ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 64
ಸಾರ
ಆಕ್ರಮಣಿಸಿದ ಕುರುಸೇನೆಯನ್ನು ಅರ್ಜುನನನು ಧ್ವಂಸಗೊಳಿಸಿದುದು; ಅವನ ಪರಾಕ್ರಮವನ್ನು ನೋಡಿ ಸುರರು ಪ್ರಶಂಸಿಸಿದುದು (1-20). ಅಶ್ವತ್ಥಾಮನು ದುರ್ಯೋಧನನಿಗೆ ಸಂಧಿಮಾಡಿಕೊಳ್ಳಲು ಸಲಹೆನೀಡಿದುದು (21-28). ಆದರೆ ದುರ್ಯೋಧನನು ಯುದ್ಧವನ್ನು ಮುಂದುವರಿಸಲು ಹೇಳಿದುದು (29-32).
08064001 ಸಂಜಯ ಉವಾಚ।
08064001a ತದ್ದೇವನಾಗಾಸುರಸಿದ್ಧಸಂಘೈರ್ ಗಂಧರ್ವಯಕ್ಷಾಪ್ಸರಸಾಂ ಚ ಸಂಘೈಃ।
08064001c ಬ್ರಹ್ಮರ್ಷಿರಾಜರ್ಷಿಸುಪರ್ಣಜುಷ್ಟಂ ಬಭೌ ವಿಯದ್ವಿಸ್ಮಯನೀಯರೂಪಂ।।
ಸಂಜಯನು ಹೇಳಿದನು: “ಆಗ ಆಕಾಶವು ದೇವ, ನಾಗ, ಅಸುರ, ಸಿದ್ಧಸಂಘಗಳೂ, ಗಂಧರ್ವ-ಯಕ್ಷ-ಅಪ್ಸರೆಯರ ಸಂಘಗಳೂ, ಬ್ರಹ್ಮರ್ಷಿ-ರಾಜರ್ಷಿ-ಗರುಡರೂ ಸೇರಿ ವಿಸ್ಮಯರೂಪವನ್ನು ತಾಳಿದ್ದಿತು.
08064002a ನಾನದ್ಯಮಾನಂ ನಿನದೈರ್ಮನೋಜ್ಞೈರ್ ವಾದಿತ್ರಗೀತಸ್ತುತಿಭಿಶ್ಚ ನೃತ್ತೈಃ।
08064002c ಸರ್ವೇಽಮ್ತರಿಕ್ಷೇ ದದೃಶುರ್ಮನುಷ್ಯಾಃ ಖಸ್ಥಾಂಶ್ಚ ತಾನ್ವಿಸ್ಮಯನೀಯರೂಪಾನ್।।
ಕಿವಿಗಿಂಪಾಗುವ ನಾನಾವಿಧದ ನಾದಗಳಿಂದಲೂ, ವಾದ್ಯ-ಗೀತ-ಸ್ತ್ರೋತ್ರ-ನೃತ್ಯಗಳಿಂದಲೂ ಅಂತರಿಕ್ಷವೆಲ್ಲವೂ ತುಂಬಿರಲು ಮನುಷ್ಯರೂ ಆಕಾಶದಲ್ಲಿ ನಿಂತಿದ್ದವರೂ ವಿಸ್ಮಯರಾಗಿ ನೋಡುತ್ತಿದ್ದರು.
08064003a ತತಃ ಪ್ರಹೃಷ್ಟಾಃ ಕುರುಪಾಂಡುಯೋಧಾ ವಾದಿತ್ರಪತ್ರಾಯುಧಸಿಂಹನಾದೈಃ।
08064003c ನಿನಾದಯಂತೋ ವಸುಧಾಂ ದಿಶಶ್ಚ ಸ್ವನೇನ ಸರ್ವೇ ದ್ವಿಷತೋ ನಿಜಘ್ನುಃ।।
ಆಗ ಪ್ರಹೃಷ್ಟರಾದ ಕುರು-ಪಾಂಡವ ಯೋಧರು ವಾದ್ಯ, ಶಂಖ ಮತ್ತು ಸಿಂಹನಾದ ಶಬ್ಧಗಳಿಂದ ವಸುಧೆಯನ್ನೂ ದಿಶಗಳನ್ನೂ ಮೊಳಗಿಸಿ, ಶತ್ರುಗಳನ್ನು ಸಂಹರಿಸತೊಡಗಿದರು.
08064004a ನಾನಾಶ್ವಮಾತಂಗರಥಾಯುತಾಕುಲಂ ವರಾಸಿಶಕ್ತ್ಯೃಷ್ಟಿನಿಪಾತದುಃಸಹಂ।
08064004c ಅಭೀರುಜುಷ್ಟಂ ಹತದೇಹಸಂಕುಲಂ ರಣಾಜಿರಂ ಲೋಹಿತರಕ್ತಮಾಬಭೌ।।
ಅನೇಕ ಅಶ್ವ-ಗಜ-ರಥ-ಪದಾತಿ ಸಂಕುಲಗಳಿಂದ ಕೂಡಿದ್ದ, ಖಡ್ಗ-ಶಕ್ತಿ-ಋಷ್ಟಿ-ಬಾಣ ಈ ಆಯುಧಗಳ ಪತನದಿಂದ ದುಃಸ್ಸಹವಾಗಿದ್ದ, ವೀರರಿಂದ ಮತ್ತು ಮೃತದೇಹಗಳಿಂದ ಕೂಡಿದ್ದ ಆ ರಣಾಂಗಣವು ರಕ್ತದಿಂದಾಗಿ ಕೆಂಪಾಗಿ ತೋರುತ್ತಿತ್ತು.
