067 ಕರ್ಣವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 67

ಸಾರ

ಕೃಷ್ಣನು ಕರ್ಣನನ್ನು ಅವನ ಹಿಂದಿನ ಅಧರ್ಮ ಅಪರಾಧಗಳನ್ನು ನೆನಪಿಸಿಕೊಟ್ಟು ನಿಂದಿಸಿದುದು (1-5). ಅರ್ಜುನನಿಂದ ಕರ್ಣವಧೆ (6-26). ಕುರುಸೇನೆಯು ಪಲಾಯನಗೈದುದು (27-37).

08067001 ಸಂಜಯ ಉವಾಚ।
08067001a ಅಥಾಬ್ರವೀದ್ವಾಸುದೇವೋ ರಥಸ್ಥೋ ರಾಧೇಯ ದಿಷ್ಟ್ಯಾ ಸ್ಮರಸೀಹ ಧರ್ಮಂ।
08067001c ಪ್ರಾಯೇಣ ನೀಚಾ ವ್ಯಸನೇಷು ಮಗ್ನಾ ನಿಂದಂತಿ ದೈವಂ ಕುಕೃತಂ ನ ತತ್ತತ್।।

ಸಂಜಯನು ಹೇಳಿದನು: “ಆಗ ರಥಸ್ಥನಾದ ವಾಸುದೇವನು ಹೇಳಿದನು: “ರಾಧೇಯ! ಅದೃಷ್ಟವಶಾತ್ ಈಗ ನೀನು ಧರ್ಮವನ್ನು ನೆನಪಿಸಿಕೊಳ್ಳುತ್ತಿರುವೆ. ಕಷ್ಟದಲ್ಲಿ ಮುಳುಗಿದ ನೀಚರು ಸಾಮಾನ್ಯವಾಗಿ ತಾವು ಮಾಡಿದ ಕೆಟ್ಟ ಕೆಲಸಗಳನ್ನಲ್ಲದೇ ಕೇವಲ ದೈವವನ್ನೇ ನಿಂದಿಸುತ್ತಾರೆ.

08067002a ಯದ್ದ್ರೌಪದೀಂ ಏಕವಸ್ತ್ರಾಂ ಸಭಾಯಾಂ ಆನಾಯ್ಯ ತ್ವಂ ಚೈವ ಸುಯೋಧನಶ್ಚ।
08067002c ದುಃಶಾಸನಃ ಶಕುನಿಃ ಸೌಬಲಶ್ಚ ನ ತೇ ಕರ್ಣ ಪ್ರತ್ಯಭಾತ್ತತ್ರ ಧರ್ಮಃ।।

ಕರ್ಣ! ಯಾವಾಗ ನೀನು, ಸುಯೋಧನ, ದುಃಶಾಸನ ಮತ್ತು ಸೌಬಲ ಶಕುನಿಯರು ಎಕವಸ್ತ್ರಳಾಗಿದ್ದ ದ್ರೌಪದಿಯನ್ನು ಸಭೆಗೆ ಎಳೆದು ತರಿಸಿದಾಗ ನಿನಗೆ ಅಲ್ಲಿ ಧರ್ಮದ ವಿಚಾರವೇ ಹೊಳೆದಿರಲಿಲ್ಲ!

08067003a ಯದಾ ಸಭಾಯಾಂ ಕೌಂತೇಯಮನಕ್ಷಜ್ಞಂ ಯುಧಿಷ್ಠಿರಂ।
08067003c ಅಕ್ಷಜ್ಞಃ ಶಕುನಿರ್ಜೇತಾ ತದಾ ಧರ್ಮಃ ಕ್ವ ತೇ ಗತಃ।।

ಅಕ್ಷವಿದ್ಯೆಯನ್ನು ತಿಳಿದಿರದ ಕೌಂತೇಯ ಯುಧಿಷ್ಠಿರನನ್ನು ಸಭೆಯಲ್ಲಿ ಅಕ್ಷಜ್ಞ ಶಕುನಿಯು ಗೆದ್ದಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?

08067004a ಯದಾ ರಜಸ್ವಲಾಂ ಕೃಷ್ಣಾಂ ದುಃಶಾಸನವಶೇ ಸ್ಥಿತಾಂ।
08067004c ಸಭಾಯಾಂ ಪ್ರಾಹಸಃ ಕರ್ಣ ಕ್ವ ತೇ ಧರ್ಮಸ್ತದಾ ಗತಃ।।

ಕರ್ಣ! ದುಃಶಾಸನನ ವಶದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಯಲ್ಲಿ ಅಪಹಾಸ್ಯಮಾಡುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?

08067005a ರಾಜ್ಯಲುಬ್ಧಃ ಪುನಃ ಕರ್ಣ ಸಮಾಹ್ವಯಸಿ ಪಾಂಡವಂ।
08067005c ಗಾಂಧಾರರಾಜಮಾಶ್ರಿತ್ಯ ಕ್ವ ತೇ ಧರ್ಮಸ್ತದಾ ಗತಃ।।

ಕರ್ಣ! ಪುನಃ ಪಾಂಡವನನ್ನು ಕರೆಯಿಸಿ ಗಾಂಧಾರರಾಜನನ್ನು ಅವಲಂಬಿಸಿ ರಾಜ್ಯವನ್ನು ಕಸಿದುಕೊಳ್ಳುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?”

