ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 65
ಸಾರ
ಕರ್ಣಾರ್ಜುನರ ಯುದ್ಧವರ್ಣನೆ (1-14). ಕರ್ಣನ ಮೇಲ್ಗೈಯನ್ನು ಕಂಡ ಭೀಮಸೇನ-ಕೃಷ್ಣರು ಅರ್ಜುನನಿಗೆ ಕರ್ಣನನ್ನು ಕೂಡಲೇ ಸಂಹರಿಸಲು ಪ್ರೇರೇಪಿಸಿದುದು (15-21). ಅರ್ಜುನನು ಕರ್ಣನ ರಥವನ್ನು ಬಾಣಗಳಿಂದ ಮುಚ್ಚಿದುದು (22-45).
08065001 ಸಂಜಯ ಉವಾಚ।
08065001a ತೌ ಶಂಖಭೇರೀನಿನದೇ ಸಮೃದ್ಧೇ ಸಮೀಯತುಃ ಶ್ವೇತಹಯೌ ನರಾಗ್ರ್ಯೌ।
08065001c ವೈಕರ್ತನಃ ಸೂತಪುತ್ರೋಽರ್ಜುನಶ್ಚ ದುರ್ಮಂತ್ರಿತೇ ತವ ಪುತ್ರಸ್ಯ ರಾಜನ್।।
ಸಂಜಯನು ಹೇಳಿದನು: “ರಾಜನ್! ನಿನ್ನ ಪುತ್ರನ ದುರ್ಮಂತ್ರದಿಂದಾಗಿ ಸಮೃದ್ಧವಾದ ಶಂಖಭೇರಿ ನಿನಾದದ ಮಧ್ಯೆ ನರಾಗ್ರರಾದ ಶ್ವೇತಹಯರಾದ ವೈಕರ್ತನ ಕರ್ಣ ಮತ್ತು ಅರ್ಜುನರು ಎದುರಾಗಿ ಯುದ್ಧಮಾಡತೊಡಗಿದರು.
08065002a ಯಥಾ ಗಜೌ ಹೈಮವತೌ ಪ್ರಭಿನ್ನೌ ಪ್ರಗೃಹ್ಯ ದಂತಾವಿವ ವಾಶಿತಾರ್ಥೇ।
08065002c ತಥಾ ಸಮಾಜಗ್ಮತುರುಗ್ರವೇಗೌ ಧನಂಜಯಶ್ಚಾಧಿರಥಿಶ್ಚ ವೀರೌ।।
ದೀರ್ಘ ದಂತಗಳನ್ನು ಹೊಂದಿ ಮದೋದಕವನ್ನು ಸುರಿಸುತ್ತಿದ್ದ ಹಿಮಾಲಯದ ಎರಡು ಆನೆಗಳು ಹೆಣ್ಣಾನೆಗೋಸ್ಕರ ಸೆಣಸಾಡಲು ಮುನ್ನುಗ್ಗಿಹೋಗುವಂತೆ ವೀರ ಧನಂಜಯ ಮತ್ತು ಆಧಿರಥರು ಉಗ್ರವೇಗದಿಂದ ಅನ್ಯೋನ್ಯರ ಮೇಲೆ ಎರಗಿದರು.
08065003a ಬಲಾಹಕೇನೇವ ಯಥಾ ಬಲಾಹಕೋ ಯದೃಚ್ಛಯಾ ವಾ ಗಿರಿಣಾ ಗಿರಿರ್ಯಥಾ।
08065003c ತಥಾ ಧನುರ್ಜ್ಯಾತಲನೇಮಿನಿಸ್ವನೌ ಸಮೀಯತುಸ್ತಾವಿಷುವರ್ಷವರ್ಷಿಣೌ।।
ಮಹಾಮೇಘದೊಡನೆ ಮಹಾಮೇಘವು ಠಕ್ಕರಿಸುವಂತೆ, ಪರ್ವತವು ಪರ್ವತಕ್ಕೆ ಠಕ್ಕರಿಸುವಂತೆ ಬಾಣಗಳ ಮಳೆಯನ್ನೇ ಸುರಿಸುತ್ತಿದ್ದ ಕರ್ಣಾರ್ಜುನರು ಧನುಸ್ಸಿನ ಟೇಂಕಾರ ಶಬ್ಧಗಳಿಂದಲೂ, ಚಪಾಳೆಯ ಶಬ್ಧಗಳಿಂದಲೂ, ರಥಚಕ್ರದ ಶಬ್ಧಗಳಿಂದಲೂ ಪರಸ್ಪರರನ್ನು ಎದುರಿಸಿದರು.
08065004a ಪ್ರವೃದ್ಧಶೃಂಗದ್ರುಮವೀರುದೋಷಧೀ ಪ್ರವೃದ್ಧನಾನಾವಿಧಪರ್ವತೌಕಸೌ।
08065004c ಯಥಾಚಲೌ ವಾ ಗಲಿತೌ ಮಹಾಬಲೌ ತಥಾ ಮಹಾಸ್ತ್ರೈರಿತರೇತರಂ ಘ್ನತಃ।।
ಬೆಳೆದಿರುವ ಶಿಖರಗಳಿಂದಲೂ, ವೃಕ್ಷಗಳಿಂದಲೂ, ಲತಾ-ಗುಲ್ಮಗಳಿಂದಲೂ, ಔಷಧಿಮೂಲಿಕೆಗಳಿಂದಲೂ ಕೂಡಿರುವ, ತುಂಬಿಹರಿಯುತ್ತಿರುವ ನಾನಾ ಝರಿಗಳಿಂದ ಕೂಡಿದ ಎರಡು ಪರ್ವತಗಳಂತೆ ಆ ಮಹಾಬಲಶಾಲಿಗಳಿಬ್ಬರು ಕಂಡರು.
08065005a ಸ ಸಂನಿಪಾತಸ್ತು ತಯೋರ್ಮಹಾನಭೂತ್ ಸುರೇಶವೈರೋಚನಯೋರ್ಯಥಾ ಪುರಾ।
08065005c ಶರೈರ್ವಿಭುಗ್ನಾಂಗನಿಯಂತೃವಾಹನಃ ಸುದುಃಸಹೋಽನ್ಯೈಃ ಪಟುಶೋಣಿತೋದಕಃ।।
ಅವರಿಬ್ಬರ ಆಕ್ರಮಣವು ಹಿಂದೆ ಸುರೇಶ-ವೈರೋಚನರ ನಡುವೆ ನಡೆದಂತೆ ಘೋರವಾಗಿದ್ದಿತು. ಬೇರೆಯವರಿಗೆ ದುಃಸ್ಸಹವಾದ ಆ ಯುದ್ಧದಲ್ಲಿ ಶರಗಳಿಂದ ಗಾಯಗೊಂಡ ಅವರ ದೇಹಗಳಿಂದ, ಸಾರಥಿಗಳಿಂದ ಮತ್ತು ಕುದುರೆಗಳಿಂದ ರಕ್ತವೇ ನೀರಾದ ಕೋಡಿಯು ಹರಿಯತೊಡಗಿತು.