08064005a ತಥಾ ಪ್ರವೃತ್ತೇಽಸ್ತ್ರಭೃತಾಂ ಪರಾಭವೇ ಧನಂಜಯಶ್ಚಾಧಿರಥಿಶ್ಚ ಸಾಯಕೈಃ।
08064005c ದಿಶಶ್ಚ ಸೈನ್ಯಂ ಚ ಶಿತೈರಜಿಹ್ಮಗೈಃ ಪರಸ್ಪರಂ ಪ್ರೋರ್ಣುವತುಃ ಸ್ಮ ದಂಶಿತೌ।।
ಹಾಗೆ ಶಸ್ತ್ರಭೃತರ ಪರಾಭವವು ಪ್ರಾರಂಭವಾಯಿತು. ಕವಚಧಾರಿಗಳಾಗಿದ್ದ ಧನಂಜಯ-ಆಧಿರಥರು ಸಾಯಕಗಳಿಂದ ದಿಕ್ಕುಗಳನ್ನೂ ಸೈನ್ಯವನ್ನೂ ಮುಸುಕಿ, ನಿಶಿತ ಜಿಹ್ಮಗಗಳಿಂದ ಪರಸ್ಪರರನ್ನು ಮುಚ್ಚಿಬಿಟ್ಟರು.
08064006a ತತಸ್ತ್ವದೀಯಾಶ್ಚ ಪರೇ ಚ ಸಾಯಕೈಃ ಕೃತೇಽಂಧಕಾರೇ ವಿವಿದುರ್ನ ಕಿಂ ಚನ।
08064006c ಭಯಾತ್ತು ತಾವೇವ ರಥೌ ಸಮಾಶ್ರಯಂಸ್ ತಮೋನುದೌ ಖೇ ಪ್ರಸೃತಾ ಇವಾಂಶವಃ।।
ಆ ಸಾಯಕಗಳಿಂದ ನಿರ್ಮಿತವಾದ ಅಂಧಕಾರದಲ್ಲಿ ನಿನ್ನವರು ಮತ್ತು ಅವರಿಗೆ ಏನೂ ತಿಳಿಯದಂತಾಯಿತು. ಭಯದಲ್ಲಿ ಅವರು ಆ ಇಬ್ಬರು ಮಹಾರಥರ ಆಶ್ರಯವನ್ನೇ ಪಡೆದರು. ಆಕಾಶದಲ್ಲಿ ಅವರಿಬ್ಬರನ್ನೂ ಅನುಮೋದಿಸುತ್ತಿದ್ದರು.
08064007a ತತೋಽಸ್ತ್ರಂ ಅಸ್ತ್ರೇಣ ಪರಸ್ಪರಸ್ಯ ತೌ ವಿಧೂಯ ವಾತಾವಿವ ಪೂರ್ವಪಶ್ಚಿಮೌ।
08064007c ಘನಾಂಧಕಾರೇ ವಿತತೇ ತಮೋನುದೌ ಯಥೋದಿತೌ ತದ್ವದತೀವ ರೇಜತುಃ।।
ಪೂರ್ವ-ಪಶ್ಚಿಮದ ಗಾಳಿಗಳು ಎದುರಾಗಿ ಪರಸ್ಪರರ ವೇಗವನ್ನು ಕುಂಠಿತಗೊಳಿಸುವಂತೆ ಅವರಿಬ್ಬರೂ ಪರಸ್ಪರರ ಅಸ್ತ್ರಗಳನ್ನು ಅಸ್ತ್ರಗಳಿಂದ ನಿರಸನಗೊಳಿಸುತ್ತಿದ್ದರು. ಘನಾಂಧಕಾರವನ್ನು ಹೋಗಲಾಡಿಸಲು ಉದಯಿಸುವ ಎರಡು ಸೂರ್ಯರಂತೆ ಅವರು ಅತೀವ ತೇಜಸ್ಸಿನಿಂದ ಪ್ರಕಾಶಿಸುತ್ತಿದ್ದರು.
08064008a ನ ಚಾಭಿಮಂತವ್ಯಮಿತಿ ಪ್ರಚೋದಿತಾಃ ಪರೇ ತ್ವದೀಯಾಶ್ಚ ತದಾವತಸ್ಥಿರೇ।
08064008c ಮಹಾರಥೌ ತೌ ಪರಿವಾರ್ಯ ಸರ್ವತಃ ಸುರಾಸುರಾ ವಾಸವಶಂಬರಾವಿವ।।
ಮುನ್ನುಗ್ಗಿ ಹೋಗಬಾರದೆಂದು ಪ್ರೇರಿತರಾದ ನಿನ್ನವರು ಮತ್ತು ಶತ್ರುಗಳ ಕಡೆಯವರು ಹಿಂದೆ ವಾಸವ-ಶಂಬರರನ್ನು ಸುತ್ತುವರೆದ ಸುರಾಸುರರಂತೆ ಆ ಮಹಾರಥರನ್ನು ಸುತ್ತುವರೆದು ನಿಂತಿದ್ದರು.