08067006a ಏವಮುಕ್ತೇ ತು ರಾಧೇಯೇ ವಾಸುದೇವೇನ ಪಾಂಡವಂ।
08067006c ಮನ್ಯುರಭ್ಯಾವಿಶತ್ತೀವ್ರಃ ಸ್ಮೃತ್ವಾ ತತ್ತದ್ಧನಂಜಯಂ।।

ಕರ್ಣನಿಗೆ ವಾಸುದೇವನು ಹೀಗೆ ಹೇಳುತ್ತಿರಲು ಅವುಗಳನ್ನು ಸ್ಮರಿಸಿಕೊಂಡ ಪಾಂಡವ ಧನಂಜಯನನ್ನು ತೀವ್ರವಾದ ಕೋಪವು ಆವರಿಸಿತು.

08067007a ತಸ್ಯ ಕ್ರೋಧೇನ ಸರ್ವೇಭ್ಯಃ ಸ್ರೋತೋಭ್ಯಸ್ತೇಜಸೋಽರ್ಚಿಷಃ।
08067007c ಪ್ರಾದುರಾಸನ್ಮಹಾರಾಜ ತದದ್ಭುತಮಿವಾಭವತ್।।

ಮಹಾರಾಜ! ಕ್ರೋಧದಿಂದ ಅವನ ರಂಧ್ರ ರಂಧ್ರಗಳಲ್ಲಿ ಅಗ್ನಿಯ ಜ್ವಾಲೆಗಳು ಹೊರಹೊಮ್ಮಿ ಅದೊಂದು ಅದ್ಭುತವೆನಿಸಿತು.

08067008a ತಂ ಸಮೀಕ್ಷ್ಯ ತತಃ ಕರ್ಣೋ ಬ್ರಹ್ಮಾಸ್ತ್ರೇಣ ಧನಂಜಯಂ।
08067008c ಅಭ್ಯವರ್ಷತ್ಪುನರ್ಯತ್ನಮಾಕರೋದ್ರಥಸರ್ಜನೇ।

ಅದನ್ನು ನೋಡಿ ಕರ್ಣನು ಬ್ರಹ್ಮಾಸ್ತ್ರದಿಂದ ಧನಂಜಯನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಪುನಃ ರಥವನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಿದನು.

08067008e ತದಸ್ತ್ರಮಸ್ತ್ರೇಣಾವಾರ್ಯ ಪ್ರಜಹಾರಾಸ್ಯ ಪಾಂಡವಃ।।
08067009a ತತೋಽನ್ಯದಸ್ತ್ರಂ ಕೌಂತೇಯೋ ದಯಿತಂ ಜಾತವೇದಸಃ।
08067009c ಮುಮೋಚ ಕರ್ಣಮುದ್ದಿಶ್ಯ ತತ್ಪ್ರಜಜ್ವಾಲ ವೈ ಭೃಶಂ।।

ಅ ಅಸ್ತ್ರವನ್ನು ಕೌಂತೇಯನು ಅಸ್ತ್ರದಿಂದಲೇ ನಿರಸನಗೊಳಿಸಿದನು. ಅನಂತರ ಪಾರ್ಥನು ಜಾತವೇದಸನಿಗೆ ಪ್ರಿಯವಾದ ಇನ್ನೊಂದು ಅಸ್ತ್ರವನ್ನು ಕರ್ಣನ ಮೇಲೆ ಗುರಿಯಿಟ್ಟು ಪ್ರಯೋಗಿಸಿದನು. ಅದು ಬಹಳವಾಗಿ ಪ್ರಜ್ವಲಿಸುತ್ತಿತ್ತು.

08067010a ವಾರುಣೇನ ತತಃ ಕರ್ಣಃ ಶಮಯಾಮಾಸ ಪಾವಕಂ।
08067010c ಜೀಮೂತೈಶ್ಚ ದಿಶಃ ಸರ್ವಾಶ್ಚಕ್ರೇ ತಿಮಿರದುರ್ದಿನಾಃ।।

ಆಗ ಕರ್ಣನು ಆ ಅಗ್ನಿಯನ್ನು ವಾರುಣಾಸ್ತ್ರದಿಂದ ಶಮನಗೊಳಿಸಿದನು. ಮತ್ತು ಮೋಡಗಳಿಂದ ಎಲ್ಲ ದಿಕ್ಕುಗಳನ್ನೂ ತುಂಬಿಸಿ ಹಗಲನ್ನೇ ಕತ್ತಲೆಯನ್ನಾಗಿಸಿದನು.

08067011a ಪಾಂಡವೇಯಸ್ತ್ವಸಂಭ್ರಾಂತೋ ವಾಯವ್ಯಾಸ್ತ್ರೇಣ ವೀರ್ಯವಾನ್।
08067011c ಅಪೋವಾಹ ತದಾಭ್ರಾಣಿ ರಾಧೇಯಸ್ಯ ಪ್ರಪಶ್ಯತಃ।।

ವೀರ್ಯವಾನ್ ಪಾಂಡವೇಯನು ಸ್ವಲ್ಪವೂ ಗಾಬರಿಗೊಳ್ಳದೇ ವಾಯವ್ಯಾಸ್ತ್ರದಿಂದ ರಾಧೇಯನು ನೋಡುತ್ತಿದ್ದಂತೆಯೇ ಆ ಮೋಡಗಳನ್ನು ನಿರಸನಗೊಳಿಸಿದನು.