08065006a ಪ್ರಭೂತಪದ್ಮೋತ್ಪಲಮತ್ಸ್ಯಕಚ್ಚಪೌ ಮಹಾಹ್ರದೌ ಪಕ್ಷಿಗಣಾನುನಾದಿತೌ।
08065006c ಸುಸಂನಿಕೃಷ್ಟಾವನಿಲೋದ್ಧತೌ ಯಥಾ ತಥಾ ರಥೌ ತೌ ಧ್ವಜಿನೌ ಸಮೀಯತುಃ।।
ಬೆಳಿದಿದ್ದ ಪದ್ಮಗಳಿಂದಲೂ, ಮೀನು ಆಮೆಗಳಿಂದಲೂ, ಪಕ್ಷಿಗಣಗಳ ಇಂಚರಗಳಿಂದಲೂ ಕೂಡಿದ್ದ ಮಹಾ ಸರೋವರಗಳೆರಡು ಭಿರುಗಾಳಿಯಿಂದ ಮೇಲೆದ್ದ ಅಲೆಗಳ ಮೂಲಕವಾಗಿ ಪರಸ್ಪರ ಸಮ್ಮಿಲಿತವಾಗುವಂತೆ ಧ್ವಜಗಳಿದ್ದ ಅವರಿಬ್ಬರ ರಥಗಳು ಪರಸ್ಪರರೊಡನೆ ಸಂಘರ್ಷಿಸಿದವು.
08065007a ಉಭೌ ಮಹೇಂದ್ರಸ್ಯ ಸಮಾನವಿಕ್ರಮಾವ್ ಉಭೌ ಮಹೇಂದ್ರಪ್ರತಿಮೌ ಮಹಾರಥೌ।
08065007c ಮಹೇಂದ್ರವಜ್ರಪ್ರತಿಮೈಶ್ಚ ಸಾಯಕೈರ್ ಮಹೇಂದ್ರವೃತ್ರಾವಿವ ಸಂಪ್ರಜಹ್ರತುಃ।।
ಇಬ್ಬರೂ ಮಹೇಂದ್ರಸಮಾನ ವಿಕ್ರಮಿಗಳಾಗಿದ್ದರು. ಇಬ್ಬರೂ ಮಹೇಂದ್ರನಂತೆ ಮಹಾರಥರಾಗಿದ್ದರು. ಇಬ್ಬರ ಸಾಯಕಗಳೂ ಮಹೇಂದ್ರನ ವಜ್ರಗಳಿಂತಿದ್ದವು. ಇಬ್ಬರೂ ಮಹೇಂದ್ರ-ವೃತ್ರರಂತೆ ಸೆಣಸಾಡುತ್ತಿದ್ದರು.
08065008a ಸನಾಗಪತ್ತ್ಯಶ್ವರಥೇ ಉಭೇ ಬಲೇ ವಿಚಿತ್ರವರ್ಣಾಭರಣಾಂಬರಸ್ರಜೇ।
08065008c ಚಕಂಪತುಶ್ಚೋನ್ನಮತಃ ಸ್ಮ ವಿಸ್ಮಯಾದ್ ವಿಯದ್ಗತಾಶ್ಚಾರ್ಜುನಕರ್ಣಸಂಯುಗೇ।।
ಕರ್ಣಾರ್ಜುನರ ಆ ದ್ವಂದ್ವಯುದ್ಧದಲ್ಲಿ ವಿಚಿತ್ರ ಕವಚ-ಆಭರಣ-ವಸ್ತ್ರಗಳನ್ನು ಧರಿಸಿದ್ದ ಎರಡೂ ಸೇನೆಗಳೂ, ಗಜ-ಪದಾತಿ-ಅಶ್ವ-ರಥಗಳೊಡನೆ ವಿಸ್ಮಯ-ಭಯಗಳಿಂದ ನಡುಗಿದವು.
08065009a ಭುಜಾಃ ಸವಜ್ರಾಂಗುಲಯಃ ಸಮುಚ್ಛ್ರಿತಾಃ ಸಸಿಂಹನಾದಾ ಹೃಷಿತೈರ್ದಿದೃಕ್ಷುಭಿಃ।
08065009c ಯದಾರ್ಜುನಂ ಮತ್ತಮಿವ ದ್ವಿಪೋ ದ್ವಿಪಂ ಸಮಭ್ಯಯಾದಾಧಿರಥಿರ್ಜಿಘಾಂಸಯಾ।।
ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಆಕ್ರಮಣಿಸುವಂತೆ ಆಧಿರಥಿಯು ಅರ್ಜುನನನ್ನು ಸಂಹರಿಸಲು ಮುನ್ನುಗ್ಗಲು ಹೃಷ್ಟರಾದ ಪ್ರೇಕ್ಷಕರು ಬೆರಳುಗಳಲ್ಲಿ ಅಂಗವಸ್ತ್ರಗಳನ್ನು ಹಿಡಿದು ಭುಜಗಳನ್ನೆತ್ತಿ ಸಿಂಹನಾದಗಳೊಂದಿಗೆ ಹಾರಾಡಿಸತೊಡಗಿದರು.
08065010a ಅಭ್ಯಕ್ರೋಶನ್ಸೋಮಕಾಸ್ತತ್ರ ಪಾರ್ಥಂ ತ್ವರಸ್ವ ಯಾಹ್ಯರ್ಜುನ ವಿಧ್ಯ ಕರ್ಣಂ।
08065010c ಚಿಂದ್ಯಸ್ಯ ಮೂರ್ಧಾನಮಲಂ ಚಿರೇಣ ಶ್ರದ್ಧಾಂ ಚ ರಾಜ್ಯಾದ್ಧೃತರಾಷ್ಟ್ರಸೂನೋಃ।।
ಆಗ ಸೋಮಕರು ಪಾರ್ಥನಿಗೆ ಕೂಗಿ ಹೇಳಿದರು: “ಅರ್ಜುನ! ತ್ವರೆಮಾಡಿ ಕರ್ಣನನ್ನು ಸಂಹರಿಸು. ಕೂಡಲೇ ಅವನ ತಲೆಯನ್ನು ಶಿರಸ್ಸಿನಿಂದ ತುಂಡರಿಸು! ರಾಜ್ಯದ ಮೇಲೆ ಧೃತರಾಷ್ಟ್ರನ ಮಗನಿಗಿದ್ದ ಶ್ರದ್ಧೆಯನ್ನು ನಾಶಪಡಿಸು!”
08065011a ತಥಾಸ್ಮಾಕಂ ಬಹವಸ್ತತ್ರ ಯೋಧಾಃ ಕರ್ಣಂ ತದಾ ಯಾಹಿ ಯಾಹೀತ್ಯವೋಚನ್।
08065011c ಜಹ್ಯರ್ಜುನಂ ಕರ್ಣ ತತಃ ಸಚೀರಾಃ ಪುನರ್ವನಂ ಯಾಂತು ಚಿರಾಯ ಪಾರ್ಥಾಃ।।
ಹಾಗೆಯೇ ನಮ್ಮ ಕಡೆಯ ಅನೇಕ ಯೋಧರೂ ಕೂಡ “ಮುಂದುವರೆ! ಮುಂದುವರೆ!” ಎಂದು ಹೇಳುತ್ತಾ “ಕರ್ಣ! ತಕ್ಷಣವೇ ಅರ್ಜುನನನ್ನು ಸಂಹರಿಸು! ದೀರ್ಘಕಾಲದವರೆಗೆ ಪಾರ್ಥರು ವನಕ್ಕೆ ತೆರಳಲಿ!” ಎಂದು ಕೂಗುತ್ತಿದ್ದರು.
