರ್ವತಗಳಂತೆ ತೋರುತ್ತಿವೆ! ಆ ಆನೆಗಳ ಮೇಲಿದ್ದ ಚಿಕ್ಕ ಚಿಕ್ಕ ಗಂಟೆಗಳೂ, ಅಂಕುಶಗಳೂ, ತೋಮರಗಳೂ, ಧ್ವಜಗಳೂ ಛಿದ್ರ ಛಿದ್ರವಾಗಿ ಹೋಗಿವೆ! ಮೇಲೆ ಹೊದಿಸಿದ್ದ ಸುವರ್ಣಮಯ ಜಾಲಗಳ ಸಹಿತವಾಗಿ ರಕ್ತದಿಂದ ತೋಯ್ದು ಹೋಗಿವೆ!
08068017a ಶರಾವಭಿನ್ನೈಃ ಪತಿತೈಶ್ಚ ವಾಜಿಭಿಃ ಶ್ವಸದ್ಭಿರನ್ಯೈಃ ಕ್ಷತಜಂ ವಮದ್ಭಿಃ।
08068017c ದೀನೈಃ ಸ್ತನದ್ಭಿಃ ಪರಿವೃತ್ತನೇತ್ರೈರ್ ಮಹೀಂ ದಶದ್ಭಿಃ ಕೃಪಣಂ ನದದ್ಭಿಃ।।
ಶರಗಳಿಂದ ಗಾಯಗೊಂಡು ಬಿದ್ದಿರುವ ಕುದುರೆಗಳು ವಿಲಿವಿಲಿಗುಟ್ಟುತ್ತಿವೆ. ಅನ್ಯ ಕುದುರೆಗಳು ರಕ್ತವನ್ನೇ ಕಾರುತ್ತಿವೆ. ಎಲ್ಲವೂ ದೀನಧ್ವನಿಮಾಡುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನೆಲವನ್ನು ಕಚ್ಚಿ ಆರ್ತನಾದ ಮಾಡುತ್ತಿವೆ!
08068018a ತಥಾಪವಿದ್ಧೈರ್ಗಜವಾಜಿಯೋಧೈರ್ ಮಂದಾಸುಭಿಶ್ಚೈವ ಗತಾಸುಭಿಶ್ಚ।
08068018c ನರಾಶ್ವನಾಗೈಶ್ಚ ರಥೈಶ್ಚ ಮರ್ದಿತೈರ್ ಮಹೀ ಮಹಾವೈತರಣೀವ ದುರ್ದೃಶಾ।।
ಬಾಣಗಳ ಆಘಾತಕ್ಕೆ ಸಿಕ್ಕಿ ಪ್ರಾಣಗಳನ್ನು ಬಿಟ್ಟಿರುವ ಮತ್ತು ಬಿಡುತ್ತಿರುವ ಗಜಾಶ್ವ-ಪದಾತಿ ಯೋಧರಿಂದ ನಿಬಿಡವಾಗಿರುವ, ನಾಶಗೊಂಡಿರುವ ನರಾಶ್ವ-ಆನೆ-ರಥಗಳಿಂದ ಈ ರಣಭೂಮಿಯು ಮಹಾ ವೈತರಣಿ ನದಿಯಂತೆಯೇ ತೋರುತ್ತಿದೆ.
08068019a ಗಜೈರ್ನಿಕೃತ್ತಾಪರಹಸ್ತಗಾತ್ರೈರ್ ಉದ್ವೇಪಮಾನೈಃ ಪತಿತೈಃ ಪೃಥಿವ್ಯಾಂ।
08068019c ಯಶಸ್ವಿಭಿರ್ನಾಗರಥಾಶ್ವಯೋಧಿಭಿಃ ಪದಾತಿಭಿಶ್ಚಾಭಿಮುಖೈರ್ಹತೈಃ ಪರೈಃ।
08068019e ವಿಶೀರ್ಣವರ್ಮಾಭರಣಾಂಬರಾಯುಧೈರ್ ವೃತಾ ನಿಶಾಂತೈರಿವ ಪಾವಕೈರ್ಮಹೀ।।
ತುಂಡಾಗಿರುವ ಸೊಂಡಿಲು-ಶರೀರಗಳ ಆನೆಗಳಿಂದಲೂ, ಚಡಪಡಿಸುತ್ತ ಬಿದ್ದಿರುವ ಯಶಸ್ವಿ ಆನೆ-ರಥ-ಅಶ್ವ-ಯೋಧರಿಂದ, ಯುದ್ಧಾಭಿಮುಖ ಶತ್ರುಗಳಿಂದ ಹತರಾದ ಪದಾತಿಗಳಿಂದ, ಚೂರು ಚೂರಾಗಿ ಬಿದ್ದಿರುವ ಕವಚ-ಆಭರಣ-ವಸ್ತ್ರ-ಆಯುಧಗಳಿಂದ ತುಂಬಿರುವ ಈ ರಣಭೂಮಿಯು ಆರಿಹೋದ ಯಜ್ಞಾಗ್ನಿಗಳಿಂದ ತುಂಬಿದ ಯಜ್ಞಭೂಮಿಯಂತೆಯೇ ತೋರುತ್ತಿದೆ!
08068020a ಶರಪ್ರಹಾರಾಭಿಹತೈರ್ಮಹಾಬಲೈರ್ ಅವೇಕ್ಷ್ಯಮಾಣೈಃ ಪತಿತೈಃ ಸಹಸ್ರಶಃ।
08068020c ಪ್ರನಷ್ಟಸಂಜ್ಞೈಃ ಪುನರುಚ್ಚ್ವಸದ್ಭಿರ್ ಮಹೀ ಬಭೂವಾನುಗತೈರಿವಾಗ್ನಿಭಿಃ।
08068020e ದಿವಶ್ಚ್ಯುತೈರ್ಭೂರತಿದೀಪ್ತಿಮದ್ಭಿರ್ ನಕ್ತಂ ಗ್ರಹೈರ್ದ್ಯೌರಮಲೇವ ದೀಪ್ತೈಃ।।
ಆಕಾಶದಿಂದ ಚ್ಯುತವಾದ ಗ್ರಹಗಳಂತಿರುವ - ಶರಪ್ರಹಾರಗಳಿಂದ ಕಣ್ಣುತೆರೆದು ಸಂಜ್ಞೆಗಳನ್ನು ಕಳೆದುಕೊಂಡು, ಹತರಾಗಿ ಬಿದ್ದಿರುವ ಸಹಸ್ರಾರು ಮಹಾಬಲರಿಂದ ತುಂಬಿರುವ ರಣಭೂಮಿಯು ನಿರ್ಮಲ ಆಕಾಶವು ರಾತ್ರಿವೇಳೆ ಗ್ರಹಗಳಿಂದ ತುಂಬಿ ಶೋಭಾಯಮಾನವಾಗಿ ಕಾಣುವಂತೆ ಕಾಣುತ್ತಿದೆ.