08067012a ತಂ ಹಸ್ತಿಕಕ್ಷ್ಯಾಪ್ರವರಂ ಚ ಬಾಣೈಃ ಸುವರ್ಣಮುಕ್ತಾಮಣಿವಜ್ರಮೃಷ್ಟಂ।
08067012c ಕಾಲಪ್ರಯತ್ನೋತ್ತಮಶಿಲ್ಪಿಯತ್ನೈಃ ಕೃತಂ ಸುರೂಪಂ ವಿತಮಸ್ಕಮುಚ್ಚೈಃ।।
08067013a ಊರ್ಜಸ್ಕರಂ ತವ ಸೈನ್ಯಸ್ಯ ನಿತ್ಯಂ ಅಮಿತ್ರವಿತ್ರಾಸನಮೀಡ್ಯರೂಪಂ।
08067013c ವಿಖ್ಯಾತಮಾದಿತ್ಯಸಮಸ್ಯ ಲೋಕೇ ತ್ವಿಷಾ ಸಮಂ ಪಾವಕಭಾನುಚಂದ್ರೈಃ।।
08067014a ತತಃ ಕ್ಷುರೇಣಾಧಿರಥೇಃ ಕಿರೀಟೀ ಸುವರ್ಣಪುಂಖೇನ ಶಿತೇನ ಯತ್ತಃ।
08067014c ಶ್ರಿಯಾ ಜ್ವಲಂತಂ ಧ್ವಜಮುನ್ಮಮಾಥ ಮಹಾರಥಸ್ಯಾಧಿರಥೇರ್ಮಹಾತ್ಮಾ।।

ಅನಂತರ ಕಿರೀಟಿಯು ಸುವರ್ಣಪುಂಖಗಳುಳ್ಳ ನಿಶಿತ ಕ್ಷುರದಿಂದ ಪ್ರಯತ್ನಮಾಡಿ ಮಹಾತ್ಮ ಆಧಿರಥಿಯ ಮಹಾರಥದ ಮೇಲೆ ಹಾರಾಡುತ್ತಿದ್ದ ಆನೆಯ ಹಗ್ಗದ ಚಿಹ್ನೆಯನ್ನು ಹೊಂದಿದ್ದ, ಸುವರ್ಣ-ಮುತ್ತು-ವಜ್ರಗಳಿಂದ ಸಮಲಂಕೃತವಾಗಿದ್ದ, ಉತ್ತಮ ಶಿಲ್ಪಿಗಳಿಂದ ನಿರ್ಮಿಸಲ್ಪಟ್ಟಿದ್ದ, ಸೂರ್ಯನಂತೆ ವಿಶ್ವವಿಖ್ಯಾತವಾಗಿದ್ದ, ನಿನ್ನ ಸೈನ್ಯದ ವಿಜಯಕ್ಕೆ ಆಧಾರಸ್ತಂಭವೆಂತಿದ್ದ, ಶತ್ರುಗಳಿಗೆ ಭಯವನ್ನುಂಟುಮಾಡುತ್ತಿದ್ದ, ಸರ್ವರ ಸ್ತುತಿಗೂ ಪಾತ್ರವಾಗಿದ್ದ, ಕಾಂತಿಯಲ್ಲಿ ಸೂರ್ಯಾಗ್ನಿಗಳಿಗೆ ಸಮಾನವಾಗಿದ್ದ ಧ್ವಜವನ್ನು ಪ್ರಹರಿಸಿ ಕೆಡವಿದನು.

08067015a ಯಶಶ್ಚ ಧರ್ಮಶ್ಚ ಜಯಶ್ಚ ಮಾರಿಷ ಪ್ರಿಯಾಣಿ ಸರ್ವಾಣಿ ಚ ತೇನ ಕೇತುನಾ।
08067015c ತದಾ ಕುರೂಣಾಂ ಹೃದಯಾನಿ ಚಾಪತನ್ ಬಭೂವ ಹಾಹೇತಿ ಚ ನಿಸ್ವನೋ ಮಹಾನ್।।

ಮಾರಿಷ! ಆ ಧ್ವಜದ ಜೊತೆಯಲ್ಲಿಯೇ ಕೌರವರ ಯಶಸ್ಸು, ಧರ್ಮ, ಜಯ, ಮತ್ತು ಸರ್ವರ ಸಂತೋಷವೂ, ಹಾಗೆಯೇ ಕುರುಗಳ ಹೃದಯವೂ ಕೆಳಗೆ ಬಿದ್ದಿತು! ನಿಟ್ಟುಸಿರಿನ ಮಹಾ ಹಾಹಾಕಾರವುಂಟಾಯಿತು.

