063 ಕರ್ಣಾರ್ಜುನಸಮಾಗಮೇ ದ್ವೈರಥಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 63

ಸಾರ

ಪುತ್ರ ವೃಷಸೇನನ ಮರಣದಿಂದ ಕೋಪ-ಶೋಕಾನ್ವಿತನಾದ ಕರ್ಣನು ಅರ್ಜುನನನ್ನು ದ್ವೈರಥಯುದ್ಧಕ್ಕೆ ಆಹ್ವಾನಿಸಿದುದು (1-2). ಕರ್ಣಾರ್ಜುನರ ದ್ವಂದ್ವಯುದ್ಧವನ್ನು ನೋಡಲು, ಇಬ್ಬರನ್ನೂ ಪ್ರೋತ್ಸಾಹಿಸಿ ಕುರು-ಪಾಂಡವರ ಸೇನೆಗಳು ಅವರಿಬ್ಬರನ್ನೂ ಸುತ್ತುವರೆದು ತುಮುಲಶಬ್ಧಗಳನ್ನುಂಟುಮಾಡಿದುದು (3-12). ಪರಸ್ಪರರನ್ನು ಎದುರಿಸಿದ ಕರ್ಣಾರ್ಜುನರ ವರ್ಣನೆ (13-29). ಅವರಿಬ್ಬರಲ್ಲಿ ಯಾರಿಗೆ ಜಯವಾಗುವುದೆಂದು ಭಿನ್ನಾಭಿಪ್ರಾಯವಿದ್ದ ಸರ್ವಲೋಕಗಳೂ ಒಬ್ಬೊಬ್ಬರ ಪಕ್ಷವನ್ನು ವಹಿಸಿಕೊಳ್ಳುವುದು (30-42). ಕರ್ಣಾರ್ಜುನರ ಯುದ್ಧವನ್ನು ವೀಕ್ಷಿಸಲು ಬಂದ ಬ್ರಹ್ಮನನ್ನು ಇಂದ್ರನು ಕೇಳಲು ಕೃಷ್ಣಾರ್ಜುನರಿಗೇ ಜಯವೆಂದು ಬ್ರಹ್ಮನು ಹೇಳಿದುದು (43-61). ಕರ್ಣಾರ್ಜುನರ ಯುದ್ಧಾರಂಭ, ಶಲ್ಯ-ಕರ್ಣರ ಮತ್ತು ಕೃಷ್ಣಾರ್ಜುನರ ಸಂವಾದ (62-83).

08063001 ಸಂಜಯ ಉವಾಚ।
08063001a ವೃಷಸೇನಂ ಹತಂ ದೃಷ್ಟ್ವಾ ಶೋಕಾಮರ್ಷಸಮನ್ವಿತಃ।
08063001c ಮುಕ್ತ್ವಾ ಶೋಕೋದ್ಭವಂ ವಾರಿ ನೇತ್ರಾಭ್ಯಾಂ ಸಹಸಾ ವೃಷಃ।।

ಸಂಜಯನು ಹೇಳಿದನು: “ವೃಷಸೇನನು ಹತನಾದುದನ್ನು ಕಂಡು ಕೂಡಲೇ ಶೋಕ-ಕೋಪ ಸಮನ್ವಿತನಾದ ವೃಷ ಕರ್ಣನು ಎರಡೂ ಕಣ್ಣುಗಳಿಂದ ಶೋಕೋದ್ಭವ ಕಣ್ಣೀರನ್ನು ಸುರಿಸಿದನು.

08063002a ರಥೇನ ಕರ್ಣಸ್ತೇಜಸ್ವೀ ಜಗಾಮಾಭಿಮುಖೋ ರಿಪೂನ್।
08063002c ಯುದ್ಧಾಯಾಮರ್ಷತಾಮ್ರಾಕ್ಷಃ ಸಮಾಹೂಯ ಧನಂಜಯಂ।।

ಕೋಪದಿಂದ ರಕ್ತಾಕ್ಷನಾಗಿದ್ದ ತೇಜಸ್ವಿ ಕರ್ಣನು ರಥದಲ್ಲಿ ಕುಳಿತು ಶತ್ರುಗಳ ಅಭಿಮುಖವಾಗಿ ತೆರಳಿ ಧನಂಜಯನನ್ನು ಯುದ್ಧಕ್ಕೆ ಆಹ್ವಾನಿಸಿದನು.

08063003a ತೌ ರಥೌ ಸೂರ್ಯಸಂಕಾಶೌ ವೈಯಾಘ್ರಪರಿವಾರಣೌ।
08063003c ಸಮೇತೌ ದದೃಶುಸ್ತತ್ರ ದ್ವಾವಿವಾರ್ಕೌ ಸಮಾಗತೌ।।

ವ್ಯಾಘ್ರಚರ್ಮ ಆಚ್ಛಾದಿತ ಸೂರ್ಯಸಂಕಾಶ ರಥಗಳಲ್ಲಿ ಕುಳಿತಿದ್ದ ಅವರಿಬ್ಬರೂ ಎದುರುಬದಿರಾಗಿರುವ ಎರಡು ಸೂರ್ಯರಂತೆ ಕಂಡರು.

08063004a ಶ್ವೇತಾಶ್ವೌ ಪುರುಷಾದಿತ್ಯಾವಾಸ್ಥಿತಾವರಿಮರ್ದನೌ।
08063004c ಶುಶುಭಾತೇ ಮಹಾತ್ಮಾನೌ ಚಂದ್ರಾದಿತ್ಯೌ ಯಥಾ ದಿವಿ।।

ಶ್ವೇತಾಶ್ವರಾಗಿದ್ದ ಅವರಿಬ್ಬರು ಪುರುಷಾದಿತ್ಯ ಅರಿಮರ್ದನ ಮಹಾತ್ಮರು ದಿವಿಯಲ್ಲಿ ಚಂದ್ರ-ಆದಿತ್ಯರಂತೆ ಶೋಭಿಸಿದರು.

08063005a ತೌ ದೃಷ್ಟ್ವಾ ವಿಸ್ಮಯಂ ಜಗ್ಮುಃ ಸರ್ವಭೂತಾನಿ ಮಾರಿಷ।
08063005c ತ್ರೈಲೋಕ್ಯವಿಜಯೇ ಯತ್ತಾವಿಂದ್ರವೈರೋಚನಾವಿವ।।

ಮಾರಿಷ! ಅವರಿಬ್ಬರನ್ನು ನೋಡಿ ಸರ್ವಭೂತಗಳೂ ಇಂದ್ರ ವೈರೋಚನರು ತ್ರೈಲೋಕ್ಯವಿಜಯಕ್ಕೆ ನಿಂತಿದ್ದಾಗ ಹೇಗೋ ಹಾಗೆ ವಿಸ್ಮಿತರಾದರು.

08063006a ರಥಜ್ಯಾತಲನಿರ್ಹ್ರಾದೈರ್ಬಾಣಶಂಖರವೈರಪಿ।
08063006c ತೌ ರಥಾವಭಿಧಾವಂತೌ ಸಮಾಲೋಕ್ಯ ಮಹೀಕ್ಷಿತಾಂ।।
08063007a ಧ್ವಜೌ ಚ ದೃಷ್ಟ್ವಾ ಸಂಸಕ್ತೌ ವಿಸ್ಮಯಃ ಸಮಪದ್ಯತ।
08063007c ಹಸ್ತಿಕಕ್ಷ್ಯಾಂ ಚ ಕರ್ಣಸ್ಯ ವಾನರಂ ಚ ಕಿರೀಟಿನಃ।।

ರಥಘೋಷಗಳಿಂದಲೂ, ಮೌರ್ವಿಗಳ ಟೇಂಕಾರಗಳಿಂದಲೂ, ಚಪ್ಪಾಳೆಯ ಶಬ್ಧಗಳಿಂದಲೂ, ಬಾಣಗಳ ಸೀತ್ಕಾರಗಳಿಂದಲೂ, ಶಂಖಗಳ ಶಬ್ಧಗಳಿಂದಲೂ ಕಿರೀಟಿಯ ವಾನರಧ್ವಜ ಮತ್ತು ಕರ್ಣನ ಆನೆಯ ಹಗ್ಗದ ಚಿಹ್ನೆಯ ಧ್ವಜಗಳ ಎರಡು ರಥಗಳೂ ಯುದ್ಧದಲ್ಲಿ ಸಂಸಕ್ತವಾದುದನ್ನು ನೋಡಿ ಮಹೀಕ್ಷಿತರು ವಿಸ್ಮಿತನಾದರು.

08063008a ತೌ ರಥೌ ಸಂಪ್ರಸಕ್ತೌ ಚ ದೃಷ್ಟ್ವಾ ಭಾರತ ಪಾರ್ಥಿವಾಃ।
08063008c ಸಿಂಹನಾದರವಾಂಶ್ಚಕ್ರುಃ ಸಾಧುವಾದಾಂಶ್ಚ ಪುಷ್ಕಲಾನ್।।

ಭಾರತ! ಆ ಎರಡು ಮಹಾರಥರೂ ಒಂದೆಡೆಯಲ್ಲಿ ಯುದ್ಧಮಾಡಲು ತೊಡಗಿದುದನ್ನು ನೋಡಿ ಪಾರ್ಥಿವರು ಸಿಂಹನಾದಗೈದರು ಮತ್ತು ಪುಷ್ಕಲವಾಗಿ ಸಾಧು! ಸಾಧು! ಎಂದು ಘೋಷಿಸಿದರು.