08068021a ಶರಾಸ್ತು ಕರ್ಣಾರ್ಜುನಬಾಹುಮುಕ್ತಾ ವಿದಾರ್ಯ ನಾಗಾಶ್ವಮನುಷ್ಯದೇಹಾನ್।
08068021c ಪ್ರಾಣಾನ್ನಿರಸ್ಯಾಶು ಮಹೀಮತೀಯುರ್ ಮಹೋರಗಾ ವಾಸಮಿವಾಭಿತೋಽಸ್ತ್ರೈಃ।।
ಕರ್ಣಾರ್ಜುನರ ಬಾಹುಗಳಿಂದ ಬಿಡಲ್ಪಟ್ಟ ಶರಗಳು ಆನೆ-ಕುದುರೆ-ಮನುಷ್ಯರ ದೇಹಗಳನ್ನು ಸೀಳಿಕೊಂಡು ಪ್ರಾಣಗಳನ್ನು ಹೀರಿಕೊಂಡು ಮಹಾಸರ್ಪಗಳು ಬಿಲವನ್ನು ಹೊಗುವಂತೆ ಭೂಮಿಯಲ್ಲಿ ನಾಟಿಕೊಂಡಿವೆ!
08068022a ಹತೈರ್ಮನುಷ್ಯಾಶ್ವಗಜೈಶ್ಚ ಸಂಖ್ಯೇ ಶರಾವಭಿನ್ನೈಶ್ಚ ರಥೈರ್ಬಭೂವ।
08068022c ಧನಂಜಯಸ್ಯಾಧಿರಥೇಶ್ಚ ಮಾರ್ಗೇ ಗಜೈರಗಮ್ಯಾ ವಸುಧಾತಿದುರ್ಗಾ।।
ಧನಂಜಯ-ಆಧಿರಥಿಯರ ರಥಮಾರ್ಗಗಳಲ್ಲಿ ಶರಗಳಿಂದ ಕತ್ತರಿಸಲ್ಪಟ್ಟು ಹತರಾಗಿ ಬಿದ್ದಿರುವ ಮನುಷ್ಯ-ಕುದುರೆ-ಆನೆಗಳು ಮತ್ತು ರಥಗಳಿಂದ ರಣಭೂಮಿಯು ಸಂಚಾರಕ್ಕೆ ಅಸಾಧ್ಯವಾಗಿ ತೋರುತ್ತಿದೆ.
08068023a ರಥೈರ್ವರೇಷೂನ್ಮಥಿತೈಶ್ಚ ಯೋಧೈಃ ಸಂಸ್ಯೂತಸೂತಾಶ್ವವರಾಯುಧಧ್ವಜೈಃ।
08068023c ವಿಶೀರ್ಣಶಸ್ತ್ರೈರ್ವಿನಿಕೃತ್ತಬಂದುರೈರ್ ನಿಕೃತ್ತಚಕ್ರಾಕ್ಷಯುಗತ್ರಿವೇಣುಭಿಃ।।
08068024a ವಿಮುಕ್ತಯಂತ್ರೈರ್ನಿಹತೈರಯಸ್ಮಯೈರ್ ಹತಾನುಷಂಗೈರ್ವಿನಿಷಂಗಬಂದುರೈಃ।
08068024c ಪ್ರಭಗ್ನನೀಡೈರ್ಮಣಿಹೇಮಮಂಡಿತೈಃ ಸ್ತೃತಾ ಮಹೀ ದ್ಯೌರಿವ ಶಾರದೈರ್ಘನೈಃ।।
ಸಾರಥಿಗಳು, ಕುದುರೆಗಳು, ಶ್ರೇಷ್ಠ ಆಯುಧಗಳು ಮತ್ತು ಧ್ವಜಗಳಿಂದ ಸುಸಜ್ಜಿತವಾಗಿದ್ದ ಶ್ರೇಷ್ಠ ರಥಗಳು ಯೋಧರೊಂದಿಗೆ ಮಥಿಸಲ್ಪಟ್ಟು, ಶಸ್ತ್ರಗಳಿಂದ ಚೂರು ಚೂರಾಗಿ ಶಸ್ತ್ರಾಯುಧ-ಧ್ವಜಗಳು, ಚಕ್ರಗಳು, ನೊಗಗಳು, ಹಗ್ಗಗಳು, ಮರ, ತ್ರಿವೇಣು, ಮಣಿ-ಚಿನ್ನಗಳಿಂದ ಮಾಡಿದ ಆಸನಗಳು ಒಡೆದು ಚೆಲ್ಲಿ ರಣಭೂಮಿಯು ಶರತ್ಕಾಲದ ಮೇಘಗಳಿಂದ ಆಚ್ಛಾದಿತ ಆಕಾಶದಂತೆಯೇ ಕಾಣುತ್ತಿದೆ!
08068025a ವಿಕೃಷ್ಯಮಣೈರ್ಜವನೈರಲಂಕೃತೈರ್ ಹತೇಶ್ವರೈರಾಜಿರಥೈಃ ಸುಕಲ್ಪಿತೈಃ।
08068025c ಮನುಷ್ಯಮಾತಂಗರಥಾಶ್ವರಾಶಿಭಿರ್ ದ್ರುತಂ ವ್ರಜಂತೋ ಬಹುಧಾ ವಿಚೂರ್ಣಿತಾಃ।।
ಒಡೆಯರನ್ನು ಕಳೆದುಕೊಂಡ ಕುದುರೆಗಳಿಂದ ವೇಗವಾಗಿ ಎಳೆದುಕೊಂಡು ಹೋಗಲ್ಪಡುತ್ತಿರುವ ಅಲಂಕೃತ ಸುಸಜ್ಜಿತ ರಥಗಳಿಂದಲೂ ಓಡಿಹೋಗುತ್ತಿರುವ ಮನುಷ್ಯ-ಮಾತಂಗ-ರಥ-ಅಶ್ವಗಳಿಂದಲೂ ತುಳಿಯಲ್ಪಟ್ಟು ಅನೇಕ ಚೂರುಗಳಾಗಿ ಬಿದ್ದಿವೆ.