08065012a ತತಃ ಕರ್ಣಃ ಪ್ರಥಮಂ ತತ್ರ ಪಾರ್ಥಂ ಮಹೇಷುಭಿರ್ದಶಭಿಃ ಪರ್ಯವಿಧ್ಯತ್।
08065012c ತಂ ಅರ್ಜುನಃ ಪ್ರತ್ಯವಿಧ್ಯಚ್ಚಿತಾಗ್ರೈಃ ಕಕ್ಷಾಂತರೇ ದಶಭಿರತೀವ ಕ್ರುದ್ಧಃ।।
ಆಗ ಕರ್ಣನು ಮೊದಲು ಪಾರ್ಥನನ್ನು ಹತ್ತು ಮಹಾಶರಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಅರ್ಜುನನು ಅತೀವ ಕ್ರುದ್ಧನಾಗಿ ಹತ್ತು ನಿಶಿತ ಬಾಣಗಳಿಂದ ಅವನ ಭುಜಗಳಿಗೆ ಹೊಡೆದನು.
08065013a ಪರಸ್ಪರಂ ತೌ ವಿಶಿಖೈಃ ಸುತೀಕ್ಷ್ಣೈಸ್ ತತಕ್ಷತುಃ ಸೂತಪುತ್ರೋಽರ್ಜುನಶ್ಚ।
08065013c ಪರಸ್ಪರಸ್ಯಾಂತರೇಪ್ಸೂ ವಿಮರ್ದೇ ಸುಭೀಮಮಭ್ಯಾಯಯತುಃ ಪ್ರಹೃಷ್ಟೌ।।
ಸೂತಪುತ್ರ-ಅರ್ಜುನರು ಪರಸ್ಪರರನ್ನು ಸುತೀಕ್ಷ್ಣ ವಿಶಿಖಗಳಿಂದ ಗಾಯಗೊಳಿಸಿದರು. ಪ್ರಹೃಷ್ಟರಾಗಿದ್ದ ಅವರಿಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿ ಭಯಂಕರವಾಗಿ ಯುದ್ಧಮಾಡುತ್ತಿದ್ದರು.
08065014a ಅಮೃಷ್ಯಮಾಣಶ್ಚ ಮಹಾವಿಮರ್ದೇ ತತ್ರಾಕ್ರುಧ್ಯದ್ಭೀಮಸೇನೋ ಮಹಾತ್ಮಾ।
08065014c ಅಥಾಬ್ರವೀತ್ಪಾಣಿನಾ ಪಾಣಿಮಾಘ್ನನ್ ಸಂದಷ್ಟೌಷ್ಠೋ ನೃತ್ಯತಿ ವಾದಯನ್ನಿವ।
08065014e ಕಥಂ ನು ತ್ವಾಂ ಸೂತಪುತ್ರಃ ಕಿರೀಟಿನ್ ಮಹೇಷುಭಿರ್ದಶಭಿರವಿಧ್ಯದಗ್ರೇ।।
ಆ ಮಹಾಯುದ್ಧದಲ್ಲಿ ಸಹನೆಯನ್ನು ಕಳೆದುಕೊಂಡ ಮಹಾತ್ಮ ಭೀಮಸೇನನು ಕ್ರುದ್ಧನಾಗಿ, ಕೈಯಲ್ಲಿ ಕೈಯನ್ನು ಮಸೆಯುತ್ತಾ, ತುಟಿಗಳು ನೃತ್ಯವಾಡುತ್ತಿವೆಯೋ ಎಂಬಂತೆ ಅಲುಗಾಡುತ್ತಿರಲು ಕೂಗಿ ಹೇಳಿದನು: “ಕಿರೀಟಿ! ಸೂತಪುತ್ರನು ಹೇಗೆ ಮೊದಲು ನಿನ್ನನ್ನು ಹತ್ತು ಮಹಾ ಬಾಣಗಳಿಂದ ಪ್ರಹರಿಸಿದನು?
08065015a ಯಯಾ ಧೃತ್ಯಾ ಸರ್ವಭೂತಾನ್ಯಜೈಷೀರ್ ಗ್ರಾಸಂ ದದದ್ವಹ್ನಯೇ ಖಾಂಡವೇ ತ್ವಂ।
08065015c ತಯಾ ಧೃತ್ಯಾ ಸೂತಪುತ್ರಂ ಜಹಿ ತ್ವಂ ಅಹಂ ವೈನಂ ಗದಯಾ ಪೋಥಯಿಷ್ಯೇ।।
ಯಾವ ಧೈರ್ಯದಿಂದ ನೀನು ಸರ್ವಭೂತಗಳನ್ನೂ ಜಯಿಸಿ ಖಾಂಡವವನ್ನು ಅಗ್ನಿಗೆ ಆಹಾರವನ್ನಾಗಿತ್ತೆಯೋ ಅದೇ ಧೈರ್ಯದಿಂದ ನೀನು ಸೂತಪುತ್ರನನ್ನು ಸಂಹರಿಸು! ಇಲ್ಲದಿದ್ದರೆ ನಾನು ಇವನನ್ನು ಗದೆಯಿಂದ ಪ್ರಹರಿಸುತ್ತೇನೆ!”
08065016a ಅಥಾಬ್ರವೀದ್ವಾಸುದೇವೋಽಪಿ ಪಾರ್ಥಂ ದೃಷ್ಟ್ವಾ ರಥೇಷೂನ್ಪ್ರತಿಹನ್ಯಮಾನಾನ್।
08065016c ಅಮೀಮೃದತ್ಸರ್ವಥಾ ತೇಽದ್ಯ ಕರ್ಣೋ ಹ್ಯಸ್ತ್ರೈರಸ್ತ್ರಾಣಿ ಕಿಮಿದಂ ಕಿರೀಟಿನ್।।
ರಥದಿಂದ ಹೊರಟ ಬಾಣಗಳು ಪ್ರತಿಯಾಗಿ ನಾಶಗೊಳ್ಳುತ್ತಿರುವುದನ್ನು ನೋಡಿ ವಾಸುದೇವನೂ ಕೂಡ ಪಾರ್ಥನಿಗೆ ಹೇಳಿದನು: “ಕಿರೀಟೀ! ಇದೇನಿದು? ಇಂದು ನೀನು ಬಿಟ್ಟ ಅಸ್ತ್ರಗಳೆಲ್ಲವನ್ನೂ ಕರ್ಣನು ನಾಶಪಡಿಸುತ್ತಿದ್ದಾನೆ!
08065017a ಸ ವೀರ ಕಿಂ ಮುಹ್ಯಸಿ ನಾವಧೀಯಸೇ ನದಂತ್ಯೇತೇ ಕುರವಃ ಸಂಪ್ರಹೃಷ್ಟಾಃ।
08065017c ಕರ್ಣಂ ಪುರಸ್ಕೃತ್ಯ ವಿದುರ್ಹಿ ಸರ್ವೇ ತ್ವದಸ್ತ್ರಮಸ್ತ್ರೈರ್ವಿನಿಪಾತ್ಯಮಾನಂ।।
ವೀರ! ಮೋಹಗೊಂಡಿರುವೆಯಾ? ಧೈರ್ಯವನ್ನು ಕಳೆದುಕೊಂಡಿರುವೆಯಾ?ಅವನು ನಿನ್ನ ಅಸ್ತ್ರಗಳನ್ನು ಅಸ್ತ್ರಗಳಿಂದ ವಿನಾಶಗೊಳಿಸುತ್ತಿರುವುದರಿಂದ ಕರ್ಣನನ್ನು ಗೌರವಿಸಿ ಕುರುಗಳೆಲ್ಲರೂ ಸಂತೋಷದಿಂದ ಸಿಂಹನಾದಗೈಯುತ್ತಿದ್ದಾರೆ!