08063009a ಶ್ರುತ್ವಾ ತು ದ್ವೈರಥಂ ತಾಭ್ಯಾಂ ತತ್ರ ಯೋಧಾಃ ಸಮಂತತಃ।
08063009c ಚಕ್ರುರ್ಬಾಹುವಲಂ ಚೈವ ತಥಾ ಚೇಲವಲಂ ಮಹತ್।।

ಅವರಿಬ್ಬರು ದ್ವೈರಥಯುದ್ಧದಲ್ಲಿ ತೊಡಗಿದ್ದಾರೆಂದು ಕೇಳಿದ ಯೋಧರು ಎಲ್ಲಕಡೆಗಳಿಂದ ಬಂದು ಭುಜಗಳನ್ನು ತಟ್ಟಿಕೊಳ್ಳುತ್ತಾ ಅಂಗವಸ್ತ್ರಗಳನ್ನು ಹಾರಿಸಿ ಮಹಾ ತುಮುಲಶಬ್ಧವನ್ನುಂಟುಮಾಡಿದರು.

08063010a ಆಜಗ್ಮುಃ ಕುರವಸ್ತತ್ರ ವಾದಿತ್ರಾನುಗತಾಸ್ತದಾ।
08063010c ಕರ್ಣಂ ಪ್ರಹರ್ಷಯಂತಶ್ಚ ಶಂಖಾನ್ದಧ್ಮುಶ್ಚ ಪುಷ್ಕಲಾನ್।।

ಕರ್ಣನಿಗೆ ಹರ್ಷವನ್ನುಂಟುಮಾಡಲು ಅಲ್ಲಿಗೆ ಕುರುಗಳು ವಾದ್ಯಗಳಿಂದ ಕೂಡಿಕೊಂಡು ಬಂದು ಪುಷ್ಕಲವಾಗಿ ಶಂಖಗಳನ್ನೂದಿದರು.

08063011a ತಥೈವ ಪಾಂಡವಾಃ ಸರ್ವೇ ಹರ್ಷಯಂತೋ ಧನಂಜಯಂ।
08063011c ತೂರ್ಯಶಂಖನಿನಾದೇನ ದಿಶಃ ಸರ್ವಾ ವ್ಯನಾದಯನ್।।

ಹಾಗೆಯೇ ಪಾಂಡವರೆಲ್ಲರೂ ಧನಂಜಯನನ್ನು ಹರ್ಷಗೊಳಿಸಲು ತೂರ್ಯ ಶಂಖನಿನಾದಗಳಿಂದ ಎಲ್ಲ ದಿಕ್ಕುಗಳನ್ನೂ ಮೊಳಗಿಸಿದರು.

08063012a ಕ್ಷ್ವೇಡಿತಾಸ್ಫೋಟಿತೋತ್ಕ್ರುಷ್ಟೈಸ್ತುಮುಲಂ ಸರ್ವತೋಽಭವತ್।
08063012c ಬಾಹುಘೋಷಾಶ್ಚ ವೀರಾಣಾಂ ಕರ್ಣಾರ್ಜುನಸಮಾಗಮೇ।।

ಕರ್ಣಾರ್ಜುನರ ಆ ಸಮಾಗಮದಲ್ಲಿ ವೀರರ ಸಿಂಹನಾದ, ಚಪ್ಪಾಳೆ ಮತ್ತು ಕೂಗಾಟಗಳಿಂದ ಸರ್ವತ್ರ ಕೋಲಾಹಲವುಂಟಾಯಿತು.

08063013a ತೌ ದೃಷ್ಟ್ವಾ ಪುರುಷವ್ಯಾಘ್ರೌ ರಥಸ್ಥೌ ರಥಿನಾಂ ವರೌ।
08063013c ಪ್ರಗೃಹೀತಮಹಾಚಾಪೌ ಶರಶಕ್ತಿಗದಾಯುಧೌ।।
08063014a ವರ್ಮಿಣೌ ಬದ್ಧನಿಸ್ತ್ರಿಂಶೌ ಶ್ವೇತಾಶ್ವೌ ಶಂಖಶೋಭಿನೌ।
08063014c ತೂಣೀರವರಸಂಪನ್ನೌ ದ್ವಾವಪಿ ಸ್ಮ ಸುದರ್ಶನೌ।।
08063015a ರಕ್ತಚಂದನದಿಗ್ಧಾಂಗೌ ಸಮದೌ ವೃಷಭಾವಿವ।
08063015c ಆಶೀವಿಷಸಮಪ್ರಖ್ಯೌ ಯಮಕಾಲಾಂತಕೋಪಮೌ।।
08063016a ಇಂದ್ರವೃತ್ರಾವಿವ ಕ್ರುದ್ಧೌ ಸೂರ್ಯಾಚಂದ್ರಮಸಪ್ರಭೌ।
08063016c ಮಹಾಗ್ರಹಾವಿವ ಕ್ರೂರೌ ಯುಗಾಂತೇ ಸಮುಪಸ್ಥಿತೌ।।
08063017a ದೇವಗರ್ಭೌ ದೇವಸಮೌ ದೇವತುಲ್ಯೌ ಚ ರೂಪತಃ।
08063017c ಸಮೇತೌ ಪುರುಷವ್ಯಾಘ್ರೌ ಪ್ರೇಕ್ಷ್ಯ ಕರ್ಣಧನಂಜಯೌ।।

ರಥಸ್ಥರಾಗಿದ್ದ ಮಹಾಚಾಪ-ಶರ-ಶಕ್ತಿ-ಗದಾಯುಧಗಳನ್ನು ಹಿಡಿದ ಆ ರಥಿಗಳಲ್ಲಿ ಶ್ರೇಷ್ಠ ಪುರುಷವ್ಯಾಘ್ರರಿಬ್ಬರನ್ನು, ಕವಚಗಳನ್ನು ಧರಿಸಿದ್ದ, ಖಡ್ಗಗಳನ್ನು ಕಟ್ಟಿಕೊಂಡಿದ್ದ, ಶ್ವೇತಾಶ್ವರಾದ, ಶಂಖಗಳಿಂದ ಸುಶೋಭಿತರಾಗಿದ್ದ, ಶ್ರೇಷ್ಠ ಬತ್ತಳಿಕೆಗಳಿಂದ ಸಂಪನ್ನರಾಗಿದ್ದ, ಸುಂದರರಾಗಿ ಕಾಣುತ್ತಿದ್ದ ಅವರಿಬ್ಬರನ್ನೂ, ಕೆಂಪಾದ ರಕ್ತದಿಂದ ಲೇಪಿತರಾಗಿದ್ದ, ಮದಿಸಿದ ಹೋರಿಗಳಂತಿದ್ದ, ಸರ್ಪದ ವಿಷದಂತೆ ಪ್ರಖರರಾಗಿದ್ದ, ಕಾಲಾಂತಕ ಯಮರಂತಿದ್ದ, ಇಂದ್ರ-ವೃತ್ರರಂತೆ ಕ್ರುದ್ಧರಾಗಿದ್ದ, ಸೂರ್ಯಚಂದ್ರರ ಸಮಪ್ರಭೆಯುಳ್ಳ, ಯುಗಾಂತದಲ್ಲಿ ಕೂಡಿಕೊಳ್ಳುವ ಕ್ರೂರ ಮಹಾಗ್ರಹಗಳಂತಿದ್ದ, ದೇವಗರ್ಭರಾದ, ದೇವಸಮರಾದ, ರೂಪದಲ್ಲಿ ದೇವತುಲ್ಯರಾದ, ಸಮೇತರಾಗಿದ್ದ ಪುರುಷವ್ಯಾಘ್ರರಾದ ಕರ್ಣ-ಧನಂಜಯರನ್ನು ನೋಡಿ ವಿಸ್ಮಿತರಾದರು.

08063018a ಉಭೌ ವರಾಯುಧಧರಾವುಭೌ ರಣಕೃತಶ್ರಮೌ।
08063018c ಉಭೌ ಚ ಬಾಹುಶಬ್ದೇನ ನಾದಯಂತೌ ನಭಸ್ತಲಂ।।
08063019a ಉಭೌ ವಿಶ್ರುತಕರ್ಮಾಣೌ ಪೌರುಷೇಣ ಬಲೇನ ಚ।
08063019c ಉಭೌ ಚ ಸದೃಶೌ ಯುದ್ಧೇ ಶಂಬರಾಮರರಾಜಯೋಃ।।
08063020a ಕಾರ್ತವೀರ್ಯಸಮೌ ಯುದ್ಧೇ ತಥಾ ದಾಶರಥೇಃ ಸಮೌ।
08063020c ವಿಷ್ಣುವೀರ್ಯಸಮೌ ವೀರ್ಯೇ ತಥಾ ಭವಸಮೌ ಯುಧಿ।।
08063021a ಉಭೌ ಶ್ವೇತಹಯೌ ರಾಜನ್ರಥಪ್ರವರವಾಹಿನೌ।
08063021c ಸಾರಥೀ ಪ್ರವರೌ ಚೈವ ತಯೋರಾಸ್ತಾಂ ಮಹಾಬಲೌ।।