08064009a ಮೃದಂಗಭೇರೀಪಣವಾನಕಸ್ವನೈರ್ ನಿನಾದಿತೇ ಭಾರತ ಶಂಖನಿಸ್ವನೈಃ।
08064009c ಸಸಿಂಹನಾದೌ ಬಭತುರ್ನರೋತ್ತಮೌ ಶಶಾಂಕಸೂರ್ಯಾವಿವ ಮೇಘಸಂಪ್ಲವೇ।।
ಭಾರತ! ಮೃದಂಗ-ಭೇರೀ-ಪಣವಾನಕ ಧ್ವನಿಗಳಿಂದಲೂ, ಶಂಖಗಳ ಧ್ವನಿಗಳಿಂದಲೂ, ಸಿಂಹನಾದಗಳಿಂದಲೂ ಪರಿವೃತರಾಗಿದ್ದ ಆ ಇಬ್ಬರು ನರೋತ್ತಮರು ಗುಡುಗುತ್ತಿರುವ ಮೋಡಗಳ ಮಧ್ಯದಲ್ಲಿರುವ ಶಶಾಂಕ-ಸೂರ್ಯರಂತೆ ಕಾಣುತ್ತಿದ್ದರು.
08064010a ಮಹಾಧನುರ್ಮಂಡಲಮಧ್ಯಗಾವುಭೌ ಸುವರ್ಚಸೌ ಬಾಣಸಹಸ್ರರಶ್ಮಿನೌ।
08064010c ದಿಧಕ್ಷಮಾಣೌ ಸಚರಾಚರಂ ಜಗದ್ ಯುಗಾಸ್ತಸೂರ್ಯಾವಿವ ದುಃಸಹೌ ರಣೇ।।
ರಣದಲ್ಲಿ ಮಹಾಧನುರ್ಮಂಡಲಗಳ ಮಧ್ಯದಲ್ಲಿದ್ದ ಸಹಸ್ರಬಾಣಗಳ ಕಿರಣಗಳಿಂದ ಸುವರ್ಚಸರಾಗಿದ್ದ ಆ ಇಬ್ಬರೂ ಸಚರಾಚರ ಜಗದ ಯುಗಾಸ್ತದ ಕಾಲದಲ್ಲಿ ದುಃಸ್ಸಹರಾಗಿರುವ ಎರಡು ಸೂರ್ಯರಂತೆ ಪ್ರಖರರಾಗಿ ಕಾಣುತ್ತಿದ್ದರು.
08064011a ಉಭಾವಜೇಯಾವಹಿತಾಂತಕಾವುಭೌ ಜಿಘಾಂಸತುಸ್ತೌ ಕೃತಿನೌ ಪರಸ್ಪರಂ।
08064011c ಮಹಾಹವೇ ವೀರವರೌ ಸಮೀಯತುರ್ ಯಥೇಂದ್ರಜಂಭಾವಿವ ಕರ್ಣಪಾಂಡವೌ।।
ಅಜೇಯರಾದ, ಅಹಿತರ ಅಂತಕರಾದ, ಪರಸ್ಪರರನ್ನು ಸಂಹರಿಸಲು ಪ್ರಯತ್ನಿಸುತ್ತಿದ್ದ ಆ ವೀರವರ ಕರ್ಣ-ಪಾಂಡವರು ಮಹಾಹವದಲ್ಲಿ ಇಂದ್ರ ಮತ್ತು ಜಂಭಾಸುರರಂತೆ ಕಾಣುತ್ತಿದ್ದರು.
08064012a ತತೋ ಮಹಾಸ್ತ್ರಾಣಿ ಮಹಾಧನುರ್ಧರೌ ವಿಮುಂಚಮಾನಾವಿಷುಭಿರ್ಭಯಾನಕೈಃ।
08064012c ನರಾಶ್ವನಾಗಾನಮಿತೌ ನಿಜಘ್ನತುಃ ಪರಸ್ಪರಂ ಜಘ್ನತುರುತ್ತಮೇಷುಭಿಃ।।
ಆಗ ಮಹಾಸ್ತ್ರಗಳನ್ನು ಮತ್ತು ಭಯಾನಕ ಬಾಣಗಳನ್ನು ಬಿಡುತ್ತಿದ್ದ ಆ ಮಹಾಧನುರ್ಧರರಿಬ್ಬರೂ ಅಮಿತವಾದ ನರ-ಅಶ್ವ-ಗಜಗಳನ್ನು ಸಂಹರಿಸಿ ಉತ್ತಮ ಬಾಣಗಳಿಂದ ಪರಸ್ಪರರನ್ನು ಆಕ್ರಮಣಿಸಿದರು.