08065018a ಯಯಾ ಧೃತ್ಯಾ ನಿಹತಂ ತಾಮಸಾಸ್ತ್ರಂ ಯುಗೇ ಯುಗೇ ರಾಕ್ಷಸಾಶ್ಚಾಪಿ ಘೋರಾಃ।
08065018c ದಂಭೋದ್ಭವಾಶ್ಚಾಸುರಾಶ್ಚಾಹವೇಷು ತಯಾ ಧೃತ್ಯಾ ತ್ವಂ ಜಹಿ ಸೂತಪುತ್ರಂ।।
ಯುಗಯುಗಗಳಲ್ಲಿ ಯಾವ ಧೈರ್ಯದಿಂದ ನೀನು ಘೋರ ರಾಕ್ಷಸರ ತಾಮಸಾಸ್ತ್ರಗಳನ್ನು ನಾಶಗೊಳಿಸಿರುವೆಯೋ ಮತ್ತು ಯುದ್ಧಗಳಲ್ಲಿ ದಂಭೋದ್ಭವ ಮತ್ತು ಅಸುರರರನ್ನು ಸಂಹರಿಸಿರುವೆಯೋ ಅದೇ ಧೈರ್ಯದಿಂದ ನೀನು ಸೂತಪುತ್ರನನ್ನು ಸಂಹರಿಸು!
08065019a ಅನೇನ ವಾಸ್ಯ ಕ್ಷುರನೇಮಿನಾದ್ಯ ಸಂಚಿಂದ್ಧಿ ಮೂರ್ಧಾನಮರೇಃ ಪ್ರಸಹ್ಯ।
08065019c ಮಯಾ ನಿಸೃಷ್ಟೇನ ಸುದರ್ಶನೇನ ವಜ್ರೇಣ ಶಕ್ರೋ ನಮುಚೇರಿವಾರೇಃ।।
ಶಕ್ರನು ಅರಿ ನಮೂಚಿಯನ್ನು ವಜ್ರದಿಂದ ಹೇಗೋ ಹಾಗೆ ಇಗೋ ನನ್ನಿಂದ ಸೃಷ್ಟಿಸಲ್ಪಟ್ಟ, ಹರಿತ ಅಲಗುಗಳುಳ್ಳ ಈ ಸುದರ್ಶನದಿಂದ ಶತ್ರುವಿನ ಶಿರವನ್ನು ಇಂದು ಕತ್ತರಿಸಿ ನಗು!
08065020a ಕಿರಾತರೂಪೀ ಭಗವಾನ್ಯಯಾ ಚ ತ್ವಯಾ ಮಹತ್ಯಾ ಪರಿತೋಷಿತೋಽಭೂತ್।
08065020c ತಾಂ ತ್ವಂ ಧೃತಿಂ ವೀರ ಪುನರ್ಗೃಹೀತ್ವಾ ಸಹಾನುಬಂದಂ ಜಹಿ ಸೂತಪುತ್ರಂ।।
ವೀರ! ಕಿರಾತರೂಪೀ ಭಗವಾನನನ್ನು ಹೇಗೆ ನೀನು ಬಹಳವಾಗಿ ತೃಪ್ತಿಪಡಿಸಿದ್ದೆಯೋ ಅದೇ ಧೃತಿಯನ್ನು ಪುನಃ ಪಡೆದು ಪರಿವಾರಸಹಿತನಾದ ಸೂತಪುತ್ರನನ್ನು ಸಂಹರಿಸು!
08065021a ತತೋ ಮಹೀಂ ಸಾಗರಮೇಖಲಾಂ ತ್ವಂ ಸಪತ್ತನಾಂ ಗ್ರಾಮವತೀಂ ಸಮೃದ್ಧಾಂ।
08065021c ಪ್ರಯಚ್ಚ ರಾಜ್ಞೇ ನಿಹತಾರಿಸಂಘಾಂ ಯಶಶ್ಚ ಪಾರ್ಥಾತುಲಮಾಪ್ನುಹಿ ತ್ವಂ।।
ಪಾರ್ಥ! ಶತ್ರುಸಮೂಹಗಳನ್ನು ಸಂಹರಿಸಿದ ಅನಂತರ ನೀನು ಸಮುದ್ರಗಳೇ ಒಡ್ಯಾಣವಾಗಿರುವ, ಪಟ್ಟಣ-ಗ್ರಾಮಗಳಿಂದ ಕೂಡಿದ ಸಮೃದ್ಧವಾಗಿರುವ ಈ ಮಹಿಯನ್ನು ರಾಜನಿಗೆ ಒಪ್ಪಿಸು! ಇದರಿಂದ ನೀನು ವಿಪುಲ ಯಶಸ್ಸನ್ನು ಪಡೆಯುತ್ತೀಯೆ!”
08065022a ಸಂಚೋದಿತೋ ಭೀಮಜನಾರ್ದನಾಭ್ಯಾಂ ಸ್ಮೃತ್ವಾ ತದಾತ್ಮಾನಮವೇಕ್ಷ್ಯ ಸತ್ತ್ವಂ।
08065022c ಮಹಾತ್ಮನಶ್ಚಾಗಮನೇ ವಿದಿತ್ವಾ ಪ್ರಯೋಜನಂ ಕೇಶವಮಿತ್ಯುವಾಚ।।
ಹೀಗೆ ಭೀಮ-ಜನಾರ್ದನರಿಂದ ಪ್ರೇರಿತನಾದ ಅರ್ಜುನನು ತನ್ನ ಸತ್ತ್ವವನ್ನು ನೆನಪಿಸಿಕೊಂಡು, ತನ್ನ ಆಗಮನದ ಮಹಾತ್ಮೆಯನ್ನು ಪ್ರಯೋಜನಗಳನ್ನು ತಿಳಿದು ಕೇಶವನಿಗೆ ಇದನ್ನು ಹೇಳಿದನು:
08065023a ಪ್ರಾದುಷ್ಕರೋಮ್ಯೇಷ ಮಹಾಸ್ತ್ರಮುಗ್ರಂ ಶಿವಾಯ ಲೋಕಸ್ಯ ವಧಾಯ ಸೌತೇಃ।
08065023c ತನ್ಮೇಽನುಜಾನಾತು ಭವಾನ್ಸುರಾಶ್ಚ ಬ್ರಹ್ಮಾ ಭವೋ ಬ್ರಹ್ಮವಿದಶ್ಚ ಸರ್ವೇ।।
“ಲೋಕಮಂಗಳಕ್ಕಾಗಿ ಮತ್ತು ಸೌತಿಯವಧೆಗಾಗಿ ಉಗ್ರವಾದ ಈ ಮಹಾಸ್ತ್ರವನ್ನು ಪ್ರಕಟಿಸುತ್ತೇನೆ. ನೀನು, ಸುರರು, ಬ್ರಹ್ಮ, ಭವ, ಮತ್ತು ಬ್ರಹ್ಮವಿದರೆಲ್ಲರೂ ನನಗೆ ಅನುಮತಿಯನ್ನು ನೀಡಬೇಕು!”