ರಾಜನ್! ಇಬ್ಬರೂ ಶ್ರೇಷ್ಠ ಅಯುಧಗಳನ್ನು ಧರಿಸಿದ್ದರು. ಇಬ್ಬರೂ ಯುದ್ಧಮಾಡಿ ಬಳಲಿದ್ದರು, ಇಬ್ಬರೂ ಬಾಹುಶಬ್ಧಗಳಿಂದ ನಭಸ್ತಲವನ್ನು ಮೊಳಗಿಸುತ್ತಿದ್ದರು. ಇಬ್ಬರೂ ಬಲ ಮತ್ತು ಪೌರುಷ ಕರ್ಮಗಳಲ್ಲಿ ವಿಶ್ರುತರಾಗಿದ್ದರು. ಇಬ್ಬರೂ ಯುದ್ಧದಲ್ಲಿ ಶಂಬರ ಮತ್ತು ಅಮರರಾಜರಂತೆ ಕಾಣುತ್ತಿದ್ದರು. ಇಬ್ಬರೂ ಯುದ್ಧದಲ್ಲಿ ಕಾರ್ತವೀರ್ಯನ ಮತ್ತು ದಾಶರಥಿಯ ಸಮನಾಗಿದ್ದರು. ಇಬ್ಬರೂ ವೀರ್ಯದಲ್ಲಿ ವಿಷ್ಣುವಿನ ಸಮನಾಗಿದ್ದರು ಮತ್ತು ಯುದ್ಧದಲ್ಲಿ ಭವನ ಸಮನಾಗಿದ್ದರು. ಇಬ್ಬರ ಕುದುರೆಗಳೂ ಶ್ವೇತವರ್ಣದ್ದಾಗಿದ್ದವು. ರಥಗಳು ಶ್ರೇಷ್ಠವಾಗಿದ್ದವು. ಅವರಿಬ್ಬರ ಸಾರಥಿಗಳೂ ಮಹಾಬಲಶಾಲಿಗಳು ಮತ್ತು ಪ್ರಮುಖರಾಗಿದ್ದರು.

08063022a ತೌ ತು ದೃಷ್ಟ್ವಾ ಮಹಾರಾಜ ರಾಜಮಾನೌ ಮಹಾರಥೌ।
08063022c ಸಿದ್ಧಚಾರಣಸಂಘಾನಾಂ ವಿಸ್ಮಯಃ ಸಮಪದ್ಯತ।।

ಮಹಾರಾಜ! ವಿರಾಜಿಸುತ್ತಿರುವ ಆ ಮಹಾರಥರನ್ನು ಕಂಡು ಸಿದ್ಧಚಾರಣಸಂಘಗಳಿಗೆ ವಿಸ್ಮಯವುಂಟಾಯಿತು.

08063023a ಧಾರ್ತರಾಷ್ಟ್ರಾಸ್ತತಃ ಕರ್ಣಂ ಸಬಲಾ ಭರತರ್ಷಭ।
08063023c ಪರಿವವ್ರುರ್ಮಹಾತ್ಮಾನಂ ಕ್ಷಿಪ್ರಮಾಹವಶೋಭಿನಂ।।

ಭರತರ್ಷಭ! ಆಗ ಬೇಗನೇ ಸೇನೆಗಳೊಂದಿಗೆ ಧಾರ್ತರಾಷ್ಟ್ರರು ಆಹವಶೋಭೀ ಮಹಾತ್ಮ ಕರ್ಣನನ್ನು ಸುತ್ತುವರೆದರು.

08063024a ತಥೈವ ಪಾಂಡವಾ ಹೃಷ್ಟಾ ಧೃಷ್ಟದ್ಯುಮ್ನಪುರೋಗಮಾಃ।
08063024c ಪರಿವವ್ರುರ್ಮಹಾತ್ಮಾನಂ ಪಾರ್ಥಮಪ್ರತಿಮಂ ಯುಧಿ।।

ಹಾಗೆಯೇ ಧೃಷ್ಟದ್ಯುಮ್ನಪುರೋಗಮ ಪಾಂಡವರು ಹೃಷ್ಟರಾಗಿ ಯುದ್ಧದಲ್ಲಿ ಅಪ್ರತಿಮನಾದ ಮಹಾತ್ಮ ಪಾರ್ಥನನ್ನು ಸುತ್ತುವರೆದರು.

08063025a ತಾವಕಾನಾಂ ರಣೇ ಕರ್ಣೋ ಗ್ಲಹ ಆಸೀದ್ವಿಶಾಂ ಪತೇ।
08063025c ತಥೈವ ಪಾಂಡವೇಯಾನಾಂ ಗ್ಲಹಃ ಪಾರ್ಥೋಽಭವದ್ಯುಧಿ।।

ವಿಶಾಂಪತೇ! ರಣವೆಂಬ ಜೂಜಿನಲ್ಲಿ ನಿನ್ನವರಿಗೆ ಕರ್ಣನು ಪಣವಾದನು. ಹಾಗೆಯೇ ಯುದ್ಧದಲ್ಲಿ ಪಾಂಡವೇಯರಿಗೆ ಪಾರ್ಥನು ಪಣವಾದನು.

08063026a ತ ಏವ ಸಭ್ಯಾಸ್ತತ್ರಾಸನ್ ಪ್ರೇಕ್ಷಕಾಶ್ಚಾಭವನ್ಸ್ಮ ತೇ।
08063026c ತತ್ರೈಷಾಂ ಗ್ಲಹಮಾನಾನಾಂ ಧ್ರುವೌ ಜಯಪರಾಜಯೌ।।

ಅಂದು ಸಭಾಸದರಾಗಿ ಯಾರಿದ್ದರೋ ಅವರೇ ಇಂದು ಪ್ರೇಕ್ಷಕರಾಗಿದ್ದರು. ಪಣವನ್ನಿಟ್ಟಿದ್ದ ಅವರಲ್ಲಿ ಒಬ್ಬರಿಗೆ ಜಯ ಮತ್ತು ಇನ್ನೊಬ್ಬರಿಗೆ ಪರಾಜಯವು ನಿಶ್ಚಯವಾದುದಾಗಿತ್ತು.

08063027a ತಾಭ್ಯಾಂ ದ್ಯೂತಂ ಸಮಾಯತ್ತಂ ವಿಜಯಾಯೇತರಾಯ ವಾ।
08063027c ಅಸ್ಮಾಕಂ ಪಂಡವಾನಾಂ ಚ ಸ್ಥಿತಾನಾಂ ರಣಮೂರ್ಧನಿ।।

ರಣಮೂರ್ಧನಿಯಲ್ಲಿ ನಿಂತಿರುವ ನಮ್ಮವರು ಮತ್ತು ಪಾಂಡವರ ನಡುವೆ ಅವರಿಬ್ಬರ ವಿಜಯ ಅಥವಾ ಪರಾಜಯದ ಕುರಿತಾದ ದ್ಯೂತವು ಪ್ರಾರಂಭವಾಯಿತು.

08063028a ತೌ ತು ಸ್ಥಿತೌ ಮಹಾರಾಜ ಸಮರೇ ಯುದ್ಧಶಾಲಿನೌ।
08063028c ಅನ್ಯೋನ್ಯಂ ಪ್ರತಿಸಂರಬ್ಧಾವನ್ಯೋನ್ಯಸ್ಯ ಜಯೈಷಿಣೌ।।

ಮಹಾರಾಜ! ಸಮರದಲ್ಲಿ ಆ ಇಬ್ಬರು ಯುದ್ಧಶಾಲಿಗಳೂ ಅನ್ಯೋನ್ಯರೊಡನೆ ಕುಪಿತರಾಗಿ ಅನ್ಯೋನ್ಯರನ್ನು ಜಯಿಸಲು ಬಯಸಿ ಎದುರಾಳಿಗಳಾಗಿ ನಿಂತಿದ್ದರು.

08063029a ತಾವುಭೌ ಪ್ರಜಿಹೀರ್ಷೇತಾಮಿಂದ್ರವೃತ್ರಾವಿವಾಭಿತಃ।
08063029c ಭೀಮರೂಪಧರಾವಾಸ್ತಾಂ ಮಹಾಧೂಮಾವಿವ ಗ್ರಹೌ।।

ಇಂದ್ರ-ವೃತ್ರರಂತೆ ಅವರಿಬ್ಬರೂ ಅನ್ಯೋನ್ಯರನ್ನು ಪ್ರಹರಿಸಲು ಉತ್ಸುಕರಾಗಿದ್ದರು. ಧೂಮಗ್ರಹಗಳಾದ ಮಹಾ ರಾಹು-ಕೇತುಗಳಂತೆ ಭಯಂಕರ ರೂಪಗಳನ್ನು ತಳೆದಿದ್ದರು.

08063030a ತತೋಽಮ್ತರಿಕ್ಷೇ ಸಾಕ್ಷೇಪಾ ವಿವಾದಾ ಭರತರ್ಷಭ।
08063030c ಮಿಥೋ ಭೇದಾಶ್ಚ ಭೂತಾನಾಮಾಸನ್ಕರ್ಣಾರ್ಜುನಾಂತರೇ।
08063030e ವ್ಯಾಶ್ರಯಂತ ದಿಶೋ ಭಿನ್ನಾಃ ಸರ್ವಲೋಕಾಶ್ಚ ಮಾರಿಷ।।

ಭರತರ್ಷಭ! ಮಾರಿಷ! ಆಗ ಅಂತರಿಕ್ಷದಲ್ಲಿದ್ದವರಲ್ಲಿ ಕರ್ಣಾರ್ಜುನರಲ್ಲಿ ಯಾರು ವಿಜಯಿಗಳಾಗುವರೆನ್ನುವ ವಿಷಯದಲ್ಲಿ ವಿವಾದಗಳೂ ಭಿನ್ನಾಭಿಪ್ರಾಯಗಳೂ ಉಂಟಾಗಲು ಅವರ ಭಿನ್ನ ಅಭಿಪ್ರಾಯದ ಮಾತುಗಳೂ ಸರ್ವಲೋಕಗಳಿಗೂ ಸರ್ವ ದಿಕ್ಕುಗಳಲ್ಲಿಯೂ ಕೇಳಿಬರುತ್ತಿತ್ತು.