08064013a ತತೋ ವಿಸಸ್ರುಃ ಪುನರರ್ದಿತಾಃ ಶರೈರ್ ನರೋತ್ತಮಾಭ್ಯಾಂ ಕುರುಪಾಂಡವಾಶ್ರಯಾಃ।
08064013c ಸನಾಗಪತ್ತ್ಯಶ್ವರಥಾ ದಿಶೋ ಗತಾಸ್ ತಥಾ ಯಥಾ ಸಿಂಹಭಯಾದ್ವನೌಕಸಃ।।
ಆ ನರೋತ್ತಮರಿಬ್ಬರ ಶರಗಳಿಂದ ಭಯಪಟ್ಟ ಕುರುಪಾಂಡವ ಸೇನೆಗಳು ಆನೆ-ಪದಾತಿ-ಕುದುರೆ-ರಥಗಳೊಂದಿಗೆ ದಿಕ್ಕಾಪಾಲಾಗಿ ಸಿಂಹದ ಭಯದಿಂದ ವನ್ಯಮೃಗಗಳು ಹೇಗೋ ಹಾಗೆ ಪಲಾಯನಮಾಡಿದವು.
08064014a ತತಸ್ತು ದುರ್ಯೋಧನಭೋಜಸೌಬಲಾಃ ಕೃಪಶ್ಚ ಶಾರದ್ವತಸೂನುನಾ ಸಹ।
08064014c ಮಹಾರಥಾಃ ಪಂಚ ಧನಂಜಯಾಚ್ಯುತೌ ಶರೈಃ ಶರೀರಾಂತಕರೈರತಾಡಯನ್।।
ಆಗ ದುರ್ಯೋಧನ, ಭೋಜ ಕೃತವರ್ಮ, ಸೌಬಲ ಶಕುನಿ, ಕೃಪ, ಶಾರದ್ವತಿಯ ಮಗ ಅಶ್ವತ್ಥಾಮ ಈ ಐವರು ಮಹಾರಥರು ಧನಂಜಯ-ಅಚ್ಯುತರನ್ನು ಶರೀರಾಂತಕ ಶರಗಳಿಂದ ಹೊಡೆದರು.
08064015a ಧನೂಂಷಿ ತೇಷಾಮಿಷುಧೀನ್ ಹಯಾನ್ಧ್ವಜಾನ್ ರಥಾಂಶ್ಚ ಸೂತಾಂಶ್ಚ ಧನಂಜಯಃ ಶರೈಃ।
08064015c ಸಮಂ ಚ ಚಿಚ್ಚೇದ ಪರಾಭಿನಚ್ಚ ತಾಂ ಶರೋತ್ತಮೈರ್ದ್ವಾದಶಭಿಶ್ಚ ಸೂತಜಂ।।
ಅದಕ್ಕೆ ಪ್ರತಿಯಾಗಿ ಧನಂಜಯನು ಶರಗಳಿಂದ ಅವರ ಧನುಸ್ಸುಗಳನ್ನೂ, ಬತ್ತಳಿಕೆಗಳನ್ನೂ, ಕುದುರೆಗಳನ್ನೂ, ಧ್ವಜಗಳನ್ನೂ, ರಥಗಳನ್ನೂ, ಸಾರಥಿಗಳನ್ನೂ ಒಂದೇ ಬಾರಿಗೆ ತುಂಡರಿಸಿ ಕರ್ಣನನ್ನು ಹನ್ನೆರಡು ಉತ್ತಮ ಬಾಣಗಳಿಂದ ಹೊಡೆದನು.
08064016a ಅಥಾಭ್ಯಧಾವಂಸ್ತ್ವರಿತಾಃ ಶತಂ ರಥಾಃ ಶತಂ ಚ ನಾಗಾರ್ಜುನಮಾತತಾಯಿನಃ।
08064016c ಶಕಾಸ್ತುಖಾರಾ ಯವನಾಶ್ಚ ಸಾದಿನಃ ಸಹೈವ ಕಾಂಬೋಜವರೈರ್ಜಿಘಾಂಸವಃ।।
ಆಗ ಅರ್ಜುನನನ್ನು ಸಂಹರಿಸಲು ಇಚ್ಛಿಸಿದ ನೂರು ರಥಿಕರೂ, ನೂರು ಗಜಸೈನಿಕರೂ, ಶಕ-ತುಖಾರ-ಯವನ ಮತ್ತು ಕಾಂಬೋಜರ ಶ್ರೇಷ್ಠ ಕುದುರೆಸವಾರರೂ ತ್ವರೆಮಾಡಿ ಅವನನ್ನು ಆಕ್ರಮಣಿಸಿದರು.
08064017a ವರಾಯುಧಾನ್ಪಾಣಿಗತಾನ್ಕರೈಃ ಸಹ ಕ್ಷುರೈರ್ನ್ಯಕೃಂತಂಸ್ತ್ವರಿತಾಃ ಶಿರಾಂಸಿ ಚ।
08064017c ಹಯಾಂಶ್ಚ ನಾಗಾಂಶ್ಚ ರಥಾಂಶ್ಚ ಯುಧ್ಯತಾಂ ಧನಂಜಯಃ ಶತ್ರುಗಣಂ ತಮಕ್ಷಿಣೋತ್।।
ಧನಂಜಯನು ತ್ವರೆಮಾಡಿ ಕ್ಷುರಗಳಿಂದ ಶ್ರೇಷ್ಠ ಆಯುಧಗಳನ್ನು ಹಿಡಿದಿದ್ದ ಅವರ ಕೈಗಳೊಂದಿಗೆ ಶಿರಗಳನ್ನು ತುಂಡರಿಸಿದನು. ಕುದುರೆ-ಆನೆ-ರಥಗಳನ್ನೂ, ಯುದ್ಧಮಾಡುತ್ತಿದ್ದ ಶತ್ರುಗಣಗಳನ್ನೂ ಸಂಹರಿಸಿ ನೆಲದಮೇಲೆ ಕೆಡವಿದನು.