08065024a ಇತ್ಯೂಚಿವಾಬ್ರಾಹ್ಮಂ ಅಸಹ್ಯಮಸ್ತ್ರಂ ಪ್ರಾದುಶ್ಚಕ್ರೇ ಮನಸಾ ಸಂವಿಧೇಯಂ।
08065024c ತತೋ ದಿಶಶ್ಚ ಪ್ರದಿಶಶ್ಚ ಸರ್ವಾಃ ಸಮಾವೃಣೋತ್ಸಾಯಕೈರ್ಭೂರಿತೇಜಾಃ।
08065024e ಸಸರ್ಜ ಬಾಣಾನ್ಭರತರ್ಷಭೋಽಪಿ ಶತಂಶತಾನೇಕವದಾಶುವೇಗಾನ್।।
ಹೀಗೆ ಹೇಳಿ ಅವನು ಮನಸ್ಸಿನಲ್ಲಿಯೇ ನೆಲೆಗೊಂಡಿದ್ದ ಸಹಿಸಲಸಾಧ್ಯವಾದ ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು. ಆಗ ದಿಕ್ಕು-ಉಪದಿಕ್ಕುಗಳಲೆಲ್ಲಾ ಭೂರಿತೇಜಸ್ಸುಳ್ಳ ಸಾಯಕಗಳು ತುಂಬಿಕೊಂಡವು. ಭರತರ್ಷಭನಾದರೋ ಮಿಂಚಿನವೇಗಗಳ ನೂರಾರು ಬಾಣಗಳನ್ನು ಒಂದೇ ಬಾಣವೋ ಎನ್ನುವಂತೆ ಸೃಷ್ಟಿಸಿದನು.
08065025a ವೈಕರ್ತನೇನಾಪಿ ತಥಾಜಿಮಧ್ಯೇ ಸಹಸ್ರಶೋ ಬಾಣಗಣಾ ವಿಸೃಷ್ಟಾಃ।
08065025c ತೇ ಘೋಷಿಣಃ ಪಾಂಡವಮಭ್ಯುಪೇಯುಃ ಪರ್ಜನ್ಯಮುಕ್ತಾ ಇವ ವಾರಿಧಾರಾಃ।।
ಆ ರಣಮಧ್ಯದಲ್ಲಿ ವೈಕರ್ತನನನೂ ಕೂಡ ಸಹಸ್ರಾರು ಬಾಣಗಳನ್ನು ಸೃಷ್ಟಿಸಿದನು. ಗುಡುಗುತ್ತಿದ್ದ ಅವು ಮೇಘವು ಮಳೆಯ ಧಾರೆಗಳನ್ನು ಸುರಿಸುವಂತೆ ಪಾಂಡವನ ಮೇಲೆ ಸುರಿದವು.
08065026a ಸ ಭೀಮಸೇನಂ ಚ ಜನಾರ್ದನಂ ಚ ಕಿರೀಟಿನಂ ಚಾಪ್ಯಮನುಷ್ಯಕರ್ಮಾ।
08065026c ತ್ರಿಭಿಸ್ತ್ರಿಭಿರ್ಭೀಮಬಲೋ ನಿಹತ್ಯ ನನಾದ ಘೋರಂ ಮಹತಾ ಸ್ವರೇಣ।।
ಆ ಭೀಮಬಲ ಅಮಾನುಷಕರ್ಮಿ ಕರ್ಣನು ಭೀಮಸೇನನನ್ನು, ಜನಾರ್ದನನನ್ನು ಮತ್ತು ಕಿರೀಟಿಯನ್ನು ಮೂರು ಮೂರು ಬಾಣಗಳಿಂದ ಹೊಡೆದು ಘೋರ ಮಹಾಸ್ವರದಿಂದ ನಿನಾದಿಸಿದನು.
08065027a ಸ ಕರ್ಣಬಾಣಾಭಿಹತಃ ಕಿರೀಟೀ ಭೀಮಂ ತಥಾ ಪ್ರೇಕ್ಷ್ಯ ಜನಾರ್ದನಂ ಚ।
08065027c ಅಮೃಷ್ಯಮಾಣಃ ಪುನರೇವ ಪಾರ್ಥಃ ಶರಾನ್ದಶಾಷ್ಟೌ ಚ ಸಮುದ್ಬಬರ್ಹ।।
ಕರ್ಣನ ಬಾಣಗಳಿಂದ ಹಾಗೆ ಭೀಮ ಮತ್ತು ಜನಾರ್ದನರು ಹೊಡೆಯಲ್ಪಟ್ಟುದುದನ್ನು ನೋಡಿ ಪಾರ್ಥ ಕಿರೀಟಿಯು ಸಹಿಸಿಕೊಳ್ಳಲಾಗದೇ ಪುನಃ ಹದಿನೆಂಟು ಬಾಣಗಳನ್ನು ಭತ್ತಳಿಕೆಯಿಂದ ತೆಗೆದು ಪ್ರಯೋಗಿಸಿದನು.
08065028a ಸುಷೇಣಮೇಕೇನ ಶರೇಣ ವಿದ್ಧ್ವಾ ಶಲ್ಯಂ ಚತುರ್ಭಿಸ್ತ್ರಿಭಿರೇವ ಕರ್ಣಂ।
08065028c ತತಃ ಸುಮುಕ್ತೈರ್ದಶಭಿರ್ಜಘಾನ ಸಭಾಪತಿಂ ಕಾಂಚನವರ್ಮನದ್ಧಂ।।
ಒಂದು ಶರದಿಂದ ಸುಷೇಣನನ್ನು ಹೊಡೆದು, ನಾಲ್ಕರಿಂದ ಶಲ್ಯನನ್ನೂ, ಮೂರರಿಂದ ಕರ್ಣನನ್ನೂ, ಮತ್ತೆ ಉತ್ತಮವಾಗಿ ಪ್ರಯೋಗಿಸಿದ ಹತ್ತು ಬಾಣಗಳಿಂದ ಕಾಂಚನಕವಚವನ್ನು ಧರಿಸಿದ್ದ ಸಭಾಪತಿಯನ್ನು ಹೊಡೆದನು.
08065029a ಸ ರಾಜಪುತ್ರೋ ವಿಶಿರಾ ವಿಬಾಹುಃ ವಿವಾಜಿಸೂತೋ ವಿಧನುರ್ವಿಕೇತುಃ।
08065029c ತತೋ ರಥಾಗ್ರಾದಪತತ್ಪ್ರಭಗ್ನಃ ಪರಶ್ವಧೈಃ ಶಾಲ ಇವಾಭಿಕೃತ್ತಃ।।
ಆ ರಾಜಪುತ್ರನು ಶಿರಸ್ಸು, ಬಾಹುಗಳು, ಕುದುರೆ, ಸಾರಥಿ, ಧನುಸ್ಸು ಮತ್ತು ಧ್ವಜಗಳನ್ನು ಕಳೆದುಕೊಂಡು ಕೊಡಲಿಯಿಂದ ಕಡಿಯಲ್ಪಟ್ಟ ಶಾಲವೃಕ್ಷದಂತೆ ಭಗ್ನನಾಗಿ ರಥದಿಂದ ಕೆಳಕ್ಕೆ ಬಿದ್ದನು.