08063031a ದೇವದಾನವಗಂದರ್ವಾಃ ಪಿಶಾಚೋರಗರಾಕ್ಷಸಾಃ।
08063031c ಪ್ರತಿಪಕ್ಷಗ್ರಹಂ ಚಕ್ರುಃ ಕರ್ಣಾರ್ಜುನಸಮಾಗಮೇ।।

ಕರ್ಣಾರ್ಜುನರ ಆ ಸಮಾಗಮದಲ್ಲಿ ದೇವ-ದಾನವ-ಗಂಧರ್ವರೂ ಪಿಶಾಚ-ಉರಗ-ರಾಕ್ಷಸರೂ ಒಂದೊಂದು ಪಕ್ಷವನ್ನು ಹಿಡಿದರು.

08063032a ದ್ಯೌರಾಸೀತ್ಕರ್ಣತೋ ವ್ಯಗ್ರಾ ಸನಕ್ಷತ್ರಾ ವಿಶಾಂ ಪತೇ।
08063032c ಭೂಮಿರ್ವಿಶಾಲಾ ಪಾರ್ಥಸ್ಯ ಮಾತಾ ಪುತ್ರಸ್ಯ ಭಾರತ।।

ವಿಶಾಂಪತೇ! ನಕ್ಷತ್ರಗಳೊಂದಿಗೆ ನಭವು ವ್ಯಗ್ರಳಾಗಿ ಕರ್ಣನ ಪಕ್ಷವನ್ನು ವಹಿಸಿದಳು. ಮಾತೆಯಂತಿದ್ದ ವಿಶಾಲ ಭೂಮಿಯು ಮಗ ಪಾರ್ಥನ ಪಕ್ಷವನ್ನು ವಹಿಸಿದಳು.

08063033a ಸರಿತಃ ಸಾಗರಾಶ್ಚೈವ ಗಿರಯಶ್ಚ ನರೋತ್ತಮ।
08063033c ವೃಕ್ಷಾಶ್ಚೌಷಧಯಸ್ತತ್ರ ವ್ಯಾಶ್ರಯಂತ ಕಿರೀಟಿನಂ।।

ನರೋತ್ತಮ! ಸಾಗರ-ಸರಿತ್ತುಗಳೂ, ಗಿರಿಗಳೂ, ವೃಕ್ಷ-ಔಷಧಗಳೂ ಕಿರೀಟಿಯನ್ನು ಆಶ್ರಯಿಸಿದವು.

08063034a ಅಸುರಾ ಯಾತುಧಾನಾಶ್ಚ ಗುಹ್ಯಕಾಶ್ಚ ಪರಂತಪ।
08063034c ಕರ್ಣತಃ ಸಮಪದ್ಯಂತ ಖೇಚರಾಣಿ ವಯಾಂಸಿ ಚ।।

ಪರಂತಪ! ಅಸುರರೂ, ಯಾತುಧಾನರೂ, ಗುಹ್ಯಕರೂ, ಖೇಚರರೂ, ಪಕ್ಷಿಗಳೂ ಕರ್ಣನ ಪಕ್ಷವನ್ನು ಸೇರಿದರು.

08063035a ರತ್ನಾನಿ ನಿಧಯಃ ಸರ್ವೇ ವೇದಾಶ್ಚಾಖ್ಯಾನಪಂಚಮಾಃ।
08063035c ಸೋಪವೇದೋಪನಿಷದಃ ಸರಹಸ್ಯಾಃ ಸಸಂಗ್ರಹಾಃ।।
08063036a ವಾಸುಕಿಶ್ಚಿತ್ರಸೇನಶ್ಚ ತಕ್ಷಕಶ್ಚೋಪತಕ್ಷಕಃ।
08063036c ಪರ್ವತಾಶ್ಚ ತಥಾ ಸರ್ವೇ ಕಾದ್ರವೇಯಾಶ್ಚ ಸಾನ್ವಯಾಃ।
08063036e ವಿಷವಂತೋ ಮಹಾರೋಷಾ ನಾಗಾಶ್ಚಾರ್ಜುನತೋಽಭವನ್।।

ರತ್ನಗಣಿಗಳು, ಸರ್ವ ವೇದ-ಆಖ್ಯಾನ-ಪಂಚಮಗಳೂ, ರಹಸ್ಯಗಳು ಮತ್ತು ಸಂಗ್ರಹಗಳೊಂದಿಗೆ ಸಮಸ್ತ ವೇದ-ಉಪನಿಷತ್ತುಗಳೂ, ವಾಸುಕಿ, ಚಿತ್ರಸೇನ, ತಕ್ಷಕ, ಉಪತಕ್ಷಕ, ಪರ್ವತಗಳು, ಕದ್ರುವಿನ ಸರ್ಪ ಪೀಳಿಗೆಗಳು, ಮಹಾರೋಷವುಳ್ಳ ವಿಷಯುಕ್ತ ನಾಗಗಳು ಅರ್ಜುನನ ಪಕ್ಷವನ್ನು ಸೇರಿದವು.

08063037a ಐರಾವತಾಃ ಸೌರಭೇಯಾ ವೈಶಾಲೇಯಾಶ್ಚ ಭೋಗಿನಃ।
08063037c ಏತೇಽಭವನ್ನರ್ಜುನತಃ ಕ್ಷುದ್ರಸರ್ಪಾಸ್ತು ಕರ್ಣತಃ।।

ಐರಾವತರು, ಸೌರಭೇಯರು, ಹೆಡೆಗಳುಳ್ಳ ವೈಶಾಲೇಯರು ಅರ್ಜುನನ ಪಕ್ಷದವರಾದರು. ಕ್ಷುದ್ರ ಸರ್ಪಗಳು ಕರ್ಣನ ಪಕ್ಷಕ್ಕೆ ಸೇರಿದವು.

08063038a ಈಹಾಮೃಗಾ ವ್ಯಾಡಮೃಗಾ ಮಂಗಲ್ಯಾಶ್ಚ ಮೃಗದ್ವಿಜಾಃ।
08063038c ಪಾರ್ಥಸ್ಯ ವಿಜಯಂ ರಾಜನ್ಸರ್ವ ಏವಾಭಿಸಂಶ್ರಿತಾಃ।।

ರಾಜನ್! ಈಹಾಮೃಗಗಳು, ವ್ಯಾಲಮೃಗಗಳು, ಮಂಗಳಸೂಚಕ ಮೃಗಳು, ಪಕ್ಷಿಗಳು ಎಲ್ಲವೂ ಪಾರ್ಥನ ವಿಜಯವನ್ನು ಬಯಸಿ ಅವನ ಪಕ್ಷವನ್ನೇ ಸೇರಿದವು.

08063039a ವಸವೋ ಮರುತಃ ಸಾಧ್ಯಾ ರುದ್ರಾ ವಿಶ್ವೇಽಶ್ವಿನೌ ತಥಾ।
08063039c ಅಗ್ನಿರಿಂದ್ರಶ್ಚ ಸೋಮಶ್ಚ ಪವನಶ್ಚ ದಿಶೋ ದಶ।
08063039e ಧನಂಜಯಮುಪಾಜಗ್ಮುರಾದಿತ್ಯಾಃ ಕರ್ಣತೋಽಭವನ್।।

ವಸುಗಳು, ಮರುತರು, ಸಾಧ್ಯರು, ರುದ್ರರು, ವಿಶ್ವೇದೇವರು, ಅಶ್ವಿನಿಗಳು, ಅಗ್ನಿ-ಇಂದ್ರರು, ಸೋಮ, ಪವನ ಮತ್ತು ಹತ್ತು ದಿಕ್ಕುಗಳು ಧನಂಜಯನ ಪಕ್ಷವನ್ನು ಸೇರಿದರು. ಆದರೆ ಆದಿತ್ಯರು ಕರ್ಣನ ಪಕ್ಷದವರಾದರು.

08063040a ದೇವಾಸ್ತು ಪಿತೃಭಿಃ ಸಾರ್ಧಂ ಸಗಣಾರ್ಜುನತೋಽಭವನ್।
08063040c ಯಮೋ ವೈಶ್ರವಣಶ್ಚೈವ ವರುಣಶ್ಚ ಯತೋಽರ್ಜುನಃ।।

ಪಿತೃಗಳೊಂದಿಗೆ ದೇವತೆಗಳು ಗಣಗಳೊಂದಿಗೆ ಅರ್ಜುನನ ಕಡೆಯವರಾದರು. ಯಮ, ವೈಶ್ರವಣ, ವರುಣರೂ ಅರ್ಜುನನ ಕಡೆಯವರಾದರು.