08068026a ಸಹೇಮಪಟ್ಟಾಃ ಪರಿಘಾಃ ಪರಶ್ವಧಾಃ ಕಡಂಗರಾಯೋಮುಸಲಾನಿ ಪಟ್ಟಿಶಾಃ।
08068026c ಪೇತುಶ್ಚ ಖಡ್ಗಾ ವಿಮಲಾ ವಿಕೋಶಾ ಗದಾಶ್ಚ ಜಾಂಬೂನದಪಟ್ಟಬದ್ಧಾಃ।।
08068027a ಚಾಪಾನಿ ರುಕ್ಮಾಂಗದಭೂಷಣಾನಿ ಶರಾಶ್ಚ ಕಾರ್ತಸ್ವರಚಿತ್ರಪುಂಖಾಃ।
08068027c ಋಷ್ಟ್ಯಶ್ಚ ಪೀತಾ ವಿಮಲಾ ವಿಕೋಶಾಃ ಪ್ರಾಸಾಃ ಸಖಡ್ಗಾಃ ಕನಕಾವಭಾಸಾಃ।।
08068028a ಚತ್ರಾಣಿ ವಾಲವ್ಯಜನಾನಿ ಶಂಖಾಃ ಸ್ರಜಶ್ಚ ಪುಷ್ಪೋತ್ತಮಹೇಮಚಿತ್ರಾಃ।
08068028c ಕುಥಾಃ ಪತಾಕಾಂಬರವೇಷ್ಟಿತಾಶ್ಚ ಕಿರೀಟಮಾಲಾ ಮುಕುಟಾಶ್ಚ ಶುಭ್ರಾಃ।।
08068029a ಪ್ರಕೀರ್ಣಕಾ ವಿಪ್ರಕೀರ್ಣಾಃ ಕುಥಾಶ್ಚ ಪ್ರಧಾನಮುಕ್ತಾತರಲಾಶ್ಚ ಹಾರಾಃ।
08068029c ಆಪೀಡಕೇಯೂರವರಾಂಗದಾನಿ ಗ್ರೈವೇಯನಿಷ್ಕಾಃ ಸಸುವರ್ಣಸೂತ್ರಾಃ।।
08068030a ಮಣ್ಯುತ್ತಮಾ ವಜ್ರಸುವರ್ಣಮುಕ್ತಾ ರತ್ನಾನಿ ಚೋಚ್ಚಾವಚಮಂಗಲಾನಿ।
08068030c ಗಾತ್ರಾಣಿ ಚಾತ್ಯಂತಸುಖೋಚಿತಾನಿ ಶಿರಾಂಸಿ ಚೇಂದುಪ್ರತಿಮಾನನಾನಿ।।
ಸುವರ್ಣ ಪಟ್ಟಿಗಳನ್ನು ಹೊಂದಿದ್ದ ಪರಿಘಗಳು, ಪರಶುಗಳು, ಗಂಡುಗೊಡಲಿಗಳು, ನಿಶಿತ ಶೂಲಗಳು, ಮುಸಲಗಳು, ಪಟ್ಟಿಶಗಳು, ಒರೆಯಿಂದ ಹೊರತೆಗೆದ ಶುಭ್ರ ಖಡ್ಗಗಳೂ, ಬಂಗಾರದ ಪಟ್ಟಿಗಳಿಂದ ಕಟ್ಟಲ್ಪಟ್ಟ ಗದೆಗಳೂ, ಧನುಸ್ಸುಗಳೂ, ಬೆಳ್ಳಿಯ ಅಂಗದ ಭೂಷಣಗಳೂ, ಬಂಗಾರದ ಬಣ್ಣದ ಪುಂಖಗಳುಳ್ಳ ಶರಗಳು, ಒರೆಯಿಂದ ತೆಗೆದಿದ್ದ ವಿಮಲ ಹಳದೀ ಬಣ್ಣದ ಋಷ್ಟಿಗಳು, ಪ್ರಾಸಗಳು, ಬಂಗಾರದಂತೆ ಹೊಳೆಯುವ ಖಡ್ಗಗಳು, ಚತ್ರಗಳು, ವಾಲ-ವ್ಯಜನಗಳು, ಶಂಖಗಳು, ಹೇಮಚಿತ್ರಗಳುಳ್ಳ ತುಂಡಾದ ಹಾರಗಳು, ರತ್ನಗಂಬಳಿಗಳು, ಪತಾಕ-ವಸ್ತ್ರಾಭರಣಗಳು, ಕಿರೀಟಮಾಲೆಗಳು, ಶುಭ್ರ ಮುಕುಟಗಳು, ಶ್ವೇತಚಾಮರಗಳು, ಹವಳ ಮತ್ತು ಮುತ್ತಿನ ಹಾರಗಳು, ಶಿರಸ್ತ್ರಾಣ, ಕೇಯೂರ, ಸುಂದರ ಅಂಗದಗಳು, ಕಂಠಹಾರ, ಪದಕ, ಚಿನ್ನದ ಸರಪಣಿ, ಶ್ರೇಷ್ಠ ಮಣಿ-ವಜ್ರ-ಸುವರ್ಣ-ಮುತ್ತು-ರತ್ನಗಳು, ಬಗೆಬಗೆಯ ಮಂಗಲಕಾರಕ ರತ್ನಗಳು, ಅತ್ಯಂತ ಸುಖಬೋಗಗಳಿಗೆ ಯೋಗ್ಯ ಶರೀರಗಳು, ಚಂದ್ರಸದೃಶ ಮುಖವುಳ್ಳ ಶಿರಗಳು – ಇವೆಲ್ಲವೂ ರಣರಂಗದಲ್ಲಿ ಹರಡಿಹೋಗಿವೆ!
08068031a ದೇಹಾಂಶ್ಚ ಭೋಗಾಂಶ್ಚ ಪರಿಚ್ಚದಾಂಶ್ಚ ತ್ಯಕ್ತ್ವಾ ಮನೋಜ್ಞಾನಿ ಸುಖಾನಿ ಚಾಪಿ।
08068031c ಸ್ವಧರ್ಮನಿಷ್ಠಾಂ ಮಹತೀಮವಾಪ್ಯ ವ್ಯಾಪ್ತಾಂಶ್ಚ ಲೋಕಾನ್ಯಶಸಾ ಸಮೀಯುಃ।।
ದೇಹ-ಭೋಗ-ವಸ್ತ್ರಗಳು ಮತ್ತು ಮನಸ್ಸಿಗೆ ಬೇಕಾದ ಸುಖಗಳನ್ನು ತೊರೆದು ಸ್ವಧರ್ಮನಿಷ್ಠರಾಗಿದ್ದುಕೊಂಡು ಮಹಾ ಲೋಕಗಳನ್ನು ಪಡೆದು ಯಶಸ್ಸನ್ನು ಪ್ರಸರಿಸಿ ಅವರು ಹೊರಟುಹೋಗಿದ್ದಾರೆ.”
08068032a ಇತ್ಯೇವಮುಕ್ತ್ವಾ ವಿರರಾಮ ಶಲ್ಯೋ ದುರ್ಯೋಧನಃ ಶೋಕಪರೀತಚೇತಾಃ।
08068032c ಹಾ ಕರ್ಣ ಹಾ ಕರ್ಣ ಇತಿ ಬ್ರುವಾಣ ಆರ್ತೋ ವಿಸಂಜ್ಞೋ ಭೃಶಮಶ್ರುನೇತ್ರಃ।।
ಶೋಕದಿಂದ ಸಂಕಟಪಡುತ್ತಾ “ಹಾ ಕರ್ಣ! ಹಾ ಕರ್ಣ!” ಎಂದು ಹೇಳುತ್ತಾ ಕಂಬನಿದುಂಬಿದ ಕಣ್ಣುಗಳಿಂದ ಆರ್ತನಾಗಿ ಮೂರ್ಛೆಹೋಗುತ್ತಿದ್ದ ದುರ್ಯೊಧನನಿಗೆ ಹೀಗೆ ಹೇಳಿ ಶಲ್ಯನು ಸುಮ್ಮನಾದನು.