08067016a ಅಥ ತ್ವರನ್ಕರ್ಣವಧಾಯ ಪಾಂಡವೋ ಮಹೇಂದ್ರವಜ್ರಾನಲದಂಡಸಂನಿಭಂ।
08067016c ಆದತ್ತ ಪಾರ್ಥೋಽಂಜಲಿಕಂ ನಿಷಂಗಾತ್ ಸಹಸ್ರರಶ್ಮೇರಿವ ರಶ್ಮಿಮುತ್ತಮಂ।

ಕರ್ಣನ ವಧೆಯನ್ನು ತ್ವರೆಗೊಳಿಸಲು ಕೂಡಲೇ ಪಾಂಡವ ಪಾರ್ಥನು ಮಹೇಂದ್ರನ ವಜ್ರ, ಅಗ್ನಿದಂಡ ಮತ್ತು ಸೂರ್ಯನ ಶ್ರೇಷ್ಠ ಕಿರಣಗಳಿಗೆ ಸಮನಾದ ಅಂಜಲಿಕವನ್ನು ಕೈಗೆತ್ತಿಕೊಂಡನು.

08067017a ಮರ್ಮಚ್ಛಿದಂ ಶೋಣಿತಮಾಂಸದಿಗ್ಧಂ ವೈಶ್ವಾನರಾರ್ಕಪ್ರತಿಮಂ ಮಹಾರ್ಹಂ।
08067017c ನರಾಶ್ವನಾಗಾಸುಹರಂ ತ್ರ್ಯರತ್ನಿಂ ಷಡ್ವಾಜಮಂಜೋಗತಿಮುಗ್ರವೇಗಂ।।
08067018a ಸಹಸ್ರನೇತ್ರಾಶನಿತುಲ್ಯತೇಜಸಂ ಸಮಾನಕ್ರವ್ಯಾದಮಿವಾತಿದುಃಸಹಂ।
08067018c ಪಿನಾಕನಾರಾಯಣಚಕ್ರಸಂನಿಭಂ ಭಯಂಕರಂ ಪ್ರಾಣಭೃತಾಂ ವಿನಾಶನಂ।।
08067019a ಯುಕ್ತ್ವಾ ಮಹಾಸ್ತ್ರೇಣ ಪರೇಣ ಮಂತ್ರವಿದ್ ವಿಕೃಷ್ಯ ಗಾಂಡೀವಮುವಾಚ ಸಸ್ವನಂ।

ಮರ್ಮಗಳನ್ನು ಕತ್ತರಿಸುವ, ರಕ್ತಮಾಂಸಗಳಿಂದ ಲೇಪಿತವಾಗಿದ್ದ, ಸೂರ್ಯಾಗ್ನಿಸದೃಶವಾಗಿದ್ದ, ಬಹುಮೂಲ್ಯವಾಗಿದ್ದ, ನರ-ಅಶ್ವ-ಗಜಗಳನ್ನು ಸಂಹರಿಸಬಲ್ಲ, ಮೂರುಮೊಳ ಉದ್ದದ, ಆರು ರೆಕ್ಕೆಗಳುಳ್ಳ, ಉಗ್ರವೇಗದ, ಸಹಸ್ರನೇತ್ರನ ವಜ್ರಾಯುಧಕ್ಕೆ ಸಮಾನ ತೇಜಸ್ಸುಳ್ಳ, ಬಾಯಿತೆರೆದ ಅಂತಕನಂತೆ ಸಹಿಸಲಸಾಧ್ಯವಾದ, ಶಿವನ ಪಿನಾಕಕ್ಕೂ, ನಾರಾಯಣನ ಚಕ್ರಕ್ಕೂ ಸಮನಾಗಿದ್ದ, ಭಯಂಕರವಾಗಿದ್ದ, ಪ್ರಾಣಭೃತರ ವಿನಾಶಕಾರಿಯಾಗಿದ್ದ, ಆ ಬಾಣವನ್ನು ಮಹಾಸ್ತ್ರದಿಂದ ಅಭಿಮಂತ್ರಿಸಿ ಗಾಂಡೀವಕ್ಕೆ ಹೂಡಿ ಟೇಂಕಾರದೊಂದಿಗೆ ಕೂಗಿ ಹೇಳಿದನು:

08067019c ಅಯಂ ಮಹಾಸ್ತ್ರೋಽಪ್ರತಿಮೋ ಧೃತಃ ಶರಃ ಶರೀರಭಿಚ್ಚಾಸುಹರಶ್ಚ ದುರ್ಹೃದಃ।।
08067020a ತಪೋಽಸ್ತಿ ತಪ್ತಂ ಗುರವಶ್ಚ ತೋಷಿತಾ ಮಯಾ ಯದಿಷ್ಟಂ ಸುಹೃದಾಂ ತಥಾ ಶ್ರುತಂ।
08067020c ಅನೇನ ಸತ್ಯೇನ ನಿಹಂತ್ವಯಂ ಶರಃ ಸುದಂಶಿತಃ ಕರ್ಣಮರಿಂ ಮಮಾಜಿತಃ।।

“ನಾನು ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ತೃಪ್ತಿಗೊಳಿಸಿದ್ದರೆ, ಯಜ್ಞಯಾಗಾದಿಗಳನ್ನು ಮಾಡಿದ್ದರೆ, ಸುಹೃದಯರನ್ನು ಕೇಳಿದ್ದಿದ್ದರೆ, ಈ ಸತ್ಯಗಳಿಂದ ಸುವಿಹಿತವಾಗಿ ಸಂಧಾನಗೊಂಡಿರುವ, ಶತ್ರುಗಳ ಶರೀರವನ್ನೂ ಪ್ರಾಣವನ್ನೂ ಹರಣಮಾಡಬಲ್ಲ ಈ ಅಪ್ರತಿಮ, ಧೃತ, ಮಹಾಸ್ತ್ರದಿಂದ ಅಭಿಮಂತ್ರಿತ ಈ ಶರವು ನನ್ನ ಪ್ರಬಲಶತ್ರು ಕರ್ಣನನ್ನು ಸಂಹರಿಸಲಿ!”