08063041a ದೇವಬ್ರಹ್ಮನೃಪರ್ಷೀಣಾಂ ಗಣಾಃ ಪಾಂಡವತೋಽಭವನ್।
08063041c ತುಂಬುರುಪ್ರಮುಖಾ ರಾಜನ್ಗಂಧರ್ವಾಶ್ಚ ಯತೋಽರ್ಜುನಃ।।
08063042a ಪ್ರಾವೇಯಾಃ ಸಹ ಮೌನೇಯೈರ್ಗಂದರ್ವಾಪ್ಸರಸಾಂ ಗಣಾಃ।

ರಾಜನ್! ದೇವ-ಬ್ರಹ್ಮರ್ಷಿ-ನೃಪರ್ಷಿಗಣಗಳು ಪಾಂಡವನ ಕಡೆಯಾಯಿತು. ಹಾಗೆಯೇ ತುಂಬುರು ಪ್ರಮುಖ ಗಂಧರ್ವರೂ, ಮೌನೇಯರೊಂದಿಗೆ ಪ್ರಾವೇಯರೂ, ಗಂಧರ್ವಾಪ್ಸರ ಗಣಗಳೂ ಅರ್ಜುನನ ಕಡೆಯವರಾದರು.

08063042c ಈಹಾಮೃಗವ್ಯಾಡಮೃಗೈರ್ದ್ವಿಪಾಶ್ಚ ರಥಪತ್ತಿಭಿಃ।।
08063043a ಉಹ್ಯಮಾನಾಸ್ತಥಾ ಮೇಘೈರ್ವಾಯುನಾ ಚ ಮನೀಷಿಣಃ।
08063043c ದಿದೃಕ್ಷವಃ ಸಮಾಜಗ್ಮುಃ ಕರ್ಣಾರ್ಜುನಸಮಾಗಮಂ।।

ತೋಳಗಳೊಂದಿಗೆ ಹುಲಿಯೇ ಮೊದಲಾದ ದುಷ್ಟಪ್ರಾಣಿಗಳೂ, ರಥ-ಪದಾತಿಗಳೂ, ಮೇಘ-ವಾಯುಗಳನ್ನು ವಾಹನವನ್ನಾಗಿಸಿಕೊಂಡ ಮನೀಷಿಗಳೂ ಕರ್ಣಾರ್ಜುನರ ಆ ಸಮಾಗಮವನ್ನು ನೋಡಲು ಸೇರಿದರು.

08063044a ದೇವದಾನವಗಂದರ್ವಾ ನಾಗಾ ಯಕ್ಷಾಃ ಪತತ್ರಿಣಃ।
08063044c ಮಹರ್ಷಯೋ ವೇದವಿದಃ ಪಿತರಶ್ಚ ಸ್ವಧಾಭುಜಃ।।
08063045a ತಪೋ ವಿದ್ಯಾಸ್ತಥೌಷಧ್ಯೋ ನಾನಾರೂಪಾಂಬರತ್ವಿಷಃ।
08063045c ಅಂತರಿಕ್ಷೇ ಮಹಾರಾಜ ವಿನದಂತೋಽವತಸ್ಥಿರೇ।।

ಮಹಾರಾಜ! ದೇವ-ದಾನವ-ಗಂಧರ್ವರೂ, ನಾಗ-ಯಕ್ಷ-ಪಕ್ಷಿಗಳೂ, ವೇದವಿದ ಮಹರ್ಷಿಗಳೂ, ಸ್ವಧಾಭುಜ ಪಿತೃಗಳೂ, ನಾನಾರೂಪಗಳಲ್ಲಿದ್ದ ತಪಸ್ಸು, ವಿದ್ಯೆ, ಔಷಧಿಗಳೂ ಅಂತರಿಕ್ಷದಲ್ಲಿ ನೆರೆದು ಆನಂದಿಸುತ್ತಿದ್ದರು.

08063046a ಬ್ರಹ್ಮಾ ಬ್ರಹ್ಮರ್ಷಿಭಿಃ ಸಾರ್ಧಂ ಪ್ರಜಾಪತಿಭಿರೇವ ಚ।
08063046c ಭವೇನಾವಸ್ಥಿತೋ ಯಾನಂ ದಿವ್ಯಂ ತಂ ದೇಶಮಭ್ಯಯಾತ್।।

ಬ್ರಹ್ಮರ್ಷಿಗಳೊಡನೆ ಪ್ರಜಾಪತಿ ಬ್ರಹ್ಮನು ಭವನೊಂದಿಗೆ ದಿವ್ಯ ಯಾನದಲ್ಲಿ ಆ ಪ್ರದೇಶಕ್ಕೆ ಆಗಮಿಸಿದನು.

08063047a ದೃಷ್ಟ್ವಾ ಪ್ರಜಾಪತಿಂ ದೇವಾಃ ಸ್ವಯಂಭುವಮುಪಾಗಮನ್।
08063047c ಸಮೋಽಸ್ತು ದೇವ ವಿಜಯ ಏತಯೋರ್ನರಸಿಂಹಯೋಃ।।
08063048a ತದುಪಶ್ರುತ್ಯ ಮಘವಾ ಪ್ರಣಿಪತ್ಯ ಪಿತಾಮಹಂ।
08063048c ಕರ್ಣಾರ್ಜುನವಿನಾಶೇನ ಮಾ ನಶ್ಯತ್ವಖಿಲಂ ಜಗತ್।।

ಸ್ವಯಂಭು ಪ್ರಜಾಪತಿಯು ಬಂದುದನ್ನು ನೋಡಿ ದೇವತೆಗಳು “ದೇವ! ನಿನಗೆ ನಮಸ್ಕಾರ! ಈ ಎಬ್ಬರು ನರಸಿಂಹರಲ್ಲಿ ವಿಜಯವು ಸಮನಾಗಿರಲಿ!’ ಎನ್ನಲು ಅದನ್ನು ಕೇಳಿದ ಮಘವನು ಪಿತಾಮಹನಿಗೆ ನಮಸ್ಕರಿಸಿ “ಕರ್ಣಾರ್ಜುನರ ವಿನಾಶದಿಂದ ಅಖಿಲ ಜಗತ್ತನ್ನೂ ನಾಶಪಡಿಸದಿರು!

08063049a ಸ್ವಯಂಭೋ ಬ್ರೂಹಿ ತದ್ವಾಕ್ಯಂ ಸಮೋಽಸ್ತು ವಿಜಯೋಽನಯೋಃ।।
08063049c ತತ್ತಥಾಸ್ತು ನಮಸ್ತೇಽಸ್ತು ಪ್ರಸೀದ ಭಗವನ್ಮಮ।

ಸ್ವಯಂಭೋ! ನಿನಗೆ ನಮಸ್ಕಾರ! ಇವರಿಬ್ಬರ ವಿಜಯವೂ ಸಮವಾಗಿರಲಿ ಎಂದು ಹೇಳು! ನೀನು ಹೇಳಿದಂತೆಯೇ ಆಗಲಿ. ನಿನಗೆ ನಮಸ್ಕಾರ! ಭಗವನ್! ನನ್ನ ಮೇಲೆ ಪ್ರಸೀದನಾಗು!”

08063050a ಬ್ರಹ್ಮೇಶಾನಾವಥೋ ವಾಕ್ಯಮೂಚತುಸ್ತ್ರಿದಶೇಶ್ವರಂ।
08063050c ವಿಜಯೋ ಧ್ರುವ ಏವಾಸ್ತು ವಿಜಯಸ್ಯ ಮಹಾತ್ಮನಃ।।

ಆಗ ಬ್ರಹ್ಮೇಶನು ತ್ರಿದಶೇಶ್ವರನಿಗೆ ಈ ಮಾತನ್ನಾಡಿದನು: “ಮಹಾತ್ಮ ವಿಜಯನಿಗೇ ವಿಜಯವೆನ್ನುವುದು ನಿಶ್ಚಿತವಾದುದು.

08063051a ಮನಸ್ವೀ ಬಲವಾಂ ಶೂರಃ ಕೃತಾಸ್ತ್ರಶ್ಚ ತಪೋಧನಃ।
08063051c ಬಿಭರ್ತಿ ಚ ಮಹಾತೇಜಾ ಧನುರ್ವೇದಮಶೇಷತಃ।।

ಅವನು ಮನಸ್ವಿ. ಬಲಶಾಲಿ. ಶೂರ. ಅಸ್ತ್ರಗಳನ್ನು ಕಲಿತಿದ್ದಾನೆ ಮತ್ತು ತಪೋಧನನು. ಆ ಮಹಾತೇಜಸ್ವಿಯು ಧನುರ್ವೇದವನ್ನು ಸಂಪೂರ್ಣವಾಗಿ ಧರಿಸಿದ್ದಾನೆ.

08063052a ಅತಿಕ್ರಮೇಚ್ಚ ಮಾಹಾತ್ಮ್ಯಾದ್ದಿಷ್ಟಮೇತಸ್ಯ ಪರ್ಯಯಾತ್।
08063052c ಅತಿಕ್ರಾಂತೇ ಚ ಲೋಕಾನಾಮಭಾವೋ ನಿಯತೋ ಭವೇತ್।।

ಈ ಮಹಾತ್ಮನು ಆಗಬಹುದನ್ನೂ ಅತಿಕ್ರಮಿಸಬಲ್ಲನು. ಇವನೇನಾದರೂ ಆಗುವಂಥಹುದನ್ನು ಅತಿಕ್ರಮಿಸಿದರೆ ಲೋಕಗಳ ನಾಶವು ನಿಶ್ಚಿತವಾಗುತ್ತದೆ.