08068033a ತಂ ದ್ರೋಣಪುತ್ರಪ್ರಮುಖಾ ನರೇಂದ್ರಾಃ ಸರ್ವೇ ಸಮಾಶ್ವಾಸ್ಯ ಸಹ ಪ್ರಯಾಂತಿ।
08068033c ನಿರೀಕ್ಷಮಾಣಾ ಮುಹುರರ್ಜುನಸ್ಯ ಧ್ವಜಂ ಮಹಾಂತಂ ಯಶಸಾ ಜ್ವಲಂತಂ।।
ದ್ರೋಣಪುತ್ರನೇ ಮೊದಲಾದ ನರೇಂದ್ರರು ಎಲ್ಲರೂ ದುರ್ಯೋಧನನ್ನು ಸಮಾಧಾನಗೊಳಿಸುತ್ತಾ ಅವನೊಡನೆಯೇ ಪುನಃ ಪುನಃ ಅತಿದೊಡ್ಡ ಯಶಸ್ಸಿನಿಂದ ಪ್ರಜ್ವಲಿಸುತ್ತಿದ್ದ ಅರ್ಜುನನ ಧ್ವಜವನ್ನೇ ನೋಡುತ್ತಾ ಹೋಗುತ್ತಿದ್ದರು.
08068034a ನರಾಶ್ವಮಾತಂಗಶರೀರಜೇನ ರಕ್ತೇನ ಸಿಕ್ತಾ ರುಧಿರೇಣ ಭೂಮಿಃ।
08068034c ರಕ್ತಾಂಬರಸ್ರಕ್ತಪನೀಯಯೋಗಾನ್ ನಾರೀ ಪ್ರಕಾಶಾ ಇವ ಸರ್ವಗಮ್ಯಾ।।
ನರ-ಅಶ್ವ-ಮಾತಂಗಗಳ ಶರೀರಗಳಿಂದ ಸುರಿದ ರಕ್ತದಿಂದ ತೋಯ್ದುಹೋಗಿ ಕೆಂಪಾಗಿದ್ದ ರಣಭೂಮಿಯು ರಕ್ತಮಾಲೆ, ರಕ್ತಾಂಬರ ಮತ್ತು ಸುವರ್ಣ ಆಭರಣಗಳನ್ನು ತೊಟ್ಟಿದ್ದ ವೈಶ್ಯೆಯಂತೆ ಪ್ರಕಾಶಿಸುತ್ತಿದ್ದಳು.
08068035a ಪ್ರಚ್ಛನ್ನರೂಪಾ ರುಧಿರೇಣ ರಾಜನ್ ರೌದ್ರೇ ಮುಹೂರ್ತೇಽತಿವಿರಾಜಮಾನಾಃ।
08068035c ನೈವಾವತಸ್ಥುಃ ಕುರವಃ ಸಮೀಕ್ಷ್ಯ ಪ್ರವ್ರಾಜಿತಾ ದೇವಲೋಕಾಶ್ಚ ಸರ್ವೇ।।
ರಾಜನ್! ಅತ್ಯಂತ ವಿರಾಜಮಾನವಾಗಿದ್ದ ಆ ರೌದ್ರ ಮುಹೂರ್ತದಲ್ಲಿ ರಕ್ತದಿಂದಲೇ ತನ್ನ ನಿಜಸ್ವರೂಪವನ್ನು ಮರೆಮಾಡಿಕೊಂಡಿದ್ದ ರಣ ಭೂಮಿಯನ್ನು ನೋಡಿ ಕುರುಗಳೆಲ್ಲರೂ ಅಲ್ಲಿ ನಿಲ್ಲಲಾರದೇ ದೇವಲೋಕದ ದೀಕ್ಷೆಯನ್ನು ಸ್ವೀಕರಿಸಿದರು.
08068036a ವಧೇನ ಕರ್ಣಸ್ಯ ಸುದುಃಖಿತಾಸ್ತೇ ಹಾ ಕರ್ಣ ಹಾ ಕರ್ಣ ಇತಿ ಬ್ರುವಾಣಾಃ।
08068036c ದ್ರುತಂ ಪ್ರಯಾತಾಃ ಶಿಬಿರಾಣಿ ರಾಜನ್ ದಿವಾಕರಂ ರಕ್ತಮವೇಕ್ಷಮಾಣಾಃ।।
ರಾಜನ್! ಕರ್ಣನ ವಧೆಯಿಂದ ದುಃಖಿತರಾಗಿದ್ದ ಅವರು “ಹಾ ಕರ್ಣ! ಹಾ ಕರ್ಣ!” ಎಂದು ಹೇಳಿಕೊಳ್ಳುತ್ತಾ ಕೆಂಪುಬಣ್ಣಕ್ಕೆ ತಿರುಗಿದ ದಿವಾಕರನನ್ನು ನೋಡುತ್ತಾ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
08068037a ಗಾಂಡೀವಮುಕ್ತೈಸ್ತು ಸುವರ್ಣಪುಂಖೈಃ ಶಿತೈಃ ಶರೈಃ ಶೋಣಿತದಿಗ್ಧವಾಜೈಃ।
08068037c ಶರೈಶ್ಚಿತಾಂಗೋ ಭುವಿ ಭಾತಿ ಕರ್ಣೋ ಹತೋಽಪಿ ಸನ್ಸೂರ್ಯ ಇವಾಂಶುಮಾಲೀ।।
“ಗಾಂಡೀವದಿಂದ ಪ್ರಮುಕ್ತವಾದ ಸುವರ್ಣಪುಂಖಗಳ ನಿಶಿತ ಶರಗಳಿಂದ ಮತ್ತು ರಕ್ತದಿಂದ ತೋಯ್ದುಹೋಗಿದ್ದ ರೆಕ್ಕೆಗಳುಳ್ಳ ಶರಗಳಿಂದ ಚುಚ್ಚಲ್ಪಟ್ಟ ಕರ್ಣನು ಹತನಾಗಿದ್ದರೂ ಅಂಶುಮಾಲೀ ಸೂರ್ಯನಂತೆ ಪ್ರಕಾಶಿಸುತ್ತಿದ್ದಾನೆ!
08068038a ಕರ್ಣಸ್ಯ ದೇಹಂ ರುಧಿರಾವಸಿಕ್ತಂ ಭಕ್ತಾನುಕಂಪೀ ಭಗವಾನ್ವಿವಸ್ವಾನ್।
08068038c ಸ್ಪೃಷ್ಟ್ವಾ ಕರೈರ್ಲೋಹಿತರಕ್ತರೂಪಃ ಸಿಷ್ಣಾಸುರಭ್ಯೇತಿ ಪರಂ ಸಮುದ್ರಂ।।
ರಕ್ತದಿಂದ ತೋಯ್ದುಹೋಗಿದ್ದ ಕರ್ಣನ ದೇಹವನ್ನು ತನ್ನ ಕಿರಣಗಳಿಂದ ಸ್ಪರ್ಷಿಸಿ ಭಕ್ತಾನುಕಂಪೀ ಭಗವಾನ್ ವಿವಸ್ವತನು ತಾನೂ ರಕ್ತದಂತೆ ಕೆಂಪಾದ ದೇಹವನ್ನು ಧರಿಸಿ ಆ ಕೆಂಪನ್ನು ತೊಳೆದುಕೊಳ್ಳುವ ಇಚ್ಛೆಯಿಂದ ಪಶ್ಚಿಮ ಸಮುದ್ರದ ಕಡೆ ಹೊರಟುಹೋಗುತ್ತಿದ್ದಾನೆ!”