08067021a ಇತ್ಯೂಚಿವಾಂಸ್ತಂ ಸ ಮುಮೋಚ ಬಾಣಂ ಧನಂಜಯಃ ಕರ್ಣವಧಾಯ ಘೋರಂ।
08067021c ಕೃತ್ಯಾಮಥರ್ವಾಂಗಿರಸೀಮಿವೋಗ್ರಾಂ ದೀಪ್ತಾಮಸಹ್ಯಾಂ ಯುಧಿ ಮೃತ್ಯುನಾಪಿ।।

ಹೀಗೆ ಹೇಳಿ ಧನಂಜಯನು ಕರ್ಣನ ವಧೆಗೆಂದು ಅಥರ್ವಾಂಗೀರಸ ಮಂತ್ರದಿಂದ ಮಾಡಿದ ಕೃತ್ಯವು ಹೇಗೆ ಉಗ್ರವೂ, ಪ್ರದೀಪ್ತವೂ, ಮೃತ್ಯುವಿಗೂ ಯುದ್ಧದ್ದಲ್ಲಿ ಎದುರಿಸಲಸಾಧ್ಯವಾಗಿರುತ್ತದೆಯೋ ಹಾಗಿದ್ದ ಆ ಘೋರ ಬಾಣವನ್ನು ಪ್ರಯೋಗಿಸಿದನು.

08067022a ಬ್ರುವನ್ಕಿರೀಟೀ ತಮತಿಪ್ರಹೃಷ್ಟೋ ಅಯಂ ಶರೋ ಮೇ ವಿಜಯಾವಹೋಽಸ್ತು।
08067022c ಜಿಘಾಂಸುರರ್ಕೇಂದುಸಮಪ್ರಭಾವಃ ಕರ್ಣಂ ಸಮಾಪ್ತಿಂ ನಯತಾಂ ಯಮಾಯ।।

ಅದರಿಂದ ಪರಮ ಹೃಷ್ಟನಾದ ಕಿರೀಟಿಯು ಪುನಃ ಹೇಳಿದನು: “ಈ ಶರವು ನನಗೆ ವಿಜಯದಾಯಕವಾಗಲಿ! ಚಂದ್ರಾದಿತ್ಯರ ಪ್ರಭೆಗೆ ಸಮಾನವಾಗಿರುವ ಇದು ಕರ್ಣನನ್ನು ಸಂಹರಿಸಿ, ಸಮಾಪ್ತಿಗೊಳಿಸಿ, ಯಮನಲ್ಲಿಗೆ ಕಳುಹಿಸಲಿ!”

08067023a ತೇನೇಷುವರ್ಯೇಣ ಕಿರೀಟಮಾಲೀ ಪ್ರಹೃಷ್ಟರೂಪೋ ವಿಜಯಾವಹೇನ।
08067023c ಜಿಘಾಂಸುರರ್ಕೇಂದುಸಮಪ್ರಭೇಣ ಚಕ್ರೇ ವಿಷಕ್ತಂ ರಿಪುಮಾತತಾಯೀ।।

ಯುದ್ಧದಲ್ಲಿ ವಿಜಯವನ್ನು ತರಬಲ್ಲ ಆ ಶ್ರೇಷ್ಠಬಾಣದಿಂದ ಪ್ರಹೃಷ್ಟನಾಗಿ ಕಾಣುತ್ತಿದ್ದ ಕಿರೀಟಮಾಲಿಯು ತನ್ನ ರಿಪು ಆತಯಾಯಿಯನ್ನು ಸಂಹರಿಸಲು ಚಂದ್ರಾದಿತ್ಯಸಮ ಪ್ರಭೆಯುಳ್ಳ ಆ ಶರವನ್ನು ಪ್ರಯೋಗಿಸಿದನು.

08067024a ತದುದ್ಯತಾದಿತ್ಯಸಮಾನವರ್ಚಸಂ ಶರನ್ನಭೋಮಧ್ಯಗಭಾಸ್ಕರೋಪಮಂ।
08067024c ವರಾಂಗಮುರ್ವ್ಯಾಂ ಅಪತಚ್ಚಮೂಪತೇರ್ ದಿವಾಕರೋಽಸ್ತಾದಿವ ರಕ್ತಮಂಡಲಃ।।

ಉದಯಿಸುವ ಸೂರ್ಯನ ಸಮಾನ ವರ್ಚಸ್ಸುಳ್ಳ ಮತ್ತು ನಭೋಮಧ್ಯದಲ್ಲಿದ್ದ ಭಾಸ್ಕರನಂತಿರುವ ಆ ಬಾಣವು ಕೆಂಪಾದ ಅಸ್ತಾಚಲದಿಂದ ದಿವಾಕರನು ಕೆಳಗೆ ಬೀಳುತ್ತಿರುವನೋ ಎಂಬಂತೆ ಕರ್ಣನ ಶಿರಸ್ಸನ್ನು ಸೇನೆಯ ಅಗ್ರಭಾಗದಲ್ಲಿ ಕೆಡವಿತು.