08065030a ಪುನಶ್ಚ ಕರ್ಣಂ ತ್ರಿಭಿರಷ್ಟಭಿಶ್ಚ ದ್ವಾಭ್ಯಾಂ ಚತುರ್ಭಿರ್ದಶಭಿಶ್ಚ ವಿದ್ಧ್ವಾ।
08065030c ಚತುಃಶತಾನ್ದ್ವಿರದಾನ್ಸಾಯುಧೀಯಾನ್ ಹತ್ವಾ ರಥಾನಷ್ಟಶತಂ ಜಘಾನ।
08065030e ಸಹಸ್ರಮಶ್ವಾಂಶ್ಚ ಪುನಶ್ಚ ಸಾದೀನ್ ಅಷ್ಟೌ ಸಹಸ್ರಾಣಿ ಚ ಪತ್ತಿವೀರಾನ್।।
ಪುನಃ ಕರ್ಣನನ್ನು ಮೂರು, ಎಂಟು, ಎರಡು, ನಾಲ್ಕು ಮತ್ತು ಹತ್ತು ಬಾಣಗಳಿಂದ ಹೊಡೆದು, ಆಯುಧಪಾಣಿಗಳಾದ ಸವಾರರನ್ನುಳ್ಳ ನಾಲ್ಕುನೂರು ಆನೆಗಳನ್ನೂ, ಎಂಟುನೂರು ರಥಗಳನ್ನೂ, ಇನ್ನೊಂದು ಸಾವಿರ ಸವಾರರೊಡನಿದ್ದ ಕುದುರೆಗಳನ್ನೂ ಮತ್ತು ಎಂಟು ಸಾವಿರ ಪದಾತಿ ವೀರರನ್ನು ಹೊಡೆದು ನಾಶಪಡಿಸಿದನು.
08065031a ದೃಷ್ಟ್ವಾಜಿಮುಖ್ಯಾವಥ ಯುಧ್ಯಮಾನೌ ದಿದೃಕ್ಷವಃ ಶೂರವರಾವರಿಘ್ನೌ।
08065031c ಕರ್ಣಂ ಚ ಪಾರ್ಥಂ ಚ ನಿಯಮ್ಯ ವಾಹಾನ್ ಖಸ್ಥಾ ಮಹೀಸ್ಥಾಶ್ಚ ಜನಾವತಸ್ಥುಃ।।
ಪರಸ್ಪರರೊಡನೆ ಯುದ್ಧದಲ್ಲಿ ತೊಡಗಿದ್ದ ಆ ಇಬ್ಬರು ಶತ್ರುಹಂತಕ ಯೋಧಮುಖ್ಯ ಶೂರಶ್ರೇಷ್ಠ ಕರ್ಣ-ಪಾರ್ಥರನ್ನು ನೋಡಲು ವಾಹನಗಳನ್ನು ನಿಯಂತ್ರಿಸಿಕೊಂಡು ಆಕಾಶದಲ್ಲಿ ಮತ್ತು ಭೂಮಿಯಮೇಲೆ ಜನರು ನಿಂತಿದ್ದರು.
08065032a ತತೋ ಧನುರ್ಜ್ಯಾ ಸಹಸಾತಿಕೃಷ್ಟಾ ಸುಘೋಷಮಾಚ್ಚಿದ್ಯತ ಪಾಂಡವಸ್ಯ।
08065032c ತಸ್ಮಿನ್ ಕ್ಷಣೇ ಸೂತಪುತ್ರಸ್ತು ಪಾರ್ಥಂ ಸಮಾಚಿನೋತ್ ಕ್ಷುದ್ರಕಾಣಾಂ ಶತೇನ।।
ಆಗ ಸುದೀರ್ಘವಾಗಿ ಸೆಳೆದುದಕ್ಕಾಗಿ ಜೋರಾದ ಶಬ್ಧದೊಂದಿಗೆ ಪಾಂಡವನ ಧನುಸ್ಸಿನ ಮೌರ್ವಿಯು ತುಂಡಾಗಲು, ಅದೇ ಕ್ಷಣದಲ್ಲಿ ಸೂತಪುತ್ರನು ನೂರಾರು ಕ್ಷುದ್ರಕಗಳಿಂದ ಪಾರ್ಥನನ್ನು ಮುಚ್ಚಿಬಿಟ್ಟನು.
08065033a ನಿರ್ಮುಕ್ತಸರ್ಪಪ್ರತಿಮೈಶ್ಚ ತೀಕ್ಷ್ಣೈಸ್ ತೈಲಪ್ರಧೌತೈಃ ಖಗಪತ್ರವಾಜೈಃ।
08065033c ಷಷ್ಟ್ಯಾ ನಾರಾಚೈರ್ವಾಸುದೇವಂ ಬಿಭೇದ ತದಂತರಂ ಸೋಮಕಾಃ ಪ್ರಾದ್ರವಂತ।।
ಪೊರೆಬಿಟ್ಟ ಸರ್ಪಗಳಂತಿದ್ದ ಎಣ್ಣೆಯಿಂದ ಹದಮಾಡಲ್ಪಟ್ಟಿದ್ದ ಪಕ್ಷಿಗಳ ರೆಕ್ಕೆಗಳನ್ನು ಹೊಂದಿದ್ದ ಅರವತ್ತು ನಾರಾಚಗಳಿಂದ ವಾಸುದೇವನನ್ನು ಹೊಡೆದನು. ಅಷ್ಟರಲ್ಲಿ ಸೋಮಕರು ಪಲಾಯನಮಾಡುತ್ತಿದ್ದರು.
08065034a ತತೋ ಧನುರ್ಜ್ಯಾಮವಧಮ್ಯ ಶೀಘ್ರಂ ಶರಾನಸ್ತಾನಾಧಿರಥೇರ್ವಿಧಮ್ಯ।
08065034c ಸುಸಂರಬ್ಧಃ ಕರ್ಣಶರಕ್ಷತಾಂಗೋ ರಣೇ ಪಾರ್ಥಃ ಸೋಮಕಾನ್ಪ್ರತ್ಯಗೃಹ್ಣಾತ್।
08065034e ನ ಪಕ್ಷಿಣಃ ಸಂಪತಂತ್ಯಂತರಿಕ್ಷೇ ಕ್ಷೇಪೀಯಸಾಸ್ತ್ರೇಣ ಕೃತೇಽಂಧಕಾರೇ।।
ಆಗ ಧನಂಜಯನು ಧನುಸ್ಸಿನ ಮೌರ್ವಿಯನ್ನು ಶೀಘ್ರವಾಗಿ ಕಟ್ಟಿ ಅದರಿಂದ ಬಾಣಗಳನ್ನು ಆಧಿರಥಿಯ ಮೇಲೆ ಪ್ರಯೋಗಿಸಿದನು. ಕರ್ಣನನ್ನು ಶರಗಳಿಂದ ಗಾಯಗೊಳಿಸಿ ರಣದಲ್ಲಿ ಸಂರಬ್ಧನಾಗಿ ಪಾರ್ಥನು ಸೋಮಕರನ್ನು ಪುನಃ ಹಿಂದಿರುಗುವಂತೆ ಮಾಡಿದನು. ಅಸ್ತ್ರಗಳಿಂದ ಅಂಧಕಾರವುಂಟಾಗಿರಲು ಅಂತರಿಕ್ಷದಲ್ಲಿ ಪಕ್ಷಿಗಳು ಹಾರಾಡುತ್ತಿರಲಿಲ್ಲ.