08068039a ಇತೀವ ಸಂಚಿಂತ್ಯ ಸುರರ್ಷಿಸಂಘಾಃ ಸಂಪ್ರಸ್ಥಿತಾ ಯಾಂತಿ ಯಥಾನಿಕೇತಂ।
08068039c ಸಂಚಿಂತಯಿತ್ವಾ ಚ ಜನಾ ವಿಸಸ್ರುರ್ ಯಥಾಸುಖಂ ಖಂ ಚ ಮಹೀತಲಂ ಚ।।
ಹೀಗೆ ಯೋಚಿಸುತ್ತಿದ್ದ ಸುರರ್ಷಿಸಂಘಗಳು ತಮ್ಮ ತಮ್ಮ ನಿವಾಸಗಳಿಗೆ ತೆರಳಿದಂತೆ ಇತರ ಜನರೂ ಅದೇ ರೀತಿಯಲ್ಲಿ ತಮ್ಮ ತಮ್ಮ ಸ್ವಭಾವಗಳಿಗನುಗುಣವಾಗಿ ಯೋಚಿಸುತ್ತಾ ಭೂಮ್ಯಾಂತರಿಕ್ಷಗಳಲ್ಲಿದ್ದ ತಮ್ಮ ತಮ್ಮ ನಿವಾಸಗಳಿಗೆ ಸುಖವಾಗಿ ಪ್ರಯಾಣಿಸಿದರು.
08068040a ತದದ್ಭುತಂ ಪ್ರಾಣಭೃತಾಂ ಭಯಂಕರಂ ನಿಶಮ್ಯ ಯುದ್ಧಂ ಕುರುವೀರಮುಖ್ಯಯೋಃ।
08068040c ಧನಂಜಯಸ್ಯಾಧಿರಥೇಶ್ಚ ವಿಸ್ಮಿತಾಃ ಪ್ರಶಂಸಮಾನಾಃ ಪ್ರಯಯುಸ್ತದಾ ಜನಾಃ।।
ಪ್ರಾಣಭೃತರಿಗೆ ಭಯಂಕರವಾಗಿದ್ದ ಕುರುವೀರ ಮುಖ್ಯರಾದ ಧನಂಜಯ-ಆಧಿರಥರ ಯುದ್ಧವನ್ನು ನೋಡಿ ವಿಸ್ಮಿತರಾಗಿ ಇಬ್ಬರನ್ನೂ ಪ್ರಶಂಸಿಸುತ್ತಾ ಜನರು ತೆರಳಿದರು.
08068041a ಶರೈಃ ಸಂಕೃತ್ತವರ್ಮಾಣಂ ವೀರಂ ವಿಶಸನೇ ಹತಂ।
08068041c ಗತಾಸುಮಪಿ ರಾಧೇಯಂ ನೈವ ಲಕ್ಷ್ಮೀರ್ವ್ಯಮುಂಚತ।।
ಶರಗಳಿಂದ ಕವಚವು ಕತ್ತರಿಸಲ್ಪಟ್ಟು ಹತನಾಗಿ ಅಸುನೀಗಿ ಮಲಗಿದ್ದ ಆ ವೀರ ರಾಧೇಯನನ್ನು ಲಕ್ಷ್ಮಿಯು ಮಾತ್ರ ಬಿಟ್ಟು ಹೋಗಿರಲಿಲ್ಲ.
08068042a ನಾನಾಭರಣವಾನ್ರಾಜನ್ಮೃಷ್ಟಜಾಂಬೂನದಾಂಗದಃ।
08068042c ಹತೋ ವೈಕರ್ತನಃ ಶೇತೇ ಪಾದಪೋಽಂಕುರವಾನಿವ।।
ರಾಜನ್! ನಾನಾ ಆಭರಣಗಳನ್ನು ಮತ್ತು ಚಿನ್ನದ ಅಂಗದಗಳನ್ನು ತೊಟ್ಟು ಹತನಾಗಿ ಮಲಗಿದ್ದ ವೈಕರ್ತನ ಕರ್ಣನು ಅಂಕುರಗಳಿದ್ದ ವೃಕ್ಷದಂತೆ ಕಾಣುತ್ತಿದ್ದನು.
08068043a ಕನಕೋತ್ತಮಸಂಕಾಶಃ ಪ್ರದೀಪ್ತ ಇವ ಪಾವಕಃ।
08068043c ಸಪುತ್ರಃ ಪುರುಷವ್ಯಾಘ್ರಃ ಸಂಶಾಂತಃ ಪಾರ್ಥತೇಜಸಾ।
08068043 e ಪ್ರತಾಪ್ಯ ಪಾಂಡವಾನ್ರಾಜನ್ಪಾಂಚಾಲಾಂಶ್ಚಾಸ್ತ್ರತೇಜಸಾ।।
ರಾಜನ್! ಉತ್ತಮ ಕನಕದ ಕಾಂತಿಯಿದ್ದ, ಪಾವಕನಂತೆ ಉರಿಯುತ್ತಿದ್ದ, ಆ ಪುತ್ರವಾನ್ ಪುರುಷವ್ಯಾಘ್ರನು ಅಸ್ತ್ರತೇಜಸ್ಸಿನಿಂದ ಪಾಂಚಾಲರನ್ನು ಮತ್ತು ಪಾಂಡವರನ್ನು ಸುಟ್ಟು ಪಾರ್ಥನ ತೇಜಸ್ಸಿನಿಂದ ಶಾಂತನಾದನು.
08068044a ದದಾನೀತ್ಯೇವ ಯೋಽವೋಚನ್ನ ನಾಸ್ತೀತ್ಯರ್ಥಿತೋಽರ್ಥಿಭಿಃ।
08068044c ಸದ್ಭಿಃ ಸದಾ ಸತ್ಪುರುಷಃ ಸ ಹತೋ ದ್ವೈರಥೇ ವೃಷಃ।।
ಸತ್ಪುರುಷ ಯಾಚಕರು ಕೇಳಿಕೊಂಡಾಗ ಕೊಡುತ್ತೇನೆಂದು ಹೇಳುತ್ತಿದ್ದನೇ ಹೊರತು ಇಲ್ಲವೆಂದು ಯಾರು ಹೇಳುತ್ತಿರಲಿಲ್ಲವೋ ಆ ಸತ್ಪುರುಷ ವೃಷ ಕರ್ಣನು ದ್ವೈರಥದಲ್ಲಿ ಹತನಾದನು.
08068045a ಯಸ್ಯ ಬ್ರಾಹ್ಮಣಸಾತ್ಸರ್ವಮಾತ್ಮಾರ್ಥಂ ನ ಮಹಾತ್ಮನಃ।
08068045c ನಾದೇಯಂ ಬ್ರಾಹ್ಮಣೇಷ್ವಾಸೀದ್ಯಸ್ಯ ಸ್ವಮಪಿ ಜೀವಿತಂ।।
ಆ ಮಹಾತ್ಮನ ಸರ್ವೈಶ್ವರ್ಯವೂ ಬ್ರಾಹ್ಮಣರಿಗೆ ಮೀಸಲಾಗಿದ್ದಿತು. ತನ್ನ ಜೀವವೂ ಸೇರಿ ಬ್ರಾಹ್ಮಣರಿಗೆ ಕೊಡಬಾರದೆಂಬ ಯಾವ ವಸ್ತುವೂ ಅವನಲ್ಲಿರಲಿಲ್ಲ.