08067025a ತದಸ್ಯ ದೇಹೀ ಸತತಂ ಸುಖೋದಿತಂ ಸ್ವರೂಪಮತ್ಯರ್ಥಮುದಾರಕರ್ಮಣಃ।
08067025c ಪರೇಣ ಕೃಚ್ಚ್ರೇಣ ಶರೀರಮಾತ್ಯಜದ್ ಗೃಹಂ ಮಹರ್ದ್ಧೀವ ಸಸಂಗಮೀಶ್ವರಃ।।

ಉದಾರಕರ್ಮಿ ಕರ್ಣನ ಶಿರಸ್ಸು ಐಶ್ವರ್ಯವಂತನು ಸಂಪತ್ತಿನಿಂದ ಮತ್ತು ಪ್ರಿಯಜನರಿಂದ ತುಂಬಿರುವ ಮನೆಯನ್ನು ಬಹಳ ಕಷ್ಟದಿಂದ ಬಿಟ್ಟುಹೋಗುವಂತೆ ಬಹಳ ಕಷ್ಟದಿಂದ ಆ ಈಶ್ವರನ ಸತತವೂ ಸುಖವನ್ನೇ ಅನುಭವಿಸಿದ್ದ ಆ ಅತ್ಯಂತ ಸುಂದರ ದೇಹಸಂಗವನ್ನು ತೊರೆದು ಹೋಯಿತು.

08067026a ಶರೈರ್ವಿಭುಗ್ನಂ ವ್ಯಸು ತದ್ವಿವರ್ಮಣಃ ಪಪಾತ ಕರ್ಣಸ್ಯ ಶರೀರಮುಚ್ಚ್ರಿತಂ।
08067026c ಸ್ರವದ್ವ್ರಣಂ ಗೈರಿಕತೋಯವಿಸ್ರವಂ ಗಿರೇರ್ಯಥಾ ವಜ್ರಹತಂ ಶಿರಸ್ತಥಾ।।

ವಜ್ರದಿಂದ ಹತವಾದ ಗಿರಿಯಂತೆ ಶರದಿಂದ ಶಿರವು ಕತ್ತರಿಸಲ್ಪಡಲು ಪ್ರಾಣವನ್ನು ತೊರೆದ ಕರ್ಣನ ಎತ್ತರ ಶರೀರವು ಗೈರಿಕಾದಿ ಧಾತುಗಳಿಂದ ಕೂಡಿದ ಕೆಂಪುನೀರನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸುತ್ತಾ ಭೂಮಿಯ ಮೇಲೆ ಬಿದ್ದಿತು.

08067027a ದೇಹಾತ್ತು ಕರ್ಣಸ್ಯ ನಿಪಾತಿತಸ್ಯ ತೇಜೋ ದೀಪ್ತಂ ಖಂ ವಿಗಾಹ್ಯಾಚಿರೇಣ।
08067027c ತದದ್ಭುತಂ ಸರ್ವಮನುಷ್ಯಯೋಧಾಃ ಪಶ್ಯಂತಿ ರಾಜನ್ನಿಹತೇ ಸ್ಮ ಕರ್ಣೇ।।

ಕರ್ಣನ ದೇಹವು ಕೆಳಗೆ ಬೀಳುತ್ತಲೇ ಅವನ ದೇಹದಿಂದ ಬೆಳಗುತ್ತಿರುವ ತೇಜಸ್ಸೊಂದು ಹೊರಹೊರಟು ಆಕಾಶದಲ್ಲಿ ಸೂರ್ಯಮಂಡಲದಲ್ಲಿ ಲೀನವಾಯಿತು. ರಾಜನ್! ಕರ್ಣನು ಹತನಾದಾಗ ನಡೆದ ಆ ಅದ್ಭುತವನ್ನು ಸರ್ವ ಮನುಷ್ಯಯೋಧರೂ ನೋಡಿದರು.