08065035a ಶಲ್ಯಂ ಚ ಪಾರ್ಥೋ ದಶಭಿಃ ಪೃಷತ್ಕೈರ್ ಭೃಶಂ ತನುತ್ರೇ ಪ್ರಹಸನ್ನವಿಧ್ಯತ್।
08065035c ತತಃ ಕರ್ಣಂ ದ್ವಾದಶಭಿಃ ಸುಮುಕ್ತೈರ್ ವಿದ್ಧ್ವಾ ಪುನಃ ಸಪ್ತಭಿರಭ್ಯವಿಧ್ಯತ್।।
ಪಾರ್ಥನು ನಗುನಗುತ್ತಲೇ ಶಲ್ಯನನ್ನು ಹತ್ತು ಬಾಣಗಳಿಂದ ಗಾಢವಾಗಿ ಪ್ರಹರಿಸಿ ಅವನ ಕವಚವನ್ನು ಒಡೆದನು. ಅನಂತರ ಉತ್ತಮವಾಗಿ ಪ್ರಯೋಗಿಸಿದ ಹನ್ನೆರಡು ಬಾಣಗಳಿಂದ ಕರ್ಣನನ್ನು ಹೊಡೆದು ಪುನಃ ಏಳರಿಂದ ಹೊಡೆದನು.
08065036a ಸ ಪಾರ್ಥಬಾಣಾಸನವೇಗನುನ್ನೈರ್ ದೃಢಾಹತಃ ಪತ್ರಿಭಿರುಗ್ರವೇಗೈಃ।
08065036c ವಿಭಿನ್ನಗಾತ್ರಃ ಕ್ಷತಜೋಕ್ಷಿತಾಂಗಃ ಕರ್ಣೋ ಬಭೌ ರುದ್ರ ಇವಾತತೇಷುಃ।।
ಪಾರ್ಥನ ಬತ್ತಳಿಕೆಯಿಂದ ವೇಗವಾಗಿ ಹೊರಟು ಉಗ್ರವೇಗದಿಂದ ಬರುತ್ತಿದ್ದ ಪತ್ರಿಗಳಿಂದ ಗಾಢವಾಗಿ ಹೊಡೆಯಲ್ಪಟ್ಟ ಕರ್ಣನ ಶರೀರವು ಭಗ್ನವಾಗಿ ಅಂಗಾಂಗಗಳು ಗಾಯಗೊಂಡಿರಲು ಅವನು ಶ್ಮಶಾನದ ಮಧ್ಯದಲ್ಲಿರುವ ರುದ್ರನಂತೆ ಕಂಡನು.
08065037a ತತಸ್ತ್ರಿಭಿಶ್ಚ ತ್ರಿದಶಾಧಿಪೋಪಮಂ ಶರೈರ್ಬಿಭೇದಾಧಿರಥಿರ್ಧನಂಜಯಂ।
08065037c ಶರಾಂಸ್ತು ಪಂಚ ಜ್ವಲಿತಾನಿವೋರಗಾನ್ ಪ್ರವೀರಯಾಮಾಸ ಜಿಘಾಂಸುರಚ್ಯುತೇ।।
ಆಗ ಆಧಿರಥನು ಇಂದ್ರಸಮಾನನಾದ ಧನಂಜಯನನ್ನು ಮೂರು ಶರಗಳಿಂದ ಹೊಡೆದನು. ಮತ್ತು ಅಚ್ಯುತನನ್ನು ಸಂಹರಿಸಲು ಬಯಸಿ ಉರಗಗಳಂತೆ ಪ್ರಜ್ವಲಿಸುತ್ತಿದ್ದ ಐದು ಬಾಣಗಳನ್ನು ಅವನ ಶರೀರದಲ್ಲಿ ನೆಟ್ಟನು.
08065038a ತೇ ವರ್ಮ ಭಿತ್ತ್ವಾ ಪುರುಷೋತ್ತಮಸ್ಯ ಸುವರ್ಣಚಿತ್ರಂ ನ್ಯಪತನ್ಸುಮುಕ್ತಾಃ।
08065038c ವೇಗೇನ ಗಾಮಾವಿವಿಶುಃ ಸುವೇಗಾಃ ಸ್ನಾತ್ವಾ ಚ ಕರ್ಣಾಭಿಮುಖಾಃ ಪ್ರತೀಯುಃ।।
ಉತ್ತಮವಾಗಿ ಪ್ರಯೋಗಿಸಲ್ಪಟ್ಟ ಆ ಬಾಣಗಳು ಪುರುಷೋತ್ತಮನ ಸುವರ್ಣಚಿತ್ರಿತ ಕವಚವನ್ನು ಸೀಳಿ ಭೂಮಿಯ ಮೇಲೆ ಬಿದ್ದವು. ಆ ವೇಗಯುಕ್ತ ಬಾಣಗಳು ಭೂಮಿಯನ್ನು ಬಹಳ ಆಳದವರೆಗೂ ಕೊರೆದು ಪಾತಾಳಗಂಗೆಯಲ್ಲಿ ಸ್ನಾನಮಾಡಿ ಪುನಃ ಕರ್ಣನ ಅಭಿಮುಖವಾಗಿ ತೆರಳಿದವು.
08065039a ತಾನ್ಪಂಚಭಲ್ಲೈಸ್ತ್ವರಿತೈಃ ಸುಮುಕ್ತೈಸ್ ತ್ರಿಧಾ ತ್ರಿಧೈಕೈಕಮಥೋಚ್ಚಕರ್ತ।
08065039c ಧನಂಜಯಸ್ತೇ ನ್ಯಪತನ್ಪೃಥಿವ್ಯಾಂ ಮಹಾಹಯಸ್ತಕ್ಷಕಪುತ್ರಪಕ್ಷಾಃ।।
ಧನಂಜಯನು ತ್ವರೆಮಾಡಿ ಐದು ಸುಮುಕ್ತ ಭಲ್ಲಗಳಿಂದ ಆ ಐದು ಬಾಣಗಳಲ್ಲಿ ಒಂದೊಂದನ್ನೂ ಮೂರು ಮೂರು ಭಾಗಗಳನ್ನಾಗಿ ಕತ್ತರಿಸಿ, ಭೂಮಿಯಮೇಲೆ ಬೀಳಿಸಿದನು. ಅವುಗಳು ತಕ್ಷಕಪುತ್ರನ ಪಕ್ಷದಲ್ಲಿಯ ಮಹಾಸರ್ಪಗಳಾಗಿದ್ದವು.