08064018a ತತೋಽಂತರಿಕ್ಷೇ ಸುರತೂರ್ಯನಿಸ್ವನಾಃ ಸಸಾಧುವಾದಾ ಹೃಷಿತೈಃ ಸಮೀರಿತಾಃ।
08064018c ನಿಪೇತುರಪ್ಯುತ್ತಮಪುಷ್ಪವೃಷ್ಟಯಃ ಸುರೂಪಗಂದಾಃ ಪವನೇರಿತಾಃ ಶಿವಾಃ।।
ಆಗ ಅಂತರಿಕ್ಷದಲ್ಲಿ ಸುರರು ಹರ್ಷಿತರಾಗಿ ಸಾಧು ಸಾಧು ಎಂದು ಉದ್ಗರಿಸಿದರು, ತೂರ್ಯಗಳನ್ನು ಮೊಳಗಿಸಿದರು ಮತ್ತು ಉತ್ತಮ ಪುಷ್ಪಗಳ ಮಳೆಯನ್ನು ಸುರಿಸಿದರು. ಮಂಗಳವಾದ ಸುಗಂಧಿತ ಗಾಳಿಯು ಬೀಸತೊಡಗಿತು.
08064019a ತದದ್ಭುತಂ ದೇವಮನುಷ್ಯಸಾಕ್ಷಿಕಂ ಸಮೀಕ್ಷ್ಯ ಭೂತಾನಿ ವಿಸಿಷ್ಮಿಯುರ್ನೃಪ।
08064019c ತವಾತ್ಮಜಃ ಸೂತಸುತಶ್ಚ ನ ವ್ಯಥಾಂ ನ ವಿಸ್ಮಯಂ ಜಗ್ಮತುರೇಕನಿಶ್ಚಯೌ।।
ನೃಪ! ದೇವಮನುಷ್ಯ ಸಾಕ್ಷಿಕವಾದ ಆ ಅದ್ಭುತವನ್ನು ನೋಡಿ ಭೂತಗಳು ವಿಸ್ಮಿತಗೊಂಡವು. ಆದರೆ ಒಂದೇ ಮನಸ್ಸಿನವರಾದ ನಿನ್ನ ಮಗ ಮತ್ತು ಸೂತಸುತರು ವ್ಯಥಿತರಾಗಲೂ ಇಲ್ಲ; ಅಚ್ಚರಿಯನ್ನೂ ತೋರ್ಪಡಿಸಲಿಲ್ಲ.
08064020a ಅಥಾಬ್ರವೀದ್ದ್ರೋಣಸುತಸ್ತವಾತ್ಮಜಂ ಕರಂ ಕರೇಣ ಪ್ರತಿಪೀಡ್ಯ ಸಾಂತ್ವಯನ್।
08064020c ಪ್ರಸೀದ ದುರ್ಯೋಧನ ಶಾಮ್ಯ ಪಾಂಡವೈರ್ ಅಲಂ ವಿರೋಧೇನ ಧಿಗಸ್ತು ವಿಗ್ರಹಂ।।
ಆಗ ದ್ರೋಣಸುತನು ನಿನ್ನ ಮಗನ ಕೈಯನ್ನು ಕೈಯಿಂದ ಒತ್ತಿ ಹಿಡಿತು ಸಾಂತ್ವನಗೊಳಿಸುತ್ತಾ ಇದನ್ನು ಹೇಳಿದನು: “ದುರ್ಯೋಧನ! ಪ್ರಸನ್ನನಾಗು! ಪಾಂಡವರೊಡನೆ ಸಂಧಾನಮಾಡಿಕೋ! ವಿರೋಧದಿಂದ ಯಾವ ಪ್ರಯೋಜನವೂ ಇಲ್ಲ. ಈ ಯುದ್ಧಕ್ಕೆ ಧಿಕ್ಕಾರ!
08064021a ಹತೋ ಗುರುರ್ಬ್ರಹ್ಮಸಮೋ ಮಹಾಸ್ತ್ರವಿತ್ ತಥೈವ ಭೀಷ್ಮಪ್ರಮುಖಾ ನರರ್ಷಭಾಃ।
08064021c ಅಹಂ ತ್ವವಧ್ಯೋ ಮಮ ಚಾಪಿ ಮಾತುಲಃ ಪ್ರಶಾಧಿ ರಾಜ್ಯಂ ಸಹ ಪಾಂಡವೈಶ್ಚಿರಂ।।
ಬ್ರಹ್ಮಸಮ ಮಹಾಸ್ತ್ರವಿದು ಗುರುವು ಹತನಾದನು ಮತ್ತು ಹಾಗೆಯೇ ಭೀಷ್ಮಪ್ರಮುಖರಾದ ನರರ್ಷಭರು ಹತರಾದರು. ನಾನು ಮತ್ತು ನನ್ನ ಸೋದರಮಾವರು ಅವಧ್ಯರು. ಪಾಂಡವರೊಡನೆ ಸೇರಿ, ಚಿರಕಾಲ ರಾಜ್ಯಭಾರಮಾಡು!