08067028a ತಂ ಸೋಮಕಾಃ ಪ್ರೇಕ್ಷ್ಯ ಹತಂ ಶಯಾನಂ ಪ್ರೀತಾ ನಾದಂ ಸಹ ಸೈನ್ಯೈರಕುರ್ವನ್।
08067028c ತೂರ್ಯಾಣಿ ಚಾಜಘ್ನುರತೀವ ಹೃಷ್ಟಾ ವಾಸಾಂಸಿ ಚೈವಾದುಧುವುರ್ಭುಜಾಂಶ್ಚ।
08067028e ಬಲಾನ್ವಿತಾಶ್ಚಾಪ್ಯಪರೇ ಹ್ಯನೃತ್ಯನ್ನ್ ಅನ್ಯೋನ್ಯಮಾಶ್ಲಿಷ್ಯ ನದಂತ ಊಚುಃ।।

ಹತನಾಗಿ ಮಲಗಿರುವ ಅವನನ್ನು ನೋಡಿ ಪ್ರೀತರಾದ ಸೋಮಕರು ಸೇನೆಗಳೊಂದಿಗೆ ನಿನಾದಿಸಿದರು. ಅತೀವ ಹೃಷ್ಟರಾಗಿ ತೂರ್ಯಗಳನ್ನು ಮೊಳಗಿಸಿದರು ಮತ್ತು ಭುಜಗಳನ್ನು ಮೇಲೆತ್ತಿ ಉತ್ತರೀಯಗಳನ್ನು ಹಾರಿಸಿದರು. ಇತರ ಬಲಾನ್ವಿತರು ಅನ್ಯೋನ್ಯರನ್ನು ಆಲಂಗಿಸಿ, ಕುಣಿದಾಡಿ, ಗರ್ಜಿಸುತ್ತಾ ಒಬ್ಬರಿಗೊಬ್ಬರು ಹೀಗೆ ಮಾತನಾಡಿಕೊಂಡರು:

08067029a ದೃಷ್ಟ್ವಾ ತು ಕರ್ಣಂ ಭುವಿ ನಿಷ್ಟನಂತಂ ಹತಂ ರಥಾತ್ಸಾಯಕೇನಾವಭಿನ್ನಂ।
08067029c ಮಹಾನಿಲೇನಾಗ್ನಿಮಿವಾಪವಿದ್ಧಂ ಯಜ್ಞಾವಸಾನೇ ಶಯನೇ ನಿಶಾಂತೇ।।

“ಸಾಯಕದಿಂದ ಕತ್ತರಿಸಲ್ಪಟ್ಟು ರಥದಿಂದ ಕೆಳಕ್ಕೆ ಬಿದ್ದಿರುವ ಅವನು ಚಂಡಮಾರುತದಿಂದ ಭಗ್ನವಾಗಿ ಕೆಳಗೆ ಬಿದ್ದ ಪರ್ವತ ಶಿಖರದಂತೆಯೂ, ಯಜ್ಞಾವಸಾನದ ಅಗ್ನಿಯಂತೆಯೂ, ಮುಳುಗಿರುವ ಸೂರ್ಯನಂತೆಯೂ ಕಾಣುತ್ತಿದ್ದಾನೆ!

08067030a ಶರೈರಾಚಿತಸರ್ವಾಂಗಃ ಶೋಣಿತೌಘಪರಿಪ್ಲುತಃ।
08067030c ವಿಭಾತಿ ದೇಹಃ ಕರ್ಣಸ್ಯ ಸ್ವರಶ್ಮಿಭಿರಿವಾಂಶುಮಾನ್।।

ಸರ್ವಾಂಗಗಳಲ್ಲಿಯೂ ಶರಗಳಿಂದ ಚುಚ್ಚಲ್ಪಟ್ಟು ಸುರಿಯುತ್ತಿರುವ ರಕ್ತದಿಂದ ಲೇಪಿತನಾಗಿರುವ ಕರ್ಣನ ದೇಹವು ತನ್ನದೇ ರಶ್ಮಿಗಳಿಂದ ಬೆಳಗುವ ಸೂರ್ಯನಂತೆ ಬೆಳಗುತ್ತಿದೆ!

08067031a ಪ್ರತಾಪ್ಯ ಸೇನಾಮಾಮಿತ್ರೀಂ ದೀಪ್ತೈಃ ಶರಗಭಸ್ತಿಭಿಃ।
08067031c ಬಲಿನಾರ್ಜುನಕಾಲೇನ ನೀತೋಽಸ್ತಂ ಕರ್ಣಭಾಸ್ಕರಃ।।

ಉರಿಯುತ್ತಿರುವ ಶರಗಳೆಂಬ ಕಿರಣಗಳಿಂದ ಸೇನೆಗಳನ್ನು ತೀವ್ರವಾಗಿ ಉರಿಸಿ ಬಲಶಾಲಿ ಅರ್ಜುನನೆಂಬ ಸಮಯದಿಂದ ಕರ್ಣನೆಂಬ ಭಾಸ್ಕರನು ಅಸ್ತಗೊಂಡಿದ್ದಾನೆ!

08067032a ಅಸ್ತಂ ಗಚ್ಚನ್ಯಥಾದಿತ್ಯಃ ಪ್ರಭಾಮಾದಾಯ ಗಚ್ಚತಿ।
08067032c ಏವಂ ಜೀವಿತಮಾದಾಯ ಕರ್ಣಸ್ಯೇಷುರ್ಜಗಾಮ ಹ।।

ಅಸ್ತನಾಗುತ್ತಿರುವ ಸೂರ್ಯನು ಹೇಗೆ ತನ್ನ ಪ್ರಭೆಗಳನ್ನೂ ತೆಗೆದುಕೊಂಡು ಹೋಗುತ್ತಾನೋ ಹಾಗೆ ಈ ಶರವು ಕರ್ಣನ ಜೀವವನ್ನೂ ತೆಗೆದುಕೊಂಡು ಹೋಯಿತು!