08068046a ಸದಾ ನೃಣಾಂ ಪ್ರಿಯೋ ದಾತಾ ಪ್ರಿಯದಾನೋ ದಿವಂ ಗತಃ।
08068046c ಆದಾಯ ತವ ಪುತ್ರಾಣಾಂ ಜಯಾಶಾಂ ಶರ್ಮ ವರ್ಮ ಚ।।
ನರರಿಗೆ ಸದಾ ಪ್ರಿಯನಾಗಿದ್ದ, ದಾನಿ, ಪ್ರಿಯವಾದುದನ್ನು ನೀಡುವ ಕರ್ಣನು ನಿನ್ನ ಪುತ್ರರ ಜಯ, ಆಶೆ, ರಕ್ಷಣೆ ಮತ್ತು ನೆರಳನ್ನೂ ಜೊತೆಯಲ್ಲಿಯೇ ತೆಗೆದುಕೊಂಡು ದಿವಂಗತನಾದನು.
08068047a ಹತೇ ಸ್ಮ ಕರ್ಣೇ ಸರಿತೋ ನ ಸ್ರವಂತಿ ಜಗಾಮ ಚಾಸ್ತಂ ಕಲುಷೋ ದಿವಾಕರಃ।
08068047c ಗ್ರಹಶ್ಚ ತಿರ್ಯಗ್ಜ್ವಲಿತಾರ್ಕವರ್ಣೋ ಯಮಸ್ಯ ಪುತ್ರೋಽಭ್ಯುದಿಯಾಯ ರಾಜನ್।।
ರಾಜನ್! ಕರ್ಣನು ಹತನಾಗಲು ನದಿಗಳು ಹರಿಯುವುದನ್ನು ನಿಲ್ಲಿಸಿಬಿಟ್ಟವು, ಸೂರ್ಯನು ಕುಂದಿ ಅಸ್ತನಾದನು. ಸೂರ್ಯವರ್ಣದ ಯಮನ ಪುತ್ರ ಗ್ರಹವು ಅಡ್ಡವಾಗಿ ಉದಯಿಸಿತು.
08068048a ನಭಃ ಪಫಾಲಾಥ ನನಾದ ಚೋರ್ವೀ ವವುಶ್ಚ ವಾತಾಃ ಪರುಷಾತಿವೇಲಂ।
08068048c ದಿಶಃ ಸಧೂಮಾಶ್ಚ ಭೃಶಂ ಪ್ರಜಜ್ವಲುರ್ ಮಹಾರ್ಣವಾಶ್ಚುಕ್ಷುಭಿರೇ ಚ ಸಸ್ವನಾಃ।।
ಆಕಾಶವು ಸೀಳಿದಂತಾಯಿತು. ಭೂಮಿಯು ಚೀತ್ಕಾರಮಾಡಿತು. ಕ್ರೂರ ಭಿರುಗಾಳಿಯು ಬೀಸತೊಡಗಿತು. ದಿಕ್ಕುಗಳು ತುಂಬಾಹೊಗೆಯೊಂದಿಗೆ ಪ್ರಜ್ವಲಿಸತೊಡಗಿದವು. ಸಮುದ್ರಗಳು ಗರ್ಜಿಸುತ್ತಾ ಅಲ್ಲೋಲಕಲ್ಲೋಲವಾದವು.
08068049a ಸಕಾನನಾಃ ಸಾದ್ರಿಚಯಾಶ್ಚಕಂಪುಃ ಪ್ರವಿವ್ಯಥುರ್ಭೂತಗಣಾಶ್ಚ ಮಾರಿಷ 08068049c ಬೃಹಸ್ಪತೀ ರೋಹಿಣೀಂ ಸಂಪ್ರಪೀಡ್ಯ ಬಭೂವ ಚಂದ್ರಾರ್ಕಸಮಾನವರ್ಣಃ।।
ಮಾರಿಷ! ಕಾನನ ಶಿಖರಗಳೊಂದಿಗೆ ಪರ್ವತಗಳು ನಡುಗಿದವು. ಭೂತಗಣಗಳು ಅತ್ಯಂತ ವ್ಯಥೆಗೊಂಡವು. ಬೃಹಸ್ಪತಿಯು ರೋಹಿಣಿಯನ್ನು ಆವರಿಸಿ ಚಂದ್ರ-ಸೂರ್ಯರಿಗೆ ಸಮಾನನಾಗಿ ಪ್ರಕಾಶಿಸಿದನು.
08068050a ಹತೇ ಕರ್ಣೇ ನ ದಿಶೋ ವಿಪ್ರಜಜ್ಞುಸ್ ತಮೋವೃತಾ ದ್ಯೌರ್ವಿಚಚಾಲ ಭೂಮಿಃ।
08068050c ಪಪಾತ ಚೋಲ್ಕಾ ಜ್ವಲನಪ್ರಕಾಶಾ ನಿಶಾಚರಾಶ್ಚಾಪ್ಯಭವನ್ಪ್ರಹೃಷ್ಟಾಃ।।
ಕರ್ಣನು ಹತನಾಗಲು ದಿಕ್ಕುಗಳು ಬೆಳಗಿದವು. ಆಕಾಶವು ಕತ್ತಲೆಯಿಂದ ಆವೃತವಾಯಿತು. ಭೂಮಿಯು ಕಂಪಿಸಿತು. ಜ್ವಲನದಿಂದ ಪ್ರಕಾಶಿಸುತ್ತಾ ಉಲ್ಕೆಗಳು ಬಿದ್ದವು. ನಿಶಾಚರರೂ ಅತ್ಯಂತ ಹರ್ಷಿತರಾದರು.
08068051a ಶಶಿಪ್ರಕಾಶಾನನಮರ್ಜುನೋ ಯದಾ ಕ್ಷುರೇಣ ಕರ್ಣಸ್ಯ ಶಿರೋ ನ್ಯಪಾತಯತ್।
08068051c ಅಥಾಂತರಿಕ್ಷೇ ದಿವಿ ಚೇಹ ಚಾಸಕೃದ್ ಬಭೂವ ಹಾಹೇತಿ ಜನಸ್ಯ ನಿಸ್ವನಃ।।
ಚಂದ್ರನಂತೆ ಪ್ರಕಾಶಿಸುವ ಮುಖವುಳ್ಳ ಅರ್ಜುನನು ಕ್ಷುರದಿಂದ ಕರ್ಣನ ಶಿರವನ್ನು ಉರುಳಿಸಿದಾಗ ಅಂತರಿಕ್ಷ ಮತ್ತು ಸ್ವರ್ಗಗಳಲ್ಲಿ ಜನರ ಹಾಹಾಕಾರವುಂಟಾಯಿತು.