08064022a ಧನಂಜಯಃ ಸ್ಥಾಸ್ಯತಿ ವಾರಿತೋ ಮಯಾ ಜನಾರ್ದನೋ ನೈವ ವಿರೋಧಮಿಚ್ಚತಿ।
08064022c ಯುಧಿಷ್ಠಿರೋ ಭೂತಹಿತೇ ಸದಾ ರತೋ ವೃಕೋದರಸ್ತದ್ವಶಗಸ್ತಥಾ ಯಮೌ।।
ನಾನು ಬೇಡವೆಂದರೆ ಧನಂಜಯನು ಯುದ್ಧವನ್ನು ನಿಲ್ಲಿಸುತ್ತಾನೆ. ಜನಾರ್ದನನೂ ಇದಕ್ಕೆ ವಿರೋಧಿಸಲು ಬಯಸುವುದಿಲ್ಲ. ಯುಧಿಷ್ಠಿರನು ಸದಾ ಭೂತಹಿತರತನಾಗಿರುವನು. ವೃಕೋದರ ಮತ್ತು ಯಮಳರು ಅವನ ಅಧೀನದಲ್ಲಿದ್ದಾರೆ.
08064023a ತ್ವಯಾ ಚ ಪಾರ್ಥೈಶ್ಚ ಪರಸ್ಪರೇಣ ಪ್ರಜಾಃ ಶಿವಂ ಪ್ರಾಪ್ನುಯುರಿಚ್ಚತಿ ತ್ವಯಿ।
08064023c ವ್ರಜಂತು ಶೇಷಾಃ ಸ್ವಪುರಾಣಿ ಪಾರ್ಥಿವಾ ನಿವೃತ್ತವೈರಾಶ್ಚ ಭವಂತು ಸೈನಿಕಾಃ।।
ನೀನು ಮತ್ತು ಪಾರ್ಥರು ಪರಸ್ಪರರಲ್ಲಿ ಸಂಧಿಮಾಡಿಕೊಂಡರೆ ನಿನ್ನ ಇಚ್ಛೆಯಂತೆ ಪ್ರಜೆಗಳು ಸೌಖ್ಯವನ್ನು ಹೊಂದುತ್ತಾರೆ. ಉಳಿದ ಪಾರ್ಥಿವರು ತಮ್ಮ ತಮ್ಮ ಪುರಗಳಿಗೆ ತೆರಳುತ್ತಾರೆ. ಸೈನಿಕರು ವೈರವನ್ನು ಕಳೆದುಕೊಂಡವರಾಗುತ್ತಾರೆ.
08064024a ನ ಚೇದ್ವಚಃ ಶ್ರೋಷ್ಯಸಿ ಮೇ ನರಾಧಿಪ ಧ್ರುವಂ ಪ್ರತಪ್ತಾಸಿ ಹತೋಽರಿಭಿರ್ಯುಧಿ।
08064024c ಇದಂ ಚ ದೃಷ್ಟಂ ಜಗತಾ ಸಹ ತ್ವಯಾ ಕೃತಂ ಯದೇಕೇನ ಕಿರೀಟಮಾಲಿನಾ।
08064024e ಯಥಾ ನ ಕುರ್ಯಾದ್ಬಲಭಿನ್ನ ಚಾಂತಕೋ ನ ಚ ಪ್ರಚೇತಾ ಭಗವಾನ್ನ ಯಕ್ಷರಾಟ್।।
ನರಾಧಿಪ! ಒಂದು ವೇಳೆ ನೀನು ನನ್ನ ಈ ಮಾತನ್ನು ಕೇಳದೇ ಇದ್ದರೆ ಶತ್ರುಗಳಿಂದ ಯುದ್ಧದಲ್ಲಿ ಹತನಾಗಿ ಪಶ್ಚಾತ್ತಾಪಪಡುವೆ ಎನ್ನುವುದು ನಿಶ್ಚಯ! ಕಿರೀಟಮಾಲಿನಿಯು ಏಕಾಕಿಯಾಗಿ ಏನೆಲ್ಲ ಮಾಡಿದನೋ ಅದನ್ನು ನಿನ್ನೊಂದಿಗೆ ಜಗತ್ತೂ ಕೂಡ ನೋಡಿದೆ! ಇಂಥಹುದನ್ನು ಬಲಭಿತ್ ಇಂದ್ರನೂ, ಅಂತಕ ಯಮನೂ, ಪ್ರಚೇತಸ ಬ್ರಹ್ಮನೂ, ಭಗವಾನ್ ಯಕ್ಷರಾಜನೂ ಮಾಡಲಾರರು!