08067033a ಅಪರಾಹ್ಣೇ ಪರಾಹ್ಣಸ್ಯ ಸೂತಪುತ್ರಸ್ಯ ಮಾರಿಷ।
08067033c ಚಿನ್ನಮಂಜಲಿಕೇನಾಜೌ ಸೋತ್ಸೇಧಮಪತಚ್ಚಿರಃ।।

ಮಾರಿಷ! ಸೂತಪುತ್ರನ ಮರಣವು ದಿವಸದ ಕಡೆಯ ಭಾಗದಲ್ಲಾಯಿತು. ಅಂಜಲಿಕ ಬಾಣದಿಂದ ಕತ್ತರಿಸಲ್ಪಟ್ಟು ಶಿರಸ್ಸು ದೇಹದಿಂದ ಕೆಳಗೆ ಬಿದ್ದಿತು.

08067034a ಉಪರ್ಯುಪರಿ ಸೈನ್ಯಾನಾಂ ತಸ್ಯ ಶತ್ರೋಸ್ತದಂಜಸಾ।
08067034c ಶಿರಃ ಕರ್ಣಸ್ಯ ಸೋತ್ಸೇಧಮಿಷುಃ ಸೋಽಪಾಹರದ್ದ್ರುತಂ।।

ಅದು ಸೇನೆಯ ಮೇಲ್ಭಾಗದಲ್ಲಿಯೇ ಹೋಗುತ್ತಾ ಎತ್ತರವಾದ ಶಿರಸ್ಸನ್ನು ಬಹಳ ಬೇಗ ಅಪಹರಿಸಿಬಿಟ್ಟಿತು!””

08067035 ಸಂಜಯ ಉವಾಚ।
08067035a ಕರ್ಣಂ ತು ಶೂರಂ ಪತಿತಂ ಪೃಥಿವ್ಯಾಂ ಶರಾಚಿತಂ ಶೋಣಿತದಿಗ್ಧಗಾತ್ರಂ।
08067035c ದೃಷ್ಟ್ವಾ ಶಯಾನಂ ಭುವಿ ಮದ್ರರಾಜಶ್ ಚಿನ್ನಧ್ವಜೇನಾಪಯಯೌ ರಥೇನ।।

ಸಂಜಯನು ಹೇಳಿದನು: “ಬಾಣಗಳಿಂದ ಚುಚ್ಚಲ್ಪಟ್ಟು ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಬಿದ್ದಿದ್ದ ಶೂರ ಕರ್ಣನನ್ನು ನೋಡಿ ಮದ್ರರಾಜನು ಧ್ವಜವಿಹೀನ ರಥದಿಂದ ಹೊರಬಂದು ಹೊರಟು ಹೋದನು.

08067036a ಕರ್ಣೇ ಹತೇ ಕುರವಃ ಪ್ರಾದ್ರವಂತ ಭಯಾರ್ದಿತಾ ಗಾಢವಿದ್ಧಾಶ್ಚ ಸಂಖ್ಯೇ।
08067036c ಅವೇಕ್ಷಮಾಣಾ ಮುಹುರರ್ಜುನಸ್ಯ ಧ್ವಜಂ ಮಹಾಂತಂ ವಪುಷಾ ಜ್ವಲಂತಂ।।

ಕರ್ಣನು ಹತನಾಗಲು ಬಾಣಗಳಿಂದ ಗಾಢವಾಗಿ ಗಾಯಗೊಂಡಿದ್ದ ಕೌರವ ಸೇನೆಯು ರಣದಲ್ಲಿ ತೇಜಸ್ಸಿನಿಂದ ಬೆಳಗುತ್ತಿದ್ದ ಅರ್ಜುನನ ಮಹಾಧ್ವಜವನ್ನು ತಿರುಗಿ ತಿರುಗಿ ನೋಡುತ್ತಾ ಪಲಾಯನಮಾಡಿತು.

08067037a ಸಹಸ್ರನೇತ್ರಪ್ರತಿಮಾನಕರ್ಮಣಃ ಸಹಸ್ರಪತ್ರಪ್ರತಿಮಾನನಂ ಶುಭಂ।
08067037c ಸಹಸ್ರರಶ್ಮಿರ್ದಿನಸಂಕ್ಷಯೇ ಯಥಾ ತಥಾಪತತ್ತಸ್ಯ ಶಿರೋ ವಸುಂಧರಾಂ।।

ಸಹಸ್ರನೇತ್ರನ ಕರ್ಮಗಳಿಗೆ ಸಮಾನ ಕರ್ಮಗಳನ್ನು ಮಾಡಿದ್ದ ಕರ್ಣನ ಸಹಸ್ರದಳ ಕಮಲಕ್ಕೆ ಸಮಾನ ಶುಭ ಮುಖವು ದಿನವು ಕಳೆದಾಗ ಮುಳುಗುವ ಸಹಸ್ರರಶ್ಮಿ ಸೂರ್ಯನು ಪಶ್ಚಿಮ ಪರ್ವತದಲ್ಲಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣವಧೇ ಸಪ್ತಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣವಧ ಎನ್ನುವ ಅರವತ್ತೇಳನೇ ಅಧ್ಯಾಯವು.