08068052a ಸ ದೇವಗಂದರ್ವಮನುಷ್ಯಪೂಜಿತಂ ನಿಹತ್ಯ ಕರ್ಣಂ ರಿಪುಮಾಹವೇಽರ್ಜುನಃ।
08068052c ರರಾಜ ಪಾರ್ಥಃ ಪರಮೇಣ ತೇಜಸಾ ವೃತ್ರಂ ನಿಹತ್ಯೇವ ಸಹಸ್ರಲೋಚನಃ।।
ಶತ್ರು ಕರ್ಣನನ್ನು ಯುದ್ಧದಲ್ಲಿ ಸಂಹರಿಸಿದ ಪಾರ್ಥ ಅರ್ಜುನನು ದೇವ-ಗಂಧರ್ವ-ಮನುಷ್ಯರಿಂದ ಪೂಜಿಸಲ್ಪಟ್ಟು ವೃತ್ರನನ್ನು ಸಂಹರಿಸಿದ ಸಹಸ್ರಲೋಚನನಂತೆ ಪರಮ ತೇಜಸ್ಸಿನಿಂದ ರಾರಾಜಿಸಿದನು.
08068053a ತತೋ ರಥೇನಾಂಬುದವೃಂದನಾದಿನಾ ಶರನ್ನಭೋಮಧ್ಯಗಭಾಸ್ಕರತ್ವಿಷಾ।
08068053c ಪತಾಕಿನಾ ಭೀಮನಿನಾದಕೇತುನಾ ಹಿಮೇಂದುಶಂಖಸ್ಫಟಿಕಾವಭಾಸಿನಾ।
08068053e ಸುವರ್ಣಮುಕ್ತಾಮಣಿವಜ್ರವಿದ್ರುಮೈರ್ ಅಲಂಕೃತೇನಾಪ್ರತಿಮಾನರಂಹಸಾ।।
08068054a ನರೋತ್ತಮೌ ಪಾಂಡವಕೇಶಿಮರ್ದನಾವ್ ಉದಾಹಿತಾವಗ್ನಿದಿವಾಕರೋಪಮೌ।
08068054c ರಣಾಜಿರೇ ವೀತಭಯೌ ವಿರೇಜತುಃ ಸಮಾನಯಾನಾವಿವ ವಿಷ್ಣುವಾಸವೌ।।
ಆಗ ಮೋಡಗಳ ವೃಂದಗಳಂತೆ ಶಬ್ಧಮಾಡುತ್ತಿದ್ದ, ಶರತ್ಕಾಲದ ಮಧ್ಯಾಹ್ನದ ಸೂರ್ಯನಂತೆ ಬೆಳಗುತ್ತಿದ್ದ, ಭಯಂಕರವಾಗಿ ಶಬ್ಧಮಾಡುತ್ತಿದ್ದ ಪತಾಕೆ-ಧ್ವಜವುಳ್ಳ, ಹಿಮ-ಚಂದ್ರ-ಶಂಖ ಮತ್ತು ಸ್ಪಟಿಕಶಿಲೆಗಳಂತೆ ಕಾಂತಿಯುಕ್ತವಾಗಿದ್ದ, ಸುವರ್ಣ-ಮುಕ್ತ-ಮಣಿ-ವಜ್ರ-ವಿದ್ರುಮಗಳಿಂದ ಅಲಂಕೃತವಾಗಿದ್ದ, ಹಂಸಗಳ ವೇಗವುಳ್ಳ ರಥದಲ್ಲಿ ಕುಳಿತು ಅಗ್ನಿ-ದಿವಾಕರರಂತೆ ಬೆಳಗುತ್ತಿದ್ದ ನರೋತ್ತಮರಾದ ಪಾಂಡವ-ಕೇಶಿಮರ್ದನರು ರಣರಂಗದಲ್ಲಿ ಭಯವಿಲ್ಲದೇ ಒಂದೇ ರಥದಲ್ಲಿ ಕುಳಿತಿರುವ ವಿಷ್ಣು-ವಾಸವರಂತೆ ವಿರಾಜಿಸುತ್ತಿದ್ದರು.
08068055a ತತೋ ಧನುರ್ಜ್ಯಾತಲನೇಮಿನಿಸ್ವನೈಃ ಪ್ರಸಹ್ಯ ಕೃತ್ವಾ ಚ ರಿಪೂನ್ ಹತಪ್ರಭಾನ್।
08068055c ಸಂಸಾಧಯಿತ್ವೈವ ಕುರೂಂ ಶರೌಘೈಃ ಕಪಿಧ್ವಜಃ ಪಕ್ಷಿವರಧ್ವಜಶ್ಚ।
08068055e ಪ್ರಸಹ್ಯ ಶಂಖೌ ಧಮತುಃ ಸುಘೋಷೌ ಮನಾಂಸ್ಯರೀಣಾಮವಸಾದಯಂತೌ।।
ಆಗ ಧನುಸ್ಸು-ಶಿಂಜನಿ ಮತ್ತು ಚಪ್ಪಾಳೆಯ ಶಬ್ಧಗಳೊಂದಿಗೆ ಬಲವತ್ತಾಗಿ ಶತ್ರುಗಳನ್ನು ಹತಪ್ರಭರನ್ನಾಗಿಸಿ ಶರೌಘಗಳಿಂದ ಕುರುಗಳನ್ನು ಆಚ್ಛಾದಿಸಿ ಕಪಿಧ್ವಜ ಮತ್ತು ಗರುಡಧ್ವಜರಿಬ್ಬರೂ ಶತ್ರುಗಳ ಮನಸ್ಸುಗಳನ್ನು ಭೇದಿಸುವ ಸುಘೋಷವುಳ್ಳ ಶಂಖಗಳನ್ನು ಜೋರಾಗಿ ಊದಿದರು.
08068056a ಸುವರ್ಣಜಾಲಾವತತೌ ಮಹಾಸ್ವನೌ ಹಿಮಾವದಾತೌ ಪರಿಗೃಹ್ಯ ಪಾಣಿಭಿಃ।
08068056c ಚುಚುಂಬತುಃ ಶಂಖವರೌ ನೃಣಾಂ ವರೌ ವರಾನನಾಭ್ಯಾಂ ಯುಗಪಚ್ಚ ದಧ್ಮತುಃ।।
ಸುವರ್ಣಬಲೆಗಳಿಂದ ಅಚ್ಛಾದಿತವಾಗಿದ್ದ, ಮಹಾಧ್ವನಿಯನ್ನುಂಟುಮಾಡುವ, ಹಿಮದಂತೆ ಬಿಳುಪಾಗಿದ್ದ ತಮ್ಮ ಶ್ರೇಷ್ಠ ಶಂಖಗಳನ್ನು ಕೈಗೆತ್ತಿಕೊಂಡು ಆ ಇಬ್ಬರು ನರಶ್ರೇಷ್ಠರೂ ಶ್ರೇಷ್ಠ ಮುಖಗಳಿಂದ ಚುಂಬಿಸಿ ಏಕಕಾಲದಲ್ಲಿ ಊದಿದರು.