08064025a ಅತೋಽಪಿ ಭೂಯಾಂಶ್ಚ ಗುಣೈರ್ಧನಂಜಯಃ ಸ ಚಾಭಿಪತ್ಸ್ಯತ್ಯಖಿಲಂ ವಚೋ ಮಮ।
08064025c ತವಾನುಯಾತ್ರಾಂ ಚ ತಥಾ ಕರಿಷ್ಯತಿ ಪ್ರಸೀದ ರಾಜಂ ಜಗತಃ ಶಮಾಯ ವೈ।।
ಇದಕ್ಕಿಂತಲೂ ಹೆಚ್ಚಿನ ಗುಣವಂತನಾಗಿದ್ದರೂ ಧನಂಜಯನು ನನ್ನ ಎಲ್ಲ ಮಾತುಗಳನ್ನೂ ಕೇಳುತ್ತಾನೆ. ಅನಂತರ ನಿನ್ನ ಅಭಿಪ್ರಾಯದಂತೆ ಕೂಡ ಮಾಡುತ್ತಾನೆ. ಆದುದರಿಂದ ಜಗತ್ತಿನ ಶಾಂತಿಗಾಗಿ ರಾಜನ್! ಪ್ರಸೀದನಾಗು!
08064026a ಮಮಾಪಿ ಮಾನಃ ಪರಮಃ ಸದಾ ತ್ವಯಿ ಬ್ರವೀಮ್ಯತಸ್ತ್ವಾಂ ಪರಮಾಚ್ಚ ಸೌಹೃದಾತ್।
08064026c ನಿವಾರಯಿಷ್ಯಾಮಿ ಹಿ ಕರ್ಣಮಪ್ಯಹಂ ಯದಾ ಭವಾನ್ಸಪ್ರಣಯೋ ಭವಿಷ್ಯತಿ।।
ನನಗೆ ನಿನ್ನೊಡನೆ ಸದಾ ವಿಶೇಷ ಗೌರವವಿರುವುದರಿಂದ ಮತ್ತು ಪರಮ ಸೌಹಾರ್ದತೆಯಿರುವುದರಿಂದ ನಾನು ನಿನಗೆ ಇದನ್ನು ಹೇಳುತ್ತಿದ್ದೇನೆ. ಒಂದು ವೇಳೆ ನೀನು ಪಾಂಡವರ ವಿಷಯದಲ್ಲಿ ಪ್ರೀತನಾದರೆ ನಾನು ಕರ್ಣನನ್ನು ಕೂಡ ಯುದ್ಧದಿಂದ ಹಿಂದಿರುಗುವಂತೆ ಮಾಡುತ್ತೇನೆ!
08064027a ವದಂತಿ ಮಿತ್ರಂ ಸಹಜಂ ವಿಚಕ್ಷಣಾಸ್ ತಥೈವ ಸಾಮ್ನಾ ಚ ಧನೇನ ಚಾರ್ಜಿತಂ।
08064027c ಪ್ರತಾಪತಶ್ಚೋಪನತಂ ಚತುರ್ವಿಧಂ ತದಸ್ತಿ ಸರ್ವಂ ತ್ವಯಿ ಪಾಂಡವೇಷು ಚ।।
ನಾಲ್ಕು ವಿಧದ ಮಿತ್ರತ್ವದ ಕುರಿತು ತಿಳಿದವರು ಹೇಳುತ್ತಾರೆ: ಸಹಜಮಿತ್ರ, ಸಂಧಿಮಾಡಿಕೊಂಡು ಆದ ಮಿತ್ರ, ಧನದಿಂದ ಗಳಿಸಿಕೊಂಡ ಮಿತ್ರ, ಮತ್ತು ಪ್ರತಾಪದಿಂದ ಶರಣಾಗತನನ್ನಾಗಿಸಿಕೊಂಡ ಮಿತ್ರ. ಇವೆಲ್ಲ ಪ್ರಕಾರಗಳಲ್ಲಿ ನೀನು ಪಾಂಡವರ ಮಿತ್ರನಾಗಬಲ್ಲೆ!
08064028a ನಿಸರ್ಗತಸ್ತೇ ತವ ವೀರ ಬಾಂದವಾಃ ಪುನಶ್ಚ ಸಾಮ್ನಾ ಚ ಸಮಾಪ್ನುಹಿ ಸ್ಥಿರಂ।
08064028c ತ್ವಯಿ ಪ್ರಸನ್ನೇ ಯದಿ ಮಿತ್ರತಾಮಿಯುರ್ ಧ್ರುವಂ ನರೇಂದ್ರೇಂದ್ರ ತಥಾ ತ್ವಮಾಚರ।।
ವೀರ! ನಿಸರ್ಗದತ್ತವಾಗಿ ಅವರು ನಿನ್ನ ಬಾಂಧವರು. ಸಂಧಿ ಮಾಡಿಕೊಂಡು ಪುನಃ ನೀನು ಅವರನ್ನು ಸ್ಥಿರರಾದ ಮಿತ್ರರನ್ನಾಗಿ ಪಡೆದುಕೋ! ನೀನು ಪ್ರಸನ್ನನಾಗಿ ಅವರೊಡನೆ ಮಿತ್ರನಾದರೆ ನರೇಂದ್ರ! ನಿಶ್ಚಯವಾಗಿಯೂ ನೀನು ಜಗತ್ತಿಗೇ ಅನುಪಮ ಹಿತವನ್ನುಂಟುಮಾಡಿದಂತಾಗುತ್ತದೆ!”