08063053a ನ ವಿದ್ಯತೇ ವ್ಯವಸ್ಥಾನಂ ಕೃಷ್ಣಯೋಃ ಕ್ರುದ್ಧಯೋಃ ಕ್ವ ಚಿತ್।
08063053c ಸ್ರಷ್ಟಾರೌ ಹ್ಯಸತಶ್ಚೋಭೌ ಸತಶ್ಚ ಪುರುಷರ್ಷಭೌ।।
08063054a ನರನಾರಾಯಣಾವೇತೌ ಪುರಾಣಾವೃಷಿಸತ್ತಮೌ।
08063054c ಅನಿಯತ್ತೌ ನಿಯಂತಾರಾವಭೀತೌ ಸ್ಮ ಪರಂತಪೌ।।

ಈ ಕೃಷ್ಣರಿಬ್ಬರು ಕ್ರುದ್ಧರಾದರೆ ಲೋಕದಲ್ಲಿ ಯಾವ ವ್ಯವಸ್ಥೆಯೂ ಉಳಿಯುವುದಿಲ್ಲ. ಶೋಭಿಸುತ್ತಿರುವ ಇವರಿಬ್ಬರು ಪುರುಷರ್ಷಭರೂ ಸತತವಾಗಿ ಸೃಷ್ಟಿಸುತ್ತಿರುತ್ತಾರೆ. ಇವರು ಪುರಾಣರಾದ ನರನಾರಾಯಣ ಋಷಿಸತ್ತಮರು. ಇವರು ಯಾರ ನಿಯಂತ್ರಣಕ್ಕೂ ಒಳಪಡದವರು. ನಿರ್ಭೀತರಾದ ಈ ಪರಂತಪರು ಎಲ್ಲವನ್ನೂ ನಿಯಂತ್ರಿಸುವವರು.

08063055a ಕರ್ಣೋ ಲೋಕಾನಯಂ ಮುಖ್ಯಾನ್ಪ್ರಾಪ್ನೋತು ಪುರುಷರ್ಷಭಃ।
08063055c ವೀರೋ ವೈಕರ್ತನಃ ಶೂರೋ ವಿಜಯಸ್ತ್ವಸ್ತು ಕೃಷ್ಣಯೋಃ।।
08063056a ವಸೂನಾಂ ಚ ಸಲೋಕತ್ವಂ ಮರುತಾಂ ವಾ ಸಮಾಪ್ನುಯಾತ್।
08063056c ಸಹಿತೋ ದ್ರೋಣಭೀಷ್ಮಾಭ್ಯಾಂ ನಾಕಲೋಕೇ ಮಹೀಯತಾಂ।।

ವೀರ ಶೂರ ಪುರುಷರ್ಷಭ ವೈಕರ್ತನ ಕರ್ಣನು ಮುಖ್ಯ ಲೋಕಗಳಿಗೆ ಹೋಗಲಿ. ಅವನು ಭೀಷ್ಮನೊಂದಿಗೆ ವಸುಗಳ ಲೋಕಕ್ಕಾಗಲೀ ಅಥವಾ ದ್ರೋಣನೊಂದಿಗೆ ಮರುತರ ಲೋಕಕ್ಕಾಗಲೀ ಹೋಗಲಿ ಅಥವಾ ನಾಗಲೋಕಕ್ಕಾಗಲೀ ಹೋಗಲಿ! ಆದರೆ ವಿಜಯವು ಕೃಷ್ಣರಿಬ್ಬರದಾಗುತ್ತದೆ.”

08063057a ಇತ್ಯುಕ್ತೋ ದೇವದೇವಾಭ್ಯಾಂ ಸಹಸ್ರಾಕ್ಷೋಽಬ್ರವೀದ್ವಚಃ।
08063057c ಆಮಂತ್ರ್ಯ ಸರ್ವಭೂತಾನಿ ಬ್ರಹ್ಮೇಶಾನಾನುಶಾಸನಾತ್।।
08063058a ಶ್ರುತಂ ಭವದ್ಭಿರ್ಯತ್ಪ್ರೋಕ್ತಂ ಭಗವದ್ಭ್ಯಾಂ ಜಗದ್ಧಿತಂ।
08063058c ತತ್ತಥಾ ನಾನ್ಯಥಾ ತದ್ಧಿ ತಿಷ್ಠಧ್ವಂ ಗತಮನ್ಯವಃ।।

ದೇವದೇವರಿಬ್ಬರೂ ಇದನ್ನು ಹೇಳಲು ಸಹಸ್ರಾಕ್ಷನು ಸರ್ವಭೂತಗಳನ್ನೂ ಆಮಂತ್ರಿಸಿ ಹೇಳಿದನು: “ಬ್ರಹ್ಮ-ಈಶಾನರ ಶಾಸನಗಳನ್ನು ನೀವು ಕೇಳಿದಿರಿ. ಜಗತ್ತಿನ ಹಿತಕ್ಕಾಗಿ ಈ ಭಗವಂತರಿಬ್ಬರೂ ಹೇಳಿದಂತೆಯೇ ಆಗುತ್ತದೆ. ಅದಲ್ಲದೇ ಬೇರೆ ಆಗುವುದೇ ಇಲ್ಲ. ಆದುದರಿಂದ ನೀವು ನಿಶ್ಚಿಂತರಾಗಿರಿ!”

08063059a ಇತಿ ಶ್ರುತ್ವೇಂದ್ರವಚನಂ ಸರ್ವಭೂತಾನಿ ಮಾರಿಷ।
08063059c ವಿಸ್ಮಿತಾನ್ಯಭವನ್ರಾಜನ್ಪೂಜಯಾಂ ಚಕ್ರಿರೇ ಚ ತತ್।।

ಮಾರಿಷ! ರಾಜನ್! ಇಂದ್ರನ ಈ ಮಾತನ್ನು ಕೇಳಿ ಸರ್ವಭೂತಗಳೂ ವಿಸ್ಮಿತರಾಗಿ ಕೃಷ್ಣಾರ್ಜುನರನ್ನು ಪೂಜಿಸತೊಡಗಿದವು.

08063060a ವ್ಯಸೃಜಂಶ್ಚ ಸುಗಂಧೀನಿ ನಾನಾರೂಪಾಣಿ ಖಾತ್ತಥಾ।
08063060c ಪುಷ್ಪವರ್ಷಾಣಿ ವಿಬುಧಾ ದೇವತೂರ್ಯಾಣ್ಯವಾದಯನ್।।

ದೇವತೆಗಳು ಅವರ ಮೇಲೆ ಸುಗಂಧದ್ರವ್ಯಗಳನ್ನೆರಚಿದರು. ನಾನಾರೂಪದ ಪುಷ್ಪವೃಷ್ಟಿಯನ್ನು ಸುರಿಸಿದರು. ದೇವತೂರ್ಯಗಳನ್ನು ಬಾರಿಸಿದರು.

08063061a ದಿದೃಕ್ಷವಶ್ಚಾಪ್ರತಿಮಂ ದ್ವೈರಥಂ ನರಸಿಂಹಯೋಃ।
08063061c ದೇವದಾನವಗಂದರ್ವಾಃ ಸರ್ವ ಏವಾವತಸ್ಥಿರೇ।
08063061e ರಥೌ ಚ ತೌ ಶ್ವೇತಹಯೌ ಯುಕ್ತಕೇತೂ ಮಹಾಸ್ವನೌ।।

ಮಹಾರಥಿಗಳಾದ, ಶ್ವೇತಹಯರಾದ, ಯುಕ್ತಕೇತುಗಳಾಗಿದ್ದ, ಮಹಾಸ್ವನರಾಗಿದ್ದ ಆ ಇಬ್ಬರು ನರಸಿಂಹರ ದ್ವೈರಥಯುದ್ಧವನ್ನು ನೋಡಲು ದೇವ-ದಾನವ-ಗಂಧರ್ವರೆಲ್ಲರೂ ನೆರೆದರು.

08063062a ಸಮಾಗತಾ ಲೋಕವೀರಾಃ ಶಂಖಾನ್ದಧ್ಮುಃ ಪೃಥಕ್ ಪೃಥಕ್।
08063062c ವಾಸುದೇವಾರ್ಜುನೌ ವೀರೌ ಕರ್ಣಶಲ್ಯೌ ಚ ಭಾರತ।।

ಅಲ್ಲಿ ಸೇರಿದ್ದ ಲೋಕವೀರರು ಪ್ರತ್ಯೇಕ ಪ್ರತ್ಯೇಕವಾಗಿ ಶಂಖಗಳನ್ನೂದಿದರು. ಭಾರತ! ವೀರರಾದ ವಾಸುದೇವ-ಅರ್ಜುನರೂ, ಕರ್ಣ-ಶಲ್ಯರೂ ಶಂಖಗಳನ್ನೂದಿದರು.

08063063a ತದ್ಭೀರುಸಂತ್ರಾಸಕರಂ ಯುದ್ಧಂ ಸಮಭವತ್ತದಾ।
08063063c ಅನ್ಯೋನ್ಯಸ್ಪರ್ಧಿನೋರ್ವೀರ್ಯೇ ಶಕ್ರಶಂಬರಯೋರಿವ।।

ಆಗ ಶಕ್ರ-ಶಂಬರರಂತೆ ಅನ್ಯೋನ್ಯರೊಡನೆ ಸ್ಪರ್ಧಿಸುತ್ತಿದ್ದ ಆ ವೀರರ ನಡುವೆ ಹೇಡಿಗಳನ್ನು ನಡುಗಿಸಬಲ್ಲ ಯುದ್ಧವು ಪ್ರಾರಂಭವಾಯಿತು.