08065040a ತತಃ ಪ್ರಜಜ್ವಾಲ ಕಿರೀಟಮಾಲೀ ಕ್ರೋಧೇನ ಕಕ್ಷಂ ಪ್ರದಹನ್ನಿವಾಗ್ನಿಃ।
08065040c ಸ ಕರ್ಣಮಾಕರ್ಣವಿಕೃಷ್ಟಸೃಷ್ಟೈಃ ಶರೈಃ ಶರೀರಾಂತಕರೈರ್ಜ್ವಲದ್ಭಿಃ।
08065040e ಮರ್ಮಸ್ವವಿಧ್ಯತ್ಸ ಚಚಾಲ ದುಃಖಾದ್ ಧೈರ್ಯಾತ್ತು ತಸ್ಥಾವತಿಮಾತ್ರಧೈರ್ಯಃ।।
ಆಗ ಕಿರೀಟಮಾಲಿಯು ಕ್ರೋಧದಿಂದ ಹುಲ್ಲುಮೆದೆಯನ್ನು ಸುಡುವ ಅಗ್ನಿಯಂತೆ ಉರಿಯುತ್ತಾ ಆಕರ್ಣಾಂತವಾಗಿ ಸೆಳೆದುಬಿಟ್ಟ ಶರೀರಾಂತಕವಾದ ಪ್ರಜ್ವಲಿಸುತ್ತಿರುವ ಬಾಣಗಳಿಂದ ಕರ್ಣನ ಮರ್ಮಸ್ಥಾನಗಳನ್ನು ಹೊಡೆದನು. ಆಗ ಕರ್ಣನು ವೇದನೆಯಿಂದ ತತ್ತರಿಸಿದನು. ಆದರೆ ಅತಿಧೈರ್ಯವುಳ್ಳ ಅವನು ರಥದಲ್ಲಿಯೇ ಕುಳಿತುಕೊಂಡನು.
08065041a ತತಃ ಶರೌಘೈಃ ಪ್ರದಿಶೋ ದಿಶಶ್ಚ ರವಿಪ್ರಭಾ ಕರ್ಣರಥಶ್ಚ ರಾಜನ್।
08065041c ಅದೃಶ್ಯ ಆಸೀತ್ಕುಪಿತೇ ಧನಂಜಯೇ ತುಷಾರನೀಹಾರವೃತಂ ಯಥಾ ನಭಃ।।
ರಾಜನ್! ಧನಂಜಯನು ಕುಪಿತನಾಗಲು ಹಿಮಕಣಗಳಿಂದಲೂ ಮಂಜಿನಿಂದಲೂ ಆಚ್ಛಾದಿತವಾದ ಆಕಾಶದಂತೆ ಅರ್ಜುನನು ಬಿಟ್ಟ ಬಾಣಗಳ ಸಮೂಹದಿಂದ ದಿಕ್ಕುಗಳೂ, ಉಪದಿಕ್ಕುಗಳೂ, ಸೂರ್ಯನ ಪ್ರಭೆಯೂ, ಕರ್ಣನ ರಥವೂ ಅದೃಶ್ಯವಾದವು.
08065042a ಸ ಚಕ್ರರಕ್ಷಾನಥ ಪಾದರಕ್ಷಾನ್ ಪುರಹ್ಸರಾನ್ ಪೃಷ್ಠಗೋಪಾಂಶ್ಚ ಸರ್ವಾನ್।
08065042c ದುರ್ಯೋಧನೇನಾನುಮತಾನರಿಘ್ನಾನ್ ಸಮುಚ್ಚಿತಾನ್ಸುರಥಾನ್ಸಾರಭೂತಾನ್।।
ಅವನು ಆಗ ಚಕ್ರರಕ್ಷಕರನ್ನೂ, ಪಾದರಕ್ಷಕರನ್ನೂ, ಮುಂದಿದ್ದ ಮತ್ತು ಹಿಂದಿದ್ದ ರಕ್ಷಕರೆಲ್ಲರನ್ನೂ, ದುರ್ಯೋಧನನ ಅನುಯಾಯಿಗಳನ್ನೂ ಸಂಹರಿಸಿದನು.
08065043a ದ್ವಿಸಾಹಸ್ರಾನ್ಸಮರೇ ಸವ್ಯಸಾಚೀ ಕುರುಪ್ರವೀರಾನೃಷಭಃ ಕುರೂಣಾಂ।
08065043c ಕ್ಷಣೇನ ಸರ್ವಾನ್ಸರಥಾಶ್ವಸೂತಾನ್ ನಿನಾಯ ರಾಜನ್ ಕ್ಷಯಮೇಕವೀರಃ।।
ರಾಜನ್! ಸಮರದಲ್ಲಿ ವೀರ ಸವ್ಯಸಾಚಿಯೊಬ್ಬನೇ ಕ್ಷಣದಲ್ಲಿ ರಥ-ಅಶ್ವ-ಸಾರಥಿಗಳೊಂದಿಗೆ ಎರಡು ಸಾವಿರ ಕುರುಪ್ರವೀರ ಕುರುಗಳ ಋಷಭರೆಲ್ಲರನ್ನೂ ಕ್ಷಯಗೊಳಿಸಿದನು.
08065044a ಅಥಾಪಲಾಯಂತ ವಿಹಾಯ ಕರ್ಣಂ ತವಾತ್ಮಜಾಃ ಕುರವಶ್ಚಾವಶಿಷ್ಟಾಃ।
08065044c ಹತಾನವಾಕೀರ್ಯ ಶರಕ್ಷತಾಂಶ್ಚ ಲಾಲಪ್ಯಮಾನಾನ್ತನಯಾನ್ ಪಿತೄಂಶ್ಚ।।
ಅಳಿದುಳಿದ ನಿನ್ನ ಮಕ್ಕಳೂ ಕುರುಗಳೂ ಹತರಾದವರನ್ನೂ, ಬಾಣಗಳಿಂದ ಗಾಯಗೊಂಡವರನ್ನೂ, ಕೂಗಿಕೊಳ್ಳುತ್ತಿದ್ದವರನ್ನೂ, ಪಿತೃಗಳನ್ನೂ ಕರ್ಣನನ್ನೂ ಉಪೇಕ್ಷಿಸಿ ಪಲಾಯನಮಾಡಿದರು.
08065045a ಸ ಸರ್ವತಃ ಪ್ರೇಕ್ಷ್ಯ ದಿಶೋ ವಿಶೂನ್ಯಾ ಭಯಾವದೀರ್ಣೈಃ ಕುರುಭಿರ್ವಿಹೀನಃ।
08065045c ನ ವಿವ್ಯಥೇ ಭಾರತ ತತ್ರ ಕರ್ಣಃ ಪ್ರತೀಪಮೇವಾರ್ಜುನಮಭ್ಯಧಾವತ್।।
ಭಾರತ! ಭಯದಿಂದ ಭಗ್ನರಾದ ಕುರುಸೇನೆಯಿಂದ ವಿಹೀನವಾಗಿದ್ದ ರಣಭೂಮಿಯನ್ನು ಮತ್ತು ಶೂನ್ಯವಾಗಿದ್ದ ದಿಕ್ಕುಗಳನ್ನು ನೋಡಿಯೂ ಕರ್ಣನು ಅಲ್ಲಿ ವ್ಯಥಿತನಾಗಲಿಲ್ಲ. ಸಂತುಷ್ಟನಾಗಿಯೇ ಅರ್ಜುನನನ್ನು ಪುನಃ ಆಕ್ರಮಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಾರ್ಜುನದ್ವೈರಥೇ ಪಂಚಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾರ್ಜುನದ್ವೈರಥ ಎನ್ನುವ ಅರವತ್ತೈದನೇ ಅಧ್ಯಾಯವು.