08064029a ಸ ಏವಮುಕ್ತಃ ಸುಹೃದಾ ವಚೋ ಹಿತಂ ವಿಚಿಂತ್ಯ ನಿಃಶ್ವಸ್ಯ ಚ ದುರ್ಮನಾಬ್ರವೀತ್।
08064029c ಯಥಾ ಭವಾನಾಹ ಸಖೇ ತಥೈವ ತನ್ ಮಮಾಪಿ ಚ ಜ್ಞಾಪಯತೋ ವಚಃ ಶೃಣು।।
ಸುಹೃದನ ಈ ಹಿತ ಮಾತುಗಳನ್ನು ಕೇಳಿ ದುರ್ಯೋಧನನು ಯೋಚನೆಗೊಳಗಾಗಿ, ನಿಟ್ಟುಸಿರು ಬಿಡುತ್ತಾ, ವ್ಯಾಕುಲಗೊಂಡು ಹೇಳಿದನು: “ಸಖಾ! ನೀನು ಹೇಳಿದುದು ವಾಸ್ತವವೇ ಸರಿ! ಆದರೆ ಇದರಲ್ಲಿ ನನ್ನ ಅಭಿಪ್ರಾಯವೇನೆಂದು ಹೇಳುತ್ತೇನೆ. ಕೇಳು!
08064030a ನಿಹತ್ಯ ದುಃಶಾಸನಮುಕ್ತವಾನ್ಬಹು ಪ್ರಸಹ್ಯ ಶಾರ್ದೂಲವದೇಷ ದುರ್ಮತಿಃ।
08064030c ವೃಕೋದರಸ್ತದ್ಧೃದಯೇ ಮಮ ಸ್ಥಿತಂ ನ ತತ್ಪರೋಕ್ಷಂ ಭವತಃ ಕುತಃ ಶಮಃ।।
ಆ ದುರ್ಮತಿ ವೃಕೋದರನು ದುಃಶಾಸನನನ್ನು ಹುಲಿಯಂತೆ ಎಳೆದುತಂದು ಸಂಹರಿಸಿ ಜೋರಾಗಿ ನಗುತ್ತಾ ಹೇಳಿದುದು ನನ್ನ ಹೃದಯದಲ್ಲಿ ನೆಲೆಸಿಬಿಟ್ಟಿದೆ! ಅದನ್ನೇನೂ ನಿನ್ನ ಪರೋಕ್ಷದಲ್ಲಿ ಹೇಳಲಿಲ್ಲವಲ್ಲ! ಅದನ್ನು ಹೇಗೆ ನಾನು ಶಾಂತಗೊಳಿಸಬಲ್ಲೆ?
08064031a ನ ಚಾಪಿ ಕರ್ಣಂ ಗುರುಪುತ್ರ ಸಂಸ್ತವಾದ್ ಉಪಾರಮೇತ್ಯರ್ಹಸಿ ವಕ್ತುಮಚ್ಯುತ।
08064031c ಶ್ರಮೇಣ ಯುಕ್ತೋ ಮಹತಾದ್ಯ ಫಲ್ಗುನಸ್ ತಮೇಷ ಕರ್ಣಃ ಪ್ರಸಭಂ ಹನಿಷ್ಯತಿ।।
ಗುರುಪುತ್ರ! ಅಚ್ಯುತ! ಈ ಸಮಯದಲ್ಲಿ ಕರ್ಣನನ್ನು ಯುದ್ಧದಿಂದ ವಿರಮಿಸುವಂತೆ ಹೇಳುವುದೂ ಉಚಿತವಲ್ಲ. ಇಂದು ಫಲ್ಗುನನು ಶ್ರಮದಿಂದ ಬಹಳವಾಗಿ ಬಳಲಿದ್ದಾನೆ. ಕರ್ಣನು ಬಲಪೂರ್ವಕವಾಗಿ ಅವನನ್ನು ಕೊಲ್ಲುತ್ತಾನೆ!”
08064032a ತಮೇವಮುಕ್ತ್ವಾಭ್ಯನುನೀಯ ಚಾಸಕೃತ್ ತವಾತ್ಮಜಃ ಸ್ವಾನನುಶಾಸ್ತಿ ಸೈನಿಕಾನ್।
08064032c ಸಮಾಘ್ನತಾಭಿದ್ರವತಾಹಿತಾನಿಮಾನ್ ಸಬಾಣಶಬ್ದಾನ್ಕಿಮು ಜೋಷಮಾಸ್ಯತೇ।।
ನಿನ್ನ ಮಗನು ಅವನಿಗೆ ಹೀಗೆ ಹೇಳಿ ಸಮಾಧಾನಗೊಳಿಸಿ ತನ್ನ ಸೈನಿಕರಿಗೆ ಆಜ್ಞಾಪಿಸಿ ಹೇಳಿದನು: “ಬಾಣಗಳನ್ನು ಹಿಡಿದು ಸುಮ್ಮನೇಕೆ ನಿಂತಿದ್ದೀರಿ? ಶತ್ರುಗಳನ್ನು ಆಕ್ರಮಣಿಸಿ ಸಂಹರಿಸಿರಿ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅಶ್ವತ್ಥಾಮವಾಕ್ಯೇ ಚತುಃಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅಶ್ವತ್ಥಾಮವಾಕ್ಯ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.