08063064a ತಯೋರ್ಧ್ವಜೌ ವೀತಮಾಲೌ ಶುಶುಭಾತೇ ರಥಸ್ಥಿತೌ।
08063064c ಪೃಥಗ್ರೂಪೌ ಸಮಾರ್ಚಂತೌ ಕ್ರೋಧಂ ಯುದ್ಧೇ ಪರಸ್ಪರಂ।।

ಪರಸ್ಪರರರನ್ನು ಕ್ರೋಧದಿಂದ ನೋಡುತ್ತಿರುವ ಮಾಲೆಗಳುಳ್ಳ ಅವರ ರಥಗಳ ಮೇಲಿದ್ದ ಎರಡು ಮಹಾಗ್ರಹಗಳಂಥಹ ಧ್ವಜಗಳು ಶೋಭಿಸಿದವು.

08063065a ಕರ್ಣಸ್ಯಾಶೀವಿಷನಿಭಾ ರತ್ನಸಾರವತೀ ದೃಢಾ।
08063065c ಪುರಂದರಧನುಹ್ಪ್ರಖ್ಯಾ ಹಸ್ತಿಕಕ್ಷ್ಯಾ ವ್ಯರಾಜತ।।

ಸರ್ಪದಂತಿದ್ದ ಆನೆಯ ಹಗ್ಗದ ಚಿಹ್ನೆಯುಳ್ಳ, ರತ್ನಸಾರಮಯವಾಗಿದ್ದ, ದೃಢವಾಗಿದ್ದ, ಪುರಂಧರನ ಧನುಸ್ಸಿನಂತಿದ್ದ ಕರ್ಣನ ಧ್ವಜವು ವಿರಾಜಿಸುತ್ತಿತ್ತು.

08063066a ಕಪಿಶ್ರೇಷ್ಠಸ್ತು ಪಾರ್ಥಸ್ಯ ವ್ಯಾದಿತಾಸ್ಯೋ ಭಯಂಕರಃ।
08063066c ಭೀಷಯನ್ನೇವ ದಂಷ್ಟ್ರಾಭಿರ್ದುರ್ನಿರೀಕ್ಷ್ಯೋ ರವಿರ್ಯಥಾ।।

ಪಾರ್ಥನ ಕಪಿಶ್ರೇಷ್ಠನಾದರೋ ಬಾಯಿಕಳೆದು ಕೋರೆದಾಡೆಗಳಿಂದ ಭಯಂಕರನಾಗಿ, ಸೂರ್ಯನು ಹೇಗೋ ಹಾಗೆ ನೋಡಲೂ ಅಸಾಧ್ಯನಾಗಿದ್ದನು.

08063067a ಯುದ್ಧಾಭಿಲಾಷುಕೋ ಭೂತ್ವಾ ಧ್ವಜೋ ಗಾಂಡೀವಧನ್ವನಃ।
08063067c ಕರ್ಣಧ್ವಜಮುಪಾತಿಷ್ಠತ್ಸೋಽವದೀದಭಿನರ್ದಯನ್।।

ಗಾಂಡೀವಧನ್ವಿಯ ಧ್ವಜದಲ್ಲಿದ್ದ ಹನುಮಂತನು ಯುದ್ಧಾಭಿಲಾಷಿಯಾಗಿ ಕರ್ಣಧ್ವಜವನ್ನೇರಿ ಜೋರಾಗಿ ಗರ್ಜಿಸಿದನು.

08063068a ಉತ್ಪತ್ಯ ಚ ಮಹಾವೇಗಃ ಕಕ್ಷ್ಯಾಮಭ್ಯಹನತ್ಕಪಿಃ।
08063068c ನಖೈಶ್ಚ ದಶನೈಶ್ಚೈವ ಗರುಡಃ ಪನ್ನಗಂ ಯಥಾ।।

ಮಹಾವೇಗದಿಂದ ಹಾರಿ ಆ ಕಪಿಯು ಆನೆಯಕಕ್ಷದ ಧ್ವಜವನ್ನು ಗರುಡನು ಸರ್ಪವನ್ನು ಹೇಗೋ ಹಾಗೆ ಉಗುರುಗಳಿಂದ ಪರಚಿ ಹಲ್ಲುಗಳಿಂದ ಕಚ್ಚಿಹಾಕಲು ಪ್ರಾರಂಭಿಸಿದನು.

08063069a ಸುಕಿಂಕಿಣೀಕಾಭರಣಾ ಕಾಲಪಾಶೋಪಮಾಯಸೀ।
08063069c ಅಭ್ಯದ್ರವತ್ಸುಸಂಕ್ರುದ್ಧಾ ನಾಗಕಕ್ಷ್ಯಾ ಮಹಾಕಪಿಂ।।

ಕಿಂಕಿಣಿಗಳನ್ನೇ ಆಭರಣಗಳನ್ನಾಗುಳ್ಳ ಕಾಲಪಾಶದಂತಿದ್ದ ಉಕ್ಕಿನ ಆನೆಯ ಕಕ್ಷವು ಸಂಕ್ರುದ್ಧವಾಗಿ ಮಹಾಕಪಿಯನ್ನು ಆಕ್ರಮಣಿಸಿತು.

08063070a ಉಭಯೋರುತ್ತಮೇ ಯುದ್ಧೇ ದ್ವೈರಥೇ ದ್ಯೂತ ಆಹೃತೇ।
08063070c ಪ್ರಕುರ್ವಾತೇ ಧ್ವಜೌ ಯುದ್ಧಂ ಪ್ರತ್ಯಹೇಷನ್ ಹಯಾನ್ ಹಯಾಃ।।

ಅವರಿಬ್ಬರ ನಡುವೆ ದ್ವೈರಥಯುದ್ಧದ ದ್ಯೂತವು ನಡೆಯುತ್ತಿರಲು ಧ್ವಜಗಳೆರಡು ಮತ್ತು ಅವರ ಕುದುರೆಗಳು ಕುದುರೆಗಳೊಡನೆ ಹೇಷಾರವ ಮಾಡಿ ಯುದ್ಧಮಾಡುತ್ತಿದ್ದವು.

08063071a ಅವಿಧ್ಯತ್ಪುಂಡರೀಕಾಕ್ಷಃ ಶಲ್ಯಂ ನಯನಸಾಯಕೈಃ।
08063071c ಸ ಚಾಪಿ ಪುಂಡರೀಕಾಕ್ಷಂ ತಥೈವಾಭಿಸಮೈಕ್ಷತ।।

ಪುಂಡರೀಕಾಕ್ಷನು ಶಲ್ಯನನ್ನು ತನ್ನ ಸಾಯಕದಂತಹ ದೃಷ್ಟಿಯಿಂದ ಹೊಡೆಯುತ್ತಿದ್ದನು. ಅವನೂ ಕೂಡ ಪುಂಡರೀಕಾಕ್ಷನನ್ನು ಹಾಗೆಯೇ ನೋಡುತ್ತಿದ್ದನು.

08063072a ತತ್ರಾಜಯದ್ವಾಸುದೇವಃ ಶಲ್ಯಂ ನಯನಸಾಯಕೈಃ।
08063072c ಕರ್ಣಂ ಚಾಪ್ಯಜಯದ್ದೃಷ್ಟ್ಯಾ ಕುಂತೀಪುತ್ರೋ ಧನಂಜಯಃ।।

ಅಲ್ಲಿ ವಾಸುದೇವನೇ ನಯನಸಾಯಕಗಳಿಂದ ಶಲ್ಯನನ್ನು ಗೆದ್ದನು. ಕುಂತೀಪುತ್ರ ಧನಂಜಯನೂ ಕೂಡ ಕರ್ಣನನ್ನು ದೃಷ್ಟಿಯುದ್ಧದಲ್ಲಿ ಗೆದ್ದನು.

08063073a ಅಥಾಬ್ರವೀತ್ಸೂತಪುತ್ರಃ ಶಲ್ಯಮಾಭಾಷ್ಯ ಸಸ್ಮಿತಂ।
08063073c ಯದಿ ಪಾರ್ಥೋ ರಣೇ ಹನ್ಯಾದದ್ಯ ಮಾಮಿಹ ಕರ್ಹಿ ಚಿತ್।
08063073e ಕಿಮುತ್ತರಂ ತದಾ ತೇ ಸ್ಯಾತ್ಸಖೇ ಸತ್ಯಂ ಬ್ರವೀಹಿ ಮೇ।।

ಆಗ ಸೂತಪುತ್ರನು ಮಂದಹಾಸಪೂರ್ವಕವಾಗಿ ಮಾತನಾಡುತ್ತಾ ಶಲ್ಯನಿಗೆ ಹೇಳಿದನು: “ಸಖಾ! ರಣದಲ್ಲಿ ಪಾರ್ಥನೇನಾದರೂ ನನ್ನನ್ನು ಸಂಹರಿಸಿದರೆ ಅದರ ನಂತರ ನೀನು ಏನು ಮಾಡುತ್ತೀಯೆ? ಸತ್ಯವನ್ನೇ ನನಗೆ ಹೇಳು!”

08063074 ಶಲ್ಯ ಉವಾಚ।
08063074a ಯದಿ ಕರ್ಣ ರಣೇ ಹನ್ಯಾದದ್ಯ ತ್ವಾಂ ಶ್ವೇತವಾಹನಃ।
08063074c ಉಭಾವೇಕರಥೇನಾಹಂ ಹನ್ಯಾಂ ಮಾಧವಪಾಂಡವೌ।।

ಶಲ್ಯನು ಹೇಳಿದನು: “ಕರ್ಣ! ರಣದಲ್ಲಿ ಇಂದು ಶ್ವೇತವಾಹನನು ನಿನ್ನನ್ನು ಸಂಹರಿಸಿದ್ದೇ ಆದರೆ ನಾನು ಏಕರಥನಾಗಿ ಮಾಧವ-ಪಾಂಡವರಿಬ್ಬರನ್ನೂ ಸಂಹರಿಸುತ್ತೇನೆ!””