08068057a ಪಾಂಚಜನ್ಯಸ್ಯ ನಿರ್ಘೋಷೋ ದೇವದತ್ತಸ್ಯ ಚೋಭಯೋಃ।
08068057c ಪೃಥಿವೀಮಂತರಿಕ್ಷಂ ಚ ದ್ಯಾಮಪಶ್ಚಾಪ್ಯಪೂರಯತ್।।
ಪಾಂಚಜನ್ಯ ಮತ್ತು ದೇವದತ್ತಗಳ ನಿರ್ಘೋಷವು ಪೃಥ್ವಿ, ಅಂತರಿಕ್ಷ ಮತ್ತು ಎಲ್ಲ ದಿಕ್ಕುಳಲ್ಲಿಯೂ ಪ್ರತಿಧ್ವನಿಯನ್ನುಂಟುಮಾಡಿತು.
08068058a ತೌ ಶಂಖಶಬ್ದೇನ ನಿನಾದಯಂತೌ ವನಾನಿ ಶೈಲಾನ್ಸರಿತೋ ದಿಶಶ್ಚ।
08068058c ವಿತ್ರಾಸಯಂತೌ ತವ ಪುತ್ರಸೇನಾಂ ಯುಧಿಷ್ಠಿರಂ ನಂದಯತಃ ಸ್ಮ ವೀರೌ।।
ಆ ಎರಡು ಶಂಖಗಳ ಶಬ್ಧದಿಂದ ವನ, ಶೈಲ, ನದಿ, ದಿಕ್ಕುಗಳು ನಿನಾದಿಸಿದವು. ನಿನ್ನ ಪುತ್ರನ ಸೇನೆಯು ಭಯಗೊಂಡಿತು ಮತ್ತು ಆ ವೀರರಿಬ್ಬರೂ ಯುಧಿಷ್ಠಿರನಿಗೆ ಆನಂದವನ್ನಿತ್ತರು.
08068059a ತತಃ ಪ್ರಯಾತಾಃ ಕುರವೋ ಜವೇನ ಶ್ರುತ್ವೈವ ಶಂಖಸ್ವನಮೀರ್ಯಮಾಣಂ।
08068059c ವಿಹಾಯ ಮದ್ರಾಧಿಪತಿಂ ಪತಿಂ ಚ ದುರ್ಯೋಧನಂ ಭಾರತ ಭಾರತಾನಾಂ।।
ಭಾರತ! ಊದುತ್ತಿರುವ ಶಂಖಧ್ವನಿಗಳನ್ನು ಕೇಳುತ್ತಲೇ ಕುರುಸೈನಿಕರು ವೇಗದಿಂದ ಮದ್ರಾಧಿಪತಿಯನ್ನೂ ಭಾರತರ ಒಡೆಯ ದುರ್ಯೋಧನನನ್ನೂ ಅಲ್ಲಿಯೇ ಬಿಟ್ಟು ಪಲಾಯನಗೈದರು.
08068060a ಮಹಾಹವೇ ತಂ ಬಹು ಶೋಭಮಾನಂ ಧನಂಜಯಂ ಭೂತಗಣಾಃ ಸಮೇತಾಃ।
08068060c ತದಾನ್ವಮೋದಂತ ಜನಾರ್ದನಂ ಚ ಪ್ರಭಾಕರಾವಭ್ಯುದಿತೌ ಯಥೈವ।।
ಆಗ ಭೂತಗಣಗಳು ಒಟ್ಟಾಗಿ ಇಬ್ಬರು ಸೂರ್ಯರಂತೆ ರಣರಂಗವನ್ನು ಶೋಭಿಸುತ್ತಿದ್ದ ಧನಂಜಯ ಮತ್ತು ಜನಾರ್ದನರನ್ನು ಅನುಮೋದಿಸಿದರು.
08068061a ಸಮಾಚಿತೌ ಕರ್ಣಶರೈಃ ಪರಂತಪಾವ್ ಉಭೌ ವ್ಯಭಾತಾಂ ಸಮರೇಽಚ್ಯುತಾರ್ಜುನೌ।
08068061c ತಮೋ ನಿಹತ್ಯಾಭ್ಯುದಿತೌ ಯಥಾಮಲೌ ಶಶಾಂಕಸೂರ್ಯಾವಿವ ರಶ್ಮಿಮಾಲಿನೌ।।
ಸಮರದಲ್ಲಿ ಕರ್ಣನ ಶರಗಳಿಂದ ವ್ಯಾಪ್ತರಾಗಿದ್ದ ಅಚ್ಯುತ-ಅರ್ಜುನರು ಕತ್ತಲೆಯನ್ನು ಕೊಂದು ಉದಿಸಿದ ಅಮಲ ಕಿರಣಗಳನ್ನೇ ಮಾಲೆಗಳನ್ನಾಗಿಸಿಕೊಂಡ ಸೂರ್ಯ-ಚಂದ್ರರಂತೆ ಪ್ರಕಾಶಿಸುತ್ತಿದ್ದರು.
08068062a ವಿಹಾಯ ತಾನ್ಬಾಣಗಣಾನಥಾಗತೌ ಸುಹೃದ್ವೃತಾವಪ್ರತಿಮಾನವಿಕ್ರಮೌ।
08068062c ಸುಖಂ ಪ್ರವಿಷ್ಟೌ ಶಿಬಿರಂ ಸ್ವಮೀಶ್ವರೌ ಸದಸ್ಯಹೂತಾವಿವ ವಾಸವಾಚ್ಯುತೌ।।
ಅಪ್ರತಿಮ ವಿಕ್ರಮಿಗಳಾದ ವಾಸವ-ಅಚ್ಯುತರಿಬ್ಬರೂ ಆ ಬಾಣಗಣಗಳನ್ನು ಹೊರತೆಗೆದು, ಸುಹೃದಯರಿಂದ ಪರಿವೃತರಾಗಿ, ಯಜ್ಞಕ್ಕೆ ಆಹ್ವಾನಿತರಾದ ವಿಷ್ಣು-ವಾಸವರಂತೆ ಸುಖವಾಗಿ ತಮ್ಮ ಶಿಬಿರವನ್ನು ಪ್ರವೇಶಿಸಿದರು.
08068063a ಸದೇವಗಂದರ್ವಮನುಷ್ಯಚಾರಣೈರ್ ಮಹರ್ಷಿಭಿರ್ಯಕ್ಷಮಹೋರಗೈರಪಿ।
08068063c ಜಯಾಭಿವೃದ್ಧ್ಯಾ ಪರಯಾಭಿಪೂಜಿತೌ ನಿಹತ್ಯ ಕರ್ಣಂ ಪರಮಾಹವೇ ತದಾ।।
ಆ ಮಹಾರಣದಲ್ಲಿ ಕರ್ಣನನ್ನು ಸಂಹರಿಸಿದ ಅವರಿಬ್ಬರನ್ನೂ ದೇವ-ಗಂಧರ್ವ-ಮನುಷ್ಯ-ಚಾರಣ-ಮಹರ್ಷಿ-ಯಕ್ಷ-ಮಹೋರಗರೆಲ್ಲರೂ ಜಯಕಾರಗಳಿಂದ ಸಂಪೂಜಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ರಣಭೂಮಿವರ್ಣನೇ ಅಷ್ಠಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ರಣಭೂಮಿವರ್ಣನ ಎನ್ನುವ ಅರವತ್ತೆಂಟನೇ ಅಧ್ಯಾಯವು.