08063075 ಸಂಜಯ ಉವಾಚ।
08063075a ಏವಮೇವ ತು ಗೋವಿಂದಮರ್ಜುನಃ ಪ್ರತ್ಯಭಾಷತ।
08063075c ತಂ ಪ್ರಹಸ್ಯಾಬ್ರವೀತ್ ಕೃಷ್ಣಃ ಪಾರ್ಥಂ ಪರಮಿದಂ ವಚಃ।।

ಸಂಜಯನು ಹೇಳಿದನು: “ಅದೇರೀತಿ ಅರ್ಜುನನೂ ಕೂಡ ಗೋವಿಂದನನ್ನು ಕೇಳಿದನು. ಆಗ ಜೋರಾಗಿ ನಕ್ಕು ಕೃಷ್ಣನಿಗೆ ಈ ಪರಮವಚನವನ್ನಿತ್ತನು:

08063076a ಪತೇದ್ದಿವಾಕರಃ ಸ್ಥಾನಾಚ್ಚೀರ್ಯೇತಾನೇಕಧಾ ಕ್ಷಿತಿಃ।
08063076c ಶೈತ್ಯಮಗ್ನಿರಿಯಾನ್ನ ತ್ವಾ ಕರ್ಣೋ ಹನ್ಯಾದ್ಧನಂಜಯಂ।।

“ದಿವಾಕರನು ತಾನಿರುವ ಸ್ಥಳದಿಂದ ಚ್ಯುತನಾಗಿ ಬೀಳಬಹುದು. ಮಹಾಸಾಗರವು ಬತ್ತಿಹೋಗಬಹುದು. ಅಗ್ನಿಯು ಶೀತಲನಾಗಬಹುದು. ಆದರೆ ಕರ್ಣನು ಧನಂಜಯನನ್ನು ಸಂಹರಿಸಲಾರನು!

08063077a ಯದಿ ತ್ವೇವಂ ಕಥಂ ಚಿತ್ಸ್ಯಾಲ್ಲೋಕಪರ್ಯಸನಂ ಯಥಾ।
08063077c ಹನ್ಯಾಂ ಕರ್ಣಂ ತಥಾ ಶಲ್ಯಂ ಬಾಹುಭ್ಯಾಮೇವ ಸಂಯುಗೇ।।

ಆದರೆ ಲೋಕಸ್ಥಿತಿಯೇ ವ್ಯತ್ಯಾಸಹೊಂದಿ ಹಾಗೇನಾದರೂ ಆಗಿ ಹೋದರೆ ನನ್ನ ಈ ತೋಳುಗಳಿಂದಲೇ ಯುದ್ಧದಲ್ಲಿ ನಾನು ಕರ್ಣನನ್ನೂ ಶಲ್ಯನನ್ನೂ ಸಂಹರಿಸುತ್ತೇನೆ!”

08063078a ಇತಿ ಕೃಷ್ಣವಚಃ ಶ್ರುತ್ವಾ ಪ್ರಹಸನ್ಕಪಿಕೇತನಃ।
08063078c ಅರ್ಜುನಃ ಪ್ರತ್ಯುವಾಚೇದಂ ಕೃಷ್ಣಮಕ್ಲಿಷ್ಟಕಾರಿಣಂ।
08063078e ಮಮಾಪ್ಯೇತಾವಪರ್ಯಾಪ್ತೌ ಕರ್ಣಶಲ್ಯೌ ಜನಾರ್ದನ।।

ಕೃಷ್ಣನ ಈ ಮಾತನ್ನು ಕೇಳಿ ನಗುತ್ತಾ ಕಪಿಕೇತನ ಅರ್ಜುನನು ಅಕ್ಲಿಷ್ಟಕಾರಿಣಿ ಕೃಷ್ಣನಿಗೆ ಉತ್ತರಿಸಿದನು: “ಜನಾರ್ದನ! ಈ ಕರ್ಣ-ಶಲ್ಯರು ನನಗೆ ಕೂಡ ಪರ್ಯಾಪ್ತರಲ್ಲ!

08063079a ಸಪತಾಕಾಧ್ವಜಂ ಕರ್ಣಂ ಸಶಲ್ಯರಥವಾಜಿನಂ।
08063079c ಸಚ್ಚತ್ರಕವಚಂ ಚೈವ ಸಶಕ್ತಿಶರಕಾರ್ಮುಕಂ।
08063080a ದ್ರಷ್ಟಾಸ್ಯದ್ಯ ಶರೈಃ ಕರ್ಣಂ ರಣೇ ಕೃತ್ತಮನೇಕಧಾ।।

ನನ್ನ ಶರಗಳಿಂದ ಇಂದು ಶಲ್ಯ, ರಥ, ಕುದುರೆಗಳು, ಪತಾಕೆ, ಧ್ವಜ, ಚ್ಛತ್ರ, ಕವಚ, ಶಕ್ತಿ-ಶರ-ಕಾರ್ಮುಕಗಳೊಡನೆ ಕರ್ಣನು ಅನೇಕ ಭಾಗಗಳಾಗಿ ಕತ್ತರಿಸಿಲ್ಪಡುವುದನ್ನು ನೀನು ನೋಡುವೆಯಂತೆ!

08063080c ಅದ್ಯೈನಂ ಸರಥಂ ಸಾಶ್ವಂ ಸಶಕ್ತಿಕವಚಾಯುಧಂ।
08063080e ನ ಹಿ ಮೇ ಶಾಂಯತೇ ವೈರಂ ಕೃಷ್ಣಾಂ ಯತ್ಪ್ರಾಹಸತ್ಪುರಾ।।

ಇಂದು ಇವನನ್ನು ರಥ-ಕುದುರೆ-ಶಕ್ತಿ-ಕವಚ-ಆಯುಧಗಳೊಂದಿಗೆ ನಾಶಪಡಿಸದೇ ಹಿಂದೆ ಇವನು ವೈರದಿಂದ ಕೃಷ್ಣೆಯನ್ನು ನೋಡಿ ಹೇಗೆ ನಕ್ಕನೋ ಅದರ ಕೋಪವು ಶಾಂತವಾಗುವುದಿಲ್ಲ!

08063081a ಅದ್ಯ ದ್ರಷ್ಟಾಸಿ ಗೋವಿಂದ ಕರ್ಣಮುನ್ಮಥಿತಂ ಮಯಾ।
08063081c ವಾರಣೇನೇವ ಮತ್ತೇನ ಪುಷ್ಪಿತಂ ಜಗತೀರುಹಂ।।

ಗೋವಿಂದ! ಅರಣ್ಯದಲ್ಲಿ ಮದಿಸಿದ ಆನೆಯು ಪುಷ್ಪಿತವಾದ ದೊಡ್ಡ ವೃಕ್ಷವನ್ನು ಮಥಿಸಿಬಿಡುವಂತೆ ಕರ್ಣನನ್ನು ಪುಡಿಪುಡಿ ಮಾಡುವುದನ್ನು ನೀನು ಇಂದು ನೋಡುವಿಯಂತೆ!

08063082a ಅದ್ಯ ತಾ ಮಧುರಾ ವಾಚಃ ಶ್ರೋತಾಸಿ ಮಧುಸೂದನ।
08063082c ಅದ್ಯಾಭಿಮನ್ಯುಜನನೀಮನೃಣಃ ಸಾಂತ್ವಯಿಷ್ಯಸಿ।
08063082e ಕುಂತೀಂ ಪಿತೃಷ್ವಸಾರಂ ಚ ಸಂಪ್ರಹೃಷ್ಟೋ ಜನಾರ್ದನ।।

ಮಧುಸೂದನ! ಜನಾರ್ದನ! ಇಂದು ನೀನು ಆ ಮಧುರ ಮಾತುಗಳನ್ನು ಕೇಳುವೆ. ಇಂದು ನೀನು ಅಭಿಮನ್ಯುವಿನ ತಾಯಿಯನ್ನೂ ನಿನ್ನ ತಂದೆಯ ತಂಗಿ ಕುಂತಿಯನ್ನೂ ಪ್ರಹೃಷ್ಟನಾಗಿ ಸಂತವಿಸುತ್ತೀಯೆ!

08063083a ಅದ್ಯ ಬಾಷ್ಪಮುಖೀಂ ಕೃಷ್ಣಾಂ ಸಾಂತ್ವಯಿಷ್ಯಸಿ ಮಾಧವ।
08063083c ವಾಗ್ಭಿಶ್ಚಾಮೃತಕಲ್ಪಾಭಿರ್ಧರ್ಮರಾಜಂ ಯುಧಿಷ್ಠಿರಂ।।

ಮಾಧವ! ಇಂದು ನೀನು ಅಮೃತಕಲ್ಪವಾದ ಮಾತುಗಳಿಂದ ಕಣ್ಣೀರುತುಂಬಿದ ಕೃಷ್ಣೆಯನ್ನೂ, ಧರ್ಮರಾಜ ಯುಧಿಷ್ಟಿರನನ್ನೂ ಸಂತವಿಸುತ್ತೀಯೆ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಾರ್ಜುನಸಮಾಗಮೇ ದ್ವೈರಥೇ ತ್ರಿಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾರ್ಜುನಸಮಾಗಮೇ ದ್ವೈರಥ ಎನ್ನುವ ಅರವತ್ಮೂರನೇ ಅಧ್ಯಾಯವು.